Tag: Covid Care

  • ನವೋದಯದಲ್ಲಿ ಕೋವಿಡ್ ಕೇರ್ ಕೇಂದ್ರ ತೆರೆಯಬೇಡಿ – ಕೊಡಗಿನ ಪೋಷಕರಿಂದ ವಿರೋಧ

    ನವೋದಯದಲ್ಲಿ ಕೋವಿಡ್ ಕೇರ್ ಕೇಂದ್ರ ತೆರೆಯಬೇಡಿ – ಕೊಡಗಿನ ಪೋಷಕರಿಂದ ವಿರೋಧ

    – ಗಾಂಧಿ ಮೈದಾನದಲ್ಲಿ ಮೌನ ಪ್ರತಿಭಟನೆ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್ ಸೋಂಕು ಅಬ್ಬರಿಸುತ್ತಿದ್ದು, ಮುಂದೆ ಇನ್ನಷ್ಟು ಜಾಸ್ತಿಯಾಗುವ ಸಾಧ್ಯತೆ ಇದೆ. ಹೀಗಾಗಿ ಜಿಲ್ಲಾಡಳಿತ ಕೂಡ ಕೋವಿಡ್ ಆರೈಕೆ ಕೇಂದ್ರ ತೆರೆಯಲು ನವೋದಯ ವಿದ್ಯಾಲಯ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಗುರುತಿಸಿದೆ. ಆದರೆ ನವೋದಯ ವಿದ್ಯಾಲಯದಲ್ಲಿ ಕೋವಿಡ್ ಆರೈಕೆ ಕೇಂದ್ರ ತೆರೆಯಲು ಅಲ್ಲಿನ ವಿದ್ಯಾರ್ಥಿಗಳ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ಕೋವಿಡ್ ಆರೈಕೆ ತೆರೆಯುವ ವಿಷಯ ತಿಳಿದು ಜಿಲ್ಲೆಯ ವಿವಿಧೆಡೆಯಿಂದ ಮಡಿಕೇರಿಗೆ ಆಗಮಿಸಿದ್ದ ಪೋಷಕರು ನಗರದ ಗಾಂಧಿ ಮೈದಾನದಲ್ಲಿ ಮೌನ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಸಾಗಿದ ಪೋಷಕರು ಶಾಲೆಯಲ್ಲಿ ಕೋವಿಡ್ ಕೇಂದ್ರ ತೆರೆಯದಂತೆ ಮನವಿ ಮಾಡಿದರು. ಕಳೆದ ಎರಡು ವರ್ಷಗಳಿಂದ ಈ ಶಾಲೆಯನ್ನು ಕೋವಿಡ್ ಆರೈಕೆ ಕೇಂದ್ರಕ್ಕೆ ಬಳಸಿಕೊಂಡಿದ್ದರಿಂದ ನಮ್ಮ ಮಕ್ಕಳಿಗೆ ತರಗತಿಗಳೇ ನಡೆಯಲಿಲ್ಲ. ಇದನ್ನೂ ಓದಿ: ಪರ್ಯಾಯ ಅಂದ್ರೆ ಏನು? ಮಧ್ವಾಚಾರ್ಯರು ಕೊಟ್ಟಿರುವ ಅಕ್ಷಯ ಪಾತ್ರೆ, ಸಟ್ಟುಗವೇ ಅಧಿಕಾರ ಹಸ್ತಾಂತರಕ್ಕೆ ಅಂಕಿತ

    ಕಳೆದ ಎರಡು ತಿಂಗಳ ಹಿಂದೆಯಷ್ಟೇ ಶಾಲೆಗಳು ಆರಂಭವಾಗಿವೆ. ಇಂತಹ ಸ್ಥಿತಿಯಲ್ಲಿ ಈಗ ಮತ್ತೆ ಕೋವಿಡ್ ಆರೈಕೆ ಕೇಂದ್ರ ತೆರೆದರೆ ನಮ್ಮ ಮಕ್ಕಳ ಶಿಕ್ಷಣ ಸಂಪೂರ್ಣ ಹಾಳಾಗಲಿದೆ. ಕಳೆದ ವರ್ಷ ಪ್ರಥಮ ಪಿಯುಸಿಯಲ್ಲಿದ್ದ ವಿದ್ಯಾರ್ಥಿಗಳು ಈ ಬಾರಿ ದ್ವಿತೀಯ ಪಿಯುಸಿ ಬೋರ್ಡ್ ಎಕ್ಸಾಂ ಬರೆಯಬೇಕು. ತರಗತಿಗಳೇ ನಡೆಯದಿದ್ದರೆ, ಅವರು ಎಕ್ಸಾಂ ಬರೆಯೋದಾದರೂ ಹೇಗೆ ಎನ್ನುವುದು ಪೋಷಕರ ಅಳಲು.

    ನಮ್ಮ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿತು ನವೋದಯ ಸೇರಿಕೊಂಡಿದ್ದಾರೆ. ಎರಡು ವರ್ಷದಿಂದ ತರಗತಿಗಳೇ ನಡೆದಿಲ್ಲ. ಈಗಷ್ಟೇ ಶಾಲೆಗಳು ಆರಂಭವಾಗಿದ್ದರಿಂದ ಒಂದಷ್ಟು ಕಲಿಯುತ್ತಿದ್ದರು. ಇದ್ದಕ್ಕಿದ್ದಂತೆ ಕೋವಿಡ್ ಆರೈಕೆ ಕೇಂದ್ರ ತೆರೆಯುವುದಕ್ಕಾಗಿ ಶಾಲೆಯನ್ನು ಮುಚ್ಚಿದರೆ ನಮ್ಮ ಮಕ್ಕಳ ವಿದ್ಯಾಭ್ಯಾಸವೇ ಹಾಳಾಗಿ ಹೋಗಲಿದೆ ಎಂದು ಕಣ್ಣೀರು ಹಾಕಿದ್ದಾರೆ.

    ನವೋದಯ ಶಾಲೆಯಲ್ಲಿ ಕೋವಿಡ್ ಆರೈಕೆ ಕೇಂದ್ರ ತೆರೆಯುವ ಬದಲು ಬೇರೆಡೆ ಕೇಂದ್ರ ತೆರೆಯಲಿ. ಇಲ್ಲದಿದ್ದರೆ ಶಾಲೆ ಮುಚ್ಚುವ ಬದಲು ನಮ್ಮ ಎಲ್ಲ ಮಕ್ಕಳ ವರ್ಗಾವಣೆ ಪತ್ರವನ್ನು ಸಾಮೂಹಿಕವಾಗಿ ಕೊಡಲಿ. ನಾವು ಬೇರೆಡೆ ಎಲ್ಲಾದರು ಓದಿಸಿಕೊಳ್ಳುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ನವೋದಯ ವಿದ್ಯಾಲಯ ಕೇಂದ್ರದಲ್ಲಿ ಕೋವಿಡ್ ಕೇಂದ್ರ ತೆರೆಯುವುದಿಲ್ಲ. ಆದರೆ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಈಗ ದಾಖಲಾಗುತ್ತಿರುವಂತೆ ಮತ್ತಷ್ಟು ದಾಖಲಾದರೆ, ಆಗ ಕೋವಿಡ್ ಕೇಂದ್ರಗಳನ್ನು ತೆರೆಯುವುದು ಅನಿವಾರ್ಯವಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಿಶ್ಚಿತಾರ್ಥ ಸಮಾರಂಭಕ್ಕೆ ನುಗ್ಗಿ ಯುವಕನನ್ನ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು!

    ಕೋವಿಡ್ ಜಿಲ್ಲಾಸ್ಪತ್ರೆ, ಮೆಡಿಕಲ್ ಕಾಲೇಜು ಸೇರಿದಂತೆ ವಿವಿಧೆಡೆ 500 ಬೆಡ್ ಗಳು ಇವೆ. ಒಂದು ವೇಳೆ ಕೋವಿಡ್ ತೀವ್ರವಾಗಿ ಉಲ್ಭಣಿಸಿ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಜಾಸ್ತಿಯಾದಲ್ಲಿ ಜಿಲ್ಲೆಯ ಎಲ್ಲ ಶಾಲೆಗಳಿಗೂ ರಜೆ ನೀಡಬೇಕಾಗುತ್ತದೆ. ಆಗ ನವೋದಯ ಶಾಲೆಗೂ ರಜೆ ಕೊಟ್ಟು ಅಲ್ಲಿ ಕೋವಿಡ್ ಆರೈಕೆ ಕೇಂದ್ರ ತೆರೆಯಲಾಗುವುದು. ಅಲ್ಲಿಯವರೆಗೆ ಶಾಲೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಭರವಸೆಯನ್ನು ಕೊಟ್ಟಿದ್ದಾರೆ.

  • ಕೋವಿಡ್ ಕೇಂದ್ರದಲ್ಲಿ ಯೋಗ ಟೀಚರ್ ಆದ ರೇಣುಕಾಚಾರ್ಯ

    ಕೋವಿಡ್ ಕೇಂದ್ರದಲ್ಲಿ ಯೋಗ ಟೀಚರ್ ಆದ ರೇಣುಕಾಚಾರ್ಯ

    ದಾವಣಗೆರೆ: ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಕೊರೊನಾ ಸೋಂಕಿತರಿಗೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹೊನ್ನಾಳಿ ಶಾಸಕ ರೇಣುಕಾಚಾರ್ಯರವರು ಯೋಗ ಹೇಳಿಕೊಟ್ಟಿದ್ದಾರೆ.

    ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಎಚ್ ಕಡದಕಟ್ಟೆ ಗ್ರಾಮದಲ್ಲಿರುವ ಕೋವಿಡ್ ಕೇರ್ ಸೆಂಟರ್ ನಲ್ಲಿರುವ ಸೋಂಕಿತರಿಗೆ ರೇಣುಕಾಚಾರ್ಯ ವಿವಿಧ ಯೋಗಾಸನಗಳನ್ನು ಹೇಳಿಕೊಟ್ಟಿದ್ದಾರೆ.

    ಇಂದು ಬೆಳಗ್ಗೆ ಕೋವಿಡ್ ಕೇರ್ ಸೆಂಟರ್‌ಗೆ ಆಗಮಿಸಿದ ಶಾಸಕರು ಸೋಂಕಿತರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಸೂರ್ಯ ನಮಸ್ಕಾರ ಸೇರಿದಂತೆ ವಿವಿಧ ಯೋಗಾಸನ ಹೇಳಿಕೊಟ್ಟರು. ಯೋಗಾಸನದ ಮೂಲಕ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದ ರೇಣುಕಾಚಾರ್ಯರವರು ಯೋಗಾಸನದ ವಿವಿಧ ಬಂಗಿಗಳನ್ನು ಸೋಂಕಿತರ ಮುಂದೆ ಮಾಡಿ ತೋರಿಸಿದರು.

    ಕಳೆದ ಹಲವು ದಿನಗಳಿಂದ ಸೋಂಕಿತರ ಜೊತೆ ಸೇರಿ ರೇಣುಕಾಚಾರ್ಯ ಒಂದಲ್ಲ ಒಂದು ಕೆಲಸದಲ್ಲಿ ನಿರತರಾಗಿದ್ದಾರೆ. ಮೃತ ಸೋಂಕಿತನ ಶವ ಹೊತ್ತು ಅಂಬುಲೆನ್ಸ್ ಚಾಲನೆ ಮಾಡುತ್ತ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗುವ ಮೂಲಕ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಇದೀಗ ಕೋವಿಡ್ ಕೇರ್ ಸೆಂಟರ್ ನಲ್ಲಿರುವ ಸೋಂಕಿತರಿಗೆ ಶಾಸಕ ಎಂಪಿ ರೇಣುಕಾಚಾರ್ಯ ಯೋಗ ಹೇಳಿಕೊಟ್ಟು ಆತ್ಮಸ್ಥೈರ್ಯ ತುಂಬಿದ್ದಾರೆ. ಇದನ್ನು ಓದಿ: ಕೋವಿಡ್ ಕೇರ್ ಸೆಂಟರ್ ಅವ್ಯವಸ್ಥೆ ವಿರುದ್ಧ ಸೋಂಕಿತರ ಆಕ್ರೋಶ

  • ರಾಮನಗರ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್‍ನ 6 ಪ್ರಕರಣ ಪತ್ತೆ: ಡಿಸಿಎಂ

    ರಾಮನಗರ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್‍ನ 6 ಪ್ರಕರಣ ಪತ್ತೆ: ಡಿಸಿಎಂ

    – ಒಂದು ವಾರದಲ್ಲಿ ಕಪ್ಪು ಶಿಲೀಂಧ್ರಕ್ಕೆ ಔಷಧಿ ಕೊರತೆ ನಿವಾರಣೆ

    ಬೆಂಗಳೂರು: ರಾಮನಗರ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್‍ನ ಆರು ಪ್ರಕರಣಗಳು ಪತ್ತೆಯಾಗಿದ್ದು, ಐವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮತ್ತು ಇನ್ನೊಬ್ಬರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

    ಕೋವಿಡ್ ಹಿನ್ನೆಲೆಯಲ್ಲಿ ಪಕ್ಷದ ಜಿಲ್ಲಾ ಘಟಕ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು ಬುಧವಾರ ಹಮ್ಮಿಕೊಳ್ಳಲಾಗಿದ್ದ ಆನ್‍ಲೈನ್ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬ್ಲ್ಯಾಕ್ ಫಂಗಸ್‍ಗೆ ಔಷಧಿ ಕೊರತೆ ಇದೆ. ಇನ್ನೊಂದು ವಾರದಲ್ಲಿ ಈ ಎಲ್ಲ ಕೊರತೆಯನ್ನೂ ನೀಗಿಸಲಾಗುವುದು. ರಾಮನಗರವೂ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಔಷಧಿಯನ್ನು ಒದಗಿಸಲಾಗುವುದು ಎಂದರು.

    ಕೋವಿಡ್ ಕೇರ್‌ಗಳಲ್ಲಿ 1,891 ಸೋಂಕಿತರು: ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಉತ್ತಮವಾಗಿದ್ದು, ಪಾಸಿಟಿವಿಟಿ ದರವೂ ಕಡಿಮೆ ಇದೆ. ಅದಕ್ಕೆ ಪೂರಕವಾಗಿ ಜಿಲ್ಲಾ ಕೇಂದ್ರ ಮತ್ತು ತಾಲೂಕು ಮಟ್ಟದಲ್ಲಿಯೂ ಉತ್ತಮ ಚಿಕಿತ್ಸೆ ಲಭ್ಯವಾಗುತ್ತಿದೆ. ಒಂದು ವಾರದಿಂದ ಹೋಂ ಐಸೋಲೇಷನ್ ಮಾಡುವುದನ್ನು ನಿಲ್ಲಿಸಲಾಗಿದೆ. ಈಗ ಕನಿಷ್ಠ ಒಬ್ಬರೂ ಹೋಂ ಐಸೋಲೇಷನ್‍ನಲ್ಲಿ ಇಲ್ಲ. ಇಡೀ ಜಿಲ್ಲೆಯಲ್ಲಿ ಈಗ 1,891 ಸೋಂಕಿತರು ಕೋವಿಡ್  ಕೇರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಹೊಸದಾಗಿ 191 ಸೋಂಕಿತರನ್ನು ಕೋವಿಡ್ ಕೇರ್‌ಗಳಿಗೆ ಶಿಫ್ಟ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ಉಳಿದಂತೆ ಜಿಲ್ಲೆಯಲ್ಲಿ ಸರಾಸರಿ ದಿನಕ್ಕೆ 252 ಜನರಿಗೆ ಸೋಂಕು ತಗುಲುತ್ತಿದೆ. ಈ ಪ್ರಮಾಣಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಚಿಕಿತ್ಸೆ, ಔಷಧಿ, ಆಕ್ಸಿಜನ್, ಐಸಿಯು ಬೆಡ್, ವೆಂಟಿಲೇಟರ್‌ಗಳಿಗೆ ಕೊರತೆ ಇಲ್ಲ. ಅಲ್ಲದೆ, ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿಯೇ ಕೋವಿಡ್ ಸೋಂಕಿತರನ್ನು ಪತ್ತೆ ಹಚ್ಚಲಾಗುತ್ತಿದೆ. ಲ್ಯಾಬ್‍ಗಳಿಂದ 24 ಗಂಟೆಯೊಳಗೇ ವರದಿಗಳು ಬರುತ್ತಿವೆ. ಹೀಗಾಗಿ ಸಕಾಲದಲ್ಲಿ ಚಿಕಿತ್ಸೆ ಆರಂಭವಾಗಿ ಪ್ರಾಣ ನಷ್ಟ ತಪ್ಪುತ್ತಿದೆ. ಇಡೀ ರಾಜ್ಯದಲ್ಲಿಯೇ ರಾಮನಗರ ಜಿಲ್ಲೆಯಲ್ಲಿ ಕೋವಿಡ್ ವ್ಯವಸ್ಥೆಯನ್ನು ಉತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿದೆ ಎಂದರು.

    ಮೇ 30ರಂದು ಸೇವಾ ಕಾರ್ಯಕ್ರಮ: ಇದೇ ಮೇ 30 ರಂದು ಕೇಂದ್ರದ ನರೇಂದ್ರ ಮೋದಿ ಅವರ 2ನೇ ಅವಧಿಯ ಸರಕಾರ ಎರಡು ವರ್ಷ ಪೂರೈಸಿ ಮೂರನೇ ವರ್ಷಕ್ಕೆ ಕಾಲಿಡಲಿದೆ. ಜಿಲ್ಲೆಯಲ್ಲಿ ಅಂದು ಅದ್ಧೂರಿ ಕಾರ್ಯಕ್ರಮಗಳು ಬೇಡ. ಅದರ ಬದಲಿಗೆ ಕೋವಿಡ್ ಸಂಕಷ್ಟದಲ್ಲಿ ಸಿಲುಕಿರುವವರಿಗೆ ಸೇವೆ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

    ಬೂತ್, ಪಂಚಾಯಿತಿ ಮಟ್ಟದಲ್ಲಿ ತಂಡಗಳನ್ನು ರಚನೆ ಮಾಡಿಕೊಂಡು ದಿನವಿಡೀ ಸೇವಾ ಕಾರ್ಯಕ್ರಮಗಳು ನಡೆಯಲಿವೆ. ಮುಖ್ಯವಾಗಿ ಕೋವಿಡ್‍ನಿಂದ ಕಷ್ಟಕ್ಕೆ ಸಿಲುಕಿರುವ ಜನರಿಗೆ ನೆರವು ಕೊಡುವುದೇ ಮೂಲೋದ್ದೇಶವಾಗಿದೆ. ಇದರಲ್ಲಿ ಎಲ್ಲ ಮುಖಂಡರು, ಕಾರ್ಯಕರ್ತರು, ಪದಾಧಿಕಾರಿಗಳು ಭಾಗಿಯಾಗಬೇಕು ಎಂಬ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

    ಬಿಜೆಪಿ ರಾಮನಗರ ಜಿಲ್ಲಾಧ್ಯಕ್ಷ ಹುಲವಾಡಿ ರಮೇಶ್, ಸಂಘಟನಾ ಕಾರ್ಯದರ್ಶಿ ಕಾಂತರಾಜ್, ಮಂಡಲಾಧ್ಯಕ್ಷ ಧನಂಜಯ್ ಸೇರಿದಂತೆ ಎಲ್ಲ ತಾಲ್ಲೂಕುಗಳ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.

  • ಆದ್ಯತಾ ಗುಂಪು, ಮುಂಚೂಣಿ ಕಾರ್ಯಕರ್ತರ ವ್ಯಾಕ್ಸಿನೇಷನ್ ಪರಿಶೀಲಿಸಿದ ಡಿಸಿಎಂ

    ಆದ್ಯತಾ ಗುಂಪು, ಮುಂಚೂಣಿ ಕಾರ್ಯಕರ್ತರ ವ್ಯಾಕ್ಸಿನೇಷನ್ ಪರಿಶೀಲಿಸಿದ ಡಿಸಿಎಂ

    ಬೆಂಗಳೂರು: ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣರವರು ಬುಧವಾರ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದ ವಿವಿಧೆಡೆ ಸಂಚರಿಸಿ, ಕೋವಿಡ್ ಪರಿಸ್ಥಿತಿ ಹಾಗೂ ಮುಂಚೂಣಿ ಕಾರ್ಯಕರ್ತರ ಲಸಿಕೆ ಅಭಿಯಾನವನ್ನು ಪರಿಶೀಲನೆ ನಡೆಸಿದರು.

    ಬೆಳಿಗ್ಗೆಯಿಂದಲೇ ಕ್ಷೇತ್ರದಲ್ಲಿ ಬಿರುಸಿನ ಸಂಚಾರ ಕೈಗೊಂಡ ಡಿಸಿಎಂ, ಮುಖ್ಯವಾಗಿ ಕ್ಷೇತ್ರದಲ್ಲಿನ ಕೋವಿಡ್ ಸ್ಥಿತಿಗತಿಗಳ ಬಗ್ಗೆ ಅಧಿಕಾರಿಗಳು ಮತ್ತು ಸಾರ್ವಜನಿಕರಿಂದ ಮಾಹಿತಿ ಪಡೆದರು. ಸೋಂಕಿನ ಕಾರಣದಿಂದ ದೂರದಿಂದಲೇ ಜನರು ತಮ್ಮ ಅಹವಾಲು ಹೇಳಿಕೊಂಡರು.

    ಜೊತೆಗೆ, ಮುಂಚೂಣಿ ಕಾರ್ಯಕರ್ತರು ಹಾಗೂ ಆದ್ಯತೆಯ ಗುಂಪಿಗೆ ನಡೆಯುತ್ತಿರುವ ಲಸಿಕೆ ಆಭಿಯಾನವನ್ನೂ ವೀಕ್ಷಿಸಿದರಲ್ಲದೆ ಇದಕ್ಕೆ ಇನ್ನೂ ವೇಗ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಪ್ಯಾಲೇಸ್ ಗುಟ್ಟಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದರು. ಜೊತೆಗೆ, ಗುಟ್ಟಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಗೂ ಅದರ ಪಕ್ಕದಲ್ಲೇ ಇರುವ ಕೋವಿಡ್ ಕೇರ್ ಕೇಂದ್ರಕ್ಕೂ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು.

    ಮಲ್ಲೇಶ್ವರದ 19ನೇ ಅಡ್ಡರಸ್ತೆಯ ಕಾಶಿಮಠದಲ್ಲಿ ಆದ್ಯತಾ ಗುಂಪಿನಡಿ ವಿಕಲಚೇತನ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದ್ದು, ಅಲ್ಲಿನ ವ್ಯವಸ್ಥೆಯನ್ನು ಡಿಸಿಎಂ ವೀಕ್ಷಿಸಿದರು. ಅಲ್ಲದೆ, ವ್ಯಾಕ್ಸಿನ್ ಕೊಟ್ಟ ನಂತರವೂ ಆರೋಗ್ಯದ ಮೇಲೆ ನಿಗಾ ಇಡುವಂತೆ ಆರೋಗ್ಯ ಸಿಬ್ಬಂದಿಗೆ ಸೂಚನೆ ಕೊಟ್ಟರು. ಇದೇ ವೇಳೆ ಮಲ್ಲೇಶ್ವರದ 13ನೇ ಅಡ್ಡರಸ್ತೆಯ ರೋಟರಿ ಜಾಗಕ್ಕೂ ಡಿಸಿಎಂ ಭೇಟಿ ನೀಡಿದ್ದರು. ಇದರ ನಡುವೆ ಮಲ್ಲೇಶ್ವರದ 13ನೇ ಅಡ್ಡರಸ್ತೆಯ ಪಬ್ಲಿಕ್ ಶಾಲೆ ಕಟ್ಟಡದ ಕಾಮಗಾರಿ ನಡೆಯುತ್ತಿದ್ದು, ಅದರ ಪ್ರಗತಿಯನ್ನು ವೀಕ್ಷಿಸಿದರು. ನಿಗದಿತ ಕಾಲಕ್ಕೆ ಕಾಮಗಾರಿ ಮುಗಿಯಬೇಕು ಎಂದು ಸಂಬಂಧಿತ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಡಿಸಿಎಂ ಸೂಚನೆ ಕೊಟ್ಟರು.

    ಇನ್ನೊಂದೆಡೆ ಆರೋಗ್ಯ ಕಾರ್ಯಕರ್ತರು ಮನೆಮನೆಗೂ ತೆರಳಿ ರೋಗ ಲಕ್ಷಣ ಇರುವ ಸೋಂಕಿತರನ್ನು ಪತ್ತೆ ಮಾಡುತ್ತಿದ್ದಾರೆ. ಅಗತ್ಯ ಇರುವವರನ್ನು ಕೋವಿಡ್ ಕೇರ್ ಸೆಂಟರ್‍ಗಳಿಗೆ ಶಿಫ್ಟ್ ಮಾಡಿ ಚಿಕಿತ್ಸೆ ಕೊಡುತ್ತಿದ್ದಾರೆ. ಕ್ಷೇತ್ರದಲ್ಲಿ ಕೋವಿಡ್ ನಿರ್ವಹಣೆ ಉತ್ತಮವಾಗಿದೆ ಎಂದು ತಿಳಿಸಿದರು.

  • ಕೋವಿಡ್ ಕೇರ್ ಸೆಂಟರ್ ಅವ್ಯವಸ್ಥೆ – ನಮ್ಮನ್ನ ಮನೆಗೆ ಕಳುಹಿಸಿ ಎನ್ನುತ್ತಿರೋ ಸೋಂಕಿತರು

    ಕೋವಿಡ್ ಕೇರ್ ಸೆಂಟರ್ ಅವ್ಯವಸ್ಥೆ – ನಮ್ಮನ್ನ ಮನೆಗೆ ಕಳುಹಿಸಿ ಎನ್ನುತ್ತಿರೋ ಸೋಂಕಿತರು

    ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಚಿಕ್ಕಮುಚ್ಚಳಗುಡ್ಡದಲ್ಲಿರುವ ಕೋವಿಡ್ ಕೇರ್ ಸೆಂಟರ್ ನಲ್ಲಿ ಕ್ವಾರಂಟೈನ್ ಆಗಿರುವ ಸೋಂಕಿತರ ಗೋಳು ಕೇಳೋರೆ ಇಲ್ಲ ಎನ್ನುವಂತಾಗಿದೆ.

    ಕೇರ್ ಸೆಂಟರ್ ನಲ್ಲಿ 40 ಜನರಿಗೆ ಮೂರು ಬಾತ್ ರೂಮ್, ಶೌಚಾಲಯಗಳಿವೆ. ಜೊತೆಗೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಸ್ನಾನಕ್ಕೆ ಕೇವಲ ನಾಲ್ಕು ಬಕೆಟ್ ಗಳು ಮಾತ್ರ ನೀಡಲಾಗಿದೆ. ಹಾಗಾಗಿ ಸೋಂಕಿತರು ಶೌಚಾಲಯ ಹಾಗೂ ಸ್ನಾನಕ್ಕಾಗಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೆ ಮಕ್ಕಳಿಗೆ ಹಾಲು ವಿತರಣೆ ಮಾಡದ ಹಿನ್ನೆಲೆ ಕಂದಮ್ಮಗಳ ಆಕ್ರಂದನ ಹೆತ್ತವರ ನಿದ್ದೆಗೆಡಿಸಿದೆ.

    ಮತ್ತೊಂದೆಡೆ ಕೋವಿಡ್ ಸೋಂಕಿತರು ಬಳಸಿದ ಬೆಡ್ ಸ್ಯಾನಿಟೈಸ್ ಮಾಡುತ್ತಿಲ್ಲ. ನಂತರ ಬರುವ ಸೋಂಕಿತರಿಗೆ ಅದೇ ಬೆಡ್ ನೀಡಲಾಗುತ್ತಿದೆ. ಸಮರ್ಪಕ ಊಟ ಸಿಗುತ್ತಿಲ್ಲ ಎಂದು ಕ್ವಾರಂಟೈನ್ ಆಗಿರುವ ಸೋಂಕಿತರು ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಅಲ್ಲದೆ ನಮ್ಮನ್ನು ಮನೆಗೆ ಕಳುಹಿಸಿ. ನಾವು ಅಲ್ಲೇ ಕ್ವಾರಂಟೈನ್ ಆಗುತ್ತೇವೆ ಎಂದು ಹೇಳುತ್ತಿದ್ದಾರೆ.

  • ಬಿಗ್ ಬಿಯಿಂದ ಕೋವಿಡ್ ಕೇಂದ್ರಕ್ಕೆ 2 ಕೋಟಿ ನೆರವು

    ಬಿಗ್ ಬಿಯಿಂದ ಕೋವಿಡ್ ಕೇಂದ್ರಕ್ಕೆ 2 ಕೋಟಿ ನೆರವು

    ನವದೆಹಲಿ: ದೆಹಲಿಯ ರಾಕಾಬ್ ಗಂಜ್ ಗುರುದ್ವಾರದಲ್ಲಿ ಸೋಮವಾರ ಉದ್ಘಾಟಿಸಲಾಗುತ್ತಿರುವ ಕೋವಿಡ್-ಕೇರ್ ಸೌಲಭ್ಯಗಳಿಗಾಗಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ 2 ಕೋಟಿ ನೆರವು ನೀಡಿದ್ದಾರೆ ಎಂದು ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಅಧ್ಯಕ್ಷ ಮಜೀಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ.

    ಅಮಿತಾಬ್ ಬಚ್ಚನ್ ಅವರು ಶ್ರೀ ಗುರು ತೇಜ್ ಬಹದ್ದೂರ್ ಕೋವಿಡ್ ಕೇರ್ ಸೌಲಭ್ಯಕ್ಕಾಗಿ 2 ಕೋಟಿ ನೀಡಿರುವದಕ್ಕೆ ಧನ್ಯವಾದಗಳು. ಅವರ ಸೇವೆಗೆ ಸೆಲ್ಯೂಟ್ ಎಂದು ಅಕಾಲಿ ದಳ ಪಕ್ಷದ ರಾಷ್ಟ್ರೀಯ ವಕ್ತಾರ ಶ್ರೀ ಸಿರ್ಸಾರವರು ಹೇಳಿದ್ದಾರೆ.

    ಜೊತೆಗೆ ವಿದೇಶದಿಂದ ಆಕ್ಸಿಜನ್ ಸಿಲಿಂಡರ್‍ಗಳನ್ನು ಕೋವಿಡ್ ಕೇರ್ ಸೆಂಟರ್‍ಗೆ ತಲುಪಿಸುವುದಾಗಿ ಅಮಿತಾಬ್ ಬಚ್ಚನ್‍ರವರು ನುಡಿದಿರುವುದಾಗಿ ಶ್ರೀ ಸಿರ್ಸಾರವರು ತಿಳಿಸಿದ್ದಾರೆ.

    ದೆಹಲಿಯಲ್ಲಿ ಆಕ್ಸಿಜನ್‍ಗಾಗಿ ಹೋರಾಡುತ್ತಿರು ವೇಳೆ ಅಮಿತಾಬ್ ಬಚ್ಚನ್‍ರವರು ನನ್ನ ಕರೆದು ಈ ಬಗ್ಗೆ ವಿಚಾರಿಸಿದರು. ಸದ್ಯ ರಕಾಬ್ ಗಂಜ್ ಗುರುದ್ವಾರವನ್ನು ಸೋಮವಾರ ಉದ್ಘಾಟಿಸಲಾಗುತ್ತಿದ್ದು, 300 ಬೆಡ್, ಆಕ್ಸಿಜನ್ ಸಿಲಿಂಡರ್, ವೈದ್ಯರು ಮತ್ತು ಅಂಬ್ಯುಲೆನ್ಸ್ ಸೇವೆಗಳನ್ನು ಉಚಿತವಾಗಿ ಒದಗಿಸುವುದಾಗಿ ಹೇಳಿದ್ದಾರೆ.

  • 15 ಫುಟ್ಬಾಲ್ ಸ್ಟೇಡಿಯಂಗೆ ಸಮ- ದೆಹಲಿಯಲ್ಲಿದೆ ಚೀನಾಗಿಂತ 10 ಪಟ್ಟು ದೊಡ್ಡ ಆಸ್ಪತ್ರೆ

    15 ಫುಟ್ಬಾಲ್ ಸ್ಟೇಡಿಯಂಗೆ ಸಮ- ದೆಹಲಿಯಲ್ಲಿದೆ ಚೀನಾಗಿಂತ 10 ಪಟ್ಟು ದೊಡ್ಡ ಆಸ್ಪತ್ರೆ

    – ದೆಹಲಿಯಲ್ಲಿ ವಿಶ್ವದ ಅತಿದೊಡ್ಡ ಕೋವಿಡ್ ಆಸ್ಪತ್ರೆ ನಿರ್ಮಾಣ
    – 10,200 ಹಾಸಿಗೆಯ ಆಸ್ಪತ್ರೆ ನಿರ್ಮಿಸಿದ ಐಟಿಬಿಪಿ

    ನವದೆಹಲಿ: ಮಹಾರಾಷ್ಟ್ರದ ಬಳಿಕ ರಾಷ್ಟ್ರ ರಾಜಧಾನಿ ದೆಹಲಿ ಕೊರೊನಾ ಸೋಂಕಿನಿಂದ ತತ್ತರಿಸಿದೆ. ದೆಹಲಿಯಲ್ಲಿ ಜುಲೈ ಆರಂಭದಿಂದ ಸೋಂಕಿನ ಪ್ರಮಾಣ ತೀವ್ರ ಏರಿಕೆ ಕಂಡು ಬರುತ್ತಿದ್ದು ಸದ್ಯ 80 ಸಾವಿರ ಗಡಿ ದಾಟಿರುವ ದೆಹಲಿಯಲ್ಲಿ 2,500ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಐಟಿಬಿಪಿ(ಇಂಡೋ ಟಿಬೆಟಿಯನ್-ಬಾರ್ಡರ್ ಪೊಲೀಸ್) ಪಡೆ 10 ದಿನದಲ್ಲೇ 10 ಸಾವಿರ ಹಾಸಿಗೆಯ ಆಸ್ಪತ್ರೆಯನ್ನು ನಿರ್ಮಿಸಿದೆ.

    ಜುಲೈ ಅಂತ್ಯದ ವೇಳೆಗೆ ದೆಹಲಿಯಲ್ಲಿ ಸುಮಾರು 5.5 ಲಕ್ಷ ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳಬಹುದೆಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ಕೇಂದ್ರದ ನೆರವಿವೊಂದಿಗೆ ಸಮರೋಪಾದಿಯಲ್ಲಿ ಸಿದ್ಧತೆಗಳನ್ನು ಆರಂಭಿಸಿದೆ.

    ದೆಹಲಿಯಲ್ಲಿ ಆಸ್ಪತ್ರೆ ಹಾಗೂ ಬೆಡ್‍ಗಳ ಕೊರತೆ ಎದುರಿಸುತ್ತಿದ್ದು, ಇದನ್ನು ನೀಗಿಸಲು ವಿಶ್ವದ ಅತಿದೊಡ್ಡ ತಾತ್ಕಾಲಿಕ ಕೊರೊನಾ ಆಸ್ಪತ್ರೆಯನ್ನು ಕೇಂದ್ರ ಸರ್ಕಾರ ನಿರ್ಮಾಣ ಮಾಡಿದೆ. ದಕ್ಷಿಣ ದೆಹಲಿಯ ಛತ್ತರಪುರ್‍ನಲ್ಲಿರುವ ರಾಧಾ ಸೋಮಿ ಸತ್ಸಂಗ್ ಬಿಯಾಸ್ ಕಾಂಪ್ಲೆಕ್ಸ್‍ನಲ್ಲಿ 10,200 ಬೆಡ್‍ಗಳ ಬೃಹತ್ ಕೊರೊನಾ ಆಸ್ಪತ್ರೆಯನ್ನು ಸುಮಾರು ಹತ್ತು ದಿನಗಳಲ್ಲಿ ನಿರ್ಮಾಣ ಮಾಡಲಾಗಿದೆ.

    ಕೇಂದ್ರ ಗೃಹ ಸಚಿವ ಅಮಿತ್ ಶಾ ಉಸ್ತುವಾರಿಯಲ್ಲಿ ಐಟಿಬಿಪಿ ಪಡೆಯ ವೈದ್ಯಕೀಯ ಸಿಬ್ಬಂದಿ ಈ ಬೃಹತ್ ಆಸ್ಪತ್ರೆಯನ್ನು ನಿಭಾಯಿಸಲಿದ್ದಾರೆ. 10,200 ಬೆಡ್‍ಗಳನ್ನು ಹೊಂದಿರುವ ಈ ಆಸ್ಪತ್ರೆ ಸುಮಾರು ಹದಿನೈದು ಫುಟ್‍ಬಾಲ್ ಸ್ಟೇಡಿಯಂಗಳಿಗೆ ಸಮವಾಗಿದೆ. ಚೀನಾದ ವುಹಾನ್‍ನಲ್ಲಿ ನಿರ್ಮಿಸಿದ್ದ ದೊಡ್ಡ ತಾತ್ಕಾಲಿಕ ಆಸ್ಪತ್ರೆಗಿಂತ ಹತ್ತು ಪಟ್ಟು ದೊಡ್ಡದು ಎಂದು ಅಧಿಕಾರಿಗಳು ಹೇಳಿದ್ದಾರೆ. ಹೀಗೆ ನಿರ್ಮಾಣವಾಗಿರುವ ಆಸ್ಪತ್ರೆಗೆ ‘ಸರ್ದಾರ್ ಪಟೇಲ್ ಕೋವಿಡ್ ಕೇರ್’ ಎಂದು ಕೇಂದ್ರ ಸರ್ಕಾರ ನಾಮಕರಣ ಮಾಡಿದೆ.  ಇದನ್ನೂ ಓದಿ: 10 ದಿನದಲ್ಲಿ 1 ಸಾವಿರ ಬೆಡ್ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಗೊಂಡಿದ್ದು ಹೇಗೆ? ಚೀನಾದ ಜೈವಿಕ ಅಸ್ತ್ರ ಕೊರೊನಾ?

    ಆಸ್ಪತ್ರೆ ವಿಶೇಷತೆಗಳೇನು?
    * 1.10.554 ಚದುರು ಮೀಟರ್ ವಿಸ್ತೀರ್ಣದಲ್ಲಿ ಈ ಆಸ್ಪತ್ರೆ ನಿರ್ಮಾಣ.
    * ಒಟ್ಟು 10,200 ಬೆಡ್‍ಗಳ ವ್ಯವಸ್ಥೆ.
    * 44 ನರ್ಸಿಂಗ್ ಕೇಂದ್ರಗಳು ಒಳಗೊಂಡಿದೆ.
    * ರೋಗಿಗಳಿಗೆ 88 ಆವರಣಗಳನ್ನು ನಿರ್ಮಾಣ ಮಾಡಿದೆ.
    * ಇಲ್ಲಿ 800 ಮಂದಿ ಸಾಮಾನ್ಯ, 70 ಮಂದಿ ತಜ್ಞ ವೈದ್ಯರು ಕಾರ್ಯ ನಿರ್ವಹಿಸಲಿದ್ದಾರೆ.
    * 25 ಮಂದಿ ಆಸ್ಪತ್ರೆ ಮೇಲ್ವಿಚಾರಣೆ ನೋಡಿಕೊಳ್ಳಲಿದ್ದಾರೆ.
    * 1,375 ಮಂದಿ ಸ್ಟಾಫ್ ನರ್ಸ್‍ಗಳಿದ್ದು, 20 ಔಷಧಿ ಕೇಂದ್ರಗಳನ್ನು ಸ್ಥಾಪಿಸಿದೆ.
    * ಸೋಂಕಿತರಿಗೂ ಹಾಗೂ ಕೊರೊನಾ ಲಕ್ಷಣವಿಲ್ಲದ ಸೋಂಕಿತರಿಗೂ ಪ್ರತ್ಯೇಕ ವಾರ್ಡ್.

    ಹತ್ತು ದಿನದಲ್ಲಿ ನಿರ್ಮಾಣವಾಗಿದ್ದು ಹೇಗೆ?
    ದೇಶದಲ್ಲಿ ಅತಿ ಹೆಚ್ಚು ಸೋಂಕು ಕಾಣಿಸಿಕೊಳ್ಳುತ್ತಿರುವ ಎರಡನೇ ರಾಜ್ಯ ದೆಹಲಿಯಾಗಿದ್ದು, ಜುಲೈ ಅಂತ್ಯಕ್ಕೆ 5.5 ಲಕ್ಷ ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳಲಿದೆ. ಸುಮಾರು 15000 ಬೆಡ್‍ಗಳ ಅವಶ್ಯಕತೆ ಇದೆ ಎಂದು ದೆಹಲಿಯ ಏಮ್ಸ್ ಆಸ್ಪತ್ರೆ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಹೇಳಿದ್ದರು.

    ಈ ಆಸ್ಪತ್ರೆಯಲ್ಲಿ ರೋಗಿಗಳಿಗಾಗಿ 600 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ 70 ಸಂಚಾರಿ ಶೌಚಾಲಯಗಳು ಇರಲಿವೆ. ಜೊತೆಗೆ 400 ಕಂಪ್ಯೂಟರ್ ಗಳನ್ನು ಆಳವಡಿಸಲಾಗಿದೆ. ಸುಮಾರು 400 ವೈದ್ಯರು ಈ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಜೊತೆಗೆ ಪ್ರತೀ ಬೆಡ್‍ಗೆ ಮೊಬೈಲ್ ಹಾಗೂ ಲಾಪ್ ಟಾಪ್ ಚಾರ್ಜರ್, ಒಂದು ಸ್ಟೂಲ್ ಹಾಗೂ ಕುರ್ಚಿ, ಕಸದ ತೊಟ್ಟಿ, ಪಾತ್ರೆಗಳು ಹಾಗೂ ನೆರ್ಮಲ್ಯ ಸಾಧನಗಳು ಇರಲಿವೆ.

    ಈ ವರದಿ ಬೆನ್ನಲ್ಲೇ ಸಿಎಂ ಅರವಿಂದ ಕೇಜ್ರಿವಾಲ್ ಪರಿಸ್ಥಿತಿ ನಿಭಾಯಿಸಲು ನೆರವಾಗುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಮನವಿ ಮೇರೆಗೆ ಜೂನ್ 14ರಂದು ಗೃಹ ಸಚಿವ ಅಮಿತ್ ಶಾ, ಸಿಎಂ ಅರವಿಂದ್ ಕೇಜ್ರಿವಾಲ್, ಆರೋಗ್ಯ ಸಚಿವ ಸತ್ಯಂದ್ರ ಜೈನ್, ತುರ್ತು ನಿರ್ವಹಣಾ ಪ್ರಾಧಿಕಾರ ಒಳಗೊಂಡಂತೆ ದೆಹಲಿ ಹಿರಿಯ ಅಧಿಕಾರಿಗಳ ಜೊತೆಗೆ ಉನ್ನತ ಮಟ್ಟದ ಸಭೆ ನಡೆಸಿದ್ದರು.

    ಸಭೆಯಲ್ಲಿ ಟೆಸ್ಟಿಂಗ್‍ಗಳನ್ನು ಹೆಚ್ಚಿಸುವುದು ಮತ್ತು ಬೆಡ್‍ಗಳನ್ನು ಹೆಚ್ಚಿಸುವ ನಿರ್ಧಾರಕ್ಕೆ ಬದಲಾಗಿತ್ತು. ತುರ್ತು ಅನುಕೂಲಕ್ಕಾಗಿ ಐಸೋಲೇಷನ್ ವಾರ್ಡ್‍ಗಳಾಗಿ ಬದಲಾಯಿಸಿದ್ದ 500 ರೈಲ್ವೆ ಕೊಚ್‍ಗಳನ್ನು ನೀಡಲಾಗಿತ್ತು.

    ಸಭೆ ನಡೆಸಿದ ಹತ್ತು ದಿನದಲ್ಲಿ ಅಂದರೆ ಹೆಚ್ಚು ಕಮ್ಮಿ 10-12 ದಿನಕ್ಕೆ ಬೃಹತ್ ಕೋವಿಡ್ ಕೇರ್ ನಿರ್ಮಿಸಲಾಗಿದೆ. ಜೂನ್ 25ರ ವೇಳೆಗೆ ಸಂಪೂರ್ಣ ಸಿದ್ಧವಾಗಿದೆ. ಸದ್ಯ ಎರಡು ಸಾವಿರ ಬೆಡ್‍ಗಳು ಚಿಕಿತ್ಸೆಗೆ ಸಿದ್ಧವಾಗಿದ್ದು, ಜುಲೈ 3ರೊಳಗೆ ಸಂಪೂರ್ಣ ಆಸ್ಪತ್ರೆ ಕಾರ್ಯ ನಿರ್ವಹಿಸಲಿದೆ. ದೆಹಲಿಯಲ್ಲಿ ಪ್ರತಿದಿನ ಸುಮಾರು 20-22 ಸಾವಿರ ಮಂದಿಗೆ ಕೊರೊನಾ ಪರೀಕ್ಷೆ ನಡೆಯುತ್ತಿದ್ದು, ಪ್ರತಿದಿನ 3-4 ಸಾವಿರ ಮಂದಿಯಲ್ಲಿ ಸೋಂಕು ಪತ್ತೆಯಾಗುತ್ತಿದೆ.