Tag: cow

  • ಕೇಬಲ್ ಗುಂಡಿಗೆ ಬಿದ್ದು, ಒದ್ದಾಡಿ ಹಸು ಸಾವು

    ಕೇಬಲ್ ಗುಂಡಿಗೆ ಬಿದ್ದು, ಒದ್ದಾಡಿ ಹಸು ಸಾವು

    ಮಡಿಕೇರಿ: ಕೇಬಲ್ ಹಾಕಲು ತಗೆದಿದ್ದ ಗುಂಡಿಯಲ್ಲಿ ಹಸುವೊಂದು ಬಿದ್ದು, ಮೃತಪಟ್ಟ ಘಟನೆ ಮಡಿಕೇರಿ ತಾಲೂಕಿನ ಕಡಗದಾಳು ಗ್ರಾಮದಲ್ಲಿ ನಡೆದಿದೆ.

    ಮೃತ ಪಟ್ಟ ಹಸು ಅಜಿತ್ ಅವರಿಗೆ ಸೇರಿದ್ದು. ಮಂಗಳವಾರ ರಾತ್ರಿ ಹಸು ರಸ್ತೆ ದಾಟುತ್ತಿರುವ ವೇಳೆ ಈ ದುರ್ಘಟನೆ ನಡೆದಿದೆ. ಸುಮಾರು ದಿನಗಳ ಹಿಂದೆಯೇ ಖಾಸಗಿ ಟೆಲಿಕಾಂ ಕಂಪನಿ ಕೇಬಲ್ ಅಳವಡಿಸಲು ರಸ್ತೆ ಪಕ್ಕದಲ್ಲಿ ಗುಂಡಿಯನ್ನು ತೆಗೆದಿತ್ತು.

    ಹಸು ರಾತ್ರಿ ಗುಂಡಿಗೆ ಬಿದ್ದು ಅಲ್ಲಿಯೇ ಉಸಿರುಗಟ್ಟಿ ಮೃತಪಟ್ಟಿದ್ದು, ಬೆಳಗ್ಗೆ ಸಾರ್ವಜನಿಕರ ಗಮನಕ್ಕೆ ಬಂದಿದೆ. ಗುಂಡಿ ಅಗೆದು ತಿಂಗಳಾದರೂ ಗುಂಡಿಯನ್ನು ಮುಚ್ಚಿರದ ಟೆಲಿಕಾಂ ಕಂಪನಿ ಹಾಗೂ ಪಿಡಬ್ಲ್ಯುಡಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಹೆತ್ತ ಮಗಳಿಗಿಂತ ಹೆಚ್ಚಾಗಿ ಕರುವಿನ ಹುಟ್ಟುಹಬ್ಬ ಆಚರಿಸಿದ ದಂಪತಿ!

    ಹೆತ್ತ ಮಗಳಿಗಿಂತ ಹೆಚ್ಚಾಗಿ ಕರುವಿನ ಹುಟ್ಟುಹಬ್ಬ ಆಚರಿಸಿದ ದಂಪತಿ!

    ಚಿಕ್ಕಬಳ್ಳಾಪುರ: ಸಾಮಾನ್ಯವಾಗಿ ಮನುಷ್ಯರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದನ್ನು ನೀವು ನೋಡಿರಬಹುದು. ಆದರೆ ದಂಪತಿ ತಮ್ಮ ಮನೆಯಲ್ಲಿರುವ ಸೀಮೆಹಸುವಿನ ಕರುವಿನ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿ ಈಗ ಸುದ್ದಿಯಾಗಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ಸಾವಿತ್ರಿ-ಮುನಿಕೆಂಪಯ್ಯ ದಂಪತಿ ಸೀಮೆ ಹಸು ಕರುವಿಗೆ ಹುಟ್ಟು ಹಬ್ಬ ಆಚರಣೆ ಮಾಡಿದ್ದಾರೆ. ನೆರೆ-ಹೊರೆಯವರಿಗೆಲ್ಲಾ ಸಿಹಿ ಹಂಚಿ ಗಮನ ಸೆಳೆದಿದ್ದಾರೆ. ಸೀಮೆ ಹಸುವಿನ ಬರ್ತ್‍ಡೇ ಸೆಲೆಬ್ರೇಷನ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದೆ. ಈ ಮೂಲಕ ಮೂಕ ಪ್ರಾಣಿಯ ಮೇಲೆ ತಮ್ಮಗಿರುವ ಪ್ರೀತಿ, ಮಮತೆಯನ್ನು ದಂಪತಿ ವ್ಯಕ್ತಪಡಿಸಿದ್ದಾರೆ.

    ಯಾರೆಲ್ಲ ಬಂದಿದ್ದರು?
    ಎರಡು ಮಿಶ್ರ ತಳಿ ಸೀಮೆ ಹಸುಗಳನ್ನಿಟ್ಟುಕೊಂಡು ಹೈನುಗಾರಿಕೆ ಜೊತೆಗೆ ಬಿಡುವಿನ ವೇಳೆಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈ ದಂಪತಿ ಮನೆಯಲ್ಲಿರುವ ಸೀಮೆ ಹಸುವೊಂದು 2017ರ ಜೂನ್ 2ರಂದು ಕರುವಿಗೆ ಜನ್ಮ ನೀಡಿತ್ತು. ಮನೆಯ ಮಗಳಂತೆ ಬೆಳೆಸಿದ ಕರುವಿಗೆ 2018 ಜೂನ್ 02ರಂದು ಒಂದು ವರ್ಷ ತುಂಬಿದ ಹಿನ್ನಲೆಯಲ್ಲಿ ಗ್ರಾಮದಲ್ಲಿ ಅಕ್ಕ-ಪಕ್ಕದವರಿಗೆಲ್ಲಾ ಆಹ್ವಾನ ನೀಡಿ, ಅದರ ಹುಟ್ಟುಹಬ್ಬವನ್ನು ತುಂಬಾ ಅದ್ಧೂರಿಯಾಗಿ ಮಾಡಿದ್ದಾರೆ. ನೆಂಟರು, ಸ್ನೇಹಿತರು, ಬಂಧು ಬಳಗದವರು, ತಮ್ಮ ಅಕ್ಕಪಕ್ಕದ ಮನೆಯವರು, ಊರಿನ ಮುಖಂಡರಿಗೆ ಆಹ್ವಾನ ನೀಡಿ, ಮನೆಯನ್ನು ಶೃಂಗರಿಸಿ ಹುಟ್ಟು ಹಬ್ಬವನ್ನ ಆಚರಣೆ ಮಾಡಿದ್ದಾರೆ.

    ಹುಟ್ಟುಹಬ್ಬ ಸುಂದರಿ!
    ಕರು ಹುಟ್ಟಿದಾಗಲೇ ಅದಕ್ಕೆ ಸುಂದರಿ ಎಂದು ನಾಮಕರಣ ಮಾಡಿದ್ದ ಮನೆಯವರು ಸಂಜೆಯಾಗುತ್ತಿದ್ದಂತೆ ಸುಂದರಿಯನ್ನು ತೊಳೆದು ಕುಂಕುಮವಿಟ್ಟು ಪೂಜೆ ಮಾಡಿದರು. ಕೊರಳಿಗೊಂದು ಹಾರ, ಮೈತುಂಬ ಬಲೂನ್‍ಗಳನ್ನು ಕಟ್ಟಿ ಸಿಂಗರಿಸಿದ್ದರು. ಸುಂದರಿ ಹೆಸರು ಬರೆಯಿಸಿ ಸಿದ್ಧಪಡಿಸಿಕೊಂಡು ತಂದಿದ್ದ ಕೇಕ್, ಎಲೆ ಅಡಿಕೆ, ಬಾಳೆಹಣ್ಣು ಇತ್ಯಾದಿ ತಿಂಡಿ ತಿನ್ನಿಸುಗಳನ್ನಿಟ್ಟು, ಟೇಬಲ್ ಮುಂದೆ ಸುಂದರಿಯನ್ನು ತಂದು ನಿಲ್ಲಿಸಿದ್ದರು. ನಂತರ ಸೇರಿದ್ದ ಜನ ಸಮೂಹದ ನಡುವೆ ಬರ್ತ್ ಡೇಯನ್ನು ಭರ್ಜರಿಯಾಗಿ ಆಚರಣೆ ಮಾಡಿ ಖುಷಿಪಟ್ಟಿದ್ದಾರೆ.

    ಬರ್ತ್ ಡೇ ಪಾರ್ಟಿಯನ್ನು ವೀಕ್ಷಣೆ ಮಾಡಲು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಸುಂದರಿಗೆ ಶುಭ ಹಾರೈಸಿದರು. ತಮ್ಮ ಮನೆಯ ಮಗಳ ಹುಟ್ಟು ಹಬ್ಬದಂತೆ ಬಂದವರಿಗೆ ತಾಂಬೂಲ, ಅರಿಶಿಣ- ಕುಂಕುಮ ಸಿಹಿ ಕೊಟ್ಟು ಹುಟ್ಟು ಹಬ್ಬಕ್ಕೆ ಬಂದಿದ್ದಕ್ಕೆ ಧನ್ಯವಾದ ಅರ್ಪಿಸಿ ಕಳುಹಿಸಿಕೊಟ್ಟಿದ್ದಾರೆ.

    ಸುಂದರಿ ಕರುವಿನ ಬರ್ತಡೆಯಲ್ಲಿ ಪಾಲ್ಗೊಂಡಿದ್ದ ಗ್ರಾಮ ಯುವಕರು ಬರ್ತ್ ಡೇಯ ಸಂಭ್ರಮವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಶುಭ ಹಾರೈಸಿದ್ದಾರೆ. ಫೇಸ್‍ಬುಕ್ ವಾಲ್‍ನಲ್ಲಿ ಸುಂದರಿ ಕರುವಿನ ಫೋಟೋ ಸಮೇತ ಬರ್ತ್ ಡೇ ಚಿತ್ರವನ್ನು ಹಲವರು ಶೇರ್ ಮಾಡಿದ್ದು, ಬಹಳಷ್ಟು ಮೆಚ್ಚುಗೆನಳನ್ನ ವ್ಯಕ್ತಪಡಿಸಿ ಶುಭಾಶಯಗಳನ್ನ ಕೋರಿದ್ದಾರೆ. ಇನ್ನೂ ಕೆಲವರು ಹುಬ್ಬೇರಿಸಿ ಶುಭಾಶಯದ ಕಾಮೆಂಟ್ ಕೂಡ ಮಾಡಿದ್ದಾರೆ.

  • ಚುನಾವಣಾ ಎಫೆಕ್ಟ್, ಅಧಿಕಾರಿಗಳ ನಿರ್ಲಕ್ಷ್ಯ- ರಾಜ್ಯಕ್ಕೆ ಹಾಲು ನೀಡುವ ರೈತರಲ್ಲಿ ಕಣ್ಣೀರು!

    ಚುನಾವಣಾ ಎಫೆಕ್ಟ್, ಅಧಿಕಾರಿಗಳ ನಿರ್ಲಕ್ಷ್ಯ- ರಾಜ್ಯಕ್ಕೆ ಹಾಲು ನೀಡುವ ರೈತರಲ್ಲಿ ಕಣ್ಣೀರು!

    ಚಿಕ್ಕಬಳ್ಳಾಪುರ: ಹೈನೋದ್ಯಮವೇ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಯ ರೈತರ ಪ್ರಮುಖ ಜೀವನಾಧಾರ. ಜಿಲ್ಲೆಯಲ್ಲಿ ನೀರಿಗೆ ಬರ ಇದ್ದರೂ ಹಾಲಿಗೆ ಮಾತ್ರ ಎಂದೂ ಬರ ಇಲ್ಲ. ಹಾಲಿನ ಹೊಳೆಯನ್ನೇ ಹರಿಸುವ ರೈತರಿಗೆ ಮಿಶ್ರ ತಳಿ ಸೀಮೆ ಹಸುಗಳೇ ಬದುಕಿನ ಆಧಾರಕ್ಕೆ ಆರ್ಥಿಕ ಮೂಲ. ಆದರೆ ಈಗ ಕ್ಷೀರಸಾಗರದ ಮೂಲ ಚಿಕ್ಕಬಳ್ಳಾಪುರ ಜಿಲ್ಲೆಯ ಹೈನು ಗಾರಿಕೆಯ ರೈತರಿಗೆ ದೊಡ್ಡ ಹೊಡೆತ ಬಿದ್ದಿದೆ.

    ಹೌದು. ಜಿಲ್ಲೆಯಾದ್ಯಂತ ಮಹಾಮಾರಿ ಕಾಲುಬಾಯಿ ಜ್ವರಕ್ಕೆ ನೂರಾರು ಜಾನುವಾರುಗಳ ಮರಣ ಮೃದಂಗ ಮುಂದುವರೆದಿದೆ. ತಾಲೂಕಿನ ತಿಪ್ಪೇನಹಳ್ಳಿ ಗ್ರಾಮದ ರೈತ ನಾರಾಯಣಸ್ವಾಮಿ ಎಂಬವರಿಗೆ ಸೇರಿದ ಸುಮಾರು 80 ಸಾವಿರ ರೂ. ಮೌಲ್ಯದ ಹಸು ಕಾಲುಬಾಯಿಜ್ವರಕ್ಕೆ ಬಲಿಯಾಗಿದೆ. ಅಲ್ಲದೇ ಉಳಿದ ಮೂರು ಹಸುಗಳು ಕೂಡ ಕಾಲು ಬಾಯಿ ಜ್ವರಕ್ಕೆ ತುತ್ತಾಗಿ ಸಾವು ಬದುಕಿನ ನಡುವೆ ನರಳಾಡುತ್ತಿವೆ. ಅಂದ ಹಾಗೆ ಕಳೆದ 15 ದಿನಗಳಿಂದ ತಿಪ್ಪೇನಹಳ್ಳಿ ಗ್ರಾಮವೊಂದರಲ್ಲಿ 15ಕ್ಕೂ ಹೆಚ್ಚು ಸೀಮೆ ಹಸುಗಳು ಈ ಕಾಲುಬಾಯಿಜ್ವರಕ್ಕೆ ಬಲಿಯಾಗಿವೆ.

    ಏನಿದು ಕಾಲುಬಾಯಿ ಜ್ವರ..?
    ಇಂಗ್ಲಿಷ್ ನಲ್ಲಿ ಫೂಟ್ ಅಂಡ್ ಮೌತ್ ಡಿಸೀಸ್ ಎನ್ನವ ಈ ಕಾಯಿಲೆ ಸಾಂಕ್ರಾಮಿಕವಾಗಿ ಹರಡುವ ವರ್ಗಕ್ಕೆ ಸೇರಿದೆ. ಗಾಳಿಯಿಂದ ಹರಡುವ ಈ ಕಾಯಿಲೆ ಒಮ್ಮೆ ಕಾಣಿಸಿಕೊಂಡರೆ ನಿಯಂತ್ರಣಕ್ಕೆ ತುರುವುದ ಬಹುಕಷ್ಟದ ಕೆಲಸ. ನಿಯಂತ್ರಣಕ್ಕೆ ತರುವ ವೇಳೆಗೆ ಸಾಂಕ್ರಾಮಿಕ ರೋಗಕ್ಕೆ ನೂರಾರು ಹಸುಗಳು ಬಲಿಯಾಗಿರುತ್ತದೆ. ಗಾಳಿಯ ಮೂಲಕ ಅತಿ ವೇಗವಾಗಿ ಹರಡುವುದರಿಂದ ಅಕ್ಕ-ಪಕ್ಕದ ರಾಸುಗಳಿಗೆ ಬಹುಬೇಗ ಈ ಸೋಂಕು ತಗುಲುತ್ತದೆ.

    ಸಾಮಾನ್ಯವಾಗಿ ಗೊರಸು ಇರುವಂತಹ ರಾಸುಗಳಿಗೆ ತಗುಲುವ ಈ ಸೋಂಕು, ಜಾನುವಾರುಗಳ ಕಾಲು, ಬಾಯಿ, ನಾಲಿಗೆ ಕೆಚ್ಚಲು ಸೇರಿದಂತೆ ದೇಹದ ಬಹುತೇಕ ಅಂಗಾಂಗಗಳ ಮೇಲೆ ಗಾಯಗಳಿಗೆ ಕಾರಣವಾಗುತ್ತವೆ. ಬಾಯಿ ಹುಣ್ಣಾಗಿ ಕನಿಷ್ಠ ಮೇವು ಕೂಡ ತಿನ್ನಲಾಗದಂತಹ ದುಸ್ಥಿತಿಗೆ ತಲುಪುವುತ್ತವೆ. ಅಲ್ಲದೇ ಗಾಯಗೊಂಡ ಜಾಗದಲ್ಲಿ ಹುಣ್ಣು ಹೆಚ್ಚಾಗಿ ನಿಶ್ಯಕ್ತಿಯಿಂದ ಬಾಯಿಯಲ್ಲಿ ಜೊಲ್ಲು ಸುರಿಸುತ್ತಾ ಕೊನೆಗೆ ಸಾವನ್ನಪ್ಪುತ್ತವೆ. ಕಳೆದ 2013-14 ರಲ್ಲೂ ಕೂಡ ಜಿಲ್ಲೆಯಲ್ಲಿ ನೂರಾರು ಹಸುಗಳು ಸಾವನ್ನಪ್ಪಿದ್ದವು. ಮಳಮಾಚನಹಳ್ಳಿ ಗ್ರಾಮವೊಂದರಲ್ಲೇ 45 ಹಸುಗಳು ಸಾವನ್ನಪ್ಪಿದ್ದವು.

    ಚುನಾವಣಾ ಸೈಡ್ ಎಫೆಕ್ಟ್.!
    ಈ ಬಾರಿ ಇದೆಕ್ಕೆಲ್ಲಾ ಪ್ರಮುಖ ಕಾರಣ, ಚುನಾವಣಾ ಸೈಡ್ ಎಫೆಕ್ಟ್. ಅಂದ ಹಾಗೆ ಪ್ರತಿ ವರ್ಷ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಎರಡು ಬಾರಿ ಜಿಲ್ಲೆಯ ಎಲ್ಲಾ ಜಾನುವಾರಗಳಿಗೆ ಮುಂಜಾಗ್ರತಾ ಕ್ರಮವಾಗಿ ಕಾಲುಬಾಯಿಜ್ವರ ನಿಯಂತ್ರಣ ಲಸಿಕೆ ಹಾಕಲಾಗುತ್ತದೆ. ಆದರೆ ಈ ಬಾರಿ ಚುನಾವಣಾ ಕರ್ತವ್ಯದಲ್ಲಿ ಬ್ಯುಸಿಯಾಗಿದ್ದ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಲಸಿಕೆಯನ್ನ ಹಾಕಿಲ್ಲ ಎನ್ನಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಕಾಲುಬಾಯಿಜ್ವರ ವ್ಯಾಪಕವಾಗಿ ಹರಡಿದೆ. ಈಗಾಗಲೇ ಜಿಲ್ಲೆಯ ಹಲವೆಡೆ ಕಾಲುಬಾಯಿ ಜ್ವರ ಸಾಕಷ್ಟು ಉಲ್ಭಣಗೊಂಡಿದ್ದು, ನೂರಾರು ರಾಸುಗಳು ಬಲಿಯಾಗಿವೆ. ಇನ್ನೂ ಗಾಳಿಯಲ್ಲಿ ಹರಡುವ ಈ ಖಾಯಿಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಇದುವರೆಗೂ ಇಲಾಖೆಯ ಅಧಿಕಾರಿಗಳು ಲಸಿಕೆ ಹಾಕಲು ಮುಂದಾಗಿಲ್ಲ.

    ಸಂಕಷ್ಟದಲ್ಲಿ ರೈತ:
    ಹೈನುಗಾರಿಕೆಯೇ ಜೀವನಾಧಾರ, ಹಸುಗಳಿಂದಲೇ ಉತ್ಪಾದನೆಯಾಗುವ ಹಾಲಿನಿಂದ ಬರುವ ಆದಾಯವೇ ಜಿಲ್ಲೆಯ ಬಹುತೇಕ ಕುಟುಂಬಗಳ ಸಂಸಾರದ ನೌಕೆಗೆ ಆರ್ಥಿಕ ಮೂಲ. ಒಂದು ಸೀಮೆಹಸುವಿಗೆ 60 ಸಾವಿರದಿಂದ ರೂ. ನಿಂದ 1 ಲಕ್ಷ ರೂ. ಕೊಟ್ಟು ಖರೀದಿ ಮಾಡಲಾಗುತ್ತದೆ. ಆದರೆ ಪ್ರತಿ ವರ್ಷವೂ ಬಿಟ್ಟು ಬಿಡದೆ ಕಾಣಿಸಿಕೊಳ್ಳುತ್ತಿರುವ ಈ ಕಾಲು ಬಾಯಿ ಜ್ವರದಿಂದ ಪ್ರತಿ ವರ್ಷವೂ ನೂರಾರು ಸೀಮೆ ಹಸುಗಳು ಬಲಿಯಾಗುತ್ತಿವೆ.

    ಒಂದೆಡೆ ಪ್ರೀತಿಯಿಂದ ಸಾಕಿದ ಹಸು ಕಳೆದುಕೊಂಡ ದುಃಖ, ಮತ್ತೊಂದೆಡೆ ಕುಟುಂಬದ ಆರ್ಥಿಕ ಮೂಲವನ್ನೇ ಕಳೆದುಕೊಂಡಿರುವ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಆರ್ಥಿಕ ನಷ್ಟದಿಂದ ಹಸುಗಳನ್ನ ಸಾಕುವ ಮನೆಯ ಮಹಿಳೆಯರ ಹಾಗೂ ರೈತರ ಕಣ್ಣಲ್ಲಿ ನೀರು ತರಿಸುವಂತೆ ಮಾಡಿದೆ. ಅಲ್ಲದೇ ಜ್ವರದಿಂದ ಸಾವನ್ನಪ್ಪಿದ ಹಸುವನ್ನು ಹಾಗೇ ಬಿಸಾಡುವ ಹಾಗಿಲ್ಲ, ಜೆಸಿಬಿ ಮೂಲಕ ದೊಡ್ಡ ದೊಡ್ಡ ಗುಂಡಿಗಳನ್ನು ಮಾಡಿ ಮಣ್ಣಲ್ಲಿ ಹೂತು ಹಾಕಬೇಕು. ಇಲ್ಲವಾದಲ್ಲಿ ಕಾಯಿಲೆ ಹರಡುವ ವೇಗ ಮತ್ತೆ ಹೆಚ್ಚಾಳವಾಗುತ್ತದೆ. ಸಂಕಷ್ಟದಲ್ಲಿರುವ ರೈತ ಜೆಸಿಬಿಗೆ ಹಣ ಹೊಂದಿಸುವುದು ಕಷ್ಟ ಸಾಧ್ಯವಾಗುತ್ತದೆ. ಇನ್ನೂ ರೋಗ ಪೀಡಿತ ಹಸುವಿನ ಹಾಲನ್ನ ಸಹ ಹಾಲು ಉತ್ಪಾದಕರ ಸಂಘಗಳು ಖರೀದಿಸುವುದಿಲ್ಲ. ಇಷ್ಟೆಲ್ಲಾ ನೋವುನುಂಗಿಕೊಳ್ಳುವ ರೈತರು ಅಧಿಕಾರಿ ವರ್ಗ, ಸರ್ಕಾರಕ್ಕೆ ಹಿಡಿಶಾಪ ಹಾಕಿ ದೇವರ ಮೊರೆ ಹೋಗುತ್ತಿದ್ದಾರೆ.

    ದೇವರ ಮೊರೆ.!
    ಪ್ರತಿ ವರ್ಷವೂ ಬರುವ ಈ ಕಾಲು ಬಾಯಿ ಜ್ವರವನ್ನು ಹಳ್ಳಿಯ ಜನ ಗಾಳಿಯಮ್ಮ ಅಂತಲೇ ಕರೆಯುತ್ತಾರೆ. ದೇವರ ವಕ್ರದೃಷ್ಠಿ ನಮ್ಮ ಊರಿನ ಮೇಲೆ ಬಿದ್ದಿದೆ. ಹಾಗಾಗಿಯೇ ಗ್ರಾಮದ ಜಾನುವಾರುಗಳು ಸಾವನ್ನಪ್ಪುತ್ತಿವೆ ಎಂಬ ತಪ್ಪು ಕಲ್ಪನೆ ಹಾಗೂ ಮೂಢನಂಬಿಕೆ ಜನರಲ್ಲಿದೆ. ಹೀಗಾಗಿ ಗಾಳಿಯಮ್ಮ ಬಂದಿದೆ ಅಂತ ಪ್ರತಿ ಗ್ರಾಮದಲ್ಲೂ ಈ ಕಾಯಿಲೆ ಕಾಣಿಸಿಕೊಂಡಾಗ ಗ್ರಾಮದೇವತೆಗಳ ಮೆರವಣಿಗೆ ಮಾಡಿ ಜಾನುವಾರುಗಳನ್ನ ಉಳಿಸಿಕೊಡುವಂತೆ ದೇವರಲ್ಲಿ ಬೇಡಿಕೊಳ್ಳುವುದು ಸಾಮಾನ್ಯವಾಗಿದೆ.

    ಕಳಪೆ ಗುಣಮಟ್ಟದ ಲಸಿಕೆ ಕಾರಣ?
    ಹೌದು, ಅಂದ ಹಾಗೇ ರಾಜ್ಯದಲ್ಲಿ ಈಗಾಗಲೇ ಕಳೆದ 7 ವರ್ಷಗಳಿಂದ ಅಂದರೆ ವರ್ಷಕ್ಕೆ ಎರಡು ಬಾರಿಯಂತೆ 14 ನೇ ಸುತ್ತಿನ ಕಾಲುಬಾಯಿ ಜ್ವರ ನಿಯಂತ್ರಣ ಲಸಿಕೆ ಹಾಕಲಾಗುತ್ತಿದೆ. ಈ ಮೊದಲು ರಾಷ್ಟ್ರೀಯ ಹೈನು ಅಭಿವೃದ್ದಿ ಮಂಡಳಿಯ ಅತ್ಯುನ್ನತ ಗುಣಮಟ್ಟದ ಲಸಿಕೆಯನ್ನು ಸರ್ಕಾರ ಖರೀದ ಮಾಡಿ ಲಸಿಕೆ ಹಾಕಲಾಗುತ್ತಿತ್ತು. ಆದರೆ ಕಳೆದ 3 ವರ್ಷಗಳ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಮಾಲೂರು ಬಳಿಯ ಬಯೋವೆಟ್ ಎಂಬ ಖಾಸಗಿ ಸಂಸ್ಥೆಯ ಲಸಿಕೆಯನ್ನ ಖರೀದಿ ಮಾಡಿ ಹಾಕಲಾಗುತ್ತಿದೆ. ಆದರೆ ಈ ಬಯೋವೆಟ್ ಲಸಿಕೆಯನ್ನು ಉತ್ತರಪ್ರದೇಶ, ಪಂಜಾಬ್ ರಾಜ್ಯಗಳಲ್ಲಿ ತಿರಸ್ಕರಸಿ, ಸಂಸ್ಥೆಯನ್ನ ಬ್ಲಾಕ್ ಲಿಸ್ಟ್ ಗೆ ಸೇರಿಸಲಾಗಿದೆ ಎನ್ನಲಾಗಿದೆ. ಇಂತಹ ಸಂಸ್ಥೆಯ ಕಳಪೆ ಗುಣಮಟ್ಟದ ಲಸಿಕೆ ಹಾಕುತ್ತಿರುವುದರಿಂದ ಕಾಲುಬಾಯಿ ಜ್ವರ ನಿಯಂತ್ರಣಕ್ಕೆ ಸಾಧ್ಯವಾಗದಿರುವುದು ಕಾರಣ ಎಂಬುದು ಕೋಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್ ರ ಆರೋಪವಾಗಿದೆ.

    ರೋಗ ನಿಯಂತ್ರಣ ಕ್ರಮಗಳು: ಸಮಯಕ್ಕೆ ತಕ್ಕಂತೆ ಕಾಲು ಬಾಯಿ ಜ್ವರ ನಿಯಂತ್ರಕ ಲಸಿಕೆ ಹಾಕಿಸುವುದು. ರೋಗ ಪೀಡಿತ ಹಸುಗಳಿಂದ ರೋಗ ಮುಕ್ತ ಹಸುಗಳನ್ನ ದೂರ ಇಡುವುದು. ರೋಗ ಹರಡದಂತೆ ಸತ್ತ ಹಸುಗಳನ್ನ ಮಣ್ಣಲ್ಲಿ ಹೂತು ಹಾಕುವುದು ಹಾಗೂ ರೋಗದ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವುದರಿಂದ ಕಾಲುಬಾಯಿ ಜ್ವರವನ್ನು ನಿಯಂತ್ರಣಕ್ಕೆ ತರಬಹುದು.

    – ಮುದ್ದುಕೃಷ್ಣ 

  • ಟ್ರ್ಯಾಕ್ಟರ್ ಗೆ ಹಗ್ಗ ಕಟ್ಟಿ ಪಾಳು ಬಾವಿಗೆ ಬಿದ್ದ ಹಸುವನ್ನು ಮೇಲಕ್ಕೆ ಎತ್ತಿದ್ರು- ವಿಡಿಯೋ ನೋಡಿ

    ಟ್ರ್ಯಾಕ್ಟರ್ ಗೆ ಹಗ್ಗ ಕಟ್ಟಿ ಪಾಳು ಬಾವಿಗೆ ಬಿದ್ದ ಹಸುವನ್ನು ಮೇಲಕ್ಕೆ ಎತ್ತಿದ್ರು- ವಿಡಿಯೋ ನೋಡಿ

    ಚಾಮರಾಜನಗರ: ಪಾಳು ಬಾವಿಗೆ ಬಿದ್ದು ನರಳಾಡುತ್ತಿದ್ದ ಹಸುವೊಂದನ್ನು ಅಗ್ನಿಶಾಮಕ ದಳ ಸಿಬ್ಬಂದಿಯ ಸಮಯ ಪ್ರಜ್ಞೆ ಹಾಗೂ ಜಾಣತನದಿಂದ ಮೇಲಕ್ಕೆ ಎತ್ತಿದ್ದಾರೆ.

    ಹನೂರಿನ ರೈತರಾಗಿರುವ ಪ್ರಭು ಅವರಿಗೆ ಸೇರಿದ ಹಸು ಆಕಸ್ಮಿಕವಾಗಿ ಪಾಳು ಬಾವಿಗೆ ಬಿದ್ದಿತ್ತು. ಹಸು ಬಾವಿ ಬಿದ್ದಿದ್ದರಿಂದ ಗಾಬರಿಗೊಂಡು ಕಿರುಚಿಕೊಂಡಿದೆ. ಹಸುವಿನ ಚೀರಾಟ ಕೇಳಿ ಸ್ಥಳಕ್ಕೆ ಬಂದ ಪ್ರಭು ಹಾಗೂ ಇತರೆ ರೈತರು ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ.

    ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಟ್ರ್ಯಾಕ್ಟರ್ ಗೆ ಕಟ್ಟಿದ್ದ ಹಗ್ಗವನ್ನು ಹಸುವಿಗೆ ಕಟ್ಟಿದ್ದಾರೆ. ಮೇಲಕ್ಕೆ ಎತ್ತುವಾಗ ಹಸುವಿನ ದೇಹಕ್ಕೆ ಅಪಾಯವಾಗುವ ಸಾಧ್ಯತೆ ಇತ್ತು. ಅಪಾಯವಾಗದೇ ಇರಲು ಹಸುವಿಗೆ ಕಟ್ಟಿದ್ದ ಹಗ್ಗಕ್ಕೆ ಇನ್ನೊಂದು ಕಡೆಯಿಂದ ಮತ್ತೊಂದು ಹಗ್ಗವನ್ನು ಕಟ್ಟಿದ್ದಾರೆ.

    ಟ್ರ್ಯಾಕ್ಟರ್ ಹಿಂದಕ್ಕೆ ಹೋಗುತ್ತಿದ್ದಂತೆ ಹಸು ಮೇಲಕ್ಕೆ ಬಂದಿದ್ದು, ಇನ್ನೊಂದು ಹಗ್ಗದಿಂದ ದಂಡೆಗೆ ಎಳೆದು ಕೊನೆಗೆ ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

    https://www.youtube.com/watch?v=hcQ3oWBVTTg

  • ಯಾದಗಿರಿಯಲ್ಲಿ ಏಳು ಹಸುಗಳನ್ನು ಬಲಿತೆಗೆದುಕೊಂಡ ಲಾರಿ!

    ಯಾದಗಿರಿಯಲ್ಲಿ ಏಳು ಹಸುಗಳನ್ನು ಬಲಿತೆಗೆದುಕೊಂಡ ಲಾರಿ!

    ಯಾದಗಿರಿ: ಚಾಲಕನ ನಿರ್ಲಕ್ಷ್ಯದಿಂದಾಗಿ ಲಾರಿಯೊಂದು ಮನೆಗೆ ನುಗ್ಗಿದ ಪರಿಣಾಮ ಏಳು ಹಸುಗಳು ಬಲಿಯಾದ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಈ ಘಟನೆ ಯಾದಗಿರಿ ತಾಲೂಕಿನ ರಾಮಸಮುದ್ರಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ನಿಂತಿದ್ದ ಲಾರಿ ಹಠಾತ್ ಆಗಿ ಚಲಿಸಿದ್ದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

    ನಿನ್ನೆ ರಾತ್ರಿ ಚಾಲಕ ಮೈಲಾಪುರ ಕ್ರಾಸ್ ಬಳಿ ಲಾರಿ ನಿಲ್ಲಿಸಿ ಊಟಕ್ಕೆ ತೆರಳಿದ್ದನು. ಈ ಸಂದರ್ಭದಲ್ಲಿ ಲಾರಿ ಹಠತ್ತಾಗಿ ಹಿಂದಕ್ಕೆ ಚಲಿಸಿ ಪಕ್ಕದಲ್ಲೇ ಇದ್ದ ಮನೆಯೊಳಗೆ ನುಗ್ಗಿದೆ. ಪರಿಣಾಮ ಏಳು ಹಸುಗಳು ಮೃತಪಟ್ಟಿವೆ.

    ಘಟನೆಯಿಂದ ಅಂದಾಜು 1.50 ಲಕ್ಷದ ಹಸು, 2 ಲಕ್ಷದಷ್ಟು ಮನೆ ವಸ್ತುಗಳು ಹಾನಿಯಾಗಿವೆ. ಘಟನೆ ನಡೆದು 14 ಗಂಟೆಯಾದ್ರೂ, ಸ್ಥಳಕ್ಕೆ ಬಾರ ಪೊಲೀಸರ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಘಟನೆ ಬಳಿಕ ಚಾಲಕ ಪರಾರಿಯಾಗಿದ್ದಾನೆ. ಈ ಘಟನೆ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  • ಕರುವಿಗಾಗಿ ಹಸುವಿನ ಕೆಚ್ಚಲಿಗೆ ಬ್ರಾ ತೊಡಿಸ್ದ!

    ಕರುವಿಗಾಗಿ ಹಸುವಿನ ಕೆಚ್ಚಲಿಗೆ ಬ್ರಾ ತೊಡಿಸ್ದ!

    ಲಂಡನ್: ಹಸುವಿನ ಕೆಚ್ಚಲಿಗೆ ಬ್ರಾ ತೊಡಿಸಿದ್ದು, ಅಲ್ಲಿ ಕರು ಹಾಲು ಕುಡಿಯುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕರುವೊಂದು ತನ್ನ ತಾಯಿಯ ಬಳಿ ಹಾಲು ಕುಡಿಯದೆ ಇದ್ದುದ್ದರಿಂದ ಹಸುವಿಗೆ ಈ ರೀತಿ ಬ್ರಾ ತೊಡಿಸಲಾಗಿದೆ. ಹೌದು ಬ್ರಿಟೀಷ್ ರೈತನೊಬ್ಬನ ಕರು ಹಸುವಿನ ಬಳಿ ಹಾಲು ಕುಡಿಯತ್ತಿರಲಿಲ್ಲ. ಇದರಿಂದ ಕಂಗಾಲಾದ ರೈತನಿಗೆ ಉಪಾಯ ಹೊಳೆದಿದ್ದು ತನ್ನ ಪತ್ನಿಯ ಬ್ರಾ ವನ್ನು ತೆಗೆದುಕೊಂಡು ಹಸುವಿನ ಕೆಚ್ಚಲಿಗೆ ತೊಡಿಸಿದ್ದಾನೆ. ನಂತರ ಆಶ್ಚರ್ಯವೆಂಬಂತೆ ಕರು ಹಸುವಿನ ಬಳಿ ಹಾಲು ಕುಡಿಯಲು ಆರಂಭಿಸಿದೆ.

    ರೈತ ತನ್ನ ಪತ್ನಿಯ ಬ್ರಾ ತೆಗೆದುಕೊಂಡು ಅದಕ್ಕೆ ದಾರ ಕಟ್ಟಿ ಅದನ್ನು ಹಸುವಿನ ಕೆಚ್ಚಲಿಗೆ ತೊಡಿಸಿದ್ದಾನೆ. ನಂತರ ಕರು ಹಾಲು ಕುಡಿದಿದೆ. ರೈತ ತಾನು ಮಾಡಿದ ಪ್ಲ್ಯಾನ್ ನಿಂದ ಕರು ಹಾಲು ಕುಡಿದ್ದರಿಂದ ಸಂತಸ ಪಟ್ಟಿದ್ದು, ಆ ಫೋಟೋವನ್ನು ತನ್ನ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ “ಪ್ರಯೋಗ ಯಶಸ್ವಿ” ಎಂದು ಬರೆದುಕೊಂಡಿದ್ದಾನೆ.

    ರೈತ ಹಾಕಿದ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅವರ ಉಪಾಯಕ್ಕೆ ವಿವಿಧ ರೀತಿಯ ಕಮೆಂಟ್ ಗಳು ಬಂದಿವೆ.

  • ಚಿಕಿತ್ಸೆಗಾಗಿ ಕರುವನ್ನು ಒಯ್ದರೆ ಜನ್ರನ್ನೇ ಹಿಂಬಾಲಿಸಿ ಓಡೋಡಿ ಬಂತು ತಾಯಿ ಹಸು!

    ಚಿಕಿತ್ಸೆಗಾಗಿ ಕರುವನ್ನು ಒಯ್ದರೆ ಜನ್ರನ್ನೇ ಹಿಂಬಾಲಿಸಿ ಓಡೋಡಿ ಬಂತು ತಾಯಿ ಹಸು!

    ಹಾವೇರಿ: ಇತ್ತೀಚಿನ ದಿನಗಳಲ್ಲಿ ಆಗತಾನೇ ಜನಿಸಿದ ಕಂದಮ್ಮಗಳನ್ನ ಚರಂಡಿಗಳಲ್ಲಿ ಎಸೆದು ಹೋಗುವ ಘಟನೆಗಳನ್ನ ನಾವು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಆದರೆ ಮೂಕಪ್ರಾಣಿ ಹಸುವೊಂದು ಚಿಕಿತ್ಸೆಗಾಗಿ ಸ್ಥಳೀಯರು ತನ್ನ ಕರುವನ್ನು ಕರೆದೊಯ್ಯುತ್ತಿದ್ದಾಗ ಅವರನ್ನೇ ಹಿಂಬಾಲಿಸಿದ ಮನಕಲಕುವ ಮತ್ತೊಂದು ಘಟನೆ ಹಾವೇರಿಯಲ್ಲಿ ನಡೆದಿದೆ.

    ಬುಧವಾರ ರಾತ್ರಿ ಹಾವೇರಿ ನಗರದ ವಿದ್ಯಾನಗರದ ಪ್ರಜ್ವಲ್ ಬೇಕರಿ ಬಳಿ ಈ ಘಟನೆ ನಡೆದಿದೆ. ಬಿಡಾಡಿ ಆಕಳಿನ ತಾಯಿ ಹೃದಯ ಪ್ರೀತಿ ಕಂಡು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕರು ಕಾಲು ನೋವಿನಿಂದ ನಿತ್ರಾಣಗೊಂಡು ಬಿದ್ದು ಹೊರಳಾಡುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಕರುವಿಗೆ ಹಾಲು ಕುಡಿಸಿ ಚಿಕಿತ್ಸೆಗಾಗಿ ಸಾಗಿಸಿದ್ದಾರೆ. ಈ ವೇಳೆ ಅದರ ತಾಯಿ ಜನರನ್ನೇ ಹಿಂಬಾಲಿಸಿಕೊಂಡು ಓಡಿದೆ. ಇದನ್ನು ಓದಿ: ಚಿಕಿತ್ಸೆಗಾಗಿ ಕರುವನ್ನು ವಾಹನದಲ್ಲಿ ಕರೆದೊಯ್ದರೆ, ಆಸ್ಪತ್ರೆವರೆಗೂ ಓಡೋಡಿ ಬಂತು ತಾಯಿ ಹಸು

    ಏಳೆಂಟು ದಿನಗಳ ಹಿಂದೆ ಆಕಳು ಹೆಣ್ಣು ಕರುವಿಗೆ ಜನ್ಮ ನೀಡಿದೆ. ಇದೀಗ ಕರುವಿನ ಕಾಲಿಗೆ ಗಾಯವಾಗಿ ನಿತ್ರಾಣಗೊಂಡು ಬಿದ್ದಿದೆ. ಸದ್ಯ ಸ್ಥಳೀಯರು ಕರುವಿಗೆ ಹಾಲು ಕುಡಿಸಿ, ಚಿಕಿತ್ಸೆ ನೀಡಿ ವಾರ್ತಾ ಇಲಾಖೆ ಆವರಣದಲ್ಲಿ ಬಿಟ್ಟು ಹೋಗಿದ್ದಾರೆ. ಬಿಡಾಡಿ ಆಕಳಿನ ತಾಯಿ ಹೃದಯದ ಪ್ರೀತಿ ಕಂಡು ಸ್ಥಳೀಯ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಈ ಹಿಂದೆ ಇದೇ ಜಿಲ್ಲೆಯ ಜೆ.ಪಿ ವೃತ್ತದ ಬಳಿ ಇಂಥದ್ದೇ ಒಂದು ಘಟನೆ ನಡೆದಿದ್ದು, ತಾಯಿ ಆಕಳಿನ ವೇದನೆ ಸ್ಥಳೀಯರಲ್ಲಿ ಕಣ್ಣೀರು ತರಿಸಿತ್ತು.

  • ವಿಸಿ ನಾಲೆಗೆ ಎತ್ತಿನಬಂಡಿ ಪಲ್ಟಿ: ಎತ್ತನ್ನ ರಕ್ಷಿಸಿ ಮಾನವೀಯತೆ ಮೆರೆದ ಸ್ಥಳೀಯರು

    ವಿಸಿ ನಾಲೆಗೆ ಎತ್ತಿನಬಂಡಿ ಪಲ್ಟಿ: ಎತ್ತನ್ನ ರಕ್ಷಿಸಿ ಮಾನವೀಯತೆ ಮೆರೆದ ಸ್ಥಳೀಯರು

    ಮಂಡ್ಯ: ಮೇವು ತುಂಬಿಕೊಂಡು ಬರುತ್ತಿದ್ದ ಎತ್ತಿನಗಾಡಿ ವಿಸಿ ನಾಲೆಗೆ ಪಲ್ಟಿಯಾಗಿ ಒಂದು ಎತ್ತು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ ಮತ್ತೊಂದು ಎತ್ತನ್ನು ಸ್ಥಳೀಯರು ರಕ್ಷಿಸಿ ಮಾನವೀಯತೆ ಮೆರೆದಿರುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಗಾಣದಹೊಸೂರು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಗಿರಿಗೌಡ ತಮ್ಮ ಜಮೀನಿನಿಂದ ಎತ್ತಿನಗಾಡಿಯಲ್ಲಿ ಮೇವು ತುಂಬಿಕೊಂಡು ವಿಸಿ ನಾಲೆಯ ಏರಿಮೇಲೆ ಬರುತ್ತಿದ್ದರು. ಈ ಸಂದರ್ಭದಲ್ಲಿ ವಿಸಿ ನಾಲೆಗೆ ಹಾಕಿದ್ದ ಪಂಪ್ ಸೆಟ್ ಶಬ್ದಕ್ಕೆ ಬೆದರಿ ಎತ್ತುಗಳು ವಿಸಿ ನಾಲೆಯ ಕಡೆ ಏಕಾಏಕಿ ನುಗ್ಗಿದ ಎತ್ತುಗಳು ಗಾಡಿ ಸಮೇತ ಹರಿಯುತ್ತಿರುವ ನೀರಿನೊಳಗೆ ಬಿದ್ದಿವೆ.

    ಈ ಘಟನೆಯನ್ನು ಕಂಡ ಸ್ಥಳೀಯರು ಕೂಡಲೇ ವಿಸಿ ನಾಲೆಗೆ ಜಿಗಿದು ಒಂದು ಎತ್ತಿನ ಮೂಗುದಾರವನ್ನು ಕತ್ತರಿಸಿದ್ದಾರೆ. ತಕ್ಷಣ ಆ ಎತ್ತು ಈಜಿ ದಡ ಸೇರಿದೆ. ಆದರೆ ಮತ್ತೊಂದು ಎತ್ತಿನ ಮೂಗುದಾರವನ್ನು ಕತ್ತರಿಸಲು ಸಾಧ್ಯವಾಗದಿದ್ದರಿಂದ ಎತ್ತು ನೀರಿನಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದೆ. ಅಪಘಾತದಲ್ಲಿ ರೈತ ಗಿರಿಗೌಡರಿಗೆ ತಲೆಯ ಭಾಗಕ್ಕೆ ಗಾಯವಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ.

    ಈ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿದ್ದು, ನಂತರ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಸ್ಥಳೀಯರ ಸಹಾಯದೊಂದಿಗೆ ವಿಸಿ ನಾಲೆಯಲ್ಲಿ ಮುಳುಗಿದ್ದ ಎತ್ತು ಹಾಗೂ ಗಾಡಿಯನ್ನು ಹೊರತೆಗೆದಿದ್ದಾರೆ.

     

  • ಕಳ್ಳತನ ಮಾಡಿದ್ದ ದನಗಳನ್ನ ಸಾಗಿಸುತ್ತಿದ್ದ ಕಾರುಗಳನ್ನು ಪುಡಿಪುಡಿ ಮಾಡಿದ ಗ್ರಾಮಸ್ಥರು

    ಕಳ್ಳತನ ಮಾಡಿದ್ದ ದನಗಳನ್ನ ಸಾಗಿಸುತ್ತಿದ್ದ ಕಾರುಗಳನ್ನು ಪುಡಿಪುಡಿ ಮಾಡಿದ ಗ್ರಾಮಸ್ಥರು

    ಶಿವಮೊಗ್ಗ: ದನಗಳನ್ನು ಕದ್ದು ಸಾಗಿಸುತ್ತಿದ್ದ ಮೂರು ಕಾರುಗಳನ್ನು ಗ್ರಾಮಸ್ಥರು ಪುಡಿಪುಡಿ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಬ್ಯಾಕೋಡು ಬಳಿ ನಡೆದಿದೆ.

    ರಸ್ತೆ ಬದಿ ಮೇಯುತ್ತಿದ್ದ ಐದು ದನಗಳನ್ನು ಇನ್ನೋವಾ, ಝೈಲೋ ಕಾರುಗಳಲ್ಲಿ ತುಂಬಿಕೊಂಡು ಹೋಗುತ್ತಿದ್ದರು. ಇದನ್ನು ಗಮನಿಸಿದ ಗ್ರಾಮಸ್ಥರು ಹಾರಿಗೆ ಗ್ರಾಮದ ಬಳಿ ಕಾರನ್ನು ತಡೆದಿದ್ದಾರೆ. ಆಕ್ರೋಶಗೊಂಡಿದ್ದ ಗ್ರಾಮಸ್ಥರು ಎರಡೂ ಕಾರುಗಳನ್ನು ಪುಡಿಪುಡಿ ಮಾಡಿದ್ದಾರೆ.

    ಗ್ರಾಮಸ್ಥರ ಆಕ್ರೋಶಕ್ಕೆ ಬೆದರಿದ ದನಗಳ್ಳರು ತಕ್ಷಣವೇ ದನಗಳು ಇದ್ದ ಕಾರನ್ನು ಬಿಟ್ಟು ಹಿಂದಿನಿಂದ ಬಂದ ಇನ್ನೊಂದು ಕಾರಿನಲ್ಲಿ ಐವರು ಪರಾರಿಯಾಗಿದ್ದಾರೆ. ಇವರನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿದ ಪೊಲೀಸರು ಹಾಗೂ ಗ್ರಾಮಸ್ಥರು ಈ ತಂಡವನ್ನು ಕೊಲ್ಲೂರು ಬಳಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ಪ್ರಕರಣ ದಾಖಲಿಸದೆ ಆರೋಪಿಗಳನ್ನು ಬಿಟ್ಟು ಕಳಿಸುತ್ತಾರೆ ಎಂಬ ಗುಮಾನಿಯಿಂದ ರಾತ್ರಿ ಬ್ಯಾಕೋಡು ಪೊಲೀಸ್ ಔಟ್ ಪೋಸ್ಟ್ ಬಳಿ ಸುತ್ತಮುತ್ತಲ ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ನಂತರ ಆರೋಪಿಗಳನ್ನು ಕಾರ್ಗಲ್ ಠಾಣೆಗೆ ಕರೆದೊಯ್ದು, ಪ್ರಕರಣ ದಾಖಲಿಸಲಾಗಿದೆ.

  • ಕಾಲುವೆಗೆ ಬಿದ್ದು ಸಾವು-ಬದುಕಿನ ಮಧ್ಯೆ ಹೋರಾಡ್ತಿದ್ದ ಹಸುವಿನ ರಕ್ಷಣೆ

    ಕಾಲುವೆಗೆ ಬಿದ್ದು ಸಾವು-ಬದುಕಿನ ಮಧ್ಯೆ ಹೋರಾಡ್ತಿದ್ದ ಹಸುವಿನ ರಕ್ಷಣೆ

    ಕೊಪ್ಪಳ: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಬಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಹಸುವನ್ನು ಯುವಕರು ರಕ್ಷಣೆ ಮಾಡಿದ್ದಾರೆ.

    ಕೊಪ್ಪಳದ ಗಂಗಾವತಿ ತಾಲೂಕು ಕೇಸರಹಟ್ಟಿ ಗ್ರಾಮದ ಬಳಿ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ. ನೀರು ಕುಡಿಯಲು ಬಂದಿದ್ದ ಹಸು ಕಾಲುವೆಗೆ ಬಿದ್ದಿದೆ. ದನಗಾಯಿ ವೆಂಕೋಬಿ ನೋಡನೋಡುತ್ತಿದ್ದಂತೆಯೇ ಹಸು ಸಾಕಷ್ಟು ದೂರ ನೀರಿನಲ್ಲಿ ಕೊಚ್ಚಿ ಹೋಗಿದೆ.

    ಕೂಡಲೇ ಐದಾರು ಯುವಕರು ಹಿಂದೆ-ಮುಂದೆ ನೋಡದೇ ಕಾಲುವೆಗೆ ಜಿಗಿದು ಹಸುವಿನ ರಕ್ಷಣೆಗೆ ಮುಂದಾಗಿದ್ರು. ಸಾಕಷ್ಟು ಪ್ರಯತ್ನಿಸಿದ್ರೂ, ಹಸುವಿನ ರಕ್ಷಣೆ ಸಾಧ್ಯವಾಗಿರಲಿಲ್ಲ. ಆದ್ರೂ ಬಿಡದೆ ಹಸುವಿನ ರಕ್ಷಣೆ ಮಾಡಲು ಯುವಕರ ತಂಡ ಹರಸಾಹಸ ಪಟ್ಟಿತ್ತು.

    ಸುಮಾರು 20 ನಿಮಿಷದ ನಂತರ ದನಗಾಹಿ ಸ್ಥಳಕ್ಕೆ ಬಂದು ತಾನೂ ಕಾಲುವೆಗೆ ಜಿಗಿದಾಗ ಹಸು ಅನಾಯಾಸವಾಗಿ ದಡ ಸೇರಿದೆ.

    https://www.youtube.com/watch?v=eC31TAjukZ8