Tag: crime

  • 113 ಪ್ರಕರಣಗಳಲ್ಲಿ ಬೇಕಿದ್ದ 63 ವರ್ಷದ ಲೇಡಿ ಡಾನ್ ಆರೆಸ್ಟ್

    113 ಪ್ರಕರಣಗಳಲ್ಲಿ ಬೇಕಿದ್ದ 63 ವರ್ಷದ ಲೇಡಿ ಡಾನ್ ಆರೆಸ್ಟ್

    ನವದೆಹಲಿ: ದೆಹಲಿಯಲ್ಲಿ ಅತೀ ಹೆಚ್ಚು ಅಪರಾಧ ಹಿನ್ನೆಲೆ ಹೊಂದಿರುವ ಲೇಡಿ ಡಾನ್ ಎಂದೇ ಕುಖ್ಯಾತಿ ಪಡೆದಿದ್ದ 62 ವರ್ಷದ ಬಸಿರಾನ್‍ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

    ಕಳೆದ ಹಲವು ದಶಕಗಳಿಂದ ದೆಹಲಿಯ ಸಂಗಮ್ ವಿಹಾರ್ ಪ್ರದೇಶದಲ್ಲಿ ತನ್ನ 8 ಮಕ್ಕಳೊಂದಿಗೆ ಬಸಿರಾನ್ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಳು. ಬಸಿರಾನ್ ಮೇಲೆ ಕೊಲೆ, ಸುಪಾರಿ, ಹಣಕ್ಕಾಗಿ ಅಪಹರಣ, ಅಕ್ರಮ ಮದ್ಯ ವ್ಯವಹಾರ, ದರೋಡೆ ಸೇರದಂತೆ ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿತ್ತು.

    2017 ರಲ್ಲಿ ಕೊಲೆ ಪ್ರಕರಣ ಸೇರಿದಂತೆ ಇದುವರೆಗೂ ಬಸಿರಾನ್ 9 ಬಾರಿ ಬಂಧಿಸಲಾಗಿದೆ. ಮತ್ತೊಂದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸಿರಾನ್ ಇಬ್ಬರು ಪುತ್ರರು ಜೈಲು ಶಿಕ್ಷೆ ಅನುಭವಿಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೇ ಪೊಲೀಸರ ಮಾಹಿತಿ ಅನ್ವಯ ಬಸಿರಾನ್ ಅಪರಾಧ ಕೃತ್ಯ ಕೇಂದ್ರ ಬಿಂದುವಾಗಿದ್ದು, ಈ ಪ್ರದೇಶ ಪ್ರಮುಖ ಕುಡಿಯುವ ನೀರಿನ ಕೇಂದ್ರಗಳ ಮೇಲೆ ತಮ್ಮ ಹಿಡಿತ ಹೊಂದಿದ್ದಳು. ಅಲ್ಲದೇ ಹಲವು ಅಕ್ರಮ ವ್ಯವಹಾರ ನಡೆಸುತ್ತಿದ್ದಳು ಎಂದು ತಿಳಿಸಿದ್ದಾರೆ.

    ವ್ಯಕ್ತಿಯೊಬ್ಬರಿಂದ 21 ವರ್ಷದ ಮೀರಾಜ್ ಎಂಬ ಯುವಕನ್ನು ಕೊಲೆ ಮಾಡಲು ಬಸಿರಾನ್ 60 ಸಾವಿರ ರೂ. ಸುಪಾರಿ ಪಡೆದ್ದಳು. ಈ ಪ್ರಕರಣದಲ್ಲಿ ಕಳೆದ 8 ತಿಂಗಳಿನಿಂದ ಬಸಿರಾನ್ ನನ್ನು ಬಂಧಿಸಿಲು ಪೊಲೀಸರು ಪ್ರಯತ್ನಿಸುತ್ತಿದ್ದರು. ಆದರೆ ಸಂಬಂಧಿಗಳ ಸಹಾಯದಿಂದ ಪೊಲೀಸರ ಕೈಗೆ ಸಿಗದೆ ಬಸಿರಾನ್ ವಂಚಿಸುತ್ತಿದ್ದಳು. ಪೊಲೀಸರು ದೆಹಲಿಯ ಸಂಗಮ್ ವಿಹಾರ್ ಪ್ರದೇಶದ ಕೆಲ ಸಾರ್ವಜನಿಕರು ಹಾಗೂ ವಕೀಲರ ಸಹಾಯ ಪಡೆದು ಬಸಿರಾನ್ ರನ್ನು ಬಂಧಿಸಿದ್ದಾರೆ.

    1990 ರಲ್ಲಿ ಅಪರಾಧ ಜಗತ್ತಿಗೆ ಪ್ರವೇಶಿಸಿದ ಬಸಿರಾನ್ ಮೊದಲು ಕಳ್ಳಭಟ್ಟಿ ವ್ಯವಹಾರ ನಡೆಸಿದ್ದಳು. ಬಳಿಕ ಅನೇಕ ಅಪರಾಧ ಕೃತ್ಯಗಳಲ್ಲಿ ತೊಡಗಿ ತನ್ನ ಮಕ್ಕಳಿಗೂ ಪ್ರೇರಣೆ ನೀಡಿದ್ದಳು. ವಿಶೇಷವೆಂದರೆ ಬಸಿರಾನ್ ಕುಟುಂಬದಲ್ಲಿ ಆಕೆಯ ಪತಿ ಮಲ್ಖನ್ ಸಿಂಗ್ ಮೇಲೆ ಯಾವುದೇ ಅಪರಾಧ ಪ್ರಕರಣ ದಾಖಲಾಗಿಲ್ಲ.

  • ಒಂದು ಬೈಕಿಗಾಗಿ ಇಬ್ಬರ ಜಗಳ, ಮೂರನೇಯವನ ಮರ್ಡರ್- ಇದು ಸ್ನೇಹಿತರ ಥ್ರಿಲ್ಲರ್ ಕಹಾನಿ

    ಒಂದು ಬೈಕಿಗಾಗಿ ಇಬ್ಬರ ಜಗಳ, ಮೂರನೇಯವನ ಮರ್ಡರ್- ಇದು ಸ್ನೇಹಿತರ ಥ್ರಿಲ್ಲರ್ ಕಹಾನಿ

    ದೊಡ್ಡಬಳ್ಳಾಪುರ: ಬೈಕ್ ವಿಚಾರದಲ್ಲಿ ಉಂಟಾದ ಜಗಳವೊಂದರಲ್ಲಿ 21 ವರ್ಷದ ಯುವಕನೊರ್ವ, ಮತ್ತೊಬ್ಬ 21 ವರ್ಷದ ಯುವಕನ ತಲೆ ಕಡಿದು ಪೊಲೀಸ್ ಠಾಣೆಗೆ ಬರಲು ಯತ್ನಿಸಿರೋ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದಲ್ಲಿ ನಡೆದಿದೆ.

    ನಗರದ ಉಪೇಂದ್ರ ಕೊಲೆಯಾಗಿದ್ದು, ರೌಡಿಶೀಟರ್ ಪವನ್ ತಲೆ ಕಡಿದಿದ್ದು ಈಗ ಅರೆಸ್ಟ್ ಆಗಿದ್ದಾನೆ. ದೊಡ್ಡಬಳ್ಳಾಪುರ ನಗರದ ಚಿಕ್ಕಪೇಟೆಯ ಶ್ರೀರಾಮದೇವಸ್ಥಾನ ಬಳಿ ಜೂನ್ 1 ರಂದು ಅಪರಿಚಿತ ವ್ಯಕ್ತಿಯ ರುಂಡ ಪತ್ತೆಯಾಗಿತ್ತು. ಪ್ರಕರಣದ ತನಿಖೆಗಿಳಿದ ದೊಡ್ಡಬಳ್ಳಾಪುರ ಪೊಲೀಸರಿಗೆ ಪತ್ತೆಯಾದ ರುಂಡ ನಗರದ ಉಪೇಂದ್ರ ನದು ಎಂಬುದು ಅವರ ತಂದೆಯ ಮೂಲಕ ಗೊತ್ತಾಗಿತ್ತು.

    ಮೊದ ಮೊದಲು ರೈಲ್ವೆ ಹಳಿಗಳ ಕೂಗಳತೆ ದೂರದಲ್ಲಿ ರುಂಡ ಪತ್ತೆಯಾದ ಕಾರಣ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಅಂತಲೇ ಅಂದಾಜಿಸಿದ್ದರು. ಆದ್ರೆ ರುಂಡ ಪತ್ತೆಯಾಗಿ ಮುಂಡಕ್ಕಾಗಿ ರೈಲ್ವೇ ಹಳಿಗಳ ಅಕ್ಕ-ಪಕ್ಕ ಹುಡುಕಾಟ ನಡೆಸಿದ್ರೂ ಮುಂಡ ಪತ್ತೆಯಾಗಿರಲಿಲ್ಲ. ಇದ್ರಿಂದ ಅನುಮಾನಗೊಂಡ ಪೊಲೀಸರು ಪ್ರಕರಣದ ತನಿಖೆಯ ದಿಕ್ಕನ್ನ ಬದಲಿಸಿದ್ದರು.

    ಕೊಲೆಯಾದ ಉಪೇಂದ್ರ

    ಕೊಲೆಗೆ ಕಾರಣ ಏನು?
    ಬೆಂಗಳೂರಿನಿಂದ ದೊಡ್ಡಬಳ್ಳಾಪುರ ಕ್ಕೆ ಆಗಮಿಸಿದ್ದ ಸ್ನೇಹಿತ ಯೋಗಿಯ ಬೈಕ್ ನ್ನ ಪವನ್ ಪಡೆದುಕೊಂಡಿದ್ದ. ಆದ್ರೆ ಈ ಬೈಕ್ ಮೇಲೆ ಕಣ್ಣು ಹಾಕಿದ ಆಶೋಕ್ ಪವನ್ ಬಳಿಯಿದ್ದ ಬೈಕ್ ನ್ನ ಚಾಕು ತೋರಿಸಿ ಬೆದರಿಸಿ ಕಸಿದುಕೊಂಡಿದ್ದ. ಹೀಗಾಗಿ ಪವನ್- ಆಶೋಕ್ ನಡುವೆ ಜಗಳ ಶುರುವಾಗಿತ್ತು. ಮತ್ತೊಂದೆಡೆ ಮಾರನೇ ದಿನ ಬೈಕ್ ಮಾಲೀಕ ಯೋಗಿ ಹಾಗೂ ಪವನ್, ಅತನ ಸ್ನೇಹಿತರು ಸೇರಿ ಅಶೋಕ್ ನ ಮನೆ ಮುಂದಿದ್ದ ಆತನ ಸ್ವಂತ ಬೈಕ್ ನ್ನ ಸುಟ್ಟು ಹಾಕಿದ್ರು.

    ಕೊನೆಗೆ ಆಶೋಕ್ ನ ಬಳಿ ಕಸಿದುಕೊಂಡ ಬೈಕ್ ಕೊಡುವಂತೆ ಪಟ್ಟು ಹಿಡಿದು ಗಲಾಟೆ ನಡೆಸಿದ್ರು. ಇದಲ್ಲದೆ ಅಶೋಕ್ ತಂಗಿ ಹಾಗೂ ಪವನ್ ನಡುವೆ ಪ್ರೇಮಾಂಕುರವಾಗಿ ಆ ವಿಚಾರದಲ್ಲಿ ಮೊದಲೇ ಅಶೋಕ್-ಪವನ್ ನಡುವೆ ದ್ವೇಷ ಏರ್ಪಟ್ಟಿತ್ತು. ಇದ್ರಿಂದ ಇಬ್ಬರ ನಡುವೆ ದ್ವೇಷ ಬೈಕ್ ಜಗಳದಿಂದ ಮತ್ತೆ ಕೆರಳಿ ಕೊನೆಗೆ ಇಬ್ಬರ ಪರಸ್ಪರ ರನ್ನ ಕೊಲೆ ಮಾಡೋಕೆ ಪ್ಲಾನ್ ಮಾಡಿದ್ರು. ಆದ್ರೆ ಇದರ ಮಧ್ಯೆ ಅಶೋಕ್ ಸ್ನೇಹಿತ ಉಪೇಂದ್ರನೇ ತನ್ನ ಮಾಹಿತಿ ಆಶೋಕ್ ನಿಗೆ ಕೊಡ್ತಿದ್ದಾನೆ ಅಂತ ಉಪೇಂದ್ರನನ್ನು ಪವನ್ ಮೊದಲು ಟಾರ್ಗೆಟ್ ಮಾಡಿದ್ದ.

    ಕೊಲೆ ಮಾಡಿದ ಪವನ್

    ಈ ಮಧ್ಯೆ ಮಧ್ಯದಾರೀಲಿ ಸಿಕ್ಕ ಉಪೇಂದ್ರ ನನ್ನ ನಾಗರಕರೆಗೆ ಕರೆದುಕೊಂಡ ಹೋದ ಪವನ್, ಮೊದಲು ಅವನ ಬಟ್ಟೆ ಬಿಚ್ಚಿಸಿದ್ದಾನೆ. ಕೊನೆಗೆ ತಾನು ಬಟ್ಟೆ ಬಿಚ್ಚಿ ಎದುರು ನಿಲ್ತಾನೆ. ಮೊದಲೇ ಪ್ಲಾನ್ ನಂತೆ ಕೆರೆಯಲ್ಲಿ ಇಟ್ಟಿದ್ದ ಲಾಂಗ್ ಉಪೇಂದ್ರ ನಿಗೆ ಕೊಟ್ಟು ಕೊಲೆ ಮಾಡೊಕೆ ಹೇಳ್ತಾನೆ. ಅದ್ರೆ ಉಪೇಂದ್ರ ನಿರಾಕರಿಸಿದಾಗ ಕೊಡು ನಾನು ಮಾಡ್ತೀನಿ ಅಂತ ಲಾಂಗ್ ತಗೊಂಡು ಒಂದೇ ಏಟಿಗೆ ಉಪೇಂದ್ರ ನ ತಲೆ ಕತ್ತರಿಸುತ್ತಾನೆ. ತದನಂತರ ಲಾಂಗ್ ನಿಂದ ಉಪೇಂದ್ರ ನ ರುಂಡ-ಮುಂಡ ಬೇರ್ಪಡಿಸಿ, ಮುಂಡವನ್ನ ಅಲ್ಲೇ ಕೆರೆಯಲ್ಲಿ ಹೂತು ಹಾಕ್ತಾನೆ.

    ರುಂಡವನ್ನ ಚೀಲದಲ್ಲಿ ಹಾಕಿಕೊಂಡು ಕೈಯಲ್ಲಿ ಹಿಡಿದು ಪೊಲೀಸ್ ಠಾಣೆ ಕಡೆಗೆ ಹೆಜ್ಜೆ ಹಾಕಿದ್ದಾನೆ. ಅಷ್ಟರಲ್ಲೇ ಮತ್ತೊಂದಡೆ ಪವನ್ ಕೊಲೆ ಮಾಡೋಕೆ ಅಂತ ಪವನ್ ನನ್ನ ಹುಡುಕಾಡ್ತಿದ್ದ ಆಶೋಕ್ ಗೆ ಪವನ್ ಸಿಕ್ಕಿಬಿದ್ದಿದ್ದ. ಸ್ಮಶಾನ ಕ್ಕೆ ಕರೆದುಕೊಂಡು ಹೋಗಿ ಹಿಗ್ಗಾ ಮುಗ್ಗಾ ಹಲ್ಲೆ ಮಾಡಿ ತಲೆ ಯ ಮೇಲೆ ಕಲ್ಲು ಎತ್ತಿ ಹಾಕಿದ್ದ. ಆದ್ರೆ ಪವನ್ ನನ್ನ ಮರ್ಡರ್ ಮಾಡೋಕೆ ಕರೆದುಕೊಂಡು ಹೋಗಿರುವ ವಿಷಯ ತಿಳಿದು ಪವನ್ ತಂದೆ ಸ್ಮಶಾನದ ಬಳಿ ಹೋಗಿದ್ದಾರೆ. ಇದನ್ನ ಕಂಡ ಅಶೋಕ್ ಹಾಗೂ ಸಹಚರರು ಪರಾರಿಯಾಗಿ ಪವನ್ ಬದುಕುಳಿದಿದ್ದ. ಕೊನೆಗೆ ಹೋಗಿ ತನ್ನ ಮೇಲಿನ ಕೊಲೆ ಪ್ರಕರಣವನ್ನ ಪೊಲೀಸರಿಗೆ ತಿಳಿಸಿದ್ದ. ಆದ್ರೆ ತಾನು ಮಾಡಿದ್ದ ಉಪೇಂದ್ರನ ಕೊಲೆ ವಿಷಯ ಮುಚ್ಚಿಟ್ಟಿದ್ದ.

    ಪ್ರಕರಣ ಭೇದಿಸಿದ್ದು ಹೇಗೆ?
    ಏಪ್ರಿಲ್ 30 ರಂದು ಬಿಸಾಡಿದ್ದ ರುಂಡ, ಜೂನ್ 1 ರಂದು ಪತ್ತೆಯಾಗಿತ್ತು. ಮಗ ಕಾಣೆಯಾಗಿದ್ದ ಹಿನ್ನಲೆಯಲ್ಲಿ ರುಂಡ ಪತ್ತೆಯಾದ ವಿಷಯ ತಿಳಿದು ಮೃತ ಉಪೇಂದ್ರ ತಂದೆ ಪೊಲೀಸ್ ಠಾಣೆಗೆ ಬಂದು ಫೋಟೋ ಮೂಲಕ ತನ್ನ ಮಗನದ್ದೇ ರುಂಡ ಅಂತ ಗುರ್ತಿಸಿದ್ದ. ಇನ್ನೂ ತನ್ನ ಮಗನನ್ನ ಪವನ್ ಕರೆದುಕೊಂಡು ಹೋಗಿದ್ದ ಅನ್ನೋ ಮಾಹಿತಿಯನ್ನ ಪೊಲೀಸರಿಗೂ ನೀಡಿದ್ದ. ಇದೇ ಅನುಮಾನದ ಮೇಲೆ ಪವನ್ ಕರೆಸಿ ಬೆಂಡೆತ್ತಿದ್ದ ಪೊಲೀಸರಿಗೆ ಗೊತ್ತಾಗಿದ್ದು ಈ ಒಂದು ಬೈಕ್ ಮರ್ಡರ್ ನ ಕ್ರೈಂ ಕಹಾನಿ.

    ಸದ್ಯ ಪವನ್, ಅಶೋಕ್ ಸೇರಿದಂತೆ ಐವರು ಸಹಚರರನ್ನ ಬಂಧಿಸಿರುವ ಪೊಲೀಸರು ಘಟನೆಗೆಲ್ಲಾ ಕಾರಣವಾದ ಬೈಕ್ ಜಪ್ತಿ ಮಾಡಿದ್ದಾರೆ. ಪ್ರಕರಣದ ತನಿಖೆ ನಡೆಸಿ ಕಾರ್ಯಾಚರಣೆ ನಡೆಸಿದ ದೊಡ್ಡಬಳ್ಳಾಪುರ ಸಿಪಿಐ ಸಿದ್ದರಾಜು ಕಾರ್ಯಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಭೀಮಾಶಂಕರ್ ಗುಳೇದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಲಂಚ ನೀಡದ ಮಟ್ಕಾ ದಂಧೆ ಆರೋಪಿಗೆ ಪೊಲೀಸರಿಂದ ಹಿಗ್ಗಾಮುಗ್ಗಾ ಥಳಿತ!

    ಲಂಚ ನೀಡದ ಮಟ್ಕಾ ದಂಧೆ ಆರೋಪಿಗೆ ಪೊಲೀಸರಿಂದ ಹಿಗ್ಗಾಮುಗ್ಗಾ ಥಳಿತ!

    ತುಮಕೂರು: ಲಂಚ ನೀಡಲಿಲ್ಲವೆಂದು ಮಟ್ಕಾ ದಂಧೆ ಆರೋಪಿಗೆ ಮೇಲೆ ಆಂಧ್ರ ಪ್ರದೇಶದ ಕಂಬದೂರು ಪೊಲೀಸರು ಮನಬಂದಂತೆ ಥಳಿಸಿದ ಘಟನೆ ಶನಿವಾರ ಬೆಳಕಿಗೆ ಬಂದಿದೆ.

    ಪಾವಗಡ ತಾಲೂಕಿನ ಡೊಡ್ಡಹಳ್ಳಿ ಗ್ರಾಮದ ನಿವಾಸಿ ವೀರೇಶ್ ಹಲ್ಲೆಗೆ ಒಳಗಾದ ಆರೋಪಿ. ಮಟ್ಕಾ ಆರೋಪದ ಮೇಲೆ ವೀರೇಶನನ್ನು ಆತನ ಮನೆಯಲ್ಲಿ ಮೇ 29 (ಮಂಗಳವಾರ) ಮಧ್ಯರಾತ್ರಿ ಆಂಧ್ರ ಪ್ರದೇಶದ ಕಂಬದೂರು ಪೆÇಲೀಸರು ಬಂದಿಸಿದ್ದರು. ಕೇಸ್ ವಾಪಾಸ್ ಪಡೆಯುತ್ತೇವೆ 10 ಲಕ್ಷ ರೂ. ಹಣ ನೀಡುವಂತೆ ಒತ್ತಾಯಿಸಿದ್ದಾರಂತೆ. ಇದಕ್ಕೆ ವೀರೇಶ್ ಒಪ್ಪದಿದ್ದಾಗ ಎರಡು ದಿನಗಳ ಕಾಲ ಅಜ್ಞಾತ ಸ್ಥಳದಲ್ಲಿರಿಸಿ, ಕಟ್ಟಿಹಾಕಿ ಮನಬಂದಂತೆ ಥಳಿಸಿದ್ದಾರೆ ಎಂದು ವೀರೇಶ್ ಹೇಳ್ತಾರೆ.

    ಗುರುವಾರ ಆಂಧ್ರ ಪ್ರದೇಶ ಪೊಲೀಸರಿಗೆ 2.5 ಲಕ್ಷ ರೂ. ನೀಡಿದ್ದರಿಂದ ಅಂದು ರಾತ್ರಿ ವೀರೇಶನನ್ನು ಬಿಟ್ಟು ಕಳುಹಿಸಿದ್ದಾರೆ. ಪೊಲೀಸರ ದೌರ್ಜನ್ಯಕ್ಕೆ ಒಳಗಾದ ವೀರೇಶನ ಸೊಂಟ, ಬೆನ್ನು ಮೂಳೆಗೆ ಬಲವಾದ ಪೆಟ್ಟು ಬಿದ್ದಿದ್ದು, ಪರಿಸ್ಥಿತಿ ಗಂಭೀರವಾಗಿದೆ. ವೀರೇಶನ ಸಂಬಂಧಿಕರು ಆಂಧ್ರಪ್ರದೇಶ ಪೊಲೀಸರ ವರ್ತನೆ ಕಂಡಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ಕೊಡಲು ಮುಂದಾಗಿದ್ದಾರೆ.

  • ಸ್ಮಾರ್ಟ್ ಫೋನ್ ನೀಡದ್ದಕ್ಕೆ ನೇಣಿಗೆ ಶರಣಾದ ಬಾಲಕ!

    ಸ್ಮಾರ್ಟ್ ಫೋನ್ ನೀಡದ್ದಕ್ಕೆ ನೇಣಿಗೆ ಶರಣಾದ ಬಾಲಕ!

    ಭೋಪಾಲ್: ಪೋಷಕರು ಸ್ಮಾರ್ಟ್ ಫೋನ್ ಖರೀದಿ ಮಾಡಲು ಹಣ ನೀಡದ್ದಕ್ಕೆ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಭೋಪಾಲ್ ಅಶೋಕ್ ಗಾರ್ಡನ್ ನಲ್ಲಿ ನಡೆದಿದೆ.

    ಮುಜಾಮಿಲ್ ಅನ್ಸಾರಿ(11) ನೇಣಿಗೆ ಶರಣಾದ ಬಾಲಕ. ಮನೆಯಲ್ಲಿ ನೇಣು ಹಾಕಿಕೊಂಡಿದ್ದ ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆಸ್ಪತ್ರೆ ತಲುಪುತ್ತಿದ್ದಂತೆ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

    ಮೃತ ಬಾಲಕನ ತಂದೆ ಪಾನ್ ಶಾಪ್ ನಡೆಸುತ್ತಿದ್ದು, ಮುಜಾಮಿಲ್ ಹಾಗೂ ಆತನ ಸಹೋದರ ಸೋಯಿ ನಗರದ ಚಿಕ್ಕಪ್ಪನ ಮನೆಯಲ್ಲಿದ್ದು ಶಾಲೆಗೆ ಹೋಗುತ್ತಿದ್ದರು. ರಮ್ಜಾನ್ ನಿಮಿತ್ತ ಭೋಪಾಲ್‍ಗೆ ಬಂದಿದ್ದು, ಮುಜಾಮಿಲ್ ತಂದೆಗೆ ಸ್ಮಾರ್ಟ್ ಫೋನ್ ಕೊಡಿಸುವಂತೆ ಒತ್ತಾಯಿಸಿದ್ದಾನೆ. ಆದರೆ ಅವರು ಫೋನ್ ಬಳಕೆಯಿಂದ ಮಕ್ಕಳು ಹಾಳಾಗುತ್ತಾರೆ ಎಂದು ಹೇಳಿ ಬಟ್ಟೆ ಕೊಂಡುಕೊಳ್ಳಲು 1,500 ರೂ. ನೀಡಿದ್ದಾರೆ.

    ಬಾಲಕ ಮುಜಾಮಿಲ್ ಶುಕ್ರವಾರ ಬೆಳಗ್ಗೆ ಬೇಗ ಎದ್ದು ನಮಾಜ್ ಮಾಡಿ, ಆಟವಾಡಲು ಹೋಗಿದ್ದನು. ಮರಳಿ ಮನೆಗೆ ಬಂದು ಮೇಲಿನ ರೂಮ್‍ನಲ್ಲಿ ಮಲಗಿದ್ದಾನೆ ಎಂದು ತಾಯಿ ತಿಳಿದಿದ್ದರು. ಆದರೆ ಅವರು ಸಂಜೆ 6.30 ಗಂಟೆಗೆ ರೂಮ್‍ಗೆ ಹೋಗಿ ನೋಡುತ್ತಿದ್ದಂತೆ ಬಾಲಕ ನೇಣು ಹಾಕಿಕೊಂಡಿರುವುದು ಗೊತ್ತಾಗಿದೆ. ತಕ್ಷಣವೇ ಪತಿಗೆ ಫೋನ್ ಮಾಡಿ ಕರೆಸಿಕೊಂಡು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲೇ ಬಾಲಕ ಮೃತಪಟ್ಟಿದ್ದಾನೆ.

    ಬಾಲಕನ ಕೊಠಡಿಯಲ್ಲಿ ಯಾವುದೇ ಡೆತ್ ನೋಟ್ ದೊರೆತಿಲ್ಲ. ಬಾಲಕ ಹಠದಿಂದ ಕೂಡಿದ ಮನಸ್ಥಿತಿಯನ್ನು ಹೊಂದಿದ್ದ ಎಂದು ನೆರೆಹೊರೆ ಮನೆಯವರು ತಿಳಿಸಿದ್ದಾರೆ ಪೊಲೀಸರು ತಿಳಿಸಿದ್ದಾರೆ.

  • ವಿಚಾರಣೆಗೆ ಕರೆ ತರಲಾಗಿದ್ದ ಕೈದಿ ನ್ಯಾಯಾಲಯದ 3ನೇ ಮಹಡಿಯಿಂದ ಜಂಪ್!

    ವಿಚಾರಣೆಗೆ ಕರೆ ತರಲಾಗಿದ್ದ ಕೈದಿ ನ್ಯಾಯಾಲಯದ 3ನೇ ಮಹಡಿಯಿಂದ ಜಂಪ್!

    ತುಮಕೂರು: ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆತಂದಿದ್ದ ಕೈದಿಯೊಬ್ಬ ಕೋರ್ಟ್ ನ 3ನೇ ಮಹಡಿಯಿಂದ ಜಿಗಿದು, ಅಸ್ವಸ್ಥಗೊಂಡ ಘಟನೆ ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ.

    ಕೈದಿಯನ್ನು ಚಂದ್ರಯ್ಯ (29) ಎಂದು ಗುರುತಿಸಲಾಗಿದೆ. ಆತನ ಸ್ಥಿತಿ ಚಿಂತಾಜನಕವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಚೇಳೂರು ಪೊಲೀಸ್ ಠಾಣೆಯಲ್ಲಿ ಕೈದಿ ಚಂದ್ರಪ್ಪನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದರಿಂದ ತುಮಕೂರು ಕೇಂದ್ರ ಜೈಲಿನಲ್ಲಿ ಇರಿಸಲಾಗಿತ್ತು. ಜೈಲಿನಲ್ಲಿ ಚಂದ್ರಯ್ಯ ಮಾನಸಿಕವಾಗಿ ಕುಗ್ಗಿದ್ದ ಎನ್ನಲಾಗುತ್ತಿದೆ. ಆತನನ್ನು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರು ಪಡಿಸಲು ಕರೆರತರಲಾಗಿತ್ತು. ಕೋರ್ಟ್ ಕಟ್ಟಡದ ಮೂರನೇ ಮಹಡಿಗೆ ಹೋಗುತ್ತಿದ್ದಂತೆ ಕೆಳಗೆ ಹಾರಿದ್ದಾನೆ.

    ತಕ್ಷಣವೇ ಕೈದಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಆಸ್ಪತ್ರೆಗೆ ಹಿರಿಯ ಪೊಲೀಸ್ ಅಧಿಕಾರಿ ಭೇಟಿ ನೀಡಿದ್ದಾರೆ.

  • ಮೇಜರ್ ಗೊಗೊಯಿ ವಿರುದ್ಧ ಆರೋಪ ಸಾಬೀತಾದ್ರೆ ಕಠಿಣ ಕ್ರಮ: ಸೇನಾ ಮುಖ್ಯಸ್ಥ

    ಮೇಜರ್ ಗೊಗೊಯಿ ವಿರುದ್ಧ ಆರೋಪ ಸಾಬೀತಾದ್ರೆ ಕಠಿಣ ಕ್ರಮ: ಸೇನಾ ಮುಖ್ಯಸ್ಥ

    ಶ್ರೀನಗರ: ಬಾಲಕಿಯೊಬ್ಬಳನ್ನು ಹೋಟೆಲ್‍ಗೆ ಕರೆದೊಯ್ದಿದ್ದ ಪ್ರಕರಣದ ಆರೋಪ ಸಾಬೀತಾದರೆ ಮೇಜರ್ ಗೊಗೊಯ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಹೇಳಿದ್ದಾರೆ.

    ಪ್ರಕರಣದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಭಾರತೀಯ ಸೇನೆಯಲ್ಲಿರು ಯಾರೇ ತಪ್ಪು ಮಾಡಿದರೂ ಅವರಿಗೆ ಕಠಿಣ ಶಿಕ್ಷೆ ನೀಡಲಾಗುತ್ತದೆ. ಶಿಕ್ಷೆಯು ಇತರರಿಗೆ ಮಾದರಿಯಾಗುವ ರೀತಿ ಇರುತ್ತದೆ ಎಂದು ಅವರು ಹೇಳಿದ್ದಾರೆ.

    ಏನಿದು ಪ್ರಕರಣ?
    ಮೇ 23ರಂದು ಭಾರತೀಯ ಸೇನೆಯ ಆರೋಪಿ ಮೇಜರ್ ಲೀತುಲ್ ಗೊಗೊಯ್ ಶ್ರೀನಗರದ ಹೋಟೆಲ್‍ವೊಂದರಲ್ಲಿ ರೂಮ್ ಬುಕ್ ಮಾಡಿದ್ದರು. ಅಲ್ಲಿಗೆ 17 ವರ್ಷದ ಸ್ಥಳೀಯ ಬಾಲಕಿಯನ್ನು ರೂಮ್‍ಗೆ ಕರೆತಂದಿದ್ದರು.

    ಸ್ಥಳೀಯರಿಗೆ ರೂಮ್ ನೀಡುವುದಿಲ್ಲ ಎನ್ನುವುದು ಹೋಟೆಲ್ ನಿಯಮವಾಗಿತ್ತು. ಹೀಗಾಗಿ ಬಾಲಕಿ ಹೋಟೆಲ್ ಪ್ರವೇಶಿಸಿದ್ದನ್ನು ಸಿಬ್ಬಂದಿ ವಿರೋಧಿಸಿದ್ದಾರೆ. ಅಲ್ಲಿಂದ ಹೊರಬಂದು ಸಿಬ್ಬಂದಿಯೊಂದಿಗೆ ಗೊಗೊಯ್ ವಾಗ್ವಾದಕ್ಕಿಳಿದಿದ್ದರು. ಈ ವೇಳೆ ಗೊಗೊಯ್ ಪರಿಚಿತ ವ್ಯಕ್ತಿ ಸಮೀರ್ ಅಹ್ಮದ್ ಇಲ್ಲಿದ್ದ ಎನ್ನಲಾಗಿದೆ. ಹೋಟೆಲ್ ಸಿಬ್ಬಂದಿ ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಗೊಗೊಯ್‍ನನ್ನು ಬಂಧಿಸಿದ್ದಾರೆ.  ಇದನ್ನು ಓದಿ:

    ಲೀತುಲ್ ಗೊಗೊಯ್ ಯಾರು?
    ಅಸ್ಸಾಂನ ಗುವಾಹಟಿಯವರಾದ ಲೀತುಲ್ ಗೊಗೊಯ್ ಯುಪಿಎಸ್‍ಸಿ ಎನ್‍ಡಿಎ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಪಾಸ್ ಮಾಡಿದ್ದಾರೆ. ಡೆಹ್ರಾಡೂನ್ ನಲ್ಲಿರುವ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ಪಡೆದು 2013ರಲ್ಲಿ ಅಧಿಕಾರಿಯಾಗಿ ಗೊಗೊಯ್ ಸೇನೆಗೆ ಸೇರ್ಪಡೆಯಾಗಿದ್ದಾರೆ.

    ಏಪ್ರಿಲ್ 9ರಂದು ಕಾಶ್ಮೀರದಲ್ಲಿ ಸೈನಿಕರ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸುತ್ತಿದ್ದರು. ಈ ವೇಳೆ ಪ್ರತಿಭಟನೆಯನ್ನು ತಡೆಯುವ ಸಲುವಾಗಿ ಕಲ್ಲು ತೂರಾಟ ನಡೆಸುವವರನ್ನೇ ಭಾರತೀಯ ಸೈನಿಕರು ಜೀಪ್ ಗೆ ಬಿಗಿದು ಚಾಲನೆ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ಕುರಿತು ಸೇನೆ ತನಿಖೆಗೆ ಆದೇಶಿಸಿತ್ತು. ಯುವಕನನ್ನು ಜೀಪ್ ಗೆ ಕಟ್ಟಿ ಮೆರವಣಿಗೆ ಮಾಡಿದ್ದ ಗೊಗೊಯ್ ಅವರ ವಿರುದ್ಧ ಪೊಲೀಸರು ಎಫ್‍ಐಆರ್ ಸಹ ದಾಖಲಿಸಿದ್ದರು. ಲೀತುಲ್ ಗೊಗೊಯ್ ಅವರ ಈ ಕಾರ್ಯವನ್ನು ಮೆಚ್ಚಿ ಸೇನೆಯ ಜನರಲ್ ಬಿಪಿನ್ ರಾವತ್ ಪ್ರಶಸ್ತಿ ಪತ್ರ ಕೊಟ್ಟು ಸನ್ಮಾನಿಸಿದ್ದರು. ಮೇಜರ್ ಗೆ ಸನ್ಮಾನ ಮಾಡಿದ್ದಕ್ಕೆ ಪಾಕ್ ಮಾಧ್ಯಮಗಳು ಇದನ್ನು ಶೇಮ್‍ಫುಲ್ ಅವಾರ್ಡ್ ಎಂದು ಟೀಕೆ ಮಾಡಿತ್ತು.

  • ಮಹಿಳಾ ಬೋಗಿಯಲ್ಲೇ ರೇಪ್‍ಗೆ ಯತ್ನ: ಆರ್ ಪಿಎಫ್ ಸಿಬ್ಬಂದಿಯಿಂದ ಮಹಿಳೆಯ ರಕ್ಷಣೆ

    ಮಹಿಳಾ ಬೋಗಿಯಲ್ಲೇ ರೇಪ್‍ಗೆ ಯತ್ನ: ಆರ್ ಪಿಎಫ್ ಸಿಬ್ಬಂದಿಯಿಂದ ಮಹಿಳೆಯ ರಕ್ಷಣೆ

    ಚೆನ್ನೈ: ರೈಲಿನಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಮಹಿಳೆಯನ್ನು ರೈಲ್ವೇ ಭದ್ರತಾ ದಳ(ಆರ್ ಪಿಎಫ್) ಸಿಬ್ಬಂದಿಯೊಬ್ಬರು ರಕ್ಷಿಸಿರುವುದು ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.

    ಮಹಿಳೆಯನ್ನು ರಕ್ಷಿಸಿದವರು ಆರ್ ಪಿಎಫ್ ನ ಕಾನ್‍ಸ್ಟೇಬಲ್ ಕೆ.ಶಿವಾಜಿ ಆಗಿದ್ದು, ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನು ಸತ್ಯರಾಜ್ (26) ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ 11.45 ಗಂಟೆಗೆ ಎಂಆರ್ ಟಿಎಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.

    ರೈಲು ಪಾರ್ಕ್ ಟೌನ್‍ನಿಂದ ಚಲಿಸುತ್ತಿದ್ದಂತೆ ಮಹಿಳೆ ಕಿರುಚುತ್ತಿದ್ದ ಶಬ್ದವನ್ನು ಕೆ.ಶಿವಾಜಿ ಅವರು ಕೇಳಿಸಿಕೊಂಡಿದ್ದಾರೆ. ತಕ್ಷಣವೇ ಚಿಂತಿದ್ರೆಪ್ ನಿಲ್ದಾಣಕ್ಕೆ ರೈಲು ಬಂದು ನಿಲ್ಲುವಷ್ಟರಲ್ಲಿ ಅವರು ಮಹಿಳಾ ಬೋಗಿಗೆ ದೌಡಾಯಿಸಿದ್ದಾರೆ. ಈ ವೇಳೆ ರಕ್ತ ಸ್ರಾವವಾಗಿ ಮಹಿಳೆ ಬಿದ್ದಿದ್ದರು. ಕೂಡಲೇ ಅವರು ಮಹಿಳೆಯನ್ನು ರಕ್ಷಿಸಿದ್ದು, ಆರೋಪಿಯು ಮದ್ಯ ಸೇವನೆ ಮಾಡಿದ್ದ ಎಂದು ವರದಿಯಾಗಿದೆ.

    ಆರೋಪಿ ಸತ್ಯರಾಜ್ ಖಾಸಗಿ ಸಂಸ್ಥೆಯಲ್ಲಿ ವಾಚ್‍ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯು 25 ವರ್ಷದವರಾಗಿದ್ದು, ಮಹಿಳಾ ಮೀಸಲು ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ಅವರು ಬಡವರಾಗಿದ್ದು, ಕೆಲಸದಿಂದ ಮನೆಗೆ ಮರಳುತ್ತಿರುವ ವೇಳೆ ಈ ಘಟನೆ ನಡೆದಿದೆ.

    ನಾನು ಮಹಿಳೆಯರ ಮೀಸಲು ಬೋಗಿಯಲ್ಲಿ ಕುಳಿತ್ತಿದ್ದೆ. ಸ್ವಲ್ಪ ನಿದ್ರೆಗೆ ಜಾರಿದ್ದೆ. ನನ್ನ ಮುಂದೆ ವ್ಯಕ್ತಿ ಬಂದು ನಿಂತ. ತಕ್ಷಣವೇ ನಾನು ಕಿರಿಚಿದೆ. ಆತ ನನ್ನನ್ನು ಎಳೆದು ಕೆಳಗೆ ದೂಡಿದ. ಆಗ ನಾನು ಪ್ರಜ್ಞೆ ತಪ್ಪಿಬಿದ್ದೆ ಎಂದು ಮಹಿಳೆ ತಿಳಿಸಿದ್ದಾರೆ.

    ಹಲ್ಲೆಗೆ ಒಳಗಾದ ಮಹಿಳೆಯಿಂದ ದೂರು ದಾಖಲಿಸಿಕೊಂಡಿದ್ದು, ಆರೋಪಿಯ ಬಂಧಿಸಲಾಗಿದೆ. ಮಹಿಳೆಯು ಕಿರುಚಿದ್ದರಿಂದ ಆರೋಪಿಯನ್ನು ಬಂಧಿಸಲು ಸಹಾಯವಾಗಿದೆ ಎಂದು ರೈಲ್ವೆ ಪೊಲೀಸ್ ಜನರಲ್ ಇನ್ಸ್‍ಪೆಕ್ಟರ್ ಪೊನ್ ಮನಿಕಾವೆಲ್ ಹೇಳಿದ್ದಾರೆ. ಅಲ್ಲದೇ ಅವರು ಪೊಲೀಸ್ ಕಾನ್ಸ್‍ಸ್ಟೇಬಲ್ ಕೆ.ಶಿವಾಜಿ ಅವರ ಸಾಹಸ ಹಾಗೂ ಜಾಗೃತಿಯನ್ನು ಮೆಚ್ಚಿ 5 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ.

  • 4.93 ಕೋಟಿ ರೂ. ಮೌಲ್ಯದ ಹಳೆಯ ನೋಟುಗಳು ಪತ್ತೆ!

    4.93 ಕೋಟಿ ರೂ. ಮೌಲ್ಯದ ಹಳೆಯ ನೋಟುಗಳು ಪತ್ತೆ!

    (ಸಾಂದರ್ಭಿಕ ಚಿತ್ರ)

    ಮುಂಬೈ: ನಗರದ ಹೋಟೆಲ್‍ವೊಂದರಲ್ಲಿ ಮೂರು ಜನ ಆರೋಪಿಗಳನ್ನು ಬಂಧಿಸಿ ನಿಷೇಧಿತ 4.93 ಕೋಟಿ ರೂ. ಮೌಲ್ಯದ ಹಳೆಯ ನೋಟುಗಳನ್ನು ಮುಂಬೈ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಬಂಧಿತ ಆರೋಪಿಗಳನ್ನು ಹೈದರಾಬಾದ್ ಮೂಲದವರು ಎಂದು ಗುರುತಿಸಲಾಗಿದ್ದು, ಮುಂಬೈನಲ್ಲಿ ವ್ಯಕ್ತಿಯೊಬ್ಬರಿಗೆ ಈ ಹಣವನ್ನು ನೀಡಲು ಬಂದಿದ್ದರು ಎನ್ನಲಾಗುತ್ತಿದೆ.

    ರದ್ದಾದ ನೋಟುಗಳ ಮಾಹಿತಿ ಪೊಲೀಸರು ಪಡೆದ ಮಹಾರಾಷ್ಟ್ರ ಇಂಡಸ್ಟ್ರಿಯಲ್ ಡೆವೆಲಪ್‍ಮೆಂಟ್ ಕಾರ್ಪೋರೆಷನ್ (ಎಂಐಡಿಸಿ) ಪ್ರದೇಶದಲ್ಲಿನ ಹೋಟೆಲ್‍ಗೆ ಭೇಟಿ ನೀಡಿದ್ದಾರೆ. ಆರೋಪಿಗಳು ಉಳಿದುಕೊಂಡಿದ್ದ ರೂಮ್ ಬಾಗಿಲನ್ನು ಬಾರಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ತಮ್ಮ ಬ್ಯಾಗ್‍ಗಳಿಗೆ ಹಣ ತುಂಬಿಕೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಪೊಲೀಸರಿಗೆ ಕೈಗೆ ಸಿಕ್ಕಿಬಿದ್ದಿದ್ದಾರೆ. ರೂಮ್‍ನಲ್ಲಿ 500 ರೂ. ಹಾಗೂ 1000 ರೂ. ಮೌಲ್ಯದ ರದ್ದಾದ ನೋಟುಗಳು ದೊರೆತಿದ್ದು, ನವೆಂಬರ್ ನಿಂದಲೂ ಆರೋಪಿಗಳು ನೋಟುಗಳನ್ನು ಚಲಾವಣೆ ಮಾಡುತ್ತಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.

    ನಗರದಲ್ಲಿ ವ್ಯಕ್ತಿಯೊಬ್ಬರಿಗೆ ಈ ಹಣವನ್ನು ನೀಡಲು ಬಂದಿದ್ದು, ಪ್ರಕರಣದಲ್ಲಿ ಹಲವರು ಭಾಗಿಯಾಗಿರುವ ಶಂಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಪೊಲೀಸ್ ಕಸ್ಟಡಿಗೆ ನೀಡಿದೆ.

  • ಪಾಕ್‍ನಲ್ಲಿ ಅಡುಗೆ ಕೆಲಸ ಮಾಡಿ ಭಾರತದ ರಹಸ್ಯವನ್ನು ಐಎಸ್‍ಐಗೆ ತಿಳಿಸಿದ!

    ಪಾಕ್‍ನಲ್ಲಿ ಅಡುಗೆ ಕೆಲಸ ಮಾಡಿ ಭಾರತದ ರಹಸ್ಯವನ್ನು ಐಎಸ್‍ಐಗೆ ತಿಳಿಸಿದ!

    ಡೆಹ್ರಾಡೂನ್: ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಉತ್ತರಪ್ರದೇಶದ ಭಯೋತ್ಪಾದನ ನಿಗ್ರಹ ದಳ(ಎಟಿಎಸ್) ಬಂಧಿಸಿದೆ.

    ಆರೋಪಿಯನ್ನು ಉತ್ತರಾಖಂಡದ ಪಿತ್ತೋರ್‍ಗಢ ಜಿಲ್ಲೆಯ ಕಿರೊಲಾ ಗ್ರಾಮದ ರಮೇಶ್ ಸಿಂಗ್ ಕನ್ಯಾಲ್ (43) ಎಂದು ಗುರುತಿಸಲಾಗಿದೆ. ಅವನು ಪಾಕಿಸ್ತಾನದ ಇಂಟರ್ ಸರ್ವೀಸ್ ಇಂಟೆಲಿಜೆನ್ಸ್‍ಗೆ (ಐಎಸ್‍ಐ)ಗೆ ರಾಷ್ಟ್ರೀಯ ಭದ್ರತಾ ಮಾಹಿತಿಯನ್ನು ನೀಡುತ್ತಿದ್ದ ಎಂದು ವರದಿಯಾಗಿದೆ.

    ಉತ್ತರ ಪ್ರದೇಶದ ಎಟಿಎಸ್‍ನ ಐದು ಜನರ ತಂಡವು ಆರೋಪಿಯನ್ನು ಆತನ ಮನೆಗೆ ತೆರಳಿ ಬಂಧಿಸಿದೆ. ಆತನನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಕೋರ್ಟ್ ಹೆಚ್ಚಿನ ವಿಚಾರಣೆಗೆ ಎಟಿಎಸ್ ಕಸ್ಟಡಿಗೆ ನೀಡಿದೆ.

    ಬೇಹುಗಾರಿಕೆ ನಡೆಸುತ್ತಿದ್ದ ಅನುಮಾನದ ಮೇಲೆ ಆತನನ್ನು ಬಂಧಿಸಲಾಗಿದೆ ಎಂದು ಎಟಿಎಸ್‍ನ ಜನರಲ್ ಇನ್ಸ್ ಪೆಕ್ಟರ್ ಆಸೀಂ ಅರುಣ್ ತಿಳಿಸಿದ್ದಾರೆ. ಈ ಹಿಂದೆ ಪಾಕಿಸ್ತಾನದಲ್ಲಿ ಕೆಲಸ ಮಾಡುತ್ತಿದ್ದ ಭಾರತದ ರಾಯಭಾರಿಯ ನಿವಾಸದಲ್ಲಿ ಅಡುಗೆ ಕೆಲಸಕ್ಕಾಗಿ ಆರೋಪಿಯನ್ನು ನಿಯೋಜಿಸಲಾಗಿತ್ತು. 2015 ರಿಂದ 2017ರ ವರೆಗೆ ಅಲ್ಲಿ ಕೆಲಸ ಮಾಡುತ್ತಿದ್ದಾಗ ಐಎಸ್‍ಐ ಈತನನ್ನು ಸಂಪರ್ಕಿಸಿ ಹಣದ ಆಸೆ ತೋರಿಸಿದೆ. ಈ ಆಸೆಗೆ ಬಲಿಯಾದ ಈತ ಭಾರತದ ಭದ್ರತೆಗೆ ಸಂಬಂಧಿಸಿದ ಮಾಹಿತಿಯನ್ನು ಐಎಸ್‍ಐಗೆ ನೀಡುತ್ತಿದ್ದಾನೆ ಎನ್ನುವ ಖಚಿತ ಮಾಹಿತಿ ಪಿತ್ತೋರ್‍ಗಢ ಜಿಲ್ಲಾ ಪೊಲೀಸರಿಗೆ ಸಿಕ್ಕಿತ್ತು.

    ಸೇನೆಯ ಗುಪ್ತಚರ ಇಲಾಖೆ ಈತನ ಚಟುವಟಿಕೆಯ ಮೇಲೆ ಕಣ್ಣಿಟ್ಟ ಬಳಿಕ ಎಟಿಎಸ್‍ಗೆ ತಿಳಿಸಿತ್ತು. ಈಗ ಎಟಿಎಸ್ ರಮೇಶ್ ಸಿಂಗ್ ಕನ್ಯಾಲ್ ಬಳಿಯಿದ್ದ ಪಾಕಿಸ್ತಾನದ ಸಿಮ್ ಕಾರ್ಡ್ ಹಾಗೂ ಮೊಬೈಲ್‍ನ್ನು ವಶಪಡಿಸಿಕೊಂಡಿದೆ.

    ಆರೋಪಿ ಸಹೋದರ ಕೂಡ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಕನ್ಯಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪಿಂಚಣಿ ಹಣಕ್ಕಾಗಿ ತಾಯಿಯ ಮೃತ ದೇಹವನ್ನು ಐದು ತಿಂಗಳು ಬಚ್ಚಿಟ್ಟರು!

    ಪಿಂಚಣಿ ಹಣಕ್ಕಾಗಿ ತಾಯಿಯ ಮೃತ ದೇಹವನ್ನು ಐದು ತಿಂಗಳು ಬಚ್ಚಿಟ್ಟರು!

    ಲಕ್ನೋ: ತಂದೆಯ ಪಿಂಚಣಿ ಹಣಕ್ಕಾಗಿ ತಾಯಿಯ ಮೃತ ದೇಹವನ್ನು ಮಕ್ಕಳೇ ಐದು ತಿಂಗಳ ಕಾಲ ಬಚ್ಚಿಟ್ಟಿದ್ದ ಅಮಾನವೀಯ ಕೃತ್ಯವೊಂದು ಉತ್ತರಪ್ರದೇಶದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ವಾರಣಾಸಿಯ ಕಬೀರ್ ನಗರದ ಅಮರಾವತಿ ದೇವಿ (70) ಮೃತಪಟ್ಟಿದ್ದರು. ತಾಯಿಯೇ ಮೃತಪಟ್ಟರೂ ನಾಲ್ವರು ಪುತ್ರರು ಹಾಗೂ ಅವರ ಪತ್ನಿಯರು ಪಿಂಚಣಿ ಹಣ ಪಡೆಯುವುದಕ್ಕಾಗಿ ಈ ಕೃತ್ಯ ಎಸಗಿದ್ದಾರೆ.

    ವ್ಯಕ್ತಿಯೊಬ್ಬರು 100 ನಂಬರ್ ಗೆ ಕರೆ ಮಾಡಿ, ಅಮರಾವತಿ ದೇವಿ ಅವರು ಇದೇ ವರ್ಷ ಜನವರಿ 12ರಂದು ಸಾವನ್ನಪ್ಪಿದ್ದಾರೆ. ಆದರೆ, ಮನೆಯವರು ನೆರೆಹೊರೆಯವರಿಗೆ ಅನುಮಾನ ಬಾರದಂತೆ ಮೃತ ದೇಹವನ್ನು ಬಚ್ಚಿಟ್ಟಿದ್ದಾರೆ ಎನ್ನುವ ಮಾಹಿತಿ ನೀಡಿದ್ದರು. ನಂತರ ತನಿಖೆ ಕೈಗೊಂಡಿದ್ದರಿಂದ ಪ್ರಕರಣದ ಬೆಳಕಿಗೆ ಬಂದಿದೆ ಎಂದು ಭುಲ್ಪುರ್ ಸಂಚಾರ ಪೊಲೀಸ್ ಅಧಿಕಾರಿ ಎ.ಪಿ.ಸಿಂಗ್ ತಿಳಿಸಿದ್ದಾರೆ.

    ಮೃತರ ಪತಿ ಕಸ್ಟಮ್ಸ್ ಇಲಾಖೆಯಲ್ಲಿ ಸೂಪರಿಂಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದರಿಂದ ಅಮರಾವತಿ ಅವರಿಗೆ ಪ್ರತಿ ತಿಂಗಳು 13,000 ಪಿಂಚಣಿ ಬರುತ್ತಿತ್ತು. ಇದನ್ನು ಪಡೆಯಲು ಅವರ ನಾಲ್ಕು ಜನ ಪುತ್ರರು ಮೃತ ದೇಹವನ್ನು ಇಟ್ಟುಕೊಂಡು, ಐದು ಖಾಲಿ ಚೆಕ್‍ಗಳಿಗೆ ಸಹಿ ಮಾಡಿಸಿಕೊಂಡಿದ್ದರು ಎನ್ನುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.

    ನಡೆದಿದ್ದು ಏನು:
    ಅಮರಾವತಿಯವರಿಗೆ ಐದು ಜನ ಪುತ್ರರು, ಓರ್ವ ಪುತ್ರಿ ಇದ್ದು, ನಾಲ್ವರು ಪುತ್ರರ ಜೊತೆ ವಾಸವಾಗಿದ್ದರು. ಕೊನೆಯ ಮಗ ಜ್ಯೋತಿ ಪ್ರಕಾಶ್ ಪ್ರತ್ಯೇಕ ಮನೆ ಮಾಡಿಕೊಂಡು ಸಂಸಾರ ನಡೆಸುತ್ತಿದ್ದಾರೆ.

    ಈ ವರ್ಷ ಜನವರಿಯಲ್ಲಿ ಅಮರಾವತಿ ಅವರು ಅನಾರೋಗ್ಯ ಒಳಗಾಗಿದ್ದರು. ಹೀಗಾಗಿ ಅವರನ್ನು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಸುಂದರ್ಲಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಆಸ್ಪತ್ರೆಯಲ್ಲಿ ಅಮರಾವತಿ ಅವರ ಆರೋಗ್ಯ ಸ್ವಲ್ಪ ಸುಧಾರಣೆ ಆಗುತ್ತಿದ್ದಂತೆ ಮಕ್ಕಳು ಮನೆಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಅವರು ಮೃತಪಟ್ಟಿದ್ದಾರೆ. ಮೃತಪಡುವ ಮೊದಲೇ 5 ಖಾಲಿ ಚೆಕ್‍ಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ. ದೇಹ ಕೊಳೆಯದಂತೆ ರಾಸಾಯನಿಕವನ್ನು ಸಿಂಪಡಿಸಿದ್ದಾರೆ. ಅಲ್ಲದೇ ನೆರೆಹೊರೆಯವರಿಗೆ ವಾಸನೆ ಬಾರದಂತೆ ಮನೆಯಲ್ಲಿ ಲೋಬಾನ ಹಾಕುತ್ತಿದ್ದರು. ಆರೋಪಿಗಳಿಗೆ ಅವರ ಪತ್ನಿಯರು ಸಾಥ್ ನೀಡಿದ್ದರು ಎಂದು ತನಿಖೆಯ ವೇಳೆ ತಿಳಿದುಬಂದಿದೆ.

    ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿಗಾಗಿ ನಾವು ಕಾಯುತ್ತಿದ್ದೇವೆ. ವರದಿ ಬಂದ ಮೇಲೆ ನಿಗದಿತ ಐಪಿಸಿ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    https://youtu.be/jGIGG6iAd0Y