ವಾಷ್ಟಿಂಗ್ಟನ್: ಕೊರೊನಾ ಆರ್ಭಟದ ಮಧ್ಯೆ ಭಾರತಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ಲಸಿಕೆ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳ ರಫ್ತಿಗೆ ಅಮೆರಿಕ ಹೇರಿದ್ದ ನಿಷೇಧವನ್ನು ತೆರವುಗೊಳಿಸಿದೆ. ಇದರಿಂದಾಗಿ ಲಸಿಕೆ ತಯಾರಿಕೆ ಚುರುಕುಗೊಳ್ಳಲಿದ್ದು, ಹೆಚ್ಚು ಉತ್ಪಾದಿಸಲು ಸಹಾಯವಾಗಲಿದೆ.
ಕೋವಿಶೀಲ್ಡ್ ಕೊರೊನಾ ಲಸಿಕೆ ಉತ್ಪಾದಿಸಲು ಪುಣೆ ಮೂಲದ ಸೀರಂ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾಗೆ ತುರ್ತಾಗಿ ನಿರ್ದಿಷ್ಟ ಕಚ್ಚಾ ವಸ್ತುಗಳ ಅಗತ್ಯವಿರುವುದನ್ನು ಭಾನುವಾರ ಅಮೆರಿಕ ಮನಗಂಡಿದೆ. ಹೀಗಾಗಿ ಈ ಕಚ್ಚಾ ವಸ್ತುಗಳು ತಕ್ಷಣವೇ ಭಾರತಕ್ಕೆ ಲಭ್ಯವಾಗಲಿದೆ ಎಂದು ಅಮೆರಿಕ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಈ ನಿಟ್ಟಿನಲ್ಲಿ ಯುಎಸ್ ರಾಷ್ಟ್ರೀಯ ಭದ್ರತಾ ಮಂಡಳಿ(ಎನ್‍ಎಸ್‍ಸಿ) ವಕ್ತಾರ ಎಮಿಲಿ ಹಾರ್ನ್ ಅವರು ಹೇಳಿಕೆ ನೀಡಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಅಮೇರಿಕನ್ ಕೌಂಟರ್ ಜೇಕ್ ಸುಲ್ಲಿವಾನ್ ನಡುವಿನ ದೂರವಾಣಿ ಕರೆಯ ಬಗ್ಗೆ ಕೇಳಿದಾಗ ಹಾರ್ನ್ ಈ ಕುರಿತು ದೃಢಪಡಿಸಿದ್ದಾರೆ.
ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಹಾಗೂ ಭಾರತದಲ್ಲಿನ ಆರೋಗ್ಯ ಕಾರ್ಯಕರ್ತರನ್ನು ರಕ್ಷಿಸಲು ಥೀರಾಪಿಯಾಟಿಕ್ಸ್, ರ್ಯಾಪಿಡ್ ಡೈಯಾಗ್ನಸ್ಟಿಕ್ ಟೆಸ್ಟ್ ಕಿಟ್ಸ್, ವೆಂಟಿಲೇಟರ್ ಗಳು ಹಾಗೂ ಪಿಪಿಇ ಕಿಟ್‍ಗಳನ್ನು ತಕ್ಷಣವೇ ಭಾರತಕ್ಕೆ ಸಿಗುವಂತೆ ಮಾಡಲಾಗುವುದು ಎಂದು ಎಮಿಲಿ ಹಾರ್ನ್ ತಿಳಿಸಿದ್ದಾರೆ.

ಕೋವಿಡ್-19 ಲಸಿಕೆ ಉತ್ಪಾದನೆಗೆ ಬೇಕಾಗುವ ಕಚ್ಚಾ ವಸ್ತುಗಳನ್ನು ಅಮೆರಿಕದ ಕಂಪನಿಗಳು ರಫ್ತು ಮಾಡದಂತೆ ಕಳೆದ ಫೆಬ್ರವರಿಯಲ್ಲಿ ಅಧ್ಯಕ್ಷ ಬೈಡೆನ್ ನಿಷೇಧ ಹೇರಿದ್ದರು. ಇದರಿಂದಾಗಿ ಭಾರತದಲ್ಲಿ ಕೋವಿಶೀಲ್ಡ್ ಉತ್ಪಾದನೆ ಮಾಡುವ ಸೀರಂ ಮತ್ತು ಕೊವ್ಯಾಕ್ಸಿನ್ ಉತ್ಪಾದನೆ ಮಾಡುವ ಭಾರತ್ ಬಯೋಟೆಕ್ ಕಂಪನಿಗೆ ಸಮಸ್ಯೆಯಾಗಿತ್ತು. ಈ ಕುರಿತು ಸೀರಂ ಇನ್‍ಸ್ಟಿಟ್ಯೂಟ್ ಮುಖ್ಯಸ್ಥ ಆಧಾರ್ ಪೂನಾವಾಲಾ ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕೆಂದು ಮನವಿ ಮಾಡಿದ್ದರು.
ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗಿತ್ತು. ಅಮೆರಿಕ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಟ್ರಂಪ್ ಮನವಿಯ ಸಂದರ್ಭದಲ್ಲಿ ಭಾರತ ಕೂಡಲೇ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ರಫ್ತು ಮಾಡಿತ್ತು. ಈ ಸಂದರ್ಭದಲ್ಲಿ ಈ ಸಹಾಯವನ್ನು ನಾವು ಸ್ಮರಿಸಕೊಳ್ಳಬೇಕು ಎಂದು ಹೇಳಿ ಅಮೆರಿಕದ ಜನತೆಯೇ ಬೈಡನ್ ಸರ್ಕಾರದ ನಡೆಯನ್ನು ಟೀಕಿಸಿದ್ದರು.
ಇದೆಲ್ಲದರ ಮಧ್ಯೆ “ಅಮೆರಿಕನ್ನರ ಆರೋಗ್ಯ ರಕ್ಷಣೆಯೇ ಬೈಡೆನ್ ಸರ್ಕಾರದ ಮೊದಲ ಆದ್ಯತೆ” ಎಂದು ಹೇಳುವ ಮೂಲಕ ಕೊರೊನಾ ಲಸಿಕೆ ನಿರ್ಮಾಣಕ್ಕೆ ಬೇಕಾದ ಕಚ್ಚಾ ವಸ್ತುಗಳ ರಫ್ತಿಗೆ ತಾನು ವಿಧಿಸಿದ್ದ ನಿಷೇಧ ಕ್ರಮವನ್ನು ಅಮೆರಿಕ ಬಲವಾಗಿ ಸಮರ್ಥಿಸಿಕೊಂಡಿತ್ತು.
ವಿದೇಶಗಳ ಲಾಬಿ ಏನು?
ವಿಶ್ವದ 60 ಪ್ರತಿಶತ ಲಸಿಕೆಗಳು ಭಾರತದಲ್ಲಿ ತಯಾರಾಗಿ ರಫ್ತು ಆಗುತ್ತಿದ್ದವು. ಭಾರತದ ಕೊರೊನಾ ಲಸಿಕೆಗೆಳು ವಿಶ್ವದಲ್ಲೇ ಕಡಿಮೆ ಬೆಲೆಯಲ್ಲಿ ತಯಾರಾಗಿದ್ದ ಕಾರಣ ಬೇಡಿಕೆಯೂ ಹೆಚ್ಚಿತ್ತು. ಕೊರೊನಾ ಲಸಿಕೆಯನ್ನು ವಿಶ್ವ ವಾಣಿಜ್ಯ ಒಪ್ಪಂದದಿಂದ ಹೊರಗಿಟ್ಟು ಕಡಿಮೆ ಬೆಲೆಯಲ್ಲಿ ಜನರಿಗೆ ನೀಡಬೇಕು ಎಂದು ಭಾರತ ವಾದಿಸಿತ್ತು. ಆದರೆ ಅಮೆರಿಕ ಮತ್ತು ಯುರೋಪ್ ದೇಶಗಳು ಕಡಿಮೆ ಬೆಲೆಯಲ್ಲಿ ಲಸಿಕೆ ನೀಡಿದರೆ ಸಂಶೋಧನೆ, ಉತ್ಪಾದನೆಗೆ ಬಂಡವಾಳ ಹೂಡುವ ಕಂಪನಿಗಳಿಗೆ ತೊಂದರೆ ಆಗುತ್ತದೆ ಎಂದು ಹೇಳಿ ವಿರೋಧ ವ್ಯಕ್ತಪಡಿಸಿದ್ದವು.

ಭಾರತದಿಂದ ಸೀರಂ ಕಂಪನಿ ತಯಾರಿಸಿದ ಲಸಿಕೆಗಳು 80ಕ್ಕೂ ಅಧಿಕ ಬಡ ರಾಷ್ಟ್ರಗಳಿಗೆ ರಫ್ತು ಆಗತೊಡಗಿದಾಗ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬೈಡನ್ ಲಸಿಕೆ ತಯಾರಿಸಲು ಬೇಕಾದ ಕಚ್ಚಾ ವಸ್ತುವಿನ ಅಮದಿನ ಮೇಲೆ ನಿರ್ಬಂಧ ಹೇರಿದ್ದರು. ಈ ನಡುವೆ ಭಾರತದಲ್ಲೂ ಕೊರೊನಾ ಎರಡನೇ ಅಲೆ ಅಬ್ಬರ ದಿನೇ ದಿನೇ ಜಾಸ್ತಿಯಾಗುತ್ತಿದೆ. ಪರಿಣಾಮ ಭಾರತದಲ್ಲಿ ಅಮೆರಿಕ ಸೇರಿದಂತೆ ವಿದೇಶಿ ಕಂಪನಿಗಳ ಲಸಿಕೆಗಳಿಗೆ ಅನುಮತಿ ನೀಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಭಾರತದ ಮೇಲೆ ಒತ್ತಡ ಹಾಕಿಸಿ ಲಸಿಕೆಗೆ ಅನುಮತಿ ನೀಡುವಲ್ಲಿ ವಿದೇಶಿ ಕಂಪನಿಗಳ ಲಾಬಿ ಕೊನೆಗೂ ಯಶಸ್ವಿಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.
