Tag: CRPF

  • ಉಗ್ರರ ಬಹುದೊಡ್ಡ ಸಂಚು ವಿಫಲ- 8 ಕೆಜಿ ತೂಕದ 2 ಐಇಡಿ ನಿಷ್ಕ್ರಿಯ

    ಉಗ್ರರ ಬಹುದೊಡ್ಡ ಸಂಚು ವಿಫಲ- 8 ಕೆಜಿ ತೂಕದ 2 ಐಇಡಿ ನಿಷ್ಕ್ರಿಯ

    ಶ್ರೀನಗರ: ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಉಗ್ರರ ಬಹುದೊಡ್ಡ ಸಂಚನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಶ್ಮೀರ ಪೊಲೀಸರು ಮತ್ತು ಸೇನೆ ನಡೆಸಿದ ಜಂಟಿ ಕಾರ್ಯಚರಣೆಯಲ್ಲಿ 4 ಗ್ರೆನೆಡ್ ಲಾಂಚರ್, 3 ಚೀನಿ ಗ್ರೆನೆಡ್, ಎಕೆ-47 ಮತ್ತು ಒಂದು ಬಾಂಬ್ ವಶ ಪಡಿಸಿಕೊಂಡಿದ್ದಾರೆ.

    ಪೂಂಛ್ ಜಿಲ್ಲೆಯ ಲೊರ್ನಾ ಇಲಾಖೆಯಲ್ಲಿ ಉಗ್ರರು ಬಚ್ಚಿಟ್ಟಿದ್ದ 8 ಕೆಜಿ ತೂಕದ ಎರಡು ಐಇಡಿ ಮತ್ತು ಎರಡು ಹ್ಯಾಂಡ್ ಗ್ರೆನೆಡ್ ಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. ಭಾನುವಾರ ಬೆಳಗ್ಗೆ ಲೊರ್ನಾ ಅರಣ್ಯ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಸರ್ಚ್ ಆಪರೇಷನ್ ಆರಂಭಿಸಿದ್ದರು. ಈ ವೇಳೆ ಸಿಬ್ಬಂದಿಗೆ ಉಗ್ರರು ಬಚ್ಚಿಟ್ಟಿದ್ದ ಸ್ಫೋಟಕ ವಸ್ತುಗಳು ಲಭ್ಯವಾಗಿವೆ. ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಜಂಟಿಯಾಗಿ ಈ ಆಪರೇಷನ್ ನಲ್ಲಿ ಭಾಗವಹಿಸಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಲೊರ್ನಾ ಪ್ರದೇಶದಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ.

    ಜಮ್ಮು-ಕಾಶ್ಮೀರದಲ್ಲಿ ಸೇನಾ ಉಗ್ರರ ವಿರುದ್ಧ ನಿರಂತರ ಕಾರ್ಯಚರಣೆ ನಡೆಸುತ್ತಿದೆ. ಈ ಕಾರ್ಯಚರಣೆಯಲ್ಲಿ 138 ಉಗ್ರರನ್ನು ಸೇನೆ ಹೊಡೆದುರುಳಿಸಿದೆ. ರನ್ಬೀರಗಢದಲ್ಲಿ ಕೆಲ ಉಗ್ರರು ಅಡಗಿಕೊಂಡಿದ್ದು, ದೊಡ್ಡ ಮಟ್ಟದ ಸಂಚು ರೂಪಿಸಿರುವ ಮಾಹಿತಿ ಸೇನೆಗೆ ಲಭ್ಯವಾಗಿತ್ತು. ಈ ಮಾಹಿತಿ ಆಧಾರದ ಮೇಲೆ ಸಿಆರ್‍ಪಿಎಫ್ ಮತ್ತು ಪೊಲೀಸರ ತಂಡ ಜಂಟಿ ಕಾರ್ಯಚರಣೆಗೆ ಇಳಿದಿತ್ತು. ರನ್ಬೀರಗಢದಲ್ಲಿಯ ಪ್ರತಿ ಮನೆಯನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ರು. ಈ ವೇಳೆ ಒಂದು ಮನೆಯಲ್ಲಿ ಅಡಗಿದ್ದ ಉಗ್ರರ ತಂಡ ಗುಂಡಿನ ದಾಳಿ ನಡೆಸಿದೆ. ಸೇನೆಯ ಸಹ ಪ್ರತ್ಯತ್ತುರವಾಗಿ ಗುಂಡಿನ ಉತ್ತರ ನೀಡಿದೆ.

  • ಸಿಆರ್‌ಪಿಎಫ್ ಇನ್ಸ್‌ಪೆಕ್ಟರ್‌ಗೆ ಶೂಟ್ ಮಾಡಿ, ತಾನೂ ಗುಂಡು ಹಾರಿಸಿಕೊಂಡ ಎಸ್‍ಐ

    ಸಿಆರ್‌ಪಿಎಫ್ ಇನ್ಸ್‌ಪೆಕ್ಟರ್‌ಗೆ ಶೂಟ್ ಮಾಡಿ, ತಾನೂ ಗುಂಡು ಹಾರಿಸಿಕೊಂಡ ಎಸ್‍ಐ

    ನವದೆಹಲಿ: ಸಿಆರ್‌ಪಿಎಫ್ ಇನ್ಸ್ ಪೆಕ್ಟರ್ ಗೆ ಸಬ್ ಇನ್ಸ್ ಪೆಕ್ಟರ್ ಶೂಟ್ ಮಾಡಿ, ತಾನೂ ಗುಂಡು ಹಾರಿಸಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

    ದೆಹಲಿಯ ಲೋಧಿ ಎಸ್ಟೇಟ್‍ನಲ್ಲಿ ಶುಕ್ರವಾರ ರಾತ್ರಿ 10.30ಕ್ಕೆ ಘಟನೆ ನಡೆದಿದ್ದು, ಲೋಧಿ ಎಸ್ಟೇಟ್‍ನಲ್ಲಿ ಗೃಹಸಚಿವಾಲಯದ ಬಂಗಲೆಯಲ್ಲಿ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡುವಷ್ಟರಲ್ಲಿ ಇಬ್ಬರು ಇನ್ಸ್ ಪೆಕ್ಟರ್ ಗಳ ದೇಹ ಕೆಳಗೆ ಬಿದ್ದ ಸ್ಥಿತಿಯಲ್ಲಿತ್ತು. ಇಬ್ಬರಿಗೂ ಸರ್ವಿಸ್ ಬಂದೂಕಿನಿಂದ ಗುಂಡು ಹಾರಿಸಲಾಗಿತ್ತು. ಪೊಲೀಸರು ಸ್ಥಳಕ್ಕೆ ತಲುಪುವಷ್ಟರಲ್ಲಿ ಸಾವನ್ನಪ್ಪಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

    ಇಬ್ಬರು ಸೈನಿಕರ ಮಧ್ಯೆ ಜಗಳ ನಡೆದಿದ್ದು, ಈ ವೇಳೆ ಸಬ್ ಇನ್ಸ್ ಪೆಕ್ಟರ್ ಕಾರ್ನಿಯಲ್ ಸಿಂಗ್ ತಮ್ಮ ಸಹೋದ್ಯೋಗಿ ದಶರಥ್ ಸಿಂಗ್ ಮೇಲೆ ಗುಂಡು ಹಾರಿಸಿದ್ದಾರೆ. ಸಬ್ ಇನ್ಸ್ ಪೆಕ್ಟರ್ ಜಮ್ಮು ಕಾಶ್ಮೀರದ ಉಧಂಪುರದವರು, ಇನ್ಸ್ ಪೆಕ್ಟರ್ ಹರಿಯಾಣದ ರೋಹ್ತಕ್‍ನವರು ಪೊಲೀಸರು ಮಾಹಿತಿ ನೀಡಿದ್ದಾರೆ.

    ಕಳೆದ ರಾತ್ರಿ ಫ್ರ್ಯಾಟ್ರಿಸೈಡಲ್ ಕಾರ್ಯಕ್ರಮದಲ್ಲಿ ಸಿಆರ್ ಪಿಎಫ್ 122ನೇ ಬೆಟಾಲಿಯನ್‍ನ ಇನ್ಸ್ ಪೆಕ್ಟರ್ ಮೇಲೆ ಅದೇ ಬೆಟಾಲಿಯನ್‍ನ ಎಸ್‍ಐ ಗುಂಡು ಹಾರಿಸಿದ್ದಾರೆ. ನಂತರ ಸರ್ವೀಸ್ ಬಂದೂಕಿನಿಂದ ತಾನೂ ಗುಂಡು ಹಾರಿಸಿಕೊಂಡಿದ್ದಾರೆ. ಲೋಧಿ ಎಸ್ಟೇಟ್ ನಲ್ಲಿ ಘಟನೆ ನಡೆದಿದೆ. ಈ ಕುರಿತು ವಿಚಾರಣೆ ನಡೆಸಲು ಆದೇಶಿಸಲಾಗಿದೆ. ವಿಚಾರನೆ ಬಳಿಕ ಪ್ರಕರಣ ತಾರ್ಕಿಕ ಅಂತ್ಯ ಕಾಣಲಿದೆ. ಘಟನೆ ಹಿಂದಿನ ಕಾರಣ ತಿಳಿಯಲಿದೆ ಎಂದು ಸಿಆರ್ ಪಿಎಫ್ ಡಿಐಜಿ, ಅಧೀಕೃತ ವಕ್ತಾರ ಎಂ.ದಿನಕರನ್ ವಿವರಿಸಿದ್ದಾರೆ.

  • ‘ಕೊರೊನಾ ಬಂದಿರೋ ಭಯ ಕಾಡ್ತಿದೆ’- ಗುಂಡಿಕ್ಕಿಕೊಂಡು ಸಿಆರ್‌ಪಿಎಫ್ ಅಧಿಕಾರಿ ಆತ್ಮಹತ್ಯೆ

    ‘ಕೊರೊನಾ ಬಂದಿರೋ ಭಯ ಕಾಡ್ತಿದೆ’- ಗುಂಡಿಕ್ಕಿಕೊಂಡು ಸಿಆರ್‌ಪಿಎಫ್ ಅಧಿಕಾರಿ ಆತ್ಮಹತ್ಯೆ

    – ಮತ್ತೊಬ್ಬ ಅಧಿಕಾರಿಯೂ ಸೂಸೈಡ್

    ಶ್ರೀನಗರ: ಹೆಮ್ಮಾರಿ ಕೊರೊನಾ ವೈರಸ್ ಭೀತಿಯಿಂದಾಗಿ ಸಿಆರ್‌ಪಿಎಫ್ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಜಮ್ಮು-ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯಲ್ಲಿ ನಡೆದಿದೆ.

    ರಾಜಸ್ಥಾನದ ಜೈಸಲ್ಮೇರ್ ನಿವಾಸಿ ಸಬ್‌-ಇನ್ಸ್‌ಪೆಕ್ಟರ್ ಫತಾಹ್ ಸಿಂಗ್ ಆತ್ಮಹತ್ಯೆಗೆ ಶರಣಾದ ಸಿಆರ್‌ಪಿಎಫ್ ಅಧಿಕಾರಿ. ಫತಾಹ್ ಸಿಂಗ್ ಅವರನ್ನು ದಕ್ಷಿಣ ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯ ಮಟ್ಟನ್ ಪ್ರದೇಶದಲ್ಲಿ ಸಿಆರ್‌ಪಿಎಫ್‍ನ 49ನೇ ಬೆಟಾಲಿಯನ್‍ನೊಂದಿಗೆ ನೇಮಿಸಲಾಗಿತ್ತು. ಆದರೆ ತಾವು ಕೋವಿಡ್-19 ಸೋಂಕು ತಗುಲಬಹುದೆಂದು ಆತಂಕಕ್ಕೆ ಒಳಗಾಗಿದ್ದರು.

    ಫತಾಹ್ ಸಿಂಗ್ ಮಂಗಳವಾರ ತಮ್ಮ ಬಳಿ ಇದ್ದ ರೈಫಲ್‍ನಿಂದ ಗುಂಡು ಹಾರಿಸಿಕೊಂಡಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಫತಾಹ್ ಸಿಂಗ್ ಮೃತಪಟ್ಟಿದ್ದಾರೆ.

    “ಕೊರೊನಾ ವೈರಸ್ ತಗುಲಿರುವ ಭಯ ನನಗೆ ಕಾಡುತ್ತಿದೆ’ ಎಂದು ಫತಾಹ್ ಸಿಂಗ್ ಡೆತ್‍ನೋಟ್‍ನಲ್ಲಿ ತಿಳಿಸಿದ್ದಾರೆ. ಅವರಿಗೆ ಸೋಂಕು ತಗುಲಿರುವ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಅವರ ಗಂಟಲು ದ್ರವವನ್ನು ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ. ಜೊತೆಗೆ ಕೋವಿಡ್-19 ಶಿಷ್ಟಾಚಾರದಂತೆ ಫತಾಹ್ ಸಿಂಗ್ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಮತ್ತನ್ ಠಾಣೆಯ ಅಧಿಕಾರಿ ಜಝೀಬ್ ಅಹ್ಮದ್ ಹೇಳಿದ್ದಾರೆ.

    ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಶ್ರೀನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಆರ್‌ಪಿಎಫ್‍ನ ಮತ್ತೊಬ್ಬ ಅಧಿಕಾರಿ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ಅವರ ಸಾವಿಗೆ ಕಾರಣ ಏನು ಎನ್ನುವುದು ಸ್ಪಷ್ಟವಾಗಿಲ್ಲ.

  • ಜಮ್ಮು, ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ – ಓರ್ವ ಉಗ್ರನನ್ನು ಸದೆಬಡಿದ ಸೇನೆ

    ಜಮ್ಮು, ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ – ಓರ್ವ ಉಗ್ರನನ್ನು ಸದೆಬಡಿದ ಸೇನೆ

    ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಪುಲ್ವಾಮಾ ಜಿಲ್ಲೆಯ ಆವಂತಿಪುರದಲ್ಲಿ ಜಂಟಿ ಕಾರ್ಯಚರಣೆ ವೇಳೆ ನಡೆದ ಎನ್‍ಕೌಂಟರ್ ನಲ್ಲಿ ಹಿಜ್ಬುಲ್‍ನ ಓರ್ವ ಉಗ್ರನನ್ನು ಸದೆಬಡಿಯಲಾಗಿದೆ.

    ಆವಂತಿಪುರದಲ್ಲಿ ಭಾರತೀಯ ಸೇನೆ, ಸಿಆರ್‌ಪಿಎಫ್ ಸಿಬ್ಬಂದಿ ಹಾಗೂ ಜಮ್ಮು ಕಾಶ್ಮೀರದ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಓರ್ವ ಉಗ್ರನನ್ನು ಎನ್‍ಕೌಂಟರ್ ಮಾಡಲಾಗಿದೆ. ಎನ್‍ಕೌಂಟರ್ ನಲ್ಲಿ ಹತ್ಯೆಯಾದ ಉಗ್ರನನ್ನು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ರಿಯಾಜ್ ನಾಯ್ಕು ಎಂದು ಗುರುತಿಸಲಾಗಿದೆ.

    ಪುಲ್ವಾಮಾದ ಶರ್ಸಾಲಿ ಗ್ರಾಮದಲ್ಲಿ ಇನ್ನಷ್ಟು ಉಗ್ರರು ಅಡಗಿರುವ ಮಾಹಿತಿ ಲಭ್ಯವಾದ ಹಿನ್ನೆಲೆ ಸೇನಾ ಪಡೆ ಕಾರ್ಯಾಚರಣೆಯನ್ನು ಮುಂದುವರೆಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದ ಸುತ್ತಮುತ್ತಲಿನ 12ರಿಂದ 15 ಮನೆಗಳ ಜನರನ್ನು ಬೇರೆ ಜಾಗಕ್ಕೆ ಸ್ಥಳಾಂತರ ಮಾಡಲಾಗಿದ್ದು, ಉಗ್ರನನ್ನು ಸದೆಬಡಿದ ಸ್ಥಳದಲ್ಲಿ ಒಂದು ಎಕೆ-56 ರೈಫಲ್ ಅನ್ನು ವಶಕ್ಕೆ ಪಡೆಯಲಾಗಿದೆ.

    ಇಂದು ಮುಂಜಾನೆ ವೇಳೆಗೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಸೇನಾಪಡೆ ಕೂಡ ಪ್ರತಿದಾಳಿ ನಡೆಸಿದೆ. ಈ ವೇಳೆ ಗುಂಡೇಟಿಗೆ ಉಗ್ರ ಸಾವನ್ನಪ್ಪಿದ್ದಾನೆ.

    2 ದಿನಗಳ ಹಿಂದೆ ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರರು ನಡೆಸಿದ್ದ ದಾಳಿಯಿಂದ ಮೂವರು ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ಅಲ್ಲದೇ ಭಾನುವಾರ ಹಂದ್ವಾರದಲ್ಲಿ ನಡೆದ ದಾಳಿಯಲ್ಲಿ ಐವರು ಭದ್ರತಾ ಪಡೆಯ ಸಿಬ್ಬಂದಿ ಉಗ್ರರ ಗುಂಡೇಟಿಗೆ ಹುತಾತ್ಮರಾಗಿದ್ದರು.

  • ಸಿಆರ್‌ಪಿಎಫ್ ಸಿಬ್ಬಂದಿಗೆ ಸೋಂಕು- ಮುಖ್ಯ ಕಚೇರಿ ಸೀಲ್

    ಸಿಆರ್‌ಪಿಎಫ್ ಸಿಬ್ಬಂದಿಗೆ ಸೋಂಕು- ಮುಖ್ಯ ಕಚೇರಿ ಸೀಲ್

    ನವದೆಹಲಿ: ಸಿಆರ್‌ಪಿಎಫ್‍ನ ಹಿರಿಯ ಅಧಿಕಾರಿಯೊಬ್ಬರ ಆಪ್ತ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆ ದೆಹಲಿಯಲ್ಲಿರುವ ಕೇಂದ್ರ ಕಚೇರಿಯನ್ನು ಸಂಪೂರ್ಣ ಸೀಲ್ ಮಾಡಲಾಗಿದ್ದು, ಸ್ಯಾನಿಟೈಜರ್ ಸಿಂಪಡಿಸಲಾಗುತ್ತಿದೆ.

    ಸಿಆರ್‌ಪಿಎಫ್‍ನ ಹೆಚ್ಚುವರಿ ಮಹಾ ನಿರ್ದೇಶಕ ಜಾವೇದ್ ಅಖ್ತಾರ್ ಮತ್ತು ಅವರ ಸ್ಟೇನೋಗ್ರಾಫರ್ ಅವರನ್ನು ಇಂದು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆ ವೇಳೆ ಸ್ಟೇನೋಗ್ರಾಫರ್ ನಲ್ಲಿ ಪಾಸಿಟಿವ್ ವರದಿ ಬಂದಿದ್ದರಿಂದ ಲೋಧಿ ರಸ್ತೆಯ ಸಿಜಿಓ ಕಾಂಪ್ಲೆಕ್ಸ್ ನಲ್ಲಿರುವ ಸಿಆರ್‌ಪಿಎಫ್‍ ಕಚೇರಿಯನ್ನು ಪ್ರೊಟೊಕಾಲ್ ಪ್ರಕಾರ ಸೀಲ್ ಮಾಡಲಾಯಿತು. ಇದನ್ನೂ ಓದಿ:  68 ಮಂದಿ ಸಿಆರ್‌ಪಿಎಫ್ ಯೋಧರಿಗೆ ಸೋಂಕು

    ಈ ಮೊದಲು ಕೇಂದ್ರ ಕಚೇರಿಯೊಂದಿಗೆ ಸಂಪರ್ಕವಿಟ್ಟುಕೊಂಡಿದ್ದ ಚಾಲಕನಿಗೂ ಕೊರೊನಾ ಸೋಂಕು ಇರುವುದು ಪತ್ತೆಯಾಗಿರುವುದರಿಂದ ಇತರೆ ನೌಕರರು ಕೆಲಸ ಮಾಡಲು ಅವಕಾಶವನ್ನು ನೀಡಿಲ್ಲ. ನೌಕರರು ಕೇಂದ್ರ ಕಚೇರಿ ಕಟ್ಟಡಕ್ಕೆ ಪ್ರವೇಶಿಸಲು ಅನುಮತಿ ನೀಡುತ್ತಿಲ್ಲ ಎಂದು ಸಿ.ಆರ್.ಪಿ.ಎಫ್ ಮೂಲಗಳು ತಿಳಿಸಿವೆ.

    ಹೆಚ್ಚುವರಿ ಮಹಾ ನಿರ್ದೇಶಕರ ಕುಟುಂಬ, ಮನೆ ಸಿಬ್ಬಂದಿ ಮತ್ತು ಇವರ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದ ಹಿರಿಯ ಅಧಿಕಾರಿಗಳು ಎಲ್ಲ ಸಿಬ್ಬಂದಿ ಮತ್ತು ಅವರ ಮನೆಗಳನ್ನು ಸೀಲ್ ಮಾಡಿದ್ದು, ಕ್ವಾರಂಟೈನ್‍ನಲ್ಲಿರುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

    ಇದಕ್ಕೂ ಮೊದಲು ದೆಹಲಿಯ ಮಯೂರ್ ವಿಹಾರ್ ಫೇಸ್ 3ರಲ್ಲಿರುವ ಸಿಆರ್‍ಪಿಎಫ್ ನ ಮೂರನೇ ಬೆಟಾಲಿಯನ್‍ನಲ್ಲಿ 144 ಯೋಧರಿಗೆ ಸೋಂಕು ಕಾಣಿಸಿಕೊಂಡಿದೆ. ಈವರೆಗೂ ಓರ್ವ ಯೋಧ ಸಾವನ್ನಪ್ಪಿದ್ದರೆ, ಮತ್ತೊಬ್ಬರು ಚೇತರಿಸಿಕೊಂಡಿದ್ದು ಇನ್ನು 20 ಮಂದಿಯ ವರದಿ ನಿರೀಕ್ಷೆಯಲ್ಲಿದೆ.

  • ಬೆಳಗಾವಿ ಯೋಧನಿಗೆ ಬಾಸುಂಡೆ ಬರೋ ಹಾಗೆ ಥಳಿತ

    ಬೆಳಗಾವಿ ಯೋಧನಿಗೆ ಬಾಸುಂಡೆ ಬರೋ ಹಾಗೆ ಥಳಿತ

    ಬೆಳಗಾವಿ: ಸಿಆರ್ ಪಿಎಫ್ ಯೋಧ ಸಚಿನ್ ಸಾವಂತ್ ಅವರಿಗೆ ಬಾಸುಂಡೆ ಬರುವ ಹಾಗೆ ಸದಲಗಾ ಪೊಲೀಸರು ಥಳಿಸಿರುವ ಆರೋಪಗಳು ಕೇಳಿ ಬಂದಿದೆ. ಯೋಧನಿಗೆ ಬಾಸುಂಡೆ ಬಂದಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಪೊಲೀಸರ ನಡೆಗೆ ಕಿಡಿಕಾರಿದ್ದಾರೆ.

    ಏಪ್ರಿಲ್ 23ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಪೊಲೀಸರು ಮತ್ತು ಯೋಧನ ನಡುವೆ ಗಲಾಟೆ ನಡೆದಿತ್ತು. ತದನಂತರ ಪೊಲೀಸರು ಯೋಧನನ್ನು ಠಾಣೆಗೆ ಕರೆದುಕೊಂಡು ಕೈಗೆ ಕೋಳ ಹಾಕಿದ್ದರು. ದೇಶ ಕಾಯುವ ಯೋಧನ ಕೈಗೆ ಕೋಳ ಹಾಕಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಕೈಗೆ ಕೋಳ ಹಾಕಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಮಂಗಳವಾರ ಯೋಧ ಸಚಿನ್ ಸಾವಂತ್ ಅವರಿಗೆ ಜಾಮೀನು ದೊರಕ್ಕಿದ್ದು, ಜೈಲಿನಿಂದ ಹೊರ ಬಂದಿದ್ದರು. ಖುದ್ದು ಸಿಆರ್ ಪಿಎಫ್ ಅಧಿಕಾರಿಗಳೇ ಸಚಿನ್ ಅವರನ್ನು ಕರೆತರಲು ಹೋಗಿದ್ದರು.

  • ಪುಲ್ವಾಮಾ ಕೇಸ್ – ಎನ್‍ಐಎ ತನಿಖೆ ಎಲ್ಲಿಯವರೆಗೆ ಬಂದಿದೆ? ‘ಕೀ’ ಯಿಂದ ಕೇಸ್ ಓಪನ್ ಆದ ರೋಚಕ ಕಥೆ ಓದಿ

    ಪುಲ್ವಾಮಾ ಕೇಸ್ – ಎನ್‍ಐಎ ತನಿಖೆ ಎಲ್ಲಿಯವರೆಗೆ ಬಂದಿದೆ? ‘ಕೀ’ ಯಿಂದ ಕೇಸ್ ಓಪನ್ ಆದ ರೋಚಕ ಕಥೆ ಓದಿ

    ನವದೆಹಲಿ: ಪುಲ್ವಾಮಾ ದಾಳಿ ನಡೆದ ಒಂದು ವರ್ಷ ಪೂರ್ಣಗೊಂಡರೂ ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಇನ್ನೂ ಪೂರ್ಣ ಪ್ರಮಾಣದ ಚಾರ್ಜ್ ಶೀಟ್ ಸಲ್ಲಿಕೆ ಮಾಡಿಲ್ಲ. ಈ ಪ್ರಕರಣದಲ್ಲಿ ಶಂಕಿತರು ಎಂದು ಗುರುತಿಸಲಾಗಿದ್ದ ಎಲ್ಲ ವ್ಯಕ್ತಿಗಳನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಇನ್ನೂ ಚಾರ್ಜ್ ಶೀಟ್ ಸಲ್ಲಿಕೆಯಾಗಿಲ್ಲ ಎಂದು ಹೇಳಲಾಗುತ್ತಿದೆ.

    ಈ ಪ್ರಕರಣದ ಸಂಬಂಧ ಶಂಕಿತ ಆರೋಪಿಗಳು ಎಂದು ಪರಿಗಣಿಸಿದ್ದ ಮುದಾಸ್ಸೀರ್ ಅಹ್ಮದ್ ಖಾನ್ ಮತ್ತು ಸಜ್ಜದ್ ಬಟ್ ಇಬ್ಬರು ಅನುಕ್ರಮವಾಗಿ ಮಾರ್ಚ್ ಮತ್ತು ಜೂನ್ ತಿಂಗಳಿನಲ್ಲಿ ಎನ್‍ಕೌಂಟರ್ ಮಾಡಿ ಹತ್ಯೆ ಮಾಡಲಾಗಿದೆ. ಶಂಕಿತ ಎಲ್ಲ ಆರೋಪಿಗಳನ್ನು ಎನ್ ಕೌಂಟರ್ ಮಾಡಿ ಹತ್ಯೆ ಮಾಡಿದ್ದರಿಂದ ಸಂಪೂರ್ಣವಾಗಿ ಮಾಹಿತಿ ಕಲೆ ಹಾಕಿ ತನಿಖೆ ನಡೆಸುವುದು ಕಷ್ಟ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಈ ಕೃತ್ಯಕ್ಕೆ ಸಂಚು ರೂಪಿಸಿದ್ದು ಪಾಕಿಸ್ತಾನದಲ್ಲಿ ಎನ್ನುವುದು ಖಚಿತವಾಗಿ ತಿಳಿದಿದೆ. ಕಾನೂನು ಬಾಹಿರ ತಡೆ ಕಾಯ್ದೆ ಅಡಿ ತನಿಖೆ ನಡೆಸಿದರೆ ಪ್ರಕರಣ ದಾಖಲಿಸಿದ 90 ದಿನಗಳ ಒಳಗಡೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಬೇಕಾಗುತ್ತದೆ. ಆದರೆ ಪ್ರಕರಣದಲ್ಲಿ ಉಲ್ಲೇಖಿಸಲ್ಪಟ್ಟ ಆರೋಪಿಗಳು ಮೃತಪಟ್ಟರೆ ಅವಧಿ ವಿಸ್ತರಣೆಯಾಗುತ್ತದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

    ಸ್ಫೋಟಕ ಸಾಮಾಗ್ರಿಗಳು ಉಗ್ರರಿಗೆ ಸಿಕ್ಕಿದ್ದು ಹೇಗೆ ಎನ್ನುವುದರ ಬಗ್ಗೆ ತನಿಖೆಯಲ್ಲಿ ಇನ್ನೂ ಉತ್ತರ ಸಿಕ್ಕಿಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯ ಉನ್ನತ ಮಟ್ಟದ ಮಿಲಿಟರಿ ಸ್ಫೋಟಕಗಳನ್ನು ಬಳಸಿ ಕೃತ್ಯ ನಡೆಸಲಾಗಿದೆ ಎಂದು ವರದಿ ನೀಡಿತ್ತು. ಘಟನೆ ನಡೆದ ಮರುದಿನ ಭಾರೀ ಮಳೆ ಸುರಿದು ಬೇಕಾಗಿದ್ದ ಪ್ರಮುಖ ಸಾಕ್ಷ್ಯಗಳು ನಾಶವಾಗಿದ್ದರಿಂದ ತನಿಖೆಗೆ ಹಿನ್ನಡೆ ಆಗಿತ್ತು.

    ಆರೋಪಿಗಳು ಯಾರು ಬದುಕಿಲ್ಲ:
    ಆರೋಪಿ ಎ1 ಆಗಿದ್ದ ಜೈಷ್ ಎ ಮೊಹಮ್ಮದ್ ಸಂಘಟನೆ ಉಗ್ರ ಆದಿಲ್ ಅಹ್ಮದ್ ದಾರ್ ಮಾರುತಿ ಇಕೋ ಕಾರ್ ಮೂಲಕ ಕೇಂದ್ರ ಮೀಸಲು ಪೊಲೀಸ್ ಪಡೆಯ 40 ಸೈನಿಕರಿದ್ದ ಬಸ್ ಮೇಲೆ ದಾಳಿ ಮಾಡಿದ್ದ. ಘಟನೆಯಲ್ಲಿ 40 ಮಂದಿ ಸೈನಿಕರು ಹುತಾತ್ಮರಾಗಿದ್ದರು. ವ್ಯವಸ್ಥಿತವಾಗಿ ದಾಳಿಗೆ ಸ್ಕೆಚ್ ಹಾಕಿದ್ದ ಆದಿಲ್ ದಾರ್ 300 ಕೆಜಿಗೂ ಹೆಚ್ಚು ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಬಸ್ಸಿಗೆ ಗುದ್ದಿಸಿದ್ದ. ಈ ಘಟನೆಯಲ್ಲಿ ದಾರ್ ಸಹ ಮೃತಪಟ್ಟಿದ್ದ.

    ಕೃತ್ಯ ಎಸಗಲು ಸಹಕಾರ ನೀಡಿದ್ದ 23 ವರ್ಷ ವಯಸ್ಸಿನ ಎಲೆಕ್ಟ್ರಿಷಿಯನ್ ಮುದಾಸ್ಸೀರ್ ಅಹ್ಮದ್ ಖಾನ್ ನನ್ನು ಎನ್‍ಕೌಂಟರ್ ಮಾಡಿ ಮಾರ್ಚ್ 12 ರಂದು ಹತ್ಯೆ ಮಾಡಲಾಗಿತ್ತು. ಪುಲ್ವಾಮಾ ಜಿಲ್ಲೆಯವನಾದ ಮುದಾಸಿರ್ ಪದವೀಧರನಾಗಿದ್ದು ದಾಳಿಗೆ ಬೇಕಾದ ಸ್ಫೋಟಕ ವಸ್ತು ಹಾಗೂ ಕಾರನ್ನು ಪೂರೈಸಿದ್ದ. ಟ್ರಾಲ್ ಪ್ರದೇಶದ ಮಿರ್ ಮೊಹಲ್ಲಾಕ್ಕೆ ಸೇರಿದ ಮುದಾಸಿರ್ ಖಾನ್ 2017 ರಲ್ಲಿ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ಸೇರಿದ್ದ. ಕೃತ್ಯ ನಡೆಯುವ ಮೊದಲು ಅಹ್ಮದ್ ದಾರ್ ಹಾಗೂ ಮುದಾಸ್ಸೀರ್ ನಡುವಿನ ಸಂಭಾಷಣೆಯ ವಿವರ ಸಿಕ್ಕಿತ್ತು.

    ಪುಲ್ವಾಮಾ ದಾಳಿಗೂ 10 ದಿನಕ್ಕೂ ಮೊದಲು ಸಜ್ಜದ್ ಬಟ್ ಇಕೋ ಕಾರನ್ನು ಖರೀದಿಸಿದ್ದ. ಈ ಕಾರನ್ನು ಆತ್ಮಹುತಿ ಬಾಂಬರ್ ಅಹ್ಮದ್ ದಾರ್ ಗೆ ನೀಡಿದ್ದ. ಶೋಪಿಯನ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದ ಈತ ಜೈಷ್-ಇ-ಮೊಹಮ್ಮದ್ ಸಂಘಟನೆಯ ಸೇರಿದ್ದ. ಸಜ್ಜದ್ ಕೈಯಲ್ಲಿ ಬಂದೂಕು ಹಿಡಿದಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಜೂನ್ 18 ರಂದು ಭದ್ರತಾ ಪಡೆಗಳು ಅನಂತ್‍ನಾಗ್ ಜಿಲ್ಲೆಯ ಬಿಜ್‍ಬಿಹಾರಾ ಪಟ್ಟಣ ಸಮೀಪದ ಮರ್ಹಾಮಾ ಸಂಗಮ ಎಂಬ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿ ಈತನ ಹತ್ಯೆ ನಡೆಸಿತ್ತು.

    ‘ಕೀ’ಯಿಂದ ಕೇಸ್ ಓಪನ್:
    ಫೆ.14ರ ಮಧ್ಯಾಹ್ನ 3.15ರ ವೇಳೆಗೆ ದಾಳಿ ನಡೆದಿತ್ತು. ಮರುದಿನ ಭಾರೀ ಮಳೆ ಬಂದ ಪರಿಣಾಮ ತನಿಖೆಗೆ ಬೇಕಾಗಿದ್ದ ಪ್ರಮುಖ ಸಾಕ್ಷ್ಯಗಳು ನಾಶವಾಗಿತ್ತು. ಹೀಗಾಗಿ ಎನ್‍ಐಎಗೆ ತನಿಖೆಗೆ ನಡೆಸುವುದು ಬಹಳ ಸವಾಲಿನ ಕೆಲಸವಾಗಿತ್ತು.

    ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಲೇಥ್‍ಪುರಕ್ಕೆ ಕೃತ್ಯ ನಡೆದ ಕೆಲವೇ ಗಂಟೆಯಲ್ಲಿ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಮತ್ತು ಅಟೋಮೊಬೈಲ್ ತಜ್ಞರು ಸ್ಥಳಕ್ಕೆ ಆಗಮಿಸಿದ್ದರು. ಸ್ಫೋಟದ ರಭಸಕ್ಕೆ ಬಸ್ ಸಂಪೂರ್ಣವಾಗಿ ಮುದ್ದೆಯಾಗಿ ಬಿದ್ದಿದ್ದರೆ ಕೃತ್ಯಕ್ಕೆ ಬಳಸಿದ ಕಾರು ಸಂಪೂರ್ಣವಾಗಿ ನಾಶವಾಗಿತ್ತು. ಭಾಗಗಳು ಎಲ್ಲೆಂದರಲ್ಲಿ ಬಿದ್ದಿತ್ತು. ಹೀಗಾಗಿ ತನಿಖೆಯ ಆರಂಭದ ದಿನದಲ್ಲಿ ಕಾರಿನ ಭಾಗಗಳನ್ನು ಪತ್ತೆ ಹಚ್ಚುವುದೇ ದೊಡ್ಡ ಸವಾಲಾಗಿತ್ತು. ಕೊನೆಗೆ ಕಾರಿನ ಬಂಪರ್ ಮತ್ತು ನಂಬರ್ ಇರುವ ಶಾಕ್ ಅಬ್ಸರ್ಬರ್ ಸಿಕ್ಕಿತ್ತು. ಇದರ ಜೊತೆಯಲ್ಲಿ 25 ಲೀಟರಿನ ಕ್ಯಾನ್ ಸಿಕ್ಕಿತ್ತು. ತನಿಖಾಧಿಕಾರಿಗಳು ಈ ಕ್ಯಾನಿನಲ್ಲಿ 30 ಕೆಜಿ ಸ್ಫೋಟಕ ಇಟ್ಟಿರಬಹುದು ಎಂದು ಶಂಕಿಸಿದ್ದರು.

    ಸಿಕ್ಕಿದ ಭಾಗಗಳನ್ನು ಚೆಕ್ ಮಾಡಿದಾಗ ಕೊನೆಗೆ ಕೃತ್ಯಕ್ಕೆ ಬಳಸಿದ್ದು ಮಾರುತಿ ಕಂಪನಿಯ ಕಾರು ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ನಂತರ ಎನ್‍ಐಎ ಅಧಿಕಾರಿಗಳು ಮಾರುತಿ ಎಂಜಿನಿಯರ್ ಗಳನ್ನು ಸ್ಥಳಕ್ಕೆ ಕರೆಸಿಕೊಂಡು ಮಾಹಿತಿ ಕಲೆ ಹಾಕಿದ್ದಾರೆ. ಸಿಕ್ಕಿದ ಭಾಗಗಳ ಮಾಹಿತಿಯನ್ನು ಕಲೆ ಹಾಕಿದಾಗ ಕಾರು 2011ರಲ್ಲಿ ಉತ್ಪಾದನೆಯಾಗಿದೆ ಎನ್ನುವ ವಿಚಾರ ಬೆಳಕಿಗೆ ಬರುತ್ತದೆ.

    2011ರಲ್ಲಿ ಉತ್ಪಾದನೆಯಾದ ಕಾರಿನ ಮಾಲೀಕರನ್ನು ಪತ್ತೆ ಹಚ್ಚುವುದು ಹೇಗೆ? ಇದು ಬಹಳ ಕಷ್ಟದ ಕೆಲಸ. ತನಿಖೆಗೆ ಬಹಳ ದಿನಗಳು ನಡೆಯಬಹುದು ಎನ್ನುವುದನ್ನು ಅರಿತ ಎನ್‍ಐಎ ತಂಡ ಏನು ಮಾಡಬೇಕು ಎಂದು ಯೋಚಿಸುತ್ತಿದ್ದಾಗ ಹೊಳೆದಿದ್ದೆ ಮೆಟಲ್ ಡಿಟೆಕ್ಟರ್ ಸಾಧನ. ಸ್ಫೋಟದ ತೀವ್ರತೆಗೆ ಸೈನಿಕರ ದೇಹದ ಭಾಗಗಳೇ ಸುಮಾರು 100 ಮೀಟರ್ ದೂರಕ್ಕೆ ಚಿಮ್ಮಿತ್ತು. ಹೀಗಾಗಿ ಕಾರಿನ ಭಾಗಗಳು ಹಲವು ಕಡೆ ಚಿಮ್ಮಿರಬಹುದು ಎನ್ನುವ ಬಲವಾದ ನಂಬಿಕೆಯೊಂದಿಗೆ ಎನ್‍ಐಎ ಮೆಟಲ್ ಡಿಟೆಕ್ಟರ್ ಮೊರೆ ಹೋಯ್ತು.

    ಮೆಟಲ್ ಡಿಟೆಕ್ಟರ್ ತಂದು 200 ಮೀಟರ್ ವ್ಯಾಪ್ತಿಯಲ್ಲಿ ಸ್ಕ್ಯಾನ್ ಮಾಡಲು ಮುಂದಾದಾಗ ಒಂದು ಕೀ ಸಿಕ್ಕಿತು. ಇದಾದ ಬಳಿಕ ಕಾರಿನ ಚಾಸಿ ಪತ್ತೆಯಾಯಿತು. ಯಾವುದೇ ಚಾಸಿಯಲ್ಲಿ 19 ಸಂಖ್ಯೆಗಳು ಇರುತ್ತದೆ. ಈ ಚಾಸಿ ನಂಬರ್ ಮೂಲಕ ವೆಹಿಕಲ್ ಐಡಿಂಟಿಫಿಕೇಶನ್ ನಂಬರ್(ವಿಪಿಎನ್) ಪತ್ತೆ ಮಾಡಬಹುದು. ವಿಪಿಎನ್ 19 ಅಕ್ಷರಗಳಿಂದ ಕೂಡಿದ್ದು ಎಲ್ಲಾ ಕಾರುಗಳಿಗೆ ವಿಶಿಷ್ಟವಾಗಿ ನೀಡಲಾಗುತ್ತದೆ. ಈ ಎಲ್ಲ ಮಾಹಿತಿಗಳನ್ನು ಒಂದಕ್ಕೊಂದು ತಾಳೆ ಹಾಕಿದಾಗ ಈ ಕೃತ್ಯಕ್ಕೆ ಬಳಕೆ ಮಾಡಿದ್ದು ಇಕೋ ಕಾರು ಎನ್ನುವುದು ಖಚಿತವಾಯಿತು.

    ಕಾರು ಪತ್ತೆಯಾದ ನಂತರ ಮಾಲೀಕನನ್ನು ಪತ್ತೆ ಹಚ್ಚಲು ಎನ್‍ಐಎ ಮತ್ತಷ್ಟು ಶ್ರಮ ಪಟ್ಟಿದೆ. ಕಾರು ಎಲ್ಲಿಂದ ಮಾರಾಟವಾಗಿ ಇದರ ಮೊದಲ ಮಾಲೀಕರ ಮಾಹಿತಿಯನ್ನು ಕಲೆ ಹಾಕಿದಾಗ 2011 ರಲ್ಲಿ ಅನಂತ್‍ನಾಗ್‍ನಿಂದ ಜಲೀಲ್ ಅಹ್ಮದ್ ಹಕ್ಕಾನಿ ಅವರು ಈ ಕಾರನ್ನು ಮೊದಲು ಖರೀದಿಸಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ವಿಳಾಸದ ಆಧಾರದಲ್ಲಿ ಅವರನ್ನು ವಿಚಾರಿಸಿದಾಗ ನಾನು ಕಾರನ್ನು ಮಾರಾಟ ಮಾಡಿದ್ದೇನೆ ಎಂದು ಹೇಳಿದ್ದಾರೆ. ಬಳಿಕ ಈ ಕಾರು 7 ಜನರಿಗೆ ಮಾರಾಟವಾಗಿ ಕೊನೆಯ ಬಾರಿ ಈ ವರ್ಷದ ಫೆ.4 ರಂದು ಅನಂತ್‍ನಾಗ್ ಜಿಲ್ಲೆಯ ಮುಕ್ಬುಲ್ ಬಟ್ ಮಗ ಸಜ್ಜದ್ ಬಟ್ ಖರೀದಿಸಿದ್ದ ವಿಚಾರ ಬೆಳಕಿಗೆ ಬರುತ್ತದೆ.

    ಈ ಮಾಹಿತಿ ಸಿಕ್ಕಿದ ಕೂಡಲೇ ಎನ್‍ಐಎ ತಂಡ ಜಮ್ಮು ಕಾಶ್ಮೀರ ಪೊಲೀಸರ ಸಹಾಯದಿಂದ ಅನಂತ್‍ನಾಗ್ ಜಿಲ್ಲೆಯ ಬಿಜ್‍ಬೆಹ್ರಾಕ್ಕೆ ತೆರಳಿ ಸಜ್ಜದ್ ಬಟ್‍ಗಾಗಿ ಶೋಧಿಸಿದೆ. ಈ ವೇಳೆ ಆತ ನಾಪತ್ತೆಯಾಗಿದ್ದ. ಅಲ್ಲಿಗೆ ಈ ಕಾರು ಉಗ್ರರಿಗೆ ಸೇರಿದ್ದು ಎನ್ನುವುದು ಖಚಿತವಾಗುತ್ತದೆ.

  • ಭಾರತಕ್ಕಿಂದು ಕರಾಳ ದಿನ – ಪುಲ್ವಾಮಾ ದಾಳಿಗೆ 1 ವರ್ಷ

    ಭಾರತಕ್ಕಿಂದು ಕರಾಳ ದಿನ – ಪುಲ್ವಾಮಾ ದಾಳಿಗೆ 1 ವರ್ಷ

    ನವದೆಹಲಿ: ಇಂದು ಇಡೀ ವಿಶ್ವಕ್ಕೆ ಪ್ರೇಮಿಗಳ ದಿನ, ಆದರೆ ಭಾರತಕ್ಕೆ ಮಾತ್ರ ಕರಾಳ ದಿನ. ಕಳೆದ ವರ್ಷ ಪುಲ್ವಾಮಾದಲ್ಲಿ ಉಗ್ರರ ಅಟ್ಟಹಾಸಕ್ಕೆ ಬರೋಬ್ಬರಿ 40 ಮಂದಿ ಸಿಆರ್‌ಪಿಎಫ್‌ ಯೋಧರು ಬಲಿಯಾಗಿದ್ದರು ಇಂದಿಗೆ ಆ ದುರ್ಘಟನೆಗೆ ಒಂದು ವರ್ಷ.

    ಹೌದು. ಇಡೀ ವಿಶ್ವ ಇಂದು ಸಂಭ್ರಮದಿಂದ ಪ್ರೇಮಿಗಳ ದಿನ ಆಚರಿಸುತ್ತಿದೆ. ಆದರೆ ಭಾರತಕ್ಕೆ ಕರಾಳ ದಿನವಾಗಿ ಬದಲಾಗಿದೆ. ದೇಶ ಕಾಯುವ ಕಾಯಕದಲ್ಲಿದ್ದ 40 ಮಂದಿ ಸಿಆರ್‌ಪಿಎಫ್‌ ಯೋಧರಿದ್ದ ಬಸ್ ಮೇಲೆ ಆತ್ಮಾಹುತಿ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಇಂದಿಗೆ ಆ ದುರ್ಘಟನೆ ಸಂಭವಿಸಿ ಒಂದು ವರ್ಷವಾಗಿದೆ. ಇದನ್ನೂ ಓದಿ: ಕಾರಿನ ‘ಕೀ’ ಯಿಂದ ಪುಲ್ವಾಮಾ ತನಿಖೆ ಓಪನ್! – ಕೀ ಪತ್ತೆಯಾದ ರೋಚಕ ಕಥೆ ಓದಿ

    ಕಳೆದ ವರ್ಷ ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್ಪೊರ ಬಳಿಯ ಅವಾಂತಿಪೋರಾ ಬಳಿ ಆತ್ಮಾಹುತಿ ಬಾಂಬರ್ ವಾಹನದಿಂದ ದಾಳಿ ಮಾಡಲಾಯಿತು. ಜೈಷ್ ಎ ಮೊಹಮ್ಮದ್ ಸಂಘಟನೆ ಉಗ್ರ ಆದಿಲ್ ಅಹ್ಮದ್ ದಾರ್ ಮಾರುತಿ ಇಕೋ ಕಾರ್ ಮೂಲಕ ಕೇಂದ್ರ ಮೀಸಲು ಪೊಲೀಸ್ ಪಡೆಯ 40 ಸೈನಿಕರಿದ್ದ ಬಸ್ ಮೇಲೆ ದಾಳಿ ಮಾಡಿದ್ದ. ಘಟನೆಯಲ್ಲಿ 40 ಮಂದಿ ಸೈನಿಕರು ಹುತಾತ್ಮರಾಗಿದ್ದರು.

    ವ್ಯವಸ್ಥಿತವಾಗಿ ದಾಳಿಗೆ ಸ್ಕೆಚ್ ಹಾಕಿದ್ದ ಆದಿಲ್ ದಾರ್ ಕಾರಿನಲ್ಲಿ 300 ಕೆಜಿ ಗೂ  ಹೆಚ್ಚು ಸ್ಫೋಟಕಗಳನ್ನು ತುಂಬಿಕೊಂಡು ಬಸ್ ಮೇಲೆ ದಾಳಿ ಮಾಡಿದ್ದ ಎಂದು ಆರಂಭಿಕ ತನಿಖೆಯಲ್ಲಿ ಗೊತ್ತಾಗಿತ್ತು. ಇದನ್ನೂ ಓದಿ: ಬಾಲಾಕೋಟ್ ಏರ್ ಸ್ಟ್ರೈಕ್‍ನಲ್ಲಿ ನೂರಕ್ಕೂ ಅಧಿಕ ಉಗ್ರರು ಬಲಿ – ಮೃತದೇಹವನ್ನು ನದಿಗೆ ಎಸೆದಿದ್ದ ಪಾಕ್

    ಘಟನೆಯ ಬಳಿಕ ಪ್ರತಿಕಾರದ ದೊಡ್ಡ ಕೂಗೇ ಕೇಳಿ ಬಂದಿತು. ಪಾಕ್ ಆಕ್ರಮಿತ ಕಾಶ್ಮೀರ ದಾಟಿ  ಬಾಲಕೋಟ್‍ನಲ್ಲಿ ಏರ್ ಸ್ಟ್ರೈಕ್  ಮಾಡುವ ಮೂಲಕ ಭಾರತೀಯ ಸೇನೆ ಉಗ್ರ ನೆಲೆಗಳನ್ನು ಧ್ವಂಸ ಮಾಡಿತ್ತು. 300ಕ್ಕೂ ಹೆಚ್ಚು ಉಗ್ರರನ್ನು ಹತ್ಯೆಗೈದು ನಮ್ಮ ಯೋಧರ ಸಾವಿಗೆ ಪ್ರತಿಕಾರ ತೀರಿಸಿಕೊಳ್ಳಲಾಗಿದೆ. ಏನೆ ಆದರೂ ಉಗ್ರರ ಸಂಚಿಗೆ 40 ಮಂದಿ ಯೋಧರು ಹುತ್ಮಾತ್ಮರಾಗಿದ್ದು ಭಾರತ ಮಾತೆಗೆ ತುಂಬಲಾರದ ನಷ್ಟ. ಇಂದು ಅವರಿಗೆ ಒಂದು ಸೆಲ್ಯೂಟ್ ಮಾಡುತ್ತಾ ಅವರಿಗಾಗಿ ಈ ದಿನವನ್ನು ಸಮರ್ಪಿಸೋಣ.

  • ಭದ್ರತಾ ಲೋಪ ಆರೋಪ – ಪ್ರಿಯಾಂಕಾ ಜೊತೆ ಸೆಲ್ಫಿ ಕೇಳಿದ್ದು ಕಾಂಗ್ರೆಸ್ ಕಾರ್ಯಕರ್ತರು

    ಭದ್ರತಾ ಲೋಪ ಆರೋಪ – ಪ್ರಿಯಾಂಕಾ ಜೊತೆ ಸೆಲ್ಫಿ ಕೇಳಿದ್ದು ಕಾಂಗ್ರೆಸ್ ಕಾರ್ಯಕರ್ತರು

    ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಮನೆಯ ಬಳಿ ಕೆಲವು ಅಪರಿಚಿತರು ಸೆಲ್ಫಿ ಕ್ಲಿಕ್ಕಿಸಿದ ಬಳಿಕ ಭದ್ರತಾ ಲೋಪ ಆರೋಪ ಕೇಳಿಬಂದಿತ್ತು. ಆದರೆ ಈಗ ಸೆಲ್ಫಿ ಕ್ಲಿಕ್ಕಿಸಿದ ವ್ಯಕ್ತಿಗಳು ಕಾಂಗ್ರೆಸ್ ಕಾರ್ಯಕರ್ತರು ಎನ್ನುವ ವಿಚಾರ ಬೆಳಕಿಗೆ ಬಂದಿದೆ.

    ಈ ಬಗ್ಗೆ ಮಾಧ್ಯಮ ವರದಿ ಮಾಡಿದ್ದು ಸೆಲ್ಫಿ ಕ್ಲಿಕ್ಕಿಸಲು ಬಂದವರು ಸೋನಿಯಾ ಗಾಂಧಿಗೆ ಪರಿಚಯಸ್ಥರು. ಅಲ್ಲದೆ ಇದರಲ್ಲಿ ಕುಟುಂಬದವರ ಕೈವಾಡವಿದೆ ಎಂಬುದನ್ನು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ ಎಂದು ಹೇಳಿದೆ.

    ಪ್ರಿಯಾಂಕಾ ಗಾಂಧಿಯವರನ್ನು ಭೇಟಿಯಾಗಲು ತೆರಳಿದ್ದ ಶಾರದಾ ತ್ಯಾಗಿಯವರು ಈ ಕುರಿತು ಪ್ರತಿಕ್ರಿಯಿಸಿದ್ದು, ನಾವು ತೆರಳಿದಾಗ ಯಾವುದೇ ಭದ್ರತಾ ಪರಿಶೀಲನೆ ಇರಲಿಲ್ಲ. ಈ ಕುರಿತು ನನಗೆ ಆಶ್ಚರ್ಯವಾಯಿತು. ಇದು ಹೊಸ ನಿಯಮವಿರಬೇಕು ಎಂದು ನಾನು ಭಾವಿಸಿದೆ. ಈ ಹಿಂದೆ ನಾನು ಅವರನ್ನು ಯಾವತ್ತೂ ಭೇಟಿಯಾಗಿರಲಿಲ್ಲ. ಬಹಳ ವರ್ಷಗಳಿಂದ ಚುನಾವಣೆಗಾಗಿ ಪ್ರಚಾರ ನಡೆಸುತ್ತಿದ್ದೆವು. ಪಕ್ಷದಲ್ಲಿ ಎಲ್ಲರಿಗೂ ನಾನು ಗೊತ್ತು. ಮಾತ್ರವಲ್ಲದೆ ಸೋನಿಯಾ ಗಾಂಧಿಯವರಿಗೂ ನನ್ನ ಹೆಸರು ತಿಳಿದಿದೆ ಎಂದು ವಿವರಿಸಿದ್ದಾರೆ.

    ನಾವು ಪ್ರಿಯಾಂಕಾ ಗಾಂಧಿಯವರನ್ನು ಭೇಟಿಯಾಗಲು ಅಪಾಯಿಂಟ್‍ಮೆಂಟ್ ಪಡೆಯಲು ತೆರಳಿದ್ದೆವು. ಎರಡು ದಿನಗಳ ಹಿಂದೆ ಅವರ ಪಿಎಗೆ ನಾನು ಕರೆ ಮಾಡಿದ್ದೆ. ಅವರು ಡ್ರೈವ್ ಮಾಡುತ್ತಿದ್ದೇನೆ ಆಮೇಲೆ ಕರೆ ಮಾಡಿ ಎಂದು ಹೇಳಿದರು. ನಾವು ಏಮ್ಸ್ ಆಸ್ಪತ್ರೆಯಿಂದ ಬರುತ್ತಿದ್ದೇವೆ ಎಂದು ಹೇಳಿ ಅಪಾಯಿಂಟ್‍ಮೆಂಟ್ ಪಡೆಯಲು ಯತ್ನಿಸಿದೆವು ಎಂದು ತಿಳಿಸಿದ್ದಾರೆ.

    ಶಾರದಾ ತ್ಯಾಗಿಯವರ ಮಗ ಮಾತನಾಡಿ, ಗಾಂಧಿಯವರ ಮನೆಗೆ ತೆರಳಿದಾಗ ನಮ್ಮ ಕುಟುಂಬದವರನ್ನು ಭದ್ರತಾ ಸಿಬ್ಬಂದಿ ನಿಲ್ಲಿಸಿ ತಪಾಸಣೆ ನಡೆಸಲಿಲ್ಲ. ನನ್ನ ತಾಯಿ ಅವರನ್ನು ಭೇಟಿಯಾಗಲು ಹತ್ತಿರ ತೆರಳಿದರೂ ಆಗಲೂ ಇವರು ತಡೆದು ಪರಿಶೀಲಿಸಲಿಲ್ಲ. ಅಲ್ಲದೆ ಯಾವುದೇ ಪ್ರಶ್ನೆಗಳನ್ನು ಕೇಳಲಿಲ್ಲ. ನಾನೂ ಸಹ ವಾಹನ ನಿಲ್ಲಿಸಿ ಗೇಟ್ ತೆರೆದು ಮನೆಯ ಒಳಗೆ ತೆರಳಿದೆ. ಪ್ರಿಯಾಂಕಾ ಗಾಂಧಿಯವರು ಗಾರ್ಡನ್‍ನಲ್ಲಿಯೇ ಇದ್ದರು. ನಮ್ಮ ತಾಯಿ ಅವರನ್ನು ನೋಡಿ ಕಾರಿನಿಂದ ಇಳಿದು, ಅವರ ಬಳಿ ಮಾತನಾಡಿದರು. ಪ್ರಿಯಾಂಕಾ ಗಾಂಧಿ ಎಲ್ಲಿಗೋ ಹೊರಟಿದ್ದರು. ನನ್ನ ಮಗ ಹಾಗೂ ಸಹೋದರಿ ಸಹ ಜೊತೆಗಿದ್ದರು. ಮಕ್ಕಳು ಪ್ರಿಯಾಂಕಾ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಾರಂಭಿಸಿದರು. ನಾವೆಲ್ಲರೂ ಫೋಟೋ ತೆಗೆದುಕೊಳ್ಳಲು ಪ್ರಾರಂಭಿಸಿದೆವು ಎಂದು ಅವರ ಮಗ ಹೇಳಿದ್ದಾರೆ.

    ನವೆಂಬರ್ 26ರಂದು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಲೋಧಿ ಎಸ್ಟೇಟ್ ನ ಮನೆಯ ಬಳಿ ಭದ್ರತೆಯ ಉಲ್ಲಂಘನೆಯಾಗಿತ್ತು. ಅಪರಿಚಿತ ವ್ಯಕ್ತಿಗಳು ಆಗಮಿಸಿ ಪ್ರಿಯಾಂಕಾ ಗಾಂಧಿ ಅವರ ಮನೆಯ ಬಳಿ ಆಗಮಿಸಿ ಸೆಲ್ಫಿ ಕೇಳಲು ಮುಂದಾಗಿದ್ದರು. ಈ ವೇಳೆ ಭದ್ರತಾ ಲೋಪ ಉಂಟಾಗಿತ್ತು ಎನ್ನುವ ಆರೋಪ ಕೇಳಿಬಂದಿತ್ತು.

    ಪ್ರಿಯಾಂಕಾ ಗಾಂಧಿಯವರನ್ನು ಭೇಟಿಯಾಗಿ ಸೆಲ್ಫಿ ತೆಗದುಕೊಳ್ಳಲು ಎಸ್‍ಯುವಿ(ಸ್ಫೋಟ್ಸ್ ಯುಟಿಲಿಟಿ ವೆಹಿಕಲ್) ಕಾರಿನಲ್ಲಿ ಬಂದಿದ್ದರು. ಈ ಕಾರು ಟಾಟಾ ಕಂಪನಿಯದ್ದಾಗಿತ್ತು.

    ಈ ಕುರಿತು ಸೋಮವಾರ ಅವರ ಕಚೇರಿಯ ಅಧಿಕಾರಿಗಳು ಪ್ರತಿಕ್ರಿಯಿಸಿ, ಪ್ರಿಯಾಂಕಾ ಗಾಂಧಿಯವರ ಭದ್ರತೆಯನ್ನು ಸೆಂಟ್ರಲ್ ರಿಸರ್ವ್ ಪೊಲೀಸ್(ಸಿಆರ್ ಪಿಎಫ್) ಹೊತ್ತಿದೆ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದ್ದರು.

    ನವೆಂಬರ್ 26ರಂದು ಮಧ್ಯಾಹ್ನ 2ಗಂಟೆ ಸುಮಾರಿಗೆ ಕಾರು ಅವರ ಮನೆ ಬಳಿ ಬಂದಿತ್ತು. ಮೂವರು ಪುರುಷರು, ಮೂವರು ಮಹಿಳೆಯರು ಹಾಗೂ ಮಕ್ಕಳು ವಾಹನದಲ್ಲಿ ಇದ್ದರು. ಈ ಘಟನೆ ನಡೆದಾಗ ಪ್ರಿಯಾಂಕಾ ಗಾಂಧಿ ಸಭೆಯಲ್ಲಿದ್ದರು. ನಾವು ಅವರ ಅಭಿಮನಿಗಳು, ಅವರನ್ನು ಭೇಟಿಯಾಗಲು ಬಂದಿದ್ದೇವೆ ಎಂದು ಕಾಂಗ್ರೆಸ್ ನಾಯಕರಿಗೆ ಅಪರಿಚಿತರು ತಿಳಿಸಿದ್ದರು ಎಂದು ಮೂಲಗಳು ತಿಳಿಸಿದ್ದವು.

    ನವೆಂಬರ್ ನಲ್ಲಿ ಕೇಂದ್ರ ಸರ್ಕಾರ ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್‍ಪಿಜಿಯ ಝಡ್ ಪ್ಲಸ್ ಭದ್ರತೆಯನ್ನು ಹಿಂಪಡೆದು ಸಿಆರ್‍ಪಿಎಫ್‍ಗೆ ವಹಿಸಿತ್ತು. ಈ ಹಿಂದೆ ಗಾಂಧಿ ಕುಟುಂಬದ ಸದಸ್ಯರಿಗೆ ಝಡ್ ಪ್ಲಸ್ ಭದ್ರತೆ ನೀಡಲಾಗುತ್ತಿತ್ತು, ಇದೀಗ ಕೇವಲ ಸಿಆರ್ ಪಿಎಫ್ ಭದ್ರತೆಯನ್ನು ಒದಗಿಸಲಾಗಿದೆ.

  • ಲಕ್ಷ ಲಕ್ಷ ವರದಕ್ಷಿಣೆ ನಿರಾಕರಿಸಿ 11 ರೂ. ಪಡೆದ ಸಿಐಎಸ್ಎಫ್ ಯೋಧ

    ಲಕ್ಷ ಲಕ್ಷ ವರದಕ್ಷಿಣೆ ನಿರಾಕರಿಸಿ 11 ರೂ. ಪಡೆದ ಸಿಐಎಸ್ಎಫ್ ಯೋಧ

    ಜೈಪುರ: ವಧುವಿನ ತಂದೆ ವರನಿಗೆ ಮದುವೆ ಸಮಾರಂಭದಲ್ಲಿ ನೀಡಲು ಬಂದ 11 ಲಕ್ಷ ರೂ. ವರದಕ್ಷಿಣೆಯನ್ನು ವರ ನಿರಾಕರಿಸುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

    ಸಿಐಎಸ್ಎಫ್ ಯೋಧ ಜಿತೇಂದ್ರ ಸಿಂಗ್ ವರದಕ್ಷಿಣೆ ನಿರಾಕರಿಸಿ ಮಾದರಿಯಾಗಿದ್ದು, ಇದೇ ತಿಂಗಳ 8 ರಂದು ಜೈಪುರದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಮದುವೆಯ ವೇಳೆ ವಧುವಿನ ತಂದೆ ಸಾಂಪ್ರಧಾಯಿಕವಾಗಿ ನೀಡುವ ತೆಂಗಿನ ಕಾಯಿಯೊಂದಿಗೆ 11 ಲಕ್ಷ ರೂ. ಗಳನ್ನು ವರನಿಗೆ ನೀಡಲು ತಂದಿದ್ದರು. ಆದರೆ ವರದಕ್ಷಿಣೆಯನ್ನು ನಿರಾಕರಿಸಿದ ಜಿತೇಂದ್ರ ಅವರು ಕೇವಲ 11 ರೂ. ಹಾಗೂ ತೆಂಗಿನ ಕಾಯಿಯನ್ನು ಸ್ವೀಕರಿಸಿದ್ದಾರೆ.

    ವರದಕ್ಷಿಣೆ ನಿರಾಕರಿಸುವ ಕುರಿತು ಪ್ರತಿಕ್ರಿಯೆ ನೀಡಿರುವ ಜಿತೇಂದ್ರ ಸಿಂಗ್, ತಾನು ಮದುವೆಯಾಗುತ್ತಿರುವ ಯುವತಿ ರಾಜಸ್ಥಾನ ನ್ಯಾಯಾಂಗ ಸೇವೆಯಲ್ಲಿ ಕಾರ್ಯನಿರ್ವಹಿಸಲು ಪರೀಕ್ಷೆಯನ್ನು ಎದುರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಮ್ಯಾಜಿಸ್ಟ್ರೇಟ್ ಆಗಲಿದ್ದಾರೆ. ಇದು ನಮ್ಮ ಕುಟುಂಬಕ್ಕೆ ಹೆಮ್ಮೆ ಎನಿಸಲಿದ್ದು, ಹಣಕ್ಕಿಂತಲೂ ಹೆಚ್ಚಿನ ಗೌರವವನ್ನು ತಂದುಕೊಡುತ್ತದೆ ಎಂದಿದ್ದಾರೆ.

    ವಧುವಿನ ತಂದೆ ಗೋವಿಂದ್ ಸಿಂಗ್ ಮಾತನಾಡಿ, ಮೊದಲು ವರ ವರದಕ್ಷಿಣೆ ಬೇಡ ಎನ್ನುತ್ತಿದಂತೆ ನನಗೆ ಶಾಕ್ ಆಗಿತ್ತು. ವರನ ಕುಟುಂಬಸ್ಥರಿಗೆ ಮದುವೆ ಕಾರ್ಯಗಳು ಖುಷಿ ಕೊಟ್ಟಿಲ್ಲ ಎನಿಸಿತ್ತು. ಆದರೆ ಆ ಬಳಿಕವೇ ಅವರು ವರದಕ್ಷಿಣೆ ನಿರಾಕರಿಸುತ್ತಿರುವ ಕಾರಣ ತಿಳಿಯಿತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಅಂದಹಾಗೇ ಜಿತೇಂದ್ರ ಸಿಂಗ್ ಅವರ ಪತ್ನಿ ಕಾನೂನಿನಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಈಗ ಡಾಕ್ಟರೇಟ್ ಓದುತ್ತಿದ್ದಾರೆ. ಮದುವೆಯಾದ ಬಳಿಕವೂ ವಿದ್ಯಾಭ್ಯಾಸ ಮುಂದುವರಿಸಲು ಕುಟುಂಬಸ್ಥರು ಸಮ್ಮತಿ ಸೂಚಿಸಿದ್ದಾರೆ.