Tag: cricket

  • ಏಷ್ಯಾಕಪ್‌ ವಿವಾದದ ಬೆನ್ನಲ್ಲೇ ನವೆಂಬರ್‌ನಲ್ಲಿ ಪಾಕ್‌ ವಿರುದ್ಧ ಆಡಲಿದೆ ಭಾರತ

    ಏಷ್ಯಾಕಪ್‌ ವಿವಾದದ ಬೆನ್ನಲ್ಲೇ ನವೆಂಬರ್‌ನಲ್ಲಿ ಪಾಕ್‌ ವಿರುದ್ಧ ಆಡಲಿದೆ ಭಾರತ

    ಮುಂಬೈ: ಹ್ಯಾಂಡ್‌ಶೇಕ್‌, ಏಷ್ಯಾ ಕಪ್‌ (Asia Cup) ವಿವಾದದ ಬೆನ್ನಲ್ಲೇ ಮತ್ತೆ ಭಾರತ (India) ಮತ್ತು ಪಾಕಿಸ್ತಾನದ (Pakistan) ಮಧ್ಯೆ ಕ್ರಿಕೆಟ್‌ ಪಂದ್ಯ ನಡೆಯಲಿದೆ.

    ಇದೇ ನ. 7 ರಿಂದ 9 ರವರೆಗೆ ಈ ಟೂರ್ನಿ ಹಾಂಕಾಂಗ್‌ನಲ್ಲಿ ನಡೆಯಲಿದೆ. ಹಾಂಕಾಂಗ್‌ ಕ್ರಿಕೆಟ್‌ ಸಿಕ್ಸಸ್‌ (Hong Kong Cricket Sixes) ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಕುವೈತ್‌ ಒಂದೇ ಗುಂಪಿನಲ್ಲಿದೆ.

    ಹಾಂಕಾಂಗ್‌ ಸಿಕ್ಸಸ್ ಆರು ಓವರ್‌ ಪಂದ್ಯಾವಳಿಯಾಗಿದ್ದು, ಒಟ್ಟು 12 ತಂಡಗಳು ಭಾಗವಹಿಸುತ್ತಿವೆ. ಭಾರತವನ್ನು ಮಾಜಿ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಮುನ್ನಡೆಸಲಿದ್ದಾರೆ. ಕಾರ್ತಿಕ್‌ ಅಲ್ಲದೇ ಮಾಜಿ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಕೂಡ ತಂಡದ ಭಾಗವಾಗಿದ್ದಾರೆ.

    ಮೂರು ದಿನಗಳ ಈ ಪಂದ್ಯಾವಳಿಯಲ್ಲಿ ಆಫ್ರಿಕಾ, ಅಫ್ಘಾನಿಸ್ತಾನ, ನೇಪಾಳ, ಆಸ್ಟ್ರೇಲಿಯಾ, ಇಂಗ್ಲೆಂಡ್, ಯುಎಇ, ಭಾರತ, ಪಾಕಿಸ್ತಾನ, ಕುವೈತ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಹಾಂಕಾಂಗ್‌ ತಂಡಗಳು ಭಾಗವಹಿಸಲಿವೆ. ಇದನ್ನೂ ಓದಿ:  ಡ್ರೆಸ್ಸಿಂಗ್‌ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ್ಕೆ ಕ್ಯಾಪ್ಟನ್ಸಿಯಿಂದ ರಿಜ್ವಾನ್‌ ಔಟ್‌!

    ಯಾವ ರೀತಿ ಪಂದ್ಯ?
    ಹಾಂಕಾಂಗ್‌ ಸಿಕ್ಸಸ್ ತಲಾ ಆರು ಓವರ್‌ಗಳ ಪಂದ್ಯಾವಳಿಯಾಗಿದ್ದು, ಪ್ರತಿಯೊಬ್ಬ ಆಟಗಾರ (ವಿಕೆಟ್ ಕೀಪರ್ ಹೊರತುಪಡಿಸಿ) ಕನಿಷ್ಠ ಒಂದು ಓವರ್ ಬೌಲ್ ಮಾಡಬೇಕು ಮತ್ತು ಒಬ್ಬ ಆಟಗಾರನಿಗೆ ಮಾತ್ರ ಸತತವಾಗಿ ಎರಡು ಓವರ್‌ಗಳನ್ನು ಬೌಲ್ ಮಾಡುವ ಅವಕಾಶ ಸಿಗುತ್ತದೆ.

    5 ಓವರ್‌ಗಳು ಪೂರ್ಣಗೊಳ್ಳುವ ಮೊದಲು ಐದು ವಿಕೆಟ್‌ಗಳು ಪತನಗೊಂಡರೆ ಉಳಿದಿರುವ ಕೊನೆಯ ಬ್ಯಾಟ್ಸ್‌ಮನ್ ಬ್ಯಾಟಿಂಗ್ ಮಾಡುತ್ತಾನೆ ಮತ್ತು ಐದನೇ ಬ್ಯಾಟ್ಸ್‌ಮನ್ ರನ್ನರ್ ಆಗಿ ಕಾರ್ಯನಿರ್ವಹಿಸುತ್ತಾನೆ. ಕೊನೆಯ ಬ್ಯಾಟರ್‌ ಯಾವಾಗಲೂ ಸ್ಟ್ರೈಕ್ ತೆಗೆದುಕೊಳ್ಳುತ್ತಾನೆ. ಆರನೇ ವಿಕೆಟ್ ಪತನಗೊಂಡರೆ ಇನ್ನಿಂಗ್ಸ್ ಪೂರ್ಣಗೊಳ್ಳುತ್ತದೆ. ಇದನ್ನೂ ಓದಿ:  ಏಪ್ಯಾ ಕಪ್ ಗೆದ್ದ ಭಾರತಕ್ಕೆ ವಿಶ್, ಬಳಿಕ ಟ್ವಿಸ್ಟ್ ಕೊಟ್ಟ ನಖ್ವಿ!

    ಹಾಂಕಾಂಗ್‌ನಲ್ಲಿ ಕ್ರಿಕೆಟ್‌ ಜನಪ್ರಿಯಗೊಳಿಸಲು ಈ ಚುಟುಕು ಕ್ರಿಕೆಟ್ ಪಂದ್ಯಾವಳಿಯನ್ನು ಕ್ರಿಕೆಟ್‌ ಹಾಂಕಾಂಗ್‌ ಆಯೋಜಿಸುತ್ತಿದೆ.
  • ಅಭಿಷೇಕ್‌ ಶರ್ಮಾ ಔಟ್‌ ಮಾಡೋಕೆ ಕೇವಲ 3 ಎಸೆತ ಸಾಕು: ಪಾಕ್‌ ವೇಗಿ ಸವಾಲ್

    ಅಭಿಷೇಕ್‌ ಶರ್ಮಾ ಔಟ್‌ ಮಾಡೋಕೆ ಕೇವಲ 3 ಎಸೆತ ಸಾಕು: ಪಾಕ್‌ ವೇಗಿ ಸವಾಲ್

    ಮುಂಬೈ: ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾರನ್ನ (Abhishek Sharma) ಕೇವಲ 3 ಎಸೆತಗಳಲ್ಲಿ ಔಟ್‌ ಮಾಡುತ್ತೇನೆ ಎಂದು ಪಾಕಿಸ್ತಾನದ ವೇಗಿ ಇಹ್ಸಾನುಲ್ಲಾ (Ihsanullah) ಸವಾಲು ಹಾಕಿದ್ದಾರೆ.

    ಇಹ್ಸಾನುಲ್ಲಾ ಸವಾಲು ಹಾಕಿರುವ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಶರ್ಮಾ ಅವರನ್ನು ಔಟ್‌ ಮಾಡಲು ಮೂರು ಎಸೆತಗಳನ್ನು ಸಾಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದಿಲ್ಲಿಯಲ್ಲಿ ಬೌಲರ್‌ಗಳ ದರ್ಬಾರ್‌ – ಫಾಲೋ ಆನ್‌ ಬಳಿಕ ವಿಂಡೀಸ್‌ ದಿಟ್ಟ ಹೋರಾಟ; ಭಾರತಕ್ಕೆ ಇನ್ನಿಂಗ್ಸ್‌ & 97 ರನ್‌ಗಳ ಮುನ್ನಡೆ

    ಅಭಿಷೇಕ್ ಶರ್ಮಾ ನನ್ನ ವಿರುದ್ಧ ಆರು ಎಸೆತಗಳಿಗಿಂತ ಹೆಚ್ಚು ಸಮಯ ಆಡುವುದಿಲ್ಲ. ನಾನು ಅವರನ್ನು ಮೂರು ಎಸೆತಗಳಲ್ಲಿ ಔಟ್ ಮಾಡುತ್ತೇನೆ ಎಂದು ಸವಾಲೆಸೆದಿದ್ದಾರೆ.

    ಇಹ್ಸಾನುಲ್ಲಾ ಬಲಗೈ ವೇಗದ ಬೌಲರ್ ಆಗಿದ್ದು, 2023 ರಲ್ಲಿ ಮುಲ್ತಾನ್ ಸುಲ್ತಾನ್ಸ್ ಪರ 5/12 ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದಿದ್ದರು. ಪಿಎಸ್ಎಲ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಮತ್ತು ಬೌಲರ್ ಆಫ್ ದಿ ಟೂರ್ನಮೆಂಟ್ ಗೌರವಕ್ಕೂ ಭಾಜನರಾಗಿದ್ದಾರೆ. ಅವರ ಬೌಲಿಂಗ್ ವೇಗವು ಗಂಟೆಗೆ 144 ಕಿಮೀ ಸರಾಸರಿಯಲ್ಲಿದೆ. ಇದನ್ನೂ ಓದಿ: ದಿಲ್ಲಿಯಲ್ಲಿ ದರ್ಬಾರ್‌, ದಿಲ್‌ ಗೆದ್ದ ಗಿಲ್‌ – ಭಾರತದ ಹಿಡಿತದಲ್ಲಿ ಪಂದ್ಯ, ವಿಂಡೀಸ್‌ 140ಕ್ಕೆ 4 ವಿಕೆಟ್‌

    2023 ರಲ್ಲಿ ಪಾಕಿಸ್ತಾನ ಪರ T20I ಮತ್ತು ODI ಎರಡರಲ್ಲೂ ಆಡಿದ್ದರು. 2023-24ರಲ್ಲಿ ಮೊಣಕೈ ಸಮಸ್ಯೆ ಎದುರಿಸಿದರು. ಮತ್ತೆ ಅವರ ಪುನರಾಗಮನವಾಗಿಲ್ಲ. 2025 ರ ಡ್ರಾಫ್ಟ್‌ನಲ್ಲಿ ಮಾರಾಟವಾಗದಿದ್ದಕ್ಕೆ PSL ಅನ್ನು ಬಹಿಷ್ಕರಿಸುವ ಪ್ರತಿಜ್ಞೆ ಮಾಡಿದ್ದರು.

  • Live ಮೋಸ| ಟಾಸ್‌ ವಿನ್‌ ಆಗಿದ್ದು ಭಾರತ, ಬೌಲಿಂಗ್‌ ಆಯ್ಕೆ ಮಾಡಿದ್ದು ಪಾಕ್‌!

    Live ಮೋಸ| ಟಾಸ್‌ ವಿನ್‌ ಆಗಿದ್ದು ಭಾರತ, ಬೌಲಿಂಗ್‌ ಆಯ್ಕೆ ಮಾಡಿದ್ದು ಪಾಕ್‌!

    ಕೊಲಂಬೋ: ಏಷ್ಯಾ ಕಪ್‌ (Asia Cup) ಕಪ್‌ ವಿವಾದ ಜೀವಂತವಾಗಿರುವ ಬೆನ್ನಲ್ಲೇ ಭಾರತ (India) ಮತ್ತು ಪಾಕಿಸ್ತಾನ (Pakistan) ನಡುವೆ ಇಂದು ನಡೆಯುತ್ತಿರುವ ಮಹಿಳಾ ವಿಶ್ವಕಪ್‌ ( ICC Women’s World Cup) ಪಂದ್ಯದಲ್ಲಿ ದೊಡ್ಡ ಎಡವಟ್ಟಾಗಿದೆ.

    ಪ್ರೇಮದಾಸ ಕ್ರೀಡಾಂಗಣದಲ್ಲಿ ಟಾಸ್‌ ಹಾಕಲು ನಾಯಕಿಯರಾದ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಮತ್ತು ಫಾತಿಮಾ ಸನಾ ಆಗಮಿಸಿದರು. ಈ ವೇಳೆ ಇಬ್ಬರು ನಾಯಕಿಯರು ಹ್ಯಾಂಡ್‌ಶೇಕ್‌ ಮಾಡಲಿಲ್ಲ. ನಂತರ ಹರ್ಮನ್‌ಪ್ರೀತ್‌ ಕೌರ್‌  ಟಾಸ್‌ ಹಾಕಿದಾಗ ಫಾತಿಮಾ ಸನಾ ʼಟೇಲ್‌ʼ ಎಂದು ಹೇಳಿದರು. ಇದನ್ನೂ ಓದಿ: ಭಾರತಕ್ಕೆ ಏಷ್ಯಾ ಕಪ್‌ ನೀಡದ ಸಚಿವ ನಖ್ವಿಗೆ ಪಾಕ್‌ನಲ್ಲಿ ಚಿನ್ನದ ಪದಕ ನೀಡಿ ಸನ್ಮಾನಕ್ಕೆ ನಿರ್ಧಾರ

    ನಾಣ್ಯ ನೆಲಕ್ಕೆ ಬಿದ್ದ ಕೂಡಲೇ ಆಸ್ಟ್ರೇಲಿಯಾದ ನಿರೂಪಕ ಮೆಲ್ ಜೋನ್ಸ್ ʼಹೆಡ್ʼ ಎಂದು ಹೇಳಿದರು. ಆದರೆ ಐಸಿಸಿ ಮ್ಯಾಚ್ ರೆಫರಿ ಶಾಂಡ್ರೆ ಫ್ರಿಟ್ಜ್ ಪಾಕ್‌ ನಾಯಕಿಯನ್ನು ಕರೆದರು. ಫಾತಿಮಾ ಸನಾ ಕೂಡಲೇ ನಾವು ಬೌಲಿಂಗ್‌ ಆಯ್ಕೆ ಮಾಡುತ್ತೇವೆ ಎಂದು ಹೇಳಿದ್ದರಿಂದ ಭಾರತದ ಆಟಗಾರ್ತಿಯರು ಬ್ಯಾಟಿಂಗ್‌ಗೆ ಇಳಿದರು. ಇದನ್ನೂ ಓದಿ:  ಮಹಿಳಾ ವಿಶ್ವಕಪ್‌ನಲ್ಲೂ ನೋ ಹ್ಯಾಂಡ್‌ಶೇಕ್‌ – ಪಾಕ್‌ ತಂಡಕ್ಕೆ ಮತ್ತೆ ಮುಖಭಂಗ

    ಹರ್ಮನ್‌ಪ್ರೀತ್‌ ಕೌರ್‌ ಸಹ ರೆಫ್ರಿ ನಿರ್ಧಾರಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲ. ಕೌರ್‌ ಅವರಿಗೆ ಟಾಸ್‌ನಲ್ಲಿ ಎಡವಟ್ಟಾಗಿದ್ದು ಗೊತ್ತಿತ್ತಾ? ಒಂದು ವೇಳೆ ಗೊತ್ತಿದ್ದರೂ ರೆಫ್ರಿ ನಿರ್ಧಾರವನ್ನು ವಿರೋಧಿಸಲಿಲ್ವಾ ಎಂಬ ಪ್ರಶ್ನೆಗೆ ಪಂದ್ಯ ಮುಗಿದ ಬಳಿಕ ಉತ್ತರ ಸಿಗಲಿದೆ.

    ರೆಫ್ರಿ ಶಾಂಡ್ರೆ ಫ್ರಿಟ್ಜ್ ಯಾಕೆ ತಪ್ಪು ನಿರ್ಧಾರ ಕೈಗೊಂಡರು? ಟೇಲ್‌ ಎಂದು ಹೇಳಿದರೂ ಫಾತಿಮಾ ಸನಾ ಹೋಗಿದ್ದು ಯಾಕೆ ಎಂದು ನೆಟ್ಟಿಗರು ಈಗ ಪ್ರಶ್ನೆ ಮಾಡುತ್ತಿದ್ದಾರೆ.

    ಒಂದು ವೇಳೆ ಪಾಕಿಸ್ತಾನ ಟಾಸ್‌ ಗೆದ್ದು ರೆಫ್ರಿ ಹರ್ಮನ್‌ ಪ್ರೀತ್‌ ಕೌರ್‌ ಅವರನ್ನು ಕರೆದಿದ್ದರೆ ಇಷ್ಟು ಹೊತ್ತಿಗೆ ಐಸಿಸಿಯನ್ನು ಬಿಸಿಸಿಐ ಖರೀದಿಸಿದೆ ಎಂಬ ಟ್ರೆಂಡ್‌ ಆರಂಭವಾಗುತ್ತಿತ್ತು. ಜಯ್‌ ಶಾ ಅಧ್ಯಕ್ಷರಾಗಿರುವ ಕಾರಣ ಐಸಿಸಿ ಹೇಗೆ ಬೇಕಾದರೂ ಪಂದ್ಯವನ್ನು ಬದಲಾಯಿಸುತ್ತಾರೆ ಎನ್ನುವುದಕ್ಕೆ ಇದು ಸಾಕ್ಷಿ ಎಂಬ ಕಮೆಂಟ್‌ ಪಾಕ್‌ ಪರವಾಗಿ ಬರುತ್ತಿದ್ದವು ಎಂದು ಕ್ರಿಕೆಟ್‌ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

  • ಮಹಿಳಾ ವಿಶ್ವಕಪ್‌ನಲ್ಲೂ ನೋ ಹ್ಯಾಂಡ್‌ಶೇಕ್‌ – ಪಾಕ್‌ ತಂಡಕ್ಕೆ ಮತ್ತೆ ಮುಖಭಂಗ

    ಮಹಿಳಾ ವಿಶ್ವಕಪ್‌ನಲ್ಲೂ ನೋ ಹ್ಯಾಂಡ್‌ಶೇಕ್‌ – ಪಾಕ್‌ ತಂಡಕ್ಕೆ ಮತ್ತೆ ಮುಖಭಂಗ

    ಕೊಲಂಬೊ: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಪುರುಷರ ಟಿ20 ಏಷ್ಯಾಕಪ್‌ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳಲ್ಲಿ ಸಾಕಷ್ಟು ವಿವಾದಗಳು ಕಂಡುಬಂದಿತ್ತು. ಆದ್ರೆ ಟೀಂ ಇಂಡಿಯಾ (Team India) ಲೀಗ್‌, ಸೂಪರ್‌-4 ಹಾಗೂ ಫೈನಲ್‌ನಲ್ಲಿ ಪಾಕ್‌ಗೆ ಸೋಲುಣಿಸುವ ಮೂಲಕ ತಿರುಗೇಟು ಕೊಟ್ಟಿತು. ಇದೀಗ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಗೂ ವಿವಾದ ಕಾಲಿಟ್ಟಿದೆ.

    ಈ ಬಾರಿ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿ ಭಾರತದ ಆತಿಥ್ಯದಲ್ಲೇ ಇದ್ದರೂ, ಪಾಕ್‌ ಜೊತೆಗಿನ ಸಂಘರ್ಷದಿಂದಾಗಿ ಶ್ರೀಲಂಕಾದಲ್ಲಿ ನಡೆಸಲಾಗುತ್ತಿದೆ. ಇಂದು ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ಮತ್ತು ಪಾಕ್‌ ಮುಖಾಮುಖಿಯಾಗಿವೆ. ಟಾಸ್‌ ಗೆದ್ದ ಪಾಕ್‌ ನಾಯಕಿ ಫಾತಿಮಾ ಸನಾ (Fatima Sana) ಮೊದಲು ಫೀಲ್ಡಿಂಗ್‌ ಆಯ್ದುಕೊಂಡಿದ್ದು, ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಭಾರತಕ್ಕೆ ಬಿಟ್ಟುಕೊಟ್ಟಿದ್ದಾರೆ. ಆದ್ರೆ ಟಾಸ್‌ ವೇಳೆ ಟೀಂ ಇಂಡಿಯಾ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ (Harmanpreet Kaur) ಪಾಕ್‌ ನಾಯಕಿಯ ಕೈಕುಲುಕದೇ ಹಿಂದೆ ಸರಿದಿದ್ದಾರೆ. ಇದು ಪಾಕ್‌ ತಂಡಕ್ಕೆ ಮತ್ತೆ ಮುಜುಗರ ತರಿಸಿದೆ.

    ಟೀಂ ಇಂಡಿಯಾ ಪ್ಲೇಯಿಂಗ್‌-11
    ಪ್ರತೀಕಾ ರಾವಲ್, ಸ್ಮೃತಿ ಮಂಧಾನ, ಹರ್ಲಿನ್‌ ಡಿಯೋಲ್‌, ಹರ್ಮನ್‌ ಪ್ರೀತ್‌ ಕೌರ್‌ (ನಾಯಕಿ), ಜೆಮಿಮಾ ರೊಡ್ರಿಗ್ಸ್‌, ದೀಪ್ತಿ ಶರ್ಮಾ, ರಿಚಾ ಘೋಷ್‌, ಸ್ನೇಹ್‌ ರಾಣಾ, ರೇಣುಕಾ ಸಿಂಗ್‌, ಕ್ರಾಂತಿ ಗೌಡ್‌, ಶ್ರೀ ಚಾರಣಿ.

    ಪಾಕ್‌ ಪ್ಲೇಯಿಂಗ್‌-11
    ಮುನಿಬಾ ಅಲಿ, ಸದಾಫ್ ಶಮಾಸ್, ಸಿದ್ರ್ ಅಮೀನ್, ರಮೆನ್ ಶಮೀಮ್, ಆಲಿಯಾ ರಿಯಾಜ್, ಸಿದ್ಧ ನವಾಜ್, ಫಾತಿಮಾ ಸನಾ (ನಾಯಕಿ), ನಟಾಲಿಯಾ ಪರ್ವೈಜ್, ಡಯಾನಾ ಬೇಗ್, ನಶ್ರ್ ಸಂಧು, ಸಾಲಿಯಾ ಇಕ್ಬಾಲ್.

  • 1 ಗಂಟೆ ಹೈಡ್ರಾಮಾ, ಟ್ರೋಫಿ ಜೊತೆ ಓಡಿದ ನಖ್ವಿ – ಮಧ್ಯರಾತ್ರಿ ಏನಾಯ್ತ? ಇಲ್ಲಿದೆ ಪೂರ್ಣ ವಿವರ

    1 ಗಂಟೆ ಹೈಡ್ರಾಮಾ, ಟ್ರೋಫಿ ಜೊತೆ ಓಡಿದ ನಖ್ವಿ – ಮಧ್ಯರಾತ್ರಿ ಏನಾಯ್ತ? ಇಲ್ಲಿದೆ ಪೂರ್ಣ ವಿವರ

    ದುಬೈ: ಏಷ್ಯಾ ಕಪ್‌ (Asia Cup) ಫೈನಲ್‌ ಗೆದ್ದ ಬಳಿಕ ಸುಮಾರು 1 ಗಂಟೆಗಳ ಕಾಲ ದುಬೈ ಮೈದಾನದಲ್ಲಿ ದೊಡ್ಡ ಹೈಡ್ರಾಮಾವೇ ನಡೆಯಿತು. ಅಂತಿಮವಾಗಿ ಭಾರತ (Team India) ತಂಡಕ್ಕೆ ಟ್ರೋಫಿ ನೀಡದೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧ್ಯಕ್ಷ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷ ಮೊಹ್ಸಿನ್ ನಖ್ವಿ ಮುಜುಗರ ಅನುಭವಿಸಿದರು.

    ಮಧ್ಯ ರಾತ್ರಿ ಏನಾಯ್ತು?
    ಮಧ್ಯರಾತ್ರಿ 12 ಗಂಟೆಯ ವೇಳೆಗೆ ಪಾಕ್‌ ತಂಡವನ್ನು ಸೋಲಿಸಿ ಭಾರತ ಚಾಂಪಿಯನ್‌ ಪಟ್ಟ ಅಲಂಕರಿಸಿತು. ಜಯಗಳಿಸಿದ ಬಳಿಕ ಪಿಸಿಬಿ ಅಧ್ಯಕ್ಷ ಮೊಹ್ಸಿನ್‌ ನಖ್ವಿ ಅವರಿಂದ ಪೋಡಿಯಂನಲ್ಲಿ ಪ್ರಶಸ್ತಿಯನ್ನು ಸೂರ್ಯಕುಮಾರ್‌ ಸ್ವೀಕರಿಸುವುದಿಲ್ಲ ಬಿಸಿಸಿಐ ಎಸಿಸಿಗೆ ಹೇಳಿತು. ವೇದಿಕೆಯ ಮೇಲಿದ್ದ ಬೇರೆ ಗಣ್ಯರಿಂದ ಪ್ರಶಸ್ತಿಯನ್ನು ವಿತರಿಸುವಂತೆ ಮನವಿ ಮಾಡಿತು.

    ಈ ವಿಚಾರವನ್ನು ಎಸಿಸಿ ನಖ್ವಿ ಬಳಿ ಹೇಳಿದಾಗ, ಪ್ರಶಸ್ತಿಯನ್ನು ನೀಡುವುದಾದರೆ ನಾನೇ ನೀಡುತ್ತೇನೆ. ಬೇರೆಯವರು ಪ್ರಶಸ್ತಿ ನೀಡಲು ನಾನು ಒಪ್ಪಿಗೆ ನೀಡುವುದಿಲ್ಲ ಎಂದು ಹೇಳಿದರು. ಈ ವಿಚಾರದ ಬಗ್ಗೆ ಎಸಿಸಿ ಮತ್ತು ಪಿಸಿಬಿ ಮಧ್ಯೆ ದೊಡ್ಡ ಚರ್ಚೆ ನಡೆಯುತ್ತಲೇ ಇತ್ತು.

    ಭಾರತ ನಖ್ವಿಯಿಂದ ಪ್ರಶಸ್ತಿ ಸ್ವೀಕರಿಸದೇ ಇರಲು ಕಾರಣ ಸಹ ಇದೆ. ಮೊದಲಿನಿಂದಲೂ ಭಾರತವನ್ನು ಕಟು ಪದಗಳಿಂದ ಟೀಕಿಸುತ್ತಿದ್ದ ನಖ್ವಿ ಏಷ್ಯಕಪ್‌ನಲ್ಲೂ ಟೀಂ ಇಂಡಿಯಾದ ವಿರುದ್ಧ ಕಿಡಿಕಾರಿದ್ದರು. ಈ ಕಾರಣಕ್ಕೆ ಭಾರತ ನಖ್ವಿಯಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿತ್ತು.

    ಇನ್ನೊಂದು ಕಡೆ ಸೋತ ಬಳಿಕ ಡ್ರೆಸ್ಸಿಂಗ್‌ ರೂಂ ಒಳಗಡೆ ಹೋದ ಪಾಕ್‌ ಆಟಗಾರರು ಹೊರಗೆ ಬರಲೇ ಇಲ್ಲ. ಇದರಿಂದಾಗಿ ಪ್ರಶಸ್ತಿ ವಿತರಣಾ ಕಾರ್ಯಕ್ರಮ ತಡವಾಯಿತು. ಪಂದ್ಯ ಮುಗಿದರೂ ಪ್ರಶಸ್ತಿ ವಿತರಣೆಯಾಗದ್ದಕ್ಕೆ ಕಮೆಂಟ್ರಿ ಹೇಳುತ್ತಿದ್ದ ರವಿಶಾಸ್ತ್ರಿ, ಪಂದ್ಯ ಮುಗಿದು 45 ನಿಮಿಷವಾಯಿತು. ಮೈದಾನದಿಂದ ಅಭಿಮಾನಿಗಳು ಹೊರ ಹೋಗುತ್ತಿದ್ದು, ಆಟಗಾರರು ಕಾಯುತ್ತಿದ್ದಾರೆ. ಏನು ನಡೆಯುತ್ತಿದೆ ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ಹೊರಹಾಕಿದರು.  ಇದನ್ನೂ ಓದಿ:  Asia Cup 2025 | ಚಾಂಪಿಯನ್‌ ಭಾರತ ತಂಡಕ್ಕೆ ಬಿಸಿಸಿಐನಿಂದ 21 ಕೋಟಿ ಗಿಫ್ಟ್‌

    ಅಂತಿಮವಾಗಿ ಸುಮಾರು 1 ಗಂಟೆಯ ನಂತರ ಪಾಕ್‌ ಆಟಗಾರರು ಮೈದಾನಕ್ಕೆ ಆಗಮಿಸಿದ ಬಳಿಕ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಆರಂಭವಾಯಿತು. ಕುಲದೀಪ್‌ ಯಾದವ್‌, ತಿಲಕ್‌ ವರ್ಮಾ, ಅಭಿಷೇಕ್‌ ಶರ್ಮಾ ಪ್ರಶಸ್ತಿಗಳನ್ನು ಸ್ವೀಕರಿಸಿದ ಬಳಿಕ ಪಾಕ್‌ ತಂಡಕ್ಕೆ ರನ್ನರ್‌ ಅಪ್‌ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ನಂತರ ಎರಡೂ ಕಡೆಯ ನಾಯಕರನ್ನು ಸೈಮನ್ ಡೌಲ್ ಕರೆಸಿ ಮಾತನಾಡಿದರು. ಕೊನೆಗೆ “ಭಾರತೀಯ ಕ್ರಿಕೆಟ್ ತಂಡವು ಇಂದು ರಾತ್ರಿ ತಮ್ಮ ಪ್ರಶಸ್ತಿಗಳನ್ನು ಪಡೆಯುವುದಿಲ್ಲ ಎಂದು ಎಸಿಸಿಯಿಂದ ನನಗೆ ತಿಳಿಸಲಾಗಿದೆ. ಹೀಗಾಗಿ ಇಲ್ಲಿಗೆ ಈ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಮುಕ್ತಾಯವಾಗಲಿದೆ” ಎಂದು ಹೇಳಿದರು. ಬೆನ್ನಲ್ಲೇ ವೇದಿಕೆಯಲ್ಲಿದ್ದ ಗಣ್ಯರು ಮೈದಾನವನ್ನು ತೊರೆದರು. ನಖ್ವಿ ತೊರೆಯುತ್ತಿದ್ದಂತೆ ಎಸಿಸಿ ಅಧಿಕಾರಿಯೊಬ್ಬರು ಟ್ರೋಫಿಯನ್ನು ಎತ್ತಿಕೊಂಡು ಮೈದಾನದಿಂದ ಹೊರಹೋದರು. ಇದನ್ನೂ ಓದಿ:  ಯುದ್ಧವನ್ನ ಕ್ರೀಡೆಗೆ ಎಳೆದು ತರೋದು ಹತಾಶೆಯನ್ನ ತೋರಿಸುತ್ತೆ – ಮೋದಿ ಟ್ವೀಟ್‌ಗೆ ನಖ್ವಿ ರಿಯಾಕ್ಷನ್‌

    ಭಾರತೀಯ ತಂಡವು ಟ್ರೋಫಿಗಾಗಿ ಬಹಳ ತಾಳ್ಮೆಯಿಂದ ಕಾಯುತ್ತಿತ್ತು. ʼಚಾಂಪಿಯನ್ಸ್ʼ ಎಂದು ಬರೆದ ಫಲಕವನ್ನು ಮೈದಾನದ ಸಿಬ್ಬಂದಿ ಎರಡು ಬಾರಿ ತಂದು ನಂತರ ಹಿಂದಕ್ಕೆ ತೆಗೆದುಕೊಂಡು ಹೋದರು. ಕಾರ್ಯಕ್ರಮ ಮುಗಿದ ಬಳಿಕ ಟ್ರೋಫಿ ಎತ್ತಿಕೊಂಡು ಹೋದರೂ ಟೀಂ ಇಂಡಿಯಾ ಆಟಗಾರರು ಮೈದಾನದಲ್ಲೇ ಇದ್ದು ಫೋಟೋ ಕ್ಲಿಕ್ಕಿಸಿ ಸಂಭ್ರಮಿಸುತ್ತಿದ್ದರು. ಕೆಲವರು ಅಭಿಮಾನಿಗಳ ಬಳಿ ಹೋಗಿ ಕೈ ಎತ್ತಿ ವಿಜಯದ ನಗೆ ಬೀರುತ್ತಿದ್ದರು.

    ಈ ಸಂದರ್ಭದಲ್ಲಿ ಹಾರ್ದಿಕ್‌ ಪಾಂಡ್ಯ ಪೋಡಿಯಂ ಹತ್ತಿ ಸೆಲ್ಫಿ ತೆಗೆಯತೊಡಗಿದರು. ನಂತರ ಉಳಿದ ಆಟಗಾರರು ಪೋಡಿಯಂ ಮೇಲೆ ಹತ್ತಿದರು. ಎಲ್ಲರೂ ಪೋಡಿಯಂನಲ್ಲಿ ಇರುವಾಗ ನಾಯಕ ಸೂರ್ಯಕುಮಾರ್‌ ಯಾದವ್‌ ಅವರು ರೋಹಿತ್ ಶರ್ಮಾ ಅವರ ಐಕಾನಿಕ್ ಟಿ20 ವಿಶ್ವಕಪ್ 2024 ರ ನಡಿಗೆಯನ್ನು ಅನುಕರಿಸುತ್ತಾ ಕಾಲ್ಪನಿಕ ಟ್ರೋಫಿಯನ್ನು ಹಿಡಿದುಕೊಂಡು ತಂಡದ ಬಳಿ ಬಂದು ಕೈಯನ್ನು ಎತ್ತಿ ಟ್ರೋಫಿ ಎತ್ತಿದ್ದಂತೆ ಸಂಭ್ರಮಿಸಿದರು. ಈ ಸಂಭ್ರಮಾಚರಣೆಗೆ ಉಳಿದ ಆಟಗಾರರು ಜೊತೆಗೂಡಿದರು.

    ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಟ್ರೋಫಿಯನ್ನು ನೀಡದ್ದಕ್ಕೆ ಸೂರ್ಯಕುಮಾರ್‌ ಯಾದವ್‌ ಎಸಿಸಿಯನ್ನು ಟೀಕಿಸಿದರು. ನಾನು ಎಲ್ಲಿಯೂ ಚಾಂಪಿಯನ್ ತಂಡಕ್ಕೆ ಟ್ರೋಫಿ ನಿರಾಕರಿಸುವುದನ್ನು ನೋಡಿಲ್ಲ. ನಾವು ಬಹಳ ಕಷ್ಟಪಟ್ಟು ಚಾಂಪಿಯನ್‌ ಆಗಿದ್ದೇವೆ ಎಂದು ಹೇಳಿದರು. ಇದಕ್ಕೆ ಅಭಿಷೇಕ್‌ ಶರ್ಮಾ, ನಮಗೆ ಒಂದು ಟ್ರೋಫಿ ಸಿಕ್ಕಿದೆ. ಸೂರ್ಯ ತಂದು ಕೊಟ್ಟಿದ್ದು ನಾವು ಸಂಭ್ರಮಿಸಿದ್ದೇವೆ. ಆ ಟ್ರೋಫಿಯ ತೂಕದ ಮಹತ್ವ ನಮಗೆ ತಿಳಿದಿದೆ ಎಂದು ಹೇಳುವ ಮೂಲಕ ನಖ್ವಿಗೆ ಟಾಂಗ್‌ ನೀಡಿದರು.

    ಭಾರತದ ಬಿಸಿಸಿಐ ಪ್ರತಿನಿಧಿಗಳು ಫೈನಲ್‌ ಪಂದ್ಯ ವೀಕ್ಷಿಸಲು ದುಬೈಗೆ ಮೈದಾನಕ್ಕೆ ಬಂದಿರಲಿಲ್ಲ. ಭಾನುವಾರ ಬಿಸಿಸಿಐ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಮಿಥುನ್‌ ಮನ್ಹಾಸ್ ಅವರನ್ನು ಅವಿರೋಧವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಫೈನಲ್‌ ಪಂದ್ಯದ ಬಳಿಕ ನಡೆದ ಪ್ರಶಸ್ತಿ ವಿತರಣಾ ವೇದಿಕೆಯಲ್ಲಿ ಬಿಸಿಸಿಐ ಪ್ರತಿನಿಧಿ ಇರಬೇಕಿತ್ತು. ಆದರೆ ಚುನಾವಣೆ ನೆಪದಲ್ಲಿ ಬಿಸಿಸಿಐ ಪ್ರತಿನಿಧಿಗಳು ನಿನ್ನೆ ದುಬೈ ಮೈದಾನದಲ್ಲಿ ಕಾಣಿಸದೇ ಫೈನಲ್‌ ಪಂದ್ಯದಿಂದ ಅಂತರವನ್ನು ಕಾಯ್ದುಕೊಂಡಿದ್ದರು.

  • ಯುದ್ಧವನ್ನ ಕ್ರೀಡೆಗೆ ಎಳೆದು ತರೋದು ಹತಾಶೆಯನ್ನ ತೋರಿಸುತ್ತೆ – ಮೋದಿ ಟ್ವೀಟ್‌ಗೆ ನಖ್ವಿ ರಿಯಾಕ್ಷನ್‌

    ಯುದ್ಧವನ್ನ ಕ್ರೀಡೆಗೆ ಎಳೆದು ತರೋದು ಹತಾಶೆಯನ್ನ ತೋರಿಸುತ್ತೆ – ಮೋದಿ ಟ್ವೀಟ್‌ಗೆ ನಖ್ವಿ ರಿಯಾಕ್ಷನ್‌

    – ಪಾಕ್‌ನಿಂದ ಅನುಭವಿಸಿದ ಅವಮಾನಕರ ಸೋಲುಗಳನ್ನ ಇತಿಹಾಸ ದಾಖಲಿಸಿದೆ ಎಂದ ಸಚಿವ

    ಇಸ್ಲಾಮಾಬಾದ್‌/ದುಬೈ: ಯುದ್ಧವನ್ನು ಕ್ರೀಡೆಗೆ ಎಳೆದು ತರುವುದು ಹತಾಶೆಯನ್ನು ತೋರಿಸುತ್ತದೆ ಎಂದು ಪಾಕಿಸ್ತಾನದ ಸಚಿವ ಹಾಗೂ ಏಷ್ಯನ್‌ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ (Mohsin Naqvi) ಹೇಳಿದ್ದಾರೆ.

    ಭಾನುವಾರ ಏಷ್ಯಾಕಪ್‌ ಟೂರ್ನಿಯ ಫೈನಲ್‌ನಲ್ಲಿ ಭಾರತ ಗೆದ್ದ ಬಳಿಕ ಪ್ರಧಾನಿ ಮೋದಿ (PM Modi) ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನ ಹಂಚಿಕೊಂಡಿದ್ದರು. ʻಕ್ರೀಡಾ ಮೈದಾನದಲ್ಲೂ ಆಪರೇಷನ್ ಸಿಂಧೂರʼ (Operation Sindoor) ಫಲಿತಾಂಶ ಒಂದೇ – ಭಾರತ ಗೆಲ್ಲುತ್ತದೆ ಎಂದು ಆಟಗಾರರಿಗೆ ಶುಭಕೋರಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಖ್ವಿ, ಯುದ್ಧವನ್ನು ಕ್ರೀಡೆಗೆ ಎಳೆದು ತರೋದು ಹತಾಶೆ ತೋರಿದ್ದಾರೆಂದು ಬರೆದುಕೊಂಡಿದ್ದಾರೆ.

    ಯುದ್ಧವೇ ನಿಮ್ಮ ಮಾನದಂಡವಾಗಿದ್ದರೆ, ಪಾಕಿಸ್ತಾನದ (Pakistan) ಕೈಯಲ್ಲಿ ನೀವು ಅನುಭವಿಸಿದ ಅವಮಾನಕರ ಸೋಲುಗಳನ್ನ ಇತಿಹಾಸವು ಈಗಾಗಲೇ ದಾಖಲಿಸಿದೆ. ಯಾವುದೇ ಕ್ರಿಕೆಟ್ ಪಂದ್ಯವು ಆ ಸತ್ಯವನ್ನ ಪುನಃ ಬರೆಯಲು ಸಾಧ್ಯವಿಲ್ಲ. ಆದ್ರೆ ಯುದ್ಧವನ್ನ ಕ್ರೀಡೆಗೆ ಎಳೆದುತರುವುದು ಹತಾಶೆಯನ್ನು ಬಹಿರಂಗಪಡಿಸುತ್ತದೆ. ಜೊತೆಗೆ ಆಟದ ಸ್ಫೂರ್ತಿ ಮತ್ತು ಗೌರವವನ್ನು ಅವಮಾನಿಸುತ್ತದೆ ಎಂದು ನಖ್ವಿ ತಿರುಗೇಟು ನೀಡಿದ್ದಾರೆ.

    ಮೈದಾನದಲ್ಲಿ ಭಾರೀ ಹೈಡ್ರಾಮಾ
    ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಗೆದ್ದರೂ, ಏಷ್ಯಾ ಕಪ್ ಟ್ರೋಫಿ ತಂಡದ ಕೈ ಸೇರಿಲ್ಲ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷ ಮತ್ತು ಪಾಕಿಸ್ತಾನದ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಇಂಡಿಯಾ ತಂಡ ನಿರಾಕರಿಸಿದ ಕಾರಣ ವಿಜೇತ ತಂಡಕ್ಕೆ ಟ್ರೋಫಿಯನ್ನು ನೀಡದ ವಿಚಿತ್ರ ಘಟನೆ ನಡೆಯಿತು. ತಡರಾತ್ರಿ ನಡೆದ ಈ ನಾಟಕೀಯ ಬೆಳವಣಿಗೆಯಿಂದಾಗಿ, ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತೀಯ ತಂಡವು ಟ್ರೋಫಿ ಇಲ್ಲದೆಯೇ ತಮ್ಮ ವಿಜಯ ಆಚರಿಸಬೇಕಾಯಿತು.

    ಭಾನುವಾರ ನಡೆದ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಮಣಿಸಿದ ಭಾರತ, ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ಕಾಯುತ್ತಿತ್ತು. ಆದರೆ, ವಿಜೇತರ ಟ್ರೋಫಿಯನ್ನು ಯಾರು ನೀಡುತ್ತಾರೆ ಎಂದು ಭಾರತೀಯ ತಂಡದ ಆಡಳಿತ ಮಂಡಳಿ ವಿಚಾರಿಸಿದಾಗ, ಅದು ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಎಂದು ತಿಳಿದು ಬಂತು. ಪಾಕಿಸ್ತಾನಿ ಸಚಿವರಾಗಿರುವ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಭಾರತ ತಂಡವು ಸ್ಪಷ್ಟವಾಗಿ ನಿರಾಕರಿಸಿತು.

    ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಳಂಬ
    ಈ ಹಿನ್ನೆಲೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ಬಹಳ ವಿಳಂಬವಾಗಿ ನಡೆಯಿತು. ನಖ್ವಿ ವೇದಿಕೆಯ ಮೇಲೆ ಬಂದು ನಿಂತಾಗ, ಭಾರತೀಯ ಆಟಗಾರರು ಸುಮಾರು 15 ಗಜಗಳಷ್ಟು ದೂರದಲ್ಲಿಯೇ ನಿಂತು, ಮುಂದೆ ಬರಲು ಒಪ್ಪಲೇ ಇಲ್ಲ. ಈ ಸಂದರ್ಭದಲ್ಲಿ, ಇನ್ನೂ ಕ್ರೀಡಾಂಗಣದಲ್ಲಿದ್ದ ಭಾರತೀಯ ಅಭಿಮಾನಿಗಳು ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗುತ್ತಾ ನಖ್ವಿಯವರನ್ನು ಹೀಯಾಳಿಸಿದರು.

  • ಮತ್ತೆ ಪಾಕಿಗೆ ನೋ ಎಂದ ಸ್ಕೈ – ನಾನು ಏನು ಹೇಳಲ್ಲ ಎಂದ ಸಲ್ಮಾನ್ ಅಲಿ

    ಮತ್ತೆ ಪಾಕಿಗೆ ನೋ ಎಂದ ಸ್ಕೈ – ನಾನು ಏನು ಹೇಳಲ್ಲ ಎಂದ ಸಲ್ಮಾನ್ ಅಲಿ

    ದುಬೈ: ಏಷ್ಯಾ ಕಪ್‌ ಫೈನಲ್‌ (Asia Cup Final) ಫೋಟೋಶೂಟ್‌ನಲ್ಲಿ ಭಾಗವಹಿಸದ ಮೂಲಕ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್‌ ಯಾದವ್‌ (Suryakumar Yadav) ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

    ಐಸಿಸಿ, ಏಷ್ಯಾಕಪ್‌ನಂತಹ ಪ್ರತಿಷ್ಠಿತ ಟೂರ್ನಿಯ ಫೈನಲ್‌ ಪಂದ್ಯಕ್ಕೂ ಮೊದಲು ಎರಡು ತಂಡಗಳ ನಾಯಕರು ಕಪ್‌ ಜೊತೆ ನಿಂತುಕೊಂಡು ಫೋಟೋಶೂಟ್‌ ಮಾಡಿಸುತ್ತಾರೆ. ಆದರೆ ಈ ಬಾರಿ ಸೂರ್ಯಕುಮಾರ್‌ ಯಾದವ್‌ ಫೋಟೋಶೂಟ್‌ಗೆ (Photoshoot) ʼನೋʼ ಎಂದಿದ್ದಾರೆ.  ಇದನ್ನೂ ಓದಿ:  ಏಷ್ಯಾ ಕಪ್‌ಗಾಗಿ ಇಂದು ಭಾರತ-ಪಾಕ್‌ ಸಮರ – 41 ವರ್ಷಗಳ ಇತಿಹಾಸಲ್ಲೇ ಫೈನಲ್‌ನಲ್ಲಿ ಮೊದಲ ಮುಖಾಮುಖಿ

    ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನ (Pakistan) ನಾಯಕ ಸಲ್ಮಾನ್ ಅಲಿ ಆಘಾ, ಫೋಟೋಶೂಟ್ ನಲ್ಲಿ ಭಾಗವಹಿಸಬೇಕೆ ಅಥವಾ ಬೇಡವೇ ಎಂಬುದು ಸೂರ್ಯಕುಮಾರ್ ಅವರ ನಿರ್ಧಾರ. ಈ ವಿಚಾರದ ಬಗ್ಗೆ ನಾನು ಏನು ಹೇಳಲಾರೆ ಎಂದು ತಿಳಿಸಿದರು.

    ಈ ಬಾರಿಯ ಏಷ್ಯಾ ಕಪ್‌ನಲ್ಲಿ ಭಾರತ ಪಾಕಿಸ್ತಾನ ಮೂರನೇ ಬಾರಿ ಮುಖಾಮುಖಿಯಾಗುತ್ತಿವೆ. ಲೀಗ್‌ ಮತ್ತು ಸೂಪರ್‌ 4 ಎರಡೂ ಪಂದ್ಯಗಳಲ್ಲಿ ಭಾರತವೇ ಜಯಗಳಿಸಿದೆ. ಅಷ್ಟೇ ಅಲ್ಲದೇ ಭಾರತ ಅಜೇಯವಾಗಿ ಫೈನಲ್‌ ಪ್ರವೇಶಿಸಿದೆ.

  • ಕೊನೆಯಲ್ಲಿ ಬೌಲರ್‌ಗಳ ಮ್ಯಾಜಿಕ್‌ – ಸೂಪರ್‌ ಓವರ್‌ನಲ್ಲಿ ಭಾರತಕ್ಕೆ ರೋಚಕ ಜಯ

    ಕೊನೆಯಲ್ಲಿ ಬೌಲರ್‌ಗಳ ಮ್ಯಾಜಿಕ್‌ – ಸೂಪರ್‌ ಓವರ್‌ನಲ್ಲಿ ಭಾರತಕ್ಕೆ ರೋಚಕ ಜಯ

    ದುಬೈ: ಏಷ್ಯಾಕಪ್‌ (Asia Cup) ಸೂಪರ್‌4 ಸೂಪರ್‌ ಓವರ್‌ನಲ್ಲಿ ಶ್ರೀಲಂಕಾ (Sri Lanka) ವಿರುದ್ಧ ಭಾರತ (Team India) ಜಯಗಳಿಸಿ ಅಜೇಯವಾಗಿ ಫೈನಲ್‌ ಪ್ರವೇಶಿಸಿದೆ.

    ಆಟಕ್ಕುಂಟು ಲೆಕ್ಕಕ್ಕೆ ಇಲ್ಲದ ಪಂದ್ಯದಲ್ಲಿ ಪಾತುಮ್ ನಿಸ್ಸಂಕ (Pathum Nissanka) ಅವರ ಸ್ಫೋಟಕ ಶತಕ, ಕುಸಾಲ್ ಪೆರೆರಾ (Kusal Perera) ಅವರ ಅರ್ಧಶತಕದ ನೆರವಿನಿಂದ ಶ್ರೀಲಂಕಾ 5 ವಿಕೆಟ್‌ ನಷ್ಟಕ್ಕೆ 202 ರನ್‌ ಗಳಿಸುವ ಮೂಲಕ ಪಂದ್ಯ ಟೈನಲ್ಲಿ ಅಂತ್ಯವಾಯಿತು. ಆದರೆ ಸೂಪರ್‌ ಓವರ್‌ನಲ್ಲಿ ಸೂರ್ಯ ಕುಮಾರ್‌ ಮೊದಲ ಎಸೆತದಲ್ಲಿ 3 ರನ್‌ ಹೊಡೆಯುವ ಮೂಲಕ ಭಾರತ ರೋಚಕ ಜಯ ಗಳಿಸಿತು.

    ಸೂಪರ್‌ ಓವರ್‌ ಹೇಗಿತ್ತು?
    ಆರ್ಶ್‌ದೀಪ್‌ ಎಸೆದ ಮೊದಲ ಓವರ್‌ ಮೊದಲ ಎಸೆತವನ್ನು ಕುಸಲ್ ಪೆರೆರಾ ಸಿಕ್ಸ್‌ ಹೊಡೆಯಲು ಹೋಗಿ ರಿಂಕು ಸಿಂಗ್‌ಗೆ ಕ್ಯಾಚ್‌ ನೀಡಿದರು. ನಂತರ ಎರಡನೇ ಎಸೆತದಲ್ಲಿ ಒಂದು ರನ್‌ ಬಂತು. ನಂತರದ ಎರಡು ಎಸೆತದಲ್ಲಿ ಯಾವುದೇ ರನ್‌ ಬರಲಿಲ್ಲ. 4ನೇ ಎಸೆತ ವೈಡ್‌ ಆಯ್ತು. ನಂತರ ಎಸೆತದಲ್ಲಿ ಯಾವುದೇ ರನ್‌ ಬರಲಿಲ್ಲ. 5 ಎಸೆತದಲ್ಲಿ ಶನಕ ಸಿಕ್ಸ್‌ ಸಿಡಿಸಲು ಹೋಗಿ ಜಿತೇಶ್‌ ಶರ್ಮಾಗೆ ಕ್ಯಾಚ್‌ ನೀಡಿದರು. ಸೂಪರ್‌ ಓವರ್‌ನಲ್ಲಿ ಎರಡು ವಿಕೆಟ್‌ ಪತನಗೊಂಡರೆ ಇನ್ನಿಂಗ್ಸ್‌ ಮುಗಿದ ಕಾರಣ ಲಂಕಾ ಭಾರತಕ್ಕೆ 3 ರನ್‌ಗಳ ಗುರಿಯನ್ನು ನೀಡಿತ್ತು.

    ಭಾರತದ ಪರ ಓಪನರ್‌ಗಳಾಗಿ ನಾಯಕ ಸೂರ್ಯಕುಮಾರ್‌ ಮತ್ತು ಶುಭಮನ್‌ ಗಿಲ್‌ ಕ್ರೀಸ್‌ಗೆ ಆಗಮಿಸಿದರು. ಹಸರಂಗ ಎಸೆದ ಮೊದಲ ಎಸೆತವನ್ನು ಸೂರ್ಯಕುಮಾರ್‌ ಎಕ್ಸ್‌ಟ್ರಾ ಕವರ್‌ಗೆ ತಳ್ಳಿ ಮೂರು ರನ್‌ ಓಡುವ ಮೂಲಕ ಭಾರತ ಜಯ ಸಾಧಿಸಿತು.

     

    ಪಂದ್ಯ ಟೈ ಆಗಿದ್ದು ಹೇಗೆ?
    ಕೊನೆಯ ಎರಡು ಓವರ್‌ಗಳಲ್ಲಿ 2 ಓವರ್‌ಗಳಲ್ಲಿ 23 ರನ್‌ ಬೇಕಿತ್ತು. ಅರ್ಶ್‌ದೀಪ್‌ ಎಸೆದ 19ನೇ ಓವರ್‌ನಲ್ಲಿ 11 ರನ್‌ ನೀಡಿದರು. ಕೊನೆಯ ಓವರ್‌ನಲ್ಲಿ 12 ರನ್‌ ಬೇಕಿತ್ತು. ಇದನ್ನೂ ಓದಿ:  ಸಿಕ್ಸ್‌ ಆಯ್ತು ಈಗ ಏಷ್ಯಾಕಪ್‌ನಲ್ಲಿ ಮತ್ತೊಂದು ದಾಖಲೆ ಬರೆದ ಅಭಿಷೇಕ್‌ ಶರ್ಮಾ

    ಹರ್ಷಿತ್‌ ರಾಣಾ ಎಸೆದ ಮೊದಲ ಓವರ್‌ನಲ್ಲಿ  107 ರನ್‌(58 ಎಸೆತ, 7 ಬೌಂಡರಿ, 6 ಸಿಕ್ಸ್‌) ಹೊಡೆದಿದ್ದ ಪಾತುಮ್ ನಿಸ್ಸಂಕ ವರುಣ್‌ ಚಕ್ರವರ್ತಿಗೆ ಕ್ಯಾಚ್‌ ನೀಡಿ ಔಟಾದರು. ಇದು ಪಂದ್ಯಕ್ಕೆ ರೋಚಕ ತಿರುವು ನೀಡಿತು. ನಂತರದ ಎಸೆತದಲ್ಲಿ 2, 1 ಬೈ, 2, 4 ರನ್‌ ಬಂತು. ಕೊನೆಯ ಓವರ್‌ನಲ್ಲಿ 3 ರನ್‌ ಬೇಕಿತ್ತು. ಶನಕ ಬೌಂಡರಿ ಹೊಡೆಯುವ ಪ್ರಯತ್ನ ನಡೆಸಿದರೂ 2 ರನ್‌ ಓಡಿದ ಪರಿಣಾಮ ಪಂದ್ಯ ಟೈನಲ್ಲಿ ಅಂತ್ಯವಾಯಿತು.


    ಲಂಕಾದ ಉತ್ತಮ ಆಟ:
    ಗೆಲ್ಲಲು 203 ರನ್‌ಗಳ ಕಠಿಣ ಸವಾಲನ್ನು ಪಡೆದ ಲಂಕಾ ಮೊದಲ ಓವರಿನಲ್ಲಿ ಕುಸಾಲ್ ಮೆಂಡಿಸ್ ಅವರ ವಿಕೆಟ್‌ ಕಳೆದುಕೊಂಡಿತ್ತು. ಎರಡನೇ ವಿಕೆಟಿಗೆ ಪಾತುಮ್ ನಿಸ್ಸಂಕ, ಕುಸಾಲ್ ಪೆರೆರಾ 70 ಎಸೆತಗಳಲ್ಲಿ 127 ರನ್‌ ಜೊತೆಯಾಟವಾಡಿ ಭದ್ರವಾದ ಇನ್ನಿಂಗ್ಸ್‌ ಕಟ್ಟಿದರು. ಕುಸಾಲ್ ಪೆರೆರಾ 58 ರನ್‌ (32 ಎಸೆತ, 8 ಬೌಂಡರಿ, 1 ಸಿಕ್ಸ್‌) ಗಳಿಸಿದ್ದಾಗ ಸ್ಟಂಪ್‌ ಔಟಾದರು. ನಂತರ ಬಂದ ನಾಯಕ ಚರಿತ್‌ ಅಸಲಂಕಾ ಸಿಕ್ಸ್‌ ಸಿಡಿಸಲು ಹೋಗಿ 5 ರನ್‌ ಗಳಿಸಿ ಕ್ಯಾಚ್‌ ನೀಡಿದರು. ಕಮಿಂಡು ಮೆಂಡಿಸ್‌ 3 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರು.

    ಇಂದಿನ ಪಂದ್ಯದಲ್ಲಿ ಬುಮ್ರಾ ಬದಲು ಅರ್ಶ್‌ದೀಪ್‌ ಸಿಂಗ್‌ ಅವರನ್ನು ಆಡಿಸಲಾಗಿತ್ತು. ಆದರೆ ಭಾರತದ ಬೌಲರ್‌ಗಳು ರನ್‌ ನಿಯಂತ್ರಣಕ್ಕೆ ಕಡಿವಾಣ ಹಾಕಲು ವಿಫಲರಾದರು. ಪಾಂಡ್ಯ ಕೇವಲ ಒಂದು ಓವರ್‌ ಎಸೆದು ಮೈದಾನ ತೊರೆದಿದ್ದು ಭಾರತಕ್ಕೆ ಹಿನ್ನಡೆ ಆಗಿತ್ತು.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ಅಭಿಷೇಕ್‌ ಶರ್ಮಾ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 202 ರನ್‌ ಗಳಿಸಿತ್ತು.ಶ್ರೀಲಂಕಾ ವಿರುದ್ಧದ ಇಂದಿನ ಪಂದ್ಯದಲ್ಲಿ ಅಭಿಷೇಕ್‌ ಶರ್ಮಾ 31 ಎಸೆತಗಳಲ್ಲಿ 61 ರನ್‌(8 ಬೌಂಡರಿ, 2 ಸಿಕ್ಸ್‌ ) ಸಿಡಿಸಿ ಔಟಾದರು. ತಿಲಕ್‌ ವರ್ಮಾ ಔಟಾಗದೇ 49 ರನ್‌(34 ಎಸೆತ, 4 ಬೌಂಡರಿ, 1 ಸಿಕ್ಸ್‌), ಸಂಜು ಸ್ಯಾಮ್ಸನ್‌ 39 ರನ್‌(23 ಎಸೆತ, 1 ಬೌಂಡರಿ, 3 ಸಿಕ್ಸ್‌), ಅಕ್ಷರ್‌ ಪಟೇಲ್‌ ಔಟಾಗದೇ 21 ರನ್‌(15 ಎಸೆತ, 1 ಬೌಂಡರಿ, 1 ಸಿಕ್ಸ್‌) ಹೊಡೆದರು.

  • ಪಹಲ್ಗಾಮ್‌ ಸಂತ್ರಸ್ತರು, ಭಾರತೀಯ ಸೇನೆಗೆ ಗೆಲುವು ಅರ್ಪಣೆ ಎಂದ ಸೂರ್ಯಗೆ ಐಸಿಸಿ ವಾರ್ನಿಂಗ್‌

    ಪಹಲ್ಗಾಮ್‌ ಸಂತ್ರಸ್ತರು, ಭಾರತೀಯ ಸೇನೆಗೆ ಗೆಲುವು ಅರ್ಪಣೆ ಎಂದ ಸೂರ್ಯಗೆ ಐಸಿಸಿ ವಾರ್ನಿಂಗ್‌

    ದುಬೈ: ಪಹಲ್ಗಾಮ್‌ ದಾಳಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ ಟೀಂ ಇಂಡಿಯಾ (Team India) ನಾಯಕ ಸೂರ್ಯಕುಮಾರ್‌ ಯಾದವ್‌ಗೆ (Suryakumar Yadav) ಐಸಿಸಿ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ.

    ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ ನೀಡಿದ ದೂರನ್ನು ಸ್ವೀಕರಿಸಿದ ಐಸಿಸಿ (ICC) ಸೂರ್ಯಕುಮಾರ್‌ ಯಾದವ್‌ ಅವರ ವಿಚಾರಣೆ ನಡೆಸಿದೆ.

    ಪಿಸಿಬಿ ಸಲ್ಲಿಸಿದ ಎಲ್ಲಾ ಪುರಾವೆಗಳು ಮತ್ತು ಹೇಳಿಕೆಗಳನ್ನು ಪರಿಶೀಲಿಸಿದ ನಂತರ ಸೂರ್ಯಕುಮಾರ್ ಅವರ ಹೇಳಿಕೆಗಳು ಕ್ರೀಡಾ ಸ್ಪೂರ್ತಿಗೆ ವಿರುದ್ಧವಾಗಿದೆ. ಹೀಗಾಗಿ ಸೂರ್ಯಕುಮಾರ್‌ ವಿರುದ್ಧ ಆರೋಪ ಹೊರಿಸುವಂತೆ ಮ್ಯಾಚ್‌ ರೆಫ್ರೀ ರಿಚಿ ರಿಚರ್ಡ್ಸನ್ ತೀರ್ಮಾನಿಸಿದ್ದಾರೆ ಎಂದು ವರದಿಯಾಗಿದೆ.  ಇದನ್ನೂ ಓದಿ:  ಫಿಫ್ಟಿ ಬಾರಿಸಿ ಫರ್ಹಾನ್‌ ಗನ್‌ ಸೆಲೆಬ್ರೇಷನ್ – ಪೆಹಲ್ಗಾಮ್ ದಾಳಿಯ ಉಗ್ರರಿಗೆ ಹೋಲಿಸಿದ ನೆಟ್ಟಿಗರು

    ಪಾಕಿಸ್ತಾನದ ಬ್ಯಾಟರ್‌ ಫರ್ಹಾನ್ ಸಾಹಿಬ್‌ಜಾದಾ ಮತ್ತು ಹ್ಯಾರಿಸ್ ರೌಫ್ ಮೈದಾನದಲ್ಲಿ ತೋರಿದ ವರ್ತನೆಗೆ ಸಂಬಂಧಿಸಿಂತೆ ಬಿಸಿಸಿಐ ನೀಡಿದ ದೂರಿನ ಬಗ್ಗೆ ನಾಳೆ ಇಬ್ಬರ ವಿಚಾರಣೆ ನಡೆಯಲಿದೆ.  ಎರಡೂ ತಂಡಗಳ ಆಟಗಾರರ ವಿರುದ್ಧ ಐಸಿಸಿ ಶಿಸ್ತುಕ್ರಮವನ್ನು ಕೈಗೊಂಡು ದಂಡ ವಿಧಿಸುವ ಸಾಧ್ಯತೆಯಿದೆ. ಇದನ್ನೂ ಓದಿ:  ವಿಮಾನ ಕ್ರ್ಯಾಶ್‌ ರೀತಿ ಸನ್ನೆ ಮಾಡಿದ ರೌಫ್‌ಗೆ ರುಬ್ಬಿದ ನೆಟ್ಟಿಗರು – ಆಪರೇಷನ್‌ ಸಿಂಧೂರಕ್ಕೆ ಹೋಲಿಸಿ ಕಿಡಿ

    ಸೂರ್ಯ ಹೇಳಿದ್ದೇನು?
    ಸೆಪ್ಟೆಂಬರ್ 14 ರಂದು ಪಾಕಿಸ್ತಾನದ ವಿರುದ್ಧ ಭಾರತ ಜಯಗಳಿಸಿದ ನಂತರ ಮಾತನಾಡಿದ ಸೂರ್ಯ, ಪಹಲ್ಗಾಮ್ ಸಂತ್ರಸ್ತರ ಕುಟುಂಬಗಳೊಂದಿಗೆ ನಾವು‌ ನಿಲ್ಲುತ್ತೇವೆ, ನಮ್ಮ ಒಗ್ಗಟ್ಟನ್ನು ಪ್ರದರ್ಶಿಸುತ್ತೇವೆ. ಶೌರ್ಯವನ್ನು ಪ್ರದರ್ಶಿಸಿದ ನಮ್ಮ ಎಲ್ಲಾ ಸಶಸ್ತ್ರ ಪಡೆಗಳಿಗೆ ಈ ಗೆಲುವನ್ನು ಅರ್ಪಿಸಲು ಬಯಸುತ್ತೇವೆ. ಅವರು ನಮಗೆಲ್ಲರಿಗೂ ಸ್ಫೂರ್ತಿ ಎಂದು ಹೇಳಿದ್ದರು.

  • ಸಿಕ್ಸ್‌ ಮೇಲೆ ಸಿಕ್ಸ್‌ – ಏಷ್ಯಾಕಪ್‌ನಲ್ಲಿ ದಾಖಲೆ ಬರೆದ ಅಭಿಷೇಕ್‌ ಶರ್ಮಾ

    ಸಿಕ್ಸ್‌ ಮೇಲೆ ಸಿಕ್ಸ್‌ – ಏಷ್ಯಾಕಪ್‌ನಲ್ಲಿ ದಾಖಲೆ ಬರೆದ ಅಭಿಷೇಕ್‌ ಶರ್ಮಾ

    ದುಬೈ: ಏಷ್ಯಾಕಪ್‌ (Asia Cup) ಪಂದ್ಯಗಳಲ್ಲಿ ಸಿಕ್ಸ್‌ ಮೇಲೆ ಸಿಕ್ಸ್‌ (Six) ಸಿಡಿಸುತ್ತಿರುವ ಅಭಿಷೇಕ್‌ ಶರ್ಮಾ (Abhishek Sharma) ಇತಿಹಾಸ ಸೃಷ್ಟಿಸಿದ್ದಾರೆ.

    ಬಾಂಗ್ಲಾದೇಶ (Bangladesh) ವಿರುದ್ಧ ನಡೆದ ಪಂದ್ಯದಲ್ಲಿ 5 ಸಿಕ್ಸ್‌ ಸಿಡಿಸುವ ಮೂಲಕ ಒಂದು ಏಷ್ಯಾಕಪ್‌ ಆವೃತ್ತಿಯಲ್ಲಿ (ಸಿಂಗಲ್ ಎಡಿಷನ್)  ಅತಿ ಹೆಚ್ಚು ಸಿಕ್ಸ್‌ ಸಿಡಿಸಿದ ಬ್ಯಾಟರ್‌ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಾರೆ. ಇಲ್ಲಿಯವರೆಗೆ ಶ್ರೀಲಂಕಾದ ಆರಂಭಿಕ ಆಟಗಾರ ಸನತ್‌ ಜಯಸೂರ್ಯ ಹೆಸರಿನಲ್ಲಿ ಈ ದಾಖಲೆ ಇತ್ತು. ಪಾಕಿಸ್ತಾನದಲ್ಲಿ ನಡೆದ 2008 ರ ಏಷ್ಯಾಕಪ್‌ ಟೂರ್ನಿಯಲ್ಲಿ 5 ಪಂದ್ಯವಾಡಿ  14 ಸಿಕ್ಸ್‌ ಹೊಡೆದಿದ್ದರು.

    ಈ ಪಂದ್ಯದಲ್ಲಿ ಅಭಿಷೇಕ್‌ ಶರ್ಮಾ 5 ಸಿಕ್ಸ್‌ ಸಿಡಿಸಿ ಜಯಸೂರ್ಯ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿದ್ದಾರೆ. ಇಲ್ಲಿಯವರೆಗೆ ಶರ್ಮಾ5 ಪಂದ್ಯಗಳಿಂದ  ಒಟ್ಟು 17 ಸಿಕ್ಸ್‌ ಸಿಡಿಸಿ ಮುನ್ನುಗ್ಗುತ್ತಿದ್ದಾರೆ. ಇದನ್ನೂ ಓದಿ: ಬಾಂಗ್ಲಾ ಬಗ್ಗು ಬಡಿದು ಅಜೇಯವಾಗಿ ಫೈನಲ್‌ ಪ್ರವೇಶಿಸಿದ ಭಾರತ

    ಭಾರತ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ (Rohit Sharama) 2018ರ ಆವೃತ್ತಿಯಲ್ಲಿ 13 ಸಿಕ್ಸರ್​ ಸಿಡಿಸಿದ್ದು ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಶಾಹೀದ್ ಅಫ್ರಿದಿ 2010ರ ಟೂರ್ನಿಯಲ್ಲಿ 12 ಸಿಕ್ಸರ್ ಸಿಡಿಸಿ 4ನೇ ಸ್ಥಾನದಲ್ಲಿದ್ದಾರೆ.  ಅಫ್ಘಾನಿಸ್ತಾನದ ರಹಮನುಲ್ಲಾ ಗುರ್ಬಾಜ್ , 2022ರ ಟಿ20 ಮಾದರಿಯ ಏಷ್ಯಾಕಪ್​ನಲ್ಲಿ ಓಪನರ್ ಆಗಿ 12 ಸಿಕ್ಸರ್ ಸಿಡಿಸಿ ಅಫ್ರಿದಿ ಜೊತೆ 4ನೇ ಪಡೆದಿದ್ದಾರೆ.

    ಇಂದಿನ ಪಂದ್ಯದಲ್ಲಿ ಅಭಿಶೇಕ್‌ ಶರ್ಮಾ 37 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸ್‌ ನೆರವಿನಿಂದ 75 ರನ್‌ ಚಚ್ಚಿದ್ದಾರೆ. ಈ ಅತ್ಯುತ್ತಮ ಆಟಕ್ಕೆ ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿದೆ.


    ಯಾವ ತಂಡದ ವಿರುದ್ಧ ಅಭಿಷೇಕ್‌ ಶರ್ಮಾ ಎಷ್ಟು ಸಿಕ್ಸ್‌?
    ಯುಎಇ – 3
    ಪಾಕಿಸ್ತಾನ – 2
    ಒಮನ್‌ – 2
    ಪಾಕಿಸ್ತಾನ – 5
    ಬಾಂಗ್ಲಾದೇಶ – 5