Tag: CPM

  • 24 ವರ್ಷಗಳ ಬಳಿಕ ಹಿಮಾಚಲ ಪ್ರದೇಶದಲ್ಲಿ ಖಾತೆ ತೆರೆದ ಸಿಪಿಐ(ಎಂ)-ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಗೆ ಸೋಲು

    24 ವರ್ಷಗಳ ಬಳಿಕ ಹಿಮಾಚಲ ಪ್ರದೇಶದಲ್ಲಿ ಖಾತೆ ತೆರೆದ ಸಿಪಿಐ(ಎಂ)-ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಗೆ ಸೋಲು

    ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಹಲವು ಸಮೀಕ್ಷೆಗಳ ಫಲಿತಾಂಶದಂತೆ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚನೆ ಮಾಡಲು ಸಿದ್ಧವಾದರೆ, ಕಳೆದ 24 ವರ್ಷಗಳ ಅವಧಿಯಲ್ಲಿ ಹಿಮಾಚಲದಲ್ಲಿ ಒಂದು ಸ್ಥಾನವನ್ನು ಗೆಲ್ಲಲು ವಿಫಲವಾಗಿದ್ದ ಸಿಪಿಐ(ಎಂ), ಈ ಬಾರಿ ಒಂದು ಕ್ಷೇತ್ರವನ್ನು ಗೆಲ್ಲುವ ಮೂಲಕ ಖಾತೆ ತೆರೆದಿದೆ.

    ಹಿಮಾಚಲದ ಶಿಮ್ಲಾ ಜಿಲ್ಲೆಯ ತಿಯೋಗ್ ಕ್ಷೇತ್ರದಲ್ಲಿ ಸಿಪಿಐ(ಎಂ) ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ರಾಕೇಶ್ ಸಿಂಘಾ, ಬಿಜೆಪಿ ಅಭ್ಯರ್ಥಿ ರಾಕೇಶ್ ವರ್ಮಾ ಅವರನ್ನು ಸೋಲಿಸುವ ಮೂಲಕ ಜಯಗಳಿಸಿದ್ದಾರೆ.

    ಈ ಬಾರಿಯ ಚುನಾವಣೆಯಲ್ಲಿ ರಾಕೇಶ್ ಸಿಂಘಾ 24,791 ಮತಗಳಿಸಿದ್ದು, ಬಿಜೆಪಿಯ ರಾಕೇಶ್ ವರ್ಮಾ ಅವರಿಗೆ 22,808 ಮತಗಳು ಲಭಿಸಿವೆ. ಇನ್ನು 1993ರಲ್ಲಿ ಶಿಮ್ಲಾ ಕ್ಷೇತ್ರದಲ್ಲಿ ರಾಕೇಶ್ ಸಿಂಘಾ ಗೆಲುವು ಪಡೆದಿದ್ದರು. ಮತ್ತೆ 2012ರಲ್ಲಿ ನಡೆದ ಚುನಾವಣೆಯಲ್ಲಿ ತಿಯೋಗ್ ನಿಂದ ಸ್ಪರ್ಧಿಸಿದ್ದ ಇವರು 10 ಸಾವಿರ ಮತಗಳನ್ನು ಪಡೆದಿದ್ದರು.

    ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ದೀಪಕ್ ರಾಥೋರ್ 9,101 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನವನ್ನು ಪಡೆದಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಜಿದ್ದಾಜಿದ್ದಿಯ ಪೈಪೋಟಿ ನಡುವೆ ರಾಕೇಶ್ ಸಿಂಘಾ ಗೆದ್ದಿರುವುದು ಸಿಪಿಎಂ ಪಾಲಿಗೆ ದೊಡ್ಡ ಸಾಧನೆಯೇ ಆಗಿದೆ.

    ಬಿಜೆಪಿ ಸಿಎಂ ಅಭ್ಯರ್ಥಿಗೆ ಭಾರೀ ಮುಖಭಂಗ:
    ಇನ್ನು ಹಿಮಾಚಲದಲ್ಲಿ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದ ಬಿಜೆಪಿಯ ಪ್ರೇಮ್ ಕುಮಾರ್ ದುಮಾಲ್ ಸೋಲನ್ನು ಅನುಭವಿಸಿದ್ದು 18,559 ಮತಗಳನ್ನು ಮಾತ್ರ ಪಡೆದಿದ್ದಾರೆ. ಕಾಂಗ್ರೆಸ್ ನಿಂದ ಕಣಕ್ಕೆ ಇಳಿದಿದ್ದ ರಾಜೇಂದರ್ ರಾಣಾ 21,492 ಮತ ಪಡೆದು ಗೆಲುವು ಪಡೆದಿದ್ದಾರೆ.

  • ಕೇರಳದಲ್ಲಿ ಬಿಜೆಪಿಯ ಜನರಕ್ಷಾ ಯಾತ್ರೆಗೆ ಅಮಿತ್ ಶಾ ಚಾಲನೆ

    ಕೇರಳದಲ್ಲಿ ಬಿಜೆಪಿಯ ಜನರಕ್ಷಾ ಯಾತ್ರೆಗೆ ಅಮಿತ್ ಶಾ ಚಾಲನೆ

    ತಿರುವನಂತಪುರ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೇರಳದಲ್ಲಿ ಮಂಗಳವಾರ ಜನರಕ್ಷಾ ಯಾತ್ರೆಗೆ ಚಾಲನೆ ನೀಡಿ, ಆಡಳಿತರೂಢ ಸಿಪಿಎಂ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಸಿಪಿಎಂ ಸರ್ಕಾರ `ಹತ್ಯೆ ರಾಜಕೀಯ’ ನಡೆಸುತ್ತಿದೆ ಎಂದು ಬಿಜೆಪಿ ಆರೋಪಿಸಿದ್ದು, ಕಣ್ಣೂರಿನ ಪಯ್ಯನ್ನೂರಿನಲ್ಲಿ ಅಮಿತ್ ಶಾ ಜನರಕ್ಷಾ ಯಾತ್ರೆಗೆ ಚಾಲನೆ ನೀಡಿದರು.

    ನಾಲ್ಕು ಕಿಲೋ ಮೀಟರ್ ಯಾತ್ರೆ ನಡೆಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, 2001ರಿಂದ ಇಲ್ಲಿಯವರಗೆ 120ಕ್ಕೂ ಹೆಚ್ಚು ಮಂದಿ ಬಿಜೆಪಿ ಮತ್ತು ಆರ್‍ಎಸ್‍ಎಸ್ ಕಾರ್ಯಕರ್ತರ ಹತ್ಯೆ ನಡೆದಿದೆ. ಅದರಲ್ಲೂ ಪಿಣರಾಯಿ ಅಧಿಕಾರಕ್ಕೆ ಏರಿದ ಬಳಿಕ 14 ಹತ್ಯೆಗಳು ಕಣ್ಣೂರಿನಲ್ಲಿ ನಡೆದಿದೆ. ಈ ಹತ್ಯೆಗೆ ಕಾರಣ ಯಾರು ಎನ್ನುವುದನ್ನು ತಿಳಿಸಲಿ. ಈ ಪ್ರಶ್ನೆಗೆ ಅವರು ಉತ್ತರ ನೀಡದೇ ಇದ್ದರೆ, ಅವರೇ ಈ ಹತ್ಯೆಗಳಿಗೆ ನೇರ ಹೊಣೆ ಎಂದು ವಾಗ್ದಾಳಿ ನಡೆಸಿದರು.

    ರಾಜಧಾನಿ ತಿರುವನಂತಪುರದ ವರೆಗೆ ಸುಮಾರು 15 ದಿನಗಳ ಕಾಲ ನಡೆಯಲಿರುವ ಯಾತ್ರೆಯಲ್ಲಿ ಬಿಜೆಪಿಯ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ. ಈ ಯಾತ್ರೆಯಲ್ಲಿ ಪಾಲ್ಗೊಳ್ಳಲು ಬುಧವಾರ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಕಣ್ಣೂರಿಗೆ ಆಗಮಿಸಲಿದ್ದಾರೆ.

  • ಕೇರಳ ಸಿಎಂ ತಲೆಗೆ 1 ಕೋಟಿ ಘೋಷಿಸಿದ ಬೆನ್ನಲ್ಲೇ ಆರ್‍ಎಸ್‍ಎಸ್, ಸಿಪಿಎಂ ಜಟಾಪಟಿ!

    ಕೇರಳ ಸಿಎಂ ತಲೆಗೆ 1 ಕೋಟಿ ಘೋಷಿಸಿದ ಬೆನ್ನಲ್ಲೇ ಆರ್‍ಎಸ್‍ಎಸ್, ಸಿಪಿಎಂ ಜಟಾಪಟಿ!

    ಕೊಝಿಕೋಡ್: ಕೇರಳದಲ್ಲಿ ಆರ್‍ಎಸ್‍ಎಸ್ ಮತ್ತು ಸಿಪಿಎಂ ನಡುವಿನ ಹಿಂಸಾಚಾರ ಮುಗಿಲು ಮುಟ್ಟಿದೆ. ಮಧ್ಯಪ್ರದೇಶದ ಆರ್‍ಎಸ್‍ಎಸ್ ನಾಯಕ ಚಂದ್ರಾವತ್, ಕೇರಳ ಸಿಎಂ ಪಿಣರಾಯಿ ವಿಜಯನ್ ತಲೆಗೆ ಒಂದು ಕೋಟಿ ಬಹುಮಾನ ಘೋಷಿಸಿದ ಬಳಿಕ ಇದೀಗ ಉರಿದ ಬೆಂಕಿಗೆ ತುಪ್ಪ ಸುರಿದಂತಾಗಿದೆ.

    ಈ ಘೋಷಣೆಯ ಬೆನ್ನಲ್ಲೇ ಗುರುವಾರ ಕೇರಳದ ಕೊಝಿಕೋಡ್ ಜಿಲ್ಲೆಯಲ್ಲಿರುವ ಸಿಪಿಎಂ ಕಚೇರಿಗೆ ದುಷ್ಕರ್ಮಿಗಳು ಬಾಂಬ್ ಹಾಕಿದ್ದಾರೆ. ಪರಿಣಾಮ ಕಚೇರಿಯ ಬಾಗಿಲು ಒಡೆದಿದ್ದು, ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ಯಾವುದೇ ಸಾವು, ನೋವಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಆದ್ರೆ ಈ ಘನೆಯ ಹಿಂದೆ ಬಿಜೆಪಿ ಹಾಗೂ ಆರ್‍ಎಸ್‍ಎಸ್ ಕೈವಾಡವಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    ಇದಕ್ಕೂ ಮೊದಲು ನಾದಪುರಂ ಜಿಲ್ಲೆಯಲ್ಲಿರುವ ಆರ್‍ಎಸ್‍ಎಸ್ ಕಚೇರಿಯ ಮೇಲೆ ದುಷ್ಕರ್ಮಿಗಳು ಬಾಂಬ್ ಎಸೆದಿದ್ದರು. ಘಟನೆಯಲ್ಲಿ ಇಬ್ಬರು ಆರ್‍ಎಸ್‍ಎಸ್ ಕಾರ್ಯಕರ್ತರಿಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಅವರನ್ನು ಕೊಝಿಕೋಡ್‍ನ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

    ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ಈ ಕೃತ್ಯದ ಹಿಂದೆ ಯಾರ ಕೈವಾಡವಿದೆಯೆಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.