Tag: Crude Oil

  • ತೈಲ ಬೆಲೆ ಭಾರೀ ಏರಿಕೆ – ಶೀಘ್ರವೇ 100 ಡಾಲರ್‌ನತ್ತ ಕಚ್ಚಾ ತೈಲ?

    ತೈಲ ಬೆಲೆ ಭಾರೀ ಏರಿಕೆ – ಶೀಘ್ರವೇ 100 ಡಾಲರ್‌ನತ್ತ ಕಚ್ಚಾ ತೈಲ?

    ಲಂಡನ್‌/ಕಿವ್‌: ರಷ್ಯಾ-ಉಕ್ರೇನ್‌ ಬಿಕ್ಕಟ್ಟು (Russia Ukraine Crisis) ತೀವ್ರಗೊಂಡಿದ್ದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಭಾರೀ ಏರಿಕೆ ಕಂಡಿದೆ.

    ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ 94.84( 7,165ರೂ.) ಡಾಲರ್‌ಗೆ ಏರಿಕೆಯಾಗಿದ್ದು, ಶೀಘ್ರವೇ 100 ಡಾಲರ್‌ಗೆ ಏರಿಕೆಯಾಗುವ ಸಾಧ್ಯತೆಯಿದೆ. ಸದ್ಯ ಭಾರತದಲ್ಲಿ  ಲೀಟರ್‌ಗೆ 100 ರೂ. ಅಸುಪಾಸಿನಲ್ಲಿರುವ ಪೆಟ್ರೋಲ್‌ ದರ ತೈಲ ಬೆಲೆ 100 ಡಾಲರ್‌ಗೆ ಏರಿಕೆಯಾದರೆ ಭಾರೀ ಏರಿಕೆಯಾಗುವ ಸಾಧ್ಯತೆಯಿದೆ.

    ತಿಂಗಳ ಅಂತ್ಯದ ವೇಳೆ 8 ವರ್ಷದ ಗರಿಷ್ಠವಾದ 100 ಡಾಲರ್‌ ತಲುಪುವ ಸಾಧ್ಯತೆ ಇದೆ. ಕೊರೊನಾ ಹೊಡೆತದಿಂದ ನಲುಗಿದ್ದ ದೇಶಗಳು ಈಗಷ್ಟೇ ಆರ್ಥಿಕತೆ ಚೇತರಿಕೆ ಕಾಣುತ್ತಿವೆ. ದರ ಏರಿಕೆಯಾದಲ್ಲಿ ಹಲವು ರಾಷ್ಟ್ರಗಳ ಆರ್ಥಿಕತೆಯ ಮೇಲೆ ಭಾರೀ ಪೆಟ್ಟು ಬೀಳುವ ಸಾಧ್ಯತೆಯಿದೆ. ಇದನ್ನೂ ಓದಿ: ನಾನು ಮತ್ತೆ ಶಾಸಕನಾದ್ರೆ ಮುಸ್ಲಿಮರು ಟೋಪಿ ತೆಗೆದು ತಿಲಕ ಇಡುವಂತೆ ಮಾಡ್ತೀನಿ: ಬಿಜೆಪಿ ಶಾಸಕ

    2021ರ ನವೆಂಬರ್‌ ಬಳಿಕ ಭಾರತದಲ್ಲಿ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪಂಚ ರಾಜ್ಯ ಚುನಾವಣೆ ನಡೆಯುತ್ತಿರುವುದರಿಂದ ಸದ್ಯಕ್ಕೆ ಬೆಲೆ ಏರಿಕೆಯಾಗುವುದು ಅನುಮಾನ. ಚುನಾವಣೆ ಬಳಿಕವೂ ತೈಲ ದರ ಏರಿಕೆಯಾದರೆ ಭಾರತದಲ್ಲೂ ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯಾಗಲಿದೆ. ಇದನ್ನೂ ಓದಿ: ಮಲಗಿದ್ದಲ್ಲಿಯೇ ಸಾವನ್ನಪ್ಪಿದ ಅರೆ ವೈದ್ಯಕೀಯ ವಿದ್ಯಾರ್ಥಿ

    ಸೇನಾ ಜಮಾವಣೆ: ಯುದ್ಧದ ಉತ್ಸಾಹದಲ್ಲಿರುವ ರಷ್ಯಾ ಗಡಿಯಲ್ಲಿ ತನ್ನ ಸೇನಾ ಜಮಾವಣೆಯನ್ನು 1.30 ಲಕ್ಷಕ್ಕೆ ಏರಿಸಿದೆ. ಉಕ್ರೆನ್‌ ಅಧ್ಯಕ್ಷ ವ್ಲಾಡಿಮಿರ್‌ ಝೆಲೆನ್ಸ್‌ ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಜೊತೆ 1 ಗಂಟೆ ಪ್ರಸ್ತತ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಚರ್ಚೆ ನಡೆಸಿದ್ದಾರೆ.

    ತನ್ನ ಗಡಿಯಲ್ಲಿ ಭಾರೀ ಸಂಖ್ಯೆಯಲ್ಲಿ ಸೇನೆಯನ್ನು ನಿಯೋಜಿಸಿದನ್ನು ಉಕ್ರೇನ್‌ ಪ್ರಶ್ನಿಸಿದೆ. ಮುಂದಿನ 48 ಗಂಟೆಯ ಒಳಗಡೆ ರಷ್ಯಾಈ ಬಗ್ಗೆ ಕಾರಣ ನೀಡಬೇಕು ಎಂದು ಹೇಳಿದೆ.

  • ಅಮೆರಿಕ, ಭಾರತದ ತಂತ್ರಕ್ಕೆ ಒಪೆಕ್‌ ಗರಂ – ಮತ್ತೆ ಏರಿಕೆ ಆಗುತ್ತಾ ತೈಲ ಬೆಲೆ?

    ಅಮೆರಿಕ, ಭಾರತದ ತಂತ್ರಕ್ಕೆ ಒಪೆಕ್‌ ಗರಂ – ಮತ್ತೆ ಏರಿಕೆ ಆಗುತ್ತಾ ತೈಲ ಬೆಲೆ?

    – ತೈಲ ಆಮದು ರಾಷ್ಟ್ರಗಳು Vs ಒಪೆಕ್‌ ಮಧ್ಯೆ ತೈಲ ಸಮರ
    – ತಂತ್ರದಿಂದ ಹಿಂದಕ್ಕೆ ಸರಿಯದೇ ಇದ್ದಲ್ಲಿ ಉತ್ಪಾದನೆ ಕಡಿತದ ಬೆದರಿಕೆ

    ವಿಶ್ವದಲ್ಲೇ ಅತಿ ಹೆಚ್ಚು ಕಚ್ಚಾ ತೈಲವನ್ನು ಆಮದು ಮಾಡುವ ರಾಷ್ಟ್ರಗಳು ಮತ್ತು ತೈಲ ಉತ್ಪಾದನೆ ಮಾಡುವ ರಾಷ್ಟ್ರಗಳ ಮಧ್ಯೆ ತೈಲ ಸಮರ ಸೃಷ್ಟಿಯಾಗಿದೆ. ಅಮೆರಿಕ ತಂತ್ರಗಾರಿಕೆ ಈಗ ಉಳಿದ ರಾಷ್ಟ್ರಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹೀಗಾಗಿ ಏನಿದು ತಿಕ್ಕಾಟ? ತೈಲ ಆಮದು ಮಾಡುವ ರಾಷ್ಟ್ರಗಳ ಪ್ಲ್ಯಾನ್‌ ಏನು? ಒಪೆಕ್‌ ರಾಷ್ಟ್ರಗಳ ತಿರುಗೇಟು ಏನು ಇತ್ಯಾದಿ ವಿಚಾರಗಳನ್ನು ಇಲ್ಲಿ ನೀಡಲಾಗಿದೆ.

    ತಿಕ್ಕಾಟ ಸೃಷ್ಟಿಯಾಗಿದ್ದು ಯಾಕೆ?
    ಕೋವಿಡ್ 19 ನಿಯಂತ್ರಣಕ್ಕೆ ವಿಶ್ವದ ಹಲವು ರಾಷ್ಟ್ರಗಳು ಲಾಕ್‍ಡೌನ್ ಹೇರಿತ್ತು. ಈ ವೇಳೆ ಬೇಡಿಕೆ ಕಡಿಮೆಯಾಗಿ ಬ್ಯಾರೆಲ್ ತೈಲ ದರ 19 ಡಾಲರ್​ಗೆ ಇಳಿಕೆಯಾಗಿತ್ತು. ಈ ವೇಳೆ ತೈಲ ಉತ್ಪಾದನೆ ಮಾಡುತ್ತಿರುವ ಒಪೆಕ್ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಕಡಿಮೆ ಮಾಡಿದ್ದವು. 2020ರ ಮಧ್ಯ ಭಾಗದ ಬಳಿಕ ರಾಷ್ಟ್ರಗಳು ಲಾಕ್‍ಡೌನ್ ತೆರವು ಮಾಡಿದ್ದರೂ ಒಪೆಕ್ ರಾಷ್ಟ್ರಗಳು ತೈಲ ಉತ್ಪಾದನೆ ಹೆಚ್ಚಳ ಮಾಡುತ್ತಿಲ್ಲ.

    ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಸೃಷ್ಟಿಯಾದ ಆರ್ಥಿಕ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಒಪೆಕ್‌ ಕಚ್ಚಾ ತೈಲ ಉತ್ಪಾದನೆಯನ್ನು ಕಡಿಮೆ ಮಾಡಿವೆ. ಬೇಡಿಕೆಗೆ ತಕ್ಕಷ್ಟು ಉತ್ಪಾದನೆ ಮಾಡದ ಕಾರಣ ತೈಲ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ 7 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದೆ.

    ತೈಲವನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಆರ್ಥಿಕ ಚಟುವಟಿಕೆಗಳು ಆರಂಭಗೊಂಡರೂ ಒಪೆಕ್‌ ರಾಷ್ಟ್ರಗಳು ಮಾತ್ರ ಉತ್ಪಾದನೆ ಹೆಚ್ಚಿಸುತ್ತಿಲ್ಲ. ಭಾರತ, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಮನವಿ ಮಾಡಿದರೂ ಒಪೆಕ್‌ ರಾಷ್ಟ್ರಗಳು ಬಗ್ಗುತ್ತಿಲ್ಲ. ಹೀಗಾಗಿ ಒಪೆಕ್‌ ರಾಷ್ಟ್ರಗಳನ್ನು ಬಗ್ಗು ಬಡಿಯಲು ಅಮೆರಿಕ ಹೂಡಿದ ತಂತ್ರವೇ ಈಗ ತಿಕ್ಕಾಟಕ್ಕೆ ಕಾರಣವಾಗಿದೆ.

    ಅಮೆರಿಕ ತಂತ್ರ ಏನು?
    ತುರ್ತು ಬಳಕೆಗೆಂದು ಸಂಗ್ರಹಿಸಿದ್ದ ಕಚ್ಚಾತೈಲವನ್ನು ಹೊರತೆಗೆಯಲು ಅಮೆರಿಕ ಮುಂದಾಗಿದೆ. ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಭಾರತ, ಜಪಾನ್‌, ಚೀನಾ, ದಕ್ಷಿಣ ಕೊರಿಯಾ, ಬ್ರಿಟನ್‌ ಸೇರಿದಂತೆ ಅತಿ ಹೆಚ್ಚು ಕಚ್ಚಾತೈಲ ಬಳಸುವ ದೇಶಗಳ ಮನವೊಲಿಸಿದ್ದರು. ಹೀಗಾಗಿ ಅಮೆರಿಕ 5 ಕೋಟಿ ಬ್ಯಾರಲ್‌, ಭಾರತ 50 ಲಕ್ಷ ಬ್ಯಾರಲ್‌ ಕಚ್ಚಾತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಒಪ್ಪಿದ್ದವು. 1970ರಲ್ಲಿ ಲಿಬಿಯಾ ಯುದ್ಧದ ಬಳಿಕ ಅಮೆರಿಕ ತನ್ನ ಭೂಗತ ಸಂಗ್ರಹಾಗಾರದಿಂದ ಕಚ್ಚಾತೈಲವನ್ನು ಈ ಪ್ರಮಾಣವನ್ನು ಬಿಡುಗಡೆ ಮಾಡುತ್ತಿರುವುದು ಇದೇ ಮೊದಲು ಎನ್ನುವುದು ವಿಶೇಷ. ಇದನ್ನೂ ಓದಿ: ಮಂಗಳೂರು ಸಂಗ್ರಹಗಾರದಿಂದ ಕಚ್ಚಾ ತೈಲ ಮಾರಾಟಕ್ಕೆ ಮುಂದಾದ ಸರ್ಕಾರ

    ಒಪೆಕ್‌ ಪ್ರತಿತಂತ್ರ:
    ತುರ್ತು ಬಳಕೆಗೆ ಸಂಗ್ರಹ ಮಾಡಿದ ತೈಲವನ್ನು ಬಿಡುಗಡೆ ಮಾಡಿದರೆ ಕಚ್ಚಾ ತೈಲದ ಬೇಡಿಕೆ ಇಳಿಯಬಹುದು ಎನ್ನುವುದು ಅಮೆರಿಕದ ಲೆಕ್ಕಾಚಾರವಾಗಿತ್ತು. ಆದರೆ ಈ ತಂತ್ರಕ್ಕೆ ಒಪೆಕ್‌ ರಾಷ್ಟ್ರಗಳು ಸೆಡ್ಡು ಹೊಡೆದಿವೆ. ತೈಲ ಆಮದು ಮಾಡುವ ದೇಶಗಳು ಕೈಗೊಂಡ ನಿರ್ಧರದಿಂದ ಹಿಂದಕ್ಕೆ ಸರಿಯಬೇಕು. ಇಲ್ಲದೇ ಇದ್ದಲ್ಲಿ ಮುಂದಿನ ಜನವರಿ ತಿಂಗಳಿನಿಂದ ಉದ್ದೇಶಿಸಿದ್ದ ಉತ್ಪಾದನೆ ಹೆಚ್ಚಳವನ್ನು 2 ತಿಂಗಳು ಮುಂದೂಡುವುದಾಗಿ ತಿಳಿಸಿವೆ. ಅಷ್ಟೇ ಅಲ್ಲದೇ ಈಗಾಗಲೇ ಮಾಡುತ್ತಿರುವ ಉತ್ಪಾದನೆಯನ್ನೇ ಕಡಿತ ಮಾಡುವ ಬೆದರಿಕೆಯನ್ನು ಹಾಕಿದೆ. ಇದನ್ನೂ ಓದಿ: ಅಮೆರಿಕದ ಸಂಗ್ರಹಾಗಾರಗಳಲ್ಲಿ ಸಂಗ್ರಹವಾಗಲಿದೆ ಭಾರತದ ಕಚ್ಚಾ ತೈಲ

    ಮತ್ತೆ ಬೆಲೆ ಏರಿಕೆ?
    ತುರ್ತು ಬಳಕೆಗೆ ಇರಿಸಿದ ತೈಲವನ್ನು ತೆಗೆದರೂ ಮತ್ತೆ ಆಮದು ಮಾಡಲೇಬೇಕು. ಒಂದು ವೇಳೆ ತೈಲ ಉತ್ಪಾದನೆ ಕಡಿಮೆ ಮಾಡಿದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಭಾರೀ ಏರಿಕೆಯಾಗುವ ಸಾಧ್ಯತೆಯಿದೆ. ಹೀಗಾಗಿ ಒಪೆಕ್‌ ಮತ್ತು ತೈಲ ಆಮದು ಮಾಡುವ ರಾಷ್ಟ್ರಗಳ ನಡುವಿನ ಕಿತ್ತಾಟ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡುವ ಸಾಧ್ಯತೆಯಿದೆ. ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಭಾರೀ ಸಮಸ್ಯೆಗೆ ಕಾರಣವಾಗಬಹುದು.

    ಐಇಎ ಒತ್ತಾಯ:
    ಅಂತಾರಾಷ್ಟ್ರೀಯ ಇಂಧನ ಸಂಸ್ಥೆ(ಐಇಎ) ತೈಲ ಉತ್ಪಾದನೆ ಹೆಚ್ಚು ಮಾಡಲು ಒಪೆಕ್‌ ರಾಷ್ಟ್ರಗಳಿಗೆ ಒತ್ತಾಯ ಮಾಡಿದೆ. 1 ಬ್ಯಾರೆಲ್‌ ತೈಲದ ಬೆಲೆ 80 ಡಾಲರ್‌ ದಾಟಿದೆ. ಕೊರೊನಾದಿಂದ ಆರ್ಥಿಕ ಚಟುವಟಿಕೆಗಳು ಚೇತರಿಸುವ ಸಮಯದಲ್ಲಿ ತೈಲ ಉತ್ಪಾದನೆ ಕಡಿತ ಮಾಡುವುದು ಸರಿಯಲ್ಲ. ಇದರಿಂದ ವಿಶ್ವದ ಆರ್ಥಿಕ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ಹಲವು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಭಾರತದ ಪ್ಲ್ಯಾನ್‌ ಏನು?
    ಒಪೆಕ್‌ ರಾಷ್ಟ್ರಗಳು ಏಪ್ರಿಲ್‌ ತಿಂಗಳಿನಲ್ಲೂ ಕಚ್ಚಾ ತೈಲ ಉತ್ಪಾದನೆ ಹೆಚ್ಚಿಸದ ಹಿನ್ನೆಲೆಯಲ್ಲಿ ಭಾರತ ಮಧ್ಯಪ್ರಾಚ್ಯ ದೇಶಗಳನ್ನು ಹೊರತು ಪಡಿಸಿ ಬೇರೆ ದೇಶಗಳಿಂದ ಕಚ್ಚಾ ತೈಲ ಆಮದು ಮಾಡಲು ಮುಂದಾಗಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ಈ ಹಿಂದೆ ವರದಿ ಮಾಡಿತ್ತು.

    ತೈಲ ಆಮದಿನ ವಿಚಾರದಲ್ಲಿ ಬೇರೆ ಬೇರೆ ಮೂಲಗಳನ್ನು ಹುಡುಕುವಂತೆ ನಾವು ಕಂಪನಿಗಳಿಗೆ ತಿಳಿಸಿದ್ದೇವೆ. ತೈಲ ಉತ್ಪಾದಿಸುತ್ತಿರುವ ಮಧ್ಯಪ್ರಾಚ್ಯದ ದೇಶಗಳು ನಮ್ಮನ್ನು ಒತ್ತೆಯಾಳುಗಳಂತೆ ನೋಡಲು ನಾವು ಅವಕಾಶ ನೀಡುವುದಿಲ್ಲ. ಒಪೆಕ್‌ ರಾಷ್ಟ್ರಗಳು ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ನಿವಾರಣೆಯಾಬೇಕೆಂದು ಬಯಸಿದಾಗ ನಾವು ಅವರ ಬೆಂಬಲಕ್ಕೆ ನಿಂತಿದ್ದೆವು ಎಂದು ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದರು.

    ಬೇರೆ ದೇಶಗಳಿಂದ ತೈಲ ಆಮದು ಮಾಡಿಕೊಂಡರೆ ಆರಂಭದಲ್ಲಿ ಹೆಚ್ಚು ಹಣ ಪಾವತಿಸಬೇಕಾದರೂ ಭವಿಷ್ಯದಲ್ಲಿ ಇದರಿಂದ ದೇಶಕ್ಕೆ ಪ್ರಯೋಜನ ಸಿಗಲಿದೆ ಎಂದು ಅಧಿಕಾರಿ ಹೇಳಿದ್ದಾರೆ. ಗಯಾನಾದಿಂದ ತೈಲ ಆಮದು ಮಾಡಿಕೊಳ್ಳುವ ಒಂದು ಪ್ಲಾನ್‌ ಇದೆ. ಇದರ ಜೊತೆ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಒಪ್ಪಂದವನ್ನು ಇಂಡಿಯನ್ ಆಯಿಲ್‌ ಕಾರ್ಪೊರೇಷನ್‌ ಕಂಪನಿಯು ನವೀಕರಿಸಿದೆ ಎಂದು ಮೂಲಗಳು ಹೇಳಿವೆ. ಈ ವರ್ಷದಿಂದ ಮತ್ತೆ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುಬಹುದು ಎಂಬ ಭರವಸೆ ಭಾರತಕ್ಕಿದೆ.

  • ಮಂಗಳೂರು ಸಂಗ್ರಹಗಾರದಿಂದ ಕಚ್ಚಾ ತೈಲ ಮಾರಾಟಕ್ಕೆ ಮುಂದಾದ ಸರ್ಕಾರ

    ಮಂಗಳೂರು ಸಂಗ್ರಹಗಾರದಿಂದ ಕಚ್ಚಾ ತೈಲ ಮಾರಾಟಕ್ಕೆ ಮುಂದಾದ ಸರ್ಕಾರ

    ಬೆಂಗಳೂರು: ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಕೆಯಾದ ಕಾರಣ ಇಂಧನ ದರ ಪ್ರತಿ ದಿನ ಏರಿಕೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಕಚ್ಚಾ ತೈಲವನ್ನು ಭೂಗತ ತೈಲ ಸಂಗ್ರಹಗಾರಗಳಿಂದ ರಾಜ್ಯ ತೈಲ ಶುದ್ಧೀಕರಣ ಘಟಕಗಳಿಗೆ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ.

    “ನಾವು ತೈಲ ಮಾರುಕಟ್ಟೆ ಕಂಪನಿಗಳಿಗೆ ಮಾರಾಟ ಮಾಡಲು ಆರಂಭಿಸಿದ್ದೇವೆ ಎಂದು ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್ (ಐಎಸ್‌ಪಿಆರ್‌ಎಲ್) ಸಿಇಒ ಎಚ್‌ಪಿಎಸ್ ಅಹುಜಾ ಹೇಳಿದ್ದಾರೆ.

    ಕಳೆದ ವರ್ಷ ಕೋವಿಡ್‌ 19 ಹಿನ್ನೆಲೆಯಲ್ಲಿ ತೈಲ ಬೆಲೆ ಭಾರೀ ಕುಸಿತ ಕಂಡಿತ್ತು. ಈ ವೇಳೆ ಸರ್ಕಾರ  ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ 0.3 ದಶಲಕ್ಷ  ಟನ್ ಕಚ್ಚಾ ತೈಲ ಖರೀದಿಸಿ ಮಂಗಳೂರು ತೈಲ ಸಂಗ್ರಾಹಗಾರದಲ್ಲಿಟ್ಟಿತ್ತು. ಇದೀಗ ಈ ಕಚ್ಚಾ ತೈಲವನ್ನು ರಾಜ್ಯ ಮಾಲೀಕತ್ವದ ಮಂಗಳೂರು ತೈಲ ಶುದ್ಧೀಕರಣ ಘಟಕಕ್ಕೆ ಮಾರಾಟ ಮಾಡಿದೆ. ಈ ಮೂಲಕ ದೇಶದಲ್ಲಿ ತೈಲ ಬೆಲೆ ಏರಿಕೆಯಿಂದ ಉಂಟಾಗಿರುವ ನಷ್ಟವನ್ನು ಸರಿದೂಗಿಸಿಕೊಳ್ಳಲು ಸರ್ಕಾರ ಹೊಸ ಪ್ಲ್ಯಾನ್ ಮಾಡಿಕೊಂಡಿದೆ. ಇದನ್ನೂ ಓದಿ: ವಿಮಾನದ ಇಂಧನಕ್ಕಿಂತಲೂ ದುಬಾರಿ ಆಯ್ತು ಪೆಟ್ರೋಲ್‌ ಬೆಲೆ

    ಮಂಗಳೂರು ಕಚ್ಚಾ ತೈಲ ಸಂಗ್ರಹಾಗಾರ ಸುಮಾರು 1.5 ದಶಲಕ್ಷ ಟನ್ ಟನ್ ಸಾಮರ್ಥ್ಯ ಹೊಂದಿದ್ದು, ಇದರಲ್ಲಿ ಶೇ. ಅರ್ಧದಷ್ಟನ್ನು ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ತೈಲ ದರವನ್ನು ಸರಿದೂಗಿಸುವ ಕಾರ್ಯಕ್ಕೆ ಮುಂದಾಗುತ್ತಿದೆ.ಈ ವರ್ಷದ ಅಂತ್ಯಕ್ಕೆ  0.45 ದಶಲಕ್ಷ  ಟನ್ ಮಾರಾಟ ಮಾಡಲು ಐಎಸ್‌ಪಿಆರ್‌ಎಲ್ ಮುಂದಾಗಿದೆ.

    ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್‌ ಗೆ 36 ಪೈಸೆ ಏರಿಕೆ ಕಂಡು 110.61 ರೂ., ಡೀಸೆಲ್ 37 ಪೈಸೆ ಏರಿಕೆ ಕಂಡು 101.49 ರೂ. ಆಗಿದೆ. ದೆಹಲಿಯಲ್ಲಿ ಪೆಟ್ರೋಲ್ ಲೀಟರ್‍ ಗೆ 35 ಪೈಸೆ ಏರಿಕೆ ಕಂಡು ಲೀಟರ್‌ ಗೆ 106.89 ರೂ. ಆದರೆ ಡೀಸೆಲ್‍ಗೆ 35 ಪೈಸೆ ಏರಿಕೆ ಕಂಡು 95.62 ರೂ. ದಾಖಲಾಗಿದೆ. ಇದನ್ನೂ ಓದಿ: 100 ಕೋಟಿ ಕೇವಲ ಅಂಕಿಯಲ್ಲ, ಇತಿಹಾಸದಲ್ಲಿ ದಾಖಲಾದ ಹೊಸ ಅಧ್ಯಾಯ: ಮೋದಿ

    ಭಾರತದ ತೈಲ ಸಂಗ್ರಹ ಏನೇನು ಸಾಲದು. ಒಟ್ಟು 90 ದಿನಗಳ ಬಳಕೆಗೆ ಆಗುವಷ್ಟು 13.32 ಮೆಟ್ರಿಕ್ ಟನ್ ತೈಲ ಸಂಗ್ರಹ ಅಗತ್ಯತೆ ಭಾರತಕ್ಕಿದೆ. ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್ (ಐಎಸ್‍ಪಿಆರ್ ಎಲ್) ಮಂಗಳೂರು, ಉಡುಪಿ ಬಳಿಯ ಪಾದೂರು, ವಿಶಾಖಪಟ್ಟಣಂನಲ್ಲಿ ಭೂಗತ ತೈಲ ಸಂಗ್ರಹಣ ಘಟಕಗಳನ್ನು ಸ್ಥಾಪಿಸಿದೆ.

    ಮೂರು ತೈಲ ಸಂಗ್ರಹಗಾರಗಳ ಪೈಕಿ ಪಾದೂರಿನಲ್ಲಿ ಅತಿ ಹೆಚ್ಚು ತೈಲವನ್ನು ಸಂಗ್ರಹ ಮಾಡಬಹುದಾಗಿದೆ. ಪಾದೂರಿನಲ್ಲಿ 2.5 ದಶಲಕ್ಷ ಟನ್(17 ದಶಲಕ್ಷ ಬ್ಯಾರೆಲ್), ಮಂಗಳೂರಿನಲ್ಲಿ 1.5 ದಶಲಕ್ಷ ಟನ್, ವಿಶಾಖಪಟ್ಟಣದಲ್ಲಿ 1.33 ದಶಲಕ್ಷ ಟನ್ ತೈಲವನ್ನು ಸಂಗ್ರಹಿಸಬಹುದಾಗಿದೆ.  ಇದನ್ನೂ ಓದಿ: ಉಡುಪಿಯಲ್ಲಿ ತೈಲ ಸಂಗ್ರಹಿಸಲಿದೆ ಸೌದಿ ಅರಾಮ್ಕೊ

    ಶೇ.83ರಷ್ಟು ತೈಲವನ್ನು ಭಾರತ ಆಮದು ಮಾಡುತ್ತಿದೆ. 65 ದಿನಗಳಿಗೆ ಆಗುವಷ್ಟು ತೈಲವನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ರಿಫೈನರಿಗಳಿಗೆ ಇದೆ. 90 ದಿನಗಳ ಬಳಕೆಗೆ ಆಗುವಷ್ಟು ತೈಲ ಸಂಗ್ರಹಿಸುವ ನಿಟ್ಟಿನಲ್ಲಿ ಐಎಸ್‌ಪಿಆರ್‌ಎಲ್ ಒಡಿಶಾದ ಚಂಡಿಕೋಲ್, ರಾಜಸ್ಥಾನದ ಬಿಕಾನೆರ್, ಗುಜರಾತಿನ ರಾಜ್‍ಕೋಟ್ ಬಳಿ ಭೂಗತ ತೈಲಗಾರ ನಿರ್ಮಿಸಲು ಮುಂದಾಗುತ್ತಿದೆ. ಇದನ್ನೂ ಓದಿ: ಅಮೆರಿಕದ ಸಂಗ್ರಹಾಗಾರಗಳಲ್ಲಿ ಸಂಗ್ರಹವಾಗಲಿದೆ ಭಾರತದ ಕಚ್ಚಾ ತೈಲ

    ವಿಶ್ವದಲ್ಲೇ ತುರ್ತು ಸಂದರ್ಭಕ್ಕೆಂದು ತೈಲ ಸಂಗ್ರಹ ಮಾಡುವ ಸಾಮರ್ಥ್ಯ ಹೊಂದಿರುವ ದೇಶಗಳ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲಿದ್ದು, 714 ದಶಲಕ್ಷ ಬ್ಯಾರೆಲ್‌ ತೈಲವನ್ನು ಸಂಗ್ರಹ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಸದ್ಯ ಭಾರತ 5.33 ದಶಲಕ್ಷ ಟನ್‌( 38 ದಶಲಕ್ಷ ಬ್ಯಾರೆಲ್‌) ತೈಲವನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದ್ದು, ಈ ತೈಲವನ್ನು ತುರ್ತು ಸಂದರ್ಭದಲ್ಲಿ 9 ದಿನಗಳ ಕಾಲ ಬಳಸಬಹುದು. ಇಂಟರ್‌ನ್ಯಾಷನಲ್‌ ಎನರ್ಜಿ ಏಜೆನ್ಸಿ(ಐಇಎ) ತನ್ನ ಸದಸ್ಯ ರಾಷ್ಟ್ರಗಳು 90 ದಿನಗಳ ಕಾಲ ತೈಲ ಸಂಗ್ರಹವನ್ನು ಹೊಂದಿರಬೇಕೆಂದು ಹೇಳಿದೆ.

  • ಮಧ್ಯಪ್ರಾಚ್ಯದ ಬದಲಾಗಿ ಬೇರೆ ದೇಶಗಳಿಂದ ತೈಲ ಖರೀದಿಗೆ ಮುಂದಾದ ಭಾರತ

    ಮಧ್ಯಪ್ರಾಚ್ಯದ ಬದಲಾಗಿ ಬೇರೆ ದೇಶಗಳಿಂದ ತೈಲ ಖರೀದಿಗೆ ಮುಂದಾದ ಭಾರತ

    – ಒತ್ತೆಯಾಳುಗಳಂತೆ ನೋಡಲು ನಾವು ಅವಕಾಶ ನೀಡಲ್ಲ
    – ಕೇಂದ್ರದ ನಿರ್ಧಾರವನ್ನು ಖಚಿತ ಪಡಿಸಿದ 2 ಸಂಸ್ಕರಣಾ ಘಟಕಗಳು

    ನವದೆಹಲಿ: ಕಚ್ಚಾ ತೈಲ ವಿಚಾರದಲ್ಲಿ ಮಧ್ಯಪ್ರಾಚ್ಯ ದೇಶಗಳ ಅವಲಂಬನೆಯನ್ನು ಹಂತ ಹಂತವಾಗಿ ತಗ್ಗಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಬೇರೆ ದೇಶಗಳಿಂದ ತೈಲ ಖರೀದಿಸುವ ಸಾಧ್ಯತೆ ಬಗ್ಗೆ ಪರಿಶೀಲಿಸುವಂತೆ ತೈಲ ಕಂಪನಿಗಳಿಗೆ ಸೂಚಿಸಿದೆ.

    ಒಪೆಕ್‌ ರಾಷ್ಟ್ರಗಳು ಏಪ್ರಿಲ್‌ ತಿಂಗಳಿನಲ್ಲೂ ಕಚ್ಚಾ ತೈಲ ಉತ್ಪಾದನೆ ಹೆಚ್ಚಿಸದ ಹಿನ್ನೆಲೆಯಲ್ಲಿ ಭಾರತ ಮಧ್ಯಪ್ರಾಚ್ಯ ದೇಶಗಳನ್ನು ಹೊರತು ಪಡಿಸಿ ಬೇರೆ ದೇಶಗಳಿಂದ ಕಚ್ಚಾ ತೈಲ ಆಮದು ಮಾಡಲು ಮುಂದಾಗಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ಈ ರೀತಿಯ ಸೂಚನೆ ಸರ್ಕಾರದಿಂದ ಬಂದಿರುವುದು ಹೌದು ಎಂದು ಎರಡು ತೈಲ ಸಂಸ್ಕರಣಾ ಘಟಕಗಳು ಖಚಿತಪಡಿಸಿವೆ.

    ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದು ರಾಷ್ಟ್ರವಾಗಿರುವ ಭಾರತ ಶೇ.84ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಈ ಪೈಕಿ ಶೇ.60ರಷ್ಟು ಮಧ್ಯಪ್ರಾಚ್ಯದಿಂದಲೇ ಆಮದಾಗುತ್ತದೆ. ಪಶ್ಚಿಮದ ರಾಷ್ಟ್ರಗಳಿಗೆ ಹೋಲಿಸಿದರೆ ಮಧ್ಯಪ್ರಾಚ್ಯದ ದೇಶಗಳಿಂದ ಬರುವ ತೈಲ ಬಹಳ ಅಗ್ಗ.

    ಭಾರತದ ಮನವಿಯ ಹೊರತಾಗಿಯೂ ಒಪೆಕ್‌ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಹೆಚ್ಚಿಸುವ ನಿರ್ಧಾರ ತೆಗೆದುಕೊಂಡಿಲ್ಲ. ಸೌದಿ ಇಂಧನ ಸಚಿವರು ಕೋವಿಡ್‌ 19 ಲಾಕ್‌ಡೌನ್‌ ಸಮಯದಲ್ಲಿ ಬಹಳ ಕಡಿಮೆ ಬೆಲೆಗೆ ಖರೀದಿಸಿ ಸಂಗ್ರಹಿಸಿದ ಕಚ್ಚಾ ತೈಲವನ್ನು ಬಳಸಿ ಎಂದು ಸೂಚಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈಗ ಬೇರೆ ರಾಷ್ಟ್ರಗಳಿಂದ ತೈಲ ಖರೀದಿಗೆ ಮುಂದಾಗಿದೆ.  ಇದನ್ನೂ ಓದಿ: ಸೌದಿ ತೈಲ ಘಟಕದ ಮೇಲೆ ಡ್ರೋನ್‌ ದಾಳಿ – ಗಗನಕ್ಕೆ ಏರಿದ ಕಚ್ಚಾ ತೈಲ ಬೆಲೆ

    ತೈಲ ಆಮದಿನ ವಿಚಾರದಲ್ಲಿ ಬೇರೆ ಬೇರೆ ಮೂಲಗಳನ್ನು ಹುಡುಕುವಂತೆ ನಾವು ಕಂಪನಿಗಳಿಗೆ ತಿಳಿಸಿದ್ದೇವೆ. ತೈಲ ಉತ್ಪಾದಿಸುತ್ತಿರುವ ಮಧ್ಯಪ್ರಾಚ್ಯದ ದೇಶಗಳು ನಮ್ಮನ್ನು ಒತ್ತೆಯಾಳುಗಳಂತೆ ನೋಡಲು ನಾವು ಅವಕಾಶ ನೀಡುವುದಿಲ್ಲ. ಒಪೆಕ್‌ ರಾಷ್ಟ್ರಗಳು ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ನಿವಾರಣೆಯಾಬೇಕೆಂದು ಬಯಸಿದಾಗ ನಾವು ಅವರ ಬೆಂಬಲಕ್ಕೆ ನಿಂತಿದ್ದೆವು ಎಂದು ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    2020ರಲ್ಲಿ ತೈಲ ಬೇಡಿಕೆ ಕುಸಿತಗೊಂಡರೂ ನಾವು ಅವರ ಜೊತೆ ಮಾಡಿಕೊಂಡಿದ್ದ ತೈಲ ಆಮದನ್ನು ರದ್ದು ಮಾಡಿರಲಿಲ್ಲ. ಹೀಗಾಗಿ ತೈಲ ಆಮದು ವಿಚಾರದಲ್ಲಿ ಕೆಲವೇ ದೇಶಗಳನ್ನು ನೆಚ್ಚಿಕೊಳ್ಳುವುದು ಬೇಡ ಎಂದು ಕೇಂದ್ರ ಸರ್ಕಾರವು ತನ್ನ ಮಾಲೀಕತ್ವದ ತೈಲ ಮಾರಾಟ ಕಂಪನಿಗಳಿಗೆ ಸೂಚಿಸಿದೆ.

    ಬೇರೆ ದೇಶಗಳಿಂದ ತೈಲ ಆಮದು ಮಾಡಿಕೊಂಡರೆ ಆರಂಭದಲ್ಲಿ ಹೆಚ್ಚು ಹಣ ಪಾವತಿಸಬೇಕಾದರೂ ಭವಿಷ್ಯದಲ್ಲಿ ಇದರಿಂದ ದೇಶಕ್ಕೆ ಪ್ರಯೋಜನ ಸಿಗಲಿದೆ ಎಂದು ಅಧಿಕಾರಿ ಹೇಳಿದ್ದಾರೆ.

    ಗಯಾನಾದಿಂದ ತೈಲ ಆಮದು ಮಾಡಿಕೊಳ್ಳುವ ಒಂದು ಪ್ಲಾನ್‌ ಇದೆ. ಇದರ ಜೊತೆ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಒಪ್ಪಂದವನ್ನು ಇಂಡಿಯನ್ ಆಯಿಲ್‌ ಕಾರ್ಪೊರೇಷನ್‌ ಕಂಪನಿಯು ನವೀಕರಿಸಿದೆ ಎಂದು ಮೂಲಗಳು ಹೇಳಿವೆ. ಈ ವರ್ಷದಿಂದ ಮತ್ತೆಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುಬಹುದು ಎಂಬ ಭರವಸೆ ಭಾರತಕ್ಕಿದೆ.

    ಇರಾಕ್ ಹಾಗೂ ಸೌದಿ ಅರೇಬಿಯಾದಿಂದ ಭಾರತ ಹೆಚ್ಚಿನ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡುತ್ತಿದೆ. ಇರಾಕ್‌ ಈಗಾಗಲೇ ವಾರ್ಷಿಕ ತೈಲ ಉತ್ಪಾದನೆಯನ್ನು ಕಡಿತಗೊಳಿಸುವುದಾಗಿ ತಿಳಿಸಿದೆ.

    ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಸುದ್ದಿಸಂಸ್ಥೆ ಕೇಳಿದ್ದ ಪ್ರಶ್ನೆಗೆ ಪೆಟ್ರೋಲಿಯಂ ಸಚಿವಾಲಯ ಹಾಗೂ ಇಂಡಿಯನ್ ಆಯಿಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೋವಿಡ್‌ 19 ಸಾಂಕ್ರಾಮಿಕದ ಸಮಯದಲ್ಲಿ ಜಗತ್ತು ಒಟ್ಟಿಗೆ ಇತ್ತು. ಆದರೆ ಈಗ ಕೆಲ ದೇಶಗಳು ಅವರ ಆರ್ಥಿಕತೆಗಾಗಿ ಕೆಲಸ ಮಾಡುತ್ತಿವೆ ಎಂದು ಅಧಿಕಾರಿ ದೂರಿದ್ದಾರೆ.

  • ಸೌದಿ ತೈಲ ಘಟಕದ ಮೇಲೆ ಡ್ರೋನ್‌ ದಾಳಿ – ಗಗನಕ್ಕೆ ಏರಿದ ಕಚ್ಚಾ ತೈಲ ಬೆಲೆ

    ಸೌದಿ ತೈಲ ಘಟಕದ ಮೇಲೆ ಡ್ರೋನ್‌ ದಾಳಿ – ಗಗನಕ್ಕೆ ಏರಿದ ಕಚ್ಚಾ ತೈಲ ಬೆಲೆ

    ಲಂಡನ್‌: ವಿಶ್ವದ ಅತಿದೊಡ್ಡ ತೈಲ ಕಂಪನಿಯಾಗಿರುವ ಸರ್ಕಾರಿ ಸ್ವಾಮ್ಯದ ಸೌದಿ ಅರಾಮ್ಕೋ ತೈಲ ಘಟಕದ ಮೇಲೆ ಡ್ರೋನ್‌ ಮತ್ತು ಕ್ಷಿಪಣಿ ದಾಳಿ ನಡೆದಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ದಿಢೀರ್‌ ಗಗನಕ್ಕೆ ಏರತೊಡಗಿದೆ.

    ಇರಾನ್‌ ಬೆಂಬಲಿತ ಯೆಮೆನ್‌ನ ಹೌತಿ ಪಡೆಗಳು ಭಾನುವಾರ ಸೌದಿ ಅರಾಮ್ಕೊದ ಘಟಕದ ಮೇಲೆ ದಾಳಿ ನಡೆಸಿದೆ. ಪರಿಣಾಮ ಸೋಮವಾರ ಒಂದು ಬ್ಯಾರೆಲ್‌ ಕಚ್ಚಾ ತೈಲದ ಬೆಲೆ 70 ಡಾಲರ್‌ ಆಗಿದ್ದರೆ ಮಂಗಳವಾರ ಈ ಬೆಲೆ 71 ಡಾಲರ್‌ಗೆ ಏರಿಕೆ ಆಗಿದೆ.

    ಕೋವಿಡ್‌ 19 ಬಳಿಕ ಇದೇ ಮೊದಲ ಬಾರಿಗೆ ಈ ಮಟ್ಟವನ್ನು ತಲುಪಿದ್ದು ಈ ರೀತಿಯ ದಾಳಿಯಿಂದ ಮುಂದಿನ ದಿನಗಳಲ್ಲಿ ಕಚ್ಚಾ ತೈಲದ ಬೆಲೆ ಮತ್ತಷ್ಟು ಏರಿಕೆ ಆಗಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ. ಅಮೆರಿಕದ ಡಬ್ಲ್ಯುಟಿಐ ದರ್ಜೆಯ ಕಚ್ಚಾ ತೈಲ ದರ ಎರಡು ವರ್ಷಗಳಿಗೂ ಹೆಚ್ಚಿನ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.

    ಕಳೆದ ವರ್ಷ ಪೂರ್ವ ಸೌದಿ ರೇಬಿಯಾದ ಅಬ್ಕೈಕ್ ಮತ್ತು ಖುರೈಸ್‍ನಲ್ಲಿದ್ದ ಸೌದಿ ಅರಾಮ್ಕೋದ ತೈಲ ಘಟಕದ ಮೇಲೆ ಮೇಲೆ ದಾಳಿ ನಡೆಸಲಾಗಿತ್ತು. ಈಗ ಮತ್ತೊಮ್ಮೆ ಹೌತಿ ಪಡೆಗಳು ದಾಳಿ ನಡೆಸಿದೆ. ಇದನ್ನೂ ಓದಿ: ರಿಲಯನ್ಸ್‌ ಇಂಡಸ್ಟ್ರೀಸ್‌ ಈಗ ವಿಶ್ವದ ನಂ.2 ಇಂಧನ ಕಂಪನಿ

    ಮತ್ತಷ್ಟು ಏರಿಕೆ: ಭಾರತ ಸೇರಿದಂತೆ ವಿಶ್ವದ ಹಲವು ತೈಲ ಆಮದು ಮಾಡುವ ರಾಷ್ಟ್ರಗಳು ತೈಲ ಉತ್ಪಾದನೆ ಮಾಡುವ ಒಪೆಕ್‌ ರಾಷ್ಟ್ರಗಳಿಗೆ ತೈಲ ಉತ್ಪಾದನೆ ಹೆಚ್ಚು ಮಾಡುವಂತೆ ಮನವಿ ಮಾಡಿದ್ದವು. ಆದರೆ ಈ ಮನವಿಯನ್ನು ಒಪೆಕ್‌ ರಾಷ್ಟ್ರಗಳು ತಿರಸ್ಕರಿಸಿತ್ತು. ಕೋವಿಡ್‌ 19 ಲಾಕ್‌ಡೌನ್‌ ಸಮಯದಲ್ಲಿ ಒಂದು ಬ್ಯಾರೆಲ್‌ ಕಚ್ಚಾ ತೈಲದ ಬೆಲೆ 19 ಡಾಲರ್‌ಗೆ ಇಳಿಕೆಯಾಗಿತ್ತು. ಈ ಸಮಯದಲ್ಲಿ ಭಾರೀ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ರಾಷ್ಟ್ರಗಳು ಸಂಗ್ರಹಿಸಿವೆ. ಸಂಗ್ರಹ ಮಾಡಿರುವ ಕಚ್ಚಾ ತೈಲವನ್ನು ವಿತರಣೆ ಮಾಡಿ ಎಂದು ಸೌದಿ ಅರೇಬಿಯಾ ಭಾರತಕ್ಕೆ ಸೂಚಿಸಿತ್ತು.

    ದೇಶದಲ್ಲಿ ಈಗಾಗಲೇ ಪೆಟ್ರೋಲ್‌, ಡೀಸೆಲ್‌ ದರಗಳು ಗರಿಷ್ಠ ಮಟ್ಟದಲ್ಲಿವೆ. ಕಚ್ಚಾ ತೈಲ ದರ ನಿರಂತರವಾಗಿ ಏರಿಕೆ ಆಗುತ್ತಿರುವುದರಿಂದ ದೇಶಿ ಮಾರುಕಟ್ಟೆಯಲ್ಲಿ ಇಂಧನ ದರ ಮತ್ತಷ್ಟು ಹೆಚ್ಚಾಗಲಿದೆ.

  • ಮತ್ತೆ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ – ದರ ಹೆಚ್ಚಾಗುತ್ತಿರುವುದಕ್ಕೆ ಕಾರಣ ಏನು?

    ಮತ್ತೆ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ – ದರ ಹೆಚ್ಚಾಗುತ್ತಿರುವುದಕ್ಕೆ ಕಾರಣ ಏನು?

    ಬೆಂಗಳೂರು: ದಿನದಿಂದ ದಿನಕ್ಕೆ ಪೆಟ್ರೋಲ್‌, ಡೀಸೆಲ್‌ ಬೆಲೆ ಏರುತ್ತಿದ್ದು, ಇಂದು ಸಹ ಏರಿಕೆಯಾಗಿದೆ. ಇಂದು ಪೆಟ್ರೋಲ್‌ ಬೆಲೆ 70 ಪೈಸೆ ಏರಿಕೆ ಆಗಿದ್ದರೆ ಡೀಸೆಲ್‌ ಬೆಲೆ 27 ಪೈಸೆ ಏರಿಕೆಯಾಗಿದೆ.

    ಬೆಲೆ ಏರಿಕೆಯಿಂದ ಬೆಂಗಳೂರಿನಲ್ಲಿ ಒಂದು ಲೀಟರ್‌ ಪೆಟ್ರೋಲ್‌ ಬೆಲೆ 90.53 ಆಗಿದ್ದರೆ ಡೀಸೆಲ್‌ ಬೆಲೆ 82.40 ರೂ. ಆಗಿದೆ.

    ಒಂದು ಲೀಟರ್‌ ಪೆಟ್ರೋಲ್‌ ಬೆಲೆ ದೆಹಲಿಯಲ್ಲಿ 87.60 ರೂ. ಇದ್ದರೆ ಡೀಸೆಲ್‌ ಬೆಲೆ 77.73 ರೂ. ಇದೆ. ಮುಂಬೈನಲ್ಲಿ ಲೀಟರ್‌ ಪೆಟ್ರೋಲ್‌ ಬೆಲೆ 94.12 ರೂ. ಇದ್ದರೆ ಡೀಸೆಲ್‌ ಬೆಲೆ 84.63 ರೂ. ಇದೆ.

    ಸೋಮವಾರ ಬ್ರೆಂಟ್‌ ಕಚ್ಚಾ ತೈಲದ ದರ ಒಂದು ಬ್ಯಾರೆಲ್‌ಗೆ 60 ಡಾಲರ್‌(ಅಂದಾಜು 4,300 ರೂ.) ತಲುಪಿತ್ತು.  ಈ ದರ ಈ ವರ್ಷದ ಗರಿಷ್ಠವಾಗಿದ್ದು, ಬೆಲೆ ಹೆಚ್ಚಳ ನೇರವಾಗಿ ಗ್ರಾಹಕರ ಮೇಲೆ ಪರಿಣಾಮ ಬೀರುತ್ತಿದೆ.

    ಬೆಲೆ ಏರಿಕೆ ಯಾಕೆ?
    ದೇಶದ ಕಚ್ಚಾ ತೈಲ ಬೇಡಿಕೆಯ ಶೇ.84ರಷ್ಟನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ದರಗಳಿಗೆ ಅನುಗುಣವಾಗಿ ದೇಶದ ತೈಲ ಮಾರುಕಟ್ಟೆ ಕಂಪನಿಗಳು ದರ ಪರಿಷ್ಕರಣೆ ಮಾಡುತ್ತವೆ. ಕೋವಿಡ್–19 ಲಾಕ್‌ಡೌನ್ ಘೋಷಣೆಯಾದ ಬಳಿಕ ದೇಶದ ತೈಲ ಮಾರುಕಟ್ಟೆ ಕಂಪನಿಗಳು ಸುಮಾರು 2 ತಿಂಗಳ ಕಾಲ ದರ ಪರಿಷ್ಕರಣೆ ನಿಲ್ಲಿಸಿತ್ತು.

    ಕೋವಿಡ್‌ ಲಸಿಕೆ ಲಭ್ಯತೆ ಮತ್ತು ಕೋವಿಡ್‌ 19 ಸೋಂಕಿತರ ಸಂಖ್ಯೆ ಇಳಿಕೆ ಆಗುತ್ತಿದ್ದಂತೆ ವಿಶ್ವದೆಲ್ಲೆಡೆ ಆರ್ಥಿಕ ಚಟುವಟಿಕೆಗೆಗಳು ಮತ್ತೆ ಆರಂಭವಾಗಿದೆ. 2019ರ ಆರಂಭದಲ್ಲಿ ಪ್ರತಿ ಬ್ಯಾರೆಲ್‌ಗೆ 66 ಡಾಲರ್( ಅಂದಾಜು 4,800) ಇದ್ದ ಬ್ರೆಂಟ್ ಕಚ್ಚಾ ತೈಲ ಬೆಲೆ ಲಾಕ್‌ಡೌನ್, ಸಂಚಾರ ನಿರ್ಬಂಧ ಸೇರಿದಂತೆ ಹಲವು ಕಾರಣಗಳಿಂದ 2020ರ ಏಪ್ರಿಲ್‌ ವೇಳೆಗೆ 19 ಡಾಲರ್‌(ಅಂದಾಜು 1,300 ರೂ.)ಗೆ ಇಳಿಕೆ ಕಂಡಿತ್ತು.

    ಕೋವಿಡ್‌ 19 ಹಿನ್ನೆಲೆಯಲ್ಲಿ ಕಚ್ಚಾ ತೈಲ ರಫ್ತು ದೇಶಗಳ ಸಂಘಟನೆ(ಒಪೆಕ್‌) ರಾಷ್ಟ್ರಗಳು 2020ರಲ್ಲಿ ತೈಲ ಉತ್ಪಾದನೆಯನ್ನು ಕಡಿತಗೊಳಿಸಿತ್ತು. ಈಗ ವಿಶ್ವದ ಆರ್ಥಿಕತೆ ಮರಳುತ್ತಿದ್ದು ತೈಲ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಒಪೆಕ್‌ ರಾಷ್ಟ್ರಗಳು ಈ ಹಿಂದೆ ಮಾಡಿಕೊಂಡ ಮತುಕತೆಯಂತೆಯೇ ಉತ್ಪಾದನೆ ಮಾಡುತ್ತಿದೆ. ಆದರಲ್ಲೂ ವಿಶ್ವದಲ್ಲಿ ಅತಿ ಹೆಚ್ಚು ತೈಲ ಉತ್ಪಾದಿಸುತ್ತಿರುವ ಸೌದಿ ಅರೆಬಿಯಾ ಪ್ರತಿ ದಿನ 1 ದಶಲಕ್ಷ ಬ್ಯಾರೆಲ್‌ ಕಚ್ಚಾ ತೈಲ ಉತ್ಪಾದನೆಯನ್ನು ಕಡಿಮೆ ಮಾಡಿದೆ. ಉತ್ಪಾದನೆ ಕಡಿಮೆ ಇರುವ ಕಾರಣ ಪೂರೈಕೆಯೂ ಕಡಿಮೆ ಆಗುತ್ತಿದೆ. ಆದರೆ ದೇಶಗಳಿಂದ ತೈಲ ಬೇಡಿಕೆ ಹೆಚ್ಚಾಗುತ್ತಿದೆ. ಪರಿಣಾಮ ಬ್ರೆಂಟ್‌ ಕಚ್ಚಾ ತೈಲದ ದರ ಏರಿಕೆ ಆಗುತ್ತಿದೆ.

    ಅಮೆರಿಕದ ಟ್ರಂಪ್‌ ಆಡಳಿತ ಇರಾನ್ ಮೇಲೆ ತೈಲ ಖರೀದಿ ಮತ್ತು ವ್ಯಾಪಾರ ಸಂಬಂಧ ನಿರ್ಬಂಧ ಹೇರಿತ್ತು. ಆದರೆ ಹೊಸದಾಗಿ ಅಧ್ಯಕ್ಷರಾಗಿರುವ ಜೋ ಬೈಡನ್‌ ಸರ್ಕಾರ ಇರಾನ್‌ ಮೇಲಿನ ನಿರ್ಬಂಧ ತೆಗೆದು ಹಾಕಿದರೆ ತೈಲ ಉತ್ಪಾದನೆ ಹೆಚ್ಚಾಗಿ ದರ ಕಡಿಮೆಯಾಗಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

  • ಅಮೆರಿಕದ ಸಂಗ್ರಹಾಗಾರಗಳಲ್ಲಿ ಸಂಗ್ರಹವಾಗಲಿದೆ ಭಾರತದ ಕಚ್ಚಾ ತೈಲ

    ಅಮೆರಿಕದ ಸಂಗ್ರಹಾಗಾರಗಳಲ್ಲಿ ಸಂಗ್ರಹವಾಗಲಿದೆ ಭಾರತದ ಕಚ್ಚಾ ತೈಲ

    ನವದೆಹಲಿ: ಎರಡು ದೇಶಗಳ ನಡುವಿನ ಸಂಬಂಧ ಉತ್ತಮವಾಗುತ್ತಿದ್ದಂತೆ ಅಮೆರಿಕದ ಸಂಗ್ರಹಾಗಾರಗಳಲ್ಲಿ ಕಚ್ಚಾ ತೈಲವನ್ನು ದಾಸ್ತಾನು ಮಾಡಲು ಭಾರತ ಮುಂದಾಗಿದೆ.

    ಈ ಸಂಬಂಧ ಕೇಂದ್ರ ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್‌ ಮಾತನಾಡಿ, ಎರಡು ದೇಶಗಳು ತೈಲ ದಾಸ್ತಾನು ಮಾಡುವ ಸಂಬಂಧ ಸಹಿ ಹಾಕಿ ಎಂದು ತಿಳಿಸಿದರು. ಶುಕ್ರವಾರ ಧರ್ಮೇಂದ್ರ ಪ್ರಧಾನ್‌ ಮತ್ತು ಅಮೆರಿಕದ ಇಂಧನ ಸಚಿವ ಡಾನ್‌ ಬ್ರೌಲೆಟ್‌ ವಿಡಿಯೋ ಕಾನ್ಫೆರೆನ್ಸ್‌ ನಡೆಸಿ ಈ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ.

    ಅಮೆರಿಕದಲ್ಲಿ ಯಾಕೆ?
    ಕೋವಿಡ್‌ 19ನಿಂದಾಗಿ ಈಗ ಬೇಡಿಕೆ ಕಡಿಮೆ ಇರುವ ಕಾರಣ ತೈಲ ದರ ಕಡಿಮೆಯಿದೆ. ಹೀಗಾಗಿ ಈಗ ತೈಲವನ್ನು ಖರೀದಿಸಿ ಅಮೆರಿಕದಲ್ಲಿ ಸಂಗ್ರಹಿಸಿದರೆ ಮುಂದೆ ಲಾಭವಾಗುತ್ತದೆ. ದರ ಏರಿಕೆಯಾದಾಗ ಸಂಗ್ರಹಿಸಿರುವ ತೈಲವನ್ನು ಬಳಸುವ ಮೂಲಕ ನಿಯಂತ್ರಣಕ್ಕೆ ತರಬಹುದು ಎಂಬ ಲೆಕ್ಕಾಚಾರವನ್ನು ಭಾರತ ಹಾಕಿಕೊಂಡಿದೆ.

    ವಿಶ್ವದಲ್ಲೇ ತುರ್ತು ಸಂದರ್ಭಕ್ಕೆಂದು ತೈಲ ಸಂಗ್ರಹ ಮಾಡುವ ಸಾಮರ್ಥ್ಯ ಹೊಂದಿರುವ ದೇಶಗಳ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲಿದ್ದು, 714 ದಶಲಕ್ಷ ಬ್ಯಾರೆಲ್‌ ತೈಲವನ್ನು ಸಂಗ್ರಹ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಸದ್ಯ ಭಾರತ 5.33 ದಶಲಕ್ಷ ಟನ್‌( 38 ದಶಲಕ್ಷ ಬ್ಯಾರೆಲ್‌) ತೈಲವನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದ್ದು, ಈ ತೈಲವನ್ನು ತುರ್ತು ಸಂದರ್ಭದಲ್ಲಿ 9 ದಿನಗಳ ಕಾಲ ಬಳಸಬಹುದು.  ಇದನ್ನೂ ಓದಿ: ಕೋವಿಡ್ 19 ವೇಳೆಯಲ್ಲಿ ದೇಶಕ್ಕೆ ಸಾವಿರಾರು ಕೋಟಿ ಉಳಿಸಿದ ಮಂಗಳೂರು

    ಇಂಟರ್‌ನ್ಯಾಷನಲ್‌ ಎನರ್ಜಿ ಏಜೆನ್ಸಿ(ಐಇಎ) ತನ್ನ ಸದಸ್ಯ ರಾಷ್ಟ್ರಗಳು 90 ದಿನಗಳ ಕಾಲ ತೈಲ ಸಂಗ್ರಹವನ್ನು ಹೊಂದಿರಬೇಕೆಂದು ಹೇಳಿದೆ.

    ಭಾರತ ಕಚ್ಚಾ ತೈಲ ರಫ್ತು ದೇಶಗಳ ಸಂಘಟನೆ(ಒಪೆಕ್‌) ರಾಷ್ಟ್ರಗಳಿಂದ ಅಲ್ಲದೇ ಅಮೆರಿಕದಿಂದಲೂ ತೈಲವನ್ನು ಆಮದು ಮಾಡುತ್ತದೆ. ಭಾರತದ 6ನೇ ದೊಡ್ಡ ತೈಲ ಆಮದು ಮಾಡುವ ರಾಷ್ಟ್ರ ಅಮೆರಿಕವಾಗಿದ್ದು, 2017ರಿಂದ ತೈಲ ಖರೀದಿಸಲು ಆರಂಭಿಸಿದೆ. 2017 ಮತ್ತು 2019ರ ನಡುವೆ ಆಮದು 10 ಪಟ್ಟು ಹೆಚ್ಚಾಗಿದೆ. ಪ್ರತಿ ದಿನ 2,50,000 ಬ್ಯಾರೆಲ್‌ ಕಚ್ಚಾ ತೈಲವನ್ನು ಅಮೆರಿಕ ಭಾರತಕ್ಕೆ ರಫ್ತು ಮಾಡುತ್ತಿದೆ. ಈ ಮೂಲಕ ಅಮೆರಿಕದದಿಂದ ಅತಿ ಹೆಚ್ಚು ತೈಲ ಆಮದು ಮಾಡುತ್ತಿರುವ ದೇಶಗಳ ಪೈಕಿ ಮೊದಲ ಸ್ಥಾನ ಭಾರತಕ್ಕೆ ಸಿಕ್ಕಿದೆ.

    ಭಾರತ ಅಮೆರಿಕ ನಡುವಿನ ಇಂಧನ ಸಹಭಾಗಿತ್ವ ಸಭೆ ಈ ವರ್ಷದ ಏಪ್ರಿಲ್‌ನಲ್ಲಿ ವಾಷಿಂಗ್ಟನ್‌ನಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್‌ 19 ನಿಂದಾಗಿ ಮುಂದೂಡಿಕೆಯಾಗಿದ್ದ ಸಭೆ ಈಗ ನಡೆದಿದೆ.

    ಭಾರತದ ತೈಲ ಸಂಗ್ರಹ ಏನೇನು ಸಾಲದು. ಒಟ್ಟು 90 ದಿನಗಳ ಬಳಕೆಗೆ ಆಗುವಷ್ಟು 13.32 ಮೆಟ್ರಿಕ್ ಟನ್ ತೈಲ ಸಂಗ್ರಹ ಅಗತ್ಯತೆ ಭಾರತಕ್ಕಿದೆ. ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್ (ಐಎಸ್‍ಪಿಆರ್ ಎಲ್) ಮಂಗಳೂರು, ಉಡುಪಿ ಬಳಿಯ ಪಾದೂರು, ವಿಶಾಖಪಟ್ಟಣಂನಲ್ಲಿ ಭೂಗತ ತೈಲ ಸಂಗ್ರಹಣ ಘಟಕಗಳನ್ನು ಸ್ಥಾಪಿಸಿದೆ.

    ಮೂರು ತೈಲ ಸಂಗ್ರಹಗಾರಗಳ ಪೈಕಿ ಪಾದೂರಿನಲ್ಲಿ ಅತಿ ಹೆಚ್ಚು ತೈಲವನ್ನು ಸಂಗ್ರಹ ಮಾಡಬಹುದಾಗಿದೆ. ಪಾದೂರಿನಲ್ಲಿ 2.5 ದಶಲಕ್ಷ ಟನ್(17 ದಶಲಕ್ಷ ಬ್ಯಾರೆಲ್), ಮಂಗಳೂರಿನಲ್ಲಿ 1.5 ದಶಲಕ್ಷ ಟನ್, ವಿಶಾಖಪಟ್ಟಣದಲ್ಲಿ 1.33 ಟನ್ ತೈಲವನ್ನು ಸಂಗ್ರಹಿಸಬಹುದಾಗಿದೆ.

    ಶೇ.83ರಷ್ಟು ತೈಲವನ್ನು ಭಾರತ ಆಮದು ಮಾಡುತ್ತಿದೆ. 65 ದಿನಗಳಿಗೆ ಆಗುವಷ್ಟು ತೈಲವನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ರಿಫೈನರಿಗಳಿಗೆ ಇದೆ. 90 ದಿನಗಳ ಬಳಕೆಗೆ ಆಗುವಷ್ಟು ತೈಲ ಸಂಗ್ರಹಿಸುವ ನಿಟ್ಟಿನಲ್ಲಿ ಐಎಸ್‌ಪಿಆರ್‌ಎಲ್ ಒಡಿಶಾದ ಚಂಡಿಕೋಲ್, ರಾಜಸ್ಥಾನದ ಬಿಕಾನೆರ್, ಗುಜರಾತಿನ ರಾಜ್‍ಕೋಟ್ ಬಳಿ ಭೂಗತ ತೈಲಗಾರ ನಿರ್ಮಿಸಲು ಮುಂದಾಗುತ್ತಿದೆ.

  • ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳ

    ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳ

    – ಪ್ರತಿ ಲೀಟರ್ ಗೆ ಸುಮಾರು 3 ರೂ.ಹೆಚ್ಚಳ
    – ಸುಂಕ ಹೆಚ್ಚಾದರೂ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರಿಕೆ

    ನವದೆಹಲಿ: ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವುದರ ಮಧ್ಯೆ ಕೇಂದ್ರ ಸರ್ಕಾರ ಅಬಕಾರಿ ಸುಂಕ ಮತ್ತು ರೋಡ್ ಸೆಸ್ ಹೆಚ್ಚಳ ಮಾಡಿದೆ.

    ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಮೇಲಿನ ವಿಶೇಷ ಅಬಕಾರಿ ಸುಂಕವನ್ನು 2 ರೂ. ಏರಿಕೆ ಮಾಡಿದ್ದರೆ, ರಸ್ತೆ ಸೆಸ್ ಅನ್ನು 1 ರೂ. ಏರಿಸಲಾಗಿದೆ. ವಿಶೇಷ ಅಬಕಾರಿ ಸುಂಕ(ಎಸ್‍ಇಡಿ) ಅಡಿ ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿದೆ.

    ಇಲ್ಲಿಯವರೆಗೆ ಒಂದು ಲೀಟರ್ ಪೆಟ್ರೋಲ್ ಮೇಲೆ ಕೇಂದ್ರ ಸರ್ಕಾರ ಅಬಕಾರಿ ಸುಂಕ, ರಸ್ತೆ ಸೆಸ್ ಸೇರಿ 19.98 ರೂ. ವಿಧಿಸುತಿದ್ದರೆ ಈಗ ಇದು 22.98 ರೂ.ಗೆ ಏರಿಕೆಯಾಗಿದೆ. ಒಂದು ಲೀಟರ್ ಡೀಸೆಲಿಗೆ 15.83 ರೂ. ಅಬಕಾರಿ ಸುಂಕ ಇದ್ದರೆ ಈಗ ಇದು 18.83 ರೂ.ಗೆ ಏರಿಕೆಯಾಗಿದೆ.

    ಕಚ್ಚಾ ತೈಲ ಉತ್ಪದನೆ ರಾಷ್ಟ್ರಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡುತ್ತಿದ್ದು ಬೆಲೆ ಸಮರ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗುತ್ತಿದೆ.

    ಕಚ್ಚಾ ತೈಲದ ಬೆಲೆ ಇಳಿಕೆಯಾಗುತ್ತಿರುವ ಬೆನ್ನಲ್ಲೇ ಭಾರತದಲ್ಲೂ ದರ ಇಳಿಕೆ ಆಗುತ್ತಾ? ಅಥವಾ ಕೇಂದ್ರ ಸರ್ಕಾರ ಅಬಕಾರಿ ಸುಂಕ ಏರಿಸಿ ಬೆಲೆಯನ್ನು ಸಮತೋಲನದಲ್ಲಿ ಇಡಲಿದ್ಯಾ ಎನ್ನುವ ಪ್ರಶ್ನೆ ಎದ್ದಿತ್ತು. ಆದರೆ ಈಗ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 3 ರೂ. ಏರಿಕೆ ಮಾಡಿದೆ. ಅಬಕಾರಿ ಸುಂಕ ಮತ್ತು ರಸ್ತೆ ಸೆಸ್ ಏರಿಕೆ ಮಾಡಿದ್ದರೂ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ.

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲದ ಬೆಲೆ 34.46 ಡಾಲರ್(2,548 ರೂ.) ತಲುಪಿದೆ.

    ಬೆಲೆ ಇಳಿಕೆ ಆಗುತ್ತಿರೋದು ಯಾಕೆ?
    ಕೊರೊನಾ ವೈರಸ್ ದಾಳಿಯಿಂದ ಜಾಗತಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದ್ದು ಬೇಡಿಕೆ ಇಳಿಕೆಯಾದ ಹಿನ್ನೆಲೆಯಲ್ಲಿ ತೈಲ ದರ ಇಳಿಕೆಯಾಗುತ್ತಲೇ ಇತ್ತು. ಈ ದರವನ್ನು ಸ್ಥಿರಗೊಳಿಸುವ ಸಂಬಂಧ ಮತ್ತೆ ಶೇ.4ರಷ್ಟು ಉತ್ಪಾದನೆ ತಗ್ಗಿಸುವ ಕುರಿತಾಗಿ 14 ಸದಸ್ಯರನ್ನು ಒಳಗೊಂಡಿರುವ ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಸಂಘಟನೆ(ಒಪೆಕ್) ಮುಂದಾಗಿತ್ತು. ಮಾರ್ಚ್ ತಿಂಗಳಿಗೆ ಒಪ್ಪಂದ ಕೊನೆಯಾಗಲಿರುವ ಹಿನ್ನೆಲೆಯಲ್ಲಿ ಮತ್ತೆ ಮುಂದುವರಿಸುವಂತೆ ಸೌದಿ ಅರೆಬೀಯಾ ಮಾತುಕತೆಗೆ ಮುಂದಾಗಿತ್ತು. ಆದರೆ ಮತ್ತೆ ಒಪ್ಪಂದ ನಡೆಸಲು ನಾವು ಸಿದ್ಧರಿಲ್ಲ ಎಂದು ರಷ್ಯಾ ಹೇಳಿದ ಬೆನ್ನಲ್ಲೇ ಈಗ ತೈಲ ಉತ್ಪಾದನೆ ನಡೆಸುವ ರಾಷ್ಟ್ರಗಳ ಮಧ್ಯೆ ದರ ಸಮರ ಆರಂಭಗೊಂಡಿದೆ.

    ಒಪೆಕ್ ರಾಷ್ಟ್ರಗಳು ಈಗ ಪ್ರತಿದಿನ ಉತ್ಪಾದನೆಯಾಗುತ್ತಿರುವ ತೈಲ ಪ್ರಮಾಣವನ್ನು ಇಳಿಸಲು ಮಾತುಕತೆ ನಡೆಸಿತ್ತು. ಏಪ್ರಿಲ್ ನಿಂದ ಪ್ರತಿದಿನ ಶೇ.1.5 ದಶಲಕ್ಷ ಬ್ಯಾರೆಲ್ (ಶೇ.4ರಷ್ಟು) ಇಳಿಸಿ ಮುಂದಿನ ಡಿಸೆಂಬರ್ ವರೆಗೆ ಈ ಪ್ರಮಾಣದಲ್ಲೇ ತೈಲ ಉತ್ಪಾದನೆ ನಡೆಸಲು ಪ್ರಸ್ತಾಪವನ್ನು ಮುಂದಿಟ್ಟಿತ್ತು. ಆದರೆ ಈ ಪ್ರಸ್ತಾಪವನ್ನು ರಷ್ಯಾ ತಿರಸ್ಕರಿಸಿದ್ದರಿಂದ ಗಲ್ಫ್ ರಾಷ್ಟ್ರಗಳು ಉತ್ಪಾದನೆಯನ್ನು ಹೆಚ್ಚಿಸಿ ದರವನ್ನು ಇಳಿಕೆ ಮಾಡಿದೆ.

    ಸೋಮವಾರ ಕಚ್ಚಾ ತೈಲದ ಬೆಲೆಯನ್ನು ಸೌದಿ ಅರೇಬಿಯಾ ಇಳಿಕೆ ಮಾಡಿತ್ತು. ವಿಶ್ವದ ಅತಿ ದೊಡ್ಡ ತೈಲ ಉತ್ಪಾದಕಾ ರಾಷ್ಟ್ರವಾಗಿರುವ ಸೌದಿ ಅರೇಬಿಯಾ ಏಪ್ರಿಲ್ ನಿಂದ ಈಗ ಇರುವ ಉತ್ಪಾದನೆಗಿಂತ ಹೆಚ್ಚುವರಿಯಾಗಿ ಪ್ರತಿದಿನ 10 ದಶಲಕ್ಷ ಬ್ಯಾರೆಲ್ ಕಚ್ಚಾ ತೈಲ ಉತ್ಪಾದಿಸುವುದಾಗಿ ಹೇಳಿಕೊಂಡಿದೆ. ಈ ನಿರ್ಧಾರ ಪ್ರಕಟವಾದ ಬೆನ್ನಲ್ಲೇ ತೈಲ ಬೆಲೆ ಶೇ.31 ರಷ್ಟು ಇಳಿಕೆಯಾಗಿತ್ತು. ಪರಿಣಾಮ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 35.75 ಡಾಲರ್(2,647 ರೂ.) ಬೆಲೆಯಲ್ಲಿ ಮಾರಾಟವಾಗುತ್ತಿದ್ದ 1 ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲ 31.02 ಡಾಲರಿಗೆ(2,295 ರೂ.) ತಲುಪಿತ್ತು. ಜುಲೈ 2008ರಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 148 ಡಾಲರ್(10,960 ರೂ.) ದರಕ್ಕೆ ಏರಿಕೆ ಆಗಿತ್ತು.

    ಚೀನಾದಲ್ಲಿ ಈಗಾಗಲೇ ಕೆಲ ದಿನಗಳಿಂದ ಉತ್ಪಾದನೆ ಸ್ಥಗಿತಗೊಂಡಿದೆ. ಇದರ ಜೊತೆ ದಕ್ಷಿಣ ಕೊರಿಯಾ, ಇಟಲಿಯಲ್ಲಿ ಕೊರೊನಾ ಭಾರೀ ಪ್ರಮಾಣದಲ್ಲಿ ಹಬ್ಬುತ್ತಿದೆ. ಯುರೋಪ್, ಏಷ್ಯಾ ರಾಷ್ಟ್ರಗಳಿಗೆ ಭೀತಿ ಎದುರಾದ ಹಿನ್ನೆಲೆಯಲ್ಲಿ ಈ ಬಾರಿ ತೈಲದ ಬೇಡಿಕೆ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಯಿದೆ.

    2016ರಲ್ಲಿ ಅಮೆರಿಕದ ಶೇಲ್ ತೈಲ ಉತ್ಪಾದನೆ ತಗ್ಗಿಸಲು ಸೌದಿ ಅರೇಬಿಯಾ, ರಷ್ಯಾ ಮತ್ತು ಮಧ್ಯಪ್ರಾಚ್ಯದ ಇತರ ಉತ್ಪಾದಕ ದೇಶಗಳು ಏಷ್ಯಾದ ಮಾರುಕಟ್ಟೆಗೆ ಕಡಿಮೆ ಬೆಲೆಯಲ್ಲಿ ತೈಲವನ್ನು ಪೂರೈಕೆ ಮಾಡಿದ್ದವು. ಈಗ ಈ ಒಪ್ಪಂದದಿಂದ ಹಿಂದೆ ಸರಿದ ರಷ್ಯಾಕ್ಕೆ ಪಾಠ ಕಲಿಸಲು ಸೌದಿ ಭಾರೀ ಪ್ರಮಾಣದಲ್ಲಿ ಉತ್ಪಾದನೆ ಮಾಡಲು ಮುಂದಾಗಿದೆ. ಬೆಲೆ ಕಡಿಮೆ ಮಾಡಿದರೆ ಖರೀದಿಸಲು ಬೇಡಿಕೆ ಹೆಚ್ಚಾಗುವುದರಿಂದ ಯುರೋಪ್ ಮತ್ತು ಏಷ್ಯಾದಲ್ಲಿ ರಷ್ಯಾ ಜೊತೆಗೆ ಪೈಪೋಟಿ ನಡೆಸಿ ಮಾರುಕಟ್ಟೆಯನ್ನು ತನ್ನತ್ತ ಸೆಳೆಯಲು ಸೌದಿ ಮುಂದಾಗಿದೆ.

    ಕೊರೊನಾ ವೈರಸ್ ದಾಳಿಯಿಂದ ಇಡೀ ವಿಶ್ವದಲ್ಲಿ ಈಗ ಉತ್ಪಾದನೆ ಕಡಿಮೆಯುತ್ತಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರ ನಿರಂತರವಾಗಿ ಇಳಿಕೆಯಾಗುತ್ತಿದೆ. ವ್ಯಾಪಾರ, ವಾಣಿಜ್ಯ ಚಟುವಟಿಕೆಗಳು ಮಂದಗತಿಯಲ್ಲಿರುವುದರಿಂದ ತೈಲದ ಬೇಡಿಕೆ ಇಳಿದಿದ್ದು, ಬೆನ್ನಿಗೇ ದರವೂ ಇಳಿಕೆಯಾಗುತ್ತಿದೆ. ಎಷ್ಟು ಇಳಿಕೆಯಾಗಿದೆ ಎಂದರೆ 2018ರ ಆಗಸ್ಟ್ ನಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 72 ಡಾಲರ್ ಇತ್ತು. ಚೀನಾ ಅಮೆರಿಕ ವಾಣಿಜ್ಯ ಸಮರ ಮತ್ತಷ್ಟು ಹೆಚ್ಚಾಗಿದ್ದರಿಂದ ಕಳೆದ ವರ್ಷ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 58 ಡಾಲರ್ ತಲುಪಿತ್ತು.

    ಭಾರತಕ್ಕೆ ಲಾಭ ಹೇಗೆ?
    ಚೀನಾ, ಅಮೆರಿಕದ ನಂತರ ವಿಶ್ವದಲ್ಲೇ ಅತಿ ಹೆಚ್ಚು ತೈಲವನ್ನು ಆಮದು ಮಾಡುತ್ತಿರುವ ದೇಶ ಭಾರತವಾಗಿದ್ದು, ದೇಶದ ಆರ್ಥಿಕತೆ ಮೇಲೆ ತೈಲ ದರ ಭಾರೀ ಪ್ರಭಾವ ಬೀರುತ್ತದೆ. ಭಾರತವು ತನ್ನ ಬೇಡಿಕೆಯ ಶೇ.80ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಹೀಗಾಗಿ ತೈಲ ದರದಲ್ಲಿ ಇಳಿಕೆಯಾದರೆ ಆಮದು ಹೊರೆಯೂ ಕಡಿಮೆಯಾಗಲಿದೆ. ರಫ್ತು ವಹಿವಾಟಿನ ನಡುವಣ ಅಂತರವಾದ ಚಾಲ್ತಿ ಖಾತೆ ಕೊರತೆಯೂ ಇಳಿಕೆಯಾಗಲಿದೆ.

    2014ರಲ್ಲಿ ಮೊದಲ ಬಾರಿಗೆ ಪ್ರಧಾನಿ ಮೋದಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 108 ಡಾಲರ್(ಅಂದಾಜು 7,750 ರೂ.) ಇತ್ತು. ಮೋದಿ ಸರ್ಕಾರ ಮೂರನೇ ವರ್ಷದ ಅವಧಿಯಲ್ಲಿ 48 ಡಾಲರ್(3,400 ರೂ.) ಬೆಲೆಗೆ ಇಳಿಕೆಯಾಗಿತ್ತು. ಈಗ ಎರಡನೇ ಅವಧಿಯ ಮೊದಲ ವರ್ಷದಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 31 ಡಾಲರ್ ತಲುಪಿದೆ. ಈ ದರ ಹಲವು ತಿಂಗಳ ಕಾಲ ಸ್ಥಿರವಾಗಬಹುದು ಅಥವಾ ಮತ್ತಷ್ಟು ದರ ಕಡಿಮೆಯಾಗಬಹುದು ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.

    ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕದಿಂದ 2018-19ರ ಹಣಕಾಸು ವರ್ಷದಲ್ಲಿ ಸರ್ಕಾರ 2.579 ಕೋಟಿ ರೂ. ಆದಾಯ ಸಂಗ್ರಹಿಸಿತ್ತು. 2013-14ರ ಅವಧಿಯಲ್ಲಿ 88,600 ಕೋಟಿ ರೂ. ಸಂಗ್ರಹಿಸಿದ್ದರೆ 2017-18ರ ಅವಧಿಯಲ್ಲಿ 2,016 ಕೋಟಿ ಆದಾಯ ಸಂಗ್ರಹಿಸಿತ್ತು. ಅಬಕಾರಿ ಸುಂಕವನ್ನು ಹೆಚ್ಚಿಸುವ ಮೂಲಕ ಸಂಗ್ರಹವನ್ನು ಹಣವನ್ನು ಸಾಮಾಜಿಕ ಅಭಿವೃದ್ಧಿ ಯೋಜನೆಗಳಿಗೆ ಬಳಸಲಾಗುವುದು ಎಂದು ಕೇಂದ್ರ ಸರ್ಕಾರ ಸಮರ್ಥನೆ ನೀಡಿದೆ.

  • ಮತ್ತೆ ಮೋದಿ ಕೈ ಹಿಡಿದ ಕಚ್ಚಾ ತೈಲ – ಒಂದೇ ದಿನ ಭಾರೀ ಇಳಿಕೆ, ದರ ಸಮರ ಆರಂಭ

    ಮತ್ತೆ ಮೋದಿ ಕೈ ಹಿಡಿದ ಕಚ್ಚಾ ತೈಲ – ಒಂದೇ ದಿನ ಭಾರೀ ಇಳಿಕೆ, ದರ ಸಮರ ಆರಂಭ

    ನವದೆಹಲಿ: ಕಚ್ಚಾ ತೈಲ ಮತ್ತೆ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಹಿಡಿದಿದೆ. ಕುಸಿಯುತ್ತಿರುವ ದೇಶದ ಆರ್ಥಿಕತೆಯನ್ನು ಮೇಲಕ್ಕೆ ಎತ್ತಲು ಸರ್ಕಾರ ನಾನಾ ಕ್ರಮಗಳನ್ನು ಕೈಗೊಳ್ಳುತ್ತಿರುವ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಇಳಿಕೆ ಕಂಡಿದೆ.

    ಕೊರೊನಾ ವೈರಸ್ ದಾಳಿಯಿಂದ ಜಾಗತಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದ್ದು ಬೇಡಿಕೆ ಇಳಿಕೆಯಾದ ಹಿನ್ನೆಲೆಯಲ್ಲಿ ತೈಲ ದರ ಇಳಿಕೆಯಾಗುತ್ತಲೇ ಇತ್ತು. ಈ ದರವನ್ನು ಸ್ಥಿರಗೊಳಿಸುವ ಸಂಬಂಧ ಮತ್ತೆ ಶೇ.4ರಷ್ಟು ಉತ್ಪಾದನೆ ತಗ್ಗಿಸುವ ಕುರಿತಾಗಿ 14 ಸದಸ್ಯರನ್ನು ಒಳಗೊಂಡಿರುವ ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಸಂಘಟನೆ(ಒಪೆಕ್) ಮುಂದಾಗಿತ್ತು. ಮಾರ್ಚ್ ತಿಂಗಳಿಗೆ ಒಪ್ಪಂದ ಕೊನೆಯಾಗಲಿರುವ ಹಿನ್ನೆಲೆಯಲ್ಲಿ ಮತ್ತೆ ಮುಂದುವರಿಸುವಂತೆ ಸೌದಿ ಅರೆಬೀಯಾ ಮಾತುಕತೆಗೆ ಮುಂದಾಗಿತ್ತು. ಆದರೆ ಮತ್ತೆ ಒಪ್ಪಂದ ನಡೆಸಲು ನಾವು ಸಿದ್ಧರಿಲ್ಲ ಎಂದು ರಷ್ಯಾ ಹೇಳಿದ ಬೆನ್ನಲ್ಲೇ ಈಗ ತೈಲ ಉತ್ಪಾದನೆ ನಡೆಸುವ ರಾಷ್ಟ್ರಗಳ ಮಧ್ಯೆ ದರ ಸಮರ ಆರಂಭಗೊಂಡಿದೆ.

    ಒಪೆಕ್ ರಾಷ್ಟ್ರಗಳು ಈಗ ಪ್ರತಿದಿನ ಉತ್ಪಾದನೆಯಾಗುತ್ತಿರುವ ತೈಲ ಪ್ರಮಾಣವನ್ನು ಇಳಿಸಲು ಮಾತುಕತೆ ನಡೆಸಿತ್ತು. ಏಪ್ರಿಲ್ ನಿಂದ ಪ್ರತಿದಿನ ಶೇ.1.5 ದಶಲಕ್ಷ ಬ್ಯಾರೆಲ್ (ಶೇ.4ರಷ್ಟು) ಇಳಿಸಿ ಮುಂದಿನ ಡಿಸೆಂಬರ್ ವರೆಗೆ ಈ ಪ್ರಮಾಣದಲ್ಲೇ ತೈಲ ಉತ್ಪಾದನೆ ನಡೆಸಲು ಪ್ರಸ್ತಾಪವನ್ನು ಮುಂದಿಟ್ಟಿತ್ತು. ಆದರೆ ಈ ಪ್ರಸ್ತಾಪವನ್ನು ರಷ್ಯಾ ತಿರಸ್ಕರಿಸಿದ್ದರಿಂದ ಗಲ್ಫ್ ರಾಷ್ಟ್ರಗಳು ಉತ್ಪಾದನೆಯನ್ನು ಹೆಚ್ಚಿಸಿ ದರವನ್ನು ಇಳಿಕೆ ಮಾಡಿದೆ.

    ಸೋಮವಾರ ಕಚ್ಚಾ ತೈಲದ ಬೆಲೆಯನ್ನು ಸೌದಿ ಅರೇಬಿಯಾ ಇಳಿಕೆ ಮಾಡಿದೆ. ವಿಶ್ವದ ಅತಿ ದೊಡ್ಡ ತೈಲ ಉತ್ಪಾದಕಾ ರಾಷ್ಟ್ರವಾಗಿರುವ ಸೌದಿ ಅರೇಬಿಯಾ ಏಪ್ರಿಲ್ ನಿಂದ ಈಗ ಇರುವ ಉತ್ಪಾದನೆಗಿಂತ ಹೆಚ್ಚುವರಿಯಾಗಿ ಪ್ರತಿದಿನ 10 ದಶಲಕ್ಷ ಬ್ಯಾರೆಲ್ ಕಚ್ಚಾ ತೈಲ ಉತ್ಪಾದಿಸುವುದಾಗಿ ಹೇಳಿಕೊಂಡಿದೆ. ಈ ನಿರ್ಧಾರ ಪ್ರಕಟವಾದ ಬೆನ್ನಲ್ಲೇ ತೈಲ ಬೆಲೆ ಶೇ.31 ರಷ್ಟು ಇಳಿಕೆಯಾಗಿದೆ. ಪರಿಣಾಮ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 35.75 ಡಾಲರ್(2,647 ರೂ.) ಬೆಲೆಯಲ್ಲಿ ಮಾರಾಟವಾಗುತ್ತಿದ್ದ 1 ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲ ಈಗ 31.02 ಡಾಲರಿಗೆ(2,295 ರೂ.) ತಲುಪಿದೆ. ಜುಲೈ 2008ರಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 148 ಡಾಲರ್(10,960 ರೂ.) ದರಕ್ಕೆ ಏರಿಕೆ ಆಗಿತ್ತು.

    ಚೀನಾದಲ್ಲಿ ಈಗಾಗಲೇ ಕೆಲ ದಿನಗಳಿಂದ ಉತ್ಪಾದನೆ ಸ್ಥಗಿತಗೊಂಡಿದೆ. ಇದರ ಜೊತೆ ದಕ್ಷಿಣ ಕೊರಿಯಾ, ಇಟಲಿಯಲ್ಲಿ ಕೊರೊನಾ ಭಾರೀ ಪ್ರಮಾಣದಲ್ಲಿ ಹಬ್ಬುತ್ತಿದೆ. ಯುರೋಪ್, ಏಷ್ಯಾ ರಾಷ್ಟ್ರಗಳಿಗೆ ಭೀತಿ ಎದುರಾದ ಹಿನ್ನೆಲೆಯಲ್ಲಿ ಈ ಬಾರಿ ತೈಲದ ಬೇಡಿಕೆ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಯಿದೆ.

    2016ರಲ್ಲಿ ಅಮೆರಿಕದ ಶೇಲ್ ತೈಲ ಉತ್ಪಾದನೆ ತಗ್ಗಿಸಲು ಸೌದಿ ಅರೇಬಿಯಾ, ರಷ್ಯಾ ಮತ್ತು ಮಧ್ಯಪ್ರಾಚ್ಯದ ಇತರ ಉತ್ಪಾದಕ ದೇಶಗಳು ಏಷ್ಯಾದ ಮಾರುಕಟ್ಟೆಗೆ ಕಡಿಮೆ ಬೆಲೆಯಲ್ಲಿ ತೈಲವನ್ನು ಪೊರೈಕೆ ಮಾಡಿದ್ದವು. ಈಗ ಈ ಒಪ್ಪಂದದಿಂದ ಹಿಂದೆ ಸರಿದ ರಷ್ಯಾಕ್ಕೆ ಪಾಠ ಕಲಿಸಲು ಸೌದಿ ಭಾರೀ ಪ್ರಮಾಣದಲ್ಲಿ ಉತ್ಪಾದನೆ ಮಾಡಲು ಮುಂದಾಗಿದೆ. ಬೆಲೆ ಕಡಿಮೆ ಮಾಡಿದರೆ ಖರೀದಿಸಲು ಬೇಡಿಕೆ ಹೆಚ್ಚಾಗುವುದರಿಂದ ಯುರೋಪ್ ಮತ್ತು ಏಷ್ಯಾದಲ್ಲಿ ರಷ್ಯಾ ಜೊತೆಗೆ ಪೈಪೋಟಿ ನಡೆಸಿ ಮಾರುಕಟ್ಟೆಯನ್ನು ತನ್ನತ್ತ ಸೆಳೆಯಲು ಸೌದಿ ಮುಂದಾಗಿದೆ.

    ಕೊರೊನಾ ವೈರಸ್ ದಾಳಿಯಿಂದ ಇಡೀ ವಿಶ್ವದಲ್ಲಿ ಈಗ ಉತ್ಪಾದನೆ ಕಡಿಮೆಯುತ್ತಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರ ನಿರಂತರವಾಗಿ ಇಳಿಕೆಯಾಗುತ್ತಿದೆ. ವ್ಯಾಪಾರ, ವಾಣಿಜ್ಯ ಚಟುವಟಿಕೆಗಳು ಮಂದಗತಿಯಲ್ಲಿರುವುದರಿಂದ ತೈಲದ ಬೇಡಿಕೆ ಇಳಿದಿದ್ದು, ಬೆನ್ನಿಗೇ ದರವೂ ಇಳಿಕೆಯಾಗುತ್ತಿದೆ. ಎಷ್ಟು ಇಳಿಕೆಯಾಗಿದೆ ಎಂದರೆ 2018ರ ಆಗಸ್ಟ್ ನಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 72 ಡಾಲರ್ ಇತ್ತು. ಚೀನಾ ಅಮೆರಿಕ ವಾಣಿಜ್ಯ ಸಮರ ಮತ್ತಷ್ಟು ಹೆಚ್ಚಾಗಿದ್ದರಿಂದ ಕಳೆದ ವರ್ಷ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 58 ಡಾಲರ್ ತಲುಪಿತ್ತು.

    ಭಾರತಕ್ಕೆ ಲಾಭ ಹೇಗೆ?
    ಚೀನಾ, ಅಮೆರಿಕದ ನಂತರ ವಿಶ್ವದಲ್ಲೇ ಅತಿ ಹೆಚ್ಚು ತೈಲವನ್ನು ಆಮದು ಮಾಡುತ್ತಿರುವ ದೇಶ ಭಾರತವಾಗಿದ್ದು, ದೇಶದ ಆರ್ಥಿಕತೆ ಮೇಲೆ ತೈಲ ದರ ಭಾರೀ ಪ್ರಭಾವ ಬೀರುತ್ತದೆ. ಭಾರತವು ತನ್ನ ಬೇಡಿಕೆಯ ಶೇ.80ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಹೀಗಾಗಿ ತೈಲ ದರದಲ್ಲಿ ಇಳಿಕೆಯಾದರೆ ಆಮದು ಹೊರೆಯೂ ಕಡಿಮೆಯಾಗಲಿದೆ. ರಫ್ತು ವಹಿವಾಟಿನ ನಡುವಣ ಅಂತರವಾದ ಚಾಲ್ತಿ ಖಾತೆ ಕೊರತೆಯೂ ಇಳಿಕೆಯಾಗಲಿದೆ.

    2014ರಲ್ಲಿ ಮೊದಲ ಬಾರಿಗೆ ಪ್ರಧಾನಿ ಮೋದಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 108 ಡಾಲರ್(ಅಂದಾಜು 7,750 ರೂ.) ಇತ್ತು. ಮೋದಿ ಸರ್ಕಾರ ಮೂರನೇ ವರ್ಷದ ಅವಧಿಯಲ್ಲಿ 48 ಡಾಲರ್(3,400 ರೂ.) ಬೆಲೆಗೆ ಇಳಿಕೆಯಾಗಿತ್ತು. ಈಗ ಎರಡನೇ ಅವಧಿಯ ಮೊದಲ ವರ್ಷದಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 31 ಡಾಲರ್ ತಲುಪಿದೆ. ಈ ದರ ಹಲವು ತಿಂಗಳ ಕಾಲ ಸ್ಥಿರವಾಗಬಹುದು ಅಥವಾ ಮತ್ತಷ್ಟು ದರ ಕಡಿಮೆಯಾಗಬಹುದು ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.

    ಪ್ರಸ್ತುತ ಒಂದು ಲೀಟರ್ ಪೆಟ್ರೋಲ್ ಮೇಲೆ ಕೇಂದ್ರ ಸರ್ಕಾರ 17.98 ರೂ. ಅಬಕಾರಿ ಸುಂಕ ಹಾಕಿದರೆ ಒಂದು ಲೀಟರ್ ಡೀಸೆಲ್ ಮೇಲೆ 13.83 ರೂ. ಇದೆ. ಈ ಹಿಂದೆ ದರ ಇಳಿಕೆಯಾದಾಗ ಸರ್ಕಾರ ಅಬಕಾರಿ ಸುಂಕ ಹೆಚ್ಚಿಸಿತ್ತು. ಈಗ ಭಾರೀ ಇಳಿಕೆಯಾದ ಹಿನ್ನೆಲೆಯಲ್ಲಿ ದರ ಮತ್ತೆ ಅಬಕಾರಿ ಸುಂಕ ಏರಿಕೆ ಮಾಡುತ್ತಾ ಎನ್ನುವ ಪ್ರಶ್ನೆ ಎದ್ದಿದೆ.

    ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕದಿಂದ 2018-19ರ ಹಣಕಾಸು ವರ್ಷದಲ್ಲಿ ಸರ್ಕಾರ 2.579 ಕೋಟಿ ರೂ. ಆದಾಯ ಸಂಗ್ರಹಿಸಿತ್ತು. 2013-14ರ ಅವಧಿಯಲ್ಲಿ 88,600 ಕೋಟಿ ರೂ. ಸಂಗ್ರಹಿಸಿದ್ದರೆ 2017-18ರ ಅವಧಿಯಲ್ಲಿ 2,016 ಕೋಟಿ ಆದಾಯ ಸಂಗ್ರಹಿಸಿತ್ತು. ಅಬಕಾರಿ ಸುಂಕವನ್ನು ಹೆಚ್ಚಿಸುವ ಮೂಲಕ ಸಂಗ್ರಹವನ್ನು ಹಣವನ್ನು ಸಾಮಾಜಿಕ ಅಭಿವೃದ್ಧಿ ಯೋಜನೆಗಳಿಗೆ ಬಳಸಲಾಗುವುದು ಎಂದು ಕೇಂದ್ರ ಸರ್ಕಾರ ಸಮರ್ಥನೆ ನೀಡಿತ್ತು.

  • ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಇಳಿಕೆ – ಮತ್ತಷ್ಟು ಅಗ್ಗವಾಗುವ ಸಾಧ್ಯತೆ

    ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಇಳಿಕೆ – ಮತ್ತಷ್ಟು ಅಗ್ಗವಾಗುವ ಸಾಧ್ಯತೆ

    ನವದೆಹಲಿ: ಕಳೆದ 15 ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆಯಾಗುತ್ತಿದ್ದು, ಪ್ರತಿ ಲೀಟರ್‌ಗೆ ಸುಮಾರು 2 ರೂ. ಕಡಿತಗೊಂಡಿದೆ.

    ಜನವರಿ 12ರಿಂದ ಕಚ್ಚಾ ತೈಲದ ಬೆಲೆ ಪದೇ ಪದೇ ಇಳಿಕೆಯಾಗುತ್ತಿರುವ ಪರಿಣಾಮ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗುತ್ತಿದೆಯೇ ಹೊರತು ಏರಿಕೆಯಾಗಿಲ್ಲ. ಹೀಗಾಗಿ ಇಂದು ಕೂಡ ಪೆಟ್ರೋಲ್ ಬೆಲೆ 21 ಪೈಸೆ ಹಾಗೂ ಡೀಸೆಲ್ ಬೆಲೆ 24 ಪೈಸೆಯಷ್ಟು ಇಳಿಕೆಯಾಗಿದೆ.

    ಕಚ್ಚಾ ತೈಲದ ಬೆಲೆ ಕುಸಿತದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆಯಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಒಂದು ತಿಂಗಳಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‍ಗೆ $55 ಕ್ಕೆ ಇಳಿದಿದೆ. ಇದರ ನೇರ ಪರಿಣಾಮ ಈಗ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕಂಡುಬರುತ್ತಿದೆ.

    ಪ್ರತಿ ಲೀಟರ್‌ಗೆ ಎಷ್ಟು ದರ?
    ಬೆಂಗಳೂರಿನಲ್ಲಿ ಪೆಟ್ರೋಲ್ ದರ 75.14 ರೂ. ಹಾಗೂ ಡೀಸೆಲ್ ದರ 67.90 ರೂ. ಆಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ 72.68 ರೂ. ಮತ್ತು ಡೀಸೆಲ್ ದರ 65.68 ರೂ. ಆಗಿದೆ. ಇನ್ನು ಮುಂಬೈನಲ್ಲಿ ಪೆಟ್ರೋಲ್ ದರ 78.34 ರೂ. ಇದ್ದರೆ, ಡೀಸೆಲ್ 68.84 ರೂ. ಆಗಿದೆ. ಚೆನ್ನೈನಲ್ಲಿ ಪೆಟ್ರೋಲ್ 75.51 ರೂ. ಆದರೆ, ಡೀಸೆಲ್ ಪ್ರತಿ ಲೀಟರ್‌ಗೆ 69.37 ರೂ. ಇದೆ.

    ದರ ಇಳಿಕೆಗೆ ಕಾರಣವೇನು?
    ಕಚ್ಚಾ ತೈಲವನ್ನು ಅತಿ ಹೆಚ್ಚು ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಚೀನಾ ಮೊದಲನೇಯ ಸ್ಥಾನದಲ್ಲಿದೆ. ಆದ್ರೆ ಇತ್ತೀಚೆಗೆ ಕೊರೊನಾ ವೈರಸ್ ನಿಂದಾಗಿ ಹಲವು ಕೈಗಾರಿಕೆಗಳು ಮುಚ್ಚಿವೆ. ಹಲವು ಕಡೆ ಸಾರಿಗೆ ಸಂಪರ್ಕ ಬಂದ್ ಮಾಡಲಾಗಿದ್ದು, ಹುಬೆ ಪ್ರಾಂತ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡದಂತೆ ಸರ್ಕಾರ ನಿಷೇಧ ಹೇರಿದೆ. ಈ ಎಲ್ಲ ಕಾರಣಗಳಿಂದಾಗಿ ಕಚ್ಚಾ ತೈಲದ ಆಮದನ್ನು ಚೀನಾ ಕಡಿಮೆ ಮಾಡಿದೆ. ಬೇಡಿಕೆ ಇಳಿಕೆಯಾದ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ.