Tag: Crude Oil

  • ವಿಶ್ವದ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿಯ ಮೇಲೆ ಡ್ರೋನ್ ದಾಳಿ – ಹೊತ್ತಿ ಉರಿದ ಘಟಕಗಳು

    ವಿಶ್ವದ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿಯ ಮೇಲೆ ಡ್ರೋನ್ ದಾಳಿ – ಹೊತ್ತಿ ಉರಿದ ಘಟಕಗಳು

    ದುಬೈ: ಸೌದಿ ಅರೇಬಿಯಾದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಅರಾಮ್ಕೊ ನಡೆಸುತ್ತಿರುವ ಎರಡು ಪ್ರಮುಖ ತೈಲ ಘಟಕಗಳ ಮೇಲೆ ಡ್ರೋನ್ ದಾಳಿ ನಡೆಸಲಾಗಿದೆ.

    ಇರಾನ್‍ಗೆ ಸೇರಿದ ಹೌತಿ ಗುಂಪಿನ ಬಂಡುಕೋರರು ಅರಾಮ್ಕೊದ ಅತಿದೊಡ್ಡ ತೈಲ ಸಂಸ್ಕರಣಾ ಘಟಕಗಳಾದ ಪೂರ್ವ ಸೌದಿ ರೇಬಿಯಾದ ಅಬ್ಕೈಕ್ ಮತ್ತು ಖುರೈಸ್‍ಗಳ ಮೇಲೆ ದಾಳಿ ನಡೆಸಿದ್ದಾರೆ. ಘಟಕಗಳನ್ನು ಗುರಿಯಾಗಿಸಿಕೊಂಡು 10 ಡ್ರೋನ್‍ಗಳನ್ನು ಒಳಗೊಂಡ ದೊಡ್ಡ ಪ್ರಮಾಣದ ಕಾರ್ಯಾಚರಣೆಯನ್ನು ನಡೆಸಿದ್ದಾರೆ.

    ದಾಳಿ ನಡೆಸಿದ ಹೌತಿ ಗುಂಪಿನ ಮಿಲಿಟರಿ ವಕ್ತಾರ ಯಾಹ್ಯಾ ಸರಿಯಾ ಅಲ್-ಮಸಿರಾ ಟಿವಿಗೆ ಈ ಕುರಿತು ಮಾಹಿತಿ ನೀಡಿದ್ದು, ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾನೆ.

    ಡ್ರೋನ್ ದಾಳಿಯಿಂದಾಗಿ ಅರಾಮ್ಕೋದ ಎರಡು ತೈಲ ಘಟಕಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಸೌದಿಯ ಆಂತರಿಕ ಸಚಿವಾಲಯ ಸ್ಪಷ್ಟಪಡಿಸಿದೆ. ಸ್ಟಾಕ್ ಪೆಟ್ಟಿಗೆ ಸಿದ್ಧಪಡಿಸುತ್ತಿದ್ದಂತೆ ಹೌತಿ ಬಂಡುಕೋರರು ದಾಳಿ ನಡೆಸಿದ್ದರಿಂದ ಅಪಾರ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಸಾವು, ನೋವು ಸಂಭವಿಸಿರುವ ಕುರಿತು ಈವರೆಗೆ ವರದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

    ಪೂರ್ವ ಸೌದಿ ಅರೇಬಿಯಾದ ಎರಡು ಪ್ರಮುಖ ಅರಾಮ್ಕೋ ಘಟಕಗಳಾದ ಅಬ್ಕೈಕ್ ಮತ್ತು ಖುರೈಸ್‍ಗಳ ಮೇಲೆ ಇಂದು ಬೆಳಗ್ಗೆ ನಡೆದ ದಾಳಿಯ ನಂತರ ಹೊಗೆಯು ಆಕಾಶದ ತುಂಬೆಲ್ಲ ಹಬ್ಬಿದ್ದು, ಪ್ರಾದೇಶಿಕ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಇರಾನ್ ಬೆಂಬಲಿತ ಹೌತಿ ಬಂಡುಕೋರರ ಸುಧಾರಿತ ಶಸ್ತ್ರಾಸ್ತ್ರಗಳು, ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ಹಿಡಿದು ಮಾನವ ರಹಿತ ಡ್ರೋನ್‍ಗಳ ವರೆಗೆ ವಿಸ್ತರಿಸಿದೆ. ಇದರಿಂದ ವಿಶ್ವದ ಅತಿದೊಡ್ಡ ಕಚ್ಚಾ ತೈಲ ರಫ್ತು ಮಾಡುವ ಸೌದಿ ಅರೇಬಿಯಾಗೆ ತೈಲ ಘಟಕಗಳ ಸ್ಥಾಪನೆಗೆ ಭಾರೀ ಆತಂಕ ಎದುರಾಗಿದೆ.

    ವಿಶ್ವದ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿ ಸೌದಿ ಅರಾಮ್ಕೋ ಜೊತೆ ರಿಲಯನ್ಸ್ ಆಯಿಲ್ ಟು ಕೆಮಿಕಲ್ಸ್(ಒಟಿಸಿ) ಕಂಪನಿ ತನ್ನ ಶೇ.20 ರಷ್ಟು ಪಾಲನ್ನು ಮಾರಾಟ ಮಾಡಲು ಇತ್ತೀಚೆಗಷ್ಟೇ ಸಮ್ಮತಿ ಸೂಚಿಸಿತ್ತು. ಒಟ್ಟು 75 ಶತಕೋಟಿ ಡಾಲರ್(5.3 ಲಕ್ಷ ಕೋಟಿ) ಒಪ್ಪಂದಕ್ಕೆ ರಿಲಯನ್ಸ್ ಸಹಿ ಹಾಕಿದೆ ಎಂದು ವಾರ್ಷಿಕ ಸಭೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ತಿಳಿಸಿದ್ದರು.

    ಈ ಒಪ್ಪಂದದ ಅನ್ವಯ ಸೌದಿ ಅರಾಮ್ಕೋ ಕಂಪನಿ ಜಾಮ್ ನಗರದಲ್ಲಿರುವ ರಿಲಾಯನ್ಸ್ ರಿಫೈನಿಂಗ್ ಘಟಕಕ್ಕೆ ಪ್ರತಿದಿನ 5 ಲಕ್ಷ ಬ್ಯಾರಲ್ ಕಚ್ಚಾ ತೈಲವನ್ನು ಪೂರೈಸಲಿದೆ. ಸೌದಿ ಅರಾಮ್ಕೋ ಸೌದಿ ಅರೇಬಿಯಾದ ರಾಷ್ಟ್ರೀಯ ಪೆಟ್ರೋಲ್ ಮತ್ತು ನೈಸರ್ಗಿಕ ಗ್ಯಾಸ್ ಕಂಪನಿಯಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಆದಾಯ ಮತ್ತು ವಿಶ್ವದಲ್ಲೇ ಅತಿ ಹೆಚ್ಚು ಲಾಭಗಳಿಸುವ ತೈಲ ಕಂಪನಿಯಾಗಿದೆ. ಜಾಮ್ ನಗರದಲ್ಲಿರುವ ಘಟಕ ಸದ್ಯ ಪ್ರತಿ ದಿನ 14 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿದ್ದು 2030ರ ವೇಳೆಗೆ 20 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದೇವೆ ಎಂದು ಕೇಂದ್ರ ಸರ್ಕಾರಕ್ಕೆ ಕಂಪನಿ ತಿಳಿಸಿತ್ತು.

  • ಮತ್ತೆ ಪ್ರಧಾನಿ ಮೋದಿ ಕೈಹಿಡಿದ ಕಚ್ಚಾ ತೈಲ

    ಮತ್ತೆ ಪ್ರಧಾನಿ ಮೋದಿ ಕೈಹಿಡಿದ ಕಚ್ಚಾ ತೈಲ

    ನವದೆಹಲಿ: ಕಚ್ಚಾ ತೈಲ ಮತ್ತೆ ಪ್ರಧಾನಿ ಮೋದಿ ಅವರ ಕೈ ಹಿಡಿದಿದೆ. ಕುಸಿಯುತ್ತಿರುವ ದೇಶದ ಆರ್ಥಿಕತೆ ಮೇಲಕ್ಕೆ ಎತ್ತಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ‘ಮಿನಿ ಬಜೆಟ್’ ಮಂಡಿಸುತ್ತಿದ್ದಂತೆ ಇತ್ತ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಮತ್ತಷ್ಟು ಇಳಿಕೆಯಾಗಿದೆ.

    ಚೀನಾ ಸರ್ಕಾರ ಅಮೆರಿಕದ ಉತ್ಪನ್ನಗಳ ಮೇಲೆ ಮತ್ತಷ್ಟು ಸುಂಕ ವಿಧಿಸಿದ ಬೆನ್ನಲ್ಲೇ ಅಮೆರಿಕ ಕಚ್ಚಾ ತೈಲ ದರ ಶೇ.3 ರಷ್ಟು ಇಳಿಕೆಯಾಗಿ ಒಂದು ಬ್ಯಾರೆಲ್ ದರ 53.58 ಡಾಲರ್ (ಅಂದಾಜು 3,800 ರೂ.) ಇಳಿಕೆಯಾಗಿದೆ. ಭಾರತಕ್ಕೆ ಹತ್ತಿರವಾಗಿರುವ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.2 ರಷ್ಟು ಇಳಿಕೆಯಾಗಿದ್ದು ಪ್ರತಿ ಬ್ಯಾರೆಲ್ ತೈಲದ ದರ 58.75 ಡಾಲರ್(4,200 ರೂ.) ಇಳಿಕೆಯಾಗಿದೆ.

    ಚೀನಾ, ಅಮೆರಿಕದ ನಂತರ ವಿಶ್ವದಲ್ಲೇ ಅತಿ ಹೆಚ್ಚು ತೈಲವನ್ನು ಆಮದು ಮಾಡುತ್ತಿರುವ ದೇಶ ಭಾರತವಾಗಿದ್ದು, ದೇಶದ ಆರ್ಥಿಕತೆ ಮೇಲೆ ತೈಲ ದರ ಭಾರೀ ಪ್ರಭಾವ ಬೀರುತ್ತದೆ.

    ಇಡೀ ವಿಶ್ವದಲ್ಲಿ ಈಗ ಉತ್ಪಾದನೆ ಕಡಿಮೆಯುತ್ತಿರುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರ ನಿರಂತರವಾಗಿ ಇಳಿಕೆಯಾಗುತ್ತಿದೆ. ವ್ಯಾಪಾರ, ವಾಣಿಜ್ಯ ಚಟುವಟಿಕೆಗಳು ಮಂದಗತಿಯಲ್ಲಿರುವುದರಿಂದ ತೈಲದ ಬೇಡಿಕೆ ಇಳಿದಿದ್ದು, ಬೆನ್ನಿಗೇ ದರವೂ ಇಳಿಕೆಯಾಗುತ್ತಿದೆ.ಎಷ್ಟು ಇಳಿಕೆಯಾಗಿದೆ ಎಂದರೆ 2018ರ ಆಗಸ್ಟ್ ನಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 72 ಡಾಲರ್ ಇತ್ತು. ಈಗ ಒಂದೇ ವರ್ಷದಲ್ಲಿ 14 ಡಾಲರ್ ಇಳಿಕೆಯಾಗಿತ್ತು, ಚೀನಾ ಅಮೆರಿಕ ವಾಣಿಜ್ಯ ಸಮರ ಮತ್ತಷ್ಟು ಹೆಚ್ಚಾದರೆ ಮತ್ತೆ ಬೆಲೆ ಇಳಿಕೆಯಾಗಲಿದೆ.

    ಮೋದಿ 2014ರಲ್ಲಿ ಮೊದಲ ಬಾರಿಗೆ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 108 ಡಾಲರ್(ಅಂದಾಜು 7,750 ರೂ.) ಇತ್ತು. ಮೋದಿ ಸರ್ಕಾರ ಮೂರನೇ ವರ್ಷದ ಅವಧಿಯಲ್ಲಿ 48 ಡಾಲರ್(3,400 ರೂ.) ಬೆಲೆಗೆ ಇಳಿಕೆಯಾಗಿತ್ತು.

    ತೈಲ ಬೆಲೆ ಕಡಿಮೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಸರ್ಕಾರ ಬಜೆಟ್ ನಲ್ಲಿ 2 ರೂ. ಏರಿಕೆ ಮಾಡಿತ್ತು. 2018ರ ಕರ್ನಾಟಕ ಚುನಾವಣೆಯ ಸಮಯದಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 80 ಡಾಲರ್(5,700 ರೂ.)ಗೆ ಏರಿಕೆ ಆಗಿತ್ತು. ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕದಿಂದ 2018-19ರ ಹಣಕಾಸು ವರ್ಷದಲ್ಲಿ ಸರ್ಕಾರ 2.579 ಕೋಟಿ ರೂ. ಆದಾಯ ಸಂಗ್ರಹಿಸಿತ್ತು. 2013-14ರ ಅವಧಿಯಲ್ಲಿ 88,600 ಕೋಟಿ ರೂ. ಸಂಗ್ರಹಿಸಿದ್ದರೆ 2017-18ರ ಅವಧಿಯಲ್ಲಿ 2016 ಕೋಟಿ ಆದಾಯ ಸಂಗ್ರಹಿಸಿದೆ.

    ಪ್ರಸ್ತುತ ಒಂದು ಲೀಟರ್ ಪೆಟ್ರೋಲ್ ಮೇಲೆ ಕೇಂದ್ರ ಸರ್ಕಾರ 17.98 ರೂ. ಅಬಕಾರಿ ಸುಂಕ ಹಾಕಿದರೆ ಒಂದು ಲೀಟರ್ ಡೀಸೆಲ್ ಮೇಲೆ 13.83 ರೂ. ಇದೆ.

  • ಭಾರತಕ್ಕೆ ಅಮೆರಿಕದಿಂದ ಇದೇ ಮೊದಲ ಬಾರಿಗೆ ಕಚ್ಚಾತೈಲ ಬರುತ್ತಿರೋದು ಯಾಕೆ?

    ಭಾರತಕ್ಕೆ ಅಮೆರಿಕದಿಂದ ಇದೇ ಮೊದಲ ಬಾರಿಗೆ ಕಚ್ಚಾತೈಲ ಬರುತ್ತಿರೋದು ಯಾಕೆ?

    ನವದೆಹಲಿ: ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧ ಮತ್ತಷ್ಟು ವೃದ್ಧಿಸುತ್ತಿದ್ದು ಇದೇ ಮೊದಲ ಬಾರಿಗೆ ಅಮೆರಿಕದ ತೈಲ ಭಾರತಕ್ಕೆ ಬಂದಿದೆ. ಸುಮಾರು 1.6 ದಶಲಕ್ಷ ಬ್ಯಾರಲ್ ಕಚ್ಚಾ ತೈಲವನ್ನು ಹೊತ್ತು ತಂದಿದ ಸರಕು ಸಾಗಾಟ ಹಡಗು ಒಡಿಶಾ ಬಂದರಿಗೆ ಆಗಮಿಸಿದೆ.

    ಭಾರತ ತೈಲ ಕರ್ಪೋರೆಷನ್(ಐಒಸಿ) ಜುಲೈ ತಿಂಗಳಿನಲ್ಲಿ ತೈಲ ಖರೀದಿ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಇದರೊಂದಿಗೆ ಭಾರತ್ ಪೆಟ್ರೋಲಿಯಂ ಕರ್ಪೋರೆಷನ್ ಲಿಮಿಟೆಡ್(ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ(ಎಚ್ಪಿಸಿಎಲ್) ಕಂಪನಿಗಳು ಅಮೆರಿಕದಿಂದ ಅಮದುಕೊಳ್ಳಲಾಗಿರುವ ಕಚ್ಚಾ ತೈಲವನ್ನು ಖರೀದಿಸಲೂ ಮುಂದಾಗಿವೆ. ಅಲ್ಲದೇ ಕೆನಡಾ ದೇಶದಿಂದಲೂ ತೈಲವನ್ನು ಖರೀದಿಸಲು ಚಿಂತನೆಯನ್ನು ಮಾಡಲಾಗಿದೆ.

    ಐಒಸಿ ಮತ್ತು ಸರ್ಕಾರಿ ಸ್ವಾಮ್ಯದ ಬಿಪಿಸಿಎಲ್ ತೈಲ ಸಂಸ್ಥೆಗಳು 2018 ಮಾರ್ಚ್ ವೇಳೆಗೆ ಸುಮಾರು 8 ಹಡಗುಗಳ ತೈಲವನ್ನು ಖರೀದಿಸುವ ಆಶ್ವಾಸನೆಯನ್ನು ನೀಡಿವೆ ಎಂದು ಅಮೇರಿಕ ಇಂಧನ ಅಧಿಕಾರಿಗಳು ತಿಳಿಸಿದ್ದಾರೆ.

    ಈಗಾಗಲೇ ಅಮೇರಿಕದಿಂದ ಮತ್ತೊಂದು ಹಡಗು ಕಚ್ಚಾ ತೈಲವನ್ನು ಖರೀದಿಸಲು ಬುಕ್ ಮಾಡಲಾಗಿದ್ದು ಶೀಘ್ರವೇ ಅದು ಗುಜರಾತ್‍ನ ವಾಡಿನಾರ್ ಬಂದರಿಗೆ ಬರಲಿದೆ. ಪ್ರತಿ ತಿಂಗಳು ಒಂದು ಹಡಗು ಕಚ್ಚಾ ತೈಲವನ್ನು ಖರೀದಿಸಿಲು ನಿರ್ಧರಿಸಿದ್ದೇವೆ ಎಂದು ಐಒಸಿ ಉಖ್ಯಸ್ಥ ಸಂಜೀವ್ ಸಿಂಗ್ ಹೇಳಿದರು.

    ಮೊದಲ ಟೆಂಡರ್‍ನಲ್ಲಿ ಸುಮಾರು 1.6 ಮಿಲಿಯನ್ ಬ್ಯಾರಲ್ ಉತ್ತಮ ಗುಣಮಟ್ಟದ ಸಲ್ಫರ್ ಕಚ್ಚಾ ತೈಲವನ್ನು ಅಮೆರಿಕದಿಂದ ಖರೀದಿ ಮಾಡುತ್ತಿದ್ದೇವೆ, ಕೆನಡಾ ದೇಶದಿಂದ 4 ಸಾವಿರ ಬ್ಯಾರಲ್ ತೈಲವನ್ನು ಖರೀದಿಸುತ್ತಿದ್ದೇವೆ. ಎರಡನೇ ಟೆಂಡರ್‍ನಲ್ಲಿ 1.9 ಮಿಲಿಯನ್ ಬ್ಯಾರಲ್ ಅಮೇರಿಕದಿಂದ ಖರೀದಿಸುತ್ತಿದ್ದೇವೆ ಇದರಲ್ಲಿ ಸುಮಾರು ಅರ್ಧದಷ್ಟು ಶೇಲ್ ಆಯಿಲ್ ಅಮದು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

    ಕಳೆದ ಬಾರಿ ಪ್ರಧಾನಿ ಮೋದಿ ಅಮೆರಿಕ ಭೇಟಿಯ ವೇಳೆ ಕೈಗೊಂಡಿದ್ದ ಒಪ್ಪಂದ ಮೂಲಕ ತೈಲವನ್ನು ಅಮದು ಮಾಡಿಕೊಳ್ಳಲಾಗುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಹೆಚ್ಚಿನ ತೈಲವನ್ನು ರಫ್ತು ಮಾಡುವ ಆಶ್ವಾಸನೆಯನ್ನು ನೀಡಿದ್ದರು.

    ಆಮದು ಮಾಡ್ತಿರೋದು ಯಾಕೆ?
    ಭಾರತವು ಜಗತ್ತಿನಲ್ಲಿ ಮೂರನೇ ಅತೀ ಹೆಚ್ಚು ಕಚ್ಚಾ ತೈಲವನ್ನು ಅಮದು ಮಾಡಿಕೊಳ್ಳುವ ರಾಷ್ಟ್ರವಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಪೂರೈಕೆ ಕಡಿಮೆಯಾಗಿರುವುದರಿಂದ ಪರ್ಯಾಯ ಮಾರ್ಗವಾಗಿ ಅಮೆರಿಕದಿಂದ ತೈಲ ಖರೀದಿ ನಡೆಸುತ್ತಿದೆ. ಭಾರತ ಸೇರಿದಂತೆ ದಕ್ಷಿಣ ಕೊರಿಯ, ಜಪಾನ್, ಚೀನಾ ದೇಶಗಳು ಅಮೆರಿಕದಿಂದ ಕಚ್ಚಾ ತೈಲವನ್ನು ಅಮದು ಮಾಡಿಕೊಳ್ಳುತ್ತಿವೆ. ಪೆಟ್ರೋಲ್ ರಫ್ತು ಮಾಡುವ ರಾಷ್ಟ್ರಗಳ ಸಂಘಟೆಯಾದ ಒಪೆಕ್ ತೈಲ ಉತ್ಪಾದನೆಯನ್ನು ಕಡಿತಗೊಳಿಸಿದೆ. ಇದರಿಂದ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಇದೆ ಮೊದಲ ಬಾರಿಗೆ ಅಮೆರಿಕದಿಂದ ತೈಲವನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ.

    ಯಾವ ಕಂಪೆನಿಗೆ ಎಷ್ಟು ಪಾಲು?
    ಬಿಪಿಸಿಎಲ್- 500 ಬ್ಯಾರಲ್ ಸಾಮರ್ಥ್ಯದ 2 ಹಡಗುಗಳ ಕಚ್ಚಾತೈಲ ಕೊಚ್ಚಿ ಬಂದರಿಗೆ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 15ರ ವೇಳೆಗೆ ಬರಲಿದ್ದು, ಒಂದು ಮಿಲಿಯನ್ ಸ್ವಿಟ್ ಕಚ್ಚಾ ತೈಲ ಅಕ್ಟೋಬರ್‍ನಲ್ಲಿ ಬರಲಿದೆ. ಎಸ್‍ಪಿಸಿಎಲ್ ಒಂದು ಮಿಲಿಯನ್ ಕಚ್ಚಾತೈಲವನ್ನು ವಿಶಾಖಪಟ್ಟಣ ಬಂದರಿನಲ್ಲಿ ಅಮದು ಮಾಡಿಕೊಳ್ಳಲಿದೆ. ಬಿಒಆರ್‍ಎಲ್ ಒಂದು ಲಕ್ಷ ಬ್ಯಾರಲ್ ತೈಲವನ್ನು ಸಿಂಗಾಪುರ ಕಂಪೆನಿಯಿಂದ ಅಮದು ಮಾಡಿಕೊಳ್ಳಲಿವೆ.