Tag: Covid Care Center

  • ಹಟ್ಟಿ ಚಿನ್ನದ ಗಣಿ ಆಸ್ಪತ್ರೆಯಲ್ಲಿ 40 ಆಮ್ಲಜನಕಯುಕ್ತ ಹಾಸಿಗೆಗಳು ಮೇಲ್ದರ್ಜೆಗೆ

    ಹಟ್ಟಿ ಚಿನ್ನದ ಗಣಿ ಆಸ್ಪತ್ರೆಯಲ್ಲಿ 40 ಆಮ್ಲಜನಕಯುಕ್ತ ಹಾಸಿಗೆಗಳು ಮೇಲ್ದರ್ಜೆಗೆ

    – ಹಟ್ಟಿ ಸಮುದಾಯ ಭವನ ಕೋವಿಡ್ ಕೇರ್ ಸೆಂಟರ್‌ಗೆ ಬಳಕೆ
    – ಹಟ್ಟಿ ಚಿನ್ನದ ಗಣಿ ಚಟುವಟಿಕೆ ತಾತ್ಕಾಲಿಕ ಸ್ಥಗಿತ

    ರಾಯಚೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಹಟ್ಟಿ ಚಿನ್ನದ ಗಣಿ ಪ್ರದೇಶದಲ್ಲಿರುವ ಸಮುದಾಯ ಭವನವನ್ನು ಕೋವಿಡ್ ಕೇರ್ ಸೆಂಟರ್‍ಗೆ ಬಳಕೆ ಮಾಡಿಕೊಳ್ಳಲು ನಿರ್ಧಾರಿಸಲಾಗಿದೆ.

    ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್.ನಿರಾಣಿ ಅವರು ನೀಡಿದ ಸಲಹೆ ಮೇರೆಗೆ ಹಟ್ಟಿಯಲ್ಲಿರುವ ಸಮುದಾಯ ಭವನವನ್ನು ಕೋವಿಡ್ ಕೇರ್ ಸೆಂಟರ್‌ಗೆ ಬಳಕೆಮಾಡಿಕೊಳ್ಳಲು ಮುಂದಾಗಿದೆ.

    ಹಟ್ಟಿಯ ಕ್ಯಾಂಪಸ್‍ನಲ್ಲಿರುವ ಒಟ್ಟು 120 ಹಾಸಿಗೆ ಸಾಮಥ್ರ್ಯದ ಈ ಆಸ್ಪತ್ರೆಯಲ್ಲಿ 40 ಹಾಸಿಗೆಗಳನ್ನು ಆಮ್ಲಜನಕಯುಕ್ತ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಹಟ್ಟಿ ಚಿನ್ನದ ಗಣಿ ವ್ಯವಸ್ಥಾಪಕ ನಿದೇರ್ಶಕರು ಸೇರಿದಂತೆ ಮತ್ತಿತರರ ಜೊತೆ ಸಚಿವ ನಿರಾಣಿ ಮಾತುಕತೆ ನಡೆಸಿದ್ದಾರೆ. ಹಟ್ಟಿಯ ಚಿನ್ನದ ಗಣಿಯಲ್ಲಿ ಸಾವಿರಾರು ಕಾರ್ಮಿಕರು ಕೆಲಸ ನಿರ್ವಾಹಿಸುತ್ತಿದ್ದಾರೆ. ಅಲ್ಲದೆ ಗ್ರಾಮದಲ್ಲೂ ಸಾವಿರಾರು ಸಂಖ್ಯೆಯ ಜನರಿದ್ದು, ಯಾರಿಗಾದರೂ ಸೋಂಕು ಕಾಣಿಸಿಕೊಂಡರೆ ತಕ್ಷಣವೇ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಸಮುದಾಯ ಭವನ ಬಳಕೆಮಾಡಿಕೊಳ್ಳುವುದು ಸರಿಯಾದ ಮಾರ್ಗವೆಂದು ಸಚಿವರು ಸಲಹೆ ಕೊಟ್ಟಿದ್ದರು.

     

    ಸಂಬಂಧಪಟ್ಟವರ ಜೊತೆ ಮಾತುಕತೆ:
    ಹಟ್ಟಿ ಚಿನ್ನದ ಗಣಿಯಲ್ಲಿ ಕೇಂದ್ರ ಸರಕಾರಿ ಒಡೆತನದ ಕೇಂದ್ರೀಯ ವಿದ್ಯಾಲಯವಿದ್ದು, ಇದನ್ನು ಸಹ ಕೋವಿಡ್ ಕೇರ್ ಸೆಂಟರ್‍ಗೆ ಬಳಸಲು ಆಲೋಚಿಸಲಾಗಿದೆ. ಈ ಜಾಗವು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಒಡೆತನಕ್ಕೆ ಸೇರಿರುವ ಹಿನ್ನಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ನಿರಾಣಿ ಅವರು ಮಾತುಕತೆಯ ನಡೆಸಿದ್ದು, ಇದು ಕೂಡ ಫಲಪ್ರದವಾಗಿದೆ ಸಂಭವವಿದೆ.

    ತಾತ್ಕಾಲಿಕ ಸ್ಥಗಿತ:
    ರಾಜ್ಯದಲ್ಲಿ ಈಗ ಚಿನ್ನ ಉತ್ಪಾದಿಸುವ ಏಕೈಕ ಗಣಿ ಇರುವ ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಯು ಕೊರೊನಾ ಎರಡನೆಯ ಅಲೆಯ ಹಿನ್ನಲೆ ಈ ವರ್ಷವೂ ಬಂದ್ ಮಾಡಲಾಗಿದೆ. ರಾಜ್ಯ ಸರಕಾರವು 14 ದಿನ ಲಾಕ್ ಡೌನ್ ಘೋಷಣೆ ಮಾಡಿದ ಬೆನ್ನಲ್ಲಿಯೇ ಹಟ್ಟಿ ಚಿನ್ನದ ಗಣಿಯನ್ನು ಸಹ ಬಂದ್ ಮಾಡಲಾಗಿದೆ. ಮೇ 24ರವರೆಗೂ ಗಣಿ ಚುಟುವಟಿಕೆ ಬಂದ್ ಮಾಡಿ ಹಟ್ಟಿ ಚಿನ್ನದ ಗಣಿ ಕಂಪನಿಯೂ ಆದೇಶ ಹೊರಡಿಸಿದೆ.

    ಸಿಬ್ಬಂದಿ ಮನೆಯಲ್ಲಿ ಇರುವಂತೆ ಹಟ್ಟಿ ಕಂಪನಿ ಆಡಳಿತ ಮಂಡಳಿ ಆದೇಶ ಹೊರಡಿಸಿದ್ದು, ಹಟ್ಟಿ ಚಿನ್ನದ ಗಣಿ ಆಸ್ಪತ್ರೆ, ಸೇರಿದಂತೆ ಅವಶ್ಯಕ ವಿಭಾಗ ಎಂದಿನಂತೆ ಕಾರ್ಯ ನಿರ್ವಹಣೆ ಮಾಡಲಿದೆ. ಸಿಬ್ಬಂದಿ ಹಟ್ಟಿ ಕೇಂದ್ರ ಸ್ಥಾನ ಬಿಡುವಾಗ ಅನುಮತಿ ಪಡೆದು ಹೋಗಲು ಆದೇಶದಲ್ಲಿ ಸೂಚನೆ ನೀಡಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಚಿನ್ನದ ಗಣಿ ಬಂದ್ ಮಾಡಿ ಆದೇಶ ಮಾಡಲಾಗಿದೆ.

  • ಗದಗ ಕೋವಿಡ್ ಕೇರ್ ಸೆಂಟರ್ ನಲ್ಲಿ ನೀರಿಗಾಗಿ ಪರದಾಟ

    ಗದಗ ಕೋವಿಡ್ ಕೇರ್ ಸೆಂಟರ್ ನಲ್ಲಿ ನೀರಿಗಾಗಿ ಪರದಾಟ

    – ಎಲ್ಲೆಂದರಲ್ಲಿ ಮಾಸ್ಕ್, ಫೇಸ್‍ಮಾಸ್ಕ್

    ಗದಗ: ರಾಜ್ಯಾದ್ಯಂತ ಕೊರೊನಾದ 2ನೇ ಅಲೆ ತಾಂಡವಾಡ್ತಿದೆ. ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಸಿಗದೆ ಅದೆಷ್ಟೋ ಜನ ಸಾವನ್ನಪ್ಪುತ್ತಿದ್ದಾರೆ. ಇದೆಲ್ಲದರ ನಡುವೆ ನಗರದ ಜಿಮ್ಸ್ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ ನಲ್ಲಿರೋ ರೋಗಿಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

    ಗದಗ ಜಿಲ್ಲೆಯಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ. ಪರಿಣಾಮ ಆಸ್ಪತ್ರೆಗೆ ವ್ಹೀಲ್ ಚೇರ್ ನಲ್ಲಿ ಶುದ್ಧ ಕುಡಿಯುವ ನೀರನ್ನು ಅಲ್ಲಿನ ಸಿಬ್ಬಂದಿ ಪೂರೈಸುತ್ತಿದ್ದಾರೆ. ಹಾಗಾಗಿ ಕೋವಿಡ್ ಸೆಂಟರ್ ನಲ್ಲಿ ಒಂದು ವಾಟರ್ ಫಿಲ್ಟರ್ ಇಲ್ಲದಂತಹ ಸ್ಥಿತಿಯನ್ನು ಕಂಡು ರೋಗಿಗಳ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ. ವಾಟರ್ ಫಿಲ್ಟರ್ ಇಲ್ಲದ್ದಕ್ಕೆ ವ್ಹೀಲ್ ಚೇರ್ ಮೇಲೆ ನೀರಿನ ಕ್ಯಾನ್ ಇಟ್ಟು ಅದನ್ನು ಸಿಬ್ಬಂದಿ ತಳ್ಳಿಕೊಂಡು ನೀರು ತರುವ ದೃಶ್ಯ ಮೂಲ ಸೌಲಭ್ಯಗಳ ಕೊರತೆಯನ್ನು ಪ್ರದರ್ಶಿಸುತ್ತಿದೆ. ಜಿಲ್ಲಾಸ್ಪತ್ರೆ ಹೊರವಲಯದಲ್ಲಿರೋ ಶುದ್ಧ ನೀರಿನ ಘಟಕದಿಂದ ಸಿಬ್ಬಂದಿ ನೀರು ತರಲಾಗುತ್ತಿದ್ದು, ಸಿಬ್ಬಂದಿ ನೀರು ತರದೇ ಇದ್ದ ಸಂದರ್ಭದಲ್ಲಿ ರೋಗಿಗಳ ಸಂಬಂಧಿಕರು ಹೋಗಿ ನೀರು ತರಬೇಕಾದ ಅನಿವಾರ್ಯ ಸ್ಥಿತಿ ಬಂದಿದೆ.

    ಇದರಿಂದ ಇತರೆ ರೋಗಿಗಳು ಹಾಗೂ ಸಂಬಂಧಿಕರಲ್ಲಿ ಆತಂಕ ಶುರುವಾಗಿದೆ. 350 ಕೋವಿಡ್ ಬೆಡ್ ಹೊಂದಿದ್ದರು ಸಹ ಒಂದೇ ಒಂದು ಫಿಲ್ಟರ್ ಇಲ್ಲದೇ ಕೋವಿಡ್ ಕೇರ್ ಇರೋದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ರೋಗಿಗಳಿಗೆ, ವೈದ್ಯರಿಗೆ ಕುಡಿಯಲು ನೀರು ಪೂರೈಸದ ಜಿಮ್ಸ್ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೋಗಿಗಳು, ಸೋಂಕಿತರು ಹಿಡಿ ಶಾಪ ಹಾಕುತ್ತಿದ್ದಾರೆ.

    ಡಂಪಿಂಗ್ ಯಾರ್ಡ್:
    ನಗರದ ಜಿಮ್ಸ್ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ ಆವರಣ ಇತ್ತೀಚಿಗೆ ಡಂಪಿಂಗ್ ಯಾರ್ಡ್ ಆಗಿದೆ. ಜಿಮ್ಸ್ ಆಸ್ಪತ್ರೆಯ ಬಳಿ ಮಾಸ್ಕ್, ಹ್ಯಾಂಡ್ ಗ್ಲೌಸ್, ಫೇಸ್ ಶೀಲ್ಡ್ ಗಳನ್ನು ಎಲ್ಲೆಂದರಲ್ಲಿ ಬಿಸಾಕಿ ಹೋಗಿದ್ದಾರೆ. ಬಳಕೆ ಮಾಡಿದ ಸರ್ಜಿಕಲ್ ಕ್ಯಾಪ್, ಮಾಸ್ಕ್ ಗಳನ್ನು ಮೆಡಿಕಲ್ ವೇಸ್ಟ್ ಸ್ಟೋರ್ ನಲ್ಲಿ ಹಾಕಬೇಕು. ಆದರೆ ಇಲ್ಲಿ ಮೆಡಿಕಲ್ ವೆಸ್ಟ್ ಸ್ಟೋರ್ ಇದ್ರೂ ಸಹ ಸೋಂಕಿತರು ಹಾಗೂ ವೈದ್ಯಕೀಯ ಸಿಬ್ಬಂದಿ ಬಳಸಿರೋ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಿ ನಿರ್ಲಕ್ಷ್ಯ ತೋರಲಾಗಿದೆ. ಹೀಗಾಗಿ ಬಿಸಾಡಿರುವ ವೈದ್ಯಕೀಯ ವೇಸ್ಟ್ ಗಳಿಂದಲೂ ಸ್ಥಳೀಯರಿಗೆ ಸೋಂಕು ಹರಡುವ ಆತಂಕ ಎದುರಾಗಿದೆ. ಇದರಿಂದ ಆಸ್ಪತ್ರೆಗೆ ಬಂದ ಇರತೆ ರೋಗಿಗಳಲ್ಲಿ ಭಯ ಶುರುವಾಗಿದೆ.

  • PPE ಕಿಟ್ ಧರಿಸಿ ಕೋವಿಡ್ ಕೇರ್ ಸೆಂಟರ್ ಗೆ ಅಪ್ಪಚ್ಚು ರಂಜನ್ ಭೇಟಿ

    PPE ಕಿಟ್ ಧರಿಸಿ ಕೋವಿಡ್ ಕೇರ್ ಸೆಂಟರ್ ಗೆ ಅಪ್ಪಚ್ಚು ರಂಜನ್ ಭೇಟಿ

    ಮಡಿಕೇರಿ: ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಪಿಪಿಇ ಕಿಟ್ ಧರಿಸಿ ಕೋವಿಡ್ ಕೇರ್ ಸೆಂಟರ್ ಗಳಿಗೆ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿ, ಮಾನಸಿಕ ಧೈರ್ಯ ತುಂಬಿದರು.

    ಕೊಡಗಿನ ಗಡಿ ಭಾಗಗಳಿಗೆ ಭೇಟಿ ನೀಡಿ ಅಧಿಕಾರಿಗಳ ಜೊತೆಯಲ್ಲಿ ಚರ್ಚೆ ನಡೆಸಿ ನಂತರ ಅಗತ್ಯ ಮುನ್ನಚರಿಕೆ ಕ್ರಮಗಳ ಕೈಗೊಳ್ಳುವಂತೆ ಸೂಚನೆ ನೀಡಿದರಿ. ಬಳಿಕ ಕುಶಾಲನಗರದ ಸಮೀಪದ ಕೂಡಿಗೆಯ ಮೊರಾರ್ಜಿ ವಸತಿ ಶಾಲೆಯಲ್ಲಿ ತೆರೆದಿರುವ ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿದರು.

    ಈ ಬಾರಿ ಕೊಡಗಿನಲ್ಲಿ ಕೋವಿಡ್ 19 ಅತಿಯಾಗಿದೆ. ಕೆಲಸದ ನಿಮಿತ್ತವಾಗಿ ನಗರದಲ್ಲಿ ವಾಸಿಸುತ್ತಿದ್ದ ಜನರು ಲಾಕ್‍ಡೌನ್ ಘೋಷಣೆ ಆದ ಕೂಡಲೇ ಬಹಳಷ್ಟು ಮಂದಿ ಆಗಮಿಸಿ ಕೊರೊನಾ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಕೊಡಗಿನಲ್ಲಿ ಬಹಳಷ್ಟು ಕೊರೋನ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಲ್ಲಿನ ವೈದ್ಯರು ಉತ್ತಮವಾದ ಚಿಕಿತ್ಸೆ ನೀಡುತ್ತಿದ್ದಾರೆ. ಆಹಾರ ಪದಾರ್ಥಗಳು ಗುಣಮಟ್ಟದಾಗಿದೆ. ಯಾರು ಭಯ ಪಡುವ ಅವಶ್ಯಕತೆ ಇಲ್ಲ. ಸೋಂಕಿತರು ತಮ್ಮ ಮನೆಗಳಲ್ಲಿರುವಂತೆ ಕೇಂದ್ರದಲ್ಲಿಯೂ ಖುಷಿಯಲ್ಲಿ ಇದ್ದಾರೆ. ಎಂದು ತಿಳಿಸಿದ್ರು.

    ಕೊಡಗು ಜಿಲ್ಲೆಯಲ್ಲಿ ಕೊರೊನ ಮಹಾಮಾರಿ ರುದ್ರ ನರ್ತನ ದಿನದಿಂದ ದಿನಕ್ಕೆ ತಾಂಡವವಾಡುತ್ತಿದೆ. ಸಾವು ನೋವಿನ ಸಂಖ್ಯೆ ದಿನ ಕಳೆದಂತೆ ಮಿತಿಮೀರುತ್ತಿದೆ ಇಂದು ಕೋಡ ಜಿಲ್ಲೆಯಲ್ಲಿ 681 ಪಾಸಿಟಿವ್ ಪ್ರಕರಣಗಳು ದಾಖಲಾಗಿದು 24 ಗಂಟೆಗಳಲ್ಲಿ 12 ಜನರು ಮೃತ ಪಟ್ಟಿದ್ದಾರೆ. ಹೀಗಾಗಿ ಕೊರೋನ ಸೋಂಕು ತಡೆಗಟ್ಟಲು ಕೊಡಗು ಜಿಲ್ಲಾಡಳಿತ ಬಿಗಿ ಕ್ರಮದ ಮೊರೆ ಹೋಗಿದೆ. ಮಂಗಳವಾರ ಮತ್ತು ಶುಕ್ರವಾರ ಬೆಳಗ್ಗೆ 6 ರಿಂದ 12 ರ ತನಕ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಕಲ್ಪಿಸಲಾಗಿದ್ದು, ಬಾಕಿ ದಿನಗಳು ಕೊಡಗು ಜಿಲ್ಲೆ ಸಂಪೂರ್ಣ ಬಂದ್ ಆಗಿದೆ.

  • ಕೋವಿಡ್ ಕೇರ್ ಸೆಂಟರ್ ನಲ್ಲಿ ಸಕಲ ಸೌಲಭ್ಯ- ಆಟವಾಡಿ ಸಂಭ್ರಮಿಸಿದ ಸೋಂಕಿತರು

    ಕೋವಿಡ್ ಕೇರ್ ಸೆಂಟರ್ ನಲ್ಲಿ ಸಕಲ ಸೌಲಭ್ಯ- ಆಟವಾಡಿ ಸಂಭ್ರಮಿಸಿದ ಸೋಂಕಿತರು

    – ನೆಮ್ಮದಿ ಕೇಂದ್ರದಂತಾದ ಕೋವಿಡ್ ಕೇರ್ ಸೆಂಟರ್

    ಮಡಿಕೇರಿ: ಕೊವಿಡ್ ಸೋಂಕಿತರು ಹೆಚ್ಚೆಚ್ಚು ಆಸ್ಪತ್ರೆ, ಕೋವಿಡ್ ಕೇರ್ ಗಳಿಗೆ ಸೇರುತ್ತಿದ್ದಂತೆ ಸಮಸ್ಯೆಗಳೇ ಉದ್ಭವವಾಗುತ್ತವೆ. ಆದರೆ ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆರಂಭಿಸಿರುವ ಕೋವಿಡ್ ಕೇರ್ ಸೆಂಟರ್ ಮಾತ್ರ ಸೋಂಕಿತರ ಪಾಲಿಗೆ ನೆಮ್ಮದಿ ಕೇಂದ್ರವಾಗಿದೆಯಂತೆ. ಸ್ವತಃ ಕೋವಿಡ್ ಸೋಂಕಿತರೇ ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದಾರೆ.

    ವಿಶೇಷ ಚೇತನ ಸೋಂಕಿತರೊಬ್ಬರ ಹುಟ್ಟುಹಬ್ಬವನ್ನು ಸಾಮಾಜಿಕ ಅಂತರ ಕಾಪಾಡಿಕೊಂಡು ಕೋವಿಡ್ ಕೇರ್ ಸೆಂಟರ್ ನಲ್ಲಿ ಆಚರಿಸಲಾಗುತ್ತಿದೆ. ಇನ್ನು ಇಲ್ಲಿರುವ ಬಹುತೇಕ ಸೋಂಕಿತರು ಕೇರಮ್, ಚೆಸ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಡಿಕೊಂಡು ಸಂತಸದಿಂದ ಕಾಲ ಕಳೆಯುತ್ತಿದ್ದಾರೆ. ಸೋಂಕಿತರ ಬೇಡಿಕೆಯಂತೆ ಕೇರಮ್ ಬೋರ್ಡ್, ಹಾವು-ಏಣಿ, ಚೆಸ್ ಬೋರ್ಡ್ ಗಳನ್ನು ಕೋವಿಡ್ ಕೇರ್ ಸೆಂಟರ್ ನ ಸಿಬ್ಬಂದಿ ಒದಗಿಸಿದ್ದಾರೆ. ಉಳಿದ ಸಮಯದಲ್ಲೂ ಬೆಳಗ್ಗೆ ರೋಗಿಗಳಿಗೆ ಪ್ರಾಣಾಯಾಮ, ವ್ಯಾಯಾಮಗಳನ್ನು ಮಾಡಿಸಲಾಗುತ್ತಿದೆ.

    ಈ ಕೋವಿಡ್ ಕೇರ್ ಸೆಂಟರ್ ನಲ್ಲಿ ಸೋಂಕಿತರನ್ನು ತುಂಬಾ ಪ್ರೀತಿ ಮತ್ತು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ. ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿ ಸೋಂಕಿತರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿರುವುದರಿಂದ ಎಲ್ಲರೂ ಮನೆಯವರ ರೀತಿಯಲ್ಲಿದ್ದೇವೆ ಎಂದು ಸೋಂಕಿತರಾದ ಸುಪ್ರಿತಾ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

    ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಈ ಕೋವಿಡ್ ಕೇರ್ ಸೆಂಟರ್ ನಲ್ಲಿ 80 ಬೆಡ್ ಗಳಿದ್ದು, ದಾಖಲಾಗಿರುವ 57 ಸೋಂಕಿತರೆಲ್ಲೆರೂ ಖುಷಿಯಾಗಿ ಇದ್ದಾರೆ. ಓರ್ವ ವೈದ್ಯ, ಮೂವರು ಅರೋಗ್ಯ ಸಹಾಯಕಿಯರು, ಇಬ್ಬರು ಡಿ ಗ್ರೂಪ್ ಸಿಬ್ಬಂದಿ ಈ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

  • ಚಿಕ್ಕಬಳ್ಳಾಪುರದಲ್ಲಿ ಪೊಲೀಸರಿಗೆ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್

    ಚಿಕ್ಕಬಳ್ಳಾಪುರದಲ್ಲಿ ಪೊಲೀಸರಿಗೆ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಪೊಲೀಸರಿಗೆ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಇಬ್ಬರು ಪೊಲೀಸರು ಕೊರೊನಾದಿಂದ ಮೃತಪಟ್ಟ ನಂತರ ಎಚ್ಚೆತ್ತ ಪೊಲೀಸ್ ಇಲಾಖೆ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ಆರಂಭಿಸಿದೆ.

    ನಗರ ಹೊರವಲಯದ ಜಡಲತಿಮ್ಮನಹಳ್ಳಿ ಬಳಿಯ ಸರ್ಕಾರಿ ವಸತಿ ನಿಲಯವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಬದಲಾಯಿಸಿಲಾಗಿದೆ. ಸದ್ಯ 40 ಬೆಡ್ ಗಳ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚುವರಿ ಬೆಡ್ ವ್ಯವಸ್ಥೆ ಮಾಡಿಕೊಳ್ಳಬಹುದಾಗಿದೆ. ಸದ್ಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 25 ಕ್ಕೂ ಹೆಚ್ಚು ಮಂದಿ ಪೊಲೀಸರಿಗೆ ಕೊರೊನಾ ಸೋಂಕು ತಗುಲಿದೆ. ಪೊಲೀಸರ ಕುಟುಂಬಸ್ಥರು ಸಹ ಕೋವಿಡ್ ಕೇರ್ ಸೆಂಟರ್ ಗೆ ದಾಖಲಾಗಬಹುದಾಗಿದೆ.

    ಎಸ್‍ಪಿ ಮಿಥುನ್ ಕುಮಾರ್ ಅವರ ಕ್ರಮಕ್ಕೆ ಜಿಲ್ಲೆಯ ಪೊಲೀಸ್ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೋಮ್ ಐಸೋಲೇಷನ್ ನಲ್ಲಿರಲು ಸಾಧ್ಯವಿಲ್ಲದವರು ಕೊರೊನಾ ಸೋಂಕಿತ ಪೊಲೀಸರ ಕುಟುಂಬಸ್ಥರು ಈ ಸೌಲಭ್ಯ ಸದುಪಯೋಗಪಡಿಸಿಕೊಳ್ಳುವಂತೆ ಎಸ್‍ಪಿ ಮಿಥುನ್ ಕುಮಾರ್ ಮನವಿ ಮಾಡಿದ್ದಾರೆ. ಈ ಕೋವಿಡ್ ಕೇರ್ ಸೆಂಟರ್ ನಲ್ಲಿ ಪ್ರತಿದಿನ ಎರಡು ಬಾರಿ ವೈದ್ಯರು ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆ. ದಿನದ 24 ಗಂಟೆಗಳ ಕಾಲ ಇಬ್ಬರು ದಾದಿಯರು ಸೋಂಕಿತರ ಆರೋಗ್ಯದ ಮೇಲೆ ನಿಗಾ ವಹಿಸಿಲಿದ್ದಾರೆ.

  • ಕೋವಿಡ್ ಕೇರ್ ಸೆಂಟರ್ ತೆರೆಯಲು ಆದಿವಾಸಿಗಳ ಅಕ್ರೋಶ

    ಕೋವಿಡ್ ಕೇರ್ ಸೆಂಟರ್ ತೆರೆಯಲು ಆದಿವಾಸಿಗಳ ಅಕ್ರೋಶ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಇದೀಗ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಹೆಚ್ಚುವರಿಯಾಗಿ ಬೇಡ್ ಗಳ ವ್ಯವಸ್ಥೆ ಮಾಡಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಕುಶಾಲನಗರ ಸಮೀಪದ ಬಸವನಹಳ್ಳಿಯಲ್ಲಿ ಕೊರೊನಾ ಕೇರ್ ಸೆಂಟರ್ ತೆರೆಯುವುದಕ್ಕೆ ಜಿಲ್ಲಾಡಳಿತ ಮುಂದಾಗಿದ್ದು, ಇದಕ್ಕೆ ಆದಿವಾಸಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ಜಿಲ್ಲಾಡಳಿತ ಬಸವನಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ಕೋವಿಡ್ ಸೆಂಟರ್ ತೆರೆಯಲು ಚಿಂತನೆ ನಡೆಸಿರುವ ಹಿನ್ನೆಲೆಯಲ್ಲಿ ದಿಡ್ಡಳ್ಳಿ ನಿರಾಶ್ರಿತರ ಪುನರ್ವಸತಿ ಕೇಂದ್ರದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಭಾಗದ ಮೊರಾರ್ಜಿ ಶಾಲೆಯ ಸುತ್ತ ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೋವಿಡ್ ಸೆಂಟರ್ ಆರಂಭಿಸಿದರೆ ತೀವ್ರ ಅನಾನುಕೂಲ ಉಂಟಾಗಲಿದೆ ಎಂದು ರಸ್ತೆಗೆ ಕಲ್ಲುಗಳನ್ನು ಅಡ್ಡ ಹಾಕಿ ಪ್ರತಿಭಟನೆ ಮಾಡಿದ್ದಾರೆ.

    ಶಾಲೆಯ ಸುತ್ತ ಮುನ್ನೂರಕ್ಕೂ ಹೆಚ್ಚು ಕುಟುಂಬಗಳಿವೆ. ಕೋವಿಡ್ ಕೇರ್ ಸೆಂಟರ್ ತೆರೆದಲ್ಲಿ ನಮ್ಮೆಲ್ಲರಿಗೂ ಸೋಂಕು ಹರಡುವ ಸಾಧ್ಯತೆ ಇದೆ. ನಮ್ಮಲ್ಲಿ ಒಬ್ಬರಿಗೆ ಸೋಂಕು ಹರಡಿದರೆ ಎಲ್ಲರಿಗೂ ಹರಡುವುದು ಖಚಿತ. ಇಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯುವ ಬದಲು ಸರ್ಕಾರವೇ ವಿಷ ಕೊಡಲಿ ಎಂದು ಆದಿವಾಸಿಗಳ ಮುಖಂಡ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಸಂತೆಯಂತಾದ ಕೋವಿಡ್ ಕೇರ್ ಸೆಂಟರ್- ಒಂದೇ ಬೆಡ್‍ನಲ್ಲಿ 3, 4 ಜನ

    ಸಂತೆಯಂತಾದ ಕೋವಿಡ್ ಕೇರ್ ಸೆಂಟರ್- ಒಂದೇ ಬೆಡ್‍ನಲ್ಲಿ 3, 4 ಜನ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಕೋವಿಡ್ ಕೇರ್ ಸೆಂಟರ್‍ಗಳು ತುಂಬುತ್ತಿವೆ. ಜನರಲ್ಲಿ ಆತಂಕ ಸಹ ಹೆಚ್ಚುತ್ತಿದೆ. ಮಡಿಕೇರಿ ಜಿಲ್ಲಾಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ ಸಂತೆಯಂತಾಗಿದ್ದು, ಒಂದು ಬೆಡ್‍ನಲ್ಲಿ 3, 4 ಜನ ಮಲಗುವ ಸ್ಥಿತಿ ಎದುರಾಗಿದೆ.

    ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ವಾರ್ಡ್ ಒಂದರ ಕಥೆ ಇದಾಗಿದ್ದು, ಇದು ಒಂದು ಬೆಡ್‍ಗೆ ನಾಲ್ಕು ಸೋಂಕಿತರನ್ನು ಹಾಕಲಾಗಿದೆ. ನಾಲ್ಕು ಸೋಂಕಿತರು ಒಂದೇ ಬೆಡ್‍ನಲ್ಲಿ ಮಲಗೋದು ಹೇಗೆ ಎಂಬುವುದು ಸೋಂಕಿತರ ಪ್ರಶ್ನೆಯಾಗಿದೆ. ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳೋದು ಹೇಗೆ? ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರು ಇದೇ ವಾರ್ಡ್ ನಲ್ಲಿ ಇದ್ದಾರೆ. ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾದರೆ ನರಕವೇ ಫಿಕ್ಸ್ ಎನ್ನುವಂತಾಗಿದೆ ಎಂದು ಸೋಂಕಿರತರು ವೀಡಿಯೋ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಜಿಲ್ಲೆಯಲ್ಲಿ ಇಂದು 271 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದೀಗ ಕೋವಿಡ್ ಅಸ್ಪತ್ರೆಯಲ್ಲೇ ಒಂದು ಬೇಡ್ ನಲ್ಲಿ ಮೂವರಿಂದ ನಾಲ್ಕು ಮಂದಿ ಮಲಗುತ್ತಿದ್ದಾರೆ. ಇನ್ನೂ ಹೆಚ್ಚು ಪ್ರಕರಣಗಳು ಪತ್ತೆಯಾದರೆ ಗತಿ ಏನು ಎಂಬ ಭಯ ಜನರಲ್ಲಿ ಕಾಡುತ್ತಿದೆ. ಸರ್ಕಾರ ಹಾಗೂ ಅರೋಗ್ಯ ಇಲಾಖೆಯ ಆಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಕೋವಿಡ್ ಸೆಂಟರ್‌ನಿಂದ ಗಾಂಜಾ ಆರೋಪಿ ಪರಾರಿ

    ಕೋವಿಡ್ ಸೆಂಟರ್‌ನಿಂದ ಗಾಂಜಾ ಆರೋಪಿ ಪರಾರಿ

    ಹುಬ್ಬಳ್ಳಿ: ಗಾಂಜಾ ಮಾರಾಟ ಪ್ರಕರಣದಲ್ಲಿ ಬಂಧಿತನಾಗಿ ಪೊಲೀಸರ ವಶದಲ್ಲಿದ್ದ ಕೊರೊನಾ ಸೊಂಕಿತ ಆರೋಪಿಯೊಬ್ಬ ಪರಾರಿಯಾದ ಘಟನೆ ನಡೆದಿದೆ.

    ನಗರದ ಗೋಪನಕೊಪ್ಪದ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದಲ್ಲಿದ್ದ ಆರೋಪಿ ನಂದೀಶ ಅಲಿಯಾಸ್ ಬೆಂಕಿ ಪರಾರಿಯಾಗಿದ್ದಾನೆ. ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಆರೋಪಿಗೆ ಕೋವಿಡ್ ಸೊಂಕು ದೃಡಪಟ್ಟ ಪರಿಣಾಮ ಹುಬ್ಬಳ್ಳಿಯ ಗೋಪನಕೊಪ್ಪದ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದಲ್ಲಿ ಇರಿಸಲಾಗಿತ್ತು. ಮೂತ್ರ ವಿಸರ್ಜನೆ ನೆಪದಲ್ಲಿ ಆರೋಪಿ ವಿದ್ಯಾರ್ಥಿ ನಿಲಯದಿಂದ ಪರಾರಿಯಾಗಿದ್ದಾನೆ ಎಂದು ಇದೀಗ ಪೊಲೀಸರೇ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

    ಆರೋಪಿ ನಂದೀಶ ಪರಾರಿಯಾದ ಬಗ್ಗೆ ಸಿವಿಲ್ ಪೊಲೀಸ್ ಕಾನ್‍ಸ್ಟೇಬಲ್ ರಾಮನಗೌಡ ಬಿರಾದಾರ ಅಶೋನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಅಲ್ಲದೆ ಪೊಲೀಸರಿಂದ ತಪ್ಪಿಸಿಕೊಂಡು ಹೋದ ಆರೋಪಿಯನ್ನು ಹುಡುಕುವ ಜವಾಬ್ದಾರಿ ಇದೀಗ ಅಶೋಕನಗರ ಠಾಣೆ ಪೊಲೀಸ್ ಸಿಬ್ಬಂದಿ ಮೇಲಿದೆ. ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾದ ಬಗ್ಗೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಕೋವಿಡ್ ಕೇರ್ ಸೆಂಟರಿನಲ್ಲಿ ಮದುವೆ ಸಮಾರಂಭ – ವಧುವಿಗೆ ಸರ್ಪ್ರೈಸ್

    ಕೋವಿಡ್ ಕೇರ್ ಸೆಂಟರಿನಲ್ಲಿ ಮದುವೆ ಸಮಾರಂಭ – ವಧುವಿಗೆ ಸರ್ಪ್ರೈಸ್

    – ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
    – ಮದ್ವೆಗೆ ಒಂದು ಬಾಕಿ ಇರುವಾಗ ಕೊರೊನಾ ಪಾಸಿಟಿವ್

    ತಿರುವನಂತಪುರಂ: ಕೇರಳದ ಕೊಚ್ಚಿಯಲ್ಲಿರುವ ಕೋವಿಡ್ ಕೇರ್ ಸೆಂಟರಿನಲ್ಲಿ ಮದುವೆಯ ಸಮಾರಂಭವೊಂದು ನಡೆದಿದ್ದು, ಇದೀಗ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    19 ವರ್ಷದ ಫಾಜಿಯಾಗೆ ನಿಯಾಜ್ ಜೊತೆ ಮದುವೆ ನಿಗದಿಯಾಗಿತ್ತು. ಆದರೆ ಮದುವೆಗೆ ಒಂದು ದಿನ ಬಾಕಿ ಇರುವಾಗ ಫಾಜಿಯಾ ಕೋವಿಡ್ ಟೆಸ್ಟ್ ಮಾಡಿಸಿದ್ದು, ವರದಿಯಲ್ಲಿ ಪಾಸಿಟಿವ್ ಬಂದಿದೆ. ಹೀಗಾಗಿ ಫಾಜಿಯಾಳನ್ನು ಮಟ್ಟಂಚೇರಿಯ ಟೌನ್ ಹಾಲ್‍ನಲ್ಲಿ ಸ್ಥಾಪಿಸಲಾದ ಕೋವಿಡ್ ಕೇರ್ ಕೇಂದ್ರಕ್ಕೆ ಸೇರಿಸಲಾಗಿತ್ತು. ಇದರಿಂದ ಫಾಜಿಯಾ ಬೇಸರಗೊಂಡಿದ್ದಳು. ಆಕೆಯನ್ನು ಹುರಿದುಂಬಿಸಲು ಕೋವಿಡ್ ಆರೈಕೆ ಕೇಂದ್ರದ ಇತರೆ ಸಹವಾಸಿಗಳು ಮದುವೆ ಸಮಾರಂಭವನ್ನು ಏರ್ಪಡಿಸಿದ್ದರು.

    ಜ್ವರದಿಂದ ಬಳಲುತ್ತಿದ್ದ ಕಾರಣ ವಧು ಫಾಜಿಯಾ ಕೋವಿಡ್ ಟೆಸ್ಟ್ ಮಾಡಿಸಿದ್ದಳು. ಆದರೆ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. ನಾನು ಮದುವೆಗೆ ಉಡುಪುಗಳನ್ನು ಖರೀದಿಸಲು ಮನೆಯಿಂದ ಹೊರ ಹೋಗಿದ್ದೆ. ಆದರೆ ನನಗೆ ಕೊರೊನಾ ಪಾಸಿಟಿವ್ ಬಂದಿರುವುದು ತಿಳಿಯಿತು ಎಂದು ಫಾಜಿಯಾ ಹೇಳಿದ್ದಾಳೆ. ನಂತರ ಫಾಜಿಯಾಳನ್ನು ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸಲಾಗಿತ್ತು. ಅವಳ ಮದುವೆಯನ್ನು ಮಸೀದಿಯಲ್ಲಿ ನಿರ್ಧರಿಸಲಾಗಿದ್ದರಿಂದ ವಧುವಿನ ಉಪಸ್ಥಿತಿಯು ಕಡ್ಡಾಯವಲ್ಲದ ಕಾರಣ ಅವರ ಕುಟುಂಬವು ಯೋಜಿಸಿದಂತೆ ಮದುವೆ ಸಮಾರಂಭವನ್ನು ಮುಂದುವರಿಸಲು ನಿರ್ಧರಿಸಿತ್ತು.

    ಇತ್ತ ಘಾಜಿಯಾ ಬೇಸರಗೊಂಡಿದ್ದಳು. ಈ ಬಗ್ಗೆ ಕೋವಿಡ್ ಸೆಂಟರಿನಲ್ಲಿದ್ದ ಸಹವಾಸಿಗಳು ತಿಳಿದುಕೊಂಡು ಆಕೆಯನ್ನು ಹುರಿದುಂಬಿಸುವ ಸಲುವಾಗಿ ಸರ್ಪ್ರೈಸ್ ಆಗಿ ಮದುವೆ ಸಮಾರಂಭವನ್ನು ಏರ್ಪಡಿಸಿದ್ದರು. ಅದರಂತೆಯೇ ಘಾಜಿಯಾ ತನ್ನ ವಿವಾಹದ ಉಡುಪನ್ನು ಧರಿಸಿ ಕೋವಿಡ್ ಆರೈಕೆ ಕೇಂದ್ರದ ಮಧ್ಯದಲ್ಲಿ ಕುಳಿತಿದ್ದಳು. ಇತರೆ ಸಹವಾಸಿಗಳು ಆಕೆಯ ಸುತ್ತಲೂ ಹಾಡಿ, ನಲಿಯುತ್ತ ಅವಳನ್ನು ಹುರಿದುಂಬಿಸಿದ್ದಾರೆ. ಇದೀಗ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ನಮ್ಮ ಆರೈಕೆ ಕೇಂದ್ರಕ್ಕೆ ಹಸ್ತಾಂತರಿಸುವಾಗ ಮರುದಿನ ಆಕೆಯ ಮದುವೆ ಇರುವ ನಗ್ಗೆ ಗೊತ್ತಾಯಿತು. ಈ ವಿಷಯವನ್ನು ಇತರ ರೋಗಿಗಳೊಂದಿಗೆ ಹಂಚಿಕೊಂಡಾಗ ಆಕೆಗೆ ಸಮಾರಂಭ ಏರ್ಪಡಿಸುವ ಬಗ್ಗೆ ಎಲ್ಲರೂ ಸಮ್ಮತಿಸಿದರು. ವಾರ್ಡ್ ಗಳಲ್ಲಿ ರೋಗಿಗಳ ಆತ್ಮಸ್ಥೈರ್ಯ ಹೆಚ್ಚಿಸುವ ಸಲುವಾಗಿ ಮನೋರಂಜನಾ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಎಲ್ಲ ರೋಗಿಗಳು ಸಮಾರಂಭದಲ್ಲಿ ಭಾಗವಹಿಸಿ ಸಂಭ್ರಮಿಸಿದ್ದಾರೆ ಎಂದು ಹೆಲ್ತ್ ಇನ್‍ಸ್ಪೆಕ್ಟರ್ ಕೆ. ಸುಧೀರ್ ತಿಳಿಸಿದ್ದಾರೆ.

    ಅವಳ ಮದುವೆಯನ್ನು ಮಸೀದಿಯಲ್ಲಿ ನಿರ್ಧರಿಸಲಾಗಿದ್ದರಿಂದ ವಧುವಿನ ಉಪಸ್ಥಿತಿ ಕಡ್ಡಾಯವಲ್ಲವೆಂದು ಆಕೆಯ ಸಂಬಂಧಿಕರು ತಿಳಿಸಿದ್ದರು. ಹೀಗಾಗಿ ಕೋವಿಡ್ ಸೆಂಟರಿನಲ್ಲಿ ಮದುವೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸಮಾರಂಭದ ಕೊನೆಯಲ್ಲಿ ಎಲ್ಲರೂ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಎಲ್ಲರಿಗೂ ಬಿರಿಯಾನಿ ಮತ್ತು ಸಿಹಿತಿಂಡಿಯ ವ್ಯವಸ್ಥೆಯನ್ನು ಆರೈಕೆ ಕೇಂದ್ರದ ರೋಗಿಗಳು ಏರ್ಪಡಿಸಿದ್ದರು.

    ಈ ದಿನವನ್ನು ನಾನು ನನ್ನ ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ. ನಾನು ದುಖಃದಲ್ಲಿದ್ದೆ. ನನ್ನನ್ನು ಖುಷಿಪಡಿಸಲು ಇವರು ಏರ್ಪಡಿಸಿದ ಸಮಾರಂಭವನ್ನು ನಾನೆಂದು ಮರೆಯಲಾರೆ ಎಂದು ಫಾಜಿಯಾ ಹೇಳಿದ್ದಾಳೆ.

  • ಸೋಂಕಿತರ ಮಾನಸಿಕ, ದೈಹಿಕ ಸದೃಢತೆಗೆ ಯೋಗ ಕ್ಲಾಸ್: ಸಿಂಧನೂರಿನಲ್ಲಿ ಹೊಸ ಪ್ರಯತ್ನ

    ಸೋಂಕಿತರ ಮಾನಸಿಕ, ದೈಹಿಕ ಸದೃಢತೆಗೆ ಯೋಗ ಕ್ಲಾಸ್: ಸಿಂಧನೂರಿನಲ್ಲಿ ಹೊಸ ಪ್ರಯತ್ನ

    ರಾಯಚೂರು: ಕೋವಿಡ್ ಕೇರ್ ಸೆಂಟರ್ ಅಂದ್ರೆ ಅವ್ಯವಸ್ಥೆಗಳ ಆಗರ ಅನ್ನೋದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ಆದರೆ ರಾಯಚೂರಿನ ಸಿಂಧನೂರು ನಗರದ ಕೋವಿಡ್ ಕೇರ್ ಸೆಂಟರ್ ಇದಕ್ಕೆ ಅಪವಾದ ಎಂಬಂತೆ ಉತ್ತಮ ಸೇವೆ ನೀಡುತ್ತಿದೆ. ಕೇಂದ್ರದಲ್ಲಿರುವ ಸೋಂಕಿತರ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸದೃಢತೆಗಾಗಿ ಪ್ರತೀ ದಿನ ಯೋಗ ತರಬೇತಿ ನೀಡಲಾಗುತ್ತಿದೆ.

    ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ತರಬೇತಿಗಳನ್ನ ನೀಡಿರುವ ಸಿಂಧನೂರು ಮೂಲದ ಯೋಗಗುರು ಮಲ್ಲಣ್ಣ ಸೋಂಕಿತರಿಗೆ ಯೋಗ ಕಲಿಸುತ್ತಿದ್ದಾರೆ. ಕೋವಿಡ್ ಕೇರ್ ಸೆಂಟರ್ ನಲ್ಲಿ 72 ಜನರಿದ್ದು ಎಲ್ಲಿರಗೂ ಬೆಳಗ್ಗೆ 6:30ಕ್ಕೆ ಯೋಗ ಹೇಳಿ ಕೊಡಲಾಗುತ್ತಿದೆ.

    ತರಬೇತಿ ಜೊತೆ ಊಟ, ಸ್ವಚ್ಛತೆಗೆ ಯಾವುದೇ ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗುತ್ತಿದೆ. ಇಲ್ಲಿರುವವರ ಮನೋರಂಜನೆಗೂ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಇಲ್ಲಿ ದಾಖಲಾಗಿರುವ ಸೋಂಕಿತರು ಯಾವುದೇ ಭೀತಿಯಿಲ್ಲದೆ ತಮ್ಮ ಕ್ವಾರಂಟೈನ್ ಅವಧಿ ಕಳೆಯುತ್ತಿದ್ದಾರೆ.