ಕೋಲ್ಕತ್ತಾ: ಭಾರತೀಯ ತಳಿಯ ಹಸುಗಳು ವಿಶೇಷ ಗುಣಗಳನ್ನು ಹೊಂದಿದ್ದು, ಹಾಲಿನಲ್ಲಿ ಚಿನ್ನ ಬೆರೆತಿರುತ್ತದೆ ಎಂದು ಹೇಳಿದ್ದ ಬಿಜೆಪಿ ಮುಖಂಡ ದಿಲೀಪ್ ಘೋಷ್ ಸದ್ಯ ಮತ್ತೊಂದು ಹೇಳಿಕೆಯನ್ನು ನೀಡಿದ್ದು, ಗೋ ಮಾಂಸ (ಬೀಫ್) ಸೇವಿಸುವವರಿಗೆ ಹಾಲಿನ ಮಹತ್ವ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಗೋವಿನ ಹಾಲಿನಲ್ಲಿ ಚಿನ್ನ ಬೆರೆತಿದೆ ಎಂಬ ಹೇಳಿಕೆಗೆ ಭಾರೀ ವಿಮರ್ಶೆಗಳು ಕೇಳಿಬಂದ ಹಿನ್ನೆಲೆಯಲ್ಲಿ ದಿಲೀಪ್ ಅವರು ಪ್ರತಿಕ್ರಿಯೆ ನೀಡಿದ್ದು, ನಾನು ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ನನ್ನ ವಿರುದ್ಧ ಟೀಕೆ ಮಾಡುವವರು ನಾನು ಹೇಳಿದ್ದು ಸುಳ್ಳು ಎಂದು ಸಾಬೀತು ಪಡಿಸಲಿ ಎಂದು ಸವಾಲು ಎಸೆದರು.

ಈಗಾಗಲೇ ಯುಎಸ್‍ಎ, ಪೋಲ್ಯಾಂಡ್ ದೇಶಗಳಲ್ಲಿ ಹಸುವಿನ ಹಾಲಿನ ಬಣ್ಣದ ಕಾರಣ ತಿಳಿಯಲು ಹಲವು ಸಂಶೋಧನೆಗಳನ್ನು ನಡೆಸಿದ್ದಾರೆ. ಈ ಸಂಶೋಧನೆಗಳಲ್ಲಿ ಹಾಲಿಗೆ ಹಳದಿ ಬಣ್ಣ ಬರಲು, ಆದರಲ್ಲಿ ಹೆಚ್ಚಿನ ಪ್ರಮಾಣದ ಚಿನ್ನದ ಅಂಶವಿರುವುದೇ ಕಾರಣ ಎಂಬುವುದು ತಿಳಿದು ಬಂದಿದೆ ಎಂದು ತಮ್ಮ ವಾದಕ್ಕೆ ಸಮರ್ಥನೆಯನ್ನು ನೀಡಿದರು.
ಕೆಲವರು ನಮ್ಮ ಸಂಸ್ಕೃತಿ, ಸಂಪ್ರಾದಾಯಗಳನ್ನು ಆಕ್ಷೇಪಿಸಲು ಇಷ್ಟಪಡುತ್ತಾರೆ. ಆದರೆ ನನ್ನ ಹೇಳಿಕೆಯನ್ನು ತಪ್ಪು ಎಂದು ಸಾಬೀತು ಪಡಿಸುವ ಚಿಂತನೆ ಮಾತ್ರ ಇಲ್ಲ. ಯಾರು ಈ ಬಗ್ಗೆ ಸಂಶೋಧನೆ ಮಾಡಲು ಬಯಸುವುದಿಲ್ಲ ಎಂದು ಟೀಕೆ ಮಾಡಿದ್ದಾರೆ. ಅಲ್ಲದೇ ಗೋ ಮಾಂಸ ಸೇವನೆ ಮಾಡುವವರಿಂದ ಹೇಗೆ ನೀವು ಹಾಲಿನ ಮಹತ್ವ ಬಗ್ಗೆ ಅರಿಯಲು ಪ್ರಯತ್ನಿಸುತ್ತಿರಿ ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆಯೂ ಗೋ ಮಾಂಸ ಸೇವನೆ ಮಾಡುವವರ ವಿರುದ್ಧ ಟೀಕೆ ಮಾಡಿದ್ದ ಘೋಷ್, ಗೋವು ನಮ್ಮ ತಾಯಿ. ನಮ್ಮ ತಾಯಿಯೊಂದಿಗೆ ಯಾರದರು ಅಸಭ್ಯವಾಗಿ ನಡೆದುಕೊಂಡರೆ ಸುಮ್ಮನೆ ಇರುವುದಿಲ್ಲ. ಅವರಿಗೆ ಯಾವ ರೀತಿ ಪಾಠ ಕಲಿಸಬೇಕೋ ಹಾಗೆ ಕಲಿಸುತ್ತೇವೆ. ಪವಿತ್ರ ಭೂಮಿಯಲ್ಲಿ ಗೋವು ಹತ್ಯೆ ಹಾಗೂ ಗೋ ಮಾಂಸ ಸೇವಿಸುವುದು ಅಪರಾಧ ಎಂದು ಹೇಳಿದ್ದರು.