Tag: Covid-19 Omicron

  • ತಮಿಳುನಾಡಿನಲ್ಲಿ ನ್ಯೂ ಇಯರ್‌ಗೆ ಹೊಸ ಮಾರ್ಗಸೂಚಿ ಬಿಡುಗಡೆ

    ತಮಿಳುನಾಡಿನಲ್ಲಿ ನ್ಯೂ ಇಯರ್‌ಗೆ ಹೊಸ ಮಾರ್ಗಸೂಚಿ ಬಿಡುಗಡೆ

    ಚೆನ್ನೈ: ತಮಿಳುನಾಡು ಸರ್ಕಾರ ರಾಜ್ಯಾದ್ಯಂತ ಬೀಚ್‍ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷ ಆಚರಣೆಯನ್ನು ನಿಷೇಧಿಸಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.

    ಕಡಲತೀರಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಆಚರಣೆಗಳನ್ನು ಅನುಮತಿಸಲಾಗುವುದಿಲ್ಲ. ಇದಲ್ಲದೆ ಪೊಲೀಸರು ಡ್ರಿಂಕ್ ಆಂಡ್ ಡ್ರೈವ್ ವಿರುದ್ಧ ನಾಗರಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಅನಾವಶ್ಯಕವಾಗಿ ಖಾಸಗಿ ವಾಹನಗಳನ್ನು ರೋಡಿಗೆ ಇಳಿಸಿದರೆ ಅಂತಹವರನ್ನು ಬಂಧಿಸಿ ವಾಹನಗಳನ್ನು ವಶಪಡಿಸಿಕೊಳ್ಳುವ ಎಚ್ಚರಿಕೆ ನೀಡಿದ್ದೇವೆ ಎಂದು ಡಿಜಿಪಿ ತಿಳಿಸಿದ್ದಾರೆ. ಇದನ್ನೂ ಓದಿ: ವೀಡಿಯೋ: ಮೇಕಪ್ ಆರ್ಟ್‍ನಿಂದ ಶಾರೂಖ್ ಆಗಿ ರೂಪಾಂತರಗೊಂಡ ಯುವತಿ

    ರೋಡ್ ರೇಜ್ ಪ್ರಕರಣಗಳಿಗೂ ಸಹ ಕಠಿಣ ಶಿಕ್ಷೆ ನೀಡಲಾಗುತ್ತದೆ. ಎಲ್ಲಾ ಹೋಟೆಲ್‍ಗಳು ಪ್ರಸ್ತುತ (ಎಸ್‍ಒಪಿ) ಅನ್ನು ಅನುಸರಿಸಬೇಕಾಗುತ್ತದೆ. ರಾತ್ರಿ 11 ಗಂಟೆಯೊಳಗೆ ಎಲ್ಲ ಕಾರ್ಯಾಚರಣೆಯನ್ನು ಕೊನೆಗೊಳಿಸಬೇಕಾಗುತ್ತದೆ. ಹೊಸ ವರ್ಷದ ಆಚರಣೆಯ ಭಾಗವಾಗಿ ಖಾಸಗಿ ಪಾರ್ಟಿಗಳಿಗೂ ನಿರ್ಬಂಧಗಳು ಅನ್ವಯಿಸುತ್ತವೆ. ರಾಜ್ಯ ಆರೋಗ್ಯ ಸಚಿವರು ಈ ಹಿಂದೆ ಕುಟುಂಬಗಳೊಂದಿಗೆ ಮನೆಯಲ್ಲಿಯೇ ಹೊಸ ವರ್ಷವನ್ನು ಆಚರಿಸಿ ಎಂದು ಹೇಳಿದ್ದರು.

    ಎಲ್ಲಾ ದೂರದ ಪ್ರಯಾಣಿಕರು ಬಸ್ ಅಥವಾ ರೈಲಿನಲ್ಲಿ ಪ್ರಯಾಣಿಸಬೇಕು. ದ್ವಿಚಕ್ರ ವಾಹನಗಳ ಬಳಕೆಯನ್ನು ತಪ್ಪಿಸಬೇಕು. ಇದಲ್ಲದೆ, ಅಪಘಾತಗಳನ್ನು ತಪ್ಪಿಸಲು ಪ್ರತಿ 3 ಗಂಟೆಗಳಿಗೊಮ್ಮೆ ವಿರಾಮ ತೆಗೆದುಕೊಳ್ಳುವಂತೆ ಪ್ರಯಾಣಿಕರಿಗೆ ಸರ್ಕಾರವು ಸಲಹೆ ನೀಡಿದೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಯಾರಿಗೆ ಬೇಕು?: ಹೆಚ್.ಡಿ.ದೇವೇಗೌಡ

    ಎಲ್ಲಾ ಧಾರ್ಮಿಕ ಸ್ಥಳಗಳು ಕೋವಿಡ್ -19 ಗೆ ಸಂಬಂಧಿಸಿದಂತೆ ಈಗಾಗಲೇ ಜಾರಿಯಲ್ಲಿರುವ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಚೆನ್ನೈ ಪೊಲೀಸರು ತಿಳಿಸಿದ್ದಾರೆ.

  • ಬೂಸ್ಟರ್ ಡೋಸ್ ಬಗ್ಗೆ ಕೇಂದ್ರದ ತೀರ್ಮಾನ ಸ್ಪಷ್ಟವಾಗಿಲ್ಲ: ಬೊಮ್ಮಾಯಿ

    ಬೂಸ್ಟರ್ ಡೋಸ್ ಬಗ್ಗೆ ಕೇಂದ್ರದ ತೀರ್ಮಾನ ಸ್ಪಷ್ಟವಾಗಿಲ್ಲ: ಬೊಮ್ಮಾಯಿ

    ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಮನ್ಸೂಕ್ ಮಾಂಡವಿಯಾ ಭೇಟಿಯಾಗಿ ಕೊರೊನಾ ನಿರ್ವಹಣೆ ಬಗ್ಗೆ ಚರ್ಚೆ ಮಾಡಿದ್ದೇನೆ. ಕೊರೊನಾ ನಿರ್ವಹಣೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ವ್ಯಾಕ್ಸಿನೇಷನ್ ಹೆಚ್ಚು ಮಾಡಲು ಸೂಚಿಸಿದ್ದಾರೆ. ಬೂಸ್ಟರ್ ಡೋಸ್ ಬಗ್ಗೆ ಕೇಂದ್ರದ ತೀರ್ಮಾನ ತಿಳಿಸುವುದಾಗಿ ಹೇಳಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವರ ಭೇಟಿ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

    ಕೇಂದ್ರ ನಾಯಕ ಭೇಟಿ ಬಳಿಕ ಮಧ್ಯಮಗಳೊಂದಿಗೆ ಮಾತನಾಡಿದ ಅವರು, ಓಮಿಕ್ರಾನ್ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಇಬ್ಬರು ಕರ್ನಾಟಕದವರು ಎಂದಿದ್ದಾರೆ. ಹೊಸ ತಳಿಗಳ ಬಗ್ಗೆ, ತಡೆಗಟ್ಟುವ ಬಗ್ಗೆ ನಾಳೆ ತುರ್ತುಸಭೆ ಕರೆಯಲಾಗಿದೆ. ನಾಳೆ ಮಧ್ಯಾಹ್ನ 1 ಗಂಟೆಗೆ ಸಭೆ ನಡೆಯಲಿದೆ. ಕೇಂದ್ರದ ಪ್ರಮುಖರು, ತಜ್ಞರ ಜೊತೆ ಚರ್ಚೆ ಮಾಡಬೇಕಿದೆ. ವರದಿ ಬಂದ ಬಳಿಕವೂ ಮತ್ತೆ ಕೇಂದ್ರ ಆರೋಗ್ಯ ಸಚಿವರು ಭೇಟಿ ಮಾಡಿ ಮಾಹಿತಿಗಳನ್ನು ನಾಳೆ ಶೇರ್ ಮಾಡುವುದಾಗಿ ಹೇಳಿದ್ದಾರೆ. ಈಗ ಕೇವಲ ಮಾಹಿತಿ ರವಾನೆ ಆಗಿದೆ. ಪೂರ್ಣ ವರದಿ ಬಂದ ಬಳಿಕ ಎಲ್ಲಾ ವಿಚಾರ ಲಭ್ಯವಾಗಲಿದೆ. ವಿಮಾನ ನಿಲ್ದಾಣ ಪರೀಕ್ಷೆ, ಕ್ವಾರಂಟೈನ್ ಬಗ್ಗೆ ಹೆಚ್ಚು ತಿಳಿಯುವ ಅವಶ್ಯಕತೆ ಇದೆ ನಾಳೆ ತಜ್ಞರ ಜೊತೆ ಮಾತನಾಡಿ ತೀರ್ಮಾನ ಮಾಡಲಾಗುತ್ತೆ ಎಂದರು. ಇದನ್ನೂ ಓದಿ: ಭಾರತಕ್ಕೆ ಕಂಟಕವಾಗುವುದೇ ಓಮಿಕ್ರಾನ್ – ಹೈರಿಸ್ಕ್ ದೇಶಗಳಿಂದ 7,976 ಮಂದಿ ಆಗಮನ?

    ರಸಗೊಬ್ಬರದ ಸರಬರಾಜು ಬಗ್ಗೆ ಚರ್ಚೆ ಮಾಡಿದ್ದೇನೆ. ಡಿಎಪಿ ಹೆಚ್ಚುವರಿಗೆ ಮನವಿ ಮಾಡಲಾಗಿತ್ತು. ಸಚಿವರು ಗೊಬ್ಬರ ನೀಡುವ ಭರವಸೆ ನೀಡಿದ್ದಾರೆ. ಬಳಿಕ ಕಿರಣ್ ರಿಜಿಜು ಅವರನ್ನು ಭೇಟಿ ಮಾಡಿ ಜನವರಿ ತಿಂಗಳಲ್ಲಿ ರಾಜ್ಯಕ್ಕೆ ಬರಲು ಆಹ್ವಾನ ನೀಡಿದ್ದೇನೆ. ಕೋರ್ಟ್ ಮತ್ತು ಕಾನೂನು ವ್ಯವಸ್ಥೆ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಬಗ್ಗೆ ಚರ್ಚೆ ಮಾಡಲಾಗಿದೆ ಎಂದರು.  ಇದನ್ನೂ ಓದಿ: ಕರ್ನಾಟಕಕ್ಕೆ ಕಾಲಿಟ್ಟ ಡೆಡ್ಲಿ ವೈರಸ್‌- ಬೆಂಗಳೂರಿನ ಇಬ್ಬರಲ್ಲಿ ಓಮಿಕ್ರಾನ್‌ ಪತ್ತೆ!

    ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿ, ಈ ಬಗ್ಗೆ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಬೇರೆ ಬೇರೆ ಅಭಿಪ್ರಾಯಗಳಿದೆ. ಯಡಿಯೂರಪ್ಪ ಅವರು ರಾಷ್ಟ್ರೀಯ ನಾಯಕರ ಜೊತೆಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ನುಡಿದರು.

    ಸಂಸತ್ ಭವನದಲ್ಲಿ ಬಸವರಾಜ ಬೊಮ್ಮಾಯಿ ಕೇಂದ್ರ ಸಚಿವರಾದ, ಪ್ರಹ್ಲಾದ್ ಜೋಶಿ, ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಕಿರಣ್ ರಿಜಿಜು ಮತ್ತು ಮನ್ಸೂಕ್ ಮಾಂಡವಿಯಾ ಭೇಟಿಯಾಗಿ ಹಲವು ವಿಷಯಗಳ ಬಗ್ಗೆ ಮಾತುಕತೆ ನಡೆಸಿದರು.

  • ಭಾರತಕ್ಕೆ ಕಂಟಕವಾಗುವುದೇ ಓಮಿಕ್ರಾನ್ – ಹೈರಿಸ್ಕ್ ದೇಶಗಳಿಂದ 7,976 ಮಂದಿ ಆಗಮನ?

    ಭಾರತಕ್ಕೆ ಕಂಟಕವಾಗುವುದೇ ಓಮಿಕ್ರಾನ್ – ಹೈರಿಸ್ಕ್ ದೇಶಗಳಿಂದ 7,976 ಮಂದಿ ಆಗಮನ?

    ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್‌ ಹೊಸ ರೂಪಾಂತರಿ ತಳಿ ಓಮಿಕ್ರಾನ್ ಇದೀಗ ಭಾರತಕ್ಕೆ ಕಂಟಕವಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ. ಈಗಾಗಲೇ ದೇಶದಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ. ಈ ನಡುವೆ ಕಳೆದ ನಾಲ್ಕು ದಿನಗಳಿಂದ ಭಾರತಕ್ಕೆ ಹೈರಿಸ್ಕ್ ದೇಶಗಳಿಂದ 7,976 ಮಂದಿ ಬಂದಿಳಿದಿದ್ದು, ಈ ಪೈಕಿ 12 ಮಂದಿಯಲ್ಲಿ ಕೊರೊನಾ ಕಂಡುಬಂದು ಆತಂಕ ಮೂಡಿಸಿದೆ.

    ಮಹಾರಾಷ್ಟ್ರ, ದೆಹಲಿ ಮತ್ತು ಉತ್ತರ ಪ್ರದೇಶದ ತಲಾ ನಾಲ್ವರಲ್ಲಿ ಸೋಂಕು ಕಂಡು ಬಂದಿದೆ. ಇವರ ಜೀನೋಮ್ ಸೀಕ್ವೆನ್ಸಿಂಗ್ ಟೆಸ್ಟ್ ಫಲಿತಾಂಶ ಬರಬೇಕಿದೆ. ದಕ್ಷಿಣ ಆಫ್ರಿಕಾದಲ್ಲಿ ನವೆಂಬರ್ 24ರಂದು ಬೆಳಕಿಗೆ ಬಂದ ಓಮಿಕ್ರಾನ್ ತಳಿಯ ವೈರಾಣು ಕೇವಲ 8 ದಿನಗಳ ಅಂತರದಲ್ಲಿ ಬರೋಬ್ಬರಿ 29 ದೇಶಗಳಿಗೆ ವ್ಯಾಪಿಸಿದೆ. ಜಗತ್ತಿನಾದ್ಯಂತ ಒಟ್ಟು 373 ಮಂದಿಗೆ ಓಮಿಕ್ರಾನ್ ಸೋಂಕು ತಗುಲಿದೆ. ದಕ್ಷಿಣ ಆಫ್ರಿಕಾದಲ್ಲಿ ಅತ್ಯಧಿಕ ಅಂದರೆ 183 ಪ್ರಕರಣ ಪತ್ತೆಯಾಗಿದೆ. ಘನಾದಲ್ಲಿ 33, ಬ್ರಿಟನ್‍ನಲ್ಲಿ 32, ಬೋಟ್ಸ್ ವಾನದಲ್ಲಿ 19, ನೆದರ್‍ಲೆಂಡ್‍ನಲ್ಲಿ 16, ಪೋರ್ಚುಗಲ್‍ನಲ್ಲಿ 13, ಜರ್ಮನಿಯಲ್ಲಿ 10, ಆಸ್ಟ್ರೇಲಿಯಾದಲ್ಲಿ 8, ಹಾಂಕಾಂಗ್, ಕೆನಡಾದಲ್ಲಿ ತಲಾ 7, ಡೆನ್ಮಾರ್ಕ್‍ನಲ್ಲಿ 6, ಇಟಲಿ, ಸ್ವೀಡೆನ್‍ನಲ್ಲಿ ತಲಾ 4, ದಕ್ಷಿಣ ಕೊರಿಯಾದಲ್ಲಿ 3, ಭಾರತ, ಇಸ್ರೇಲ್, ಬೆಲ್ಜಿಯಂ, ಸ್ಪೇನ್, ಬ್ರೆಜಿಲ್, ನಾರ್ವೇಯಲ್ಲಿ ತಲಾ 2, ಅಮೆರಿಕಾ, ಫ್ರಾನ್ಸ್, ಸೌದಿ ಅರೇಬಿಯಾ, ಐರ್ಲೆಂಡ್‌, ಯುಎಇಯಲ್ಲಿ ತಲಾ 1 ಪ್ರಕರಣ ಬೆಳಕಿಗೆ ಬಂದಿವೆ. ಇದನ್ನೂ ಓದಿ: ಓಮಿಕ್ರಾನ್ ಸೋಂಕಿತರ ಸಂಪರ್ಕದಲ್ಲಿದ್ದ ನಾಲ್ವರಿಗೆ ಕೊರೊನಾ ಪಾಸಿಟಿವ್: ಸುಧಾಕರ್

    ಅಮೆರಿಕಾದ ಓಮಿಕ್ರಾನ್ ಸೋಂಕಿತನಲ್ಲಿ ಪತ್ತೆಯಾದ ತಳಿ 50 ಬಾರಿ ರೂಪಾಂತರಗೊಂಡಿರುವುದೆಂದು ತಿಳಿದುಬಂದಿದೆ. ಓಮಿಕ್ರಾನ್ ವ್ಯಾಪಿಸುತ್ತಿರುವ ಪರಿಯಿಂದ ಜಗತ್ತು ತತ್ತರಿಸಿದ್ದು, ಹೊಸ ತಳಿಯ ಸೋಂಕು ಸ್ವರೂಪದ ಬಗ್ಗೆ ಸಂಶೋಧನೆಗಳು ಮುಂದುವರಿದಿವೆ. ದಕ್ಷಿಣ ಆಫ್ರಿಕಾದ ತಜ್ಞರು ಹೇಳುವ ಪ್ರಕಾರ, ಓಮಿಕ್ರಾನ್ ತೀವ್ರತೆ ಹೇಗಿರಲಿದೆ ಎಂದು ತಿಳಿದುಕೊಳ್ಳುವುದೇ ಕಷ್ಟ ಆಗಿದೆ. ಈಗ ಹಿರಿಯರಿಗೂ ಓಮಿಕ್ರಾನ್ ವಕ್ಕರಿಸುತ್ತಿರೋದು ಗೊತ್ತಾಗುತ್ತಿದೆ. ಆದರೆ ಅವರಲ್ಲಿ ಕೆಲವು ವಾರ ಯಾವುದೇ ತೀವ್ರ ಸ್ವರೂಪದ ಸೋಂಕು ಲಕ್ಷಣಗಳು ಕಂಡುಬರದೇ ಇರಬಹುದು. ಓಮಿಕ್ರಾನ್ ಸೋಂಕಿತನಲ್ಲಿ ಕ್ರಮವಾಗಿ ರೋಗನಿರೋಧಕ ಶಕ್ತಿ ಇಳಿಕೆ ಆಗುತ್ತಿದೆ. ಆದರೆ ವ್ಯಾಕ್ಸಿನ್ ಪಡೆದವರಿಗೆ ಓಮಿಕ್ರಾನ್‍ನಿಂದ ರಕ್ಷಣೆ ಸಿಗಲಿದೆ ಎಂಬ ಅಂಶವನ್ನು ಕೋವಿಡ್ ತಜ್ಞರು ಪತ್ತೆ ಹಚ್ಚಿದ್ದಾರೆ. ಇದನ್ನೂ ಓದಿ: ಕರ್ನಾಟಕಕ್ಕೆ ಕಾಲಿಟ್ಟ ಡೆಡ್ಲಿ ವೈರಸ್‌- ಬೆಂಗಳೂರಿನ ಇಬ್ಬರಲ್ಲಿ ಓಮಿಕ್ರಾನ್‌ ಪತ್ತೆ!