Tag: cow

  • ಫುಟ್‍ಬಾಲ್ ಆಡಿದ ಹಸು – ಕಾಲಿನಲ್ಲಿ ಬಾಲ್ ಹಿಡಿದು ಯುವಕರಿಗೆ ಚಮಕ್: ವಿಡಿಯೋ ವೈರಲ್

    ಫುಟ್‍ಬಾಲ್ ಆಡಿದ ಹಸು – ಕಾಲಿನಲ್ಲಿ ಬಾಲ್ ಹಿಡಿದು ಯುವಕರಿಗೆ ಚಮಕ್: ವಿಡಿಯೋ ವೈರಲ್

    ಪಣಜಿ: ಹಸುವೊಂದು ಯುವಕರ ಜೊತೆ ಫುಟ್‍ಬಾಲ್ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ವೈರಲ್ ಆಗಿರುವ ಈ ವಿಡಿಯೋ ಗೋವಾದಲ್ಲಿ ಸೆರೆ ಹಿಡಿಯಲಾಗಿದೆ ಎಂದು ವರದಿಯಾಗಿದೆ. ಯುವಕರು ಮೈದಾನದಲ್ಲಿ ಫುಟ್‍ಬಾಲ್ ಆಡುತ್ತಿದ್ದರು. ಈ ವೇಳೆ ಹಸು ಮೈದಾನದ ಮಧ್ಯೆ ಬಂದಿದೆ. ಹಸು ಕಾಲಿನಲ್ಲಿ ಬಾಲ್ ಹಿಡಿದು ಯುವಕರಿಗೆ ಚಮಕ್ ಕೊಟ್ಟಿದೆ.

    ಹಸು ಬಾಲನ್ನು ಕಾಯುತ್ತಾ ಅಲ್ಲಿಯೇ ನಿಂತಿದೆ. ಬಾಲನ್ನು ಪಡೆಯುಲು ಯುವಕರು ಯಾರೂ ಹಸುವಿನ ಬಳಿ ಹೋಗುವ ಧೈರ್ಯ ಮಾಡಲಿಲ್ಲ. ನಂತರ ಹಸುವೇ ಬಾಲನ್ನು ತಳ್ಳಿಕೊಂಡು ಮುಂದಕ್ಕೆ ಹೋಗಿದೆ. ಈ ವೇಳೆ ಯುವಕನೊಬ್ಬ ಆ ಬಾಲ್ ವಾಪಸ್ ತೆಗೆದುಕೊಂಡು ಬರಲು ಹೋದಾಗ ಹಸು ಬಾಲ್ ನೀಡಲು ನಿರಾಕರಿಸಿದೆ.

    ಹಸುವಿನ ಈ ವರ್ತನೆ ನೋಡಿ ಯುವಕರು ನಗಲು ಶುರು ಮಾಡಿದ್ದಾರೆ. ಈ ವೇಳೆ ಮತ್ತೊಬ್ಬ ಯುವಕನೊಬ್ಬ ಧೈರ್ಯ ಮಾಡಿ ಹಸುವಿನ ಬಳಿ ಹೋಗಿ ಬಾಲನ್ನು ಒದ್ದಿದ್ದಾನೆ. ಬಾಲ್ ಒದ್ದಿದ್ದನ್ನು ನೋಡಿದ ಹಸು ಆತನನ್ನು ಬೆನ್ನಟ್ಟಿದೆ. ನಂತರ ಯುವಕರು ಆ ಕಡೆಯಿಂದ ಈ ಕಡೆ ಬಾಲ್ ಪಾಸ್ ಮಾಡುತ್ತಿದ್ದಾಗಲೂ ಹಸು ಮಧ್ಯದಲ್ಲಿ ನಿಂತು ಬಾಲ್ ಹಿಡಿಯಲು ಓಡಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://www.youtube.com/watch?time_continue=94&v=_gvjjsCQ_Rw

  • ತಲ್ವಾರ್ ಹಿಡಿದು ಗೋಕಳ್ಳತನ ಮಾಡೋರಿಗೆ, ಅದೇ ತಲ್ವಾರ್‌ನಿಂದ ಉತ್ತರ ಕೋಡೋಕೆ ನಮ್ಗೆ ಗೊತ್ತು: ಬಿಜೆಪಿ ಶಾಸಕ

    ತಲ್ವಾರ್ ಹಿಡಿದು ಗೋಕಳ್ಳತನ ಮಾಡೋರಿಗೆ, ಅದೇ ತಲ್ವಾರ್‌ನಿಂದ ಉತ್ತರ ಕೋಡೋಕೆ ನಮ್ಗೆ ಗೊತ್ತು: ಬಿಜೆಪಿ ಶಾಸಕ

    – ಗೋಕಳ್ಳರ ಮಾತು ಕೇಳಿ ಹಿಂದು ಸಂಘಟನೆ ಕಾರ್ಯಕರ್ತರ ಮೇಲೆ ಕೇಸ್

    ಮಂಗಳೂರು: ಅಕ್ರಮ ಗೋಸಾಗಾಟ ಪತ್ತೆಹಚ್ಚಿದ ಹಿಂದು ಸಂಘಟನೆ ಕಾರ್ಯಕರ್ತರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದಕ್ಕೆ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ವಿಚಾರ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದ್ದು ಠಾಣೆಗೆ ಆಗಮಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಕಾರ್ಯಕರ್ತರ ಜೊತೆಯಲ್ಲಿ ರಾತ್ರಿಯಿಡಿ ಕುಳಿತು ಪ್ರತಿಭಟನೆ ಮಾಡಿದ್ದಾರೆ.

    ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಹಿಂದೂ ಸಂಘಟನೆ ಕಾರ್ಯಕರ್ತರು ಕಾನೂನಿನ ಪ್ರಕಾರ ಪೊಲೀಸರಿಗೆ ಗೋಕಳ್ಳರನ್ನು ಒಪ್ಪಿಸಿದ್ದಾರೆ. ಆದರೆ ಪೊಲೀಸರೇ ಹಿಡಿದುಕೊಟ್ಟವರ ಮೇಲೆ ಕೇಸ್ ಹಾಕುತ್ತಿರುವುದು ಸರಿಯಲ್ಲ. ಇತ್ತೀಚಿಗೆ ಅಕ್ರಮ ಗೋವು ಸಾಗಾಟಕ್ಕೆ ಕೆಲವರು ಬೆಂಬಲ ನೀಡುತ್ತಿದ್ದಾರೆ. ಅದನ್ನು ನಾವು ಖಂಡಿಸುತ್ತೇವೆ ಎಂದರು.

    ನಾನು ಶಾಸಕನಾಗುವ ಮೊದಲು ಒಬ್ಬ ಹಿಂದೂ. ಇಲ್ಲಿರುವ ಕಾರ್ಯಕರ್ತರು ಹಾಗೂ ನಾವು ಹಿಂದೂತ್ವವನ್ನು ಕಾಪಾಡಲು ಹಾಗೂ ಗೋ ರಕ್ಷಣೆಗಾಗಿ ಪ್ರಾಣಾ ಕೊಡಲು ಸಿದ್ಧರಿದ್ದೇವೆ. ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆ ಗೋಕಳ್ಳರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಾವು ಎಲ್ಲದಕ್ಕೂ ಸಿದ್ಧರಿಗಿದ್ದೇವೆ. ತಲ್ವಾರ್ ಹಿಡಿದು ಗೋಕಳ್ಳತನ ಮಾಡುವವರಿಗೆ, ಅದೇ ತಲ್ವಾರ್ ಹಿಡಿದು ಉತ್ತರ ಕೋಡೋಕೆ ನಮಗೆ ಗೊತ್ತಿದೆ. ಈ ರೀತಿ ನಡೆದರೆ ಖಂಡಿತ ಇದು ದಕ್ಷಿಣ ಕನ್ನಡ ಶಾಂತಿ ಕದಡುತ್ತದೆ ಎಂದು ಹೇಳಿದ್ದಾರೆ.

    ಯಾವತ್ತಿನಿಂದ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಯು.ಟಿ.ಖಾದರ್ ಆದರೋ ಅವತ್ತಿನಿಂದ ಈ ಅಕ್ರಮಗಳು ಹೆಚ್ಚಾಗಿವೆ. ಈ ಬಗ್ಗೆ ಸರ್ಕಾರ ಹಾಗೂ ಪೊಲೀಸರು ಕ್ರಮ ಕೈಗೊಳ್ಳದೆ ಗಲಾಟೆ ನಡೆದು, ಜಿಲ್ಲೆಯ ಶಾಂತಿ ಕದಡಿದರೆ ಉಸ್ತುವಾರಿ ಸಚಿವ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತವೇ ನೇರ ಹೊಣೆ ಎಂದು ಎಚ್ಚರಿಸಿದ್ದಾರೆ.

    ಗುರುವಾರ ತಡರಾತ್ರಿ ಬೆಳ್ತಂಗಡಿ ತಾಲೂಕಿನ ಬಂದರು ಬಳಿ ಮೂರು ಹಸುಗಳನ್ನು ಟೆಂಪೋದಲ್ಲಿ ಅಮಾನುಷ ರೀತಿಯಲ್ಲಿ ಕಟ್ಟಿ ಒಯ್ಯಲಾಗುತಿತ್ತು. ಖಚಿತ ಮಾಹಿತಿ ಮೇರೆಗೆ ವಾಹನವನ್ನು ಕೆಲ ಹಿಂದು ಸಂಘಟನೆ ಕಾರ್ಯಕರ್ತರು ನಿಲ್ಲಿಸಿ, ಗೋಕಳ್ಳರನ್ನು ಹಿಡಿದು ಉಪ್ಪಿನಂಗಡಿ ಠಾಣೆಗೆ ಒಪ್ಪಿಸಿದ್ದರು. ಆದರೆ ಪೊಲೀಸರು ಗೋವಿನ ಸಾಗಾಟ ಮಾಡ್ತಿದ್ದವರ ಮೇಲೆ ಪ್ರಕರಣ ದಾಖಲಿಸುವ ಬದಲು ಅವರ ಮಾತನ್ನು ಮಾತು ಕೇಳಿ, ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.

  • ಮುಳುಗುತ್ತಿದ್ದ ಹಸು ಉಳಿಸಲು ನದಿಯಲ್ಲಿ ಜೀವ ಪಣಕ್ಕಿಟ್ಟ ಗೆಳೆಯರು

    ಮುಳುಗುತ್ತಿದ್ದ ಹಸು ಉಳಿಸಲು ನದಿಯಲ್ಲಿ ಜೀವ ಪಣಕ್ಕಿಟ್ಟ ಗೆಳೆಯರು

    ಉಡುಪಿ: ಜೀವ ಪಣಕ್ಕಿಟ್ಟ ಯುವಕರು ನದಿಯಲ್ಲಿ ಮುಳುಗುತ್ತಿದ್ದ ಹಸು ರಕ್ಷಿಸಿದ ಘಟನೆ ಗಂಗೊಳ್ಳಿಯಲ್ಲಿ ನಡೆದಿದೆ.

    ಜಿಲ್ಲೆಯಲ್ಲಿ ಮುಂಗಾರು ಕೊಂಚ ಚುರುಕಾಗಿರುವುದರಿಂದ ಕುಂದಾಪುರದ ಪಂಚ ಗಂಗಾವಳಿ ನದಿ ತುಂಬಿ ಹರಿಯುತ್ತಿದೆ. ಕಳೆದೆರಡು ದಿನದಿಂದ ನದಿಯ ರಭಸ ಜಾಸ್ತಿಯಾಗಿದೆ. ನದಿ ನೀರಿನ ಸೆಳೆತಕ್ಕೆ ಹಸುವೊಂದು ಸಿಕ್ಕಿ ಹಾಕಿಕೊಂಡು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿತ್ತು.

    ಗಂಗೊಳ್ಳಿಯ ಕೆಲ ಯುವಕರಿಗೆ ಇದು ಗೊತ್ತಾಗಿದೆ. ಕೂಡಲೇ ನಾಲ್ಕಾರು ಯುವಕರು ದೋಣಿ ಹತ್ತಿ ನದಿಗಿಳಿದಿದ್ದಾರೆ. ಈಜುತ್ತಾ ಮುಳುಗುತ್ತಿದ್ದ ಹಸುವಿನ ಚೂಪು ಕೊಂಬಿಗೆ ಹಗ್ಗ ಹಾಕಿದ್ದಾರೆ. ಸಮುದ್ರದ ಕಡೆ ಸಾಗಿ ಹೋಗುತ್ತಿದ್ದ ಹಸುವನ್ನು ದಡಕ್ಕೆ ಮುಟ್ಟಿಸಲು ಸರ್ವ ಪ್ರಯತ್ನ ಮಾಡಿದ್ದಾರೆ. ಉದ್ದ ಹಗ್ಗದ ತುದಿ ದಡದಲ್ಲಿರುವವರಿಗೆ ಸಿಕ್ಕ ಕೂಡಲೇ ಹಸುವನ್ನು ದಡಕ್ಕೆ ಎಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಗಂಗೊಳ್ಳಿಯ ಸ್ಥಳೀಯರಾದ ರಾಮ ಖಾರ್ವಿ, ರಾಜ ಮಲ್ಯರಬೆಟ್ಟು, ಅಣ್ಣಪ್ಪ ಹಾಗೂ ಗೆಳೆಯರು ಜೀವ ಪಣಕ್ಕಿಟ್ಟು ಕೊನೆಗೂ ಹಸುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಳುಗುವವನಿಗೆ ಹುಲುಕಡ್ಡಿ ಸಿಕ್ಕರೂ ಒಮ್ಮೆ ಬಚಾವ್ ಆಗುತ್ತದೆಯಂತೆ. ಅದರಂತೆ ಈಗ ಯುವಕರು ಸಾಹಸದಿಂದ ಹಸು ತನ್ನ ಪ್ರಾಣವನ್ನು ಉಳಿಸಿಕೊಂಡಿದೆ.

    ನಾವು ಸಮುದ್ರ ತೀರದವರು, ಸಮುದ್ರ ಮತ್ತು ನದಿಯಲ್ಲಿ ಈಜಿ ದಡ ಸೇರುವ ಚಾಕಚಕ್ಯತೆ ಇದೆ. ದನವೂ ಈಜುತ್ತದೆ. ಆದರೆ ನೀರಿನ ರಭಸ ಜಾಸ್ತಿಯಾಗಿರುವುದರಿಂದ ಸಮುದ್ರದ ಕಡೆ ಹೋಗುತಿತ್ತು. ಹಗ್ಗ ಹಾಕಿ ನೀರಿನ ವಿರುದ್ಧ ದಿಕ್ಕಿಗೆ ಎಳೆದು ಹಾಕಿದ್ದೇವೆ ಎಂದು ಅಣ್ಣಪ್ಪ ಹೇಳಿದ್ದಾರೆ.

  • ಎದ್ದೇಳು, ಹೋಗೋಣ.. ಸಾವನ್ನಪ್ಪಿದ ಕರುವಿನ ಮುಂದೆ ತಾಯಿ ಹಸು ಕಣ್ಣೀರು

    ಎದ್ದೇಳು, ಹೋಗೋಣ.. ಸಾವನ್ನಪ್ಪಿದ ಕರುವಿನ ಮುಂದೆ ತಾಯಿ ಹಸು ಕಣ್ಣೀರು

    ಬಾಗಲಕೋಟೆ: ನಗರದ ಎಕ್ಷಟೆನ್ಶನ್ ಏರಿಯಾದಲ್ಲಿ ಬುಧವಾರ ರಾತ್ರಿ ವೇಳೆ ಹೃದಯಸ್ಪರ್ಶಿ ಸನ್ನಿವೇಶ ನಡೆದಿದೆ.

    ಬುಧವಾರ ರಾತ್ರಿ ಒಂದು ಆಕಳು ಕರು ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದು, ಹಸು ಕರುವನ್ನು ಎರಡು ಗಂಟೆಗಳ ಕಾಲ ಅದನ್ನು ಎದ್ದೇಳಿಸುವ ಪ್ರಯತ್ನ ಮಾಡಿದೆ. ಸತ್ತುಬಿದ್ದ ಕರುವನ್ನು ಎದ್ದೇಳು ಎನ್ನುವಂತೆ ಹಸು ನಾಲಿಗೆಯಿಂದ ಸವರಿ ತನ್ನ ಮಮತೆಯ ಕಡಲನ್ನೇ ಹರಿಸಿದೆ.

    ತನ್ನ ಕರುವನ್ನು ಯಾರಾದರೂ ಹೊತ್ತೊಯ್ಯಹುದೆಂಬ ಕಾರಣಕ್ಕೆ ಹಸು ಕರುವನ್ನು ಬಿಟ್ಟು ಕದಲದೆ ಕಾಯುತ್ತಾ ನಿಂತಿತ್ತು. ಕರುವಿನ ಹತ್ತಿರ ಯಾರನ್ನು ಸುಳಿಯಲು ಬಿಡದೆ ಕಾವಲಾಗಿ ಕಾಯ್ದಿದೆ. ಹತ್ತಿರ ಬಂದರೆ ಹಾಯೋಕೆ ಬರುತ್ತಿದ್ದ ಹಸು ತನ್ನ ಕರುವಿನ ಮೇಲೆ ತನ್ನು ಕರುಳ ಬಳ್ಳಿ ಪ್ರೀತಿಯನ್ನು ವ್ಯಕ್ತಪಡಿಸಿದೆ.

    ಬ್ರೆಡ್ ಆಸೆ ತೋರಿಸಿದರೂ ಕರುವನ್ನು ಬಿಟ್ಟು ಮೂರು ಅಡಿ ತೆರಳದ ಹಸುವಿನ ಮಮತೆ ನೋಡುಗರ ಮನ ಮಿಡಿಯುವಂತೆ ಮಾಡಿತ್ತು. ಎರಡು ಗಂಟೆಗಳ ಬಳಿಕ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಗೋ ರಕ್ಷಕ ಸಮಿತಿಯವರು ಹಸುವಿಗೆ ಬ್ರೆಡ್ ಕಡೆ ಗಮನ ಸೆಳೆದು ಕ್ಷಣ ಮಾತ್ರದಲ್ಲಿ ಕರುವನ್ನು ಅಂತ್ಯಸಂಸ್ಕಾರಕ್ಕೆ ಹೊತ್ತೊಯ್ದಿದ್ದಾರೆ.

    ಕಂದನಿಗಾಗಿ ಹಸು ಅಂಬಾ ಎಂದು ಗೋಗರೆದ ದೃಶ್ಯ ತಾಯಿ ಕರುಳು ಆಕಾಶಕ್ಕೂ ಮಿಗಿಲಾದದ್ದು ಎಂಬುದನ್ನು ಸಾಬೀತು ಮಾಡಿದೆ. ಪ್ರಾಣಿ ಪಕ್ಷಿಗಳಿಗೂ ತಮ್ಮ ಮಕ್ಕಳ ಮೇಲೆ ಎಷ್ಟೊಂದು ಪ್ರೀತಿ ಇರುತ್ತೆಂದು ಜನರ ಹೃದಯ ಕಲುಕಿದ ಸನ್ನಿವೇಶ ಅಲ್ಲಿ ಸೃಷ್ಟಿಯಾಗಿತ್ತು.

  • 40 ಹಸು, ಬೆಕ್ಕು, 25 ನಾಯಿಗಳಿಗೆ ಆಶ್ರಯ ನೀಡ್ತಿದ್ದಾರೆ ಹೊನ್ನಾವರದ ಲಲಿತಾ

    40 ಹಸು, ಬೆಕ್ಕು, 25 ನಾಯಿಗಳಿಗೆ ಆಶ್ರಯ ನೀಡ್ತಿದ್ದಾರೆ ಹೊನ್ನಾವರದ ಲಲಿತಾ

    ಕಾರವಾರ: ಹೆತ್ತವರನ್ನೇ ಅನಾಥ ಮಾಡೋವರ ಮಧ್ಯೆ ಬೀಡಾಡಿ ಮೂಕ ಪ್ರಾಣಿಗಳಿಗೆ ಆಸರೆಯಾಗಿ ಆರೈಕೆ ಮಾಡುವ ಮೂಲಕ ಲಲಿತಾ ಹುಳಸವಾರ್ ಅವರು ಪಬ್ಲಿಕ್ ಹೀರೋ ಆಗಿದ್ದಾರೆ.

    ಹೌದು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅರೇ ಅಂಗಡಿಯ ನಿವಾಸಿ ಲಲಿತಾ ಅವರು ದನ, ಬೆಕ್ಕು, ನಾಯಿ ಮುಂತಾದ ಮೂಕ ಪ್ರಾಣಿಗಳಿಗೆ ಆರೈಕೆ ಮಾಡುತ್ತಿದ್ದಾರೆ. ಹೊನ್ನಾವರದ ಸುತ್ತಮುತ್ತಲಲ್ಲಿ ಅಪಘಾತವಾದ ಹಾಗೂ ಯಾರೂ ಸಾಕದೆ ಬೀದಿಯಲ್ಲಿ ಬಿಟ್ಟಿರುವ 40 ಹಸು, 5 ಎಮ್ಮೆ, 40 ಬೆಕ್ಕು, 24 ನಾಯಿಗಳಿಗೆ ಮನೆಯಲ್ಲೇ ಆಶ್ರಯ ನೀಡಿ ಪೋಷಣೆ ಮಾಡುತ್ತಿದ್ದಾರೆ.

    ಅಡಿಕೆ, ಗೋಡಂಬಿ ವ್ಯಾಪಾರ ಮಾಡುತ್ತಿದ್ದು, ಪ್ರತಿದಿನದ ಸಂಪಾದನೆಯನ್ನೇ ಮೂಕ ಪ್ರಾಣಿಗಳಿಗಾಗಿ ಮೀಸಲಿಟ್ಟಿದ್ದೇನೆ. ಪ್ರಾಣಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಲಕ್ಷಾಂತರ ರೂಪಾಯಿ ಸಾಲ ಮಾಡಿ ಹೊಸ ಮನೆ ಕಟ್ಟಿಸುತ್ತಿರುವುದಾಗಿ ಲಲಿತಾ ಹೇಳಿದ್ದಾರೆ.

    ಅರೇ ಅಂಗಡಿ ಗ್ರಾಮದಲ್ಲಿದ್ದಾಗ ಪ್ರಾಣಿಗಳ ಓಡಾಟಕ್ಕೆ ಗ್ರಾಮಸ್ಥರು ತಕರಾರು ಮಾಡಿದ್ದರು. ಜೊತೆಗೆ ಕೆಲ ಹಸುಗಳನ್ನು ಕಸಾಯಿಖಾನೆಗೆ ಒಯ್ಯಲು ಕಟುಕರು ರಾತ್ರೋ ರಾತ್ರಿ ಮಗೆ ನುಗ್ಗಿದ್ದ ಪ್ರಸಂಗವೂ ನಡೆದಿದೆ. ಹಾಗಾಗಿ ಸಾಲಮಾಡಿ ಗ್ರಾಮದ ಹೊರ ಭಾಗದಲ್ಲಿ ಮನೆ ನಿರ್ಮಿಸುತ್ತಿದ್ದಾರೆ ಎಂದು ಸ್ಥಳೀಯರಾದ ಶೋಭಾ ಭಟ್ ತಿಳಿಸಿದ್ದಾರೆ.

    ಒಟ್ಟಿನಲ್ಲಿ ಗಾಯಗೊಂಡಿದ್ದೂ ಸೇರಿದಂತೆ ಎಲ್ಲಾ ಪ್ರಾಣಿಗಳಿಗೆ ಪಶು ವೈದ್ಯಾಧಿಕಾರಿ ವಿನಾಯಕ್ ಉಚಿತವಾಗಿ ಔಷಧಿ, ಚಿಕಿತ್ಸೆ ನೀಡುತ್ತಿದ್ದಾರೆ. ಲಲಿತಾ ಅವರ ಕಾರ್ಯಕ್ಕೆ ಮಗ ಲೋಹಿತ್ ಕೂಡ ಸಾಥ್ ನೀಡಿದ್ದಾರೆ.

  • ನ್ಯಾಯ ತೀರ್ಮಾನಕ್ಕಾಗಿ ನ್ಯಾಯಾಲಯಕ್ಕೆ ಬಂದ ಹಸು

    ನ್ಯಾಯ ತೀರ್ಮಾನಕ್ಕಾಗಿ ನ್ಯಾಯಾಲಯಕ್ಕೆ ಬಂದ ಹಸು

    ಜೈಪುರ: ಸಾಮಾನ್ಯವಾಗಿ ನ್ಯಾಯ ತೀರ್ಮಾನಕ್ಕಾಗಿ ಜನರು ನ್ಯಾಯಾಲಯಕ್ಕೆ ಹೋಗುತ್ತಾರೆ. ಆದರೆ ಹಸುವೊಂದ ಮಾಲೀಕತ್ವದ ವಿವಾದಕ್ಕಾಗಿ ನ್ಯಾಯಾಲಯಕ್ಕೆ ಬರುವಂತಾದ ಘಟನೆ ರಾಜಸ್ಥಾನದ ಜೋಧ್‌ಪುರ್‌ನಲ್ಲಿ ನಡೆದಿದೆ.

    ಈ ಪ್ರಕರಣದಲ್ಲಿ ಹಸು ಯಾರಿಗೂ ಹಾನಿಯನ್ನುಂಟು ಮಾಡಿಲ್ಲ. ಜೊತೆಗೆ ಅದರ ತಪ್ಪೇನೂ ಇರಲಿಲ್ಲ. ಆದರೆ ಹಸುವಿನ ಮಾಲೀಕತ್ವಕ್ಕಾಗಿ ಇಬ್ಬರು ಕೋರ್ಟ್ ಮೆಟ್ಟಿಲೇರಿದ್ದರು. ಓಂ ಪ್ರಕಾಶ್ ಮತ್ತು ಶ್ಯಾಮ್ ಸಿಂಗ್ ಇಬ್ಬರ ನಡುವೆ 2018ರಿಂದಲೂ ಈ ಹಸುವಿನ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ವಿವಾದ ನಡೆಯುತ್ತಲೇ ಇದೆ.

    ಈ ಮಾಲೀಕತ್ವದ ವಿಚಾರವಾಗಿ ಇಬ್ಬರು ಕುಳಿತು ಮಾತುಕತೆ ನಡೆಸಿದ್ದಾರೆ. ಆದರೆ ಮಾತುಕತೆಯಲ್ಲಿ ಬಗೆಹರಿಯದ ಪರಿಣಾಮ ಇಬ್ಬರು ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ನ್ಯಾಯಾಧೀಶರು ಈ ಪ್ರಕರಣ ಕುರಿತು ವಿಚಾರಣೆ ಮಾಡುವ ಸಂದರ್ಭದಲ್ಲಿ ಹಸುವನ್ನು ಕೂಡ ಕೋರ್ಟ್‍ಗೆ ಕರೆದುಕೊಂಡು ಬನ್ನಿ ಎಂದು ಆದೇಶಿಸಿದ್ದಾರೆ. ಹೀಗಾಗಿ ಹಸುವನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಬರಲಾಗಿತ್ತು.

    ನ್ಯಾಯಾಧೀಶರು ಎಲ್ಲ ಸಾಕ್ಷ್ಯಗಳನ್ನು ಪರಿಶೀಲನೆ ಮಾಡಿ ಹಸು ಓಂ ಪ್ರಕಾಶ್ ಸೇರಬೇಕಿದೆ ಎಂದು ತೀರ್ಪು ನೀಡಿದ್ದು, ಆತನ ಸುಪರ್ದಿಗೆ ಹಸುವನ್ನು ನೀಡಲಾಗಿದೆ.

    ವಿಚಾರಣೆ ಸಂದರ್ಭದಲ್ಲಿ ಲಾಯರ್ ಶ್ಯಾಮ್ ಸಿಂಗ್‍ಗೆ ಅನೇಕ ಪ್ರಶ್ನೆಗಳನ್ನು ಕೇಳಿದ್ದರು. ಆದರೆ ಆತ ಕೊಟ್ಟ ಉತ್ತರ ಅಸ್ಪಷ್ಟವಾಗಿತ್ತು. ಹೀಗಾಗಿ ಸಾಕ್ಷ್ಯಗಳ ಆಧಾರದ ಮೇಲೆ ಹಸುವನ್ನು ಓಂ ಪ್ರಕಾಶ್‍ಗೆ ಹಸುವನ್ನು ನೀಡುವಂತೆ ಕೋರ್ಟ್ ತೀರ್ಪು ನೀಡಿದೆ ವಕೀಲರು ತಿಳಿಸಿದ್ದಾರೆ. ಸದ್ಯಕ್ಕೆ ಈ ಪ್ರಕರಣ ರಾಜಸ್ಥಾನದಲ್ಲಿ ಚರ್ಚೆಯಾಗುತ್ತಿದೆ.

  • ಹಸಿವಿನಿಂದ ಬಳಲಿದ್ದ ಮಂಗಗಳಿಗೆ ಹಾಲುಣಿಸಿದ ಕಾಮಧೇನು

    ಹಸಿವಿನಿಂದ ಬಳಲಿದ್ದ ಮಂಗಗಳಿಗೆ ಹಾಲುಣಿಸಿದ ಕಾಮಧೇನು

    ಜೈಪುರ: ರಾಜಸ್ಥಾನದ ಸಿರೊಹಿಯಲ್ಲಿ ಭಾರೀ ಬಿಸಿಲಿನಿಂದಾಗಿ ಜನಸಾಮಾನ್ಯರ ಜೊತೆಗೆ ಪ್ರಾಣಿಗಳು ತತ್ತರಿಸಿವೆ. ಹೀಗೆ ಒಂದೆಡೆ ಬಿಸಿಲು ಇನ್ನೊಂದೆಡೆ ತಿನ್ನಲು ಆಹಾರವಿಲ್ಲದೆ ಹಸಿವಿನಿಂದ ಬಳಲುತ್ತಿದ್ದ ಮಂಗಗಳಿಗೆ ಹಸುವೊಂದು ಹಾಲುಣಿಸಿ ತಾಯಿಯಾಗಿದೆ.

    ಹೌದು. ಸಿರೋಹಿ ಜಿಲ್ಲೆಯ ಪಿಂಡ್ವಾಲಾ ಪ್ರದೇಶದಲ್ಲಿ ವಿಪಿನ್ ಸಮೀಪದ ರೋಹಿಡಾದ ಜಬೇಶ್ವರ ಮಹಾದೇವ್ ದೇವಾಲಯದಲ್ಲಿ ಇರುವ ಹಸು ಈಗ ಭಾರೀ ಸುದ್ದಿಯಾಗಿದೆ. ಈ ಹಸು ಈ ದಿನಗಳಲ್ಲಿ ಇಡೀ ಜಿಲ್ಲೆಯಲ್ಲಿ ಚರ್ಚೆಯ ವಿಷಯವಾಗಿಬಿಟ್ಟಿದೆ. ಯಾಕೆಂದರೆ ಹಸು ಹಸಿವಿನ ಬೇಗೆಯಲ್ಲಿ ಬಳಲಿ, ರೋಸಿಹೋಗಿದ್ದ ಮಂಗಗಳಿಗೆ ಹಾಲು ನೀಡಿ ತಾಯಿಯಾಗಿ ಪೋಷಿಸುತ್ತಿದೆ.

    ಬಹಳ ವರ್ಷಗಳಿಂದ ರೋಹಿಡಾದ ಜಬೇಶ್ವರ ಮಹಾದೇವ್ ದೇವಾಲಯದಲ್ಲಿಯೇ ವಾಸಿಸುತ್ತಿರುವ ಈ ಹಸು ಪ್ರತಿನಿತ್ಯ ಮಂಗಗಳಿಗೆ ಹಾಲು ನೀಡಿ ಅವುಗಳ ಜೀವ ಉಳಿಸಿದೆ.

    ಬೇಸಿಗೆ ಬೇಗೆಗೆ ನೀರು, ಆಹಾರವಿಲ್ಲದೆ ಪ್ರಾಣಿಗಳು ಪರದಾಡುತ್ತಿವೆ. ಹೀಗೆ ಆಹಾರ, ನೀರಿಗಾಗಿ ಹಸಿವಿನಿಂದ ಬಳಲಿದ್ದ ದೇವಸ್ಥಾನದ ಸಮೀಪದಲ್ಲಿದ್ದ ಮಂಗಗಳಿಗೆ ಹಸು ಒಂದು ಬಾರಿ ಹಾಲು ನೀಡಿತ್ತು. ಆ ಬಳಿಕ ಈಗ ಪ್ರತಿದಿನವೂ ಈ ಮಂಗಗಳಿಗೆ ಹಾಲು ನೀಡಿ ಅವುಗಳ ಹೊಟ್ಟೆ ತುಂಬಿಸುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಈ ಮೂಲಕ ಈ ವಿಶೇಷ ಹಸು ಜಿಲ್ಲೆಯಲ್ಲಿ ಸಿಕ್ಕಪಟ್ಟೆ ಫೇಮಸ್ ಆಗಿಬಿಟ್ಟಿದೆ. ಹೀಗಾಗಿ ಇದನ್ನು ನೋಡಲು ಅಕ್ಕ-ಪಕ್ಕದ ಗ್ರಾಮದಿಂದ ಜನರು ದೇವಸ್ಥಾನದತ್ತ ಆಗಮಿಸುತ್ತಿದ್ದಾರೆ. ಹಾಗೆಯೇ ತಾಯಿಯ ಸ್ಥಾನದಲ್ಲಿ ನಿಂತು ಮಂಗಗಳಿಗೆ ಹಾಲು ನೀಡಿ ಪೋಷಿಸುತ್ತಿರುವ ಹಸುವನ್ನು ಕಂಡು ಖುಷಿಪಡುತ್ತಿದ್ದಾರೆ.

  • ಗೋವು ಸಾಗಾಟ ಶಂಕಿಸಿ ಬಟ್ಟೆ ಬಿಚ್ಚಿಸಿ, ಮೂತ್ರ ಕುಡಿಸಿದ್ರು

    ಗೋವು ಸಾಗಾಟ ಶಂಕಿಸಿ ಬಟ್ಟೆ ಬಿಚ್ಚಿಸಿ, ಮೂತ್ರ ಕುಡಿಸಿದ್ರು

    ಚಂಡಿಗಢ: ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದಾರೆ ಎಂದು ಶಂಕಿಸಿ ನಾಲ್ವರಿಗೆ ಸಾರ್ವಜನಿಕರು ಚೆನ್ನಾಗಿ ಥಳಿಸಿದ ಘಟನೆ ಫತೇಬಾದ್ ಜಿಲ್ಲೆಯ ಧಯೊರ್ ಗ್ರಾಮದಲ್ಲಿ ನಡೆದಿದೆ.

    ಈ ಸಂಬಂಧ ನಮಗೆ ಫೋನ್ ಕರೆ ಬಂದಿದೆ. ಆದರೆ ನಾವು ಅಲ್ಲಿ ತೆರಳಿ ನೋಡಿದಾಗ ಗೋವುಗಳು ಮೃತಪಟ್ಟಿದ್ದವು. ಇದರೊಂದಿಗೆ ನಾಲ್ವರು ಅಲ್ಲಿದ್ದರು ಎಂದು ಪೊಲೀಸ್ ಅಧಿಕಾರಿ ಸುರಜ್‍ಮಲ್ ತಿಳಿಸಿದ್ದಾರೆ.

    ಗೋವುಗಳು ಮೃತಪಟ್ಟಿರುವುದರಿಂದ ಸ್ಥಳೀಯರು ನಾಲ್ವರ ಜೊತೆ ಜಗಳವಾಡಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ ಬಳಿಕ ಆ ನಾಲ್ವರು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲದೆ ಸತ್ತ ಗೋವುಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಯಿತು ಎಂದು ಅವರು ವಿವರಿಸಿದರು.

    ಮೃತಪಟ್ಟ ಗೋವುಗಳನ್ನು ಮಣ್ಣಿನಡಿ ಹಾಕಲು ತೆಗೆದುಕೊಂಡು ಹೋಗುತ್ತಿದ್ದೆವು. ಆದರೆ ಈ ವೇಳೆ ಗ್ರಾಮಸ್ಥರು ನಮ್ಮನ್ನು ತಡೆದಿದ್ದಾರೆ. ಅಲ್ಲದೆ ನಮ್ಮ ಮೈಮೇಲಿನ ಬಟ್ಟೆ ಬಿಚ್ಚಿಸಿ ಕೋಲಿನಿಂದ ಹಲ್ಲೆ ನಡೆಸಿದ್ದಾರೆ. ಇಷ್ಟು ಮಾತ್ರವಲ್ಲದೆ ಗ್ರಾಮಸ್ಥರು ಒತ್ತಾಯಪೂರ್ವಕವಾಗಿ ಮೂತ್ರ ಕುಡಿಸಿದ್ದಾರೆ ಎಂದು ನಾಲ್ವರಲ್ಲಿ ಓರ್ವ ಆರೋಪಿಸಿದ್ದಾನೆ.

    ಸುಮಾರು 30 ಮಂದಿ ಗ್ರಾಮಸ್ಥರು ನಮ್ಮ ಮೇಲೆ ದಾಳಿ ಮಾಡಿದ್ದಾರೆ. ಆದರೆ ನಾವು ಯಾವುದೇ ಗೋವನ್ನು ಕೊಂದಿಲ್ಲ. ಈಗಾಗಲೇ ಸತ್ತಿರುವ ಹಸುಗಳನ್ನು ಮಣ್ಣು ಮಾಡುವುದಷ್ಟೇ ನಮ್ಮ ಕೆಲಸವಾಗಿತ್ತು ಎಂದು ಥಳಿತಕ್ಕೊಳಗಾದವರು ತಿಳಿಸಿದ್ದಾರೆ. ಸದ್ಯ ಘಟನೆ ಸಂಬಂಧ ತನಿಖೆ ಮುಂದುವರಿದಿದೆ.

  • ಕರು ಹಾಕದೆಯೇ ಕೊಡ್ತಿದೆ ಹಾಲು – ಹಾವೇರಿಯಲ್ಲೊಂದು ವಿಚಿತ್ರ ಕಾಮಧೇನು

    ಕರು ಹಾಕದೆಯೇ ಕೊಡ್ತಿದೆ ಹಾಲು – ಹಾವೇರಿಯಲ್ಲೊಂದು ವಿಚಿತ್ರ ಕಾಮಧೇನು

    ಹಾವೇರಿ: ಕರು ಹಾಕಿದ ಬಳಿಕ ಹಸು ಹಾಲು ಕೊಡೋದು ಸಾಮಾನ್ಯ. ಆದರೆ ಇಲ್ಲೊಂದು ಆಕಳು ಗರ್ಭವನ್ನ ಧರಿಸದೆ, ಕರುವನ್ನೂ ಹಾಕದೆ ಹಾಲು ಕೊಡುತ್ತಿದೆ. ಹದಿನಾರು ತಿಂಗಳು ಇದ್ದಾಗಿಂದ ಈ ಆಕಳು ಪ್ರತಿದಿನ ಐದು ಲೀಟರ್ ಹಾಲು ಕೊಡುತ್ತಿದೆ. ಮುಸ್ಲಿಮರೊಬ್ಬರ ಮನೆಯಲ್ಲಿರೋ ಈ ಆಕಳಿನ ಹಾಲು ಅವರ ಕುಟುಂಬಕ್ಕೆ ಆಸರೆ ಆಗಿದೆ. ಗರ್ಭ ಧರಿಸದೆ, ಕರು ಹಾಕದೆ ಹಾಲು ಕೊಡ್ತಿರೋದು ಗ್ರಾಮಸ್ಥರನ್ನ ಆಶ್ಚರ್ಯ ಚಕಿತರನ್ನಾಗಿ ಮಾಡಿದೆ.

    ಹಾವೇರಿ ತಾಲೂಕಿನ ದಿಡಗೂರು ಗ್ರಾಮದಲ್ಲೊಂದು ಹಸು ಪ್ರಾಕೃತಿಕ ವೈಚಿತ್ರ್ಯಕ್ಕೆ ಸಾಕ್ಷಿ ಆಗಿ, ವೈದ್ಯಲೋಕಕ್ಕೆ ಸವಾಲೊಡ್ಡಿದೆ. ಸಾಮಾನ್ಯವಾಗಿ ಹಸುಗಳು ಕರು ಹಾಕಿದ ಬಳಿಕ ಹಾಲು ಕೊಡುತ್ತವೆ. ಆದರೆ ಗ್ರಾಮದ ಅಲ್ತಾಫ ಕುಬಟೂರ ಎಂಬವರ ಮನೆಯಲ್ಲಿರುವ 19 ತಿಂಗಳಿನ ಈ ಹಸು ಗರ್ಭ ಧರಿಸದೇ, ಕರು ಹಾಕದೇ ದಿನಕ್ಕೆ 5 ಲೀಟರ್ ಹಾಲು ಕೊಡ್ತಿದೆ.

    ಮೊದಮೊದಲಿಗೆ ಈ ಹಸುವಿನ ಹಾಲನ್ನು ಅಲ್ತಾಫ ತಿಪ್ಪೆಗೆ ಚೆಲ್ಲುತ್ತಿದ್ದರಂತೆ. ಆದರೆ ಹಾಲನ್ನು ಪರೀಕ್ಷೆಗೆ ಕಳಿಸಿದ ಮೇಲೆ ಉಪಯೋಗಕ್ಕೆ ಯೋಗ್ಯವಿದೆ ಎಂದು ತಿಳಿದು, ಈಗ ಮನೆ ಬಳಕೆ ಮತ್ತು ಡೈರಿಗೂ ಹಾಲನ್ನು ಹಾಕುತ್ತಿದ್ದಾರೆ. 5 ಮಕ್ಕಳ ತಂದೆಯಾಗಿರುವ ಅಲ್ತಾಫರ ಜೀವನ ನಿರ್ವಹಣೆಗೆ ತಿಂಗಳಿಗೆ ಆರೂವರೆ ಸಾವಿರ ಸಂಪಾದನೆಯೂ ಆಗುತ್ತಿದೆ. ಕಷ್ಟದಲ್ಲಿ ಕಾಮಧೇನುವಾಗಿದೆ ಎಂದು ಅಲ್ತಾಫ ಹೇಳುತ್ತಾರೆ.

    ಈ ಹಸು ಎಲ್ಲಾ ಹಸುಗಳಂತೆ ಫುಲ್ ಆ್ಯಕ್ಟೀವ್ ಆಗಿದೆ. ಕಳೆದ ಮೂರು ತಿಂಗಳಿನಿಂದ ಹಾಲು ಕೊಡುತ್ತಿದ್ದರೂ ಆರೋಗ್ಯಕ್ಕೆ ತೊಂದರೆ ಅಗಿಲ್ಲ. ಪ್ರತಿದಿನ ಅಲ್ತಾಫ್ ಮೊದಲು ಪೂಜಿಸಿ ಧೂಪ ಹಚ್ಚಿ ನಂತರ ಹಾಲು ಕರೆಯುತ್ತಾರೆ. ಗ್ರಾಮಸ್ಥರಿಗೆ ಈ ಹಸುವಿನ ಕುತೂಹಲದ ಕೇಂದ್ರಬಿಂದುವಾಗಿ ಅಚ್ಚರಿ ಮೂಡಿಸಿದೆ.

    ಒಟ್ಟಿನಲ್ಲಿ ನಿಸರ್ಗದ ಪದ್ಧತಿಗೆ ವಿರುದ್ಧವಾಗಿ, ವೈದ್ಯಲೋಕಕ್ಕೆ ಅಚ್ಚರಿ ಆಗಿರೋ ಹಸು ಬಡಮುಸ್ಲಿಮನ ಕುಟುಂಬಕ್ಕೆ ಕಾಮಧೇನುವಾಗಿದೆ.

  • ಸಿಡಿಲಿಗೆ ಸೀಮೆ ಹಸುವಿನ ಕರು ಸಜೀವ ದಹನ

    ಸಿಡಿಲಿಗೆ ಸೀಮೆ ಹಸುವಿನ ಕರು ಸಜೀವ ದಹನ

    – 5 ನಿಮಿಷದಲ್ಲಿ ಹೊತ್ತಿ ಉರಿದ ಗುಡಿಸಲು
    – ತೆಂಗಿನ ಮರಕ್ಕೆ ಬೆಂಕಿ
    – ಸಿಡಿಲು ಬಡಿದು ಮೂವರಿಗೆ ಗಾಯ

    ಚಿಕ್ಕಬಳ್ಳಾಪುರ: ಸಿಡಿಲು ಬಡಿದು ಗುಡಿಸಲಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಗುಡಿಸಲಿನಲ್ಲಿದ್ದ ಸೀಮೆ ಹಸು ಕರು ಸಜೀವದಹನವಾಗಿರೋ ಘಟನೆ ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲೂಕಿನ ಕಡಬೂರು ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

    ಘಟನೆಯಲ್ಲಿ ಕೇವಲ ನೋಡ ನೋಡುತ್ತಿದ್ದಂತೆ 5 ನಿಮಿಷದಲ್ಲಿ ಗುಡಿಸಲು ಬೆಂಕಿಗಾಹುತಿಯಾಗಿ ಸೀಮೆ ಹಸು ಕರು ಸುಟ್ಟು ಕರಕಲಾಗಿದ್ರೆ ಉಳಿದ ಮೂರು ಸೀಮೆಹಸುಗಳು ತೀವ್ರತರವಾದ ಸುಟ್ಟುಗಾಯಗಳಿಂದ ಸಾವು ಬದುಕಿನ ನಡುವೆ ನರಳಾಟ ನಡೆಸಿವೆ.

    ಅಂದಹಾಗೆ ಬಾಲಪ್ಪ-ನರಸಮ್ಮ ದಂಪತಿಗೆ ಸೇರಿದ ಸೀಮೆಹಸುಗಳಾಗಿವೆ. ಸಿಡಿಲಿನ ಅರ್ಭಟಕ್ಕೆ ಬೆಚ್ಚಿಬಿದ್ದು ಗುಡಿಸಲಿನಿಂದ ಓಡಿ ಬಂದಿರೋ ಬಾಲಪ್ಪ-ನರಸಮ್ಮ ದಂಪತಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಬದುಕಿಗೆ ಆಧಾರವಾಗಿದ್ದ ಸೀಮೆಹಸುಗಳು ಕಣ್ಣೇದುರೇ ಬೆಂಕಿಗಾಹುತಿಯಾದ ದೃಶ್ಯ ಕಂಡ ದಂಪತಿ ಕಣ್ಣೀರಧಾರೆಯೇ ಹರಿದಿದೆ.

    ಜೀವನಧಾರ ಹಸುಗಳನ್ನ ಕಳೆದುಕೊಳ್ಳುವ ಆತಂಕದಲ್ಲಿರೋ ಬಡ ದಂಪತಿಗೆ ದಿಕ್ಕುತೋಚದಂತಾಗಿ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಮತ್ತೊಂದೆಡೆ ಸಿಡಲಿನ ಅರ್ಭಟಕ್ಕೆ ಇದೇ ಗ್ರಾಮದ ವೆಂಕಟನಾರಾಯಣಪ್ಪನವರ ವಠಾರದಲ್ಲಿದ್ದ ತೆಂಗಿನಮರಕ್ಕೂ ಸಹ ಬೆಂಕಿ ಹೊತ್ತಿಕೊಂಡು ಧಗ ಧಗ ಅಂತ ಹೊತ್ತಿಉರಿದಿದೆ. ಅಲ್ಲದೆ ಇದೇ ಗ್ರಾಮದಲ್ಲಿ ಸಿಡಿಲು ಬಡಿದು ಮೂವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.