Tag: COVID time relief

  • ರೇಷನ್ ಕಾರ್ಡ್ ಇರುವವರಿಗೆ 2 ಸಾವಿರ ಪರಿಹಾರ- ತಮಿಳುನಾಡು ಸಿಎಂ ಭರ್ಜರಿ ಗಿಫ್ಟ್

    ರೇಷನ್ ಕಾರ್ಡ್ ಇರುವವರಿಗೆ 2 ಸಾವಿರ ಪರಿಹಾರ- ತಮಿಳುನಾಡು ಸಿಎಂ ಭರ್ಜರಿ ಗಿಫ್ಟ್

    – ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಪರಿಹಾರ ಘೋಷಣೆ

    ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಎಂ.ಕೆ.ಸ್ಟಾಲಿನ್ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಜನತೆಗೆ ಭರ್ಜರಿ ಗಿಫ್ಟ್ ನೀಡಿದ್ದು, ಪಡಿತರ ಚೀಟಿ ಹೊಂದಿದ ಪ್ರತಿ ಕುಟುಂಬಕ್ಕೆ 2 ಸಾವಿರ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.

    ಶುಕ್ರವಾರ 68 ವರ್ಷದ ಎಂ.ಕೆ.ಸ್ಟಾಲಿನ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ರಾಜ ಭವನದಲ್ಲಿ ಪ್ರಮಾಣವಚನ ಬೋಧಿಸಿದ್ದಾರೆ. ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಮಹತ್ವದ ಘೋಷಣೆ ಹೊರಡಿಸಿದ್ದು, ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬಕ್ಕೆ ಕೊರೊನಾ ಸಂಕಷ್ಟದ ಪರಿಹಾರವಾಗಿ ಮೊದಲ ಕಂತಿನಲ್ಲಿ 2 ಸಾವಿರ ರೂ. ಪರಿಹಾರ ಧನ ನೀಡಲಾಗುವುದು. ಇದಕ್ಕಾಗಿ ಒಟ್ಟು 4,153.39 ಕೋಟಿ ರೂ. ಮೀಸಲಿರಿಸಲಾಗಿದ್ದು, 2.07 ಕೋಟಿ ರೇಷನ್ ಕಾರ್ಡ್ ಹೊಂದಿದ ಕುಟುಂಬಗಳು ಇದರ ಪ್ರಯೋಜನ ಪಡೆಯಲಿವೆ ಎಂದು ಘೋಷಿಸಿದ್ದಾರೆ.

    ಡಿಎಂಕೆ ಅಧಿಕಾರಕ್ಕೆ ಬಂದರೆ ಕೋವಿಡ್ ಸಂಕಷ್ಟ ಕಾಲದಲ್ಲಿ ಪ್ರತಿ ಕುಟುಂಬಕ್ಕೆ 4 ಸಾವಿರ ರೂ. ನೀಡುವುದಾಗಿ ಅವರು ಅಶ್ವಾಸನೆ ನೀಡಿದ್ದರು. ಅದರಂತೆ ಇದೀಗ ಮೊದಲ ಕಂತಿನಲ್ಲಿ ಪ್ರತಿ ಕುಟುಂಬಕ್ಕೆ 2 ಸಾವಿರ ರೂ. ನೀಡಲಾಗುತ್ತಿದ್ದು, ಆದೇಶಕ್ಕೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸಹಿ ಹಾಕಿದ್ದಾರೆ.

    ಮೇ 16ರಿಂದ ಜಾರಿಗೆ ಬರುವಂತೆ ಸರ್ಕಾರಿ ಆವಿನ್ ಪೂರೈಸುವ ಹಾಲಿನ ಬೆಲೆಯನ್ನು 3ರೂ. ಗೆ ಕಡಿತಗೊಳಿಸುವ ಮತ್ತೊಂದು ಆದೇಶಕ್ಕೆ ಸ್ಟಾಲಿನ್ ಅವರು ಸಹಿಹಾಕಿದ್ದಾರೆ. ಜೊತೆಗೆ ಶನಿವಾರದಿಂದ ರಾಜ್ಯ ಸಾರಿಗೆ ನಿಗಮವು ನಿರ್ವಹಿಸುವ ಎಲ್ಲಾ ಸಾಮಾನ್ಯ ಶುಲ್ಕ ನಗರ ಬಸ್‍ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಈ ಉದ್ದೇಶಕ್ಕಾಗಿ ಸರ್ಕಾರವು 1,200 ಕೋಟಿ ರೂ. ಗಳನ್ನು ಮೀಸಲಿಟ್ಟಿದೆ.