Tag: cow

  • ತುಮಕೂರಿನಲ್ಲಿ ಗುಡುಗು ಸಹಿತ ಮಳೆ- ಸಿಡಿಲು ಬಡಿದು 2 ಹಸು ಸಾವು

    ತುಮಕೂರಿನಲ್ಲಿ ಗುಡುಗು ಸಹಿತ ಮಳೆ- ಸಿಡಿಲು ಬಡಿದು 2 ಹಸು ಸಾವು

    ತುಮಕೂರು: ಬುಧವಾರ ಸಂಜೆ ಜಿಲ್ಲೆಯಲ್ಲಿ ಗುಡಗು ಸಹಿತ ಮಳೆಯಾಗಿದ್ದು, ಸಿಡಿಲು ಬಡಿದು ಎರಡು ಹಸುಗಳು ಸಾವನ್ನಪ್ಪಿವೆ.

    ಜಿಲ್ಲೆಯ ಮಧುಗಿರಿ ತಾಲೂಕಿನ ಮರಿತಿಮ್ಮನಹಳ್ಳಿಯ ರೈತ ಗೋಪಾಲಯ್ಯ ಎಂಬವರಿಗೆ ಸೇರಿದ ಹಸುಗಳು ಸಾವನ್ನಪ್ಪಿವೆ. ನಿನ್ನೆ ಸಂಜೆ ಮೋಡ ಕವಿದ ಮೇಲೆ ಗೋಪಾಲಯ್ಯ ಅವರು ತಮ್ಮ ಹಸುಗಳನ್ನು ಬಿದಿರು ಮರದ ಕೆಳಗೆ ಕಟ್ಟಿದ್ದರು. ಈ ವೇಳೆ ಹಸುಗಳಿಗೆ ಸಿಡಿಲು ಬಡಿದು ಸಾವನ್ನಪ್ಪಿವೆ.

    ಈ ವರ್ಷ ಭೀಕರ ಬರಗಾರವಿದ್ದು, ಗೋಪಾಲಯ್ಯ ಅವರು ಹಸುಗಳ ಹಾಲು ಮಾರಿ ಜೀವನ ಸಾಗಿಸುತ್ತಿದ್ದರು. ಇದೀಗ ಬರಗಾಲದ ನಡುವೆ ಗೋಪಾಲಯ್ಯ ಅವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ತಾಲೂಕು ಆಡಳಿತ ಮಂಡಳಿ ಪರಿಹಾರ ನೀಡಬೇಕೆಂದು ಗೋಪಾಲಯ್ಯ ಮನವಿ ಮಾಡಿಕೊಂಡಿದ್ದಾರೆ.

     

  • ಧಾರವಾಡದಲ್ಲೊಂದು ಅಚ್ಚರಿ: ಹಸುವಿನ ಮೂಗಿನಲ್ಲಿ ಬೆಳೆಯುತ್ತಿದೆ ಕೋಡು!

    ಧಾರವಾಡದಲ್ಲೊಂದು ಅಚ್ಚರಿ: ಹಸುವಿನ ಮೂಗಿನಲ್ಲಿ ಬೆಳೆಯುತ್ತಿದೆ ಕೋಡು!

    ಧಾರವಾಡ: ಆಕಳು, ಎಮ್ಮೆ ಇವುಗಳ ತಲೆ ಮೇಲೆ ಸಹಜವಾಗಿ ಕೋಡು ಬೆಳೆಯುತ್ತದೆ. ಆದ್ರೆ ಧಾರವಾಡ ತಾಲೂಕಿನ ಮರೇವಾಡ ಗ್ರಾಮದ ರಾಜಶೇಖರ ಚೌಡಿಮನಿ ಎಂಬುವವರ ಜರ್ಸಿ ಆಕಳ ಮೂಗಿನಲ್ಲಿ ಕೋಡು ಬೆಳೆಯುತ್ತಿದ್ದು, ಅಚ್ಚರಿಗೆ ಕಾರಣವಾಗಿದೆ.

    ಕಳೆದ ಎರಡು ವರ್ಷಗಳಿಂದ ಈ ಆಕಳಿನ ಮೂಗಿನಲ್ಲಿ ಕೋಡು ಬೆಳೆಯುತ್ತಿದೆ. ಆದರೆ ರಾಜಶೇಖರ ಕುಟುಂಬವರು ಮಾತ್ರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇತ್ತೀಚೆಗೆ ಅವು ಸ್ವಲ್ಪ ದೊಡ್ಡದಾಗಿ ಬೆಳೆದಿದ್ದರಿಂದ ಜನರ ಕಣ್ಣಿಗೆ ಬಿದ್ದಿದೆ. ಇದೊಂದು ಪವಾಡ ಎಂದು ತಿಳಿದ ಚೌಡಿಮನಿ ಕುಟುಂಬದವರು, ಆಕಳಿಗೆ ಪೂಜೆ ಮಾಡಲು ಆರಂಭಿಸಿದ್ದಾರೆ. ಗ್ರಾಮದ ಜನರಲ್ಲಿ ಕೂಡಾ ಇದು ಅಚ್ಚರಿ ಮೂಡಿಸಿದೆ. ಕಳೆದ 6 ವರ್ಷಗಳ ಹಿಂದೆ ಖರೀದಿ ಮಾಡಿ ತಂದಿದ್ದ ರಾಜಶೇಖರ ಅವರ ಈ ಆಕಳು ಪ್ರತಿ ದಿನ 16 ಲಿಟರ್ ಹಾಲನ್ನ ಕೂಡಾ ಕೊಡುತ್ತಿದೆ.

    ಸದ್ಯ ಈ ಆಕಳನ್ನ ಪರೀಕ್ಷೆಗೆ ಒಳಪಡಿಸಲಾಗಿದೆ. ಪಶು ವೈದ್ಯ ಡಾ. ಸಂತಿ ಕೂಡಾ ಇದು ವಿಶೇಷ ಅಂತಾರೆ. ಅನುವಂಶಿಕವಾಗಿ ವಂಶವಾಹಿನಿಯಲ್ಲಿ ಇದು ಅಡಗಿರುತ್ತೆ. ಆದರೆ ಸದ್ಯ ಇದು ಬೆಳೆಯುತ್ತಿದ್ದು, ಈ ಹಸುವಿನ ರಕ್ತ ಮಾದರಿಯನ್ನ ಬೆಂಗಳೂರಿನ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಕಳಿಸಿಕೊಡಲು ಮುಂದಾಗಿದ್ದಾರೆ. ಈ ಕೊಡುಗಳು ಮೂಗಿನಲ್ಲಿ ಬೆಳೆಯುವುದರಿಂದ ಹಸುಗೆ ಯಾವುದೇ ರೀತಿಯ ತೊಂದರೆಗಳಾಗಲ್ಲ ಅಂತಾ ವೈದ್ಯರು ಹೇಳಿದ್ದಾರೆ.

    ಒಟ್ಟಿನಲ್ಲಿ ವೈಜ್ಞಾನಿಕವಾಗಿ ಇದನ್ನ ನೋಡಬೇಕೋ ಅಥವಾ ಪವಾಡದ ರೀತಿಯಲ್ಲಿ ನೋಡಬೇಕೊ ಗೊತ್ತಿಲ್ಲ. ಸದ್ಯ ಆಕಳ ಮಾಲೀಕರು ಇದಕ್ಕೆ ಪವಾಡ ಅಂತಾರೆ, ಆದರೆ ವೈದ್ಯರು ಇದು ಸಹಜ ಅಂತಾರೆ. ಏನೇ ಇರಲಿ, ಇಂಥದೊಂದು ಅಚ್ಚರಿಯ ಆಕಳು ನೋಡೊಕೆ ಜನರಂತು ಮುಗಿ ಬೀಳುತ್ತಿದ್ದಾರೆ.

  • ಹಸುಗಳ ಆಧಾರ್ ಕಾರ್ಡ್ ವೆಚ್ಚವನ್ನು ಯಾರು ಭರಿಸ್ತಾರೆ? ಗುತ್ತಿಗೆ ಗೋ ರಕ್ಷಕರಿಗೆ ಸಿಗುತ್ತಾ: ದಿಗ್ವಿಜಯ್ ಪ್ರಶ್ನೆ

    ಹಸುಗಳ ಆಧಾರ್ ಕಾರ್ಡ್ ವೆಚ್ಚವನ್ನು ಯಾರು ಭರಿಸ್ತಾರೆ? ಗುತ್ತಿಗೆ ಗೋ ರಕ್ಷಕರಿಗೆ ಸಿಗುತ್ತಾ: ದಿಗ್ವಿಜಯ್ ಪ್ರಶ್ನೆ

    ನವದೆಹಲಿ: ಆಧಾರ್ ರೀತಿಯ ವಿಶಿಷ್ಟ ಗುರುತು ಸಂಖ್ಯೆಯನ್ನು ಹಸುಗಳಿಗೂ ನೀಡಲು ಹೊರಟಿರುವ ಕೇಂದ್ರದ ಪ್ರಸ್ತಾಪಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಕಿಡಿ ಕಾರಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಅವರು ಆಧಾರ್ ವ್ಯವಸ್ಥೆ ಜಾರಿಗೆ ತಗಲುವ ವೆಚ್ಚವನ್ನು ಯಾರು ಭರಿಸುತ್ತಾರೆ ಎಂದು ಮೋದಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

    ಮೋದಿಜೀ ಏನಾಯ್ತು? ಈಗ ನೀವು ಹಸುಗಳಿಗೂ ಆಧಾರ್ ಕಾರ್ಡ್ ನೀಡುತ್ತೀರಾ. ಇದಕ್ಕೆ ಎಷ್ಟು ಖರ್ಚಾಗುತ್ತದೆ? ಇದರ ಗುತ್ತಿಗೆ ಗೋ ರಕ್ಷಕರಿಗೆ ಸಿಗುತ್ತಾ ಎಂದು ಪ್ರಶ್ನಿಸಿದ್ದಾರೆ. ಈ ಆಧಾರ್ ಬಂದ ನಂತರ ಮಾಂಸ ವ್ಯಾಪಾರ ಮಾಡುವ ಮುಸ್ಲಿಮ್ ಬಾಂಧವರಿಗೆ ಗೋ ರಕ್ಷಕರಿಂದ ರಕ್ಷಣೆ ಸಿಗುತ್ತದೆ ಎಂದು ಭರವಸೆ ನೀಡುತ್ತೀರಾ ಎಂದು ಕೇಳಿದ್ದಾರೆ.

    ಮೋದಿ ಭಕ್ತರೇ.. ಅಹಿಂಸಾತ್ಮಕವಾಗಿ ಗೋವುಗಳನ್ನು ರಕ್ಷಣೆ ಮಾಡುವುದನ್ನು ತಿಳಿದುಕೊಳ್ಳಿ. ದೇಶ ಒಡೆಯುವುದನ್ನು ನಿಲ್ಲಿಸಿ ಎಂದು ಟ್ವೀಟ್ ಮಾಡಿದ್ದಾರೆ.

    ದೇಶಾದ್ಯಂತ ಇರುವ ಪ್ರತಿ ಹಸು ಮತ್ತು ಅದರ ಸಂತತಿಗೆ “ವಿಶಿಷ್ಟ ಗುರುತಿನ ಸಂಖ್ಯೆ’ಯನ್ನು ಕಡ್ಡಾಯಗೊಳಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ  ಸೋಮವಾರ ಸುಪ್ರೀಂಗೆ ಸಲ್ಲಿಸಿತ್ತು.

    ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿಗಳ ನೇತೃತ್ವದಲ್ಲಿ ರಚಿಸಿದ್ದ ಸಮಿತಿಯ ವರದಿಯನ್ನು ಕೋರ್ಟ್‍ಗೆ ಒಪ್ಪಿಸಿದ ಕೇಂದ್ರ, ಹಸುಗಳ ಕಳ್ಳಸಾಗಣೆ ತಡೆಯಲು ಪ್ರತಿ ಜಿಲ್ಲೆ ಯಲ್ಲೂ ಕನಿಷ್ಠ 500 ಹಸುಗಳ ವಾಸಕ್ಕೆ ಅಗತ್ಯ ವಿರುವ ಗೋಶಾಲೆ ನಿರ್ಮಿಸಿ, ಬಿಡಾಡಿ ದನಗಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದೆ. ಅಷ್ಟೇ ಅಲ್ಲದೇ ಬಿಡಾಡಿ ದನಗಳನ್ನು ಪೋಷಿಸುವ ಜವಾಬ್ದಾರಿ ಆಯಾ ರಾಜ್ಯ ಸರ್ಕಾರಗಳದ್ದಾಗಿದೆ ಎಂದು ಹೇಳಿದೆ.

  • ಕಾಟಾಚಾರಕ್ಕೆ ಗೋಶಾಲೆ ನಿರ್ಮಾಣ: ಮೇವೂ ಇಲ್ಲ, ನೀರು ಇಲ್ಲ ಕೊನೆಗೆ ಗೋಶಾಲೆಯೇ ಮುಚ್ಚಿದ್ರು

    ಕಾಟಾಚಾರಕ್ಕೆ ಗೋಶಾಲೆ ನಿರ್ಮಾಣ: ಮೇವೂ ಇಲ್ಲ, ನೀರು ಇಲ್ಲ ಕೊನೆಗೆ ಗೋಶಾಲೆಯೇ ಮುಚ್ಚಿದ್ರು

    ರಾಮನಗರ: ಜಾನುವಾರುಗಳಿಗೆ ಮೇವು ಒದಗಿಸಲೆಂದು ಕಾಟಾಚಾರಕ್ಕೆ ಜಿಲ್ಲಾಡಳಿತ ಗೋಶಾಲೆ ನಿರ್ಮಾಣ ಮಾಡಿತ್ತು. ಆದ್ರೆ ಗೋಶಾಲೆ ಇದ್ದಷ್ಟು ದಿನ ಗೋವುಗಳಿಗೆ ಸರಿಯಾಗಿ ಮೇವು ಒದಗಿಸುತ್ತಿರಲಿಲ್ಲ. ಕೊನೆಗೆ 15 ದಿನಗಳ ಕಾಲ ಗೋವುಗಳಿಗೆ ಮೇವು ನೀಡದ ಜಿಲ್ಲಾಡಳಿತ ಗೋವುಗಳನ್ನು ರೈತರಿಗೆ ವಾಪಾಸ್ಸು ಕಳುಹಿಸಿದೆ.

    ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡಮರಳವಾಡಿ ಗ್ರಾಮದ ಅನ್ನಪೂರ್ಣೇಶ್ವರಿ ದೇವಾಲಯದ ಸಮೀಪ ಜಿಲ್ಲಾಡಳಿತದಿಂದ ಗೋಶಾಲೆ ತೆರೆಯಲಾಗಿತ್ತು. ಆದ್ರೆ ಗೋಶಾಲೆ ನಿರ್ಮಾಣವಾದ ಬಳಿಕ ಸಕಲ ಸವಲತ್ತು ನೀಡಬೇಕಾದ ಅಧಿಕಾರಿಗಳು ಸರಿಯಾಗಿ ಇತ್ತ ಸುಳಿಯಲಿಲ್ಲ. ಇದ್ದಷ್ಟು ದಿನ ಮೇವನ್ನೂ ಸಹ ಪೂರೈಸಿಲ್ಲ. ಜಾನುವಾರುಗಳಿಗೆ ಮೇವು ಕಳುಹಿಸಿ ಅಂತಾ ಫೋನ್ ಮಾಡಿದ್ರೆ ಅಧಿಕಾರಿಗಳೇ ಗರಂ ಆಗಿ ರೈತರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ರೈತರು ಹೇಳುತ್ತಾರೆ.

    ಕಳೆದ ಡಿಸೆಂಬರ್ ತಿಂಗಳಿನಲ್ಲಿ ರಾಜ್ಯ ಸರ್ಕಾರದ ಸಚಿವರು ಹಾಗೂ ಅಧಿಕಾರಿಗಳು ಬರ ಪರಿಶೀಲನೆಗಾಗಿ ಭೇಟಿ ನೀಡಿದ್ದಾಗ ಈ ಗೋಶಾಲೆಯನ್ನು ತೆರೆಯಲಾಗಿತ್ತು. ಕಾನೂನು ಸಚಿವ ಟಿ.ಬಿ ಜಯಚಂದ್ರ ಬರಪರಿಹಾರ ಪರಿಶೀಲನೆ ಪ್ರವಾಸದ ವೇಳೆ ಈ ಗೋಶಾಲೆಯನ್ನು ಉದ್ಘಾಟಿಸಿದ್ರು. ಆದ್ರೆ ಮೊದಲು ಗೋಶಾಲೆಯನ್ನು ದೇವಾಲಯದ ಆವರಣದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆಸಲಾಗಿತ್ತು.

    ಆದರೆ ಅಧಿಕಾರಿಗಳೇ ದೇವಾಲಯದ ಆವರಣದಿಂದ ಹೊರಗೆ ಬರುವಂತೆ ರೈತರಿಗೆ ಸೂಚನೆ ಸಹ ನೀಡಿ ಕೇವಲ 30 ಜಾನುವಾರುಗಳಿಗೆ ಸಾಕಾಗುಷ್ಟು ಗೋಶಾಲೆ ನಿರ್ಮಾಣ ಮಾಡಿದ್ರು. ಆದ್ರೆ ಕಳೆದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಸತತ 15 ದಿನಗಳ ಕಾಲ ಮೇವನ್ನೇ ಒದಗಿಸಿಲ್ಲ. ಕೊನೆಗೆ ಗೋಶಾಲೆಯನ್ನೇ ಮುಚ್ಚಿದ್ದಾರೆ. ಇದೀಗ ಬರಗಾಲವಿದ್ದು ಮತ್ತೆ ಗೋಶಾಲೆ ತೆರೆಯಿರಿ ಎಂದು ರೈತರು ಆಗ್ರಹಿಸಿದ್ದಾರೆ.

    ಒಟ್ಟಾರೆ ಕಾಟಾಚಾರಕ್ಕೆ ಕೆಲಸ ಮಾಡೋ ಅಧಿಕಾರಿಗಳು ನಮಗೆ ಬೇಕಿಲ್ಲ ಅನ್ನೋದು ರೈತರ ಆಕ್ರೋಶವಾಗಿದೆ. ಜೊತೆಗೆ ಕಾಟಾಚಾರಕ್ಕೆ ಗೋಶಾಲೆ ತೆರೆದು ರೈತರು ಹಾಗೂ ಜಾನುವಾರುಗಳಿಗೆ ಮೋಸ ಮಾಡಿದ ಜಿಲ್ಲಾಡಳಿತದ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ.

     

  • ಮೇವು ಕೇಂದ್ರದಿಂದ ವಿತರಿಸಿದ ಮೇವು ತಿಂದು 6 ಹಸುಗಳು ಸಾವು

    ಮೇವು ಕೇಂದ್ರದಿಂದ ವಿತರಿಸಿದ ಮೇವು ತಿಂದು 6 ಹಸುಗಳು ಸಾವು

    ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಲ್ಲಯನಪುರ ಗ್ರಾಮದಲ್ಲಿ ಮೇವು ಕೇಂದ್ರದಿಂದ ವಿತರಿಸಿದ ಮೇವನ್ನು ತಿಂದು ಆರು ಹಸುಗಳು ಸಾವನ್ನಪ್ಪಿವೆ.

    ಗ್ರಾಮದ ಶಿವಯ್ಯ, ಬೆಲ್ಲಯ್ಯ, ಚಂದ್ರ, ಮರಿಸಿದ್ದಯ್ಯ ಮತ್ತು ದೊಡ್ಡಬಳ್ಳಯ್ಯ ಎಂಬ ರೈತರಿಗೆ ಸೇರಿದ ಹಸುಗಳು ಸಾವನ್ನಪ್ಪಿವೆ. ಭೀಕರ ಬರಗಾಲದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹಸುಗಳಿಗೆ ಮೇವಿಲ್ಲದ ಕಾರಣ ಕೃಷಿ ಇಲಾಖೆಯಿಂದ ಮೇವು ಕೇಂದ್ರದ ಮೂಲಕ ವಿತರಿಸಲಾಗಿದ್ದ ಜೋಳದ ಪುಡಿಯನ್ನು ತಿಂದ ಆರು ಹಸುಗಳು ಸಾವನ್ನಪ್ಪಿವೆ.

    ಹಸುಗಳು ಸಾವನ್ನಪ್ಪಿದ್ದರಿಂದ ರೈತರಿಗೆ ಒಂದೂವರೆ ಲಕ್ಷಕ್ಕೂ ಅಧಿಕ ಹಣ ನಷ್ಟವಾಗಿದೆ. ಇದಲ್ಲದೆ ಇನ್ನೂ ಕೆಲವು ಹಸುಗಳು ಮೇವನ್ನು ತಿಂದು ಅಸ್ವಸ್ಥಗೊಂಡಿವೆ. ಮೇವಿಲ್ಲದ ಸಂದರ್ಭದಲ್ಲಿ ಕೃಷಿ ಇಲಾಖೆ ರೈತರಿಗೆ ಮೇವು ಒದಗಿಸಿ ರೈತರ ಮುಖದಲ್ಲಿ ಮಂದಹಾಸ ತಂದಿತ್ತು. ಆದರೆ ಇಂದು ನಡೆದಿರುವ ಘಟನೆಯಿಂದ ರೈತರು ಕಂಗಾಲಾಗಿದ್ದಾರೆ. ಸದ್ಯ ಪಶು ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಅಸ್ವಸ್ಥಗೊಂಡಿರುವ ಹಸುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

     

  • ಇನ್ನು ಮುಂದೆ ದನಗಳಿಗೂ  ಆಧಾರ್- ಕೇಂದ್ರದಿಂದ ಸುಪ್ರೀಂಗೆ ಪ್ರಸ್ತಾಪ

    ಇನ್ನು ಮುಂದೆ ದನಗಳಿಗೂ ಆಧಾರ್- ಕೇಂದ್ರದಿಂದ ಸುಪ್ರೀಂಗೆ ಪ್ರಸ್ತಾಪ

    ನವದೆಹಲಿ: ದನಗಳ ರಕ್ಷಣೆ ಮಾಡಲು ಮತ್ತು ಅಕ್ರಮ ಸಾಗಾಟವನ್ನು ತಪ್ಪಿಸಲು ಆಧಾರ್ ನಂತಹ ಗುರುತು ಪತ್ರವನ್ನು ನೀಡುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಪ್ರಸ್ತಾವನೆ ಸಲ್ಲಿಸಿದೆ.

    ಭಾರತ- ಬಾಂಗ್ಲಾದೇಶ ಗಡಿಯಲ್ಲಿ ಹಸುವಿನ ರಕ್ಷಣೆ ಮತ್ತು ಜಾನುವಾರು ಕಳ್ಳಸಾಗಾಣಿಗೆ ತಡೆಯುವ ಸಂಬಂಧ ಇಂದು ಕೇಂದ್ರ ಸರ್ಕಾರ ವರದಿ ಸಲ್ಲಿಸಿದೆ.

    ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿಯನ್ನು ಒಳಗೊಂಡ ಸಮಿತಿ ದನಗಳಿಗೂ ಆಧಾರ್ ಕಾರ್ಡ್ ನೀಡುವಂತೆ ಶಿಫಾರಸು ಮಾಡಿದೆ ಎಂದು ತಿಳಿಸಿದೆ. ಈ ಕಾರ್ಡ್ ನಿಂದಾಗಿ ದನಗಳನ್ನು ಪತ್ತೆ ಮಾಡಲು ಸಹಕಾರಿಯಾಗುತ್ತದೆ ಅಷ್ಟೇ ಅಲ್ಲದೇ ಕಳ್ಳ ಸಾಗಾಣಿಕೆಯನ್ನು ತಡೆಯಬಹುದು ಎಂದು ಕೇಂದ್ರ ಹೇಳಿದೆ.

    ಈ ಆಧಾರ್ ಕಾರ್ಡ್ ನಲ್ಲಿ ದನದ ವಯಸ್ಸು, ತಳಿ, ಲಿಂಗ, ಸ್ಥಳ, ಎತ್ತರ, ದೇಹ, ಬಣ್ಣ, ಕೊಂಬುವಿನ ಮಾಹಿತಿ ಇರಲಿದೆ.

    ಇದೇ ವೇಳೆ ಪ್ರತಿಯೊಂದು ಜಿಲ್ಲೆಯಲ್ಲೂ ಕನಿಷ್ಟ 500 ದನಗಳು ಉಳಿದಿಕೊಳ್ಳುವ ಸಂಬಂಧ ವಸತಿ ನಿರ್ಮಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎನ್ನುವ ಅಂಶ ವರದಿಯಲ್ಲಿದೆ. ಇದೇ ವೇಳೆ ಕೇಂದ್ರ ಸರ್ಕಾರ ತೊಂದರೆಗೀಡಾದ ರೈತರಿಗೂ ನೂತನ ಯೋಜನೆಯನ್ನು ಆರಂಭಿಸುವುದಾಗಿ ತಿಳಿಸಿದೆ.

    ದನಗಳಿಗೆ ಆಧಾರ್ ನೀಡಬೇಕೆಂಬ ಪ್ರಸ್ತಾಪ ಕಳೆದ ವರ್ಷವೇ ಚರ್ಚೆಯಲ್ಲಿತ್ತು. ಆದರೆ ಈ ಪ್ರಸ್ತಾಪಕ್ಕೆ ಕೆಲ ವಿರೋಧಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಅನುಷ್ಠಾನಗೊಂಡಿರಲಿಲ್ಲ. ಆದರೆ ಈಗ ಕೇಂದ್ರ ಸರ್ಕಾರ ದನಗಳಿಗೆ ಆಧಾರ್ ನೀಡುವ ಬಗ್ಗೆ ಸುಪ್ರೀಂಗೆ ವರದಿ ಸಲ್ಲಿಸಿದೆ.

    ವಿಮೆ ಗುರುತಿನ ಸಂಖ್ಯೆ ಈಗ ಇದೆ: ಪ್ರಸ್ತುತ ಜಾನುವಾರು ವಿಮೆ ಮಾಡಿಸುವ ಸಂದರ್ಭದಲ್ಲಿ ದನದ ಕಿವಿಗೆ ಗುರುತಿನ ಸಂಖ್ಯೆ ಇರುವ ಒಲೆಯನ್ನು ಹಾಕಿಸಲಾಗುತ್ತದೆ. ಈ ಸಂದರ್ಭದಲ್ಲಿ ರೈತನೊಂದಿಗೆ ಓಲೆ ಸಹಿತದ ದನದ ಫೋಟೋವನ್ನು ಕಡ್ಡಾಯವಾಗಿ ತೆಗೆಯಬೇಕಾಗುತ್ತದೆ. ಈ ಫೋಟೋವನ್ನು ವಿಮಾ ಕಂಪೆನಿಗಳಿಗೆ ನೀಡಲಾಗುತ್ತದೆ.

  • ಯಾದಗಿರಿಯಲ್ಲಿ ಏ.20-21ರಂದು ಜಾತ್ರೆ: ಭಕ್ತರಿಗೆ ಜಲ ಸಂಕಷ್ಟದ ಭೀತಿ!

    ಯಾದಗಿರಿಯಲ್ಲಿ ಏ.20-21ರಂದು ಜಾತ್ರೆ: ಭಕ್ತರಿಗೆ ಜಲ ಸಂಕಷ್ಟದ ಭೀತಿ!

    ಯಾದಗಿರಿ: ಗ್ರಾಮವೊಂದರ ಕೆರೆ ಬಾವಿ ಬತ್ತಿದ ಪರಿಣಾಮ ಈಗ ಅಲ್ಲಿ ನೀರಿನ ಹಾಹಾಕಾರ ಭುಗಿಲೆದ್ದಿದೆ. ಒಂದು ಹನಿ ನೀರಿಗಾಗಿ ಗ್ರಾಮಸ್ಥರು ಪರದಾಡುವಂತಾಗಿದೆ. ಹೀಗಿರುವಾಗ ಇನ್ನೆರಡು ದಿನಗಳಲ್ಲಿ ಆ ಗ್ರಾಮದ ಬಹು ದೊಡ್ಡ ಜಾತ್ರೆ ಹಿನ್ನೆಲೆಯಲ್ಲಿ ಲಕ್ಷಕ್ಕೂ ಹೆಚ್ಚು ಭಕ್ತರು ಪ್ರತಿ ವರ್ಷದಂತೆ ಈ ವರ್ಷವೂ ಆಗಮಿಸುವ ಹಿನ್ನೆಲೆಯಲ್ಲಿ ಈ ಬಾರಿ ಜಲ ಸಂಕಷ್ಟದ ಭೀತಿ ಎದುರಾಗಲಿದೆ. ನೀರಿಲ್ಲದೆ ಗ್ರಾಮದ ಜಾತ್ರೆ ನಡೆಸೋದು ಹೇಗೆ ಅನ್ನೋ ಚಿಂತೆ ಆ ಗ್ರಾಮಸ್ಥರಿಗೆ ಕಾಡುತ್ತಿದೆ.

    ಹೌದು. ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು ಗ್ರಾಮದಲ್ಲಿ ಕೆರೆ, ಬಾವಿ, ಹಳ್ಳಕೊಳ್ಳಗಳು ಬತ್ತಿ ಹೋಗಿವೆ. ಗ್ರಾಮದ ದೇವಸ್ಥಾನದ ಎದರುಗಡೆ ಗ್ರಾಮಸ್ಥರು ಜಾತ್ರೆಯ ಸಿದ್ಧತೆ ನಡೆಸುತ್ತಿದ್ದಾರೆ.

    ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಬರಗಾಲ ಆವರಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಈಗ ನೀರಿನ ಹಾಹಾಕಾರ ಆರಂಭವಾಗಿದೆ. ಅದರಂತೆ ಈ ಗ್ರಾಮದಲ್ಲೂ ಕೂಡಾ ನೀರಿಗಾಗಿ ಜನ ಸಂಕಷ್ಟ ಪಡುವಂತಾಗಿದೆ. ಹೀಗಿರುವಾಗ ಈ ಭಾಗದಲ್ಲೆ ಪ್ರಸಿದ್ಧಿ ಪಡೆದ ಶರಣಬಸವೇಶ್ವರ ಜಾತ್ರೆ ಇದೆ. 20 ಮತ್ತು 21 ರಂದು ಎರಡು ದಿನ ನಡೆಯಲಿರುವ ಜಾತ್ರೆಗೆ ಲಕ್ಷಕ್ಕೂ ಹೆಚ್ಚು ಭಕ್ತರು ಪ್ರತಿವರ್ಷದಂತೆ ಈ ವರ್ಷವೂ ಪಾಲ್ಗೊಳ್ಳಲಿದ್ದಾರೆ. ಜಾತ್ರೆ ಅಂಗವಾಗಿ 200 ನವಜೋಡಿ ಸಾಮೂಹಿಕ ವಿವಾಹ ಎರ್ಪಡಿಸಲಾಗಿದೆ. ಇಲ್ಲಿ ಬಹುದೊಡ್ಡ ಎತ್ತಿನ ಸಂತೆ ನಡೆಯಲಿದು,್ದ ಜಾನುವಾರಗಳಿಗೆ ನೀರಿನ ದಾಹ ಹೇಗೆ ತಣಿಸಬೇಕು ಅನ್ನೋದು ಬಗ್ಗೆ ಚಿಂತೆ ಶುರುವಾಗಿದೆ. ಅದಲ್ಲದೆ ರೈತರಿಗೆ ಕೃಷಿಗಾಗಿ ಬೇಕಾದಂತಹ ಎಲ್ಲಾ ಸಾಮಾಗ್ರಿಗಳು ಈ ಜಾತ್ರೆಯಲ್ಲಿ ದೊರೆಯತ್ತವೆ. ಈ ಹಿನ್ನೆಲೆಯಲ್ಲಿ ಎರಡು ದಿನ ನಡೆಯಲಿರುವ ಈ ಜಾತ್ರೆಗೆ ಬಂದ ಭಕ್ತರು ಮತ್ತು ಜಾನುವಾರುಗಳಿಗೆ ನೀರಿನ ಸಮಸ್ಯೆ ಕಾಡಲಿದ್ದು ಈ ಜಾತ್ರೆಗೆ ನೀರಿನ ಸಂಕಷ್ಟ ಎದುರಾಗುವ ಭೀತಿ ದೇವಸ್ಥಾನದ ಆಡಳಿತ ಮಂಡಳಿ ಸೇರಿದಂತೆ ಗ್ರಾಮಸ್ಥರಿಗೆ ಕಾಡುತ್ತಿದೆ.

    ಜಾತ್ರೆ ಅಂಗವಾಗಿ ಗ್ರಾಮಸ್ಥರು ಮತ್ತು ದೇವಸ್ಥಾನದ ಆಡಳಿತ ಮಂಡಳಿ ತಮ್ಮ ಗ್ರಾಮದ ಕೆರೆ ಮತ್ತು ಬಾವಿಗಳಿಗೆ ನಾರಾಯಣಪುರ ಎಡದಂಡೆ ಕಾಲುವೆ ಮೂಲಕ ನೀರು ಹರಿಸಬೇಕೆಂದು ಜಿಲ್ಲಾ ಪಂಚಾಯತ್ ನಿಂದ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ರು. ತಮ್ಮ ಮನವಿಯಂತೆ ತಮ್ಮ ಗ್ರಾಮದ ಕೆರೆ ಬಾವಿಗೆ ನೀರು ಹರಿಸಲು ಜಿಲ್ಲಾ ಪಂಚಾಯತ್ ವತಿಯಿಂದ 5 ಲಕ್ಷ ಹಣ ಕೂಡಾ ಬಿಡುಗಡೆ ಮಾಡಲಾಗಿತ್ತು. ಆದ್ರೆ ಇವರ ಮನವಿ ಪ್ರಕಾರ ಜಿಲ್ಲಾ ಪಂಚಾಯತ್ ಮೂಲಕ ಕೃಷ್ಣಾ ಭಾಗ್ಯ ಜಲ ನಿಗಮ ಅಧಿಕಾರಿಗಳಿಗೆ ಜಿಲ್ಲಾಡಳಿತ ಮೂಲಕ ಯಾವುದೇ ಅಧಿಕೃತವಾದ ಸೂಚನೆ ಬಂದಿಲ್ಲ. ಈಗಾಗಲೇ ನಾರಾಯಣಪುರ ಡ್ಯಾಮ್ ನಲ್ಲಿ ನೀರಿನ ಅಭಾವ ಎದುರಾಗಿದ್ದು ಪರಿಣಾಮ ಆ ಗ್ರಾಮದ ಕೆರೆ ಬಾವಿಗೆ ನೀರು ಬಿಡಲಾಗುವುದಿಲ್ಲ ಅಂತ ಕೃಷ್ಣಾ ಭಾಗ್ಯ ಜಲ ನಿಗಮ ಅಧಿಕಾರಿಗಳು ಜರಿಯುತ್ತಿದ್ದಾರೆ.

    ಒಟ್ಟಾರೆಯಾಗಿ ಎರಡು ದಿನ ನಡೆಯಲಿರುವ ನಗನೂರು ಗ್ರಾಮದ ಶರಣಬಸವೇಶ್ವರ ದೇವರ ಬಹುದೊಡ್ಡ ಜಾತ್ರೆಗೆ ನೀರಿನ ಸಂಕಷ್ಟ ತಲೆದೂರಿದೆ. ಈ ಜಾತ್ರೆಗೆ ಬರುವ ಭಕ್ತರಿಗೆ ಮತ್ತು ಜಾನುವಾರುಗಳಿಗೆ ಜಿಲ್ಲಾಡಳಿತ ನೀರು ಪೂರೈಸುವ ಮೂಲಕ ಜಾತ್ರೆ ಸುಗಮವಾಗಿ ನಡೆಯುವಂತೆ ಮಾಡಲು ಗ್ರಾಮಸ್ಥರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕಿದೆ.

  • 1 ರೂ. ಟಿಕೆಟ್‍ಗೆ 17 ಕಿ.ಮೀ ಸಂಚಾರ – ಇದು ದನದ ಸೆಗಣಿಯಿಂದ ಓಡೋ ಬಸ್ ವಿಶೇಷತೆ

    1 ರೂ. ಟಿಕೆಟ್‍ಗೆ 17 ಕಿ.ಮೀ ಸಂಚಾರ – ಇದು ದನದ ಸೆಗಣಿಯಿಂದ ಓಡೋ ಬಸ್ ವಿಶೇಷತೆ

    ಕೋಲ್ಕತ್ತಾ: ದನದ ಸೆಗಣಿಯಿಂದ ಗ್ಯಾಸ್, ವಿದ್ಯುತ್ ಉತ್ಪಾದನೆ ಮಾಡುವುದು ನಿಮಗೆ ಗೊತ್ತೇ ಇದೆ. ಇದಕ್ಕೆ ಈಗ ಹೊಸ ಸೇರ್ಪಡೆ ಎಂಬಂತೆ ಭಾರತದಲ್ಲಿ ಇದೇ ಮೊದಲ ಬಾರಿಗೆ ಸೆಗಣಿಯಿಂದ ತಯಾರಾದ ಬಯೋ ಗ್ಯಾಸ್‍ನಿಂದ ಚಲಿಸುವ ಬಸ್ ಸಂಚಾರ ವ್ಯವಸ್ಥೆ ಪಶ್ಚಿಮ ಬಂಗಾಳದಲ್ಲಿ ಆರಂಭಗೊಂಡಿದೆ.

    ಹೌದು. ಕೋಲ್ಕತ್ತಾದ ಉಲ್ಟದಂಗದಿಂದ ಗರೀಯಾದವರೆಗೆ ಬಯೋಗ್ಯಾಸ್‍ನಿಂದ ಸಂಚರಿಸುವ ಬಸ್ ಸೇವೆ ಶುಕ್ರವಾರದಿಂದ ಆರಂಭವಾಗಿದೆ.

    ಟಿಕೆಟ್ ಬೆಲೆ ಎಷ್ಟು?
    ಬಸ್ ಆರಂಭಗೊಂಡಿದ್ದು ಏನೋ ಸರಿ ಅದರೆ ಅದರ ಟೆಕೆಟ್ ಬೆಲೆ ಎಷ್ಟು ಎಂದು ಕೇಳಿದ್ರೆ ನೀವು ಅಚ್ಚರಿ ಪಡ್ತೀರಿ. ಕೇವಲ 1 ರೂಪಾಯಿ ನೀಡಿದ್ರೆ ನೀವು ಈ ಬಸ್‍ನಲ್ಲಿ 17.5 ಕಿ.ಮೀ ಸಂಚರಿಸಬಹುದು. ಸದ್ಯಕ್ಕೆ ದೇಶದಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಸಂಚರಿಸುವ ಸಾರಿಗೆ ಎನ್ನುವ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

    ತಯಾರಿಸಿದ್ದು ಯಾರು?
    ಪೋನೆಕ್ಸ್ ಇಂಡಿಯಾ ರಿಸರ್ಚ್ ಡೆವಲಪ್‍ಮೆಂಟ್ ಗ್ರೂಪ್ ವಾಹನಗಳ ತಯಾರಕಾ ಕಂಪೆನಿಯಾದ ಅಶೋಕ್ ಲೇಲ್ಯಾಂಡ್ ಜೊತೆಗೂಡಿ ಈ ಸಾರಿಗೆ ವ್ಯವಸ್ಥೆಯನ್ನು ಆರಂಭಿಸಿದೆ. 54 ಆಸನಗಳುಳ್ಳ ಈ ಬಸ್ ನಿರ್ಮಾಣಕ್ಕೆ ಅಂದಾಜು 13 ಲಕ್ಷ ರೂ. ಖರ್ಚಾಗಿದೆ. ಈ ವರ್ಷ 15ಕ್ಕೂ ಹೆಚ್ಚು ಬಸ್‍ಗಳನ್ನು ವಿವಿಧ ಮಾರ್ಗದಲ್ಲಿ ಕಡಿಮೆ ದರದಲ್ಲಿ ಓಡಿಸಲಿದ್ದೇವೆ ಎಂದು ಸಂಸ್ಥೆ ತಿಳಿಸಿದೆ.

    ಮೈಲೇಜ್ ಎಷ್ಟು?
    ಬಿರ್‍ಭೂಮ್ ಜಿಲ್ಲೆಯಲ್ಲಿರುವ ನಮ್ಮ ಘಟಕದಲ್ಲಿ ಸೆಗಣಿ ಮೂಲಕ ನಾವು ಗ್ಯಾಸ್ ಉತ್ಪಾದನೆ ಮಾಡುತ್ತೇವೆ. ಉತ್ಪಾದನೆಯಾದ ಗ್ಯಾಸ್ ಟ್ಯಾಂಕರ್ ಮೂಲಕ ಕೋಲ್ಕತ್ತಾಕ್ಕೆ ಬರುತ್ತದೆ. ಒಂದು ಕೆಜಿ ಗ್ಯಾಸ್ ಉತ್ಪಾದನೆಗೆ 20 ರೂ. ಖರ್ಚಾಗುತ್ತದೆ. ಒಂದು ಕೆಜಿ ಗ್ಯಾಸ್‍ನಲ್ಲಿ ಬಸ್ 5 ಕಿ.ಮೀ ಸಂಚರಿಸುತ್ತದೆ ಎಂದು ಪೋನೆಕ್ಸ್ ಇಂಡಿಯಾ ರಿಸರ್ಚ್ ಆಂಡ್ ಡೆವಲೆಪ್‍ಮೆಂಟ್ ಗ್ರೂಪಿನ ಅಧ್ಯಕ್ಷರಾದ ಜ್ಯೋತಿ ಪ್ರಕಾಶ್ ದಾಸ್ ಹೇಳಿದ್ದಾರೆ.

    ಜ್ಯೋತಿ ಪ್ರಕಾಶ್ ಸಸ್ಯಶಾಸ್ತ್ರದಲ್ಲಿ ಪಿಎಚ್‍ಡಿ ಮಾಡಿದ್ದು ಕಳೆದ 8 ವರ್ಷಗಳಿಂದ ಬಯೋಗ್ಯಾಸ್ ವಿಚಾರದಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಮುಂದೆ ಜರ್ಮನಿಯ ತಂತ್ರಜ್ಞಾನವನ್ನು ಬಳಸಲು ನಾವು ಚಿಂತನೆ ನಡೆಸಿದ್ದೇವೆ. ಒಂದು ಕೆಜಿ ಗ್ಯಾಸ್ ತಯಾರಿಸಲು 20 ರೂ. ಖರ್ಚಾಗುತ್ತದೋ ಅಷ್ಟೇ ವೆಚ್ಚದಲ್ಲಿ 20 ಕಿ.ಮೀ ಓಡುವಂತಹ ಬಸ್ ನಿರ್ಮಿಸುವುದು ನಮ್ಮ ಮುಂದಿನ ಗುರಿ. ಪ್ರಸ್ತುತ ಬಸ್‍ನಲ್ಲಿ 80 ಕೆಜಿ ಸಾಮರ್ಥ್ಯದ  ಟ್ಯಾಂಕ್ ಇದೆ. ಒಂದು ಬಾರಿ ಫುಲ್ ಟ್ಯಾಂಕ್ ಗ್ಯಾಸ್ ತುಂಬಿದರೆ 1,600 ಕಿ.ಮೀ ವರೆಗೆ ಚಲಿಸುವ ಸಾಮರ್ಥ್ಯವನ್ನು ನಮ್ಮ ಬಸ್‍ಗಳು ಹೊಂದಿದೆ ಎಂದು ವಿವರಿಸಿದ್ದಾರೆ.

    ನಿರ್ವಹಣೆ ಹೇಗೆ?
    ಟಿಕೆಟ್ ಬೆಲೆ ಕಡಿಮೆ ಇದ್ದ ಕಾರಣ ಡ್ರೈವರ್ ಮತ್ತು ನಿರ್ವಾಹಕರಿಗೆ ಸಂಬಳ ಹೇಗೆ ಕೊಡುತ್ತೀರಿ ಎನ್ನುವ ಪ್ರಶ್ನೆಗೆ ಬಸ್‍ನಲ್ಲಿರುವ ಜಾಹಿರಾತಿನಿಂದ ಸಿಗುವ ಹಣದಿಂದ ನೀಡುತ್ತೇವೆ ಎಂದು ಉತ್ತರಿಸಿದ್ದಾರೆ.

    ಬಯೋ ಗ್ಯಾಸ್ ಪಂಪ್‍ಗಳನ್ನು ಸ್ಥಾಪಿಸಲು ಅನುಮತಿ ಸಿಕ್ಕಿದ್ದು, ನಾವು 100 ಪಂಪ್‍ಗಳನ್ನು ಸ್ಥಾಪಿಸುತ್ತೇವೆ. ಅಷ್ಟೇ ಅಲ್ಲದೇ ಬಯೋ ಗ್ಯಾಸ್‍ನಿಂದಾಗಿ ವಾಹನಗಳ ಬಾಳಿಕೆಯ ಅವಧಿಯೂ ಹೆಚ್ಚಾಗುತ್ತದೆ ಎಂದು ಜ್ಯೋತಿ ಪ್ರಕಾಶ್ ದಾಸ್ ತಿಳಿಸಿದ್ದಾರೆ.

    ಕೋಲ್ಕತ್ತಾದಿಂದ 204 ಕಿ.ಮೀ ದೂರದಲ್ಲಿರುವ ಭಿರ್‍ಭೂಮ್ ಜಿಲ್ಲೆಯ ದುಬ್ರಜ್‍ಪುರ್ ಎಂಬಲ್ಲಿ ಪೋನೆಕ್ಸ್ ಗ್ಯಾಸ್ ತಯಾರಕಾ ಘಟಕವನ್ನು ಸ್ಥಾಪಿಸಿದ್ದು, ಈ ಘಟಕ ಈಗ 1 ಸಾವಿರ ಕೆಜಿ ಬಯೋ ಗ್ಯಾಸ್ ಉತ್ಪಾದಿಸುತ್ತಿದೆ.

  • ವಿಡಿಯೋ: ತನ್ನ ಹಾಲನ್ನು ತಾನೇ ಕುಡಿದು ಜನರಿಗೆ ಅಚ್ಚರಿ ಮೂಡಿಸುತ್ತಿದೆ ದಾವಣಗೆರೆಯ ಹಸು

    ವಿಡಿಯೋ: ತನ್ನ ಹಾಲನ್ನು ತಾನೇ ಕುಡಿದು ಜನರಿಗೆ ಅಚ್ಚರಿ ಮೂಡಿಸುತ್ತಿದೆ ದಾವಣಗೆರೆಯ ಹಸು

    ದಾವಣಗೆರೆ: ಹಸುವೊಂದು ತನ್ನ ಕೆಚ್ಚಲಿನ ಹಾಲನ್ನು ತಾನೇ ಕುಡಿದು ಜನರಿಗೆ ಅಚ್ಚರಿ ಮೂಡಿಸುತ್ತಿರುವ ಘಟನೆ ಕೆಟಿಜೆ ನಗರದಲ್ಲಿ ನಡೆಯುತ್ತಿದೆ.

    ಹಲವು ದಿನಗಳಿಂದ ಹಸು ಹೀಗೆ ಹಾಲು ಕುಡಿಯುವುದನ್ನು ನೋಡಿದ ಜನರು ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದು ಮಾಧ್ಯಮಗಳಿಗೆ ನೀಡಿದ್ದಾರೆ.

    ಕರು ಇಲ್ಲದ ಕಾರಣ ಕೆಚ್ಚಲ ಭಾರವನ್ನು ಇಳಿಸಿಕೊಳ್ಳಲು ಹಸು ತನ್ನ ಹಾಲನ್ನು ತಾನೇ ಕುಡಿಯುತ್ತಿದೆ. ಅಷ್ಟೇ ಅಲ್ಲದೇ ಹಸು ತನ್ನ ಹಾಲನ್ನು ತಾನೇ ಕುಡಿಯುತ್ತಿರುವ ದೃಶ್ಯವನ್ನು ಇದೂವರೆಗೂ ನಾವು ನೋಡೇ ಇಲ್ಲ ಜನ ಹೇಳಿದ್ದಾರೆ.

    ಈ ರೀತಿಯಾಗಿ ಹಸು ತನ್ನ ಹಾಲನ್ನು ಕೆಲ ದಿನಗಳಿಂದ ಕುಡಿಯುತ್ತಿದ್ದು, ಜನರಲ್ಲಿ ಭಾರೀ ಕುತೂಹಲ ಮೂಡಿಸಿದೆ.

    https://www.youtube.com/watch?v=ywu0idu64qc

     

  • ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ: ಮೂರು ಹಸುಗಳು ಸಜೀವ ದಹನ

    ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ: ಮೂರು ಹಸುಗಳು ಸಜೀವ ದಹನ

    ಚಾಮರಾಜನಗರ: ತಾಲೂಕಿನ ಬಸವರಾಜಪುರ ಗ್ರಾಮದಲ್ಲಿರೋ ದನದ ಕೊಟ್ಟಿಗೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಮೂರು ಹಸುಗಳು ಸಜೀವ ದಹನಗೊಂಡಿರುವ ಘಟನೆ ನಡೆದಿದೆ.

    ಗ್ರಾಮದ ಬಸವದೇವರು ಎಂಬವರಿಗೆ ಸೇರಿದ ಹಸುಗಳು ಬೆಂಕಿಗಾಹುತಿಯಾಗಿವೆ. ಭಾನುವಾರ ರಾತ್ರಿ ಬೆಂಕಿ ತಗುಲಿದ್ದು, ಹಸುಗಳು ಬೆಂಕಿಯ ತೀವ್ರತೆಗೆ ಸುಟ್ಟು ಕರಕಲಾಗಿವೆ. ಕೊಟ್ಟಿಗೆಯ ಪಕ್ಕದಲ್ಲಿದ್ದ ಮೇವಿಗೂ ಬೆಂಕಿ ತಗುಲಿದ್ದರಿಂದ ತಕ್ಷಣವೇ ಬೆಂಕಿ ಆವರಿಸಿಕೊಂಡಿದೆ ಎಂದು ಹೇಳಲಾಗಿದೆ.

    ಬೇಸಿಗೆ ಮತ್ತು ಬರದಿಂದಾಗಿ ಮೇವಿಗೆ ಅಭಾವ ಇರುವುದರಿಂದ ಕೊಟ್ಟಿಗೆಯಲ್ಲೇ ಮೇವನ್ನು ದಾಸ್ತಾನು ಮಾಡಲಾಗಿತ್ತು. ಒಂದು ಲಕ್ಷಕ್ಕೂ ಅಧಿಕ ಬೆಲೆಬಾಳುವ ಹಸುಗಳನ್ನು ಕಳೆದುಕೊಂಡಿರುವ ರೈತ ಬಸವದೇವರು ಕಂಗಾಲಾಗಿದ್ದಾರೆ. ಈ ಸಂಬಂಧ ಆಲೂರುಒಮ್ಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.