Tag: Crest Gate

  • ತುಂಗಭದ್ರಾ ಡ್ಯಾಂನ 8 ಗೇಟ್ ಜಾಮ್,  ಮೇಲೆತ್ತಲು ಸಾಧ್ಯವಾಗುತ್ತಿಲ್ಲ: ಶಿವರಾಜ ತಂಗಡಗಿ

    ತುಂಗಭದ್ರಾ ಡ್ಯಾಂನ 8 ಗೇಟ್ ಜಾಮ್, ಮೇಲೆತ್ತಲು ಸಾಧ್ಯವಾಗುತ್ತಿಲ್ಲ: ಶಿವರಾಜ ತಂಗಡಗಿ

    – ಇದೇ ವರ್ಷದಿಂದ ಡ್ಯಾಂ ಗೇಟ್ ಅಳವಡಿಕೆಗೆ ಚಿಂತನೆ

    ಕೊಪ್ಪಳ: ಕಳೆದ ವರ್ಷ ಕಿತ್ತು ಹೋಗಿದ್ದ ತುಂಗಭದ್ರಾ ಜಲಾಶಯದ (Tungabhadra Dam) 19ನೇ ಗೇಟ್ ಸೇರಿ ಒಟ್ಟು 8 ಕ್ರಸ್ಟ್‌ ಗೇಟ್ (Crest Gate) ನಿಷ್ಕ್ರಿಯಗೊಂಡಿದ್ದು, ಮೇಲೆ ಎತ್ತಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಸಂಗ್ರಹ ಸಾಮರ್ಥ್ಯವನ್ನು ಕೇವಲ 80 ಟಿಎಂಸಿಗೆ ಇಳಿಕೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್‌ ತಂಗಡಗಿ (Shivaraj Tangadagi) ಹೇಳಿದರು.

    ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

    ತುಂಗಭದ್ರಾ ಜಲಾಶಯದ 11, 18, 20, 24, 27 ಮತ್ತು 28 ಕ್ರಸ್ಟ್ ಗೇಟ್ ಸಂಪೂರ್ಣವಾಗಿ ಜಾಮ್ ಆಗಿದ್ದು, ಮೇಲಕ್ಕೆ ಎತ್ತಲು ಆಗುತ್ತಿಲ್ಲ. ಈ ಎಲ್ಲಾ ಗೇಟ್‌ಗಳು ಅಲ್ಲಿ ಬೆಂಡ್ ಆಗಿದ್ದರಿಂದ ಚೈನ್ ಮೂಲಕ ಗೇಟ್ ಮೇಲೆ ಎತ್ತಲು ಸಾಧ್ಯವಾಗುತ್ತಿಲ್ಲ. ಜೊತೆಗೆ 4ನೇ ಕ್ರಸ್ಟ್‌ ಗೇಟ್ ಕೇವಲ 2 ಫೀಟ್ ಮಾತ್ರ ಮೇಲೆ ಎತ್ತಲು ಸಾಧ್ಯವಾಗುತ್ತಿದೆ. ಇದರಿಂದ ಜಲಾಶಯದ ಒಟ್ಟು 8 ಕ್ರಸ್ಟ್‌ ಗೇಟ್ ಗೆ ಚಲನೆ ಇಲ್ಲದಂತಾಗಿದೆ. ಈ ಕಾರಣಕ್ಕೆ ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಸಂಗ್ರಹ ಸಾಮರ್ಥ್ಯವನ್ನು ಕೇವಲ 80 ಟಿಎಂಸಿಗೆ ಇಳಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ಜಲಾಶಯ ಒಟ್ಟು 105 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಡ್ಯಾಂ ಭರ್ತಿ ಮಾಡಿದರೆ ಮುಂದೆ ಸಾಕಷ್ಟು ಸವಾಲು ಎದುರಾಗುವ ಸಾಧ್ಯತೆ ಇದೆ. ಒಂದೊಮ್ಮೆ ಏಕಾಏಕಿ 1.50 ಲಕ್ಷ ಕ್ಯೂಸೆಕ್ ಒಳಹರಿವು ಹರಿದು ಬಂದರೆ, ಅದೇ ಪ್ರಮಾಣದ ನೀರನ್ನು ಎಲ್ಲ ಗೇಟ್ ಎತ್ತರಿಸುವ ಮೂಲಕ ನದಿಗೆ ಬಿಡ ಬೇಕಾಗುತ್ತದೆ. ಆದರೆ, ಸುಮಾರು 8 ಕ್ರಸ್ಟ್‌ ಗೇಟ್ ಗಳು ಸದ್ಯಕ್ಕೆ ಎತ್ತಲು ಸಾಧ್ಯವಿಲ್ಲದ ಸ್ಥಿತಿ ತಲುಪಿವೆ. ಹೀಗಾದಾಗ ಡ್ಯಾಂ ಭರ್ತಿ ಮಾಡುವುದು ಸರಿಯಲ್ಲ ಎಂಬ ತಜ್ಞರ ಸಲಹೆಯಂತೆ ಸಂಗ್ರಹ ಸಾಮರ್ಥ್ಯ ಕೇವಲ 80 ಟಿಎಂಸಿಗೆ ಇಳಿಕೆ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬನ್ನೇರುಘಟ್ಟ ಸಫಾರಿ ವೇಳೆ ಬೊಲೆರೋ ಹಿಂಬಾಲಿಸಿ ಬಾಲಕನ ಮೇಲೆ ಚಿರತೆ ದಾಳಿ

    ಮೊದಲಿಗೆ ಎಲ್ಲಾ 33 ಕ್ರಸ್ಟ್‌ ಗೇಟ್ ನಿರ್ಮಾಣಕ್ಕೆ ಒಂದೇ ಟೆಂಡರ್ ಕರೆಯಲಾಗಿತ್ತು. ಆದರೆ ಯಾವುದೇ ಕಂಪನಿ ಟೆಂಡರ್‌ನಲ್ಲಿ ಭಾಗವಹಿಸಲಿಲ್ಲ. ಇದೀಗ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಎಲ್ಲ ಗೇಟ್ ಅಳವಡಿಕೆಗೆ ಕನಿಷ್ಠ 8 ತಿಂಗಳು ಸಮಯವನ್ನು ಕಂಪನಿ ಕೇಳಿದೆ. ರೈತರೊಂದಿಗೆ ಚರ್ಚೆ ಮಾಡಿ, ಈ ಬಾರಿ ಒಂದು ಬೆಳೆಯ ನಂತರ ಎಲ್ಲ ನೀರು ಹೊರಗೆ ಬಿಟ್ಟು ಗೇಟ್ ಅಳವಡಿಕೆ ಕೆಲಸ ಶುರು ಮಾಡಬೇಕು ಎಂಬ ಚಿಂತನೆ ಇದೆ. ಈ ಬಗ್ಗೆ ರೈತರೊಂದಿಗೆ ಚರ್ಚೆ ಮಾಡಿ ಕ್ರಮ ವಹಿಸಲಾಗುವುದು ಎಂದರು.

    ಜಿಲ್ಲೆಯಲ್ಲಿ ಯೂರಿಯಾ ಕೊರತೆ ಸಂಪೂರ್ಣವಾಗಿ ನೀಗಿಸಲಾಗಿದೆ. ಸದ್ಯ ಯೂರಿಯಾ ಎಲ್ಲರಿಗೂ ಸಿಗುವಂತೆ ಮಾಡಿದ್ದೇವೆ. ಜೊತೆಗೆ ಸುಮಾರು 2,365 ಟನ್ ದಾಸ್ತಾನು ಉಳಿಸಿಕೊಂಡಿದ್ದೇವೆ. ಜಿಲ್ಲೆಯಲ್ಲಿ ಯಾವುದೇ ತೊಂದರೆ ಆಗದಂತೆ ಯೂರಿಯಾ ಪೂರೈಕೆ ಮಾಡುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

    ಕೊಪ್ಪಳದಲ್ಲಿ ಕೊಲೆಯಾದ ಗವಿಸಿದ್ಧಪ್ಪ ನಾಯಕ ಕೊಲೆ ಪ್ರಕರಣದಲ್ಲಿ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ. ಪ್ರಕರಣದಲ್ಲಿ ಕೊಪ್ಪಳ ಪೊಲೀಸರು ಎಲ್ಲ ಆರೋಪಿ ಗಳನ್ನು ಬಂಧಿಸಿದ್ದಾರೆ. ಮೃತನ ತಾಯಿ ದೂರಿನ ಹಿನ್ನೆಲೆ ಘಟನೆಗೆ ಕಾರಣರಾದ ಬಾಲಕಿಯನ್ನು ವಿಚಾರಣೆ ಮಾಡಲಾಗಿದೆ. ‌ಸತ್ತ ಮನೆಯಲ್ಲಿ ರಾಜಕಾರಣ ಮಾಡುವುದು ಬಿಜೆಪಿಗೆ ಹೊಸದಲ್ಲ. ಸತ್ತ ಮನೆಯಲ್ಲಿ ರಾಜಕೀಯ ಮಾಡುವುದಕ್ಕಿಂತ ಸಾತ್ವನ ಹೇಳಬೇಕು. ಇದನ್ನು ಬಿಜೆಪಿ ಮುಖಂಡರು ಕಲಿಯಲಿ ಎಂದು ತಿರುಗೇಟು ನೀಡಿದರು.

  • Tungabhadra Dam | ನನ್ನ ಕಡೆಯಿಂದ ಪ್ರತಿ ಕಾರ್ಮಿಕನಿಗೆ 50 ಸಾವಿರ : ಜಮೀರ್‌ ಘೋಷಣೆ

    Tungabhadra Dam | ನನ್ನ ಕಡೆಯಿಂದ ಪ್ರತಿ ಕಾರ್ಮಿಕನಿಗೆ 50 ಸಾವಿರ : ಜಮೀರ್‌ ಘೋಷಣೆ

    ಬಳ್ಳಾರಿ: ತುಂಗಭದ್ರಾ ಜಲಾಶಯ (Tungabhadra Dam) ಸ್ಟಾಪ್‌ಲಾಗ್‌ ಗೇಟ್‌ ಅಳವಡಿಸುವ ಜಾಗಕ್ಕೆ ಇಂದು ವಿಜಯನಗರ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ (Zameer Ahmad) ಭೇಟಿ ನೀಡಿ ಕೆಲಸಗಾರರ ಜೊತೆ ಮಾತನಾಡಿ ಧೈರ್ಯ ತುಂಬಿದ್ದಾರೆ.

    ಈ ವೇಳೆ ಮಾತನಾಡಿದ ಅವರು, ಧೈರ್ಯ ಕಳೆದುಕೊಳ್ಳದೇ ಕೆಲಸ ಮಾಡಿ. ನಾಳೆ ಗೇಟ್ ಕೂಡಿಸಿ ಕಾರ್ಯ ಯಶಸ್ವಿ ಮಾಡಿ. ನನ್ನ ಕಡೆಯಿಂದ ಪ್ರತಿ ಕಾರ್ಮಿಕನಿಗೆ 50 ಸಾವಿರ ರೂ. ಕೊಡುತ್ತೇನೆ. ಧೈರ್ಯವಾಗಿ ಕೆಲಸ ಮಾಡಿ ಎಂದು ಹೇಳಿದರು.

    ಸ್ಟಾಪ್ ಲಾಗ್ ಗೇಟ್ ಕೂರಿಸಲು ಕನ್ನಯ್ಯ ಮತ್ತು ತಂಡದ ಸದಸ್ಯರು ಇಂದು ಹರಸಾಹಸ ಪಟ್ಟಿದ್ದಾರೆ. ಸಚಿವ ಜಮೀರ್ ಅಹ್ಮದ್ 50 ಸಾವಿರ ರೂ. ಕೊಡುತ್ತೇನೆ ಎಂದಿದ್ದಕ್ಕೆ ಕಾರ್ಮಿಕರು ಸಂತಸಪಟ್ಟಿದ್ದಾರೆ. ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ – ಪತಿ, ಮಕ್ಕಳ ವಿರುದ್ಧ ಕೊಲೆ ಆರೋಪ

     

    ಶುಕ್ರವಾರ ಮತ್ತೆ ಪ್ರಯತ್ನ
    ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ ಗೇಟ್ ಕೊಚ್ಚಿ ಹೋಗಿ ಐದು ದಿನಗಳಾಗಿದೆ. ಅದರ ಜಾಗದಲ್ಲಿ ಇಂದು ತಾತ್ಕಾಲಿಕ ಗೇಟ್ ಕೂರಿಸುವ ಪ್ರಯತ್ನ ಫಲ ಕೊಡಲಿಲ್ಲ. ಗೇಟ್ ಎಲಿಮೆಂಟ್‌ನಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಇದನ್ನೂ ಓದಿ: ಗ್ಯಾರಂಟಿಗಳ ಭಾರದಿಂದ ಕಂಗೆಟ್ಟ ಸರ್ಕಾರ – ಶೀ‍ಘ್ರವೇ ಆಪರೇಷನ್ ಬಿಪಿಎಲ್ ಕಾರ್ಡ್‌

    ಶುಕ್ರವಾರ ಮತ್ತೊಮ್ಮೆ ಪ್ರಯತ್ನ ನಡೆಸಲಾಗುತ್ತದೆ. ಮೊದಲ ಎಲಿಮೆಂಟ್ ಅಳವಡಿಕೆ ಯಶಸ್ವಿಯಾದಲ್ಲಿ 25 ಟಿಎಂಸಿ ನೀರು ಜಲಾಶಯದಿಂದ ಹೊರಹೋಗುವುದನ್ನು ತಪ್ಪಿಸಿದಂತಾಗುತ್ತದೆ. ಮೊನ್ನೆಯವರೆಗೂ 25 ಸಾವಿರ ಕ್ಯೂಸೆಕ್‌ಗಿಂತ ಕಡಿಮೆ ಇದ್ದ ಒಳಹರಿವು ನಿನ್ನೆಯಿಂದ 35ಸಾವಿರ ಕ್ಯೂಸೆಕ್‌ಗೆ ಹೆಚ್ಚಿದೆ.

     

  • ಟಿಬಿ ಡ್ಯಾಂಗೆ ಸ್ಟಾಪ್ ಲಾಗ್ ಗೇಟ್ ಅಳವಡಿಸಲು ಪ್ಲಾನ್ – ಏನೇನು ತಯಾರಿ ನಡೆಯುತ್ತಿದೆ?

    ಟಿಬಿ ಡ್ಯಾಂಗೆ ಸ್ಟಾಪ್ ಲಾಗ್ ಗೇಟ್ ಅಳವಡಿಸಲು ಪ್ಲಾನ್ – ಏನೇನು ತಯಾರಿ ನಡೆಯುತ್ತಿದೆ?

    – ನೀರಿನಲ್ಲೇ ಮೊದಲ ಬಾರಿಗೆ ಕಾರ್ಯಾಚರಣೆ

    ಬೆಂಗಳೂರು: ತುಂಗಭದ್ರಾ ಜಲಾಶಯದ (Tungabhadra Dam) 19ನೇ ಕ್ರಸ್ಟ್‌ ಗೇಟ್ ಕೊಚ್ಚಿಹೋಗಿ ಬರೋಬ್ಬರಿ 70 ಗಂಟೆ ಕಳೆದಿದೆ. ಇದೀಗ 19ನೇ ಗೇಟ್ ಜಾಗದಲ್ಲಿ ಸ್ಟಾಪ್‌ಲಾಗ್ ಗೇಟ್ ಅಳವಡಿಕೆ ಪ್ರಯತ್ನಗಳು ನಡೆದಿವೆ. ಜಲಾಶಯದ ನೀರನ್ನು ಕ್ರಸ್ಟ್ ಗೇಟ್ ಕೆಳಗಿನವರೆಗೂ ಖಾಲಿ ಮಾಡದೇ, ಅದಕ್ಕೂ ಮೊದಲೇ ಸ್ಟಾಪ್‌ಲಾಗ್ ಗೇಟ್ ಅಳವಡಿಕೆಗೆ ತುಂಗಾಭದ್ರಾ ಬೋರ್ಡ್, ಕರ್ನಾಟಕ (Karnataka) ಮತ್ತು ಆಂಧ್ರ (Andra Pradesh) ಅಧಿಕಾರಿಗಳು ತೀರ್ಮಾನಿಸಿದ್ದಾರೆ.

    ಸ್ಟಾಪ್ ಲಾಗ್‌ನ 10 ಪುಟಗಳ ನೀಲಿನಕ್ಷೆ ಆಧರಿಸಿ ಸಮರೋಪಾದಿಯಲ್ಲಿ ಐದು ಎಂಜಿನಿಯರಿಂಗ್ ಕಂಪನಿಗಳು ಗೇಟ್‌ಗಳನ್ನು ನಿರ್ಮಿಸುತ್ತಿವೆ. 20 ಅಡಿ ಎತ್ತರ, 60 ಅಡಿ ಅಗಲ, 48 ಟನ್ ಭಾರದ ಸ್ಟಾಪ್ ಲಾಗ್‌ಗೇಟನ್ನು ಏಕಕಾಲದಲ್ಲಿ ಡ್ಯಾಂ ಮೇಲೆ ಕೊಂಡೊಯ್ಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈ ತುರ್ತು ಗೇಟನ್ನು ಐದು ಭಾಗಗಳಾಗಿ ತಯಾರಿಸಲಾಗ್ತಿದೆ. ನಂತರ ಇದನ್ನು ಡ್ಯಾಂ ಮೇಲೆ ಕೊಂಡೊಯ್ದು, 18 ಮತ್ತು 19ನೇ ಪಿಯರ್‌ಗಳ ನಡುವೆ ಹಂತ ಹಂತವಾಗಿ ಎಲಿಮೆಂಟ್‌ಗಳನ್ನು ಇಳಿಸಿ ತುರ್ತು ಗೇಟ್ ನಿರ್ಮಿಸಲಾಗುತ್ತದೆ.

    ಬುಧವಾರ ಈ ಪ್ರಕ್ರಿಯೆ ಆರಂಭ ಆಗಲಿದ್ದು, ತುರ್ತು ಗೇಟ್ ಅಳವಡಿಕೆ ಕೆಲಸ ಮುಗಿಯಲು ಮೂರ್ನಾಲ್ಕು ದಿನ ಹಿಡಿಯಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಆಗಸ್ಟ್ 17ರಿಂದ ಭಾರೀ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಅಷ್ಟರೊಳಗೆ ಗೇಟ್ ಅಳವಡಿಸುವ ಗುರಿಯನ್ನು ಅಧಿಕಾರಿಗಳು ಹೊಂದಿದ್ದಾರೆ. ನೀರಿನಲ್ಲಿಯೇ ಗೇಟ್ ಅಳವಡಿಕೆ ಕಾರ್ಯಕ್ಕೆ ಮುಂದಾಗಿರುವುದು ದೇಶದ ಇತಿಹಾಸಲ್ಲಿ ಇದೇ ಮೊದಲು ಎನ್ನಲಾಗುತ್ತಿದೆ.  ಇದನ್ನೂ ಓದಿ: ಹೆಚ್ಚುವರಿ ನೀರು ಲೆಕ್ಕಕ್ಕೆ ಪರಿಗಣಿಸಿ – CWRC ಮುಂದೆ ಕರ್ನಾಟಕದ ಮನವಿ

    ಈ ಕಾರ್ಯಾಚರಣೆ ನೇತೃತ್ವವನ್ನು ಡ್ಯಾಂ ಗೇಟ್‌ಗಳ ತಜ್ಞ ಕನ್ನಯ್ಯ ನಾಯ್ಡು ವಹಿಸಿದ್ದಾರೆ. ಮುಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಪಡೆಗಳು ಬೀಡುಬಿಟ್ಟಿವೆ. ಅಂದ ಹಾಗೇ, ಡ್ಯಾಂನಿಂದ ಈಗಾಗಲೇ 30ಕ್ಕೂ ಹೆಚ್ಚು ಟಿಎಂಸಿ ನೀರು ಹೊರಗೆ ಹರಿದಿದೆ. ಇಂದು ಹೊರಹರಿವಿನ ಪ್ರಮಾಣವನ್ನು 1.40 ಲಕ್ಷ ಕ್ಯುಸೆಕ್‌ಗೆ ಹೆಚ್ಚಿಸಲಾಗಿದೆ.

     

    ಗೇಟ್ ಅಳವಡಿಕೆಗೆ ಏನೆಲ್ಲಾ ತಯಾರಿ?
    19ನೇ ಗೇಟ್ ಜಾಗದಲ್ಲಿ ಸ್ಟಾಪ್‌ಲಾಗ್ ಅಳವಡಿಕೆ ಪ್ರಯತ್ನ ಮಾಡಲಾಗುತ್ತದೆ. 20 ಅಡಿ ಎತ್ತರ, 60 ಅಡಿ ಅಗಲ, 48 ಟನ್ ಭಾರದ ಸ್ಟಾಪ್‌ಲಾಗ್ ಗೇಟ್‌ ಅನ್ನು ಒಂದೇ ಬಾರಿಗೆ ಡ್ಯಾಂ ಮೇಲೆ ಕೊಂಡೊಯ್ಯುವುದು ಕಷ್ಟ ಸಾಧ್ಯ. ಹೀಗಾಗಿ ಗೇಟನ್ನು ಐದು ಭಾಗಗಳಾಗಿ ವಿಭಜಿಸಿ ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ.

    ಮೊದಲ ಎಲಿಮೆಂಟ್‌ನ ಎತ್ತರ 2 ಅಡಿ, 2ನೇ ಎಲಿಮೆಂಟ್‌ನ ಎತ್ತರ 4 ಅಡಿ, 3ನೇ ಎಲಿಮೆಂಟ್‌ನ ಎತ್ತರ 6 ಅಡಿ, 4 ಮತ್ತು 5ನೇ ಎಲಿಮೆಂಟ್‌ನ ಎತ್ತರ ತಲಾ 4 ಅಡಿ ಇರಲಿದೆ. ಗೇಟ್‌ಗಳ ಎಲ್ಲಾ ಎಲಿಮೆಂಟ್‌ಗಳ ಅಗಲ 60 ಅಡಿ ಇರಲಿದ್ದು 2 ಕಡೆ ರೋಲರ್ ಅಳವಡಿಸಲಾಗುತ್ತದೆ. ಇದನ್ನೂ ಓದಿ: ಈಗ ನೀರು ಹರಿಸಿದ್ರೂ ಅಕ್ಟೋಬರ್‌ ವೇಳೆಗೆ ಡ್ಯಾಂ ತುಂಬುವ ಸಾಧ್ಯತೆಯಿದೆ – ಸಿದ್ದರಾಮಯ್ಯ ವಿಶ್ವಾಸ

    ಕ್ರೇನ್ ಸಹಾಯದಿಂದ ಗೇಟ್‌ನ ಐದು ಎಲಿಮೆಂಟ್‌ಗಳ ಅಳವಡಿಸಲಾಗುತ್ತದೆ. 18 ಮತ್ತು 19ನೇ ಪಿಯರ್‌ಗಳ ನಡುವೆ 5 ಹಂತಗಳಲ್ಲಿ ಎಲಿಮೆಂಟ್‌ಗಳ ಇಳಿಸಿ ಸ್ಟಾಪ್‌ಲಾಗ್ ಗೇಟ್‌ ಹಾಕಲಾಗುತ್ತದೆ.