Tag: covid meeting

  • ಓಮಿಕ್ರಾನ್ ಉಪ-ತಳಿಗಳು ಅಪಾಯವನ್ನುಂಟು ಮಾಡುತ್ತವೆ: ಮೋದಿ ಎಚ್ಚರಿಕೆ

    ಓಮಿಕ್ರಾನ್ ಉಪ-ತಳಿಗಳು ಅಪಾಯವನ್ನುಂಟು ಮಾಡುತ್ತವೆ: ಮೋದಿ ಎಚ್ಚರಿಕೆ

    -ವೈದ್ಯಕೀಯ ಕಾಲೇಜು, ಆಸ್ಪತ್ರೆಗಳಲ್ಲಿ ಮೂಲಸೌಕರ್ಯ, ಮಾನವಶಕ್ತಿ ಹೆಚ್ಚಿಸಿ
    -ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ನಿಯಮ ಪಾಲನೆಗೆ ಉತ್ತೇಜಿಸಿ
    -ಕೇಂದ್ರ, ರಾಜ್ಯ ಸರ್ಕಾರಗಳು ಒಂದಾಗಿ ಕೊರೊನಾ ನಿಭಾಯಿಸಬೇಕು

    ನವದೆಹಲಿ: ಓಮಿಕ್ರಾನ್ ಉಪ-ತಳಿಗಳು ಅಪಾಯವನ್ನು ಉಂಟು ಮಾಡುತ್ತವೆ. ನಾವು ಜಾಗರೂಕರಾಗಿಬೇಕು ಎಂದು ಪ್ರಧಾನಿ ಮೋದಿ ಅವರು ಎಚ್ಚರಿಸಿದರು.

    ಕೋವಿಡ್ ನಾಲ್ಕನೇ ಅಲೆ ಹಿನ್ನೆಲೆಯಲ್ಲಿ ರಾಜ್ಯಗಳಲ್ಲಿ ಕೊರೊನಾ ಸ್ಥಿತಿಗತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಮನ್ಸೂಕ್ ಮಾಂಡವಿಯ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

    ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ರಾಜ್ಯಗಳಲ್ಲಿ ಲಸಿಕೆ ಅಭಿಯಾನ ಚುರುಕು ಮಾಡಿ. ಬೂಸ್ಟರ್ ಡೋಸ್ ಬಗ್ಗೆ ರಾಜ್ಯಗಳು ಗಮನ ಕೊಡಬೇಕು. 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಕೊಡಲು ಶೀಘ್ರವಾಗಿ ಕ್ರಮವಹಿಸಬೇಕು. ಅಂತರರಾಷ್ಟ್ರೀಯ ಪ್ರಯಾಣಿಕರ ಮೇಲೆ ಹೆಚ್ಚು ನಿಗಾವಹಿಸಬೇಕು. ಸೋಂಕಿತ ರಾಷ್ಟ್ರಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾವಹಿಸಬೇಕು ಎಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಎಲ್ಲಾ ರಾಜ್ಯದ ಸಿಎಂಗಳಿಗೆ ಸೂಚನೆ.

    ಕೊರೊನಾ ಸಂಖ್ಯೆ ಹೆಚ್ಚುತ್ತಿರುವ ರಾಜ್ಯಗಳಲ್ಲಿ ಪರೀಕ್ಷೆಗಳನ್ನು ಹೆಚ್ಚಿಸಿ. ಸೋಂಕು ಕಡಿಮೆ ಇದೆ ಅಂತ ಟೆಸ್ಟಿಂಗ್ ಕಡಿಮೆ ಮಾಡಬೇಡಿ. ಟೆಸ್ಟಿಂಗ್ ಪ್ರಮಾಣ ಹೆಚ್ಚಳ ಮಾಡಿ ಸೋಂಕಿತರನ್ನ ಬೇಗ ಟ್ರೇಸ್ ಮಾಡಬೇಕು ಎಂದು ತಿಳಿಸಿದರು.

    3ಟಿ ಸೂತ್ರ ಮತ್ತೆ ಪ್ರಸ್ತಾಪ ಮಾಡಿದ ಪ್ರಧಾನಿ, ಪ್ರತಿ ರಾಜ್ಯಗಳು 3ಟಿ ಸೂತ್ರ ಅಳವಡಿಸಿಕೊಳ್ಳಬೇಕು. ಈ ಮೂಲಕ 4ನೇ ಅಲೆ ತಡೆಗೆ ಮುಂಜಾಗ್ರತಾ ಕ್ರಮವಹಿಸಬೇಕು. ಟೆಸ್ಟಿಂಗ್, ಟ್ರೇಸಿಂಗ್, ಟ್ರೀಟ್‌ಮೆಂಟ್ ನಿಯಮ ಅನುಷ್ಠಾನ ಮಾಡಿ. ವೇಗವಾಗಿ ಟೆಸ್ಟಿಂಗ್ ಮಾಡಿ, ಸೋಂಕಿತರನ್ನು ಕೂಡಲೇ ಟ್ರೇಸ್ ಮಾಡಿ. ಸೋಂಕಿತರನ್ನು ಪತ್ತೆ ಹಚ್ಚಿ ಟ್ರೀಟ್‌ಮೆಂಟ್ ಕೊಡಿ ಎಂದು ಸಲಹೆ ನೀಡಿದರು.

    ವೈದ್ಯಕೀಯ ಕಾಲೇಜು, ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಮತ್ತು ಮಾನವಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ಔಷಧಿಗಳು, ಆಕ್ಸಿಜನ್ ವ್ಯವಸ್ಥೆ ಸಿದ್ಧ ಮಾಡಿಕೊಳ್ಳಿ. 4ನೇ ಅಲೆ ಅಪಾಯಕಾರಿಯಲ್ಲದೇ ಇದ್ದರೂ ಎಚ್ಚರಿಕೆ ಇರಲಿ. ರೂಪಾಂತರ ತಳಿ ಬಗ್ಗೆ ನಿರ್ಲಕ್ಷ್ಯ ಮಾಡೋದು ಬೇಡ. ಬೇರೆ ದೇಶಗಳಲ್ಲಿ 4ನೇ ಅಲೆ ಬಂದಿದ್ದರೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾದ ವರದಿ ಆಗಿಲ್ಲ. ಆದರೂ ರಾಜ್ಯಗಳು ಮೈಮರೆಯುವುದು ಬೇಡ. ಆಸ್ಪತ್ರೆ ವ್ಯವಸ್ಥೆ ಸಿದ್ಧವಾಗಿ ಇರಿಸಿಕೊಳ್ಳಿ. ಆಕ್ಸಿಜನ್ ಕೊರತೆ ಆಗದಂತೆ ಕ್ರಮವಹಿಸಿ. ಆಸ್ಪತ್ರೆಗಳು, ಬೆಡ್‌ಗಳು, ಔಷಧಿಗಳ ಕೊರತೆ ಆಗದಂತೆ ಎಚ್ಚರಿಕೆವಹಿಸಿ ಎಂದು ಹೇಳಿದರು.

    ವ್ಯಾಕ್ಸಿನ್ ದೊಡ್ಡ ಕವಚವಾಗಿದೆ. ವ್ಯಾಕ್ಸಿನ್ ಪಡೆಯುವುದರಿಂದ ಅಪಾಯದಿಂದ ರಕ್ಷಣೆ ಸಿಗಲಿದೆ. ಶಾಲಾ ಮಕ್ಕಳಲ್ಲೂ ಸೋಂಕು ಕಂಡು ಬಂದಿತ್ತು. ಈಗ ಮಕ್ಕಳಿಗೂ ಲಸಿಕೆ ನೀಡಲಾಗುತ್ತಿದೆ. ಶೀಘ್ರದಲ್ಲಿ ಹೆಚ್ಚು ಮಕ್ಕಳಿಗೆ ವ್ಯಾಕ್ಸಿನ್ ನೀಡುವುದು ನಮ್ಮ ಆದ್ಯತೆ. ಶಾಲೆಗಳಲ್ಲಿ ವಿಶೇಷ ವ್ಯಾಕ್ಸಿನ್ ಅಭಿಯಾನ ನಡೆಸಲಾಗುವುದು ಎಂದು ತಿಳಿಸಿದರು.

    ಮುನ್ನೆಚ್ಚರಿಕೆ ಡೋಸ್ ಪಡೆಯುವುದು ಉತ್ತಮ. ಮೂರನೇ ಅಲೆಯಲ್ಲಿ ನಿತ್ಯ ಮೂರು ಲಕ್ಷ ಪ್ರಕರಣಗಳು ವರದಿಯಾಗಿದೆ. ಆಗಲೂ ನಮ್ಮ ರಾಜ್ಯಗಳು ಪರಿಸ್ಥಿತಿ ನಿಭಾಯಿಸಿವೆ. ಈಗಲೂ ನಮ್ಮ ತಜ್ಞರು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಭಾರತದಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಲಹೆ ನೀಡಲಿದ್ದಾರೆ ಎಂದರು.

    COVID HIKE 2

    ಇವತ್ತಿನ ಸಭೆಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಚರ್ಚೆ ಮಾಡಿದೆ. ಈಗಾಗಲೇ ಸಾಕಷ್ಟು ಸುಧಾರಣೆಯಾಗಿದೆ. ಆಕ್ಸಿಜನ್, ವೆಂಟಿಲೇಟರ್ ವಿಚಾರಣದಲ್ಲಿ ನಾವು ಅಭಿವೃದ್ಧಿ ಸಾಧಿಸಿದ್ದೇವೆ. ಕೊರೊನಾ ಹೋರಾಟವನ್ನು ನಾವು ಮುಂದುವರಿಸಲಿದ್ದೇವೆ. ಈ ದೀರ್ಘ ಹೋರಾಟದಲ್ಲಿ ನಾವು ಗೆಲ್ಲಲಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದರು.

    ಕೊರೊನಾದಿಂದ ಆಗುವ ಪರಿಸ್ಥಿತಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿಭಾಯಿಸಬೇಕು. ಈ ಹಿಂದೆಯೂ ಎರಡು ಸರ್ಕಾರಗಳು ಇಂತಹ ಪ್ರಯತ್ನ ಮಾಡಿವೆ. ಆರ್ಥಿಕ ನಿರ್ಧಾರಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹೊಂದಾಣಿಕೆ ಅವಶ್ಯಕತೆ ಇದೆ. ಇದೊಂದು ಯುದ್ಧದ ಪರಿಸ್ಥಿತಿ ಇದ್ದಂತೆ. ಇಂತಹ ದಿನಗಳಲ್ಲಿ ಎರಡು ಸರ್ಕಾರಗಳ ಮಧ್ಯೆ ಹೊಂದಾಣಿಕೆ ಮುಖ್ಯ ಎಂದು ಆಶಯ ವ್ಯಕ್ತಪಡಿಸಿದರು.

    ಇದಕ್ಕೂ ಮುನ್ನ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿಗಳ ನೇತೃತ್ವದಲ್ಲಿ ಇದು 24ನೇ ಕೋವಿಡ್ ಸಭೆ. ಈಗಾಗಲೇ ಪ್ರಧಾನಿಗಳ ನೇತೃತ್ವದಲ್ಲಿ ಮೂರು ಅಲೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದೇವೆ. ಅದರಂತೆ ನಾಲ್ಕನೇ ಅಲೆಯನ್ನು ಸಮರ್ಥವಾಗಿ ಎದುರಿಸಬೇಕು ಎಂದು ತಿಳಿಸಿದರು.

    ತಜ್ಞರ ಸಲಹೆಗಳ ಆಧಾರದಲ್ಲಿ ಮುಂಜಾಗ್ರತಾ ಕ್ರಮ ವಹಿಸಬೇಕು. ಜನರು ಕೊರೊನಾ ನಿಯಮಗಳನ್ನು ಪಾಲಿಸುವಂತೆ ಮಾಡಬೇಕು. ಕಾಲ ಕಾಲಕ್ಕೆ ಅಗತ್ಯ ಕ್ರಮಗಳೊಂದಿಗೆ ನಾಲ್ಕನೇ ಅಲೆ ನಿಯಂತ್ರಣ ಮಾಡಬೇಕು ಎಂದರು.

    ಇದೇ ವೇಳೆ ಕರ್ನಾಟಕದ ಕೋವಿಡ್ ಪರಿಸ್ಥಿತಿ ಹಾಗೂ ಲಸಿಕಾಕರಣದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ಮೋದಿ ಅವರಿಗೆ ಮಾಹಿತಿ ನೀಡಿದರು. ಈ ವೇಳೆ ಆರೋಗ್ಯ ಸಚಿವ ಡಾ. ಕೆ.ಸುಧಾಕರ್, ಸಿಎಸ್ ರವಿಕುಮಾರ್ ಉಪಸ್ಥಿತರಿದ್ದರು.

  • ಮುಖ್ಯಮಂತ್ರಿಗಳೊಂದಿಗೆ ಇಂದು ಪ್ರಧಾನಿ ಮೋದಿ ʻಕೋವಿಡ್‌ʼ ಸಭೆ

    ಮುಖ್ಯಮಂತ್ರಿಗಳೊಂದಿಗೆ ಇಂದು ಪ್ರಧಾನಿ ಮೋದಿ ʻಕೋವಿಡ್‌ʼ ಸಭೆ

    ನವದೆಹಲಿ: ಕಳೆದ ಎರಡು ವಾರಗಳಿಂದ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ.

    ಪ್ರಧಾನ ಮಂತ್ರಿ ಕಚೇರಿ (PMO) ಪ್ರಕಾರ, ವರ್ಚುವಲ್ ಸಭೆಯು ಬುಧವಾರ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಇದನ್ನೂ ಓದಿ: ಸಿನಿಮಾದಲ್ಲಿ ಅವಕಾಶ ಕೊಡಿಸೋ ನೆಪದಲ್ಲಿ ಲೈಂಗಿಕ ದೌರ್ಜನ್ಯ – ನಟ ವಿಜಯ್ ಬಾಬು ವಿರುದ್ಧ ಪ್ರಕರಣ ದಾಖಲು

    covid india

    ಪ್ರಧಾನ ಮಂತ್ರಿ ಮತ್ತು ಪ್ರಧಾನ ಮಂತ್ರಿ ಕಚೇರಿಯ ಹಿರಿಯ ಅಧಿಕಾರಿಗಳ ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಆಯಾ ಸಚಿವಾಲಯಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.

    ಈ ಹಿಂದೆಯೂ ಸಹ ಪ್ರಧಾನಿ ಮೋದಿ ಅವರು ಕೋವಿಡ್‌ ವಿಷಯವಾಗಿ ಮುಖ್ಯಮಂತ್ರಿಗಳು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಹಲವಾರು ಸಭೆಗಳನ್ನು ನಡೆಸಿದ್ದಾರೆ. ಇದನ್ನೂ ಓದಿ: ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ಗೆ ಕೋವಿಡ್

    ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,483 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಮಂಗಳವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಬುಲೆಟಿನ್ ಪ್ರಕಾರ, ಸಕ್ರಿಯ ಪ್ರಕರಣ 15,636 ಇದ್ದರೆ, ಪಾಸಿಟಿವಿಟಿ ದರ ಶೇ.0.55 ಆಗಿದೆ.

    ಭಾನುವಾರದ ‘ಮನ್ ಕಿ ಬಾತ್’ ರೇಡಿಯೋ ಪ್ರಸಾರದಲ್ಲಿ ಪ್ರಧಾನಿ ಮೋದಿ ಅವರು, ಹಬ್ಬದ ಋತುವಿನಲ್ಲಿ ಕೋವಿಡ್‌ ವಿಚಾರವಾಗಿ ಜಾಗರೂಕರಾಗಿರಿ ಎಂದು ಜನರಿಗೆ ತಿಳಿಸಿದ್ದರು. ಕೋವಿಡ್ ನಿಯಂತ್ರಣಕ್ಕಾಗಿ ಜನರು ಮಾಸ್ಕ್ ಧರಿಸಿ ಹಾಗೂ ಕೋವಿಡ್‌ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ ಎಂದು ಸಲಹೆ ನೀಡಿದ್ದರು.