Tag: Cremated

  • ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಬೀದರ್‌ನ 7 ಜನ ಮಣ್ಣಲ್ಲಿ ಮಣ್ಣು

    ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಬೀದರ್‌ನ 7 ಜನ ಮಣ್ಣಲ್ಲಿ ಮಣ್ಣು

    ಬೀದರ್: ಉತ್ತರ ಪ್ರದೇಶದ ಖೇರಿ ಹೈವೆಯಲ್ಲಿ ಭಾನುವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೀದರ್ ಮೂಲದ 7 ಜನ ಹಾಗೂ ಕಲಬುರಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರು.

    ಇಂದು ಅವರ ಮೃತದೇಹಗಳು ಲಕ್ನೋದಿಂದ ಏರ್-ಲಿಫ್ಟ್ ಮಾಡಿ ಹೈದರಾಬಾದ್‍ಗೆ ತಂದು ಅಲ್ಲಿಂದ ರಸ್ತೆ ಮೂಲಕ 7 ಅಂಬುಲೆನ್ಸ್‌ಗಳಲ್ಲಿ 4 ಗಂಟೆಗೆ ಬೀದರ್‌ಗೆ ತರಲಾಯಿತು. ಓರ್ವ ವ್ಯಕ್ತಿಯ ಮೃತದೇಹವನ್ನು ಕಲಬುರಗಿಗೆ ರವಾನೆ ಮಾಡಲಾಯಿತು.  ಇದನ್ನೂ ಓದಿ: ಯುಪಿಯಲ್ಲಿ ಬೀದರ್ ಪ್ರವಾಸಿಗರಿಗೆ ಅಪಘಾತ – ಸಂತ್ರಸ್ತರ ನೆರವಿಗೆ ಯೋಗಿ ಜೊತೆ ಬೊಮ್ಮಾಯಿ ಮಾತುಕತೆ

    ಮೃತದೇಹಗಳು ಬೀದರ್‌ಗೆ ಬರುತ್ತಿದ್ದಂತೆ ಗುಂಪಾ ಬಳಿಯ ಅವರ ನಿವಾಸದಲ್ಲಿ ಕುಟುಂಬಸ್ಥರ ಹಾಗೂ ಸ್ಥಳೀಯರು ಆಕ್ರಂದನ ಮುಗಿಲು ಮುಟ್ಟಿತು. ಬಳಿಕ ಬೀದರ್ ತಾಲೂಕಿನ ಸುಲ್ತಾನಪುರ್‌ದಲ್ಲಿ 6 ಜನರನ್ನು ಲಿಂಗಾಯತ ಸಂಪ್ರದಾಯದಂತೆ ಸುರಿಯುವ ಮಳೆಯ ನಡುವೆ ಅಂತ್ಯಕ್ರಿಯೆ ಮಾಡಿದರು. ಇದನ್ನೂ ಓದಿ: ಯುಪಿಯಲ್ಲಿ ಬೀದರ್‌ ಟಿಟಿ ಅಪಘಾತ – ಯುವತಿ ಸಾವು, ಸಾವಿನ ಸಂಖ್ಯೆ 8ಕ್ಕೆ ಏರಿಕೆ

    ಬೀದರ್ ತಾಲೂಕಿನ ಅಷ್ಟೂರಿನಲ್ಲಿ ಓರ್ವ ವ್ಯಕ್ತಿಯನ್ನು ಅಂತ್ಯಕ್ರಿಯೆ ಮಾಡಲಾಗಿದೆ. ಅಂತ್ಯಕ್ರಿಯೆ ಮಾಡುವ ಸ್ಥಳದಲ್ಲೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕೇದಾರನಾಥ್, ಭದ್ರಿನಾಥ್, ಅಯೋಧ್ಯೆ ಸೇರಿದಂತೆ ತೀರ್ಥಯಾತ್ರೆಗೆ ಹೋಗಿದ್ದ ಬೀದರ್ ಮೂಲದ 16 ಜನರಲ್ಲಿ 7 ಜನ ಮಸಣ ಸೇರಿದ್ದು ಮಾತ್ರ ದುರಂತವೇ ಸರಿ.

  • ಭಾನುವಾರ ನಿಗಮ್‍ಬೋಧ್ ಘಾಟ್‍ನಲ್ಲಿ ಅರುಣ್ ಜೇಟ್ಲಿ ಅಂತ್ಯಕ್ರಿಯೆ

    ಭಾನುವಾರ ನಿಗಮ್‍ಬೋಧ್ ಘಾಟ್‍ನಲ್ಲಿ ಅರುಣ್ ಜೇಟ್ಲಿ ಅಂತ್ಯಕ್ರಿಯೆ

    ನವದೆಹಲಿ: ಬಿಜೆಪಿಯ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ 2 ಗಂಟೆಗೆ ನೆರವೇರಲಿದೆ.

    ಬಿಜೆಪಿ ಕಚೇರಿಯಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಗೆ ಅರುಣ್ ಜೇಟ್ಲಿ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಿಡಲಾಗುತ್ತದೆ. ಅಲ್ಲಿಂದ ಮೆರವಣಿಗೆ ಮೂಲಕ ನಿಗಮ್‍ಬೋಧ್ ಘಾಟ್‍ಗೆ ತಲುಪಿ, ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಜೇಟ್ಲಿ ಅವರನ್ನು ಇದೇ ತಿಂಗಳ 9ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಸುದೀರ್ಘ 15 ದಿನಗಳ ಕಾಲ ವೆಂಟಿಲೇಟರ್, ಐಸಿಯುನಲ್ಲಿಟ್ಟರೂ ಚಿಕಿತ್ಸೆ ಫಲಿಸದೆ ಇಂದು ಮಧ್ಯಾಹ್ನ 12.07ಕ್ಕೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಮಕ್ಕಳನ್ನು ಜೇಟ್ಲಿ ಅಗಲಿದ್ದಾರೆ. ಇವತ್ತು ಮಧ್ಯಾಹ್ನದಿಂದಲೇ ಕೈಲಾಶ್ ಕಾಲೋನಿಯ ನಿವಾಸದಲ್ಲಿ ಸಂಬಂಧಿಕರು, ಗಣ್ಯರು, ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿದರು.

    ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿ, ಹಿರಿಯ ನಾಯಕರಾದ ಅಡ್ವಾಣಿ, ಮುರಳಿ ಮನೋಹರ ಜೋಷಿ, ಒಡನಾಡಿಗಳಾಗಿದ್ದ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಎಲ್ಲಾ ನಾಯಕರು, ಕಾಂಗ್ರೆಸ್‍ನ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಡೆಲ್ಲಿ ಸಿಎಂ ಕೇಜ್ರಿವಾಲ್, ಮಮತಾ ಬ್ಯಾನರ್ಜಿ ಕಂಬನಿ ಮಿಡಿದಿದ್ದಾರೆ. ಕ್ರಿಕೆಟಿಗರಾದ ಸೆಹ್ವಾಗ್, ಗಂಭೀರ್ ಸಹ ಸಂತಾಪ ಸೂಚಿಸಿದ್ದಾರೆ. ಅಂದಹಾಗೆ, ಸುಷ್ಮಾ ಸ್ವರಾಜ್ ಬೆನ್ನಿಗೇ ಜೇಟ್ಲಿ ಅವರು ಅಗಲಿರೋದು ಬಿಜೆಪಿ ನಾಯಕರಿಗೆ ಸಹಿಸಲಾಗದ ನೋವು ತಂದಿದೆ. ಸಾಲು ಸಾಲು ದಿಗ್ಗಜರನ್ನು ಕಳೆದುಕೊಳ್ಳುತ್ತಿರುವ ಬಿಜೆಪಿ ಬಡವಾಗುತ್ತಿದೆ.

  • ಮಾಜಿ ಶಾಸಕ ಗೋಪಾಲ ಭಂಡಾರಿ ಪಂಚಭೂತಗಳಲ್ಲಿ ಲೀನ

    ಮಾಜಿ ಶಾಸಕ ಗೋಪಾಲ ಭಂಡಾರಿ ಪಂಚಭೂತಗಳಲ್ಲಿ ಲೀನ

    ಉಡುಪಿ: ಹೃದಯಾಘಾತದಿಂದ ಮೃತಪಟ್ಟಿದ್ದ ಮಾಜಿ ಶಾಸಕ ಗೋಪಾಲ ಭಂಡಾರಿ (66) ಅವರ ಅಂತ್ಯ ಸಂಸ್ಕಾರ ಶುಕ್ರವಾರ ಹೆಬ್ರಿಯ ಸ್ವಗೃಹದ ಸಮೀಪದಲ್ಲಿ ನೆರವೇರಿತು.

    ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಯಿತು. ಈ ವೇಳೆ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಸಚಿವೆ ಜಯಮಾಲಾ, ಶಾಸಕ ಸುನೀಲ್ ಕುಮಾರ್ ಭಾಗಿಯಾಗಿದ್ದರು.

    ಮಾಜಿ ಸಿಎಂ ವೀರಪ್ಪ ಮೋಯ್ಲಿ ಆಪ್ತ, ಕಾರ್ಕಳ ಕ್ಷೇತ್ರದ ಮಾಜಿ ಶಾಸಕ ಗೋಪಾಲ ಭಂಡಾರಿ ಅವರು ಬೆಂಗಳೂರಿಂದ ಮಂಗಳೂರಿಗೆ ಕೆಎಸ್‍ಆರ್ ಟಿಸಿ ವೋಲ್ವೋ ಬಸ್‍ನಲ್ಲಿ ಗುರುವಾರ ಪ್ರಯಾಣಿಸುತ್ತಿದ್ದರು. ರಾತ್ರಿ 10.40ರ ವೇಳೆಗೆ ಮಂಗಳೂರು ಬಸ್ ನಿಲ್ದಾಣ ತಲುಪಿದ ಬಳಿಕವೂ ಅವರು ಸೀಟಿನಲ್ಲೇ ನಿದ್ದೆ ಮಾಡಿದ ರೀತಿ ಕುಳಿತಿದ್ದರು. ಎಷ್ಟು ಕರೆದರೂ ಎಚ್ಚರಗೊಳ್ಳದ ಪರಿಣಾಮ ಸಿಬ್ಬಂದಿ ಬಸ್ಸಿನಲ್ಲೇ ವೆನ್ ಲಾಕ್ ಆಸ್ಪತ್ರೆಗೆ ಮೃತದೇಹವನ್ನು ಕರೆದೊಯ್ಯಲಾಗಿತ್ತು.

    ಹೆಬ್ರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ರಾಜಕೀಯ ಪ್ರವೇಶ ಮಾಡಿದ್ದ ಅವರು, ಯಾವುದೇ ಜಾತಿ ಬಲ, ಹಣ ಬಲ ಇಲ್ಲದೆ 1998 ಮತ್ತು 2008ರಲ್ಲಿ ಕಾರ್ಕಳದಲ್ಲಿ ಎರಡು ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಶಾಸಕರಾಗಿದ್ದರು. ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ವಿರುದ್ಧ ಸೋಲು ಕಂಡಿದ್ದರು. ಒಂದು ಅವಧಿಗೆ ಹೆಬ್ರಿ ಬ್ಲಾಕ್ ಅಧ್ಯಕ್ಷರಾಗಿದ್ದರು. ಸದ್ಯ ಕೆಪಿಸಿಸಿ ಕಾರ್ಯದರ್ಶಿ ಆಗಿದ್ದರು.

    ಗೋಪಾಲ ಭಂಡಾರಿ ಅವರು ಶಾಸಕರಾಗಿದ್ದಾಗಲೂ ಬಸ್ಸಿನಲ್ಲೇ ಓಡಾಡುತ್ತಿದ್ದರು. ವೆನ್‍ಲಾಕ್ ಆಸ್ಪತ್ರೆಗೆ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಶಾಸಕ ಸುನಿಲ್ ಕುಮಾರ್, ನಗರಾಭಿವೃದ್ದಿ ಸಚಿವ ಯುಟಿ ಖಾದರ್ ಭೇಟಿ ನೀಡಿ ಅಂತಿಮ ದರ್ಶನ ಪಡೆದಿದ್ದರು. ಗೋಪಾಲ ಭಂಡಾರಿ ಅವರ ಪಾರ್ಥಿವ ಶರೀರವನ್ನು ಇಂದು ಬೆಳಗ್ಗೆ 9 ಗಂಟೆಗೆ ಹುಟ್ಟೂರು ಹೆಬ್ರಿಗೆ ತರಲಾಗಿತ್ತು. ರಾಜ್ಯದ ಹಾಗೂ ಜಿಲ್ಲೆಯ ವಿವಿಧ ಮುಖಂಡರು ಅಂತಿಮ ದರ್ಶನ ಪಡೆದರು.

  • ಅನಂತದಲ್ಲಿ ಮಾಸ್ಟರ್ ಹಿರಣ್ಣಯ್ಯ ಲೀನ

    ಅನಂತದಲ್ಲಿ ಮಾಸ್ಟರ್ ಹಿರಣ್ಣಯ್ಯ ಲೀನ

    ಬೆಂಗಳೂರು: ಹಿರಿಯ ರಂಗಕರ್ಮಿ, ಚತುರ ಮಾತುಗಾರ ಮಾಸ್ಟರ್ ಹಿರಣ್ಣಯ್ಯ(85) ಅವರ ಅಂತ್ಯ ಸಂಸ್ಕಾರವು ಬ್ರಾಹ್ಮಣ ಸಂಪ್ರದಾಯದಂತೆ ಬನಶಂಕರಿ ವಿದ್ಯುತ್ ಚಿತಾಗಾರದಲ್ಲಿ ಇಂದು ನೆರವೇರಿತು.

    ಹಿರಣ್ಣಯ್ಯ ಅವರ ಪುತ್ರರಾದ ಬಾಬು ಹಿರಣ್ಣಯ್ಯ, ಶ್ರೀಕಾಂತ್ ಹಿರಣ್ಣಯ್ಯ ಮತ್ತು ಗುರುನಾಥ್ ಹಿರಣ್ಣಯ್ಯ ಅವರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಕುಟುಂಬಸ್ಥರು ಹಾಗೂ ಹಿರಣ್ಣಯ್ಯ ಅವರ ಕೆಲ ಆಪ್ತರ ಉಪಸ್ಥಿತಿಯಲ್ಲಿ ಅಂತಿಮ ವಿಧಿವಿಧಾನ ನಡೆಯಿತು.

    ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಹಿರಣ್ಣಯ್ಯನವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಬನಶಂಕರಿಯ ತಮ್ಮ ನಿವಾಸದಲ್ಲಿ ಇಂದು ಬೆಳಗ್ಗೆ ಸುಮಾರು 9.30ರ ಹೊತ್ತಿಗೆ ಕೊನೆಯುಸಿರೆಳೆದರು.

    ಹಿರಣಯ್ಯ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆಯೇ ರಂಗಭೂಮಿ, ಸಿನಿಮಾ, ರಾಜಕೀಯ ನಾಯಕರು, ಹಿರಣ್ಣಯ್ಯ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದರು. ಅವರ ನಿಧನಕ್ಕೆ ಕುಟುಂಬಸ್ಥರು, ಗಣ್ಯರು, ಆಪ್ತರು ಹಾಗೂ ಕನ್ನಡ ಚಿತ್ರರಂಗ ಸಂತಾಪ ವ್ಯಕ್ತಪಡಿಸಿದೆ.

    ಕರ್ನಾಟಕದ ರಾಜಕಾರಣಿಗಳನ್ನು ಮಾತಿನ ಮೂಲಕವೇ ಹಿರಣಯ್ಯ ಅವರು ತಿವಿಯುತ್ತಿದ್ದರು. ರಾಜ್ಯೋತ್ಸವ, ನಾಟಕ ಅಕಾಡೆಮಿ, ರಂಗಭೂಮಿ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ನವರತ್ನ ರಾಂ ಪ್ರಶಸ್ತಿ ಜೊತೆಗೆ ಕಲಾಗಜ ಸಿಂಹ ಬಿರುದು ಜೊತೆಗೆ ನಟ ರತ್ನಾಕರ ಬಿರುದು ಹಿರಣ್ಣಯ್ಯನವರಿಗೆ ಲಭಿಸಿತ್ತು.

    ಹಿರಣ್ಣಯ್ಯ ಅಗಲಿಕೆ ರಾಜಕಾರಣಿಗಳು ಸಹ ಕಂಬನಿ ಮಿಡಿದಿದ್ದಾರೆ. ರಂಗಭೂಮಿಗೆ ತುಂಬಲಾರದ ನಷ್ಟ ಎಂದ ರಾಜಕಾರಣಿಗಳು, ರಾಜಕಾರಣದ ಹುಳುಕುಗಳನ್ನು ವಿಡಂಬಿಸಿ ಹೇಳುತ್ತಿದ್ದ ಅವರ ಶೈಲಿ ಮನಮುಟ್ಟುವಂತ್ತಿತ್ತು ಅಂತ ನಾಯಕರು ಸ್ಮರಿಸಿಕೊಂಡಿದ್ದಾರೆ. ಪ್ರಕೃತಿ ಚಿಕಿತ್ಸೆಯಲ್ಲಿರುವ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಪಿಎಂ ದೇವೇಗೌಡರು ಟ್ವಿಟ್ಟರ್‍ನಲ್ಲಿ ಸಂತಾಪ ಸೂಚಿಸಿದರು.

    ಕನ್ನಡ ಸಿನಿಮಾದಲ್ಲಿ ಡಾ.ರಾಜ್‍ಕುಮಾರ್ ಎಷ್ಟು ಜನಪ್ರಿಯರೋ ರಂಗಭೂಮಿಯಲ್ಲಿ ಅಷ್ಟೇ ಹೆಸರು ಮಾಡಿದ್ದವರು ಮಾಸ್ಟರ್ ಹಿರಣ್ಣಯ್ಯ. ರಂಗಭೂಮಿಯ ದೈತ್ಯ ಅಂತಲೇ ಹೆಸರಾಗಿದ್ದ ಹಿರಣ್ಣಯ್ಯ, ಸಮಾಜದ ಹುಳುಕನ್ನು ವಿಡಂಬನಾತ್ಮಕವಾಗಿ ವಿಶ್ಲೇಷಿಸುವ ಮೂಲಕ ಟೀಕೆ-ಟಿಪ್ಪಣಿ ಮೂಲಕವೇ ಬದುಕನ್ನು ಕಟ್ಟಿಕೊಂಡವರು. ಸರ್ಕಾರವೇ ಆಗಲಿ, ರಾಜಕಾರಣಿಯೇ ಆಗಲಿ, ವ್ಯಕ್ತಿಯೇ ಆಗಲಿ, ವೇದಿಕೆಯಲ್ಲೇ ಟೀಕಿಸುತ್ತಿದ್ದರು.

    https://www.youtube.com/watch?v=ac2yUL65-10