Tag: cowdung

  • ಗಾಳಿಪಟ  ತೆಗೆದುಕೊಳ್ಳಲು ಹೋಗಿ ಸಗಣಿ ಗುಂಡಿಗೆ ಬಿದ್ದು ಬಾಲಕ ಸಾವು

    ಗಾಳಿಪಟ ತೆಗೆದುಕೊಳ್ಳಲು ಹೋಗಿ ಸಗಣಿ ಗುಂಡಿಗೆ ಬಿದ್ದು ಬಾಲಕ ಸಾವು

    ಮುಂಬೈ: ಗಾಳಿಪಟ ಹಿಡಿಯಲು ಹೋಗಿ ಸಗಣಿ ತುಂಬಿದ್ದ ಗುಂಡಿಗೆ ಬಿದ್ದು 10 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ಮೃತ ಬಾಲಕನನ್ನು ಧ್ರುವ ಜಾಧವ್ ಎಂದು ಗುರುತಿಸಲಾಗಿದ್ದು, ಈತ ಪಶ್ಚಿಮದ ಕಂಡಿವಲಿ ಪ್ರದೇಶದ ಶಂಕರ್ ಪಾದ ನಿವಾಸಿ. ಈತ 5 ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಮಕರ ಸಂಕ್ರಾತಿ ದಿನದಂದು ಆಟವಾಡುತ್ತಿದ್ದ ಬಾಲಕ, ಮಧ್ಯಾಹ್ನ ಗಾಳಿಪಟ ಹಿಡಿಯುವ ಪ್ರಯತ್ನದಲ್ಲಿ ಓಡಿ ಹೋಗಿ ಕಾಲು ಜಾರಿ ಸಗಣಿ ಗುಂಡಿಗೆ ಬಿದ್ದಿದ್ದಾನೆ ಎಂದು ತಿಳಿದು ಬಂದಿದೆ. ಈ ಘಟನೆಯಲ್ಲಿ ಅನೇಕರ ನಿರ್ಲಕ್ಷ್ಯಗಳು ಎದ್ದು ಕಾಣುತ್ತಿದ್ದು, ಸದ್ಯಕ್ಕೆ ಈ ವಿಚಾರವಾಗಿ ಆಕಸ್ಮಿಕ ಘಟನೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

     

    ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆ ದಿನವಿಡೀ ಬಾಲಕ ಗಾಳಿಪಟ ಆಡಿಸುತ್ತಿದ್ದನು. ಈತನ ಮನೆಯ ಸಮೀಪ ಖಾಲಿ ಸೈಟ್ ನಲ್ಲಿ ಸಗಣಿರಾಶಿಯ ಹಳ್ಳ ಇದ್ದು, ಗಾಳಿಪಟ ಹಾರಿಸುತ್ತಿದ್ದಾಗ ಅದು ಸಗಣಿರಾಶಿ ಇರುವ ಗುಂಡಿಗೆ ಬಿದ್ದಿದೆ. ಆದರೆ ಆಳವಿದೆ ಎಂದು ತಿಳಿಯದ ಬಾಲಕ ಗಾಳಿಪಟ್ಟ ತೆಗೆದುಕೊಳ್ಳಲು ಹೋಗಿದ್ದಾನೆ. ಈ ವೇಳೆ ಆತ ಗುಂಡಿಗೆ ಬಿದ್ದಿದ್ದಾನೆ. ಬಳಿಕ ರಕ್ಷಣೆಗಾಗಿ ಕೂಗಿದ್ದಾನೆ.

     

    ಇತ್ತ ಬಾಲಕನ ದನಿಯನ್ನು ಪಕ್ಕದಲ್ಲಿಯೇ ಕಟ್ಟಡ ನಿರ್ಮಾಣ ಮಾಡುತ್ತಿದ್ದ ಕಾರ್ಮಿಕರು ಕೇಳಿಸಿಕೊಂಡಿದ್ದಾರೆ. ಅಲ್ಲದೆ ಸಲ್ಲೇ ಇದ್ದ ಸ್ಥಳೀಯರು ಕೂಡ ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಬಾಲಕ ಸಗಣಿ ಗುಂಡಿಗೆ ಬಿದ್ದಿರುವುದು ಬೆಳಕಿಗೆ ಬಂದಿದೆ.

    ಸಗಣಿ ಹಳ್ಳ ಅಪಾಯಕಾರಿಯಾಗಿರುವ ಕಾರಣ ಯಾರು ಕೂಡ ಕೆಳಗೆ ಇಳಿದು ಆತನನ್ನು ರಕ್ಷಿಸಲು ಮುಂದಾಗಲಿಲ್ಲ. ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮತ್ತು ಅಗ್ನಿ ಶಾಮಕದಳದವರು ಕೂಡ ಹಳ್ಳಕ್ಕೆ ಇಳಿಯಲು ಒಪ್ಪಲಿಲ್ಲ. ಅಷ್ಟೊತ್ತಿಗಾಗಲೇ ಜಾಧವ್ ಸಂಪೂರ್ಣ ಸಗಣಿಯಲ್ಲಿ ಮುಳುಗಿ ಹೋಗಿದ್ದನು. ಕೊನೆಗೆ ಅಧಿಕಾರಿಗಳು ಹತ್ತಿರದ ಕೆಲ ಕಾರ್ಮಿಕರ ಸಹಾಯದಿಂದ ಬಾಲಕನನ್ನು ಮೇಲಕ್ಕೆ ಎತ್ತಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದಾನೆ.

  • ಬಿಸಿಲಿನಿಂದ ಪಾರಾಗಲು ಕಾರಿಗೆ ಸೆಗಣಿ ಸಾರಿದ ಮಾಲೀಕ!

    ಬಿಸಿಲಿನಿಂದ ಪಾರಾಗಲು ಕಾರಿಗೆ ಸೆಗಣಿ ಸಾರಿದ ಮಾಲೀಕ!

    ಅಹಮದಾಬಾದ್: ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಜನ ಬಿರು ಬಿಸಿಲಿನಿಂದ ಪಾರಾಗಲು ನಾನಾ ರೀತಿ ಸರ್ಕಸ್ ಮಾಡುತ್ತಿದ್ದಾರೆ. ಹೀಗಿಯೇ ಅಹಮ್ಮದಾಬಾದ್ ನಲ್ಲಿ ಕಾರು ಮಾಲೀಕರೊಬ್ಬರು ತನ್ನ ಕಾರಿಗೆ ಸೆಗಣಿ ಸಾರುವ ಮೂಲಕ ಕೂಲ್ ಕೂಲ್ ಆಗಿರಲು ಹೊಸ ಐಡಿಯಾ ಹುಡುಕಿದ್ದಾರೆ.

    ಈ ವಿಚಾರವನ್ನು ರೂಪೇಶ್ ಗೌರಂಗಾ ದಾಸ್ ಎಂಬವರು ತಮ್ಮ ಫೇಸ್‍ಬುಕ್ ನಲ್ಲಿ ಫೋಟೋ ಹಾಕಿ, ಇದೊಂದು ಒಳ್ಳೆಯ ಉಪಾಯವಾಗಿದ್ದು, ಇಂತಹದ್ದನ್ನು ನಾನು ಎಲ್ಲೂ ಕಂಡಿಲ್ಲ, ಕಾಣಲೂ ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.

    ಅಲ್ಲದೆ ಈ ಫೋಟೋವನ್ನು ನಾನು ಅಹಮ್ಮದಾಬಾದ್‍ನಲ್ಲಿ ತೆಗೆದಿದ್ದೇನೆ. ಅಲ್ಲಿ 45 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ಹೀಗಾಗಿ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮಾಲೀಕ ಸೆಗಣಿಯನ್ನು ತನ್ನ ಕಾರಿಗೆ ಸಾರಿದ್ದಾರೆ. ಈ ಮೂಲಕ ಕೂಲ್ ಆಗಿರಲು ಪ್ರಯತ್ನಿಸಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಗೋಡೆಗೆ ಸೆಗಣಿ ಪೇಂಟ್ – ವಿಶಿಷ್ಠ ಯೋಜನೆಗೆ ಕೈ ಹಾಕಿದ್ರು ಪುತ್ತೂರಿನ ಶಶಿಶೇಖರ ಭಟ್

    ಕೇಂದ್ರ ಮುಂಬೈ ನೊಂದಾಯಿತ ಕಾರು ಇದಾಗಿದ್ದು, ರಾಮ್‍ನಿಕ್ ಲಾಲ್ ಶಾ ಕಾರು ಮಾಲೀಕ ಎಂಬುದಾಗಿ ತಿಳಿದುಬಂದಿದೆ. ರೂಪೇಶ್ ಕಾರು ಫೋಟೋ ಹಾಕುತ್ತಿದ್ದಂತೆಯೇ ಜನ ಹಲವು ಪ್ರಶ್ನೆಗಳು ಮುಂದಿಟ್ಟಿದ್ದಾರೆ. ಅಲ್ಲದೆ ಕೆಲವರು ಟೀಕಿಸಿ ಅಪಹಾಸ್ಯವನ್ನೂ ಮಾಡಿದ್ದಾರೆ.

    ಗ್ರಾಮೀಣ ಭಾರತದಲ್ಲಿ ಮನೆಯಂಗಳಕ್ಕೆ ಈಗಲೂ ಸಗಣಿ ಸಾರುತ್ತಿದ್ದಾರೆ. ಈ ಮೂಲಕ ಮನೆ ಹಾಗೂ ಸುತ್ತಲುತ್ತಲು ಸ್ವಚ್ಛಗೊಳಿಸುವ ಪರಿಪಾಠವಿದೆ. ಇದರಿಂದ ಮನೆ ತಂಪಾಗಿರುತ್ತದೆ ಎಂಬುದನ್ನು ಗ್ರಾಮೀಣ ಜನರು ಅನುಭವದಿಂದ ಕಂಡುಕೊಂಡಿದ್ದಾರೆ. ಇದನ್ನೇ ಗಮನದಲ್ಲಿಟ್ಟುಕೊಂಡು ಕಾರು ಮಾಲೀಕ ತಮ್ಮ ಕಾರಿಗೂ ಸಗಣಿ ಮೆತ್ತಿಸಿಕೊಂಡಿದ್ದಾರೆ. ಇದನ್ನೂ ಓದಿ: 1 ರೂ. ಟಿಕೆಟ್‍ಗೆ 17 ಕಿ.ಮೀ ಸಂಚಾರ – ಇದು ದನದ ಸೆಗಣಿಯಿಂದ ಓಡೋ ಬಸ್ ವಿಶೇಷತೆ

  • ಗೋಡೆಗೆ ಸೆಗಣಿ ಪೇಂಟ್ – ವಿಶಿಷ್ಠ ಯೋಜನೆಗೆ ಕೈ ಹಾಕಿದ್ರು ಪುತ್ತೂರಿನ ಶಶಿಶೇಖರ ಭಟ್

    ಗೋಡೆಗೆ ಸೆಗಣಿ ಪೇಂಟ್ – ವಿಶಿಷ್ಠ ಯೋಜನೆಗೆ ಕೈ ಹಾಕಿದ್ರು ಪುತ್ತೂರಿನ ಶಶಿಶೇಖರ ಭಟ್

    ಪುತ್ತೂರು(ಮಂಗಳೂರು): ಹಿಂದಿನ ಕಾಲದಲ್ಲಿ ಹೆಚ್ಚಾಗಿ ಮಣ್ಣಿನ ಮನೆಗಳಿದ್ದುದರಿಂದ ನೆಲ, ಗೋಡೆಯ ಅರ್ಧ ಭಾಗಕ್ಕೆ ಸೆಗಣಿ ಸಾರುತ್ತಿದ್ದರು. ಆದ್ರೆ ಇದೀಗ ಸಿಮೆಂಟ್ ಬಿಲ್ಡಿಂಗ್ ಗಳು ತಲೆಯೆತ್ತುತ್ತಿದ್ದು, ಜನರು ಸೆಗಣಿ ಮುಟ್ಟುವ ಗೋಜಿಗೆ ಹೋಗಲ್ಲ. ಆದ್ರೆ ಪುತ್ತೂರಿನ ವ್ಯಕ್ತಿಯೊಬ್ಬರು ತಮ್ಮ ಮನೆಯ ಗೋಡೆಗೆ ಸೆಗಣಿ ಪೇಂಟ್ ಮಾಡುವ ಮೂಲಕ ವಿಶಿಷ್ಠ ಯೋಜನೆಗೆ ಕೈ ಹಾಕಿದ್ದಾರೆ.

    ಪುತ್ತೂರು ತಾಲೂಕಿನ ಇರ್ದೆ ಗ್ರಾಮದ ಬೆಂದ್ರ್ ತೀರ್ಥ ಸಮೀಪದ ದೇವಕಾನ ನಿವಾಸಿ ಪಂಚಗವ್ಯ ಸಿದ್ದ ವೈದ್ಯ ಡಾ. ಶಶಿಶೇಖರ ಭಟ್, `ಗೋ ರಂಗ್’ ಅನ್ನೋ ಯೋಜನೆ ಆರಂಭಿಸಿದ್ದಾರೆ. ನಾಟಿ ಹಸುವಿನ ಸೆಗಣಿಯನ್ನು ಬಳಸಿ ಬಣ್ಣ ತಯಾರಿಸಿ ಮನೆಯ ಗೋಡೆಗೆ ಬಳಿಯುವ ಮೂಲಕ ಯಶಸ್ಸು ಕಂಡಿದ್ದಾರೆ.

    ಐಡಿಯಾ ಬಂದಿದ್ದು ಹೇಗೆ..?
    ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಪದಾರ್ಥಗಳಿಂದ ಮಾಡಿದ ಬಣ್ಣಗಳು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದನ್ನು ಮನಗಂಡ ಅವರು ಈ ನೂತನ ಉತ್ಪನ್ನವನ್ನು ತಯಾರಿಸಲು ಮುಂದಾಗಿದ್ದು, ಯಶಸ್ವಿಯಾಗಿರುವುದಾಗಿ ಅವರು ತಿಳಿಸಿದ್ದಾರೆ.

    ಕೇವಲ ಸ್ವದೇಶೀ ತಳಿಯ ಗೋವಿನ ಸೆಗಣಿಯಿಂದ ಮಾತ್ರವೇ ಈ ಸೆಗಣಿ ಪೇಂಟ್ ತಯಾರಿಸಲು ಸಾಧ್ಯ. ಈ ಮೂಲಕ ಸೆಗಣಿಯನ್ನು ಕೇವಲ ಗೋಬರ್ ಗ್ಯಾಸ್ ಹಾಗೂ ಗೊಬ್ಬರಕ್ಕೆ ಬಳಸುತ್ತಿದ್ದ ಕಾಲ ಇನ್ನು ದೂರವಾಗಲಿದ್ದು, ಸೆಗಣಿಯ ಪೇಂಟ್ ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆಯೂ ಹೆಚ್ಚಾಗಿದೆ.

    ಪೈಂಟ್ ತಯಾರಿಸೋದು ಹೇಗೆ..?
    ಸೆಗಣಿಗೆ ಕೆಲವು ಔಷಧೀಯ ಗಿಡಮೂಲಿಕೆಗಳನ್ನು ಬಳಸಿ ಸಿಂಥೆಟಿಕ್ ಪೇಂಟ್ ನಂತೆ ಗೋಡೆಗೆ ಅಂಟಿಕೊಳ್ಳುವಂತೆ ತಯಾರಿಸಿದ್ದಾರೆ. ಬಳಿಕ ಮನೆಯ ಎಲ್ಲಾ ಕೋಣೆಗಳಿಗೂ ಬಳಿದಿದ್ದಾರೆ. ಸೆಗಣಿಯ ಈ ಪೇಂಟ್ ಅನ್ನು ಹಲವು ಬಣ್ಣದಲ್ಲೂ ಸಿದ್ಧಪಡಿಸುವ ಯೋಜನೆಯನ್ನೂ ಶಶಿಶೇಖರ್ ಅವರು ಹಾಕಿಕೊಂಡಿದ್ದಾರೆ.

    ಹಿಂದಿನ ಕಾಲದಲ್ಲೂ ಸೆಗಣಿಯನ್ನು ಗೋಡೆಗಳಿಗೆ ಹಾಗೂ ನೆಲಕ್ಕೆ ಬಳಿಯುವಂತಹ ವ್ಯವಸ್ಥೆಗಳಿತ್ತು. ಆದರೆ ಈ ಆಧುನಿಕ ಯುಗದಲ್ಲಿ ರಾಸಾಯನಿಕ ಮಿಶ್ರಿತ ಪೇಂಟ್ ಗಳನ್ನು ಬಳಸಲು ಆರಂಭವಾಗಿದೆ. ಇದು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಮನೆ ಮಂದಿಯ ಆರೋಗ್ಯದ ಮೇಲೆ ಸೆಗಣಿಯ ರೋಗ ನಿರೋಧಕ ಶಕ್ತಿಯ ಪರಿಣಾಮ ಬೀಳಲಿ ಎಂಬುದೇ ಸೆಗಣಿಯ ಪೇಂಟ್ ಮಾಡುವುದರ ಮುಖ್ಯ ಉದ್ದೇಶ ಎಂದು ಡಾ.ಶಶಿಶೇಖರ್ ಭಟ್ ಹೇಳಿದ್ದಾರೆ.

    ಬಳಕೆ ಹೇಗೆ..?
    ರಾಸಾಯನಿಕ ಮಿಶ್ರಿತ ಸಿಂಥೆಟಿಕ್ ಪೇಂಟ್ ಗಳಂತೆಯೇ ಸೆಗಣಿಯ ಪೇಂಟ್ ಅನ್ನು ಬಳಸಬಹುದಾಗಿದೆ. ಸಾಮಾನ್ಯವಾಗಿ ಎಲ್ಲಾ ಪೇಂಟ್ ಗಳನ್ನು ಗೋಡೆಗೆ ಎರಡು ಬಾರಿ ಬಳಿಯುವಂತೆ ಸೆಗಣಿಯ ಪೇಂಟ್ ಅನ್ನು ಎರಡು ಬಾರಿ ಬಳಿಯಬೇಕಾಗುತ್ತದೆ. ಈ ಪೇಂಟ್ ವಾಟರ್ ಪ್ರೂಫ್ ಕೂಡಾ ಆಗಿದೆ. ಅಂಗಡಿಯಲ್ಲಿ ಸಿಗುವ ರಾಸಾಯನಿಕ ಬಣ್ಣಗಳನ್ನು ಬಳಿಯುವಾಗ ಇರುವ ಕಣ್ಣುರಿತ, ತುರಿಕೆಯ ಲಕ್ಷಣಗಳು ಸೆಗಣಿಯಿಂದ ತಯಾರಿಸಿದ ಬಣ್ಣದಲ್ಲಿ ಇಲ್ಲದ ಕಾರಣ ಪೇಂಟ್ ಮಾಡುವವರು ಕೂಡ ಇಂತಹ ಪೇಂಟ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಬೇಕು ಎನ್ನುವ ಇಚ್ಛೆಯನ್ನೂ ವ್ಯಕ್ತಪಡಿಸುತ್ತಿದ್ದಾರೆ.

    ತಾವೇ ಫಸ್ಟ್ ಟ್ರಯಲ್:
    ನಾವು ವಾಸಿಸುವ ಮನೆಯನ್ನು ರಾಸಾಯನಿಕ ಬಣ್ಣಗಳಿಂದ ಮುಕ್ತಗೊಳಿಸಿ ವಿಕಿರಣ ರಹಿತ ಮಾಡುವ ನಿಟ್ಟಿನಲ್ಲಿ ಗೋ ರಂಗ್ ತಯಾರಿಸಿ ಮೊದಲು ತಮ್ಮದೇ ಮನೆಯ ಗೋಡೆಗೆ ಬಣ್ಣ ಬಳಿದಿದ್ದೇನೆ. ಇದರಲ್ಲಿ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಮನುಷ್ಯನ ಆಯುಷ್ಯ ಹಾಗೂ ಆರೋಗ್ಯವೂ ವೃದ್ಧಿಸುತ್ತದೆ. ಇದಲ್ಲದೆ ಉಷ್ಣಾಂಶ ತಡೆಯುವ ಶಕ್ತಿ ಕೂಡ ಈ ಗೋ ರಂಗ್‍ಗೆ ಇದೆ ಎಂದು ಡಾ. ಶಶಿಶೇಖರ ಭಟ್ ಹೇಳುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv