Tag: cow

  • ಹಸುವಿನ ಹೊಟ್ಟೆಯಲ್ಲಿತ್ತು ಬರೋಬ್ಬರಿ 52 ಕೆ.ಜಿ ಪ್ಲಾಸ್ಟಿಕ್!

    ಹಸುವಿನ ಹೊಟ್ಟೆಯಲ್ಲಿತ್ತು ಬರೋಬ್ಬರಿ 52 ಕೆ.ಜಿ ಪ್ಲಾಸ್ಟಿಕ್!

    ಚೆನ್ನೈ: ಪಶುವೈದ್ಯರ ತಂಡವೊಂದು ಹಸುವಿನ ಹೊಟ್ಟೆಯಲ್ಲಿದ್ದ ಬರೋಬ್ಬರಿ 52 ಕೆ.ಜಿ ಪ್ಲಾಸ್ಟಿಕನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ.

    ತಮಿಳುನಾಡಿನ ಪಶುವೈದ್ಯ ಹಾಗೂ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ಸರ್ಜನ್ ಗಳು ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಮೂಕ ಪ್ರಾಣಿಯ ಜೀವ ಉಳಿಸಿದ್ದಾರೆ.

    ಶಸ್ತ್ರ ಚಿಕಿತ್ಸೆಯ ಮೂಲಕ ಹೊಟ್ಟೆಯಲ್ಲಿದ್ದ ಕಸವನ್ನು ತೆಗೆಯುಲು ವೈದ್ಯರ ತಂಡ 5 ಗಂಟೆಗಳ ಕಾಲ ತೆಗೆದುಕೊಂಡಿದೆ. ಹಸುವಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಜೊತೆಗೆ ನಾಣ್ಯ, ಸೂಜಿ, ಪಿನ್ ಮುಂತಾದ ವಸ್ತುಗಳು ಕೂಡ ಪತ್ತೆಯಾಗಿವೆ.

    ಹಸುವಿನ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಅದರ ಮಾಲೀಕ ಚೆನ್ನೈನಲ್ಲಿರುವ ಪಶುವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಕರೆದುಕೊಂಡು ಬಂದಿದ್ದಾರೆ. ಅಲ್ಲದೆ ಹಸು ಆಗಾಗ ನೋವಿನಿಂದ ನರಳಾಡುತ್ತಿದೆ. ಈ ಹಸು ಇತ್ತೀಚೆಗಷ್ಟೇ ಕರು ಹಾಕಿದ್ದು, ಅದಕ್ಕೆ ಹಾಲುಣಿಸಲು ಕೂಡ ಕಷ್ಟ ಪಡುತ್ತಿದೆ. ಮೂತ್ರವಿಸರ್ಜನೆ ಹಾಗೂ ಸೆಗಣಿ ಹಾಕುವಾಗಲೂ ಒದ್ದಾಡುತ್ತಿದೆ. ಇಷ್ಟು ಮಾತ್ರವಲ್ಲದೆ ಆಗಾಗ ತನ್ನ ಕಾಲುಗಳಿಂದ ಹೊಟ್ಟೆಗೆ ಒದೆಯುತ್ತಿದೆ ಎಂದು ಅಲ್ಲಿನ ವೈದ್ಯರ ಬಳಿ ಮಾಲೀಕ ಹೇಳಿದ್ದಾರೆ.

    ಈ ಹಿನ್ನೆಲೆಯಲ್ಲಿ ಹಸುವಿನ ಹೊಟ್ಟೆಯ ಎಕ್ಸ್ ರೇ ತೆಗೆಸಲಾಯಿತು. ಈ ವೇಳೆ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಇರುವುದು ಬೆಳಕಿಗೆ ಬಂದಿದೆ. ಹೀಗಾಗಿ ಶುಕ್ರವಾರದಂದು ಬೆಳಗ್ಗೆ 11 ಗಂಟೆಗೆ ಆರಂಭವಾದ ಶಸ್ತ್ರ ಚಿಕಿತ್ಸೆ 4.30ವರೆಗೆ ನಡೆದಿದ್ದು, ಹಸುವಿನ ಹೊಟ್ಟೆಯಲ್ಲಿದ್ದ ಪ್ಲಾಸ್ಟಿಕನ್ನು ಯಶಸ್ವಿಯಾಗಿ ಹೊರತೆಗೆಯಲಾಯಿತು. ಕಳೆದ 2 ವರ್ಷಗಳಿಂದ ಹಸು ಪ್ಲಾಸ್ಟಿಕ್ ಸೇವನೆ ಮಾಡುತ್ತಾ ಬಂದಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದು, ಸದ್ಯ ಹಸು ಆರೋಗ್ಯವಾಗಿದೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ.

  • ಬೀದಿಯಲ್ಲಿ ಮಲಗಿದ್ದ ಗೋವನ್ನು ಅಪಹರಿಸಿದ ಕಳ್ಳರು

    ಬೀದಿಯಲ್ಲಿ ಮಲಗಿದ್ದ ಗೋವನ್ನು ಅಪಹರಿಸಿದ ಕಳ್ಳರು

    ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಗೋವಿನ ಕಳ್ಳತನ ಅವ್ಯಾಹತವಾಗಿ ಮುಂದುವರಿದಿದೆ. ಕುಂದಾಪುರ ತಾಲೂಕಿನ ಅಂಪಾರು ಎಂಬಲ್ಲಿನ ಪೆಟ್ರೋಲ್ ಬಂಕ್ ಬಳಿಯಿದ್ದ ಜಾನುವಾರನ್ನು ಕಾರಿನಲ್ಲಿ ತುಂಬಿಸಿ ದುಷ್ಕರ್ಮಿಗಳು ಕದ್ದು ಹೋದ ಘಟನೆ ಬೆಳಕಿಗೆ ಬಂದಿದೆ.

    ಈ ದೃಶ್ಯಗಳು ಪೆಟ್ರೋಲ್ ಬಂಕ್‍ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕುಂದಾಪುರ-ಸಿದ್ದಾಪುರ ಹೆದ್ದಾರಿಯ ಸಮೀಪವೇ ಇರುವ ಅಂಪಾರು ಪೆಟ್ರೋಲ್ ಬಂಕಿನಲ್ಲಿ ಬುಧವಾರ ತಡರಾತ್ರಿ ಈ ಘಟನೆ ನಡೆದಿದೆ. ಪೆಟ್ರೋಲ್ ಬಂಕ್ ಎದುರು ಕಾರು ನಿಂತಿರುತ್ತದೆ. ಕಾರಿನಿಂದ ಇಬ್ಬರು ಇಳಿಯುತ್ತಾರೆ. ಬಂಕ್ ಎದುರು ಮಲಗಿದ್ದ ದನವನ್ನು ಹಿಡಿದು ಕಾರಿನಲ್ಲಿ ತುಂಬಿಸಿ ಕ್ಷಣಾರ್ಧದಲ್ಲಿ ಅಲ್ಲಿಂದ ಪರಾರಿಯಾಗುತ್ತಾರೆ.

    ಸುಮಾರು 2-3 ನಿಮಿಷಗಳ ಅಂತರದಲ್ಲಿ ಕಾರ್ಯಾಚರಣೆ ನಡೆಯುತ್ತದೆ. ಗೋಕಳ್ಳರನ್ನು ಕಂಡು ಬೊಗಳಿದ ನಾಯಿಯೊಂದು ಬೆನ್ನಟ್ಟುತ್ತದೆ. ಗೋವು ಕಳ್ಳರು ನಾಯಿಗೆ ಕಲ್ಲು ಹೊಡೆದು ಅಟ್ಟಿಸಿ, ಅಲ್ಲಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಜಾನುವಾರು ಕಳೆದುಕೊಂಡ ಕೃಷಿಕ ಪ್ರಸನ್ನ ಕುಮಾರ್ ಶೆಟ್ಟಿ ಎನ್ನುವರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಶಂಕರನಾರಾಯಣ ಠಾಣೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿಗಳ ದೃಶ್ಯಗಳನ್ನು ಜಾಲಾಡುತ್ತಿದ್ದಾರೆ. ಇದನ್ನು ಓದಿ: ಸುಳ್ಯದಲ್ಲಿ ರಾತ್ರೋರಾತ್ರಿ ದನಕಳ್ಳತನ- ಸಿಸಿಟಿವಿಯಲ್ಲಿ ದೃಶ್ಯ ಸೆರೆ

  • ಓಂ, ಗೋವು ಪದ ಕೇಳಿದರೆ ಕೆಲವರು ಅಘಾತಗೊಳ್ಳುತ್ತಾರೆ: ಮೋದಿ

    ಓಂ, ಗೋವು ಪದ ಕೇಳಿದರೆ ಕೆಲವರು ಅಘಾತಗೊಳ್ಳುತ್ತಾರೆ: ಮೋದಿ

    ಲಕ್ನೋ: ‘ಹಸು’ ಮತ್ತು ‘ಓಂ’ ನಂತಹ ಪದಗಳನ್ನು ಕೇಳಿದ ಕೆಲವರು ಆಘಾತಕ್ಕೊಳಗಾಗುತ್ತಾರೆ. ಇದು ನಮ್ಮ ದೇಶದಲ್ಲಿ ದುರದೃಷ್ಟಕರ ವಿಷಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

    ಇಂದು ಉತ್ತರ ಪ್ರದೇಶದ ಮಥುರಾದಲ್ಲಿ ನಡೆದ ಜಾನುವಾರುಗಳಿಗೆ ರೋಗ ತಡೆಗಟ್ಟುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಗೋವು ಮತ್ತು ಓಂ ಪದಗಳನ್ನು ಕೇಳಿದರೆ ಕೆಲವರಿಗೆ ಆಗುವುದಿಲ್ಲ. ಈ ಪದಗಳನ್ನು ಕೇಳಿದರೆ ಅವರು ನಮ್ಮ ದೇಶ 16ನೇ ಶತಮಾನಕ್ಕೆ ಹೋಗಿದೆ ಎಂದು ಭಾವಿಸುತ್ತಾರೆ ಎಂದು ಹೇಳಿದ್ದಾರೆ.

    ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮವನ್ನು (ಎನ್‍ಎಡಿಸಿಪಿ) ಮತ್ತು ರೈತರಿಗಾಗಿ ಇತರ ಯೋಜನೆಗಳೊಂದಿಗೆ ಪ್ರಾರಂಭಿಸಿದ ಮೋದಿ ಅವರು, ನಮ್ಮ ದೇಶದ ಗ್ರಾಮೀಣ ಅರ್ಥಿಕತೆಯ ಬಗ್ಗೆ ಪ್ರಾಣಿಗಳಿಲ್ಲದೆ ಮಾತನಾಡಲು ಸಾಧ್ಯವೆ. ಪರಿಸರ ಮತ್ತು ಪ್ರಾಣಿಗಳು ಭಾರತದ ಆರ್ಥಿಕತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಾವು ಪ್ರಕೃತಿ ಮತ್ತು ಆರ್ಥಿಕ ಪ್ರಗತಿಯ ಬಗ್ಗೆ ಸಮತೋಲನವನ್ನು ಕಾಪಾಡಿಕೊಂಡು ಸಬಲೀಕೃತ ಭಾರತದತ್ತ ಸಾಗಬೇಕು ಎಂದು ಹೇಳಿದರು.

    ನಮ್ಮ ಕೇಂದ್ರ ಸರ್ಕಾರ 2024ರ ಅವಧಿಯಲ್ಲಿ 12,652 ಕೋಟಿ ರೂ. ವೆಚ್ಚದಲ್ಲಿ ಒಂದು ಯೋಜನೆಯನ್ನು ಮಾಡಿದ್ದು, ಇದರ ಪ್ರಕಾರ ಕಾಲುಬಾಯಿ ರೋಗಕ್ಕೆ ತುತ್ತಾಗುವ ದನ, ಎಮ್ಮೆ, ಕುರಿ, ಮೇಕೆ ಮತ್ತು ಹಂದಿಗಳು ಸೇರಿದಂತೆ 500 ದಶಲಕ್ಷಕ್ಕೂ ಹೆಚ್ಚು ಪ್ರಾಣಿಗಳಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಭಾಗಿಯಾಗಿದ್ದರು.

    ಈ ಯೋಜನೆಯಲ್ಲಿ ಬ್ರೂಸೆಲೋಸಿಸ್ ಕಾಯಿಲೆಯ ವಿರುದ್ಧ ಹಸುಗಳಿಗೆ ಲಸಿಕೆ ಹಾಕುವ ಗುರಿಯನ್ನು ಕೂಡ ಹೊಂದಿದ್ದೇವೆ ಎಂದು ಮೋದಿ ಅವರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಪಿಎಂ ಮೋದಿ ಅವರು ರೈತರು, ಪಶುವೈದ್ಯಕೀಯ ವೈದ್ಯರು ಮತ್ತು ಪ್ಲಾಸ್ಟಿಕ್ ತ್ಯಾಜ್ಯ ವಿಭಜಕರೊಂದಿಗೆ ವೈಯಕ್ತಿಕವಾಗಿ ಸಂವಹನ ನಡೆಸಿದರು. ಇದರ ಜೊತೆಗೆ ಅವರು ಕಸದಿಂದ ಪ್ಲಾಸ್ಟಿಕ್ ಅನ್ನು ಬೇರ್ಪಡಿಸುವ ಮಹಿಳೆಯರೊಂದಿಗೆ ಕುಳಿತು ಅದರ ಮಹತ್ವವನ್ನು ವಿವರಿಸಿದರು.

  • ಕೃಷ್ಣನ ರೀತಿ ಕೊಳಲೂದಿದ್ರೆ ಹಸುಗಳು ಹೆಚ್ಚು ಹಾಲು ಕೊಡ್ತವೆ: ಬಿಜೆಪಿ ಶಾಸಕ

    ಕೃಷ್ಣನ ರೀತಿ ಕೊಳಲೂದಿದ್ರೆ ಹಸುಗಳು ಹೆಚ್ಚು ಹಾಲು ಕೊಡ್ತವೆ: ಬಿಜೆಪಿ ಶಾಸಕ

    ಗುವಾಹಟಿ: ಕೃಷ್ಣನ ರೀತಿ ಕೊಳಲನ್ನು ನುಡಿಸಿದರೆ ಹಸುಗಳು ಹೆಚ್ಚು ಹಾಲನ್ನು ಕೊಡುತ್ತವೆ ಎಂಬ ತನ್ನ ಹೇಳಿಕೆಯನ್ನು ಅಸ್ಸಾಂ ಬಿಜೆಪಿ ಶಾಸಕ ದಿಲೀಪ್ ಕುಮಾರ್ ಪೌಲ್ ಸಮರ್ಥಿಸಿಕೊಂಡಿದ್ದಾರೆ.

    ಇದು ನನ್ನ ಹೇಳಿಕೆಯಲ್ಲ. ಗುಜರಾತ್ ಮೂಲದ ಅಧ್ಯಯನ ತಂಡವೊಂದು ಈ ಬಗ್ಗೆ ಸಂಶೋಧನೆ ನಡೆಸಿದ್ದು, ಈ ವೇಳೆ ಭಗವಾನ್ ಕೃಷ್ಣನ ಇಂಪಾದ ಕೊಳಲ ನಾದವನ್ನು ಆಲಿಸುತ್ತಾ ಹಸುಗಳು ಹೆಚ್ಚು ಹಾಲನ್ನು ನೀಡುತ್ತವೆ ಎಂಬುದು ವರದಿಯಲ್ಲಿ ನಿಜವಾಗಿದೆ. ಹೀಗಾಗಿ ಕೃಷ್ಣ ಸುಮ್ಮನೆ ಕಾಲಹರಣಕ್ಕೋಸ್ಕರ ಕೊಳಲು ನುಡಿಸಿಲ್ಲ ಎಂದು ಶಾಸಕ ಗುವಾಹಟಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

    ಶನಿವಾರ ತಮ್ಮ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಶಾಸಕರು, ಶ್ರೀಕೃಷ್ಣ ರೀತಿಯಲ್ಲಿ ನಮಗೂ ವಿಶಿಷ್ಠ ರೀತಿಯಲ್ಲಿ ಕೊಳಲು ಊದಲು ಸಾಧ್ಯವಾದರೆ ಹಸುಗಳು ನೀಡಲು ಹಾಲಿನಲ್ಲಿ ಹಲವು ಪಟ್ಟು ಹೆಚ್ಚಾಗುವುದು ಎಂದು ಆಧುನಿಕ ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ. ಪುರಾತನ ಕಾಲದಲ್ಲಿ ಕಂಡುಕೊಂಡ ಈ ತಂತ್ರವನ್ನು ಆಧುನಿಕ ಯುಗದಲ್ಲಿ ಮತ್ತೆ ನಾವು ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದ್ದರು.

  • ಹಸುವಿಗೆ ಸೀಮಂತ ಮಾಡಿ ವ್ಯಕ್ತಿಯಿಂದ ಸಂಭ್ರಮಾಚರಣೆ

    ಹಸುವಿಗೆ ಸೀಮಂತ ಮಾಡಿ ವ್ಯಕ್ತಿಯಿಂದ ಸಂಭ್ರಮಾಚರಣೆ

    ದಾವಣಗೆರೆ: ಮನೆಯ ಮಗಳು ಚೊಚ್ಚಲ ಗರ್ಭಿಣಿಯಾದರೆ ಮನೆಯ ಮಂದಿಯಲ್ಲಿ ಎಲ್ಲಿಲ್ಲದ ಸಂಭ್ರಮ ಸಡಗರ ಕಂಡು ಬರುತ್ತದೆ. ಅದೇ ರೀತಿಯಲ್ಲಿ ಇಲ್ಲಿ ವ್ಯಕ್ತಿಯೊಬ್ಬರು ತನ್ನ ತುಂಬು ಗರ್ಭಿಣಿಯ ಹಸುವಿನ ಸೀಮಂತ ಮಾಡಿ ಸಂಭ್ರಮ ಆಚರಣೆ ಮಾಡಿದ್ದಾರೆ.

    ದಾವಣಗೆರೆ ತಾಲೂಕಿನ ಕಕ್ಕರಗೊಳ ಗ್ರಾಮದಲ್ಲಿ ಯುವರಾಜ್ ಎಂಬವರು ಮನೆಯಲ್ಲಿ ಒಂದು ಆಕಳು(ಹಸು) ಚೊಚ್ಚಲ ಬಾರಿ ಬಸಿರಿ ಆಗಿದೆ. ಆ ವ್ಯಕ್ತಿ ತನ್ನ ಅಕ್ಕ ಅಥವಾ ತಂಗಿ ಎಂದು ಭಾವಿಸಿ ಗರ್ಭಿಣಿ ಹಸುವಿಗೆ ಸೀಮಂತ ಮಾಡಿದ್ದಾರೆ.

    ಯುವರಾಜ್ ದೂರದ ಸಂಬಂಧಿಕರು ಮತ್ತು ಒಡಹುಟ್ಟಿದವರನ್ನು ಕರೆಸಿ, ಮನೆಯಲ್ಲಿ ಹಸುವಿನ ಕೊರಳಿಗೆ ಹೂವಿನಿಂದ ಅಲಂಕರಿಸಿ ಮತ್ತು ಹೊಸ ಸೀರೆಯಿಂದ ಸಿಂಗಾರ ಮಾಡಿದ್ದಾರೆ. ಅಲ್ಲದೆ ಐದು ಬಗೆಯ ಸಿಹಿ ತಿಂಡಿ, ಐದು ಬಗೆಯ ಹಣ್ಣು- ಹಂಪಲುಗಳು, ಐದು ಬಗ್ಗೆಯ ಆರತಿ, ಊರಿನ ಐದು ಮುತ್ತೈದೆಯರನ್ನು ಕರಸಿ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿದ್ದಾರೆ.

    ನಾವು ನಮ್ಮ ಜಾನವಾರುಗಳಿಂದಾಗಿ ಆರ್ಥಿಕಾವಾಗಿ ಬೆಳವಣಿಗೆ ಆಗಿದ್ದೇವೆ. ನಮ್ಮ ಮನೆಯಲ್ಲಿ ಯಾವುದೇ ಪ್ರಾಣಿಗಳು ಚೊಚ್ಚಲು ಬಸರಿ ಆದರೆ ಇದೇ ರೀತಿಯಲ್ಲಿ ಆಚರಣೆ ಮಾಡುತ್ತೇವೆ. ಅಲ್ಲದೆ ಇಡೀ ಊರಿನ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಈ ಕಾರ್ಯಕ್ರಮಕ್ಕೆ ಬಂದವರಿಗೆ ವಿವಿಧ ರೀತಿಯ ಅಡುಗೆ ಮಾಡಿ ಊಟೋಪಚಾರ ಮಾಡುತ್ತೇವೆ. ಈ ರೀತಿ ಮಾಡುವುದರಿಂದ ನಮ್ಮ ಮನೆಯಲ್ಲಿ ಹೈನುಗಾರಿಕೆ ಹೆಚ್ಚುತ್ತದೆ ಹಾಗೂ ಆರ್ಥಿಕವಾಗಿ ಬೆಳೆವಣಿಗೆ ಆಗುತ್ತವೆ ಎಂದು ಯುವರಾಜ್ ಹೇಳಿದ್ದಾರೆ.

    ಮನೆಯ ಹೆಣ್ಣು ಮಕ್ಕಳಿಗೆ ಹೇಗೆ ನಾವು ಸೀಮಂತ ಮಾಡುತ್ತೇವೆ ಅದೇ ರೀತಿಯಲ್ಲಿ ನಮ್ಮ ಹಸುವಿಗೆ ಸೀಮಂತ ಮಾಡಿಸಿದ್ದೇವೆ. ನಮ್ಮ ಅಣ್ಣ ನಮಗೆ ಫೋನ್ ಮಾಡಿ ಎಲ್ಲರೂ ಊರಿಗೆ ಬನ್ನಿ ನಮ್ಮ ಮನೆಯಲ್ಲಿ ಸೀಮಂತ ಕಾರ್ಯಕ್ರಮ ಇದೆ ಎಂದು ಹೇಳಿದ್ದಾರೆ. ಆದರೆ ನಾವು ಬಂದು ನೋಡಿದರೆ ನಮಗೆ ಆಶ್ಚರ್ಯವಾಗಿತ್ತು. ನಾವು ಚೊಚ್ಚಲು ಬಸಿರಿ ಇದ್ದಾಗ ಹೇಗೆ ಕಾರ್ಯಕ್ರಮ ಮಾಡಿದ್ದಾರೋ, ಅದೇ ರೀತಿ ಈ ಹಸುವಿಗೆ ನಮ್ಮಣ್ಣ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ. ನಾವು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಪಟ್ಟಿದ್ದೇವೆ ಎಂದು ಯುವರಾಜ್ ಸಹೋದರಿ ತಿಳಿಸಿದ್ದಾರೆ.

    ಕಾಮಧೇನು ಕಲ್ಪವೃಕ್ಷ ಅನ್ನುವ ಮಾತು ಇದೆ. ವರ್ಷ ಇಡೀ ದಿನ ಹಾಲು ಹಿಂಡಿ ಹಣ ಮಾಡಿಕೊಳ್ಳವ ಜನರೇ ಹೆಚ್ಚು. ಆದರೆ ಈ ರೈತ ತಮ್ಮ ಹಸುವಿನ ಸೀಮಂತ ಮಾಡಿ, ಈ ಸಮಾಜಕ್ಕೆ ಮೂಕ ಪ್ರಾಣಿಗಳಿಗೆ ಭಾವನೆಗಳು ಇವೆ ಎಂದು ತೋರಿಸಿಕೊಟ್ಟಿದ್ದಾರೆ.

  • ಬಾಂಬೇ ಐಐಟಿ ಕ್ಲಾಸ್ ರೂಮ್‍ಗೆ ಎಂಟ್ರಿ ಕೊಟ್ಟ ಹಸು – ವಿಡಿಯೋ

    ಬಾಂಬೇ ಐಐಟಿ ಕ್ಲಾಸ್ ರೂಮ್‍ಗೆ ಎಂಟ್ರಿ ಕೊಟ್ಟ ಹಸು – ವಿಡಿಯೋ

    ಮುಂಬೈ: ಇತ್ತೀಚೆಗೆ ನಗರದ ಐಐಟಿ ಕ್ಯಾಂಪಸ್ ಒಳಗಡೆ ಜೋಡಿ ಎತ್ತುಗಳು ಬಂದು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದವು. ಇದರ ಬೆನ್ನಲ್ಲೇ ದಾರಿ ತಪ್ಪಿದ ಹಸುವೊಂದು ತರಗತಿಯೊಳಗೆ ಆಗಮಿಸಿದೆ.

    ಮುಂಬೈನ ಪ್ರತಿಷ್ಠಿತ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯಲ್ಲಿ ಈ ಘಟನೆ ನಡೆದಿದ್ದು, ಹಸು ತರಗತಿಗೆ ಬಂದಿದ್ದಾಗ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಲಾಗಿದೆ. ಜೊತೆಗೆ ‘ಪ್ರವೇಶಾತಿ ಪರೀಕ್ಷೆಯನ್ನು ಬರೆಯದೆ ಐಐಟಿ ಮುಂಬೈ ತರಗತಿಗೆ ಹಸು ಪ್ರವೇಶಿಸಿದೆ’ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ವಿಡಿಯೋ 20 ಸೆಕೆಂಡುಗಳಿದ್ದು, ತರಗತಿ ನಡೆಯುತ್ತಿದ್ದಾಗ ಹಸು ದಾರಿ ತಪ್ಪಿ ಉಪನ್ಯಾಸ ನೀಡುವ ಸಭಾಂಗಣವನ್ನು ಪ್ರವೇಶಿಸಿದೆ. ಅಷ್ಟೇ ಅಲ್ಲದೇ ಹೊರಗೆ ಹೋಗಲು ತಿಳಿಯದೆ ತರಗತಿಯಲ್ಲೇ ತಿರುಗಾಡಿದೆ. ಈ ವೇಳೆ ಹಸು ತಮ್ಮ ಬಳಿ ಬರುತ್ತಿದ್ದಂತೆ ವಿದ್ಯಾರ್ಥಿಗಳು ತಾವು ಕುಳಿತಿದ್ದ ಸ್ಥಳದಿಂದ ಎದ್ದು ಓಡಿ ಹೋಗಿದ್ದಾರೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಸುವನ್ನು ತರಗತಿಯಿಂದ ಹೊರಗೆ ಹಾಕಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಹೊರಗಡೆ ಭಾರೀ ಮಳೆಯಾಗುತ್ತಿರುವುದರಿಂದ ಹಸು ಆಶ್ರಯಕ್ಕಾಗಿ ಕಟ್ಟಡವನ್ನು ಪ್ರವೇಶಿಸಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಹಾಸ್ಯಾಸ್ಪದವಾಗಿ ಕಮೆಂಟ್ ಮಾಡುತ್ತಿದ್ದಾರೆ. ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಡಳಿತ ಮಂಡಳಿ, ಕ್ಯಾಂಪಸ್ ನಲ್ಲಿ ಮಾನವ ಹಸುಗಳ ನಡುವಿನ ಸಂಘರ್ಷ ಹೆಚ್ಚಾಗಿದ್ದು, ಈ ಬಗ್ಗೆ ಕ್ರಮಕೈಗೊಳ್ಳಲಾಗುತ್ತದೆ. ಕ್ರಮಕೈಗೊಳ್ಳಲು ಸ್ಥಳೀಯ ಸಂಸ್ಥೆಗಳು ಹಾಗೂ ಎನ್‍ಜಿಒ, ಪ್ರಾಣಿದಯಾ ಸಂಘದ ನೆರವು ಪಡೆಯಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

  • ಹಸುಗಳು ಆಮ್ಲಜನಕವನ್ನು ಹೊರಬಿಡುತ್ತವೆ – ಉತ್ತರಾಖಂಡ್‍ ಸಿಎಂ

    ಹಸುಗಳು ಆಮ್ಲಜನಕವನ್ನು ಹೊರಬಿಡುತ್ತವೆ – ಉತ್ತರಾಖಂಡ್‍ ಸಿಎಂ

    ಡೆಹ್ರಾಡೂನ್: ಹಸುಗಳು ಆಮ್ಲಜನಕವನ್ನು ಉಸಿರಾಡಿ, ಆಮ್ಲಜನಕವನ್ನು ಹೊರ ಬಿಡುವ ಏಕೈಕ ಪ್ರಾಣಿ ಎಂದು ಉತ್ತರಾಖಂಡ್‍ನ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.

    ಡೆಹ್ರಾಡೂನ್‍ನಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಾವತ್ ಅವರು ಹಸುವನ್ನು ಹೊಗಳುವ ಸಮಯದಲ್ಲಿ, ಹಸು ಆಮ್ಲಜನಕವನ್ನು ಹೊರಬಿಡುತ್ತದೆ. ಹಸುವನ್ನು ಮಸಾಜ್ ಮಾಡುವುದರಿಂದ ಮನುಷ್ಯನ ಉಸಿರಾಟದ ಸಮಸ್ಯೆ ಗುಣವಾಗುತ್ತದೆ ಎಂದು ಹೇಳಿರುವ ವಿಡಿಯೋ ಈಗ ಸಖತ್ ವೈರಲ್ ಆಗಿದೆ.

    ಹಸುವಿನ ಹಾಲು ಮತ್ತು ಮೂತ್ರದಲ್ಲಿ ಔಷಧೀಯ ಗುಣಗಳು ಹೆಚ್ಚಾಗಿ ಇರುತ್ತೇವೆ ಎಂದು ಹೇಳುವ ಬರದಲ್ಲಿ ರಾವತ್ ಅವರು ಹಸು ಅಮ್ಲಜನಕವನ್ನು ಹೊರಬಿಡುತ್ತದೆ. ಹಸುವನ್ನು ಮಸಾಜ್ ಮಾಡುವುದರಿಂದ ಮನುಷ್ಯನಿಗೆ ಉಸಿರಾಟದ ತೊಂದರೆ ನಿವಾರಣೆಯಾಗುತ್ತದೆ. ಹಸುವಿನ ಜೊತೆ ಹತ್ತಿರದಲ್ಲಿ ವಾಸಿಸುವುದರಿಂದ ಕ್ಷಯರೋಗ ಗುಣವಾಗುತ್ತದೆ ಎಂದು ಹೇಳಿದ್ದಾರೆ.

    ಇದಕ್ಕೂ ಮುನ್ನ ಉತ್ತರಾಖಂಡ್‍ನ ಬಿಜೆಪಿ ಅಧ್ಯಕ್ಷ ಮತ್ತು ನೈನಿತಾಲ್ ಕ್ಷೇತ್ರದ ಶಾಸಕ ಅಜಯ್ ಭಟ್, ಗರ್ಭಿಣಿಯರು ಭಾಗೇಶ್ವರ ಜಿಲ್ಲೆಯ ಗರುದ್‍ನ ಗಂಗಾ ನದಿಯ ನೀರು ಕುಡಿದರೆ ಸಿಸೇರಿಯನ್ ಹೆರಿಗೆ ಮಾಡುವುದನ್ನು ತಪ್ಪಿಸಬಹುದು ಎಂದು ಹೇಳಿದ ಕೆಲ ದಿನಗಳ ನಂತರ ಮುಖ್ಯಮಂತ್ರಿಯವರು ಹಸುವನ್ನು ಹೊಗಳಿರುವುದು ಈಗ ಭಾರೀ ಸುದ್ದಿಯಾಗಿದೆ.

    ಸಿಎಂ ಅವರ ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಅಧಿಕಾರಿಯೊಬ್ಬರು ಮುಖ್ಯಮಂತ್ರಿಗಳು ಉತ್ತರಾಖಂಡ್‍ನಲ್ಲಿ ಇರುವ ಸಾಮಾನ್ಯ ನಂಬಿಕೆಗಳ ಬಗ್ಗೆ ಮಾತನಾಡುವ ಸಮಯದಲ್ಲಿ ಈ ರೀತಿ ಹೇಳಿದ್ದಾರೆ. ಹಸುವಿನ ಹಾಲು ಮತ್ತು ಮೂತ್ರದಲ್ಲಿ ಔಷಧೀಯ ಗುಣಗಳು ಇರುವುದು ಎಲ್ಲರಿಗೂ ತಿಳಿದಿರುವ ವಿಚಾರ ಮತ್ತು ಉತ್ತರಾಖಂಡ್‍ನ ಬೆಟ್ಟದಲ್ಲಿ ವಾಸಿಸುವ ಕೆಲ ಜನರು ಹಸು ನಮಗೆ ಉಸಿರಾಡಲು ಆಮ್ಲಜನಕ ನೀಡುತ್ತದೆ ಎಂದು ನಂಬುತ್ತಾರೆ ಈ ರೀತಿಯಲ್ಲಿ ಸಿಎಂ ಅವರು ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.

  • ಶೌಚಾಲಯದ ಗುಂಡಿಗೆ ಬಿದ್ದು ನರಳಾಡುತ್ತಿದ್ದ ಹಸುವಿನ ರಕ್ಷಣೆ

    ಶೌಚಾಲಯದ ಗುಂಡಿಗೆ ಬಿದ್ದು ನರಳಾಡುತ್ತಿದ್ದ ಹಸುವಿನ ರಕ್ಷಣೆ

    ಕೋಲಾರ: ಶೌಚಾಲಯದ ಗುಂಡಿಗೆ ಬಿದ್ದು ನರಳಾಡುತ್ತಿದ್ದ ಹಸುವೊಂದನ್ನು ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆ ಕೋಲಾರದ ಗೌರಿಪೇಟೆಯಲ್ಲಿ ನಡೆದಿದೆ.

    ಗೌರೀಪೇಟೆ 4ನೇ ರಸ್ತೆಯಲ್ಲಿ ಖಾಲಿ ನಿವೇಶನದಲ್ಲಿದ್ದ ಗುಂಡಿಯ ಬಳಿ ಮೇಯಲು ಹೋದ ಹಸು ಆಯ ತಪ್ಪಿ ಗುಂಡಿಗೆ ಬಿದ್ದಿತ್ತು. ಕಿರುಚುತಿದ್ದ ಹಸುವನ್ನು ಕಂಡ ಸ್ಥಳೀಯರು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ತಿಳಿಸಿದರು.

    ಈ ವೇಳೆ ತಕ್ಷಣ ಸ್ಥಳಕ್ಕೆ ಬಂದ ಅಗ್ನಶಾಮಕ ಸಿಬ್ಬಂದಿ ಜೆಸಿಬಿ ಹಾಗೂ ಹಗ್ಗದ ಸಹಾಯದಿಂದ ಹಸುವನ್ನು ಮೇಲೆತ್ತಿ ರಕ್ಷಣೆ ಮಾಡಿದರು. ಇದಕ್ಕೆ ಸ್ಥಳೀಯರು ಕೈ ಜೋಡಿಸಿ ಮಾನವೀಯತೆ ಮೆರೆದಿದ್ದಾರೆ.

  • ದನದ ಜೊತೆ ಲೈಂಗಿಕ ಕ್ರಿಯೆ – ವಿಕೃತ ಕಾಮಿಗೆ ಸಾರ್ವಜನಿಕರಿಂದ ಧರ್ಮದೇಟು

    ದನದ ಜೊತೆ ಲೈಂಗಿಕ ಕ್ರಿಯೆ – ವಿಕೃತ ಕಾಮಿಗೆ ಸಾರ್ವಜನಿಕರಿಂದ ಧರ್ಮದೇಟು

    ಮಂಗಳೂರು: ವಿಕೃತ ಕಾಮಿಯೊಬ್ಬ ದನದ ಜೊತೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದಾಗ ಸಾರ್ವಜನಿಕರು ಹಿಡಿದು ಧರ್ಮದೇಟು ನೀಡಿದ ಘಟನೆ ಬೆಳಕಿಗೆ ಬಂದಿದೆ.

    ಮಂಗಳೂರಿನ ಕುಂಜತ್ತ ಬೈಲಿನಲ್ಲಿ ಘಟನೆ ನಡೆದಿದ್ದು ಬಯಲಿನಲ್ಲಿ ಮೇಯಲು ಕಟ್ಟಿದ್ದ ದನಕ್ಕೆ ಆತ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ವಿಕೃತ ಕಾಮಿ ಯುವಕನನ್ನು ಮಹಮ್ಮದ್ ಅಜರ್ ಅನ್ಸಾರಿ ಎಂದು ಗುರುತಿಸಲಾಗಿದೆ.

    ಬಿಹಾರ ಮೂಲದ ಕಾರ್ಮಿಕನಾಗಿದ್ದು ಕೂಲಿ ಕೆಲಸಕ್ಕೆ ಮಂಗಳೂರಿನಲ್ಲಿ ಬಂದು ಉಳಿದುಕೊಂಡಿದ್ದಾನೆ. ಪ್ರದೇಶದಲ್ಲಿ ಯಾರೂ ಇರದ್ದನ್ನು ಕಂಡು ಕೃತ್ಯ ಎಸಗಿದ್ದು ಸಾರ್ವಜನಿಕರು ಗಮನಿಸಿ ಮೊಬೈಲಿನಲ್ಲಿ ಚಿತ್ರೀಕರಿಸಿದ್ದಾರೆ. ಬಳಿಕ ಆತನನ್ನು ದಬಾಯಿಸಿ, ಥಳಿಸಿದ್ದು ಮೊಬೈಲ್‍ನಲ್ಲಿ ಸೆರೆಯಾಗಿದೆ.

  • ಖಾಸಗೀಕರಣಗೊಳ್ಳಲಿದೆ ಭಾರತದ ಮೊದಲ ಹಸು ಅಭಯಾರಣ್ಯ

    ಖಾಸಗೀಕರಣಗೊಳ್ಳಲಿದೆ ಭಾರತದ ಮೊದಲ ಹಸು ಅಭಯಾರಣ್ಯ

    ಭೋಪಾಲ್: ಭಾರತದ ಮೊದಲ ಹಸು ಅಭಯಾರಣ್ಯವನ್ನು ಮಧ್ಯಪ್ರದೇಶ ಸರ್ಕಾರ ಖಾಸಗೀಕರಣಗೊಳಿಸಲು ಮುಂದಾಗಿದೆ.

    ಕಳೆದ ಬಾರಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವು ಸೆಪ್ಟೆಂಬರ್ 2017 ರಲ್ಲಿ ಸ್ಥಾಪಿಸಿದ ಭಾರತದ ಮೊದಲ ಹಸು ಅಭಯಾರಣ್ಯವನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರವು ಖಾಸಗೀಕರಣಗೊಳಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಭೋಪಾಲ್‍ನಿಂದ ವಾಯುವ್ಯಕ್ಕೆ 190 ಕಿ.ಮೀ ದೂರದಲ್ಲಿರುವ ಅಗರ್ ಮಾಲ್ವಾದಲ್ಲಿರುವ ಕಾಮಧೇನು ಗೋ ಅಭರಣ್ಯವನ್ನು ಗೋ ಸಂವರ್ಧನ್ ಮಂಡಳಿಯು ಸುಮಾರು 32 ಕೋಟಿ ರೂ ವೆಚ್ಚದಲ್ಲಿ 472 ಎಕ್ರೆ ಪ್ರದೇಶದಲ್ಲಿ ನಿರ್ಮಾಣ ಮಾಡಿತ್ತು. ಈ ಅಭಯಾರಣ್ಯದಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಹಸುಗಳು ವಾಸಿಸುತ್ತಿವೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಪಶುಸಂಗೋಪನಾ ವಿಭಾಗದ ಉನ್ನತ ಅಧಿಕಾರಿಯೊಬ್ಬರು, ಆರ್ಥಿಕ ಬಿಕ್ಕಟ್ಟಿನಿಂದ ಹಸು ಅಭಯಾರಣ್ಯವನ್ನು ಖಾಸಗೀಕರಣ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಶೀಘ್ರದಲ್ಲೇ ಆಸಕ್ತ ಸಂಸ್ಥೆಗಳನ್ನು ಆಹ್ವಾನಿಸಲು ಇಲಾಖೆ ಅಧಿಸೂಚನೆ ಹೊರಡಿಸಲಿದೆ ಎಂದು ತಿಳಿಸಿದ್ದಾರೆ.

    “ಅಭಯಾರಣ್ಯದಲ್ಲಿ ಕಳಪೆ ನಿರ್ವಹಣೆ ಮತ್ತು ಹಸುಗಳ ನಿರಂತರ ಸಾವಿನ ವಿಷಯಗಳು ಹಲವು ಬಾರಿ ತೊಂದರೆಯಾಗಿದೆ. ಇದನ್ನು ಸುಧಾರಿಸಿ ಸೌಲಭ್ಯಗಳನ್ನು ನೀಡಲು ಸರ್ಕಾರ ಪ್ರಯತ್ನಿಸಿದರೂ ಅದನ್ನು ನಿರ್ವಹಿಸಲು ಕಷ್ಟವಾಗುತ್ತಿದೆ. ಅಕ್ಷಯ್‍ಪಾತ್ರೆಯಂತಹ ಪ್ರಸಿದ್ಧ ಸರ್ಕಾರೇತರ ಸಂಸ್ಥೆಗಳು ಅಭಯಾರಣ್ಯವನ್ನು ಯಾವುದೇ ಲಾಭವಿಲ್ಲದೆ ನಷ್ಟದಲ್ಲಿ ನಿರ್ವಹಿಸಲು ಆಸಕ್ತಿ ತೋರಿಸಿದವು. ಆದರೆ ನಾವು ನಿಯಮಗಳ ಪ್ರಕಾರ ಅಭಯಾರಣ್ಯವನ್ನು ಹಸ್ತಾಂತರಿಸುತ್ತೇವೆ” ಎಂದು ಅಧಿಕಾರಿ ಹೇಳಿದರು.

    ಕಳೆದ ಒಂದು ವರ್ಷದಲ್ಲಿ 600 ಕ್ಕೂ ಹೆಚ್ಚು ಹಸುಗಳು ಹವಾಮಾನ ವೈಪರೀತ್ಯದಿಂದ ಅಭಯಾರಣ್ಯದಲ್ಲಿ ಸಾವನ್ನಪ್ಪಿವೆ ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ಮಾತನಾಡಿರುವ ಪಶುಸಂಗೋಪನಾ ಇಲಾಖೆ ಸಚಿವ ಲಖನ್ ಸಿಂಗ್ ಯಾದವ್, ನಾವು ಸಾರ್ವಜನಿಕ ಸಹಭಾಗಿತ್ವವನ್ನು ಬಯಸುತ್ತೇವೆ. ನಾವು ಹಣ ಸಂಪಾದನೆಗಾಗಿ ಅಭಯಾರಣ್ಯವನ್ನು ಖಾಸಗೀಕರಣ ಮಾಡಿ ಕಂಪನಿಗೆ ನೀಡುತ್ತಿಲ್ಲ. ಆದರೆ ಸಾಮಾಜಿಕ ಅಥವಾ ಧಾರ್ಮಿಕ ಸಂಸ್ಥೆಯು ಅಭಯಾರಣ್ಯ ನಿರ್ವಹಿಸಲಿ ಮತ್ತು ಹಸುಗಳಿಗೆ ಸೇವೆ ಸಲ್ಲಿಸಲಿ ಎಂದು ನಾವು ಬಯಸುತ್ತೇವೆ ಎಂದು ಹೇಳಿದ್ದಾರೆ.

    ಸರ್ಕಾರದ ಈ ನಡೆಗೆ ಮೆಚ್ಚುಗೆ ಸೂಚಿಸಿರುವ ಗೋ ಸಂವರ್ಧನ ಮಂಡಳಿಯ ಮಾಜಿ ಅಧ್ಯಕ್ಷ ಸ್ವಾಮಿ ಅಖಿಲೇಶ್ವರನಂದ್ ಗಿರಿ, ಬಿಜೆಪಿಯೂ ರಾಜ್ಯ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸುತ್ತಿದೆ. ಸರ್ಕಾರವು ಅಭಯಾರಣ್ಯವನ್ನು ನಡೆಸುವುದು ಅಸಾಧ್ಯವಾದ ಕಾರಣ ನಾನು ಈ ನಿರ್ಧಾರವನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ.