Tag: covid hospital

  • ಕೊಡಗಿನಲ್ಲಿ ವೈದ್ಯರು, ನರ್ಸ್ ಗಳು ಸೇರಿದಂತೆ 14 ಜನರಿಗೆ ಕೊರೊನಾ

    ಕೊಡಗಿನಲ್ಲಿ ವೈದ್ಯರು, ನರ್ಸ್ ಗಳು ಸೇರಿದಂತೆ 14 ಜನರಿಗೆ ಕೊರೊನಾ

    ಮಡಿಕೇರಿ : ಕೊರೊನಾ ಮಹಾಮಾರಿ ವಿರುದ್ಧ ಹೋರಾಡುತ್ತಾ, ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಮತ್ತು ನರ್ಸ್ ಗಳು ಸೇರಿದಂತೆ ಒಂದೇ ದಿನ 14 ಜನರಿಗೆ ಸೋಂಕು ತಗುಲಿದೆ.

    ಮಡಿಕೇರಿಯಲ್ಲಿರುವ ಕೊಡಗು ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ 7 ವೈದ್ಯರು ಮತ್ತು ನರ್ಸ್‍ಗಳಿಗೆ ಕೊರೊನಾ ಸೋಂಕು ತಗುಲಿದೆ. ಇನ್ನು ಕೊರೊನಾ ರೋಗಿ 9583 ನೇ ಸಂಪರ್ಕದಿಂದ ಮೂವರಿಗೆ ಪಾಸಿಟಿವ್ ಆಗಿದ್ದರೆ, 9215 ನೇ ರೋಗಿಯ ಸಂಪರ್ಕದಿಂದ ಇಬ್ಬರಿಗೆ ಮಹಾಮಾರಿ ವಕ್ಕರಿಸಿದೆ.

    ರೋಗ ಲಕ್ಷಣದಿಂದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ಮತ್ತಿಬ್ಬರಿಗೆ ಕೊರೊನಾ ಹೆಗಲೇರಿದೆ. ಹೀಗಾಗಿ ಒಟ್ಟು ಒಂದೇ ದಿನ ಬರೋಬ್ಬರಿ 14 ಜನರಿಗೆ ಮಹಾಮಾರಿ ವಕ್ಕರಿಸಿದೆ. ಹೀಗಾಗಿ ಕೊಡಗಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ 22ಕ್ಕೆ ಏರಿದೆ.

    ಮಡಿಕೇರಿಯ ಜಿಲ್ಲಾಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿ ಬದಲಾಗಿದ್ದರಿಂದ ನಗರ ಅಶ್ವಿನಿ ಆಸ್ಪತ್ರೆಯನ್ನು ಜನರಲ್ ಆಸ್ಪತ್ರೆಯಾಗಿ ಬದಲಾಯಿಸಲಾಗಿತ್ತು. ಆದರೆ ಅಶ್ವಿನಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿತ್ತಿದ್ದ ವೈದ್ಯರಿಗೂ ಕೊರೊನಾ ಹೆಗಲೇರಿದೆ. ಹೀಗಾಗಿ ಅಶ್ವಿನಿ ಆಸ್ಪತ್ರೆಯನ್ನು ನಾಳೆ ಸೀಲ್ ಡೌನ್ ಮಾಡಿ ಸ್ಯಾನಿಟೈಸರ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.

    ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಮತ್ತು ನರ್ಸ್ ಗಳಿಗೂ ಕೊರೊನಾ ಪಾಸಿಟಿವ್ ಪ್ರಕರಣ ಆಗಿರುವುದರಿಂದ ಜಿಲ್ಲೆಯಲ್ಲಿ ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ ಜನರಲ್ ಅಶ್ವಿನಿ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ನರ್ಸ್ ಗಳಿಗೂ ಕೊರೊನಾ ಪಾಸಿಟಿವ್ ಆಗಿರುವುದು, ಇಲ್ಲಿನ ಚಿಕಿತ್ಸೆ ಪಡೆದುಕೊಂಡ ಇತರೆ ರೋಗಿಗಳಿಗೂ ಇದು ಆತಂಕಕ್ಕೆ ಎಡೆಮಾಡಿದೆ. ಒಟ್ಟಿನಲ್ಲಿ ಕಳೆದ ಒಂದು ತಿಂಗಳಿನಿಂದ ಕೊಡಗಿನತ್ತ ಸುಳಿಯದ ಕೊರೊನಾ ಮಹಾಮಾರಿ ಮೂರು ದಿನಗಳಿಂದ ಎರಡಂಕಿಯ ಮೇಲೆ ಬರುತ್ತಿರುವುದು ಕೊಡಗಿನ ಜನರನ್ನು ಆತಂಕ್ಕೆ ದೂಡಿದೆ.

  • ವಿಕ್ಟೋರಿಯಾದಲ್ಲಿ ಕೊರೊನಾ ರೋಗಿಗಳೇ ಕಸ ಗುಡಿಸಬೇಕು, ನೆಲ ಒರೆಸಬೇಕು!

    ವಿಕ್ಟೋರಿಯಾದಲ್ಲಿ ಕೊರೊನಾ ರೋಗಿಗಳೇ ಕಸ ಗುಡಿಸಬೇಕು, ನೆಲ ಒರೆಸಬೇಕು!

    ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ರಾಜ್ಯಕ್ಕೆ ಒಕ್ಕರಿಸಿದ ಬಳಿಕ ಜನ-ಜೀವನ ಅಸ್ತವ್ಯಸ್ತವಾಗಿದೆ. ಈ ಮಧ್ಯೆ ಕೋವಿಡ್ ಆಸ್ಪತ್ರೆಯ ಕರ್ಮಕಾಂಡ ಬಗೆದಷ್ಟು ಬಯಲಾಗುತ್ತಿದೆ. ಕೋವಿಡ್ ಆಸ್ಪತ್ರೆಗಳಲ್ಲಿ ರೋಗಿಗಳು ಪರದಾಟ ಅನುಭವಿಸುತ್ತಿದ್ದಾರೆ.

    ಹೌದು. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾ ಪಾಸಿಟಿವ್ ವ್ಯಕ್ತಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಆಸ್ಪತ್ರೆಯ ಕೊಠಡಿಯಲ್ಲಿ ಶುಚಿತ್ವ ಅನ್ನೋದೇ ಇಲ್ಲ. ಸಮಯಕ್ಕೆ ಊಟ, ತಿಂಡಿ ಬರಲ್ಲ. ನೀರಂತೂ ಬರೋದೆ ಇಲ್ಲ.

    ಅವರವರ ಬೆಡ್‍ಗಳ ಶುಚಿತ್ವ ಕೂಡ ರೋಗಿಗಳೇ ಮಾಡಿಕೊಳ್ಳುವ ಸ್ಥಿತಿ ಎದುರಾಗಿದೆ. ಆಸ್ಪತ್ರೆಯಲ್ಲಿ ರೋಗಿಗಳ ನರಕಯಾತನೆಯ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಸೂಕ್ತ ಚಿಕಿತ್ಸೆ ಹಾಗೂ ಸೌಕರ್ಯ ನೀಡುವಂತೆ ಕೊರೊನಾ ಸೋಂಕಿತರು ಮನವಿ ಮಾಡಿಕೊಳ್ಳುತ್ತಿದ್ದಾರೆ.

    ರೋಗಿಗಳೇ ವಾರ್ಡ್ ಕಸ ಗುಡಿಸಬೇಕು, ವಾರ್ಡಿನಲ್ಲಿ ಸ್ವಚ್ಛತೆ ಇಲ್ಲ. ವಾರ್ಡ್ ನೆಲ ಕ್ಲೀನ್ ಮಾಡಬೇಕು. ಬಾತ್‍ರೂಮ್ ಅಂತೂ ಪಾಚಿ ಕಟ್ಟಿದೆ. ಈ ಮಧ್ಯೆ ರೋಗಿಗಳು ಇರಬೇಕು. ಇದರಿಂದ ಬೇಸತ್ತ ರೋಗಿಗಳು ಈಗ ಸೂಕ್ತ ಸೌಲಭ್ಯ ಹಾಗೂ ಚಿಕಿತ್ಸೆಗಾಗಿ ಕಣ್ಣೀರು ಹಾಕುತ್ತಿದ್ದಾರೆ. ಒಟ್ಟಿನಲ್ಲಿ ಆರೋಗ್ಯ ಸಚಿವರೇ ಇದೆಂಥಾ ಅವಸ್ಥೆ, ಸೋಂಕಿನ ನರಳಾಟದ ಮಧ್ಯೆಯೂ ಇದೆಂಥಾ ಕೆಲಸ, ಚಿಕಿತ್ಸೆ ಕೊಡೋ ಬದಲು ಇದೇನು ಮಾಡಿಸ್ತಿದ್ದೀರಿ. ಹೀಗೆ ಮಾಡಿಸಿದ್ರೆ ಅವರು ಗುಣಮುಖರಾಗೋದು ಹೇಗೆ ಎಂಬ ಪ್ರಶ್ನೆಗಳು ಹುಟ್ಟಿವೆ.

  • ರಾತ್ರಿ ಕೋವಿಡ್ ಆಸ್ಪತ್ರೆಗೆ ನುಗ್ಗಿ ಸೋಂಕಿತೆ ಜೊತೆ ಅಸಭ್ಯ ವರ್ತನೆ

    ರಾತ್ರಿ ಕೋವಿಡ್ ಆಸ್ಪತ್ರೆಗೆ ನುಗ್ಗಿ ಸೋಂಕಿತೆ ಜೊತೆ ಅಸಭ್ಯ ವರ್ತನೆ

    -ಲೈಟ್ ಆಫ್ ಮಾಡಿ ಕೈ ಹಿಡಿದು ಎಳೆದಾಡಿದ ಕಾಮುಕ

    ಕೋಲಾರ: ಕೋವಿಡ್-19 ಆಸ್ಪತ್ರೆಗೆ ನುಗ್ಗಿದ ವ್ಯಕ್ತಿ ಕೊರೊನಾ ಸೋಂಕಿತ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಭಾನುವಾರ ಘಟನೆ ನಡೆದಿದ್ದು, ಈ ಸಂಬಂಧ ಆಸ್ಪತ್ರೆಯ ರಕ್ಷಣಾಧಿಕಾರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ವಿಶ್ವನಾಥಾಚಾರಿ ಅಸಭ್ಯವಾಗಿ ವರ್ತಿಸಿದ ವ್ಯಕ್ತಿ. ಈತ ನಗರದ ಬೆಸ್ತರ ಬೀದಿಯ ಗೆಲ್ಪೇಟ್ ನಿವಾಸಿ ಎಂದು ತಿಳಿದು ಬಂದಿದೆ. ಶ್ರೀನಿವಾಸಪುರ ತಾಲೂಕಿನ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಅರೋಗ್ಯ ಸಹಾಯಕನಾಗಿದ್ದಾನೆ ಎಂದು ತಿಳಿದು ಬಂದಿದೆ.

    ರಾತ್ರಿ ನಡೆದಿದ್ದೇನು?
    ಜೂನ್ 21ರ ರಾತ್ರಿ ಸುಮಾರು 1.30ಕ್ಕೆ ಆಸ್ಪತ್ರೆಗೆ ಬಂದ ವಿಶ್ವನಾಥಾಚಾರಿ ನಿಷೇಧಿತ ಪ್ರದೇಶದೊಳಗೆ ಬಂದಿದ್ದಾನೆ. ಕೊಠಡಿಯ ಲೈಟ್ ಗಳು ಆಫ್ ಮಾಡಿ ಕೊರೊನಾ ಸೋಂಕಿತೆಯ ಕೈ ಹಿಡಿದು ಎಳೆದಾಡಿ ಅಸಭ್ಯವಾಗಿ ವರ್ತಿಸಿದ್ದಾನೆ. ಸೋಂಕಿತೆ ಕೂಗಿಕೊಳ್ಳುತ್ತಿದ್ದಂತೆ ಆಸ್ಪತ್ರೆಯ ಸಿಬ್ಬಂದಿ ತೆರಳಿದ್ದಾರೆ. ವಿಶ್ವನಾಥಾಚಾರಿ ಆಸ್ಪತ್ರೆಯ ಸಿಬ್ಬಂದಿಯನ್ನ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ವೈದ್ಯ ಬೈಯಪ್ಪ ರೆಡ್ಡಿಯವರನ್ನು ವಿಶ್ವನಾಥಾಚಾರಿ ನಿಂದಿಸಿದ್ದಾನೆ.

    ಈ ಸಂಬಂಧ ಆಸ್ಪತ್ರೆ ಸಿಬ್ಬಂದಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಶ್ವನಾಥಾಚಾರಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

  • ಗಬ್ಬೆದ್ದು ನಾರುತ್ತಿದೆ ಯಾದಗಿರಿ ಕೋವಿಡ್ ಆಸ್ಪತ್ರೆ

    ಗಬ್ಬೆದ್ದು ನಾರುತ್ತಿದೆ ಯಾದಗಿರಿ ಕೋವಿಡ್ ಆಸ್ಪತ್ರೆ

    ಯಾದಗಿರಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಸುಸಜ್ಜಿತ ವ್ಯವಸ್ಥೆಗಾಗಿ ಸರ್ಕಾರ ಕೋಟಿ ಕೋಟಿ ಖರ್ಚು ಮಾಡುತ್ತಿದೆ. ಆದರೆ ಈ ಜಿಲ್ಲೆಯಲ್ಲಿ ಮಾತ್ರ ಇದ್ಯಾವುದೂ ಲೆಕ್ಕಕ್ಕೆ ಇಲ್ಲ. ಈ ಆಸ್ಪತ್ರೆಗೆ ಕೊರೊನಾ ಸೋಂಕಿತರು ಬಂದರೆ ಗುಣಮುಖರಾಗುವ ಬದಲು, ಇನ್ನೂ ಜಾಸ್ತಿ ಕೊರೊನಾ ಪ್ರಮಾಣವನ್ನು ಹೆಚ್ಚಿಸಿಕೊಳ್ಳೊದು ಪಕ್ಕಾ ಅನ್ನೋವಂತಿದೆ.

    ವಿಶ್ವದಲ್ಲಿ ತಾಂಡವಾಡುತ್ತಿರುವ ಕೊರೊನಾ ಎಂಬ ಮಹಾಮಾರಿಗೆ ಇಡೀ ಜನಜೀವನವೇ ತಲ್ಲಣಗೊಂಡಿದೆ. ದೇಶದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇದಕ್ಕೆ ಗಿರಿನಾಡು ಯಾದಗಿರಿಯೂ ಹೊರತಾಗಿಲ್ಲ. ಎಲ್ಲದರಲ್ಲೂ ಯಾದಗಿರಿ ಸದಾ ಹಿಂದುಳಿದ ಜಿಲ್ಲೆಯಾಗಿತ್ತು. ಆದರೆ ಕೊರೊನಾ ಸೋಂಕಿತರ ಪ್ರಕರಣದಲ್ಲಿ ಮಾತ್ರ ರಾಜ್ಯಕ್ಕೆ ಮೂರನೇ ಸ್ಥಾನ ಪಡೆಯುವ ಮೂಲಕ ಯಾದಗಿರಿ ಕೊರೊನಾ ಹಾಟ್‍ಸ್ಪಾಟ್ ಎನಿಸಿದೆ.

    ಇನ್ನು ಕೊರೊನಾ ರೋಗಿಗಳಿಗೆ ಸಂಜೀವಿನಿಯಾಗಿ ಸಿಕ್ಕಿರುವುದು ಕೋವಿಡ್ ಆಸ್ಪತ್ರೆಗಳು. ಆದರೆ ಯಾದಗಿರಿಯಲ್ಲಿ ಈ ಆಸ್ಪತ್ರೆಯ ಪರಿಸ್ಥಿತಿ ಹೇಗಿದೆ ಅಂದರೆ ಇಲ್ಲಿ ರೋಗ ಗುಣವಾಗುವ ಮಾತಿರಲಿ, ಜಾಸ್ತಿಯಾಗದಿದ್ದರೆ ಸಾಕು ಎಂದು ಜಿಲ್ಲೆಯ ಸೋಂಕಿತರು ಬೇಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.

    ಎಲ್ಲೆಂದರಲ್ಲಿ ಬಿದ್ದಿರುವ ಮಾಸ್ಕ್ ಗಳು ಕಸದ ರಾಶಿಯಂತೆ ಕಾಣುತ್ತಿರುವ ಪಿಪಿಇ ಕಿಟ್‍ಗಳು ಇದು ಯಾದಗಿರಿಯಲ್ಲಿನ ಕೊವಿಡ್ ಆಸ್ಪತ್ರೆಗಳ ದುಸ್ಥಿತಿ. ಕೊರೊನಾದಿಂದ ಕಂಗಾಲಾಗಿರುವ ರೋಗಿಗಳ ಚಿಕಿತ್ಸೆಗಾಗಿ ಬಹುಕೋಟಿ ವೆಚ್ಚದಲ್ಲಿ ಈ ಆಸ್ಪತ್ರೆಯನ್ನು ಆರಂಭಿಸಲಾಗಿದೆ. ಇಲ್ಲಿ ಸದ್ಯ 300ಕ್ಕೂ ಅಧಿಕ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಈ ಆಸ್ಪತ್ರೆಯಲ್ಲಿ ಸ್ವಚ್ಛತೆ ಎನ್ನುವುದು ಮರೀಚಿಕೆಯಾಗಿದ್ದು, ರೋಗ ಹರಡುವ ಭೀತಿ ಹೆಚ್ಚಾಗಿದೆ.

    ಕೋವಿಡ್ ಆಸ್ಪತ್ರೆಯಲ್ಲಿ ಎಲ್ಲಿಯೂ ಸಹ ಸ್ವಚ್ಛತೆ ಕಾಣುತ್ತಿಲ್ಲ. ಕಂಡ ಕಂಡಲ್ಲಿ ರೋಗಿಗಳು ಮತ್ತು ವೈದ್ಯರು ಬಳಸಿದ ಮಾಸ್ಕ್, ಪಿಪಿಇ ಕಿಟ್ ಬಿಸಾಡಲಾಗಿದೆ. ಪಾಸಿಟಿವ್ ರೋಗಿಗಳಿಗೆ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿ ರೋಗ ವಾಸಿಯಾಗುವುದಕ್ಕಿಂತ ಹರಡುವ ಸಾಧ್ಯತೆಯೆ ಹೆಚ್ಚಾಗಿ ಬಿಟ್ಟಿದೆ. ರೋಗಿಗಳು, ವೈದ್ಯರು, ನರ್ಸ್ ಗಳು ಉಪಯೋಗಿಸಿದ ಮಾಸ್ಕ್ ಆಸ್ಪತ್ರೆ ಕಾರಿಡಾರ್‍ನಲ್ಲಿ ಬಿದ್ದಿವೆ. ಇನ್ನೂ ಉಪಯೋಗವಾಗದ ಪಿಪಿಇ ಕಿಟ್ ರಾಶಿ ರಾಶಿ ಬಿದ್ದಿದ್ದು, ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

    ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಅವಲೋಕನಾ ಅವಧಿಯಲ್ಲಿರುವ ಸೋಂಕಿತರು ಊಟಕ್ಕೆ ಪರಿತಪಿಸುವಂತಾಗಿದೆ. ಜಿಲ್ಲೆಯ ಬಂದಳ್ಳಿ ಸಮೀಪದ ಏಕಲವ್ಯ ವಸತಿ ಶಾಲೆ ಮತ್ತು ಬಿ ಗುಡಿಯಲ್ಲಿ ಸ್ಥಾಪಿಸಿರುವ ಕೋವಿಡ್ ಸೆಂಟರ್ ನಲ್ಲಿ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಊಟ ನೀಡುತ್ತಿಲ್ಲ ಮತ್ತು ಜಿಲ್ಲಾಡಳಿತ ಸೋಂಕಿತರ ಹೊಟ್ಟೆಗೆ ಅರ್ಧಂಬರ್ಧ ಊಟ ಹಾಕಿ ಕೈತೊಳೆದು ಕೊಳ್ಳುತ್ತಿದೆಂಬ ಗಂಭೀರ ಆರೋಪ ಕೇಳಿ ಬಿರುತ್ತಿವೆ. ಇದರ ನಡುವೆ ಸೋಂಕಿತರು ಮತ್ತು ಪ್ರಥಮ ಸಂಪರ್ಕ ವ್ಯಕ್ತಿಗಳು, ಕೋವಿಡ್ ಸೆಂಟರ್‍ನಲ್ಲಿ ಗದ್ದಲ ಶುರುಮಾಡಿದ್ದಾರೆ.

    ಒಟ್ಟಿನಲ್ಲಿ ಸೋಂಕಿತರನ್ನು ಶೀಘ್ರ ಗುಣಮುಖರನ್ನಾಗಿಸಿ ಮಹಾಮಾರಿ ಕೊರೊನಾ ಆರ್ಭಟಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಬೇಕಿತ್ತು. ಆದರೆ ಈಗ ಚಿಕಿತ್ಸೆ ನೀಡುವ ಸ್ಥಳವೇ ಸ್ವಚ್ಚತೆಯಿಲ್ಲದೇ ಆಸ್ಪತ್ರಗೆ ಅನಾರೋಗ್ಯ ಬಡಿದಿದೆ.