Tag: CRPF

  • ಪುಲ್ವಾಮ ದಾಳಿಯ ಫೇಕ್ ಫೋಟೋಗಳನ್ನ ನಂಬಬೇಡಿ -ಸಿಆರ್‌ಪಿಎಫ್ ಮನವಿ

    ಪುಲ್ವಾಮ ದಾಳಿಯ ಫೇಕ್ ಫೋಟೋಗಳನ್ನ ನಂಬಬೇಡಿ -ಸಿಆರ್‌ಪಿಎಫ್ ಮನವಿ

    ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪುಲ್ವಾಮಾದ ಉಗ್ರರ ದಾಳಿ ಬಗೆಗಿನ ಕೆಲ ಫೇಕ್ ಫೋಟೋಗಳು ಹಾರಿದಾಡುತ್ತಿದ್ದು, ಇಂತಹ ಫೋಟೋಗಳನ್ನು ನಂಬಬೇಡಿ ಎಂದು ಸಿಆರ್‌ಪಿಎಫ್ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

    ಟ್ವಿಟ್ಟರ್ ನಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಮಾಹಿತಿ ನೀಡಿರುವ ಸೇನೆ, ಸಾಮಾಜಿಕ ಜಾಲತಾಣದಲ್ಲಿ ಹುತಾತ್ಮರದ ಯೋಧರ ದೇಹದ ಭಾಗಗಳು ತುಂಡಾಗಿ ಬಿದ್ದಿರುವ ಕೆಲ ನಕಲಿ ಫೋಟೋಗಳು ಹಾರಿದಾಡುತ್ತಿರುವ ಕುರಿತು ನಮ್ಮ ಗಮನಕ್ಕೆ ಬಂದಿದೆ. ನಕಲಿ ಫೋಟೋಗ್ರಾಫ್‍ಗಳನ್ನು ಶೇರ್ ಮಾಡುವುದು, ಲೈಕ್ ಮಾಡುವುದನ್ನು ಮಾಡಬೇಡಿ. ಇಂತಹವುಗಳ ಬಗ್ಗೆ ಮಾಹಿತಿ ಲಭಿಸಿದರೆ ನಮ್ಮ ವೆಬ್ ತಾಣವಾದ webpro@crpf.gov.in ಗೆ ಮಾಹಿತಿ ನೀಡಿ ಎಂದು ತಿಳಿಸಲಾಗಿದೆ.

    ದಾಳಿಯ ಬಗ್ಗೆ ಈ ಹಿಂದೆಯೂ ಸಿರಿಯಾದಲ್ಲಿ ನಡೆದಿದ್ದ ಬಾಂಬ್ ಬ್ಲಾಸ್ಟ್ ವಿಡಿಯೋವನ್ನು ಪುಲ್ವಾಮಾ ಘಟನೆಯದ್ದೇ ಎಂದು ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಆಪ್ ಲೋಡ್ ಮಾಡಿದ್ದರು. 9 ಸೆಕೆಂಡಿನ ಸಿಸಿಟಿವಿ ವಿಡಿಯೋದಲ್ಲಿ ಬಾಂಬ್ ಸ್ಫೋಟದ ದೃಶ್ಯ ಸೆರೆಯಾಗಿತ್ತು. ಆದರೆ ಆ ವಿಡಿಯೋ ಸಿರಿಯಾ ಮತ್ತು ಟರ್ಕಿ ಗಡಿ ಪ್ರದೇಶದಲ್ಲಿರುವ ಅಲ್ ರಾಯ್ ಎಂಬ ಪಟ್ಟಣದಲ್ಲಿ ಫೆ.12 ರಂದು ನಡೆದ ಸ್ಫೋಟದ ವಿಡಿಯೋ ಆಗಿತ್ತು. ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದರು.  ಇದನ್ನು ಓದಿ: ಗಮನಿಸಿ, ವೈರಲ್ ಆಗಿರುವ ಸ್ಫೋಟದ ವಿಡಿಯೋ ಪುಲ್ವಾಮ ದಾಳಿಯದ್ದು ಅಲ್ಲ! 

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಛಿದ್ರ ಛಿದ್ರವಾದ ಆ ಬಸ್ಸಿನಲ್ಲಿದ್ದ 40 ವೀರ ಯೋಧರ ರೋಚಕ ಕಥೆ ನಿಮಗೆ ತಿಳಿದಿರಲೇಬೇಕು

    ಛಿದ್ರ ಛಿದ್ರವಾದ ಆ ಬಸ್ಸಿನಲ್ಲಿದ್ದ 40 ವೀರ ಯೋಧರ ರೋಚಕ ಕಥೆ ನಿಮಗೆ ತಿಳಿದಿರಲೇಬೇಕು

    ಬೆಂಗಳೂರು: ಪುಲ್ವಾಮಾದ ಆವಂತಿಪುರದಲ್ಲಿ ನಡೆದ ಭಯಾನಕ ಉಗ್ರ ದಾಳಿಯಲ್ಲಿ ಭಾರತದ 16 ರಾಜ್ಯಗಳ ಒಟ್ಟು 40 ಯೋಧರು ವೀರಮರಣವನ್ನಪ್ಪಿದ್ದಾರೆ. ಅವರೆಲ್ಲರ ಬಗ್ಗೆ ಒಂದಷ್ಟು ಮಾಹಿತಿ ನೀವು ತಿಳಿದುಕೊಳ್ಳಲೇಬೇಕು. ಮೊನ್ನೆ ವೀರಮರಣವನ್ನಪ್ಪಿದವರಲ್ಲಿ ಹಲವರು ಆಗಷ್ಟೇ ರಜೆ ಮುಗಿಸಿ ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಬಂದವರು. ಮೊನ್ನೆಯಷ್ಟೇ ನಮ್ಮ ಕಣ್ಣಮುಂದಿನಿಂದ ಹೊರಟು ನಿಂತವರು ಇಂದು ನಮ್ಮ ಜೊತೆ ಇಲ್ಲ ಎನ್ನುವಂತಹ ಪರಿಸ್ಥಿತಿ ಈ ಯೋಧರ ಕುಟುಂಬದ್ದು. ಬಸ್ ಹತ್ತಿದಾಗ ಫೋನ್ ಮಾಡಿದವರಿದ್ದಾರೆ, ಬಸ್ ಇಳಿದ ಮೇಲೆ ಫೋನ್ ಮಾಡ್ತೀನಿ ಎಂದು ಫೋನಿಟ್ಟ ಯೋಧರೂ ಇದ್ದಾರೆ. ಒಂದಂತೂ ನಿಜ ಅವರು ಯಾರಿಗೂ ಅದು ತಮ್ಮ ಜೀವನದ ಕೊನೆಯ ಯಾತ್ರೆಯಾಗುತ್ತದೆ ಎಂಬುದರ ಅರಿವೇ ಇರಲಿಲ್ಲ. ವೀರ ಮರಣವನ್ನಪ್ಪಿದ ನಮ್ಮ ನೆಲದ ಆ 40 ಯೋಧರ ಕಥೆಯಿದು.

    ಕರ್ನಾಟಕ

    ಗುರು ಎಚ್, ವಯಸ್ಸು-33, ಪೇದೆ, ಊರು: ಗುಡಿಗೆರೆ ಕಾಲೋನಿ, ಮಂಡ್ಯ


    ಗುರು ಅವರು ಸಿ.ಆರ್.ಪಿ.ಎಫ್.ನ 82ನೇ ಬೆಟಾಲಿಯನ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದು, 2011ರಲ್ಲಿ ಸಿ.ಆರ್.ಪಿ.ಎಫ್.ಗೆ ಸೇರ್ಪಡೆಯಾಗಿದ್ದರು. ಜಾರ್ಖಂಡ್ ನಲ್ಲಿ 94ನೇ ಬೆಟಾಲಿಯನ್ ನಲ್ಲಿದ್ದ ಗುರು ಬಳಿಕ ಶ್ರೀನಗರದಲ್ಲಿ ಸೇವೆ ಸಲ್ಲಿಸಲು ನಿಯೋಜನೆಗೊಂಡಿದ್ದರು. ಗುಡಿಗೆರೆ ಕಾಲೋನಿಯ ಹೊನ್ನಯ್ಯ ಹಾಗೂ ಚಿಕ್ಕೋಳಮ್ಮ ದಂಪತಿಯ ಮೂವರು ಮಕ್ಕಳಲ್ಲಿ ಹಿರಿಯ ಪುತ್ರ ಗುರು. ಇವರಿಗೆ ಇಬ್ಬರು ತಮ್ಮಂದಿರಿದ್ದು ಮಧು ಕೆಇಬಿಯಲ್ಲಿ ಕೆಲಸ ಮಾಡುತ್ತಿದ್ದು, ಆನಂದ್ ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಗುರು ಅವರ ಅಪ್ಪ ಅಮ್ಮ ಕೆಎಂ ದೊಡ್ಡಿಯಲ್ಲಿ ಇಸ್ತ್ರಿ ಅಂಗಡಿ ಇಟ್ಟುಕೊಂಡು ದುಡಿಯುತ್ತಿದ್ದರು.  www.publictv.in

    ಒಂದು ವರ್ಷ ಹಿಂದೆ ಗೃಹ ಪ್ರವೇಶ ಮಾಡಿಕೊಂಡಿದ್ದ ಗುರು ಅವರಿಗೆ 10 ತಿಂಗಳ ಹಿಂದೆ ಮದುವೆಯಾಗಿತ್ತು. ಸ್ವಂತ ಮಾವನ ಮಗಳಾದ, ಹಲಗೂರು ಬಳಿಯ ಸಾಸಲಾಪುರ ಗ್ರಾಮದವರಾದ ಕಲಾವತಿಯನ್ನು ವಿವಾಹವಾಗಿದ್ದರು. 15 ದಿನದ ಹಿಂದೆ ರಜೆಗೆಂದು ಬಂದಿದ್ದ ಗುರು ಅವರು ಫೆಬ್ರವರಿ 10ರಂದು ಗುಡಿಗೆರೆ ಕಾಲೋನಿಯಿಂದ ರಜೆ ಮುಗಿಸಿಕೊಂಡು ಹೊರಟಿದ್ದರು. ಹೀಗೆ ಹೊರಟಿದ್ದ ಗುರು ಗುರುವಾರವಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ, ಕರ್ತವ್ಯಕ್ಕೆ ವಾಪಸ್ ಬರುತ್ತಿದ್ದಂತೆಯೇ ಮಾರಣಹೋಮದಲ್ಲಿ ಸಾವನ್ನಪ್ಪಿದ್ದು ವಿಧಿ ವಿಪರ್ಯಾಸ. ಘಟನೆ ನಡೆದ ದಿನ ಬೆಳಗ್ಗೆ 11 ಗಂಟೆ ಸುಮಾರಿಗೆ ಪತ್ನಿಗೆ ಕಾಲ್ ಮಾಡಿದ್ದರು. ಆದರೆ ಮನೆ ಕೆಲಸದಲ್ಲಿ ನಿರತರಾಗಿದ್ದ ಪತ್ನಿ ಕಲಾವತಿ ಆಮೇಲೆ ಮಾತನಾಡಿದರಾಯಿತು ಎಂದು ಫೋನ್ ಕರೆ ಸ್ವೀಕರಿಸಿರಲಿಲ್ಲ.

    ಉತ್ತರ ಪ್ರದೇಶ

    ಶ್ಯಾಂ ಬಾಬು, ವಯಸ್ಸು – 32, ಪೇದೆ, ಊರು – ಕಾನ್ಪುರ


    ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಶ್ಯಾಂ ಬಾಬು ತಂದೆ ರಾಮ್ ಪ್ರಸಾದ್ (60) ಅವರಿಗೆ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪುತ್ರ ಹುತಾತ್ಮನಾದ ಸುದ್ದಿ ತಿಳಿಯುತ್ತದೆ. 29 ವರ್ಷದ ಪತ್ನಿ ರೂಬಿ ದೇವಿ, 5 ವರ್ಷದ ಪುತ್ರ ಆಯುಷ್ ಹಾಗೂ 6 ತಿಂಗಳ ಹಸುಗೂಸು ಆಯುಷಿಯನ್ನು ಅಗಲಿದ್ದಾರೆ.

    6 ವರ್ಷದ ಹಿಂದೆಯಷ್ಟೇ ಶ್ಯಾಂ ಬಾಬುವಿಗೆ ಮದುವೆಯಾಗಿತ್ತು. 2005ರಲ್ಲಿ ಸಿ.ಆರ್.ಪಿ.ಎಫ್.ನಲ್ಲಿ ಸೇವೆಗೆ ನಿಯೋಜನೆಗೊಂಡಿದ್ದರು. ಸದ್ಯ ಅವರ ಮನೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು 45 ದಿನಗಳ ರಜೆಗಾಗಿ ಡಿಸೆಂಬರ್ ತಿಂಗಳಲ್ಲಿ ಊರಿಗೆ ಬಂದು ಹೋಗಿದ್ದರು. ಜನವರಿ 29ಕ್ಕೆ ಕೆಲಸಕ್ಕೆ ಮತ್ತೆ ಹಾಜರಾಗಿದ್ದ ಶ್ಯಾಂ ಬಾಬು ಫೆಬ್ರವರಿ 1ರಂದು ಮತ್ತೆ ವಾಪಸ್ ಬಂದಿದ್ದರು. ಫೆ.10ಕ್ಕೆ ಮತ್ತೆ ಹೊರಟು ನಿಂತಾಗ ಅದೇ ನಮ್ಮ ಕೊನೆಯ ಭೇಟಿ ಆಗಿರಬಹುದು ಎಂದು ಕನಸು ಮನಸಿನಲ್ಲೂ ಊಹಿಸಿರಲಿಲ್ಲ ಎಂದು ಸಂಬಂಧಿಕರು ಹೇಳುತ್ತಿದ್ದಾರೆ. www.publictv.in

    ಅಜಿತ್ ಕುಮಾರ್ ಆಜಾದ್, ವಯಸ್ಸು 32, ಪೇದೆ, ಊರು – ಉನ್ನಾವ್


    ಆದಾಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಪ್ಯಾರೇಲಾಲ್ ಎಂಬವರ ಪುತ್ರ. ಪುತ್ರನನ್ನು ಕಳೆದುಕೊಂಡ ದುಃಖವಿದೆ. ಆದರೆ ನನ್ನ ಮಗ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ. ಈ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಹೇಳುತ್ತಿದ್ದಾರೆ ಪ್ಯಾರೇಲಾಲ್. 2007ರಲ್ಲಿ ಸಿ.ಆರ್.ಪಿ.ಎಫ್.ನಲ್ಲಿ ಸೇವೆಗೆ ಸೇರಿದ ದಿನದಿಂದಲೂ ಅಜಿತ್ ಕುಮಾರ್ ತಂದೆ ಬಳಿ, ಒಂದಲ್ಲಾ ಒಂದು ದಿನ ನೀವು ನಾನು ದೇಶಕ್ಕಾಗಿ ಪ್ರಾಣ ಬಿಟ್ಟೆ ಎಂಬ ಸುದ್ದಿಯನ್ನು ಕೇಳುತ್ತೀರಿ ಎಂದು ಹೇಳುತ್ತಿದ್ದರಂತೆ. ನಾನು ಮಗನ ಬಳಿ ಕೆಲಸ ಬಿಡು ಎಂದರೂ ಆತ ಕೇಳುತ್ತಿರಲಿಲ್ಲ. ದೇಶಸೇವೆ ಮಾಡುವುದೇ ನನ್ನ ಕೆಲಸ ಎನ್ನುತ್ತಿದ್ದ. ಇದೇ ಜನವರಿಯಲ್ಲಿ ಒಂದು ತಿಂಗಳ ರಜೆಯಲ್ಲಿ ಬಂದಿದ್ದ. ಫೆಬ್ರವರಿ 10ಕ್ಕೆ ವಾಪಸ್ ಶ್ರೀನಗರಕ್ಕೆ ತೆರಳಬೇಕಾದರೆ ನಾನು ಜೂನ್‍ನಲ್ಲಿ ವಾಪಸ್ ಬರುತ್ತೇನೆ ಎಂದು ಪ್ಯಾರೇಲಾಲ್ ಅವರಿಗೆ ಹೇಳಿದ್ದರಂತೆ. ಪಬ್ಲಿಕ್ ಟಿವಿ

    ಐವರು ಸಹೋದರರಲ್ಲಿ ಅಜಿತ್ ದೊಡ್ಡವನು. ಪತ್ನಿ ಮೀನಾ (28), 9 ವರ್ಷದ ಇಶಾ, 7 ವರ್ಷದ ಶ್ರೇಯಾ ಪುತ್ರಿಯರು. ನನ್ನ ಅಪ್ಪ ತುಂಬಾ ಒಳ್ಳೆಯ ವ್ಯಕ್ತಿ. ನಮಗೆ ಒಳ್ಳೆಯದನ್ನೇ ಹೇಳಿಕೊಟ್ಟಿದ್ದಾರೆ. ಎಂದಿಗೂ ನಮ್ಮನ್ನು ಜಗಳವಾಡಲು ಬಿಟ್ಟಿಲ್ಲ. ಹಿರಿಯರನ್ನು ಗೌರವಿಸುವುದನ್ನು ಹೇಳಿಕೊಟ್ಟಿದ್ದಾರೆ ಎನ್ನುತ್ತಾಳೆ ಇಶಾ. ನಾನು ಡಾಕ್ಟರ್ ಆಗಬೇಕು. ತಂಗಿ ಸೇನೆಯನ್ನು ಸೇರಬೇಕು ಎನ್ನುವುದು ನನ್ನ ಅಪ್ಪನ ಕನಸಾಗಿತ್ತು. ನಾವಿಬ್ಬರೂ ಆರ್ಮಿ ಸ್ಕೂಲ್ ಸೇರುತ್ತೇವೆ ಎಂದು ಮಾತು ಮುಗಿಸಿದಳು ಇಶಾ.

    ಅಮಿತ್ ಕುಮಾರ್, ವಯಸ್ಸು- 22, ಪೇದೆ, ಊರು – ಶಾಮ್ಲಿ.


    ಶಾಮ್ಲಿಯ ರೇಲ್‍ಪಾರ್ ಪ್ರದೇಶದ ನಿವಾಸಿ. ಗುರುವಾರ ಸಂಜೆ ಪುಲ್ವಾಮಾದಲ್ಲಿ ಉಗ್ರರ ಆತ್ಮಾಹುತಿ ದಾಳಿ ನಡೆದ ಸುದ್ದಿಯನ್ನು ನ್ಯೂಸ್ ಚಾನೆಲ್ ಗಳಲ್ಲಿ ವೀಕ್ಷಿಸುತ್ತಿದ್ದ ಅಮಿತ್ ಕುಮಾರ್ ಸಹೋದರ ಪ್ರಮೋದ್ ಸಿಂಗ್ ಅವರಿಗೆ ತನ್ನ ಸೋದರನೂ ಇದೇ ಬಸ್ ನಲ್ಲಿದ್ದ ಎಂಬ ವಿಷಯವೇ ತಿಳಿದಿರಲಿಲ್ಲ. ಆದರೆ ಶುಕ್ರವಾರ ಬೆಳಗ್ಗೆ ಜಮ್ಮು ಕಾಶ್ಮೀರದಿಂದ ಸಿ.ಆರ್.ಪಿ.ಎಫ್ ಅಧಿಕಾರಿಯೊಬ್ಬರು ಕರೆ ಮಾಡಿ ಅಮಿತ್ ಕುಮಾರ್ ಹುತಾತ್ಮನಾದ ವಿಷಯ ತಿಳಿಸಿದ್ದಾರೆ. ಬೆಳಗ್ಗೆ ವಿಚಾರ ತಿಳಿದಾಗ ನಮಗೆ ಶಾಕ್ ಆಯಿತು. ಅಮಿತ್ ನಮ್ಮ ಜೊತೆಗಿಲ್ಲ ಎನ್ನುವುದನ್ನು ನಂಬಲು ನಮಗೆ ಸಾಧ್ಯವಾಗುತ್ತಿಲ್ಲ. www.publictv.in

    2017ರಲ್ಲಿ ನಮ್ಮ ಸಹೋದರ ಅಮಿತ್ ಸಿ.ಆರ್.ಪಿ.ಎಫ್.ಗೆ ಸೇರ್ಪಡೆಯಾಗಿದ್ದ. ನಮ್ಮ ಕುಟುಂಬದಿಂದ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸಲು ಸೇರ್ಪಡೆಯಾಗಿದ್ದ ಏಕೈಕ ವ್ಯಕ್ತಿಯಾಗಿದ್ದ ಅಮಿತ್. ನಮ್ಮ ಕುಟುಂಬದ ಎಲ್ಲಾ ಯುವಕರಿಗೂ ಅಮಿತ್ ಸ್ಫೂರ್ತಿಯಾಗಿದ್ದ ಎನ್ನುತ್ತಾರೆ ಅಮಿತ್ ಅವರ ಮತ್ತೊಬ್ಬ ಸಹೋದರ ಅರ್ಜುನ್ ಸಿಂಗ್. 15 ದಿನದ ರಜೆಗೆಂದು ಊರಿಗೆ ಬಂದಿದ್ದ ಅಮಿತ್ ಫೆಬ್ರವರಿ 12ರಂದು ವಾಪಾಸಾಗಿದ್ದರು. ಗುರುವಾರ ನಾವು ಅಮಿತ್ ಜೊತೆ ಮಾತಾನಾಡಿದ್ದೆವು. ಕುಟುಂಬದ ಎಲ್ಲಾ ಸದಸ್ಯರ ಬಗ್ಗೆಯೂ ಅಮಿತ್ ವಿಚಾರಿಸಿದ್ದರಂತೆ.

    ಪ್ರದೀಪ್ ಕುಮಾರ್, ವಯಸ್ಸು – 38, ಪೇದೆ, ಊರು – ಶಾಮ್ಲಿ.


    2003ರಲ್ಲಿ ಸಿ.ಆರ್.ಪಿ.ಎಫ್.ಗೆ ಸೇರ್ಪಡೆಯಾಗಿದ್ದರು. ಶಾಮ್ಲಿಬ ಬಾನತ್ ನಿವಾಸಿ. ಪತ್ನಿ ಶರ್ಮಿಷ್ಠಾ ದೇವಿ, ಸಿದ್ದಾರ್ಥ್ ಮತ್ತು ವಿಜಯಾಂತ್ ಪುತ್ರರು. ಗುರುವಾರ ರಾತ್ರಿ ನಮಗೆ ಅಪ್ಪನ ಸಾವಿನ ಸುದ್ದಿ ತಿಳಿಯಿತು. ಇದಕ್ಕೂ ಮುನ್ನ ನಾವು ಜಮ್ಮ ಕಾಶ್ಮೀರಕ್ಕೆ ಫೋನ್ ಕಾಲ್ ಮಾಡಿ ವಿಷಯ ತಿಳಿಯಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಆ ಬಸ್‍ನಲ್ಲಿ ನಮ್ಮ ಅಪ್ಪ ಇದ್ದರಾ ಎಂಬುದನ್ನು ತಿಳಿಯಲು ನ್ಯೂಸ್ ಚಾನೆಲ್ ನೋಡುತ್ತಿದ್ದೆವು ಎನ್ನುತ್ತಾನೆ ಹಿರಿಯ ಪುತ್ರ ಸಿದ್ಧಾರ್ಥ್. ಪ್ರದೀಪ್ ಹಿರಿಯ ಸೋದರ ಅಮಿತ್ ಕುಮಾರ್ ಇದೇ ತಿಂಗಳಲ್ಲಿ ಸೇನೆಯಿಂದ ನಿವೃತ್ತರಾಗಿದ್ದಾರೆ.

    ಯುವಕರು ಸೇನೆ ಸೇರಬೇಕು ಎಂದು ನಮ್ಮಪ್ಪ ಪ್ರೇರೇಪಣೆ ನೀಡುತ್ತಿದ್ದರು. 15 ದಿನದ ರಜೆ ಮುಗಿಸಿ ಫೆಬ್ರವರಿ 12ರಂದು ಮತ್ತೆ ದೇಶಕ್ಕಾಗಿ ಸೇವೆ ಸಲ್ಲಿಸಲು ಹೊರಟಿದ್ದರು. ಗುರುವಾರ ಫೋನ್ ಮಾಡಿ ನಮ್ಮನ್ನು ವಿಚಾರಿಸಿಕೊಂಡಿದ್ದರು. ಆದರೆ ಆ ವೇಳೆ ಮಾತನಾಡಿದ್ದೇ ಕೊನೆಯಾಗುತ್ತದೆ ಎಂದು ನಾವಂದುಕೊಂಡಿರಲಿಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತು ಮಾತು ಮುಗಿಸಿದ ಸಿದ್ಧಾರ್ಥ್. www.publictv.in

    ಪ್ರದೀಪ್ ಸಿಂಗ್, ವಯಸ್ಸು – 35, ಪೇದೆ, ಊರು – ಕನೌಜ್.


    ಕನೌಜ್ ನ ಆಜಾನ್ ಗ್ರಾಮದ ನಿವಾಸಿ. ಬುಧವಾರ ಬೆಳಗ್ಗೆ ಫೋನ್ ಮಾಡಿ ಕುಟುಂಬಸ್ಥರ ಜೊತೆ ಮಾತನಾಡಿದ್ದ ಪ್ರದೀಪ್ ಆಗಷ್ಟೇ ಜಮ್ಮುವಿನಿಂದ ಶ್ರೀನಗರಕ್ಕೆ ಹೊರಡುವುದಾಗಿ ಹೇಳಿದ್ದರು. ಆದರೆ ಸಂಜೆ ವೇಳೆ ಪ್ರದೀಪ್ ಸಾವಿನ ಸುದ್ದಿ ತಿಳಿಯಿತು ಎನ್ನುತ್ತಾರೆ ಸಂಬಂಧಿ ನೀರಜ್ ಯಾದವ್. ಪತ್ನಿ ನೀರಜಾ ದೇವಿ, 11 ವರ್ಷದ ಪುತ್ರಿ ಸುಪ್ರಿಯಾ ಹಾಗೂ 3 ವರ್ಷದ ಮಗು ಸೋನಾ. ಸಿ.ಆರ್.ಪಿ.ಎಫ್.ಗೆ 2003ರಲ್ಲೇ ಸೇರ್ಪಡೆಯಾಗಿದ್ದರೂ ಬೇರೆ ಬೇರೆ ಕಾರಣಗಳಿಂದ ಪ್ರದೀಪ್ ಗೆ ಭಡ್ತಿ ಸಿಕ್ಕಿರಲಿಲ್ಲ. ಕನೌಜ್ ನಲ್ಲಿ ಮನೆ ಕಟ್ಟಲು ಬ್ಯಾಂಕ್ ಲೋನ್ ಮಾಡಿಕೊಂಡಿದ್ದರು. ಇದರಲ್ಲಿ ಸ್ವಲ್ಪ ಮೊತ್ತ ಮರುಪಾವತಿಯಾಗಿದೆ. ಇನ್ನುಳಿದ ಹಣವನ್ನು ಪತ್ನಿಯೇ ಕಟ್ಟಬೇಕು. ಆದರೆ ಪತ್ನಿ ನೀರಜಾಗೆ ಉದ್ಯೋಗವಿಲ್ಲ. ಅವರು ಹೇಗೆ ಲೋನ್ ಕಟ್ಟುತ್ತಾರೆ ಅನ್ನೋದೇ ಸದ್ಯ ಸಂಬಂಧಿಕರ ಆತಂಕ. ಒಂದು ತಿಂಗಳ ರಜೆಯಲ್ಲಿ ಬಂದಿದ್ದ ಪ್ರದೀಪ್ ಫೆಬ್ರವರಿ 10ರಲ್ಲಿ ರಜೆ ಮುಗಿಸಿ ಹೊರಟಿದ್ದರು.

    ವಿಜಯ್ ಕುಮಾರ್ ಮೌರ್ಯ, ವಯಸ್ಸು – 38, ಪೇದೆ, ಊರು – ದೇವರಿಯಾ.


    ಭತ್ನಿಯ ದೇವರಿಯಾ ನಿವಾಸಿ. 2008ರಲ್ಲಿ ಸಿ.ಆರ್.ಪಿ.ಎಫ್.ಗೆ ಸೇರ್ಪಡೆಯಾಗಿದ್ದರು. ಪತ್ನಿ ವಿಜಯಲಕ್ಷ್ಮಿ ಹಾಗೂ 2 ವರ್ಷದ ಮಗಳು ಆರಾಧ್ಯ.

    ಯಾವಾಗ ದಾಳಿಯ ವಿಚಾರ ತಿಳಿಯಿತೋ ತಕ್ಷಣ ಕುಟುಂಬದವರು ಫೋನ್ ಮಾಡಿ ಏನಾಯಿತು ಎಂದು ತಿಳಿಯಲು ಯತ್ನಿಸಿದ್ದಾರೆ. ಆದರೆ ಯಾರಿಗೆ ಫೋನ್ ಮಾಡಿದರೂ ಸರಿಯಾದ ಉತ್ತರ ಸಿಕ್ಕಿರಲಿಲ್ಲ. ಆದರೆ ಘಟನೆ ನಡೆದ ದಿನ ಸಂಜೆ ಸಿ.ಆರ್.ಪಿ.ಎಫ್. ಅಧಿಕಾರಿಯೊಬ್ಬರು ಫೋನ್ ಮಾಡಿ ವಿಜಯ್ ಕುಮಾರ್ ಸಾವನ್ನು ಖಚಿತಪಡಿಸಿದ್ದರು ಎನ್ನುತ್ತಾರೆ ವಿಜಯ್ ಅಳಿಯ ಬಾಲ್ಮೀಕಿ ಕುಶ್ವಾ. 10 ದಿನದ ರಜೆಗೆ ಬಂದಿದ್ದ ವಿಜಯ್ ಫೆಬ್ರವರಿ 9ರಂದು ಕರ್ತವ್ಯಕ್ಕೆ ಹೊರಟಿದ್ದರು. www.publictv.in

    ಪಂಕಜ್ ಕುಮಾರ್ ತ್ರಿಪಾಠಿ, ವಯಸ್ಸು -26, ಪೇದೆ, ಊರು – ಮಹಾರಾಜ್ ಗಂಜ್.


    ಗುರುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಪಂಕಜ್ ಕುಮಾರ್ ತ್ರಿಪಾಠಿ ಪತ್ನಿ ರೋಹಿಣಿಗೆ ಕರೆ ಮಾಡಿದ್ದರು. ಆದರೆ ಇದಾಗಿ ಕೆಲವೇ ಗಂಟೆಗಳಲ್ಲಿ ಭಯಾನಕ ಸುದ್ದಿ ಟಿವಿಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ನಮಗೆ ವಿಷಯ ತಿಳಿಯಿತು. ನಾವು ತಕ್ಷಣ ಪಂಕಜ್ ಅವರ ಹಿರಿಯ ಅಧಿಕಾರಿಗಳಿಗೆ ಫೋನ್ ಮಾಡಿ ಅವರಿದ್ದರಾ ಎಂದು ತಿಳಿಯಲು ಯತ್ನಿಸಿದೆವು. ಆದರೆ ತಕ್ಷಣಕ್ಕೆ ಅವರು ಯಾವುದನ್ನೂ ಖಚಿತಪಡಿಸಲಿಲ್ಲ. ಆದರೆ ಬಳಿಕ ಅವರೇ ರೋಹಿಣಿಯವರಿಗೆ ಫೋನ್ ಮಾಡಿ ವಿಷಯ ತಿಳಿಸಿದರು.

    ಪತ್ನಿ ರೋಹಿಣಿ, 3 ವರ್ಷದ ಮಗ ಪ್ರತೀಕ್. ತಂದೆ ಕೃಷಿಕ. ಮುಂದಿನ ನವೆಂಬರ್ ನಲ್ಲಿ ಆತ ರಜೆಯಲ್ಲಿ ಊರಿಗೆ ಬರಬೇಕಿತ್ತು. ಆದರೆ ಈಗ ಹೀಗಾಗಿದೆ.

    ರಮೇಶ್ ಯಾದವ್, ವಯಸ್ಸು – 26, ಪೇದೆ, ಊರು – ವಾರಾಣಸಿ


    ಒಂದು ವಾರದ ರಜೆಯಲ್ಲಿ ಊರಿಗೆ ಬಂದಿದ್ದ ರಮೇಶ್ ಯಾದವ್ ಮಂಗಳವಾರವಷ್ಟೇ ರಜೆ ಮುಗಿಸಿ ವಾಪಸ್ ಹೋಗಿದ್ದರು. ಇದಾಗಿ ಎರಡೇ ದಿನಕ್ಕೆ ಅವರ ಸಾವಾಗಿದೆ. ಪತ್ನಿ ರೇಣು, 2 ವರ್ಷದ ಮಗ ಆಯುಷ್. ಗುರುವಾರ ರಾತ್ರಿ 9 ಗಂಟೆಗೆ ಸಿ.ಆರ್.ಪಿ.ಎಫ್. ಅಧಿಕಾರಿಗಳು ಫೋನ್ ಮಾಡಿ ರಮೇಶ್ ಸಾವಿನ ವಿವರ ನೀಡಿದರು ಎಂದು ಹೇಳುತ್ತಾರೆ ಹಿರಿಯ ಸಹೋದರ ಕನ್ಹೈಯ್ಯಾ.

    ಮಹೇಶ್ ಕುಮಾರ್, ವಯಸ್ಸು – 26, ಪೇದೆ, ಊರು – ಪ್ರಯಾಗ್ ರಾಜ್


    ಒಂದು ವಾರದ ರಜೆಗೆ ಊರಿಗೆ ಬಂದಿದ್ದ ಮಹೇಶ್ ಕುಮಾರ್ ಅವರದ್ದೂ ಅದೇ ಕಥೆ. ಸೋಮವಾರ ಅವರು ಮನೆಯಿಂದ ಮತ್ತೆ ಕೆಲಸಕ್ಕೆ ಹೊರಟಿದ್ದರು. ಮಹೇಶ್ ತಂದೆ ಮುಂಬೈಯಲ್ಲಿ ಆಟೋ ಚಾಲನೆ ಮಾಡುತ್ತಿದ್ದಾರೆ. ಮಹೇಶ್ ಸೋದರ ಹಾಗೂ ಸೋದರಿ ಇನ್ನೂ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. www.publictv.in

    2 ದಿನಗಳ ಹಿಂದಷ್ಟೇ ಮಹೇಶ್ ಫೋನಲ್ಲಿ ಪತ್ನಿ ಸಂಜು ದೇವಿ ಜೊತೆ ಮಾತನಾಡಿದ್ದರು. ಸಿ.ಆರ್.ಪಿ.ಎಫ್. ಅಧಿಕಾರಿಗಳು ಮನೆಗೆ ಬಂದು ಹೇಳಿದಾಗ ನಮಗೆ ವಿಷಯ ಗೊತ್ತಾಯಿತು. 2011ರಲ್ಲಿ ಮದುವೆಯಾಗಿದ್ದ ಮಹೇಶ್-ಸಂಜು ದಂಪತಿಗೆ 6 ವರ್ಷದ ಸಮರ್, 5 ವರ್ಷದ ಸಮೀರ್ ಮಕ್ಕಳು.

    ಅವಧೇಶ್ ಕುಮಾರ್ ಯಾದವ್, 30, ಮುಖ್ಯ ಪೇದೆ, ಊರು – ಚಾಂಡೌಲಿ


    ಅವಧೇಶ್ ಕುಮಾರ್ ಅವರು ಫೆ.11ರಂದು ರಜೆ ಮುಗಿಸಿ ಮತ್ತೆ ಸೇವೆಗೆ ಹಾಜರಾಗಿದ್ದರು. ಗುರುವಾರ ಬೆಳಗ್ಗೆಯೂ ಪತ್ನಿ ಶಿಲ್ಪಿ ಜೊತೆ ಫೋನಲ್ಲಿ ಮಾತನಾಡಿದ್ದರು. ನಾನೀಗ ಬಸ್ ಹತ್ತಿದ್ದೇನೆ, ಆಮೇಲೆ ಕಾಲ್ ಮಾಡುತ್ತೇನೆ ಎಂದು ಫೋನಿಟ್ಟಿದ್ದರು. ಪತಿಯ ಕಾಲ್ ನಿರೀಕ್ಷೆಯಲ್ಲಿದ್ದ ಪತ್ನಿಗೆ ಬಂದಿದ್ದು ಅವರದೇ ಊರಿನ ಮತ್ತೊಬ್ಬ ಸಹೋದ್ಯೋಗಿ ಫೋನ್ ಕಾಲ್. ಅವರು ನಡೆದ ಘಟನೆ ಎಲ್ಲಾ ವಿವರಿಸಿ ಅವಧೇಶ್ ಹುತಾತ್ಮನಾದ ವಿಷಯ ತಿಳಿಸುತ್ತಾರೆ. ಪತ್ನಿ ಹಾಗೂ 2 ವರ್ಷದ ಪುತ್ರನನ್ನು ಅಗಲಿದ್ದಾರೆ.

    ರಾಮ್ ವಕೀಲ್, ವಯಸ್ಸು 37, ಮುಖ್ಯ ಪೇದೆ, ಊರು: ಮೇನ್‍ಪುರಿ


    ರಾಮ್ ವಕೀಲ್ ರಜೆ ಮುಗಿಸಿ ಫೆಬ್ರವರಿ 10ರಂದು ಕರ್ತವ್ಯಕ್ಕೆ ಹಾಜರಾಗಿದ್ದರು. ಪತ್ನಿ ಗೀತಾ ದೇವಿ(35) ಅವರೊಂದಿಗೆ ಕೆಲ ದಿನಗಳ ಹಿಂದೆ ಕೊನೆಯ ಬಾರಿ ಮಾತನಾಡಿದ್ದರು. ರಾಮ್ ವಕೀಲ್ ಮೂರು ಮಕ್ಕಳನ್ನು ಅಗಲಿದ್ದು, ಪುತ್ರರಾದ ರಾಹುಲ್ (10), ಅರ್ಪಿತ್ (8), ಮತ್ತು ಅಂಶ(2) ಇಟಾವಾದ ಕೇಂದ್ರಿಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ರಾಮ್ ವಕೀಲ್ ಸಂಬಂಧಿ ಆಗ್ರಾದಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಐದು ವರ್ಷಗಳ ಹಿಂದೆ ರಾಮ್ ತಂದೆ ಅಪಘಾತದಲ್ಲಿ ವಿಧಿವಶರಾಗಿದ್ದರು. www.publictv.in

    ಕೌಶಲ್ ಕುಮಾರ್ ರಾವತ್, ವಯಸ್ಸು 47, ಪೇದೆ, ಊರು – ಆಗ್ರಾ


    ಕೌಶಲ್ ಕುಮಾರ್ ಕೊನೆಯ ಬಾರಿಗೆ ಸೋದರ ಕಮಲ್ ರಾವತ್ (40) ಅವರೊಂದಿಗೆ ಫೋನ್ ನಲ್ಲಿ ಬುಧವಾರ ಮಾತನಾಡಿದ್ದರು. ಈ ವೇಳೆ ತಮಗೆ ಬೇರೊಂದು ಸ್ಥಳಕ್ಕೆ ವರ್ಗಾವಣೆಯಾಗಿದೆ. ವರ್ಗಾವಣೆಗೊಂಡ ಸ್ಥಳಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದ್ದರು. ಕೌಶಲ್ ಕುಮಾರ್ ಈ ಮೊದಲು ಸಿಲಿಗುರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪಬ್ಲಿಕ್ ಟಿವಿ

    2018 ಅಕ್ಟೋಬರ್ ನಲ್ಲಿ ಕೌಶಲ್ 10 ದಿನದ ರಜೆ ಪಡೆದು ಗ್ರಾಮಕ್ಕೆ ಆಗಮಿಸಿದ್ದರು. ಪತ್ನಿ ಮಮತಾ ರಾವಲ್ (47) ಮಕ್ಕಳಾದ ಅಪೂರ್ವ (18), ಅಭಿನವ್ (21) ಮತ್ತು ವಿಕಾಸ್ (20) ಅಗಲಿದ್ದಾರೆ.

    ಕೇರಳ

    ವಿ.ವಿ.ವಸಂತ್ ಕುಮಾರ್, ವಯಸ್ಸು – 42, ಪೇದೆ, ಊರು: ವಯನಾಡು


    ವಸಂತ್ ಕುಮಾರ್ ಜಮ್ಮುವಿನಿಂದ ಶ್ರೀನಗರಕ್ಕೆ ತೆರಳುವ ಮುನ್ನ ಗುರುವಾರ ಬೆಳಗ್ಗೆ ತಾಯಿ ಶಾಂತಾರಿಗೆ ಕರೆ ಮಾಡಿ ಮಾತನಾಡಿದ್ದರು. ಶ್ರೀನಗರದ ಹೊಸ ಬೆಟಾಲಿಯನ್ ಗೆ ವರ್ಗವಾಗಿದ್ದು, ತಲುಪಿದ ಬಳಿಕ ಕರೆ ಮಾಡುತ್ತೇನೆ ಎಂದು ಹೇಳಿದ್ದರು.

    ದಾಳಿಯ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಪತ್ನಿ ಶೀನಾ, ಪತಿಗೆ ಹಲವು ಬಾರಿ ಕರೆ ಮಾಡಿದ್ದರು. ಘಟನೆಯ ಬಳಿಕ ವಸಂತ್ ಕುಮಾರ್ ಸಹೋದ್ಯೋಗಿ ಕರೆ ಮಾಡಿ ಈ ದುರಂತದ ವಿಷಯ ತಿಳಿಸಿದರು ಎಂದು ವಸಂತ್ ನೆರೆ ಮನೆಯ ಉಷಾ ಕುಮಾರಿ ತಿಳಿಸಿದ್ದಾರೆ. www.publictv.in

    ವಸಂತ್ ಕುಮಾರ್ ಕೇರಳದ ವಯನಾಡು ಜಿಲ್ಲೆಯ ಲಕ್ಕಿಡಿ ಗ್ರಾಮದಲ್ಲಿ ವಾಸವಾಗಿದ್ದರು. ಇತ್ತೀಚೆಗೆ ರಜೆಯ ಮೇಲೆ ಗ್ರಾಮಕ್ಕೆ ಆಗಮಿಸಿದ್ದ ವಸಂತ್ ಕುಮಾರ್ ಫೆ.8ರಂದು ಜಮ್ಮುವಿಗೆ ಹಿಂದಿರುಗಿದ್ದರು. ವಸಂತ್ Pುಮಾರ್ 2001ರಿಂದ ಸಿ.ಆರ್.ಪಿ.ಎಫ್.ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಎರಡು ವರ್ಷಗಳ ಬಳಿಕ ನಿವೃತ್ತಿ ಪಡೆದುಕೊಳ್ಳಲಿದ್ದೇನೆ ಎಂದು ಕುಟುಂಬಸ್ಥರಿಗೆ ತಿಳಿಸಿದ್ದರು. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿ ವಸಂತ್ ಹುತಾತ್ಮರಾಗಿದ್ದಾರೆ.

    ರಾಜಸ್ಥಾನ

    ರೋಹಿತಾಶ್ ಲಂಬಾ, ವಯಸ್ಸು-28, ಪೇದೆ, ಊರು-ಜೈಪುರ (ರಾಜಸ್ಥಾನ)


    ರೋಹಿತಾಶ್ ಡಿಸೆಂಬರ್ 10ರಂದು ಗಂಡು ಮಗುವಿನ ತಂದೆಯಾಗಿದ್ದರು. ಆದರೆ ಆಗ ರಜೆ ಸಿಗದ ಕಾರಣ ಮಗುವನ್ನು ನೋಡಲು ಜನವರಿ 16ಕ್ಕೆ ಊರಿಗೆ ಆಗಮಿಸಿ ಜನವರಿ 31ರಂದು ಹಿಂದಿರುಗಿದ್ದರು. ಮಾಧ್ಯಮಗಳಿಂದ ನಮಗೆ ಉಗ್ರರ ದಾಳಿಯ ಮಾಹಿತಿ ತಿಳಿಯಿತು. ಗುರುವಾರ ಸಂಜೆ ಸೇನಾ ಕಚೇರಿಯ ಅಧಿಕಾರಿಗಳು ಕರೆ ಮಾಡಿ ನಿಮ್ಮ ಮಗ ಹುತಾತ್ಮನಾಗಿದ್ದಾನೆ ಎಂಬ ವಿಷಯವನ್ನು ತಿಳಿಸಿದರು. ಜಮ್ಮುವಿಗೆ ಹೊರಡುವ ಮುನ್ನ ಹೋಳಿ ಹಬ್ಬಕ್ಕೆ ಬರುತ್ತೇನೆಂದು ಮಾತು ಕೊಟ್ಟಿದ್ದ. ಆದರೆ ಈಗ ಆತ ಇನ್ಯಾವತ್ತೂ ಬಾರದ ಲೋಕಕ್ಕೆ ಹೋಗಿದ್ದಾನೆ ಎಂದು ರೋಹಿತಾಶ್ ತಂದೆ ಬಾಬು ಲಾಲ್ ಹೇಳಿದ್ದಾರೆ. ರೋಹಿತಾಶ್ ಪತ್ನಿ ಮಂಜು ದೇವಿ ಮತ್ತು ಪುತ್ರ ಧೃವ ಅವರನ್ನು ಅಗಲಿದ್ದಾರೆ.

    ನಾರಾಯಣ್ ಲಾಲ್ ಗುರ್ಜರ್, ವಯಸ್ಸು-40, ಮುಖ್ಯ ಪೇದೆ, ಊರು-ರಾಜಸಮಂದ


    ಒಂದು ತಿಂಗಳು ದೀರ್ಘ ರಜೆ ಪಡೆದು ರಾಜಸಮಂದ ಜಿಲ್ಲೆಯ ಬಿನೊಲ್ ಗ್ರಾಮಕ್ಕೆ ಬಂದಿದ್ದ ನಾರಾಯಣ್ ಲಾಲ್ ಫೆಬ್ರವರಿ ಆರಂಭದಲ್ಲಿ ಸೇನೆಗೆ ಹಿಂದಿರುಗಿದ್ದರು. ನಾರಾಯಣ್ ತಮ್ಮ ಜೀವವನ್ನು ಭಾರತಕ್ಕೆ ತ್ಯಾಗ ಮಾಡಿದ್ದಕ್ಕೆ ನಮಗೆ ಹಮ್ಮೆಯಿದೆ. ಉಗ್ರರ ದಾಳಿಗೆ ಪ್ರತೀಕಾರ ಬೇಕು ಎಂದು ಸೋದರ ಗೋವರ್ಧನ್ ಆಗ್ರಹಿಸಿದ್ದಾರೆ. www.publictv.in

    ಗುರುವಾರ ನಡೆದ ಉಗ್ರರ ದಾಳಿಯಲ್ಲಿ ನಾರಾಯಣ್ ಪತ್ನಿ ಮೋಹಿನಿ, ಪುತ್ರಿ ಹೇಮಲತ (14) ಮತ್ತು ಪುತ್ರ ಮುಖೇಶ್ (12)ನನ್ನು ಅಗಲಿದ್ದಾರೆ. ಗುರುವಾರದ ದಾಳಿಯ ಬಳಿಕ ನಾರಾಯಣ್ ಅವರು ಈ ಹಿಂದೆ ಮಾತಾನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಳೆದ ಮೂರು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಾವು ನಮ್ಮ ಸಹೋದ್ಯೋಗಿಗಳನ್ನು ಕಳೆದುಕೊಂಡಿದ್ದೇವೆ. ನನ್ನ 15 ವರ್ಷದ ಸೇವೆಯಲ್ಲಿ 9 ವರ್ಷವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದಿದ್ದೇನೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುವ ಅದೃಷ್ಟ ಎಲ್ಲರಿಗೂ ಸಿಗಲ್ಲ ಎಂದು ಹೇಳಿದ್ದಾರೆ.

    ಹೇಮರಾಜ್ ಮೀನಾ, ವಯಸ್ಸು -44, ಮುಖ್ಯ ಪೇದೆ, ಊರು-ಕೋಟಾ


    ಹೇಮರಾಜ್ ಪತ್ನಿ ಮಧು ಮತ್ತು ನಾಲ್ಕು ಮಕ್ಕಳು. ಪುತ್ರಿ ರೀನಾ ಪದವಿ ವ್ಯಾಸಂಗ ಮಾಡುತ್ತಿದ್ದು, ಅಂತಿಮಾ 9ನೇ ತರಗತಿ ಓದುತ್ತಿದ್ದಾಳೆ. ಅಜಯ್ 7ನೇ ವರ್ಗ ಹಾಗು ಕೊನೆಯ ಪುತ್ರ ರಿಷಭ್ ನರ್ಸರಿ ಓದುತ್ತಿದ್ದಾನೆ.

    ಗುರುವಾರ ಸಂಜೆ ಬಂದ ಕರೆಯನ್ನು ಸ್ವೀಕರಿಸಿದ ಹಿರಿಯ ಪುತ್ರಿ ರೀನಾಗೆ ಸೇನಾಧಿಕಾರಿಗಳು ನಿಮ್ಮ ತಂದೆ ಹುತಾತ್ಮರಾಗಿದ್ದಾರೆ ಎಂಬ ವಿಷಯವನ್ನು ತಿಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಸ್ಥಳೀಯ ರಾಜಕಾರಣಿಗಳು, ಮುಖಂಡರು, ಸಂಬಂಧಿಕರು ಮಾಧ್ಯಮದವರು ಸ್ಥಳಕ್ಕೆ ಆಗಮಿಸಿ ಸಾಂತ್ವನ ಹೇಳುತ್ತಿದ್ದಾರೆ. ಉಗ್ರರ ದಾಳಿಗೆ ಭಾರತ ತಕ್ಕ ಉತ್ತರ ನೀಡಬೇಕೆಂದು ಹೇಮರಾಜ್ ಸೋದರ ರಾಮ್ ಬಿಲಾಸ್ ಒತ್ತಾಯಿಸಿದ್ದಾರೆ.

    ಜೀತ್ ರಾಮ್, ವಯಸ್ಸು-30, ಪೇದೆ, ಊರು – ಭರತ್‍ಪುರ


    ಇದುವರೆಗೂ ಜೀತ್ ರಾಮ್ ಪೋಷಕರಿಗೆ ಮಗ ಹುತಾತ್ಮನಾಗಿರುವ ವಿಷಯವನ್ನು ತಿಳಿಸಿಲ್ಲ. ಪೋಷಕರಿಗೆ ವಯಸ್ಸಾಗಿದ್ದರಿಂದ ಪಾರ್ಥಿವ ಶರೀರ ತಲುಪಿದ ಕೂಡಲೇ ವಿಷಯ ತಿಳಿಸಲಾಗುವುದು ಎಂದು ಜೀತ್ ರಾಮ್ ಸೋದರ ವಿಕ್ರಂ ರಾಮ್ ತಿಳಿಸಿದ್ದಾರೆ. www.publictv.in

    ಉಗ್ರರ ದಾಳಿ ಬಳಿಕ ಮಾಧ್ಯಮಗಳಲ್ಲಿ ಹುತಾತ್ಮ ಯೋಧರ ಹೆಸರಿನ ಪಟ್ಟಿಯಲ್ಲಿ ಸೋದರನ ಹೆಸರು ನೋಡಿದಾಗ ಶಾಕ್ ಆಯ್ತು. ಗುರುವಾರ ರಾತ್ರಿ ಸೇನಾಧಿಕಾರಿಗಳು ಕರೆ ಮಾಡಿ ವಿಷಯವನ್ನು ಖಚಿತಪಡಿಸಿದರು. ಜೀತ್ ರಾಮ್ ಪತ್ನಿ ಸುಂದರಿ, 18 ತಿಂಗಳ ಪುತ್ರಿ ಮತ್ತು 4 ತಿಂಗಳ ಮಗುವನ್ನ ಅಗಲಿದ್ದಾನೆ ಎಂದು ವಿಕ್ರಂ ಕಣ್ಣೀರು ಹಾಕುತ್ತಾರೆ.

    ಭಗೀರಥ್ ಸಿಂಗ್, ವಯಸ್ಸು – 26, ಪೇದೆ, ಊರು-ಧೋಲ್ಪುರ


    ರೈತನ ವೀರಪುತ್ರನಾಗಿರುವ ಭಗೀರಥ್ ಆರು ವರ್ಷಗಳ ಹಿಂದೆ ಸೇನೆಗೆ ಸೇರಿದ್ದರು. ಭಗೀರಥ್ ಸೋದರ ಉತ್ತರ ಪ್ರದೇಶದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ನಿ ರಂಜನಾ, ಮೂರು ವರ್ಷದ ಓರ್ವ ಪುತ್ರ ಮತ್ತು ವರ್ಷದ ಪುತ್ರಿಯನ್ನು ಅಗಲಿದ್ದಾರೆ.

    ಇತ್ತೀಚೆಗೆ ರಜೆಯ ಮೇಲೆ ಸ್ವಗ್ರಾಮಕ್ಕೆ ಆಗಮಿಸಿದ್ದ ಭಗೀರಥ್ ಕಳೆದ ವಾರ ಸೇನೆಗೆ ಮರಳಿದ್ದರು ಎಂದು ಗೆಳೆಯರು ಹೇಳುತ್ತಾರೆ.

    ಪಂಜಾಬ್

    ಕುಲ್ವಿಂದರ್ ಸಿಂಗ್, ವಯಸ್ಸು-26, ಪೇದೆ, ಊರು-ಆನಂದಪುರ ಸಾಹಿಬ್


    10 ದಿನಗಳ ರಜೆ ಪಡೆದು ಸಂಬಂಧಿಯ ಮದುವೆಗೆ ಆಗಮಿಸಿದ್ದ ಕುಲ್ವಿಂದರ್ ಸಿಂಗ್ ಭಾನುವಾರ ಸೇನೆಗೆ ಹಿಂದಿರುಗಿದ್ದರು. ಮೂರು ವರ್ಷಗಳ ಹಿಂದೆ ಸಂಬಂಧಿ ಯುವತಿ ಜೊತೆ ನಿಶ್ಚಿತಾರ್ಥವಾಗಿತ್ತು. ಮನೆಯ ನಿರ್ಮಾಣದ ಕೆಲಸದ ಬಳಿಕ ಈ ವರ್ಷ ನವೆಂಬರ್ ನಲ್ಲಿ ಮದುವೆ ದಿನಾಂಕ ನಿಗದಿಯಾಗಿತ್ತು ಎಂದು ಕುಲ್ವಿಂದರ್ ಸಿಂಗ್ ಸಂಬಂಧಿ ಕಿರಣ್‍ದೀಪ್ ಸಿಂಗ್ ಹೇಳುತ್ತಾರೆ. ಪಬ್ಲಿಕ್ ಟಿವಿ

    ಎರಡು ತಿಂಗಳ ಹಿಂದೆ ಮನೆಯ ಕಾಮಗಾರಿ ಪೂರ್ಣಗೊಂಡಿದ್ದು, ಕಲರಿಂಗ್ ಬಾಕಿ ಉಳಿದುಕೊಂಡಿತ್ತು. ಗುರುವಾರ ಬೆಳಗ್ಗೆ 8 ಗಂಟೆಗೆ ತಂದೆಗೆ ಕರೆ ಮಾಡಿದ್ದ ಕುಲ್ವಿಂದರ್ ಸಿಂಗ್ ಪೇಂಟರ್ ನಂಬರ್ ಪಡೆದಿದ್ರು. ಬಳಿಕ ಮಧ್ಯಾಹ್ನ 3.50ಕ್ಕೆ ನಾನು ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಎಂದು ತಂದೆ ದರ್ಶನ್ ಸಿಂಗ್ ಪುತ್ರನನ್ನು ನೆನೆದು ಕಣ್ಣೀರಿಡುತ್ತಿದ್ದಾರೆ. ದರ್ಶನ್ ಸಿಂಗ್ ಟ್ರಕ್ ಚಾಲಕರಾಗಿದ್ದು, ತಾಯಿ ಅಮರ್ ಜಿತ್ ಕೌರ್ ಗೃಹಿಣಿಯಾಗಿದ್ದಾರೆ.

    ಜೈಮಲ್ ಸಿಂಗ್, ವಯಸ್ಸು-44, ಮುಖ್ಯ ಪೇದೆ, ಮೊಗ


    ಗುರುವಾರ ಬೆಳಗ್ಗೆ 8 ಗಂಟೆಗೆ ಪತ್ನಿ ಸುಖ್ಜಿತ್ ಅವರಿಗೆ ಕರೆ ಮಾಡಿದ್ದ ಜೈಮಲ್ ಸಿಂಗ್, ಚಾಲಕನೋರ್ವನ ಅನುಪಸ್ಥಿತಿಯಲ್ಲಿ ಆತನ ಬದಲಾಗಿ ಶ್ರೀನಗರಕ್ಕೆ ತೆರಳುತ್ತಿದ್ದೇನೆ. ಶ್ರೀನಗರ ತಲುಪಿದ ಬಳಿಕ ಮತ್ತೆ ಫೋನ್ ಮಾಡುವುದಾಗಿ ಪತ್ನಿಗೆ ತಿಳಿಸಿದ್ದರು. ನಮ್ಮ ಮದುವೆಯ 18 ವರ್ಷದ ಬಳಿಕ ನಮಗೆ ಸಂತಾನವಾಗಿದ್ದು, ಪುತ್ರನನ್ನು ತಮ್ಮ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು ಎಂದು ಸುಖ್ಜಿತ್ ಭಾವುಕರಾಗಿ ಕಣ್ಣೀರುಡುತ್ತಿದ್ದಾರೆ. www.publictv.in

    ಜೈಮಲ್ ತಂದೆ ಜಸ್ವಂತ್ ಸಿಂಗ್ ಗ್ರಾಮದ ಸಿಖ್ ಧರ್ಮ ಗುರುಗಳಾಗಿದ್ದು, ನನಗೆ ಅವಶ್ಯವಿರೋ ಸಮಯದಲ್ಲಿ ಮಗ ನಮ್ಮನ್ನು ಅಗಲಿ ಹೋಗಿದ್ದಾನೆ. ದೇಶಕ್ಕಾಗಿ ಮಗ ವೀರಮರಣ ಹೊಂದಿದ್ದರ ಬಗ್ಗೆ ಹೆಮ್ಮೆ ಪಡುತ್ತೇವೆ. ದೇಶದ ಘನತೆಯ ಪ್ರಶ್ನೆ ಬಂದಾಗ ಜೀವನದಲ್ಲಿ ಯಾವುದೂ ಅವಶ್ಯ ಎಂದು ಅನ್ನಿಸುವುದಿಲ್ಲ ಎಂದು ಹೇಳುತ್ತಾರೆ.

    ಸುಖಜಿಂದರ್ ಸಿಂಗ್, ವಯಸ್ಸು-32, ಪೇದೆ, ಊರು: ತಾರ್ಣ್ ತಾರಣ್


    ಸುಖಜಿಂದರ್ ಸಿಂಗ್ ಅವರು ಮದುವೆಯಾದ 8 ವರ್ಷದ ನಂತರ ಮೊದಲ ಮಗುವಿಗೆ ತಂದೆ ಆಗಿದ್ದರು. ಸುಖಜಿಂದರ್ ಸಿಂಗ್ ಲೋಹರಿ ಹಬ್ಬ ಆಚರಿಸಿದ ಬಳಿಕ ಇತ್ತೀಚೆಗೆ ಕೆಲಸಕ್ಕೆ ಹಿಂತಿರುಗಿದ್ದರು. ಮಗುವಿಗೆ ತಂದೆ ಆದ ಬಳಿಕ ಅವರು ಖುಷಿಯಲ್ಲಿದ್ದರು. ಮಗುವಿಗಾಗಿ ಸುಖಜಿಂದರ್ ಸಿಂಗ್ ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ಮಗುವಿನ ಭವಿಷ್ಯದ ಬಗ್ಗೆ ಪ್ಲಾನ್ ಮಾಡುತ್ತಿದ್ದ ಅವರು 4 ವರ್ಷದಲ್ಲಿ ನಿವೃತ್ತರಾಗಬೇಕಿತ್ತು.

    ನಾವು ಎಲ್ಲವನ್ನು ಕಳೆದುಕೊಂಡಿದ್ದೇವೆ. ಎಲ್ಲವೂ ಈಗ ಮುಗಿದು ಹೋಗಿದೆ. ಸುಖಜಿಂದರ್ ಆ ಬಸ್ಸಿನಲ್ಲಿ ಕೂರುವ ಮೊದಲು ನಾನು ಆತನ ಜೊತೆ ಮಾತನಾಡಿದ್ದೆ. ಆಗ ಅವನು ಸ್ಥಳಕ್ಕೆ ತೆರಳಿದ ಮೇಲೆ ನನಗೆ ಕರೆ ಮಾಡುತ್ತೇನೆ ಎಂದು ಮಾತು ನೀಡಿದ. ಬಳಿಕ ರಾತ್ರಿ 10 ಗಂಟೆಗೆ ಅವನು ಹುತಾತ್ಮನಾಗಿದ್ದಾನೆ ಎಂದು ಸಿ.ಆರ್.ಪಿ.ಎಫ್ ನಿಂದ ಕರೆ ಬಂತು ಎಂದು ತಂದೆ ಹೇಳಿದ್ದಾರೆ. ಪಬ್ಲಿಕ್ ಟಿವಿ

    ಮಣಿಂದರ್ ಸಿಂಗ್ ಅತ್ರಿ, ವಯಸ್ಸು-27, ಪೇದೆ, ಊರು-ಗುರುದಾಸ್‍ಪುರ:


    ಹುತಾತ್ಮ ಯೋಧ ಮಣಿಂದರ್ ಸಿಂಗ್ ಅತ್ರಿ(27) ಅವರು ಒಂದೂವರೆ ವರ್ಷದ ಹಿಂದೆ ಸಿ.ಆರ್.ಪಿ.ಎಫ್.ಗೆ ಸೇರಿದ್ದರು. ಅವರ ಸಹೋದರ ಪ್ಯಾರಾಮಿಲಿಟರಿ ಫೋರ್ಸ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ದಾಳಿ ನಡೆದ 2 ದಿನದ ಹಿಂದೆ ಮಣಿಂದರ್ ಕೆಲಸಕ್ಕೆ ಹಿಂತಿರುಗಿದ್ದರು. ಮಣಿಂದರ್ ಅವರ ತಂದೆ ಸಪ್ತಪಲ್ ಅತ್ರಿ ಅವರು ನಿವೃತ್ತ ಸರ್ಕಾರಿ ಉದ್ಯೋಗಿ ಆಗಿದ್ದು, ಈಗಲೂ ತಮ್ಮ ಮಗ ಮನೆಯಲ್ಲಿ ಕೊನೆಯದಾಗಿ ನಗುತ್ತಾ ಇದ್ದ ಬಗ್ಗೆ ನೆನಪಿಸಿಕೊಳ್ಳುತ್ತಿದ್ದಾರೆ.

    ನನ್ನ ಮಗ ಮನೆಗೆ ಬಂದಿದ್ದಾಗ ನಾನು ಆತನಿಗೆ ಟೀ ಮಾಡಿಕೊಟ್ಟಿದ್ದೆ. ಆಗ ಅವನು ತುಂಬಾ ಖುಷಿಯಾಗಿದ್ದ. ಅಲ್ಲದೇ ಶೀಘ್ರವೇ ಹಿಂತಿರುಗುತ್ತೇನೆ ಎಂದು ನನಗೆ ಮಾತು ನೀಡಿದ್ದ ಎಂದು ಸಪ್ತಪಲ್ ಅವರು ಮಗನ ಬಗ್ಗೆ ಮಾತನಾಡಿದ್ದಾರೆ. ಮಣಿಂದರ್ ಹುತಾತ್ಮರಾದ ವಿಷಯವನ್ನು ಗುರುವಾರ ಮಧ್ಯರಾತ್ರಿ ಅವರ ಕುಟುಂಬದವರಿಗೆ ತಿಳಿಸಲಾಗಿತ್ತು. ಮಣಿಂದರ್ ಮದುವೆ ಆಗಲು ಪ್ಲಾನ್ ಮಾಡುತ್ತಿದ್ದ. ಆತ ಒಳ್ಳೆಯ ಕ್ರೀಡಾಪಟು ಕೂಡ ಎಂದು ಮಣಿಂದರ್ ಶಾಲಾ ಗೆಳೆಯ ರಮೇಶ್ ಕುಮಾರ್ ಹೇಳಿದ್ದಾರೆ. www.publictv.in

    ಉತ್ತರಾಖಂಡ

    ಮೋಹನ್ ಲಾಲ್, ವಯಸ್ಸು-50 ಎಎಸ್‍ಐ, ಊರು-ಉತ್ತರಕಾಶಿ


    ಹುತಾತ್ಮ ಯೋಧ ಮೋಹನ್ ಲಾಲ್ ಉತ್ತರಖಂಡದ ಉತ್ತರಕಾಶಿ ಜಿಲ್ಲೆಯ ಬರ್ಕೋಟ್ ಗ್ರಾಮದ ನಿವಾಸಿ. ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಲಿ ಎಂದು ಮೋಹನ್ ಲಾಲ್ ಕೆಲವು ವರ್ಷಗಳ ಹಿಂದೆ ಡೆಹ್ರಾಡೂನ್ ನಲ್ಲಿ ಎರಡು ರೂಂ ಇರುವ ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದರು ಎಂದು ಮೋಹನ್ ಲಾಲ್ ಅಳಿಯ ಸರ್ವೇಶ್ ಕುಮಾರ್ ತಿಳಿಸಿದ್ದಾರೆ.

    ಮೋಹನ್ ಲಾಲ್ ಜಾಲಿ ಆಗಿದ್ದ ವ್ಯಕ್ತಿ. ಮೋಹನ್ ಕಳೆದ ವರ್ಷ ಡಿಸೆಂಬರ್‍ನಲ್ಲಿ ಮನೆಗೆ ಆಗಮಿಸಿದ್ದರು. ಅವರು 1988ರಲ್ಲಿ ಸಿ.ಆರ್.ಪಿ.ಎಫ್.ಗೆ ಸೇರಿದ್ದರು. ಅವರ ಪತ್ನಿ ಸರಿತಾ(50), 17, 22 ಹಾಗೂ 31 ವರ್ಷದ ಮೂವರು ಹೆಣ್ಣು ಮಕ್ಕಳಿದ್ದು, 14 ಹಾಗೂ 25 ವರ್ಷದ ಪುತ್ರರು ಇದ್ದಾರೆ ಎಂದು ಸರ್ವೇಶ್ ತಿಳಿಸಿದ್ದಾರೆ.

    ವಿರೇಂದ್ರ ಸಿಂಗ್, ವಯಸ್ಸು-30, ಪೇದೆ, ಊರು-ಉಧಮ್ ಸಿಂಗ್ ನಗರ:


    ವಿರೇಂದ್ರ ಸಿಂಗ್ ಅವರು 20 ದಿನ ರಜೆ ಮುಗಿಸಿಕೊಂಡು ಮಂಗಳವಾರ ಜಮ್ಮು ಹಾಗೂ ಕಾಶ್ಮೀರದಲ್ಲಿ ಕೆಲಸಕ್ಕೆ ಹಿಂತಿರುಗಿದ್ದರು. ಇವರು ಥಾರು ಬುಡಕಟ್ಟು ಜನಾಂಗಕ್ಕೆ ಸೇರಿದ್ದು, ಮೂವರು ಸಹೋದರರಲ್ಲಿ ಇವರು ಕಿರಿಯರು. ನನ್ನ ಸಹೋದರನ ಬಗ್ಗೆ ನನಗೆ ಹೆಮ್ಮೆ ಇದೆ. ಅವನು ತನ್ನ ದೇಶಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಿದ್ದಾನೆ. ಆತನ ದೇಹ ತ್ಯಾಗಕ್ಕೆ ಸರ್ಕಾರ ಪ್ರತೀಕಾರ ತೆಗೆದುಕೊಳ್ಳಲೇಬೇಕು ಎಂದು ವಿರೇಂದ್ರ ಅವರ ಹಿರಿಯ ಸಹೋದರ, ನಿವೃತ್ತ ಬಿಎಸ್‍ಎಫ್ ಅಧಿಕಾರಿ ಜೈ ರಾಮ್ ಸಿಂಗ್ ತಿಳಿಸಿದ್ದಾರೆ. ವಿರೇಂದ್ರ ತಮ್ಮ ಪತ್ನಿ ರೇಣು(31), ಪುತ್ರಿ ರೂಹಿ(5) ಹಾಗೂ ವ್ಯಾನ್(2) ಅವರನ್ನು ಅಗಲಿದ್ದಾರೆ. www.publictv.in

    ಮಹಾರಾಷ್ಟ್ರ

    ಸಂಜಯ್ ರಜಪೂತ್, ವಯಸ್ಸು-45, ಹಿರಿಯ ಪೇದೆ, ಊರು-ಬುಲ್ದಾನಾ


    ಸಂಜಯ್ ರಜಪುತ್ ಬುಲ್ದಾನಾ ಜಿಲ್ಲೆಯ ಮಲ್ಕಾಪುರದ ನಿವಾಸಿಯಾಗಿದ್ದು, 1996ರಲ್ಲಿ ಸಿ.ಆರ್.ಪಿ.ಎಫ್.ಗೆ ಸೇರಿದ್ದರು. ಗುರುವಾರ ಮಧ್ಯಾಹ್ನ ಸುಮಾರು 1.30ಕ್ಕೆ ಸಂಜಯ್ ಅವರು ತಮ್ಮ ಸಹೋದರಳಿಯ ಪಿಯೂಶ್ ಬೈಸ್ ಜೊತೆ ಫೋನಿನಲ್ಲಿ ಮಾತನಾಡಿದ್ದರು. ಅದು ಅವರ ಕುಟುಂಬದ ಜೊತೆ ಆಡಿದ ಕೊನೆಯ ಮಾತುಗಳಾಗಿತ್ತು. ಸಂಜಯ್ ಅವರು ತಮ್ಮ ಪತ್ನಿ ಸುಷ್ಮಾ(38), ಜಯ್(13) ಹಾಗೂ ಶುಭಂ (11) ಅವರನ್ನು ಅಗಲಿ ಹುತಾತ್ಮರಾಗಿದ್ದಾರೆ. ಇದು ತುಂಬಲಾರದ ನಷ್ಟ ಮತ್ತು ಅವರ ಪತ್ನಿ ಹಾಗೂ ಮಕ್ಕಳ ದುಃಖವನ್ನು ನೋಡಲು ಸಾಧ್ಯವಾಗುತ್ತಿಲ್ಲ. ದೇಶಕ್ಕಾಗಿ ಅವರು ಮಾಡಿದ ತ್ಯಾಗ ದೊಡ್ಡದು. ಆದರೆ ನಾವು ನಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದೇವೆ. ಈ ಘಟನೆ ಬಗ್ಗೆ ಸರ್ಕಾರ ಶಾಶ್ವತ ಪರಿಹಾರವನ್ನು ಕಂಡು ಹಿಡಿಯಬೇಕು ಎಂದು ಸಂಜಯ್ ಅವರ ಸಹೋದರ ರಾಜೇಶ್ ಅವರು ಹೇಳಿದ್ದಾರೆ.

    ನಿತಿನ್ ಶಿವಾಜಿ ರಾಥೋಡ್, ವಯಸ್ಸು-37, ಪೇದೆ, ಊರು-ಬುಲ್ದಾನಾ


    ಉಗ್ರರ ದಾಳಿ ಆಗುವ ಕೆಲವು ಗಂಟೆಗಳ ಮೊದಲು ಅಂದರೆ ಗುರುವಾರ ಬೆಳಗ್ಗೆ ನಿತಿನ್ ಶಿವಾಜಿ ಅವರು ತಮ್ಮ ಪತ್ನಿ ವಂದನಾ ಅವರ ಜೊತೆ ಫೋನಿನಲ್ಲಿ ಮಾತನಾಡಿದ್ದರು. ನಿತಿನ್ ಅವರಿಗೆ ಜೀವನ್ (10) ಹಾಗೂ ಜಿವಿಶಾ (5) ಇಬ್ಬರು ಮಕ್ಕಳಿದ್ದಾರೆ.

    ನನಗೆ ನಿತಿನ್ ಪತ್ನಿ, ಮಕ್ಕಳು ಹಾಗೂ ಆತನ ಪೋಷಕರಿಗೆ ಹೇಗೆ ಸಮಾಧಾನ ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ಯಾವಾಗಲೂ ನನ್ನ ಜೊತೆ ಇದ್ದ ಸಹೋದರನನ್ನು ನಾನು ಕಳೆದುಕೊಂಡಿದ್ದೇನೆ. ಉಗ್ರರು ಹೇಡಿತನದ ಮೂಲಕ ನಮ್ಮ ಮೇಲೆ ದಾಳಿ ಮಾಡಲು ಯತ್ನಿಸುತ್ತಿದ್ದಾರೆ. ನಮ್ಮ ನಾಯಕರು ಇದಕ್ಕೆ ಸೂಕ್ತ ಉತ್ತರ ನೀಡಬೇಕು ಎಂದು ನಿತಿನ್ ಅವರ ಸಹೋದರ ಪ್ರವೀಣ್ ತಿಳಿಸಿದ್ದಾರೆ. ನಿತಿನ್ ತಮ್ಮ ಕುಟುಂಬದ ಜೊತೆ ಸಮಯ ಕಳೆದು ಫೆ. 11ರಂದು ಕೆಲಸಕ್ಕೆ ಹಿಂತಿರುಗಿದ್ದರು.

    ತಮಿಳುನಾಡು

    ಸುಬ್ರಮಣಿಯನ್ ಜಿ, ವಯಸ್ಸು-28, ಪೇದೆ, ಊರು-ಟ್ಯುಟಿಕೋರಿನ್


    ಸುಬ್ರಮಣಿಯನ್ ಅವರ ತಂದೆ ವಿ. ಗಣಪತಿ ಕೃಷಿಕ. ತಂದೆಯ ವೈದ್ಯಕೀಯ ಚಿಕಿತ್ಸೆಗಾಗಿ ಅವರು ಒಂದು ತಿಂಗಳು ರಜೆಯನ್ನು ತೆಗೆದುಕೊಂಡಿದ್ದರು. ರಜೆ ಮುಗಿದ ಬಳಿಕ ಅಂದರೆ ಭಾನುವಾರ ಮನೆಯಿಂದ ಹೊರಟಿದ್ದರು. ಗುರುವಾರ ಮಧ್ಯಾಹ್ನ ಸುಮಾರು 2.15ಕ್ಕೆ ಅವರ ಪತ್ನಿ ಕೃಷ್ಣವೇಣಿ ಅವರಿಗೆ ಫೋನ್ ಮಾಡಿ ಮಾತನಾಡಿದ್ದರು. www.publictv.in

    ಕಳೆದ ವಾರ ನಾನು ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ಹೀಗಾಗಿ ನನಗೆ ಔಷಧಿಗಳನ್ನು ತೆಗೆದುಕೊಳ್ಳುವಂತೆ ಹಾಗೂ ಧೂಳಿನಿಂದ ದೂರವಿರುವಂತೆ ಹೇಳಲು ಕೊನೆಯ ಕರೆಯಾಗಿ ಬುಧವಾರ ರಾತ್ರಿ ಮಾಡಿದ್ದ. ಅವನು ಹುತಾತ್ಮನಾಗುವ ಒಂದು ಗಂಟೆಯ ಮುಂಚೆ ಅವನ ಪತ್ನಿಗೆ ಫೋನ್ ಮಾಡಿ ಮಾತನಾಡಿದ್ದಾನೆ ಎಂದು ತಂದೆ ಗಣಪತಿ ಹೇಳಿದ್ದಾರೆ.

    ಸಿ. ಶಿವಚಂದ್ರನ್, ವಯಸ್ಸು-32, ಪೇದೆ, ಊರು-ಅರಿಯಾಳೂರ್


    ಯೋಧ ಶಿವಚಂದ್ರನ್ ಅವರು ತಮಿಳುನಾಡಿನ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಅರಿಯಾಳೂರಿನ ಕಾರ್ಗುಡಿ ಗ್ರಾಮದ ನಿವಾಸಿಯಾಗಿದ್ದು, ಸಿ.ಆರ್.ಪಿ.ಎಫ್.ಗೆ 2010ರಲ್ಲಿ ಸೇರ್ಪಡೆಯಾಗಿದ್ದರು. ಇವರಿಗೆ ಎರಡು ವರ್ಷದ ಮಗನಿದ್ದಾನೆ. ಉಗ್ರರ ದಾಳಿಯ ಎರಡು ಗಂಟೆಯ ಮುಂಚೆ ಶಿವಚಂದ್ರನ್ ಅವರು ತಮ್ಮ ಗರ್ಭಿಣಿ ಪತ್ನಿ ಗಾಂಧಿಮತಿ ಅವರಿಗೆ ಕರೆ ಮಾಡಿ ಮಾತನಾಡಿದ್ದರು. ಪಬ್ಲಿಕ್ ಟಿವಿ

    ಶಿವಚಂದ್ರನ್ ಪತ್ನಿ ಅವರಿಗೆ ಯಾವುದೇ ಉದ್ಯೋಗವಿಲ್ಲ. ಅವರ ತಂದೆ ಮತ್ತು ತಾಯಿ ಇಬ್ಬರೂ ಕೃಷಿ ಕಾರ್ಮಿಕರಾಗಿದ್ದಾರೆ. ಹೀಗಾಗಿ ಅವರು ಯಾವುದೇ ಆದಾಯವನ್ನು ಹೊಂದಿಲ್ಲ. ಅವರು ಒಂದು ತಿಂಗಳ ರಜೆಗೆಂದು ಜನವರಿ 7 ರಂದು ಮನೆಗೆ ಬಂದಿದ್ದರು. ಆದರೆ ಇನ್ನು ಮುಂದೆ ಅವರು ಇಲ್ಲವೆಂದು ನಾವು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಸೋದರ ಸಂಬಂಧಿ ಅರುಣ್ ಹೇಳಿದ್ದಾರೆ.

    ಜಾರ್ಖಂಡ್

    ವಿಜಯ್ ಸೋರೆಂಗ್, ವಯಸ್ಸು-47, ಮುಖ್ಯಪೇದೆ, ಊರು-ಗುಮ್ಲಾ


    ವಿಜಯ್ ಸೋರೆಂಗ್ ಒಂದು ವಾರ ಹಿಂದೆ ತಮ್ಮ ಮನೆಗೆ ಭೇಟಿ ನೀಡಿದ್ದರು. ನಮ್ಮ ತಂದೆ ಕೂಡ ಭದ್ರತಾ ಪಡೆಯಲ್ಲಿ ಇದ್ದರು. ನನ್ನ ಸಹೋದರ ಕೂಡ ದೇಶದ ಸೇವೆ ಮಾಡಲು ಇಷ್ಟಪಟ್ಟಿದ್ದರು. ಅವರ ಪತ್ನಿ ರಾಂಚಿಯಲ್ಲಿ ಜಾರ್ಖಂಡ್ ಸಶಸ್ತ್ರ ಮೀಸಲು ಪಡೆಯಲ್ಲಿ ಉದ್ಯೋಗದಲ್ಲಿದ್ದಾರೆ ಎಂದು ಅವರ ಸಹೋದರ ಸಂಜಯ್ ಹೇಳಿದ್ದಾರೆ. ನಮ್ಮ ಸಹೋದರ ದೇಶಕ್ಕೆ ಸೇವೆ ಸಲ್ಲಿಸಿ ಹುತಾತ್ಮರಾಗಿದ್ದಾರೆ. ಹೀಗಾಗಿ ನಾವು ಹೆಮ್ಮೆಪಡುತ್ತೇವೆ. ಆದರೆ ಇದೇ ಸಂದರ್ಭದಲ್ಲಿ ನಾವು ಉಗ್ರರ ದಾಳಿಯನ್ನು ತಡೆಯಲು ಸಾಧ್ಯವಾಗದ್ದಕ್ಕೆ ನಮಗೆ ಅಸಮಾಧಾನವಿದೆ ಎಂದು ತಿಳಿಸಿದ್ದಾರೆ. www.publictv.in

    ಪಶ್ಚಿಮ ಬಂಗಾಳ

    ಸುದೀಪ್ ಬಿಸ್ವಾಸ್, ವಯಸ್ಸು-27, ಪೇದೆ, ಊರು-ನಾಡಿಯಾ


    ಇಡೀ ಕುಟುಂಬಲ್ಲಿ ಯೋಧ ಸುದೀಪ್ ಬಿಸ್ವಾಸ್ ಅವರೇ ಉದ್ಯೋಗದಲ್ಲಿದ್ದು, ತಂದೆ ಸನ್ಯಾಸಿ ಬಿಸ್ವಾಸ್ ಕೃಷಿ ಕಾರ್ಮಿಕರಾಗಿದ್ದರು. ಸುದೀಪ್ ಸಿ.ಆರ್.ಪಿ.ಎಫ್.ಗೆ 2014ರಲ್ಲಿ ಸೇರ್ಪಡೆಯಾಗಿದ್ದರು. ನಂತರ ಕುಟುಂಬವು ನಿಧಾನವಾಗಿ ಬಡತನದಿಂದ ಹೊರಬರುತ್ತಿತ್ತು. ಈ ವರ್ಷದ ಕೊನೆಯಲ್ಲಿ ಮದುವೆಯಾಗಬೇಕೆಂದು ನಿರ್ಧಾರ ಮಾಡಿದ್ದರು ಎಂದು ಅವರ ಸೋದರ ಸಂಬಂಧಿ ಬಿಸ್ವಾಸ್ ಹೇಳಿದ್ದಾರೆ. ಅವರು ನನಗೆ ಗುರುವಾರ ಸುಮಾರು 10 ಗಂಟೆಗೆ ಹಾಗೂ ಮಧ್ಯಾಹ್ನ 3.10ಕ್ಕೆ ಫೋನ್ ಮಾಡಿದ್ದರು. ಬಳಿಕ ಮಾತನಾಡುತ್ತಿದ್ದಾಗಲೇ ಕರೆ ಕಟ್ ಆಗಿತ್ತು. ಆದರೆ ಶುಕ್ರವಾರ ಬೆಳಗ್ಗೆ ದಾಳಿಯ ಬಗ್ಗೆ ತಿಳಿಯಿತು ಎಂದು ತಿಳಿಸಿದ್ದಾರೆ.

    ಬಬ್ಲೂ ಸಂತ್ರಾ, ವಯಸ್ಸು-39, ಮುಖ್ಯ ಪೇದೆ, ಊರು: ಪಶ್ಚಿಮ ಬಂಗಾಳ


    ಬಬ್ಲೂ ಸಾಂಟ್ರಾ ತಮ್ಮ ಹೊಸ ಎರಡು ಅಂತಸ್ತಿನ ಮನೆಗೆ ಪೇಂಟಿಂಗ್ ಮಾಡಿಸಲು ಮಾರ್ಚ್ 3 ರಂದು ಹೋಗಬೇಕಿತ್ತು. ಇನ್ನೂ 8 ತಿಂಗಳಲ್ಲಿ ಅವರು ಹೊಸ ಮನೆಗೆ ಹೋಗುತ್ತಿದ್ದರು. ಬಬ್ಲೂ ಅವರು ಡಿಸೆಂಬರ್ ತಿಂಗಳಿನಲ್ಲಿ ಮನೆಯ ನಿರ್ಮಾಣದ ಕೆಲಸವನ್ನು ಮುಗಿಸಿದ್ದರು. ಮಾರ್ಚ್ 3 ರಂದು ಮನೆಗೆ ಹೋಗಬೇಕೆಂದು ನಿರ್ಧರಿಸಿ ಟಿಕೆಟ್ ಗಳನ್ನು ಸಹ ಬುಕ್ ಮಾಡಿದ್ದರು.

    ಮನೆಯ ಪೇಂಟಿಂಗ್ ಕೆಲಸ ಮುಗಿದ ನಂತರ ನಾವೆಲ್ಲರೂ ಹೊಸ ಮನೆಗೆ ಹೋಗೋಣ ಎಂದಿದ್ದರು. ಇನ್ನೂ 8 ತಿಂಗಳು ಕಳೆದರೆ ಅವರಿಗೆ 40 ವರ್ಷವಾಗುತ್ತಿತ್ತು. ಆಗ ಸಿ.ಆರ್.ಪಿ.ಎಫ್. ಕೆಲಸ ಬಿಡಲು ನಿರ್ಧರಿಸಿದ್ದರು. ಗುರುವಾರ ಸುಮಾರು 10 ಗಂಟೆಗೆ ನನಗೆ ಫೋನ್ ಮಾಡಿ ಕುಟುಂಬದ ಬಗ್ಗೆ ಕೇಳಿದ್ದರು ಎಂದು ಸಹೋದರ ಕಲ್ಯಾಣ್ ಹೇಳಿದ್ದಾರೆ. ಗುರುವಾರ ಫೋನ್ ಮಾಡಿದ್ದ ವೇಳೆ ಮಾತನಾಡಿದ್ದೇ ಕೊನೆಯ ಬಾರಿಗೆ ಮಾತನಾಡಿದ್ದು ಎಂದು ಬಬ್ಲೂ ತಾಯಿ ಬನಮಾಲಾ ಹೇಳಿದ್ದಾರೆ. ಬಬ್ಲೂ ಅವರು ಪತ್ನಿ ಮಿತಾ ಮತ್ತು ಮಗಳು ಪಿಯಾಲ್ (6) ರನ್ನು ಅಗಲಿದ್ದಾರೆ. www.publictv.in

    ಅಸ್ಸಾಂ

    ಮನೇಶ್ವರ್ ಬಸುಮಾಟರಿ, ವಯಸ್ಸು-48, ಮುಖ್ಯ ಪೇದೆ, ಊರು-ಬಕ್ಸಾ


    ಮನೇಶ್ವರ್ ಅವರು ಒಂದು ತಿಂಗಳ ಅವಧಿಯ ರಜೆಯ ಮುಗಿಸಿ ಮನೆಯಿಂದ ಫೆಬ್ರವರಿ 4 ರಂದು ಹೊರಟಿದ್ದರು. ಹೋಗುವ ಮೊದಲು ಅವರ ಪತ್ನಿ ಸನ್ಮತಿ ಅವರಿಗೆ ನಾನು ನಮ್ಮ ಮನೆಗೆ ಹತ್ತಿರದ ಸ್ಥಳದಲ್ಲಿ ಪೋಸ್ಟಿಂಗ್ ಹಾಕಿಸಿಕೊಳ್ಳಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದರು. ಮನೇಶ್ವರ್ ಅವರು ಬೊಡೋ ಸಮುದಾಯದಿಂದ ಬಂದಿದ್ದು, 20 ವರ್ಷದ ಮಗಳು ಡಿಡ್ವಿಮಿಸ್ರಿ ಮತ್ತು ಮಗ ಧನಂಜಯ್ ಅವರನ್ನು ಅಗಲಿದ್ದಾರೆ.

    ನಾನು ಕಳೆದ ಗುರುವಾರ ಅವರ ಜೊತೆ ಕೊನೆಯದಾಗಿ ಮಾತನಾಡಿದ್ದೆ. ಅವರು ಜಮ್ಮುವಿನಿಂದ ಶ್ರೀನಗರಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದ್ದರು. ಆಗ ನಾವು ಸಾಮಾನ್ಯವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲಸ ಮಾಡುವಾಗ ಆಗುವ ಅಪಾಯಗಳ ಕುರಿತು ಮಾತನಾಡುತ್ತಿದ್ದೆವು. ಅವರು ಶೀಘ್ರದಲ್ಲೇ ಸ್ವಯಂನಿವೃತ್ತಿ ಹೊಂದುವುದಾಗಿ ಹೇಳಿದ್ದರು. ಆದರೆ ನಾನು ನಮ್ಮ ಮಕ್ಕಳು ವ್ಯಾಸಂಗ ಮಾಡುತ್ತಿದ್ದ ಕಾರಣ ಅವರಿಗೆ ಬುದ್ಧಿವಾದ ಹೇಳಿದ್ದೆ. ಅವರು ಅಸ್ಸಾಂನಲ್ಲಿ ಪೋಸ್ಟಿಂಗ್ ಹಾಕಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು ಎಂದು ಪತ್ನಿ ತಿಳಿಸಿದ್ದಾರೆ.

    ಒಡಿಶಾ

    ಪ್ರಸನ್ನ ಕುಮಾರ್ ಸಾಹೂ, ವಯಸ್ಸು-46, ಮುಖ್ಯಪೇದೆ, ಶಿಖರ್ ಗ್ರಾಮ, ಜಗತ್ ಸಿಂಗ್ ಪುರ


    ಒಡಿಶಾ ಜಗತಿಸಿಂಗ್‍ಪುರದ ಪ್ರಸನ್ನಕುಮಾರ್ ಸಿ.ಆರ್.ಪಿ.ಎಫ್.ನಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಪತ್ನಿ, 18 ವರ್ಷದ ಮಗಳು, 16 ವರ್ಷದ ಮಗನನ್ನು ಸಾಹೋ ಅಗಲಿದ್ದಾರೆ. ಪಬ್ಲಿಕ್ ಟಿವಿ

    ಕಾಲೇಜು ಓದುತ್ತಿರುವ ಪುತ್ರಿ, ತಂದೆ ದೇಶಕ್ಕಾಗಿ ವೀರ ಮರಣವನ್ನು ಅಪ್ಪಿದ್ದಕ್ಕೆ ಹೆಮ್ಮೆ ಪಟ್ಟಿದ್ದಾಳೆ. ಸಂಬಂಧಿ ಸುದರ್ಶನ್ ಮಾತನಾಡಿ, ಸಿ.ಆರ್.ಪಿ.ಎಫ್. ನ ಯಾರೋ ಕರೆ ಮಾಡಿ ಸಾಹೋ ಮೃತಪಟ್ಟಿದ್ದಾರೆ ಎಂದು ತಿಳಿಸಿದರು. ಆದರೆ ಪತ್ನಿಗೆ ಹಿಂದಿ ಅರ್ಥವಾಗಲಿಲ್ಲ. ಟಿವಿ ವಾಹಿನಿಗಳಲ್ಲಿ ಸುದ್ದಿ ಬಂದ ನಂತರ ಮೃತಪಟ್ಟಿದ್ದಾರೆ ಎನ್ನುವ ವಿಚಾರ ಗೊತ್ತಾಯಿತು ಎಂದು ಹೇಳಿದ್ದಾರೆ.

    ಮನೋಜ್ ಕುಮಾರ್ ಬೆಹೆರಾ, ವಯಸ್ಸು-33, ಪೇದೆ, ಊರು-ಕಟಕ್


    ಒಡಿಶಾದ ಕಟಕ್ ಮೂಲದ ಮನೋಜ್ ಕುಮಾರ್ ಕಳೆದ ಡಿಸೆಂಬರ್ ನಲ್ಲಿ ಮನೆಗೆ ವಾರ್ಷಿಕ ರಜೆಯಲ್ಲಿ ಬಂದಿದ್ದರು. ಫೆ.6 ರಂದು ತನ್ನ ಪುತ್ರಿಯ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿ ಕರ್ತವ್ಯಕ್ಕಾಗಿ ಜಮ್ಮುವಿಗೆ ತೆರಳಿದ್ದರು. ತಂದೆ ಜಿತೇಂದ್ರ ಬೆಹೆರಾ ಮಾತನಾಡಿ, ದಾಳಿ ನಡೆಯುವ ಕೆಲವೇ ಗಂಟೆಗಳ ಮೊದಲು ಮನೋಜ್ ಪತ್ನಿಗೆ ಕರೆ ಮಾಡಿ ಮಾತನಾಡಿದ್ದ. ಉಗ್ರರ ದಾಳಿ ವಿಚಾರ ಗೊತ್ತಾದ ಬಳಿಕ ನಾವು ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ಹೇಳಿದರು. www.publictv.in

    ಬಿಹಾರ್

    ರತನ್ ಕುಮಾರ್ ಠಾಕೂರ್, ವಯಸ್ಸು-30, ಪೇದೆ, ಊರು-ಭಗಲ್ಪುರ


    ಗುರುವಾರ ಮಧ್ಯಾಹ್ನ 1.30ಕ್ಕೆ ರತನ್ ಕುಮಾರ್ ಪತ್ನಿಗೆ ಕರೆ ಮಾಡಿ ಇವತ್ತು ಸಂಜೆ ಶ್ರೀನಗರಕ್ಕೆ ತಲುಪುತ್ತೇವೆ ಎಂದು ಹೇಳಿದ್ದ. ಗುರುವಾರ ಸಂಜೆ 4 ಗಂಟೆಯ ವೇಳೆಗೆ ಸಿ.ಆರ್.ಪಿ.ಎಫ್. ನಿಂದ ಕರೆ ಬಂತು. ಈ ವೇಳೆ ರತನ್ ಫೋನ್ ನಂಬರ್ ಕೇಳಿದರು. ಆದರೆ ಅವರು ಅಧಿಕೃತವಾಗಿ ಮಾಹಿತಿ ನೀಡಲಿಲ್ಲ. ನನ್ನ ಒಬ್ಬನೇ ಮಗ ರತನ್. ನನಗೆ ಬೇಸರವಾಗುತ್ತಿದೆ. ಆದರೆ ದೇಶಕ್ಕಾಗಿ ನನ್ನ ಮಗ ಮೃತಪಟ್ಟಿದ್ದಾನೆ ಎನ್ನುವ ವಿಚಾರ ಕೇಳಿದಾಗ ಹೆಮ್ಮೆಯಾಗುತ್ತಿದೆ ಎಂದು ತಂದೆ ರಾಮ್ ನಿರಂಜನ್ ಠಾಕೂರ್ ಹೇಳಿದ್ದಾರೆ. ರತನ್ ಅವರು 2011 ರಲ್ಲಿ ಸಿ.ಆರ್.ಪಿ.ಎಫ್ ಸೇರಿದ್ದರು. ಈಗ ಗರ್ಭಿಣಿ ಪತ್ನಿ ಮತ್ತು 4 ವರ್ಷದ ಮಗನನ್ನು ರತನ್ ಅಗಲಿ ಹೋಗಿದ್ದಾರೆ.

    ಈ ವರ್ಷದ ಹೋಳಿ ಹಬ್ಬವನ್ನು ಆಚರಿಸಲು ಬರುತ್ತೇನೆ. ಅಷ್ಟೇ ಅಲ್ಲದೇ ನನ್ನ ಸಹೋದರಿ ನೀತುಗೆ ಉತ್ತಮ ವರನನ್ನು ಹುಡುಕಲು ಸಹಾಯ ಮಾಡಬೇಕು ಎಂದು ಕೇಳಿಕೊಂಡಿದ್ದ ಎಂದು ಸಂಬಂಧಿ ರಾಮ್ ಹೇಳಿದ್ದಾರೆ. ರತನ್ ತಂದೆ ಕೂಲಿ ಕೆಲಸ ಮಾಡಿ ಮಗನನ್ನು ಓದಿಸಿದ್ದರು. ಮಗನಿಗೆ ಉದ್ಯೋಗ ಸಿಕ್ಕಿದ ಬಳಿಕ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಿತ್ತು. ಪಬ್ಲಿಕ್ ಟಿವಿ

    ಸಂಜಯ್ ಕುಮಾರ್ ಸಿನ್ಹಾ, ವಯಸ್ಸು-45, ಮುಖ್ಯಪೇದೆ, ಪಾಟ್ನಾ


    ಬಿಹಾರದ ಸಂಜಯ್ ಕುಮಾರ್ ಸಿನ್ಹಾ ಒಂದು ತಿಂಗಳ ರಜೆಯನ್ನು ಮುಗಿಸಿ ಫೆ.8 ರಂದು ತೆರಳಿದ್ದರು. 15 ದಿನದ ನಂತರ ಸಂಜಯ್ ಕುಮಾರ್ ಅವರು ಪುತ್ರಿಗಾಗಿ ವರನನ್ನು ಹುಡುಕಲು ಮನೆಗೆ ಬರಬೇಕಿತ್ತು. ಸಂಜಯ್ ಕುಮಾರ್ ಸಿಂಗ್ ಅವರ ಹಿರಿಯ ಮಗಳು ಪದವಿ ಓದಿದ್ದು, ಮಗ ವೈದ್ಯಕೀಯ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿದ್ದಾನೆ. ಹಿರಿಯ ಸಹೋದರ ಶಂಕರ್ ಸಹ ಸಿ.ಆರ್.ಪಿ.ಎಫ್.ನಲ್ಲಿ ಉದ್ಯೋಗದಲ್ಲಿದ್ದಾರೆ. ದೇಶಕ್ಕಾಗಿ ಮಗ ಪ್ರಾಣ ಕೊಟ್ಟಿದ್ದಕ್ಕೆ ನನಗೆ ಹೆಮ್ಮೆಯಿದೆ. ಉಗ್ರರ ದಾಳಿಗೆ ಸರ್ಕಾರ ಪ್ರತೀಕಾರ ತೀರಸಲೇ ಬೇಕು ಎಂದು ತಂದೆ ಮಹೇಂದ್ರ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

    ಹಿಮಾಚಲ ಪ್ರದೇಶ

    ತಿಲಕ್ ರಾಜ್, ವಯಸ್ಸು-30, ಪೇದೆ, ಊರು-ಕಾಂಗ್ರಾ


    ಹಿಮಾಚಲ ಪ್ರದೇಶದ ಕಾಂಗ್ರಾದ ತಿಲಕ್ ರಾಜ್ 6 ವಾರಗಳ ರಜೆ ಪಡೆದು ಮನೆಗೆ ಬಂದಿದ್ದರು. 25 ವರ್ಷದ ಪತ್ನಿ ಸಾವಿತ್ರಿ 23 ದಿನದ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಸೋಮವಾರ ಕರ್ತವ್ಯಕ್ಕೆ ತೆರಳಿದ್ದರು. ಗುರುವಾರ ಬೆಳಗ್ಗೆ 11 ಗಂಟೆಗೆ ಪತ್ನಿಗೆ ಕರೆ ಮಾಡಿ ಮಾತನಾಡಿ ಶುಕ್ರವಾರ ಕರೆ ಮಾಡುತ್ತೇನೆ ಎಂದು ತಿಲಕ್ ರಾಜ್ ತಿಳಿಸಿದ್ದರು. ಗಾಯಕರಾಗಿದ್ದ ಕಾರಣ ಇವರು ಗ್ರಾಮದಲ್ಲಿ ಪರಿಚಿತರಾಗಿದ್ದರು. ಕಳೆದ 6 ತಿಂಗಳ ಹಿಂದೆ ಮೂರು ಹಾಡುಗಳನ್ನು ರೆಕಾರ್ಡ್ ಮಾಡಿ ಯೂ ಟ್ಯೂಬ್ ಗೆ ಅಪ್ಲೋಡ್ ಮಾಡಿದ್ದು, 3 ಲಕ್ಷ ವ್ಯೂ ಕಂಡಿದೆ. www.publictv.in

    ಮಧ್ಯಪ್ರದೇಶ

    ಅಶ್ವನಿ ಕಾಚಿ, ವಯಸ್ಸು-28, ಪೇದೆ, ಊರು-ಖುದಾವಲ್ ಗ್ರಾಮ, ಜಬಲ್ಪುರ


    ಒಂದು ವೇಳೆ ಶತ್ರು ನನಗೆ ಮುಖಾಮುಖಿಯಾದರೆ ನಾನು ಬೆನ್ನು ಹಿಂದೆ ಹಾಕಿ ಹೋಗುವುದಿಲ್ಲ. ಮನೆಗೆ ತ್ರಿವರ್ಣ ಧ್ವಜವನ್ನು ಹೊದಿಸಿಕೊಂಡು ಬರುತ್ತೇನೆ ಎಂದು ಅಶ್ವನಿ ಅವರು ಅಕ್ಟೋಬರ್ ನಲ್ಲಿ ಮನೆಗೆ ಬಂದಾಗ ತಮ್ಮ ಸ್ನೇಹಿತರ ಜೊತೆ ಹೇಳಿದ್ದರು. ಐವರು ಮಕ್ಕಳಲ್ಲಿ ಕಿರಿಯವರಾದ ಅಶ್ವನಿ 2017ರ ಮಾರ್ಚ್ ನಲ್ಲಿ ಸಿ.ಆರ್.ಪಿ.ಎಫ್. ಸೇರಿದ್ದರು. ಕುಟುಂಬದ ಸದಸ್ಯರು ಅಶ್ವನಿ ಅವರಿಗೆ ಮದುವೆ ಮಾಡಿಸಲು ಹುಡುಗಿಯನ್ನು ಹುಡುಕುತ್ತಿದ್ದರು. ತಂದೆ ಕೂಲಿ ಕೆಲಸ ಮಾಡುತ್ತಿದ್ದು, ತಾಯಿ ಬೀಡಿ ಕಟ್ಟುತ್ತಿದ್ದಾರೆ.

    ಜಮ್ಮು ಮತ್ತು ಕಾಶ್ಮೀರ

    ನಸೀರ್ ಅಹ್ಮದ್, ವಯಸ್ಸು-46, ಮುಖ್ಯಪೇದೆ, ಊರು-ರಜೌರಿ


    ನಸೀರ್ ಅಹ್ಮದ್ 2014ರಲ್ಲಿ ನೆರೆ ಬಂದಾಗ ಪುಲ್ವಾಮದಲ್ಲಿ ಕಾರ್ಯಾಚರಣೆಯ ತಂಡದಲ್ಲಿ ಭಾಗಿಯಾಗಿದ್ದರು. ಐದು ವರ್ಷದ ಬಳಿಕ ಅದೇ ಪುಲ್ವಾಮ ಜಿಲ್ಲೆಯಲ್ಲಿ ಹುತಾತ್ಮರಾಗಿದ್ದಾರೆ. 6 ಮಕ್ಕಳಲ್ಲಿ ಕಿರಿಯರಾದ ನಸೀರ್ ಅವರಿಗೆ 8 ಮತ್ತು 6 ವರ್ಷದ ಇಬ್ಬರು ಮಕ್ಕಳಿದ್ದಾರೆ. ಇವರ ಹಿರಿಯ ಸಹೋದರ ಸಿರಾಜ್ ಜಮ್ಮುವಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ. www.publictv.in

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪುತ್ರಿ ಮದುವೆ ಊಟ ರದ್ದು ಮಾಡಿ 11 ಲಕ್ಷ ರೂ. ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದ ಉದ್ಯಮಿ

    ಪುತ್ರಿ ಮದುವೆ ಊಟ ರದ್ದು ಮಾಡಿ 11 ಲಕ್ಷ ರೂ. ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದ ಉದ್ಯಮಿ

    ಗಾಂಧಿನಗರ: ವಜ್ರದ ಉದ್ಯಮಿಯೊಬ್ಬರು ತಮ್ಮ ಪುತ್ರಿಯ ಮದುವೆ ಸಮಾರಂಭದ ಊಟವನ್ನು ರದ್ದು ಮಾಡಿ ಸುಮಾರು 11 ಲಕ್ಷ ರೂ. ಹಣವನ್ನು ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ನೀಡಿದ್ದಾರೆ.

    ಸೂರತ್‍ನ ವಜ್ರದ ಉದ್ಯಮಿ ದೆವಾಶಿ ಮಾನಿಕ್ ಅವರು ತನ್ನ ಪುತ್ರಿ ಅಮಿ ಮದುವೆ ಸಮಾರಂಭದಲ್ಲಿ ಆಯೋಜಿಸಿದ್ದ ಊಟವನ್ನು ರದ್ದು ಮಾಡಿ, ಊಟಕ್ಕೆ ಮೀಸಲಿಟ್ಟ ಹಣವನ್ನು ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ ಯೋಧರ ಕುಟುಂಬಸ್ಥರಿಗೆ ನೀಡಿದ್ದಾರೆ. ಅಲ್ಲದೇ ಸೇವಾ ಸಂಸ್ಥೆಗಳಿಗೆ 5 ಲಕ್ಷ ರೂ. ಧನ ಸಹಾಯ ಮಾಡಿದ್ದಾರೆ.

    ಶುಕ್ರವಾರದಂದು ಮಾನಿಕ್ ಅವರ ಪುತ್ರಿಯ ಮದುವೆ ನಿಶ್ಚಯವಾಗಿತ್ತು. ಅಲ್ಲದೆ ಈ ಸಮಾರಂಭದಲ್ಲಿ ಭರ್ಜರಿ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆದರೆ ಗುರುವಾರದಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಗೆ 44 ಸಿಆರ್‌ಪಿಎಫ್‌ ಯೋಧರು ಹುತಾತ್ಮರಾದ ಸುದ್ದಿ ತಿಳಿದು ಪುತ್ರಿ ಮದುವೆಗೆಂದು ಏರ್ಪಡಿಸಿದ್ದ ಊಟವನ್ನು ಉದ್ಯಮಿ ರದ್ದುಗೊಳಿಸಿದ್ದಾರೆ. ಹಾಗೆಯೇ ಹುತಾತ್ಮ ಯೋಧರ ಕುಟುಂಬಕ್ಕೆ ಹಾಗೂ ಸೇವಾ ಸಂಸ್ಥೆಗಳಿಗೆ ಧನ ಸಹಾಯ ಮಾಡಿ ದೇಶಭಕ್ತಿ ಮೆರೆದಿದ್ದಾರೆ.

    ಜಮ್ಮು-ಕಾಶ್ಮೀರದ ಅವಂತಿಪೋರಾದಲ್ಲಿ ಜೈಶ್-ಇ-ಮೊಹಮ್ಮದ್ ಸಂಘಟನೆಯ ಉಗ್ರನೊಬ್ಬ ಆತ್ಮಹತ್ಯಾ ದಾಳಿ ನಡೆಸಿದ್ದ. ಸ್ಫೋಟಕ ತುಂಬಿದ್ದ ಕಾರನ್ನು ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ 44 ಸಿಆರ್‌ಪಿಎಫ್‌ ಯೋಧರು ವೀರ ಮರಣವನ್ನು ಅಪ್ಪಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪುಲ್ವಾಮಾದಲ್ಲಿ ಉಗ್ರರ ದಾಳಿ- ಬಿಜೆಪಿ ನಾಯಕರಿಗೆ ಹೈಕಮಾಂಡ್ ಸಂದೇಶ ರವಾನೆ

    ಪುಲ್ವಾಮಾದಲ್ಲಿ ಉಗ್ರರ ದಾಳಿ- ಬಿಜೆಪಿ ನಾಯಕರಿಗೆ ಹೈಕಮಾಂಡ್ ಸಂದೇಶ ರವಾನೆ

    ಬೆಂಗಳೂರು: ಪುಲ್ವಾಮಾದಲ್ಲಿ ಉಗ್ರ ಆತ್ಮಾಹುತಿ ದಾಳಿ ವಿಚಾರವಾಗಿ ರಾಜಕೀಯ ಹೇಳಿಕೆ ನೀಡದಂತೆ ತನ್ನ ನಾಯಕರಿಗೆ ಬಿಜೆಪಿ ಹೈಕಮಾಂಡ್ ಸಂದೇಶ ರವಾನಿಸಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಈ ಕುರಿತು ತಮ್ಮ ಸಂಸದರಿಗೆ ಮತ್ತು ವಕ್ತಾರರಿಗೆ ಹೈಕಮಾಂಡ್ ಖಡಕ್ ಸೂಚನೆ ನೀಡಿದೆಯಂತೆ.

    ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪುಲ್ವಾಮಾದಲ್ಲಿ ಉಗ್ರರ ದಾಳಿ ವಿಚಾರವಾಗಿ ರಾಜಕೀಯ ಮಾಡುವುದಿಲ್ಲ. ಕೇಂದ್ರ ಸರ್ಕಾರದ ನಿರ್ಣಯಗಳಿಗೆ ನಮ್ಮ ಬೆಂಬಲವಿದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಕೀಯ ಹೇಳಿಕೆಗಳು ಬಿಜೆಪಿಗೆ ವಿರುದ್ಧವಾಗುವ ಸಾಧ್ಯತೆಗಳಿವೆ. ಹಾಗಾಗಿ ಪುಲ್ವಾಮಾ ವಿಚಾರದಲ್ಲಿ ರಾಜಕೀಯವಾಗಿ ಮಾತನಾಡದಂತೆ ಬಿಜೆಪಿ ಸ್ವಪಕ್ಷೀಯರಿಗೆ ಸೂಚನೆ ನೀಡಿದೆ ಎನ್ನಲಾಗುತ್ತಿದೆ.

    ಒಂದು ವೇಳೆ ವಕ್ತಾರರ ಆತುರದ ಹೇಳಿಕೆಗಳು ಸ್ಥಳೀಯವಾಗಿ ಪಕ್ಷಕ್ಕೆ ಡ್ಯಾಮೇಜ್ ಉಂಟು ಮಾಡಬಹುದು. ದೇಶ-ಸೈನ್ಯದ ಹೆಸರಿನಲ್ಲೂ ರಾಜಕಾರಣ ಮಾಡುತ್ತಾರೆ ಎಂಬ ಅಪಖ್ಯಾತಿ ಪಕ್ಷಕ್ಕೆ ಬರಬಹುದು. ಬಿಜೆಪಿ ಸಿಎಂಗಳಿಗೆ ಯೋಧರ ಪಾರ್ಥೀವ ಶರೀರ ಸ್ವೀಕರಿಸುವಂತೆ ಸೂಚಿಸಿದ್ದು, ಪರಿಸ್ಥಿತಿಯನ್ನು ಸರ್ಮಥವಾಗಿ ನಿಭಾಯಿಸುವಂತೆ ಮುಖಂಡರಿಗೆ ಪಕ್ಷ ಸಂದೇಶ ರವಾನಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

    https://www.youtube.com/watch?v=vxN4YG2ENAc

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುಟ್ಟುಹಬ್ಬದ ಹಣವನ್ನು ಯೋಧರ ಕಲ್ಯಾಣ ನಿಧಿಗೆ ನೀಡಿದ ಶಾಲಾ ಬಾಲಕಿ

    ಹುಟ್ಟುಹಬ್ಬದ ಹಣವನ್ನು ಯೋಧರ ಕಲ್ಯಾಣ ನಿಧಿಗೆ ನೀಡಿದ ಶಾಲಾ ಬಾಲಕಿ

    ಬಳ್ಳಾರಿ: ಶಾಲಾ ಬಾಲಕಿಯೊಬ್ಬಳು ತನ್ನ ಹುಟ್ಟುಹಬ್ಬದ ಹಣವನ್ನು ಸಿಆರ್‌ಪಿಎಫ್ ಯೋಧರ ಕಲ್ಯಾಣ ನಿಧಿಗೆ ನೀಡಿದ್ದಾಳೆ.

    ತನುಶ್ರೀ ಬಳ್ಳಾರಿಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದಾಳೆ. ಸಿಆರ್‌ಪಿಎಫ್ ಯೋಧರ ಮೇಲೆ ಉಗ್ರರು ದಾಳಿ ಮಾಡಿದ ಹಿನ್ನೆಲೆಯಲ್ಲಿ ತನುಶ್ರೀ ತನ್ನ ಹುಟ್ಟು ಹಬ್ಬವನ್ನು ಆಚರಣೆ ಮಾಡುವುದನ್ನು ನಿಲ್ಲಿಸಿದ್ದಾಳೆ. ಆ ಹಣವನ್ನು ಆಕೆ ಸಿಆರ್‌ಪಿಎಫ್ ಯೋಧರ ನೆರವಿಗೆ ನೀಡಿದ್ದಾಳೆ.

    ತನುಶ್ರೀ ತನ್ನ ಹುಟ್ಟುಹಬ್ಬದ ಆಚರಣೆಗೆ ಖರ್ಚಾಗುವ ಹಣವನ್ನು ಸಿಆರ್‌ಪಿಎಫ್ ಯೋಧರ ಕಲ್ಯಾಣ ನಿಧಿಗೆ ನೀಡಲು ಮುಂದಾಗಿದ್ದಳು. ಬೆಳ್ಳಂ ಬೆಳಗ್ಗೆ ತನುಶ್ರೀ ತನ್ನ ಪೋಷಕರೊಂದಿಗೆ ಬಂದು ಬಳ್ಳಾರಿ ಡಿಸಿ ಮೂಲಕ ಸಿಆರ್‌ಪಿಎಫ್ ಯೋಧರ ಕಲ್ಯಾಣ ನಿಧಿಗೆ ಡಿಡಿ ಮೂಲಕ ಹಣ ಪಾವತಿಸಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಫೋಟಕ್ಕೆ ಬಳಸಿದ್ದು 100 ರಿಂದ 150 ಕೆಜಿ RDX- 7 ಶಂಕಿತರ ವಶಕ್ಕೆ..!

    ಸ್ಫೋಟಕ್ಕೆ ಬಳಸಿದ್ದು 100 ರಿಂದ 150 ಕೆಜಿ RDX- 7 ಶಂಕಿತರ ವಶಕ್ಕೆ..!

    ಪುಲ್ವಾಮ: ಜಮ್ಮು-ಕಾಶ್ಮೀರದ ಪುಲ್ವಾಮಾದ ಅವಂತಿಪೋರದಲ್ಲಿ ಆತ್ಮಾಹುತಿ ದಾಳಿಗೆ 44 ಯೋಧರು ವೀರಮರಣವನ್ನಪ್ಪಿದ್ದಾರೆ. ಆದರೆ 44 ಯೋಧರನ್ನು ಬಲಿಪಡೆದ ರಕ್ತಪಿಪಾಸುಗಳ ದುಷ್ಕೃತ್ಯದ ಹಿಂದಿನ ಪ್ಲಾನ್ ಈಗ ಒಂದೊಂದಾಗಿ ಹೊರಬರ್ತಿದೆ. ಈ ಪಾಪ ಕೃತ್ಯದ ಮಾಸ್ಟರ್ ಮೈಂಡ್ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಕಮಾಂಡರ್ ಅಬ್ದುಲ್ ರಶೀದ್ ಘಾಝಿ. ಈತನೇ ಈ ದಾಳಿಯನ್ನು ಕಾರ್ಯರೂಪಕ್ಕೆ ತಂದಿದ್ದು ಅಂತಾ ಗುಪ್ತಚರ ಇಲಾಖೆ ಎಂಬ ಮಾಹಿತಿಗಳು ಲಭ್ಯವಾಗಿದೆ.

    ಅಫ್ಘಾನಿಸ್ತಾನದಲ್ಲಿ ತರಬೇತುಗೊಂಡಿದ್ದ ಈತ ಸುಧಾರಿತ ಸ್ಫೋಟಕ ತಯಾರಿಕೆಯಲ್ಲಿ ಹೆಚ್ಚು ಪರಿಣಿತನಾಗಿದ್ದರಿಂದ ಪುಲ್ವಾಮಾ ಸ್ಫೋಟದ ಜವಾಬ್ದಾರಿ ಈತನಿಗೆ ನೀಡಲಾಗಿತ್ತು. ಎನ್‍ಎಸ್‍ಜಿ ಮತ್ತು ಎನ್‍ಐಎ ಮಾಹಿತಿ ಪ್ರಕಾರ ಸ್ಫೋಟಕ್ಕೆ ಉಗ್ರರು ಬಳಸಿದ್ದು ಬರೋಬ್ಬರಿ 100 ರಿಂದ 150ಕೆಜಿ ಆರ್ ಡಿಎಕ್ಸ್. ಇದರಲ್ಲಿ ಹರಿತ ಕಬ್ಬಿಣದ ಚೂರುಗಳನ್ನು ಬಳಕೆ ಮಾಡಲಾಗಿತ್ತು. ಈ ಬಗ್ಗೆ ಎನ್‍ಎಸ್‍ಜಿ ಮತ್ತು ಎನ್‍ಐಎ ಸ್ಯಾಂಪಲ್ ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದೆ.

    ಕಾಕಪೋರ ಸಂಪರ್ಕಿಸುವ ಕಚ್ಚಾ ರಸ್ತೆ ಮೂಲಕ ಆತ್ಮಾಹುತಿ ಬಾಂಬರ್ ಬರುತ್ತಿದ್ದ. ಈತ ಸೆಡಾನ್ ಕಾರ್ ನಲ್ಲಿ ಬಂದು ಸರತಿ ಸಾಲಿನಲ್ಲಿ ಬರುತ್ತಿದ್ದ ಯೋಧರ ಐದನೇ ವಾಹನದ ಎಡಭಾಗಕ್ಕೆ ಡಿಕ್ಕಿ ಹೊಡೆದಿದ್ದಾನೆ. ಸೆಡಾನ್ ಕಾರ್ ಡಿಕ್ಕಿ ಹೊಡೆಯುತ್ತಲೇ 150 ಮೀಟರ್ ವ್ಯಾಪ್ತಿಯಲ್ಲಿ ಆರ್ ಡಿಎಕ್ಸ್ ಸ್ಫೋಟಗೊಂಡಿದೆ. ಪರಿಣಾಮ 80 ಮೀಟರ್ ದೂರದವರೆಗೂ ಯೋಧರ ದೇಹಗಳು ಚೂರು ಚೂರಾಗಿ ಹಾರಿ ಬಿದ್ದಿದೆ. ಸ್ಫೋಟದ ತೀವ್ರತೆಗೆ ಸುಮಾರು 10 ಕಿ.ಮೀ. ಶಬ್ದ ಕೇಳಿತ್ತು. ಸುತ್ತಮುತ್ತ ಪ್ರದೇಶದಲ್ಲಿ ಭೂಕಂಪದ ಅನುಭವವಾಗಿತ್ತು ಅಂತ ಸ್ಥಳೀಯರು ಹೇಳಿದ್ದಾರೆ.

    ದಾಳಿಗೆ ಸಹಕರಿಸಿದ ಆರೋಪದ ಮೇಲೆ ಪುಲ್ವಾಮಾ ಮತ್ತು ಆವಂತಿಪೋರಾದಲ್ಲಿ 7 ಮಂದಿ ಶಂಕಿತರನ್ನ ವಶಕ್ಕೆ ಪಡೆಯಲಾಗಿದೆ. ಮೊದಲು ದಕ್ಷಿಣದ ಕಾಶ್ಮೀರದ ಮಿಡೂರದಲ್ಲಿ ಜೈಷ್ ಉಗ್ರ ಕಮ್ರಾನ್ ನೇತೃತ್ವದಲ್ಲಿ ಭಯಾನಕ ಕೃತ್ಯದ ಸಂಚು ರೂಪಿಸಲಾಗಿತ್ತು. ಆದ್ರೆ ಅದು ವಿಫಲಗೊಂಡಿತ್ತು. ಒಟ್ಟಿನಲ್ಲಿ ಸ್ಫೋಟದ ಹಿಂದಿರುವ ಪಾಕ್ ಸಂಚಿಗೆ ವಿಶ್ವದಾದ್ಯಂತ ಆಕ್ರೋಶ ವ್ಯಕ್ತವಾಗ್ತಿದೆ. ಭಾರತದೆಲ್ಲೆಡೆ ಪ್ರತಿಭಟನೆ ನಡೆಯುತ್ತಿದೆ.

    https://www.youtube.com/watch?v=SJLdZhK9wTU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಹುತಾತ್ಮ ಯೋಧರ ಪಾರ್ಥಿವ ಶರೀರ ಶನಿವಾರ ಬೆಳಗ್ಗೆ ಏರ್ ಲಿಫ್ಟ್

    ಹುತಾತ್ಮ ಯೋಧರ ಪಾರ್ಥಿವ ಶರೀರ ಶನಿವಾರ ಬೆಳಗ್ಗೆ ಏರ್ ಲಿಫ್ಟ್

    ನವದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದನ ದಾಳಿಯಲ್ಲಿ ವೀರ ಮರಣ ಹೊಂದಿದ ಯೋಧರ ಪಾರ್ಥಿವ ಶರೀರವನ್ನು ಸ್ವಗ್ರಾಮಗಳಿಗೆ ತಲುಪಿಸಲು ಶನಿವಾರ ಬೆಳಗ್ಗೆ ಏರ್ ಲಿಫ್ಟ್ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

    ದೆಹಲಿಯಿಂದ ತೆರಳಬೇಕಿದ್ದ ವಿಮಾನ ಕಾರಣಾಂತರಗಳಿಂದ ಅಂತಿಮ ಕ್ಷಣದಲ್ಲಿ ರದ್ದಾದ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ ಪಾಲಂ ವಾಯು ನೆಲೆಯಿಂದ ಏರ್ ಲಿಫ್ಟ್ ಆಗಲಿದೆ. ತಮಿಳುನಾಡು ಮೂಲದ ಯೋಧ ಸುಬ್ರಹ್ಮಣಂ ಸೇರಿದಂತೆ ಮಂಡ್ಯದ ಗುರು ಅವರ ಪಾರ್ಥಿವ ಶರೀರವೂ ನಾಳೆ ಬೆಳಗ್ಗೆ ಏರ್ ಲಿಫ್ಟ್ ಮಾಡಲಾಗುತ್ತದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಮಾಹಿತಿ ನೀಡಿದ್ದಾರೆ.

    ರಾತ್ರಿಯೇ ಏರ್ ಲಿಫ್ಟ್ ಮಾಡಲು ತೀರ್ಮಾನ ಮಾಡಿದ್ದರು ಕೂಡ ದೆಹಲಿಯಲ್ಲಿ ಹಿಮದ ಪ್ರಮಾಣ ಹೆಚ್ಚಾಗಿರುವುದರಿಂದ ವಿಮಾನ ಹಾರಾಟ ರದ್ದುಪಡಿಸಲಾಗಿದೆ. ಉಳಿದಂತೆ ನಾಳೆ ಬೆಳಗ್ಗೆ ಪಾರ್ಥಿವ ಶರೀರ ಏರ್ ಲಿಫ್ಟ್ ಆಗಲಿದ್ದು, ವಿಶೇಷ ವಿಮಾನದಲ್ಲಿ ಬೆಂಗಳೂರಿನತ್ತ ತರಲಾಗುತ್ತಿದೆ. ಬೆಳಗ್ಗೆ 8 ಗಂಟೆಗೆ ಪಾರ್ಥಿವ ಶಾರೀರ ಬೆಂಗಳೂರು ತಲುಪುವ ಸಾಧ್ಯತೆ ಇದ್ದು, ನಾಳೆ ಸಂಜೆ ಗುರು ಅವರ ಅಂತ್ಯಕ್ರಿಯೆ ನಡೆಯಲಿದೆ. ಸ್ವಗ್ರಾಮದಲ್ಲಿ ಸಾರ್ವಜನಿಕರಿಗೆ ದರ್ಶನ ಪಡೆಯಲು ಅವಕಾಶವಿದೆ.

    ಉತ್ತರಪ್ರದೇಶ, ಪಂಜಾಬ್, ಹರಿಯಾಣ ಸೇರಿದಂತೆ ಹತ್ತಿರದ ರಾಜ್ಯಗಳಿಗೆ ಸುಮಾರು 17 ಟ್ರಕ್ ಮೂಲಕ ಕೊಂಡ್ಯೊಲಾಗುತ್ತಿದೆ. ಭಾರತದ ಸೈನಿಕರು ರಾಜ್ಯ ಸರ್ಕಾರಗಳಿಗೆ ಪಾರ್ಥಿವ ಶರೀರವನ್ನು ಹಸ್ತಾಂತರ ಮಾಡುತ್ತಾರೆ. ಉಳಿದಂತೆ ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರ ಯೋಧರ ಪಾರ್ಥಿವ ಶರೀರವನ್ನು ಏರ್ ಲಿಫ್ಟ್ ಮಾಡಲಾಗುತ್ತಿದೆ.

    ಬೆಂಗಳೂರಿನ ವಿಮಾನ ನಿಲ್ದಾಣದಿಂದ ಮಂಡ್ಯಕ್ಕೆ ರಸ್ತೆ ಮಾರ್ಗದ ಮೂಲಕ ಪಾರ್ಥಿವ ಶರೀರವನ್ನು ಕೊಂಡ್ಯೊಲಾಗುತ್ತದೆ. ನಾಳೆ ಸಂಜೆ 4 ಗಂಟೆಗೆ ವೇಳೆಗೆ ಯೋಧ ಗುರು ಅವರ ಅಂತ್ಯಕ್ರಿಯೆ ನಡೆಯಲಿದೆ ಎಂಬ ಮಾಹಿತಿ ಲಭಿಸಿದೆ. ಆದರೆ ಯೋಧರ ಪಾರ್ಥಿವ ಶರೀರದ ಏರ್ ಲಿಫ್ಟ್ ತಡವಾಗುತ್ತಿರುವ ಕಾರಣ ಅಂತ್ಯಕ್ರಿಯೆ ತಡವಾಗುವ ಸಾಧ್ಯತೆ ಇದೆ.

    ಯೋಧ ಗುರು ಅವರ ಅಂತಿಮ ಕಾರ್ಯ ನಡೆಯುವ ಸ್ಥಳದಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದ್ದಾರೆ. ಉಳಿದಂತೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಸಿಎಂ ಅಂತಿಮ ನಮನ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಯೋಧ ಗುರು ಅವರ ಅಂತಿಮ ದರ್ಶನ ಪಡೆಯಲಿದ್ದು, ಈ ಕುರಿತು ಮಂಡ್ಯದ ಕೆಎಂ ದೊಡ್ಡಿಯಲ್ಲಿ ಸಚಿವ ಡಿಸಿ ತಮ್ಮಣ್ಣ ಸ್ಪಷ್ಟಪಡಿಸಿದ್ದಾರೆ.

    ಸ್ವಗ್ರಾಮದಲ್ಲಿ ಬೆಳಗ್ಗೆ 11 ಗಂಟೆಯವರೆಗೂ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ಸುಮಾರು ಎರಡು ಕಿಮೀ ಮೆರವಣಿಗೆಯಲ್ಲಿ ಅಂತ್ಯ ಸಂಸ್ಕಾರ ಮಾಡುವ ಸ್ಥಳಕ್ಕೆ ಯೋಧರ ಪಾರ್ಥಿವ ಶರೀರ ತರಲಾಗುತ್ತದೆ. ನಾಲ್ಕು ಗಂಟೆ ಸುಮಾರಿಗೆ ಅಂತ್ಯ ಸಂಸ್ಕಾರ ನೆರವೇರಲಿದೆ. ಮಳವಳ್ಳಿ ಮದ್ದೂರು ರಸ್ತೆಯ ಪಕ್ಕದಲ್ಲೇ ಸುಮಾರು ಮೂವತ್ತು ಗುಂಟೆ ಸರ್ಕಾರಿ ಸ್ಥಳವಿದು, ಈ ಸ್ಥಳವನ್ನು ಅಂತ್ಯ ಸಂಸ್ಕಾರಕ್ಕೆ ಮೀಸಲಿಡಲಾಗಿದೆ. ಇದಕ್ಕೆ ಕುಟುಂಬದವರ ಒಪ್ಪಿಗೆಯೂ ಇದ್ದು, ಸ್ಥಳದಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದು ತಮ್ಮಣ್ಣ ಅವರು ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೃತ್ಯವನ್ನು ನಾವು ಮರೆಯಲ್ಲ, ನಿಮ್ಮನ್ನು ಕ್ಷಮಿಸಲ್ಲ: ಸಿಆರ್‌ಪಿಎಫ್‌

    ಕೃತ್ಯವನ್ನು ನಾವು ಮರೆಯಲ್ಲ, ನಿಮ್ಮನ್ನು ಕ್ಷಮಿಸಲ್ಲ: ಸಿಆರ್‌ಪಿಎಫ್‌

    ನವದೆಹಲಿ: ಪುಲ್ವಾಮದಲ್ಲಿ ಉಗ್ರರು ಆತ್ಮಾಹುತಿ ದಾಳಿ ನಡೆಸಿ ಭಾರತೀಯ ಯೋಧರನ್ನು ಬಲಿಪಡೆದಿದ್ದನ್ನು ನಾವು ಮರೆಯುವುದೂ ಇಲ್ಲ, ಕೃತ್ಯ ಎಸಗಿದ ಪಾಪಿಗಳನ್ನು ನಾವು ಕ್ಷಮಿಸುವುದು ಇಲ್ಲ ಎಂದು ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್‌) ಟ್ವೀಟ್ ಮಾಡಿ ಉಗ್ರರಿಗೆ ಎಚ್ಚರಿಕೆ ನೀಡಿದೆ.

    ಗುರುವಾರದಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಉಗ್ರರು ಆತ್ಮಾಹುತಿ ದಾಳಿ ನಡೆಸಿ ಸುಮಾರು 47 ಸಿಆರ್‌ಪಿಎಫ್‌ ಯೋಧರ ಜೀವವನ್ನು ಬಲಿಪಡೆದಿದ್ದಾರೆ. ಘಟನೆಯಿಂದ ಸಿಟ್ಟಿಗೆದ್ದಿರುವ ಸಿಆರ್‌ಪಿಎಫ್‌ ಉಗ್ರರು ಈ ದುಷ್ಕೃತ್ಯಕ್ಕೆ ಪ್ರತ್ಯುತ್ತರ ನೀಡಲು ಸಿದ್ಧರಿದ್ದೇವೆ ಎಂದು ಹೇಳಿ ಖಡಕ್ ಸಂದೇಶ ರವಾನಿಸಿದೆ. ಇದನ್ನೂ ಓದಿ: ಒಳಸಂಚಿನಿಂದ ಭಾರತವನ್ನು ಅಸ್ಥಿರಗೊಳಿಸಬಹುದೆಂಬ ಕನಸನ್ನು ಬಿಟ್ಟುಬಿಡಿ- ಪಾಕಿಗೆ ಮೋದಿ ಸಂದೇಶ

    ಟ್ವೀಟ್‍ನಲ್ಲಿ ಏನಿದೆ?
    ನಾವು ದುಷ್ಕೃತ್ಯ ಮೆರೆದವರನ್ನು ಮರೆಯುವುದಿಲ್ಲ, ಅವರನ್ನು ಕ್ಷಮಿಸುವುದೂ ಇಲ್ಲ. ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರನ್ನು ನಾವು ಗೌರವಿಸುತ್ತೇವೆ. ಹಾಗೆಯೇ ಹುತಾತ್ಮರಾಗಿರುವ ನಮ್ಮ ಸಹೋದರರ ಕುಟುಂಬದೊಂದಿಗೆ ನಾವಿದ್ದೇವೆ. ಈ ಘೋರ ದಾಳಿಗೆ ತಕ್ಕ ಪ್ರತ್ಯುತ್ತರವನ್ನು ನಾವು ನೀಡುತ್ತೇವೆ ಎಂದು ತನ್ನ ಟ್ವಿಟ್ಟರ್ ಖಾತೆಯಲ್ಲಿ ಸಿಆರ್‌ಪಿಎಫ್‌ ಬರೆದುಕೊಂಡಿದೆ.

    ಉಗ್ರರ ದಾಳಿಯಲ್ಲಿ ಹುತಾತ್ಮರಾಗಿರುವ ಯೋಧರಿಗಾಗಿ ಇಡೀ ದೇಶವೆ ಸಂತಾಪ ಸೂಚಿಸುತ್ತಿದೆ. ಅಲ್ಲದೇ ಕೃತ್ಯವೆಸೆಗಿರುವ ಉಗ್ರರ ವಿರುದ್ಧ ಎಲ್ಲಡೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಭದ್ರತಾ ಪಡೆಗೆ ಈ ದಾಳಿಗೆ ಪ್ರತ್ಯುತ್ತರ ನೀಡಲು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕಾಶ್ಮೀರದಲ್ಲಿ ಸಿಆರ್‌ಪಿಎಫ್‌ ಪಾತ್ರ ಏನು? ಕಣಿವೆ ರಾಜ್ಯದಲ್ಲಿ ಎಲ್ಲಿ ಉಗ್ರರು ಹೆಚ್ಚಿದ್ದಾರೆ?

    ಕಾಶ್ಮೀರದಲ್ಲಿ ಸಿಆರ್‌ಪಿಎಫ್‌ ಪಾತ್ರ ಏನು? ಕಣಿವೆ ರಾಜ್ಯದಲ್ಲಿ ಎಲ್ಲಿ ಉಗ್ರರು ಹೆಚ್ಚಿದ್ದಾರೆ?

    ಭಾರತೀಯ ಸೇನೆಯ ಇತಿಹಾಸಲ್ಲಿ ಕಂಡು ಕೇಳರಿಯದ ಉಗ್ರರ ದಾಳಿ ನಡೆದಿದಿದ್ದು ಸಿಆರ್‌ಪಿಎಫ್‌ನ 47 ಯೋಧರು ಹುತಾತ್ಮರಾಗಿದ್ದಾರೆ. ನರಹಂತಕ ಉಗ್ರನೊಬ್ಬ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೋ ಕಾರನ್ನು ಬಸ್ಸಿಗೆ ಡಿಕ್ಕಿ ಹೊಡೆಸಿದ ಪರಿಣಾಮ 47 ಮಂದಿ ಯೋಧರು ವೀರಮರಣವನ್ನು ಹೊಂದಿದ್ದಾರೆ.. 2,547 ಸೈನಿಕರು ಜಮ್ಮುವಿನಿಂದ ಶ್ರೀನಗರ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಹೀಗಾಗಿ ಕಣಿವೆ ರಾಜ್ಯದಲ್ಲಿ ಸಿಆರ್‌ಪಿಎಫ್‌ ಪಾತ್ರ ಏನು? ಇತ್ಯಾದಿ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

    ಏನಿದು ಸಿಆರ್‌ಪಿಎಫ್‌?
    ದೇಶದ ಶಸಸ್ತ್ರ ಪೊಲೀಸ್ ಪಡೆಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್‌) ಅತಿ ದೊಡ್ಡ ಪಡೆಯಾಗಿದ್ದು ಕೇಂದ್ರ ಗೃಹ ಇಲಾಖೆಯ ಅಡಿ ಕೆಲಸ ಮಾಡುತ್ತದೆ.

    ಸಿಆರ್‌ಪಿಎಫ್‌ ಕೆಲಸ ಏನು?
    ದೇಶದ ಗಡಿಯಲ್ಲಿ ಬಿಎಸ್‍ಎಫ್ ಸೈನಿಕರು ನಿಯೋಜನೆಗೊಂಡರೆ ದೇಶದ ಒಳಗಡೆ ನಡೆಯುತ್ತಿರುವ ಗಲಭೆಗಳನ್ನು ನಿಯಂತ್ರಿಸುವುದು ಸಿಆರ್‌ಪಿಎಫ್‌ ಪೊಲೀಸರ ಕೆಲಸ. ಜಮ್ಮು ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಆರ್‌ಪಿಎಫ್‌ ಪೊಲೀಸರನ್ನು ಸರ್ಕಾರ ನಿಯೋಜಿಸಿದೆ.

    ಜಮ್ಮು ಕಾಶ್ಮೀರದಲ್ಲಿ ಎಷ್ಟಿದ್ದಾರೆ?
    ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿ ಪ್ರಕಾರ ಒಟ್ಟು 60 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಯೋಧರು ಕಾಶ್ಮೀರದಲ್ಲಿ ಕರ್ತವ್ಯದಲ್ಲಿದ್ದಾರೆ. ಕಣಿವೆ ರಾಜ್ಯವನ್ನು ಜಮ್ಮು, ಕಾಶ್ಮೀರ, ಲಡಾಖ್ ಎಂಬ ಮೂರು ಪ್ರಾಂತ್ಯಗಳ ಮೂಲಕ ಗುರುತಿಸಲಾಗುತ್ತದೆ. ಇದರಲ್ಲಿ ಕಾಶ್ಮೀರ ಭಾಗದ ಎಲ್ಲ ಜಿಲ್ಲೆಗಳಲ್ಲಿ ಸಿಆರ್‌ಪಿಎಫ್‌ ಯೋಧರನ್ನು ನಿಯೋಜಿಸಲಾಗಿದೆ. ಅದರಲ್ಲೂ ಕಾಶ್ಮೀರದ ಬಾರಾಮುಲ್ಲಾ, ಕುಪ್ವಾರ, ಪುಲ್ವಾಮಾ, ಬಂದೀಪುರ, ಶೋಪಿನ್ ಜಿಲ್ಲೆಗಳಲ್ಲಿ ಹೆಚ್ಚು ಆತಂಕವಾದಿಗಳಿದ್ದು ಇಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ.

    ಈ ಹಿಂದೆ ಗಡಿ ಭದ್ರತೆ ಮತ್ತು ದೇಶದ ಕಾನೂನು ಸುವ್ಯವಸ್ಥೆಯನ್ನು ಬಿಎಸ್‍ಎಫ್ ಮತ್ತು ಸಿಆರ್‌ಪಿಎಫ್‌ ನೋಡಿಕೊಳ್ಳುತ್ತಿತ್ತು. ಆದರೆ 2005ರಿಂದ ಬಿಎಸ್‍ಎಫ್ ಯೋಧರಿಗೆ ಗಡಿ ರಕ್ಷಣೆಯ ಜವಾಬ್ದಾರಿ ನೀಡಿದರೆ, ಸಿಆರ್‌ಪಿಎಫ್‌ ಯೋಧರನ್ನು ದೇಶದ ಆಂತರಿಕ ಸಮಸ್ಯೆ ನಿವಾರಿಸಲು ನಿಯೋಜಿಸಲಾಗುತ್ತದೆ.

    ಕಾಶ್ಮೀರದಲ್ಲಿ ಕೆಲಸ ಏನು?
    ಕಾಶ್ಮೀರದ ಕಣಿವೆ ಪ್ರದೇಶದಲ್ಲಿ ಸಿಆರ್‌ಪಿಎಫ್‌ ಯೋಧರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ಗುಪ್ತಚರ ಇಲಾಖೆ ನೀಡಿದ ಮಾಹಿತಿಯಂತೆ ಕಾರ್ಯಾಚರಣೆ ಮಾಡುವುದು, ಸೇನಾ ಕಾರ್ಯಾಚಣೆಗೆ ಸಹಕಾರ ನೀಡುವ ಕೆಲಸವನ್ನು ಮಾಡುತ್ತದೆ.

    ಹಿಂದೆ ಯಾವಾಗ ದಾಳಿಯಾಗಿತ್ತು?
    2018ರ ಜುಲೈ 13ರಂದು ಅನಂತ್‍ನಾಗ್ ಜಿಲ್ಲೆಯಲ್ಲಿ ಉಗ್ರರು ಸಿಆರ್‌ಪಿಎಫ್‌ ಯೋಧರ ಮೇಲೆ ದಾಳಿ ಮಾಡಿದ್ದರು. ಈ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದರೆ, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಇದಕ್ಕೂ ಮುನ್ನ 2018ರ ಫೆಬ್ರವರಿ ತಿಂಗಳು ಶ್ರೀನಗರದ ಸಿಆರ್‌ಪಿಎಫ್‌ ಶಿಬಿರದ ಮೇಲೆ ಉಗ್ರರು ದಾಳಿ ಮಾಡಿದ್ದರು. ಆಗ 30 ಗಂಟೆಗಳ ಕಾಲ ನಿರಂತರ ಗುಂಡಿನ ದಾಳಿಯ ಮೂಲಕ ಭಾರತೀಯ ಯೋಧರು, ಉಗ್ರರನ್ನು ಹತ್ಯೆ ಮಾಡಿದ್ದರು.

    ಹಿಂದೆ ಐಇಡಿ ದಾಳಿ ನಡೆ ನಡೆದಿತ್ತಾ?
    ಕಣಿವೆ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಸುಧಾರಿತ ಸ್ಫೋಟಕ ಬಳಸಿ ಸ್ಫೋಟಿಸುವ ಕೃತ್ಯಗಳು ಕಡಿಮೆಯಾಗಿದೆ. 1990ರ ಅವಧಿಯಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತಿತ್ತು. 2017ರಲ್ಲಿ ಒಂದು ಪ್ರಕರಣ ನಡೆದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಹುತಾತ್ಮ ಯೋಧನ ಕುಟುಂಬಕ್ಕೆ ಮಧ್ಯಪ್ರದೇಶ ಸರ್ಕಾರದಿಂದ 1 ಕೋಟಿ ರೂ. ಪರಿಹಾರ ಘೋಷಣೆ

    ಹುತಾತ್ಮ ಯೋಧನ ಕುಟುಂಬಕ್ಕೆ ಮಧ್ಯಪ್ರದೇಶ ಸರ್ಕಾರದಿಂದ 1 ಕೋಟಿ ರೂ. ಪರಿಹಾರ ಘೋಷಣೆ

    ಭೋಪಾಲ್: ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತ ಮಟ್ಟ ಮಧ್ಯಪ್ರದೇಶದ ವೀರ ಯೋಧ ಅಶ್ವಿನಿ ಕುಮಾರ್ (36) ಕುಟುಂಬಕ್ಕೆ ಸರ್ಕಾರ 1 ಕೋಟಿ ರೂ. ಪರಿಹಾರ ನೀಡುವುದಾಗಿ ಘೋಷಿಸಿದೆ.

    ಯೋಧನ ವೀರ ಮರಣದ ಕುರಿತು ಸಂತಾಪ ವ್ಯಕ್ತಪಡಿಸಿರುವ ಮಧ್ಯಪ್ರದೇಶ ಸಿಎಂ ಕಮಲ್ ನಾಥ್ ಅವರು, ಕುಟುಂಬಸ್ಥರಿಗೆ ಸಂತ್ವಾನ ತಿಳಿಸಿದ್ದಾರೆ. ಅಲ್ಲದೇ ಸರ್ಕಾರದಿಂದ ಒಂದು ಕೋಟಿ ರೂ. ಪರಿಹಾರ ಹಾಗೂ ಕುಟುಂಬ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಪ್ರಕಟಿಸಿದ್ದಾರೆ.

    ಮಧ್ಯಪ್ರದೇಶ ಕೋಹ್ವಾಲ್ ಶಿರೋರ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಅಶ್ವಿನಿ ಕುಮಾರ್, ಜಮ್ಮು ಕಾಶ್ಮೀರದ ಸಿಆರ್‍ಪಿಎಫ್ 35 ಬೆಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಶ್ವಿನಿ ಕುಮಾರ್ ಅವರ ಕುಟುಂಬ ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದು, ಕುಟುಂಬದಲ್ಲಿ ಹಿರಿಯರಾಗಿದ್ದ ಅಶ್ವಿನಿ ಕುಮಾರ್ ಅವರನ್ನೇ ಕುಟುಂಬ ಅಶ್ರಯಿಸಿತ್ತು.

    ಯೋಧನ ಕುಟುಂಬದಲ್ಲಿ ಪೋಷಕರೊಂದಿಗೆ ಐದು ಮಂದಿ ಸಹೋದರರು ಇದ್ದು, ಇತ್ತೀಚೆಗಷ್ಟೇ ಅಶ್ವಿನಿ ಕುಮಾರ್ ಅವರಿಗೆ ಮದುವೆ ಮಾಡಲು ಕುಟುಂಬ ನಿರ್ಧರಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv