Tag: cpi

  • “ಯಾವ ಕೇಸಲ್ಲಿ ಬೇಕಾದ್ರು ಫಿಟ್ ಮಾಡ್ತೀನಿ”- ಧಮ್ಕಿ ಹಾಕಿದ ಲೇಡಿ ಸಿಪಿಐ

    “ಯಾವ ಕೇಸಲ್ಲಿ ಬೇಕಾದ್ರು ಫಿಟ್ ಮಾಡ್ತೀನಿ”- ಧಮ್ಕಿ ಹಾಕಿದ ಲೇಡಿ ಸಿಪಿಐ

    ತುಮಕೂರು: ಜಿಲ್ಲೆಯ ತಿಲಕ್ ಪಾರ್ಕ್ ಬಳಿ ನಡೆಯುತ್ತಿದ್ದ ರೌಡಿಗಳ ಪರೇಡ್‍ನಲ್ಲಿ ಮಹಿಳಾ ಸಿಪಿಐಯೊಬ್ಬರು ‘ಲೇಡಿ ಸಿಂಗಂ’ ಆಗಲು ಹೋಗಿ ವ್ಯಾಪಕ ಟೀಕೆಗೆ ಒಳಗಾಗಿದ್ದಾರೆ. ಯಾವ ಕೇಸಲ್ಲಿ ಬೇಕಾದರು ಫಿಟ್ ಮಾಡುತ್ತೇನೆ ಎಂದು ರೌಡಿಶೀಟರ್​ಗಳಿಗೆ ಧಮ್ಕಿ ಹಾಕಿದ್ದಾರೆ.

    ಸಿಪಿಐ ಪಾರ್ವತಮ್ಮ ಲೇಡಿ ಸಿಂಗಂ ಆಗಲು ಹೋಗಿ ವ್ಯಾಪಕ ಟೀಕೆಗೆ ಒಳಗಾಗಿದ್ದಾರೆ. “ಎಲ್ಲಾ ಸರ್ವಾಂಗಗಳನ್ನ ಮುಚ್ಚಿಕೊಂಡಿರಬೇಕು, ಮಕ್ಕಳಾ ಮುಚ್ಚಿಕೊಂಡಿರಿ. ಅನ್ನ ತಿನ್ನಲು ಗತಿಯಿಲ್ಲ, ನೆಟ್ಟಗೆ ಬಟ್ಟೆ ಹಾಕೋ ಗತಿಯಿಲ್ಲ ನಿಮಗೆ” ಎಂದು ಹೀನಾಮಾನವಾಗಿ ರೌಡಿಶೀಟರ್​ಗಳಿಗೆ ಬೈದಿದ್ದಾರೆ. ಜೊತೆಗೆ ಚನ್ನಪ್ಪನ ಪಾಳ್ಯದ ಹೆಣ್ಣು ಮಕ್ಕಳು ಬಾರಿ ಆಟ ಆಡ್ತಾರೆ, ಅವರಿಗೆ ಹೇಳಿ ಎಂದು ಹೆಣ್ಣು ಮಕ್ಕಳಿಗೆ ಅವಮಾನ ಮಾಡಿದ್ದಾರೆ.

    ರೌಡಿಶೀಟರ್​ಗಳಿಗೆ , “ಮಗನೇ ಬೀದಿ ಹೆಣ ಆಗ್ತೀಯಾ, ಮದುವೆ ಮಾಡ್ಕೊಬೇಡ. ನನ್ಮಕ್ಕಳಾ ರೌಡಿಶೀಟರ್ ಗೆ ನಾನು ಏನ್ ಬೇಕಾದರೂ ಮಾಡಬಹುದು. ಯಾರ ಪರ್ಮಿಷನ್ನು ಬೇಕಾಗಿಲ್ಲ. ಯಾರಿಗೂ ಕೇಳಬೇಕಾಗಿಲ್ಲ. ನೀವು ಸಾಯೋ ತನಕನೂ ನಾವು ನಿಮ್ಮನ್ನ ಯಾವ ಕೇಸಲ್ಲಿ ಬೇಕಾದರೂ ಫಿಟ್ ಮಾಡಬಹುದು” ಎಂದು ಸಿಪಿಐ ಬಹಿರಂಗವಾಗಿ ಧಮ್ಕಿ ಹಾಕಿದ್ದಾರೆ.

    ಅಲ್ಲದೆ ಇವರಿಗೆಲ್ಲಾ ಚೆನ್ನಾಗಿ ವರ್ಕ್ ಮಾಡಿ, ಮದುವೆ ಮಾಡಿಕೊಂಡು ಹೆಂಡತಿ ಮಾಡ್ಕೊಂದರೆ ಅವಳು ಬೇರೆಯವರ ಪಾಲಾಗುತ್ತಾಳೆ ಎಂದು ಸಭ್ಯತೆ ಮೀರಿ ಪಾರ್ವತಮ್ಮ ಮಾತನಾಡಿದ್ದಾರೆ. ಜವಾಬ್ದಾರಿಯುತ ಕೆಲಸದಲ್ಲಿರುವ ಅಧಿಕಾರಿ ಈ ರೀತಿ ವರ್ತಿಸಿರುವುದಕ್ಕೆ ಸಾರ್ವಜನಿಕವಾಗಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

  • ದಲಿತ ಶಾಸಕಿಯಿಂದ ಪ್ರತಿಭಟನೆ- ಸೆಗಣಿ ಸಾರಿ ಸ್ಥಳ ಶುದ್ಧಿಗೊಳಿಸಿದ ಕಾಂಗ್ರೆಸ್

    ದಲಿತ ಶಾಸಕಿಯಿಂದ ಪ್ರತಿಭಟನೆ- ಸೆಗಣಿ ಸಾರಿ ಸ್ಥಳ ಶುದ್ಧಿಗೊಳಿಸಿದ ಕಾಂಗ್ರೆಸ್

    ತಿರುವನಂತಪುರಂ: ದಲಿತ ಶಾಸಕಿರೊಬ್ಬರು ಪಿಡಬ್ಲ್ಯುಡಿ ಕಚೇರಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ ಎಂದು ಅಲ್ಲಿನ ಯುವ ಕಾಂಗ್ರೆಸ್ ಕಾರ್ಯಕರ್ತರು ಕಚೇರಿಯನ್ನು ಸೆಗಣಿ ಸಾರುವ ಮೂಲಕ ಶುದ್ಧೀಕರಿಸಿರುವ ಘಟನೆ ಕೇರಳದಲ್ಲಿ ನಡೆದಿದೆ.

    ಈ ಘಟನೆ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ನಡೆದಿದೆ. ನಾಟಿಕಾ ಕ್ಷೇತ್ರದ ಸಿಪಿಐ ಪಕ್ಷದ ದಲಿತ ಶಾಸಕಿ ಗೀತಾ ಗೋಪಿ ಅವರು ಪ್ರತಿಭಟನೆ ಮಾಡಿದ್ದಾರೆ. ಈ ಸ್ಥಳವನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ದನದ ಸೆಗಣಿಯ ಮೂಲಕ ಶುದ್ಧೀಕರಣ ಮಾಡಿದ್ದಾರೆ. ಈ ಮೂಲಕ ಜಾತಿ ತಾರತಮ್ಯ ಮೆರೆದಿದ್ದಾರೆ ಎಂದು ದೂರು ನೀಡಲಾಗಿದೆ.

    ಗೀತಾ ಗೋಪಿ ಅವರು ತಮ್ಮ ಕ್ಷೇತ್ರದಲ್ಲಿ ರಸ್ತೆಗಳು ಸರಿ ಇಲ್ಲ ತುಂಬ ಕಳಪೆ ಕಾಮಗಾರಿ ನಡೆದಿದೆ ಎಂದು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಸಂಬಂಧ ಪಟ್ಟ ಅಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ನಂತರ ಗೀತಾ ಅವರು ಪ್ರತಿಭಟನೆ ನಿಲ್ಲಿಸಿದರು. ಈ ವೇಳೆ ಅವರು ದಲಿತ ಮಹಿಳೆ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಅವರು ಕುಳಿತ ಜಾಗಕ್ಕೆ ಸೆಗಣಿ ಸಾರಿ ಸ್ವಚ್ಛ ಮಾಡುವ ಮೂಲಕ ಜಾತಿ ನಿಂದನೆ ಮಾಡಿದ್ದಾರೆ.

    ಗೀತಾ ಗೋಪಿ ಅವರ ವಿರುದ್ಧ ಪ್ರತಿಭಟನೆ ಮಾಡಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಗೀತಾ ಗೋಪಿ ಅವರು ಜನರಿಗೆ ಮೋಸ ಮಾಡಲು ಈ ಪ್ರತಿಭಟನೆಯ ನಾಟಕ ಆಡುತ್ತಿದ್ದಾರೆ ಎಂದು ಆರೋಪ ಮಾಡಿದರು. ನಂತರ ಅವರು ಕುಳಿತು ಪ್ರತಿಭಟನೆ ಮಾಡಿದ ಸ್ಥಳವನ್ನು ನೀರು ಮತ್ತು ದನದ ಸಗಣಿ ಚುಮುಕಿಸಿ ಶುದ್ಧೀಕರಣ ಮಾಡಿದ್ದಾರೆ.

    ಈ ವಿಚಾರ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಗಮನಕ್ಕೆ ಗೀತಾ ಗೋಪಿ ಅವರು ತಂದಿದ್ದಾರೆ. ಯುವ ಕಾಂಗ್ರೆಸ್ ಕಾರ್ಯಕರ್ತರ ಈ ಕೃತ್ಯವನ್ನು ನಾವು ಒಪ್ಪುವುದಿಲ್ಲ ಎಂದು ಖಂಡಿಸಿದ್ದಾರೆ.

    ಶಾಸಕಿ ಗೀತಾ ಗೋಪಿ ಅವರು ಈ ವಿಚಾರವಾಗಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಎಸ್‍ಸಿ/ಎಸ್‍ಟಿ ಜಾತಿ ನಿಂದನೆ ಕಾಯ್ದೆಯ ಆಡಿಯಲ್ಲಿ ಚೆರ್ಪುರ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

  • ಲೋಕಸಭಾ ಚುನಾವಣೆ – ಅತಿ ಹೆಚ್ಚು ಗೆಲುವು ಸಾಧಿಸಿದ ಪಕ್ಷಗಳು

    ಲೋಕಸಭಾ ಚುನಾವಣೆ – ಅತಿ ಹೆಚ್ಚು ಗೆಲುವು ಸಾಧಿಸಿದ ಪಕ್ಷಗಳು

    ಬೆಂಗಳೂರು: ಇಲ್ಲಿಯವರೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚಿನ ಸ್ಥಾನ ಗೆದ್ದರೆ ಬಿಜೆಪಿ ಎರಡನೇ ಸ್ಥಾನ ಪಡೆದಿದೆ.

    ಇಲ್ಲಿಯವರೆಗೆ ಒಟ್ಟು 7,705 ಚುನಾವಣೆಗಳ ಪೈಕಿ ಕಾಂಗ್ರೆಸ್ 3,745 ರಲ್ಲಿ ಗೆಲುವು ಸಾಧಿಸಿದ್ದು, 3,960 ರಲ್ಲಿ ಸೋತಿದೆ. ಬಿಜೆಪಿ 3,354 ಚುನಾವಣೆ ಎದುರಿಸಿದ್ದು ಇದರಲ್ಲಿ 1,268 ಚುನಾವಣೆಯನ್ನು ಗೆದ್ದುಕೊಂಡಿದ್ದರೆ 2,086 ಚುನಾವಣೆಯಲ್ಲಿ ಸೋತಿದೆ.

    ಸಿಪಿಎಂ ಒಟ್ಟು 914 ಚುನಾವಣೆ ಎದುರಿಸಿದ್ದು 358 ರಲ್ಲಿ ಗೆಲುವು ಕಂಡಿದ್ದರೆ, 556 ರಲ್ಲಿ ಸೋಲನ್ನು ಅನುಭವಿಸಿದೆ. ಸಿಪಿಐ 1,10 2 ಚುನಾವಣೆಯಲ್ಲಿ 203 ರಲ್ಲಿ ಗೆದ್ದು 899ರಲ್ಲಿ ಸೋತಿದೆ.

    ತಮಿಳುನಾಡಿನ ಡಿಎಂಕೆ 321 ಚುನಾವಣೆಯಲ್ಲಿ 144 ರಲ್ಲಿ ಗೆಲುವು ಕಂಡಿದ್ದರೆ 177 ರಲ್ಲಿ ಸೋಲನ್ನು ಅನುಭವಿಸಿದೆ. ಎಐಎಡಿಎಂಕೆ 237 ಚುನಾವಣೆಯಲ್ಲಿ 128 ನ್ನು ಗೆದ್ದುಕೊಂಡಿದ್ದು, 109 ರಲ್ಲಿ ಸೋಲನ್ನು ಅನುಭವಿಸಿದೆ.

    ಅತಿ ಹೆಚ್ಚು ಗೆಲುವು ಸಾಧಿಸಿದ ಪಕ್ಷಗಳು
    ಕಾಂಗ್ರೆಸ್
    ಒಟ್ಟು ಚುನಾವಣೆ -7,705
    ಗೆಲುವು – 3,745
    ಸೋಲು – 3,960
    ಶೇ. ಜಯ – 48.6%

    ಬಿಜೆಪಿ
    ಒಟ್ಟು ಚುನಾವಣೆ – 3,354
    ಗೆಲುವು – 1,268
    ಸೋಲು – 2,086
    ಶೇ. ಜಯ – 37.8%

    ಎಡಿಎಂಕೆ
    ಒಟ್ಟು ಚುನಾವಣೆ – 237
    ಗೆಲುವು – 128
    ಸೋಲು – 109
    ಶೇ. ಜಯ – 54.0%

    ಶಿರೋಮಣಿ ಅಕಾಲಿ ದಳ
    ಒಟ್ಟು ಚುನಾವಣೆ – 113
    ಗೆಲುವು – 54
    ಸೋಲು – 59
    ಶೇ. ಜಯ – 47.8%

    ಡಿಎಂಕೆ
    ಒಟ್ಟು ಚುನಾವಣೆ – 321
    ಗೆಲುವು – 144
    ಸೋಲು – 177
    ಶೇ. ಜಯ – 44.9%

    ಟಿಡಿಪಿ
    ಒಟ್ಟು ಚುನಾವಣೆ – 301
    ಗೆಲುವು – 129
    ಸೋಲು – 172
    ಶೇ. ಜಯ – 42.9%

    ಸಿಪಿಎಂ
    ಒಟ್ಟು ಚುನಾವಣೆ – 914
    ಗೆಲುವು – 358
    ಸೋಲು – 556
    ಶೇ. ಜಯ – 39.2%

    ಜನತಾ ಪಕ್ಷ
    ಒಟ್ಟು ಚುನಾವಣೆ – 1081
    ಗೆಲುವು – 336
    ಸೋಲು – 745
    ಶೇ. ಜಯ – 31.1%

    ಟಿಎಂಸಿ
    ಒಟ್ಟು ಚುನಾವಣೆ – 228
    ಗೆಲುವು – 63
    ಸೋಲು – 165
    ಶೇ.ಜಯ – 27.6%

     

    ಜನತಾ ದಳ
    ಒಟ್ಟು ಚುನಾವಣೆ – 943
    ಗೆಲುವು – 254
    ಸೋಲು – 689
    ಶೇ.ಜಯ – 26.9%

     

    ಆರ್‌ಜೆಡಿ
    ಒಟ್ಟು ಚುನಾವಣೆ – 293
    ಗೆಲುವು – 56
    ಸೋಲು – 237
    ಶೇ.ಜಯ – 19.1%

    ಸಿಪಿಐ
    ಒಟ್ಟು ಚುನಾವಣೆ -1,102
    ಗೆಲುವು – 203
    ಸೋಲು – 899
    ಶೇ. ಜಯ – 18.4%

  • ನಿಷೇಧಿತ ಒಂಟೆ ಮಾಂಸ ಮಾರಾಟಕ್ಕೆ ಪೊಲೀಸರೇ ಬೆಂಗಾವಲು

    ನಿಷೇಧಿತ ಒಂಟೆ ಮಾಂಸ ಮಾರಾಟಕ್ಕೆ ಪೊಲೀಸರೇ ಬೆಂಗಾವಲು

    – ಸಾಕ್ಷಿ ನಾಶ ಮಾಡಿದ ಸಿಪಿಐ ಸೇರಿ ಐವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್

    ಕಲಬುರಗಿ: ನಿಷೇಧಿತ ಒಂಟೆ ಮಾಂಸ ಮಾರಾಟದ ಸಾಕ್ಷಿ ನಾಶ ಮಾಡಿದ ಕಲಬುರಗಿಯ ಎಂಬಿ ನಗರ ಠಾಣೆಯ ಸಿಪಿಐ ಸೇರಿದಂತೆ ಐವರು ಪೊಲೀಸರ ಅಮಾನತುಗೊಳಿಸಿ ಈಶಾನ್ಯ ವಲಯ ಐಜಿಪಿ ಮನೀಶ್ ಖರ್ಬಿಕರ್ ಆದೇಶ ಹೊರಡಿಸಿದ್ದಾರೆ.

    ಎಂಬಿ ನಗರ ಠಾಣೆಯ ಸಿಪಿಐ ವಾಜಿದ್ ಪಟೇಲ್, ಪಿಎಸ್‍ಐ ದೊಡ್ಡಮನಿ, ಪೇದೆಗಳಾದ ಶ್ರೀಶೈಲ್, ಮಲ್ಲಿಕಾರ್ಜುನ್ ಸೇರಿದಂತೆ ಒಟ್ಟು ಐದು ಜನರನ್ನು ಅಮಾನತು ಮಾಡಲಾಗಿದೆ. ಜೊತೆಗೆ ಈ ಪ್ರಕರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

    ಏನಿದು ಪ್ರಕರಣ?:
    ಲಾರಿಗಳ ಮೂಲಕ ರಾಜಸ್ಥಾನದಿಂದ ಕಲಬುರಗಿಗೆ ಒಂಟೆಗಳನ್ನು ತರಲಾಗುತ್ತಿದೆ. ಅಷ್ಟೇ ಅಲ್ಲದೆ ಅವುಗಳನ್ನು ನಗರದ ಹೊರ ವಲಯದಲ್ಲಿ ಹತ್ಯೆ ಮಾಡಿ, ಮಾಂಸವನ್ನು ಮಾರಾಟ ಮಾಡಲಾಗುತ್ತದೆ ಎಂದು ಆಂಧ್ರಪ್ರದೇಶದ ಪ್ರಾಣಿ ದಯಾ ಸಂಘದ ಕೆಲ ಸದಸ್ಯರು ಕಲಬುರಗಿ ಶಾಸಕ ದತ್ತಾತ್ರೇಯ ಅವರಿಗೆ ಮಾಹಿತಿ ನೀಡಿದ್ದರು. ಅಷ್ಟೇ ಅಲ್ಲದೇ ಒಂಟೆ ಮಾಂಸ ಮಾರಾಟದ ದಂಧೆಯ ಹಿಂದೆ ದೊಡ್ಡ ಗುಂಪಿದೆ. ಈಗಾಗಲೇ 100ಕ್ಕೂ ಹೆಚ್ಚು ಒಂಟೆಗಳನ್ನು ಕೊಯ್ದು ಮಾಂಸ ಮಾರಾಟ ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.

    ಆಂಧ್ರಪ್ರದೇಶದ ಪ್ರಾಣಿ ದಯಾ ಸಂಘದ ಸದಸ್ಯರಿಂದ ಮಾಹಿತಿ ಪಡೆದ ಶಾಸಕ ದತ್ತಾತ್ರೇಯ ಅವರು ಪೊಲೀಸರ ಗಮನಕ್ಕೆ ತಂದಿದ್ದರು. ಈ ಸಂಬಂಧ ಕಲಬುರಗಿ ವಿಶ್ವ ವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಪೊಲೀಸರು ಕ್ರಮ ತೆಗೆದುಕೊಳ್ಳಲಿಲ್ಲ. ಇದರಿಂದಾಗಿ ಆಂಧ್ರಪ್ರದೇಶದ ಪ್ರಾಣಿ ದಯಾ ಸಂಘದ ಸದಸ್ಯರು ಕೇಂದ್ರ ಸಚಿವೆ, ಪ್ರಾಣಿ ಹಕ್ಕು ಕಾರ್ಯಕರ್ತೆ ಮನೇಕಾ ಗಾಂಧಿ ಅವರಿಗೆ ದೂರು ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮನೇಕಾ ಗಾಂಧಿ ಅವರು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಿ ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ (ಡಿಜಿಪಿ) ನೀಲಮಣಿ ಅವರಿಗೆ ಪತ್ರ ಬರೆದಿದ್ದರು.

    ಮನೇಕಾ ಗಾಂಧಿ ಅವರು ಸೂಚನೆ ಹಿನ್ನೆಲೆಯಲ್ಲಿ ಡಿಜಿಪಿ ನೀಲಮಣಿ ಅವರು ಐಜಿಪಿ ಮನೀಷ್ ಖರ್ಬಿಕರ್ ಅವರಿಗೆ ಸ್ಥಳ ಪರಿಶೀಲನೆ ನಡೆಸುವಂತೆ ತಿಳಿದ್ದರು. ಆದರೆ ಮನೀಷ್ ಅವರು ಸ್ಥಳಕ್ಕೆ ಬರುವ ಮುನ್ನವೇ ಸಿಪಿಐ ವಾಜಿದ್ ಪಟೇಲ್ ಸಾಕ್ಷಿ ನಾಶಪಡಿಸಿದ್ದರು. ಹೀಗಾಗಿ ಒಂಟೆ ಮಾರಾಟ ದಂಧೆಗೆ ಎಂಬಿ ನಗರ ಠಾಣೆಯ ಸಿಪಿಐ ವಾಜಿದ್ ಪಟೇಲ್ ಬೆಂಗಾವಲಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಒಟ್ಟು ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಮನೀಷ್ ಅವರು ಆದೇಶ ಹೊರಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಪಿಐ ವರ್ಗಾವಣೆಯಲ್ಲಿ ನನ್ನ ಪಾತ್ರವಿಲ್ಲ- ಮಗ ತಪ್ಪು ಮಾಡಿದ್ರೆ ಶಿಕ್ಷೆ ನೀಡಿ ಅಂದ್ರು ರೇವಣ್ಣ

    ಸಿಪಿಐ ವರ್ಗಾವಣೆಯಲ್ಲಿ ನನ್ನ ಪಾತ್ರವಿಲ್ಲ- ಮಗ ತಪ್ಪು ಮಾಡಿದ್ರೆ ಶಿಕ್ಷೆ ನೀಡಿ ಅಂದ್ರು ರೇವಣ್ಣ

    ಹಾಸನ: ಚನ್ನರಾಯಪಟ್ಟಣ ಗ್ರಾಮಾಂತರ ಸಿಪಿಐ ಹರೀಶ್ ಬಾಬು ವರ್ಗಾವಣೆ ವಿಚಾರದಲ್ಲಿ ನಾನು ಪ್ರಭಾವ ಬೀರಿಲ್ಲ ಅಂತ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರು ಖಡಕ್ ಆಗಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಗರಂ ಆದ ಅವರು, ನಾನು ಯಾರ ಮೇಲೂ ಪ್ರಭಾವ ಬೀರಲು ಹೋಗಿಲ್ಲ. ಚನ್ನರಾಯಪಟ್ಟಣ ಸಿಪಿಐ ವರ್ಗಾವಣೆ ಪ್ರಕರಣಕ್ಕೂ ನಮಗೂ ಸಂಬಂಧ ಇಲ್ಲ. ಆ ಬಗ್ಗೆ ಎಸ್ಪಿ ಹಾಗೂ ಆ ಇನ್ಸ್ ಪೆಕ್ಟರ್ ಅವರನ್ನೇ ಕೇಳಿ. ಈ ಬಗ್ಗೆ ಬೇಕಿದ್ದರೆ ತನಿಖೆ ನಡೆಸಲಿ. ತಪ್ಪು ಮಾಡಿದ್ರೆ ರೇವಣ್ಣ ಆದ್ರೇನು ಅವರ ಮಗನಾದ್ರೇನು ಎಂದು ಕಿಡಿಕಾರಿದ್ರು.

    ಆ ಇನ್ಸ್ ಪೆಕ್ಟರ್ ಜೆಡಿಎಸ್ ಕಾರ್ಯಕರ್ತರ ಮೇಲೆ ಕೇಸ್ ಹಾಕ್ತಾರೆ. ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೇಸ್ ಹಾಕೋದಿಲ್ಲ. ನನ್ನ ಮಗ ಡಾ. ಸೂರಜ್ ಆ ಗಲಾಟೆಯಲ್ಲಿ ಇದ್ನಾ ಎಂದು ಪ್ರಶ್ನೆ ಮಾಡಿದ್ರು. ವಿನಾಕಾರಣ ಎಫ್.ಐ.ಆರ್ ಹಾಕಿದ್ದಾರೆ. ಆ ಇನ್ಸ್ ಪೆಕ್ಟರ್ ನ್ನು ಅಮಾನತು ಮಾಡಲು ಜಿಲ್ಲಾಧಿಕಾರಿ ಹೊರಟಿದ್ದರು. ಆವಾಗ ನಾನೇ ಬೇಡ ಎಂದಿದ್ದೆ. ನನ್ನ ಮಗ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ ಅಂದ್ರು. ಇದನ್ನೂ ಓದಿ: ರೇವಣ್ಣ ಪುತ್ರನ ವಿರುದ್ಧ ದೂರು ದಾಖಲಿಸಿದ್ದಕ್ಕೆ ಚನ್ನರಾಯಪಟ್ಟಣ ಇನ್ಸ್ ಪೆಕ್ಟರ್ ಗೆ ಕಿರುಕುಳ?

    ಹಾಸನ-ಬೇಲೂರು ರೈಲು ಮಾರ್ಗ ಸರ್ವೇ ಕಾರ್ಯ ಶೀಘ್ರ ಆರಂಭವಾಗಲಿದೆ. ರಾಜ್ಯದ ಶೇ.50 ರಷ್ಟು ಸಹಭಾಗಿತ್ವದಲ್ಲಿ ಯೋಜನೆ ಆರಂಭವಾಗಲಿದೆ. ಬೇಲೂರು-ಚಿಕ್ಕಮಗಳೂರು ನಡುವಿನ ಕಾಮಗಾರಿಗೆ ಭೂಸ್ವಾಧೀನ ಆಗಿಲ್ಲ. ಈ ಸಂಬಂಧ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಹಾಸನ ಮಾರ್ಗವಾಗಿ ಎಕ್ಸ್ ಪ್ರೆಸ್ ಸೇರಿ ಇನ್ನೂ ಹೆಚ್ಚಿನ ರೈಲು ಓಡಿಸಲು ಮನವಿ ಮಾಡಲಾಗಿದೆ. ಬಹು ನಿರೀಕ್ಷಿತ ರೈಲ್ವೆ ಮೇಲ್ಸೇತುವೆ ಯೋಜನೆ ಮುಂದಿನ ಸಂಪುಟದ ಮುಂದೆ ಬರಲಿದೆ. ಕಾಮಗಾರಿಗೆ ಶೀಘ್ರ ಅನುಮೋದನೆ ಸಿಗಲಿದೆ ಅಂತ ಅವರು ತಿಳಿಸಿದ್ರು.

    ಮಾಧ್ಯಮಕ್ಕೆ ಶಾಪ:
    ಇದೇ ವೇಳೆ ಮಾಧ್ಯಮದ ವಿರುದ್ಧ ಕಿಡಿಕಾರಿದ ರೇವಣ್ಣ, ವಾರ ಪತ್ರಿಕೆವೂಂದರಲ್ಲಿ ಐದು ಬಾರಿ ನನ್ನ ಬಗ್ಗೆ ಬರೆದಿದ್ದಾರೆ. ನಾನು ಐದು ಬಾರಿ ಶಾಸಕನಾದೆ. ಟಿವಿ ಮಾಧ್ಯಮಗಳು ನನ್ನ ಬಗ್ಗೆ ದಿನಾ ತೋರಿಸಲಿ. ನಮಗೆ ದೇವರ ಹಾಗು ಜನರ ಆಶೀರ್ವಾದ ಇದೆ. ನಿಮಗೆಲ್ಲಾ ದೇವರೇ ಶಿಕ್ಷೆಕೊಡ್ತಾನೆ ಎಂದು ಮಾಧ್ಯಮ ವಿರುದ್ಧ ಶಾಪ ಹಾಕಿದ್ರು.

     

  • ದಂಧೆಕೋರರ ಪರ ನಿಂತ ಸಿಪಿಐಗೆ ಸಿಂಗಂ ಸ್ಟೈಲಲ್ಲಿ ಪಿಎಸ್‍ಐ ಅವಾಜ್!

    ದಂಧೆಕೋರರ ಪರ ನಿಂತ ಸಿಪಿಐಗೆ ಸಿಂಗಂ ಸ್ಟೈಲಲ್ಲಿ ಪಿಎಸ್‍ಐ ಅವಾಜ್!

    ಚಿಕ್ಕಬಳ್ಳಾಪುರ: ಅನುಮತಿಯಿಲ್ಲದೆ ಅಕ್ರಮವಾಗಿ ಗ್ರಾನೈಟ್ ಸಾಗಿಸುತ್ತಿದ್ದ ಲಾರಿಗಳನ್ನು ಸೀಜ್ ಮಾಡುವ ವೇಳೆ ದಂಧೆಕೋರರ ಪರವಾಗಿ ನಿಂತ ಸಿಪಿಐ ಅಧಿಕಾರಿಗೆ ಪಿಎಸ್‍ಐ ಅವಾಜ್ ಹಾಕಿದ ಘಟನೆ ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ತಾಲೂಕಿನ ರಾಮನಾಥಪುರದಲ್ಲಿ ನಡೆದಿದೆ.

    ದೇವನಹಳ್ಳಿಯ ಜೆಡಿಎಸ್‍ನ ಮಾಜಿ ಅಧ್ಯಕ್ಷನಾದ ಕೃಷ್ಣಮೂರ್ತಿ ಕಡೆಯವರು ಅಕ್ರಮವಾಗಿ ಲಾರಿಗಳಲ್ಲಿ ಗ್ರಾನೈಟ್ ಸಾಗಿಸುತ್ತಿದ್ದರು. ಕಳೆದ ಭಾನುವಾರ ಕಾನೂನು ಬಾಹಿರವಾಗಿ ಗ್ರಾನೈಟ್ ಸಾಗಿಸುತ್ತಿರುವ ಖಚಿತ ಮಾಹಿತಿ ವಿಶ್ವನಾಥಪುರ ಪೊಲೀಸರಿಗೆ ಸಿಕ್ಕಿದೆ. ಈ ಕುರಿತು ಪೊಲೀಸ್ ಸಿಬ್ಬಂದಿಯು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾಗ ದಂಧೆಕೋರರು ಪೊಲೀಸರ ಮೇಲೆಯೇ ದಬ್ಬಾಳಿಕೆ ನಡೆಸಿದ್ದಾರೆ.

    ಸಿಬ್ಬಂದಿಗೆ ಲಾರಿಯನ್ನು ವಶಪಡಿಸಿಕೊಳ್ಳದಂತೆ ಬೆದರಿಕೆ ಹಾಕಿದ್ದಾರೆ. ಈ ಕುರಿತು ಸಿಬ್ಬಂದಿಯು ವಿಶ್ವನಾಥಪುರದ ಪಿಎಸ್‍ಐ ಶ್ರೀನಿವಾಸ್‍ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪಿಎಸ್‍ಐ ಮೇಲೆಯೂ ದಬ್ಬಾಳಿಕೆ ನಡೆಸಿದ್ದಾರೆ. ಪಿಎಸ್‍ಐ ಬಗ್ಗದಿದ್ದಾಗ ಮೇಲಾಧಿಕಾರಿಗಳ ಮುಖಾಂತರ ಒತ್ತಡ ಮುಂದಾಗಿದ್ದಾರೆ.

    ದೂರವಾಣಿ ಮೂಲಕ ಮಾತನಾಡಿದ ವಿಜಯಪುರ ಸರ್ಕಲ್ ಇನ್ಸ್ ಪೆಕ್ಟರ್ ಮಂಜುನಾಥ್ ದಂಧೆಕೋರರ ಪರನಿಂತು ಲಾರಿಗಳನ್ನು ಬಿಡುವಂತೆ ಒತ್ತಡ ಹೇರಿದ್ದಾರೆ. ಈ ವೇಳೆ ಪಿಎಸ್‍ಐಯು ಮೇಲಾಧಿಕಾರಿಯ ಒತ್ತಡಕ್ಕೆ ಮಣಿಯದೇ ಕಾನೂನು ಎಲ್ಲರಿಗೂ ಒಂದೇ ಅಂತ ಖಡಕ್ ಆಗಿ ಉತ್ತರಿಸಿದ್ದಾರೆ. ದಂಧೆಕೋರರ ಪರ ನಿಂತ ಮೇಲಾಧಿಕಾರಿಗೆ ಫೋನ್‍ನಲ್ಲಿಯೇ ತರಾಟೆ ತೆಗೆದುಕೊಂಡಿದ್ದಾರೆ.

    ಈ ಎಲ್ಲಾ ಘಟನೆಯನ್ನು ಸ್ಥಳೀಯರು ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿ ಸೋಷಿಯಲ್ ಮಿಡಿಯಾಗಳಲ್ಲಿ ವಿಡಿಯೋ ಹಾಕಿದ್ದಾರೆ. ಸದ್ಯ ಪಿಎಸ್‍ಐ ಶ್ರೀನಿವಾಸ್‍ರವರು ಮೇಲಾಧಿಕಾರಿಗೆ ಖಡಕ್ ಆವಾಜ್ ಹಾಕಿದ ವಿಡಿಯೋ ವೈರಲ್ ಆಗಿದ್ದು, ಪಿಎಸ್‍ಐ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=1UsgtKiMocA

  • ಕಳ್ಳತನದ ಮಾಲು ವಶಪಡಿಸಿಕೊಳ್ಳಲು ಹೋದ ಸಿಪಿಐಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಜ್ಯುವೆಲ್ಲರಿ ಶಾಪ್ ಮಾಲೀಕ!

    ಕಳ್ಳತನದ ಮಾಲು ವಶಪಡಿಸಿಕೊಳ್ಳಲು ಹೋದ ಸಿಪಿಐಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಜ್ಯುವೆಲ್ಲರಿ ಶಾಪ್ ಮಾಲೀಕ!

    ಕೋಲಾರ: ಕಳ್ಳತನದ ಮಾಲು ವಶಪಡಿಸಿಕೊಳ್ಳಲು ಹೋದ ಸಿಪಿಐ ಗೆ ಜ್ಯುವೆಲ್ಲರಿ ಅಂಗಡಿ ಮಾಲೀಕ ಹಾಗೂ ಆತನ ಮಕ್ಕಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣಬೆದರಿಕೆ ಹಾಕಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ರಾಬರ್ಟ್ ಸನ್ ಪೇಟೆಯಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಜ್ಯುವೆಲ್ಲರಿ ಅಂಗಡಿ ಮಾಲೀಕ ಪ್ರಕಾಶ್ ಚಂದ್, ಮಕ್ಕಳಾದ ರಾಜೇಶ್ ಚಂದ್ ಹಾಗೂ ನಿತೀಶ್ ಚಂದ್ ಸಿಪಿಐಗೆ ಪ್ರಾಣ ಬೆದರಿಕೆ ಹಾಕಿದ ಆರೋಪಿಗಳು.

    ಪ್ರಕಾಶ್ ಚಂದ್ ಜ್ಯುವೆಲ್ಲರಿ ಶಾಪ್ ನಲ್ಲಿ ಕಳ್ಳತನದ ಮಾಲು ವಶಪಡಿಸಿಕೊಳ್ಳಲು ತೆರಳಿದ್ದ ಬಂಗಾರಪೇಟೆ ಸಿಪಿಐ ದಿನೇಶ್ ಪಾಟೀಲ್ ಹಾಗೂ ತಂಡದ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೋಪಿ ಚಂದ್ರಪ್ಪ ನೀಡಿದ ಮಾಹಿತಿ ಮೇರೆಗೆ ಮಾಲು ವಶಕ್ಕೆ ಪಡೆಯಲು ತೆರಳಿದ್ದ ಸಂದರ್ಭದಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.

    ಈ ಸಂಬಂಧ ರಾಬರ್ಟ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಜ್ಯುವೆಲ್ಲರಿ ಶಾಪ್ ಮಾಲೀಕ ಪ್ರಕಾಶ್ ಚಂದ್ ಹಾಗು ಮೂವರು ಮಕ್ಕಳ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

  • ಮಗಳ ಕಿಡ್ನಾಪ್ ದೂರು ದಾಖಲಿಸಲು ಹೋದ್ರೆ ಒಳ್ಳೆ ಬುದ್ಧಿ ಕಲಿಸಿಲ್ಲವೆಂದು ಕೇಸ್ ಹಾಕ್ತೀನಿ ಎಂದ ಸಿಪಿಐ ವಿರುದ್ಧ ಕ್ರಮಕ್ಕೆ ಆದೇಶ

    ಮಗಳ ಕಿಡ್ನಾಪ್ ದೂರು ದಾಖಲಿಸಲು ಹೋದ್ರೆ ಒಳ್ಳೆ ಬುದ್ಧಿ ಕಲಿಸಿಲ್ಲವೆಂದು ಕೇಸ್ ಹಾಕ್ತೀನಿ ಎಂದ ಸಿಪಿಐ ವಿರುದ್ಧ ಕ್ರಮಕ್ಕೆ ಆದೇಶ

    ಕಾರವಾರ: ತಮ್ಮ ಮಗಳ ಅಪಹರಣವಾಗಿದೆಯೆಂದು ಠಾಣೆಗೆ ದೂರು ನೀಡಲು ಹೋಗಿದ್ದ ಪೋಷಕರಿಗೆ ಠಾಣಾಧಿಕಾರಿ ಬಂಧಿಸುವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ ವಿರುದ್ಧ ಕ್ರಮ ಕಗೊಳ್ಳುವಂತೆ ಬೆಳಗಾವಿ ಪೊಲೀಸ್ ದೂರು ಪ್ರಾಧಿಕಾರ ಆದೇಶಿಸಿದೆ.

    ಉತ್ತರ ಕನ್ನಡ ಜಿಲ್ಲೆಯ ಶಹರಾ ಠಾಣೆಯ ಪಿಎಸ್‍ಐ ಆಗಿದ್ದ ಆಂಜನೇಯ ಪ್ರಸ್ತುತ ಕಾರವಾರದ ಡಿಎಸ್‍ಆರ್‍ಬಿಯ ಸಿಪಿಐ ಆಗಿದ್ದಾರೆ. ಆಂಜನೇಯ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆದೇಶ ನೀಡಲಾಗಿದೆ.

    ಏನಿದು ಪ್ರಕರಣ?2015ರಲ್ಲಿ ಬೈತಕೂಲ್‍ನ ನಿವಾಸಿ ಶಶಿಕಾಂತ್ ರೇವಲ್ಕರ್ ಹಾಗೂ ಟ್ರೀಜಾ ದಂಪತಿ ತಮ್ಮ ಅಪ್ರಾಪ್ತ ಮಗಳ ಅಪಹರಣವಾಗಿದೆಯೆಂದು ದೂರು ನೀಡಲು ಹೋಗಿದ್ದರು. ಆದ್ರೆ ಅಂದಿನ ಠಾಣೆಯ ಪಿಎಸ್‍ಐ ಆಗಿದ್ದ ಆಂಜನೇಯ, ನಿಮ್ಮ ಮಗಳಿಗೆ ಉತ್ತಮ ಸಂಸ್ಕಾರ ನೀಡದ ಕಾರಣ ಅಪಹರಣವಾಗಿದ್ದು ನಿಮ್ಮ ವಿರುದ್ಧ ದೂರು ದಾಖಲಿಸಲು ನಮಗೆ ಅಧಿಕಾರವಿದೆ. ಮಕ್ಕಳು ಓಡಿಹೋದರೆ ಪೋಷಕರಿಗೆ ಶಿಕ್ಷೆ ನೀಡುವ ಕಾನೂನು ಇದೆ ಎಂದು ಸುಳ್ಳು ಹೇಳಿ ದೂರು ನೀಡದಂತೆ ಬೆದರಿಸಿ ಕಳಿಸಿದ್ದರು.

    ಈ ಸಂಬಂಧ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವನಾಯ್ಕ ಬೆಳಗಾವಿ ಪೊಲೀಸ್ ದೂರು ಪ್ರಾಧಿಕಾರಕ್ಕೆ ದೂರು ನೀಡಿದ್ದರು. ಇದೀಗ ಎರಡು ವರ್ಷಗಳ ನಂತರ ಅಂದಿನ ಪಿಎಸ್‍ಐ ಆಗಿದ್ದ ಆಂಜನೇಯ ಕರ್ತವ್ಯಲೋಪವೆಸಗಿದ್ದು ಸಾಬೀತಾಗಿದ್ದು ಕ್ರಮ ಜರುಗಿಸಲು ಆದೇಶ ಮಾಡಲಾಗಿದೆ.

  • 5 ಲಕ್ಷ ಹಣಕ್ಕೆ ಹೊಸಪೇಟೆ ಸಿಪಿಐ ಬ್ಲಾಕ್‍ಮೇಲ್- ವಿಷ ಸೇವಿಸಿ ದಂಪತಿ ಆತ್ಮಹತ್ಯೆಗೆ ಯತ್ನ

    5 ಲಕ್ಷ ಹಣಕ್ಕೆ ಹೊಸಪೇಟೆ ಸಿಪಿಐ ಬ್ಲಾಕ್‍ಮೇಲ್- ವಿಷ ಸೇವಿಸಿ ದಂಪತಿ ಆತ್ಮಹತ್ಯೆಗೆ ಯತ್ನ

    ಬಳ್ಳಾರಿ: ಹೊಸಪೇಟೆ ಶಹರ ಠಾಣೆಯ ಸಿಪಿಐ ಗಾಂಜಾ ಕೇಸಿನಲ್ಲಿ ದಂಪತಿಯನ್ನ ಬೆದರಿಸಿ 5 ಲಕ್ಷ ರೂ. ಹಣಕ್ಕೆ ಬೇಡಕೆಯಿಟ್ಟ ಪ್ರಕರಣ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ. ಅಲ್ಲದೇ ಸಿಪಿಐ ಕಿರುಕುಳಕ್ಕೆ ಬೇಸತ್ತ ದಂಪತಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹೊಸಪೇಟೆ ಪಟ್ಟಣದಲ್ಲಿ ನಡೆದಿದೆ.

    ಹೊಸಪೇಟೆ ನಿವಾಸಿಗಳಾದ ಸರೋಜಮ್ಮ, ಮೈಲಾರಪ್ಪ ದಂಪತಿಯ ಸಂಬಂಧಿಕರೊಬ್ಬರ ಮನೆಯಲ್ಲಿ ಇತ್ತೀಚಿಗೆ ಗಾಂಜಾ ಪತ್ತೆಯಾಗಿತ್ತು. ಇದೇ ಪ್ರಕರಣದಲ್ಲಿ ದಂಪತಿಯನ್ನು ಬಂಧಿಸುವುದಾಗಿ ಬೆದರಿಸಿ ಹೊಸಪೇಟೆ ಟೌನ್ ಪೊಲೀಸ್ ಠಾಣೆಯ ಸಿಪಿಐ ಲಿಂಗನಗೌಡ ನೆಗಳೂರ 5 ಲಕ್ಷ ರೂ. ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಸಿಪಿಐ ಕಿರುಕುಳ ತಾಳಲಾರದೇ ದಂಪತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ದಂಪತಿಯ ಪರಿಸ್ಥಿತಿ ಗಂಭಿರವಾಗಿದ್ದು, ಇದೀಗ ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.