Tag: covid-19 test

  • ಕೊರೊನಾ ಪರೀಕ್ಷೆಗೆ ಸರ್ಕಾರದಿಂದ ದರ ನಿಗದಿ

    ಕೊರೊನಾ ಪರೀಕ್ಷೆಗೆ ಸರ್ಕಾರದಿಂದ ದರ ನಿಗದಿ

    ಬೆಂಗಳೂರು: ಸರ್ಕಾರ ಕೊರೊನಾ ಪರೀಕ್ಷೆಯ ದರವನ್ನು ನಿಗದಿ ಪಡಿಸಿದ್ದು, ಸರ್ಕಾರ ಸೂಚಿಸಿದ ರೋಗಿಗಳಿಗೆ 2000 ಹಾಗೂ ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಂಡರೆ 3000 ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

    ಕೋವಿಡ್ ಟಾಸ್ಕ್ ಫೋರ್ಸ್ ಸಭೆ ಬಳಿಕ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಟೆಸ್ಟ್ ದರ ಇಳಿಕೆ ಮಾಡಲಾಗಿದ್ದು, ಸರ್ಕಾರದಿಂದ ಸೂಚಿಸಿದ ರೋಗಿಗಳ ಟೆಸ್ಟ್ ಗೆ 2000 ರೂ. ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಟೆಸ್ಟ್ ಮಾಡಿಸಿದರೆ 3000 ರೂ. ನಿಗದಿ ಮಾಡಲಾಗಿದೆ. ಅಲ್ಲದೆ ಖಾಸಗಿ ಆಸ್ಪತ್ರೆಯಲ್ಲಿ ತಾಯಿ ಮಕ್ಕಳ ವಿಭಾಗ ಬಿಟ್ಟು ಉಳಿದ ಬೆಡ್ ತೆಗೆದುಕೊಳ್ಳಲು ಸೂಚಿಸಲಾಗಿದೆ. ಆದರೆ ಖಾಸಗಿಯವರಿಂದ ಶೇ.50 ಬೆಡ್ ಸರ್ಕಾರ ಪಡೆದುಕೊಳ್ಳಲಿದೆ. ಉಳಿದ ಶೇ.50ರಷ್ಟು ಬೆಡ್‍ಗಳನ್ನು ಅವರು ಯಾವುದಕ್ಕೆ ಬೇಕಾದರೂ ಬಳಸಿಕೊಳ್ಳಬಹುದು. ಸರ್ಕಾರಕ್ಕೆ ನೀಡಿರುವ ಶೇ.50ರಷ್ಟು ಬೆಡ್ ಗಳನ್ನು ಕೋವಿಡ್ ಹೊರತುಪಡಿಸಿ ಬೇರೆ ಯಾವುದಕ್ಕೂ ಬಳಕೆ ಮಾಡಬಾರದು ಸೂಚಿಸಿದರು.

    ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣ ವಸೂಲಿ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಎನ್‍ಡಿಆರ್ ಎಫ್, ಕೆಪಿಎಂಇ, ಎಪಿಡಮಿಕ್ ಕಾಯ್ದೆ ಇದೆ. ಈ ನಿಟ್ಟಿನಲ್ಲಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗಿದೆ. ಸಂಘರ್ಷದ ಹಾದಿ ಬೇಡ ಎಂದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲು ಸಿಎಂ ಹಂತ ಹಂತವಾಗಿ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಸುಧಾಕರ್ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಸಿದ್ದಾರೆ.

    ಈಗ ಒಂದು ಲಕ್ಷ ರ‍್ಯಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್ ಇವೆ, ನಾಲ್ಕು ಲಕ್ಷ ಆಂಟಿಜೆನ್ ಟೆಸ್ಟ್ ಕಿಟ್ ಖರೀದಿ ಮಾಡುತ್ತೇವೆ. ಒಟ್ಟು 5 ಲಕ್ಷ ಕಿಟ್ ಬಳಸುತ್ತೇವೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಆಂಟಿಜೆನ್ ಟೆಸ್ಟ್ ಕಿಟ್ ಬಳಸುತ್ತೇವೆ. 35 ಲಕ್ಷ ಪಿಪಿಇ ಕಿಟ್, 35 ಲಕ್ಷ ಮಾಸ್ಕ್ ಖರೀದಿಗೆ ಅನುಮೋದನೆ ನೀಡಲಾಗಿದೆ. ಕೋವಿಡ್ ನಿಯಂತ್ರಣಕ್ಕೆ ಇಂದು ಸುಮಾರು 500 ಕೋಟಿ ರೂ. ಅನುದಾನಕ್ಕೆ ಅನುಮೋದನೆ ಮಾಡಿದ್ದೇವೆ ಎಂದರು.

    ನರ್ಸ್‍ಗಳ ವೇತನವನ್ನು 30 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. 6 ತಿಂಗಳ ಕಾಲ ನರ್ಸ್‍ಗಳ ವೇತನ ಹೆಚ್ಚಳವಾಗಲಿದೆ. ಬಿಬಿಎಂಪಿ, ಆರೋಗ್ಯ, ಆಯುಷ್ ಎಲ್ಲ ನರ್ಸ್ ಗಳಿಗೂ ವೇತನ ಹೆಚ್ಚಳ ಅನ್ವಯವಾಗಲಿದೆ. ಖಾಸಗಿ ಆಸ್ಪತ್ರೆಗಳಲ್ಲೂ ಆಯುಷ್ಮಾನ್ ಭಾರತ್ ಯೋಜನೆ ಅಡಿ ದರ ಪಡೆಯಬೇಕು ಎಂದು ಸೂಚಿಸಿದರು.

    ಜಿಲ್ಲಾ ಸರ್ಕಾರಿ ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆ ಮಾಡಲು ನಿರ್ಣಯ ಮಾಡಲಾಗಿದೆ. ಜಿಲ್ಲಾ ಕೇಂದ್ರದ ಖಾಸಗಿ ಆಸ್ಪತ್ರೆಗಳು ನಾನ್ ಕೋವಿಡ್ ಸೇವೆಗೆ ಲಭ್ಯವಿರುತ್ತವೆ. ಆಯುಷ್ ವೈದ್ಯರ ವೇತನವನ್ನು 48 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ತಾತ್ಕಾಲಿಕವಾಗಿ ಕೋವಿಡ್ ಕಾರ್ಯನಿರ್ವಹಣೆಗೆ ನೇಮಕ ಮಾಡಿಕೊಳ್ಳುವ ಎಂಬಿಬಿಎಸ್ ವೈದ್ಯರಿಗೆ 80 ಸಾವಿರ ರೂ. ವೇತನ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

    ನಾನ್ ಕೋವಿಡ್ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲು ತೀರ್ಮಾನ ಮಾಡಲಾಗಿದ್ದು, ಒಪಿಡಿ ದರ 10 ರೂಪಾಯಿ ಕೊಡುವಂತಿಲ್ಲ. ಅಲ್ಲದೆ ರೋಗಿಗಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೆಲವು ಕ್ರಮಗಳನ್ನು ಕೈಗೊಳ್ಳಲು ಆಯುಷ್ ಇಲಾಖೆಯಿಂದ ಪ್ರಸ್ತಾವನೆ ಬಂದಿತ್ತು. ಆ ಪ್ರಸ್ತಾವನೆಯನ್ನು ಉನ್ನತ ಮಟ್ಟದ ಸಮಿತಿಗೆ ನೀಡಲಾಗಿದೆ. ಮುಂದಿನ ವಾರ ವರದಿ ನೀಡಲಿದೆ ಎಂದರು.

  • ತೀವ್ರ ಜ್ವರ, ಗಂಟಲು ನೋವು – ಸಿಎಂ ಕೇಜ್ರಿವಾಲ್‍ಗೆ ಕೊರೊನಾ ಟೆಸ್ಟ್

    ತೀವ್ರ ಜ್ವರ, ಗಂಟಲು ನೋವು – ಸಿಎಂ ಕೇಜ್ರಿವಾಲ್‍ಗೆ ಕೊರೊನಾ ಟೆಸ್ಟ್

    ನವದೆಹಲಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಾಳೆ ಬೆಳಗ್ಗೆ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲಿದ್ದಾರೆ. ಭಾನುವಾರದಿಂದ ಕೇಜ್ರಿವಾಲ್ ಆರೋಗ್ಯದಲ್ಲಿ ಏರುಪೇರಾಗಿದ್ದು, ವೈದ್ಯರ ಸಲಹೆ ಹಿನ್ನೆಲೆ ನಾಳೆ ಕೊರೊನಾ ಪರೀಕ್ಷೆಗೆ ಒಳಗಾಗಲಿದ್ದಾರೆ.

    ಕೇಜ್ರಿವಾಲ್ ತೀವ್ರ ಜ್ವರ, ಗಂಟಲು ನೋವಿನಿಂದ ಬಳಲುತ್ತಿದ್ದರು. ಚಿಕಿತ್ಸೆ ಬಳಿಕವೂ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಕೊರೊನಾ ಪರೀಕ್ಷೆ ನಡೆಸಲು ತಿರ್ಮಾನಿಸಲಾಗಿದೆ.

    ಕೊರೊನಾ ಹೋರಾಟದ ಮುನ್ನಲೆಯಲ್ಲಿರುವ ಅರವಿಂದ ಕೇಜ್ರಿವಾಲ್, ಪ್ರತಿ ನಿತ್ಯ ಅಧಿಕಾರಗಳ ಸಭೆ ನಡೆಸುತ್ತಿದ್ದಾರೆ. ಜ್ವರ ಕಾಣಿಸಿಕೊಂಡ ಬೆನ್ನಲ್ಲೇ ಭಾನುವಾರ ಮಧ್ಯಾಹ್ನ ಬಳಿಕ ಇದ್ದ ಎಲ್ಲ ಸಭೆಗಳನ್ನು ರದ್ದು ಮಾಡಿ ಕ್ವಾರಂಟೈನ್ ನಲ್ಲಿದ್ದಾರೆ. ದೆಹಲಿಯಲ್ಲಿ ಈವರೆಗೂ 28,936 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 812 ಮಂದಿ ಸಾವನ್ನಪ್ಪಿದ್ದಾರೆ. 11,000 ಮಂದಿ ಗುಣ ಮುಖ ಹೊಂದಿದ್ದಾರೆ.

  • ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಕೋವಿಡ್-19 ತಪಾಸಣೆ

    ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಕೋವಿಡ್-19 ತಪಾಸಣೆ

    ಧಾರವಾಡ/ಹುಬ್ಬಳ್ಳಿ: ಕೊರೋನಾ ವೈರಸ್ ಭೀತಿ ಎಲ್ಲೆಡೆಯೂ ಹಬ್ಬುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಧಾರವಾಡ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಹು-ಧಾ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಕೋವಿಡ್-19 ಪರೀಕ್ಷೆ ನಡೆಸಲಾಯಿತು.

    ಗರ್ಭಿಣಿಯರಲ್ಲಿರುವ ಭಯವನ್ನು ನಿವಾರಣೆ ಮಾಡಲು ಹಾಗೂ ಕೊರೊನಾ ವೈರಸ್ ನಿಯಂತ್ರಣದ ಹಿನ್ನೆಲೆಯಲ್ಲಿ ಗರ್ಭಿಣಿ ಮಹಿಳೆಯರ ಗಂಟಲು ದ್ರವ ಹಾಗೂ ಮೂಗಿನ ದ್ರವದ ಪರೀಕ್ಷೆ ಮಾಡಲಾಯಿತು. ಈಗಾಗಲೇ ಮೂರು ದಿನಗಳಿಂದ ಕೋವಿಡ್-19 ಪರೀಕ್ಷೆ ಪ್ರಾರಂಭವಾಗಿದ್ದು, ದಿನಕ್ಕೆ 60 ಜನರ ತಪಾಸಣೆ ಮಾಡಲಾಗುತ್ತಿದೆ. ಇಂದು ಮಧ್ಯಾಹ್ನದವರೆಗೆ 35 ಜನ ಗರ್ಭಿಣಿಯರ ಗಂಟಲು ಹಾಗೂ ಮೂಗಿನ ದ್ರವವನ್ನು ಸಂಗ್ರಹಿಸಲಾಯಿತು.

    ಇದೇ ವೇಳೆ ಮಾತನಾಡಿದ ಆರೋಗ್ಯಾಧಿಕಾರಿ ಡಾ.ಪ್ರಭು ಬಿರಾದಾರ, ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ಹಾಗೂ ಕೊರೊನಾ ವೈರಸ್ ನಿಯಂತ್ರಣದ ಹಿನ್ನೆಲೆಯಲ್ಲಿ ಗರ್ಭಿಣಿಯರ ಗಂಟಲು ದ್ರವ ಹಾಗೂ ಮೂಗಿನ ದ್ರವವನ್ನು ಸಂಗ್ರಹಿಸಿ ಪರೀಕ್ಷೆ ಮಾಡುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.

    ಇನ್ನೂ ಗರ್ಭಿಣಿ ಮಹಿಳೆಯರು ಸ್ವಯಂಪ್ರೇರಿತವಾಗಿ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು. ಅಲ್ಲದೇ ಯಾರಿಗಾದರೂ ರೋಗದ ಲಕ್ಷಣಗಳಿದ್ದರೇ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

  • ಹುಬ್ಬಳ್ಳಿಯ ಮಾಧ್ಯಮ ಪ್ರತಿನಿಧಿಗಳಿಗೆ ಆರೋಗ್ಯ ತಪಾಸಣೆ

    ಹುಬ್ಬಳ್ಳಿಯ ಮಾಧ್ಯಮ ಪ್ರತಿನಿಧಿಗಳಿಗೆ ಆರೋಗ್ಯ ತಪಾಸಣೆ

    ಹುಬ್ಬಳ್ಳಿ: ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಪ್ರತಿನಿಧಿಗಳಿಗೆ ಕೋವಿಡ್-19 ಆರೋಗ್ಯ ತಪಾಸಣೆಯನ್ನು ನಗರದ ಕಿಮ್ಸ್ ನ ಪಿಎಂಎಸ್‍ಎಸ್ ವೈ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಾಡಲಾಯಿತು.

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಪತ್ರಕರ್ತರಿಗೆ ಕೋವಿಡ್ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಮಟ್ಟದ ಎಲ್ಲ ಮಾಧ್ಯಮ ಪ್ರತಿನಿಧಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಗಂಟಲು ದ್ರವ ಸಂಗ್ರಹಿಸಲಾಯಿತು.


    ರಾಜ್ಯದಲ್ಲಿ ಕೋವಿಡ್-19 ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಾಧ್ಯಮ ಪ್ರತಿನಿಧಿಗಳು ಕೂಡಾ ಸತತವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಆರೋಗ್ಯ ತಪಾಸಣೆ ಮಾಡುವಂತೆ ಒತ್ತಾಯಿಸಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು.

    ಈ ಹಿನ್ನೆಲೆಯಲ್ಲಿ ಸಚಿವರ ಪತ್ರಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಮಾಧ್ಯಮ ಪ್ರತಿನಿಧಿಗಳ ಆರೋಗ್ಯ ತಪಾಸಣೆ ಮಾಡುವಂತೆ ವಾರ್ತಾ ಇಲಾಖೆಗೆ ನಿರ್ದೇಶನ ನೀಡಿದ್ದರು. ಇಂದು ಧಾರವಾಡ ಜಿಲ್ಲಾ ಮಟ್ಟದ ಮಾಧ್ಯಮ ಪ್ರತಿನಿಧಿಗಳಿಗೆ ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು. ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಡೊಳ್ಳಿನ ಸೇರಿದಂತೆ ಎಲ್ಲಾ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.

  • ಗೂಂಡಾಗಿರಿ ಮಾಡಿ ಎಂಎಲ್‍ಸಿ ಆಗಿ ಮುಂದುವರಿಯೋಕೆ ಯಾವ ಅರ್ಹತೆ ಇದೆ: ಶ್ರೀಕಂಠೇಗೌಡ ವಿರುದ್ಧ ಸುಮಲತಾ ಕಿಡಿ

    ಗೂಂಡಾಗಿರಿ ಮಾಡಿ ಎಂಎಲ್‍ಸಿ ಆಗಿ ಮುಂದುವರಿಯೋಕೆ ಯಾವ ಅರ್ಹತೆ ಇದೆ: ಶ್ರೀಕಂಠೇಗೌಡ ವಿರುದ್ಧ ಸುಮಲತಾ ಕಿಡಿ

    ಮಂಡ್ಯ: ಇಂದು ಪತ್ರಕರ್ತರ ಕೋವಿಡ್-19 ಪರೀಕ್ಷೆ ನಡೆಸುತ್ತಿದ್ದ ವೇಳೆ ಅಡ್ಡಿಪಡೆಸಿ, ಗಲಾಟೆ ಮಾಡಿದ ಎಂಎಲ್‍ಸಿ ಕೆ.ಟಿ ಶ್ರೀಕಂಠೇಗೌಡ ಹಾಗೂ ಅವರ ಪುತ್ರನ ವಿರುದ್ಧ ಸಂಸದೆ ಸುಮಲತಾ ಅಂಬರೀಶ್ ಕಿಡಿಕಾರಿದ್ದಾರೆ. ಈ ರೀತಿ ಗೂಂಡಾಗಿರಿ ಮಾಡಿ, ಗಲಾಟೆ ಮಾಡೋರಿಗೆ ಎಂಎಲ್‍ಸಿ ಆಗಿ ಮುಂದುವರಿಯೋಕೆ ಯಾವ ಅರ್ಹತೆ ಇದೆ ಎಂದು ಪ್ರಶ್ನಿಸಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ದೂರವಾಣಿಯಲ್ಲಿ ಮಾತನಾಡಿದ ಅವರು, ಎಸ್‍ಪಿ, ಪೊಲೀಸ್ ಅಧಿಕಾರಿಗಳು, ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆಯುತ್ತಿದ್ದ ಪತ್ರಕರ್ತರ ಕೋವಿಡ್-19 ಪರೀಕ್ಷೆಗೆ ಅಡ್ಡಿಪಡೆಸಿ, ರೌಡಿಗಿರಿ ಮೆರೆದಿದ್ದು ಖಂಡನೀಯ. ಶ್ರೀಕಂಠೇಗೌಡರು ತಪ್ಪು ಮಾಡಿದ್ದಾರೆ. ಅವರ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುತ್ತೆ, ಅದನ್ನು ಅವರು ಎದುರಿಸಲೇಬೇಕು. ಅವರು ನಿಯಮಗಳನ್ನು ಉಲ್ಲಂಘಿಸಿ ಕಾನೂನಿನ ವಿರುದ್ಧ ಹೋಗಿದ್ದಾರೆ. ಸರ್ಕಾರದ ಅನುಮತಿ ಪಡೆದು ಮಂಡ್ಯದಲ್ಲಿ ಪತ್ರಕರ್ತರ ಕೋವಿಡ್-19 ಪರೀಕ್ಷೆ ನಡೆಸಲಾಗುತ್ತಿದೆ. ಫೀಲ್ಡ್ ಅಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಸೋಂಕು ತಗುಲಿದರೆ ಅದು ಬೇರೆ ಅವರಿಗೆ ಹರಡುವ ಸಾಧ್ಯತೆ ಹೆಚ್ಚು, ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಪರೀಕ್ಷೆ ಕೈಗೊಳ್ಳಲಾಗಿದೆ ಅದನ್ನು ಶ್ರೀಕಂಠೇಗೌಡರು ಅರ್ಥ ಮಾಡಿಕೊಳ್ಳಬೇಕು ಎಂದು ಹರಿಹಾಯ್ದರು.

    ಇಲ್ಲಿ ಪರೀಕ್ಷೆ ಮಾಡಬೇಡಿ, ನಮ್ಮ ಮನೆ ಇದೆ ಎಂದರೆ ಬೇರೆ ಕಡೆ ಪರೀಕ್ಷೆ ಮಾಡಿದರೂ ಮನೆಗಳು ಇರುತ್ತೆ ಅಲ್ವಾ? ಪರಿಸ್ಥಿತಿ ಅರ್ಥಮಾಡಿಕೊಳ್ಳದೇ ಹೀಗೆ ಗಲಾಟೆ ಮಾಡಿದರೆ ಈ ಘಟನೆಗೂ ಪಾದರಾಯನಪುರದಲ್ಲಿ ನಡೆದ ಘಟನೆಗೂ ಏನು ವ್ಯತ್ಯಾಸ? ಇಲ್ಲಿ ಕೋವಿಡ್-19 ಪರೀಕ್ಷೆ ನಡೆಸಿದರೆ ನಿಮಗೂ ಕೊರೊನಾ ಬರುತ್ತೆ, ಇದನ್ನು ವಿರೋಧಿಸಿ ಎಂದು ಶ್ರೀಕಂಠೆಗೌಡರು ಸ್ಥಳೀಯರಿಗೆ ಹೇಳಿರುವುದು ಅವರ ಸಂಸ್ಕಾರವನ್ನು ತೋರಿಸುತ್ತದೆ. ಇದು ಬಹಳ ಶೋಷನೀಯ. ಒಬ್ಬರು ಎಂಎಲ್‍ಸಿ ಆಗಿ ಈ ರೀತಿ ಹೇಳಿಕೆ ಕೊಡುತ್ತಾರೆ ಎಂದರೆ ಅವರ ಶಿಕ್ಷಣ ಹಾಗೂ ಮಾಹಿತಿ ಎಷ್ಟರ ಮಟ್ಟಿಗೆ ತಿಳಿದುಕೊಂಡಿದ್ದಾರೆ ಎನ್ನೋದನ್ನ ನಾವು ಪ್ರಶ್ನಿಸಬೇಕಾಗಿದೆ ಎಂದರು.

    ಕೊರೊನಾ ಪರೀಕ್ಷೆ ಮಾಡಿದರೆ ಸೋಂಕು ಹರಡುತ್ತೆ ಎಂದು ಎಲ್ಲೂ ಹೇಳಿಲ್ಲ. ಬದಲಾಗಿ ಅತೀ ಹೆಚ್ಚು ಪರೀಕ್ಷೆ ಮಾಡಿ ಎಂದಿದ್ದಾರೆ. ಕೊರೊನಾ ಇರುವ ಅದೆಷ್ಟೋ ಮಂದಿಗೆ ಸೋಂಕಿನ ಲಕ್ಷಣಗಳು ಇರುವುದಿಲ್ಲ. ಹೀಗಾಗಿ ಪರೀಕ್ಷೆ ಮಾಡುವುದು ಅಗತ್ಯ. ಇದನ್ನು ಅರ್ಥ ಮಾಡಿಕೊಳ್ಳದೇ ಈ ಸಂಕಷ್ಟದ ಪರಿಸ್ಥಿತಿಯಲ್ಲೂ ಬೇರೆ ಸಮಯದಲ್ಲಿ ಮಾಡುವಂತೆ ಗೂಂಡಾಗಿರಿ, ಗಲಾಟೆ, ರಾಜಕಾರಣ ಮಾಡುವುದು ಸರಿಯಲ್ಲ. ಹೀಗೆ ಮಾಡಿ ಜನಪ್ರತಿನಿಧಿಯಾಗುವ ಅರ್ಹತೆಯನ್ನೇ ಇವರು ಕಳೆದುಕೊಂಡಿದ್ದಾರೆ ಎನ್ನಬಹುದು ಎಂದು ಕಿಡಿಕಾರಿದ್ದಾರೆ.

    ಈಗಾಗಲೇ ನಾನು ಪೊಲೀಸ್ ಅಧಿಕಾರಿಗಳ ಜೊತೆ ಈ ಬಗ್ಗೆ ಮಾತನಾಡಿದ್ದೇನೆ. ಅವರು ಎಫ್‍ಐಆರ್ ದಾಖಲಾದ ಮೇಲೆ ಅದರ ಕಾಫಿಯನ್ನ ಕಳುಹಿಸುವುದಾಗಿ ಹೇಳಿದ್ದಾರೆ. ಈ ರೀತಿ ತಪ್ಪು ಮಾಡಿದರೆ ಸಾಮಾನ್ಯ ವ್ಯಕ್ತಿ ಮೇಲೆ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೋ ಅದೇ ರೀತಿ ಕ್ರಮವನ್ನು ಎಂಎಲ್‍ಸಿ ಮೇಲೂ ತೆಗೆದುಕೊಳ್ಳಬೇಕು. ತಪ್ಪು ಯಾರೇ ಮಾಡಿದರು ತಪ್ಪು ತಪ್ಪೇ. ಎಂಎಲ್‍ಸಿ, ಎಂಪಿ, ಎಂಎಲ್‍ಎ ಯಾರೇ ಮಾಡಿದರೂ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಎಷ್ಟೆಲ್ಲಾ ರಿಸ್ಕ್ ತೆಗೆದುಕೊಂಡು ಅಗತ್ಯ ಸೇವೆಗಳಲ್ಲಿ ಇರುವವರು ಕೆಲಸ ಮಾಡುತ್ತಿದ್ದಾರೆ ಎನ್ನುವುದು ಇವರಿಗೆ ಅರ್ಥ ಆಗುತ್ತಿಲ್ಲ. ಇವರು ನಾವು ಮಾತ್ರ ಸುರಕ್ಷಿತವಾಗಿರಬೇಕು ಎನ್ನುವ ಉದ್ದೇಶದಲ್ಲಿ ಇದ್ದಾರೋ ಏನೋ ಗೊತ್ತಿಲ್ಲ. ಆದರೆ ಈ ಸಂಬಂಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸುಮಲತಾ ಅವರು ಒತ್ತಾಯಿಸಿದ್ದಾರೆ.