Tag: cow

  • ಗಿಡ ಉಳಿಸಲು ಹೋಗಿ ಪ್ರಾಣಿಗಳ ಜೀವಕ್ಕೆ ಕುತ್ತು ತಂದ ಅರಣ್ಯ ಇಲಾಖೆ – ನಾಲ್ಕು ಹಸು ಸಾವು

    ಗಿಡ ಉಳಿಸಲು ಹೋಗಿ ಪ್ರಾಣಿಗಳ ಜೀವಕ್ಕೆ ಕುತ್ತು ತಂದ ಅರಣ್ಯ ಇಲಾಖೆ – ನಾಲ್ಕು ಹಸು ಸಾವು

    ಶಿವಮೊಗ್ಗ: ಅರಣ್ಯ ಇಲಾಖೆಯ ಎಡವಟ್ಟಿನಿಂದ ವನ್ಯ ಜೀವಿಗಳ ಪ್ರಾಣಕ್ಕೆ ಸಂಚಕಾರ ಉಂಟಾಗಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಅರಣ್ಯ ಪ್ರದೇಶದಲ್ಲಿ ನಡೆದಿದೆ.

    ಆಗುಂಬೆ ಸಮೀಪದ ಕಾರೀ ಕುಂಬ್ರಿ ಅರಣ್ಯದಲ್ಲಿ ಅರಣ್ಯ ಇಲಾಖೆ ಹೊಸದಾಗಿ ನೆಡುತೋಪು ನಿರ್ಮಿಸಿದ್ದು, ಇಲ್ಲಿ ಹಲವು ಜಾತಿಯ ವಿವಿಧ ಗಿಡಗಳನ್ನು ನೆಡಲಾಗಿದೆ. ಈ ಗಿಡಗಳನ್ನು ವನ್ಯಜೀವಿಗಳು ತಿನ್ನುತ್ತವೆ. ಇದರಿಂದ ಗಿಡಗಳು ಹಾಳಾಗಿ ಹೋಗುತ್ತವೆ ಎಂಬ ಉದ್ದೇಶದಿಂದ ಅರಣ್ಯ ಇಲಾಖೆ ಅಧಿಕಾರಿಗಳು ಗಿಡಗಳ ಬುಡದಲ್ಲಿ ವಿಷಪೂರಿತ ಔಷಧಿಯನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಕಟ್ಟಿ ಪ್ರತಿಯೊಂದು ಗಿಡಕ್ಕೂ ಕಟ್ಟಿದ್ದಾರೆ.

    ಈ ಮೂಲಕ ವನ್ಯ ಜೀವಿಗಳ ಸಂರಕ್ಷಿಸಬೇಕಾದ ಅರಣ್ಯ ಇಲಾಖೆಯೇ ವನ್ಯಜೀವಿಗಳ ಪ್ರಾಣಕ್ಕೆ ಸಂಚಕಾರ ತಂದೊಡ್ಡಿದೆ. ಅಲ್ಲದೇ ಅರಣ್ಯ ಪ್ರದೇಶದಲ್ಲಿ ಮೇವು ಅರಸಿ ಹೋಗುವ ಜಾನುವಾರುಗಳಿಗೂ ಕುತ್ತು ಉಂಟಾಗಿದೆ. ಈ ವಿಷಪೂರಿತ ಔಷಧಿ ಸೇವನೆಯಿಂದ ಆಗುಂಬೆ ಸುತ್ತಮುತ್ತಲಿನ ಗ್ರಾಮದಲ್ಲಿ ಇಂದು ನಾಲ್ಕು ಹಸುಗಳು ಸಹ ಪ್ರಾಣ ಕಳೆದುಕೊಂಡಿವೆ.

    ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಜಾನುವಾರುಗಳ ಸಾವಿಗೆ ಕಾರಣವಾಗಿರುವ ಅರಣ್ಯ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

  • ಮಕ್ಕಳ ಆನ್‍ಲೈನ್ ಶಿಕ್ಷಣಕ್ಕಾಗಿ ಮಾರಿದ ಹಸುವನ್ನು ವಾಪಸ್ ಕೊಡಿಸುವೆ: ಸೋನು ಸೂದ್

    ಮಕ್ಕಳ ಆನ್‍ಲೈನ್ ಶಿಕ್ಷಣಕ್ಕಾಗಿ ಮಾರಿದ ಹಸುವನ್ನು ವಾಪಸ್ ಕೊಡಿಸುವೆ: ಸೋನು ಸೂದ್

    ಶಿಮ್ಲಾ: ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದೆಂದು ತಾನು ಸಾಕಿದ ಹಸುವನ್ನೇ ಮಾರಿ ಆನ್‍ಲೈನ್ ಶಿಕ್ಷಣಕ್ಕಾಗಿ ಮೊಬೈಲ್ ಕೊಡಿಸಿದ ಸುದ್ದಿ ಭಾರೀ ವೈರಲ್ ಆಗುತ್ತಿದೆ. ಸದಾ ಮಾನವೀಯತೆಯ ಮೂಲಕ ರಿಯಲ್ ಲೈಫ್‍ನಲ್ಲಿ ಹೀರೋ ಆಗಿರೋ ಬಾಲಿವುಡ್ ನಟ ಸೋನು ಸೂದ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

    ಹೌದು. ಹಸು ಮಾರಿದ ತಂದೆಯ ಸುದ್ದಿಗೆ ಟ್ವೀಟ್ ಮಾಡಿರುವ ಸೋನು ಸೂದ್, ಆನ್‍ಲೈನ್ ಶಿಕ್ಷಣಕ್ಕಾಗಿ ಮಾರಿದ ಹಸುವನ್ನು ಮಕ್ಕಳ ತಂದೆಗೆ ವಾಪಸ್ ಕೊಡಿಸುತ್ತೇನೆ. ಸದ್ಯ ನಂಗೆ ಅವರ ಬಗ್ಗೆ ಹೆಚ್ಚಿನ ಮಾಹಿತಿ ಯಾರಾದರೂ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ನಟ ಈ ರೀತಿ ಮನವಿ ಮಾಡಿಕೊಳ್ಳುತ್ತಿದ್ದಂತೆಯೇ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮೊದಲು ಅಂದರೆ ಲಾಕ್‍ಡೌನ್ ಸಮಯದಲ್ಲಿ ಹಲವಾರು ಪ್ರವಾಸಿ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸುವ ಕಾರ್ಯ ಮಾಡಿದ್ದರು. ಅಲ್ಲದೆ 400ಕ್ಕೂ ಹೆಚ್ಚು ವಲಸೆ ಕಾರ್ಮಿಕರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದ್ದರು. ಇತ್ತೀಚೆಗೆ ಮಹಾರಾಷ್ಟ್ರ ಪೊಲೀಸರಿಗೆ 25 ಸಾವಿರ ಫೇಸ್ ಶೀಲ್ಡ್ ನೀಡುವ ಮೂಲಕ ಅನೇಕ ಮಾನವೀಯ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಸಿಲುಕಿದ್ದ ನೂರಾರು ಕನ್ನಡಿಗರಿಗೆ ಬಸ್ ವ್ಯವಸ್ಥೆ ಕಲ್ಪಿಸಿದ ಸೋನು ಸೂದ್

    ಇದೀಗ ಹಸು ವಾಪಸ್ ಮಾಡುತ್ತೇನೆ ಎಂದು ಬಡ ಕುಟುಂಬದ ಬೆನ್ನಿಗೆ ನಿಂತಿರುವ ನಟನ ಪೋಸ್ಟ್ ಗೆ ಹಲವಾರು ಕಮೆಂಟ್ ಗಳು ಬಂದಿವೆ. ಒಬ್ಬ ನಟ ಏಕಾಂಗಿಯಾಗಿ ನಮ್ಮ ದೇಶದ ಬಡ ಕುಟುಂಬಗಳಿಗೆ ಸಹಾಯ ಮಾಡುತ್ತಿದ್ದಾರೆ. ಅಂತೆಯೇ ದೇಶದಲ್ಲಿರುವ ಎಲ್ಲಾ ರಾಜಕೀಯ ವ್ಯಕ್ತಿಗಳಿಂದ ಎಷ್ಟು ಇಂತಹ ಮಾನವೀಯ ಕೆಲಸಗಳು ಆಗಬಹುದು ಎಂದು ನೀವೇ ಊಹಿಸಿಕೊಳ್ಳಿ. ಸೋನು ಸೂದ್ ಅವರು ಮಾಡುತ್ತಿರುವ ಕೆಲಸಕ್ಕೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಲು ಇಷ್ಟಪಡುತ್ತೇನೆ. ದೇವರು ನಿಮಗೆ ಹೆಚ್ಚಿನ ಆರೋಗ್ಯ ಹಾಗೂ ಸಂಪತ್ತನ್ನು ಕರುಣಿಸಲಿ. ನಿಮ್ಮಿಂದ ಇನ್ನಷ್ಟು ಒಳ್ಳೆಯ ಕಾರ್ಯಗಳು ಆಗಲಿ. ಜೈ ಹಿಂದ್ ಸರ್ ಎಂದು ಒಬ್ಬರು ಬರೆದುಕೊಂಡಿದ್ದಾರೆ. ಇನ್ನೊಬ್ಬರು ಈ ಕಾರಣಕ್ಕಾಗಿಯೇ ನಾನು ಈ ವ್ಯಕ್ತಿಯನ್ನು ತುಂಬಾ ಇಷ್ಟಪಡುತ್ತಿದ್ದೇನೆ ಎಂದು ಕಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: 400ಕ್ಕೂ ಹೆಚ್ಚು ವಲಸೆ ಕಾರ್ಮಿಕರ ಕುಟುಂಬಗಳಿಗೆ ಸೋನು ಸೂದ್ ಆರ್ಥಿಕ ನೆರವು

    ಏನಿದು ಘಟನೆ:
    ಕೋವಿಡ್ 19 ಲಾಕ್‍ಡೌನ್ ಪರಿಣಾಮ ಶಾಲೆಯ ಮಕ್ಕಳಿಗೆ ಆನ್‍ಕ್ಲಾಸ್ ಆರಂಭಿಸಲಾಗುತ್ತಿದೆ. ಆದರೆ ಹಿಮಾಚಲ ಪ್ರದೇಶದಲ್ಲಿ ಕಡು ಬಡ ಕುಟುಂಬದ ಕುಲ್ದೀಪ್ ಕುಮಾರ್ ತನ್ನ ಮಕ್ಕಳು ಇತರರಂತೆ ಓದಬೇಕು ಎಂದು ತಾನು ಸಾಕಿದ್ದ ಹಸುವನ್ನೇ ಮಾರಿ 6 ಸಾವಿರ ರೂ. ಕೊಟ್ಟು ಮೊಬೈಲ್ ಖರೀದಿಸಿದ್ದಾರೆ. ಈ ಸಂಬಂಧ ಮಾತನಾಡಿರುವ ಕುಲ್ದೀಪ್, ನನ್ನ ಮಕ್ಕಳು ಆನ್‍ಲೈನ್ ತರಗತಿಗೆ ಹಾಜರಾಗಲು ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ನನ್ನ ಕೈಯಲ್ಲಿ ಸಾಧ್ಯವಿರಲಿಲ್ಲ. ಹೀಗಾಗಿ ನಾನು ಸಾಕಿದ್ದ ಹಸುವನ್ನು ಮಾರಲು ನಿರ್ಧರಿಸಿದೆ. ಅಲ್ಲದೆ 6 ಸಾವಿರ ರೂಪಾಯಿಗೆ ಹಸುವನ್ನು ಮಾರಿಬಿಟ್ಟೆ ಎಂದು ಕುಮಾರ್ ಗದ್ಗದಿತರಾಗಿದ್ದರು. ಇದನ್ನೂ ಓದಿ: ‘ಮಹಾ’ ಪೊಲೀಸರಿಗೆ 25 ಸಾವಿರ ಫೇಸ್‍ಶೀಲ್ಡ್ ನೀಡಿದ ನಟ ಸೋನು ಸೂದ್

  • ಆನ್‍ಲೈನ್ ಕ್ಲಾಸ್ ಎಫೆಕ್ಟ್- ಜೀವನಾಧಾರವಾಗಿದ್ದ ಹಸು ಮಾರಿ ಮಕ್ಕಳಿಗೆ ಮೊಬೈಲ್ ಕೊಡಿಸಿದ ತಂದೆ

    ಆನ್‍ಲೈನ್ ಕ್ಲಾಸ್ ಎಫೆಕ್ಟ್- ಜೀವನಾಧಾರವಾಗಿದ್ದ ಹಸು ಮಾರಿ ಮಕ್ಕಳಿಗೆ ಮೊಬೈಲ್ ಕೊಡಿಸಿದ ತಂದೆ

    – ಬಿಜೆಪಿ ಆಡಳಿತವಿರೋ ರಾಜ್ಯದಲ್ಲೇ ಘಟನೆ

    ಶಿಮ್ಲಾ: ಕೊರೊನಾ ವೈರಸ್ ಭೀತಿಯಿಂದ ಮಕ್ಕಳಿಗೆ ಶಾಲೆ ಇನ್ನೂ ಆರಂಭವಾಗಿಲ್ಲ. ಹೀಗಾಗಿ ಶಾಲೆಯ ಶಿಕ್ಷಕರು ಆನ್‍ಲೈನ್ ತರಗತಿಗಳನ್ನು ಆರಂಭಿಸಿದ್ದಾರೆ. ಈ ಆನ್‍ಲೈನ್ ಕ್ಲಾಸಿಗೆ ಮೊಬೈಲ್ ಬಹುಮುಖ್ಯವಾಗಿದೆ. ಹೀಗಾಗಿ ಬಡ ತಂದೆಯೊಬ್ಬ ತನ್ನ ಕುಟುಂಬಕ್ಕೆ ಜೀವನಾಧಾರವಾಗಿದ್ದ ಹಸುವನ್ನೇ ಮಾರಿ ಮಕ್ಕಳಿಗೆ ಮೊಬೈಲ್ ಕೊಡಿಸಿದ್ದಾರೆ. ಈ ಮೂಲಕ ತನ್ನ ಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದೆಂದು ಪಣತೊಟ್ಟಿದ್ದಾರೆ.

    ಹೌದು. ಈ ಘಟನೆ ನಡೆದಿರುವುದು ಬಿಜೆಪಿ ಆಡಳಿತವಿರುವ ಹಿಮಾಚಲ ಪ್ರದೇಶದಲ್ಲಿ. ಕೋವಿಡ್ 19 ಲಾಕ್‍ಡೌನ್ ಪರಿಣಾಮ ಶಾಲೆಯ ಮಕ್ಕಳಿಗೆ ಆನ್‍ಕ್ಲಾಸ್ ಆರಂಭಿಸಿದ್ದಾರೆ. ಆದರೆ ಕಡು ಬಡ ಕುಟುಂಬದ ಕುಲ್ದೀಪ್ ಕುಮಾರ್ ತನ್ನ ಮಕ್ಕಳು ಇತರರಂತೆ ಓದಬೇಕು ಎಂದು ತಾನು ಸಾಕಿದ್ದ ಹಸುವನ್ನೇ ಮಾರಿ 6 ಸಾವಿರ ರೂ. ಕೊಟ್ಟು ಮೊಬೈಲ್ ಖರೀದಿಸಿದ್ದಾರೆ.

    ಹಸುವನ್ನು ಪುಣ್ಯಕೋಟಿ ಎಂದು ಬಣ್ಣಿಸಲಾಗುತ್ತಿದೆ. ಅಲ್ಲದೆ ಗ್ರಾಮೀಣ ಭಾಗದಲ್ಲಿ ತಾಯಿಯಂತೆ ಹಸುವನ್ನು ಪೂಜಿಸಲಾಗುತ್ತಿದೆ. ಈ ಮಧ್ಯೆ ತನ್ನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಸುವನ್ನೇ ಮಾರಿರುವುದು ನಿಜಕ್ಕೂ ಬೇಸರದ ಸಂಗತಿ. ಪರಿಶಿಷ್ಠ ಜಾತಿಗೆ ಸೇರಿರುವ ಕುಲ್ದೀಪ್, ಕಾಂಗ್ರಾ ಜಿಲ್ಲೆಯ ತಹಸಿಲ್ ನ ಗುಮ್ಮರ್ ಗ್ರಾಮದಲ್ಲಿ ನೆಲೆಸಿದ್ದಾರೆ. ಇವರ ಮಗಳು ಅನು ಹಾಗೂ ಮಗ ವಾನ್ಶ್ ಸರ್ಕಾರಿ ಶಾಲೆಯಲ್ಲಿ 4 ಮತ್ತು 2ನೇ ತರಗತಿಯಲ್ಲಿ ಓದುತ್ತಿದ್ದಾರೆ.

    ಕೊರೊನಾ ಎಂಬ ಮಹಾಮಾರಿ ವೈರಸ್ ಭೀತಿಯಿಂದ ರಾಜ್ಯದಲ್ಲಿ ಮಕ್ಕಳಿಗೆ ಆನ್‍ಲೈನ್ ಕ್ಲಾಸ್ ಗಳನ್ನು ಆರಂಭಿಸಲಾಯಿತು. ಆದರೆ ಕುಲ್ದೀಪ್ ಮಕ್ಕಳಿಗೆ ತರಗತಿಗೆ ಹಾಜರಾಗಲು ಮೊಬೈಲ್ ಫೋನ್ ಹಾಗೂ ನೆಟ್ ಕನೆಕ್ಷನ್ ಇರಲಿಲ್ಲ. ಇದರಿಂದ ಬೇಸರಗೊಂಡು ತನ್ನ ಮಕ್ಕಳ ಓದು ಅರ್ಧಕ್ಕೆ ನಿಲ್ಲಬಾರದೆಂದು ಮೊಬೈಲ್ ಖರೀದಿ ಮಾಡಿದ್ದೇನೆ ಎಂದು ಕುಮಾರ್ ತಿಳಿಸಿದ್ದಾರೆ.

    ನನ್ನ ಮಕ್ಕಳು ಆನ್‍ಲೈನ್ ತರಗತಿಗೆ ಹಾಜರಾಗಲು ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ನನ್ನ ಕೈಯಲ್ಲಿ ಸಾಧ್ಯವಿರಲಿಲ್ಲ. ಹೀಗಾಗಿ ನಾನು ಸಾಕಿದ್ದ ಹಸುವನ್ನು ಮಾರಲು ನಿರ್ಧರಿಸಿದೆ. ಅಲ್ಲದೆ 6 ಸಾವಿರ ರೂಪಾಯಿಗೆ ಹಸುವನ್ನು ಮಾರಿಬಿಟ್ಟೆ ಎಂದು ಕುಮಾರ್ ಗದ್ಗದಿತರಾದರು. ಕುಮಾರ್ ಹಾಲು ಮಾರಾಟ ಮಾಡುತ್ತಿದ್ದರೆ, ಪತ್ನಿ ಕೂಲಿ ಕೆಸ ಮಾಡುತ್ತಿದ್ದರು. ಈ ಮೂಲಕ ಇಬ್ಬರು ತಮ್ಮ ಬದುಕಿನ ಬಂಡಿ ಸಾಗಿಸುತ್ತಿದ್ದರು.

    ಹಸು ಮಾರುವ ಮೊದಲು ಕುಮಾರ್ ಕುಟುಂಬ, ಬ್ಯಾಂಕ್ ಬಾಗಿಲು ತಟ್ಟಿದೆ. ಅಲ್ಲದೆ ಖಾಸಗಿ ಸಾಲಗಾರರ ಮೊರೆಯೂ ಹೋಗಿದ್ದಾರೆ. ಆದರೆ ಎಲ್ಲಿಯೂ ಕುಮಾರ್ ಗೆ ಸಾಲ ದೊರಕಿರಲಿಲ್ಲ. ಇತ್ತ ಅದಾಗಲೇ ಆನ್‍ಕ್ಲಾಸ್ ಆರಂಭಿಸಿರುವ ಶಿಕ್ಷಕರು, ನಿಮ್ಮ ಮಕ್ಕಳ ಓದು ಮುಂದುವರಿಯಬೇಕಾದರೆ ಅವರಿಗೆ ಮೊಬೈಲ್ ಕೊಡಿಸಿ ತರಗತಿಗೆ ಹಾಜರುಪಡಿಸಿ ಎಂದು ಒತ್ತಡ ಹಾಕಲು ಆರಂಭಿಸಿದ್ದಾರೆ. ಪರಿಣಾಮ ಬೇರೆ ದಾರಿ ಇಲ್ಲದೆ ಹಸುವನ್ನು ಮಾರಬೇಕಾದ ಪರಿಸ್ಥಿತಿ ಎದುರಾಯಿತು ಎಂದು ಕುಮಾರ್ ಬೇಸರ ವ್ಯಕ್ತಪಡಿಸಿದರು.

    ಸದ್ಯ ಅವರಲ್ಲಿ ಉಳಿದ ಇನ್ನೊಂದು ಹಸುವೇ ಜೀವನಾಧಾರವಾಗಿದೆ. ಇಷ್ಟು ಮಾತ್ರವಲ್ಲದೆ ಇದೀಗ ಕುಟುಂಬ ಮತ್ತೊಂದು ಕಷ್ಟವನ್ನು ಅನುಭವಿಸುತ್ತಿದೆ. ಅದೇನೆಂದರೆ, ಒಂದೇ ಫೋನಿನಲ್ಲಿ ಇಬ್ಬರು ಮಕ್ಕಳು ಏಕಕಾಲದಲ್ಲಿ ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಪರಿಣಾಮ ತರಗತಿಗೆ ಹಾಜರಾಗಲು ಇಬ್ಬರು ಮಕ್ಕಳು ಬೆಳಗೆದ್ದು ಜಗಳವಾಡುತ್ತಿರುವುದನ್ನು ನೋಡಲು ಕುಮಾರ್ ಕೈಯಲ್ಲಿ ಆಗುತ್ತಿಲ್ಲ.

    ಬಡವರಿಗೆ ನೀಡುವ ಸೌಲಭ್ಯಗಳನ್ನು ಪಡೆಯುವಲ್ಲಿ ಕುಮಾರ್ ವಂಚಿತರಾಗಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಸಮಗ್ರ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಸರ್ಕಾರದ ಸವಲತ್ತುಗಳನ್ನು ಪಡೆಯುವ ಅರ್ಹತೆ ಕುಮಾರ್ ಕುಟುಂಬಕ್ಕಿದೆ. ಕುಮಾರ್ ಅವರ ಆರ್ಥಿಕ ಸ್ಥಿತಿಯ ಬಗ್ಗೆ ಸ್ಥಳೀಯ ಬಿಜೆಪಿ ಶಾಸಕ ರಮೇಶ್ ಧವಾಲಾಗೆ ತಿಳಿಸಿದಾಗ, ಸರ್ಕಾರದಿಂದ ಕುಮಾರ್ ಕುಟುಂಬಕ್ಕೆ ಸಹಾಯ ಮಾಡುವುದಾಗಿ ಭರವಸೆ ನಿಡಿದ್ದಾರೆ.

  • ಕೊರೊನಾ ನಿರ್ವಹಣೆಯಲ್ಲಿ ವಿರೋಧ ಪಕ್ಷದವರ ಆರೋಪ ಸತ್ಯಕ್ಕೆ ಹತ್ತಿರವಾಗಿದೆ: ಪ್ರಮೋದ್ ಮುತಾಲಿಕ್

    ಕೊರೊನಾ ನಿರ್ವಹಣೆಯಲ್ಲಿ ವಿರೋಧ ಪಕ್ಷದವರ ಆರೋಪ ಸತ್ಯಕ್ಕೆ ಹತ್ತಿರವಾಗಿದೆ: ಪ್ರಮೋದ್ ಮುತಾಲಿಕ್

    – ಸರ್ಕಾರ ಈ ಕುರಿತು ಉತ್ತರಿಸಬೇಕು

    ಧಾರವಾಡ: ಕೊರೊನಾ ನಿಯಂತ್ರಣ ವಿಚಾರದಲ್ಲಿ ಸರ್ಕಾರ ಸರಿಯಾಗಿ ಕೆಲಸವಾಗುತ್ತಿಲ್ಲ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಸರ್ಕಾರ ಇದಕ್ಕೆ ಉತ್ತರ ಕೊಡಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊರ ನೋಟದಲ್ಲಿ ಕೊರೊನಾ ಪ್ರಕ್ರಿಯೆಯಲ್ಲಿ ಗೊಂದಲ ಕಾಣುತ್ತಿದೆ. ರಾಜ್ಯ ಸರ್ಕಾರ ಡಾ.ಕಜೆಯವರ 70 ಲಕ್ಷ ಆಯುರ್ವೇದಿಕ್ ಮಾತ್ರೆ ಖರೀದಿಸಿದೆ ಅದನ್ನು ಎಲ್ಲಿಯೂ ವಿತರಿಸುತ್ತಿಲ್ಲ. ಇದರಿಂದ ಸರ್ಕಾರದ ಮೇಲೆ ಸಂಶಯ ಬರುತ್ತದೆ. ವಿರೋಧ ಪಕ್ಷದವರ ಆರೋಪ ಸತ್ಯಕ್ಕೆ ಹತ್ತಿರವಾದದ್ದು, ಅಲೋಪತಿಕ್ ಮಾಫಿಯಾ ದೊಡ್ಡದಿದೆ. ಈ ಲಾಬಿಗೆ ಕಜೆಯವರ ಔಷಧ ಬಲಿಯಾಗಿದೆ ಎಂದು ಅಭಿಪ್ರಾಯಪಟ್ಟರು.

    ಇದೇ ವೇಳೆ ಬಕ್ರೀದ್ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆ ಗೋವುಗಳನ್ನು ರಕ್ಷಣೆ ಮಾಡಬೇಕು. ವಿಜಯಪುರದ ಡಿಸಿ ನಿರ್ಧಾರ ಒಳ್ಳೆಯದಿದೆ, ಅಕ್ರಮ ಗೋವು ಸಾಗಾಟ ತಡೆಗೆ ಎಂಟು ತಂಡ ರಚಿಸಿ ಡಿಸಿ ಒಳ್ಳೆಯ ಕ್ರಮ ಕೈಗೊಂಡಿದ್ದಾರೆ. ಇದೇ ರೀತಿಯ ಕ್ರಮ ಎಲ್ಲಡೆ ಆಗಬೇಕು. ಈಗಾಗಲೇ ಅನೇಕ ಕಡೆ ಗೋವು ಕಳ್ಳತನವಾಗಿವೆ, ಅವು ನಮ್ಮ ಗಮನಕ್ಕೆ ಬಂದಿವೆ ಎಂದ ಅವರು, ಕೂಡಲೇ ಈ ಬಗ್ಗೆ ಎಲ್ಲ ಡಿಸಿಗಳು ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

  • ಹಿಂಸಾತ್ಮಕ ರೀತಿಯಲ್ಲಿ ಅಕ್ರಮ ಗೋಸಾಗಾಟ- ವಾಹನ ತಡೆದ ಭಜರಂಗದಳ ಕಾರ್ಯಕರ್ತರು

    ಹಿಂಸಾತ್ಮಕ ರೀತಿಯಲ್ಲಿ ಅಕ್ರಮ ಗೋಸಾಗಾಟ- ವಾಹನ ತಡೆದ ಭಜರಂಗದಳ ಕಾರ್ಯಕರ್ತರು

    ಭಜರಂಗಿಗಳ ಮೇಲೆ ಆರೋಪಿಗಳಿಂದ ತಲ್ವಾರ್ ದಾಳಿ

    ಮಂಗಳೂರು: ಪಿಕಪ್ ವಾಹನದಲ್ಲಿ ಅಕ್ರಮವಾಗಿ ಮೂರು ದನ, ಎರಡು ಕರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದಾಗ ಭಜರಂಗ ದಳ ಸಂಘಟನೆ ಕಾರ್ಯಕರ್ತರು ತಡೆದ ಘಟನೆ ಇಂದು ನಸುಕಿನ ಜಾವ ಬೆಳ್ತಂಗಡಿ ಸಮೀಪ ನಡೆದಿದೆ.

    ಈ ವೇಳೆ ಗೋಸಾಗಾಟಗಾರ ರಾಜೇಶ್ ಹಾಗೂ ಇನ್ನೋರ್ವ ಆರೋಪಿ ಭಜರಂಗದಳ ಕಾರ್ಯಕರ್ತರ ಮೇಲೆ ತಲ್ವಾರ್ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಪಿಕಪ್ ವಾಹನದಲ್ಲಿ ನಗರದ ಕಂಕನಾಡಿಯ ಪಿ.ಕೆ.ಚಿಕನ್ ಸೆಂಟರ್ ಮಾಲಕ ಅಬ್ದುಲ್ ಕರೀಂ ಎಂಬವರ ಹೆಸರಲ್ಲಿ ಪಡೆದ ಕೋವಿಡ್-19 ಪಾಸ್ ಬಳಸಿ ರಾಜೇಶ್ ಮತ್ತು ಆತನ ಸಹಚರರು ಗೋಸಾಗಾಟ ನಡೆಸುತ್ತಿದ್ದು, ಖಚಿತ ಮಾಹಿತಿ ಪಡೆದ ಭಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ದನಗಳನ್ನು ಬೆಳ್ತಂಗಡಿಯ ಸುರ್ಯ ಪಡ್ಪುವಿನ ಮನೆಯೊಂದರಿಂದ ಸಾಗಿಸಲಾಗುತ್ತಿತ್ತು.

    ರಾಜೇಶ್ ಮತ್ತು ಆತನ ಸಹಚರರು ಈ ವೇಳೆ ತಲ್ವಾರ್‍ನಿಂದ ಹಲ್ಲೆ ನಡೆಸಿದ್ದಾರೆ. ಆರೋಪಿಗಳು ಪಿಕಪ್ ವಾಹನದೊಂದಿಗೆ ಬರುತ್ತಿದ್ದ ಬೆಂಗಾವಲು ವಾಹನದಲ್ಲಿ ಪರಾರಿಯಾಗಿದ್ದಾರೆ. ಇದೇ ವೇಳೆ ಮತ್ತೊಂದು ತಂಡವನ್ನು ಗುರುವಾಯನಕೆರೆ ಬಳಿ ತಡೆದು ನಿಲ್ಲಿಸಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.

  • ಬಾಳೆಹಣ್ಣಿಗೆ ವಿಷಹಾಕಿ 20ಕ್ಕೂ ಹೆಚ್ಚು ಹಸುಗಳನ್ನು ಕೊಂದ ಪಾಪಿಗಳು

    ಬಾಳೆಹಣ್ಣಿಗೆ ವಿಷಹಾಕಿ 20ಕ್ಕೂ ಹೆಚ್ಚು ಹಸುಗಳನ್ನು ಕೊಂದ ಪಾಪಿಗಳು

    ಮಡಿಕೇರಿ: ತೋಟದೊಳಗೆ ಗೋವುಗಳು ಬರುತ್ತಿವೆ ಎಂದು ಪಾಪಿಗಳು ಬಾಳೆಹಣ್ಣಿಗೆ ವಿಷಹಾಕಿ 20ಕ್ಕೂ ಹೆಚ್ಚು ಹಸುಗಳನ್ನು ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಐಗೂರಿನ ಡಿಬಿಡಿ ಟಾಟಾ ಎಸ್ಟೇಟ್‍ನಲ್ಲಿ ಈ ಘಟನೆ ನಡೆದಿದ್ದು, ಐಗೂರಿನಲ್ಲಿರುವ ಟಾಟಾ ಎಸ್ಟೇಟ್‍ಗೆ ಸ್ಥಳೀಯ ದನಗಳು ಹೋಗುತ್ತಿದ್ದವಂತೆ. ಹೀಗಾಗಿ ನಿಷ್ಕರುಣೆಯವರಾದ ಎಸ್ಟೇಟ್‍ನ ಮ್ಯಾನೇಜರ್ ಮತ್ತು ಸಿಬ್ಬಂದಿ ಸೇರಿ ಬಾಳೆಹಣ್ಣಿಗೆ ವಿಷ ಹಾಕಿ ಹಸುಗಳಿಗೆ ತಿನಿಸಿ ಕೊಂದಿದ್ದಾರೆ. ಕಳೆದ ಹಲವು ದಿನಗಳಿಂದ 20ಕ್ಕೂ ಹೆಚ್ಚು ಹಸುಗಳಿಗೆ ಇದೇ ರೀತಿ ವಿಷವಿಟ್ಟು ಕೊಂದಿದ್ದಾರೆ.

    ಸತ್ತ ಹಸುಗಳನ್ನು ಯಾರಿಗೂ ಅನುಮಾನ ಬಾರದಂತೆ ಎಸ್ಟೇಟ್ ಒಳಗಿನ ದೊಡ್ಡ ಕಂದಕಕ್ಕೆ ಹಾಕಿ ಮರಗಳನ್ನು ಕಡಿದು ಹಾಕಿದ್ದಾರೆ. ಹಸುಗಳು ಕಾಣೆಯಾಗಿದ್ದರಿಂದ ಅನುಮಾನಗೊಂಡ ಗ್ರಾಮದವರು, ಹುಡುಕಾಡಲು ಪ್ರಾರಂಭಿಸಿದ್ದಾರೆ. ಆಗ ಘಟನೆ ಬೆಳಕಿಗೆ ಬಂದಿದೆ.

    ಈ ಸುದ್ದಿ ಎಲ್ಲೆಡೆ ಅಬ್ಬುತ್ತಿದ್ದಂತೆ ಸ್ಥಳಕ್ಕೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಸ್ಥಳಕ್ಕೆ ಹೋಗಿ ಎಸ್ಟೇಟ್ ಮ್ಯಾನೇಜರ್‍ನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಎಸ್ಟೇಟ್ ಮ್ಯಾನೇಜರ್ ಹಸುಗಳು ಎಸ್ಟೇಟ್‍ನ ಒಳಗೆ ಸಾವನ್ನಪ್ಪಿದ್ದವು. ನಾವೇ ಗುಂಡಿಗೆ ಹಾಕಿದ್ದೇವೆಂದು ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಲಾಗಿದೆ. ಯಾವಾಗ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಜೋರು ಮಾಡಿದರೋ ಆಗ ‘ನಾನು ಇಲ್ಲಿಯವನೇ, ನನ್ನನ್ನು ಹೆದರಿಸೋದು ಬೇಡ ಅಂತ’ ಧಮ್ಕಿ ಹಾಕಿದ್ದಾನೆ. ಇದರಿಂದ ಸಿಟ್ಟಿಗೆದ್ದ ಜನರು ಮ್ಯಾನೇಜರ್ ವಿರುದ್ಧ ತೀವ್ರ ಗಲಾಟೆ ಮಾಡಿದ್ದಾರೆ. ಗಲಾಟೆ ತೀವ್ರಗೊಳ್ಳುತ್ತಿದ್ದಂತೆ ಸೋಮವಾರಪೇಟೆ ಪೊಲೀಸರು ಸ್ಥಳಕ್ಕೆ ಹೋಗಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

    ಸದ್ಯ ಎಸ್ಟೇಟ್ ಮ್ಯಾನೇಜರ್ ಮತ್ತು ಸಿಬ್ಬಂದಿ ವಿರುದ್ಧ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಮುಗ್ದ ಗೋವುಗಳಿಗೆ ವಿಷವಿಟ್ಟ ಕುರಿತು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ವಿದ್ಯುತ್ ಶಾಕ್- ಹಸುವಿನ ಪ್ರಾಣ ರಕ್ಷಿಸಲು ಹೋಗಿ ಬಾಲಕ ಸಾವು

    ವಿದ್ಯುತ್ ಶಾಕ್- ಹಸುವಿನ ಪ್ರಾಣ ರಕ್ಷಿಸಲು ಹೋಗಿ ಬಾಲಕ ಸಾವು

    ಕಲಬುರಗಿ: ವಿದ್ಯುತ್ ಶಾಕ್ ತಗುಲಿದ್ದ ಹಸುವಿನ ಪ್ರಾಣ ರಕ್ಷಿಸಲು ಹೋಗಿ ಬಾಲಕ ಬಲಿಯಾಗಿರುವ ಆಘಾತಕಾರಿ ಘಟನೆ ಕಲಬುರಗಿಯಲ್ಲಿ ನಡೆದಿದೆ.

    ಜಿಲ್ಲೆಯ ಶಹಬಾದ್ ತಾಲೂಕಿನ ಶಂಕರವಾಡಿ ಗ್ರಾಮದ ಬಳಿ ಘಟನೆ ನಡೆದಿದ್ದು, ಬೀರಣ್ಣ (15) ಮೃತ ಬಾಲಕ, ಹಸು ಮೇಯಿಸಲು ಕಾರ್ಖಾನೆ ಕಾಂಪೌಂಡ್ ಬಳಿ ತೆರಳಿದ್ದ. ಈ ವೇಳೆ ಕಾಂಪೌಂಡ್ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಹಸು ತುಳಿದಿದೆ. ಇದನ್ನು ಕಂಡ ಬಾಲಕ, ತಕ್ಷಣ ಹಸುವನ್ನು ರಕ್ಷಿಸಲು ಹೋಗಿದ್ದಾನೆ. ಆಗ ಬಾಲಕನಿಗೂ ವಿದ್ಯುತ್ ಶಾಕ್ ತಗುಲಿದೆ. ದುರಾದೃಷ್ಟವಶಾತ್ 15 ವರ್ಷದ ಬಾಲಕ ಮತ್ತು ಹಸು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಘಟನೆ ಬಳಿಕ ಸ್ಥಳಕ್ಕೆ ಜೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಈ ಕುರಿತು ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಟುಂಬಸ್ಥರು ಹಾಗೂ ಸ್ಥಳೀಯರು ಜೆಸ್ಕಾಂ ನಿರ್ಲಕ್ಷ್ಯದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಬೆಳೆ ಹಾಳು ಮಾಡ್ತೀವೆ ಎಂದು ನೀರಿಗೆ ವಿಷ ಬೆರೆಸಿ 12ಕ್ಕೂ ಹೆಚ್ಚು ಹಸು ಕೊಂದರು!

    ಬೆಳೆ ಹಾಳು ಮಾಡ್ತೀವೆ ಎಂದು ನೀರಿಗೆ ವಿಷ ಬೆರೆಸಿ 12ಕ್ಕೂ ಹೆಚ್ಚು ಹಸು ಕೊಂದರು!

    ಚಾಮರಾಜನಗರ: ಬೆಳೆ ಹಾಳುಮಾಡುತ್ತವೆ ಎಂದು ನೀರಿಗೆ ವಿಷ ಬೆರೆಸಿ 12ಕ್ಕೂ ಹೆಚ್ಚು ಹಸುಗಳನ್ನು ಕೊಂದಿರುವ ಅಮಾನವೀಯ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೋಕಿನ ಹುತ್ತೂರು ಗ್ರಾಮದಲ್ಲಿ ನಡೆದಿದೆ.

    ವಿಷ ಬೆರೆಸಿದ ನೀರು ಕುಡಿದ ಪರಿಣಾಮ 50ಕ್ಕೂ ಹೆಚ್ಚು ಹಸುಗಳ ಸ್ಥಿತಿ ಚಿಂತಾಜನಕವಾಗಿದೆ. ಹುತ್ತೂರಿನ ಸುತ್ತಮುತ್ತ ಇರುವ ತೋಟಗಳಿಗೆ ಹಸುಗಳು ನುಗ್ಗಿ ಬೆಳೆ ಮೇಯ್ದು ಹಾಳು ಮಾಡುತ್ತವೆ ಎಂದು ಹಸುಗಳನ್ನೇ ಕೊಲ್ಲಲು ಕೆಲವು ತೋಟದ ಮಾಲೀಕರು ಯೋಚಿಸಿ ಗ್ರಾಮದ ಹೊರವಲಯದಲ್ಲಿನ ಹಳ್ಳವೊಂದರಲ್ಲಿ ನಿಂತಿದ್ದ ನೀರಿಗೆ ವಿಷ ಬೆರೆಸಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

    ಬಯಲಿನಲ್ಲಿ ಮೇಯಲು ಹೋಗಿದ್ದ ಹಸುಗಳು ಎಂದಿನಂತೆ ಸಂಜೆ ಗ್ರಾಮಕ್ಕೆ ವಾಪಸ್ ಆಗುವ ಸಮಯದಲ್ಲಿ ಹಳ್ಳದಲ್ಲಿನ ನೀರು ಕುಡಿದಿವೆ. ನಂತರ ಮನೆಗಳಿಗೆ ಬರುವಷ್ಟರಲ್ಲಿ ದಾರಿ ನಡುವೆಯೇ 12ಕ್ಕೂ ಹೆಚ್ಚು ಹಸುಗಳು ಕುಸಿದು ಬಿದ್ದು ಸಾವನ್ನಪ್ಪಿವೆ. ಮತ್ತಷ್ಟು ಹಸುಗಳು ಅಸ್ವಸ್ಥಗೊಂಡಿವೆ. ಕೂಡಲೇ ಗ್ರಾಮಸ್ಥರು ಒಡೆಯರಪಾಳ್ಯದ ಪಶುವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ್ದ ವೈದ್ಯರು ಅಸ್ವಸ್ಥಗೊಂಡಿರುವ ಹಸುಗಳಿಗೆ ಚಿಕಿತ್ಸೆ ನೀಡಿದ್ದಾರೆ. ಆದರೆ ಚಿಕಿತ್ಸೆ ಬಳಿಕವೂ ಬಹುತೇಕ ಹಸುಗಳು ಬದುಕುಳಿಯುವುದು ಕಷ್ಟ ಎನ್ನಲಾಗಿದೆ.

  • ವಿದ್ಯುತ್ ತಂತಿ ಹರಿದು ಬೆಂಕಿ- ಕೊಟ್ಟಿಗೆಯಲ್ಲಿದ್ದ ಏಳು ಜಾನುವಾರು ಸಜೀವ ದಹನ

    ವಿದ್ಯುತ್ ತಂತಿ ಹರಿದು ಬೆಂಕಿ- ಕೊಟ್ಟಿಗೆಯಲ್ಲಿದ್ದ ಏಳು ಜಾನುವಾರು ಸಜೀವ ದಹನ

    ಹಾವೇರಿ: ವಿದ್ಯುತ್ ತಂತಿ ಹರಿದು ಬಿದ್ದಿದರಿಂದ ದನದ ಕೊಟ್ಟಿಗೆಗೆ ಬೆಂಕಿ ತಗುಲಿ ಎತ್ತು, ಎಮ್ಮೆ, ಆಕಳುಗಳು ಸಜೀವ ದಹನವಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

    ಜಿಲ್ಲೆಯ ಹಾನಗಲ್ ತಾಲೂಕಿನ ನಿಸ್ಸೀಮ ಆಲದಕಟ್ಟಿ ಗ್ರಾಮದಲ್ಲಿ ಘಟನೆ ನಡೆದಿದ್ದು, ರೈತ ಫಕ್ಕೀರಪ್ಪ ಜಾನುಗುಂಡಿ ಅವರಿಗೆ ಸೇರಿದ ದನದ ಕೊಟ್ಟಿಗೆಯಲ್ಲಿ ಈ ದುರ್ಘಟನೆ ನಡೆದಿದೆ. ದನದ ಕೊಟ್ಟಿಗೆಯಲ್ಲಿದ್ದ ಎರಡು ಎತ್ತು, ಎರಡು ಎಮ್ಮೆ, ಒಂದು ಆಕಳು ಹಾಗೂ ಎರಡು ಕರುಗಳು ಸಜೀವ ದಹನವಾಗಿವೆ.

    ದನದ ಕೊಟ್ಟಿಗೆ ಊರಿನಿಂದ ದೂರ ಇದ್ದು, ಮಾಲೀಕರು ಊರಿನ ಮನೆಯಲ್ಲಿದ್ದಾಗ ಘಟನೆ ಸಂಭವಿಸಿದೆ. ನಿರ್ಜನ ಪ್ರದೇಶವಾಗಿದ್ದರಿಂದ ಬೆಂಕಿ ನಿಯಂತ್ರಿಸುವಲ್ಲಿ ತಡವಾಗಿದೆ. ಕೊಟ್ಟಿಗೆಯಲ್ಲಿ ವಿದ್ಯುತ್ ತಂತಿ ಹರಿದು ಬಿದ್ದಿದ್ದಿದ್ದು, ಬೆಂಕಿ ಹೊತ್ತಿಕೊಂಡು ಅನಾಹುತ ಸಂಭವಿಸಿದೆ. ಎತ್ತು, ಎಮ್ಮೆ, ಆಕಳು ಸಾವನ್ನಪ್ಪಿರುವುದರಿಂದ ರೈತ ಪಕ್ಕೀರಪ್ಪ ಅವರಿಗೆ ಎರಡು ಲಕ್ಷಕ್ಕೂ ಅಧಿಕ ರೂಪಾಯಿ ಹಾನಿಯಾಗಿದೆ. ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಶಿವಮೊಗ್ಗದಲ್ಲಿ ‘ಗೋವಿಗಾಗಿ ಮೇವು’ ಆಂದೋಲನಾ ಶುರು

    ಶಿವಮೊಗ್ಗದಲ್ಲಿ ‘ಗೋವಿಗಾಗಿ ಮೇವು’ ಆಂದೋಲನಾ ಶುರು

    ಶಿವಮೊಗ್ಗ: ಹಳ್ಳಿಗಳಲ್ಲಿ ಈ ಹಿಂದೆ ಗೋಮಾಳಗಳಿರುತ್ತಿದ್ದವು. ಗೋವುಗಳು ಅಲ್ಲಿ ಮೇಯ್ದು ತನ್ನ ಹಸಿವು ನೀಗಿಸಿಕೊಳ್ಳುತ್ತಿದ್ದವು. ಆದರೀಗ ಗೋಮಾಳಗಳೆಲ್ಲಾ, ಜಮೀನುಗಳಾಗಿ ಪರಿವರ್ತನೆ ಹೊಂದಿವೆ. ಜೊತೆಗೆ ನಗರ ಪ್ರದೇಶಗಳು ನಗರೀಕರಣದಿಂದಾಗಿ ಸುತ್ತಮುತ್ತಲೂ ಕೂಡ ದನ, ಕರುಗಳಿಗೆ ಮೇವಿಲ್ಲದಂತೆ ಆಗಿದೆ. ಹೀಗಾಗಿ ಗೋ ಮಾತೆಗೆ ಮೇವು ಇಲ್ಲವಾಗಿದೆ. ಇದನ್ನರಿತ ಸ್ಥಳೀಯ ಸಂಘ ಸಂಸ್ಥೆಗಳು ವಿನೂತನ ಯೋಜನೆ ಜಾರಿಗೊಳಿಸಲು ಹೊರಟಿದ್ದಾರೆ.

    ಹೌದು. ಶಿವಮೊಗ್ಗದಲ್ಲಿ ನಮ್ಮ ಕನಸಿನ ಶಿವಮೊಗ್ಗ, ಶ್ರೀಗಂಧ, ವಿಶ್ವ ಹಿಂದೂ ಪರಿಷತ್ತು, ಗೋ ರಕ್ಷಣಾ ವೇದಿಕೆಯ ಸದಸ್ಯರು ಈ ವಿನೂತನ ಕಾರ್ಯಯೋಜನೆ ಹಮ್ಮಿಕೊಂಡಿದ್ದು, ವಿಭಿನ್ನವಾದ ಆಂದೋಲನ ಆರಂಭಿಸಿದ್ದಾರೆ. ಅದುವೇ ‘ಗೋವಿಗಾಗಿ ಮೇವು’ ಎಂಬ ವಿನೂತನ ಕಾರ್ಯಕ್ರಮ. ಈ ವಿನೂತನ ಕಾರ್ಯಕ್ರಮಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಚಾಲನೆ ನೀಡಿದ್ದಾರೆ. ತಾವೇ ಸ್ವತಃ ಟ್ರ್ಯಾಕ್ಟರ್ ಚಾಲನೆ ಮಾಡಿ ಮತ್ತು ಮೇವಿನ ಬೀಜ ಎರಚುವುದರ ಮೂಲಕ, ಗೋವಿಗಾಗಿ ಮೇವು ಯೋಜನೆಗೆ ಚಾಲನೆ ನೀಡಿದರು.

    ನಗರದ ಹಾಗೂ ಅಕ್ಕಪಕ್ಕದ ಊರುಗಳಲ್ಲಿ ಖಾಲಿ ಜಾಗ ಮತ್ತು ಜಮೀನುಗಳು ಇದ್ದರೆ ಇಂತಹ ಸ್ಥಳಗಳಲ್ಲಿ ಜಾನುವಾರುಗಳಿಗೆ ಬೇಕಾಗುವ ಮೇವು ಬೆಳೆಸಲು ಈ ಸಂಘ-ಸಂಸ್ಥೆಗಳ ಸದಸ್ಯರು ಮುಂದಾಗಿದೆ. ನಿವೇಶನ ಅಥವಾ ಖಾಲಿ ಜಾಗದಲ್ಲಿ ಕಸವನ್ನು ಸುರಿಯುವ ಬದಲಾಗಿ ಗೋವಿಗಾಗಿ ಮೇವು ಬೆಳೆಯಲು ಪ್ರೋತ್ಸಾಹಿಸುತ್ತಿದ್ದಾರೆ. ಇದರಿಂದ ಸೈಟ್ ಅಥವಾ ಜಮೀನು ಮಾಲೀಕರಿಗೆ ಯಾವುದೇ ಖರ್ಚು ಬರುವುದಿಲ್ಲ. ಅಲ್ಲದೇ 2-3 ತಿಂಗಳಿಗೊಮ್ಮೆ ಮೇವು ಕಟಾವಿಗೆ ಬರುತ್ತದೆ. ಈ ವೇಳೆ ಗೋ ಸಂರಕ್ಷಣಾ ವೇದಿಕೆ ಸ್ವಯಂ ಸೇವಕರು ಬಂದು ಈ ಮೇವನ್ನು ಕಟಾವು ಮಾಡಿ ವಿತರಿಸುವ ಕೆಲಸ ಮಾಡುವು ಯೋಜನೆ ಹೊಂದಲಾಗಿದೆ.

    ಈಗಾಗಲೇ ಮಳೆಗಾಲ ಆರಂಭವಾಗುತ್ತಿದ್ದು, ಮೇವು ಬೆಳೆಯಲು ನೀರು ಹಾಕುವ ಅವಶ್ಯಕತೆ ಕೂಡ ಇರುವುದಿಲ್ಲ. ಕೇವಲ ಎರಡು ಮೂರು ತಿಂಗಳಲ್ಲಿ ಮೇವು ಕಟಾವಿಗೆ ಬರುತ್ತದೆ. ಅದನ್ನು ಈ ಯೋಜನೆಯ ಸ್ವಯಂ ಸೇವಕರು ಕಟಾವು ಮಾಡಿಕೊಂಡು ಸಂಬಂಧಿಸಿದ ಗೋ ಶಾಲೆಗಳಿಗೆ ಆಯಾ ಜಾಗದ ಮಾಲೀಕರ ಹೆಸರಿನಲ್ಲಿ ತಲುಪಿಸುತ್ತಾರೆ. ಇದರಿಂದ ಗೋ ಪೂಜೆ ಮಾಡಿದ ಪುಣ್ಯ ಸಿಗುತ್ತದೆ ಎಂಬುದು ಈ ವಿನೂತನ ಯೋಜನೆಗೆ ಪ್ಲಾನ್ ಮಾಡಿದ ಸದಸ್ಯರದ್ದಾಗಿದೆ.

    ಅಲ್ಲದೇ ಶಿವಮೊಗ್ಗ ನಗರದಲ್ಲಿ ಸುಮಾರು 4 ಗೋ ಶಾಲೆಗಳಿದ್ದು ಇದರ ಜೊತೆಗೆ ಬೀಡಾಡಿ ದನಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಇವೆ. ಸುಮಾರು ಒಂದೂವರೆ ಸಾವಿರಕ್ಕಿಂತಲೂ ಹೆಚ್ಚು ಗೋವುಗಳಿಗೆ ಮೇವು ಈ ವಿನೂತನ ಯೋಜನೆ ಮೂಲಕ ಸಿಕ್ಕಂತಾಗುತ್ತದೆ. ಅದರಂತೆ ಈಗಾಗಲೇ ಪ್ರಾಯೋಗಿಕವಾಗಿ ಹತ್ತು ಎಕರೆ ವಿವಿಧ ಜಾಗಗಳಲ್ಲಿ ಮೇವು ಬೆಳೆಸುವ ಯೋಜನೆ ಹೊಂದಿದ್ದು, ಈಗಾಗಲೇ 5 ಏಕರೆ ಜಾಗ ಈ ಯೋಜನೆಗಾಗಿ ಲಭಿಸಿದೆ.

    ಒಟ್ಟಾರೆ ಗೋವುಗಳು ನಮ್ಮ ಜೀವನಾಡಿಗಳಾಗಿದ್ದು ಅವುಗಳನ್ನು ಪೂಜ್ಯತೆಯಿಂದ ಕಾಣುತ್ತೇವೆ. ಈಗ ಗೋವುಗಳಿಗಾಗಿ ಮೇವಿನ ತೊಂದರೆಯಾಗಬಾರದು ಎಂದು ಇರುವ ಗೋ ಶಾಲೆಗಳ ಗೋವುಗಳಿಗಾಗಿ, ಮತ್ತು ಬೀಡಾಡಿ ಹಸುಗಳಿಗಾಗಿ ಮೇವಿನ ಆಂದೋಲನ ಆರಂಭಿಸಲಾಗಿದೆ. ಏನೇ ಆಗಲಿ ಪಶುಸಂಗೋಪನೆ ಇಲಾಖೆ ಹಾಗೂ ಪಶು ವೈದ್ಯಕೀಯ ಮಹಾವಿದ್ಯಾಲಯದ ಸಹಕಾರದೊಂದಿಗೆ ಆರಂಭಿಸಲಾಗಿರುವ ರಾಜ್ಯದಲ್ಲಿಯೇ ವಿನೂತನ ಯೋಜನೆ ಇದಾಗಿದೆ. ಗೋವಿಗಾಗಿ ಮೇವು ಚಿಂತನೆಗೆ ಆಸಕ್ತ ನಾಗರೀಕರು ಉದಾರವಾಗಿ ತಮ್ಮ ಖಾಲಿ ಇರುವ ನಿವೇಶದಲ್ಲಿ ಜಾನುವಾರಗಳಿಗೆ ಮೇವು ಬೆಳೆಸಲು ಅನುವು ಮಾಡಿಕೊಡಬಹುದಾಗಿದೆ.