Tag: Crackers

  • ಬಿಜೆಪಿ ಸಂಸದೆಯ ಮೊಮ್ಮಗಳು ಪಟಾಕಿಗೆ ಬಲಿ!

    ಬಿಜೆಪಿ ಸಂಸದೆಯ ಮೊಮ್ಮಗಳು ಪಟಾಕಿಗೆ ಬಲಿ!

    – ಆಟವಾಡಲು ಹೋದಾಗ ಅವಘಡ
    – ಶೇ.60 ರಷ್ಟು ಸುಟ್ಟಿತ್ತು ದೇಹ
    – ಮಾರ್ಗಮಧ್ಯೆಯೇ ಬಾಲಕಿ ಸಾವು

    ನವದೆಹಲಿ: ಕೊರೊನಾ ವೈರಸ್ ಭೀತಿಯಿಂದ ಈ ಬಾರಿ ಕೆಲವೆಡೆ ಪಟಾಕಿಗೆ ನಿಷೇಧ ಹೇರಲಾಗಿತ್ತು. ಆದರೂ ಹಲವೆಡೆ ಪಟಾಕಿ ಸಿಡಿಸಿ ಅನಾಹುತಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅಂತೆಯೇ ಬಿಜೆಪಿ ಸಂಸದೆಯೊಬ್ಬರ ಮೊಮ್ಮಗಳು ಪಟಾಕಿಗೆ ಬಲಿಯಾದ ಘಟನೆ ನವದೆಹಲಿಯಲ್ಲಿ ನಡೆದಿದೆ.

    ಹೌದು. ಬಿಜೆಪಿ ಸಂಸದೆ ರಿಟಾ ಬಹುಗುಣ ಜೋಶಿ ಅವರ 6 ವರ್ಷದ ಮೊಮ್ಮಗಳು ದೀಪಾವಳಿ ಹಬ್ಬದ ರಾತ್ರಿಯೇ ಪಟಾಕಿಗೆ ಬಲಿಯಾಗಿದ್ದಾಳೆ. ಬಾಲಕಿ ತನ್ನ ಗೆಳೆಯರೊಂದಿಗೆ ಆಟವಾಡಲು ಮನೆಯ ಟೆರೇಸ್ ಗೆ ಹೋಗಿದ್ದಾಳೆ. ಹೀಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಪಟಾಕಿಯ ಬೆಂಕಿ ಆಕೆಯ ಡ್ರೆಸ್ ಗೆ ಹೊತ್ತಿಕೊಂಡಿದೆ.

    ಹುಡುಗರೆಲ್ಲ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿರಬೇಕಾದರೆ ಬಾಲಕಿಯ ಕೂಗು ಯಾರಿಗೂ ಕೇಳಿಸಿರಲಿಲ್ಲ. ಹೀಗಾಗಿ ಆಕೆಯ ಮೈಮೇಲೆ ಬೆಂಕಿ ಹೊತ್ತಿಕೊಂಡು ಬೆಂದಿದ್ದಾಳೆ. ಕೊನೆಗೆ ಯಾರೋ ಒಬ್ಬರು ನೋಡಿ ಮನೆಯವರಿಗೆ ತಿಳಿಸಿದ್ದಾರೆ.

    ಬಾಲಕಿಯನ್ನು ಕುಟುಂಬಸ್ಥರು ಗಮನಿಸಿದಾಗ ಆಕೆಯ ದೇಹ ಅದಾಗಲೇ ಶೇ.60ರಷ್ಟು ಸುಟ್ಟು ಹೋಗಿತ್ತು. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದರು. ಹೀಗಾಗಿ ದೆಹಲಿಯ ಮಿಲಿಟರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಬಾಲಕಿ ಮಾರ್ಗಮಧ್ಯೆ ಅಂಬುಲೆನ್ಸ್ ನಲ್ಲಿಯೇ ಬಾಲಕಿ ಕೊನೆಯುಸಿರೆಳೆದಿದ್ದಾಳೆ.

  • ಹೂವಿನ ಕುಂಡ ಸಿಡಿದು ರಸ್ತೆ ಬದಿ ನಿಂತಿದ್ದ ಬಾಲಕನ ಕಣ್ಣಿಗೆ ಗಾಯ

    ಹೂವಿನ ಕುಂಡ ಸಿಡಿದು ರಸ್ತೆ ಬದಿ ನಿಂತಿದ್ದ ಬಾಲಕನ ಕಣ್ಣಿಗೆ ಗಾಯ

    ಬೆಂಗಳೂರು: ರಸ್ತೆ ಬದಿ ನಿಂತಿದ್ದ ಹುಡುಗನ ಮೇಲೆ ಪಟಾಕಿ ಸಿಡಿದು ಕಣ್ಣಿಗೆ ಗಾಯವಾಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ರಸ್ತೆ ಬದಿ ಹೂವಿನ ಕುಂಡವನ್ನ ಹಚ್ಚಲಾಗಿತ್ತು. ಈ ವೇಳೆ ಕಾಮಾಕ್ಷಿ ಪಾಳ್ಯದ ನಿವಾಸಿಯಾಗಿರುವ 12 ವರ್ಷದ ಬಾಲಕ ನಡೆದುಕೊಂಡು ಬಂದು ರಸ್ತೆ ಬದಿ ನಿಂತಿದ್ದನು. ಇದೇ ವೇಳೆ ಹೂವಿನ ಕುಂಡ ಸಿಡಿದು ಆತನ ಕಣ್ಣಿಗೆ ಹಾನಿಯಾಗಿದೆ. ಕೂಡಲೇ ಬಾಲಕನನ್ನು ಮಿಂಟೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.

    ಭಾನುವಾರ ರಾತ್ರಿ ಪಟಾಕಿ ಹಚ್ಚಲು ಹೋಗಿ ಮೂರು ಮಕ್ಕಳ ಕಣ್ಣಿಗೆ ಗಾಯಗಳಾಗಿತ್ತು. ಬೆಂಗಳೂರಿನ ಬೇರೆ ಬೇರೆ ನಿವಾಸಿಗಳಾದ ಮೂವರು ಮಕ್ಕಳು ಮಿಂಟೋ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮೂರು ಜನರು ಕೂಡ 10 ರಿಂದ 11 ವರ್ಷದ ಒಳಗಿನವರಾಗಿದ್ದಾರೆ.

    ಸುಂಕದ ಕಟ್ಟೆ ಮೂಲದ 11 ವರ್ಷ ವಯಸ್ಸಿನ ಹುಡುಗ ಹೂವಿನ ಕುಂಡ ಹಚ್ಚಲು ಹೋಗಿ ಕಣ್ಣಿಗೆ ಹಾನಿ ಮಾಡಿಕೊಂಡಿದ್ದಾನೆ. ಉಳಿದ ಇಬ್ಬರು ಪಟಾಕಿ ಹಚ್ಚಲು ಹೋಗಿ ಎಡಗಣ್ಣು ಮತ್ತು ಬಲಗಣ್ಣಿಗೆ ಹಾನಿ ಮಾಡಿಕೊಂಡಿದ್ದಾರೆ. ಮಿಂಟೋ ಆಸ್ಪತ್ರೆಯಲ್ಲಿ ಮೂವರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ ಮಿಂಟೋ ಆಸ್ಪತ್ರೆಗೆ ಒಟ್ಟು 7 ಮಂದಿ ಮಕ್ಕಳು ಪಟಾಕಿ ಹಾನಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

  • ಪಟಾಕಿ ಅವಾಂತರ – ಬೆಂಗಳೂರಲ್ಲಿ 7 ಮಂದಿಯ ಕಣ್ಣಿಗೆ ಹಾನಿ

    ಪಟಾಕಿ ಅವಾಂತರ – ಬೆಂಗಳೂರಲ್ಲಿ 7 ಮಂದಿಯ ಕಣ್ಣಿಗೆ ಹಾನಿ

    ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದಲ್ಲಿ ನಿಷೇಧವಿದ್ದರೂ ಪಟಾಕಿ ಹಚ್ಚಲು ಹೋಗಿ ಮಕ್ಕಳ ಕಣ್ಣಿಗೆ ಹಾನಿಯಾಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಪಟಾಕಿ ಹಚ್ಚಲು ಹೋಗಿ ಮೂರು ಮಕ್ಕಳ ಕಣ್ಣಿಗೆ ಗಾಯಗಳಾಗಿದ್ದು, ರಾತ್ರೋ ರಾತ್ರಿ ಬೆಂಗಳೂರಿನ ಬೇರೆ ಬೇರೆ ನಿವಾಸಿಗಳಾದ ಮೂವರು ಮಕ್ಕಳು ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಮೂರು ಜನರು ಕೂಡ 10 ರಿಂದ 11 ವರ್ಷದ ಒಳಗಿನವರಾಗಿದ್ದಾರೆ.

    ಸುಂಕದ ಕಟ್ಟೆ ಮೂಲದ 11 ವರ್ಷ ವಯಸ್ಸಿನ ಹುಡುಗ ಹೂವಿನ ಕೆಂಡ ಹಚ್ಚಲು ಹೋಗಿ ಕಣ್ಣಿಗೆ ಹಾನಿ ಮಾಡಿಕೊಂಡಿದ್ದಾನೆ. ಉಳಿದ ಇಬ್ಬರು ಪಟಾಕಿ ಹಚ್ಚಲು ಹೋಗಿ ಎಡಗಣ್ಣು ಮತ್ತು ಬಲಗಣ್ಣಿಗೆ ಹಾನಿ ಮಾಡಿಕೊಂಡಿದ್ದಾರೆ. ಮಿಂಟೋ ಆಸ್ಪತ್ರೆಯಲ್ಲಿ ಮೂವರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ ಮಿಂಟೋ ಆಸ್ಪತ್ರೆಗೆ ಒಟ್ಟು 7 ಮಂದಿ ಮಕ್ಕಳು ಪಟಾಕಿ ಹಾನಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

  • ಪಟಾಕಿಗೆ ಬೆಂಕಿ ಹಚ್ಚಲು ಹೋಗಿ ಬಾಲಕನ ಮುಖಕ್ಕೆ ಗಾಯ

    ಪಟಾಕಿಗೆ ಬೆಂಕಿ ಹಚ್ಚಲು ಹೋಗಿ ಬಾಲಕನ ಮುಖಕ್ಕೆ ಗಾಯ

    ಬೆಂಗಳೂರು: ಪಟಾಕಿಯಿಂದ ಬಾಲಕನೊಬ್ಬ ಹಾನಿಗೊಳಗಾದ ಮೊದಲ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.

    ಮಾಸ್ಟರ್ ಎಸ್(12) ಗಾಯಗೊಂಡ ಬಾಲಕ. ಬೆಂಗಳೂರಿನ ವಿಜಯಾನಂದ ನಗರದ ನಿವಾಸಿಯಾಗಿರುವ ಈತನ ಮುಖಕ್ಕೆ ಗಾಯಗಳಾಗಿದ್ದು, ಮಿಂಟೋ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಹೂವಿನ ಕುಂಡ ಹಚ್ಚುವಾಗ ಮುಖಕ್ಕೆ ಗಾಯ ಆಗಿದೆ. ಮೂಗು ಮತ್ತು ಕಣ್ಣಿನ ಮೇಲ್ಭಾಗದ ಚರ್ಮ ಸುಟ್ಟು ಹೋಗಿದೆ. ಕಣ್ಣಿಗೆ ಹಾನಿಯಾಗಿರುವ ಸಾಧ್ಯತೆ ಇದ್ದು, ಸದ್ಯಕ್ಕೆ ಯಾವುದೇ ಅಪಾಯ ಇಲ್ಲ. ಮಿಂಟೋ ಆಸ್ಪತ್ರೆಯ ವೈದ್ಯರು ಬಾಲಕನಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

  • ಉಡುಪಿಯಲ್ಲಿ ಸೌಂಡ್ ಮಾಡ್ತಿದೆ ಬಿದಿರು ಪಟಾಕಿ- ರಾಸಾಯನಿಕ ಇಲ್ಲ, ಹಸಿರು ಪಟಾಕಿಯೂ ಅಲ್ಲ

    ಉಡುಪಿಯಲ್ಲಿ ಸೌಂಡ್ ಮಾಡ್ತಿದೆ ಬಿದಿರು ಪಟಾಕಿ- ರಾಸಾಯನಿಕ ಇಲ್ಲ, ಹಸಿರು ಪಟಾಕಿಯೂ ಅಲ್ಲ

    ಉಡುಪಿ: ಕೊರೊನಾ ಕರಾಳತೆಯಿಂದ ಹೊರಬಂದು ದೀಪಾವಳಿಗೆ ಪಟಾಕಿ ಸಿಡಿಸೋಣ ಅಂತ ಜನ ಹಾಕಿದ್ದ ಲೆಕ್ಕಾಚಾರ ಉಲ್ಟಾ ಆಗಿದೆ. ರಾಜ್ಯ ಸರ್ಕಾರ ರಾಸಾಯನಿಕ ಪಟಾಕಿ ನಿಷೇಧ ಮಾಡಿ, ದುಷ್ಪರಿಣಾಮ ರಹಿತ ಪಟಾಕಿಗೆ ಮಣೆ ಹಾಕಿದೆ. ನಿಮ್ಮ ಪಟಾಕಿ ರಗಳೆಯೇ ಬೇಡ ಅಂತ ಉಡುಪಿಯ ಪರ್ಕಳ ಫ್ರೆಂಡ್ಸ್ ತಾವೇ ಪಟಾಕಿ ತಯಾರು ಮಾಡಲು ಮುಂದಾಗಿದ್ದಾರೆ.

    ಭೂಮಿ ಅದುರಿ ಬಾನು ಬಿರಿಯುವ ಪಟಾಕಿಗೆ ಈ ಬಾರಿ ಕೊರೊನಾ ಬ್ರೇಕ್ ಹಾಕಿದೆ. ಕಣ್ಣು ಬಿಡಲಾಗದ, ದಟ್ಟ ಹೊಗೆಯಿಂದ ಸುತ್ತಲ ಪರಿಸರ ನಾಶ ಮಾಡುವ ಪಟಾಕಿಯನ್ನು ಸಿಎಂ ಯಡಿಯೂರಪ್ಪ ಬ್ಯಾನ್ ಮಾಡಿದ್ದಾರೆ. ತಮಿಳ್ನಾಡು ಪಟಾಕಿಯೂ ಬೇಡ, ಹಸಿರು ಪಟಾಕಿಯೂ ಬೇಡ ಅಂತ ಉಡುಪಿಯ ಪರ್ಕಳ ಫ್ರೆಂಡ್ಸ್ ಬಿದಿರು ಪಟಾಕಿ ತಯಾರಿಸಿದ್ದಾರೆ.

    ಪಕ್ಕದ ಖಾಲಿ ಜಮೀನಿನಲ್ಲಿದ್ದ ಬಿದಿರು ಕಡಿದು ಶುಚಿ ಮಾಡಿದ್ದಾರೆ. ಏಳು ಗಂಟು ಇರುವ ಒಂದು ತುಂಡು ಬಿದಿರು. ಬುಡದ ಒಂದು ಗಂಟು ಬಿಟ್ಟು ಒಂದು ಬದಿಯಲ್ಲಿ ರಂಧ್ರ ಕೊರೆಯಬೇಕು. ಬಿದಿರು ಕೋಲಿನ ಎಲ್ಲಾ ಗಂಟುಗಳನ್ನು ಬಿಡಿಸಿದರೆ ಬಿದಿರು ಪಟಾಕಿ ಅರ್ಧ ರೆಡಿ.

    ಬಿದಿರನ್ನು ಅಡ್ಡ ಮಲಗಿಸಿ ರಂಧ್ರಕ್ಕೆ ಸ್ವಲ್ಪ ಸೀಮೆ ಎಣ್ಣೆ ಸುರಿದು, ಸೈಕಲ್ ಪಂಪ್ ನಲ್ಲಿ ಅದೇ ರಂಧ್ರಕ್ಕೆ ಗಾಳಿ ಹಾಕಿ, ಅದೇ ರಂಧ್ರದ ಮೇಲೆ ಬೆಂಕಿ ಸೋಕಿಸಿದರೆ ಸಾಕು ಢಂ..! ಎಂಬ ಶಬ್ದ ಬರುತ್ತದೆ. ಹೊಗೆಯಿಲ್ಲ, ರಾಶಿ ಕಸ ಇಲ್ಲ. ನಯಾ ಪೈಸೆ ಖರ್ಚಿಲ್ಲ. ಮತ್ತೆ ಎರಡು ಚಮಚ ಸೀಮೆಯೆಣ್ಣೆ ತುಂಬಿಸಿ ಗಾಳಿ ಹಾಕಿ ಬೆಂಕಿಯಿಟ್ಟರೆ ದಡಂ ಎಂಬ ಸದ್ದು. ಇದು ದೇಸಿ ಪಟಾಕಿ.

    ಇದು ನಮ್ಮ ಪೂರ್ವಜರ ಕೊಡುಗೆ. 30-40 ವರ್ಷಗಳಿಂದ ಈ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಯಾರೂ ತಯಾರಿಸಿರಲಿಲ್ಲ. ಸ್ಥಳೀಯರೊಬ್ಬರು ಬಿದಿರು ಪಟಾಕಿ ತಯಾರಿಸುವ ಬಗ್ಗೆ ಐಡಿಯಾ ಕೊಟ್ಟರು. ಗ್ರಾಮೀಣ ಪ್ರದೇಶದಿಂದ ಬಿದಿರು ತಂದು ವೆಲ್ಡಿಂಗ್ ಶಾಪ್ ನಲ್ಲಿ ಅದಕ್ಕೆ ರಂಧ್ರ ಕೊರೆಸಿ ಪಕ್ಕಾ ದೇಸಿ ಪಟಾಕಿಯನ್ನು ಸಿದ್ಧ ಮಾಡಿದ್ದೇವೆ. ಸರ್ಕಾರದ ಆದೇಶವನ್ನು ಉಳಿಸಿದಂತಾಯ್ತು ನಮ್ಮ ಹಳೆಯ ಸಂಪ್ರದಾಯವನ್ನು ಮತ್ತೆ ನೆನಪಿಸಿಕೊಂಡದ್ದು ಆಯಿತು. ನಾವು ಪರ್ಕಳದ ಗೆಳೆಯರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದೇವೆ ಎಂದು ಗಣೇಶ್ ಪರ್ಕಳ ಮಾಹಿತಿ ನೀಡಿದರು.

    ಬಿದಿರಲ್ಲಿ ಈ ಶಬ್ದ ಸೃಷ್ಟಿಯಾಗೋದು ಬಹಳ ಸಿಂಪಲ್. ಸೀಮೆಯೆಣ್ಣೆಯಿರುವ ಮುಚ್ಚಿದ ಬಿದಿರಿನೊಳಗೆ ಭಾರೀ ಪ್ರಮಾಣದಲ್ಲಿ ಗಾಳಿ ತುಂಬಿಕೊಂಡಾಗ ಬಿಸಿ ನಿರ್ಮಾಣವಾಗುತ್ತದೆ. ರಂಧ್ರದಿಂದ ಪೈಪ್ ತೆಗೆದು ಬೆಂಕಿ ಸೋಕಿಸಿದಾಗ ದೊಡ್ಡ ಶಬ್ದ ಸೃಷ್ಟಿಯಾಗುತ್ತದೆ. ಹಿಂದಿನ ಕಾಲದಲ್ಲಿ ಗದ್ದೆಗೆ ಬರುವ ಕಾಡು ಪ್ರಾಣಿಗಳನ್ನು ಓಡಿಸಲು ಈ ಟೆಕ್ನಿಕ್ ಬಳಸಲಾಗುತ್ತಿತ್ತು. ರಾಜ್ಯದಲ್ಲಿ ಹಸಿರು ಪಟಾಕಿ ಸ್ಪೋಟವಾಗುವ ಸಂದರ್ಭದಲ್ಲಿ ಉಡುಪಿಯಲ್ಲಿ ಬಿದಿರು ಪಟಾಕಿ ಸೌಂಡು ಮಾಡುತ್ತಿದೆ.

  • ರಾಜ್ಯದಲ್ಲಿ ದೀಪಾವಳಿಗೆ ಪಟಾಕಿ ನಿಷೇಧ: ಸಿಎಂ

    ರಾಜ್ಯದಲ್ಲಿ ದೀಪಾವಳಿಗೆ ಪಟಾಕಿ ನಿಷೇಧ: ಸಿಎಂ

    ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ಬಾರಿ ದೀಪಾವಳಿಗೆ ಪಟಾಕಿಯನ್ನು ನಿಷೇಧ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

    ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೀಪಾವಳಿಗೆ ಯಾವುದೇ ರೀತಿಯ ಪಟಾಕಿಗೆ ಅವಕಾಶ ಇರೋದಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದಿಂದ ಪಟಾಕಿ ನಿಷೇಧಕ್ಕೆ ನಿರ್ಧಾರ ಮಾಡಲಾಗಿದೆ. ಅಲ್ಲದೆ ಪಟಾಕಿ ನಿಷೇಧಿಸಿ ಸರ್ಕಾರದಿಂದ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸುವುದಾಗಿ ಬಿಎಸ್ ವೈ ತಿಳಿಸಿದರು.

    ಇದೇ ವೇಳೆ ಉಪಚುನಾವಣೆ ಫಲಿತಾಂಶ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ನೂರಕ್ಕೆ ನೂರು ಎರಡೂ ಕ್ಷೇತ್ರಗಳಲ್ಲಿ ಗೆಲ್ಲಲಿದ್ದೇವೆ. ನಾನು ಹೇಳಬೇಕಾದರೆ ನೂರಾರು ಬಾರಿ ಲೆಕ್ಕಾಚಾರ ಹಾಕಿನೇ ನಾನು ಹೇಳೋದು. ಇದುವರೆಗೂ ನಾನು ಹೇಳಿದ್ದು ಸುಳ್ಳಾಗಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಮಾತನಾಡಿ, ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ. ಫಲಿತಾಂಶ ಬಂದ ಬಳಿಕ ಫೋನ್ ಮೂಲಕ ಸಂಪರ್ಕ ಮಾಡಿ ವಿಸ್ತರಣೆ ಮಾಡಬಹುದಾ ನೋಡುತ್ತೇನೆ. ಇಲ್ಲ ಅಂದ್ರೆ 11ರಂದು ದೆಹಲಿಗೆ ಹೋಗಿ ಬರುವುದಾಗಿ ಸಿಎಂ ತಿಳಿಸಿದರು.

    ಮದಲೂರು ಕೆರೆಗೆ ನೀರು ಹರಿಸುವ ವಿಚಾರ ಮಾತನಾಡಿ, 6 ತಿಂಗಳಲ್ಲ, ಮೂರೇ ತಿಂಗಳಲ್ಲಿ ನೀರು ಹರಿಸ್ತೀವಿ. ಈಗಾಗಲೇ ತುಮಕೂರು ಡಿಸಿ ಜೊತೆ ಚರ್ಚೆ ಮಾಡಿದ್ದೇನೆ. ಕೆರೆ ಕ್ಲೀನ್ ಹಾಗೂ ಕಾಲುವೆ ಮೂಲಕ ನೀರು ಹರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದರು.

  • ಸೋಂಕಿತರ ಪ್ರಾಣಕ್ಕೆ ಕಂಟಕ – ರಾಜ್ಯದಲ್ಲೂ ನಿಷೇಧ ಆಗುತ್ತಾ ಪಟಾಕಿ?

    ಸೋಂಕಿತರ ಪ್ರಾಣಕ್ಕೆ ಕಂಟಕ – ರಾಜ್ಯದಲ್ಲೂ ನಿಷೇಧ ಆಗುತ್ತಾ ಪಟಾಕಿ?

    ಬೆಂಗಳೂರು: ದೀಪಾವಳಿಗೆ ರಾಜ್ಯದಲ್ಲೂ ಪಟಾಕಿ ನಿಷೇಧ ಆಗುತ್ತಾ ಎಂಬ ಪ್ರಶ್ನೆಯೊಂದು ಮೂಡಿದ್ದು, ಇಂದು ಆರೋಗ್ಯ ಇಲಾಖೆಗೆ ಶಿಫಾರಸು ಮಾಡುವ ಸಾಧ್ಯತೆಗಳಿವೆ.

    ಕೋವಿಡ್ ಸಲಹಾ ಸಮಿತಿಯಿಂದ ಪಟಾಕಿ ನಿಷೇಧಕ್ಕೆ ಸಲಹೆ ನೀಡುವ ನಿರೀಕ್ಷೆ ಇದೆ. ಈ ಶಿಫಾರಸು ಆಧರಿಸಿ ರಾಜ್ಯದಲ್ಲಿ ಪಟಾಕಿ ನಿಷೇಧವಾಗುವ ಸಾಧ್ಯತೆಗಳಿವೆ. ಪಟಾಕಿ ನಿಷೇಧದ ಬಗ್ಗೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಸುಳಿವು ನೀಡಿದ್ದಾರೆ. ಪಟಾಕಿ ಸಿಡಿಸುವುದರಿಂದ ಕೋವಿಡ್ ಸೋಂಕಿತರ ಮೇಲೆ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ಸಚಿವರ ಜೊತೆಗಿನ ಸಭೆಯಲ್ಲಿ ತಜ್ಞ ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪಟಾಕಿ ಹೊಡೆದು ಹೃದಯ ಸಮಸ್ಯೆ ತಂದುಕೊಳ್ಳಬೇಡಿ. ಕೋವಿಡ್ ಸೋಂಕು ನೇರವಾಗಿ ಶ್ವಾಸಕೋಶದ ಮೇಲೆ ದಾಳಿ ಮಾಡುತ್ತೆ. ಪಟಾಕಿ ಹೊಡೆದರೆ ವಾಯುಮಾಲಿನ್ಯ ಅಧಿಕಗೊಂಡು ಉಸಿರಾಟ ಸಮಸ್ಯೆ ಉಂಟಾಗುತ್ತದೆ. ಸೋಂಕಿತರ ಪ್ರಾಣಕ್ಕೆ ಪಟಾಕಿ ವಾಯುಮಾಲಿನ್ಯವೇ ಕಂಟಕ ಆಗಬಹುದು. ದೀಪ ಬೆಳಗಿ ದೀಪಾವಳಿ ಅಚರಿಸಿ, ಪಟಾಕಿ ಮಾತ್ರ ಹೊಡೀಬೇಡಿ ಎಂದು ಜನರಿಗೆ ತಜ್ಞರು ಸಲಹೆ ನೀಡಿದ್ದಾರೆ.

    ದೀಪಾವಳಿ ಸರಳ ಆಚರಣೆಯ ಬಗ್ಗೆ ನಾವು ಚಿಂತನೆ ಮಾಡಬೇಕು. ಜನರ ಜೀವ ಮುಖ್ಯ. ಪಟಾಕಿಯಿಂದ ಕೆಮಿಕಲ್ಸ್ ನಿಂದ ಕೊರೊನಾ ಸೋಂಕಿತರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ವಾಯು ಮಾಲಿನ್ಯದಿಂದ ಹೈರಿಸ್ಕ್ ಕೇಸ್ ಗಳಿಗೆ ಡೇಂಜರ್ ಆಗುತ್ತೆ. ಹೈರಿಸ್ಕ್ ಕೇಸ್ ಗಳ ಬಗ್ಗೆ ನಿಗಾ ಇಡಬೇಕು. ದೀಪಾವಳಿ ಆಚರಣೆಯಿಂದ ಗುಂಪು ಗೂಡುತ್ತಾರೆ ಅದು ಡೇಂಜರ್ ಎಂದು ಅಭಿಪ್ರಾಯಿಸಿದ್ದಾರೆ.

    ಏನು ಮಾರ್ಗ ಸೂಚಿಗಳನ್ನ ರೂಪಿಸಬೇಕು?
    ದೀಪಾವಳಿ ಸರಳ ಆಚರಣೆಗೆ ಅವಕಾಶ ಕೊಡಬೇಕು. ಗುಂಪು ಗೂಡದಂತೆ ವಾರಿಯರ್ಸ್ ನಿಗಾ ವಹಿಸಬೇಕು. ಮಾಸ್ಕ್ ಕಡ್ಡಾಯವಾಗಿ ಮಾಡಲೇಬೇಕು. ಸೊಂಕು ಹೆಚ್ಚಿರುವ ಪ್ರದೇಶದಲ್ಲಿ ಪಟಾಕಿ ಸಂಪೂರ್ಣ ನಿಷೇಧ ಮಾಡಬೇಕು

  • ಪ್ರಾಣಿಗಳೊಂದಿಗೆ ಹೇಡಿತನದ ಕೃತ್ಯಕ್ಕೆ ಅಂತ್ಯ ಹಾಡೋಣ- ವಿರಾಟ್ ಕರೆ

    ಪ್ರಾಣಿಗಳೊಂದಿಗೆ ಹೇಡಿತನದ ಕೃತ್ಯಕ್ಕೆ ಅಂತ್ಯ ಹಾಡೋಣ- ವಿರಾಟ್ ಕರೆ

    ಮುಂಬೈ: ಪೈನಾಪಲ್‍ನಲ್ಲಿ ಪಟಾಕಿ ಇಟ್ಟು 15 ವರ್ಷದ ಗರ್ಭಿಣಿ ಆನೆಯನ್ನು ಕೊಲೆಗೈದ ಹೀನ ಕೃತ್ಯವನ್ನು ಕ್ರೀಡಾಪಟುಗಳು ಖಂಡಿಸಿ, ಅಸಮಾಧಾನ ಹೊರಹಾಕಿದ್ದಾರೆ. ಪ್ರಾಣಿಗಳನ್ನು ಪ್ರೀತಿಯಿಂದ ನೋಡಿಕೊಳ್ಳಬೇಕೆಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜನರಿಗೆ ಮನವಿ ಮಾಡಿಕೊಂಡಿದ್ದಾರೆ.

    ಆನೆ ಹಾಗೂ ಅದರ ಗರ್ಭದಲ್ಲಿ ಮರಿಯಾನೆ ಇರುವ ಕಾರ್ಟೂನ್ ಫೋಟೋವನ್ನು ಟ್ವೀಟ್ ಮಾಡಿರುವ ವಿರಾಟ್ ಕೊಹ್ಲಿ, “ಕೇರಳದ ಘಟನೆಯ ಬಗ್ಗೆ ಕೇಳಿ ತುಂಬಾ ಆಘಾತವಾಯಿತು. ಪ್ರಾಣಿಗಳನ್ನು ಪ್ರೀತಿಯಿಂದ ಕಾಣಬೇಕು, ಅವುಗಳ ಬಗ್ಗೆ ಕಾಳಜಿ ವಹಿಸಬೇಕು ಎಂದು ಮನವಿ ಮಾಡುತ್ತೇನೆ. ಇಂತಹ ಹೇಡಿತನ ಕೃತ್ಯಗಳಿಗೆ ಅಂತ್ಯ ಹಾಡೋಣ” ಎಂದು ಕರೆ ನೀಡಿದ್ದಾರೆ.

    ಟೀಂ ಇಂಡಿಯಾ ಸ್ಪಿನ್ನರ್ ಹರ್ಭಜನ್ ಸಿಂಗ್, “ಪೈನಾಪಲ್‍ನಲ್ಲಿ ಪಟಾಕಿ ತುಂಬಿ ಗರ್ಭಿಣಿ ಆನೆಯನ್ನು ಕೊಂದವರಿಗೆ ಶಿಕ್ಷೆಯಾಗಬೇಕು. ಮುಗ್ಧ ಆನೆ ಮೇಲೆ ಇಂತಹ ಕ್ರೌರ್ಯ ಎಸೆಗಿದ್ದು ಎಷ್ಟು ಸರಿ” ಎಂದು ಪ್ರಶ್ನಿಸಿದ್ದಾರೆ. ಭಾರತೀಯ ಮಹಿಳಾ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಟ್ವಿಟ್ ಮಾಡಿ, ಇದು ತುಂಬಾ ದುಃಖಕರ ಘಟನೆ ಎಂದು ಹೇಳಿದ್ದಾರೆ.

    ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ, “ಅವಳು ಮುಗ್ಧ ಗರ್ಭಿಣಿ ಆನೆ. ರಾಕ್ಷಸರೇ ನೀವು ಶಿಕ್ಷೆ ಅನುಭವಿಸುತ್ತೀರಾ ಎಂದು ಭಾವಿಸುತ್ತೇನೆ. ನಾವು ಪ್ರಕೃತಿಯನ್ನು ಮತ್ತೆ ಮತ್ತೆ ವಿಫಲಗೊಳಿಸುತ್ತಲೇ ಇರುತ್ತೇವೆ. ಹಾಗಾಗಿ ನಾವು ಹೆಚ್ಚು ವಿಕಸನಗೊಂಡಿರುವ ಪ್ರಭೇದ ಎನ್ನುವುದನ್ನು ನನಗೆ ತಿಳಿಸಿಕೊಡಿ” ಎಂದು ಟ್ವಿಟ್ ಮಾಡಿದ್ದಾರೆ.

    ಏನಿದು ಪ್ರಕರಣ?:
    ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಸ್ಥಳೀಯರು ಬುಧವಾರ ಪಟಾಕಿ ತುಂಬಿದ ಪೈನಾಪಲ್ ಹಣ್ಣನ್ನು ಗರ್ಭಿಣಿ ಆನೆಗೆ ತಿನ್ನಿಸಿದ್ದರು. ನಂತರ ಆನೆಯ ಬಾಯಿಯಲ್ಲಿ ಪಟಾಕಿ ಬ್ಲಾಸ್ಟ್ ಆಗಿ ಗಂಭೀರವಾಗಿ ಗಾಯಗೊಂಡಿತ್ತು. ಗರ್ಭಿಣಿ ಆನೆ ಯಾವೊಬ್ಬ ಗ್ರಾಮಸ್ಥರಿಗೂ ತೊಂದರೆ ನೀಡಿರಲಿಲ್ಲ. ಬಾಯಿಯಲ್ಲಿ ಪಟಾಕಿ ಸಿಡಿಯುತ್ತಿದ್ದಂತೆ ನೋವಿನಲ್ಲಿ ರಸ್ತೆ ತುಂಬಾ ಓಡಾಡಿತ್ತು. ಬಳಿಕ ವೆಲ್ಲಿಯಾರ್ ನದಿಯಲ್ಲಿ ಮುಳುಗಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ ಆನೆಯನ್ನು ಮೇಲೆತ್ತಲು ಅರಣ್ಯ ಇಲಾಖೆ ಅಧಿಕಾರಿಗಳು ನೀಲಕಂಠನ್ ಹಾಗೂ ಸುರೇಂದ್ರನ್ ಎಂಬ ಎರಡು ಆನೆಗಳನ್ನು ಕರೆ ತಂದಿದ್ದು, ಅಷ್ಟೊತ್ತಿಗಾಗಲೇ ಸಂಜೆ 4ರ ಸುಮಾರಿಗೆ ಆನೆ ನದಿಯಲ್ಲೇ ಸಾವನ್ನಪ್ಪಿತ್ತು.

    ಮಲಪ್ಪುರಂ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಅರಣ್ಯಾಧಿಕಾರಿಯೊಬ್ಬರು ಆನೆ ನೋವಿನ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡಿದ್ದರು.

  • ಆಹಾರ ಅರಸಿ ಗ್ರಾಮಕ್ಕೆ ಬಂದ ಗರ್ಭಿಣಿ ಆನೆ- ಪೈನಾಪಲ್‍ನಲ್ಲಿ ಪಟಾಕಿ ಇಟ್ಟು ಕೊಂದ ಪಾಪಿಗಳು

    ಆಹಾರ ಅರಸಿ ಗ್ರಾಮಕ್ಕೆ ಬಂದ ಗರ್ಭಿಣಿ ಆನೆ- ಪೈನಾಪಲ್‍ನಲ್ಲಿ ಪಟಾಕಿ ಇಟ್ಟು ಕೊಂದ ಪಾಪಿಗಳು

    – ಯಾರಿಗೂ ತೊಂದರೆ ಕೊಡದಿದ್ದರೂ ಆನೆ ಕೊಂದರು
    – ಹೊಟ್ಟೆಯಲ್ಲಿನ ಮಗು ನೆನೆದು, ಆಘಾತವಾಗಿ ಪ್ರಾಣ ಬಿಟ್ಟ ಆನೆ

    ತಿರುವನಂತರಪುರಂ: ಪಾಪಿಗಳು ಪೈನಾಪಲ್ ಹಣ್ಣಿನ ಒಳಗಡೆ ಪಟಾಕಿ ಇಟ್ಟು ಗರ್ಭಿಣಿ ಆನೆಗೆ ತಿನ್ನಿಸಿದ್ದು, ಪಟಾಕಿ ಸಿಡಿದು ಆನೆ ಮೃತಪಟ್ಟಿರುವ ಧಾರುಣ ಘಟನೆ ಕೇರಳದಲ್ಲಿ ನಡೆದಿದೆ.

    ಬುಧವಾರ ಘಟನೆ ನಡೆದಿದ್ದು, ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಸ್ಥಳೀಯರು ಪಟಾಕಿ ತುಂಬಿದ ಪೈನಾಪಲ್ ಹಣ್ಣನ್ನು ಗರ್ಭಿಣಿ ಆನೆಗೆ ತಿನ್ನಿಸಿದ್ದಾರೆ. ನಂತರ ಆನೆಯ ಬಾಯಿಯಲ್ಲಿ ಪಟಾಕಿ ಬ್ಲಾಸ್ಟ್ ಆಗಿ ಸಾವನ್ನಪ್ಪಿದೆ. ಘಟನೆ ಸಂಭವಿಸುತ್ತಿದ್ದಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ. ಆದರೆ ಆನೆ ಆಗಲೇ ಸಾವನ್ನಪ್ಪಿದೆ. ಘಟನೆ ನಡೆದ ಕುರಿತು ಮಲಪ್ಪುರಂ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಅರಣ್ಯಾಧಿಕಾರಿಯೊಬ್ಬರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡಿದ್ದಾರೆ.

    മാപ്പ്… സഹോദരീ .. മാപ്പ് …
    അവൾ ആ കാടിന്റെ പൊന്നോമനയായിരുന്നിരിക്കണം. അതിലുപരി അവൾ അതിസുന്ദരിയും സൽസ്വഭാവിയും…

    Posted by Mohan Krishnan on Saturday, May 30, 2020

    ಗರ್ಭಿಣಿ ಆನೆ ಆಹಾರ ಹುಡುಕಿಕೊಂಡು ಗ್ರಾಮಕ್ಕೆ ತೆರಳಿತ್ತು. ಹೀಗೆ ದಾರಿಯಲ್ಲಿ ಓಡಾಡುತ್ತಿರುವಾಗ ಕೆಲ ಗ್ರಾಮಸ್ಥರು ಪಟಾಕಿ ತುಂಬಿದ ಪೈನಾಪಲ್‍ನ್ನು ಆನೆಯ ಸೊಂಡಿಲಿಗೆ ಇಟ್ಟಿದ್ದು, ಆನೆ ಅದನ್ನು ತಿಂದಿದೆ. ಬಾಯಿಯಲ್ಲಿ ಹಾಕಿಕೊಳ್ಳುತ್ತಿದ್ದಂತೆ ಪಟಾಕಿ ಸಿಡಿದಿದೆ. ಆನೆ ಸ್ಥಳದಲ್ಲೇ ಸಾವನ್ನಪ್ಪಿದೆ.

    ಅರಣ್ಯಾಧಿಕಾರಿ ಮೋಹನ್ ಕೃಷ್ಣನ್ ಅವರು ಈ ವಿಡಿಯೋವನ್ನು ಫೇಸ್ಬುಕ್‍ನಲ್ಲಿ ಹಂಚಿಕೊಂಡಿದ್ದು, ಮನಮುಟ್ಟುವ ಸಾಲುಗಳನ್ನು ಬರೆದಿದ್ದಾರೆ. ಅವಳು ಎಲ್ಲರನ್ನೂ ನಂಬಿದ್ದಳು, ಯಾವಾಗ ತಾನು ತಿಂದ ಪೈನಾಪಲ್ ಬ್ಲಾಸ್ಟ್ ಆಯಿತೋ ಆಗ ಆಘಾತಕ್ಕೊಳಗಾಗಿದ್ದಾಳೆ. ಆದರೆ ಅವಳಿಗಾಗಿ ಅಲ್ಲ ಹೊಟ್ಟೆಯಲ್ಲಿರುವ ತನ್ನ ಮಗುವಿಗಾಗಿ. ಅವಳು ಇನ್ನು 18-20 ತಿಂಗಳಲ್ಲಿ ಮಗುವಿಗೆ ಜನ್ಮ ನೀಡುತ್ತಿದ್ದಳು ಎಂದು ಬರೆದುಕೊಂಡಿದ್ದಾರೆ.

    ಪಟಾಕಿ ಸಿಡಿದಿದ್ದರಿಂದ ಆನೆಯ ಬಾಯಿ ಹಾಗೂ ನಾಲಗೆಗೆ ಗಂಭೀರ ಗಾಯಗಳಾಗಿದ್ದವು. ಗರ್ಭಿಣಿ ಆನೆ ಯಾವೊಬ್ಬ ಗ್ರಾಮಸ್ಥರಿಗೂ ತೊಂದರೆ ನೀಡಿರಲಿಲ್ಲ. ಬಾಯಿಯಲ್ಲಿ ಪಟಾಕಿ ಸಿಡಿಯುತ್ತಿದ್ದಂತೆ ನೋವಿನಲ್ಲಿ ರಸ್ತೆ ತುಂಬಾ ಓಡಾಡಿದೆ. ಬಾಯಲ್ಲಿ ಪಟಾಕಿ ಸಿಡಿಯುತ್ತಿದ್ದಂತೆ ಆನೆ ವೆಲ್ಲಿಯಾರ್ ನದಿಯಲ್ಲಿ ಮುಳುಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಆನೆಯನ್ನು ಮೇಲೆತ್ತಲು ಅರಣ್ಯ ಇಲಾಖೆ ಅಧಿಕಾರಿಗಳು ನೀಲಕಂಠನ್ ಹಾಗೂ ಸುರೇಂದ್ರನ್ ಎಂಬ ಎರಡು ಆನೆಗಳನ್ನು ಕರೆ ತಂದಿದ್ದು, ಅಷ್ಟೊತ್ತಿಗಾಗಲೇ ಸಂಜೆ 4ರ ಸುಮಾರಿಗೆ ಆನೆ ನದಿಯಲ್ಲೇ ಸಾವನ್ನಪ್ಪಿದೆ.

  • ಪಟಾಕಿ ಸಿಡಿಸಿದ್ದಕ್ಕೆ ವ್ಯಕ್ತಿಯ ಬರ್ಬರ ಹತ್ಯೆ

    ಪಟಾಕಿ ಸಿಡಿಸಿದ್ದಕ್ಕೆ ವ್ಯಕ್ತಿಯ ಬರ್ಬರ ಹತ್ಯೆ

    ಭುವನೇಶ್ವರ್: ಪಟಾಕಿ ಸಿಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಗಿ ವ್ಯಕ್ತಿಯನ್ನು ಕೊಲೆ ಮಾಡಿದ ಘಟನೆ ಭಾನುವಾರ ಒಡಿಶಾದ ಭುವನೇಶ್ವರ್ ನಲ್ಲಿ ನಡೆದಿದೆ.

    ಅಮರೇಶ್ ನಾಯಕ್ ಕೊಲೆಯಾದ ವ್ಯಕ್ತಿ. ಅಮರೇಶ್ ತನ್ನ ಸ್ನೇಹಿತರ ಜೊತೆ ರಾತ್ರಿ ಪಟಾಕಿ ಸಿಡಿಸುತ್ತಿದ್ದನು. ಈ ವೇಳೆ ಶಬ್ದ ಕೇಳಲಾಗದೆ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಬಂದು ಪಟಾಕಿ ಸಿಡಿಸಬೇಡಿ ಎಂದು ಯುವಕರಿಗೆ ತಿಳಿಸಿದರು.

    ಇದರಿಂದ ಕೋಪಗೊಂಡ ಅಮರೇಶ್ ಹಾಗೂ ಆತನ ಸ್ನೇಹಿತರು ಜನರ ಜೊತೆ ವಾಗ್ವಾದ ನಡೆಸಿದರು. ಹೀಗೆ ಯುವಕರು ಹಾಗೂ ಜನರ ನಡುವೆ ವಾಗ್ವಾದ ಹೆಚ್ಚಾದಾಗ ಗುಂಪೊಂದು ತಲ್ವಾರ್ ನಿಂದ ಅಮರೇಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ.

    ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಅಮರೇಶ್‍ನನ್ನು ಸ್ನೇಹಿತರು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಅಷ್ಟರಲ್ಲಿ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದರು. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇತ್ತ ಅಮರೇಶ್ ಮೇಲೆ ಹಲ್ಲೆ ಮಾಡಿದ ಗುಂಪು ಪರಾರಿಯಾಗಿದೆ.

    ಈ ಘಟನೆ ಏರ್ ಫೀಲ್ಡ್ ಪೊಲೀಸ್ ವ್ಯಕ್ತಿಯಲ್ಲಿರುವ ಸುಂದೇರ್‍ಪದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.