Tag: Crow

  • 3 ವರ್ಷದ ಹಿಂದೆ ಕಾಗೆ ಹೊತ್ತೊಯ್ದ ಚಿನ್ನದ ಬಳೆ ಮರಳಿ ಒಡತಿಯ ಕೈಗೆ

    3 ವರ್ಷದ ಹಿಂದೆ ಕಾಗೆ ಹೊತ್ತೊಯ್ದ ಚಿನ್ನದ ಬಳೆ ಮರಳಿ ಒಡತಿಯ ಕೈಗೆ

    ತಿರುವನಂತಪುರಂ: ಮೂರು ವರ್ಷದ ಹಿಂದೆ ಕಾಗೆ (Crow) ಹೊತ್ತೊಯ್ದಿದ್ದ ಚಿನ್ನದ ಬಳೆ (Gold Bangle) ಮರಳಿ ಒಡತಿಯ ಕೈ ಸೇರಿದ ಘಟನೆ ಕೇರಳದ ಮಲಪ್ಪುರಂನ (Malappuram) ತ್ರಿಕ್ಕಲಂಗೋಡ್‌ನಲ್ಲಿ (Trikkalangode) ನಡೆದಿದೆ.

    ಮೂರು ವರ್ಷದ ಹಿಂದೆ ರುಕ್ಮಿಣಿ ಕೆಲಸ ಮಾಡುವ ವೇಳೆ ಒಂದೂವರೆ ಪವನ್ ತೂಕವಿದ್ದ (12 ಗ್ರಾಂ) ಚಿನ್ನದ ಬಳೆಯನ್ನು ಕೈಯಿಂದ ತೆಗೆದಿಟ್ಟಿದ್ದರು. ಕ್ಷಣಾರ್ಧದಲ್ಲಿ ಕಾಗೆಯೊಂದು ಅವರ ಬಳೆಯನ್ನು ಎಗರಿಸಿತ್ತು. ಬಳೆಗಾಗಿ ಸ್ವಲ್ಪ ದಿನ ಹುಡುಕಾಡಿದ ರುಕ್ಮಿಣಿ ಕುಟುಂಬಸ್ಥರು ಬಳಿಕ ಅದರ ಆಸೆ ಕೈಬಿಟ್ಟಿದ್ದರು. ಇದನ್ನೂ ಓದಿ: ನಿತ್ಯ 1.05 ಕೋಟಿ ಲೀಟರ್ ಹಾಲು – KMF ಇತಿಹಾಸದಲ್ಲೇ ಮೊದಲ ಬಾರಿಗೆ ಅತಿಹೆಚ್ಚು ಸಂಗ್ರಹ

    ಮೂರು ತಿಂಗಳ ಹಿಂದೆ ಅನ್ವರ್ ಸಾದತ್ ಎಂಬವರು ತೆಂಗಿನಕಾಯಿ ಕೀಳಲು ಹೋದ ವೇಳೆ ಮಗಳಿಗಾಗಿ ಮಾವು ಕೀಳಲು ಅನುಮತಿ ಪಡೆದು ಮರ ಹತ್ತಿ ಕೊಂಬೆ ಅಲ್ಲಾಡಿಸಿದಾಗ ಹೊಳೆಯುತ್ತಿರುವ ವಸ್ತೊಂದು ಮರದಿಂದ ಕೆಳಗೆ ಬಿದ್ದಿದೆ. ಅದನ್ನು ಪುತ್ರಿ ಫಾತಿಮಾ ಹುದಾ ಗಮನಿಸಿದ್ದಾಳೆ. ಬಳಿಕ ಅದು ಚಿನ್ನವೇ ಎಂದು ಪರಿಶೀಲಿಸಿದಾಗ ಬಳೆ ತುಂಡಾಗಿದ್ದು, ಅಸಲಿ ಚಿನ್ನವೆಂಬುದು ಖಚಿತವಾಗಿದೆ. ರುಕ್ಮಿಣಿ ಮನೆಯಿಂದ ಕೇವಲ 50 ಮೀಟರ್ ದೂರದಲ್ಲೇ ಈ ಚಿನ್ನದ ಬಳೆ ಪತ್ತೆಯಾಗಿದೆ. ಇದನ್ನೂ ಓದಿ: ಕೆ.ಶಿವನಗೌಡ ನಾಯಕ್ ಕೊರಳಲ್ಲಿ ನವಿಲುಗರಿ ಹಾರ – ವಿವಾದದಲ್ಲಿ ಸಿಲುಕಿದ ಮಾಜಿ ಸಚಿವ

    ಅನ್ವರ್ ಸಾದತ್ ಈ ಚಿನ್ನದ ಬಳೆಯನ್ನು ಊರಿನ ಲೈಬ್ರರಿಗೆ ಕೊಟ್ಟು ಮಾಲೀಕರ ಕೈಸೇರಲಿ ಎಂದು ಪ್ರಾಮಾಣಿಕತೆ ಮೆರೆದಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಪತಿಯೊಂದಿಗೆ ಲೈಬ್ರರಿಗೆ ತೆರಳಿದ ರುಕ್ಮಿಣಿ ಬಳೆ ತನ್ನದೇ ಎಂದು ಖಚಿತಪಡಿಸಿಕೊಂಡಿದ್ದಾರೆ. ಕಳೆದು ಹೋಗಿದ್ದ ಚಿನ್ನದ ಬಳೆ ನೋಡಿ ಒಡತಿ ರುಕ್ಮಿಣಿ ದಿಲ್ ಖುಷ್ ಆಗಿದ್ದಾರೆ. ಪತ್ತೆ ಹಚ್ಚಿದವರ ಕೈಯಿಂದಲೇ ಬಳೆ ಪಡೆಯಬೇಕು ಎಂಬ ಮನವಿ ಮೇರೆಗೆ ಊರಿನವರು ಅನ್ವರ್ ಸಾದತ್ ಕೈಯಿಂದಲೇ ರುಕ್ಮಿಣಿ ಅವರಿಗೆ ಬಳೆಯನ್ನು ಮರಳಿ ಕೊಡಿಸಿದ್ದಾರೆ. ಬಳೆಯನ್ನು ಪಡೆದ ರುಕ್ಮಿಣಿ ಈ ಬಳೆಯನ್ನು ಮರಳಿ ಪಡೆಯುತ್ತೇನೆ ಎಂದು ಭಾವಿಸಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಹೆಣ್ಣು ಅಂತ 7 ವರ್ಷದ ಮಗಳನ್ನು ಕಾಲುವೆಗೆ ತಳ್ಳಿ ಕೊಂದ ಪಾಪಿ ತಂದೆ

  • ಗಾಯಗೊಂಡ ಕಾಗೆಯನ್ನು ಮಗುವಿನಂತೆ ಆರೈಕೆ ಮಾಡಿದ ವ್ಯಕ್ತಿ

    ಗಾಯಗೊಂಡ ಕಾಗೆಯನ್ನು ಮಗುವಿನಂತೆ ಆರೈಕೆ ಮಾಡಿದ ವ್ಯಕ್ತಿ

    ಕೊಪ್ಪಳ: ಕಾಗೆ ಮುಟ್ಟಿದ ಗಡಿಗೆ ಒಳಗೆ ತರಬಾರದು ಎನ್ನುವ ಜನಗಳ ನಡುವೆ, ಕಾಗೆಯನ್ನು ಅಪಶಕುನ ಎಂದು ಮಾತನಾಡುವ ಜನರು ಇದ್ದಾರೆ. ಕಾಗೆ ಅಶುಭ ಎಂದು ಕರೆಯುವ ಜನಗಳ ನಡುವೆ ಇಲ್ಲೊಬ್ಬ ವ್ಯಕ್ತಿ ಕಾಗೆಯನ್ನು (Crow) ಕೋಗಿಲೆಯಂತೆ ಸಾಕುತ್ತಿದ್ದಾರೆ.

    ಕೊಪ್ಪಳದ ಕಾರಟಗಿ ತಾಲೂಕಿನ ಮರ್ಲನ ಹಳ್ಳಿಯ ಶ್ರೀನಿವಾಸ ರೆಡ್ಡಿ ಅವರು ಕಾಗೆ ಸಾಕುತ್ತಿದ್ದಾರೆ. ಶ್ರೀನಿವಾಸ್ ಅವರ ಅಂಗಡಿಯ ಮುಂದೆ ಬೈಕಿಗೆ ಡಿಕ್ಕಿಯಾಗಿ ಗಾಯಗೊಂಡಿರುವ ಕಾಗೆಯನ್ನು ತೆಗೆದುಕೊಂಡು ಅದಕ್ಕೆ ಔಷಧೋಪಚಾರ ನೀಡಿ ಸಾಕುತ್ತಿದ್ದಾರೆ. ಗಾಯಗೊಂಡ ಕಾಗೆಯನ್ನು ಪಶು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ವೈದ್ಯರಿಗೆ ತೋರಿಸಿ ಅದು ಗುಣಮುಖವಾಗಲು ಔಷಧಗಳನ್ನು ನೀಡುತ್ತಿದ್ದಾರೆ.

    ಮನೆಯವರು ಹಾಗೂ ಪರಿಚಿತರೆಲ್ಲರಿಂದ ಅದಕ್ಕೆ ವಿರೋಧ ವ್ಯಕ್ತವಾದರೂ ಕೂಡ ಅದನ್ನು ಗುಣಮುಖವಾಗುವವರೆಗೂ ಉಪಚಾರ ಮಾಡುತ್ತೇನೆ ಎಂದು ದೃಢಸಂಕಲ್ಪದಿಂದ ಕಾಗೆಗೆ ಔಷಧಿ ನೀಡಿದ್ದಾರೆ. ಇದೀಗ ಸ್ವಲ್ಪ ಸ್ವಲ್ಪ ಚೇತರಿಸಿಕೊಳ್ಳುತ್ತಿರುವ ಕಾಗೆ ಪೂರ್ತಿ ಗುಣಮುಖವಾದ ನಂತರ ಅದನ್ನು ಬಿಟ್ಟು ಬಿಡುವುದಾಗಿ ಹೇಳುತ್ತಿದ್ದಾರೆ. ಇದನ್ನೂ ಓದಿ: ಕೃಷ್ಣ ಭೈರೇಗೌಡರ ಆರೋಪ ತನಿಖೆಯಾಗುವ ತನಕ ಸದನಕ್ಕೆ ಹೋಗಲ್ಲ: ಬಿ.ಆರ್ ಪಾಟೀಲ್

  • ಕಾಗೆ ಕಾಟಕ್ಕೆ ಚಿತ್ರದುರ್ಗದ ಓಬಳಾಪುರ ಜನ ಸುಸ್ತು..!

    ಕಾಗೆ ಕಾಟಕ್ಕೆ ಚಿತ್ರದುರ್ಗದ ಓಬಳಾಪುರ ಜನ ಸುಸ್ತು..!

    ಚಿತ್ರದುರ್ಗ: ಅದೊಂದು ಅಪರೂಪದ ಪಕ್ಷಿ. ಹಿಂದೂ ಸಂಪ್ರದಾಯದ ಕೆಲ ಸಮುದಾಯಗಳಲ್ಲಿ ಆ ಪಕ್ಷಿಗೆ ಊಟವಿಟ್ಟು ಅದರ ಆಗಮನಕ್ಕಾಗಿ ಜನರು ಕಾಯ್ತಾರೆ. ಆ ಪಕ್ಷಿ ಊಟವನ್ನು ಸೇವಿಸಿದ್ರೆ ಮನುಷ್ಯನ ಜನ್ಮಕ್ಕೆ ಮುಕ್ತಿ ಎಂಬ ನಂಬಿಕೆ ಸಹ ಇದೆ. ಆದರೆ ಈ ಊರಲ್ಲಿ ಮಾತ್ರ ಆ ಪಕ್ಷಿಯ ಹೆಸರು ಕೇಳಿದ್ರೆ ಸಾಕು, ಜನರು ಬೆಚ್ಚಿ ಬೀಳ್ತಾರೆ. ರಸ್ತೆಯಲ್ಲಿ ಒಬ್ಬರೇ ಓಡಾಡಬೇಕೆಂದರೂ ಒಮ್ಮೆ ಯೋಚಿಸ್ತಾರೆ.

    ಚಿತ್ರದುರ್ಗ ಜಿಲ್ಲೆ ಭರಮಸಾಗರ ಹೋಬಳಿಯ ಓಬಳಾಪುರ ಗ್ರಾಮದ ರಸ್ತೆಯಲ್ಲಿ ಒಂಟಿಯಾಗಿ ಓಡಾಡೋರನ್ನು ಕಂಡರೆ ವಿಮಾನದಷ್ಟೇ ಸರ್ರನೆ ಬಂದು ತಲೆ ಮೇಲೆ ಕುಟುಕಿ ಹೋಗುತ್ತದೆ. ಕಳೆದ 6 – 7 ತಿಂಗಳುಗಳಿಂದ ಒಂಟಿ ಕಾಗೆಯೊಂದು ಗ್ರಾಮಸ್ಥರಿಗೆ ಸಿಕ್ಕಾಪಟ್ಟೆ ಕ್ವಾಟ್ಲೆ ಕೊಡ್ತಿದೆ. ಕಾಗೆಯ ವಿಚಿತ್ರ ಕಾಟದಿಂದ ಗ್ರಾಮಸ್ಥರು ಅಕ್ಷರಶಃ ಹೈರಾಣಾಗಿದ್ದಾರೆ. ಒಂಟಿ ಮನುಷ್ಯರಿಗೆ ಕುಟುಕೋ ಈ ಕಾಗೆಗೆ ಮನೆ ಕಿಟಕಿಯ ಗಾಜು, ಬೈಕ್ ಮಿರರ್, ಕಾರಿನ ಗ್ಲಾಸ್ ಕಂಡ್ರೂ ಬಿಪಿ ನೆತ್ತಿಗೇರಿ ಪಟಪಟ ಅಂತ ಕುಕ್ಕುತ್ತಂತೆ. ಹಾಗೆಯೇ ಗಾಜುಗಳೇನಾದ್ರೂ ಕಣ್ಣಿಗೆ ಬಿದ್ರೆ ಸಾಕಾಗೋವರೆಗೂ ಕುಟುಕುತ್ತಲೇ ಇರುತ್ತದೆ. ಹೀಗೆ ಕಾಗೆ ಕುಟುಕಿ ಕುಟುಕಿ ಕೆಲವರ ತಲೆಗೆ ಭಾರೀ ಗಾಯ ಆಗಿವೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

    ಈ ಕಾಗೆಯೊಂದು ಇಷ್ಟು ಸಿಟ್ಟಿನಿಂದ ಗ್ರಾಮಸ್ಥರಿಗೆ ಕಾಟ ಕೊಡ್ತಿರೋದಕ್ಕೆ ಗ್ರಾಮದ ಆಂಜನೇಯ ಸ್ವಾಮಿಯ ಶಾಪವೇ ಕಾರಣವಂತೆ. ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನ ಪಾಳು ಬಿದ್ದು, ಹಲವು ವರ್ಷಗಳೇ ಕಳೆದಿವೆಯಂತೆ. ಅದರ ಅಭಿವೃದ್ಧಿ ಕಾರ್ಯ, ಮರು ಪ್ರತಿಷ್ಠಾಪನೆಗೆ, 10 ವರ್ಷದ ಹಿಂದೆ ಗ್ರಾಮಸ್ಥರು ಕೈ ಹಾಕಿದ್ದರು. ಆದರೆ ಆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಆಂಜನೇಯ ಸ್ವಾಮಿ ಗ್ರಾಮಕ್ಕೆ ಶಾಪ ಹಾಕಿದ್ದಾರಂತೆ. ಹಾಗಾಗಿ ಶನಿ ಮಹಾತ್ಮ ವಾಹನವಾಗಿರುವ ಕಾಗೆ ರೂಪದಲ್ಲಿ ಈ ರೀತಿ ಕಾಟ ಕೊಡ್ತಿದ್ದಾನಂತೆ.

    ಒಂಟಿ ಕಾಗೆಯ ಕಿರಕ್ ಗೆ ಗ್ರಾಮದ ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಕಾಗೆ ದಾಳಿಯಿಂದ ಈಗಾಗಲೇ ವ್ಯಕ್ತಿಯೊಬ್ಬನ ತಲೆಗೆ ಗಂಭೀರ ಗಾಯವಾಗಿ ನೆಂಟರ ಮನೆಯಲ್ಲೇ ಅವರು ನೆಲೆಸಿದ್ದಾರಂತೆ. ಅಲ್ಲದೆ ಓಬಳಾಪುರ ಗ್ರಾಮಕ್ಕೆ ಹೊರಗಿನ ಜನ ಬರೋದಕ್ಕೂ ಹೆದರಿಕೊಳ್ತಿದ್ದಾರಂತೆ. ಇಷ್ಟು ದಿನ ಒಬ್ಬಂಟಿಯಾಗಿ ಓಡಾಡ್ತಿದ್ದವರು ಈಗ ಗುಂಪು ಗುಂಪಾಗಿ ಓಡಾಡ್ತಿದ್ದಾರೆ. ಕೆಲವರಂತು ಮನೆಯಿಂದ ಹೊರಗೆ ಬರೋವಾಗ ಆಕಾಶ ನೋಡ್ಕೊಂಡು ಹೊರ ಬರ್ತಾರೆ. ಎಲ್ಲಾದ್ರೂ ಕಾಗೆ ಸುಳಿವು ಅಥವಾ ಶಬ್ದ ಕೇಳಿದ್ರೆ ಸಾಕು, ಮನೆಯಿಂದ ಹೊರಗೆ ಬರದೇ ಮನೆಯೊಳಗೆ ಅವಿತು ಕೂರುವಂತಾಗಿದೆ.

    ಹಿಂದೂ ಸಂಪ್ರದಾಯದಲ್ಲಿ ಬದುಕಿದ್ದ ಮನುಷ್ಯನನ್ನು ಕಾಗೆ ಮುಟ್ಟಿದ್ರೆ ಅಪಶಕುನ. ಹಾಗಾಗಿ ಕಾಗೆ ಕಂಡ್ರೆ ಸಹಜವಾಗಿಯೇ ಜನ ಹೆದರಿಕೊಳ್ತಾರೆ. ಕಾಗೆ ಮನುಷ್ಯನ ಮೇಲೆ ಕೂತ್ರೆ, ತಲೆ ಕುಟುಕಿದ್ರೆ ಅವರು ಮನೆಯೊಳಗೆ ಹೋಗೋದಿಲ್ಲ. ಮೊದಲು ಸ್ನಾನ ಮಾಡಿ, ಶನಿ ಮಹಾತ್ಮನಿಗೆ ಪೂಜೆ ಮಾಡಿ ಬಳಿಕ ಓಡಾಡ್ತಾರೆ. ಅಲ್ಲದೆ ಸಮೀಪದ ಶನಿ ಮಹಾತ್ಮನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಶನಿದೇವನಿಗೆ ಶಾಂತಿ ಮಾಡಿಸ್ತಾರೆ. ಈ ಗ್ರಾಮಸ್ಥರು ಕೂಡ ಹೋಗದ ಶನಿ ದೇವಾಲಯವಿಲ್ಲ, ಪೂಜೆ ಮಾಡದ ಆಂಜನೇಯನಿಲ್ಲ. ಕಂಡ ಕಂಡ ದೇವರಿಗೆ ಕೈಮುಗಿದು, ಹರಕೆ ಹೊತ್ತರೂ ಈ ಕಾಗೆ ಕ್ಯಾತೆ ಮಾತ್ರ ಕಡಿಮೆ ಆಗಿಲ್ಲ. ಹೀಗಾಗಿ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಯಾರಿಗೆ ಏನು ಕೇಡು ಕಾದಿದ್ಯೊ ಎಂಬ ಭಯ ಶುರುವಾಗಿದೆ.

    ಅದರಲ್ಲೂ ಬಹುತೇಕ ಹಳ್ಳಿಗಳಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನ ಊರ ಹೊರಗೆ ಅಥವಾ ಗಡಿ ಭಾಗದಲ್ಲಿ ಇರತ್ತೆ. ಪುರಾಣದ ಪ್ರಕಾರ ಗ್ರಾಮಕ್ಕೆ ಶನಿಕಾಟ ಆಗಬಾರದು, ಊರ ಹೊರಗೆ ಆಂಜನೇಯ ಸ್ವಾಮಿ ಇದ್ರೆ ಶನಿದೇವ ಬರೋದನ್ನ ತಡೆಯುತ್ತಾನ್ನೆ ಅನ್ನೋ ಪ್ರತಿತಿ ಸಹ ಇದೆ. ಆದರೆ ಇಲ್ಲಿ ಆಂಜನೇಯ ಸ್ವಾಮಿಗಾಗಿ ಶನಿದೇವ ಕ್ಯಾತೆ ತೆಗೆದಿದ್ದಾನೆ. ಆಂಜನೇಯ ಸ್ವಾಮಿ ದೇವಸ್ಥಾನ ನಿರ್ಮಾಣ ಮಾಡಿದ್ರೆ ಶನಿ ಕಾಟ ಕಡಿಮೆ ಆಗತ್ತೆ, ಕಾಗೆ ಕ್ಯಾತೆ ತೆಗೆಯೋದು ಬಿಡತ್ತೆ ಅನ್ನೋದು ಇಲ್ಲಿನ ಗ್ರಾಮಸ್ಥರ ನಂಬಿಕೆ.

    ಮನುಷ್ಯ ಬದುಕಿದ್ದಾಗ ಕಾಗೆ ಅಪಶಕುನ, ಸತ್ತಾಗ ಪಿಂಡ ತಿನ್ನೋಕೆ ಬರದಿದ್ರೆ ಅಪಶಕುನ. ಮನುಷ್ಯ ಬದುಕಿದ್ದಾಗ ಕಾಗೆ ಕಂಡರೆ ಓಡಿಸ್ತಾರೆ. ಸತ್ತಾಗ ಪಿಂಡ ತಿನ್ನೋಕೆ ಕರೆಯುತ್ತಾರೆ. ಈ ಕಾಗೆ ಪಿಂಡ ತಿನ್ನೋದಕ್ಕೂ ಬರೋದಿಲ್ಲ, ಓಡಿಸಿದ್ರೆ ಓಡೋದು ಇಲ್ಲ. ಕಾಗೆ ಓಡಿಸೋದಕ್ಕೆ 6 ತಿಂಗಳಿಂದ ಜನರು ಹರಸಾಹಸ ಪ್ರಯತ್ನ ಪಡ್ತಿದ್ರೂ ಪ್ರಯೋಜನವಾಗಿಲ್ಲ. ಈ ಗ್ರಾಮದೊಳಗಿನ ದೇವಸ್ಥಾನದ 500 ಮೀಟರ್ ವ್ಯಾಪ್ತಿಯಲ್ಲಿ ಓಡಾಡೋ ಜನರ ಗೋಳು ಕೇಳೋರಿಲ್ಲ.

    ಆಂಜನೇಯ ಸ್ವಾಮಿ ದೇವಸ್ಥಾನ ಸುಸ್ತಿತಿಯಲ್ಲಿ ಇರೋವರೆಗೂ ಗ್ರಾಮಕ್ಕೆ ಯಾವುದೇ ಕಂಟಕ ಇರಲಿಲ್ಲ. ಆದರೆ 10 ವರ್ಷಗಳ ಹಿಂದೆ ಗ್ರಾಮಸ್ಥರೆಲ್ಲ ಸೇರಿ ದೇವಸ್ಥಾನ ಜೀರ್ಣೋದ್ಧಾರ ಮಾಡೋಣ, ದೇವರಿಗೆ ಪ್ರಾಣ ಪ್ರತಿಷ್ಠಾನೆ ಮಾಡೋಣ ಅಂತ ದೇವರ ಕಾರ್ಯಕ್ಕೆ ಮುಂದಾಗಿದ್ರು. ದೇವಾಲಯ ಮರು ನಿರ್ಮಾಣಕ್ಕೆ ಅನುದಾನ ಕೊಡುವಂತೆ ಆಗಿನ ಶಾಸಕರಿಂದ ಹಿಡಿದು ಈಗಿನ ಶಾಸಕರವರೆಗೆ ಎಲ್ಲರೂ ಮನವಿ ಮಾಡಿದ್ದಾರೆ. ಆದರೆ ಯಾರೊಬ್ಬರೂ ಸ್ಪಂದಿಸಿಲ್ಲ. ಸರ್ಕಾರ ಅನುದಾನ ನೀಡಿ ದೇವಾಲಯ ಜೀರ್ಣೋದ್ಧಾರ ಮಾಡಿ, ಪ್ರಾಣ ಪ್ರತಿಷ್ಠಾಪನೆ ಮಾಡಿದ್ರೆ ಕಾಗೆ ಕಾಟ ತಪ್ಪಬಹುದು ಎಂದು ಗ್ರಾಮಸ್ಥರು ಹೇಳಿದ್ದಾರೆ.

    ಸಾಮಾನ್ಯವಾಗಿ ಕಾಗೆಗಳು ಸಮೂಹದಲ್ಲಿ ಇದ್ದಾಗ ಯಾರಾದರೂ ಸಾಯಿಸಿದರೆ ಅಥವಾ ಕಾಗೆಗಳು ಸತ್ತರೆ ಅವರು ಸಿಟ್ಟಿನಿಂದ ಮನುಷ್ಯರ ಮೇಲೆ ದಾಳಿ ಮಾಡೋದು ಸಹಜ. ಆದರೆ ಈ ಗ್ರಾಮದಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ. ಅಲ್ಲದೆ ಯಾರೊಬ್ಬರೂ ಕಾಗೆ ಸಹವಾಸಕ್ಕೆ ಹೋಗಿಲ್ಲ. ಆದರೂ ಕಾಗೆ ಮಾತ್ರ ದಿನೇ ದಿನೆ ವೈಲೆಂಟ್ ಆಗ್ತಿದೆ. ಕಾಗೆಯನ್ನ ಸಾಯಿಸೋದ್ ಇರ್ಲಿ ಬೆಳಗೆದ್ದು ಅದರ ಮುಖ ನೋಡೋಕೆ ಹೆದರೋ ಜನ ಈಗ ನಿತ್ಯ ಅದರ ಭಯದಲ್ಲೇ ಬದುಕುತ್ತಿದ್ದಾರೆ.

    ಒಟ್ಟಾರೆ ಕಳೆದ 6 ತಿಂಗಳಿಂದ ಕಾಗೆ ಕಿರಿಕ್ ಗೆ ಗ್ರಾಮಸ್ಥರು ಹೈರಾಣಾಗಿದ್ದಾರೆ. ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನ ಮರು ನಿರ್ಮಾಣ ಮಾಡಿ ದೇಗುಲಕ್ಕೆ ಜೀವಕಳೆ ತುಂಬಿ ಪ್ರತಿಷ್ಠಾಪನೆ ಮಾಡಿದ್ರೆ ಗ್ರಾಮಕ್ಕೂ ಒಳ್ಳೆಯದಾಗುತ್ತೆ. ಕಾಗೆ ಆಕ್ರೋಶ ಶಮನವಾಗಿ ಗ್ರಾಮದಲ್ಲಿ ಶಾಂತಿ ನೆಲೆಸುತ್ತದೆ ಅನ್ನೋದು ಹಿರಿಯರ ನಂಬಿಕೆಯಾಗಿದೆ.

  • ನಿವೃತ್ತ ನೌಕರನ ಸ್ನೇಹ ಬೆಳೆಸಿದ ಕಾಗೆ- ಮನೆಯ ಸದಸ್ಯನಾದ ಕಥೆ!

    ನಿವೃತ್ತ ನೌಕರನ ಸ್ನೇಹ ಬೆಳೆಸಿದ ಕಾಗೆ- ಮನೆಯ ಸದಸ್ಯನಾದ ಕಥೆ!

    ಕಾರವಾರ: ಕಾಗೆ ಎಂದರೆ ಸಾಕು ಎಲ್ಲರೂ ಅದನ್ನು ಓಡಿಸುತ್ತಾರೆ. ಕಾಗೆ ಮನೆಯಲ್ಲಿ ಕೂಗಿದರೆ ಸಾವು ಸಂಭವಿಸುತ್ತದೆ, ನೆಂಟರು ಬರುತ್ತಾರೆ ಎಂದೆಲ್ಲಾ ನಂಬಿಕೆ ಇಂದಿಗೂ ನಮ್ಮ ಗ್ರಾಮಗಳಲ್ಲಿವೆ. ಮಹಾಲಯ ಅಮವ್ಯಾಸೆ ದಿನ ಪೂರ್ವಜರನ್ನು ಸ್ಮರಿಸಿ ಕಾಗೆಗೆ ಎಡೆ ನೀಡುವ ಸಂಪ್ರದಾಯ ಸಹ ಇದೆ. ಆದರೆ ಇಲ್ಲೊಂದು ಕಥೆ ವಿಭಿನ್ನವಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ಅಂಕೋಲ ನಗರದ ಮಾಧವನಗರದ ನಿವೃತ್ತ ಸರ್ಕಾರಿ ನೌಕರ ವಿಠಲ್ ಶಟ್ಟಿ ಅವರು, ಕಳೆದ ಹತ್ತು ವರ್ಷದಿಂದ ಕಾಗೆಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದಾರೆ. ಇದೀಗ ಈ ಕಾಗೆ ಮನೆಯ ಸದಸ್ಯನಂತಾಗಿದ್ದು, ಪ್ರತಿ ದಿನ ಇವರ ಮನೆಯಲ್ಲಿ ಆಹಾರ ಸೇವಿಸಲು ಬರುತ್ತಿದೆ. ಇದನ್ನೂ ಓದಿ: ರಾಷ್ಟ್ರೀಯತೆಯ ಚಿಂತನೆಯನ್ನು ಬೆಳೆಸಿಕೊಂಡರೆ ಎಚ್‍ಡಿಕೆಗೆ ಹೊಟ್ಟೆ ಉರಿ ಯಾಕೆ: ಸೂಲಿಬೆಲೆ ಪ್ರಶ್ನೆ

    Crow Friendship Karwar publictv

    ಬಾಂಧವ್ಯ ಬೆಳೆದಿದ್ದು ಹೇಗೆ?

    ಕಳೆದ ಹತ್ತು ವರ್ಷದ ಹಿಂದೆ ಒಂದು ಕಾಲು ತುಂಡಾದ ಕಾಗೆ ತನ್ನ ಮರಿಗಳೊಂದಿಗೆ ಇವರ ಮನೆಯ ಬಳಿ ಹಾರಾಡುತಿತ್ತು. ಈವೇಳೆ ಅದರೊಂದಿಗಿದ್ದ ಮರಿ ಕಾಗೆ ಅಸ್ವಸ್ಥವಾಗಿ ಇವರ ಮನೆಯ ಬಳಿ ಕುಳಿತಿದೆ. ಇದನ್ನು ಗಮನಿಸಿದ ಅವರು ಕಾಗೆಗೆ ಉಪಚರಿಸಿದ್ದಾರೆ. ಉಪಚಾರದಿಂದ ಚೇತರಿಸಿಕೊಂಡಿದ್ದ ಕಾಗೆ ಮರಿ ಪ್ರತಿ ದಿನ ಇವರ ಮನೆಗೆ ಬರುತಿತ್ತು. ಹೀಗಾಗಿ ಮನೆಯಲ್ಲಿ ಇವರು ತಾವು ತಿನ್ನುವ ರೊಟ್ಟಿ ,ಅನ್ನವನ್ನು ನೀಡುತಿದ್ದರು. ಹೀಗೆ ಕಾಗೆಯೊಂದಿಗೆ ಸ್ನೇಹ ಬೆಳೆಸಿಕೊಂಡ ಅವರು ಪ್ರತಿ ದಿನ ಮನೆಯ ಜನರೊಂದಿಗೆ ಇದಕ್ಕೂ ಸಹ ಉಪಹಾರ ನೀಡುವುದನ್ನು ಬೆಳಸಿಕೊಂಡಿದ್ದು, ಇದೀಗ ಗೆಳೆತನ ಆಪ್ತವಾಗಿದೆ. ಸಲುಗೆಯಲ್ಲಿ ಇವರ ಕೈಮೇಲೆ ಕುಳಿತು ಆಹಾರ ಸೇವಿಸಿ ತೆರಳುತ್ತದೆ. ಇದನ್ನೂ ಓದಿ: RSS ನ 4 ಸಾವಿರ ಐಎಎಸ್, ಐಪಿಎಸ್ ಅಧಿಕಾರಿಗಳಿದ್ದಾರೆ- ಬಿಜೆಪಿ ವಿರುದ್ಧ ಎಚ್‍ಡಿಕೆ ವಾಗ್ದಾಳಿ

     Crow Friendship Karwar publictv

    ಮನುಷ್ಯ ಹಾಗೂ ಪ್ರಾಣಿ-ಪಕ್ಷಿಗಳು ಈ ಜೀವ ಸಂಕುಲಗಳ ಸರಪಳಿ, ಅವುಗಳನ್ನು ಪ್ರೀತಿಯಿಂದ ನೋಡಿಕೊಂಡರೆ, ಪ್ರೀತಿ ಸಂಪಾದಿಸುವುದು ಸುಲಭವಾಗಿದೆ. ಈ ಕಾಗೆಯನ್ನು ಒಂದು ದಿನ ನೋಡದಿದ್ದರೂ ಮನಸ್ಸು ಪರಿತಪ್ಪಿಸುತ್ತದೆ. ಇದರೊಂದಿಗೆ ಬೆರೆತ ಬಾಂಧವ್ಯ ಅಂತದ್ದು ಎಂದು ವಿಠಲ್ ಶಟ್ಟಿಯವರು ವಿವರಿಸುವಾಗ ಅವರ ಪ್ರೀತಿ ಎದ್ದು ಕಾಣುತ್ತದೆ. ಬಾಂಧವ್ಯಗಳನ್ನೇ ಮರೆತಿರುವ ಇಂದಿನ ದಿನಗಳಲ್ಲಿ ಇವರ ಈ ಪ್ರೀತಿ ಮಾದರಿಯಾಗಿದೆ.  ಇದನ್ನೂ ಓದಿ: ಸಂಜನಾ ಕ್ಯಾಬ್ ಕಿರಿಕ್- ಸ್ಪಷ್ಟನೆ ಕೊಟ್ಟ ನಟಿ

  • ಮೃತಪಟ್ಟ ಕಾಗೆಗಳನ್ನು ತಿಂದು 6 ಶ್ವಾನಗಳು ಸಾವು

    ಮೃತಪಟ್ಟ ಕಾಗೆಗಳನ್ನು ತಿಂದು 6 ಶ್ವಾನಗಳು ಸಾವು

    – ಆತಂಕಕ್ಕೀಡಾದ ಗ್ರಾಮದ ಜನ

    ಲಕ್ನೋ: ಹಕ್ಕಿಜ್ವರದಿಂದ ಮೃತಪಟ್ಟಿದ್ದ ಕಾಗೆಗಳನ್ನು ತಿಂದು ಸುಮಾರು 6 ಬೀದಿ ಶ್ವಾನಗಳು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ಪುರಾನ್ಪುರ್ ಪ್ರದೇಶದಲ್ಲಿ ನಡೆದಿದೆ. ಗುರುವಾರ 12ಕ್ಕೂ ಹೆಚ್ಚು ಕಾಗೆಗಳು ಹಕ್ಕಿಜ್ವರದಿಂದ ಶೇಷಪುರ್ ರಸ್ತೆಯಲ್ಲಿ ಮೃತಪಟ್ಟಿದ್ದವು. ಈ ಘಟನೆ ಇದೀಗ ಪುರಾನ್ಪುರ್ ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಸಿದೆ.

    ಜಿಲ್ಲೆಯಲ್ಲಿ ಹಕ್ಕಿಜ್ವರ ಭೀತಿ ಹೆಚ್ಚಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಅಮಿದ್ ಅವರು ಪಶುಸಂಗೋಪನಾ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಶೇರ್ ಪುರ್‍ನಲ್ಲಿ ಹಕ್ಕಿಜ್ವರದಿಂದ ಭಯದ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಒಂದು ವಾರದ ಹಿಂದೆ ಪುರಾನ್ಪುರ್ ಪೊಲೀಸ್ ಠಾಣೆಗೆ ವರದಿ ಸಲ್ಲಿಸಲಾಗಿತ್ತು.

    ಬೀದಿ ಶ್ವಾನಗಳು ರಸ್ತೆಯಲ್ಲಿ ಸತ್ತು ಬಿದ್ದಿರುವುದನ್ನು ನೋಡಿದ ಸ್ಥಳೀಯರು, ಶ್ವಾನಗಳು ಹಕ್ಕಿ ಜ್ವರದಿಂದ ಮೃತಪಟ್ಟಿದ್ದ ಕಾಗೆಗಳನ್ನು ಸೇವಿಸಿ ಸಾವನ್ನಪ್ಪಿವೆ ಎಂದು ಹೇಳುತ್ತಿದ್ದಾರೆ. ಈ ವಿಚಾರವಾಗಿ ಹಿರಿಯ ಪಶು ವೈದ್ಯಕೀಯ ಅಧಿಕಾರಿಗಳು ಗುರುವಾರ ಬಾರ್ಖೇರಾ ನಗರದ ಪಂಚಾಯತ್ ಪ್ರದೇಶದಲ್ಲಿರುವ ಅಂಗಡಿಗಳಿಗೆ ಭೇಟಿ ನೀಡಿ ಕೋಳಿ ಮಾಂಸದ ಮಾದರಿಯನ್ನು ಪರೀಕ್ಷಿಸಲು ತೆಗೆದುಕೊಂಡಿದ್ದಾರೆ.

    ಇದೇ ರೀತಿ ಬುಧವಾರ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 50 ಕಾಗೆಗಳು ಹಕ್ಕಿಜ್ವರದಿಂದ ಮೃತಪಟ್ಟಿದ್ದವು. ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಮತ್ತು ಉತ್ತರಾಖಂಡದಲ್ಲಿ ಹಕ್ಕಿಜ್ವರ ಇರುವುದನ್ನು ದೃಢಪಡಿಸಲಾಗಿದೆ.

  • ಮಂಡ್ಯದ ಶನೇಶ್ವರ ದೇವಾಲಯದೊಳಗೆ ಕಾಗೆ

    ಮಂಡ್ಯದ ಶನೇಶ್ವರ ದೇವಾಲಯದೊಳಗೆ ಕಾಗೆ

    ಮಂಡ್ಯ: ಜಿಲ್ಲೆಯ ಶನೇಶ್ವರ ಸ್ವಾಮಿ ದೇವಸ್ಥಾನದ ಗರ್ಭಗುಡಿಗೆ ಕಾಗೆ ಪ್ರವೇಶ ಮಾಡಿದ್ದು, ಈ ಮೂಲಕ ದೇವಾಲಯದಲ್ಲೊಂದು ಅಚ್ಚರಿ ಸಂಗತಿ ನಡೆದಿದೆ.

    ಜಿಲ್ಲೆ ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮದಲ್ಲಿರುವ ಶನೇಶ್ವರ ಸ್ವಾಮಿ ದೇವಾಲಯದಲ್ಲಿ ಶನಿವಾರ ಈ ಘಟನೆ ನಡೆದಿದೆ. ಶನೇಶ್ವರನ ವಾಹನ ಕಾಗೆಯೊಂದು ಗರ್ಭಗುಡಿಯ ಪ್ರವೇಶ ಮಾಡಿ ಶನಿದೇವರ ಪಾದದ ಬಳಿ ಕುಳಿತು ಅಚ್ಚರಿ ಮೂಡಿಸಿದೆ. ಕಾಗೆ ಶನಿ ದೇವರ ಗರ್ಭಗುಡಿಗೆ ಪ್ರವೇಶ ಮಾಡಿದ ಸುದ್ದಿ ತಿಳಿದು ಜನರು ಗರ್ಭಗುಡಿಯಲ್ಲಿದ್ದ ಕಾಗೆಯ ದರ್ಶನ ಮಾಡಿದ್ದಾರೆ.

    ಗ್ರಾಮದ ಹಿರಿಯರ ಸಲಹೆ ಮೇರೆಗೆ ಅರ್ಚಕ ಕಾಗೆಗೂ ಪೂಜೆ ಸಲ್ಲಿಸಿ ನೈವೇದ್ಯ ನೀಡಿದ್ದಾರೆ. ಕಾಗೆ ತನಗೆ ಮಂಗಳಾರತಿ ಮಾಡುತ್ತಿದ್ದರೂ ಸ್ವಲ್ಪವೂ ಕದಲದೆ ಸುಮ್ಮನೆ ಕುಳಿತಿತ್ತು. ಗರ್ಭಗುಡಿಯ ನಂತರ ದೇವಾಲಯದ ಮುಂಭಾಗದಲ್ಲಿರುವ ಅರಳಿಮರಕ್ಕೆ ಕಾಗೆ ಪ್ರದಕ್ಷಿಣೆ ಹಾಕಿದೆ.

    ಬೆಳಗ್ಗೆಯಿಂದ ದೇವಾಲಯದಲ್ಲಿದ್ದು ಪೂಜೆ ನೈವೇದ್ಯ ಸ್ವೀಕರಿಸಿ ಸಂಜೆ ವೇಳೆ ಕಾಗೆ ಹೋಗಿದೆ. ದೇವಾಲಯದಲ್ಲಿ ನಡೆದ ಘಟನೆಗೆ ಗ್ರಾಮದ ಜನರು ಅಚ್ಚರಿಗೊಂಡಿದ್ದಾರೆ. ಜೊತೆಗೆ ಇದೆಲ್ಲಾ ಶನಿದೇವರ ಮಹಾತ್ಮೆ ಎಂದು ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ.

  • ಮೊಬೈಲ್ ಟವರ್‌ನಲ್ಲಿ ಸಿಲುಕಿದ್ದ ಕಾಗೆ ರಕ್ಷಿಸಿ ಮಾನವಿಯತೆ ಮೆರೆದ ಅಗ್ನಿಶಾಮಕದಳ ಸಿಬ್ಬಂದಿ

    ಮೊಬೈಲ್ ಟವರ್‌ನಲ್ಲಿ ಸಿಲುಕಿದ್ದ ಕಾಗೆ ರಕ್ಷಿಸಿ ಮಾನವಿಯತೆ ಮೆರೆದ ಅಗ್ನಿಶಾಮಕದಳ ಸಿಬ್ಬಂದಿ

    ಗದಗ: ಅಗ್ನಿಶಾಮಕದಳ ಸಿಬ್ಬಂದಿ ಇತ್ತೀಚಿಗೆ ಪಕ್ಷಿಗಳ ರಕ್ಷಣೆಗೂ ಮುಂದಾಗಿದ್ದು, ಮೊಬೈಲ್ ಟವರ್‌ನಲ್ಲಿ ಸಿಲುಕಿಕೊಂಡು ಸಾವು ಬದುಕಿನ ಮಧ್ಯೆ ಒದ್ದಾಡುತ್ತಿದ್ದ ಕಾಗೆಯೊಂದನ್ನು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

    ನಗರದ ಸಬ್ ರಿಜಿಸ್ಟರ್ ಕಛೇರಿ ಬಳಿ ಈ ಘಟನೆ ನಡೆದಿದೆ. ಕಾಗೆಯನ್ನು ರಕ್ಷಣೆ ಮಾಡಿ ಹಾರಿಸಿರುವುದು ಕೆಲವರಿಗೆ ಹಾಸ್ಯಾಸ್ಪದ ಅನಿಸಿಬಹುದು. ಆದರೆ ಅದು ಒಂದು ಜೀವಿ ಅಲ್ಲವೆ ಎನ್ನುವ ಮನೋಭಾವದಿಂದ ಸಿಬ್ಬಂದಿ ಕಾಗೆಯನ್ನು ರಕ್ಷಣೆ ಮಾಡಿದ್ದಾರೆ. ಮೊಬೈಲ್ ಟವರ್ ಏರಿ ಕುಳಿತ್ತಿದ್ದ ಕಾಗೆಯೊಂದು ಮೂರು-ನಾಲ್ಕು ಗಂಟೆಯಿಂದ ಟವರ್‍ನಲ್ಲಿ ಸಿಲುಕಿ ಒದ್ದಾಡುತಿತ್ತು. ಇದನ್ನು ಕೆಲ ಸ್ಥಳೀಯರು ಗಮನಿಸಿ, ಅಗ್ನಿಶಾಮಕದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅಗ್ನಿಶಾಮಕದಳ ಸಿಬ್ಬಂದಿ, ಮೊಬೈಲ್ ಟವರ್ ಏರಿ ಕಾಗೆ ಓಡಿಸುವ ಮೂಲಕ ಅದರ ರಕ್ಷಣೆಗೆ ಮುಂದಾದರು.

    ಮಲ್ಲಿಕಾರ್ಜುನ, ಎಸ್.ವಿ ತಳವಾರ, ಅಶೋಕ ಹಾಗೂ ಮುತ್ತು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇಲಾಖೆ ಕಾರ್ಯಕ್ಕೆ ಕೆಲವು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನು ಕೆಲವರು ಪರಸ್ಥಿತಿ ಎಲ್ಲಿಗೆ ಬಂತಪ್ಪಾ ಅಂತ ವ್ಯಂಗ್ಯವಾಡಿದ್ದಾರೆ. ಆದರೆ, ಬಹುತೇಕರು ಅಗ್ನಿಶಾಮಕ ದಳದ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಾರ್ವಜನಿಕರು ಕರೆ ಮಾಡಿದಾಗಲೂ ಸಹ ಕಾಗೆ ಸಿಕ್ಕಿ ಹಾಕಿಕೊಂಡಿದೆ ಎಂದು ಹೇಳಿದ ನಂತರ ನಿರ್ಲಕ್ಷ್ಯ ವಹಿಸಿಲ್ಲ. ಬದಲಿಗೆ ಕರೆಯನ್ನು ಗಂಭೀರವಾಗಿ ಪರಿಗಣಿಸಿ, ಅದೂ ಒಂದು ಜೀವಿ ಎಂದು ಅರಿತು ಕಾಗೆಯನ್ನು ರಕ್ಷಿಸಿದ್ದಾರೆ. ಹಲವರು ಕಾಗೆ, ಪ್ರಾಣಿಗಳಿರಲಿ ಮನುಷ್ಯರು ಕಷ್ಟದಲ್ಲಿ ಸಿಲುಕಿರುವಾಗಲೇ ನಿರ್ಲಕ್ಷಿಸುತ್ತಾರೆ. ಅಂತಹ ಸಂದರ್ಭದಲ್ಲಿ ಕಾಗೆಯನ್ನು ಕಾಪಾಡುವ ಮೂಲಕ ಗದಗ ಅಗ್ನಿಶಾಮಕ ಸಿಬ್ಬಂದಿ ಮಾದರಿಯಾಗಿದ್ದಾರೆ.

  • ಮನೆಯಿಂದ ಹೊರಗೆ ಬಂದ್ರೆ ಕಾಗೆಗಳ ದಾಳಿ- ಮೂರು ವರ್ಷದಿಂದ ಕಾಡುತ್ತಿದೆ ಸಮಸ್ಯೆ

    ಮನೆಯಿಂದ ಹೊರಗೆ ಬಂದ್ರೆ ಕಾಗೆಗಳ ದಾಳಿ- ಮೂರು ವರ್ಷದಿಂದ ಕಾಡುತ್ತಿದೆ ಸಮಸ್ಯೆ

    ಭೋಪಾಲ್: ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಸುಮೆಲಾ ಗ್ರಾಮದ ಶಿವ ಕೇವಟ್ ಎಂಬವರು ಕಾಗೆಗಳ ದಾಳಿಯಿಂದ ಬೇಸತ್ತಿದ್ದಾರೆ. ಶಿವ ಮನೆಯಿಂದ ಹೊರಗೆ ಬಂದರೆ ಸಾಕು ಕಾಗೆಗಳು ದಾಳಿ ನಡೆಸುತ್ತವೆ. ಕೆಲವೊಮ್ಮೆ ಗುಂಪಾಗಿ ಬಂದು ಶಿವ ಮೇಲೆ ಕಾಗೆಗಳು ದಾಳಿ ನಡೆಸಿ ಗಾಯಗೊಳಿಸುತ್ತವೆ.

    ಕಳೆದ ಮೂರು ವರ್ಷಗಳಿಂದ ಕಾಗೆಗಳು ಈ ರೀತಿ ಶಿವ ಮೇಲೆ ದಾಳಿ ನಡೆಸುತ್ತಿವೆ. ಕಾಗೆಗಳು ತಮ್ಮ ಬಲವಾದ ರೆಕ್ಕೆ ಮತ್ತು ಕೊಕ್ಕಿನಿಂದ ಕುಕ್ಕಿ ಗಾಯಗೊಳಿಸುತ್ತಿವೆ. ಹೀಗಾಗಿ ಶಿವ ಮನೆಯಿಂದ ಹೊರ ಬಂದ್ರೆ ತಲೆ ಬಟ್ಟೆ ಸುತ್ತಿಕೊಂಡು ಕೈಯಲ್ಲಿ ಕೋಲು ಹಿಡಿದುಕೊಂಡು ಬರುತ್ತಾರೆ. ಕಾಗೆಗಳು ಇಷ್ಟೆಲ್ಲ ದಾಳಿ ನಡೆಸಿದ್ರೂ ಶಿವ ಪಕ್ಷಿಗೆ ಯಾವುದೇ ಹಾನಿಯುಂಟು ಮಾಡಿಲ್ಲ. ಕೇವಲ ಕೋಲು ತೋರಿಸಿ ಬೆದರಿಸುತ್ತಾರೆ. ಕಾಗೆಗಳು ಶಿವ ಮನೆಯಿಂದ ಹೊರ ಬರೋದನ್ನು ಕಾಯುತ್ತಿರುತ್ತಿವೆ.

    ಮೂರ ವರ್ಷದ ಕಥೆ: ಮೂರು ವರ್ಷಗಳ ಹಿಂದೆ ಶಿವ ಬಲೆ ಯಲ್ಲಿ ಸಿಲುಕಿದ್ದ ಕಾಗೆ ಮರಿಯ ರಕ್ಷಣೆಗೆ ಮುಂದಾಗಿದ್ದರು. ಗಾಯಗೊಂಡಿದ್ದ ಕಾಗೆ ಮರಿ ಶಿವ ಕೈಯಲ್ಲಿಯೇ ಪ್ರಾಣ ಬಿಟ್ಟಿತ್ತು. ನಾನು ಕಾಗೆಗಳಿಗೆ ನಾನು ನಿಮ್ಮ ಕಂದನನ್ನ ಸಾಯಿಸಿಲ್ಲ. ಬದಲಾಗಿ ರಕ್ಷಣೆ ಮಾಡಲು ಹೋಗಿದ್ದೆ ಎಂದು ಹೇಗೆ ಅರ್ಥ ಮಾಡಿಸಲಿ ಎಂದು ಶಿವ ಬೇಸರ ವ್ಯಕ್ತಪಡಿಸುತ್ತಾರೆ.

    ಶಿವನ ಮೇಲೆ ಕಾಗೆಗಳು ದಾಳಿ ನಡೆಸೋದು ಗ್ರಾಮಸ್ಥರಿಗೆ ಒಂದು ರೀತಿಯ ಮನರಂಜನೆ ಆಗಿದೆ. ಕಾಗೆಗಳು ದೀರ್ಘವಧಿ ಜ್ಞಾಪಕ ಶಕ್ತಿಯನ್ನು ಹೊಂದಿದ್ದು, ತಮ್ಮ ಶತ್ರುಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿವೆ ಎಂದು ಪಕ್ಷಿ ತಜ್ಞರು ಹೇಳುತ್ತಾರೆ.

  • ತಿಥಿಗೆ ಬಾಡಿಗೆಗೆ ಸಿಗುತ್ತೆ ಕಾಗೆ- ವೈರಲ್ ಆಯ್ತು ಯುವಕನ ಪೋಸ್ಟ್

    ತಿಥಿಗೆ ಬಾಡಿಗೆಗೆ ಸಿಗುತ್ತೆ ಕಾಗೆ- ವೈರಲ್ ಆಯ್ತು ಯುವಕನ ಪೋಸ್ಟ್

    – ಕಾಗೆಯನ್ನ ಕಾಡಿಗೆ ಬಿಟ್ಟ ಅರಣ್ಯಾಧಿಕಾರಿಗಳು

    ಬೆಂಗಳೂರು: ಉಪಾಯ ಇದ್ದರೆ ಯಾವುದು ವ್ಯರ್ಥವಾಗುವುದಿಲ್ಲ ಎಂಬುದಕ್ಕೆ ಉಡುಪಿಯ ನಿವಾಸಿಯೊಬ್ಬರು ತಾಜಾ ಉದಾಹರಣೆಯಾಗಿದ್ದಾರೆ.

    ಯಾವುದೇ ಕುಟುಂಬದಲ್ಲಿ ಸಾವು ಸಂಭವಿಸುವ ಸಂದರ್ಭದಲ್ಲಿ ತಿಥಿ ಕಾರ್ಯಗಳು ಸಾಂಪ್ರದಾಯಿಕವಾಗಿ ನಡೆಯುತ್ತದೆ. ಈ ಸಂದರ್ಭದಲ್ಲಿ ಮೃತರಿಗೆ ಪ್ರಿಯವಾದ ಆಹಾರಗಳನ್ನು ಅರ್ಪಿಸುತ್ತೇವೆ. ಆದರೆ ಈ ವೇಳೆ ಕಾಗೆ ಅನ್ನ ತಿನ್ನದಿದ್ದರೆ ಮೃತರ ಕುಟುಂಬಸ್ಥರು ನೊಂದುಕೊಳ್ಳುತ್ತಾರೆ. ಇದನ್ನೇ ಮನಗಂಡ ಯುವಕರೊಬ್ಬರು ಬ್ಯುಸಿನೆಸ್ ಮಾಡಿಕೊಂಡಿದ್ದಾರೆ.

    ಉಡುಪಿ ಜಿಲ್ಲೆಯ ಪ್ರಶಾಂತ್ ಪೂಜಾರಿ ಎಂಬವರು ಈ ಕಾರ್ಯದಲ್ಲಿ ತೊಡಗಿದ್ದು, ಶ್ರಾದ್ಧ, ತಿಥಿ ಕಾರ್ಯಕ್ರಮಗಳಿಗೆ ಕಾಗೆ ಬೇಕಾದರೆ ಬಾಡಿಗೆಗೆ ದೊರೆಯುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿದ್ದಾರೆ. ಈ ಪೋಸ್ಟ್ ಸದ್ಯ ರಾಷ್ಟ್ರಮಟ್ಟದಲ್ಲಿ ವೈರಲ್ ಆಗುತ್ತಿದ್ದು, ಯುವಕನ ಚಿಂತನೆಗೆ ಸಾಕಷ್ಟು ಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.

    ಸಾಂದರ್ಭಿಕ ಚಿತ್ರ

    ಕಾಗೆ ಸಿಕ್ಕಿದ್ದು ಹೇಗೆ?
    ಪ್ರಶಾಂತ್ ಪೂಜಾರಿ ಅವರಿಗೆ ಪ್ರಾಣಿ, ಪಕ್ಷಿಗಳು ಎಂದರೆ ತುಂಬಾ ಇಷ್ಟ. ಒಂದು ದಿನ ಇವರ ಮನೆಯ ಸಮೀಪ ಮೂರು ಕಾಗೆ ಮರಿಗಳು ಅನಾಥವಾಗಿ ಬಿದ್ದಿದ್ದವು. ಇದನ್ನು ಗಮನಿಸಿದ್ದ ಪ್ರಶಾಂತ್, ಅವುಗಳ ಆರೈಕೆ ಮಾಡಲು ಮುಂದಾಗಿದ್ದರು. ಆದರೆ 3ರಲ್ಲಿ 2 ಮರಿಗಳು ಸಾವನ್ನಪ್ಪಿದ್ದು, ಒಂದು ಮಾತ್ರ ಬದುಕುಳಿದಿತ್ತು.

    ಈ ಸಂದರ್ಭದಲ್ಲಿ ಅವರಿಗೆ ಶ್ರಾದ್ಧಾ ಕಾರ್ಯಕ್ರಮಗಳಲ್ಲಿ ಕಾಗೆ ಆಹಾರ ತಿನ್ನದೆ ಮೃತರ ಕುಟುಂಬಸ್ಥರು ನೊಂದುಕೊಳ್ಳುತ್ತಿದ್ದರ ಬಗ್ಗೆ ಮಾಹಿತಿ ಲಭಿಸಿತ್ತು. ತಮ್ಮ ಬಳಿ ಕಾಗೆ ಇರುವುದಿರಿಂದ ಇದನ್ನೇ ಉಪಾಯ ಮಾಡಿದ್ದ ಪ್ರಶಾಂತ್, ಕಾಗೆ ಸೇವೆ ನೀಡಲು ನಿರ್ಧರಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಫೇಸ್‍ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

    ಸಾಂದರ್ಭಿಕ ಚಿತ್ರ

    ಅರಣ್ಯ ಅಧಿಕಾರಿಗಳಿಂದ ಕ್ರಮ:
    ಸಾಮಾಜಿಕ ಜಾಲತಾಣದಲ್ಲಿ ಪ್ರಶಾಂತ್ ಅವರ ಪೋಸ್ಟ್ ವೈರಲ್ ಆಗುತ್ತಿದಂತೆ ಎಚ್ಚೆತ್ತ ಸ್ಥಳೀಯ ಅರಣ್ಯ ಅಧಿಕಾರಿಗಳು ಪ್ರಶಾಂತ್ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಮನವರಿಕೆ ಮಾಡಿ ಕಾಗೆಯನ್ನು ಮತ್ತೆ ಕಾಡಿಗೆ ಬಿಟ್ಟಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಯುವಕ ಪ್ರಶಾಂತ್, ನನಗೆ ಕಾಗೆಯನ್ನು ಇಟ್ಟುಕೊಂಡು ಬ್ಯುಸಿನೆಸ್ ಮಾಡುವ ಯೋಚನೆ ಇರಲಿಲ್ಲ. ತಾನು ಸಾಕಿರುವ ಕಾಗೆಗೆ ರೆಕ್ಕೆ ಸರಿ ಇರಲಿಲ್ಲ. ಆದ್ದರಿಂದ ಅದು ಚೇತರಿಕೆ ಕಂಡ ಮೇಲೂ ಆಹಾರ ನೀಡಿ ಆರೈಕೆ ಮಾಡುತ್ತಿದ್ದೆ. ಈಗ ಕಾಗೆಯನ್ನ ಅರಣ್ಯಕ್ಕೆ ಬಿಟ್ಟಿದ್ದೇವೆ ಎಂದಿದ್ದಾರೆ. ಅಲ್ಲದೆ ಈ ಹಿಂದೆ ಗಾಯಗೊಂಡಿದ್ದ ಉಡವನ್ನು ಕೂಡ ರಕ್ಷಣೆ ಮಾಡಿದ್ದೆ ಎಂದು ಹೇಳಿದ್ದಾರೆ.

  • ಶವವನ್ನು ಕುಕ್ಕಿ ಕುಕ್ಕಿ ತಿಂದ ನರಭಕ್ಷಕ ಕಾಗೆ

    ಶವವನ್ನು ಕುಕ್ಕಿ ಕುಕ್ಕಿ ತಿಂದ ನರಭಕ್ಷಕ ಕಾಗೆ

    ರಾಂಚಿ: ಜಾರ್ಖಂಡ್‍ನ ಪ್ರಸಿದ್ಧ ಆಸ್ಪತ್ರೆಗಳಲ್ಲಿ ಒಂದಾದ ರಿಮ್ಸ್ ಆಸ್ಪತ್ರೆಯಲ್ಲಿ ಶವಗಾರದ ಮುಂದೆ ಇರಿಸಿದ್ದ ಶವವನ್ನು ಕಾಗೆಯೊಂದು ಕುಕ್ಕಿ ಕುಕ್ಕಿ ತಿಂದಿದೆ.

    ಮಂಗಳವಾರ ಬೆಳಗ್ಗೆ ರಾಂಚಿಯ ಮಾರ್ಕೆಟ್ ಬಳಿಯ ಛಾಂದ್ರಿ ಕೆರೆಯಲ್ಲಿ ಅನಾಥ ಶವವೊಂದು ಪತ್ತೆಯಾಗಿತ್ತು. ಪೊಲೀಸರು ಆ ಶವವನ್ನು ರಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆಂದು ತಂದಿದ್ದರು. ಆಸ್ಪತ್ರೆಯ ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆಗಳನ್ನು ಮುಗಿಸಿ ಬರಲು ಪೊಲೀಸರು ಶವವನ್ನು ಶವಗಾರದ ಮುಂದೆ ಇರಿಸಿ ತೆರಳಿದ್ದಾರೆ. ಈ ವೇಳೆ ಕಾಗೆಯೊಂದು ಶವದ ಮೇಲೆ ಕೂತು ಮೃತನ ತಲೆ ಭಾಗದ ಮಾಂಸವನ್ನು ಕುಕ್ಕಿ ಕುಕ್ಕಿ ತಿಂದಿದೆ.

    ಘಟನೆ ಕುರಿತು ಪ್ರತಿಕ್ರಿಯಿಸಿದ ರಿಮ್ಸ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ, ಈ ತರಹದ ಘಟನೆಗಳು ಮುಂದೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

    ಆಸ್ಪತ್ರೆಯಲ್ಲಿ ಕಾಗೆ ಶವವನ್ನು ತಿನ್ನುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಕಾಗೆ ವಿಡಿಯೋ ವೈರಲ್ ಆಗಿದ್ದು, ಇದನ್ನು ನೋಡಿ ಜನ ಎಂಥಾ ಕಾಲ ಬಂತಪ್ಪಾ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv