Tag: CRPF Yodha

  • ನೋವಿನಲ್ಲೂ ಪತಿಗೆ ಸೆಲ್ಯೂಟ್ ಮಾಡಿ ಭಾರತ್ ಮಾತಾಕೀ ಜೈ ಎಂದ ಗುರು ಪತ್ನಿ

    ನೋವಿನಲ್ಲೂ ಪತಿಗೆ ಸೆಲ್ಯೂಟ್ ಮಾಡಿ ಭಾರತ್ ಮಾತಾಕೀ ಜೈ ಎಂದ ಗುರು ಪತ್ನಿ

    ಮಂಡ್ಯ: ಗುರು ಅಮರ್ ರಹೇ.. ಗುರು ಅಮರ್ ರಹೇ ಎಂಬ ಘೋಷಣೆಗಳೊಂದಿಗೆ ಯೋಧನ ಅಂತಿಮ ವಿಧಿ ವಿಧಾನ ನಡೆಸಲು ಸಿದ್ಧತೆ ಆರಂಭವಾಗುತ್ತಿದಂತೆ ಗುರು ಅವರ ಪತ್ನಿ ಕಲಾವತಿ ಅವರಿಗೆ ಅಂತಿಮ ವಂದನೆ ಸಲ್ಲಿಸಲು ಅವಕಾಶ ನೀಡಲಾಯಿತು. ಈ ವೇಳೆ ಪತಿಯ ಚಿತೆಯ ಮುಂದೆ ನಿಂತ ಅವರು ಸೆಲ್ಯೂಟ್ ಮಾಡಿ ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗಿದರು.

    ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಮಡಿದ ಮಂಡ್ಯ ವೀರ ಯೋಧಯೋಧ ಎಚ್ ಗುರು ಪಂಚಭೂತಗಳಲ್ಲಿ ಲೀನಾರಾಗಿದ್ದಾರೆ. ಯೋಧನ ಅಂತಿಮ ದರ್ಶನ ಪಡೆಯಲು ನೆರೆದಿದ್ದ ಜನಸಾಗರ ನಡುವೆ ಸೆಲ್ಯೂಟ್ ಮಾಡಿ ಪತ್ನಿ ದೇಶ ಪ್ರೇಮ ಮೆರೆದಾಗ ಅಲ್ಲಿದ್ದ ಜನರ ಕಣ್ಣಲ್ಲಿ ನೀರು ಜಿನುಗಿತು.

    ಸರ್ಕಾರದ ಸಕಲ ಗೌರವ ವಂದನೆ ಸಲ್ಲಿಸಿದ ಬಳಿಕ ಸಿಎಂ ಕುಮಾರಸ್ವಾಮಿ ಅವರು ಗುರು ಪಾರ್ಥಿವ ಶರೀರದ ಮೇಲೆದಿದ್ದ ತ್ರಿವರ್ಣ ಧ್ವಜವನ್ನು ಪತ್ನಿಗೆ ಹಸ್ತಾಂತರಿಸಿದರು. ಇದೇ ವೇಳೆ ಸರ್ಕಾರದಿಂದ ಘೋಷಣೆ ಮಾಡಿದ್ದ 25 ಲಕ್ಷ ರೂ. ಚೆಕನ್ನು ನೀಡಿ ಸಾಂತ್ವನ ಹೇಳಿದರು.

    ಗುರು ಸಹೋದರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದಾಗ ನೆರೆದಿದ್ದ ಜನಸಾಗರ ಭೋಲೋ ಭಾರತ್ ಮಾತಾಕೀ ಜೈ, ವೀರ ಯೋಧ ಗುರುಗೆ ಜೈ, ವಂದೇ ಮಾತರಂ ಘೋಷಣೆಗಳನ್ನು ಕೂಗಿ ಅಂತಿಮ ನಮನ ಸಲ್ಲಿಸಿದರು. ನೆರೆದಿದ್ದ ಜನರಲ್ಲಿ ದೇಶ ಪ್ರೇಮ ಉಕ್ಕಿ ಹರಿದಿತ್ತು. ಇದೇ ವೇಳೆ ಜನ ಸಾಗರವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಇದಕ್ಕೂ ಮುನ್ನ ಬೆಂಗಳೂರಿನಿಂದ ಯೋಧರ ಹುಟ್ಟೂರಿನ ವರೆಗೂ ಕೂಡ ಸಾವಿರಾರರು ಜನರು ರಸ್ತೆಯಲ್ಲಿ ನಿಂತು ದರ್ಶನ ಪಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗುರು ಅಮರ್ ರಹೇ.. ಪಂಚಭೂತಗಳಲ್ಲಿ ವೀರಯೋಧ ಲೀನ

    ಗುರು ಅಮರ್ ರಹೇ.. ಪಂಚಭೂತಗಳಲ್ಲಿ ವೀರಯೋಧ ಲೀನ

    ಮಂಡ್ಯ: ಹುತಾತ್ಮ ಯೋಧ ಗುರು.ಎಚ್ ಅವರ ಅಂತ್ಯಕ್ರಿಯೆ ಜನಸಾಗರದ ನಡುವೆ ಶನಿವಾರ ರಾತ್ರಿ ಮದ್ದೂರು ತಾಲೂಕಿನ ಗುಡಿಗೇರಿ ಸಮೀಪದ ಮೆಳ್ಳಹಳ್ಳಿಯಲ್ಲಿ ನೆರವೇರಿತು.

    ಅಂತ್ಯ ಕ್ರಿಯೆಗೂ ಮುನ್ನ ಗುರು ಅವರ ನಿವಾಸದಲ್ಲಿ ಕೆಲ ಹೊತ್ತು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಹುತಾತ್ಮ ಯೋಧ ಗುರು ಅವರ ಪತ್ನಿ ಕಲಾವತಿ ದುಃಖದ ನಡುವೆ ಪತಿಗೆ ಸೆಲ್ಯೂಟ್ ಹೊಡೆದು ದೇಶಪ್ರೇಮ ಮೆರೆದರು. ಇದನ್ನು ಓದಿ: ರಸ್ತೆಯ ಇಕ್ಕೆಲಗಳಲ್ಲಿ ಜನ ಸಾಗರ: ವೀರಯೋಧನಿಗೆ ಕನ್ನಡಿಗರ ನಮನ

    ಪುತ್ರನ ಪಾರ್ಥಿವ ಶರೀರ ನೋಡಿದ ತಂದೆ ತಾಯಿಯ ಆಕ್ರಂದನ ಮುಗಿಲುಮುಟ್ಟಿತ್ತು. ಈ ವೇಳೆಯೇ ಗುರು ಅವರಿಗೆ ಸಂಬಂಧಿಸಿದ ವಸ್ತುಗಳನ್ನು ಸಿಆರ್‍ಪಿಎಫ್ ಯೋಧರು ಹಸ್ತಾಂತರ ಮಾಡಿದರು.

    ಗುಡಿಗೆರೆ ಕಾಲೊನಿ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಸೇರಿ ಅಂತಿಮ ದರ್ಶನ ಪಡೆದರು. ಮುರುಘಾ ಶ್ರೀಗಳು ಕೂಡ ಗ್ರಾಮಕ್ಕೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಸುಮಾರು 15 ನಿಮಿಷದ ಬಳಿಕ ಅಂತ್ಯಕ್ರಿಯೆ ಸ್ಥಳದತ್ತ ಗುರು ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು. ಇದನ್ನು ಓದಿ: ಯೋಧನಾದ್ರೂ ಮೂಲ ಕಸುಬು ಮರೆತಿರಲಿಲ್ಲ ವೀರ ಪುತ್ರ

    ಅಂತ್ಯಕ್ರಿಯೆ ನಡೆಯುವ ಜಾಗದಲ್ಲಿ ಸೇರಿದ್ದ ಸಾವಿರಾರು ಜನರು ವಂದೇ ಮಾತರಂ, ಯೋಧ ಗುರೂಗೆ ಜೈ ಎಂದು ಒಕ್ಕೊರಲಿನ ಘೋಷಣೆ ಕೂಗಿದರು. ಈ ವೇಳೆ ಪೊಲೀಸರು ಅಂತ್ಯಕ್ರಿಯೆ ಜಾಗದಲ್ಲಿ ನಿಂತಿದ್ದ ಜನರನ್ನು ಹಿಂದೆ ಸರಿಸಿ, ಗುರು ಅವರ ಕುಟುಂಬಸ್ಥರಿಗೆ ಹಾಗೂ ಗಣ್ಯರಿ ಭದ್ರತೆ ಒದಗಿಸಿದರು. ಬಳಿಕ ರಾಷ್ಟ್ರಗೀತೆ ಹೇಳುವ ಮೂಲಕ ವೀರ ಯೋಧ ಗುರು ಅವರಿಗೆ ಸಕಲ ಸರ್ಕಾರಿ ಗೌರವವನ್ನು ಸಲ್ಲಿಸಿ ಮಡಿವಾಳ ಸಂಪ್ರದಾಯದಂತೆ ರಾತ್ರಿ 8.30ಕ್ಕೆ ಅಂತ್ಯಕ್ರಿಯೆ ನಡೆಸಲಾಯಿತು. ಸಹೋದರ ಮಧು ಅವರು ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಇದನ್ನು ಓದಿ: ನಿನ್ನೆಯಿಂದ ಪತಿಯನ್ನು ಕಾಯ್ತಿದ್ದೇನೆ, ಇನ್ನು ಬಂದಿಲ್ಲ: ಯೋಧನ ಪತ್ನಿಯ ಕಣ್ಣೀರು

    ಮಾಜಿ ಸಿಎಂ ಎಸ್.ಎಂ.ಕೃಷ್ಣ, ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಕೇಂದ್ರ ಸಚಿವ ಸದಾನಂದ ಗೌಡ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಶಾಸಕರಾದ ಎಂ.ಶ್ರೀನಿವಾಸ್, ಸುರೇಶ್‍ಗೌಡ, ಎಂಎಲ್‍ಸಿ ಕೆಟಿ.ಶ್ರೀಕಂಠೇಗೌಡ, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಸೇರಿದಂತೆ ಅನೇಕ ಗಣ್ಯರು ಗುರು ಅವರಿಗೆ ಅಂತಿಮ ನಮನ ಸಲ್ಲಿಸಿದರು. ಅಂತ್ಯಕ್ರಿಯೆಯಲ್ಲಿ ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಸಾಗರೋಪಾದಿಯಲ್ಲಿ ಜನರು ಸೇರಿದ್ದರು.

    https://www.youtube.com/watch?v=B9rOIgx736A

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಸ್ತೆಯ ಇಕ್ಕೆಲಗಳಲ್ಲಿ ಜನ ಸಾಗರ: ವೀರಯೋಧನಿಗೆ ಕನ್ನಡಿಗರ ನಮನ

    ರಸ್ತೆಯ ಇಕ್ಕೆಲಗಳಲ್ಲಿ ಜನ ಸಾಗರ: ವೀರಯೋಧನಿಗೆ ಕನ್ನಡಿಗರ ನಮನ

    – ಸೇನಾ ವಾಹನದ ಜೊತೆ ಮೆರವಣಿಗೆಯಲ್ಲಿ ಸಾಗಿದ ಜನತೆ
    – ಎರಡು ಬದಿಯಲ್ಲಿ ನಿಂತು ಹುತಾತ್ಮ ಗುರುವಿಗೆ ನಮನ

    ಬೆಂಗಳೂರು: ಅಮರ್ ರಹೇ, ಗುರು ಅಮರ್ ರಹೇ, ಹುತಾತ್ಮ ಯೋಧ ಗುರುವಿಗೆ ಜಯವಾಗಲಿ, ಭಾರತ್ ಮಾತಾ ಕೀ ಜೈ… ಇದು ಹುತಾತ್ಮ ಗುರು ಅವರ ಮೃತ ಶರೀರರವನ್ನು ರಸ್ತೆಯಲ್ಲಿ ಸಾಗುತ್ತಿದ್ದಾಗ ಕೇಳಿ ಬಂದ ಧ್ವನಿ.

    ಎಚ್‍ಎಎಲ್‍ನಿಂದ ಸೇನಾ ವಾಹನದ ಮೂಲಕ ರಸ್ತೆ ಮಾರ್ಗವಾಗಿ ಗುರು ಅವರ ಮೃತ ದೇಹವನ್ನು ಹುಟ್ಟೂರು ಮದ್ದೂರು ತಾಲೂಕಿನ ಗುಡುಗೆರಿಯನ್ನು ತಲುಪಲಿದೆ ಎನ್ನುವ ವಿಚಾರ ಗೊತ್ತಾಗುತ್ತಿದ್ದಂತೆ ಜನ ರಸ್ತೆ ಇಕ್ಕೆಲಗಳಲ್ಲಿ ನಿಂತು ಕಾಯ ತೊಡಗಿದರು. ಸೇನಾ ವಾಹನ ರಸ್ತೆಯಲ್ಲಿ ಸಾಗುತ್ತಿದ್ದಂತೆ ಗುರು ಅಮರ್ ರಹೇ ಎಂಬ ಘೋಷಣೆಗಳನ್ನು ಕೂಗಿ ಜನ ಗೌರವ ಸಲ್ಲಿಸಿದರು. ಇನ್ನು ಕೆಲವರು ಸೇನಾ ವಾಹನ ನಿಲ್ಲಿಸಿ ಹೂವಿನ ಹಾರವನ್ನು ಹಾಕಿ ಅಂತಿಮ ನಮನ ಸಲ್ಲಿಸಿದರು.

    ಗುರು ಮೃತದೇಹವಿದ್ದ ಸೇನಾ ವಿಮಾನ ದೆಹಲಿಯಿಂದ ಹೊರಟು ಎಚ್‍ಎಎಲ್ ವಿಮಾನ ನಿಲ್ದಾಣವನ್ನು 11.45ಕ್ಕೆ ತಲುಪಿತು. ಈ ವೇಳೆ ಸಿಎಂ ಕುಮಾಸ್ವಾಮಿ ಅವರು, ಗುರು ಅವರಿಗೆ ಹೂಗುಚ್ಚವನ್ನಿಟ್ಟು ಅಂತಿಮ ನಮನ ಸಲ್ಲಿಸಿ, ಹುತಾತ್ಮ ಗುರು ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಧನವನ್ನು ಫೋಷಿಸಿದರು. ಬಳಿಕ ಕೇಂದ್ರ ಸಚಿವ ಸದಾನಂದಗೌಡ, ಗೃಹ ಸಚಿವ ಎಂ.ಬಿ.ಪಾಟೀಲ್, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕ ಗಣ್ಯರು ಹುತಾತ್ಮ ಗುರು ಅವರಿಗೆ ಹೂಮಾಲೆ ಅರ್ಪಿಸುವ ಮೂಲಕ ಅಂತಿಮ ನಮನ ಸಲ್ಲಿಸಿದರು.

    ಗುರು ಪಾರ್ಥಿವ ಶರೀರವನ್ನು ಸಾಗಿಸಲು ರಾಜ್ಯ ಸರ್ಕಾರವು ಸೇನಾ ಹೆಲಿಕಾಪ್ಟರ್ ಕೇಳಿತ್ತು. ಆದರೆ ಕೊನೆ ಕ್ಷಣದಲ್ಲಿ ಸರ್ಕಾರದಿಂದ ಈ ಮನವಿ ಬಂದಿದ್ದರಿಂದ ಹೆಲಿಕಾಪ್ಟರ್ ನೀಡಲು ಸಾಧ್ಯವಿಲ್ಲ ಎಂದು ಸೇನೆ ತಿಳಿಸಿತ್ತು. ಹೀಗಾಗಿ ಗುರು ಶವ ಸೇನಾ ವಾಹನದಲ್ಲಿ ರಸ್ತೆ ಮೂಲಕ ಸಾಗಿಸಲು ನಿರ್ಧರಿಸಲಾಗಿತ್ತು.

    ಬೆಂಗಳೂರು ನಗರ ದಾಟುವವರೆಗೂ ರಸ್ತೆಯ ಎರಡೂ ಬದಿಯಲ್ಲಿ ಜನರು ನಿಂತು ಹುತಾತ್ಮ ಯೋಧ ಗುರು ಅವರ ಹೆಸರನ್ನು ಹೇಳಿ ಜೈ ಕಾರ ಹಾಕಿದರು. ಕೆಲವರು ವಾಹನವನ್ನು ಹತ್ತಿ ಗುರು ಅವರ ಅಂತಿಮ ದರ್ಶನ ಪಡೆದರು. ಭಾರತ್ ಮಾತಾಕೀ ಜೈ, ವೀರ್ ಯೋಧ ಗುರು ಅವರಿಗೆ ಜೈ ಎನ್ನುವ ಘೋಷಣೆ ರಸ್ತೆಯ ಉದ್ದಗಲಕ್ಕೂ ಕೇಳಿ ಬರುತ್ತಿತ್ತು. ಗುರು ಅವರ ಪಾರ್ಥಿವ ಶರೀರ ಸಾಗಿಸುತ್ತಿದ್ದ ಸೇನಾ ವಾಹನದ ಹಿಂದೆ ಕೆಲವರು ಬೈಕ್‍ನಲ್ಲಿ ಸಾಗಿದರು.

    ಕೆಂಗೇರಿ, ಕುಂಬಳಗೋಡು, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು ತಾಲೂಕಿನ ಶಿವಪುರದ ಜನರು ಸೇನಾ ವಾಹನ ಬರುವಿಕೆಗಾಗಿ ಸುಮಾರು ಹೊತ್ತು ಕಾದು ನಿಂತಿದ್ದರು. ವಾಹನ ಬರುತ್ತಿದ್ದಂತೆ ಜಯ ಘೋಷ ಕೂಗಿ, ಸ್ವಲ್ಪ ಹೊತ್ತು ನಿಲ್ಲಿಸಿ ಅಂತಿಮ ನಮನ ಸಲ್ಲಿಸಿದರು.

    https://www.youtube.com/watch?v=8VMxyfP3zjM

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv