Tag: CPI (M)

  • ಹಿಜಬ್‌-ಕೇಸರಿ ಶಾಲು ವಿವಾದ – ಕೇಂದ್ರ ಶಿಕ್ಷಣ ಸಚಿವರ ಮಧ್ಯಪ್ರವೇಶಕ್ಕೆ ಒತ್ತಾಯ

    ಹಿಜಬ್‌-ಕೇಸರಿ ಶಾಲು ವಿವಾದ – ಕೇಂದ್ರ ಶಿಕ್ಷಣ ಸಚಿವರ ಮಧ್ಯಪ್ರವೇಶಕ್ಕೆ ಒತ್ತಾಯ

    ನವದೆಹಲಿ: ಕರ್ನಾಟಕದಲ್ಲಿ ತಲೆದೋರಿರುವ ದುರದೃಷ್ಟಕರ ಘಟನೆ ಹಿಜಬ್‌-ಕೇಸರಿ ಶಾಲು ವಿವಾದ ಕುರಿತು ಮಧ್ಯಪ್ರವೇಶಿಸಬೇಕು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರಿಗೆ ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ-ಮಾರ್ಕ್ಸಿಸ್ಟ್‌ ನಾಯಕ ಎಲಮರಮ್‌ ಕರೀಂ ಅವರು ಒತ್ತಾಯಿಸಿದ್ದಾರೆ.

    ಉಡುಪಿಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಬ್‌ ಧರಿಸಿದ್ದಕ್ಕಾಗಿ ತರಗತಿಗಳಿಗೆ ಹಾಜರಾಗುವ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಕೋಮು ಧ್ರುವೀಕರಣ ಮಾಡುವ ಉದ್ದೇಶದಿಂದ ರಾಜ್ಯದಲ್ಲಿ ಅನಗತ್ಯ ವಿವಾದ ಸೃಷ್ಟಿಸುತ್ತಿರುವುದನ್ನು ಗಮನಿಸಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶಿಕ್ಷಣ ಸಂಸ್ಥೆಗಳಲ್ಲಿ 200 ಮೀಟರ್ ವ್ಯಾಪ್ತಿಯಲ್ಲಿ ಪ್ರತಿಭಟನೆಗೆ ನಿಷೇಧ: ಕಮಲ್ ಪಂತ್

    ಈ ಬೆಳವಣಿಗೆ ಮುಸ್ಲಿಂ ಸಮುದಾಯದಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ. ಇಲ್ಲಿಯವರೆಗೂ ಮುಸ್ಲಿಂ ಹುಡುಗಿಯರು ಯಾವುದೇ ಆಕ್ಷೇಪವಿಲ್ಲದೇ ತಲೆಗೆ ಹಿಜಬ್‌ ಧರಿಸುತ್ತಿದ್ದರು. ಅವರು ಸಾಮಾನ್ಯ ಸಮವಸ್ತ್ರ ನಿಯಮ ಅನುಸರಿಸುತ್ತಿಲ್ಲ ಎಂದು ಹೇಳಿ ಹಿಜಬ್‌ಗೆ ಅನುಮತಿಸುತ್ತಿಲ್ಲ ಎಂದು

    ಇಷ್ಟು ವರ್ಷಗಳಿಂದ ವಿದ್ಯಾರ್ಥಿನಿಯರು ಸಮವಸ್ತ್ರದ ಜೊತೆಗೆ ಹಿಜಾಬ್‌ ಧರಿಸುತ್ತಿದ್ದಾರೆ. ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ಏಕರೂಪತೆ ಅನುಸರಿಸಲು ಶಿರಸ್ತ್ರಾಣದ ಬಣ್ಣವನ್ನು ಸಹ ಸೂಚಿಸಲಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ದಶಕಗಳವರೆಗೆ ಯಾವುದೇ ವಿವಾದಗಳಿಲ್ಲ. ಇದನ್ನು ಉದ್ದೇಶಪೂರ್ವಕವಾಗಿ ವಿಭಜನ್‌ ಮತ್ತು ಕೋಮು ಭಾವನೆಗಳನ್ನು ಕೆರಳಿಸಲು ತಯಾರಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಧರ್ಮ ಹೇಳಿದಂತೆ ಮೈತುಂಬ ಬಟ್ಟೆ ಹಾಕುವುದು ತಪ್ಪಾ: ರಾಯರೆಡ್ಡಿ ಪ್ರಶ್ನೆ

    ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಹಕ್ಕು ಪ್ರಾಥಮಿಕ ಕಾಳಜಿಯಾಗಿರಬೇಕು. ಜನರ ನಡುವೆ ದ್ವೇಷ ಮತ್ತು ವಿಭಜನೆಯನ್ನು ಹರಡುವ ಯಾವುದೇ ಕ್ರಮವನ್ನು ಕಠಿಣ ಕ್ರಮಗಳೊಂದಿಗೆ ವ್ಯವಹರಿಸಬೇಕು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿಮ್ಮ ಮಧ್ಯಪ್ರವೇಶ ಅವಶ್ಯಕ ಎಂದು ಕೇಂದ್ರ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿದ್ದಾರೆ.

  • ಕೊರೊನಾ ಸಮರ್ಥವಾಗಿ ನಿಭಾಯಿಸಿದ್ದ ಶೈಲಜಾರಿಗೆ ಕೊಕ್- ಕೇರಳ ಸಿಎಂ ಹೊಸ ಕ್ಯಾಬಿನೆಟ್

    ಕೊರೊನಾ ಸಮರ್ಥವಾಗಿ ನಿಭಾಯಿಸಿದ್ದ ಶೈಲಜಾರಿಗೆ ಕೊಕ್- ಕೇರಳ ಸಿಎಂ ಹೊಸ ಕ್ಯಾಬಿನೆಟ್

    – ಕಳೆದ ಬಾರಿಯ ಎಲ್ಲ ಸಚಿವರು ಔಟ್, ಹೊಸಬರು, ಯುವಕರಿಗೆ ಆದ್ಯತೆ

    ತಿರುವನಂತಪುರಂ: ಕೇರಳದಲ್ಲಿ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್(ಎಲ್‍ಡಿಎಫ್) ಸರ್ಕಾರ ಪೂರ್ಣ ಬಹುಮತದಿಂದ ಮತ್ತೆ ಅಧಿಕಾರಕ್ಕೆ ಬಂದಿದ್ದು, ಎರಡನೇ ಬಾರಿ ಪಿಣರಾಯಿ ವಿಜಯನ್ ಮುಖ್ಯಮಂತ್ರಿಯಾಗುತ್ತಿದ್ದಾರೆ. ಆದರೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಎರಡು ದಿನ ಇರುವಾಗಲೇ ಕ್ಯಾಬಿನೆಟ್ ಕುರಿತು ಅಚ್ಚರಿಯ ವಿಷಯ ಹೊರಗೆ ಬಿದ್ದಿದೆ. ಕೊರೊನಾ ಸಮರ್ಥವಾಗಿ ನಿರ್ವಹಿಸುವ ಮೂಲಕ ವಿಶ್ವಸಂಸ್ಥೆ ಸೇರಿದಂತೆ ವಿವಿಧ ಗಣ್ಯರ ಮೆಚ್ಚುಗೆಗೆ ಪಾತ್ರವಾಗಿದ್ದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರನ್ನು ಈ ಬಾರಿ ಕ್ಯಾಬಿನೆಟ್‍ನಿಂದ ಹೊರಗಿಡಲಾಗುತ್ತಿದೆ.

    ಕಳೆದ ಬಾರಿಯ ಸಿಎಂ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದಲ್ಲಿ ಆರೋಗ್ಯ ಸಚಿವೆಯಾಗಿದ್ದ ಕೆ.ಕೆ.ಶೈಲಜಾ ಅವರು 2021ರ ವಿಧಾನಸಭೆ ಚುನಾವಣೆಯಲ್ಲಿ ಬರೋಬ್ಬರಿ 60 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಅಲ್ಲದೆ ಕಳೆದ ಬಾರಿ ಆರೋಗ್ಯ ಸಚಿವೆಯಾಗಿದ್ದಾಗ ಕೊರೊನಾ ಸಮರ್ಥವಾಗಿ ನಿಭಾಯಿಸಿದ್ದರು. ಈ ಬಗ್ಗೆ ವಿಶ್ವಸಂಸ್ಥೆಯಾದಿಯಾಗಿ ಪ್ರಮುಖ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೂ ಈ ಬಾರಿಯ ಕ್ಯಾಬಿನೆಟ್‍ನಲ್ಲಿ ಇವರನ್ನು ಕೈ ಬಿಡಲಾಗಿದೆ.

    ಈ ಕುರಿತು ಸಿಪಿಐ(ಎಂ) ರಾಜ್ಯ ಸಮಿತಿ ಹೇಳಿಕೆ ನೀಡಿದ್ದು, ಆರೋಗ್ಯ ಸಚಿವೆ ಶೈಲಜಾ ಸೇರಿ ಪ್ರಸ್ತುತ ಈಗಿರುವ ಎಲ್ಲ ಮಂತ್ರಿಗಳನ್ನು ಕೈ ಬಿಡಲಾಗಿದೆ. ಪಕ್ಷವು ಎಂ.ಬಿ.ರಾಜೇಶ್ ಅವರನ್ನು ಸ್ಪೀಕರ್ ಅಭ್ಯರ್ಥಿಯಾಗಿ ಘೋಷಿಸಿದೆ. ಶೈಲಜಾ ಅವರನ್ನು ಸರ್ಕಾರದ ಮುಖ್ಯ ಸಚೇತಕರಾಗಿ (ವಿಪ್) ಮಾಡಲಾಗಿದೆ. ಟಿ.ಪಿ.ರಾಮಕೃಷ್ಣನ್ ಅವರನ್ನು ಪಕ್ಷದ ಶಾಸಕಾಂಗ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ ಎಂದು ಪಕ್ಷ ಸ್ಪಷ್ಟಪಡಿಸಿದೆ.

    ಪಿಣರಾಯಿ ವಿಜಯನ್ ಅವರನ್ನು ಸಿಎಂ ಹಾಗೂ ಶಾಸಕಾಂಗ ಪಕ್ಷದ ನಾಯಕರಾಗಿ, ಎಂ.ವಿ.ಗೋವಿಂದನ್, ಕೆ.ರಾಧಾಕೃಷ್ಣನ್, ಕೆ.ಎನ್.ಬಾಲಗೋಪಾಲ್, ಪಿ.ರಾಜೀವ್, ವಿ.ಎನ್.ವಾಸವನ್, ಸಾಜಿ ಚೆರಿಯನ್, ವಿ.ಶಿವಂಕುಟ್ಟಿ, ಮೊಹಮ್ಮದ್ ರಿಯಾಜ್, ಡಾ.ಆರ್.ಬಿಂದು, ವೀಣಾ ಜಾರ್ಜ್ ಹಾಗೂ ವಿ.ಅಬ್ದುಲ್ ರೆಹ್ಮಾನ್ ಅವರನ್ನು ಸಚಿವರಾಗಿ ಘೋಷಿಸಲಾಗಿದೆ ಎಂದು ಸಿಪಿಐ(ಎಂ) ತಿಳಿಸಿದೆ.

    ಶೈಲಜಾ ಅವರನ್ನು ಕ್ಯಾಬಿನೆಟ್‍ನಿಂದ ಹೊರಗಿರಿಸಿದ್ದಕ್ಕೆ ಶಾಸಕ ಎ.ಎನ್.ಶಮ್ಸೀರ್ ಪ್ರತಿಕ್ರಿಯಿಸಿ, ಇದು ನಮ್ಮ ಪಕ್ಷದ ನಾಯಕರು ಕೈಗೊಂಡಿರುವ ಸಾಮೂಹಿಕ ನಿರ್ಧಾರವಾಗಿದೆ. ಒಬ್ಬ ವ್ಯಕ್ತಿಯನ್ನು ಪಕ್ಷದಿಂದ ಹೊರಗಿಟ್ಟು ನೋಡಬೇಡಿ, ಈ ಕುರಿತು ಪಕ್ಷದ ನಾಯಕರನ್ನೇ ಪ್ರಶ್ನಿಸಬೇಕು. ಹೊಸ ಕ್ಯಾಬಿನೆಟ್‍ನಲ್ಲಿ ಪಿಣರಾಯಿ ವಿಜಯನ್ ಹೊರತುಪಡಿಸಿ ಬೇರೆ ಯಾವ ಸಚಿವರೂ ಇಲ್ಲ. ಎಲ್ಲ ಹೊಸಬರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಇದು ಯುವಕರ ಹಾಗೂ ಹಿರಿಯರ ಮಿಶ್ರಣವಾಗಿದೆ ಎಂದು ವಿವರಿಸಿದ್ದಾರೆ.

    ಎಲ್‍ಡಿಎಫ್ ವಕ್ತಾರ ಎ.ವಿಜಯರಾಘವನ್ ಈ ಕುರಿತು ಸೋಮವಾರವೇ ಮಾಹಿತಿ ನೀಡಿದ್ದು, ಮೇ 20ರಂದು ಪಿಣರಾಯಿ ವಿಜಯನ್ ಸೇರಿ 21 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರಲ್ಲಿ 12 ಜನ ಸಿಪಿಐ(ಎಂ), ನಾಲ್ವರು ಸಿಪಿಐ, ಕೇರಳ ಕಾಂಗ್ರೆಸ್(ಎಂ), ಜೆಡಿಎಸ್ ಹಾಗೂ ಎನ್‍ಸಿಪಿಯಿಂದ ತಲಾ ಒಬ್ಬರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಉಳಿದಂತೆ ನಾಲ್ಕು ಏಕ ಶಾಸಕರ ಪಕ್ಷಗಳು ಎರಡು ಕ್ಯಾಬಿನೆಟ್ ಹುದ್ದೆಗಳನ್ನು ಹಂಚಿಕೊಳ್ಳಲಿದ್ದು, ಪ್ರತಿ ಪಕ್ಷವು ತಲಾ 2.5 ವರ್ಷಗಳ ಅವಧಿಯನ್ನು ಪಡೆಯುತ್ತದೆ ಎಂದು ತಿಳಿಸಿದ್ದರು.

  • ಸ್ಯಾಂಡಲ್‍ವುಡ್ ಡ್ರಗ್ಸ್‌ಗೆ ಕೇರಳ ರಾಜಕೀಯ ನಂಟು

    ಸ್ಯಾಂಡಲ್‍ವುಡ್ ಡ್ರಗ್ಸ್‌ಗೆ ಕೇರಳ ರಾಜಕೀಯ ನಂಟು

    – ಎನ್‍ಸಿಬಿ ಎದುರು ಅನೂಫ್ ಸ್ಫೋಟಕ ಹೇಳಿಕೆ

    ಬೆಂಗಳೂರು: ಭಾರೀ ಚರ್ಚೆಗೆ ಕಾರಣವಾಗಿರುವ ಡ್ರಗ್ಸ್ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಬಂಧಿತ ವಿಚಾರಣೆಯಲ್ಲಿ ಡ್ರಗ್ಸ್ ಮಾಫಿಯಾದಲ್ಲಿ ಕೇರಳ ರಾಜಕೀಯ ನಾಯಕರ ಪುತ್ರನ ಲಿಂಕ್ ಇರುವ ಬಗ್ಗೆ ಸ್ಫೋಟಕ ಮಾಹಿತಿಗಳನ್ನು ಹೊರ ಹಾಕಿದ್ದಾನೆ ಎಂಬ ಮಾಹಿತಿ ಲಭಿಸಿದೆ.

    ಕೇರಳದಲ್ಲಿ ಬೆಂಗಳೂರಿನ ಡ್ರಗ್ ಪ್ರಕರಣ ತಲ್ಲಣವನ್ನು ಉಂಟು ಮಾಡಿದೆ. ಪೊಲೀಸರ ಎದುರು ಡ್ರಗ್ಸ್ ದಂಧೆಯ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿರುವ ಆರೋಪಿ ಅನೂಫ್, ದಂಧೆಯಲ್ಲಿ ಕೇರಳದ ಸಿಪಿಎಂ ಪಕ್ಷದ ಮಗನಿಂದ ಹಣ ಹೂಡಿಕೆ ಮಾಡಲಾಗಿದೆ. ಸಿಪಿಐ(ಎಂ) ಪಕ್ಷದ ಕೊಡಿಯೇರಿ ಬಾಲಕೃಷ್ಣನ್ ಅವರ ಮಗ ಬಿನೀಶ್ ಕೊಡಿಯೇರಿ ಹಣ ಹೂಡಿಕೆ ಮಾಡಿದ್ದ ಎಂದು ತಿಳಿಸಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಬಾಲಕೃಷ್ಣನ್ ಕೇರಳದ ಸಿಪಿಐ(ಎಂ) ಪಕ್ಷದ ಜನರಲ್ ಸೆಕ್ರೆಟರಿ ಆಗಿದ್ದಾರೆ. ಸದ್ಯ ಬಂಧಿತ ಅನೂಫ್ ಕೊರೊನಾ ಲಾಕ್‍ಡೌನ್‍ನಿಂದ ಕೊಚ್ಚಿಯಲ್ಲಿದ್ದ ಪಬ್ ಬಿಸಿನೆಸ್‍ನಲ್ಲಿ ಲಾಸ್ ಮಾಡಿಕೊಂಡು ಹಾಳಾಗಿದ್ದ ಜೀವನ್ನು ಸರಿ ಮಾಡಿಕೊಳ್ಳುತ್ತೇನೆ ಎಂದು ಹೇಳಿ ಬೆಂಗಳೂರಿಗೆ ಆಗಮಿಸಿದ್ದ. ಅದಕ್ಕೂ ಮುನ್ನವೇ ಆತ ಬೆಂಗಳೂರಿನಲ್ಲಿ ಹಲವು ಬಿಸಿನೆಸ್ ನಡೆಸಿದ ಅನುಭವ ಹೊಂದಿದ್ದ. ಆದರೆ ಈ ಬಾರಿ ಬೆಂಗಳೂರಿಗೆ ಬಂದಿದ್ದ ಆತ, ಆರೋಪಿ ಅನಿಕಾಳಿಂದ ಡ್ರಗ್ಸ್ ಪಡೆದು ಲಾಕ್‍ಡೌನ್ ಅವಧಿಯಲ್ಲಿ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಿದ್ದ. 550 ರೂಪಾಯಿಗೆ ಒಂದು ಮಾತ್ರೆ ಎಂಬಂತೆ 1 ಲಕ್ಷದ 37 ಸಾವಿರ ರೂಪಾಯಿಗೆ ಡ್ರಗ್ಸ್ ಖರೀದಿ ಮಾಡಿದ್ದೆ ತನಿಖೆಯ ವೇಳೆ ಬಾಯ್ಬಿಟ್ಟಿದ್ದಾನೆ.

    ಅನೂಫ್ ಕೇರಳದ ಸಿಪಿಎಂ ನಾಯಕ ಪುತ್ರನೊಂದಿಗೆ ಸಂಪರ್ಕ ಹೊಂದಿರುವುದನ್ನು ಒಪ್ಪಿಕೊಂಡಿದ್ದು, ಆತನ ಹಣದಿಂದಲೇ ಡ್ರಗ್ಸ್ ಖರೀದಿ ಮಾಡಿದ್ದೆ ಎಂದಿದ್ದಾನೆ. ಬೆಂಗಳೂರಿನಲ್ಲಿ ಪಬ್‍ವೊಂದನ್ನು ನೋಡಿಕೊಳ್ಳುತ್ತಿದ್ದ ಆರೋಪಿ ಅಲ್ಲಿಂದಲೇ ಡ್ರಗ್ ಮಾರಾಟ ಮಾಡುತ್ತಿದ್ದ. ಸದ್ಯ ಆರೋಪಿ ಸ್ಯಾಂಡಲ್‍ವುಡ್‍ನ ಯಾವ ನಟ, ನಟಿಯರು, ಗಣ್ಯರಿಗೆ ಸಪ್ಲೇ ಮಾಡಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬರಬೇಕಿದೆ.

    ಸದ್ಯ ಡ್ರಗ್ಸ್ ದಂಧೆಯ ಆರೋಪದ ಕುರಿತು ಪ್ರತಿಕ್ರಿಯೆ ನೀಡಿರುವ ಬಿನೀಶ್ ಕೊಡಿಯೇರಿ, ತನ್ನ ಸ್ನೇಹಿತ ಅನೂಫ್ ಡ್ರಗ್ಸ್ ವ್ಯವಹಾರದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಆತ ನನಗೆ 6 ರಿಂದ 7 ವರ್ಷಗಳಿಂದ ಪರಿಚಯ. ಬೆಂಗಳೂರಿನಲ್ಲಿ ರೆಸ್ಟೋರೆಂಟ್ ಬಿಸಿನೆಸ್ ಮಾಡುತ್ತಿದ್ದ. ಆದರೆ ಎನ್‍ಸಿಬಿ ಆತನನ್ನು ಬಂಧಿಸಿದ ಸುದ್ದಿ ಕೇಳಿ ಆಘಾತವಾಯಿತು. ಏಕೆಂದರೆ ನನಗೆ ಅಥವಾ ಆತನ ಪೋಷಕರಿಗೆ ಡ್ರಗ್ಸ್ ದಂಧೆಯ ಬಗ್ಗೆ ಯಾವುದೇ ಸುಳಿವು ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ.

    ಇತ್ತ ನಿನ್ನೆಯೇ ಈ ಕುರಿತು ಹೇಳಿಕೆ ನೀಡಿದ್ದ ಐಯುಎಂಎಲ್ ಮುಖಂಡ ಕೆಎಫ್ ಫಿರೋಜ್, ಅನೂಫ್ ಹಾಗೂ ಬಿನೀಶ್ ಇಬ್ಬರು ಸ್ನೇಹಿತರು ಎಂದು ಮಾಧ್ಯಮಗಳ ಹೇಳಿದ್ದ. ಸದ್ಯದ ಮಾಹಿತಿ ಅನ್ವಯ ಆರೋಪವನ್ನು ಎದುರಿಸುತ್ತಿರುವ ಬಿನೀಶ್, ಹಲವು ವ್ಯವಹಾರ ನಡೆಸುತ್ತಿದ್ದ. ಅಲ್ಲದೇ ಚಿತ್ರರಂದ ಗಣ್ಯರೊಂದಿಗೂ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.

    ಬಿನೀಶ್ ಸಹೋದರ ಬಿನೊಯ್, ಮುಂಬೈ ಮೂಲದ 33 ವರ್ಷದ ಮಹಿಳೆಗೆ ಮದುವೆ ಹೆಸರಿನಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ಹಾಗೂ ವಂಚಿಸಿದ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾನೆ. ಈ ಪ್ರಕರಣದ ವಿಚಾರಣೆ ಮುಂಬೈನಲ್ಲಿ ನಡೆಯುತ್ತಿದ್ದು, ಡಿಎನ್‍ಎ ಪರೀಕ್ಷೆಯ ಫಲಿಶಾಂಶಕ್ಕಾಗಿ ಪೊಲೀಸರು ಕಾಯುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

  • ಯೋಧನ ಪತ್ನಿಗೆ ಬಾಗಿನ ನೀಡಿ, ಆಶೀರ್ವಾದ ಪಡೆದು ನಾಮಪತ್ರ ಸಲ್ಲಿಸಿದ ಬಿಎಸ್‍ಪಿ ಅಭ್ಯರ್ಥಿ

    ಯೋಧನ ಪತ್ನಿಗೆ ಬಾಗಿನ ನೀಡಿ, ಆಶೀರ್ವಾದ ಪಡೆದು ನಾಮಪತ್ರ ಸಲ್ಲಿಸಿದ ಬಿಎಸ್‍ಪಿ ಅಭ್ಯರ್ಥಿ

    – ಸಿಪಿಐಎಂನಿಂದ ಕಣಕ್ಕಿಳಿದ ವರಲಕ್ಷ್ಮೀ

    ಚಿಕ್ಕಬಳ್ಳಾಪುರ: ಲೋಕಸಭಾ ಕ್ಷೇತ್ರದಿಂದ ಸಿಪಿಐಎಂ ಅರ್ಭರ್ಥಿಯಾಗಿ ಸಿಐಟಿಯು ಸಂಘಟನೆಗಳ ರಾಜ್ಯಾಧ್ಯಕ್ಷೆ ವರಲಕ್ಷ್ಮೀ ರವರು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಕಾರ್ಯಕರ್ತರೊಂದಿಗೆ ಚಿಕ್ಕಬಳ್ಳಾಪುರ ನಗರದಲ್ಲಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು. ಚುನಾವಣಾಧಿಕಾರಿಗಳಲ್ಲಿ ನಾಮಪತ್ರ ಸಲ್ಲಿಸಿ ತದನಂತರ ಮಾತನಾಡಿದ ವರಲಕ್ಷೀ ಅವರು, ಸಿಪಿಐಎಂ ಪಕ್ಷ ಅಂದ್ರೆ ಹೋರಾಟದ ಸಂಕೇತ, ಹೀಗಾಗಿ ಜನರಿಗೆ ಹೋರಾಟಗಾರರ ಮೇಲೆ ನಂಬಿಕೆಯಿದ್ದು ತಮಗೆ ಮತ ನೀಡಲಿದ್ದಾರೆ ಅಂತ ವಿಶ್ವಾಸ ವ್ಯಕ್ತಪಡಿಸಿದರು.

    ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಎಸ್‍ಪಿ ಆಭ್ಯರ್ಥಿಯಾಗಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕಾನಾಥ್ ಇಂದು ತಮ್ಮ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ದ್ವಾರಕಾನಾಥ್ ನಗರದ ಕರ್ತವ್ಯ ನಿರತ ಯೋಧ ನಾಗಾರ್ಜುನ್ ನಿವಾಸಕ್ಕೆ ಪತ್ನಿ ಸಮೇತ ಭೇಟಿ ನೀಡಿದರು. ಯೋಧನ ಪತ್ನಿ ಮೀನಾಕ್ಷಿ ಅವರಿಗೆ ಅರಿಶಿನ-ಕುಂಕುಮ ಇಟ್ಟು, ಬಾಗಿನ ಕೊಟ್ಟು ಗಮನ ಸೆಳೆದರು.

    ತಮ್ಮ ಬೆಂಬಲಿಗರೊಂದಿಗೆ ಜಿಲ್ಲಾಡಳಿತ ಭವನದವರೆಗೂ ಬಿಎಸ್‍ಪಿ ಪಕ್ಷದ ಚಿಹ್ನೆ ಆನೆ ಪ್ರತಿಮೆ ಮುಖಾಂತರ ಮೆರವಣಿಗೆ ನಡೆಸಿದ ದ್ವಾರಕನಾಥ್, ಚುನಾವಣಾಧಿಕಾರಿಗಳಿಗೆ ತಮ್ಮ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ವೇಳೆ ಕೊಳ್ಳೆಗಾಲ ಶಾಸಕ ಎನ್ ಮಹೇಶ್ ಸಾಥ್ ನೀಡಿದರು. ಈ ವೇಳೆ ಮಾತನಾಡಿದ ಸಿಎಸ್ ದ್ವಾರಕಾನಾಥ್, ದೇಶದಲ್ಲಿ ಯೋಧರನ್ನ ರಾಜಕೀಯವಾಗಿ ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಯೋಧರ ಪರ ದನಿಯಾಗಿ ಸಂಸತ್ ನಲ್ಲಿ ಧ್ವನಿ ಎತ್ತುವ ಸಲುವಾಗಿ ಸೇರಿದಂತೆ ಕ್ಷೇತ್ರದಲ್ಲಿನ ಗಂಭೀರ ಸಮಸ್ಯೆಯಾದ ನೀರಾವರಿ ಪರ ಮಾತನಾಡಲು ನಾನು ಈ ಬಾರಿ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದರು.