Tag: CRPF

  • ಫೋನಿನಲ್ಲಿ ಹೇಳಿದ್ದನ್ನು ಕೇಳಿ ಚುನಾವಣಾಧಿಕಾರಿ ಪ್ರಾಣ ಉಳಿಸಿದ ಯೋಧ

    ಫೋನಿನಲ್ಲಿ ಹೇಳಿದ್ದನ್ನು ಕೇಳಿ ಚುನಾವಣಾಧಿಕಾರಿ ಪ್ರಾಣ ಉಳಿಸಿದ ಯೋಧ

    ಶ್ರೀನಗರ: ಲಘು ಹೃದಯಾಘಾತಕ್ಕೆ ಒಳಗಾಗಿದ್ದ ಚುನಾವಣಾ ಅಧಿಕಾರಿಯನ್ನು ಸಿಆರ್‌ಪಿಎಫ್ ಯೋಧರೊಬ್ಬರು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

    ಯೋಧ ಸುರೇಂದ್ರ ಕುಮಾರ್ ಅವರ ಸಮಯ ಪ್ರಜ್ಞೆ ಹಾಗೂ ಮುಂಜಾಗ್ರತೆಯಿಂದಾಗಿ ಚುನಾವಣಾ ಅಧಿಕಾರಿ ಅಸನ್ ಉಲ್ ಹಕ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುರೇಂದ್ರ ಕುಮಾರ್ ಅವರ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    ಆಗಿದ್ದೇನು?:
    ಜಮ್ಮು-ಕಾಶ್ಮೀರದಲ್ಲಿ ಗುರುವಾರ ಲೋಕಸಭಾ ಚುನಾವಣೆ ನಡೆದಿತ್ತು. ಈ ವೇಳೆ ಕಾಶ್ಮೀರದ 13ನೇ ಮತಗಟ್ಟೆಯ ಚುನಾವಣಾ ಅಧಿಕಾರಿ ಅಸನ್ ಉಲ್ ಹಕ್ ಅವರಿಗೆ ಲಘು ಹೃದಯಾಘಾತ ಸಂಭವಿಸಿತ್ತು. ಅದೇ ಮತಗಟ್ಟೆಯ ಭದ್ರತೆಗೆ ನಿಯೋಜನೆಗೊಂಡಿದ್ದ ಯೋಧ ಸುರೇಂದ್ರ ಕುಮಾರ್ ಅವರು ತಕ್ಷಣವೇ ಪ್ರಥಮ ಚಿಕಿತ್ಸೆಗೆ ಮುಂದಾದರು. ವೈದ್ಯ ಸುನೀಮ್ ಅವರು ಫೋನ್ ಮಾಡಿ, ಸುರೇಂದ್ರ ಕುಮಾರ್ ಅವರಿಗೆ ಏನು ಮಾಡಬೇಕು ಎಂದು ಸಲಹೆ ನೀಡಿದರು.

    ಸುರೇಂದ್ರ ಕುಮಾರ್ ಅವರು ವೈದ್ಯರು ಸಲಹೆಯಂತೆ 30 ಬಾರಿ ಅಸನ್ ಉಲ್ ಹಕ್ ಅವರ ಬಾಯಲ್ಲಿ ಬಾಯಿ ಇಟ್ಟು ಗಾಳಿ ಬಿಡುತ್ತಿದ್ದರು. ಈ ಮೂಲಕ ಸುಮಾರು 50 ನಿಮಿಷಗಳ ಕಾಲ ಪ್ರಥಮ ಚಿಕಿತ್ಸೆ ನೀಡಿದರು. ಆಂಬುಲೆನ್ಸ್ ಮೂಲಕ ಮತಗಟ್ಟೆ ತಲುಪಿದ ವೈದ್ಯರು ಚಿಕಿತ್ಸೆ ಮುಂದುವರಿಸಿದರು.

    ಈ ಕುರಿತು ಪ್ರತಿಕ್ರಿಯೆ ನೀಡಿದ ವೈದ್ಯ ಸುನೀಮ್ ಅವರು, ಸುರೇಂದ್ರ ಕುಮಾರ್ ಸಮಯ ಪ್ರಜ್ಞೆ ತೋರಿ, ನಾವು ಮತಗಟ್ಟೆ ತಲುಪುವವರೆಗೂ ಪ್ರಥಮ ಚಿಕಿತ್ಸೆ ನೀಡಿದರು. ಹೀಗಾಗಿ ಅಸನ್ ಉಲ್ ಹಕ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.

  • ಸುಮಲತಾಗೆ CRPF ಅಷ್ಟೇ ಯಾಕೆ ಅಮೆರಿಕದ ಅಧ್ಯಕ್ಷರನ್ನೂ ಸಂಪರ್ಕ ಮಾಡ್ಲಿ- ಸಿಎಂ ಲೇವಡಿ

    ಸುಮಲತಾಗೆ CRPF ಅಷ್ಟೇ ಯಾಕೆ ಅಮೆರಿಕದ ಅಧ್ಯಕ್ಷರನ್ನೂ ಸಂಪರ್ಕ ಮಾಡ್ಲಿ- ಸಿಎಂ ಲೇವಡಿ

    ಮಂಡ್ಯ: ಸಿಆರ್‌ಪಿಎಫ್ ಒಂದೇ ಅಲ್ಲ. ಬೇಕಿದ್ರೆ ಅಮೆರಿಕದ ಅಧ್ಯಕ್ಷರಿಗೆ ಹೇಳಿ ಅಲ್ಲಿಯ ಕಮಾಂಡೋಗಳನ್ನು ಕೂಡ ನರೇಂದ್ರ ಮೋದಿಯವರು ಏರ್ಪಾಡು ಮಾಡಿ ಕಳುಹಿಸಿ ಕೊಡೋದು ಸೂಕ್ತ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

    ನಗರದ ಮದ್ದೂರಿನಲ್ಲಿ ಮಗ ನಿಖಿಲ್ ಪರ ಮತಯಾಚನೆಯ ಸಂದರ್ಭದಲ್ಲಿ ಸುಮಲತಾ ಅವರು ತನಗೆ ಸಿಆರ್‌ಪಿಎಫ್ ಭದ್ರತೆ ಬೇಕು ಎಂದು ಕೇಳಿದ್ದಕ್ಕೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ, ಪಕ್ಷೇತರ ಅಭ್ಯರ್ಥಿ ಸುಮಲತಾ ಯಾಕೆ ಭಯ ಪಡಬೇಕು. ಅವರಿಗೆ ಬೇಕಾದ ಭದ್ರತಾ ವ್ಯವಸ್ಥೆಯನ್ನು ಮೋದಿಯವರೇ ಮಾಡುತ್ತಾರೆ. ಅಮೆರಿಕ ಅಧ್ಯಕ್ಷರ ಜೊತೆ ಮಾತನಾಡಿ ಅಲ್ಲಿನ ಕಮಾಂಡೋಗಳನ್ನ ಕರೆಸಿಕೊಡಲಿ. ನನಗೇನು ಅಭ್ಯಂತರ ಇಲ್ಲ ಎಂದು ಹೇಳಿದ್ರು. ಇದನ್ನೂ ಓದಿ: ಸಿಎಂ ಹೇಳಿಕೆಯಿಂದ ನನಗೆ ಭಯವಾಗ್ತಿದೆ: ಸುಮಲತಾ

    ಸಿಎಂ ಮಾತು ಸೈನ್ಯಕ್ಕೆ ಅವಮಾನ ಮಾಡಲಾಗಿದೆ ಎಂದು ಮೋದಿ ಹೇಳಿಕೆ ಪ್ರತಿಕ್ರಿಯಿಸಿದ ಎಚ್‍ಡಿಕೆ, ಶ್ರೀಮಂತರ ಮಕ್ಕಳು ಯಾರೂ ಸೈನ್ಯಕ್ಕೆ ಸೇರಲ್ಲ. ಇದಕ್ಕೆ ಹುತಾತ್ಮರಾಗಿರೋ ಗುರು ಅವರ ಉದಾಹರಣೆ ನೀಡಿದ್ದೆ. ಆ ಕುಟುಂಬದ ಪರಿಸ್ಥಿತಿ ನೋಡಿಯೇ ನಾನು ಹೇಳಿಕೆ ನೀಡಿರುವುದು. ನಾನು ಹೇಳಿದ್ದರಲ್ಲಿ ಅಸತ್ಯ ಏನಿಲ್ಲ. ನಮ್ಮ ದೇಶದಲ್ಲಿ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಿಲ್ಲ. ಹೀಗಾಗಿ ಕೊನೆಗೆ ಸೈನ್ಯಕ್ಕಾದ್ರೂ ಸೇರಿ ಜೀವನ ಮಾಡೋಣ ಎಂದು ಅವರು ಹೋಗ್ತಾರೆ. ಆದ್ರೆ ನರೇಂದ್ರ ಮೋದಿಯವರು ಬಡ ಕುಟುಂಬಗಳ ಮಕ್ಕಳ ಜೊತೆ ಚೆಲ್ಲಾಟವಾಡುತ್ತಾರೆ. ಇದು ವಾಸ್ತವವೇ ಹೊರತು ಯಾರಿಗೂ ಅವಮಾನ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು. ಇದನ್ನೂ ಓದಿ: ಸೈನಿಕರ ಬಗ್ಗೆ ಲಘುವಾಗಿ ಮಾತನಾಡಿದವರು ಮುಳುಗಿ, ಮುಳುಗಿ ಸಾಯ್ತಾರೆ – ಎಚ್‍ಡಿಕೆಗೆ ಮೋದಿ ತಿರುಗೇಟು

    ಗುರು ಧರ್ಮಪತ್ನಿಗೆ ಬೆಂಗಳೂರಲ್ಲಿ ನಾನೇ ಕೆಲಸ ಕೊಡಿಸಿದ್ದೇನೆ. ನರೇಂದ್ರ ಮೋದಿ ಕೆಲಸ ಕೊಡಿಸಿಲ್ಲ. ಕುಟುಂಬದ ಪರಿಸ್ಥಿತಿ ನೋಡೋಕ್ಕಾಗದೆ ನಾನು ಕೆಲಸ ಕೊಡಿಸಿರುವುದು. ಗುರು ಅವರು ಸೈನಿಕ ವೃತ್ತಿಗೆ ಹೋಗೋದಕ್ಕೆ ಕಾರಣವೇನು? ದೊಡ್ಡವರ ಕಮಾಂಡೋಗಳ ವಿಚಾರ ಬೇರೆ, ಆದ್ರೆ ದೇಶದ ಗಡಿಯನ್ನು ಕಾಯುತ್ತಿರುವವರು ಸಾಮಾನ್ಯವಾಗಿ ಎಲ್ಲರೂ ಬಡ ಕುಟುಂಬದವರೇ ಆಗಿರುತ್ತಾರೆ. ಈ ದೇಶದಲ್ಲಿ ಎರಡು ಹೊತ್ತಿನ ಊಟಕ್ಕೂ ಪರದಾಡುವ ಬಡ ಕುಟುಂಬವನ್ನು ನಾನು ಗಮನಿಸಿದ್ದೇನೆ. ನಾನು ಕೂಡ ಪ್ರತಿ ದಿನ ಅಂತವರ ಜೊತೆಯೇ ಬದುಕಿದವನು. ನಾನೇನು ಚಿನ್ನದ ಸ್ಪೂನಿನಲ್ಲಿ ತಿನ್ನೋರ ಜೊತೆ ಬೆರೆತಿಲ್ಲ. ಅವರ ಕಷ್ಟ ನೋಡಿ ಹೇಳಿದ್ದೇನೆ. ಅಂತವರ ಜೊತೆ ಚೆಲ್ಲಾಟವಾಡ ಬೇಡಪ್ಪ ಎಂದು ಪ್ರಧಾನಿಗಳಿಗೆ ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿ ತೆರಳಿದರು.

  • ಐಇಡಿ ಸ್ಫೋಟಿಸಿ ನಕ್ಸಲರ ದಾಳಿ- ಬಿಜೆಪಿ ಶಾಸಕ ಸೇರಿ ಐವರು ಪೊಲೀಸರ ಸಾವು

    ಐಇಡಿ ಸ್ಫೋಟಿಸಿ ನಕ್ಸಲರ ದಾಳಿ- ಬಿಜೆಪಿ ಶಾಸಕ ಸೇರಿ ಐವರು ಪೊಲೀಸರ ಸಾವು

    ರಾಯ್ಪುರ: ಛತ್ತಿಸ್‍ಗಢದ ದಂತೇವಾಡಾದ ಬಳಿ ಬಿಜೆಪಿ ನಾಯಕರು ತೆರೆಳುತ್ತಿದ್ದ ಬೆಂಗಾವಲು ವಾಹನದ ಮೇಲೆ ನಕ್ಸಲರು ಸುಧಾರಿತ ಸ್ಫೋಟಕ ಬಳಸಿ ದಾಳಿ ನಡೆಸಿದ್ದು, ಘಟನೆಯಲ್ಲಿ ಬಿಜೆಪಿ ಶಾಸಕ ಭೀಮಾ ಮಾಂಡವಿ ಸೇರಿದಂತೆ ಐವರು ಪೊಲೀಸರು ಸಾವನ್ನಪ್ಪಿದ್ದಾರೆ.

    ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶಾಸಕ ಭೀಮಾ ಅವರು ಪ್ರಚಾರ ಕಾರ್ಯವನ್ನು ನಡೆಸಲು ತೆರಳುತ್ತಿದ್ದ ವೇಳೆ ನಕ್ಸಲರ ದಾಳಿ ನಡೆದಿದೆ. ಸ್ಫೋಟದ ತೀವ್ರತೆಗೆ ವಾಹನ ಸಂಪೂರ್ಣವಾಗಿ ಜಖಂಗೊಂಡಿದ್ದು, ಸ್ಥಳದಲ್ಲೇ ಪೊಲೀಸರು ಮೃತಪಟ್ಟಿದ್ದಾರೆ.

    ಬೆಂಗಾವಲು ವಾಹನದ ಜೊತೆ ತೆರಳುತ್ತಿದ್ದ ಕಾರುಗಳ ಕೊನೆ ವಾಹನದಲ್ಲಿ ಶಾಸಕರು ಕುಳಿತ್ತಿದ್ದರು ಎನ್ನಲಾಗಿದ್ದು, ಈ ವಾಹನವನ್ನೇ ನಕ್ಸಲರು ಸ್ಫೋಟಿಸಿದ್ದಾರೆ. ಪರಿಣಾಮ ವಾಹನದಲ್ಲಿದ್ದವರ ದೇಹಗಳು ಛಿದ್ರಗಳು ಸುಮಾರು ದೂರ ಹಾರಿ ಬಿದ್ದಿವೆ. ಸ್ಫೋಟದ ಬಳಿಕ ನಕ್ಸಲರು ಗುಂಡಿನ ದಾಳಿಯನ್ನು ನಡೆಸಿದ್ದಾರೆ. ಘಟನೆಯಲ್ಲಿ ಶಾಸಕರು ಸಾವನ್ನಪ್ಪಿದ ಬಗ್ಗೆ ನಕ್ಸಲ್ ನಿಗ್ರಹ ದಳದ ಡಿಐಜಿ ಪಿ ಸುಂದರ್ ರಾಜ್ ಖಚಿತ ಪಡಿಸಿ ಮಾಹಿತಿ ನೀಡಿದ್ದಾರೆ.

    ನಕ್ಸಲರ ದಾಳಿಯ ಕುರಿತು ಮಾಹಿತಿ ಲಭಿಸುತ್ತಿದಂತೆ ಸಿಆರ್‍ಪಿಎಫ್ ತಂಡ ಸ್ಥಳಕ್ಕೆ ಭೇಟಿ ನೀಡಿದೆ. ಛತ್ತೀಸ್‍ಗಢ ಸಿಎಂ ಭೂಪೇಶ್ ಬಾಗೇಲ್ ಕಠಿಣ ಕ್ರಮಕೈಗೊಳ್ಳುವಂತೆ ಡಿಐಜಿಗೆ ಸೂಚನೆ ನೀಡಿದ್ದಾರೆ. ದಾಳಿ ನಡೆದ ಪ್ರದೇಶದಲ್ಲಿ ಗುರುವಾರ ಚುನಾವಣೆಯ ನಡೆಯಲಿದೆ. ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 80 ಸಾವಿರ ರಕ್ಷಣಾ ಸಿಬ್ಬಂದಿ, ಡ್ರೋಣ್ ಕ್ಯಾಮೆರಾಗಳನ್ನು ಸರ್ಕಾರ ನಿಯೋಜನೆ ಮಾಡಿದೆ.

  • ಭಾರತಕ್ಕೆ ಜೈಶ್ ಉಗ್ರ ಹಸ್ತಾಂತರ

    ಭಾರತಕ್ಕೆ ಜೈಶ್ ಉಗ್ರ ಹಸ್ತಾಂತರ

    ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್‍ಪೊರಾದ ಸಿಆರ್‌ಪಿಎಫ್ ಕ್ಯಾಂಪ್ ಮೇಲೆ ಡಿಸೆಂಬರ್ 2018ರಂದು ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯು ನಡೆಸಿದ್ದ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರನನ್ನು ಯುಎಇ ಸರ್ಕಾರವು ಭಾರತಕ್ಕೆ ಹಸ್ತಾಂತರಿಸಿದೆ.

    ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಉಗ್ರ ನಿಸಾರ್ ಅಹ್ಮದ್ ತಾಂಟ್ರೆಯನ್ನು ಯುಎಇ ಸರ್ಕಾರವು ಭಾರತಕ್ಕೆ ಹಸ್ತಾಂತರಿಸಿದೆ. ನಿಸಾರ್ ಮತ್ತು ಕೆಲ ಉಗ್ರರು 2017, ಡಿಸೆಂಬರ್ 30 ಹಾಗೂ 31ರ ಮಧ್ಯರಾತ್ರಿ ಸಿಆರ್‌ಪಿಎಫ್ ಕ್ಯಾಂಪ್ ಮೇಲೆ ದಾಳಿ ಮಾಡಿದ್ದರು. ಈ ದಾಳಿಯಲ್ಲಿ 5 ಜನ ಸೈನಿಕರು ಹುತಾತ್ಮರಾಗಿದ್ದು, ಮೂವರು ಉಗ್ರರು ಹತ್ಯೆಯಾಗಿದ್ದರು.

    ಭಾರತೀಯ ಭದ್ರತಾ ಸಂಸ್ಥೆಯ(ಎನ್‍ಐಎ) ಅಧಿಕಾರಿಗಳು 2019 ಫೆಬ್ರವರಿ 1ರಂದು ನಿಸಾರ್ ಸಹಚರರನ್ನು ಬಂಧಿಸಿದ್ದರು. ಬಂಧನ ಭೀತಿಗೆ ಒಳಗಾದ ನಿಸಾರ್ ಪುಲ್ವಾಮಾದಿಂದ ಯುಎಇಗೆ ಪರಾರಿಯಾಗಿದ್ದ. ಅಲ್ಲಿನ ಪೊಲೀಸರ ಸಹಾಯದಿಂದ ನಿಸಾರ್ ನನ್ನು ಎನ್‍ಐಎ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಆತನನ್ನು ಅಲ್ಲಿನ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಹೀಗಾಗಿ ಉಗ್ರ ನಿಸಾರ್ ನನ್ನು ಯುಎಇ ಭಾರತಕ್ಕೆ ಹಸ್ತಾಂತರಿಸಿದೆ.

    ಉಗ್ರ ನಿಸಾರ್, ನೂರ್ ತಾಂಟ್ರೇಯ ಕಿರಿಯ ಸಹೋದರ. ನೂರ್ ತಾಂಟ್ರೇ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಜೊತೆಗೆ ಸಂಬಂಧ ಹೊಂದಿದ್ದ. ಆತನನ್ನು ಪುಲ್ವಾಮಾದಲ್ಲಿ 2017 ಡಿಸೆಂಬರ್ 26ರಂದು ಭಾರತೀಯ ಸೈನಿಕರು ಹತ್ಯೆ ಮಾಡಿದ್ದರು.

    ಸಿಆರ್‌ಪಿಎಫ್ ಕ್ಯಾಂಪ್ ಮೇಲೆ ದಾಳಿಯ ವೇಳೆ ಹತ್ಯೆಯಾಗಿದ್ದ ಉಗ್ರರಾದ ಫರೀದ್ ಹಾಗೂ ಮಂಜೂರ್ ಪುಲ್ವಾಮಾ ಜಿಲ್ಲೆಯವರೇ ಆಗಿದ್ದು, ಮತ್ತೊರ್ವ ಅಬ್ದುಲ್ ಶಾಕೂರ್ ಪಾಕಿಸ್ತಾನದ ಪ್ರಜೆ ಎಂದು ಗುರುತಿಸಲಾಗಿತ್ತು. ಈ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಫೈಯಾಜ್ ಅಹ್ಮದ್ ಕೂಡ ಪುಲ್ವಾಮಾ ಜಿಲ್ಲೆಯವನು. ಆತನನ್ನು 2019 ಫೆಬ್ರವರಿ 4ರಂದು ಎನ್‍ಐಎ ಅಧಿಕಾರಿಗಳು ಬಂಧಿಸಿದ್ದರು.

    ಎನ್‍ಐಎ ಮೂಲಗಳ ಪ್ರಕಾರ ಫೈಯಾಜ್ ಅಹ್ಮದ್ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಭೂಗತ ಪಾತಕಿಯಾಗಿದ್ದು, ಭಾರತದ ಮೇಲೆ ದಾಳಿ ಮಾಡಲು ಬರುತ್ತಿದ್ದ ಉಗ್ರರಿಗೆ ವಸತಿ ನೀಡುತ್ತಿದ್ದ. ಸಿಆರ್‍ಪಿಎಫ್ ಕ್ಯಾಂಪ್ ಮೇಲೆ ದಾಳಿಯ ಮಾಡಿದ್ದ ಫರೀದ್, ಮಂಜೂರ್ ಹಾಗೂ ಅಬ್ದುಲ್ ಶಾಕೂರ್ ಗೆ ಸಹಾಯ ಮಾಡಿದ್ದ ಎನ್ನಲಾಗಿದೆ.

  • CRPF ವಾಹನ ಸ್ಫೋಟಿಸಲು ಸಂಚು – ಉಗ್ರನ ಪತ್ರದಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ

    CRPF ವಾಹನ ಸ್ಫೋಟಿಸಲು ಸಂಚು – ಉಗ್ರನ ಪತ್ರದಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ

    – ಸ್ವರ್ಗದಲ್ಲಿ ಮಜಾ ಮಾಡುತ್ತೇನೆ
    – ಸ್ಫೋಟಗೊಳ್ಳುವ ಮುನ್ನವೇ ಓಡಿ ಹೋದ ಉಗ್ರ
    – ಭಾರತದ ಮೇಲೆ ಪ್ರತೀಕಾರಕ್ಕೆ ಪ್ಲಾನ್

    ಶ್ರೀನಗರ: ಶನಿವಾರ ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿ ಬನಿಹಾಲ್ ಬಳಿ ಪುಲ್ವಾಮಾ ದಾಳಿಯ ಮಾದರಿಯಲ್ಲಿ ಸಿಆರ್ ಪಿಎಫ್ ವಾಹನಕ್ಕೆ ಕಾರು ಡಿಕ್ಕಿ ಹೊಡೆಸಲು ಸಂಚು ರೂಪಿಸಲಾಗಿತ್ತು. ಸಿಆರ್ ಪಿಎಫ್ ವಾಹನದ ಅನತಿ ದೂರದಲ್ಲಿ ಕಾರ್ ಸ್ಫೋಟಗೊಂಡಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ಇತ್ತ ಸ್ಫೋಟಕ್ಕೂ ಮುನ್ನ ಸ್ಯಾಂಟ್ರೋ ಕಾರು ಚಾಲಕನಾಗಿದ್ದ ಉಗ್ರ ಓಡಿ ಹೋಗಿದ್ದನು. ಕಾರು ಚಾಲಕ ಓರ್ವ ಆತ್ಮಾಹುತಿ ದಾಳಿಕೋರ ಎನ್ನುವುದು ತನಿಖೆಯಲ್ಲಿ ಬಯಲಾಗಿದೆ. ಈ ಸಂಬಂಧ ಜಮ್ಮು-ಕಾಶ್ಮೀರ ಪೊಲೀಸರಿಗೆ ಉಗ್ರನ ಬರೆದಿದ್ದ ಪತ್ರ(ಸೂಸೈಡ್ ನೋಟ್)ವೊಂದು ಲಭ್ಯವಾಗಿದೆ.

    ಆತ್ಮಾಹುತಿ ದಾಳಿಕೋರನನ್ನು ಓವೈಸ್ ಅಮೀನ್ ಎಂದು ಗುರುತಿಸಲಾಗಿದೆ. ಓವೈಸ್ ದಾಳಿಗೂ ಮುನ್ನವೇ ಸ್ಫೋಟಕಗಳಿಂದ ಕಾರ್ ಬಿಟ್ಟು ಓಡಿ ಹೋಗಿದ್ದಾನೆ. ಜಮ್ಮು-ಕಾಶ್ಮೀರ ಪೊಲೀಸರಿಗೆ ಎರಡು ಪುಟಗಳ ಪತ್ರ ದೊರೆತಿದ್ದು, ಉಗ್ರ ಭಾರತದ ಮೇಲೆ ಪ್ರತೀಕಾರ ತೆಗೆದುಕೊಳ್ಳಲು ನಿರ್ಧರಿಸಿದ್ದನು ಎಂಬುವುದು ಬಯಲಾಗಿದೆ. ಹೀಗಾಗಿ ಸೈನಿಕರ ವಾಹನಕ್ಕೆ ತನ್ನ ಕಾರನ್ನು ಡಿಕ್ಕಿ ಹೊಡೆಸುವ ಮೂಲಕ ಆತ್ಮಾಹುತಿ ದಾಳಿ ನಡೆಸಲು ಉಗ್ರ ಓವೈಸ್ ಪ್ಲಾನ್ ಮಾಡಿದ್ದ. ಕೊನೆ ಕ್ಷಣದಲ್ಲಿ ತನ್ನ ಸಾವಿಗೆ ಹೆದರಿದ ಓವೈಸ್, ಸೈನಿಕರ ವಾಹನದ ಕೂಗಳತೆಯ ದೂರದಲ್ಲಿ ಕಾರ್ ಸ್ಫೋಟಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ ಎಂದು ರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ. ಇದನ್ನೂ ಓದಿ: ಏರ್ ಸರ್ಜಿಕಲ್ ಸ್ಟ್ರೈಕ್-ಪಾಕ್ ಉಗ್ರ ನೆಲೆಯ ಮೇಲೆ ಸಾವಿರ ಕೆಜಿಯ ಬಾಂಬ್ ಸಿಡಿಸಿದ ಐಎಎಫ್

    ಪತ್ರದಲ್ಲಿ ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರ ವಿರುದ್ಧ ಪ್ರಯೋಗಿಸುವ ಪೆಲೆಟ್ ಗನ್ ಬಗ್ಗೆ ಉಲ್ಲೇಖಿಸಲಾಗಿದೆ. ಪೆಲೆಟ್ ಗನ್ ಬಳಕೆಯಿಂದಾಗಿ 18 ತಿಂಗಳ ಹಿಬಾ ನಿಸಾರ್ ಎಂಬ ಕಂದಮ್ಮ ತನ್ನ ಎಡಗಣ್ಣು ಕಳೆದುಕೊಂಡಳು. ಹಿಬಾ ಮನೆಯ ಹತ್ತಿರ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಪೊಲೀಸರು ಪ್ರಯೋಗಿಸಿದ ಪೆಲೆಟ್ ಗನ್ ನಿಂದ ಅಮಾಯಕ ಬಾಲಕಿ ತನ್ನ ಕಣ್ಣು ಕಳೆದುಕೊಂಡಳು. ಕಾಶ್ಮೀರದ ಶಿಕ್ಷಕ ರಿಜ್ವಾನ್ ಅಸದ್ ಎಂಬವರನ್ನು ಪೊಲೀಸರು ತಮ್ಮ ಕಸ್ಟಡಿಯಲ್ಲಿಯೇ ಹೊಡೆದು ಕೊಲೆ ಮಾಡಿದರು. ಹೀಗಾಗಿ ಭಾರತದ ವಿರುದ್ಧ ಪ್ರತೀಕಾರ ತೆಗೆದುಕೊಳ್ಳುವುದಾಗಿ ಓವೈಸ್ ತನ್ನ ಸೂಸೈಡ್ ಪತ್ರದಲ್ಲಿ ಬರೆದುಕೊಂಡಿದ್ದ. ಇದನ್ನೂ ಓದಿ: ಏರ್ ಸ್ಟ್ರೈಕ್ ನಡೆದ ಸ್ಥಳದಲ್ಲಿ 300 ಮೊಬೈಲ್!

    ಸ್ವರ್ಗದಲ್ಲಿ ಮಜಾ ಮಾಡ್ತೇನೆ:
    ಈ ಪತ್ರ ಸಿಗುವ ವೇಳೆಗೆ ನಾನು ಸ್ವರ್ಗ ತಲುಪಿರುತ್ತೇನೆ. ಈ ಎಲ್ಲ ದೃಶ್ಯಗಳನ್ನು ನೋಡಿ ನಾನು ಸ್ವರ್ಗದಲ್ಲಿ ಮಜಾ ಮಾಡುತ್ತಿರುತ್ತೇನೆ. ಈ ಮೊದಲು ಕಾಶ್ಮೀರವನ್ನು ಸ್ವತಂತ್ರ ಮಾಡಿದ್ದರೆ, ಭಾರತ ಈ ದಿನವನ್ನು ನೋಡುತ್ತಿರಲಿಲ್ಲ. ನಮ್ಮ ಸ್ವತಂತ್ರಕ್ಕಾಗಿ ಅನಿವಾರ್ಯವಾಗಿ ನಾವು ಹೋರಾಟಕ್ಕೆ ಧುಮುಕಿದ್ದೇವೆ ಎಂದು ಪತ್ರ ಬರೆದಿದ್ದ.

    ಓವೈಸ್ ಅಮಿನ್ ಯಾರು?
    ಅರ್ವಾನಿ ನಿವಾಸಿ ಯೂಸೂಫ್ ಮಲೀಕ್ ಎಂಬವರ ಪುತ್ರನಾಗಿರುವ ಓವೈಸ್ ಅಹ್ಮದ್ ಮಲೀಕ್ ಅಮೀನ್ ಸಿ ಕೆಟಗರಿಯ ಉಗ್ರನಾಗಿದ್ದನು. 2018ರ ಏಪ್ರಿಲ್ 5 ರಂದು ಹಿಜಬುಲ್ ಮುಜಾಹಿದ್ದೀನ್ ಸಂಘಟನೆಯನ್ನು ಸೇರಿಕೊಂಡು ಭಯೋತ್ಪಾನಾ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದನು. ಈತ ಜಬ್ಲಿಪೋರಾ, ಅರ್ವಾನಿ ಮತ್ತು ಬಿಜ್ಬೇಹರಾ ಪ್ರದೇಶಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದನು. ಇದನ್ನೂ ಓದಿ: ಪೆಟ್ರೋಲ್ ಸುರಿದು ಮೃತದೇಹ ಸುಟ್ಟರು – ಏರ್ ಸರ್ಜಿಕಲ್ ಸ್ಟ್ರೈಕ್‍ಗೆ ಸಿಕ್ತು ಆಡಿಯೋ ಸಾಕ್ಷ್ಯ!

    ಶನಿವಾರ ಸ್ಫೋಟಕ್ಕಾಗಿ ಓವೈಸ್ ಹುಂಡೈ ಸ್ಯಾಂಟ್ರೋ ಕಾರು ಬಳಸಿದ್ದನು. ಕಾರಿನ ಇಂಜಿನ್ ಮತ್ತು ಚಾಸಿ ನಂಬರ್ ಒಂದಕ್ಕೊಂದು ಹೋಲಿಕೆ ಆಗುತ್ತಿಲ್ಲ. ದಾಳಿಗಾಗಿ ಕಾರನ್ನು ಕದ್ದಿದ್ದ ಓವೈಸ್ ಬಿಡಿ ಭಾಗಗಳನ್ನು ಬದಲಿಸಿದ್ದನು. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎನ್‍ಐಎ ತಿಳಿಸಿದೆ. ಇದನ್ನೂ ಓದಿ: ಕಾರಿನ ‘ಕೀ’ ಯಿಂದ ಪುಲ್ವಾಮಾ ತನಿಖೆ ಓಪನ್! – ಕೀ ಪತ್ತೆಯಾದ ರೋಚಕ ಕಥೆ ಓದಿ

    ಇಂದು ಪುಲ್ವಾಮಾದ ಲಸ್ಸಿಪುರದ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವಿನ ಗುಂಡಿನ ಕಾಳಗದಲ್ಲಿ ನಾಲ್ವರು ಲಷ್ಕರ್-ಎ-ತೊಯ್ಬಾದ ನಾಲ್ವರು ಉಗ್ರರನ್ನು ಎನ್ ಕೌಂಟರ್ ಮಾಡಲಾಗಿದೆ. 2 ಎಕೆ ರೈಫಲ್ಸ್, 1 ಎಸ್‍ಎಲ್ ಆರ್ ಹಾಗೂ ಪಿಸ್ತೂಲನ್ನು ಈಗಾಗಲೇ ವಶಪಡಿಸಿಕೊಂಡಿದ್ದು, ಕಾರ್ಯಾಚರಣೆ ಮುಂದುವರಿದಿದೆ.

    ಪುಲ್ವಾಮಾ ದಾಳಿ:
    ಫೆ. 14ರಂದು ಗುರುವಾರ ಜಮ್ಮುವಿನಿಂದ ಶ್ರೀನಗರಕ್ಕೆ 78 ಸಿಆರ್ ಪಿಎಫ್ ವಾಹನಗಳಲ್ಲಿ 2,547 ಯೋಧರು ಪ್ರಯಾಣಿಸುತ್ತಿದ್ದರು. ಶ್ರೀನಗರಕ್ಕೆ 20 ಕಿ.ಮೀ ದೂರದಲ್ಲಿದ್ದಾಗ 350 ಕೆಜಿ ಸುಧಾರಿತ ಸ್ಫೋಟಕಗಳನ್ನು ತುಂಬಿದ್ದ ಬಿಳಿ ಬಣ್ಣದ ಮಾರುತಿ ಇಕೋ ಕಾರನ್ನು ಉಗ್ರ ಅದಿಲ್ ದಾರ್ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದನು. ಡಿಕ್ಕಿ ಹೊಡೆದ ರಭಸಕ್ಕೆ ಸ್ಫೋಟಕಗಳು ಸ್ಫೋಟಗೊಂಡ ಪರಿಣಾಮ 40 ಮಂದಿ ಸೈನಿಕರು ವೀರ ಮರಣವನ್ನು ಅಪ್ಪಿದ್ದರು. ಆ ಬಳಿಕ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧದ ವಾತಾವರಣವೇ ಏರ್ಪಟ್ಟಿತ್ತು. ಬಳಿಕ ಭಾರತೀಯ ವಾಯುಸೇನೆ ಪಾಕ್ ಗಡಿಯೊಳಗೆ ನುಗಿ ಉಗ್ರರ ತಾಣಗಳ ಮೇಲೆ ಬಾಂಬ್ ದಾಳಿ ನಡೆಸಿತ್ತು. ಇದನ್ನೂ ಓದಿ: ರಾತ್ರಿ ವಿಮಾನಗಳು ಹಾರಾಡುತ್ತಿದ್ದು, ಶಬ್ಧ ಕೇಳಿ ಭಯದಲ್ಲಿ ನಿದ್ದೆ ಬಂದಿಲ್ಲ- ಪ್ರತ್ಯಕ್ಷದರ್ಶಿ

  • ಸಿಆರ್ ಪಿಎಫ್ ವಾಹನಕ್ಕೆ ಗುದ್ದಿ ಕಾರು ಸ್ಫೋಟ!

    ಸಿಆರ್ ಪಿಎಫ್ ವಾಹನಕ್ಕೆ ಗುದ್ದಿ ಕಾರು ಸ್ಫೋಟ!

    ಶ್ರೀನಗರ: ಪುಲ್ವಾಮಾ ಮಾದರಿಯಲ್ಲಿ ಸಿಆರ್‍ಪಿಎಫ್ ವಾಹನಕ್ಕೆ ಕಾರು ಬಂದು ಡಿಕ್ಕಿ ಹೊಡೆದಿದೆ. ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿ ಬನಿಹಾಲ್ ನಲ್ಲಿ ಈ ದಾಳಿ ನಡೆದಿದೆ.

    ಸಿಆರ್‍ಪಿಎಫ್ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಬಳಿಕ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ ಎಂಬ ಮಾಹಿತಿಗಳು ಲಭ್ಯವಾಗಿದೆ. ಸ್ಫೋಟದ ತೀವ್ರತೆಗೆ ಕಾರು ಸಂಪೂರ್ಣ ಧ್ವಂಸಗೊಂಡಿದೆ. ಇನ್ನು ಸಿಆರ್‍ಪಿಎಫ್ ವಾಹನದಲ್ಲಿ ನಮ್ಮ ಸೈನಿಕರು ಇದ್ರಾ ಎಂಬುದರ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ.

    ಮೇಲ್ನೋಟಕ್ಕೆ ಇದು ಭಯತ್ಪೋದಾನಾ ದಾಳಿಯ ರೀತಿಯಲ್ಲಿ ಕಾಣಿಸುತ್ತಿಲ್ಲ. ಕಾರಿನಲ್ಲಿದ್ದ ಸಿಲಿಂಡರ್ ಸ್ಫೋಟದಿಂದ ಈ ಅವಘಡ ಸಂಭವಿಸಿದೆ. ಸ್ಫೋಟದ ಸ್ಥಳದಿಂದ ಸಿಆರ್ ಪಿಎಫ್ ವಾಹನ ತುಂಬಾ ದೂರದಲ್ಲಿ ನಿಂತಿತ್ತು ಎಂಬ ಮಾತುಗಳು ಕೇಳಿ ಬರುತ್ತಿದೆ.

    ಫೆ.14ರಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕ್ ಮೂಲದ ಜೈಷ್-ಇ-ಮೊಹಮ್ಮದ್ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಸಿಆರ್‍ಪಿಎಫ್‍ನ 40 ಯೋಧರು ಹುತಾತ್ಮರಾಗಿದ್ದರು.

  • ಮತಕ್ಕಾಗಿ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಹತ್ಯೆ: ರಾಮ್ ಗೋಪಾಲ್ ಯಾದವ್

    ಮತಕ್ಕಾಗಿ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಹತ್ಯೆ: ರಾಮ್ ಗೋಪಾಲ್ ಯಾದವ್

    ಲಕ್ನೋ: ಜಮ್ಮು-ಕಾಶ್ಮೀರದ ಪುಲ್ವಾಮಾ ದಾಳಿಯ ವಿಚಾರವಾಗಿ ಸಮಾಜವಾದಿ ಪಕ್ಷದ ಮುಖಂಡ, ರಾಜ್ಯಸಭಾ ಸದಸ್ಯ ರಾಮ್ ಗೋಪಾಲ್ ಯಾದವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಕೇಂದ್ರ ಸರ್ಕಾರವು ಮತಕ್ಕಾಗಿ ಯೋಧರನ್ನು ಬಲಿ ತೆಗೆದುಕೊಂಡಿದೆ. ಹೀಗಾಗಿ ಅರೇ ಸೇನಾಪಡೆಗಳು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿವೆ ಎಂದ ಅವರು, ಜಮ್ಮು ಮತ್ತು ಶ್ರೀನಗರ ಮಧ್ಯೆ ಯಾವುದೇ ತಪಾಸಣೆ ನಡೆಯಲಿಲ್ಲ. ಜೊತೆಗೆ ಯೋಧರು ಸಾಮಾನ್ಯ ಬಸ್ಸಿನಲ್ಲೇ ಪ್ರಯಾಣಿಸುತ್ತಿದ್ದರು ಎಂದು ರಾಮ್ ಗೋಪಾಲ್ ಯಾದವ್ ಆರೋಪಿಸಿದ್ದಾರೆ.

    ಪುಲ್ವಾಮಾ ದಾಳಿಯಲ್ಲಿ ಪಿತೂರಿ ನಡೆದಿದೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದರೆ ತನಿಖೆಗೆ ನೀಡಲು ಸಾಧ್ಯವಾಗುತ್ತದೆ. ತನಿಖೆಯ ಬಳಿಕ ದೊಡ್ಡ ದೊಡ್ಡ ವ್ಯಕ್ತಿಗಳ ಹೆಸರು ಹೊರಬೀಳುತ್ತವೆ ಎಂದು ಹೇಳಿದ್ದಾರೆ.

    ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಅವರು ಇದೇ ತಿಂಗಳು ಕೂಡ ಇಂತಹದ್ದೇ ವಿವಾದಾತ್ಮಕ ಹೇಳಿಕೆ ನೀಡಿ ದೇಶದ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನಡುವೆ ಮ್ಯಾಚ್ ಫಿಕ್ಸಿಂಗ್ ಆಗಿದೆ. ಹೀಗಾಗಿ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ದಾಳಿ ನಡೆದಿದೆ ಎಂದು ಬಿ.ಕೆ.ಪ್ರಕಾಶ್ ಹೇಳಿದ್ದರು.

    ಜಮ್ಮು-ಕಾಶ್ಮೀರ ಪುಲ್ವಾಮಾದಲ್ಲಿ ಫೆಬ್ರವರಿ 14ರಂದು ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರ ಅದಿಲ್ ಅಹ್ಮದ್ ದಾರ್ ಸ್ಫೋಟಕ ತುಂಬಿದ್ದ ತನ್ನ ಇಕೋ ಕಾರನ್ನು ಸಿಆರ್‌ಪಿಎಫ್ ಯೋಧರ ಬಸ್ಸಿಗೆ ಗುದ್ದಿದ್ದ. ಪರಿಣಾಮ 40 ಯೋಧರು ಹುತಾತ್ಮರಾಗಿದ್ದರು. ದಾಳಿಗೆ ಪ್ರತ್ಯುತ್ತರ ನೀಡಿದ ಭಾರತೀಯ ವಾಯು ಪಡೆಯು ಪಾಕಿಸ್ತಾನದ ಉಗ್ರರ ಮೂರು ನೆಲೆಗಳ ಮೇಲೆ ದಾಳಿ ಮಾಡಿತ್ತು.

  • 2019ರ 70 ದಿನಗಳಲ್ಲಿ 44 ಉಗ್ರರ ಹತ್ಯೆ – ಪುಲ್ವಾಮಾ ದಾಳಿ ಬಳಿಕ 18 ಪಾಪಿಗಳ ಚೆಂಡಾಡಿದ ಸೇನೆ

    2019ರ 70 ದಿನಗಳಲ್ಲಿ 44 ಉಗ್ರರ ಹತ್ಯೆ – ಪುಲ್ವಾಮಾ ದಾಳಿ ಬಳಿಕ 18 ಪಾಪಿಗಳ ಚೆಂಡಾಡಿದ ಸೇನೆ

    ನವದೆಹಲಿ: ಭಾರತೀಯ ಸೇನೆ ಈ ವರ್ಷದಿಂದ ಆರಂಭಗೊಂಡು ಇಂದಿನವರೆಗಿನ(ಮಾರ್ಚ್ 11) 70 ದಿನಗಳಲ್ಲಿ ಇದುವರೆಗೂ 44 ಉಗ್ರರನ್ನು ಹತ್ಯೆ ಮಾಡಿದೆ.

    ಈ ಬಗ್ಗೆ ಜಮ್ಮು ಕಾಶ್ಮೀರದಲ್ಲಿ ಸಿಆರ್‍ಪಿಎಫ್, ಪೊಲೀಸರು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ದಕ್ಷಿಣ ಕಾಶ್ಮೀರದ ಥ್ರಾಲ್ ಪ್ರದೇಶದಲ್ಲಿ ಹೆಚ್ಚಿನ ಕಾರ್ಯಾಚರಣೆ ನಡೆಸಲಾಗಿದೆ.

    ಪುಲ್ವಾಮಾ ದಾಳಿಯ ಬಳಿಕ ಜಮ್ಮು ಕಾಶ್ಮೀರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 18 ಉಗ್ರರು ಬಲಿಯಾಗಿದ್ದು, ಇದರಲ್ಲಿ 6 ಮಂದಿ ಪಾಕಿಸ್ತಾನದ ಮೂಲದವರು ಎನ್ನುವುದು ಖಚಿತವಾಗಿದೆ. ಪ್ರಮುಖವಾಗಿ ಜೈಷ್-ಇ-ಮೊಹಮ್ಮದ್ ಸಂಘಟನೆಯ ಮದಾಸೀರ್ ಅಹ್ಮದ್ ಖಾನ್ ಅಲಿಯಾಸ್ ಮೋದ್ ಭಾಯ್ ಕೂಡ ಎನ್‍ಕೌಂಟರ್‍ನಲ್ಲಿ ಬಲಿಯಾಗುವ ಕುರಿತು ಕಾಶ್ಮೀರದ ಐಜಿ ಎಸ್‍ಪಿ ಪಾಣಿ ಖಚಿತ ಪಡಿಸಿದ್ದಾರೆ.

    ದಕ್ಷಿಣ ಕಾಶ್ಮೀರದ ಥ್ರಾಲ್ ನಲ್ಲಿ ನಡೆದ ಎನ್‍ಕೌಂಟರ್ ನಲ್ಲಿ ಸಾವನ್ನಪ್ಪಿದ್ದಾನೆ. ಉಗ್ರರ ವಿರುದ್ಧ ಸರ್ಚ್ ಕಾರ್ಯಾಚರಣೆ ನಡೆಸುವ ವೇಳೆ ಯೋಧರ ವಿರುದ್ಧವೇ ದಾಳಿ ನಡೆಸಿದ್ದರು. ಪ್ರತಿ ದಾಳಿ ನಡೆದ ವೇಳೆ ಮೋದ್ ನೊಂದಿಗೆ ಮತ್ತಿಬ್ಬರು ಸಾವನ್ನಪ್ಪಿದ್ದಾರೆ.

    ಸೇನಾ ಮೂಲಗಳಿಂದ ಲಭಿಸಿದ ಮಾಹಿತಿ ಅನ್ವಯ ಸೇನೆಯ ಕಾರ್ಯಾಚರಣೆಯಲ್ಲಿ ಸತ್ತ ಉಗ್ರರಲ್ಲಿ ಬಹುತೇಕರು ಜೈಷ್ ಇ ಮೊಹಮ್ಮದ್ ಸಂಘಟನೆಗೆ ಸೇರಿದವರಾಗಿದ್ದಾರೆ. ಗಡಿ ನಿಯಂತ್ರಣ ರೇಖೆಯ ಬಳಿ 2018 ರಲ್ಲಿ ನಡೆದ ಕಾರ್ಯಾಚರಣೆಯಲ್ಲಿ 1,629 ಮಂದಿ ಉಗ್ರರನ್ನು ಸೇನೆ ಹತ್ಯೆ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕಾರಿನ ‘ಕೀ’ ಯಿಂದ ಪುಲ್ವಾಮಾ ತನಿಖೆ ಓಪನ್! – ಕೀ ಪತ್ತೆಯಾದ ರೋಚಕ ಕಥೆ ಓದಿ

    ಕಾರಿನ ‘ಕೀ’ ಯಿಂದ ಪುಲ್ವಾಮಾ ತನಿಖೆ ಓಪನ್! – ಕೀ ಪತ್ತೆಯಾದ ರೋಚಕ ಕಥೆ ಓದಿ

    – ಕೃತ್ಯ ನಡೆಯುವ 10 ದಿನದ ಮೊದಲು ಕಾರು ಖರೀದಿ
    – ಕೀ, ಚಾಸಿ ನಂಬರಿನಿಂದ ಮಾಲೀಕ ಪತ್ತೆ
    – 7 ಜನರಿಗೆ ಮಾರಾಟವಾಗಿ ಉಗ್ರನ ಕೈ ಸೇರಿತ್ತು ಕಾರು

    ನವದೆಹಲಿ: ಪುಲ್ವಾಮಾದಲ್ಲಿ ಸಿಆರ್‌ಪಿಫ್ ಯೋಧರಿದ್ದ ಬಸ್ಸಿಗೆ ಗುದ್ದಿದ ಕಾರು ಯಾವುದು ಮತ್ತು ಆ ಕಾರಿನ ಮಾಲೀಕ ಯಾರು ಎನ್ನುವ ತನಿಖೆ ಒಂದು ‘ಕೀ’ ಯಿಂದ ಆರಂಭವಾಗಿದೆ.

    ಹೌದು. ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಅಧಿಕಾರಿಗಳು ಸ್ಫೋಟಗೊಂಡ ಸ್ಥಳದಲ್ಲಿ ಸಿಕ್ಕಿದ ಒಂದು ‘ಕೀ’ ಇಟ್ಟುಕೊಂಡು ಕೃತ್ಯಕ್ಕೆ ಬಳಸಿದ ಕಾರು ಯಾವುದು ಮತ್ತು ಕಾರಿನ ಮಾಲೀಕ ಯಾರು ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ಕೀ ಸಿಕ್ಕಿದ್ದು ಹೇಗೆ?
    ಫೆ.14 ರಂದು ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಲೇಥ್‍ಪುರಕ್ಕೆ ಕೃತ್ಯ ನಡೆದ ಕೆಲವೇ ಗಂಟೆಯಲ್ಲಿ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಮತ್ತು ಅಟೋಮೊಬೈಲ್ ತಜ್ಞರು ಸ್ಥಳಕ್ಕೆ ಆಗಮಿಸಿದ್ದಾರೆ. ಸ್ಫೋಟದ ರಭಸಕ್ಕೆ ಸಿಆರ್‌ಪಿಫ್ ಬಸ್ ಸಂಪೂರ್ಣವಾಗಿ ಮುದ್ದೆಯಾಗಿ ಬಿದ್ದಿದ್ದರೆ ಕೃತ್ಯಕ್ಕೆ ಬಳಸಿದ ಕಾರು ಸಂಪೂರ್ಣವಾಗಿ ನಾಶವಾಗಿತ್ತು. ಭಾಗಗಳು ಎಲ್ಲೆಂದರಲ್ಲಿ ಬಿದ್ದಿತ್ತು. ಹೀಗಾಗಿ ತನಿಖೆಯ ಆರಂಭದ ದಿನದಲ್ಲಿ ಕಾರಿನ ಭಾಗಗಳನ್ನು ಪತ್ತೆ ಹಚ್ಚುವುದೇ ದೊಡ್ಡ ಸವಾಲಾಗಿತ್ತು. ಕೊನೆಗೆ ಕಾರಿನ ಬಂಪರ್ ಮತ್ತು ನಂಬರ್ ಇರುವ ಶಾಕ್ ಅಬ್ಸರ್ಬರ್ ಸಿಕ್ಕಿದೆ. ಇದರ ಜೊತೆಯಲ್ಲಿ 25 ಲೀಟರಿನ ಕ್ಯಾನ್ ಸಿಕ್ಕಿದೆ. ತನಿಖಾಧಿಕಾರಿಗಳು ಈ ಕ್ಯಾನಿನಲ್ಲಿ 30 ಕೆಜಿ ಆರ್ ಡಿಎಕ್ಸ್ ಇಟ್ಟಿರಬಹುದು ಎಂದು ಶಂಕಿಸಿದ್ದಾರೆ.

    ಸಿಕ್ಕಿದ ಭಾಗಗಳನ್ನು ಚೆಕ್ ಮಾಡಿದಾಗ ಕೊನೆಗೆ ಕೃತ್ಯಕ್ಕೆ ಬಳಸಿದ್ದು ಮಾರುತಿ ಕಂಪನಿಯ ಕಾರು ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ನಂತರ ಎನ್‍ಐಎ ಅಧಿಕಾರಿಗಳು ಮಾರುತಿ ಎಂಜಿನಿಯರ್ ಗಳನ್ನು ಸ್ಥಳಕ್ಕೆ ಕರೆಸಿಕೊಂಡು ಮಾಹಿತಿ ಕಲೆ ಹಾಕಿದ್ದಾರೆ. ಸಿಕ್ಕಿದ ಭಾಗಗಳ ಮಾಹಿತಿಯನ್ನು ಕಲೆ ಹಾಕಿದಾಗ ಕಾರು 2011ರಲ್ಲಿ ಉತ್ಪಾದನೆಯಾಗಿದೆ ಎನ್ನುವ ವಿಚಾರ ಬೆಳಕಿಗೆ ಬರುತ್ತದೆ.

    2011ರಲ್ಲಿ ಉತ್ಪಾದನೆಯಾದ ಕಾರಿನ ಮಾಲೀಕರನ್ನು ಪತ್ತೆ ಹಚ್ಚುವುದು ಹೇಗೆ? ಇದು ಬಹಳ ದೀರ್ಘ ಕೆಲಸ. ತನಿಖೆಗೆ ಬಹಳ ದಿನಗಳು ನಡೆಯಬಹುದು ಎನ್ನುವುದನ್ನು ಅರಿತ ಎನ್‍ಐಎ ತಂಡ ಏನು ಮಾಡಬೇಕು ಎಂದು ಯೋಚಿಸುತ್ತಿದ್ದಾಗ ಹೊಳೆದಿದ್ದೆ ಮೆಟಲ್ ಡಿಟೆಕ್ಟರ್ ಸಾಧನ. ಸ್ಫೋಟದ ತೀವ್ರತೆಗೆ ಸೈನಿಕರ ದೇಹದ ಭಾಗಗಳೇ ಸುಮಾರು 100 ಮೀಟರ್ ದೂರಕ್ಕೆ ಚಿಮ್ಮಿತ್ತು. ಹೀಗಾಗಿ ಕಾರಿನ ಭಾಗಗಳು ಹಲವು ಕಡೆ ಚಿಮ್ಮಿರಬಹುದು ಎನ್ನುವ ಬಲವಾದ ನಂಬಿಕೆಯೊಂದಿಗೆ ಎನ್‍ಐಎ ಮೆಟಲ್ ಡಿಟೆಕ್ಟರ್ ಮೊರೆ ಹೋಯ್ತು.

    ಮೆಟಲ್ ಡಿಟೆಕ್ಟರ್ ತಂದು 200 ಮೀಟರ್ ವ್ಯಾಪ್ತಿಯಲ್ಲಿ ಸ್ಕ್ಯಾನ್ ಮಾಡಲು ಮುಂದಾದಾಗ ಕಾರಿನ ಕೀ ಸಿಕ್ಕಿತು. ಇದಾದ ಬಳಿಕ ಕಾರಿನ ಚಾಸಿ ಪತ್ತೆಯಾಯಿತು. ಯಾವುದೇ ಚಾಸಿಯಲ್ಲಿ 19 ಸಂಖ್ಯೆಗಳು ಇರುತ್ತದೆ. ಈ ಚಾಸಿ ನಂಬರ್ ಮೂಲಕ ವೆಹಿಕಲ್ ಐಡಿಂಟಿಫಿಕೇಶನ್ ನಂಬರ್(ವಿಪಿಎನ್) ಪತ್ತೆ ಮಾಡಬಹುದು. ವಿಪಿಎನ್ 19 ಅಕ್ಷರಗಳಿಂದ ಕೂಡಿದ್ದು ಎಲ್ಲಾ ಕಾರುಗಳಿಗೆ ವಿಶಿಷ್ಟವಾಗಿ ನೀಡಲಾಗುತ್ತದೆ. ಈ ಎಲ್ಲ ಮಾಹಿತಿಗಳನ್ನು ಒಂದಕ್ಕೊಂದು ತಾಳೆ ಹಾಕಿದಾಗ ಈ ಕೃತ್ಯಕ್ಕೆ ಬಳಕೆ ಮಾಡಿದ್ದು ಇಕೋ ಕಾರು ಎನ್ನುವುದು ಖಚಿತವಾಗಿದೆ.

    ಕಾರು ಪತ್ತೆಯಾದ ನಂತರ ಮಾಲೀಕನನ್ನು ಪತ್ತೆ ಹಚ್ಚಲು ಎನ್‍ಐಎ ಮತ್ತಷ್ಟು ಶ್ರಮ ಪಟ್ಟಿದೆ. ಕಾರು ಎಲ್ಲಿಂದ ಮಾರಾಟವಾಗಿ ಇದರ ಮೊದಲ ಮಾಲೀಕರ ಮಾಹಿತಿಯನ್ನು ಕಲೆ ಹಾಕಿದಾಗ 2011 ರಲ್ಲಿ ಅನಂತ್‍ನಾಗ್‍ನಿಂದ ಜಲೀಲ್ ಅಹ್ಮದ್ ಹಕ್ಕಾನಿ ಅವರು ಈ ಕಾರನ್ನು ಮೊದಲು ಖರೀದಿಸಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ವಿಳಾಸದ ಆಧಾರದಲ್ಲಿ ಅವರನ್ನು ವಿಚಾರಿಸಿದಾಗ ನಾನು ಕಾರನ್ನು ಮಾರಾಟ ಮಾಡಿದ್ದೇನೆ ಎಂದು ಹೇಳಿದ್ದಾರೆ. ಬಳಿಕ ಈ ಕಾರು 7 ಜನರಿಗೆ ಮಾರಾಟವಾಗಿ ಕೊನೆಯ ಬಾರಿ ಈ ವರ್ಷದ ಫೆ.4 ರಂದು ಅನಂತ್‍ನಾಗ್ ಜಿಲ್ಲೆಯ ಮುಕ್ಬುಲ್ ಬಟ್ ಮಗ ಸಜ್ಜದ್ ಬಟ್ ಖರೀದಿಸಿದ್ದ ವಿಚಾರ ಬೆಳಕಿಗೆ ಬರುತ್ತದೆ.

    ಈ ಮಾಹಿತಿ ಸಿಕ್ಕಿದ ಕೂಡಲೇ ಎನ್‍ಐಎ ತಂಡ ಜಮ್ಮು ಕಾಶ್ಮೀರ  ಪೊಲೀಸರ ಸಹಾಯದಿಂದ ಅನಂತ್‍ನಾಗ್ ಜಿಲ್ಲೆಯ ಬಿಜ್‍ಬೆಹ್ರಾಕ್ಕೆ ತೆರಳಿ ಸಜ್ಜದ್ ಬಟ್‍ಗಾಗಿ ಶೋಧಿಸಿದೆ. ಈ ವೇಳೆ ಆತ ನಾಪತ್ತೆಯಾಗಿದ್ದ. ಅಲ್ಲಿಗೆ ಈ ಉಗ್ರರಿಗೆ ಈ ಕಾರು ಸೇರಿದ್ದು ಎನ್ನುವುದು ಖಚಿತವಾಗುತ್ತದೆ. ಶೋಪಿಯನ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿರುವ ಸಜ್ಜದ್ ಸದ್ಯಕ್ಕೆ ಜೈಷ್-ಇ-ಮೊಹಮ್ಮದ್ ಸಂಘಟನೆಯ ಸೇರಿದ್ದಾನೆ. ಸಜ್ಜದ್ ಕೈಯಲ್ಲಿ ಬಂದೂಕು ಹಿಡಿದಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕೃತ್ಯ ನಡೆಸಲೆಂದೇ 10 ದಿನದ ಹಿಂದೆ ಕಾರನ್ನು ಉಗ್ರರು ಖರೀದಿಸಿದ್ದಾರೆ ಎನ್ನುವ ಬಲವಾದ ಶಂಕೆಯನ್ನು ಎನ್‍ಐಎ ಹೊಂದಿದೆ.

     

    ಫೆ.24 ರಂದು ಉಗ್ರ ಆದಿಲ್ ದಾರ್ ಸ್ಫೋಟಕ ತುಂಬಿದ ಮಾರುತಿ ಇಕೋ ಕಾರನ್ನು ಸಿಆರ್ ಪಿಎಫ್ ಯೋಧರಿದ್ದ ಬಸ್ಸಿಗೆ ಗುದ್ದಿದ ಪರಿಣಾಮ 40 ಮಂದಿ ಯೋಧರು ಹುತಾತ್ಮರಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾನ್ವಾಯ್ ರೂಲ್ಸ್ ಚೇಂಜ್ – ಇನ್ನು ಮುಂದೆ ವಾಯುಮಾರ್ಗದಲ್ಲಿ ತೆರಳಲಿದ್ದಾರೆ ಸೈನಿಕರು

    ಕಾನ್ವಾಯ್ ರೂಲ್ಸ್ ಚೇಂಜ್ – ಇನ್ನು ಮುಂದೆ ವಾಯುಮಾರ್ಗದಲ್ಲಿ ತೆರಳಲಿದ್ದಾರೆ ಸೈನಿಕರು

    ನವದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮಾ ಭಯೋತ್ಪಾದಕ ದಾಳಿಯ ಬಳಿಕ ಎಚ್ಚೆತ್ತಿರುವ ಕೇಂದ್ರ ಸರ್ಕಾರ ಕೇಂದ್ರ ಸೇನಾ ಪಡೆಗಳ ಕಾನ್ವಾಯ್ ನಿಯಮವನ್ನು ಬದಲಾವಣೆ ಮಾಡಿ ಆದೇಶ ನೀಡಿದೆ.

    ಕೇಂದ್ರೀಯ ಶಸಸ್ತ್ರ ಪಡೆ(ಸಿಎಪಿಎಫ್), ಕೇಂದ್ರಿಯ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್), ರಾಷ್ಟ್ರೀಯ ಭದ್ರತಾ ಪಡೆ(ಎನ್‍ಎಸ್‍ಜಿ) ಯೋಧರ ಕಾನ್ವಾಯ್ ನಿಯಮಗಳಲ್ಲಿ ಬದಲಾವಣೆ ಮಾಡಿದ್ದು, ದೆಹಲಿಯಿಂದ ಶ್ರೀನಗರ, ಶ್ರೀನಗರದಿಂದ ದೆಹಲಿ, ಜಮ್ಮುವಿನಿಂದ ಶ್ರೀನಗರ, ಶ್ರೀನಗರದಿಂದ ದೆಹಲಿಗೆ ತೆರಳುವ ಮಾರ್ಗದಲ್ಲಿ ಸೈನಿಕರನ್ನು ಕರೆದ್ಯೊಯಲು ರಸ್ತೆ ಮಾರ್ಗದ ಬದಲು ವಾಯುಮಾರ್ಗ ಬಳಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

    ಸರ್ಕಾರ ನಿರ್ಧಾರ ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಈ ತೀರ್ಮಾನದಿಂದ ಸುಮಾರು 7.80 ಲಕ್ಷ ಸಿಬ್ಬಂದಿ ಪ್ರಯೋಜನ ಪಡೆಯಲಿದ್ದಾರೆ. ಈ ಕುರಿತು ಗೃಹ ಸಚಿವಾಲಯದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಮಾಹಿತಿ ನೀಡಿದೆ.

    ಈ ಹಿಂದೆ ವಾಯುಮಾರ್ಗ ಬಳಸಲು ಹಿರಿಯ ಅಧಿಕಾರಿಗಳಿಗೆ ಸಿಮೀತವಾಗಿತ್ತು. ಸದ್ಯ ಹಿರಿಯ ಪೇದೆ, ಪೇದೆ, ಎಎಸ್‍ಐ ಎಲ್ಲಾ ಅಧಿಕಾರಿಗಳು ಕೂಡ ಸೇವೆಯನ್ನು ಪಡೆಯಬಹುದಾಗಿದೆ ಎಂದು ಕೇಂದ್ರ ಸಚಿವ ರಾಜ್‍ನಾಥ್ ಸಿಂಗ್ ಹೇಳಿದ್ದಾರೆ. ಇದು ಸೈನಿಕರ ಪ್ರಯಾಣ, ರಜೆ ಅವಧಿಯ ಪ್ರಯಾಣ ಅವಧಿಯಲ್ಲಿ ಸೈನಿಕರು ಸೇವೆಯಿಂದ ಮನೆಗೆ ತೆರಳುವ ವೇಳೆ ಸೌಲಭ್ಯ ಲಭ್ಯವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv