Tag: crime

  • ದೆವ್ವದ ವೇಷ ಧರಿಸಿ ವಿದ್ಯಾರ್ಥಿನಿಯರಿಗೆ ವಾರ್ಡನ್ ನಿಂದ ಲೈಂಗಿಕ ಕಿರುಕುಳ

    ದೆವ್ವದ ವೇಷ ಧರಿಸಿ ವಿದ್ಯಾರ್ಥಿನಿಯರಿಗೆ ವಾರ್ಡನ್ ನಿಂದ ಲೈಂಗಿಕ ಕಿರುಕುಳ

    ಲಕ್ನೋ: ವಸತಿ ಶಾಲೆಯೊಂದರಲ್ಲಿ ಮಧ್ಯರಾತ್ರಿ ವಾರ್ಡನ್ ಒಬ್ಬಳು ದೆವ್ವದ ವೇಷ ಧರಿಸಿ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಘಟನೆ ಉತ್ತರಪ್ರದೇಶದ ಮೀರತ್‍ನಲ್ಲಿ ನಡೆದಿದೆ.

    ಕಸ್ತೂರಬಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿನಿಯರೇ ಶೋಷಣೆಗೆ ಒಳಗಾದವರು. ಈ ಶಾಲೆಯ 8 ವಿದ್ಯಾರ್ಥಿನಿಯರು ತಾವು ಮಧ್ಯರಾತ್ರಿ ಅನುಭವಿಸುವ ತೊಂದರೆಗಳ ಕುರಿತು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ತಕ್ಷಣವೇ ತನಿಖೆ ಕೈಗೊಂಡ ಪರಿಣಾಮ ಪ್ರಕರಣ ಬೆಳಕಿಗೆ ಬಂದಿದೆ.

    ಮಧ್ಯರಾತ್ರಿ ಆಗುತ್ತಿದಂತೆ ವಾರ್ಡನ್ ದೆವ್ವದ ವೇಷ ಧರಿಸಿ, ಮುಖವನ್ನು ಮುಚ್ಚಿಕೊಂಡು ಶಾಲಾ ಆವರಣದಲ್ಲಿ ಓಡಾಡುತ್ತಾಳೆ. ಕೈಯಲ್ಲಿ ಸುಗಂಧ ದ್ರವ್ಯ ಹಿಡಿದು, ಅದನ್ನು ಕೆಲವು ಹುಡುಗಿಯರ ಮೈಮೇಲೆ ಸಿಂಪಡಿಸುತ್ತಾಳೆ. ಏನನ್ನೋ ಪಿಸುಗುಟ್ಟಿ ಹುಡುಗಿಯರನ್ನು ಮಾತನಾಡಿಸಲು ಪ್ರಯತ್ನಿಸುತ್ತಾಳೆ. ನಮ್ಮ ಬಟ್ಟೆಗಳನ್ನು ಎಳೆಯುತ್ತಾಳೆ. ಭಯದಿಂದಾಗಿ ಅವಳು ಏನು ಮಾಡಿದರೂ ನಾವು ಕಣ್ಣು ತೆರೆಯುವುದಿಲ್ಲ ಎಂದು 6ನೇ ತರಗತಿ ವಿದ್ಯಾರ್ಥಿನಿ ಪತ್ರದಲ್ಲಿ ಬರೆದಿದ್ದಾಳೆ.

    ಕೆಲವು ಬಾರಿ ಮಧ್ಯರಾತ್ರಿ ನಮ್ಮ ವಾರ್ಡನ್ ಒಂದಿಷ್ಟು ಹುಡುಗಿಯರನ್ನು ವಸತಿ ಶಾಲೆಯ ಆವರಣದಿಂದ ಹೊರಗೆ ಕರೆದಿಕೊಂಡು ಹೋಗಿದ್ದಾಳೆ. ನನ್ನ ಕೋಣೆಗೂ ಬಂದು ಅಸಭ್ಯವಾಗಿ ಸ್ಪರ್ಶಿಸುತ್ತಾಳೆ. ಆದರೆ, ನಾನು ನಿದ್ದೆಗೆ ಜಾರಿದಂತೆ ನಟಿಸುತ್ತೇನೆ ಎಂದು 8ನೇ ತರಗತಿಯ ವಿದ್ಯಾರ್ಥಿನಿ ಪತ್ರದಲ್ಲಿ ವಿವರಿಸಿದ್ದಾಳೆ.

    ಈ ಹಿಂದೆ ಕೆಲವು ವಿದ್ಯಾರ್ಥಿನಿಯರ ಪೋಷಕರು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಆದರೆ ಪೊಲೀಸರು ಎಫ್‍ಐಆರ್ ಅನ್ನು ದಾಖಲಿಸಿಕೊಂಡಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಈ ಶಾಲೆಯಲ್ಲಿ 6, 7, 8ನೇ ತರಗತಿಯ ಒಟ್ಟು 100 ವಿದ್ಯಾರ್ಥಿನಿಯರಿದ್ದು, ಇಬ್ಬರು ಶಿಕ್ಷಕರು ಹಾಗೂ ಒಬ್ಬ ವಾರ್ಡನ್ ಇದ್ದಾರೆ. ವಸತಿ ಶಾಲೆಯಲ್ಲಿ ಮೂರು ವಿಶಾಲ ಕೋಣೆಗಳಿದ್ದು, ಪ್ರತಿ ಕೋಣೆಯಲ್ಲಿ 20 ಹಾಸಿಗೆಗಳಿವೆ. ಒಂದು ಬೆಡ್ ಮೇಲೆ ಇಬ್ಬರು ವಿದ್ಯಾರ್ಥಿನಿಯರು ಮಲಗುತ್ತಾರೆ. ನಿಯಮಾವಳಿಗಳ ಪ್ರಕಾರ, ಪ್ರತಿ ಕೋಣೆಯಲ್ಲಿ ವಿದ್ಯಾರ್ಥಿನಿಯರ ಜೊತೆಗೆ ಒಬ್ಬ ಶಿಕ್ಷಕಿ ಮಲಗಬೇಕು. ಆದರೆ ಇಲ್ಲಿ ಈ ನಿಯಮವನ್ನು ಉಲ್ಲಂಘಿಸಲಾಗಿದೆ.

    ಮೊದಲ ಬಾರಿ ಇಂತಹ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಕಸ್ತೂರಬಾ ವಸತಿ ಶಾಲೆಯ ಜಿಲ್ಲಾ ಸಂಯೋಜಕರು ಹಾಗೂ ಬ್ಲಾಕ್ ಶಿಕ್ಷಣ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ವರದಿ ಸಲ್ಲಿಸಿದ ತಕ್ಷಣ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸತೇಂದ್ರ ಕುಮಾರ್ ಹೇಳಿದ್ದಾರೆ.

  • 13ರ ಬಾಲೆ ಮೇಲೆ ಅತ್ಯಾಚಾರವೆಸಗಿದ್ದ 75ರ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ

    13ರ ಬಾಲೆ ಮೇಲೆ ಅತ್ಯಾಚಾರವೆಸಗಿದ್ದ 75ರ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ

    ಮುಂಬೈ: ಪರೀಕ್ಷೆಗೆ ಟಿಪ್ಸ್ ಹೇಳಿಕೊಡುವ ನೆಪವೊಡ್ಡಿ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಶಿಕ್ಷಕನಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

    75 ವರ್ಷದ ಶಿಕ್ಷಕನೊಬ್ಬ ಪರೀಕ್ಷೆಗೆ ಟಿಪ್ಸ್ ಹೇಳಿಕೊಡುವ ನೆಪವೊಡ್ಡಿ 13 ವರ್ಷದ ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ನಡೆಸಿದ್ದ. ಅಷ್ಟೇ ಅಲ್ಲದೆ ವಿಡಿಯೋ ಚಿತ್ರೀಕರಿಸಿದ್ದ. ಈತನ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪೋಸ್ಕೋ ಕಾಯ್ದೆಯ ಅಡಿಯಲ್ಲಿ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

    ಶಿಕ್ಷಕನ ಕೃತ್ಯದ ವಿಡಿಯೋವನ್ನು ಯುವಕರು ಮೊಬೈಲ್ ನಲ್ಲಿ ನೋಡುತ್ತಿದ್ದಾಗ ಸಂತ್ರಸ್ತೆಯ ನೆರೆಮನೆಯಾತ ಗಮನಿಸಿದ್ದಾನೆ. ಈ ವಿಚಾರವನ್ನು ಆತ ಬಾಲಕಿಯ ಸಂಬಂಧಿಕರಿಗೆ ತಿಳಿಸಿದ ಪರಿಣಾಮ ಪ್ರಕರಣ ಬೆಳಕಿಗೆ ಬಂದಿದೆ.

    2013ರಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ಅವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. 4 ವರ್ಷಗಳ ಕಾಲ ನಡೆದ ವಿಚಾರಣೆಯಲ್ಲಿ ಆರೋಪ ಸಾಬೀತಾಗಿದ್ದು, 75 ವರ್ಷದ ಆರೋಪಿಗೆ ಜೀವಾವಧಿ ಶಿಕ್ಷೆಯಾಗಿದೆ.

    ಕೃತ್ಯ ಎಸಗಿದ್ದು ಹೇಗೆ?
    2012ರ ಡಿಸೆಂಬರ್‍ನಲ್ಲಿ ಒಂದು ದಿನ ಬಾಲಕಿ ತನ್ನ ಸ್ನೇಹಿತೆಯರೊಂದಿಗೆ ಪರೀಕ್ಷೆಗೆ ಹೋಗುತ್ತಿದ್ದಳು. ಆರೋಪಿ ಶಿಕ್ಷಕ ಅವರನ್ನು ಕರೆದು ಪರೀಕ್ಷೆಯ ಟಿಪ್ಸ್ ಹಾಗೂ ನೋಟ್ಸ್ ನೀಡುವುದಾಗಿ ಹೇಳಿದ್ದಾನೆ.

    ಹುಡಗಿಯರು ಒಳಗೆ ಬರುತ್ತಿದ್ದಂತೆ ಬಾಗಿಲು ಹಾಕಲು ಪ್ರಯತ್ನಿಸಿದಾಗ ಸಂತ್ರಸ್ತ ಬಾಲಕಿಯನ್ನು ಬಿಟ್ಟು ಎಲ್ಲ ಹುಡುಗಿಯರು ತಪ್ಪಿಸಿಕೊಂಡಿದ್ದಾರೆ. ಆದರೆ, ಅಲ್ಲೆ ಉಳಿದುಕೊಂಡ ಬಾಲಕಿಯ ಮೇಲೆ ಶಿಕ್ಷಕ ಅತ್ಯಾಚಾರವೆಸಗಿದ್ದ. ನಂತರ ಮತ್ತೆರಡು ಬಾರಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ವೇಳೆ ವಿಡಿಯೋ ಕೂಡ ಮಾಡಿಕೊಂಡಿದ್ದನು. ಅಲ್ಲದೇ ಯಾರಿಗಾದರೂ ಹೇಳಿದರೆ ನಿಮ್ಮ ತಂದೆ-ತಾಯಿಯರನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದ.

  • ಸಿಮೆಂಟ್ ಟ್ರಕ್ ಪಲ್ಟಿ- ಮೂರು ಮಕ್ಕಳು ಸೇರಿ 19 ಜನರ ಸಾವು

    ಸಿಮೆಂಟ್ ಟ್ರಕ್ ಪಲ್ಟಿ- ಮೂರು ಮಕ್ಕಳು ಸೇರಿ 19 ಜನರ ಸಾವು

    ಗಾಂಧಿನಗರ: ಸಿಮೆಂಟ್ ಟ್ರಕ್ ಪಲ್ಟಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ 19 ಜನ ಮೃತಪಟ್ಟ ದಾರುಣ ಘಟನೆ ಗುಜರಾತ್‍ನ ಭಾವನಗರ-ಅಹ್ಮದಾಬಾದ್ ಹೆದ್ದಾರಿಯಲ್ಲಿ ಶನಿವಾರ ನಡೆದಿದೆ.

    ಮೃತರನ್ನು ಭಾವನಗರ ಜಿಲ್ಲೆಯ ತಲಜಾ ತಾಲ್ಲೂಕಿನ ಸರ್ತಾನ್ ಗ್ರಾಮದವರು ಎಂದು ಗುರುತಿಸಲಾಗಿದೆ. ಅವರು ಸಿಮೆಂಟ್ ಚೀಲಗಳನ್ನು ಹೊತ್ತೊಯ್ಯುತ್ತಿದ್ದ ಲಾರಿ ಮೇಲೆ ಕುಳಿತು ಪ್ರಯಾಣ ಮಾಡುತ್ತಿದ್ದರು.

    ಭಾವನಗರದ ಬಾವಲ್ಯಾಲಿ ಗ್ರಾಮದ ಸಮೀಪದಲ್ಲಿ ಲಾರಿ ಪಲ್ಟಿ ಹೊಡೆದಿದೆ. ಪರಿಣಾಮ ಮೂರು ಮಕ್ಕಳು ಸೇರಿದಂತೆ 19 ಜನ ಮೃತಪಟ್ಟಿದ್ದಾರೆ. ಅದೃಷ್ಟವಶಾತ್ 7 ಜನರು ಬದುಕುಳಿದಿದ್ದು, ಗಾಯಗೊಂಡಿದ್ದಾರೆ. ಅವರನ್ನು ಭಾವನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಟ್ರಕ್ ಚಾಲಕ ಪರಾರಿಯಾಗಿದ್ದು, ಟ್ರಕ್‍ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

  • ಕ್ರಿಕೆಟ್  ಪಂದ್ಯಾವಳಿ ವೇಳೆ ಸರಣಿ ಬಾಂಬ್ ಸ್ಫೋಟ 8 ಮಂದಿ ಸಾವು

    ಕ್ರಿಕೆಟ್ ಪಂದ್ಯಾವಳಿ ವೇಳೆ ಸರಣಿ ಬಾಂಬ್ ಸ್ಫೋಟ 8 ಮಂದಿ ಸಾವು

    ಕಾಬೂಲ್: ಕ್ರಿಕೆಟ್ ಪಂದ್ಯಾವಳಿ ವೇಳೆ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ಪರಿಣಾಮ 8 ಜನ ಮೃತಪಟ್ಟಿರುವ ಘಟನೆ ಅಫ್ಘಾನಿಸ್ತಾನದ ಪೂರ್ವ ನಂಗರ್ ಹಾರ್‍ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

    ಪವಿತ್ರ ರಮ್ಜಾನ್ ತಿಂಗಳ ನಿಮಿತ್ತ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ವೇಳೆ ದುಷ್ಕರ್ಮಿಗಳು ಸರಣಿ ಬಾಂಬ್ ಸ್ಪೋಟ ನಡೆಸಿದ್ದಾರೆ. ಘಟನೆಯಲ್ಲಿ 8 ಮಂದಿ ಮೃತಪಟ್ಟಿದ್ದು, ಸುಮಾರು 45ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ ಎಂದು ನಗರ್ ಹಾರ್ ಪ್ರಾಂತೀಯ ರಾಜ್ಯಪಾಲರ ವಕ್ತಾರ ಅತ್ತಹುಲ್ಲಾ ಖೋಗ್ಯಾನಿ ಮಾಹಿತಿ ನೀಡಿದ್ದಾರೆ.

    ಬಾಂಬ್ ಸ್ಪೋಟದ ಹೊಣೆಯನ್ನು ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿಲ್ಲ. ಆದರೆ, ಪೂರ್ವ ಅಫ್ಘಾನಿಸ್ಥಾನ ಭಾಗದಲ್ಲಿ ತಾಲಿಬಾನ್ ಹಾಗೂ ಐಸಿಸ್ ಭಯೋತ್ಪಾದಕರು ಸಕ್ರಿಯರಾಗಿದ್ದಾರೆ. ಹೀಗಾಗಿ ಅವರೇ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ ಎಂದು ಖೋಗ್ಯಾನಿ ತಿಳಿಸಿದ್ದಾರೆ.

  • 35ರ ಮಹಿಳೆಯ ಗುಪ್ತಾಂಗಕ್ಕೆ ಬಾಟಲ್ ಹಾಕಿ ಕೊಲೆ

    35ರ ಮಹಿಳೆಯ ಗುಪ್ತಾಂಗಕ್ಕೆ ಬಾಟಲ್ ಹಾಕಿ ಕೊಲೆ

    ಭೋಪಾಲ್: 35 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ, ಗುಪ್ತಾಂಗಕ್ಕೆ ಬಾಟಲ್ ಹಾಕಿ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದ್ದು ಮೂರು ದಿನಗಳ ನಂತರ ಬೆಳಕಿಗೆ ಬಂದಿದೆ.

    ಮೃತ ಮಹಿಳೆಯು ಅಶೋಕ ನಗರದ ನಿವಾಸಿಯಾಗಿದ್ದು, ದಿನಗೂಲಿ ಕೆಲಸ ಮಾಡುತ್ತಿದ್ದಳು. ಜೊತೆಗೆ ಪರಿಚಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದಳು.

    ಮಹಿಳೆಯೊಂದಿದ್ದ ವ್ಯಕ್ತಿಯು ಆಕೆಯನ್ನು ಅತ್ಯಾಚಾರ ಮಾಡಿ, ಗುಪ್ತಾಂಗಕ್ಕೆ ತಂಪು ಪಾನೀಯ ಹಾಗೂ ಬಿಯರ್ ಬಾಟಲ್ ಹಾಕಿದ್ದಾನೆ. ಈ ವೇಳೆ ಅತೀಯಾದ ರಕ್ತಸ್ರಾವ ಉಂಟಾಗಿ ಮಹಿಳೆ ಮೃತಪಟ್ಟಿದ್ದಾಳೆ.

    ಮಹಿಳೆ ಕೊಲೆಯಾದ ಮೂರು ದಿನಗಳ ನಂತರ ದೇಹ ಕೊಳೆತು ವಾಸನೆ ಉಂಟಾಗಿದೆ. ಅನುಮಾನ ವ್ಯಕ್ತವಾಗುತ್ತಿದ್ದಂತೆ ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಗಿಲು ತೆರೆದು ನೋಡಿದಾಗ ನಗ್ನವಾಗಿ ಬಿದ್ದಿದ್ದ ಮಹಿಳೆಯ ದೇಹ ಪತ್ತೆಯಾಗಿದೆ.

    ವೈದ್ಯಕೀಯ ಪರೀಕ್ಷೆ ನಂತರ ಮಹಿಳೆಯನ್ನು ಅತ್ಯಾಚಾರ ಮಾಡಿ, ಆಕೆಯ ಗುಪ್ತಾಂಗಕ್ಕೆ ಬಾಟಲ್ ಹಾಕಲಾಗಿದೆ. ಅತಿಯಾದ ರಕ್ತಸ್ರಾವದಿಂದ ಮಹಿಳೆ ಮೃತಪಟ್ಟಿದ್ದಾಳೆ. ಅಲ್ಲದೇ ಗೋಡೆಗೆ ಆಕೆಯ ತಲೆಯನ್ನು ಹಿಡಿದು ಕುಟ್ಟಿದ ಪರಿಣಾಮ ಬಲವಾದ ಪೆಟ್ಟು ಬಿದ್ದಿದೆ ಎಂದು ತಿಳಿದು ಬಂದಿದೆ.

    ಮನೆಗೆ ಬೀಗ ಹಾಕಿದ್ದು, ಮೂರು ದಿನಗಳಿಂದ ಆರೋಪಿ ಮನೆಯ ಕಡೆಗೆ ಬಂದಿಲ್ಲ. ಅವರಿಬ್ಬರಿಗೂ ಸಂಬಂಧ ಇತ್ತು ಎಂದು ಪಕ್ಕದ ಮನೆಯವರು ಪೊಲೀಸರಿಗೆ ತಿಳಿಸಿದ್ದಾರೆ.

    ಪೊಲೀಸರು ಆರೋಪಿಯನ್ನು ಬಂಧಿಸಿ ತೀವ್ರ ತನಿಖೆ ನಡೆಸಿದ್ದು, ಈ ವೇಳೆ ಅವನು ತಪ್ಪೊಪ್ಪಿಕೊಂಡಿದ್ದಾನೆ. ಮೃತ ಮಹಿಳೆ ಆತನ ನಾಲ್ಕನೇ ಪತ್ನಿಯಾಗಿದ್ದಾಳೆ. ಇಬ್ಬರು ಪತ್ನಿಯರು ಇತನನ್ನು ಬಿಟ್ಟು ಹೋಗಿದ್ದು, ಒಬ್ಬ ಪತ್ನಿ ನಿಗೂಢವಾಗಿ ಮೃತಪಟ್ಟಿದ್ದಾಳೆ ಎಂದು ತನಿಖೆಯ ವೇಳೆ ಬಾಯಿಬಿಟ್ಟಿದ್ದಾನೆ.

  • ವರದಕ್ಷಿಣೆ ಕಿರುಕುಳದಿಂದ ಮನನೊಂದು ಮಹಿಳೆ ನೇಣಿಗೆ ಶರಣು

    ವರದಕ್ಷಿಣೆ ಕಿರುಕುಳದಿಂದ ಮನನೊಂದು ಮಹಿಳೆ ನೇಣಿಗೆ ಶರಣು

    ದಾವಣಗೆರೆ: ವರದಕ್ಷಿಣೆ ಕಿರುಕುಳದಿಂದಾಗಿ ಮಹಿಳೆಯೊಬ್ಬಳು ಮನನೊಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ಇಲ್ಲಿನ ಭಾಷಾನಗರದ ಆಫ್ರೀನ್ ಬಾನು ಆತ್ಮಹತ್ಯ ಮಾಡಿಕೊಂಡ ಮಹಿಳೆಯಾಗಿದ್ದಾರೆ. ಅವರು ಮೂರು ವರ್ಷಗಳ ಹಿಂದೆ ಇದ್ರೀಸ್ ಜೊತೆ ವಿವಾಹವಾಗಿದ್ದರು. ಸುಮಾರು ದಿನಗಳಿಂದ ಪತಿ ಮನೆಯವರು ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದ ಆಫ್ರೀನಾ ನೇಣು ಹಾಕಿಕೊಂಡು ಆತ್ಮಹತ್ಯ ಶರಣಾಗಿದ್ದಾರೆ ಎಂದು ಮೃತರ ಪೋಷಕರು ಆರೋಪಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಪಂಚಾಯತ್ ಚುನಾವಣೆಯಲ್ಲಿ ಹಿಂಸಾಚಾರ: 8 ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ- ಶಾಕಿಂಗ್ ವಿಡಿಯೋ ನೋಡಿ

    ಪಂಚಾಯತ್ ಚುನಾವಣೆಯಲ್ಲಿ ಹಿಂಸಾಚಾರ: 8 ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ- ಶಾಕಿಂಗ್ ವಿಡಿಯೋ ನೋಡಿ

    ಕೊಲ್ಕತ್ತಾ: ಪಂಚಾಯತ್ ಚುನಾವಣೆ ವೇಳೆ 10 ಕಡೆ ನಡೆದ ಘರ್ಷಣೆ ಹಿಂಸಾ ರೂಪ ಪಡೆದುಕೊಂಡಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

    ಮುಂಜಾನೆ ಪ್ರಾರಂಭವಾದ ಚುನಾವಣೆಯಲ್ಲಿ ವಿವಿಧ ಬೂತ್‍ಗಳಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿದ್ದು, ಪರಸ್ಪರ ಹೊಡೆದಾಡಿದ್ದಾರೆ. ನಂತರ ಇದು ಹಿಂಸಾ ಸ್ವರೂಪ ಪಡೆದುಕೊಂಡಿದೆ. ಪ್ರದೇಶವೊಂದರಲ್ಲಿ ನಡೆದ ಬಾಂಬ್ ದಾಳಿಯಲ್ಲಿ 20 ಜನ ಗಾಯಗೊಂಡಿವುದು ವರದಿಯಾಗಿದೆ.

     

    ಚುನಾವಣೆಗೂ ಮುನ್ನ 34%ರಷ್ಟು ಸ್ಥಾನಗಳಲ್ಲಿ ಅವಿರೋಧವಾಗಿ ಆಡಳಿತ ರೂಢ ತೃಣಮೂಲ ಕಾಂಗ್ರೆಸ್ ಸದಸ್ಯರು ಆಯ್ಕೆಯಾಗಿದ್ದರು. ಈ ಸಂಬಂಧ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. ಈ ಬೆಳವಣಿಗೆ ನಂತರ ಪ್ರಾರಂಭವಾದ ಚುನಾವಣೆಯು ಹಿಂಸಾಚಾರ ಸ್ವರೂಪ ಪಡೆದುಕೊಂಡಿದೆ.

    ಘಟನೆಗೆ ಸಂಬಂಧಿಸಿದಂತೆ ಉತ್ತರದ 24 ಪರಗಣದಿಂದ ಹಾಗೂ ದಕ್ಷಿಣದ ಬುದ್ರ್ವಾನ್, ಕೋಚ್‍ಬೆಹರ್‍ನಿಂದ 24 ಪರಗಣಗಳಿಂದ ರಾಜ್ಯ ಚುನಾವಣೆ ಆಯೋಗವು ದೂರು ದಾಖಲಿಸಿಕೊಂಡಿದೆ.

    ಉತ್ತರ ಬಂಗಾಳದ ಕೊಚ್ಬೆಗಾರ್ ಜಿಲ್ಲೆಯ ಶುಕ್ತಾಬಾರಿ ಮತದಾನದ ಬೂತ್‍ನಲ್ಲಿ ನಡೆದ ಬಾಂಬ್ ದಾಳಿ ನಡೆದಿದ್ದು, ಒಬ್ಬ ಟಿಎಂಸಿ ಕಾರ್ಯಕರ್ತ, ಓರ್ವ ಮಹಿಳೆ ಸೇರಿದಂತೆ ಒಟ್ಟು 20 ಜನರು ಗಾಯಗೊಂಡಿದ್ದಾರೆ.

    ಗುಂಪೊಂದು ಉತ್ತರ ಬಂಗಾಳದ ಅಲಿಪುರ್ದಾರ್ ಬೂತ್ ಸುತ್ತ ಗೆರೆ ಏಳೆದಿದ್ದು, ಇದನ್ನು ದಾಟದಂತೆ ಮತದಾರರಿಗೆ ಸೂಚಿಸಿದೆ. ಅಲ್ಲದೇ ದಿನ್ಹಾಟ್‍ದಲ್ಲಿ ಎರಡು ಗುಂಪುಗಳ ನಡುವಿನ ಕಲಹದಿಂದಾಗಿ ಕೆಲವು ಮತದಾರಿಗೆ ಗಾಯವಾಗಿದೆ.

    ದಕ್ಷಿಣ ಪರಗಣದ ಭಾಂಗಾರ್‍ದಲ್ಲಿ ನಡೆದ ಘರ್ಷಣೆ ವೇಳೆ ಮಾಧ್ಯಮದ ವಾಹನಗಳಿಗೂ ಹಾನಿಯಾಗಿದೆ. ಬಿರ್ಪಾರಾದಲ್ಲಿ ಐದು ಜನ ಪತ್ರಕರ್ತರು ಗಾಯಗೊಂಡಿದ್ದಾರೆ. ಗುಂಪನ್ನು ಚದುರಿಸಲು ಪೊಲೀಸರು ಟ್ರಿಗರ್ ಗ್ಯಾಸ್ ಬಳಕೆ ಮಾಡಿದ್ದಾರೆ. ಬುದ್ರ್ವಾನ್ ನಲ್ಲಿ ಬಿಜೆಪಿ ಹಾಗೂ ಸಿಪಿಎಂ ಕಾರ್ಯಕರ್ತರು ಬಾಂಬ್ ಹಾಗೂ ದೊಣ್ಣೆ ಹಿಡಿದು ಮತದಾರರನ್ನು ಹೆದರಿಸಿದ್ದಾರೆ ಎಂದು ವರದಿಯಾಗಿದೆ.

    ಇತ್ತೀಚಿನ ವರದಿಯ ಪ್ರಕಾರ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

  • ತಂಪು ಪಾನೀಯ ನೀಡಿ ಅತ್ಯಾಚಾರ: 14ರ ಬಾಲೆ ಈಗ 3 ತಿಂಗಳ ಗರ್ಭಿಣಿ

    ತಂಪು ಪಾನೀಯ ನೀಡಿ ಅತ್ಯಾಚಾರ: 14ರ ಬಾಲೆ ಈಗ 3 ತಿಂಗಳ ಗರ್ಭಿಣಿ

    ಹೈದರಾಬಾದ್: ತೆಲಗು ದೇಶಂ ಪಾರ್ಟಿ (ಟಿಡಿಪಿ) ಕಾರ್ಯಕರ್ತನೊಬ್ಬ 14 ವರ್ಷದ ಬಾಲಕಿಗೆ ತಂಪು ಪಾನೀಯದ ಆಮಿಷ ಒಡ್ಡಿ ನಿರಂತರ ಅತ್ಯಾಚಾರ ಎಸಗಿದ್ದು, ಸದ್ಯ ಆಕೆ ಈಗ ಮೂರು ತಿಂಗಳು ಗರ್ಭಿಣಿಯಾಗಿರುವ ಪ್ರಕರಣ ಆಂಧ್ರಪ್ರದೇಶದ ಗುಂಟೂರ್ ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಅತ್ಯಾಚಾರ ಸಂತ್ರಸ್ತ ಬಾಲಕಿಯು ಕೆಲವು ದಿನಗಳಿಂದ ಪ್ರಜ್ಞೆ ತಪ್ಪಿ ಬೀಳುತ್ತಿದ್ದಳು. ಅನುಮಾನ ಬಂದ ಹಿನ್ನೆಲೆಯಲ್ಲಿ ಪೋಷಕರು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಬಾಲಕಿ ಮೂರು ತಿಂಗಳ ಗರ್ಭಿಣಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ.

    ಪೋಷಕರು ಆಕೆಯನ್ನು ವಿಚಾರಿಸಿದಾಗ, ಟಿಡಿಪಿ ಕಾರ್ಯಕರ್ತನೊಬ್ಬ ಅತ್ಯಾಚಾರ ಮಾಡಿ 100 ರೂಪಾಯಿ ನೀಡಿ, ಯಾರಿಗೂ ಹೇಳದಂತೆ ಎಚ್ಚರಿಕೆ ನೀಡಿದ್ದ ಎಂದು ಬಾಯಿಬಿಟ್ಟಿದ್ದಾಳೆ.

    ಆರೋಪಿಯು ಮಾಬುಬ್ ವಾಲಿ(43) ಆಗಿದ್ದು, ಬಾಲಕಿಯ ನೆರೆಮನೆಯವನು. ಅತ್ಯಾಚಾರ ಮಾಡಿದ ನಂತರ, ನಿತ್ಯವೂ ಆಕೆಗೆ ತಂಪು ಪಾನೀಯ ಆಮಿಷ ಒಡ್ಡಿ ತನ್ನ ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗುತಿದ್ದ.

    ಆರೋಪಿಯು ಸ್ಥಳೀಯ ಸಂಸ್ಥೆಯ ಮುಖ್ಯಸ್ಥನಾಗಿದ್ದು, ಹೆಂಡತಿಯಿಂದ ವಿಚ್ಛೇದನ ಪಡೆದಿದ್ದಾನೆ. ಅವನಿಗೆ ಮಕ್ಕಳು ಮೊಮ್ಮಕ್ಕಳಿದ್ದಾರೆ. ಕೆಲವು ದಿನಗಳ ಹಿಂದೆ ನಮ್ಮ ಕುಟುಂಬಕ್ಕೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದ. ಆದರೆ ಇಂತಾ ಹೀನ ಕೃತ್ಯ ಎಸಗುತ್ತಾನೆಂದು ನಮಗೆ ತಿಳಿದಿರಲಿಲ್ಲ ಎಂದು ಸಂತ್ರಸ್ತೆಯ ಅಕ್ಕ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

    ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು. ಅತ್ಯಾಚಾರಿಯನ್ನು ಸಾರ್ವಜನಿಕರ ಮುಂದೆ ನೇಣು ಹಾಕಬೇಕು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪ್ರತಿಕ್ರಿಯೆ ನೀಡಿದ್ದಾರೆ.

    ಸದ್ಯ ಬಾಲಕಿಗೆ ಗುರಾಜಾಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಯ ಅಗತ್ಯಬಿದ್ದರೆ ಆಕೆಯನ್ನು ಗುಂಟೂರು ಆಸ್ಪತ್ರೆಗೆ ಕಳುಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

  • ಚರ್ಚ್ ಮೇಲೆ ಆತ್ಮಹತ್ಯಾ ಬಾಂಬ್ ದಾಳಿ – 13 ಸಾವು, 41ಕ್ಕೂ ಹೆಚ್ಚು ಜನರಿಗೆ ಗಾಯ

    ಚರ್ಚ್ ಮೇಲೆ ಆತ್ಮಹತ್ಯಾ ಬಾಂಬ್ ದಾಳಿ – 13 ಸಾವು, 41ಕ್ಕೂ ಹೆಚ್ಚು ಜನರಿಗೆ ಗಾಯ

    ಜಕಾರ್ತ: ಇಂಡೊನೇಷ್ಯಾದ ಮೂರು ಚರ್ಚ್‍ಗಳ ಮೇಲೆ ಆತ್ಮಹತ್ಯಾ ಬಾಂಬರ್ ಗಳು ನಡೆಸಿದ ದಾಳಿಯಲ್ಲಿ 13 ಮಂದಿ ಸಾವನ್ನಪ್ಪಿದ್ದು, 41ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ದೇಶದ ಎರಡನೇ ದೊಡ್ಡ ನಗರವಾದ ಸುರಭಯದಲ್ಲಿರುವ ಸಂತ ಮೇರಿಯಾ ರೋಮ್ ಕ್ಯಾಥೋಲಿಕ್ ಚರ್ಚ್, ಡಿಪೊನಿಗೊರೊದ ಚರ್ಚ್ ಹಾಗೂ ಪಂಟಕೊಸ್ತಾ ಚರ್ಚ್ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ.

    ಕ್ಯಾಥೋಲಿಕ್ ಚರ್ಚ್ ನಲ್ಲಿ ಸಾಮೂಹಿಕ ಪ್ರಾರ್ಥನೆಯ ವೇಳೆ ಮೊದಲ ದಾಳಿ ನಡೆದಿದೆ. ಈ ವೇಳೆ ಶಂಕಿತ ಬಾಂಬರ್ ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ಇದಾದ ಕೆಲವೇ ನಿಮಿಷದಲ್ಲಿ ಡಿಪೊನಿಗೊರೊದ ಚರ್ಚ್ ನಲ್ಲಿ ಎರಡನೇ ಬಾಂಬ್ ಸ್ಪೋಟವಾಗಿದೆ. ಮೂರನೇ ಬಾಂಬ್ ದಾಳಿ ಪಂಟಕೊಸ್ತಾ ಚರ್ಚ್ ಮೇಲಾಗಿದೆ ಎಂದು ಪೊಲೀಸ್ ವಕ್ತಾರ ಪ್ರಾನ್ಸ್ ಬರುಂಗ್ ಮಾಂಗೇರಾ ಸುದ್ದಿಗಾರಿರಗೆ ಮಾಹಿತಿ ನೀಡಿದ್ದಾರೆ.

    ಘಟನೆ 13 ಮಂದಿ ಸಾವನ್ನಪ್ಪಿದ್ದು, ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಸೇರಿದಂತೆ 40 ಮಂದಿ ಗಾಯಗೊಂಡಿದ್ದಾರೆ. ಅಲ್ಲದೇ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಮುಸ್ಲಿಮರನ್ನು ಹೊಂದಿರುವ ಇಂಡೋನೇಷ್ಯಾದಲ್ಲಿ ಅಲ್ಪಸಂಖ್ಯಾತರಾಗಿರುವ ಕ್ರಿಶ್ಚಿಯನ್ ಸಮುದಾಯದ ಮೇಲೆ ಮೊದಲಿನಿಂದಲೂ ಇಲ್ಲಿ ದಾಳಿ ನಡೆಯುತ್ತಿದೆ. 2000ರಲ್ಲಿ ಕ್ರಿಸ್‍ಮಸ್ ದಿನ ಚರ್ಚ್ ಮೇಲೆ ದಾಳಿ ಮಾಡಲಾಗಿತ್ತು. ಈ ವೇಳೆ 15 ಮಂದಿ ಮೃತಪಟ್ಟಿದ್ದರು ಮತ್ತು ಸುಮಾರು 100 ಜನ ಗಾಯಗೊಂಡಿದ್ದರು.

  • ಬಾಲ್ಯ ವಿವಾಹ ತಡೆಯಲು ಬಂದ ಅಧಿಕಾರಿಗಳ ಮೇಲೆ ಸಂಬಂಧಿಕರಿಂದ ಹಲ್ಲೆ!

    ಬಾಲ್ಯ ವಿವಾಹ ತಡೆಯಲು ಬಂದ ಅಧಿಕಾರಿಗಳ ಮೇಲೆ ಸಂಬಂಧಿಕರಿಂದ ಹಲ್ಲೆ!

    ಮಂಡ್ಯ: ಬಾಲ್ಯ ವಿವಾಹ ತಡೆಯಲು ಮುಂದಾದ ಅಧಿಕಾರಿಗಳಿಗೆ ಘೆರಾವ್ ಹಾಕಿ, ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಶಿಕಾರಿಪುರ ಗ್ರಾಮದಲ್ಲಿ ನಡೆದಿದೆ.

    ಬಾಲ್ಯ ವಿವಾಹದ ಕುರಿತು ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಅಧಿಕಾರಿಗಳು ಬಂದಿದ್ದಾರೆ. ಪರಿಶೀಲನೆ ನಡೆಸುತ್ತಿದ್ದ ವೇಳೆ ಅವರನ್ನು ತಡೆದ ಸಂಬಂಧಿಕರು, ಇಲ್ಲಿ ಯಾವುದೇ ಮದುವೆ ನಡೆಯುತ್ತಿಲ್ಲವೆಂದು ಗಲಾಟೆ ಮಾಡಿದ್ದಾರೆ. ಅಲ್ಲದೇ, ವಿಡಿಯೋ ಮಾಡುತ್ತಿದ್ದ ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ್ದು, ಅವರ ಮೊಬೈಲ್ ಕಿತ್ತುಕೊಂಡಿದ್ದಾರೆ.

    ಸದ್ಯ ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಸ್ಥಳಕ್ಕೆ ನಾಗಮಂಗಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.