Tag: Covid Test

  • 24 ಗಂಟೆಯಲ್ಲಿ 97,570 ಮಂದಿಗೆ ಕೊರೊನಾ ಸೋಂಕು – 1,201 ಮಂದಿ ಬಲಿ

    24 ಗಂಟೆಯಲ್ಲಿ 97,570 ಮಂದಿಗೆ ಕೊರೊನಾ ಸೋಂಕು – 1,201 ಮಂದಿ ಬಲಿ

    ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಸೆಪ್ಟೆಂಬರ್ ತಿಂಗಳಲ್ಲಿ ದಿನದಿನವೂ ಹೊಸ ದಾಖಲೆ ಬರುತ್ತಿದೆ. ಕಳೆದ 24 ಗಂಟೆಯಲ್ಲಿ 97,570 ಮಂದಿಗೆ ಹೊಸದಾಗಿ ಸೋಂಕು ದೃಢವಾಗಿದೆ.

    ಒಂದೇ ದಿನ ದೇಶದಲ್ಲಿ 97,570 ಮಂದಿಗೆ ಕೊರೊನಾ ಸೋಂಕು ದೃಢವಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 46,59,985ಕ್ಕೆ ಏರಿಕೆ ಆಗಿದೆ. ಇನ್ನೂ 24 ಗಂಟೆಯಲ್ಲಿ 1,201 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

    46,59,985ರ ಪೈಕಿ 9,58,316 ಸಕ್ರಿಯ ಪ್ರಕರಣಗಳಿದ್ದು, 36,24,197 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ 24 ಗಂಟೆಯಲ್ಲಿ 1,201 ಮಂದಿ ಕೊರೊನಾಗೆ ಬಲಿಯಾಗಿದ್ದು, ಇಲ್ಲಿವರೆಗೆ 77,470 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

    ದೇಶದಲ್ಲಿ ಶುಕ್ರವಾರ 10,91,251 ಮಂದಿಯನ್ನು ಕೊರೊನಾ ಟೆಸ್ಟ್‌ಗೆ ಒಳಪಡಿಸಲಾಗಿತ್ತು. ಈ ಮೂಲಕ ಇದುವರೆಗೂ 5,51,89,226 ಮಂದಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ. ಪ್ರಪಂಚದಲ್ಲಿ ಸೋಂಕಿತರ ಸಂಖ್ಯೆ 2.83 ಕೋಟಿಗೆ ಏರಿದ್ದು, ಭಾರತ 2ನೇ ಸ್ಥಾನದಲ್ಲಿದೆ.

    ರಾಜ್ಯದಲ್ಲಿ ಶುಕ್ರವಾರ 9,464 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 4,40,41ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 4,40,411 ಸೋಂಕಿತರ ಪೈಕಿ 98,326 ಸಕ್ರಿಯ ಪ್ರಕರಣಗಳಾಗಿದ್ದು, ಆಸ್ಪತ್ರೆಯಿಂದ 12,545 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 770 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ದಸರಾ ಗಜಪಡೆಯ ನೂತನ ಕ್ಯಾಪ್ಟನ್ ಅಭಿಮನ್ಯು? – ಅರ್ಜುನನಿಗೆ ನಿವೃತ್ತಿ ನಿಶ್ಚಿತ

    ದಸರಾ ಗಜಪಡೆಯ ನೂತನ ಕ್ಯಾಪ್ಟನ್ ಅಭಿಮನ್ಯು? – ಅರ್ಜುನನಿಗೆ ನಿವೃತ್ತಿ ನಿಶ್ಚಿತ

    ಮೈಸೂರು: ದಸರಾ ಗಜಪಡೆಯ ಕ್ಯಾಪ್ಟನ್ ಸ್ಥಾನದಿಂದ ಅರ್ಜುನ ಆನೆಗೆ ನಿವೃತ್ತಿ ಸಿಗುವುದು ಬಹುತೇಕ ಖಚಿತವಾಗಿದೆ. ಈ ಬಾರಿಯ ದಸರಾದಿಂದ ಅಭಿಮನ್ಯು ಗಜಪಡೆಯ ಕ್ಯಾಪ್ಟನ್ ಆಗೋದು ಬಹುತೇಕ ನಿಶ್ಚಿತವಾಗಿದೆ. ಇದರ ನಡುವೆ ದಸರಾ ಗಜಪಡೆಗೂ ಕೋವಿಡ್ ಟೆಸ್ಟ್ ಮಾಡಿಸಬೇಕು ಎಂಬ ಮಾತು ಶುರುವಾಗಿದೆ.

    ಗಜಪಡೆಗೆ ಕಳೆದ ಐದು ವರ್ಷಗಳಿಂದ ಅರ್ಜುನ ಕ್ಯಾಪ್ಟನ್ ಆಗಿದ್ದ. ಅರ್ಜುನಿಗೆ ಈಗ 60 ವರ್ಷ. ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ 60 ವರ್ಷ ತುಂಬಿದ ಆನೆಗಳ ಮೇಲೆ ಹೆಚ್ಚು ಒತ್ತಡ ಹೇರುವಂತಿಲ್ಲ. ಹೀಗಾಗಿ ಅರ್ಜನನ್ನು ಕ್ಯಾಪ್ಟನ್ ಶಿಪ್‍ನಿಂದ ಕೆಳಗೆ ಇಳಿಸುವುದು ಅನಿವಾರ್ಯ. ಅಲ್ಲಿಗೆ ಈ ಬಾರಿಯಿಂದ ದಸರಾ ಗಜಪಡೆಗೆ ಹೊಸ ಕ್ಯಾಪ್ಟನ್ ಬರುವುದು ನಿಶ್ಚಿತವಾದಂತೆ ಆಗಿದೆ.

    ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಮತ್ತಿಗೋಡು ಶಿಬಿರದಲ್ಲಿರುವ 54 ವರ್ಷದ ಅಭಿಮನ್ಯು ಆನೆ ದಸರಾ ಗಜಪಡೆಯ ನೂತನ ಕ್ಯಾಪ್ಟನ್ ಆಗುವುದು ಬಹುತೇಕ ಖಚಿತವಾಗಿದೆ. 20 ವರ್ಷಗಳಿಂದ ನಿರಂತರವಾಗಿ ದಸರಾ ಗಜಪಡೆಯ ಸದಸ್ಯನಾಗಿರುವ ಅಭಿಮನ್ಯುಗೆ ಕ್ಯಾಪ್ಟನ್ ಪಟ್ಟ ಕಟ್ಟಿ ಅಂಬಾರಿ ಹೊರಿಸೋಕೆ ಅರಣ್ಯ ಇಲಾಖೆ ನಿರ್ಧರಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಕೂಡ ಬರೆದಿದೆ. ಈ ಬಾರಿ ನಡೆಯುವ ಸರಳದ ಮೂಲಕವೇ ಅಭಿಮನ್ಯು ಆನೆಗೆ ಕ್ಯಾಪ್ಟನ್ ಶಿಪ್ ಸಿಕ್ಕಂತಾಗಲಿದೆ.

    ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಜಿ. ಅಲೆಕ್ಸಾಂಡರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಎಲ್ಲಕ್ಕಿಂತ ಕಾನೂನು ಮುಖ್ಯ. ನಾವು ಕಾನೂನು ಪಾಲಿಸಬೇಕು ಈ ಹಿನ್ನೆಲೆಯಲ್ಲಿ ಅಭಿಮನ್ಯು ಹೆಸರು ಸೂಚಿಸಲಾಗಿದೆ. ಅಂಬಾರಿ ಹೊರಲು ಆನೆಯ ಅವಶ್ಯಕತೆ ಇದೆ. ಅರ್ಜುನ ಆನೆಯೇ ಆಗಬೇಕು ಅಂತ ಏನು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಇದರ ಜೊತೆಗೆ ಆನೆಗಳಿಗೆ ಕೊರೊನಾಗೆ ಟೆಸ್ಟ್ ಮಾಡಿಸಬೇಕಾ ಎಂಬ ಚರ್ಚೆಯೂ ಸಾಗಿದೆ. ಕೊರೊನಾ ಟೆಸ್ಟ್ ಬಗ್ಗೆ ಇಲಾಖೆಯಲ್ಲೆ ವಿಭಿನ್ನ ಅಭಿಪ್ರಾಯಗಳು ಇರುವ ಕಾರಣ ಟೆಸ್ಟ್ ಮಾಡಿಸಬೇಕೋ ಬೇಡವೋ ಎಂಬ ಗೊಂದಲ ಹೆಚ್ಚಾಗಿದೆ. ಅವಶ್ಯಕತೆ ಬಿದ್ದರೆ ಆನೆಗಳಿಗೂ ಕೊರೊನಾ ಟೆಸ್ಟ್ ಮಾಡಿಸೋಣ ಎಂಬ ನಿಲುವಿಗೂ ಇಲಾಖೆ ಬಂದಿದೆ. ಅಲ್ಲದೆ ಈ ಬಗ್ಗೆ ತಜ್ಜರ ಸಲಹೆಗಾಗಿ ಮುಖ್ಯ ಅರಣ್ಯ ಅಧಿಕಾರಿಗಳಿಗೆ ಪತ್ರ ಕೂಡ ಬರೆಯಲಾಗಿದೆ. ವಿದೇಶದ ಮೃಗಾಲಯದಲ್ಲಿ ಹುಲಿಗೆ ಕೊರೊನಾ ಸೋಂಕು ಕಂಡ ಬಂದ ಕಾರಣ ದಸರಾ ಆನೆಗಳ ಬಗ್ಗೆಯೂ ಮುಂಜಾಗೃತ ಕ್ರಮವಹಿಸಲು ನಿರ್ಧಾರಿಸಲಾಗಿದೆ. ಈ ಬಗ್ಗೆ ತಜ್ಞರ ಸಲಹೆಗಾಗಿ ಇಲಾಖೆ ಕಾದಿದೆ.

  • 24 ಗಂಟೆಯಲ್ಲಿ 96,551 ಮಂದಿಗೆ ಕೊರೊನಾ – 1,209 ಮಂದಿ ಬಲಿ

    24 ಗಂಟೆಯಲ್ಲಿ 96,551 ಮಂದಿಗೆ ಕೊರೊನಾ – 1,209 ಮಂದಿ ಬಲಿ

    ನವದೆಹಲಿ: ದೇಶದಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಳವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 96,551 ಮಂದಿಯಲ್ಲಿ ಕೊರೊನಾ ಸೋಂಕು ದೃಢವಾಗಿದೆ.

    ಒಂದೇ ದಿನ 96,551 ಮಂದಿಗೆ ಕೊರೊನಾ ದೃಢವಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 45.62,415ಕ್ಕೆ ಏರಿಕೆ ಆಗಿದೆ. ಕಳೆದ 24 ಗಂಟೆಯಲ್ಲಿ 1,209 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

    45.62,415 ಪೈಕಿ 9,43,480 ಸಕ್ರಿಯ ಪ್ರಕರಣಗಳಿದ್ದು, 25,42,664 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ ಒಂದೇ ದಿನ 1,209 ಮಂದಿ ಸಾವನ್ನಪ್ಪುವ ಮೂಲಕ ಕೊರೊನಾಗೆ ಇದುವರೆಗೂ 76,271 ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    ದೇಶದಲ್ಲಿ ಗುರುವಾರ 11.63,542 ಮಂದಿಯನ್ನು ಕೊರೊನಾ ಟೆಸ್ಟ್‌ಗೆ ಒಳಪಡಿಸಲಾಗಿತ್ತು. ಈ ಮೂಲಕ ಇದುವರೆಗೂ 5,40,97,975 ಮಂದಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.

  • 20 ಸಾವಿರ ಕೋವಿಡ್ ಟೆಸ್ಟ್‌ಗೆ 10 ಕೋಟಿ ರೂ. ಖರ್ಚು ಮಾಡಲಿದೆ ಬಿಸಿಸಿಐ

    20 ಸಾವಿರ ಕೋವಿಡ್ ಟೆಸ್ಟ್‌ಗೆ 10 ಕೋಟಿ ರೂ. ಖರ್ಚು ಮಾಡಲಿದೆ ಬಿಸಿಸಿಐ

    ಅಬುಧಾಬಿ: ಐಪಿಎಲ್ 2020ರ ಆವೃತ್ತಿಯಲ್ಲಿ ಆಟಗಾರರು ಹಾಗೂ ತಂಡದ ಸಹಾಯಕ ಸಿಬ್ಬಂದಿಗೆ ಸುಮಾರು 20 ಸಾವಿರ ಕೊರೊನಾ ಟೆಸ್ಟ್ ನಡೆಸಲು ಬಿಸಿಸಿಐ ಸಿದ್ಧತೆ ನಡೆಸಿದ್ದು, ಇದಕ್ಕಾಗಿ 10 ಕೋಟಿ ರೂ.ಗಳ ಬಜೆಟ್‍ನ್ನು ಪ್ರತ್ಯೇಕವಾಗಿಸಿದೆ ಎಂದ ಮಾಹಿತಿ ಸಿಕ್ಕಿದೆ

    ಭಾರತದಲ್ಲಿ ತಮ್ಮ ಆಟಗಾರರಿಗೆ ಟೂರ್ನಿಯ ಫ್ರಾಂಚೈಸಿಗಳೇ ಕೊರೊನಾ ಟೆಸ್ಟ್ ಮಾಡಿಸಿದ್ದರು. ಯುಎಇಗೆ ತೆರಳಿದ ಬಳಿಕ ಆರ್‍ಟಿ-ಪಿಸಿಆರ್ ಟೆಸ್ಟ್ ಮಾಡಿಸುವ ಖರ್ಚನ್ನು ಬಿಸಿಸಿಐ ಭರಿಸುತ್ತಿದೆ.

    ಈ ಕುರಿತು ಮಾಹಿತಿ ನೀಡಿರುವ ಬಿಸಿಸಿಐ ವಕ್ತಾರರೊಬ್ಬರು, ಐಪಿಎಲ್ ಸಮಯದಲ್ಲಿ ಕೊರೊನಾ ಪರೀಕ್ಷೆ ನಡೆಲು 10 ಕೋಟಿ ರೂ. ಖರ್ಚು ಮಾಡಲಿದೆ. ಸಂಸ್ಥೆಯೊಂದಕ್ಕೆ ಸೇರಿರುವ 75 ಮಂದಿ ಆರೋಗ್ಯ ಸಿಬ್ಬಂದಿ ಐಪಿಎಲ್ ವೇಳೆಯಲ್ಲಿ ಟೆಸ್ಟಿಂಗ್ ನಡೆಸುವ ಕಾರ್ಯದಲ್ಲಿರುತ್ತಾರೆ. ಆಟಗಾರರು ಹಾಗೂ ಅಧಿಕಾರಿಗಳ ಭದ್ರತೆಯಲ್ಲಿ ಯಾವುದೇ ನಿರ್ಲಕ್ಷ್ಯವನ್ನು ವಹಿಸುವುದಿಲ್ಲ. ಆರೋಗ್ಯ ಸಿಬ್ಬಂದಿಗಾಗಿಯೇ ಪ್ರತ್ಯೇಕ ಹೋಟೆಲ್ ನೀಡಲಾಗಿದೆ ಎಂದು ವಿವರಿಸಿದ್ದಾರೆ.

    ಸೆ.19 ರಿಂದ ನ.10ರ ವರೆಗೂ ಐಪಿಎಲ್ 2020ರ ಆವೃತ್ತಿ ಯುಎಇನಲ್ಲಿ ನಡೆಯಲಿದ್ದು, 53 ದಿನಗಳ ಅವಧಿಯಲ್ಲಿ 60 ಪಂದ್ಯಗಳು ನಡೆಯಲಿದೆ. ಪರಿಣಾಮ ಟೂರ್ನಿ ಅಂತ್ಯವಾಗುವವರೆಗೂ ಕೊರೊನಾ ಟೆಸ್ಟ್ ನಡೆಸಲು ಬಿಸಿಸಿಐ ವಿಪಿಎಸ್ ಹೆಲ್ತ್ ಕೇರ್ ಸೆಂಟರ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಐಪಿಎಲ್ 13ನೇ ಆವೃತ್ತಿಗಾಗಿ ಆ.20ರ ವೇಳೆಗೆ ಎಲ್ಲಾ ತಂಡಗಳು ಯುಎಇಗೆ ತಲುಪಿದ್ದವು. ಈಗಾಗಲೇ 2 ಸಾವಿರ ಕೊರೊನಾ ಟೆಸ್ಟ್ ಗಳನ್ನು ಮಾಡಲಾಗಿದೆ ಎಂಬ ಮಾಹಿತಿ ಲಭಿಸಿದೆ.

    ಟೂರ್ನಿ ನಡೆಯುವ ಸಂದರ್ಭದಲ್ಲೂ ಐದು ದಿನಗಳಿಗೆ ಒಮ್ಮೆ ಆಟಗಾರರಿಗೆ ಕೊರೊನಾ ಪರೀಕ್ಷೆ ನಡೆಸಲು ಬಿಸಿಸಿಐ ಈಗಾಗಲೇ ನಿರ್ಧರಿಸಿದೆ. ತಂಡದ ಸಹಾಯಕ ಸಿಬ್ಬಂದಿ, ಹೋಟಲ್ ಸಿಬ್ಬಂದಿ, ಟ್ರಾವೆಲ್, ಫ್ರಾಂಚೈಸಿಗಳ ಮ್ಯಾನೇಜ್‍ಮೆಂಟ್ ಸಿಬ್ಬಂದಿಯೊಂದಿಗೆ ಆಟಗಾರರ ಸಂಪರ್ಕಕ್ಕೆ ಬರುವವರಿಗೆ ನಿಯಮಿತವಾಗಿ ಕೊರೊನಾ ಟೆಸ್ಟ್ ಮಾಡಲಿದ್ದಾರೆ. ಟೂರ್ನಿ ಅಂತ್ಯದ ವೇಳೆಗೆ ಸರಿ ಸುಮಾರು 20 ಸಾವಿರ ಕೋವಿಡ್ ಟೆಸ್ಟ್ ಮಾಡುವ ಅಂದಾಜನ್ನು ಬಿಸಿಸಿಐ ಹೊಂದಿದೆ.

  • ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಸೀಲ್‍ಡೌನ್ ಶಾಕ್ – ಬಿಬಿಎಂಪಿಯಿಂದ ಮತ್ತೆ ಎಡವಟ್ಟು

    ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಸೀಲ್‍ಡೌನ್ ಶಾಕ್ – ಬಿಬಿಎಂಪಿಯಿಂದ ಮತ್ತೆ ಎಡವಟ್ಟು

    ಬೆಂಗಳೂರು: ಇನ್ಮುಂದೆ ಸೀಲ್‍ಡೌನ್ ಮಾಡಲ್ಲ ಎಂದಿದ್ದ ಬಿಬಿಎಂಪಿ ಅಪಾರ್ಟ್‍ಮೆಂಟನ್ನೇ ಸೀಲ್‍ಡೌನ್ ಮಾಡುವ ಮೂಲಕ ಮತ್ತೆ ಎಡವಟ್ಟು ಮಾಡಿದೆ.

    ಬಿಬಿಎಂಪಿ ಬೆಂಗಳೂರಿನ ಸಹಕಾರ ನಗರದಲ್ಲಿರುವ ಇಡೀ ಅಪಾರ್ಟ್‌ಮೆಂಟ್‌ ಒಂದನ್ನು ಸೀಲ್‍ಡೌನ್ ಮಾಡಿದೆ. ಹೊರಗೆ ಹೋಗದಂತೆ ಕಬ್ಬಿಣದ ಪಟ್ಟಿ ಹಾಕಿದೆ. ಇದರಿಂದ ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಹಾಲು, ತರಕಾರಿ ಏನೂ ಸಿಗುತ್ತಿಲ್ಲ. ಇದೀಗ ಬಿಬಿಎಂಪಿಯ ನಿರ್ಧಾರದಿಂದ ಜನರು ಆಕ್ರೋಶಗೊಂಡಿದ್ದಾರೆ.

    ಕಳೆದ ಮೂರು ದಿನದ ಹಿಂದೆ ಅಪಾರ್ಟ್‌ಮೆಂಟ್‌ನಲ್ಲಿ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಈ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿರುವ 13 ಮಂದಿಗೆ ಸೋಂಕು ಪತ್ತೆಯಾಗಿತ್ತು. ಹೀಗಾಗಿ 13 ಮಂದಿಯನ್ನ ಹೋಂ ಐಸೋಲೇಷನ್ ಮಾಡಲಾಗಿದೆ. ಆದರೆ ಬಿಬಿಎಂಪಿ ಇಡೀ ಅಪಾರ್ಟ್‍ಮೆಂಟನ್ನೇ ಸೀಲ್‍ಡೌನ್ ಮಾಡಿದೆ. ಸೋಂಕಿತರ ನಿವಾಸಕ್ಕೆ ಸ್ಟಿಕರ್ ಹಾಕಿ ಆ ಮನೆಯವರನ್ನ ಮಾತ್ರ ಲಾಕ್ ಮಾಡಬೇಕು. ಆದರೆ ಬಿಬಿಎಂಪಿ ಅಧಿಕಾರಿಗಳು ಇಲ್ಲಿ ಅಪಾರ್ಟ್‌ಮೆಂಟ್‌ ಗೇಟ್ ಅನ್ನೇ ಲಾಕ್ ಮಾಡಿಸಿದ್ದಾರೆ. ಅಷ್ಟೇ ಅಲ್ಲದೇ ಯಾರು ಸಹ ಹೊರಕ್ಕೆ ಮತ್ತು ಒಳಕ್ಕೆ ಬಾರದಂತೆ ನಿರ್ಬಂಧ ಹಾಕಿದ್ದಾರೆ.

    ಆಗತ್ಯ ವಸ್ತುಗಳನ್ನ ತರಲು ಹೊರಕ್ಕೆ ಬಿಡುತ್ತಿಲ್ಲ. ಹಾಲು, ನೀರು, ತರಕಾರಿಯವನ್ನು ಸಹ ತರಲು ಬಿಡುತ್ತಿಲ್ಲ. ಇಡೀ ಅಪಾರ್ಟ್‌ಮೆಂಟ್‌ನಲ್ಲಿ 500 ಜನ ಇದ್ದೇವೆ. ಈ ರೀತಿ ಇಡೀ ಅಪಾರ್ಟ್‌ಮೆಂಟ್ ಸೀಲ್ ಮಾಡಿದ್ದಾರೆ. ಅಮೃತಹಳ್ಳಿ ಬಿಬಿಎಂಪಿ ವ್ಯಾಪ್ತಿಗೆ ಬರುವ ಅಪಾರ್ಟ್‌ಮೆಂಟ್ ಇದಾಗಿದೆ. ಶನಿವಾರ ಸಂಜೆಯಿಂದ ಮನೆಯಿಂದ ಹೊರಕ್ಕೆ ಬರದಂತೆ ನಿಷೇಧ ಮಾಡಿದ್ದಾರೆ. ನಾವೇಲ್ಲ ಹೇಗೆ ಜೀವನ ಮಾಡೋದು ಅಂತ ಅಪಾರ್ಟ್‍ಮೆಂಟ್ ನಿವಾಸಿಗಳು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಕೋವಿಡ್ ಟೆಸ್ಟ್ ನೆಗೆಟಿವ್ ಆದ್ರೂ ಬರುತ್ತೆ ಎಸ್‍ಎಂಎಸ್ – ಕೊನೆಗೂ ಕಣ್ತೆರೆದ ಸರ್ಕಾರ!

    ಕೋವಿಡ್ ಟೆಸ್ಟ್ ನೆಗೆಟಿವ್ ಆದ್ರೂ ಬರುತ್ತೆ ಎಸ್‍ಎಂಎಸ್ – ಕೊನೆಗೂ ಕಣ್ತೆರೆದ ಸರ್ಕಾರ!

    ಬೆಂಗಳೂರು: ಕೊನೆಗೂ ರಾಜ್ಯ ಸರ್ಕಾರ ನಿದ್ದೆಯಿಂದ ಎಚ್ಚೆತ್ತಿದೆ. ಕೋವಿಡ್ ಟೆಸ್ಟ್ ಮಾಡಿಸಿ ನೆಗೆಟಿವ್ ಬಂದರೆ ಮಾಹಿತಿ ನೀಡದೇ ಇದ್ದ ರಾಜ್ಯ ಸರ್ಕಾರ ಇನ್ನು ಮುಂದೆ ನಿಮ್ಮ ರಿಪೋರ್ಟ್ ನೆಗೆಟಿವ್ ಆದರೂ ಅದರ ಫಲಿತಾಂಶದ ಎಸ್‍ಎಂಎಸ್ ನಿಮ್ಮ ಮೊಬೈಲ್‍ಗೆ ಬರಲಿದೆ. ಹೀಗಾಗಿ ಇನ್ನು ಮುಂದೆ ಯಾರೂ ಆತಂಕದಲ್ಲಿ ದಿನ ದೂಡಬೇಕಾಗಿಲ್ಲ.

    ಈ ಬಗ್ಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರಾದ ಡಾ.ಅರುಂಧತಿ ಚಂದ್ರಶೇಖರ್ ಅವರು ಜುಲೈ 18ರಂದು ಸುತ್ತೋಲೆ ಹೊರಡಿಸಿದ್ದಾರೆ. ಎಲ್ಲಾ ಕೋವಿಡ್-19 ಪ್ರಯೋಗಾಲಯಗಳ ನೋಡಲ್ ಅಧಿಕಾರಿಗಳು ಕೋವಿಡ್-19 ಸೋಂಕಿಲ್ಲದ (ನೆಗೆಟಿವ್) ವ್ಯಕ್ತಿಗಳ ಫಲಿತಾಂಶ ಬಂದ ಕೂಡಲೇ ಸಂಬಂಧಪಟ್ಟವರಿಗೆ ಎಸ್‍ಎಂಎಸ್ ಮುಖಾಂತರ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ರವಾನಿಸಲು ಸೂಚಿಸಿದ್ದಾರೆ.

    ಮೆಸೇಜ್‍ನಲ್ಲಿ ಏನಿರುತ್ತೆ..?
    ಕನ್ನಡ: ಎಸ್.ಆರ್.ಎಫ್ ಐಡಿ: ಎಕ್ಸ್‌ವೈಝಡ್, ಫಲಿತಾಂಶ: ಕೋವಿಡ್-19 ಸೋಂಕಿಲ್ಲ (ನೆಗೆಟಿವ್). ಜ್ವರ, ಕೆಮ್ಮು ಅಥವಾ ಉಸಿರಾಟ ತೊಂದರೆಯ ಲಕ್ಷಣಗಳು ಕಂಡು ಬಂದಲ್ಲಿ, ಉಚಿತ ಸಹಾಯವಾಣಿ 14410 ಅಥವಾ 104ಗೆ ಕರೆ ಮಾಡಿ.

    ಇಂಗ್ಲಿಷ್: SRF ID: XYZ, Result: Negative. If you develop any symptoms like Fever, Cough, Breathlessness, call Toll free Helplines 14410 or 104

    ಈ ಹಿಂದೆ ಏನಾಗುತ್ತಿತ್ತು?: ರಾಜ್ಯದಲ್ಲಿ ಈವರೆಗೆ ಪಾಸಿಟಿವ್ ಬಂದವರಿಗೆ ಮಾತ್ರ ಫೋನ್ ಕಾಲ್ ಅಥವಾ ಎಸ್‍ಎಂಎಸ್ ಮೂಲಕ ಸಂದೇಶ ರವಾನೆಯಾಗುತ್ತಿತ್ತು. ಆದರೆ ಫಲಿತಾಂಶ ನೆಗೆಟಿವ್ ಬಂದವರಿಗೆ ಮಾತ್ರ ಯಾವುದೇ ಮಾಹಿತಿ ಕೊಡುತ್ತಿರಲಿಲ್ಲ. ಇದು ಟೆಸ್ಟ್‌ಗೆ ಹೋಗಿ ಫಲಿತಾಂಶಕ್ಕಾಗಿ ಕಾಯುತ್ತಿದ್ದವರಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣ ಮಾಡುತ್ತಿತ್ತು.

    ಟೆಸ್ಟ್ ಮಾಡಿಸಿದವರು ತಮ್ಮ ವರದಿ ಏನಾಗಿದೆ ಎಂದು ತಿಳಿಯಲು ಟೆಸ್ಟ್ ಸ್ಯಾಂಪಲ್ ಕೊಟ್ಟಲ್ಲಿಗೇ ಹೋಗಬೇಕಿತ್ತು. ಆದರೆ ಸರ್ಕಾರ ಮಾತ್ರ ಟೆಸ್ಟ್ ಕೊಟ್ಟವರು ಫಲಿತಾಂಶ ಬರುವವರೆಗೆ ಮನೆಯಲ್ಲೇ ಇರಬೇಕು ಎಂದು ಆದೇಶಿಸಿತ್ತು. ಆದರೆ ಕೆಲವು ಬಾರಿ 4-5 ದಿನ ಕಳೆದರೂ ಫಲಿತಾಂಶ ಬರುತ್ತಿರಲಿಲ್ಲ. ಹೀಗಾಗಿ ಎರಡು ಮೂರು ಬಾರಿ ರಿಸಲ್ಟ್ ಪಡೆಯಲು ಆಸ್ಪತ್ರೆಗೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದಾಗಿ ಟೆಸ್ಟ್ ಕೊಟ್ಟವರು ಹಾಗೂ ಕುಟುಂಬಸ್ಥರು ಏನಾಗುತ್ತೋ ಏನೋ ಎಂದು ಗೊಂದಲದಲ್ಲೇ ಕಾಲ ಕಳೆಯುತ್ತಿದ್ದರು. ಸರ್ಕಾರದ ಈ ನಿರ್ಧಾರದಿಂದಾಗಿ ಟೆಸ್ಟ್ ಕೊಟ್ಟವರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

  • ಇದುವರೆಗೂ ನಾಲ್ಕು ಬಾರಿ ಕೋವಿಡ್ ಟೆಸ್ಟ್- ಯಡಿಯೂರಪ್ಪಗೆ ಕೊರೊನಾ ನೆಗೆಟಿವ್

    ಇದುವರೆಗೂ ನಾಲ್ಕು ಬಾರಿ ಕೋವಿಡ್ ಟೆಸ್ಟ್- ಯಡಿಯೂರಪ್ಪಗೆ ಕೊರೊನಾ ನೆಗೆಟಿವ್

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮತ್ತೊಮ್ಮೆ ಕೋವಿಡ್ ಟೆಸ್ಟ್‌ಗೆ ಒಳಗಾಗಿದ್ದು, ಈ ಬಾರಿಯೂ ವರದಿಯಲ್ಲಿ ಕೊರೊನಾ ನೆಗೆಟಿವ್ ಬಂದಿದೆ.

    ಸಿಎಂ ನಿವಾಸ ಮತ್ತು ಕೃಷ್ಣಾದಲ್ಲಿ ಕೆಲಸ ಮಾಡುತ್ತಿದ್ದವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಅವರು ಕೋವಿಡ್ ಟೆಸ್ಟ್ ಮಾಡಿಸಿದ್ದರು. ವರದಿಯಲ್ಲಿ ನೆಗೆಟಿವ್ ಬಂದಿದೆ. ಇದುವರೆಗೆ ಸುಮಾರು ನಾಲ್ಕು ಬಾರಿ ಸಿಎಂ ಯಡಿಯೂರಪ್ಪ ಕೋವಿಡ್ ಪರೀಕ್ಷೆ ಮಾಡಿಸಿದ್ದಾರೆ. ಈ ಎಲ್ಲಾ ಟೆಸ್ಟ್‌ಗಳಲ್ಲಿ ಸಿಎಂಗೆ ಕೊರೊನಾ ನೆಗೆಟಿವ್ ಬಂದಿದೆ. ಇದರಿಂದ ಸಿಎಂ ಮತ್ತು ಅಧಿಕಾರಿಗಳು ಪೂರ್ತಿ ನಿರಾಳರಾಗಿದ್ದಾರೆ.

    ಕೃಷ್ಣಾ, ಕಾವೇರಿ ನಿವಾಸಗಳಲ್ಲಿ ಸೋಂಕು ಪತ್ತೆ ಹಿನ್ನೆಲೆಯಲ್ಲಿ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಸಿಎಂ ನಿವಾಸ ಕಾವೇರಿ, ಗೃಹ ಕಚೇರಿ ಕೃಷ್ಣಾ ಬಳಿ ಖಾಸಗಿ ಏಜೆನ್ಸಿಯ ಸಿಬ್ಬಂದಿಯಿಂದ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ.

    ಸಿಎಂ ಅವರ ಗೃಹ ಕಚೇರಿ ಕೃಷ್ಣಾ, ಸರ್ಕಾರಿ ನಿವಾಸ ಕಾವೇರಿ ಮತ್ತು ಅಧಿಕೃತ ನಿವಾಸ ಧವಳಗಿರಿಯಲ್ಲಿರುವ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಕೆಲ ದಿನಗಳ ಕಾಲ ಮನೆಯಲ್ಲಿ ಉಳಿದಿದ್ದರು.

     

  • ಸ್ವ್ಯಾಬ್ ಟೆಸ್ಟ್ ಕೊಟ್ಟವರಿಗೆ ಕ್ವಾರಂಟೈನ್ ಕಡ್ಡಾಯ- ಸರ್ಕಾರದ ಹೊಸ ಆದೇಶ

    ಸ್ವ್ಯಾಬ್ ಟೆಸ್ಟ್ ಕೊಟ್ಟವರಿಗೆ ಕ್ವಾರಂಟೈನ್ ಕಡ್ಡಾಯ- ಸರ್ಕಾರದ ಹೊಸ ಆದೇಶ

    ಬೆಂಗಳೂರು: ಕೊರೊನಾ ಸೋಂಕಿನ ಶಂಕೆ ಕಾರಣದಿಂದ ಗಂಟಲು ದ್ರವ ಪರೀಕ್ಷೆಯನ್ನು ಪರೀಕ್ಷೆಗೆ ಕೊಟ್ಟ ವ್ಯಕ್ತಿ ಐಸೋಲೇಷನ್ ಅಥವಾ ಮನೆಯಲ್ಲೇ ಕ್ವಾರಂಟೈನಲ್ಲಿರಬೇಕು ಎಂದು ಆರೋಗ್ಯ ಇಲಾಖೆ ಹೊಸ ಆದೇಶವನ್ನು ನೀಡಿದೆ.

    ಸೋಂಕು ಹರಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹೊಸ ಆದೇಶ ನೀಡಿದೆ. ಕೋವಿಡ್-19 ಪರೀಕ್ಷೆಯ ವರದಿ ಬರುವವರೆಗೂ ಹೋಂ ಐಶೋಲೇಷನ್‍ನಲ್ಲಿರುವುದು ಕಡ್ಡಾಯ ಮಾಡಲಾಗಿದೆ. ನಿಯಮಗಳನ್ನು ಮೀರಿ ಸ್ವ್ಯಾಬ್ ಟೆಸ್ಟ್ ಕೊಟ್ಟವರು ಸಾರ್ವಜನಿಕವಾಗಿ ಓಡಾಡುವುದು, ಕಚೇರಿಗೆ ಹೋಗುವುದು, ಅನಗತ್ಯವಾಗಿ ತಿರುಗಾಡುವುದು ಕಂಡು ಬಂದರೇ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.

    ಶಂಕಿತ ವ್ಯಕ್ತಿಗಳನ್ನು ಗುರುತಿಸಿ ಅಧಿಕಾರಿಗಳೇ ಸಾಕಷ್ಟು ಮಂದಿಯ ಸ್ವ್ಯಾಬ್ ಟೆಸ್ಟ್ ಮಾಡಿಸಿರುತ್ತಾರೆ. ಆದರೆ ಆ ಬಳಿಕ ವ್ಯಕ್ತಿಯನ್ನು ಯಾವುದೇ ಸೂಚನೆ ನೀಡದೆ ಮನೆಗೆ ಕಳುಹಿಸಿದ್ದ ಸಾಕಷ್ಟು ಪ್ರಕರಣಗಳು ವರದಿಯಾಗಿದ್ದವು. ಸ್ವ್ಯಾಬ್ ಟೆಸ್ಟ್ ಕೊಟ್ಟ ವ್ಯಕ್ತಿ ಮನೆಗೆ ಬಂದ ಬಳಿಕ ಹಲವು ಸ್ಥಳಗಳಿಗೆ ಭೇಟಿ ನೀಡುತ್ತಿದ್ದ. ಅಲ್ಲದೇ ಸಮಾರಂಭಗಳಲ್ಲೂ ಭಾಗಿಯಾಗುತ್ತಿದ್ದ. ಪರಿಣಾಮ ಇಲಾಖೆ ಹೊಸ ಆದೇಶವನ್ನು ಹೊರಡಿಸಿ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮಕೈಗೊಳ್ಳುವಾಗಿ ತಿಳಿಸಿದೆ.

  • ತುಮಕೂರು, ಗದಗ, ವಿಜಯಪುರಗಳಲ್ಲೂ ಕೋವಿಡ್ ಟೆಸ್ಟಿಂಗ್ ಲ್ಯಾಬ್ ಸ್ಥಾಪನೆ

    ತುಮಕೂರು, ಗದಗ, ವಿಜಯಪುರಗಳಲ್ಲೂ ಕೋವಿಡ್ ಟೆಸ್ಟಿಂಗ್ ಲ್ಯಾಬ್ ಸ್ಥಾಪನೆ

    – ಕರ್ನಾಟಕದಲ್ಲಿ ಈಗ 26 ಕೋವಿಡ್-19 ಪರೀಕ್ಷಾ ಪ್ರಯೋಗಾಲಯಗಳು ಕಾರ್ಯನಿರತ
    – ಮೇ ಅಂತ್ಯದೊಳಗೆ ರಾಜ್ಯದಲ್ಲಿ 60 ಕೋವಿಡ್ ಟೆಸ್ಟಿಂಗ್ ಲ್ಯಾಬ್

    ಬೆಂಗಳೂರು: ಗದಗ, ತುಮಕೂರು ಮತ್ತು ವಿಜಯಪುರಗಳ ಕೋವಿಡ್ ಪರೀಕ್ಷಾ ಪ್ರಯೋಗಾಲಯಗಳಿಗೆ ಕೇಂದ್ರ ಸರ್ಕಾರದ ಅನುಮತಿ ದೊರಕಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೀಗ 26 ಕೋವಿಡ್ ಟೆಸ್ಟಿಂಗ್ ಲ್ಯಾಬ್‍ಗಳು ಕಾರ್ಯ ನಿರ್ವಹಿಸುವಂತಾಗಿದೆ.

    ರಾಜ್ಯದಲ್ಲಿ ಈಗ ದಿನಕ್ಕೆ 5,000 ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯ ಲಭ್ಯವಾದಂತಾಗಿದ್ದು, ವೈದ್ಯಕೀಯ ಸೌಲಭ್ಯ ಹೆಚ್ಚಳ ಮತ್ತು ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದೆ. ಪ್ರಸ್ತುತ ಆರ್.ಟಿ.ಪಿ.ಸಿ.ಆರ್ ಲ್ಯಾಬ್ – 15, ಸಿಬಿಎನ್‍ಎಎಟಿ – 03 ಮತ್ತು ಖಾಸಗಿಯ 08 ಲ್ಯಾಬ್ ಗಳು ಕಾರ್ಯ ನಿರ್ವಹಿಸುತ್ತಿವೆ.

    ಇದಕ್ಕೂ ಮುನ್ನ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಏಪ್ರಿಲ್ ಅಂತ್ಯದೊಳಗೆ ರಾಜ್ಯದಲ್ಲಿ 27 ಕೋವಿಡ್ ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸುವ ಗುರಿ ಹೊಂದಿರುವುದಾಗಿ ತಿಳಿಸಿದ್ದರು. ಫೆಬ್ರವರಿ ಆರಂಭದಲ್ಲಿ 2 ಲ್ಯಾಬ್‍ಗಳಿದ್ದ ಕರ್ನಾಟಕದಲ್ಲಿ ಈಗ 26 ಲ್ಯಾಬ್‍ಗಳು ಕಾರ್ಯನಿರ್ವಹಿಸುತ್ತಿದ್ದು ಮೇ ಅಂತ್ಯದೊಳಗೆ 60 ಕೋವಿಡ್ ಪರೀಕ್ಷಾ ಪ್ರಯೋಗಾಲಯಗಳು ಕಾರ್ಯ ನಿರ್ವಹಿಸಲಿವೆ.

    ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕನಿಷ್ಠ 2 ಪ್ರಯೋಗಾಲಯ ಹೊಂದುವುದು ಸರ್ಕಾರದ ಗುರಿ ಎಂದು ಡಾ.ಸುಧಾಕರ್ ತಿಳಿಸಿದ್ದಾರೆ. ಇದರಿಂದಾಗಿ ತ್ವರಿತ ಗತಿಯಲ್ಲಿ ಪಾಸಿಟೀವ್ ಪ್ರಕರಣಗಳನ್ನು ಗುರುತಿಸಿ ಪ್ರತ್ಯೇಕಿಸಲು ಸಾಧ್ಯವಾಗುತ್ತಿದ್ದು, ರಾಜ್ಯದಲ್ಲಿ ಕೊರೋನ ವೈರಾಣು ಹರಡದಂತೆ ತಡೆಗಟ್ಟಲು ಇದು ಬಹಳ ಮಟ್ಟಿಗೆ ಸಹಕಾರಿಯಾಗಿದೆ ಎಂದು ಸಚಿವರು ಹೇಳಿದ್ದಾರೆ.

    4ಖಿ (ಟ್ರೇಸ್, ಟ್ರ್ಯಾಕ್, ಟೆಸ್ಟ್ ಮತ್ತು ಟ್ರೀಟ್) ಯೋಜನೆಯೊಂದಿಗೆ ಕರ್ನಾಟಕವು ಅತ್ಯಂತ ಸಮರ್ಥವಾಗಿ ಕೋವಿಡ್ ಸಂಕಷ್ಟವನ್ನು ಎದುರಿಸುತ್ತಿದ್ದು ಹೆಚ್ಚಿನ ಪ್ರಯೋಗಾಲಯಗಳನ್ನು ಹೊಂದುವುದರಿಂದ ಹೆಚ್ಚು ಟೆಸ್ಟ್ ಗಳನ್ನು ಕಡಿಮೆ ಅವಧಿಯಲ್ಲಿ ನಡೆಸಬಹುದಾಗಿದೆ. ಇದರಿಂದ ಚಿಕಿತ್ಸೆಗೆ ಅನುಕೂಲವಾಗಿದ್ದು ಕೋವಿಡ್ ನಿಯಂತ್ರಿಸುವ ಮತ್ತು ಸೋಂಕಿತರನ್ನು ಗುಣಮುಖರನ್ನಾಗಿ ಮಾಡುವ ನಿಟ್ಟಿನಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಿದೆ.