Tag: Covishield

  • ಸರ್ಕಾರ ಆರ್ಡರ್ ನೀಡದಿದ್ರೆ ಕೋವಿಶೀಲ್ಡ್ ಉತ್ಪಾದನೆ ಶೇ.50ರಷ್ಟು ಕಡಿತಕ್ಕೆ ನಿರ್ಧಾರ: ಆದಾರ್ ಪೂನಾವಾಲಾ

    ಸರ್ಕಾರ ಆರ್ಡರ್ ನೀಡದಿದ್ರೆ ಕೋವಿಶೀಲ್ಡ್ ಉತ್ಪಾದನೆ ಶೇ.50ರಷ್ಟು ಕಡಿತಕ್ಕೆ ನಿರ್ಧಾರ: ಆದಾರ್ ಪೂನಾವಾಲಾ

    ನವದೆಹಲಿ: ಇದುವರೆಗೆ ಕೇಂದ್ರ ಸರ್ಕಾರದಿಂದ ಯಾವುದೇ ಆದೇಶ ಬರದಿದ್ದರಿಂದ ಮುಂದಿನ ವಾರದಿಂದ ಕೋವಿಶೀಲ್ಡ್ ಲಸಿಕೆ ಉತ್ಪಾದನೆಯನ್ನು ಶೇ.50 ರಷ್ಟು ಕಡಿತಗೊಳಿಸಲು ನಿರ್ಧರಿಸಿರುವುದಾಗಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅದಾರ್ ಪೂನಾವಾಲಾ ಹೇಳಿದ್ದಾರೆ.

    ಈ ಬಗ್ಗೆ ರಾಷ್ಟ್ರೀಯ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹೆಚ್ಚುವರಿ ಆರ್ಡರ್ ನೀಡದಿದ್ದರೆ ಮುಂದಿನ ವಾರದಿಂದಲೇ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯು ಕೋವಿಶೀಲ್ಡ್ ಲಸಿಕೆ ಉತ್ಪಾದನೆ ಪ್ರಮಾಣವನ್ನು ಕಡಿತಗೊಳಿಸುತ್ತದೆ. ಇದನ್ನೂ ಓದಿ: 3ನೇ ಅಲೆ ತೀವ್ರತೆ ಹೆಚ್ಚಾಗಬಹುದು – ಐಎಂಎ ವಾರ್ನಿಂಗ್

    ರಾಷ್ಟ್ರಕ್ಕೆ ದೊಡ್ಡ ಪ್ರಮಾಣದ ಕೋವಿಡ್ ಲಸಿಕೆ ಅಗತ್ಯವಿದ್ದರೆ ಹೆಚ್ಚುವರಿ ಲಸಿಕೆ ಉತ್ಪಾದನಾ ಸಾಮರ್ಥ್ಯ ಉಳಿಸಿಕೊಳ್ಳಲು ಬಯಸುತ್ತೇನೆ. ಆದರೆ ಇದುವರೆಗೆ ಈ ಬಗ್ಗೆ ಯಾವುದೇ ಆದೇಶವಿಲ್ಲದ ಹಿನ್ನೆಲೆಯಲ್ಲಿ ಲಸಿಕೆ ಉತ್ಪಾದನೆಯನ್ನು ಕಡಿತಗೊಳಿಸಲಿದ್ದೇವೆ. 20-30 ಮಿಲಿಯನ್ ಡೋಸ್ ಸ್ಪುಟ್ನಿಕ್ ಲೈಟ್ ಲಸಿಕೆಯನ್ನು ಸಂಗ್ರಹಿಸುವುದಾಗಿ ಕೇಂದ್ರ ಹೇಳಿದೆ. ನಾವು ಪರವಾನಗಿ ಪಡೆದ ತಕ್ಷಣ, ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆಯನ್ನು ಉತ್ಪಾದಿಸಬಹುದು ಎಂದು ಪೂನಾವಾಲಾ ಹೇಳಿದ್ದಾರೆ. ಇದನ್ನೂ ಓದಿ: ಜಿನೋಮ್ ಸೀಕ್ವೆನ್ಸಿಂಗ್ ಲ್ಯಾಬ್ ಸ್ಥಾಪನೆಗೆ ಕ್ರಮ: ಬೊಮ್ಮಾಯಿ

    ಜಗತ್ತಿನಾದ್ಯಂತ ಕೊರೊನಾ ವೈರಸ್ ಹೊಸ ರೂಪಾಂತರಿ ತಳಿ ಓಮಿಕ್ರಾನ್ ಸೋಂಕಿನ ಭೀತಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಇರುವ ಲಸಿಕೆಗಳ ಪರಿಣಾಮಕಾರಿತ್ವದ ಬಗ್ಗೆ ಮಾತನಾಡಿರುವ ಪೂನಾವಾಲಾ, ಹೊಸ ರೂಪಾಂತರದ ಮೇಲೆ ಲಸಿಕೆಗಳು ಅಷ್ಟರಮಟ್ಟಿಗೆ ಪರಿಣಾಮಕಾರಿಯಾಗಿಲ್ಲ ಎಂದು ಹೇಳಕ್ಕಾಗಲ್ಲ. ಈಗ ಇರುವ ಲಸಿಕೆಗಳು ರೂಪಾಂತರದ ವಿರುದ್ಧ ಕೆಲಸ ಮಾಡುವುದಿಲ್ಲ ಎಂದು ಹೇಳಲು ಯಾವುದೇ ಸಾಕ್ಷಿಗಳಿಲ್ಲ. ಡಬಲ್ ವ್ಯಾಕ್ಸಿನೇಷನ್ ಪಡೆದವರು ಯೋಗ್ಯ ಮಟ್ಟದಲ್ಲಿ ಸುರಕ್ಷಿತವಾಗಿಲ್ಲ ಎಂದು ನಂಬಲು ಯಾವುದೇ ಕಾರಣವಿಲ್ಲ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

  • ನಾನು ಭಾರತದ ಕೋವಿಶೀಲ್ಡ್ ವ್ಯಾಕ್ಸಿನ್ ಪಡೆದಿದ್ದೇನೆ: ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷ ಅಬ್ದುಲ್ಲಾ ಶಾಹಿದ್

    ನಾನು ಭಾರತದ ಕೋವಿಶೀಲ್ಡ್ ವ್ಯಾಕ್ಸಿನ್ ಪಡೆದಿದ್ದೇನೆ: ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷ ಅಬ್ದುಲ್ಲಾ ಶಾಹಿದ್

    ನ್ಯೂಯಾರ್ಕ್: ನಾನು ಭಾರತದ ಕೋವಿಶೀಲ್ಡ್ ವ್ಯಾಕ್ಸಿನ್ ಪಡೆದಿದ್ದೇನೆ ಎಂದು ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯ ಅಧ್ಯಕ್ಷ ಅಬ್ದುಲ್ಲಾ ಶಾಹಿದ್ ಹೇಳಿಕೆ ನೀಡಿದ್ದಾರೆ.

    ಅವರು ನಡೆಸಿದ ಮೊದಲ ಸುದ್ದಿಗೋಷ್ಠಿಯಲ್ಲಿ ವ್ಯಾಕ್ಸಿನ್ ಬಗ್ಗೆ ಮಾತನಾಡಿದ್ದು, ನಾನು ಭಾರತದಲ್ಲಿ ಉತ್ಪಾದಿಸಲಾಗಿರುವ ಕೋವಿಶೀಲ್ಡ್ ನ ಎರಡೂ ಡೋಸ್ ಲಸಿಕೆಯನ್ನು ಪಡೆದಿದ್ದೇನೆ. ಅಲ್ಲದೆ ವಿಶ್ವಾದ್ಯಂತ ಬಹುತೇಕರು ಇದೇ ಲಸಿಕೆಯನ್ನು ಪಡೆದಿದ್ದಾರೆ ಎಂದು ಹೇಳಿದ್ದಾರೆ.

    ವ್ಯಾಕ್ಸಿನ್ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಭಾರತದ ಕೋವಿಶೀಲ್ಡ್ ಲಸಿಕೆಯ ಎರಡೂ ಡೋಸ್ ಪಡೆದಿದ್ದೇನೆ. ಎಷ್ಟು ದೇಶಗಳು ಭಾರತದ ಕೋವಿಶೀಲ್ಡ್ ಸಲಿಕೆಯನ್ನು ಒಪ್ಪಿಕೊಳ್ಳುತ್ತವೆ ಅಥವಾ ಇಲ್ಲ ಎಂಬುದು ನನಗೆ ಗೊತ್ತಿಲ್ಲ. ಆದರೆ ವಿಶ್ವದ ಬಹುತೇಕ ರಾಷ್ಟ್ರಗಳ ಜನ ಕೋವಿಶೀಲ್ಡ್ ಲಸಿಕೆ ಪಡೆದಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶ ಸರ್ಕಾರದ ಯೋಜನೆಯ ರಾಯಭಾರಿಯಾದ ಕಂಗನಾ

    ಯಾವುದೇ ಕೋವಿಡ್ ಲಸಿಕೆಯನ್ನು ಪರಿಗಣಿಸಬೇಕೆ ಅಥವಾ ಯಾವುದಾದರೂ ಕೊರೊನಾ ಲಸಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಅಥವಾ ಇನ್ನಾವುದೇ ಸಂಸ್ಥೆಯ ಮಾನ್ಯತೆ ಪಡೆದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಲಸಿಕೆ ಪಡೆದು ನಾನು ಬದುಕುಳಿದಿದ್ದೇನೆ. ಆದರೆ ಬೇರೆಯವರ ಬಗ್ಗೆ ನನಗೆ ಗೊತ್ತಿಲ್ಲ. ಈ ಪ್ರಶ್ನೆಯನ್ನು ವೈದ್ಯಕೀಯ ಪರಿಣಿತರ ಬಿಳಿಯೇ ಕೇಳಿ ಎಂದು ನಗುತ್ತ ಹೇಳಿದ್ದಾರೆ.

    ಭಾರತದ ವ್ಯಾಕ್ಸಿನ್ ಸಾಧನೆ
    ಭಾರತ ಈವರೆಗೆ 100ಕ್ಕೂ ಹೆಚ್ಚು ದೇಶಗಳಿಗೆ 66 ಮಿಲಿಯನ್(6 ಕೋಟಿ) ವ್ಯಾಕ್ಸಿನ್ ಡೋಸ್‍ಗಳನ್ನು ರಫ್ತು ಮಾಡಿದೆ. ವಾಣಿಜ್ಯ ಸಾಗಣೆ ಹಾಗೂ ಕೋವ್ಯಾಕ್ಸ್ ಸೌಲಭ್ಯದ ಮೂಲಕ ರಫ್ತು ಮಾಡಿದೆ. ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯ ಅಧ್ಯಕ್ಷ ಅಬ್ದುಲ್ಲಾ ಶಾಹಿದ್ ಅವರ ತವರು ದೇಶ ಮಾಲ್ಡೀವ್ಸ್. ಭಾರತದ ಲಸಿಕೆಯನ್ನು ಪಡೆದ ಮೊದಲ ದೇಶಗಳಲ್ಲಿ ಮಾಲ್ಡೀವ್ಸ್ ಕೂಡ ಒಂದು. 1 ಲಕ್ಷ ಡೋಸ್‍ಗಳನ್ನು ಆರಂಭದಲ್ಲಿ ಕಳುಹಿಸಲಾಗಿತ್ತು.

    ಕೋವಿಶೀಲ್ಡ್ ಪರಿಗಣಿಸಲು ಆರಂಭದಲ್ಲಿ ಇಂಗ್ಲೆಂಡ್ ಹಿಂದೇಟು ಹಾಕಿತ್ತು. ಈ ನಿರ್ಧಾರದ ಬಗ್ಗೆ ಭಾರತ ತೀವ್ರ ಟೀಕಿಸಿದ ಬಳಿಕ ಸೆಪ್ಟೆಂಬರ್ 22ರಂದು ತನ್ನ ಹೊಸ ಮಾರ್ಗಸೂಚಿಗಳನ್ನು ತಿದ್ದುಪಡಿ ಮಾಡಿ ಕೋವಿಶೀಲ್ಡ್ ಲಸಿಕೆಯನ್ನು ಸೇರಿಸಿತು.

  • ಕೋವಿಶೀಲ್ಡ್ ಲಸಿಕೆ ಪಡೆದವರ ಪ್ರವೇಶಕ್ಕೆ ಅಮೆರಿಕ ಅನುಮತಿ

    ಕೋವಿಶೀಲ್ಡ್ ಲಸಿಕೆ ಪಡೆದವರ ಪ್ರವೇಶಕ್ಕೆ ಅಮೆರಿಕ ಅನುಮತಿ

    ವಾಷಿಂಗ್ಟನ್: ಅಮೆರಿಕ ಪ್ರವಾಸಕ್ಕೆ ಹೋಗಲು ಪ್ಲಾನ್ ಹೊಂದಿರುವವರಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ಕೊರೊನಾ ಸಾಂಕ್ರಮಿಕ ರೋಗದಿಂದಾಗಿ ಹೇರಲಾಗಿದ್ದ ನಿಬರ್ಂಧವನ್ನು ಇದೀಗ ದೇಶವು ಸಡಿಲಗೊಳಿಸಲಾಗಿದ್ದು, ಕೋವಿಶೀಲ್ಡ್ ಲಸಿಕೆ ಪಡೆದವರ ಪ್ರವೇಶಕ್ಕೆ ಅಮೆರಿಕಾ ಅನುಮತಿ ನೀಡಿದೆ.

    ಭಾರತ ಸೇರಿಂದತೆ 33 ದೇಶಗಳ ಎರಡೂ ಡೋಸ್ ಕೋವಿಡ್ ಲಸಿಕೆ ಪಡೆದವರು ನವೆಂಬರ್‍ನಿಂದ ಅಮೆರಿಕಕ್ಕೆ ಪ್ರಯಾಣ ಮಾಡಬಹುದೆಂದು ಶ್ವೇತಭವನ ಆದೇಶ ಹೊರಡಿಸಿದೆ. ಇದನ್ನೂ ಓದಿ:  ಲಸಿಕೆ ಪಡೆದ್ರೂ ಭಾರತೀಯರು ಕ್ವಾರಂಟೈನ್- ಬ್ರಿಟನ್ ಸರ್ಕಾರದ ಹೊಸ ನಿಯಮ

    33 ದೇಶಗಳ ಪಟ್ಟಿಯಲ್ಲಿ ಫ್ರಾನ್ಸ್, ಜರ್ಮನಿ, ಇಟಲಿ, ಸ್ಪೇನ್, ಗ್ರೀಸ್, ಚೀನಾ, ಬ್ರೆಜಿಲ್ ಸಹ ಇವೆ. ಆದರೆ ಅಮೆರಿಕದ ಎಫ್‍ಡಿಎ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಅಂಗೀಕರಿಸಿದ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡುವುದಾಗಿ ಅಮೆರಿಕಾ ಸ್ಪಷ್ಟಪಡಿಸಿದೆ. ಸದ್ಯಕ್ಕೆ ಭಾರತದ ಕೋವಿಶೀಲ್ಡ್ ಪಡೆದವರಿಗೆ ಮಾತ್ರ ಅನುಮತಿ ಸಿಕ್ಕಂತಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮನ್ನಣೆ ಇಲ್ಲದ ಕಾರಣ ಕೋವ್ಯಾಕ್ಸಿನ್‍ಗೆ ಈ ಭಾಗ್ಯವಿಲ್ಲ. ಇದನ್ನೂ ಓದಿ: ಪಂಚೆ ಕಳಚಿದೆ ಅಂತ ಸಿದ್ದರಾಮಯ್ಯನವರ ಕಿವಿಯಲ್ಲಿ ಹೇಳಿದ್ರು ಡಿಕೆಶಿ!

    ಈ ಹಿಂದೆ ಅಮೆರಿಕಗೆ ಆಗಮಿಸುವ ಪ್ರಯಾಣಿಕರ ಮೇಲೆ ಕೋವಿಡ್-19 ಹರಡುವಿಕೆಯನ್ನು ತಡೆಯಲು ಕೆಲವು ಕಠಿಣ ನಿಬರ್ಂಧಗಳನ್ನು ಹೇರಲಾಗುತ್ತಿದೆ. ಇದು ಅಮೇರಿಕರನ್ನು ರಕ್ಷಿಸುವುದರ ಜೊತೆಗೆ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನು ಸುರಕ್ಷಿವಾಗಿರಿಸುತ್ತದೆ. ನವೆಂಬರ್ ನಿಂದ ಅಮೇರಿಕಾಕ್ಕೆ ಪ್ರಯಾಣಿಸುವವರು ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡಿರುವುದನ್ನು ಕಡ್ಡಾಯವಾಗಿದೆ. ಯುಎಸ್‍ಗೆ ಹೋಗುವ ವಿಮಾನ ಹತ್ತುವ ಮುನ್ನ ಕೋವಿಡ್-19 ಲಸಿಕೆ ಪಡೆದಿದಕ್ಕೆ ಪುರಾವೆಗಳನ್ನು ತೋರಿಸಬೇಕಾಗುತ್ತದೆ ಎಂದು ಅಮೆರಿಕ ಹೇಳಿತ್ತು.

  • ಕೋವಿಶೀಲ್ಡ್, ಕೋವ್ಯಾಕ್ಸಿನ್ ಮಿಶ್ರ ಲಸಿಕೆ ಪಡೆದರೆ ಅಡ್ಡಪರಿಣಾಮವಿಲ್ಲ: ಐಸಿಎಂಆರ್

    ಕೋವಿಶೀಲ್ಡ್, ಕೋವ್ಯಾಕ್ಸಿನ್ ಮಿಶ್ರ ಲಸಿಕೆ ಪಡೆದರೆ ಅಡ್ಡಪರಿಣಾಮವಿಲ್ಲ: ಐಸಿಎಂಆರ್

    ಬೆಂಗಳೂರು/ನವದೆಹಲಿ: ಒಂದು ಡೋಸ್ ಕೋವಿಶೀಲ್ಡ್ ಹಾಗೂ ಇನ್ನೊಂದು ಡೋಸ್ ಕೋವ್ಯಾಕ್ಸಿನ್ ಲಸಿಕೆ ನೀಡುವುದರಿಂದ ಕೊರೋನಾದ ವಿರುದ್ಧ ದೇಹದಲ್ಲಿ ಹೆಚ್ಚು ರೋಗನಿರೋಧಕ ಶಕ್ತಿ ಸೃಷ್ಟಿಯಾಗುತ್ತದೆ ಎಂದು ಭಾರತದಲ್ಲಿ ನಡೆದ ಮೊದಲ ಅಧಿಕೃತ ಅಧ್ಯಯನದಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಧ್ಯಯನ ನಡೆಸಿದೆ.

    ಉತ್ತರ ಪ್ರದೇಶದ ಒಟ್ಟು 98 ಜನರ ಮೇಲೆ ಈ ಪ್ರಯೋಗ ನಡೆಸಲಾಗಿದ್ದು, ಇವರಲ್ಲಿ ಅಚಾತುರ್ಯದಿಂದ ಮೊದಲ ಡೋಸ್ ಕೋವಿಶೀಲ್ಡ್ ಹಾಗೂ ಎರಡನೇ ಡೋಸ್ ಕೋವ್ಯಾಕ್ಸಿನ್ ಪಡೆದ 18 ಜನರು ಸೇರಿದ್ದಾರೆ. ಇನ್ನುಳಿದ 80 ಜನರಲ್ಲಿ 40 ಜನರಿಗೆ ಮೊದಲ ಡೋಸ್ ಕೋವಿಶೀಲ್ಡ್ ಹಾಗೂ ಎರಡನೇ ಡೋಸ್ ಕೋವ್ಯಾಕ್ಸಿನ್ ನೀಡಲಾಗಿತ್ತು. ಇತರ 40 ಜನರಿಗೆ ಎರಡೂ ಡೋಸ್ ಒಂದೇ ಲಸಿಕೆ ನೀಡಲಾಗಿತ್ತು. ಎರಡು ಡೋಸ್ ಪಡೆದ ನಿರ್ದಿಷ್ಟ ಸಮಯದ ನಂತರ ಪರೀಕ್ಷೆ ನಡೆಸಿದಾಗ ಬೆರಕೆ ಲಸಿಕೆ ಪಡೆದವರಲ್ಲಿ ಒಂದೇ ಲಸಿಕೆಯ ಎರಡು ಡೋಸ್ ಪಡೆದವರಿಗಿಂತ ಹೆಚ್ಚು ರೋಗನಿರೋಧಕ ಶಕ್ತಿ ಕಂಡುಬಂದಿದೆ ಎಂದು ಅಧ್ಯಯನದ ವರದಿಯಲ್ಲಿ ತಿಳಿಸಲಾಗಿದೆ.

    ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳ ತಂತ್ರಜ್ಞಾನ ಬೇರೆಬೇರೆಯಾಗಿದೆ. ಒಂದು ಅಡೆನೋವೈರಸ್ ಲಸಿಕೆಯಾಗಿದ್ದರೆ, ಇನ್ನೊಂದು ಮೃತ ವೈರಸ್‍ಗಳನ್ನು ಬಳಸಿ ತಯಾರಿಸಿದ ಲಸಿಕೆಯಾಗಿದೆ. ಆದರೂ ಈ ಎರಡು ಲಸಿಕೆಗಳ ತಲಾ ಒಂದೊಂದು ಡೋಸ್ ಪಡೆಯುವುದರಿಂದ ಯಾವುದೇ ಹೆಚ್ಚಿನ ಅಡ್ಡಪರಿಣಾಮ ಉಂಟಾಗುವುದಿಲ್ಲ. ಈ ಲಸಿಕೆಗಳ ಮಿಶ್ರಣ ಸುರಕ್ಷಿತ. ಒಂದೇ ಲಸಿಕೆಯ ಎರಡು ಡೋಸ್ ಪಡೆದಾಗ ಯಾವ ರೀತಿಯ ಅಡ್ಡಪರಿಣಾಮಗಳು ಕಂಡುಬಂದಿವೆಯೋ ಅಂತಹವೇ ಅಡ್ಡಪರಿಣಾಮಗಳು ಮಿಶ್ರ ಲಸಿಕೆ ಪಡೆದಾಗಲೂ ಕಂಡುಬಂದಿವೆ ಎಂದು ವರದಿ ಹೇಳಿದೆ.

    ದೇಶದಲ್ಲಿ ಲಸಿಕಾ ಅಭಿಯಾನ ವೇಗವಾಗಿ ನಡೆಯುತ್ತಿರುವಾಗ ಅಚಾತುರ್ಯದಿಂದ ಎರಡು ಜಾತಿಯ ಲಸಿಕೆಗಳ ಬೆರಕೆಯಾದರೆ ಜನರಿಗೆ ಉಂಟಾಗಬಹುದಾದ ಆತಂಕದ ಹಿನ್ನೆಲೆಯಲ್ಲಿ ಈ ಅಧ್ಯಯನ ನಡೆಸಿರುವುದಾಗಿ ಐಸಿಎಂಆರ್ ಹೇಳಿಕೊಂಡಿದೆ.

  • ವಿದೇಶಕ್ಕೆ ತೆರಳುವ ಫಲಾನುಭವಿಗಳ ಕೋವಿಶೀಲ್ಡ್ ಲಸಿಕೆ ಪಡೆಯುವ ಅಂತರ ಕಡಿತ

    ವಿದೇಶಕ್ಕೆ ತೆರಳುವ ಫಲಾನುಭವಿಗಳ ಕೋವಿಶೀಲ್ಡ್ ಲಸಿಕೆ ಪಡೆಯುವ ಅಂತರ ಕಡಿತ

    ಬೆಂಗಳೂರು: ವಿದೇಶಕ್ಕೆ ತೆರಳುವ ಫಲಾನುಭವಿಗಳ ಲಸಿಕಾಕರಣದ ಕುರಿತು ಸರ್ಕಾರ ಸುತ್ತೋಲೆ ಹೊರಡಿಸಿದೆ. ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್‍ಗಳ ಅಂತರವನ್ನು 12 ರಿಂದ 16 ವಾರಗಳಗೆ (84 ದಿನಗಳು) ಪರಿಷ್ಕರಿಸಲಾಗಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ, ಭಾರತ ಸರ್ಕಾರದ ನಿರ್ದೇಶನದಂತೆ ಈ ಕೆಳಕಂಡ ಗುಂಪುಗಳಗೆ 28 ದಿನಗಳನ್ನು ಪೂರೈಸಿದ ನಂತರ ನೀಡುವುದಾಗಿ ತಿಳಿಸಲಾಗಿದೆ.

    ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳು ನೌಕರಿಗಾಗಿ ವಿದೇಶಕ್ಕೆ ತೆರಳುವವರು, ಅಂತರಾಷ್ಟ್ರೀಯ ಮಟ್ಟದ ಒಲಂಪಿಕ್ಸ್‌ಗಾಗಿ ಟೋಕಿಯೋಗೆ ತೆರಳುವ ಆಟಗಾರರು, ಸದರಿ ಗುಂಪಿನ ಲಸಿಕಾಕರಣಕ್ಕಾಗಿ ಭಾರತ ಸರ್ಕಾರದ ಪ್ರಮಾಣಿತ ಕಾರ್ಯಾಚರಣೆಯ ವಿಧಾನಗಳು (SOP) ನ್ನು ಲಗತ್ತಿಸಿದೆ. ಈ ಕಾರ್ಯಚರಣೆಗಾಗಿ ರಾಜ್ಯವು ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ 8 ವಲಯ ಆಯುಕ್ತರನ್ನು ಸಮರ್ಥ ಅಧಿಕಾರಿಗಳೆಂದು (Competent Authority) ಗುರುತಿಸಿದೆ ಎಂದು ಆರೋಗ್ಯ ಅಭಿಯಾನ ನಿರ್ದೇಶಕರು ತಿಳಿಸಿದ್ದಾರೆ.

    1. ಸಮರ್ಥ ಅಧಿಕಾರಿಗಳು (Competent Authority) ಸದರಿ ಅರ್ಹ ಫಲಾನುಭವಿಗಳ ಕೋವಿಶೀಲ್ ಲಸಿಕೆಯ ಎರಡನೇ ಡೋಸ್ ನ ಲಸಿಕಾಕರಣಕ್ಕಾಗಿ ಅನುಮತಿ ನೀಡಬಹುದಾಗಿದೆ.
    2. ಸರ್ಕಾರಿ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಮಾತ್ರ ಈ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳುವುದು.

    3. ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಮಟ್ಟದ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ವಲಯವಾರು ಯಾವುದಾದರೂ ಆಯ್ದ ಕೋವಿಡ್ ಲಸಿಕಾ ಕೇಂದ್ರದಲ್ಲಿ ಈ ಗುಂಪಿನ ಫಲಾನುಭವಿಗಳ ಲಸಿಕಾಕರಣವನ್ನು ಆಯೋಜಿಸುವುದು.
    4. ಸಮರ್ಥ ಅಧಿಕಾರಿಗಳು (Competent Authority) ಅರ್ಹ ಫಲಾನುಭವಿಗಳು ಒದಗಿಸುವ ಸಮರ್ಪಕ ದಾಖಲೆಗಳನ್ನು ಪರಿಶೀಲಿಸಿ 84 ದಿನಗಳಿಗೆ ಮೊದಲು ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ನ ಲಸಿಕಾಕರಣಕ್ಕಾಗಿ ಅನುಮತಿ ನೀಡುವುದು.

    5. ರಾಜ್ಯವು ನೀಡಿರುವ ಮಾದರಿ ಸ್ವಯಂ ಘೋಷಣಾ ಪ್ರಮಾಣ ಪತ್ರದಲ್ಲಿ (Self declaration certificate) (ಅನುಬಂಧ-4 ಅನ್ನು ಲಗತ್ತಿಸಿದೆ) ಅಭ್ಯರ್ಥಿಯು ನೀಡುವ ಮಾಹಿತಿಯನ್ನು ಪಡೆದು, ದಾಖಲೆಗಳನ್ನು ಪರಿಶೀಲಿಸಿ ದೃಢೀಕರಣ ಪತ್ರವನ್ನು ನೀಡುವುದು. ಈ ದೃಢೀಕರಣ ಪತ್ರವನ್ನು ಕೋವಿನ್ ಪೋರ್ಟಲ್ ನಲ್ಲಿ SOP ಯಂತೆ ಅಪ್‌ಲೋಡ್ ಮಾಡಿ ಲಸಿಕಾಕರಣ ನಡೆಸುವುದು.
    6. ಈಗಾಗಲೇ ಮೊದಲನೇ ಡೋಸ್ ಲಸಿಕೆ ಪಡೆಯುವಾಗ ನೋಂದಣಿಗಾಗಿ ಪಾಸ್‌ಪೋರ್ಟ್‌ ನಂಬರ್ ಅನ್ನು ಬಳಸದೇ ಲಸಿಕೆ ಪಡೆದಿದ್ದರೆ ಅಂತಹ ಫಲಾನುಭವಿಗಳಗೆ ಕೋವಿಶೀಲ್ಡ್ ನ ಎರಡನೇ ಡೋಸ್ ಲಸಿಕಾಕರಣಕ್ಕಾಗಿ ಅನುಬಂಧ-5 ರಲ್ಲಿ ಲಗತ್ತಿಸಿದ ಲಸಿಕಾ ಪ್ರಮಾಣ ಪತ್ರವನ್ನು ನೀಡುವುದು.

    7. ಸಾರ್ವಜನಿಕರ ಮಾಹಿತಿಗಾಗಿ ಸದರಿ ಲಸಿಕಾ ಕೇಂದ್ರದ ಮಾಹಿತಿಯನ್ನು ಜಿಲ್ಲೆಯಲ್ಲಿ ಪ್ರಚುರಪಡಿಸುವುದು. ಇದನ್ನೂ ಓದಿ: ಕೊರೊನಾ ವ್ಯಾಕ್ಸಿನ್‍ಗೆ ಆನ್‍ಲೈನ್ ನೋಂದಣಿ ಕಡ್ಡಾಯವಲ್ಲ

  • ಖಾಸಗಿ ಆಸ್ಪತ್ರೆಗಳಿಗೆ ಕೇಂದ್ರ ಸರ್ಕಾರದಿಂದ ಲಸಿಕೆ ದರ ಪ್ರಕಟ- ಯಾವ ಲಸಿಕೆಗೆ ಎಷ್ಟು ರೂಪಾಯಿ?

    ಖಾಸಗಿ ಆಸ್ಪತ್ರೆಗಳಿಗೆ ಕೇಂದ್ರ ಸರ್ಕಾರದಿಂದ ಲಸಿಕೆ ದರ ಪ್ರಕಟ- ಯಾವ ಲಸಿಕೆಗೆ ಎಷ್ಟು ರೂಪಾಯಿ?

    ನವದೆಹಲಿ: ಕೇಂದ್ರ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುವ ಕೊರೊನಾ ಲಸಿಕೆಗೆ ಗರಿಷ್ಟ ದರವನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ.

    ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿರುವ ಆದೇಶದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುವ ಕೋವಿಡ್ ಲಸಿಕೆಗಳ ದರ ಪರಿಷ್ಕರಣೆ ಮಾಡಿದೆ. ಪ್ರತಿ ಡೋಸ್ ಕೋವಿಶೀಲ್ಡ್ ಬೆಲೆ 780 ರೂಪಾಯಿ ನಿಗದಿ ಪಡಿಸಿದರೆ, ದೇಶೀ ನಿರ್ಮಿತ ಲಸಿಕೆ ಕೋವ್ಯಾಕ್ಸಿನ್ ನ ಪ್ರತೀ ಡೋಸ್‍ಗೆ 1,410 ರೂ ನಿಗದಿ ಮಾಡಲಾಗಿದೆ. ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ ಲಸಿಕೆಗೆ 1145 ರೂ. ನಿಗದಿ ಮಾಡಿದೆ. ಜೊತೆಗೆ ಸರ್ವಿಸ್ ಚಾರ್ಜ್ 150 ರೂಪಾಯಿಗಿಂತ ಹೆಚ್ಚು ವಿಧಿಸುವಂತಿಲ್ಲ ಎಂದು ತಿಳಿಸಿದೆ.

    ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 7ರಂದು ದೇಶವನ್ನು ಉದ್ದೇಶಿಸಿ ಮಾತನಾಡಿ, ನೂತನ ಲಸಿಕಾ ನೀತಿ ಪ್ರಕಟಿಸಿದ್ದರು. ಇದೀಗ ಖಾಸಗಿ ಅಸ್ಪತ್ರೆಗಳಿಗೆ ಲಸಿಕಾ ದರ ನಿಗದಿಯಾಗಿದೆ. ಇದನ್ನೂ ಓದಿ: ಜೂನ್ 21ರಿಂದ ಕೇಂದ್ರದಿಂದ ಎಲ್ಲರಿಗೂ ಉಚಿತ ಲಸಿಕೆ: ಪ್ರಧಾನಿ ಮೋದಿ ಘೋಷಣೆ

    ಮೋದಿ ಭಾಷಣದಲ್ಲಿ ಹೇಳಿದ್ದೇನು?:

    ಕೊರೊನಾ ಎರಡನೇ ಅಲೆಯ ವಿರುದ್ಧ ಭಾರತ ಹೋರಾಡುತ್ತಿದೆ. ಅನೇಕ ಕುಟುಂಬಗಳು ತಮ್ಮವರನ್ನು ಕಳೆದುಕೊಂಡಿದ್ದಾರೆ. ಇದು 100 ವರ್ಷಗಳಲ್ಲಿಯೇ ಅತಿ ದೊಡ್ಡ ಮಹಾಮಾರಿ. ಕೋವಿಡ್ ವಿರುದ್ಧ ಹೋರಾಟದ ವೇಳೆ ದೇಶದಲ್ಲಿಯೇ ಹೊಸ ಆರೋಗ್ಯ ವ್ಯವಸ್ಥೆ ನಿರ್ಮಾಣವಾಗಿದೆ. ವೆಂಟಿಲೇಟರ್, ಆಕ್ಸಿಜನ್ ಸೇರಿದಂತೆ ವೈದ್ಯಕೀಯ ಉತ್ಪನ್ನಗಳಿಗಾಗಿ ಯುದ್ಧನೋಪಾದಿಯಲ್ಲಿ ಕೆಲಸ ಮಾಡಲಾಯ್ತು. ವಿಶ್ವದ ಯಾವುದೇ ಭಾಗದಲ್ಲಿ ಲಭ್ಯವಿರುವ ಔಷಧಗಳನ್ನು ತರಲಾಯ್ತು. ಈ ಹೋರಾಟದಲ್ಲಿ ಯಾವುದೇ ನಿರ್ಲಕ್ಷ್ಯ ಮಾಡಿಲ್ಲ.

    ಜನವರಿ 16ರಿಂದ ಏಪ್ರಿಲ್ ಅಂತ್ಯದವರೆಗೆ ಲಸಿಕಾಕರಣ ಕೇಂದ್ರದ ಕಣ್ಗಾವಲಿನಲ್ಲಿಯೇ ನಡೆಯಿತು. ಆದ್ರೆ ಲಸಿಕೆ ಸಂಬಂಧ ಟೀಕೆಗಳು ಕೇಳಿ ಬಂದಿದ್ದವು. ದೇಶದ ಒಂದು ವರ್ಗದ ಬಗ್ಗೆ ಲಸಿಕೆ ಬಗ್ಗೆ ಕ್ಯಾಂಪೇನ್ ಸಹ ನಡೆಸಿದವು. ಕೇಂದ್ರ ಲಸಿಕೆ ನೀಡುವ ಕಾರ್ಯಕ್ರಮವನ್ನ ಕೇಂದ್ರಿಕರಣ ಮಾಡಿಕೊಳ್ಳುತ್ತಿದೆ ಎಂದು ಹಲವು ರಾಜ್ಯ ಸರ್ಕಾರಗಳು ಆರೋಪಿಸಿದವು. ಹಾಗಾಗಿ ಅವರಿಗೂ ಶೇ.50ರಷ್ಟು ಜವಾಬ್ದಾರಿಯನ್ನ ನೀಡಲಾಯ್ತು. ಮೇನಲ್ಲಿ ಲಸಿಕೆಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಕೆಲ ರಾಜ್ಯಗಳು ಮೊದಲಿನ ವ್ಯವಸ್ಥೆಯೇ ಚೆನ್ನಾಗಿತ್ತು ಎಂದು ಹೇಳಲಾರಂಭಿಸಿದವು. ಹಾಗಾಗಿ ಲಸಿಕೆಯ ಪೂರ್ಣ ಹಂಚಿಕೆಯನ್ನ ಕೇಂದ್ರವೇ ತೆಗೆದುಕೊಳ್ಳಲಿದೆ. ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಭಾರತ ಸರ್ಕಾರ ಕೊರೊನಾ ಲಸಿಕೆ ನೀಡಲಿದೆ. ಇದನ್ನೂ ಓದಿ: ಲಸಿಕೆ ಪಡೆದ ಬಳಿಕ ರಕ್ತ ಹೆಪ್ಪುಗಟ್ಟುತ್ತಾ? ಅಲರ್ಜಿ ಹೊಂದಿರುವವರು ಲಸಿಕೆ ಪಡೆಯಬಹುದೇ? – ಅನುಮಾನಗಳಿಗೆ ಇಲ್ಲಿದೆ ಉತ್ತರ

    ಖಾಸಗಿ ಆಸ್ಪತ್ರೆಗಳಿಗೆ ಶೇ.25ರಷ್ಟು ಖರೀದಿ ನಿಯಮದಲ್ಲಿ ಬದಲಾವಣೆ ಇಲ್ಲ. ಖಾಸಗಿ ಆಸ್ಪತ್ರೆಗಳು 125 ರೂ.ಗಿಂತ ಹೆಚ್ಚಿನ ಸರ್ವಿಸ್ ಚಾರ್ಜ್ ಪಡೆಯುವಂತಿಲ್ಲ. ಕೋವಿನ್ ಆ್ಯಪ್ ಬಗ್ಗೆ ವಿಶ್ವದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಅವರೂ ಸಹ ನಮ್ಮ ಮಾದರಿಯಲ್ಲಿಯೇ ಲಸಿಕೆ ವಿತರಣೆ ಮಾಡಲು ಮುಂದಾಗಿವೆ ಎಂದು ತಿಳಿಸಿದರು.

  • ಎರಡನೇ ಡೋಸ್ ಕೋವ್ಯಾಕ್ಸಿನ್ ಲಸಿಕೆ ಸಿಗುತ್ತಿಲ್ಲ- 45 ವರ್ಷ ಮೇಲ್ಪಟ್ಟವರು ಕಂಗಾಲು

    ಎರಡನೇ ಡೋಸ್ ಕೋವ್ಯಾಕ್ಸಿನ್ ಲಸಿಕೆ ಸಿಗುತ್ತಿಲ್ಲ- 45 ವರ್ಷ ಮೇಲ್ಪಟ್ಟವರು ಕಂಗಾಲು

    ಹಾವೇರಿ: ಮೊದಲ ಡೋಸ್ ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಿ, ಕೇವಲ ಎರಡನೇ ಡೋಸ್ ಪಡೆಯುತ್ತಿರುವವರಿಗೆ ನೀಡುತ್ತಿದ್ದರೂ ಲಸಿಕೆ ಕೊರತೆ ಕಾಡುತ್ತಿದೆ. ಕೋವ್ಯಾಕ್ಸಿನ್ ಲಸಿಕೆ ಸ್ಟಾಕ್ ಇಲ್ಲದಕ್ಕೆ 2ನೇ ಡೋಸ್ ಲಸಿಕೆ ಹಾಕಿಸಿಕೊಳ್ಳಲು ಬಂದವರು ವಾಪಾಸಾಗುತ್ತಿದ್ದಾರೆ.

    ಜಿಲ್ಲೆಯಲ್ಲಿ ಬಹುತೇಕ ವಾಕ್ಸಿನ್ ಸೆಂಟರ್ ಗಳಲ್ಲಿ ಕೋವಾಕ್ಸಿನ್ ಲಸಿಕೆ ಇಲ್ಲ ಎಂಬ ಬೋರ್ಡ್ ಹಾಕಿದ್ದಾರೆ. ಆದರೆ ಆರಂಭದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಕೋವ್ಯಾಕ್ಸಿನ್ ಲಸಿಕೆಯನ್ನೇ ನೀಡಲಾಗಿದೆ. ಇದೀಗ 2ನೇ ಡೋಸ್‍ಗೆ ಕೋವ್ಯಾಕ್ಸಿನ್ ಲಭ್ಯವಾಗುತ್ತಿಲ್ಲ. ಹೀಗಾಗಿ ವ್ಯಾಕ್ಸಿನ್ ಕೊರತೆ ಕಾಡುತ್ತಿದ್ದು, ಜನ ಲಸಿಕೆ ಹಾಕಿಸಿಕೊಳ್ಳದೆ ಮನೆಗೆ ಹಿಂದಿರುಗುತ್ತಿದ್ದಾರೆ.

    45 ವರ್ಷ ಮೇಲ್ಪಟ್ಟವರಿಗೆ ಕೋವಿಶಿಲ್ಡ್ ಲಸಿಕೆಯನ್ನು ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ನೀಡಲಾಗುತ್ತಿದೆ. ಮೊದಲ ಡೋಸ್ ಕೋವಿಶಿಲ್ಡ್ ಪಡೆದವರಿಗೆ ಎರಡನೇ ಡೋಸ್ ಕೋವಿಶಿಲ್ಡ್ ಲಸಿಕೆ ಲಭ್ಯವಾಗುತ್ತಿದೆ. ಆದರೆ ಎರಡನೇ ಡೋಸ್ ಪಡೆಯಲು ಕೋವ್ಯಾಕ್ಸಿನ್ ಸಿಗುತ್ತಿಲ್ಲ. ಹೀಗಾಗಿ ಜನ ಆತಂಕದಿಂದಲೇ ತೆರಳುತ್ತಿದ್ದಾರೆ.

  • ಮೊದಲ ಡೋಸ್ ಕೋವ್ಯಾಕ್ಸಿನ್, ಎರಡನೇ ಬಾರಿ ಕೋವಿಶೀಲ್ಡ್ ತೆಗೆದುಕೊಂಡು ವೃದ್ಧ ಅಸ್ವಸ್ಥ

    ಮೊದಲ ಡೋಸ್ ಕೋವ್ಯಾಕ್ಸಿನ್, ಎರಡನೇ ಬಾರಿ ಕೋವಿಶೀಲ್ಡ್ ತೆಗೆದುಕೊಂಡು ವೃದ್ಧ ಅಸ್ವಸ್ಥ

    – ಶೀತ, ಚರ್ಮ ರೋಗದಿಂದ ಬಳಲುತ್ತಿರುವ ವೃದ್ಧ

    ಮುಂಬೈ: ಎರಡು ವ್ಯಾಕ್ಸಿನ್‍ಗಳನ್ನು ಮಿಕ್ಸ್ ಮಾಡಬಾರದು ಎಂದು ಹಲವು ಬಾರಿ ವೈದ್ಯರು ಹೇಳಿದ್ದಾರೆ. ಆದರೂ ವೃದ್ಧ ತಮಗೆ ತಿಳಿಯದೆ ಮೊದಲ ಡೋಸ್ ಕೋವ್ಯಾಕ್ಸಿನ್ ಹಾಗೂ ಎರಡನೇ ಡೋಸ್ ಕೋವಿಶಿಲ್ಡ್ ಲಸಿಕೆ ಪಡೆದಿದ್ದು, ಇದರಿಂದಾಗಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

    ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ 72 ವರ್ಷದ ದತ್ತಾತ್ರೇಯ ವಾಘಮಾರೆ ಎರಡು ಬೇರೆ ಬೇರೆ ಲಸಿಕೆಗಳನ್ನು ಪಡೆದಿದ್ದಾರೆ. ಇದರಿಂದಾಗಿ ಅನಾರೋಗ್ಯಕ್ಕೆ ಈಡಾಗಿದ್ದು, ಈ ಕುರಿತು ವೈದ್ಯರು ಪರಿಶೀಲನೆ ನಡೆಸುತ್ತಿದ್ದಾರೆ. ಇದು ಅನಿರೀಕ್ಷಿತವಾಗಿದೆ ಎಂದು ಆತಂಕಗೊಂಡಿದ್ದಾರೆ.

    ದತ್ತಾತ್ರೇಯ ಅವರು ಹತ್ತಿರದ ಗ್ರಾಮೀಣ ಆಸ್ಪತ್ರೆಯಲ್ಲಿ ಮಾರ್ಚ್ 22ರಂದು ಭಾರತ್ ಬಯೋಟೆಕ್‍ನ ಕೋವ್ಯಾಕ್ಸಿನ್ ಲಸಿಕೆ ಪಡೆದಿದ್ದರು. ಬಳಿಕ ಏಪ್ರಿಲ್ 30ರಂದು ಬೇರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಹಾಕಿಸಿಕೊಂಡಿದ್ದು, ಈ ವೇಳೆ ಕೋವ್ಯಾಕ್ಸಿನ್ ಬದಲಿಗೆ ಸೇರಂ ಇನ್‍ಸ್ಟಿಟಿಟ್ಯೂಟ್‍ನ ಕೋವಿಶೀಲ್ಡ್ ಹಾಕಿಸಿಕೊಂಡಿದ್ದಾರೆ. ಬಳಿಕ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.

    ಈ ಕುರಿತು ದತ್ತಾತ್ರೇಯ ಅವರ ಪುತ್ರ ದಿಗಂಬರ್ ಮಾತನಾಡಿ, ಎರಡನೇ ಡೋಸ್ ಲಸಿಕೆ ಹಾಕಿಸಿಕೊಂಡ ಬಳಿಕ ನಮ್ಮ ತಂದೆಗೆ ಸಣ್ಣ ಪ್ರಮಾಣದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಜ್ವರ, ಚರ್ಮ ರೋಗ ಸೇರಿದಂತೆ ವಿವಿಧ ಸಣ್ಣ ಪ್ರಮಾಣದ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ.

    ಪಾರ್ಟೂರಿನ ಸ್ಟೇಟ್ ಹೆಲ್ತ್ ಕೇರ್ ಸೆಂಟರ್‍ನಲ್ಲಿ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿಯ ಎಡವಟ್ಟಿನಿಂದ ಈ ರೀತಿಯಾಗಿದೆ. ಕೆಲವು ದಿನಗಳ ಹಿಂದೆ ಎರಡು ವ್ಯಾಕ್ಸಿನ್ ಸರ್ಟಿಫಿಕೇಟ್ ಗಮನಿಸಿದಾಗ ಬೇರೆ ಬೇರೆ ಲಸಿಕೆ ಪಡೆದಿರುವುದು ಗಮನಕ್ಕೆ ಬಂದಿದೆ. ಮೊದಲ ಡೋಸ್ ಸರ್ಟಿಫಿಕೇಟ್‍ನಲ್ಲಿ ಕೋವ್ಯಾಕ್ಸಿನ್, ಎರಡನೇ ಡೋಸ್ ವ್ಯಾಕ್ಸಿನ್ ಸರ್ಟಿಫಿಕೇಟ್‍ನಲ್ಲಿ ಕೋವಿಶೀಲ್ಡ್ ಎಂದು ನಮೂದಿಸಲಾಗಿದೆ.

    ನಮ್ಮ ತಂದೆ ಅನಕ್ಷರಸ್ಥ, ನನಗೂ ಅಷ್ಟೇನೂ ಓದು ತಿಳಿದಿಲ್ಲ. ಈ ಹಿಂದೆ ಯಾವ ಲಸಿಕೆ ಪಡೆದಿದ್ದರು, ಅದರ ಸರ್ಟಿಫಿಕೇಟ್ ಕೇಳುವುದು, ಮೊದಲ ಡೋಸ್ ಯಾವ ಲಸಿಕೆ ಪಡೆದಿದ್ದಾರೆ ಎಂಬುದನ್ನು ಪರಿಶೀಲಿಸುವುದು ಆರೋಗ್ಯ ಸಿಬ್ಬಂದಿಯ ಕೆಲಸವಾಗಿದೆ. ತಮ್ಮ ಊರಿನಲ್ಲಿರುವ ಆರೋಗ್ಯ ಸಿಬ್ಬಂದಿ ವಿರುದ್ಧ ಕುಟುಂಬಸ್ಥರು ದೂರಿದ್ದಾರೆ. ಈ ಅಚಾತುರ್ಯ ಹೇಗೆ ಸಂಭವಿಸಿತು ಎಂಬುದನ್ನು ತಿಳಿಯುವ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಎರಡು ಕೊರೊನಾ ವ್ಯಾಕ್ಸಿನ್ ಮಿಕ್ಸ್ ಮಾಡುವುದರಿಂದ ಅಡ್ಡ ಪರಿಣಾಮಗಳು ಉಂಟಾಗುತ್ತವೆ. ಸುಸ್ತು, ತಲೆ ನೋವು ಕಂಡುಬಂದಿರುವುದನ್ನು ಅಧ್ಯಯನದಲ್ಲಿ ಗಮನಿಸಲಾಗಿದೆ ಎಂದು ಈ ಹಿಂದೆ ದಿ ಲ್ಯಾನ್ಸೆಟ್ ವರದಿ ಮಾಡಿತ್ತು.

  • ಗರ್ಭಿಣಿ, ಬಾಣಂತಿಯರಿಗೆ ವ್ಯಾಕ್ಸಿನ್‍ಗೆ ಅವಕಾಶ- ಕೊರೊನಾ ಗೆದ್ದವರಿಗೆ 6 ವಾರಗಳ ಬಳಿಕ ಲಸಿಕೆ

    ಗರ್ಭಿಣಿ, ಬಾಣಂತಿಯರಿಗೆ ವ್ಯಾಕ್ಸಿನ್‍ಗೆ ಅವಕಾಶ- ಕೊರೊನಾ ಗೆದ್ದವರಿಗೆ 6 ವಾರಗಳ ಬಳಿಕ ಲಸಿಕೆ

    – ಮುಂದಿನ ವಾರ ಮುಕ್ತ ಮಾರುಕಟ್ಟೆಗೆ ಸ್ಫುಟ್ನಿಕ್

    ನವದೆಹಲಿ: ವ್ಯಾಕ್ಸಿನ್ ಕೊರತೆ ದೊಡ್ಡ ಪ್ರಮಾಣದಲ್ಲಿ ಕಂಡು ಬಂದಿರುವ ಸಂದರ್ಭದಲ್ಲಿಯೇ, ಕೋವಿಶೀಲ್ಡ್ ಲಸಿಕೆಯ ಮೊದಲ ಮತ್ತು ಎರಡನೇ ಡೋಸ್ ನಡುವಿನ ಅವಧಿಯನ್ನು 12 ವಾರಗಳಿಂದ 16 ವಾರಗಳ ತನಕ ಹೆಚ್ಚಿಸಲಾಗಿದೆ. ಈ ಸಂಬಂಧ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಮಾನ್ಯ ಮಾಡಿದೆ. ಇದೇ ವೇಳೆ ಗರ್ಭಿಣಿಯರಿಗೆ ಲಸಿಕೆ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಬಾಣಂತಿಯರು ಯಾವಾಗ ಬೇಕಿದ್ದರೂ ಲಸಿಕೆ ತೆಗೆದುಕೊಳ್ಳಬಹುದಾಗಿದೆ.

    ಕೊರೊನಾದಿಂದ ಚೇತರಿಸಿಕೊಂಡವರಿಗೆ 6 ವಾರಗಳ ಬಳಿಕ ಲಸಿಕೆ ನೀಡಲು ತೀರ್ಮಾನಿಸಿದೆ. ಈ ಹಿಂದೆಯೂ ಅಂದ್ರೆ ಕಳೆದ ಮಾರ್ಚ್‍ನಲ್ಲಿ, ಕೋವಿಶೀಲ್ಡ್ ಲಸಿಕೆಯ ಡೋಸ್‍ಗಳ ನಡುವಿನ ಅವಧಿಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿತ್ತು. ಲಸಿಕೆ ಉತ್ತಮ ಪರಿಣಾಮ ಬೀರಲು ಡೋಸ್‍ಗಳ ನಡುವಿನ ಅವಧಿಯನ್ನು ಕೇಂದ್ರ ಸರ್ಕಾರ 28 ದಿನಗಳಿಂದ 6ರಿಂದ 8 ವಾರಗಳವರೆಗೆ ಹೆಚ್ಚಿಸಿತ್ತು.

    ಮಕ್ಕಳ ಮೇಲೆ ವ್ಯಾಕ್ಸಿನ್ ಟ್ರಯಲ್‍ಗೆ ಸಿಗ್ನಲ್..!
    ಮಕ್ಕಳ ಮೇಲೆ ಕೊವ್ಯಾಕ್ಸಿನ್ ಲಸಿಕೆಯ ಕ್ಲಿನಿಕಲ್ ಟ್ರಯಲ್ಸ್‍ಗೆ ಡಿಸಿಜಿಐ ಗ್ರೀನ್ ಸಿಗ್ನಲ್ ನೀಡಿದೆ. 2 ವರ್ಷದಿಂದ 18 ವರ್ಷದೊಳಗಿನ ಮಕ್ಕಳ ಮೇಲೆ ಕೊವ್ಯಾಕ್ಸಿನ್ ಕ್ಲಿನಿಕಲ್ ಟ್ರಯಲ್ಸ್‍ಗೆ ತಜ್ಞರ ತಂಡ ಶಿಫಾರಸು ಮಾಡಿತ್ತು. ಇದನ್ನು ಪರಿಗಣಿಸಿರೋ ಡಿಸಿಜಿಐ, ಸಿಗ್ನಲ್ ನೀಡಿದೆ. ಹೀಗಾಗಿ ಶೀಘ್ರವೇ ದೇಶಾದ್ಯಂತ ಏಮ್ಸ್ ಆಸ್ಪತ್ರೆಗಳಲ್ಲಿ ಮಕ್ಕಳ ಮೇಲೆ ಕ್ಲಿನಿಕಲ್ ಟ್ರಯಲ್ ಆರಂಭವಾಗಲಿದೆ. ಈ ಮಧ್ಯೆ ಕೊರೊನಾ 3ನೇ ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬಿರಲೀದೆ ಎಂಬ ತಜ್ಞರ ಆತಂಕ ಹಿನ್ನೆಲೆಯಲ್ಲಿ, ಮುಖ್ಯಕಾರ್ಯದರ್ಶಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಪತ್ರ ಬರೆದಿದ್ದು, 7 ಅಂಶಗಳನ್ನು ಶಿಫಾರಸು ಮಾಡಿದೆ.

    ಮಕ್ಕಳ ರಕ್ಷಣೆಗೆ ಮಕ್ಕಳ ಆಯೋಗ ಪತ್ರ..!
    > ಜಿಲ್ಲಾವಾರು ಮಕ್ಕಳ ಚಿಕಿತ್ಸಾ ತಜ್ಞರ ಟಾಸ್ಕ್ ಫೋರ್ಸ್ ರಚನೆ
    > ಸೋಂಕಿತ ಮಕ್ಕಳಿಗೆ ಚಿಕಿತ್ಸೆ & ಐಸೋಲೆಷನ್‍ಗೆ ವ್ಯವಸ್ಥೆ ಅಗತ್ಯ ಸೌಲಭ್ಯ
    > ಜಿಲ್ಲಾ ಆಸ್ಪತ್ರೆ, ಸರ್ಕಾರದಿಂದ ನಿಗದಿ ಪಡಿಸಿದ ಖಾಸಗಿ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಹಾಸಿಗೆ ಮೀಸಲಿಡಬೇಕು
    > ಕೊರೊನಾದಿಂದ ಅನಾಥರಾದ ಮಕ್ಕಳ ರಕ್ಷಣೆಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಮೇಲ್ವಿಚಾರಣೆ ಸಮಿತಿ ರಚನೆ
    > ಮಕ್ಕಳ ಚಿಕಿತ್ಸೆಗೆ ಮಹಾರಾಷ್ಟ್ರ ಮಾದರಿಯಲ್ಲಿ ವಿಶೇಷ ಆಸ್ಪತ್ರೆ ತೆರೆದು ವೈದ್ಯಕೀಯ ಸೌಲಭ್ಯ ಒದಗಿಸಬೇಕು.

    3ನೇ ಅಲೆ ಬಗ್ಗೆ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಇದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಖ್ಯಾತ ತಜ್ಞರಾದ ಡಾ.ದೇವಿ ಪ್ರಸಾದ್ ಶೆಟ್ಟಿ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಿದೆ. ಈ ಮಧ್ಯೆ ಸ್ಫುಟ್ನಿಕ್ ಲಸಿಕೆಯನ್ನು ಮುಂದಿನವಾರ ಭಾರತದ ಮುಕ್ತ ಮಾರುಕಟ್ಟೆಗೆ ಬಿಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಭಾರತಕ್ಕೆ ಎಂಆರ್‍ಎನ್‍ಎ ಕೋವಿಡ್ ವ್ಯಾಕ್ಸಿನ್‍ಗಳನ್ನು ತರುವ ಪ್ರಯತ್ನ ನಡೆದಿದೆ.

  • ಕೋವಿಶೀಲ್ಡ್ 2ನೇ ಡೋಸ್ ಅವಧಿ 12-16 ವಾರಕ್ಕೆ ವಿಸ್ತರಣೆ

    ಕೋವಿಶೀಲ್ಡ್ 2ನೇ ಡೋಸ್ ಅವಧಿ 12-16 ವಾರಕ್ಕೆ ವಿಸ್ತರಣೆ

    ನವದೆಹಲಿ: ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ಪಡೆಯುವ ಅವಧಿಯನ್ನು ಸರ್ಕಾರ 12-16 ವಾರಕ್ಕೆ ವಿಸ್ತರಿಸಿದೆ.

    ಸರ್ಕಾರದ ಈ ನಿರ್ಧಾರದಿಂದ ಇನ್ನು ಮುಂದೆ ಒಂದು ಡೋಸ್ ಪಡೆದ ಬಳಿಕ 3-4 ತಿಂಗಳ ಅವಧಿಯ ಒಳಗಡೆ ಲಸಿಕೆಯನ್ನು ಪಡೆಯಬಹುದಾಗಿದೆ.

    ಕೋವಿಡ್ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ನೇಮಕಗೊಂಡ ತಜ್ಞರು ನೀಡಿದ ಶಿಫಾರಸಿನ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಭಾರತ್ ಬಯೋಟೆಕ್ ಅಭಿವೃದ್ಧಿ ಪಡಿಸಿರುವ ಕೊವ್ಯಾಕ್ಸಿನ್ ಲಸಿಕೆಯ ಎರಡನೇ ಡೋಸ್ ಅವಧಿ ವಿಸ್ತರಣೆಯಾಗಿಲ್ಲ. ಈಗ ಇರುವಂತೆ 4-6 ವಾರಗಳ ಒಳಗೆ 2ನೇ ಡೋಸ್ ಪಡೆಯಬಹುದಾಗಿದೆ.

    ಈಗಾಗಲೇ ಕೆನಡಾ ಸೇರಿದಂತೆ ಹಲವು ರಾಷ್ಟ್ರಗಳು ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ಅವಧಿಯನ್ನು 12-16 ವಾರಗಳಿಗೆ ವಿಸ್ತರಿಸಿದೆ. ಈ ಹಿಂದೆ 6-8 ವಾರಗಳ ಒಳಗಡೆ ಎರಡನೇ ಡೋಸ್ ಪಡೆಯಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿತ್ತು.