Tag: COVID-19 Warriors

  • ಡಿಸೆಂಬರ್‌ವರೆಗೂ ಕೊರೊನಾ ಆತಂಕ ದೇಶವನ್ನ ಕಾಡಬಹುದು: ವಿನಯ್ ಗುರೂಜಿ

    ಡಿಸೆಂಬರ್‌ವರೆಗೂ ಕೊರೊನಾ ಆತಂಕ ದೇಶವನ್ನ ಕಾಡಬಹುದು: ವಿನಯ್ ಗುರೂಜಿ

    – ಕೋವಿಡ್-19 ವಾರಿಯರ್ಸ್‌ಗೆ ಆರತಿ ಎತ್ತಿ, ಹೂಮಳೆಗೈದ ಗುರೂಜಿ

    ಚಿಕ್ಕಮಗಳೂರು: ಕೊರೊನಾ ವಾರಿಯರ್ಸ್ ಗಳಿಗೆ ಗೌರಿಗದ್ದೆ ದತ್ತಶ್ರಮದ ಅವಧೂತ ವಿನಯ್ ಗುರೂಜಿ ಆರತಿ ಎತ್ತಿ, ಹೂಮಳೆಗೈದಿದ್ದಾರೆ.

    ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ದತ್ತಾಶ್ರಮದಲ್ಲಿ ಬುದ್ಧ ಪೂರ್ಣಿಮೆಯ ಅಂಗವಾಗಿ ಕೊರೊನಾ ವಾರಿಯರ್ಸ್ ಗಳಿಗೆ ಗೌರವ ಸಮರ್ಪಿಸಿದರು. ಹೆಲ್ತ್ ವಾರಿಯರ್ಸ್‍ಗೆ ವಿನಯ್ ಗುರೂಜಿ ಅವರು ಆರತಿ ಎತ್ತಿದರು. ಬಳಿಕ ಮೇಲ್ಭಾಗದಲ್ಲಿ ಕುಳಿತಿದ್ದ ಅವರ ಬಳಿಗೆ ಹೋಗಿ ಹೂಗಳನ್ನ ಸುರಿದು ಪುಷ್ಪಾರ್ಚನೆಯ ಮೂಲಕ ಗೌರವಿಸಿದ್ದಾರೆ.

    ಈ ವೇಳೆ ಮಾತನಾಡಿದ ವಿನಯ್ ಗುರೂಜಿ, ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು ತಮ್ಮ ಜೀವವನ್ನು ಪಣಕ್ಕಿಟ್ಟು ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿದ್ದಾರೆ. ಅವರು ದೇಶ ಜನರ ಜೀವನ ಉಳಿಸಿ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ನಮಗೆ ಮರುಜನ್ಮ ನೀಡಿದ್ದಾರೆ ಎಂದು ಹೇಳಿದ್ದಾರೆ.

    ದೇಶದ ಆರ್ಥಿಕ ಸ್ಥಿತಿ ಸಂಕಷ್ಟದಲ್ಲಿದೆ. ಕೊರೊನಾ ವೈರಸ್‍ನಿಂದ ದೇಶವೇ ತತ್ತರಿಸಿ ಹೋಗಿದೆ. ಇಂತಹ ಸಮಯದಲ್ಲಿ ಕೊರೊನಾ ವಿರುದ್ಧ ಹೋರಾಡುತ್ತಿರುವ ಸೇನಾನಿಗಳ ಸೇವೆಯನ್ನ ದೇಶದ ಯಾರೊಬ್ಬರೂ ಮರೆಯಬಾರದು. ಹಾಗಾಗಿ ಗಾಂಧಿ ಮಾರ್ಗದ ಅನುಯಾಯಿಗಳಾಗಿರುವ ಆಶ್ರಮದ ವತಿಯಿಂದ ಕೊರೊನಾ ವಾರಿಯರ್ಸ್‍ಗೆ ಗೌರವ ಸೂಚಿಸುವ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

    ಕೊರೊನಾ ವೈರಸ್ ಆತಂಕ ಡಿಸೆಂಬರ್‌ವರೆಗೂ ದೇಶವನ್ನ ಕಾಡಬಹುದು. ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ನಾವು ಅಗ್ನಿಹೋತ್ರ ಹೋಮ ಹಾಗೂ ರುದ್ರ ಹೋಮ ಮಾಡಬೇಕು. ಸರ್ಕಾರದ ನಿರ್ದೇಶನಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಮಾಸ್ಕ್ ಹಾಕಿಕೊಂಡು, ಸಾಮಾಜಿಕ ಅಂತರದ ಕಾಪಾಡಿಕೊಳ್ಳಬೇಕು ಎಂದು ವಿನಯ್ ಗುರೂಜಿ ಮನವಿ ಮಾಡಿಕೊಂಡರು.

    ದೇಶದ ಹಲವೆಡೆ ಹೆಲ್ತ್ ವಾರಿಯರ್ಸ್ ಗಳ ಮೇಲೆ ಹಲ್ಲೆ ಮಾಡಿದ್ದಾರೆ, ನಿಂದಿಸಿದ್ದಾರೆ. ಸಮಾಜಕ್ಕೆ ಸಂದೇಶ ನೀಡುವ ಸಲುವಾಗಿ ಕೊರೊನಾ ಸೇನಾಸಿಗಳನ್ನು ಗೌರವಿಸಲಾಗಿದೆ. ಪ್ರಸ್ತುತ ಸ್ಥಿಯಲ್ಲಿ ಅವರ ಸೇವೆ ಸಮಾಜಕ್ಕೆ ಸ್ವಾಸ್ಥ್ಯಕ್ಕೆ ಅತಿ ಮುಖ್ಯವಾದುದು. ಅವರನ್ನ ಎಲ್ಲರೂ ಗೌರವಿಸಬೇಕು ಎಂದರು.

    ಹೆಲ್ತ್ ವಾರಿಯರ್ಸ್ ಗಳ ಈ ಅಭಿನಂದನಾ ಸಮಾರಂಭದಲ್ಲಿ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಆಶಾ ಕಾರ್ಯಕರ್ತೆಯರು ಹಾಗೂ ಪೌರಕಾರ್ಮಿಕರಿಗೆ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ಅಧ್ಯಕ್ಷ ಡಾ. ಬೇಳೂರು ರಾಘವೇಂದರ ಶೆಟ್ಟಿ, ಆಶ್ರಮದ ಕಾರ್ಯದರ್ಶಿ ಸುಧಾಕರ್ ಉಪಸ್ಥಿತರಿದ್ದರು.

  • ಕೊರೊನಾ ವಾರಿಯರ್ಸ್ ಮೇಲೆ ದಾಳಿ ನಡೆಸಿದ್ರೆ ಹುಷಾರ್- ರಾಜ್ಯದಲ್ಲಿ 3 ವರ್ಷ ಜೈಲು, ಆಸ್ತಿ ಜಪ್ತಿ

    ಕೊರೊನಾ ವಾರಿಯರ್ಸ್ ಮೇಲೆ ದಾಳಿ ನಡೆಸಿದ್ರೆ ಹುಷಾರ್- ರಾಜ್ಯದಲ್ಲಿ 3 ವರ್ಷ ಜೈಲು, ಆಸ್ತಿ ಜಪ್ತಿ

    – ಕೇಂದ್ರದಿಂದಲೂ 7 ವರ್ಷ ಶಿಕ್ಷೆಗೆ ಸುಗ್ರೀವಾಜ್ಞೆ

    ಬೆಂಗಳೂರು: ನಗರದ ಪಾದರಾಯನಪುರ ಗಲಭೆ ಬೆನ್ನಲ್ಲೇ ಕೊರೊನಾ ವಾರಿಯರ್ಸ್ ಮೇಲಿನ ದಾಳಿ ತಡೆ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ.

    ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ತಕ್ಷಣದಿಂದಲೇ ಜಾರಿಗೆ ಬಂದಿದೆ. ಇನ್ಮೇಲೆ, ಸರ್ಕಾರಿ ಅಧಿಕಾರಿಗಳು, ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದರೆ ಅಂಥವರಿಗೆ ಮುಟ್ಟಿ ನೋಡಿಕೊಳ್ಳುವ ರೀತಿಯಲ್ಲಿ ಶಿಕ್ಷೆ ನೀಡಲಾಗುತ್ತದೆ. ಕೇಂದ್ರ ಸರ್ಕಾರ ಕೂಡ 1897ರ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದೆ.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನಕ್ಕೆ ಬಂದಿದ್ದು, ಕೊರೋನಾ ವಾರಿಯರ್ಸ್ ಮೇಲೆ ನಡೆಯುತ್ತಿರುವ ಕೃತ್ಯಗಳು `ಸಹಿಸುವಂತ ಪ್ರಕರಣ’ಗಳೇ ಅಲ್ಲ ಅಂತ ಸ್ಪಷ್ಟಪಡಿಸಿದೆ. ಏಪ್ರಿಲ್ 27ರಂದು ಪ್ರಧಾನಿ ಮೋದಿ ಅವರು, ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಈ ನಡುವೆಯೂ ಇಂದು ಪಾದರಾಯನಪುರದ ಗಲಭೆಯಂತಹ ಘಟನೆ ಪಶ್ಚಿಮ ಬಂಗಾಳದ ಬದುರಿಯಾದಲ್ಲಿ ನಡೆದಿದೆ. ಲಾಕ್‍ಡೌನ್ ಕಾವಲಿಗೆ ಇದ್ದ ಪೊಲೀಸರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ.

    ರಾಜ್ಯದ ಸುಗ್ರೀವಾಜ್ಞೆಯಲ್ಲಿ ಏನಿದೆ?
    ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದ್ರೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಆಸ್ತಿ ನಷ್ಟ ಉಂಟುಮಾಡಿದರೆ ಆಸ್ತಿ ಮಟ್ಟುಗೋಲು ಹಾಕಲಾಗುತ್ತದೆ. ಆಸ್ತಿ ಇಲ್ಲದಿದ್ದರೆ ಆರೋಪಿಗಳು ಬಂಧನ, ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ. ಜಿಲ್ಲಾ ದಂಡಾಧಿಕಾರಿಗಳಿಗೆ ಅಧಿಕಾರ ಚಲಾಯಿಸಲು ಅವಕಾಶ ನೀಡಲಾಗಿದೆ. ಈ ಮೂಲಕ ಅವರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಬಂಧನ ಮಾಡಬಹುದು. ಹಲ್ಲೆಗೊಳಗಾದ ಕೊರೊನಾ ವಾರಿಯರ್ಸ್ ದೂರು ದಾಖಲಿಸಬೇಕಿಲ್ಲ.

    ಕೇಂದ್ರದ ಸುಗ್ರೀವಾಜ್ಞೆಯಲ್ಲಿ ಏನಿರುತ್ತೆ?
    ಹೆಲ್ತ್ ವಾರಿಯರ್ಸ್ ಮೇಲಿನ ಹಲ್ಲೆಗೆ 6 ತಿಂಗಳಿಂದ 7 ವರ್ಷದವರೆಗೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ. 50 ಸಾವಿರ ರೂ.ದಿಂದ 5 ಲಕ್ಷ ರೂಪಾಯಿವರೆಗೂ ದಂಡ ವಿಧಿಸಲಾಗುವುದು. ವಾಹನಗಳು, ಆಸ್ಪತ್ರೆಗಳ ಮೇಲೆ ದಾಳಿ ನಡೆದು ಆಸ್ತಿ ನಷ್ಟ ಸಂಭವಿಸಿದರೆ ಅವುಗಳ ಮಾರುಕಟ್ಟೆ ಮೌಲ್ಯದ ದುಪ್ಪಟ್ಟು ದಂಡವನ್ನು ವಸೂಲಿ ಮಾಡಲಾಗುತ್ತದೆ. ಇಂತಹ ಪ್ರಕರಣವನ್ನು ಒಂದು ವರ್ಷದೊಳಗೆ ವಿಚಾರಣೆ ಮುಗಿಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗುತ್ತದೆ. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಸಂಪೂರ್ಣ ಭದ್ರತೆ ನೀಡಲಾಗುತ್ತದೆ.

  • 47ನೇ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಕ್ರಿಕೆಟ್ ದಿಗ್ಗಜ ನಿರ್ಧಾರ

    47ನೇ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಕ್ರಿಕೆಟ್ ದಿಗ್ಗಜ ನಿರ್ಧಾರ

    ಮುಂಬೈ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಭಾರತ ಹೋರಾಟವನ್ನು ಮುಂದುವರಿಸಿದೆ. ಇತ್ತ ಶುಕ್ರವಾರ 47ನೇ ವಸಂತಕ್ಕೆ ಕಾಲಿಡುತ್ತಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು, ಕೋವಿಡ್-19 ವಾರಿಯರ್ಸ್‍ಗೆ ಗೌರವ ಸಲ್ಲಿಸುವುದಕ್ಕಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.

    ಇದು ಆಚರಣೆಗಳ ಸಮಯವಲ್ಲ ಎಂದು ಸಚಿನ್ ಹೇಳಿದ್ದಾರೆ. ಹೀಗಾಗಿ ಅವರು ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಎಲ್ಲಾ ವೈದ್ಯರು, ದಾದಿಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು, ರಕ್ಷಣಾ ಸಿಬ್ಬಂದಿಗೆ ಸಲ್ಲಿಸುವ ಅತ್ಯುತ್ತಮ ಗೌರವ ಇದಾಗಿದೆ ಎಂದು ತೆಂಡೂಲ್ಕರ್ ಭಾವಿಸಿದ್ದಾರೆ ಎಂದು ಸಚಿನ್ ಆಪ್ತರು ಮಾಧ್ಯಮಗಳಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

    ಭಾರತದ ಕ್ರಿಕೆಟ್ ದಂತ ಕಥೆ ಸಚಿನ್ ತೆಂಡೂಲ್ಕರ್ ಅವರು ಈಗಾಗಲೇ ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿ ರಿಲೀಫ್ ಫಂಡ್‍ಗೆ ಒಟ್ಟು 50 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಜೊತೆಗೆ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಜನರಲ್ಲಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

    ಅಪ್ರತಿಮ ಬ್ಯಾಟ್ಸ್‌ಮನ್‌ಗೆ ಕೋಟ್ಯಂತರ ಅಭಿಮಾನಿಗಳು ಹಾಗೂ ಕ್ಲಬ್‍ಗಳು ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಗೌರವ ಸಲ್ಲಿಸಲು ಸಿದ್ಧತೆ ನಡೆಸಿವೆ. ಒಂದು ಫ್ಯಾನ್ ಕ್ಲಬ್ ಸಚಿನ್ ಅವರ 40 ಅಪರೂಪದ ಫೋಟೋಗಳನ್ನು ಬಿಡುಗಡೆ ಮಾಡಲಿದೆ. ಇನ್ನೊಂದು ಕ್ಲಬ್ ದಂತಕಥೆ ಸಚಿನ್ ಕೈಗೊಂಡ ಎಲ್ಲಾ ಸಾಮಾಜಿಕ ಕಾರ್ಯಗಳು ಮತ್ತು ಸೇವೆಗಳನ್ನು ಜನರ ಮುಂದಿಡಲು ತಯಾರಿ ನಡೆಸಿದೆ.