Tag: cow

  • ಚರಂಡಿಗೆ ಬಿದ್ದಿದ್ದ ಹಸು ರಕ್ಷಣೆ – ನಗರಸಭೆ ವಿರುದ್ಧ ಸಾರ್ವಜನಿಕರು ಆಕ್ರೋಶ

    ಚರಂಡಿಗೆ ಬಿದ್ದಿದ್ದ ಹಸು ರಕ್ಷಣೆ – ನಗರಸಭೆ ವಿರುದ್ಧ ಸಾರ್ವಜನಿಕರು ಆಕ್ರೋಶ

    – ಹಸಿರು ಮೇಯಲು ಬಂದಿದ್ದ ಹಸು ಚರಂಡಿಗೆ

    ಮಡಿಕೇರಿ: ನಗರದ ಇಂದಿರಾ ಕ್ಯಾಂಟೀನ್ ಬಳಿಯ ಚರಂಡಿಗೆ ಬಿದ್ದು ಅಪಾಯದಲ್ಲಿ ಸಿಲುಕಿದ್ದ ಹಸುವನ್ನು ಸಾರ್ವಜನಿಕರು ರಕ್ಷಣೆ ಮಾಡಿ ಮಾನವೀಯತೆ ತೋರಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

    ಕಳೆದ ಕೆಲವು ದಿನಗಳ ಹಿಂದೆ ಹೊಸದಾಗಿ ಚರಂಡಿ ನಿರ್ಮಿಸಲಾಗಿತ್ತು. ಆದರೆ ಅದರ ಮೇಲೆ ಸ್ಲ್ಯಾಬ್ ನಿರ್ಮಿಸದೇ ಬಿಟ್ಟಿದ್ದರ ಪರಿಣಾಮವಾಗಿ ಪಕ್ಕದಲ್ಲಿದ್ದ ಹಸಿರು ಮೇಯಲು ಬಂದಿದ್ದ ಹಸು ಚರಂಡಿಗೆ ಬಿದ್ದಿತ್ತು. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿತ್ತು. ಗಮನಿಸಿದ ಸ್ಥಳೀಯ ಆಟೋ ಚಾಲಕರು ಹಾಗೂ ಪತ್ರಕರ್ತರು ಸುಮಾರು ಅರ್ಧ ಗಂಟೆ ಸಾಹಸ ಮಾಡಿ, ಹಸುವನ್ನು ಮೇಲಕ್ಕೆ ಎತ್ತಿದ್ದಾರೆ.

    ರಾಷ್ಟ್ರಪತಿಯವರು ಬರುವ ಸಮಯದಲ್ಲಿ ಅಧಿಕಾರಿಗಳು ಇಲ್ಲಿ ನಿಂತು ತರಾತುರಿಯಲ್ಲಿ ಕೆಲಸ ಮಾಡಿದ್ದರು. ಚರಂಡಿಯ ಮೇಲ್ಭಾಗ ಮುಚ್ಚದಿದ್ದರೆ ರಾತ್ರಿ ಸಮಯದಲ್ಲಿ ಮನುಷ್ಯರು ಕೂಡ ಈ ಚರಂಡಿಯಲ್ಲಿ ಬೀಳುತ್ತಾರೆ. ಅದಕ್ಕಿಂತ ಮುಂಚೆ ಚರಂಡಿಯ ಮೇಲ್ಭಾಗವನ್ನು ಮುಚ್ಚಲು ಕ್ರಮ ಗೊಳ್ಳಬೇಕು. ರಾಷ್ಟ್ರಪತಿ ಬಂದು ಹೋದ ನಂತರ ಯಾರೂ ಈ ಕೂಡ ತಿರುಗಿ ನೋಡಲಿಲ್ಲ. ಕಾಮಗಾರಿಯನ್ನು ವ್ಯವಸ್ಥಿತವಾಗಿ ಮಾಡದಿದ್ದರೆ, ಈ ರೀತಿಯ ಅನಾಹುತಗಳು ಸಂಭವಿಸುತ್ತಲೇ ಇರುತ್ತದೆ. ಇನ್ನಾದರೂ ಎಚ್ಚೆತ್ತುಕೊಂಡು ಚರಂಡಿಯ ಮೇಲ್ಭಾಗ ತಕ್ಷಣವೇ ಮುಚ್ಚಬೇಕು ಎಂದು ಸಾರ್ವಜನಿಕರು ಒತ್ತಾಯಿಸಿಸುತ್ತಿದ್ದಾರೆ.

  • ಐದು ಹಸುಗಳ ಕಳ್ಳತನ – ಮಾಲೀಕ ಕಂಗಾಲು

    ಐದು ಹಸುಗಳ ಕಳ್ಳತನ – ಮಾಲೀಕ ಕಂಗಾಲು

    ಹಾಸನ: ಒಂದು ದಿನದ ಅಂತರದಲ್ಲಿ ಐದು ಸಿಂಧಿ ಹಸುಗಳನ್ನು ಕಳ್ಳತನ ಮಾಡಿರುವ ಘಟನೆ ಹಾಸನದ ವಿದ್ಯಾನಗರದಲ್ಲಿ ನಡೆದಿದೆ.

    ಪುನೀತ್ ಅವರು ಸಿಂಧಿ ಹಸುಗಳನ್ನು ಸಾಕಿಕೊಂಡು ಹಾಲು ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಹಸುಗಳನ್ನು ಮನೆಯ ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ಕಟ್ಟುತ್ತಿದ್ದರು. ಶನಿವಾರ ಕೆಲಸದ ನಿಮಿತ್ತ ಬೆಂಗಳೂರಿಗೆ ಪುನೀತ್ ತೆರಳಿದ್ದರು. ಅಂದು ಸಂಜೆ ಪುನೀತ್ ತಾಯಿ ಹಾಲು ಕರೆದು ಎಲ್ಲಾ ಹಸುಗಳನ್ನು ಕಟ್ಟದೇ ಖಾಲಿ ನಿವೇಶನದಲ್ಲಿ ಕೂಡಿ ಹಾಕಿದ್ದರು.

    ಬೆಳಿಗ್ಗೆ ಆಗುವುದರೊಳಗೆ ಮೂರು ಹಸುಗಳು ಕಾಣಿಯಾಗಿದ್ದವು. ನಂತರ ಎಲ್ಲೆಡೆ ಹುಡುಕಿದರೂ ಹಸುಗಳು ಪತ್ತೆಯಾಗಿಲ್ಲ. ಭಾನುವಾರ ರಾತ್ರಿ ಮತ್ತೆ ಎರಡು ಹಸುಗಳು ಕಾಣಿಯಾಗಿದ್ದು, ಹಸುಗಳನ್ನು ಕಳ್ಳತನ ಮಾಡಿರುವುದು ತಿಳಿದಿದೆ. ನಂತರ ಕೆ.ಆರ್.ಪುರಂ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪುನೀತ್ ಮನೆ ಸಮೀಪವಿರುವ ಸಿಸಿಟಿವಿಗಳನ್ನು ಪರಿಶೀಲಿಸುತ್ತಿದ್ದಾರೆ. ಮೂರು ಲಕ್ಷ ಬೆಲೆಬಾಳುವ ಸಿಂಧಿ ಹಸುಗಳನ್ನು ಕಳೆದುಕೊಂಡು ಪುನೀತ್ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.

  • 2.61 ಕೋಟಿ ರೂಪಾಯಿಗೆ ಮಾರಾಟವಾದ ಹಸು

    2.61 ಕೋಟಿ ರೂಪಾಯಿಗೆ ಮಾರಾಟವಾದ ಹಸು

    -ಹಸು ಮಾರಾಟ ಬೆಲೆಯಲ್ಲಿ ವಿಶ್ವ ದಾಖಲೆ

    ಲಂಡನ್: ಹರಾಜಿನಲ್ಲಿ ಹಸು ಬರೋಬ್ಬರಿ 2.61 ಕೋಟಿ ರೂಪಾಯಿಗೆ ಮಾರಾಟವಾಗುವ ಮೂಲಕವಾಗಿ ಅತೀ ಹೆಚ್ಚು ಬೆಲೆಗೆ ಮಾರಾಟವಾಗಿರುವ ಹಸು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಮಧ್ಯ ಇಂಗ್ಲೇಂಡ್‍ನಲ್ಲಿ ಹಸು ಹರಾಜು ಪ್ರಕ್ರಿಯೆ ನಡೆದಿತ್ತು. ಈ ವೇಳೆ ಹಸು 2,62,000 ಪೌಂಡ್ಸ್‍ಗೆ ಹರಾಜಾಗಿದೆ. ಭಾರತದಲ್ಲಿ ಸುಮಾರು 2.61 ಕೋಟಿ ಆಗುತ್ತದೆ. ನಾಲ್ಕು ತಿಂಗಳ ಫೋಶ್ ಸ್ಪೈಸ್ ತಳಿಯ ಈ ಹಸು ಮಾರಾಟ ಬೆಲೆಯಲ್ಲಿ ವಿಶ್ವದಾಖಲೆಯನ್ನು ಮುರಿದಿದೆ ಎಂದು ಹೇಳಿದರೆ ತಪ್ಪಾಗಲಾರದು. 2014 ರಲ್ಲಿ ಇದೇ ತಳಿಯ ಹಸು ಮಾರಾಟವಾಗಿತ್ತು. ಆದರೆ ಈ ಬಾರಿ ದುಪ್ಪಟ್ಟು ಬೆಲೆಗೆ ಹಸು ಮಾರಾಟವಾಗಿದೆ.

    ನಾನು ಕ್ರಿಸ್ಟೀನ್ ವಿಲಿಯಮ್ಸ್ ಹೈನುಗಾರಿಕೆ ನನ್ನ ಕಸುಬು. ನಮ್ಮ ತಂದೆ ಈ ತಳಿಯ ಹಸುವನ್ನು ಸಾಕಿದ್ದರು. ತಂದೆ ನಿಧನರಾದ ಬಳಿಕ ಕ್ರೀಸ್ಟೀನ್ ಹಸು ಸಾಕಾಣಿಕೆಯನ್ನು ಮುಂದುವರಿಸಿದ್ದೇನೆ. ಆದರೆ ನಮ್ಮ ಹಸು ಇಷ್ಟೊಂದು ದುಬಾರಿ ಬೆಲೆಗೆ ಮಾರಾಟವಾಗುತ್ತದೆ ಎಂದು ನಾವು ಊಹಿಸಿರಲಿಲ್ಲ. ನಮಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.

  • ನಾಡ ಬಾಂಬ್ ಸಿಡಿದು ಗರ್ಭಿಣಿ ಹಸು ಸಾವು- ನರಳಾಡಿ ಪ್ರಾಣ ಬಿಟ್ಟ ಕಾಮಧೇನು

    ನಾಡ ಬಾಂಬ್ ಸಿಡಿದು ಗರ್ಭಿಣಿ ಹಸು ಸಾವು- ನರಳಾಡಿ ಪ್ರಾಣ ಬಿಟ್ಟ ಕಾಮಧೇನು

    ಕೋಲಾರ: ಕಾಡುಹಂದಿಗಳ ಬೇಟೆಗಾಗಿ ಇಟ್ಟಿದ್ದ ನಾಡ ಬಾಂಬ್ ಸಿಡಿದು ಗಾಯಗೊಂಡಿದ್ದ ಗರ್ಭಿಣಿ ಸೀಮೆ ಹಸು ನರಳಾಡಿ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಬಂಗಾರಪೇಟೆ ತಾಲೂಕಿನ ಹೊಸೂರು ಗ್ರಾಮದ ರೈತ ಶ್ರೀನಿವಾಸನ್ ಎಂಬುವರಿಗೆ ಸೇರಿದ ಹಸುವಾಗಿದ್ದು, ಸುಮಾರು 80 ಸಾವಿರ ರೂಪಾಯಿ ಮೌಲ್ಯ ಹೊಂದಿತ್ತು. ಹಸು ಆಹಾರ ಅರಸಿಕೊಂಡು ಪಕ್ಕದಲ್ಲಿದ್ದ ಜಾಗದಲ್ಲಿ ಮೇಯುತ್ತಿದ್ದ ವೇಳೆ ನಾಡ ಬಾಂಬ್ ಸಿಡಿದು ಮೃತಪಟ್ಟಿದೆ.

    ಈ ಭಾಗದಲ್ಲಿ ಕಾಡುಹಂದಿಗಳ ಹಾವಳಿ ಹೆಚ್ಚಾಗಿದ್ದು, ಹಂದಿ ಬೇಟೆಗೆ ಇಟ್ಟಿದ್ದ ಕೇಪ್ ಉಂಡೆ ಸಿಡಿದು ಸೀಮೆಹಸು ಬಾಯಿ ಛಿದ್ರವಾಗಿತ್ತು, ವಿಷ ಮದ್ದಿನ ಉಂಡೆ ಸಿಡಿತದ ರಭಸಕ್ಕೆ ಇನ್ನೇನು 1 ತಿಂಗಳಲ್ಲಿ ಕರುವಿಗೆ ಜನ್ಮ ನೀಡಬೇಕಿದ್ದ ಸೀಮೆಹಸು ನರಳಿ ನರಳಿ ಸಾವನ್ನಪ್ಪಿದೆ. ಕಿಡಗೇಡಿ ಬೇಟೆಗಾರರು ಕಾಡುಹಂದಿಗಾಗಿ ಸ್ಪೋಟಕ ವಸ್ತುಗಳಿಂದ ಮಾಡಿದ್ದ ಈ ಕೃತ್ಯದಿಂದ ಎರಡು ಜೀವ ಬಲಿಯಾಗಿದೆ. ಇನ್ನೂ ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಬಂಗಾರಪೇಟೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಗೋಮೂತ್ರದ ಫಿನಾಯಿಲ್‌ನಿಂದ ಕಚೇರಿ ಸ್ವಚ್ಛಗೊಳಿಸಿ -ಮಧ್ಯಪ್ರದೇಶದಲ್ಲಿ ಆದೇಶ

    ಗೋಮೂತ್ರದ ಫಿನಾಯಿಲ್‌ನಿಂದ ಕಚೇರಿ ಸ್ವಚ್ಛಗೊಳಿಸಿ -ಮಧ್ಯಪ್ರದೇಶದಲ್ಲಿ ಆದೇಶ

    ಭೋಪಾಲ್: ಗೋಮೂತ್ರದ ಫಿನಾಯಿಲ್‌ನಿಂದ ಮಾತ್ರ ಸರ್ಕಾರಿ ಕಚೇರಿಗಳನ್ನು ಸ್ವಚ್ಛಗೊಳಿಸಬೇಕೆಂದು ಮಧ್ಯಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ.

    ಮಧ್ಯಪ್ರದೇಶದ ಜನರಲ್ ಅಡ್‍ಮಿನಿಸ್ಟ್ರೇಶನ್ ಡಿಪಾರ್ಟ್‍ಮೆಂಟ್(ಜಿಎಡಿ)ಹೊರಡಿಸಿರುವ ಆದೇಶದ ಪ್ರಕಾರ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಪ್ರಸ್ತುತ ಬಳಕೆಯಾಗುತ್ತಿರುವ ರಾಸಾಯನಿಕ ಮಿಶ್ರಿತ ಫಿನಾಯಿಲ್‌ ಬದಲು ಗೋಮೂತ್ರದಿಂದ ತಾಯಾರಿಸಿದ ಫಿನಾಯಿಲ್‌ ಬಳಕೆ ಮಾಡಬೇಕೆಂದು ತಿಳಿಸಿದೆ.

    ನವೆಂಬರ್ ನಲ್ಲಿ  ನಡೆದ ಕ್ಯಾಬಿನೆಟ್‍ನಲ್ಲಿ ಹಸುವಿನ ರಕ್ಷಣೆ ಮತ್ತು ಅದರ ಕುರಿತು ಪ್ರಚಾರಕ್ಕಾಗಿ ಈ ನಿರ್ಧಾರ ಮಾಡಲಾಗಿತ್ತು.

    ಪಶುಸಂಗೋಪನಾ ಇಲಾಖೆ ಸಚಿವರಾಗಿರುವ ಪ್ರೇಮ್ ಸಿಂಗ್ ಪಟೇಲ್, ಮಧ್ಯಪ್ರದೇಶದಲ್ಲಿರುವ ಗೋವುಗಳನ್ನು ರಕ್ಷಣೆ ಮಾಡುವ ಉದ್ದೇಶದಿಂದಾಗಿ ಗೋಮೂತ್ರಗಳನ್ನು ಬಾಟಲ್‍ಗಳಲ್ಲಿ ಸಂಗ್ರಹ ಮಾಡಿ ಫ್ಯಾಕ್ಟರಿ ತೆರೆದು ಫಿನಾಯಿಲ್‌ ತಯಾರಿಸುವ ಪ್ರಮುಖ ಗುರಿ ಹೊಂದಿದ್ದೇವೆ ಎಂದು ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಮಧ್ಯಪ್ರದೇಶ ಸರ್ಕಾರ ಕಳೆದ ವರ್ಷ 1,80,000 ಗೋವುಗಳಿಗೆ ಆಹಾರವನ್ನು ಒದಗಿಸುವ ಸಂಬಂಧ 11 ಕೋಟಿ ಸಾವಿರ ರೂ. ಅನುದಾನವನ್ನು ಬಿಡುಗಡೆ ಮಾಡಿದೆ. ಅಲ್ಲದೇ ಪ್ರಥಮ ಹಸು ಅಭಯಾರಣ್ಯವನ್ನು 2017 ರಲ್ಲಿ ಮಧ್ಯಪ್ರದೇಶದ ಆಗರ್ ಮಾಲ್ವಾದಲ್ಲಿ ಸ್ಥಾಪಿಸಿದೆ.

  • ರಾಜ್ಯದಲ್ಲಿ ಸೋಮವಾರದಿಂದ್ಲೇ ಗೋಹತ್ಯೆ ತಡೆ ಕಾಯ್ದೆ ಜಾರಿ

    ರಾಜ್ಯದಲ್ಲಿ ಸೋಮವಾರದಿಂದ್ಲೇ ಗೋಹತ್ಯೆ ತಡೆ ಕಾಯ್ದೆ ಜಾರಿ

    ಬೆಂಗಳೂರು: ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ರಾಜ್ಯದಲ್ಲಿ ಗೋಹತ್ಯೆ ತಡೆ ಕಾಯ್ದೆ ಸೋಮವಾರದಿಂದಲೇ ಜಾರಿಗೆ ಬರಲಿದೆ. ಗೋವುಗಳ ಹತ್ಯೆ ಹಾಗೂ ಅಕ್ರಮ ಸಾಗಾಟ ಸಂಪೂರ್ಣ ನಿಷೇಧವಾಗುತ್ತದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

    ಮಾಧ್ಯಮ ಪ್ರಕಟಣೆ ಹೊರಡಿಸಿರೋ ಸಚಿವರು, ಶೀಘ್ರವೇ ನಿಯಮಾವಳಿಗಳನ್ನು ಬಿಡುಗಡೆ ಮಾಡ್ತೇವೆ. ರೈತರು, ಕೃಷಿ ಉದ್ದೇಶಕ್ಕಾಗಿ ಜಾನುವಾರು ಸಾಗಣೆ ಮಾಡುವವರು ಗೊಂದಲಕ್ಕೀಡಾಗಬಾರದು. ಗೋವುಗಳ ಅಕ್ರಮ ಸಾಗಾಟ ಮತ್ತು ವಧೆ ಬಗ್ಗೆ ಸಾರ್ವಜನಿಕರ ಗಮನಕ್ಕೆ ಬಂದರೆ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆ ಅಥವಾ ಪಶುಪಾಲನಾ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಬೇಕು. ಸಾರ್ವಜನಿಕರು ಉದ್ವೇಗದಲ್ಲಿ ಕಾನೂನು ಕೈಗೆತ್ತಿಕೊಳ್ಳಬಾರದು. ಅಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ವಿಫಲವಾದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.

    ಈ ಮಧ್ಯೆ, ಆರ್‌ಟಿಐ ವ್ಯಾಪಿಗೆ ಬೆಂಗಳೂರು ಟರ್ಫ್ ಕ್ಲಬ್ ಬರುತ್ತೆ ಅಂತ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಬೆಂಗಳೂರು ಟರ್ಫ್ ಕ್ಲಬ್, ಲೇಡಿಸ್ ಕ್ಲಬ್, ಮೈಸೂರು ರೇಸ್ ಕ್ಲಬ್, ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ ಸಂಸ್ಥೆಗಳ ಅರ್ಜಿ ವಜಾಗೊಳಿಸಿದ ಕೋರ್ಟ್, ಸರ್ಕಾರ ರಿಯಾಯಿತಿ ದರದಲ್ಲಿ ಭೂಮಿ ಗುತ್ತಿಗೆ ನೀಡಿದೆ. ಮಾರುಕಟ್ಟೆ ಮೌಲ್ಯಕ್ಕೆ ಹೋಲಿಸಿದರೆ ಕೋಟ್ಯಾಂತರ ರಿಯಾಯಿತಿ ಆಗಿದೆ. ಭೂಮಿ ಗುತ್ತಿಗೆ ಪಡೆದವರು ಜನರಿಗೆ ಉತ್ತರದಾಯಿಯಾಗುತ್ತಾರೆ. ಹೀಗಾಗಿ ಈ ಸಂಸ್ಥೆಗಳು ಸಾರ್ವಜನಿಕ ಪ್ರಾಧಿಕಾರಗಳು. ಆರ್ ಟಿ ಐ ಕಾಯ್ದೆಯಡಿ ಮಾಹಿತಿ ಪಡೆಯಬಹುದು ಎಂದಿದೆ.

  • ಹಬ್ಬ ಮಾಡಿದ್ರೆ ದನಕರುಗಳು ಸಾಯುವ ಭಯ – ಸಂಕ್ರಾಂತಿ ಹಬ್ಬವನ್ನೇ ಮಾಡುತ್ತಿಲ್ಲ ಗ್ರಾಮಸ್ಥರು

    ಹಬ್ಬ ಮಾಡಿದ್ರೆ ದನಕರುಗಳು ಸಾಯುವ ಭಯ – ಸಂಕ್ರಾಂತಿ ಹಬ್ಬವನ್ನೇ ಮಾಡುತ್ತಿಲ್ಲ ಗ್ರಾಮಸ್ಥರು

    ಕೋಲಾರ : ಕೋಲಾರದ ಈ ಊರಲ್ಲಿ ಸಂಕ್ರಾಂತಿ ಅಂದ್ರೆನೆ ಭಯ, ಶೋಕ. ಸಂಕ್ರಾಂತಿ ಬಂತು ಅಂದ್ರೆ ಈ ಹಳ್ಳಿಯ ಜನ ಸೂತಕದ ರೀತಿ ಹಬ್ಬ ಆಚರಣೆ ಮಾಡುತ್ತಾರೆ ಹಾಗೂ ಹಬ್ಬ ಆಚರಿಸಿದರೆ ಊರಿಗೆ ಸಮಸ್ಯೆಯಾಗುತ್ತದೆ. ಜನ ಜಾನುವಾರು ಸಾಯುತ್ತವೆ ಎನ್ನುವ ನಂಬಿಕೆಯಿಂದ ಸಂಕ್ರಾಂತಿ ಹಬ್ಬ ಆಚರಿಸುವುದನ್ನು ಬಿಟ್ಟು ಬಿಟ್ಟಿದ್ದಾರೆ.

    ಇದು ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಆಚರಣೆ ಮಾಡಿಕೊಂಡು ಬಂದಿರುವ ಪದ್ದತಿ ಎನ್ನುತ್ತಾರೆ ಹಿರಿಯರು. ಒಂದು ಸಾವಿರಕ್ಕೂ ಹೆಚ್ಚು ಜನ ಸಂಖ್ಯೆಯಿರುವ ಈ ಗ್ರಾಮದಲ್ಲಿ ಇಂದಿಗೂ ಇಂತಹ ಮೌಢ್ಯಕ್ಕೆ ಜೋತು ಬಿದ್ದಿದ್ದಾರೆ.

    ಇತ್ತೀಚೆಗಂತೂ ಈ ಊರಿನಲ್ಲಿ ವಿದ್ಯಾವಂತರು ಮತ್ತು ಉತ್ತಮ ಸರ್ಕಾರಿ ಹುದ್ದೆಗಳಲ್ಲಿದ್ದಾರೆ. ಈ ಊರಿಗೆ ಕೋಲಾರ ನಗರ ಕೂಗಳತೆ ದೂರದಲ್ಲಿದೆ. ಆದರೆ ಇವರು ಕೂಡಾ ಹಳೆ ಕಾಲದವರಂತೆ ಹಿಂದಿನ ಪದ್ದತಿಯ ಮೂಢನಂಬಿಕೆಯನ್ನು ಈಗಲೂ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಸಂಕ್ರಾಂತಿ ಹಬ್ಬವನ್ನು ಮಾಡಿದರೆ ಊರಿಗೆ ಕೆಟ್ಟದಾಗುತ್ತದೆ ಎಂದು ಹಿಂದಿನವರು ಹೇರಿರುವ ಆಧಾರವಿಲ್ಲದ ನಿಷೇಧವನ್ನು ಇನ್ನೂ ಪಾಲಿಸಿಕೊಂಡು ಬರುತ್ತಿದ್ದಾರೆ. ಇಲ್ಲಿ ಸಂಕ್ರಾಂತಿ ಹಬ್ಬವನ್ನು ಮಾಡುವುದೇ ಇಲ್ಲ, ಸಂಕ್ರಾಂತಿ ಹಬ್ಬ ಬಂತು ಅಂದರೆ ಈ ಗ್ರಾಮಕ್ಕೆ ಗ್ರಾಮವೇ ಭಯದ ವಾತಾವರಣ ಆವರಿಸುತ್ತದೆ.

    ಪಕ್ಕದ ಊರುಗಳಲ್ಲಿ ಸಂಕ್ರಾಂತಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಆದರೆ ಅರಾಭಿಕೊತ್ತನೂರಲ್ಲಿ ಮಾತ್ರ ಇವತ್ತು ಸೂತಕದ ಛಾಯೆಯಲ್ಲಿ ಮುಳಗಿರುತ್ತದೆ. ಈ ಹಿಂದೆ ಹಬ್ಬ ಮಾಡಿದ ವೇಳೆ ದನಕರುಗಳನ್ನ ಓಡಿಸಲಾಯಿತು. ಹೀಗೆ ಓಡಿಸಿದ ಜನ ಜಾನುವಾರು ಯಾರೂ ವಾಪಸ್ ಬಂದಿಲ್ಲ. ಅದಾದ ಬಳಿಕ ಗ್ರಾಮದಲ್ಲಿದ್ದ ಎಲ್ಲಾ ದನ ಕರುಗಳು ಇದಕ್ಕಿದ್ದಂತೆ ಸಾವನ್ನಪ್ಪುತ್ತಿದ್ದವು, ಇದರಿಂದ ಬೆಚ್ಚಿ ಬಿದ್ದ ಜನರು ಇಂದಿಗೂ ಹಬ್ಬವನ್ನ ಶೋಕದ ರೀತಿಯಲ್ಲಿ ಆಚರಣೆ ಮಾಡುತ್ತಾರೆ.

    ಈ ಹಿಂದೆ ಅರಾಭಿಕೊತ್ತನೂರಿಗೆ ದೊಡ್ಡ ಕಾಯಿಲೆಯೊಂದು ವಕ್ಕರಿಸಿ ಊರಲ್ಲಿದ್ದ ದನ-ಕರುಗಳು ಇದ್ದಕ್ಕಿದ್ದಂತೆ ಸಾಯುವುದಕ್ಕೆ ಶುರುವಾಗಿತ್ತು. ಆಗ ದಿಕ್ಕು ತೋಚದಂತಾದ ಊರಿನ ಹಿರಿಯರು ನಡಿಯುತ್ತಿರುವ ಅನಾಹುತವನ್ನು ನಿಲ್ಲಿಸುವಂತೆ ಬಸವಣ್ಣನಲ್ಲಿ ಕೋರಿಕೊಂಡಿದ್ದಾರೆ. ಸಂಕ್ರಾಂತಿ ಹಬ್ಬದಲ್ಲಿ ದನ-ಕರುಗಳಿಗೆ ಮಾಡುವ ಪೂಜೆ ಪುನಸ್ಕಾರವನ್ನು ಬೇರೊಂದು ದಿನ ನಿನಗೆ ಮಾಡುತ್ತೇವೆ ಎಂದು ಪ್ರಾರ್ಥನೆಯನ್ನು ಮಾಡಿಕೊಂಡಿದ್ದಾರೆ. ಆಗ ಹಸುಗಳ ಸಾವು ನಿಲ್ಲಿತು. ಹಾಗಾಗಿ ಸಂಕ್ರಾಂತಿ ಹಬ್ಬವನ್ನು ಊರಲ್ಲಿ ಮಾಡದಿರುವ ಪ್ರತೀತಿಯು ಅಂದಿನಿಂದಲೂ ಜಾರಿಗೆ ಬಂದಿದೆ. ಸಂಕ್ರಾಂತಿ ಅದ ಮೇಲೆ ಒಂದು ದಿನ ಗ್ರಾಮಸ್ಥರು ಊರಲ್ಲಿರುವ ಬಸವಣ್ಣನ ದೇವಸ್ಥಾನಕ್ಕೆ ಹಸುಗಳನ್ನು ಅಲಂಕಾರ ಮಾಡಿಕೊಂಡು ಹೋಗಿ ಪೂಜೆ ಮಾಡಿಕೊಂಡು ಬರುತ್ತಾರೆ.

  • ಮಂಡ್ಯದಲ್ಲಿ ಬಾಲಕನನ್ನು ಕೊಂಬಿನಿಂದ ತಿವಿದು ಕೊಂದ ಹಸು!

    ಮಂಡ್ಯದಲ್ಲಿ ಬಾಲಕನನ್ನು ಕೊಂಬಿನಿಂದ ತಿವಿದು ಕೊಂದ ಹಸು!

    ಮಂಡ್ಯ: ಮನೆಯಲ್ಲಿ ಸಾಕಿ ಸಲಹಿದ್ದ ಹಸುವೊಂದು ಅದೇ ಮನೆಯ ಬಾಲಕನನ್ನು ಕೊಂದ ಘಟನೆಯೊಂದು ಮಂಡ್ಯದಲ್ಲಿ ನಡೆದಿದೆ.

    ಮಾದೇಶ್ (13) ಮೃತ ದುರ್ದೈವಿ ಬಾಲಕ. ಈ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಯತ್ತಂಬಾಡಿ ಗ್ರಾಮದಲ್ಲಿ ನಡೆದಿದೆ.

    ಮಾದೇಶ್ ಎಂದಿನಂತೆ ಸೋಮವಾರ ರಾತ್ರಿ ಹಸುವಿಗೆ ಹುಲ್ಲು ಹಾಕಲು ಹೋಗಿದ್ದನು. ಇದೇ ವೇಳೆ ಹಸು ಬಾಲಕನನ್ನು ತನ್ನ ಕೊಂಬಿನಿಂದ ತಿವಿದು ಗಂಭೀರ ಗಾಯಗೊಳಿಸಿದೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

    ಮನೆಯಲ್ಲಿ ತಾನೇ ಸಾಕಿದ್ದ ಹಸು ಮುಂದೊಂದು ದಿನ ತನ್ನನ್ನೇ ಕೊಲ್ಲಬಹುದು ಎಂದು ಮನೆ ಮಂದಿ ಯೋಚನೆಯನ್ನು ಕೂಡ ಮಾಡಿರಲಿಲ್ಲ. ಇದೀಗ ಹಸುವಿನ ತಿವಿತಕ್ಕೆ ಮನೆ ಮಗ ಬಲಿಯಾಗಿರುವುದು ಇಡೀ ಕುಟುಂಬ ದುಃಖದ ಕಡಲಲ್ಲಿ ತೇಲುವಂತೆ ಮಾಡಿದೆ.

    ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಹೇಳಿಕೆಯಿಂದ ಕೊಡವ ಸಮಾಜಕ್ಕೆ ನೋವಾಗಿದ್ದರೆ ವಿಷಾದಿಸುತ್ತೇನೆ – ಸಿದ್ದರಾಮಯ್ಯ

    ಹೇಳಿಕೆಯಿಂದ ಕೊಡವ ಸಮಾಜಕ್ಕೆ ನೋವಾಗಿದ್ದರೆ ವಿಷಾದಿಸುತ್ತೇನೆ – ಸಿದ್ದರಾಮಯ್ಯ

    ಬೆಂಗಳೂರು: ನನ್ನ ಹೇಳಿಕೆಯಿಂದ ಕೊಡವ ಸಮಾಜಕ್ಕೆ ನೋವಾಗಿದ್ದರೆ ನಾನು ವಿಷಾದಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದಾರಮಯ್ಯ ಹೇಳಿದ್ದಾರೆ.

    ಕೊಡವರೂ ಬೀಫ್‌ ತಿನ್ನುತ್ತಾರೆ ಎಂಬ ನನ್ನ ಹೇಳಿಕೆ ತಪ್ಪುಗ್ರಹಿಕೆಯಿಂದ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದರಿಂದ ಕೊಡವ ಸಮುದಾಯಕ್ಕೆ ನೋವಾಗಿದ್ದರೆ ಈ ಬಗ್ಗೆ ನಾನು ವಿಷಾದಿಸುತ್ತೇನೆ. ನನ್ನ ನೆರೆಯ ಜಿಲ್ಲೆಯಾದ ಕೊಡಗಿನ ಸಂಸ್ಕೃತಿ ಬಗ್ಗೆ ನನಗೆ ಅರಿವಿದೆ. ವಿಶೇಷವಾದ ಗೌರವವೂ ಇದೆ ಎಂದು ಟ್ವೀಟ್‌ ಮಾಡಿದ್ದಾರೆ.

    ಸಿದ್ದರಾಮಯ್ಯ ಹೇಳಿದ್ದು ಏನು?
    ತಮ್ಮ ಮೈಸೂರಿನ ಭಾಷಣದಲ್ಲಿ ಬಿಜೆಪಿ ಸರ್ಕಾರದ ಗೋಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ಮಾತನಾಡುತ್ತಾ, ಸಿದ್ದರಾಮಯ್ಯ ಗೋಹತ್ಯೆ ಪರವಾಗಿದ್ದಾರೆ ಎಂದು ಹೇಳುತ್ತಿದ್ದಾರೆ. ಬೀಫ್ ಅನ್ನು‌ ಮುಸ್ಲಿಮರು ಮಾತ್ರ ತಿನ್ನುತ್ತಾರಾ? ಕ್ರೈಸ್ತರು ತಿನ್ನುತ್ತಾರೆ, ದಲಿತರು ತಿನ್ನುತ್ತಾರೆ. ಕೊಡವರು ತಿನ್ನುತ್ತಾರೆ. ಬೇರೆ ಬೇರೆ ಕಡೆ ತಿನ್ನುತ್ತಾರೆ. ಹಿಂದುಳಿದವರು ತಿನ್ನುತ್ತಾರೆ. ನನಗೆ ತಿನ್ನಬೇಕು ಅಂತ ಅನಿಸಿದ್ರೆ ನಾನು ಯಾವುದು ಬೇಕಾದರೂ ತಿನ್ನುತ್ತೇನೆ. ಅದನ್ನು ಪ್ರಶ್ನೆ ಮಾಡಲು ನೀನು ಯಾರು ಅಂತ ನಾನು ಈ ಹಿಂದೆ ಸದನದಲ್ಲಿ ಪ್ರಶ್ನೆ ಮಾಡಿದ್ದೆ. ನನಗೆ ಯಾವುದು ಇಷ್ಟ ಆಗುತ್ತದೋ ಅದನ್ನು ತಿನ್ನುತ್ತೇನೆ ಎಂದು ಹೇಳಿದ್ದರು.

    ಅರ್ಥ ಕಲ್ಪಿಸಬೇಡಿ:
    ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನ ಸೋಲಿಗೆ ಅಲ್ಲಿನ ಕೆಲವು ಸ್ಥಳೀಯ ಕಾಂಗ್ರೆಸ್ ನಾಯಕರು ಕಾರಣ ಎಂದು ಹೇಳಿದ್ದೇನೆಯೇ ಹೊರತು ರಾಜ್ಯ ಮಟ್ಟದ ನಾಯಕರೆಂದು ಹೇಳಿಲ್ಲ. ವಿಪರೀತಾರ್ಥ ಕಲ್ಪಿಸುವುದು ಬೇಡ. ಕಾಂಗ್ರೆಸ್ ಪಕ್ಷ ರೈತರ ಹೋರಾಟಗಳಿಗೆ ಬೆಂಬಲ ನೀಡುವ ಜೊತೆಗೆ ರೈತ ವಿರೋಧಿ ಕಾಯ್ದೆಗಳ ವಿರುದ್ಧ ಹೋರಾಟ ಮಾಡಲಿದೆ. ದೇಶದ ಕೃಷಿ ವ್ಯವಸ್ಥೆಗೆ ಮಾರಕವಾದ ಕಾಯ್ದೆಗಳ ಜಾರಿಗೆ ನಮ್ಮ ಪ್ರಬಲ ವಿರೋಧವಿದೆ ಎಂದು ಟ್ವೀಟ್‌ ಮಾಡಿದ್ದಾರೆ.

  • ನಳಿನ್ ಕುಮಾರ್ ಕಟೀಲ್ ಬೆರಳು ಕಚ್ಚಿದ ಕೃಷ್ಣಮಠದ ಗೋವು

    ನಳಿನ್ ಕುಮಾರ್ ಕಟೀಲ್ ಬೆರಳು ಕಚ್ಚಿದ ಕೃಷ್ಣಮಠದ ಗೋವು

    ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೋವು ಪೂಜೆ ನಡೆಸುವ ಮೂಲಕ ಗ್ರಾಮ ಸ್ವರಾಜ್ ಸಮಾವೇಶಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಹಸುವೊಂದು ನಳಿನ್ ಕುಮಾರ್ ಕಟೀಲ್ ಕೈಗೆ ಕಚ್ಚಿದೆ.

    ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪ್ರಚಾರ ಸಭೆಗಳನ್ನು ಆರಂಭಿಸಿದೆ. 31 ಜಿಲ್ಲೆಗಳಲ್ಲಿ 62 ಸಮಾವೇಶಗಳನ್ನು ನಡೆಸಲು ಪಕ್ಷ ನಿರ್ಧರಿಸಿದೆ. ಉಡುಪಿ ಕೃಷ್ಣಮಠದಲ್ಲಿ ಗೋವು ಪೂಜೆ ನಡೆಸುವ ಮೂಲಕ ಗ್ರಾಮ ಸ್ವರಾಜ್ ಸಮಾವೇಶಕ್ಕೆ ಚಾಲನೆ ನೀಡಲಾಯ್ತು.

    ಮಠದ ಗೋಶಾಲೆಗೆ ತೆರಳಿದ ಬಿಜೆಪಿ ನಾಯಕರು ಗೋವುಗಳಿಗೆ ಪೂಜೆ ಸಲ್ಲಿಸಿದರು ಹಾರ, ಶಾಲು ಸಲ್ಲಿಸಿದರು. ಗೋವಿಗೆ ಬಾಳೆಹಣ್ಣು ತಿನ್ನಿಸಿದ ನಳಿನ್ ಕುಮಾರ್ ಕಟೀಲ್ ಅವರ ಕೈಯನ್ನು ಹಸು ಕಚ್ಚಿದ ಘಟನೆ ನಡೆಯಿತು. ಒಮ್ಮೆ ನೋವಾದರೂ ನಗುತ್ತ ಮುಂದಕ್ಕೆ ಸಾಗಿದ ಕಟೀಲ್ ಹತ್ತಾರು ಗೋವುಗಳಿಗೆ ಹಣ್ಣು ನೀಡಿದರು. ಕುಂದಾಪುರದಲ್ಲಿ ಮತ್ತು ಉಡುಪಿಯಲ್ಲಿ ಇಂದು ಎರಡು ಸಮಾವೇಶಗಳು ನಡೆಯಲಿದೆ.

    ಡಿಸಿಎಂ ಅಶ್ವತ್ಥನಾರಾಯಣ, ಸಂಸದರಾದ ಶೋಭಾ ಕರಂದ್ಲಾಜೆ, ಮುನಿಸ್ವಾಮಿ ಮೊದಲು ಶ್ರೀಕೃಷ್ಣನ ದರ್ಶನ ಪಡೆದರು. ಪರ್ಯಾಯ ಅದಮಾರು ಮಠಾಧೀಶ ಈಶಪ್ರಿಯ ತೀರ್ಥ ಶ್ರೀಪಾದರನ್ನು ಭೇಟಿಯಾಗಿ ಗೌರವ ಸಲ್ಲಿಕೆ ಮಾಡಿದರು. ನಂತರ ಕೆಲ ಕಾಲ ಮಾತುಕತೆ ನಡೆಸಿ ಶ್ರೀಗಳ ಆಶೀರ್ವಾದವನ್ನು ಪಡೆದರು. ಸ್ಥಳೀಯ ಬಿಜೆಪಿ ನಾಯಕರು, ಕಾರ್ಯಕರ್ತರು ಈ ಸಂದರ್ಭದಲ್ಲಿ ಇದ್ದರು.