Tag: cricket

  • ಬಾಂಗ್ಲಾ ಬಗ್ಗು ಬಡಿದು ಅಜೇಯವಾಗಿ ಫೈನಲ್‌ ಪ್ರವೇಶಿಸಿದ ಭಾರತ

    ಬಾಂಗ್ಲಾ ಬಗ್ಗು ಬಡಿದು ಅಜೇಯವಾಗಿ ಫೈನಲ್‌ ಪ್ರವೇಶಿಸಿದ ಭಾರತ

    – ಹಲವು ಕ್ಯಾಚ್‌ ಡ್ರಾಪ್‌ ಮಾಡಿದ್ದ ಟೀಂ ಇಂಡಿಯಾ

    ದುಬೈ: ಏಷ್ಯಾ ಕಪ್‌ (Asia Cup) ಸೂಪರ್‌ 4 ಪಂದ್ಯದಲ್ಲಿ ಬಾಂಗ್ಲಾದೇಶ (Bangladesh) ವಿರುದ್ಧ 41 ರನ್‌ಗಳ ಜಯ ಸಾಧಿಸಿದ ಭಾರತ (India) ಅಜೇಯವಾಗಿ ಫೈನಲ್‌ ಪ್ರವೇಶಿಸಿದೆ.

    ಗೆಲುವಿಗೆ 168 ರನ್‌ಗಳ ಗುರಿಯನ್ನು ಪಡೆದ ಬಾಂಗ್ಲಾ 19.3 ಓವರ್‌ಗಳಲ್ಲಿ 127 ರನ್‌ ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಗುರುವಾರ ಪಾಕಿಸ್ತಾನ ಮತ್ತು ಬಾಂಗ್ಲಾ ನಡುವೆ ಪಂದ್ಯ ನಡೆಯಲಿದ್ದು ಈ ಪಂದ್ಯದಲ್ಲಿ ಜಯಗಳಿಸಿದವರು ಫೈನಲ್‌ ಪ್ರವೇಶಿಸಲಿದ್ದಾರೆ.

    ಬಾಂಗ್ಲಾ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡಿತು. ಬುಮ್ರಾ ತಮ್ಮ ಮೊದಲ ಓವರಿನ ಎರಡನೇ ಎಸೆತದಲ್ಲಿ ತಾಂಜಿದ್ ಹಸನ್ ಅವರನ್ನು ಔಟ್‌ ಮಾಡಿದರು.

    ಪರ್ವೇಜ್ ಹೊಸೇನ್ ಎಮನ್ 21 ರನ್‌ ಗಳಿಸಿ ಔಟಾದರು. ಒಂದು ಕಡೆ ವಿಕೆಟ್‌ ಪತನಗೊಳ್ಳುತ್ತಿದ್ದರೂ ಆರಂಭಿಕ ಆಟಗಾರ ಸೈಫ್‌ ಹಸನ್‌ ಮುನ್ನುಗ್ಗಿ ಹೊಡೆಯುತ್ತಿದ್ದರು. ಅಕ್ಷರ್‌ ಪಟೇಲ್‌, ಶಿವಂ ದುಬೆ ಮತ್ತು ಕೀಪರ್‌ ಸಂಜು ಸ್ಯಾಮ್ಸನ್‌, ಅಭಿಷೇಕ್‌ ಶರ್ಮಾ ಕ್ಯಾಚ್‌ ಡ್ರಾಪ್‌ ಮಾಡಿದರು. ಕೊನೆಗೆ 69 ರನ್‌(61 ಎಸೆತ, 3 ಬೌಂಡರಿ, 5 ಸಿಕ್ಸ್‌) ಬುಮ್ರಾ ಬೌಲಿಂಗ್‌ನಲ್ಲಿ ಸಿಕ್ಸ್‌ ಸಿಡಿಸಲು ಹೋದರು. ಆದರೆ ಬೌಂಡರಿ ಗೆರೆಯ ಬಳಿ ಅಕ್ಷರ್‌ ಪಟೇಲ್‌ ಉತ್ತಮ ಕ್ಯಾಚ್‌ ಹಿಡಿದಿದ್ದರಿಂದ ಔಟಾದರು.

    ಬಾಂಗ್ಲಾ ಉಳಿದ ಆಟಗಾರರಿಂದ ಉತ್ತಮ ಪ್ರತಿರೋಧ ವ್ಯಕ್ತವಾಗದ ಕಾರಣ ಪಂದ್ಯವನ್ನು ಸೋತಿತು. ಈ ಪಂದ್ಯದಲ್ಲಿ ಭಾರತ ಫೀಲ್ಡಿಂಗ್‌ ಕಳಪೆಯಾಗಿತ್ತು. ಹಲವು ಕ್ಯಾಚ್‌ಗಳನ್ನು ಆಟಗಾರರು ಕೈ ಚೆಲ್ಲಿದ್ದರು.

    ಕುಲದೀಪ್‌ ಯಾದವ್‌ 3 ವಿಕೆಟ್‌ಪಡೆದರೆ ಬುಮ್ರಾ, ವರುಣ್‌ ಚಕ್ರವರ್ತಿ ತಲಾ 2 ವಿಕೆಟ್‌, ಅಕ್ಷರ್‌ ಪಟೇಲ್‌ ಮತ್ತು ತಿಲಕ್‌ ವರ್ಮಾ ತಲಾ 1 ವಿಕೆಟ್‌ ಪಡೆದರು.

    ಶರ್ಮಾ ಸ್ಫೋಟಕ ಫಿಫ್ಟಿ:
    ಇದಕ್ಕೂ ಮೊದಲು ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ಅಭಿಷೇಕ್‌ ಶರ್ಮಾ (Abhishek Sharma) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 168 ರನ್‌ ಗಳಿಸಿತ್ತು. ಭಾರತದ ಆರಂಭ ಉತ್ತಮವಾಗಿತ್ತು. ನಾಯಕ ಗಿಲ್‌ ಮತ್ತು ಅಭಿಷೇಕ್‌ ಶರ್ಮಾ 38 ಎಸೆತಗಳಲ್ಲಿ 77 ರನ್‌ ಜೊತೆಯಾಟವಾಡಿದರು. ಗಿಲ್‌ 29 ರನ್‌(19 ಎಸೆತ, 2 ಬೌಂಡರಿ, 1 ಸಿಕ್ಸ್‌) ಸಿಡಿಸಿ ಔಟಾದರು.

    ಗಿಲ್‌ ಔಟಾದ ಬೆನ್ನಲ್ಲೇ ಶಿವಂ ದುಬೆ 2 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಎರಡು ವಿಕೆಟ್‌ ಪತನಗೊಂಡರೂ ಮತ್ತೊಂದು ಕಡೆ ಅಭಿಷೇಕ್‌ ಶರ್ಮಾ ಸ್ಫೋಟಕ ಬ್ಯಾಟ್‌ ಬೀಸಿದರು. ಸಿಕ್ಸರ್‌ ಬೌಂಡರಿ ಸಿಡಿಸಿದ ಅಭಿಷೇಕ್‌ ಶರ್ಮಾ 75 ರನ್‌( 37 ಎಸೆತ, 6 ಬೌಂಡರಿ, 5 ಸಿಕ್ಸರ್‌) ರನೌಟ್‌ ಆದರು.


    ಅಭಿಷೇಕ್‌ ಶರ್ಮಾ ಔಟಾದ ಬೆನ್ನಲ್ಲೇ ಸೂರ್ಯಕುಮಾರ್‌ ಯಾದವ್‌ 5ರನ್‌, ತಿಲಕ್‌ ವರ್ಮಾ 5 ರನ್‌ ಗಳಿಸಿದರು. ಕೊನೆಯಲ್ಲಿ ಹಾರ್ದಿಕ್‌ ಪಾಂಡ್ಯ ಮತ್ತು ಅಕ್ಷರ್‌ ಪಟೇಲ್‌ 34 ಎಸೆತಗಳಲ್ಲಿ 39 ರನ್‌ ಹೊಡೆದರು. ಪಾಂಡ್ಯ 38 ರನ್‌(29 ಎಸೆತ, 4 ಬೌಂಡರಿ, 1 ಸಿಕ್ಸ್‌) ಹೊಡೆದು ಔಟಾದರೆ ಅಕ್ಷರ್‌ ಪಟೇಲ್‌ ಔಟಾಗದೇ 10 ರನ್‌ ಹೊಡೆದರು.

  • ಎಲ್ಲಾ ಬೇಡಿಕೆಗಳು ವಿಫಲ – ಇದ್ದ ಅಲ್ಪಸ್ವಲ್ಪ ಮಾನವನ್ನೂ ಕಳೆದುಕೊಂಡ ಪಾಕ್, ಹೈಡ್ರಾಮಾ ನಂತ್ರ ಪಂದ್ಯ ಶುರು

    ಎಲ್ಲಾ ಬೇಡಿಕೆಗಳು ವಿಫಲ – ಇದ್ದ ಅಲ್ಪಸ್ವಲ್ಪ ಮಾನವನ್ನೂ ಕಳೆದುಕೊಂಡ ಪಾಕ್, ಹೈಡ್ರಾಮಾ ನಂತ್ರ ಪಂದ್ಯ ಶುರು

    ಭಾರತೀಯ ಆಟಗಾರರು ಹ್ಯಾಂಡ್ ಶೇಕ್ ಮಾಡದ ವಿವಾದದಿಂದ ಪಾಕ್ (Pakistan) ಇದ್ದ ಅಲ್ಪಸ್ವಲ್ಪ ಮಾನವನ್ನೂ ಈಗ ಕಳೆದುಕೊಂಡಿದೆ. ಇಂದು ಏಷ್ಯಾಕಪ್ (Asia Cup 2025) ಟೂರ್ನಿಯ ಗುಂಪು ಹಂತದಲ್ಲಿ ಯುಎಇ (UAE) ವಿರುದ್ಧ ನಿಗದಿಯಾಗಿದ್ದ ಕೊನೆಯ ಪಂದ್ಯ ಆಡುವುದಿಲ್ಲ ಎಂದು ಮೊಂಡುತನ ಮಾಡಿತ್ತು. ಜೊತೆಗೆ ಪಾಕ್ ಆಟಗಾರರನ್ನು ಕ್ರೀಡಾಂಗಣಕ್ಕೆ ಬಿಡದೇ ಹೋಟೆಲ್‌ನಲ್ಲೇ ಇರಿಸಿತ್ತು. ಆದರೆ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಪಿಸಿಬಿ ಏಷ್ಯಾಕಪ್ ಕೊನೆಯ ಪಂದ್ಯವನ್ನ ಆಡಲು ನಿರ್ಧರಿಸಿದೆ.

    ಸೂಪರ್ ಫೋರ್ ಪಂದ್ಯಕ್ಕೂ ಮುನ್ನ, ಪಾಕಿಸ್ತಾನ ಏಷ್ಯಾ ಕಪ್ 2025 ಅನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕುತ್ತಲೇ ಇತ್ತು. ಪಿಸಿಬಿ ಪಾಕಿಸ್ತಾನ ತಂಡವನ್ನು ತಮ್ಮ ಹೋಟೆಲ್‌ನಲ್ಲಿಯೇ ಇರಲು ಆದೇಶಿಸಿ ಟಾಸ್ ವಿಳಂಬ ಮಾಡಿತು. ಭಾರೀ ಹೈಡ್ರಾಮಾ ಬಳಿಕ ಈ ಬಗ್ಗೆ ಪಾಕಿಸ್ತಾನ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ಹಿನ್ನೆಲೆ 7 ಗಂಟೆಯ ವೇಳೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ನಿರ್ಧಾರ ಬದಲಾಯಿಸಿತು. ಟಾಸ್ ಅನಗತ್ಯವಾಗಿ ಅರ್ಧ ಗಂಟೆ ವಿಳಂಬಗೊಂಡಿತು.

    ಪೈಕ್ರಾಫ್ಟ್ ಕ್ಷಮೆಯಾಚನೆಗೆ ಬೇಡಿಕೆ
    ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಂದ್ಯಕ್ಕೂ ಮುನ್ನ ಪೈಕ್ರಾಫ್ಟ್ ಅವರನ್ನು ಸಮಿತಿಯಿಂದ ತೆಗೆದುಹಾಕುವಂತೆ ಒತ್ತಾಯಿಸಿತ್ತು. ಬಳಿಕ ಕ್ಷಮೆಯಾಚಿಸುವಂತೆ ಪಟ್ಟುಹಿಡಿದಿತ್ತು. ಯುಎಇ ವಿರುದ್ಧದ ಪಂದ್ಯಕ್ಕೂ ಮುನ್ನ ಪಿಸಿಬಿ ಸಭೆ ನಡೆಸಿ, ಉದ್ದೇಶಪೂರ್ವಕವಾಗಿ ಪಂದ್ಯವನ್ನು ವಿಳಂಬಗೊಳಿಸಿತು. ಇದರ ನಂತರ, ಅಂತಿಮವಾಗಿ ಆಡಲು ನಿರ್ಧರಿಸಿತು.

    ಒಂದು ಗಂಟೆ ಪಂದ್ಯ ವಿಳಂಬ:
    ಪಾಕಿಸ್ತಾನ ಮತ್ತು ಯುಎಇ ನಡುವಿನ ಪಂದ್ಯದ ಟಾಸ್ ಸಂಜೆ 7:30ಕ್ಕೆ ನಡೆಯಬೇಕಿತ್ತು, ಪಂದ್ಯವು ರಾತ್ರಿ 8 ಗಂಟೆಗೆ ಪ್ರಾರಂಭವಾಗಬೇಕಿತ್ತು. ಆದರೆ, ಪಂದ್ಯವು ಒಂದು ಗಂಟೆ ವಿಳಂಬವಾಗಿದೆ. ಈ ಪಂದ್ಯವು ಪಾಕಿಸ್ತಾನಕ್ಕೆ ಮಾಡು-ಇಲ್ಲ-ಮಡಿ ಪರಿಸ್ಥಿತಿಯಾಗಿದ್ದು, ಪಾಕಿಸ್ತಾನ ಸೋತರೆ, ಸೂಪರ್ ಫೋರ್‌ನಿಂದ ಹೊರಗುಳಿಯುತ್ತಾರೆ.

  • 579 ಕೋಟಿ ಜೆರ್ಸಿ ಪ್ರಾಯೋಜಕತ್ವ – ಪ್ರತಿ ಪಂದ್ಯಕ್ಕೆ ಬಿಸಿಸಿಐಗೆ ಸಿಗಲಿದೆ ಕೋಟಿ ಕೋಟಿ ರೂ.

    579 ಕೋಟಿ ಜೆರ್ಸಿ ಪ್ರಾಯೋಜಕತ್ವ – ಪ್ರತಿ ಪಂದ್ಯಕ್ಕೆ ಬಿಸಿಸಿಐಗೆ ಸಿಗಲಿದೆ ಕೋಟಿ ಕೋಟಿ ರೂ.

    ಮುಂಬೈ: ಭಾರತೀಯ ಕ್ರಿಕೆಟ್ (Team India) ತಂಡದ ಜೆರ್ಸಿ ಪ್ರಾಯೋಜಕತ್ವದ ಬಿಡ್‌ ಅನ್ನು ಅಪೊಲೊ ಟಯರ್ಸ್‌ (Apollo Tyres) ಗೆದ್ದುಕೊಂಡಿದೆ.

    ಮುಂದಿನ ಮೂರು ವರ್ಷಗಳ (2025–2028) ಪ್ರಾಯೋಜಕತ್ವಕ್ಕಾಗಿ ಗುರುಗ್ರಾಮ ಮೂಲದ ಅಪೊಲೊ ಟಯರ್ಸ್‌ ಬಿಸಿಸಿಐಗೆ (BCCI) 579 ಕೋಟಿ ರೂ. ನೀಡಲಿದೆ. ಈ ಜೆರ್ಸಿ ಒಪ್ಪಂದ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ಪ್ರಾಯೋಜಕತ್ವ ಒಪ್ಪಂದವಾಗಿ ಹೊರಹೊಮ್ಮಿದೆ.

    ಈ ಅವಧಿಯಲ್ಲಿ ಟೀಂ ಇಂಡಿಯಾ 121 ದ್ವಿಪಕ್ಷೀಯ ಪಂದ್ಯಗಳು ಮತ್ತು 21 ಐಸಿಸಿ ಆಯೋಜಸುವ ಟೂರ್ನಿ ಆಡಲಿದೆ.

    ಯಾರೆಲ್ಲ ಭಾಗವಹಿಸಿದ್ದರು?
    ಬಿರ್ಲಾ ಆಪ್ಟಸ್ ಪೇಂಟ್ಸ್ ಬಿಡ್‌ನಲ್ಲಿ ಭಾಗವಹಿಸುವ ಆಸಕ್ತಿ ವ್ಯಕ್ತಪಡಿಸಿತ್ತು. ಆದರೆ ಅಂತಿಮ ಬಿಡ್‌ ವೇಳೆ ಹೊರಗೆ ಉಳಿದಿತ್ತು. ಅಂತಿಮ ಸುತ್ತಿನಲ್ಲಿ ಆಸ್ಟ್ರೇಲಿಯಾದ ಆನ್‌ಲೈನ್ ದೃಶ್ಯ ಸಂವಹನ ವೇದಿಕೆ ಕಾನ್ವಾ 544 ಕೋಟಿ ರೂ., ಜೆಕೆ ಸಿಮೆಂಟ್ಸ್ 477 ಕೋಟಿ ರೂ. ಬಿಡ್‌ ಮಾಡಿತ್ತು.  ಇದನ್ನೂ ಓದಿ:  ಮೈದಾನದಲ್ಲೇ ಪಾಕ್‌ನ ಮಾನ ಕಳೆದ ಟೀಮ್‌ ಇಂಡಿಯಾ

     

    ಒಂದು ಪಂದ್ಯಕ್ಕೆ ಎಷ್ಟು ಕೋಟಿ?
    ಅಪೊಲೊ 579 ಕೋಟಿ ರೂ. ಬಿಡ್‌ ಮಾಡಿದ್ದರಿಂದ ಪ್ರತಿ ಪಂದ್ಯಕ್ಕೆ ಸರಾಸರಿ 4.77 ಕೋಟಿ ರೂ. ಹಣವನ್ನು ಪಾವತಿಸಿದಂತಾಗುತ್ತದೆ. ಬಿಸಿಸಿಐ ದ್ವಿಪಕ್ಷೀಯ ಪಂದ್ಯಕ್ಕೆ 3.5 ಕೋಟಿ ರೂ., ಐಸಿಸಿ ಪಂದ್ಯಕ್ಕೆ 1.5 ಕೋಟಿ ರೂ. ಮೂಲ ಬೆಲೆಯನ್ನು ನಿಗದಿ ಪಡಿಸಿತ್ತು. ಆದರೆ ಬಿಸಿಸಿಐ ನಿಗದಿ ಪಡಿಸಿದ ಮೂಲ ಬೆಲೆಗಿಂತಲೂ ಜಾಸ್ತಿ ಹಣವನ್ನು ಅಪೊಲೊ ಪಾವತಿಸಿದಂತಾಗುತ್ತದೆ.

    ಈ ಮೊದಲು Dream11 ಜೆರ್ಸಿ ಪ್ರಾಯೋಜಕತ್ವವನ್ನು ಪಡೆದುಕೊಂಡಿತ್ತು. 2023 ರಿಂದ 2026 ವರೆಗಿನ ಅವಧಿಯ ಪಂದ್ಯಗಳಿಗೆ ಡ್ರೀಮ್11‌ 358 ಕೋಟಿ ರೂ. ನೀಡಿ ಬಿಡ್‌ ಗೆದ್ದುಕೊಂಡಿತ್ತು. Dream11 ಪ್ರಾಯೋಜಕತ್ವದ ಅವಧಿಯಲ್ಲಿ ಪ್ರತಿ ಪಂದ್ಯದಿಂದ ಬಿಸಿಸಿಐಗೆ ಸರಾಸರಿ 4 ಕೋಟಿ ರೂ. ಸಿಗುತ್ತಿತ್ತು.

    ಕೇಂದ್ರ ಸರ್ಕಾರ ಆನ್‌ಲೈನ್ ಗೇಮಿಂಗ್‌ನ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆ ಜಾರಿ ಮಾಡಿದ್ದರಿಂದ ಭವಿಷ್ಯದ ತೊಡಕುಗಳನ್ನು ತಪ್ಪಿಸಲು, ಬೆಟ್ಟಿಂಗ್, ಆನ್‌ಲೈನ್ ಗೇಮಿಂಗ್, ಕ್ರಿಪ್ಟೋ ಅಥವಾ ತಂಬಾಕಿಗೆ ಸಂಬಂಧಿಸಿದ ಕಂಪನಿಗಳು ಹೊಸ ಟೆಂಡರ್‌ನಲ್ಲಿ ಭಾಗವಹಿಸುವುದಕ್ಕೆ ಬಿಸಿಸಿಐ ನಿರ್ಬಂಧ ಹೇರಿತ್ತು.

    ಅಪೊಲೊಗೆ ಏನು ಲಾಭ?
    ಅಪೊಲೊ ಟಯರ್ಸ್‌ 100 ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಟಯರ್‌ ಮಾರುಕಟ್ಟೆಯನ್ನು ಹೊಂದಿದೆ. ಈಗ ಟೀಂ ಇಂಡಿಯಾದ ಜೆರ್ಸಿ ಪ್ರಾಯೋಜಕತ್ವ ಪಡೆಯುವ ಮೂಲಕ ತನ್ನ ಬ್ರ್ಯಾಂಡ್‌ ಹೆಸರನ್ನು ಮತ್ತಷ್ಟು ದೇಶಗಳಿಗೆ ವಿಸ್ತರಿಸಬಹುದು. ಟಿ20 ವಿಶ್ವಕಪ್‌, ಚಾಂಪಿಯನ್ಸ್‌ ಟ್ರೋಫಿ, ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ಗಳನ್ನು ಜಾಗತಿಕವಾಗಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ವೀಕ್ಷಿಸುವುದರಿಂದ ಅಪೊಲೊ ಟಯರ್ಸ್‌ಗೆ ಸುಲಭವಾಗಿ ಪ್ರಚಾರ ಸಿಗಲಿದೆ. ಈ ಹಿಂದೆ ಇಂಡಿಯನ್‌ ಸೂಪರ್‌ ಲೀಗ್‌ (ISL) ಮತ್ತು ಇತರ ಜಾಗತಿಕ ಮೋಟಾರ್‌ಸ್ಪೋರ್ಟ್ಸ್ ಜೊತೆ ಅಪೊಲೊ ಟಯರ್ಸ್‌ ಪಾಲುದಾರಿಕೆಗಳಂತಹ ಕಾರ್ಯಕ್ರಮಗಳನ್ನು ಪ್ರಾಯೋಜಿಸಿತ್ತು.

    ಪ್ರಸ್ತುತ ಯುಎಇನಲ್ಲಿ ನಡೆಯುತ್ತಿರುವ ಏಷ್ಯಾಕಪ್‌ ಟೂರ್ನಿ ಮತ್ತು ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಮಹಿಳಾ ತಂಡ ಪ್ರಾಯೋಜಕರಿಲ್ಲದ ಜೆರ್ಸಿ ಧರಿಸಿ ಕಣಕ್ಕೆ ಇಳಿಯುತ್ತಿದೆ.

  • ಬೇಡಿಕೆ ಈಡೇರಿಸದೇ ಇದ್ದರೆ ಟೂರ್ನಿಯನ್ನೇ ಬಹಿಷ್ಕರಿಸುತ್ತೇವೆ: ಪಾಕ್‌ ಬೆದರಿಕೆ

    ಬೇಡಿಕೆ ಈಡೇರಿಸದೇ ಇದ್ದರೆ ಟೂರ್ನಿಯನ್ನೇ ಬಹಿಷ್ಕರಿಸುತ್ತೇವೆ: ಪಾಕ್‌ ಬೆದರಿಕೆ

    ದುಬೈ: ತನ್ನ ಬೇಡಿಕೆಯನ್ನು ಈಡೇರಿಸದೇ ಇದ್ದರೆ ಏಷ್ಯಾ ಕಪ್‌ (Asia Cup) ಕ್ರಿಕೆಟ್‌ ಟೂರ್ನಿಯನ್ನೇ ಬಹಿಷ್ಕರಿಸುವುದಾಗಿ ಪಾಕಿಸ್ತಾನ (Pakistan) ಬೆದರಿಕೆ ಹಾಕಿದೆ.

    ಭಾರತದ (Team India) ವಿರುದ್ಧದ ಪಂದ್ಯದಲ್ಲಿ ಐಸಿಸಿ(ICC) ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ  ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರನ್ನು ವಜಾಗೊಳಿಸಬೇಕೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒತ್ತಾಯಿಸಿದೆ. ಒಂದು ವೇಳೆ ಈ ಬೇಡಿಕೆಯನ್ನು ಈಡೇರಿಸದೇ ಇದ್ದರೆ ಟೂರ್ನಿಯನ್ನೇ ಬಹಿಷ್ಕರಿಸುವುದಾಗಿ ಒತ್ತಡ ಹಾಕಿದೆ.

    ಟೀಂ ಇಂಡಿಯಾ ನಾಯಕ ಸೂರ್ಯ ಕುಮಾರ್‌ ಯಾದವ್ (Surya Kumar Yadav) ಟಾಸ್‌ನಲ್ಲಿ ಪಾಕ್‌ ನಾಯಕ ಸಲ್ಮಾನ್ ಅಲಿ ಅಘಾ ಅವರ ಕೈಕುಲುಕಲಿಲ್ಲ. ಅಷ್ಟೇ ಅಲ್ಲದೇ ಪಂದ್ಯದ ಕೊನೆಯಲ್ಲೂ ಭಾರತದ ಆಟಗಾರರು ಪಾಕಿಸ್ತಾನದ ತಂಡದ ಆಟಗಾರರ ಹ್ಯಾಂಡ್‌ ಶೇಕ್‌ ಮಾಡಿರಲಿಲ್ಲ. ಇದನ್ನೂ ಓದಿ: ಕೆಲ ವಿಷಯಗಳು ಕ್ರೀಡಾ ಮನೋಭಾವಕ್ಕಿಂತಲೂ ದೊಡ್ಡದು ಕೈಕುಲುಕದ್ದಕ್ಕೆ ಸೂರ್ಯ ಸ್ಪಷ್ಟನೆ

    ಟಾಸ್ ಸಮಯದಲ್ಲಿ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ನಾಯಕ ಸಲ್ಮಾನ್ ಅಲಿ ಆಘಾ ಅವರ ಬಳಿ ಭಾರತ ತಂಡದ ನಾಯಕನ ಜೊತೆ ಕೈ ಕುಲುಕದಂತೆ ಕೇಳಿಕೊಂಡಿದ್ದರು. ಈ ನಡವಳಿಕೆ ಕ್ರೀಡಾ ಮನೋಭಾವಕ್ಕೆ ವಿರುದ್ಧವಾಗಿದೆ ಎಂದು ಪಿಸಿಬಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮೊಹ್ಸಿನ್ ನಖ್ವಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

    ಐಸಿಸಿ ನಿಯಮಗಳ ಪ್ರಕಾರ ಪಂದ್ಯ ಮುಕ್ತಾಯವಾದ ಬಳಿಕ ಎರಡೂ ತಂಡಗಳ ಆಟಗಾರರು ಪರಸ್ಪರ ಅಭಿನಂದಿಸಬೇಕು. ಆದರೆ ಈ ನಿಯಮ ಇಲ್ಲಿ ಪಾಲನೆಯಾಗದೇ ಇರುವುದು ಪಾಕ್‌ ಸಿಟ್ಟಿಗೆ ಕಾರಣವಾಗಿದೆ.

    ಸೂರ್ಯಕುಮಾರ್‌ ಯಾದವ್‌ ಸಿಕ್ಸ್‌ ಸಿಡಿಸಿದ ಭಾರತ ತಂಡಕ್ಕೆ ಜಯವನ್ನು ತಂದುಕೊಟ್ಟರು. ಜಯ ಸಿಕ್ಕಿದ ನಂತರ ಸೂರ್ಯ ಮತ್ತು ಶಿವಂ ದುಬೆ ಪಾಕ್‌ ಆಟಗಾರರ ಕೈ ಕುಲುಕದೇ ನೇರವಾಗಿ ಡ್ರೆಸ್ಸಿಂಗ್‌ ಕೊಠಡಿಗೆ ಆಗಮಿಸಿದರು. ಇಬ್ಬರು ಕೊಠಡಿ ಪ್ರವೇಶಿಸಿದ ನಂತರ ಬಾಗಿಲು ಹಾಕಲಾಯಿತು. ಭಾರತದ ಆಟಗಾರರು ಕ್ರೀಡಾಂಗಣಕ್ಕೆ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಪಾಕ್‌ ಆಟಗಾರರು ಮೈದಾನದಲ್ಲೇ ಇದ್ದರು. ಆದರೆ ಭಾರತದ ಆಟಗಾರರು ಮೈದಾನಕ್ಕೆ ಇಳಿಯದ ಕಾರಣ ಪಾಕ್‌ ಆಟಗಾರರು ಕೊನೆಗೆ ತಮ್ಮ ಡ್ರೆಸ್ಸಿಂಗ್‌ ಕೊಠಡಿಗೆ ತೆರಳಿದರು.

  • ಭಾರತ-ಪಾಕ್‌ ಪಂದ್ಯ ಬಾಯ್ಕಾಟ್‌ಗೆ ಕರೆ – ಪಾಕ್‌ ಜೆರ್ಸಿ ಇರುವ ಪ್ರತಿಕೃತಿ ದಹಿಸಿ ಎಎಪಿ ಪ್ರತಿಭಟನೆ

    ಭಾರತ-ಪಾಕ್‌ ಪಂದ್ಯ ಬಾಯ್ಕಾಟ್‌ಗೆ ಕರೆ – ಪಾಕ್‌ ಜೆರ್ಸಿ ಇರುವ ಪ್ರತಿಕೃತಿ ದಹಿಸಿ ಎಎಪಿ ಪ್ರತಿಭಟನೆ

    ನವದೆಹಲಿ: ಏಷ್ಯಾ ಕಪ್‌ನಲ್ಲಿ ನಾಳೆ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ತೀವ್ರ ಟೀಕೆ ವ್ಯಕ್ತವಾಗಿದ್ದು, ಪ್ರತಿಭಟನೆಗಳು ರಾಜಕೀಯ ತಿರುವು ಪಡೆದುಕೊಂಡಿವೆ.

    ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ 26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯು ಉಭಯ ದೇಶಗಳ ನಡುವಿನ ಬಿಕ್ಕಟ್ಟಿಗೆ ಕಾರಣವಾಗಿದೆ. ಘಟನೆಯಾದ ಬಳಿಕ ಭಾರತ ಮತ್ತು ಪಾಕಿಸ್ತಾನ ತಂಡಗಳು ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ. ದಾಳಿಯಲ್ಲಿ ಮೃತಪಟ್ಟ ತಮ್ಮ ಪುತ್ರರ ಬಗ್ಗೆ ಕುಟುಂಬಗಳು ಇನ್ನೂ ಶೋಕದಲ್ಲಿದ್ದಾವೆ. ಹಲವಾರು ರಾಜಕೀಯ ನಾಯಕರು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಿ ಕ್ರಿಕೆಟಿಗರೊಂದಿಗೆ ಆಟವಾಡುವುದು ತಪ್ಪು ಎಂದು ಹೇಳಿದ್ದಾರೆ. ಈ ಹೊತ್ತಲ್ಲಿ ಏಷ್ಯಾ ಕಪ್‌ನಲ್ಲಿ ಎರಡೂ ತಂಡಗಳು ಆಡಲು ಮುಂದಾಗಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.‌ ಇದನ್ನೂ ಓದಿ: ಭಾರತ ತಂಡವನ್ನೂ ಸೋಲಿಸುವಷ್ಟು ಸಮರ್ಥರಿದ್ದೇವೆ – ಪಂದ್ಯಕ್ಕೂ ಮುನ್ನ ಪಾಕ್‌ ಕ್ಯಾಪ್ಟನ್‌ ವಾರ್ನಿಂಗ್‌

    ಭಾರತ-ಪಾಕ್‌ ಆಟಕ್ಕೆ ವಿರೋಧ ವ್ಯಕ್ತವಾಗಿರುವುದು ರಾಜಕೀಯ ತಿರುವು ಪಡೆದುಕೊಂಡಿದೆ. ರಾಜಕೀಯ ನಾಯಕರು ಮತ್ತೊಮ್ಮೆ ಪಂದ್ಯವನ್ನು ಬಹಿಷ್ಕರಿಸುವಂತೆ ಕರೆ ಒತ್ತಾಯಿಸಿದ್ದಾರೆ. ಟೀಕೆಗಳು ಹೆಚ್ಚಾಗಿ ವಿರೋಧ ಪಕ್ಷಗಳಿಂದಲೇ ಕೇಳಿಬರುತ್ತಿವೆ. ಕಾಂಗ್ರೆಸ್, ಶಿವಸೇನೆ (ಯುಬಿಟಿ) ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಪಂದ್ಯವನ್ನು ವಿರೋಧಿಸಿವೆ.

    ಎಎಪಿ ನಾಯಕರು ಮತ್ತು ಕಾರ್ಯಕರ್ತರು ತಮ್ಮ ಕಚೇರಿಯ ಹೊರಗೆ ಪಾಕಿಸ್ತಾನ ಲೇಬಲ್ ಹೊಂದಿರುವ ಪ್ರತಿಕೃತಿಯನ್ನು ದಹಿಸಿದ್ದಾರೆ. ಮಾಜಿ ಸಚಿವ ಸೌರಭ್ ಭಾರದ್ವಾಜ್ ಪಂದ್ಯದ ನೇರ ಪ್ರಸಾರ ಮಾಡುವ ಕ್ಲಬ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ಬಹಿಷ್ಕರಿಸುವಂತೆ ಸಾರ್ವಜನಿಕವಾಗಿ ಮನವಿ ಮಾಡಿದ್ದಾರೆ. ‘ನಮ್ಮ ಸಹೋದರಿಯರ ಸಿಂಧೂರವನ್ನು ಅಳಿಸುವ ಇಂತಹ ಅಸಹ್ಯಕರ ಜನರೊಂದಿಗೆ ಭಾರತ ಸರ್ಕಾರ ಕ್ರಿಕೆಟಿಗರನ್ನು ಆಡುವಂತೆ ಮಾಡುತ್ತಿದೆ. ಭಾರತ-ಪಾಕಿಸ್ತಾನ ಪಂದ್ಯಗಳನ್ನು ಪ್ರಸಾರ ಮಾಡುವ ದೆಹಲಿಯಲ್ಲಿರುವ ಎಲ್ಲಾ ಕ್ಲಬ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ನಾವು ಬಹಿರಂಗಪಡಿಸುತ್ತೇವೆ’ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇದು ಮ್ಯಾಚ್‌ ಅಷ್ಟೇ; ಭಾರತ – ಪಾಕ್ ಪಂದ್ಯ ಬೇಡ ಎಂದ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ನಕಾರ

    ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸಿದ ಬಗ್ಗೆ ಪ್ರಧಾನಿಯವರ ‘ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ’ ಎಂಬ ಹೇಳಿಕೆಯನ್ನು ಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ನೆನಪಿಸಿಕೊಂಡು ಟ್ವೀಟ್‌ ಮಾಡಿದ್ದಾರೆ. ‘ರಕ್ತ ಮತ್ತು ಕ್ರಿಕೆಟ್’ ಹೇಗೆ ಒಟ್ಟಿಗೆ ಹೋಗುತ್ತದೆ ಎಂದು ಪ್ರಶ್ನಿಸಿದ್ದಾರೆ. ‘ಯುದ್ಧ ಮತ್ತು ಕ್ರಿಕೆಟ್ ಒಂದೇ ಸಮಯದಲ್ಲಿ ಹೇಗೆ ಇರಲು ಸಾಧ್ಯ? ಅವರು ದೇಶಭಕ್ತಿಯ ವ್ಯವಹಾರವನ್ನು ಮಾಡಿದ್ದಾರೆ. ಅವರಿಗೆ ಕೇವಲ ಹಣ ಬೇಕು’ ಎಂದು ಠಾಕ್ರೆ ಟೀಕಿಸಿದ್ದಾರೆ.

    ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್, ತಮ್ಮ ಗಂಡಂದಿರನ್ನು ಕಳೆದುಕೊಂಡ ಸಹೋದರಿಯರನ್ನು ನೋಡಿಕೊಳ್ಳದೆ ಕೆಲ ಜನರು ಹಣ ಸಂಪಾದಿಸುವುದರಲ್ಲಿ ನಿರತರಾಗಿದ್ದಾರೆ. ಇದು ವ್ಯವಹಾರ. ಭಾರತ-ಪಾಕಿಸ್ತಾನ ಪಂದ್ಯಗಳಲ್ಲಿ ಉತ್ಸಾಹವಿದೆ. ಟಿಕೆಟ್‌ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ನಮ್ಮ ಸಹೋದರಿಯರ ಸಿಂಧೂರ ಅಳಿಸಿದ್ದಾರೆಂದು ಅವರು ಬೇಸರಗೊಂಡಿಲ್ಲ. ಈ ಜನರು ಕ್ರಿಕೆಟ್ ಹೆಸರಿನಲ್ಲಿ ಹಣ ಸಂಪಾದಿಸುವಲ್ಲಿ ನಿರತರಾಗಿದ್ದಾರೆ. ನಮ್ಮ ಸಹೋದರಿಯರ ಕುಟುಂಬಗಳು ನಾಶವಾದವು. ಆದರೆ, ಇವರು ಪಾಕಿಸ್ತಾನಿಗಳೊಂದಿಗೆ ಕ್ರಿಕೆಟ್ ಆಡಲು ಹೊರಟಿದ್ದಾರೆ. ಸರ್ಕಾರ ನಾಚಿಕೆಪಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

  • ಇದು ಮ್ಯಾಚ್‌ ಅಷ್ಟೇ; ಭಾರತ – ಪಾಕ್ ಪಂದ್ಯ ಬೇಡ ಎಂದ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ನಕಾರ

    ಇದು ಮ್ಯಾಚ್‌ ಅಷ್ಟೇ; ಭಾರತ – ಪಾಕ್ ಪಂದ್ಯ ಬೇಡ ಎಂದ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ನಕಾರ

    – ರಾಷ್ಟ್ರದ ಹಿತಾಸಕ್ತಿಗಿಂತ ಕ್ರಿಕೆಟ್‌ ದೊಡ್ಡದಲ್ಲ ಅಂತ ಅರ್ಜಿದಾರರ ವಾದ

    ನವದೆಹಲಿ: ಭಾರತ ಮತ್ತು ಪಾಕಿಸ್ತಾನ (Ind vs Pak) ನಡುವೆ ಸೆ.14ರಂದು ನಡೆಯಲಿರುವ ಟಿ20 ಏಷ್ಯಾಕಪ್‌ ಪಂದ್ಯವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ (Supreme Court) ವಿಚಾರಣೆಗೆ ತಿರಸ್ಕರಿಸಿದೆ.

    2025ರ ಟಿ20 ಏಷ್ಯಾಕಪ್‌ (Asia Cup 2025) ವೇಳಾಪಟ್ಟಿ ಪ್ರಕಟವಾದಾಗಿನಿಂದಲೂ ಭಾರತ – ಪಾಕ್‌ ನಡುವಿನ ಪಂದ್ಯಕ್ಕೆ ಭಾರೀ ವಿರೋಧ ಕೇಳಿಬರ್ತಿದೆ. ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆ ಬಳಿಕ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿವೆ. ಹೀಗಾಗಿ ಇಂಡೋ-ಪಾಕ್‌ ಪಂದ್ಯ ನಿಲ್ಲಿಸುವಂತೆ ಒತ್ತಾಯಗಳು ಕೇಳಿಬರುತ್ತಿವೆ. ಅದೇ ರೀತಿ ಭಾರತ-ಪಾಕಿಸ್ತಾನ ನಡುವಿನ ಏಷ್ಯಾಕಪ್‌ ಪಂದ್ಯವನ್ನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಆದ್ರೆ ಅರ್ಜಿಯನ್ನ ವಿಚಾರಣೆಗೆ ಪರಿಗಣಿಸೋದಕ್ಕೂ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

    ನ್ಯಾಯಮೂರ್ತಿಗಳಾದ ಜೆಕೆ ಮಹೇಶ್ವರಿ ಮತ್ತು ವಿಜಯ್ ಬಿಷ್ಣೋಯ್ ಅವರ ಪೀಠವು ಅರ್ಜಿ ವಿಚಾರ ಕೇಳೋದಕ್ಕೂ ನಿರಾಕರಿಸಿದ್ದು, ಇದು‌ ಕೇವಲ ಒಂದು ಪಂದ್ಯ ಅಷ್ಟೇ ಎಂದು ಹೇಳಿದೆ. ಇದನ್ನೂ ಓದಿ: ಕೇವಲ 4.3 ಓವರ್‌ನಲ್ಲೇ ಗುರಿ ತಲುಪಿದ ಟೀಂ ಇಂಡಿಯಾ – ಯುಎಇ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ

    ಊರ್ವಶಿ ಜೈನ್‌ ನೇತೃತ್ವದಲ್ಲಿ ನಾಲ್ವರು ಕಾನೂನು ವಿದ್ಯಾರ್ಥಿಗಳ ಪರವಾಗಿ ಸಂವಿಧಾನದ 32ನೇ ವಿಧಿ ಅಡಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಗಿತ್ತು. ಸೆ.14ರಂದು ದುಬೈನಲ್ಲಿ ಏಷ್ಯಾಕಪ್‌ ಭಾಗವಾಗಿ ನಡೆಯಲಿರುವ ಭಾರತ-ಪಾಕಿಸ್ತಾನ ಟಿ20 ಕ್ರಿಕೆಟ್‌ ಪಂದ್ಯವನ್ನ ರದ್ದುಗೊಳಿಸುವಂತೆ ಅರ್ಜಿಯಲ್ಲಿ ಕೋರಲಾಗಿತ್ತು. ತುರ್ತು ವಿಚಾರಣೆಗೆ ಪಟ್ಟಿ ಮಾಡಲಾಗಿತ್ತು. ಈ ವೇಳೆ ನ್ಯಾ. ಮಹೇಶ್ವರಿ ತುರ್ತು ಏನಿದೆ? ಅಂತ ಪ್ರಶ್ನಿಸಿದರಲ್ಲದೇ ಅದು ಒಂದು ಅಷ್ಟೇ.. ಭಾನುವಾರ ಪಂದ್ಯ ಇದೆ, ಏನು ಮಾಡೋಕಾಗುತ್ತೆ? ಅಂತ ತಿಳಿಸಿದ್ದಾರೆ.  ಇದನ್ನೂ ಓದಿ:ಕುಲ್ದೀಪ್‌, ದುಬೆ ಮಿಂಚು; 57 ರನ್‌ಗೆ ಯುಎಇ ಆಲೌಟ್ – ಟಿ20 ಇತಿಹಾಸದಲ್ಲೇ ಕೆಟ್ಟ ದಾಖಲೆ 

    ಅರ್ಜಿದಾರರ ವಾದ ಏನು?
    ಪಹಲ್ಗಾಮ್‌ ದಾಳಿ ಮತ್ತು ಆಪರೇಷನ್‌ ಸಿಂಧೂರ ಕಾರ್ಯಾಚರಣೆ ನಂತರ ಪಾಕಿಸ್ತಾನದೊಂದಿಗೆ ಕ್ರಿಕೆಟ್‌ ಪಂದ್ಯವನ್ನ ಆಯೋಜಿಸುವುದು ರಾಷ್ಟ್ರೀಯ ಘನತೆ ಮತ್ತು ಸಾರ್ವಜನಿಕ ಭಾವನೆಗೆ ತಪ್ಪು ಸಂದೇಶ ನೀಡುತ್ತದೆ. ಭಯೋತ್ಪಾದನೆಗೆ ಆಶ್ರಯ ನೀಡುವ ರಾಷ್ಟ್ರಗಳೊಂದಿಗೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಸೈನಿಕರ ನೈತಿಕತೆಯನ್ನ ಹಾಳು ಮಾಡಿದಂತಾಗುತ್ತದೆ. ಕ್ರಿಕೆಟ್‌ ರಾಷ್ಟ್ರದ ಹಿತಾಸಕ್ತಿ, ನಾಗರಿಕರ ಜೀವನ ಹಾಗೂ ಸೈನಿಕರ ತ್ಯಾಗಕ್ಕಿಂತ ಹೆಚ್ಚಿನದ್ದಲ್ಲ ಎಂದು ಅರ್ಜಿದಾರರು ವಾದಿಸಿದರು. ಆದಾಗ್ಯೂ ಕೋರ್ಟ್‌ ತುರ್ತು ವಿಚಾರಣೆಗೆ ಅರ್ಜಿಯನ್ನು ನಿರಾಕರಿಸಿತು.

    2008ರ ಮುಂಬೈ ದಾಳಿ ಬಳಿಕ ಭಾರತ ಮತ್ತು ಪಾಕ್‌ ನಡುವಿನ ಸಂಬಂಧ ಹದಗೆಟ್ಟಿತು. ಪಹಲ್ಗಾಮ್‌ ದಾಳಿ ಬಳಿಕ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿತು. ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಕೇಸ್‌ | ಕ್ರಿಕೆಟಿಗ ಪೃಥ್ವಿ ಶಾಗೆ 100 ರೂ. ದಂಡ ವಿಧಿಸಿದ ಮುಂಬೈ ಕೋರ್ಟ್

  • ಪಹಲ್ಗಾಮ್ ಬಳಿಕ ಇಂಡಿಯಾ, ಪಾಕಿಸ್ತಾನ ಮ್ಯಾಚ್ ಬೇಕಿತ್ತಾ? – ಸಂತೋಷ್ ಲಾಡ್

    ಪಹಲ್ಗಾಮ್ ಬಳಿಕ ಇಂಡಿಯಾ, ಪಾಕಿಸ್ತಾನ ಮ್ಯಾಚ್ ಬೇಕಿತ್ತಾ? – ಸಂತೋಷ್ ಲಾಡ್

    – ಹಿಂದೂ ಎನ್ನುವವರು ಮೊದಲಿಗೆ ಅಂತರ್ಜಾತಿ ವಿವಾಹ ಮಾಡಿಸಲಿ

    ಕೋಲಾರ: ಬಿಜೆಪಿಯವರಿಗೆ ಹಿಂದೂ-ಮುಸ್ಲಿಂ ಅನ್ನೋ ವಿಚಾರ ಬಿಟ್ರೆ ಇನ್ನೇನಿದೆ? ಪಹಲ್ಗಾಮ್ (Pahalgam Attack) ಆಗಿ ಎಷ್ಟು ದಿನ ಆಗಿದೆ? ಈ ಮಧ್ಯೆ ಇಂಡಿಯಾ ಪಾಕಿಸ್ತಾನ ಮ್ಯಾಚ್ (India-Pakistan Match) ಯಾಕೆ ಬೇಕಾಗಿತ್ತು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಕೇಂದ್ರ ಬಿಜೆಪಿಗೆ ಟಾಂಗ್ ನೀಡಿದ್ದಾರೆ.

    ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿನಿಮಾದವರು ಬೇಡ, ಸಿಂಧೂ ನದಿ ನೀರು ಕೊಡಲ್ಲ ಅಂತಾರೆ, ಕ್ರಿಕೆಟ್ ಮಾತ್ರ ಆಡಿಸುತ್ತಾರೆ. ಪಾಕಿಸ್ತಾನದ ಜೊತೆಗೆ ಇಂಡಿಯಾ ಕ್ರಿಕೆಟ್ ಆಡಬಹುದಾ ಎಂದು ಪ್ರಶ್ನಿಸಿದರು. ಇನ್ನೂ ಮೋದಿ ಗ್ರೇಟೆಸ್ಟ್ ಪ್ರೈಮ್ ಮಿನಿಸ್ಟರ್ ಎಂದು ಸಾಬೀತು ಮಾಡಲು ಹೊರಟಿದ್ದಾರೆ. ಬಿಜೆಪಿಯ ಪಿಎಂ ಮೋದಿ, ಅಡ್ವಾನಿ, ವಾಜಪೇಯಿ ಪಾಕಿಸ್ತಾನಕ್ಕೆ ಹೋಗಿದ್ದು, ಅಲ್ಲದೇ ಪಾಕಿಸ್ತಾನಕ್ಕೆ ಬಸ್ ಬಿಟ್ಟಿದ್ದು ಅವರೆ. ಹಾಗಾಗಿ ಎಲ್ಲವೂ ಮಾಡಿದ್ದು ಬಿಜೆಪಿಯವರೆ ಎಂದು ಕಿಡಿಕಾರಿದರು. ಇದನ್ನೂ ಓದಿ: Asia Cup 2025 | ಅಬ್ಬರಿಸಲು ʻಯಂಗ್‌ ಇಂಡಿಯಾʼ ರೆಡಿ – ಪ್ರಾಕ್ಟೀಸ್‌ ಸೆಷನ್‌ನಲ್ಲೇ 30 ಸಿಕ್ಸರ್‌ ಸಿಡಿಸಿದ ಶರ್ಮಾ

    83 ಸಾವಿರ ಕೋಟಿ ಅಭಿವೃದ್ಧಿಗೆ, 60 ಸಾವಿರ ಕೋಟಿ ಗ್ಯಾರಂಟಿಗಳಿಗೆ ಕೊಡುತ್ತಿದ್ದೇವೆ. ಬಿಜೆಪಿಯವರು ಗ್ಯಾರಂಟಿ ಕೊಡದೆ ಅಭಿವೃದ್ಧಿಗೆ ಮಾತ್ರ ಅಷ್ಟು ಹಣ ಮೀಸಲಿಟ್ಟಿದ್ದರು, ಉಳಿದ ಹಣ ಎಲ್ಲಿ ಹೋಯ್ತು? ಆಗ ರಾಜ್ಯ ದಿವಾಳಿಯಾಗಿಲ್ವಾ? ದೇಶ ಆರ್ಥಿಕ ಸಂಕಷ್ಟದಲ್ಲಿದೆ, ಆದ್ರೆ ರಾಜ್ಯ ಸುಧಾರಿಸಿದೆ. ಜಿಎಸ್‌ಟಿ ಸೇರಿ ಎಲ್ಲದರಲ್ಲೂ ರಾಜ್ಯ ಮುಂದಿದೆ. ಗುಜರಾತ್ ಮಾಡೆಲ್ ಅಂತಾರೆ ಎಲ್ಲಾಗಿದೆ ಮಾಡೆಲ್? ಗಿಫ್ಟ್ ಸಿಟಿ ಅಂತ ಮಾಡಿ ಮೋದಿ ಅವರು ಎಲ್ಲಿ ಅಭಿವೃದ್ಧಿ ಮಾಡಿದ್ದಾರೆ? ಸಾಕಷ್ಟು ಬಾರಿ ಸಿಎಂ ಆಗಿದ್ದವರು ಏನು ಮಾಡಿದ್ದಾರೆ ಎಂದು ಪ್ರಶ್ನೆಗಳ ಸುರಿಮಳೆಗೈದರು. ಇದನ್ನೂ ಓದಿ: 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ – ನಿಪ್ಪಾಣಿ ವ್ಯಕ್ತಿಗೆ 30 ವರ್ಷ ಜೈಲು ಶಿಕ್ಷೆ

    ಖೇಲೋ ಇಂಡಿಯಾ ಅನ್ನೋ ದೊಡ್ಡ ಕಾರ್ಯಕ್ರಮ 426 ಕೋಟಿ ಗುಜರಾತ್‌ಗೆ ಮಾತ್ರ ಹೋಗುತ್ತೆ, ಎಲ್ಲಿ ಎಷ್ಟು ಮೆಡಲ್ ಬಂದಿದೆ? ಈ ಮೊದಲು ಕಡಿಮೆ ಇತ್ತು, ಈಗಲೂ ಕಡಿಮೆ ಇದೆ. ಗುಜರಾತ್ ಯಾಕೆ ಇಂದಿಗೂ ಮಾಡೆಲ್ ಆಗಿಲ್ಲ? ನಮ್ಮ ರಾಜ್ಯದಲ್ಲಿ ಎಂಜಿನಿಯರಿಂಗ್ ಕಾಲೇಜು, ಸಿಎಸ್ಟಿ, ಎಫ್‌ಡಿಎ ಸೇರಿ ನಾವು ಅಭಿವೃದ್ಧಿಯಲ್ಲಿದ್ದೇವೆ, ಆದ್ರೆ ದೇಶವೆ ಹಿಂದುಳಿದಿದೆ. ಅಭಿವೃದ್ಧಿ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ʻಬೆಂಕಿಯ ಬಲೆʼಯಲ್ಲಿ ನೇಪಾಳ – ಕನ್ನಡಿಗರ ರಕ್ಷಣೆಗೆ ತಂಡ ರಚಿಸಿದ ರಾಜ್ಯ ಸರ್ಕಾರ

    ಇನ್ನು ಮದ್ದೂರು ಕಲ್ಲು ತೂರಾಟ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಿಂದೂ ಮುಸ್ಲಿಂ ಗಲಾಟೆ ಬಿಟ್ರೆ ಬಿಜೆಪಿ ಏನೂ ಮಾಡುತ್ತಿಲ್ಲ. ಕಲ್ಲು ತೂರಾಟ ಮಾಡಿದವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ಹಿಂದೂ ಎನ್ನುವವರು ಮೊದಲಿಗೆ ಅಂತರ್ಜಾತಿ ವಿವಾಹ ಮಾಡಿಸಲಿ, ಹಿಂದೂ ಮಾತ್ರ ಎನ್ನುವವರು ಹೀಗೆ ಮಾಡಿ. ಅವರ ಆಸ್ತಿಗಳನ್ನ ಬಡವರಿಗೆ ಕೊಡಿ. ನಾವೆಲ್ಲಾ ಹಿಂದು ನಾವೆಲ್ಲಾ ಒಂದು ಎನ್ನುವವರು ಮೊದಲು ಸಣ್ಣ ಜಾತಿಗಳವರೊಂದಿಗೆ ಮದುವೆ ಮಾಡಿಸಿ ಮಾದರಿಯಾಗಲಿ ಎಂದು ಸವಾಲೆಸೆದರು. ಇದನ್ನೂ ಓದಿ: ಮಂಗಳೂರು | ಬೈಕಂಪಾಡಿಯಲ್ಲಿ ಅಗ್ನಿ ಅವಘಡ – ಅಮೆಜಾನ್ ಸುಗಂಧದ್ರವ್ಯ ತಯಾರಕ ಕಂಪನಿ ಬೆಂಕಿಗಾಹುತಿ

    ಬಿಜೆಪಿ ನಾಯಕರ ಮಕ್ಕಳು ಯಾವ ಪ್ರತಿಭಟನೆಗೆ, ಯಾವ ಹೋರಾಟಕ್ಕೆ ಬಂದಿದ್ದಾರೆ? ಬರಲ್ಲ, ಅಲ್ಲಿ ಹೋರಾಟ ಮಾಡೋದು, ಗಾಯಗಳಾಗೋದು ಎಲ್ಲವೂ ಬಡವರ ಮಕ್ಕಳಿಗೆ. ಇನ್ನೂ ಬಿಜೆಪಿಯವರು ಏನು ಮಾಡಿದ್ದಾರೆ? ಶಕ್ತಿ ಪೀಠಗಳು ಹೆಚ್ಚಾಗಿ ಮಾಡಿರುವುದು ಕಾಂಗ್ರೆಸ್‌ನವರು ಎಂದರು. ಇದನ್ನೂ ಓದಿ: ಸಂಡೂರಿನ ನಾರಿಹಳ್ಳದಲ್ಲಿ ಅಪರೂಪದ ಮ್ಯಾಂಗನೀಸ್ ಶಿಲಾ ಶಾಸನ ಪತ್ತೆ

    ಇನ್ನೂ ಭದ್ರಾವತಿ ಶಾಸಕ ಸಂಗಮೇಶ್ ಮುಂದಿನ ಜನ್ಮದಲ್ಲಿ ಮಸ್ಲಿಂ ಆಗಿ ಹುಟ್ಟುತ್ತೇನೆ ಎಂಬ ಹೇಳಿಕೆ ಬಗ್ಗೆ ಮಾತನಾಡಿ, ದೇವೇಗೌಡ್ರು ಈ ಹಿಂದೆ ನಾನು ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಬೇಕು ಎಂದಿದ್ದರು. ಅವರ ಬಗ್ಗೆ ನನಗೆ ಗೌರವ ಇದೆ. ಆದ್ರೆ ನಮ್ಮ ಶಾಸಕರು ಮಾತ್ರ ಹಾಗೆ ಮಾತನಾಡಬಾರದ? ನಾವು ಮಾತನಾಡಿದ್ರೆ ಓಲೈಕೆನಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ರಾಜ್ಯ ಸರ್ಕಾರ ಹಿಂದೂಗಳನ್ನ ಯಾವ ಸ್ಥಿತಿಗೆ ತಳ್ಳಿರಬಹುದು? – ವಿಜಯೇಂದ್ರ ಆತಂಕ

    ಕಳೆದ 15 ದಿನದಲ್ಲಿ ಕಾಂಗ್ರೆಸ್ ಇಬ್ಬರು ಶಾಸಕರ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇಡಿ, ಸಿಬಿಐ, ಎಸ್‌ಐಟಿ, ಲೋಕಾಯುಕ್ತ ಯಾವುದೇ ತನಿಖೆಯಾಗಲಿ. ಆದ್ರೆ ಕರ್ಮ ಯಾರನ್ನೂ ಸಮ್ಮನೆ ಬಿಡಲ್ಲ. ಅಂಬಾನಿ ಅವರು ಒಂದು ಕೋಟಿ ಲಾಭ ಮಾಡಿದ್ದಾರೆ, ಅದರ ಲೆಕ್ಕ ಯಾರು ಕೇಳಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಕತಾರ್‌ ಮೇಲೆ ಇಸ್ರೇಲ್‌ ಏರ್‌ಸ್ಟ್ರೈಕ್‌; ಹಮಾಸ್‌ ನಾಯಕನ ಪುತ್ರ ಸೇರಿ 6 ಮಂದಿ ಬಲಿ – ಟಾಪ್‌ ಲೀಡರ್‌ ಪಾರು

    ಇನ್ನೂ ಧರ್ಮಸ್ಥಳಕ್ಕೆ ತೆಲುಗು ನಟ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಬರುವ ವಿಚಾರವಾಗಿ ಮಾತನಾಡಿದ ಅವರು, ಅಷ್ಟೇ ಬಿಜೆಪಿಯಲ್ಲಿ ಹಿಂದೂ ಅನ್ನೋ ವಿಚಾರ ಬಿಟ್ರೆ ಇನ್ನೇನಿದೆ? ಏನಕ್ಕೆ ಬರ್ತಾರೆ ಬಂದು ಏನು ಮಾಡ್ತಾರೆ? ಧರ್ಮ ರಕ್ಷಣೆ ಅಂತಾರೆ, ಇಷ್ಟೇ ಅವರ ಸಾಧನೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ – ಸೆ.12ರ ನಂತರ ಮದ್ದೂರಿಗೆ ಹೆಚ್‌ಡಿಕೆ

  • ಇಂದಿನಿಂದ ಏಷ್ಯಾಕಪ್‌| ಭಾರತ – ಪಾಕ್‌ ಮೂರು ಬಾರಿ ಮುಖಾಮುಖಿ?

    ಇಂದಿನಿಂದ ಏಷ್ಯಾಕಪ್‌| ಭಾರತ – ಪಾಕ್‌ ಮೂರು ಬಾರಿ ಮುಖಾಮುಖಿ?

    ದುಬೈ: ಏಷ್ಯಾ ಕಪ್‌ ಟಿ20 ಕ್ರಿಕೆಟ್‌ (Asia Cup T20 Cricket) ಟೂರ್ನಿ ಇಂದಿನಿಂದ ಆರಂಭವಾಗಲಿದೆ. ಯುಎಇ (UAE) ದೇಶದ ದುಬೈ, ಅಬುಧಾಬಿ ಕ್ರೀಡಾಂಗಣದಲ್ಲಿ 20 ದಿನಗಳ ಕಾಲ 8 ದೇಶಗಳು ಒಟ್ಟು 19 ಪಂದ್ಯಗಳನ್ನು  ಆಡಲಿವೆ.

    ಉದ್ಘಾಟನಾ ಪಂದ್ಯ ಅಫ್ಘಾನಿಸ್ತಾನ ಮತ್ತು ಹಾಂಕಾಂಗ್‌ ಮಧ್ಯೆ ನಡೆದರೆ ಸೆ.28ರಂದು ಫೈನಲ್‌ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್‌ ಭಾರತ (India) ಬುಧವಾರ ಯುಎಇ ವಿರುದ್ಧ ತನ್ನ ಮೊದಲ ಪಂದ್ಯವಾಡಲಿದೆ.

    ತಂಡಗಳನ್ನು 2 ಗುಂಪುಗಳನ್ನಾಗಿ ವಿಂಗಡಿಸಲಾಗಿದ್ದು ಭಾರತ, ಪಾಕಿಸ್ತಾನ, ಯುಎಇ ಹಾಗೂ ಒಮಾನ್‌ ‘ಎ’ ಗುಂಪಿನಲ್ಲಿವೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಹಾಂಕಾಂಗ್‌ ‘ಬಿ’ ಗುಂಪಿನಲ್ಲಿವೆ.

    ಪ್ರತಿ ತಂಡಗಳು ಗುಂಪು ಹಂತದಲ್ಲಿ ಒಮ್ಮೆ ಪರಸ್ಪರ ಸೆಣಸಾಡಲಿವೆ. ಗುಂಪಿನ ಅಗ್ರ-2 ತಂಡಗಳು ಸೂಪರ್‌-4 ಹಂತ ಪ್ರವೇಶಿಸಲಿವೆ. ಸೂಪರ್‌-4ನಲ್ಲಿ ಅಗ್ರ-2 ಸ್ಥಾನ ಪಡೆದ ತಂಡಗಳು ಫೈನಲ್‌ಗೆ ಅರ್ಹತೆ ಪಡೆಯಲಿವೆ. ಇದನ್ನೂ ಓದಿ: ತಂಡದಲ್ಲಿ ಸಿಗಬೇಕಾದ ಗೌರವ ಸಿಗಲಿಲ್ಲ, ಕುಂಬ್ಳೆ ಮುಂದೆ ಅತ್ತಿದ್ದೆ: ಕ್ರಿಸ್‌ ಗೇಲ್‌

    ಪ್ರತಿ 2 ವರ್ಷಕ್ಕೊಮ್ಮೆ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿ ನಡೆಯುತ್ತಿದ್ದು ಈವರೆಗೂ 16 ಬಾರಿ ಆಯೋಜನೆಗೊಂಡಿವೆ. ಈ ಪೈಕಿ ಭಾರತ 8 ಬಾರಿ ಟ್ರೋಫಿ ಗೆದ್ದರೆ 3 ಆವೃತ್ತಿಗಳಲ್ಲಿ ರನ್ನರ್‌-ಅಪ್‌ ಆಗಿದೆ. ಶ್ರೀಲಂಕಾ 6, ಪಾಕಿಸ್ತಾನ 2 ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿವೆ.

    ಸೆ.15ರ ಯುಎಇ-ಒಮಾನ್‌(ಸಂಜೆ 5.30ಕ್ಕೆ) ಹೊರತುಪಡಿಸಿ ಉಳಿದೆಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಸೋನಿ ಸ್ಪೋರ್ಟ್ಸ್‌, ಸೋನಿ ಲೈವ್‌ನಲ್ಲಿ ಪಂದ್ಯಗಳು ನೇರಪ್ರಸಾರವಾಗಲಿದೆ.

    ದುಬೈ ಕ್ರೀಡಾಂಗಣದಲ್ಲಿ 11 ಪಂದ್ಯ ನಡೆಯಿದ್ದು 25,000 ಆಸನ ಸಾಮರ್ಥ್ಯವನ್ನು ಹೊಂದಿದರೆ ಅಬುಧಾಬಿಯಲ್ಲಿ 8 ಪಂದ್ಯಗಳು ನಿಗದಿಯಾಗಿದ್ದು 20,000 ಆಸನ ಸಾಮರ್ಥ್ಯ ಹೊಂದಿದೆ.  ಇದನ್ನೂ ಓದಿ: BCCI ಬ್ಯಾಂಕ್ ಬ್ಯಾಲೆನ್ಸ್‌ 20 ಸಾವಿರ ಕೋಟಿಗೂ ಅಧಿಕ 5 ವರ್ಷದಲ್ಲಿ 14,627 ಕೋಟಿ ಆದಾಯ ಹೆಚ್ಚಳ

    ಭಾರತ vs ಪಾಕಿಸ್ತಾನ 3 ಬಾರಿ ಮುಖಾಮುಖಿ?
    ಪಹಲ್ಗಾಮ್‌ ಉಗ್ರ ದಾಳಿ ಹಾಗೂ ಆ ಬಳಿಕ ನಡೆದ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಳಿಕ ಇದೇ ಮೊದಲ ಬಾರಿ ಭಾರತ-ಪಾಕ್‌ (India vs Pakistan) ತಂಡಗಳು ತಂಡಗಳು ಮುಖಾಮುಖಿಯಾಗಲಿವೆ. ಒಂದಲ್ಲ ಮೂರು ಬಾರಿ ಇತ್ತಂಡಗಳು ಕಾದಾಟ ನಡೆಸುವ ಸಾಧ್ಯತೆಯಿದೆ.

    ಸೆ.14ರಂದು ಗುಂಪು ಹಂತದಲ್ಲಿ ಮೊದಲ ಬಾರಿಗೆ ಸೆಣಸಾಟವಾಡಲಿವೆ. ಒಂದು ವೇಳೆ ಗುಂಪು ಹಂತದಲ್ಲಿ ಗೆದ್ದು ಸೂಪರ್‌ 4 ಪ್ರವೇಶಿಸಿದರೆ ಅಲ್ಲೂ ಕಾದಾಟ ನಡೆಸಬೇಕಾಗುತ್ತದೆ. ಸೂಪರ್‌ 4 ರಲ್ಲಿ ಅಗ್ರ ಸ್ಥಾನ ಪಡೆದರೆ ಫೈನಲ್‌ನಲ್ಲೂ ಮುಖಾಮುಖಿಯಾಗುವ ಸಾಧ್ಯತೆಯಿದೆ.

     

  • BCCI ಬ್ಯಾಂಕ್ ಬ್ಯಾಲೆನ್ಸ್‌ 20 ಸಾವಿರ ಕೋಟಿಗೂ ಅಧಿಕ – 5 ವರ್ಷದಲ್ಲಿ 14,627 ಕೋಟಿ ಆದಾಯ ಹೆಚ್ಚಳ

    BCCI ಬ್ಯಾಂಕ್ ಬ್ಯಾಲೆನ್ಸ್‌ 20 ಸಾವಿರ ಕೋಟಿಗೂ ಅಧಿಕ – 5 ವರ್ಷದಲ್ಲಿ 14,627 ಕೋಟಿ ಆದಾಯ ಹೆಚ್ಚಳ

    ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಖಜಾನೆಯಲ್ಲಿ ಭಾರೀ ಮೊತ್ತದ ಹಣ ಏರಿಕೆಯಾಗಿದೆ. 2023-24ರ ಆರ್ಥಿಕ ವರ್ಷದ ವರದಿಯ ಪ್ರಕಾರ ಮಂಡಳಿಯ ಬ್ಯಾಂಕ್ ಬ್ಯಾಲೆನ್ಸ್ 20 ಸಾವಿರ ಕೋಟಿ ರೂ. ದಾಟಿದೆ.

    ಕಳೆದ ಐದು ವರ್ಷಗಳಲ್ಲಿ 14627 ಕೋಟಿ ರೂಪಾಯಿ ಉಳಿಕೆ ಹಣವಿತ್ತು. ಅದಕ್ಕೆ ಕಳೆದ ಹಣಕಾಸು ವರ್ಷದಲ್ಲಿ 4193 ಕೋಟಿ ರೂಪಾಯಿ ಸೇರ್ಪಡೆಯಾಗಿದೆ. ಇನ್ನೂ ಬಿಸಿಸಿಐನ ಸಾಮಾನ್ಯ ನಿಧಿ ಸಹ ಹೆಚ್ಚಾಗಿದೆ. 2019ರಲ್ಲಿ 3906 ಕೋಟಿ ರೂ. ಇದ್ದದ್ದು, 2024ರಲ್ಲಿ 7988 ಕೋಟಿ ರೂ. ಏರಿಕೆಯಾಗಿದೆ. ಅಂದರೆ 4082 ಕೋಟಿ ರೂಪಾಯಿ ಹೆಚ್ಚಾಗಿದೆ. ಇದನ್ನೂ ಓದಿ: ಆಡಿದ್ರೆ ನ್ಯಾಯವಾಗಿ ಆಡ್ಬೇಕು | ಕೇಂದ್ರದಿಂದ 2 ಮಹತ್ವದ ಕ್ರೀಡಾ ಮಸೂದೆ – ಏನಿದರ ವಿಶೇಷ?

    ಬಿಸಿಸಿಗೆ ಬಳಿ ಇರುವ ಮೀಸಲು ಹಣಕ್ಕೆ ಸಿಗುವ ಬಡ್ಡಿಯೇ ಸಾವಿರ ಕೋಟಿ ರೂ.ಗೂ ಹೆಚ್ಚಿದೆ. ಇನ್ನೂ 2024-25ರ ಹಣಕಾಸು ವರ್ಷದ ಲೆಕ್ಕಪತ್ರವನ್ನು ಸೆ.28ರಂದು ಮುಂಬೈನಲ್ಲಿ ನಡೆಯುವ ವಾರ್ಷಿಕ ಸಭೆಯಲ್ಲಿ ಈ ವರದಿ ಬಿಡುಗಡೆ ಮಾಡಲಾಗುತ್ತದೆ. ಈ ಬಾರಿ ಆರ್‌ಸಿಬಿ ಗೆದ್ದಿರುವುದರಿಂದ ಬಿಸಿಸಿಐ ಆದಾಯದಲ್ಲೂ ಬಹಳ ಏರಿಕೆಯಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ ಲೋಕಸಭೆಯಲ್ಲಿ ಐತಿಹಾಸಿಕ ಕ್ರೀಡಾ ಆಡಳಿತ, ಡೋಪಿಂಗ್ ತಡೆ ಮಸೂದೆ ಅಂಗೀಕಾರ

  • ಜಿಎಸ್‌ಟಿ ಪರಿಷ್ಕರಣೆ ಬೆನ್ನಲ್ಲೇ ದುಬಾರಿಯಾಗಲಿದೆ ಆರ್‌ಸಿಬಿ ಟಿಕೆಟ್‌ ದರ

    ಜಿಎಸ್‌ಟಿ ಪರಿಷ್ಕರಣೆ ಬೆನ್ನಲ್ಲೇ ದುಬಾರಿಯಾಗಲಿದೆ ಆರ್‌ಸಿಬಿ ಟಿಕೆಟ್‌ ದರ

    – ಆರ್‌ಸಿಬಿಯ ಬೆಂಗಳೂರು ಪಂದ್ಯಗಳಿಗೆ ಅತಿ ಹೆಚ್ಚು ದರ

    ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(GST) ಸ್ಲ್ಯಾಬ್‌ ಪರಿಷ್ಕರಣೆ ಬೆನ್ನಲ್ಲೇ 2026ನೇ ಆವೃತ್ತಿಯ ಐಪಿಎಲ್‌ ಪಂದ್ಯಗಳ (IPL Match) ಟಿಕೆಟ್‌ ದರ ದುಬಾರಿಯಾಗಲಿದೆ.

    ಇಲ್ಲಿಯವರೆಗೆ ಐಪಿಎಲ್ ಟಿಕೆಟ್‌ಗಳು 28% ರಷ್ಟು ತೆರಿಗೆ ಸ್ಲ್ಯಾಬ್ ಅಡಿಯಲ್ಲಿದ್ದವು. ಆದರೆ ಪರಿಷ್ಕರಣೆಯಾದ ಬಳಿಕ ಇವು 40% ರ ವಿಭಾಗದಲ್ಲಿ ಬರುವುದರಿಂದ ಟಿಕೆಟ್‌ ದರ (Ticket Price) ಏರಿಕೆಯಾಗಲಿದೆ.

    ತಂಬಾಕು ಉತ್ಪನ್ನಗಳು ಹಾಗೂ ಕ್ಯಾಸಿನೊ, ರೇಸ್ ಕ್ಲಬ್‌ಗಳು ಮತ್ತು ಇತರ ಐಷಾರಾಮಿ ಖರ್ಚುಗಳಿಗೆ 40% ತೆರಿಗೆ ಹಾಕಲಾಗಿದೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಬೆಂಗಳೂರಿನ ಪಂದ್ಯದ ಟಿಕೆಟ್‌ ದರ ಭಾರೀ ಏರಿಕೆಯಾಗುವ ಸಾಧ್ಯತೆಯಿದೆ.

    ಎಷ್ಟು ಏರಿಕೆಯಾಗಬಹುದು?
    ಈ ಸೀಸನ್ ವರೆಗೆ 500 ರೂ. ಮೂಲ ಬೆಲೆ ಹೊಂದಿದ್ದ ಟಿಕೆಟ್‌ 28% ಜಿಎಸ್‌ಟಿ ಹಾಕಲಾಗುತ್ತಿತ್ತು. ಹೀಗಾಗಿ ಒಂದು ಟಿಕೆಟ್‌ ದರ 640 ರೂ. ಆಗುತ್ತಿತ್ತು. 2026 ರ ಆವೃತ್ತಿಯಲ್ಲಿ ಸರ್ಕಾರವು 40% ರಷ್ಟು ಜಿಎಸ್‌ಟಿ ವಿಧಿಸಿದ ನಂತರ ಅದೇ ಟಿಕೆಟ್‌ ದರ 700 ರೂ.ಗೆ ಏರಿಕೆಯಾಗಲಿದೆ.  ಇದನ್ನೂ ಓದಿ: ಇನ್ಮುಂದೆ ಜಿಎಸ್‌ಟಿಯಲ್ಲಿ 2 ಸ್ಲ್ಯಾಬ್‌ ಸೆ.22 ರಿಂದ ಜಾರಿ| ಯಾವ ವಸ್ತುಗಳ ಬೆಲೆ ಇಳಿಕೆ? ಯಾವುದು ಏರಿಕೆ? ಇಲ್ಲಿದೆ ಪಟ್ಟಿ

    ಈ ವರ್ಷ ಆರ್‌ಸಿಬಿಯ ಬೆಂಗಳೂರು ಪಂದ್ಯದ ದುಬಾರಿ ಟಿಕೆಟ್‌ ಬೆಲೆ 42,350 ರೂ. ಇತ್ತು. ಈ ದರಕ್ಕೆ 40% ಜಿಎಸ್‌ಟಿ ಹಾಕಿದರೆ ಸುಮಾರು 4 ಸಾವಿರ ರೂ. ಏರಿಕೆ ಕಾಣಬಹುದು. ಚೆಪಾಕ್‌ನಲ್ಲಿ ಅತ್ಯಂತ ದುಬಾರಿ ಟಿಕೆಟ್ (7,000 ರೂ.) 7,656 ಕ್ಕೆ ಏರುವ ಸಾಧ್ಯತೆಯಿದೆ. ಆರ್‌ಸಿಬಿಯ ಬೆಂಗಳೂರು ಪಂದ್ಯದ ಕಡಿಮೆ ಬೆಲೆಯ ಟಿಕೆಟ್‌ಗೆ 2,300 ರೂ. ಇತ್ತು. ಇನ್ನು ಮುಂದೆ ಈ ದರ 2,515 ರೂ. ಆಗಬಹುದು.

    ಐಪಿಎಲ್‌ನಲ್ಲಿ ಆರ್‌ಸಿಬಿ ಮತ್ತು ಚೆನ್ನೈ ತಂಡಕ್ಕೆ ಭಾರೀ ಅಭಿಮಾನಿಗಳಿದ್ದಾರೆ. ಬೇರೆ ತಂಡಗಳಿಗೆ ಹೋಲಿಸಿದರೆ ಈ ಎರಡು ತಂಡಗಳ ಟಿಕೆಟ್‌ ದರ ಜಾಸ್ತಿ ಇರುತ್ತದೆ. ಮನರಂಜನಾ ತೆರಿಗೆ ವಿಧಿಸುವುದರಿಂದ ಟಿಕೆಟ್‌ ದರ ಮತ್ತಷ್ಟು ಏರಿಕೆಯಾಗುತ್ತದೆ.  ಆರ್‌ಸಿಬಿಯಲ್ಲಿ ವಿರಾಟ್‌ ಕೊಹ್ಲಿ ಸೇರಿದಂತೆ ಈ ಹಿಂದೆ ಹಲವು ಸ್ಟಾರ್‌ ಪ್ಲೇಯರ್‌ಗಳು ಹಿಂದೆ ಆಡಿದ್ದರಿಂದ ಬೆಲೆ ಜಾಸ್ತಿಯಿದೆ. ಆದರೆ ಬೆಂಗಳೂರು ಹೊರತುಪಡಿಸಿ ಬೇರೆ ಕಡೆ ನಡೆಯುವ ಆರ್‌ಸಿಬಿ ಪಂದ್ಯದ ಟಿಕೆಟ್‌ ದರ ಕಡಿಮೆ ಇರುತ್ತದೆ.  ಇದನ್ನೂ ಓದಿ: ಅಕ್ರಮ ಬೆಟ್ಟಿಂಗ್ಆ್ಯಪ್ ಪ್ರಕರಣ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಶಿಖರ್ಧವನ್‌ಗೆ ಇಡಿ ಸಮನ್ಸ್

    ಟಿಕೆಟ್‌ ದರಗಳಿಗೆ ಸಂಬಂಧಿಸಿದಂತೆ ಐಪಿಎಲ್‌ನಲ್ಲಿ ಯಾವುದೇ ನಿಯಮಗಳು ಇಲ್ಲ. ಹೀಗಾಗಿ ಫ್ರಾಂಚೈಸಿಗಳು ಪಂದ್ಯದ ಟಿಕೆಟ್‌ ದರವನ್ನು ತಮಗೆ ಇಷ್ಟ ಬಂದಂತೆ ನಿಗದಿ ಮಾಡುತ್ತವೆ.

    ಐಪಿಎಲ್ ಮಾತ್ರವಲ್ಲ, ಪ್ರೊ ಕಬಡ್ಡಿ ಲೀಗ್ ಮತ್ತು ಇಂಡಿಯನ್ ಸೂಪರ್ ಲೀಗ್ ಕೂಡ ಟಿಕೆಟ್ ಬೆಲೆಯಲ್ಲಿ ಹೆಚ್ಚಳವಾಗಬಹುದು. 500 ರೂ. ಗಿಂತ ಹೆಚ್ಚಿಲ್ಲದ ಮಾನ್ಯತೆ ಪಡೆದ ಕ್ರೀಡಾಕೂಟಗಳು ಸೇರಿದಂತೆ ಇತರ ಕ್ರೀಡಾಕೂಟಗಳಿಗೆ ಪ್ರವೇಶಕ್ಕೆ ವಿನಾಯಿತಿ ನೀಡಲಾಗಿದೆ. ಟಿಕೆಟ್‌ ದರ 500 ರೂ.ಗಿಂತ ಜಾಸ್ತಿ ಇದ್ದರೆ ಅದಕ್ಕೆ 18% ರ ಪ್ರಮಾಣಿತ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ.

    ಈ ಬಾರಿ ಆರ್‌ಸಿಬಿ ಟಿಕೆಟ್‌ ದರ ಎಷ್ಟಿತ್ತು?
    ಕೆಐಎ ವೈರ್‌ ಮತ್ತು ಕೇಬಲ್‌ಗಳು ಎ ಸ್ಟ್ಯಾಂಡ್: 2,300 ರೂ.
    ಬೋಟ್ ಸಿ ಸ್ಟ್ಯಾಂಡ್ – 3,300
    ಪೂಮಾ ಬಿ ಸ್ಟ್ಯಾಂಡ್ 3,300
    ಟಿಕೆಟ್‌ ಜಿಟಿ ಅನೆಕ್ಸ್ – 4,000 ರೂ.
    ಕತಾರ್ ಏರ್‌ವೇಸ್ ಜಾವಗಲ್‌ ಶ್ರೀನಾಥ್ ಸ್ಟ್ಯಾಂಡ್ – 10,000 ರೂ.
    ಬಿರ್ಲಾ ಎಸ್ಟೇಟ್ ಬಿಎಸ್ ಚಂದ್ರಶೇಖರ್ ಸ್ಟ್ಯಾಂಡ್ – 15,000 ರೂ.