Tag: CRPF

  • ಹಿಮಪಾತದ ಮಧ್ಯೆ ಕರ್ತವ್ಯ ಸಲ್ಲಿಸುತ್ತಿರುವ ಯೋಧನಿಗೊಂದು ಸಲಾಂ

    ಹಿಮಪಾತದ ಮಧ್ಯೆ ಕರ್ತವ್ಯ ಸಲ್ಲಿಸುತ್ತಿರುವ ಯೋಧನಿಗೊಂದು ಸಲಾಂ

    ಶ್ರೀನಗರ: ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗುತ್ತಿದೆ. ಈ ನಡುವೆ ಸಿಆರ್‌ಪಿಎಫ್ ಯೋಧರೊಬ್ಬರು ಕರ್ತವ್ಯ ಸಲ್ಲಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ಫೋಟೋ ನೋಡಿದವರು ಆ ಚಳಿಯಲ್ಲೂ ಎದೆಗುಂದದೆ ಕರ್ತವ್ಯ ಸಲ್ಲಿಸುತ್ತಿರುವ ಯೋಧನಿಗೆ ಸಲಾಂ ಎಂದಿದ್ದಾರೆ.

    ಸಿಆರ್‌ಪಿಎಫ್ ಸಹಾಯಕ ಕಮಾಂಡೆಂಟ್ ಕಶ್ಯಪ್ ಕಡಗತ್ತೂರ್ ಅವರು ಈ ಫೋಟೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದರು. ಫೋಟೋದಲ್ಲಿ ಸಿಆರ್‌ಪಿಎಫ್ ಕಾನ್‍ಸ್ಟೇಬಲ್ ಐಜಾಝ್ ಅವರು ತಮ್ಮ ಸೇನೆಯ ಸಮವಸ್ತ್ರದ ಮೇಲೆ ಹಳದಿ ಬಣ್ಣ ಕೋಟ್ ಹಾಕಿ ನಿಂತಿದ್ದಾರೆ. ಅವರ ಸುತ್ತ ಭಾರೀ ಪ್ರಮಾಣದಲ್ಲಿ ಹಿಮ ಬಿದ್ದಿರುವುದನ್ನು ಕೂಡ ಫೋಟೋದಲ್ಲಿ ಕಾಣಬಹುದಾಗಿದೆ.

    ಇವರು ಬ್ಯಾಟ್‍ಮ್ಯಾನ್ ಅಲ್ಲ. ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಆರ್‌ಪಿಎಫ್ ಕಾನ್‍ಸ್ಟೇಬಲ್ ಐಜಾಝ್. ಭಾರೀ ಪ್ರಮಾಣದಲ್ಲಿ ಹಿಮಪಾತವಾಗುತ್ತಿದ್ದರೂ ಧೈರ್ಯದಿಂದ ಕರ್ತವ್ಯ ಸಲ್ಲಿಸುತ್ತಿರುವ ಯೋಧ. ವೃತ್ತಿಪರತೆಗೆ ಮತ್ತೊಂದು ಹೆಸರೇ ಸಿಆರ್‌ಪಿಎಫ್ ಎಂದು ಬರೆದು ಹೆಮ್ಮೆಯಿಂದ ಯೋಧನ ಫೋಟೋವನ್ನು ಕಶ್ಯಪ್ ಕಡಗತ್ತೂರ್ ಶೇರ್ ಮಾಡಿಕೊಂಡಿದ್ದಾರೆ.

    ಈ ಫೋಟೋ ಸದ್ಯ ಎಲ್ಲೆಡೆ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಯೋಧನ ಕಾರ್ಯಕ್ಕೆ ಸಲಾಂ ಎಂದಿದ್ದಾರೆ. ಕೆಲವರು ಬ್ಯಾಟ್‍ಮ್ಯಾನ್ ಇದ್ದಾನೋ ಇಲ್ಲವೋ ಗೊತ್ತಿಲ್ಲ. ಆದರೆ ನಮಗೆ ನಮ್ಮ ಯೋಧರೆ ಸೂಪರ್‍ಹೀರೋ. ಕಷ್ಟಕರ ಪ್ರದೇಶದಲ್ಲಿ ಶಿಸ್ತಿನಿಂದ ನಮ್ಮ ಸಿಆರ್‌ಪಿಎಫ್ ಯೋಧರು ಕರ್ತವ್ಯ ಸಲ್ಲಿಸುತ್ತಿದ್ದಾರೆ. ಅವರಿಗೊಂದು ಸಲಾಂ ಎಂದು ಟ್ವೀಟ್ ಮಾಡಿ ಯೋಧರಿಗೆ ಗೌರವ ಸಲ್ಲಿಸಿದ್ದಾರೆ.

  • CRPF ಯೋಧರನ್ನು ಗುರಿಯಾಗಿಸಿ ಪುಲ್ವಾಮಾದಲ್ಲಿ ಮತ್ತೆ ಉಗ್ರರ ದಾಳಿ

    CRPF ಯೋಧರನ್ನು ಗುರಿಯಾಗಿಸಿ ಪುಲ್ವಾಮಾದಲ್ಲಿ ಮತ್ತೆ ಉಗ್ರರ ದಾಳಿ

    ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್‌ಪಿಎಫ್‌ ಯೋಧರನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದ್ದಾರೆ.

    ಪುಲ್ವಾಮಾದ ಡ್ರಾಬ್‍ಗ್ರಮ್ ಪ್ರದೆಶದಲ್ಲಿ 10ನೇ ತರಗತಿಯ ಬೋರ್ಡ್ ಪರೀಕ್ಷೆ ನಡೆಯುತ್ತಿದ್ದ ವೇಳೆ ಉಗ್ರರರು ದಾಳಿ ನಡೆಸಿದ್ದಾರೆ. ಪರೀಕ್ಷೆಗೆ ತೊಂದರೆಯಾಗದಂತೆ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಸಿಆರ್‌ಪಿಎಫ್‌ ಯೋಧರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ.

    ಉಗ್ರರ ನಡುವಿನ ಈ ಗುಂಡಿನ ಚಕಮಕಿಯಲ್ಲಿ ಭಾರತೀಯ ಯೋಧರಿಗೆ ಯಾವುದೇ ಪ್ರಾಣಹಾನಿಯಾಗಿಲ್ಲ ಎಂಬ ಮಾಹಿತಿ ಲಭಿಸಿದ್ದು, ಉಗ್ರ ದಾಳಿಗೆ ಯೋಧರು ಪ್ರತಿದಾಳಿ ನಡೆಸಿದ್ದಾರೆ. ಉಗ್ರರು ಸುಮಾರು 6 ರಿಂದ 7 ಸುತ್ತು ಗುಂಡು ಹರಿಸಿದ್ದರು ಎಂಬ ಮಾಹಿತಿ ಲಭಿಸಿದೆ. ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಹೆಚ್ಚಿನ ಸೇನೆಯನ್ನು ಕರೆಯಿಸಿಕೊಂಡಿರುವ ಪೊಲೀಸರು, ಪ್ರದೇಶವನ್ನು ಸುತ್ತುವರೆದು ಸರ್ಚ್ ಆಪರೇಷನ್ ನಡೆಸಿದ್ದಾರೆ. ಕಾರ್ಯಾಚರಣೆ ಮುಂದುವರಿಸಿದಿದೆ.

    ಯೂರೋಪ್‍ನ ಯೂನಿಯನ್ ಸಂಸದರ ತಂಡ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಸಮಯದಲ್ಲೇ ಉಗ್ರರು ದಾಳಿ ನಡೆಸಿದ್ದಾರೆ. ಆರ್ಟಿಕಲ್ 370 ರದ್ದು ಬಳಿಕ ಕಣಿವೆಯ ಪ್ರದೇಶದ ಸ್ಥಿತಿಗತಿ ಬಗ್ಗೆ ತಿಳಿಯಲು ಯುರೋಪಿಯನ್ ಯೂನಿಯನ್ ಸಂಸದರು ಭೇಟಿ ನೀಡಿದ್ದಾರೆ. ಜಮ್ಮು ಕಾಶ್ಮೀರದ ಸೆಪೋರ್ ಬಸ್ ನಿಲ್ದಾಣದಲ್ಲಿ ಸೋಮವಾರ ಗ್ರೇನೇಡ್ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 19ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

  • ಮಹಿಳಾ ಸಿಆರ್‌ಪಿಎಫ್‌ ಸಿಬ್ಬಂದಿಗೆ ಕಾಶ್ಮೀರದ ಬಾಲಕನ ಹ್ಯಾಂಡ್‍ಶೇಕ್ – ವೈರಲ್ ಫೋಟೋ

    ಮಹಿಳಾ ಸಿಆರ್‌ಪಿಎಫ್‌ ಸಿಬ್ಬಂದಿಗೆ ಕಾಶ್ಮೀರದ ಬಾಲಕನ ಹ್ಯಾಂಡ್‍ಶೇಕ್ – ವೈರಲ್ ಫೋಟೋ

    ಶ್ರೀನಗರ: ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ಹಿಂಪಡೆದಿರುವ ಕೇಂದ್ರ ಸರ್ಕಾರ ನಿರ್ಧಾರ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಭೀಗಿ ಭದ್ರತೆಯನ್ನು ಹೊಂದಿದ್ದ ಕಾಶ್ಮೀರ ಸಹಜ ಸ್ಥಿತಿಗೆ ಮರಳುತ್ತಿದೆ. ಇದರ ನಡುವೆ ಭದ್ರತೆಯಲ್ಲಿ ತೊಡಗಿದ್ದ ಮಹಿಳಾ ಸಿಆರ್‌ಪಿಎಫ್‌ ಸಿಬ್ಬಂದಿಗೆ ಕಾಶ್ಮೀರದ ಬಾಲಕ ಹ್ಯಾಂಡ್ ಶೇಕ್ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

    ಪ್ರಸಾರ ಭಾರತಿ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಫೋಟೋವನ್ನು ಟ್ವೀಟ್ ಮಾಡಲಿದ್ದು, ಫೋಟೋ ನೋಡಿದ ಹಲವು ಮಂದಿ ಯೋಧರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಸಿಆರ್‌ಪಿಎಫ್‌ ಯೋಧರು ಉತ್ತಮ ಕಾರ್ಯವನ್ನು ಮಾಡುತ್ತಿದ್ದು, ನಿಮ್ಮ ಕಾರ್ಯಕ್ಕೆ ಧನ್ಯವಾದ ಎಂದು ಹಲವರು ಮರು ಟ್ವೀಟ್ ಮಾಡುತ್ತಿದ್ದಾರೆ.

    ಇತ್ತ ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡುವ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶುಕ್ರವಾರ ಸಹಿ ಹಾಕಿದ್ದಾರೆ. ಅಕ್ಟೋಬರ್ 31 ರಿಂದ ಜಾರಿ ಆಗುವಂತೆ ಜಮ್ಮು ಕಾಶ್ಮೀರ, ಲಡಾಖ್ 2 ಕೇಂದ್ರಾಡಳಿತ ಪ್ರದೇಶಗಳಾಗಿ ಅಸ್ತಿತ್ವಕ್ಕೆ ಬರಲಿದೆ. ಲಡಾಖ್ ಚಂಡೀಗಢದಂತೆ ವಿಧಾನಸಭೆ ರಹಿತ ಕೇಂದ್ರಾಡಳಿತ ಪ್ರದೇಶವಾದರೆ, ಜಮ್ಮು ಕಾಶ್ಮೀರ ಶಾಸನೆ ಸಭೆಯನ್ನು ಹೊಂದಿರಲಿದೆ.

  • ಸೇನೆಯ ನಾಯಿಯಿಂದ ಭೂಕುಸಿತದ ಅವಶೇಷಗಳಲ್ಲಿ ಸಿಲುಕಿದ್ದ ವ್ಯಕ್ತಿ ಪಾರು

    ಸೇನೆಯ ನಾಯಿಯಿಂದ ಭೂಕುಸಿತದ ಅವಶೇಷಗಳಲ್ಲಿ ಸಿಲುಕಿದ್ದ ವ್ಯಕ್ತಿ ಪಾರು

    ಶ್ರೀನಗರ: ಭೂಕುಸಿತದ ಅವಶೇಷಗಳಲ್ಲಿ ಸಿಕ್ಕು ರಾತ್ರಿಯಿಡೀ ಸಾವು ಬದುಕಿನ ಮಧ್ಯೆ ಹೋರಾಡಿದ್ದ ವ್ಯಕ್ತಿ ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ಘಟನೆ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ನಡೆದಿದೆ.

    ಲುಧ್ವಾಲ್ ಗ್ರಾಮದ ಮೂಲದ ಪ್ರದೀಪ್ ಕುಮಾರ್ ಸಾವನ್ನು ಗೆದ್ದಿದ್ದಾರೆ. ಮಂಗಳವಾರ ರಾತ್ರಿಯೇ ಪ್ರದೀಪ್ ಕುಮಾರ್ ಭೂಕುಸಿತದ ಅವಶೇಷಗಳಲ್ಲಿ ಸಿಲುಕಿದ್ದರು. ಸಿಆರ್‌ಪಿಎಫ್‌ನ 72 ಬೆಟಾಲಿಯನ್ ತಂಡವು ಪ್ರದೀಪ್ ಕುಮಾರ್ ಅವರನ್ನು ಬುಧವಾರ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದೆ.

    ಮೆಹಾದ್ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದರಿಂದ ಮಂಗಳವಾರ ರಾತ್ರಿ ಭೂಕುಸಿತ ಉಂಟಾಗಿತ್ತು. ಈ ವೇಳೆ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಹೋಗುತ್ತಿದ್ದ ಪ್ರದೀಪ್ ಕುಮಾರ್ ಭೂಕುಸಿತದ ಅವಶೇಷಗಳಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಕತ್ತು ಹೊರತುಪಡಿಸಿದ ಪ್ರದೀಪ್ ಕುಮಾರ್ ಅವರ ಇಡೀ ದೇಹವು ಮಣ್ಣು ಹಾಗೂ ಕಲ್ಲಿನ ರಾಶಿಯಲ್ಲಿ ಸಿಕ್ಕಿಕೊಂಡಿತ್ತು. ರಾತ್ರಿ ಯಾರೂ ಸಹಾಯಕ್ಕೆ ಬಾರದೇ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರು.

    ಸಿಆರ್‌ಪಿಎಫ್‌ನ 72 ಬೆಟಾಲಿಯನ್ ತಂಡವು ಬುಧವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿತ್ತು. ಭೂಕುಸಿತ ಪ್ರದೇಶಕ್ಕೆ ಸಮೀಪವಿರುವ 147 ಮೈಲಿಗಲ್ಲು ತಲುಪಿದಾಗ, ಸಿಆರ್ ಪಿಎಫ್‍ನ ನಾಯಿ ಅಜಾಕ್ಸಿ ಭೂಕುಸಿತದ ಅವಶೇಷಗಳಲ್ಲಿ ಯಾರೋ ಸಿಕ್ಕಿಕೊಂಡಿದ್ದಾರೆ ಎನ್ನುವ ಸೂಚನೆ ನೀಡಿತ್ತು. ತಕ್ಷಣವೇ ಯೋಧರು ಶೋಧ ಕಾರ್ಯ ಆರಂಭಿಸಿ ಪ್ರದೀಪ್ ಅವರನ್ನು ಪತ್ತೆ ಹಚ್ಚಿ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ.

    ಪ್ರದೀಪ್ ಕುಮಾರ್ ಸುತ್ತಲಿನ ಮಣ್ಣು, ಕಲ್ಲುಗಳನ್ನು ಅಗೆದು ರಕ್ಷಣೆ ಮಾಡಿದ್ದಾರೆ. ಪ್ರದೀಪ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಿಆರ್ ಪಿಎಫ್‍ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

  • ಬಾಗಲಕೋಟೆಯ ಯೋಧ ಒಡಿಶಾದಲ್ಲಿ ನಿಧನ

    ಬಾಗಲಕೋಟೆಯ ಯೋಧ ಒಡಿಶಾದಲ್ಲಿ ನಿಧನ

    ಬಾಗಲಕೋಟೆ: ಅನಾರೋಗ್ಯದಿಂದ ಬಳಲುತ್ತಿದ್ದ ಬಾಗಲಕೋಟೆ ಜಿಲ್ಲೆಯ ಸಿಆರ್‌ಪಿಎಫ್ ಯೋಧರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಒಡಿಶಾದ ಮಿಲಿಟರಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾಗಿದ್ದಾರೆ.

    ರಂಗಪ್ಪ ಬಿಮಪ್ಪ ಬಡಿಗೇರ್ (39) ನಿಧನರಾದ ಯೋಧ. ರಂಗಪ್ಪ ಅವರು ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಹಿರೇಬೂದಿಹಾಳ ಗ್ರಾಮದವರಾಗಿದ್ದು, ಸಿಆರ್‌ಪಿಎಫ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

    ಯೋಧ ರಂಗಪ್ಪ ಅವರು ಕಳೆದ 19 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪ್ರಸ್ತುತ ಒಡಿಶಾದ 4ನೇ ಬಟಾಲಿಯನ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ರಂಗಪ್ಪ ಅವರನ್ನು ಒಡಿಶಾದ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು.

    ಆದರೆ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ರಂಗಪ್ಪ ನಿಧನರಾಗಿದ್ದಾರೆ. ರಂಗಪ್ಪ ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದು ಇಂದು ಅವರ ಅಂತ್ಯಸಂಸ್ಕಾರ ಹಿರೆಬೂದಿಹಾಳ ಗ್ರಾಮದಲ್ಲಿ ಸರ್ಕಾರಿ ಸಕಲ ಗೌರವದೊಂದಿಗೆ ನಡೆಯಲಿದೆ.

  • ನದಿಗೆ ಹಾರಿ ಸಿಆರ್‌ಪಿಎಫ್ ಯೋಧರಿಂದ ಬಾಲಕಿಯ ರಕ್ಷಣೆ: ವಿಡಿಯೋ

    ನದಿಗೆ ಹಾರಿ ಸಿಆರ್‌ಪಿಎಫ್ ಯೋಧರಿಂದ ಬಾಲಕಿಯ ರಕ್ಷಣೆ: ವಿಡಿಯೋ

    ಶ್ರೀನಗರ್: ನದಿಗೆ ಹಾರಿ ಸಿಆರ್‌ಪಿಎಫ್ ಯೋಧರು ಬಾಲಕಿಯನ್ನು ರಕ್ಷಿಸಿದ ಘಟನೆ ಇಂದು ಜಮ್ಮು- ಕಾಶ್ಮೀರದ ಟ್ಯಾಂಗ್‍ಮಾರ್ಗ್ ಪಟ್ಟಣದ ಬಾರಾಮುಲ್ಲಾದಲ್ಲಿ ನಡೆದಿದೆ.

    ಯೋಧರು ಬಾಲಕಿಯನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಾಲಕಿ ಕಿರುಚುತ್ತಿದ್ದ ಶಬ್ಧ ಕೇಳಿ ಐವರು ಯೋಧರು ಕಲ್ಲಿನ ಮೇಲೆ ಓಡಿ ಹೋಗುತ್ತಾ ನದಿಯತ್ತ ತೆರಳಿದ್ದಾರೆ. ಈ ವೇಳೆ ಯೋಧರು ಬಾಲಕಿ ನದಿಯಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿದ್ದಾರೆ.

    ಬಾಲಕಿ ನದಿಯಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ನೋಡಿದ ಸಿಆರ್‌ಪಿಎಫ್ ಯೋಧರಲ್ಲಿ ಇಬ್ಬರು ನದಿಗೆ ಹಾರಿ ಆಕೆಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಬಳಿಕ ಉಳಿದ ಯೋಧರು ಕೂಡ ನದಿಗೆ ಹಾರಿ ಮಾನವ ಸರಪಳಿಯನ್ನು ನಿರ್ಮಿಸಿದರು.

    ಯೋಧರು ಸಿಆರ್‌ಪಿಎಫ್ ನ 176ನೇ ಬೆಟಾಲಿಯನ್‍ಗೆ ಸೇರಿದ್ದು, ಕೊನೆಗೆ ಬಾಲಕಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ಯೋಧರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

  • ಹೃದಯಾಘಾತದಿಂದ ಬಾಗಲಕೋಟೆ ಯೋಧ ನಿಧನ

    ಹೃದಯಾಘಾತದಿಂದ ಬಾಗಲಕೋಟೆ ಯೋಧ ನಿಧನ

    ಬಾಗಲಕೋಟೆ: ಹೃದಯಾಘಾತದಿಂದ ಬಾಗಲಕೋಟೆ ಮೂಲದ ಯೋಧ ಬೆಂಗಳೂರಿನ ಯಲಹಂಕದಲ್ಲಿ ನಿಧನರಾಗಿದ್ದಾರೆ.

    ಗುರುರಾಜ್ ಬಡಿಗೇರ್(52) ನಿಧನರಾದ ಸಿಆರ್ ಪಿಎಫ್ ಯೋಧ. ಗುರುರಾಜ್ ಬಡಿಗೇರ್ ಅವರು ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಬಿಂಜವಾಡಗಿ ಗ್ರಾಮದವರಾಗಿದ್ದು, ಸಿಪ್ಟ್ ಬಟಾಲಿಯನ್ ನ್ಯೂದಿಲ್ಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

    ಗುರುರಾಜ್ ಕಳೆದ ಹದಿನೈದು ದಿನಗಳ ಹಿಂದೆ ಹೈದರಾಬಾದ್‍ನಿಂದ ಯಲಹಂಕಕ್ಕೆ ಬಂದಿದ್ದರು. ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ರಾತ್ರಿ ಹತ್ತು ಗಂಟೆಗೆ ಬಿಂಜವಾಡಗಿ ಗ್ರಾಮಕ್ಕೆ ಯೋಧನ ಪಾರ್ಥಿವ ಶರೀರ ಬರಲಿದ್ದು, ರಾತ್ರಿ ಗ್ರಾಮದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

    ಸದ್ಯ ಯೋಧ ಗುರುರಾಜ್ ಅವರ ಮನೆಗೆ ಹುನಗುಂದ ತಹಶೀಲ್ದಾರ ಆನಂದ್ ಕೋಲಾರ್ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ನಿಧನರಾದ ಯೋಧ ಗುರುರಾಜ್ ಅವರಿಗೆ ಪತ್ನಿ ಹಾಗೂ ನಾಲ್ವರು ಮಕ್ಕಳು ಇದ್ದಾರೆ. ಗುರುರಾಜ್ 1989-90 ರಲ್ಲಿ ಸಿಆರ್ ಪಿಎಫ್ ಸೇರ್ಪಡೆ ಆಗಿದ್ದರು.

  • ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ – 5 ಯೋಧರು ಹುತಾತ್ಮ

    ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ – 5 ಯೋಧರು ಹುತಾತ್ಮ

    ಶ್ರೀನಗರ: ಜಮ್ಮು ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯಲ್ಲಿ ಸೈನಿಕರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಐವರು ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದು, ಪ್ರತಿದಾಳಿಯಲ್ಲಿ ಒಬ್ಬ ಉಗ್ರನನ್ನು ಸೈನಿಕರು ಹತ್ಯೆ ಮಾಡಿದ್ದಾರೆ.

    ಅನಂತ್ ನಾಗ್ ಜಿಲ್ಲೆಯ ಕೆಪಿ ರೋಡ್ ಬಳಿ ಘಟನೆ ನಡೆದಿದ್ದು, ಸ್ಥಳೀಯ ಮಾಧ್ಯಮಗಳ ವರದಿಯ ಅನ್ವಯ ಇಬ್ಬರು ಉಗ್ರರು ಯೋಧರನ್ನ ಗುರಿಯಾಗಿಸಿಕೊಂಡು ಗುಂಡಿನ ದಾಳಿಯನ್ನ ನಡೆಸಿದ್ದರು. ಆಟೋಮ್ಯಾಟಿಕ್ ರೈಫಲ್ಸ್ ದಾಳಿ ನಡೆಸಿ, ಗ್ರೆನೇಡ್ ಗಳನ್ನು ಏಕಾಏಕಿ ಯೋಧರ ಮೇಲೆ ಎಸೆದಿದ್ದಾರೆ. ಈ ವೇಳೆ ಪ್ರತಿ ದಾಳಿಯಲ್ಲಿ ಓರ್ವ ಉಗ್ರ ಸಾವನ್ನಪ್ಪಿದ್ದಾನೆ.

    ಘಟನೆಯಲ್ಲಿ ಅನಂತ್ ನಾಗ್ ಪೊಲೀಸ್ ಠಾಣೆಯ ಅಧಿಕಾರಿ ಹರ್ಷದ್ ಅಹ್ಮದ್ ಗಾಯಗೊಂಡಿದ್ದು, ಅಲ್ಲದೇ ನಾಗರಿಕರೊಬ್ಬರು ಕೂಡ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಪೊಲೀಸ್ ಅಧಿಕಾರಿಯನ್ನ ಚಿಕಿತ್ಸೆಗಾಗಿ ಶ್ರೀನಗರ ಆಸ್ಪತ್ರೆ ಕೊಂಡ್ಯೊಯಲಾಗಿದೆ. ಪುಲ್ವಾಮಾ ದಾಳಿ ನಡೆದ ಬಳಿಕ ಉಗ್ರರು ಮತ್ತೆ ಸಿಆರ್ ಪಿಎಫ್ ಯೋಧರನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ.

  • ಬಾಗಲಕೋಟೆಯ ಯೋಧ ಬಿಹಾರದಲ್ಲಿ ನಿಧನ

    ಬಾಗಲಕೋಟೆಯ ಯೋಧ ಬಿಹಾರದಲ್ಲಿ ನಿಧನ

    ಬಾಗಲಕೋಟೆ: ಕರ್ತವ್ಯದ ವೇಳೆ ಆಕಸ್ಮಿಕವಾಗಿ ಗುಂಡು ತಗುಲಿ ಬಾಗಲಕೋಟೆ ಜಿಲ್ಲೆಯ ಸಿಆರ್ ಪಿಎಫ್ ಯೋಧ ನಿಧನರಾದ ಘಟನೆ ಬಿಹಾರದಲ್ಲಿ ನಡೆದಿದೆ.

    ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಗಿರಿಯಪ್ಪ ರಾಮಣ್ಣ ಕಿರಸೂರ(29) ಎಂಬವರೇ ನಿಧನರಾದ ಯೋಧ. ಇವರು 2012ರಲ್ಲಿ ಸಿಆರ್ ಪಿಎಫ್ ನಲ್ಲಿ ಕಾನ್ಸ್ ಸ್ಟೇಬಲ್ ಆಗಿ ನೇಮಕಗೊಂಡಿದ್ದರು. ಸದ್ಯ ಬಿಹಾರದಲ್ಲಿ ಬಟಾಲಿಯನ್ 224 ನಲ್ಲಿ ಸೇವೆ ಸಲ್ಲಿಸುತ್ತಿದ್ದರು.

    ಬಿಹಾರದ ಪಾಟ್ನಾದಲ್ಲಿ ವಿಐಪಿಗಳಿಗೆ ರಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಯೋಧ ಗಿರಿಯಪ್ಪ, ಗುರುವಾರ ಆಕಸ್ಮಿಕವಾಗಿ ಗುಂಡು ತಗುಲಿ ನಿಧನರಾಗಿದ್ದಾರೆ. ಕಳೆದ ವರ್ಷ ಏಪ್ರಿಲ್‍ನಲ್ಲಿ ಗಿರಿಯಪ್ಪ ಅವರಿಗೆ ವಿವಾಹವಾಗಿತ್ತು. ಅಲ್ಲದೆ ಕಳೆದ ತಿಂಗಳಷ್ಟೇ ಯೋಧ ಗಿರಿಯಪ್ಪ ಸ್ವಗ್ರಾಮ ಕಮತಗಿಗೆ ಬಂದು ಹೋಗಿದ್ದರು.

    ಯೋಧನ ಸಾವಿನ ಸುದ್ದಿಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

  • ಪಾರ್ಶ್ವವಾಯು ಪೀಡಿತ ಮಗುವಿಗೆ ಕೈತುತ್ತು ನೀಡಿದ ಯೋಧ: ವಿಡಿಯೋ ನೋಡಿ

    ಪಾರ್ಶ್ವವಾಯು ಪೀಡಿತ ಮಗುವಿಗೆ ಕೈತುತ್ತು ನೀಡಿದ ಯೋಧ: ವಿಡಿಯೋ ನೋಡಿ

    ಶ್ರೀನಗರ: ಪಾರ್ಶ್ವವಾಯು ಪೀಡಿತ ಮಗುವಿಗೆ ಸಿಆರ್‍ಪಿಎಫ್ ಯೋಧರೊಬ್ಬರು ಕೈತುತ್ತು ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಶಂಸೆಗೆ ಪಾತ್ರವಾಗಿದೆ.

    ಸಿಆರ್‌ಪಿಎಫ್ ಯೋಧ ಇಕ್ಬಾಲ್ ಸಿಂಗ್ ಅವರು ಶ್ರೀನಗರದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಈ ವೇಳೆ ತಮ್ಮ ಬುತ್ತಿಯನ್ನು ತೆಗೆದುಕೊಂಡು, ಪಾರ್ಶ್ವವಾಯು ಪೀಡಿತ ಬಾಲಕನಿಗೆ ಉಣಿಸಿದ್ದಾರೆ.

    ಬಾಲಕನಿಗೆ ಕೈತುತ್ತು ನೀಡಿ, ನೀರು ಕುಡಿಸಿ ಬಾಯಿಯನ್ನು ಸ್ವಚ್ಛ ಮಾಡಿದ್ದಾರೆ. ಸ್ವಂತ ಮಗನ ಪ್ರೀತಿಯನ್ನು ಇಕ್ಬಾಲ್ ಸಿಂಗ್ ಅವರು ಬಾಲಕನಿಗೆ ನೀಡಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇಕ್ಬಾಲ್ ಸಿಂಗ್ ಅವರ ಕಾಳಜಿ, ಪ್ರೀತಿ, ಮಾನವೀಯತೆ ಅನೇಕರ ಪ್ರಶಂಸೆಗೆ ಪಾತ್ರವಾಗಿದೆ. ಇಕ್ಬಾಲ್ ಸಿಂಗ್ ಅವರ ಮಾನವೀಯ ಕಾರ್ಯಕ್ಕೆ ಪೊಲೀಸ್ ಮಹಾ ನಿರ್ದೇಶಕರು ಮೆಚ್ಚುಗೆ ಪ್ರಮಾಣ ಪತ್ರವನ್ನು ನೀಡಿದ್ದಾರೆ.

    ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಫೆಬ್ರವರಿ 14 ರಂದು ಉಗ್ರರು ನಡೆಸಿದ ದಾಳಿಯ ವೇಳೆ ಇಕ್ಬಾಲ್ ಸಿಂಗ್ ಅವರು ಕೂಡ ವಾಹನವೊಂದನ್ನು ಚಲಾಯಿಸುತ್ತಿದ್ದರು.