Tag: Cricket World Cup

  • World Cup: ಈ ದಾಖಲೆ ಬರೆದ ಭಾರತದ ಮೊದಲ ಕ್ಯಾಪ್ಟನ್‌ ರೋಹಿತ್‌ ಶರ್ಮಾ

    World Cup: ಈ ದಾಖಲೆ ಬರೆದ ಭಾರತದ ಮೊದಲ ಕ್ಯಾಪ್ಟನ್‌ ರೋಹಿತ್‌ ಶರ್ಮಾ

    ನವದೆಹಲಿ: ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) 2023 ರ ಕ್ರಿಕೆಟ್ ವಿಶ್ವಕಪ್‌ನಲ್ಲಿ (World Cup) ಮತ್ತೊಂದು ದಾಖಲೆ ಬರೆದಿದ್ದಾರೆ. ಒಂದೇ ವಿಶ್ವಕಪ್ ಆವೃತ್ತಿಯಲ್ಲಿ 500 ಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಭಾರತೀಯ ನಾಯಕನಾಗಿ ಹೊರಹೊಮ್ಮಿದ್ದಾರೆ.

    ಟೂರ್ನಿಯ ಲೀಗ್ ಹಂತದಲ್ಲಿ ಆಡಿದ ಒಂಬತ್ತು ಪಂದ್ಯಗಳಲ್ಲಿ ಬಲಗೈ ಬ್ಯಾಟರ್ 55.89 ಸರಾಸರಿಯಲ್ಲಿ 503 ರನ್ ಗಳಿಸಿದ್ದಾರೆ. ಈ ಟೂರ್ನಿಯಲ್ಲಿ ಇದುವರೆಗೆ ಒಂದು ಶತಕ ಮತ್ತು ಮೂರು ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಇದನ್ನೂ ಓದಿ: Six In Six – ಒಂದೇ ಓವರ್‌ನಲ್ಲಿ 6 ವಿಕೆಟ್‌ ಕಿತ್ತು ಇತಿಹಾಸ ಸೃಷ್ಟಿಸಿದ ಆಸೀಸ್‌ ಕ್ರಿಕೆಟಿಗ

    36 ವರ್ಷ ವಯಸ್ಸಿನ ರೋಹಿತ್‌ ಶರ್ಮಾ ಒಂದೇ ವಿಶ್ವಕಪ್ ಆವೃತ್ತಿಯಲ್ಲಿ 500 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಭಾರತೀಯ ನಾಯಕನಾಗಿ ದಾಖಲೆ ಮಾಡಿದ್ದಾರೆ. ಆ ಮೂಲಕ ಸೌರವ್ ಗಂಗೂಲಿ ಅವರನ್ನು ಹಿಂದಿಕ್ಕಿ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಹೆಚ್ಚು ರನ್ ಗಳಿಸಿದ ಭಾರತೀಯ ನಾಯಕನಾಗಿ ರೆಕಾರ್ಡ್‌ ಮಾಡಿದ್ದಾರೆ. ಗಂಗೂಲಿ ಭಾರತ ತಂಡದ ನಾಯಕನಾಗಿದ್ದ ಸಂದರ್ಭದಲ್ಲಿ 2003 ವಿಶ್ವಕಪ್‌ನಲ್ಲಿ 465 ರನ್ ಗಳಿಸಿ ಇದುವರೆಗೆ ಅಗ್ರಸ್ಥಾನದಲ್ಲಿದ್ದರು.

    ಒಂದೇ ವಿಶ್ವಕಪ್‌ ಆವೃತ್ತಿಯಲ್ಲಿ ಅತಿಹೆಚ್ಚು ರನ್‌ ಗಳಿಸಿದ ಭಾರತದ ನಾಯಕರ ಪಟ್ಟಿಯಲ್ಲಿ ರೋಹಿತ್‌ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಗಂಗೂಲಿ ಇದ್ದಾರೆ. ಇವರ ನಂತರದ ಸ್ಥಾನದಲ್ಲಿ ವಿರಾಟ್ ಕೊಹ್ಲಿ (2019 ರಲ್ಲಿ 443 ರನ್), ಮೊಹಮ್ಮದ್ ಅಜರುದ್ದೀನ್ (1992 ರಲ್ಲಿ 332 ರನ್) ಮತ್ತು ಕಪಿಲ್ ದೇವ್ (1983 ರಲ್ಲಿ 303 ರನ್) ಇದ್ದಾರೆ. ಇದನ್ನೂ ಓದಿ: World Cup 2023: ಭಾರತಕ್ಕೆ ಗೆಲುವಿನ ʻಶ್ರೇಯಸ್ಸುʼ – ಡಚ್ಚರ ವಿರುದ್ಧ 160 ರನ್‌ಗಳ ಭರ್ಜರಿ ಜಯ..!

    ಭಾನುವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆದರ್ಲೆಂಡ್ಸ್ ವಿರುದ್ಧ 54 ಎಸೆತಗಳಲ್ಲಿ 61 ರನ್ ಗಳಿಸುವ ಮೂಲಕ ರೋಹಿತ್ ಈ ಸಾಧನೆ ಮಾಡಿದ್ದಾರೆ. ಅವರು ನಾಕ್ ಸಮಯದಲ್ಲಿ ಒಟ್ಟು ಎರಡು ಸಿಕ್ಸರ್‌ಗಳು ಮತ್ತು ಎಂಟು ಬೌಂಡರಿಗಳನ್ನು ಬಾರಿಸಿದ್ದರು.

  • 37 ವರ್ಷದ ಹಿಂದೆ ಇದೇ ದಿನ ವಿಶ್ವಕಪ್ ಗೆದ್ದಿದ್ದ ಭಾರತ- ಹೀಗಿತ್ತು ಪಂದ್ಯದ ರೋಚಕತೆ

    37 ವರ್ಷದ ಹಿಂದೆ ಇದೇ ದಿನ ವಿಶ್ವಕಪ್ ಗೆದ್ದಿದ್ದ ಭಾರತ- ಹೀಗಿತ್ತು ಪಂದ್ಯದ ರೋಚಕತೆ

    – ಕಪಿಲ್ ಪಡೆಗೆ ಹಿಂದಿನ ದಿನವೇ ಸಿಕ್ಕಿತ್ತು ಬೋನಸ್!

    ಲಂಡನ್: ಭಾರತ ಕ್ರಿಕೆಟ್ ಇತಿಹಾಸದಲ್ಲಿ ಈ ದಿನ ನೆನಪಿನಲ್ಲಿ ಉಳಿಯುವ ದಿನ. ಮೂವತ್ತೇಳು ವರ್ಷಗಳ ಹಿಂದೆ ಇದೇ ದಿನ ಟೀಂ ಇಂಡಿಯಾ ಕಪಿಲ್ ದೇವ್ ಅವರ ನಾಯಕತ್ವದಲ್ಲಿ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದಿತ್ತು.

    ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ 1983ರ ಜೂನ್ 25ರಂದು ಮೂರನೇ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ನಡೆದಿತ್ತು. ಈ ವೇಳೆ ಎರಡು ಬಾರಿ ವಿಜೇತವಾಗಿದ್ದ ವೆಸ್ಟ್ ಇಂಡೀಸ್ ತಂಡವನ್ನು ಭಾರತವು 43 ರನ್‍ಗಳಿಂದ ಸೋಲಿಸಿ ಟ್ರೋಫಿಯನ್ನು ಗೆದ್ದುಕೊಂಡಿತ್ತು.

    ಫೈನಲ್ ಪಂದ್ಯದಲ್ಲಿ ವಿಂಡೀಸ್ ಬೌಲರ್‌ಗಳ ದಾಳಿಯಲ್ಲಿ ಭಾರತವು 54.5 ಓವರ್‌ಗಳಲ್ಲಿ 183 ರನ್‍ಗಳಿಗೆ ಸರ್ವಪತನ ಕಂಡಿತ್ತು. ವಿಶೇಷವೆಂದರೆ ಭಾರತವು ಕೊನೆಯ ಏಳು ವಿಕೆಟ್‍ಗಳನ್ನು 93 ರನ್‍ಗಳಿಗೆ ಕಳೆದುಕೊಂಡರೆ, ವಿಂಡೀಸ್ ತನ್ನ ಕೊನೆಯ ಒಂಬತ್ತು ವಿಕೆಟ್‍ಗಳನ್ನು ಕೇವಲ 90 ರನ್‍ಗಳಿಗೆ ಕಳೆದುಕೊಂಡಿತ್ತು.

    ವಿಂಡೀಸ್ ತಂಡಕ್ಕೆ ಕಡಿಮೆ 183 ರನ್‍ಗಳ ಗುರಿಯನ್ನು ನೀಡಿದ್ದ ಭಾರತಕ್ಕೆ ಬೌಲರ್‌ಗಳು ಆಸರೆಯಾದರು. ಪರಿಣಾಮ ಟೀಂ ಇಂಡಿಯಾ ಬೌಲರ್‌ಗಳು ವಿಂಡೀಸ್ ತಂಡವನ್ನ ಕೇವಲ 140 ರನ್‍ಗಳಿಗೆ ಎಲ್ಲ ವಿಕೆಟ್ ಕಬಳಿಸಿದರು. ಮೊಹಿಂದರ್ ಅಮರನಾಥ್ ಮತ್ತು ಮದನ್ ಲಾಲ್ ಅವರು ತಲಾ ಮೂರು ವಿಕೆಟ್ ಪಡೆದು ಮಿಂಚಿದ್ದರು. ಅಂದಿನ ಕ್ಯಾಪ್ಟನ್ ಕಪಿಲ್ ದೇವ್ 11 ಓವರ್ ಬೌಲಿಂಗ್ ಮಾಡಿ ನಾಲ್ಕು ಮೇಡನ್ ದಾಖಲಿಸಿದ್ದರು.

    ರೋಜರ್ ಬಿನ್ನಿ:
    ಟೀಂ ಇಂಡಿಯಾ ಮಾಜಿ ಆಟಗಾರ ರೋಜರ್ ಬಿನ್ನಿ 1983ರ ಕ್ರಿಕೆಟ್ ವಿಶ್ವಕಪ್ ಗೆಲ್ಲುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಅವರು ಟೂರ್ನಿಯುದ್ದಕ್ಕೂ ಪ್ರಮುಖ ವಿಕೆಟ್ ಪಡೆದಿದ್ದರು. ಆಸ್ಟ್ರೇಲಿಯಾ ವಿರುದ್ಧ ನಾಲ್ಕು ವಿಕೆಟ್ ಸೇರಿದಂತೆ ಒಟ್ಟು 18 ವಿಕೆಟ್ ಕಬಳಿಸಿದ್ದರು. ಲಾರ್ಡ್ಸ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 10 ಓವರ್ ಬೌಲಿಂಗ್ ಮಾಡಿದ ಅವರು 23 ರನ್ ನೀಡಿದ 1 ವಿಕೆಟ್ ಪಡೆದಿದ್ದರು.

    ಮ್ಯಾನ್ ಆಫ್ ದಿ ಮ್ಯಾಚ್:
    ಬಾಲ್‍ನೊಂದಿಗೆ ಮ್ಯಾಜಿಕ್ ಮಾಡಿ ವಿಕೆಟ್ ಕಬಳಿಸಿದ ಅಮರನಾಥ್ ಅವರು ಸತತ ಎರಡನೇ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಸೆಮಿಫೈನಲ್‍ನಲ್ಲೂ ಇಂಗ್ಲೆಂಡ್ ವಿರುದ್ಧ ಪ್ರಶಸ್ತಿ ಗೆದ್ದಿದ್ದರು.

    ನಾಯಕತ್ವ ಕೈಬಿಟ್ಟ ಕ್ಲೈವ್ ಲಾಯ್ಡ್:
    ಏಕದಿನ ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿ ವೆಸ್ಟ್ ಇಂಡೀಸ್ ಹ್ಯಾಟ್ರಿಕ್ ಗೆಲುವಿಗೆ ಟೀಂ ಇಂಡಿಯಾ ಬ್ರೇಕ್ ಹಾಕಿತ್ತು. ಇದರಿಂದಾಗಿ ಆಘಾತಕ್ಕೆ ಒಳಗಾದ ಕೆಲವೇ ಕ್ಷಣಗಳಲ್ಲಿ ಅಂದಿನ ವಿಂಡೀಸ್ ತಂಡ ಕ್ಯಾಪ್ಟನ್ ಕ್ಲೈವ್ ಲಾಯ್ಡ್ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ಮತ್ತು ಹಿರಿಯ ಆಟಗಾರರು ಮರುದಿನ ಅವರ ರಾಜೀನಾಮೆಯನ್ನು ಹಿಂಪಡೆಯಲು ಮನವೊಲಿಸಿದ್ದು ಇತಿಹಾಸ.

    ಭಾರತ ಆತಿಥೇಯ ಇಂಗ್ಲೆಂಡ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದಾಗ ಜಾಗತಿಕ ಕ್ರಿಕೆಟ್‍ನಲ್ಲಿ ಭಾರೀ ಸಂಚಲನ ಮೂಡಿತ್ತು. ಬಿಸಿಸಿಐ ಅಧಿಕಾರಿಗಳೆಲ್ಲ ಜೂನ್ 24ರಂದು ಸಂಜೆ ಸಭೆ ಸೇರಿ, ತಂಡದ ಸದಸ್ಯರಿಗೆಲ್ಲ 25 ಸಾವಿರ ರೂ. ಬೋನಸ್ ಪ್ರಕಟಿಸಿದ್ದರು.

  • ಕೊನೆ ಗಳಿಗೆಯಲ್ಲಿ ಪಂದ್ಯವನ್ನು ಗೆಲ್ಲಿಸುವ ಧೋನಿಯನ್ನು ಹೊಗಳಿದ ರವಿಶಾಸ್ತ್ರಿ

    ಕೊನೆ ಗಳಿಗೆಯಲ್ಲಿ ಪಂದ್ಯವನ್ನು ಗೆಲ್ಲಿಸುವ ಧೋನಿಯನ್ನು ಹೊಗಳಿದ ರವಿಶಾಸ್ತ್ರಿ

    ನವದೆಹಲಿ: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ವರ್ಲ್ಡ್ ಕಪ್ ಪಂದ್ಯಗಳಲ್ಲಿ ಮಹೇಂದ್ರ ಸಿಂಗ್ ಧೋನಿ ಪಾತ್ರ ಹೇಗಿರಲಿದೆ ಎಂಬುದನ್ನು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಟೀಂ ಇಂಡಿಯಾದ ಇಂದು ಸುದ್ದಿಗೋಷ್ಠಿ ನಡೆಸಿತ್ತು.

    ಎಲ್ಲ ಪಂದ್ಯಗಳಲ್ಲಿ ಧೋನಿ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸಲಿದ್ದಾರೆ. ಮಾಜಿ ನಾಯಕನಾಗಿರುವ ಧೋನಿ ಒಂದು ಬಲಿಷ್ಠ ತಂಡವನ್ನು ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಓರ್ವ ಆಟಗಾರನಾಗಿಯೂ ತಂಡಕ್ಕೆ ಧೋನಿ ನೆರವಾಗ್ತಾರೆ. ಧೋನಿ ಅವರ ರನ್ ಔಟ್, ಸ್ಟಂಪಿಂಗ್ ಒಂದು ಪಂದ್ಯವನ್ನು ಗೆಲ್ಲುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಧೋನಿಯವರ ಆಟದ ಶೈಲಿ, ತಂತ್ರ ಕೊನೆ ಗಳಿಗೆಯಲ್ಲಿಯೂ ಪಂದ್ಯವನ್ನು ಬದಲಾಯಿಸುತ್ತದೆ. ಐಪಿಎಲ್ ನಲ್ಲಿ ಧೋನಿ ಚೆನ್ನೈ ತಂಡವನ್ನು ಮುನ್ನಡೆಸಿದ ಉದಾಹರಣೆ ನಮ್ಮ ಮುಂದಿದೆ ಎಂದು ಕೋಚ್ ರವಿ ಶಾಸ್ತ್ರಿ ಹೇಳಿದರು.

    ಕೇದಾರ್ ಜಾಧವ್ ಫಿಟ್ ಆಗಿದ್ದು, ತಂಡದಲ್ಲಿ ಇರಲಿದ್ದಾರೆ. ತಂಡದ ಎಲ್ಲ ಆಟಗಾರರು ಯಾವುದೇ ಒತ್ತಡಕ್ಕೆ ಒಳಗಾಗಿಲ್ಲ. ನಾವು ನಮ್ಮ ಸಾಮರ್ಥ್ಯದಲ್ಲಿ ನಂಬಿಕೆ ಇಟ್ಟು ಆಡಿದಲ್ಲಿ ವಿಶ್ವಕಪ್‍ನ್ನು ದೇಶಕ್ಕೆ ತರಲು ಸಾಧ್ಯ ಎಂದು ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಈ ಬಾರಿಯ ವಿಶ್ವಕಪ್ ಪಂದ್ಯಾವಳಿಗಳು ತುಂಬಾ ಕಠಿಣದಾಯಕವಾಗಿರಲಿದೆ. ಯಾವುದೇ ತಂಡ ಸಹ ಮುನ್ನಡೆ ಪಡೆದುಕೊಳ್ಳಬಹುದು. ಹಾಗಾಗಿ ಪ್ರತಿಯೊಂದು ಪಂದ್ಯವನ್ನು ಅತ್ಯಂತ ಎಚ್ಚರಿಕೆಯಿಂದ ಆಡಬೇಕಿದೆ. ತಂಡ ಫ್ರೆಶ್ ಬೌಲರ್ ಗಳನ್ನು ಹೊಂದಿದ್ದು, ಎಲ್ಲರು 50 ಓವರ್ ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಐಪಿಎಲ್ ನಿಂದ ಒಳ್ಳೆಯ ತರಬೇತಿ ಮತ್ತು ಅನುಭವವನ್ನು ನಮ್ಮ ಆಟಗಾರರು ಪಡೆದಿದ್ದು ಲಾಭದಾಯಕವಾಗಿದೆ ಎಂದು ಹೇಳಿದರು.