Tag: court

  • ಸಾರ್ವಜನಿಕ ಸ್ಥಳದಲ್ಲಿ ಐವರಿಂದ ಅಸಭ್ಯ ವರ್ತನೆ- ಮಹಿಳೆಗೆ 5 ಸಾವಿರ ದಂಡ, 2 ದಿನ ಜೈಲು ಶಿಕ್ಷೆ

    ಸಾರ್ವಜನಿಕ ಸ್ಥಳದಲ್ಲಿ ಐವರಿಂದ ಅಸಭ್ಯ ವರ್ತನೆ- ಮಹಿಳೆಗೆ 5 ಸಾವಿರ ದಂಡ, 2 ದಿನ ಜೈಲು ಶಿಕ್ಷೆ

    ಲಕ್ನೋ: ಸಾರ್ವಜನಿಕ ಸ್ಥಳದಲ್ಲಿ ಮಹಿಳೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಉತ್ತರ ಪ್ರದೇಶದ ಮುಜಾಫರ್‍ನಗರ ನ್ಯಾಯಾಲಯ 2 ದಿನ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿದೆ.

    ನಾಲ್ಕು ವರ್ಷಗಳ ಹಿಂದೆ ಸೆಪ್ಟೆಂಬರ್ 2016ರಲ್ಲಿ ನ್ಯೂ ಮಂಡಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 30 ವರ್ಷದ ಮಹಿಳೆ ಹಾಗೂ ಆಕೆಯ ನಾಲ್ವರು ಸ್ನೇಹಿತರು ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ಒಬ್ಬರಿಗೊಬ್ಬರು ಸ್ಪರ್ಶಿಸಿದ್ದಕ್ಕೆ ಐಪಿಸಿ ಸೆಕ್ಷನ್ 294(ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ) ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

    ಆರೋಪಿಗಳನ್ನು ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಪ್ರಕರಣದ ಇತರ ನಾಲ್ಕು ಆರೋಪಿಗಳಾದ ಇಬ್ಬರು ಪುರುಷರು, ಇಬ್ಬರು ಮಹಿಳೆಯರಿಗೆ ಶಿಕ್ಷೆಯ ಪ್ರಮಾಣವನ್ನು ಪ್ರತ್ಯೇಕವಾಗಿ ಆಲಿಸಲಾಗುತ್ತಿರುವುದರಿಂದ ನಂತರ ತೀರ್ಪು ಪ್ರಕಟಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.

    ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್(ಎಸಿಜೆಎಂ) ನ್ಯಾಯಾಲಯ 2 ದಿನ ಜೈಲು ಶಿಕ್ಷೆ, 5 ಸಾವಿರ ದಂಡ ವಿಧಿಸಿದೆ. ಎಸಿಜೆಎಂ(1) ನ್ಯಾಯಾಲಯ ಈ ಆದೇಶ ಹೊರಡಿಸಿದ್ದು, ಮಹಿಳೆ ದಂಡ ಪಾವತಿಸಲು ಸಾಧ್ಯವಾಗದಿದ್ದರೆ ಹೆಚ್ಚುವರಿಯಾಗಿ 7 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಪ್ರಾಸಿಕ್ಯೂಶನ್ ಪರ ವಕೀಲ ರಾಮ್ ಅವತಾರ್ ಸಿಂಗ್ ತಿಳಿಸಿದ್ದಾರೆ.

    ಸಬ್ ಇನ್‍ಸ್ಪೆಕ್ಟರ್ ಬಲೇಂದರ್ ಸಿಂಗ್ ಹಾಗೂ ಇತರೆ ಪೊಲೀಸ್ ಪೇದೆಗಳು ಪ್ಯಾಟ್ರೋಲ್‍ನಲ್ಲಿದ್ದಾಗ ಐವರು ಆರೋಪಿಗಳು ಅಸಭ್ಯವಾಗಿ ವರ್ತಿಸಿರುವುದನ್ನು ಕಂಡಿದ್ದರು. ಬಳಿಕ ಪ್ರಕರಣ ದಾಖಲಾಗಿತ್ತು.

  • ನಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡಬೇಡಿ – 6 ಸಚಿವರಿಂದ ಕೋರ್ಟ್‍ಗೆ ಅರ್ಜಿ

    ನಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡಬೇಡಿ – 6 ಸಚಿವರಿಂದ ಕೋರ್ಟ್‍ಗೆ ಅರ್ಜಿ

    ಬೆಂಗಳೂರು: ಮಾಜಿ ಸಚಿವರೊಬ್ಬರ ರಾಸಲೀಲೆ ಸಿಡಿ ಹೊರ ಬರುತ್ತಿದ್ದಂತೆ ಭೀತಿ ಶುರುವಾಗಿದ್ದು, ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ವಲಸೆ ಬಂದ 6 ಜನ ಸಚಿವರು ಕೋರ್ಟ್ ಮೆಟ್ಟಿಲೇರಿದ್ದಾರೆ.

    ತಮ್ಮ ವಿರುದ್ಧ ಮಾಧ್ಯಮಗಳು ವರದಿ ಪ್ರಸಾರ ಮಾಡಬಾರದು ಎಂದು 6 ಜನ ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ. ಸಚಿವರಾದ ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ಕೆ.ಸುಧಾಕರ್, ನಾರಾಯಣಗೌಡ, ಭೈರತಿ ಬಸವರಾಜ್ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

    ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಬೇಕೆಂದು ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದಾರೆ. ಆರು ಸಚಿವರಿಗೆ ಭೀತಿ ಹುಟ್ಟಿರುವುದು ಏಕೆ? ಇದ್ದಕ್ಕಿಂದ್ದಂತೆ ಯಾಕೆ ಕೋರ್ಟ್ ಮೊರೆ ಹೋಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

  • ಮಾಲೀಕನ ಸಾವಿಗೆ ಕಾರಣವಾದ ಹುಂಜ ಪೊಲೀಸರ ವಶಕ್ಕೆ

    ಮಾಲೀಕನ ಸಾವಿಗೆ ಕಾರಣವಾದ ಹುಂಜ ಪೊಲೀಸರ ವಶಕ್ಕೆ

    ಹೈದರಾಬಾದ್: ಮಾಲೀಕನನ್ನು ಕೊಂದ ಹುಂಜವನ್ನು ಪೊಲೀಸರು ಕಸ್ಟಡಿಗೆ ಪಡೆದು ಕೋರ್ಟ್‍ಗೆ ಹಾಜರು ಪಡಿಸಲಿರುವ ವಿಚಿತ್ರ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನು ತನುಗುಲ್ಲಾ ಸತೀಶ್ ಎಂದು ಗುರುತಿಸಲಾಗಿದೆ. ತೆಲಂಗಾಣದ ಜಗ್ತಿಯಲ್ ಜಿಲ್ಲೆಯ ಲೋಥುನೂರು ಪ್ರದೇಶದಲ್ಲಿ ಎಲ್ಲಮ್ಮ ದೇವಾಲಯದ ಸಮೀಪ ಅಕ್ರಮವಾಗಿ ಹುಂಜಗಳ ಅಂಕವನ್ನು ನಡೆಸಲಾಗಿತ್ತು. ಈ ವೇಳೆ ನಡೆದ ಅವಘಡದಿಂದ ಸತೀಶ್ ಸಾವನ್ನಪ್ಪಿದ್ದನು.

    ಹುಂಜ ಅಂಕದಲ್ಲಿ ಕಾದಾಡಿ ಆಯಾಸಗೊಂಡಿತ್ತು. ಈ ವೇಳೆ ಸತೀಶ್ ಹುಂಜವನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾನೆ. ಆಗ ಹುಂಜದ ಕಾಲಿಗೆ ಕಟ್ಟಿದ್ದ ಚೂರಿ ತೊಡೆಗೆ ತಾಕಿ ಸತೀಶ್ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದನು.

    ಈ ಸಂಬಂಧ ಅಂಕವನ್ನು ಆಯೋಜನೆ ಮಾಡಿದ್ದ ಆಯೋಜಕನನ್ನು ವಶಕ್ಕೆ ಪಡೆದಿದ್ದೇವೆ. ಹುಂಜವನ್ನು ಹಗ್ಗದಿಂದ ಠಾಣೆಯಲ್ಲಿ ಕಟ್ಟಿ ಹಾಕಲಾಗಿದೆ. ಅದಕ್ಕೆ ಬೇಕಾದ ಆಹಾರವನ್ನು ನೀಡುತ್ತಿದ್ದೇವೆ. ಹುಂಜವನ್ನು ಕೋರ್ಟ್‍ಗೆ ಹಾಜರು ಪಡಿಸುತ್ತೇವೆ ನ್ಯಾಯಾಧೀಶರು ಹೇಳಿದಂತೆ ಮುಂದಿನ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.

  • ಅಟ್ಟಾಡಿಸಿಕೊಂಡು ಮಚ್ಚಿನಿಂದ ಕೊಚ್ಚಿ ಕೊಲೆ – ನ್ಯಾಯಾಲಯದ ಆವರಣದಲ್ಲೇ ನಡೀತು ಹತ್ಯೆ

    ಅಟ್ಟಾಡಿಸಿಕೊಂಡು ಮಚ್ಚಿನಿಂದ ಕೊಚ್ಚಿ ಕೊಲೆ – ನ್ಯಾಯಾಲಯದ ಆವರಣದಲ್ಲೇ ನಡೀತು ಹತ್ಯೆ

    ಬಳ್ಳಾರಿ: ನ್ಯಾಯಾಲಯದ ಆವರಣದಲ್ಲೇ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ವಿಜಯನಗರ ನೂತನ ಜಿಲ್ಲೆ ಹೊಸಪೇಟೆಯಲ್ಲಿ ನಡೆದಿದೆ.

    ವೆಂಕಟೇಶ್(62) ಕೊಲೆಯಾದ ವ್ಯಕ್ತಿಯಾಗಿದ್ದು, ಈತ ಹೊಸಪೇಟೆ ನಗರದ ಕಾಂಗ್ರೆಸ್ ಮುಖಂಡ ಹಾಗೂ ವಕೀಲ. ಈತನನ್ನು ಬೆಳ್ಳಂಬೆಳಗ್ಗೆ ನಗರದ ನ್ಯಾಯಾಲಯದ ಆವರಣದಲ್ಲೇ ಅಟ್ಟಾಡಿಸಿಕೊಂಡು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು, ಈ ಘಟನೆ ಸ್ಥಳೀಯ ನಾಗರಿಕರನ್ನು ಬೆಚ್ಚಿ ಬೀಳಿಸಿದೆ.

    ಹೊಸಪೇಟೆಯ ಚಿತ್ತವಾಡ್ಗಿ ನಿವಾಸಿ ತಾರಿಹಳ್ಳಿ ವೆಂಕಟೇಶ್ ಅವರ ಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ ಕೌಟುಂಬಿಕ ಕಲಹ, ರಾಜಕೀಯ ದುರುದ್ದೇಶದಿಂದ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

    ವೃತ್ತಿಯಲ್ಲಿ ನ್ಯಾಯವಾದಿಯಾಗಿರುವ ವೆಂಕಟೇಶ್ ಜೊತೆಗೆ ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು. ಈ ಹತ್ಯೆಗೆ ಸಂಬಂಧಿಸಿದಂತೆ ಮನೋಜ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

  • ಅತ್ತೆ ಸಮಾಧಾನಕ್ಕಾಗಿ ನೇಣಿನ ಕುಣಿಕೆಯಲ್ಲಿ ತೂಗಾಡಿದ ಸೊಸೆ

    ಅತ್ತೆ ಸಮಾಧಾನಕ್ಕಾಗಿ ನೇಣಿನ ಕುಣಿಕೆಯಲ್ಲಿ ತೂಗಾಡಿದ ಸೊಸೆ

    – ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಮಹಿಳೆ

    ಟೆಹ್ರಾನ್: ಹೃದಯಾಘಾತದಿಂದ ಸತ್ತಿರುವ ಸೊಸೆಯನ್ನು ಅತ್ತೆಯ ಸಮಾಧಾನಕ್ಕಾಗಿ ಮತ್ತೆ ನೇಣಿಗೆ ಏರಿಸಿರುವ ಘಟನೆ ಇರಾನ್‍ನಲ್ಲಿ ನಡೆದಿದೆ.

    ಜಹ್ರಾನ್ ಇಸ್ಮಾಯಿಲಿ ಮಹಿಳೆ ತನ್ನ ಪತಿ ಇತರ ಮಹಿಳೆಯರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಾನೆ ಎಂದು ಗಂಡನನ್ನು ಕೊಲೆ ಮಾಡಿದ್ದಳು. ಈ ತಪ್ಪಿಗಾಗಿ ಇಸ್ಮಾಯಿಲಿಗೆ ಇರಾನ್ ನ್ಯಾಯಾಲಯವು ಮರಣದಂಡನ ಶಿಕ್ಷೆಯನ್ನು ನೀಡಿತ್ತು.

     

    ಆದರೆ ಇಸ್ಮಾಯಿಲಿ ನೇಣು ಶಿಕ್ಷೆಗೆ ಗುರಿಯಾಗುವ ಕೆಲವು ಗಂಟೆ ಮೊದಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಆದರೆ ಇತ್ತ ಮಗನನ್ನು ಕೊಂದ ಸೊಸೆಯನ್ನು ನೇಣುಹಾಕುವ ದಿನಗಳಿಗಾಗಿ ಅತ್ತೆ ಕಾಯುತ್ತಿದ್ದಳು. ಅತ್ತೆ ಸೊಸೆ ನೇಣಿಗೆ ಹಾಕುವ ದಿನಗಳಿಗಾಗಿ ಲೆಕ್ಕ ಹಾಕುತ್ತಿರುವುದುನ್ನು ತಿಳಿದ ಅಧಿಕಾರಿಗಳು ಈ ಮೊದಲೇ ಪ್ರಾಣ ಬಿಟ್ಟಿರುವ ಇಸ್ಮಾಯಿಲಿಯನ್ನು ಮೊತ್ತೊಮ್ಮೆ ನೇಣಿನ ಕುಣಿಕೆ ಬಿಗಿದಿದ್ದಾರೆ. ಅತ್ತೆ ಸೊಸೆ ಸಾವಿನ ವಿಚಾರವನ್ನು ಕೇಳಿ ನಿಟ್ಟುಸಿರು ಬಿಟ್ಟಿದ್ದಾಳೆ.

  • ಸಲ್ಮಾನ್ ಖಾನ್ ಕುದುರೆ ಅಂತ ಮಹಿಳೆಗೆ 12 ಲಕ್ಷ ರೂ. ವಂಚಿಸಿದ್ರು!

    ಸಲ್ಮಾನ್ ಖಾನ್ ಕುದುರೆ ಅಂತ ಮಹಿಳೆಗೆ 12 ಲಕ್ಷ ರೂ. ವಂಚಿಸಿದ್ರು!

    ಜೈಪುರ: ಸೆಲೆಬ್ರಿಟಿಗಳ ಹೆಸರು ಹೇಳಿಕೊಂಡು ವಂಚನೆ ನಡೆದಿರುವ ಸಾಕಷ್ಟುಪ್ರಕರಣಗಳು ನಮ್ಮ ಕಣ್ಣ ಮುಂದಿವೆ. ಅಂತೆಯೇ ಇದೀಗ ಬಾಲಿವುಡ್ ಬಾಯ್ ಜಾನ್ ಸಲ್ಮಾನ್ ಖಾನ್ ಹೆಸರು ಹೇಳಿಕೊಂಡು ಖದೀಮರು ಮಹಿಳೆಗೆ ವಂಚಿಸಿರುವುದು ಬೆಳಕಿಗೆ ಬಂದಿದೆ.

    ರಾಜಸ್ಥಾನದ ಜೋಧ್‍ಪುರ ನಿವಾಸಿ ಸಂತೋಷ ಭಾಟಿ ಮೋಸಕ್ಕೊಳಗಾದ ಮಹಿಳೆ. ಮೂವರು ವ್ಯಕ್ತಿಗಳು ಈಕೆಗೆ ಸಲ್ಮಾನ್ ಖಾನ್ ಜೊತೆ ಕುದುರೆ ಇರುವ ಫೋಟೋವನ್ನು ತೋರಿಸಿದ್ದಾರೆ. ಅಲ್ಲದೆ ಇದು ಸಲ್ಮಾನ್ ಖಾನ್ ಅವರ ಕುದುರೆಯಾಗಿದ್ದು, ಮಾರಾಟಕ್ಕಿಟ್ಟಿದ್ದಾರೆ ಎಂದು ಹೇಳಿದ್ದಾರೆ.

    ಅಲ್ಲದೆ ನಾವು ಸಲ್ಮಾನ್ ಖಾನ್ ಅವರು ನಮಗೆ ತುಂಬಾ ಆಪ್ತರಾಗಿದ್ದೇವೆ. ಈ ಹಿಂದೆಯೂ ನಾವು ಅವರ ಕುಡುದರೆಗಳನ್ನು ಮಾರಾಟ ಮಾಡಿರುವುದಾಗಿ ಹೇಳಿದ್ದಾರೆ. ಮೂವರ ಬಣ್ಣದ ಮಾತುಗಳನ್ನು ಮಹಿಳೆಯೂ ನಂಬಿದ್ದಾರೆ.

    ಮೂವರ ಮಾತು ನಂಬಿದ ಮಹಿಳೆ ಕುದುರೆ ಖರೀದಿಸಲು ಇಳಿದೇ ಬಿಟ್ಟರು. ಅಂತೆಯೇ ಮಹಿಳೆ 11 ಲಕ್ಷ ರೂ. ನಗದು ಹಾಗೂ 1 ಲಕ್ಷ ರೂ. ಚೆಕ್ ಸೇರಿ ಒಟ್ಟು 12 ಲಕ್ಷ ರೂ. ಖದೀಮರಿಗೆ ನೀಡಿದ್ದರು. ಇತ್ತ ಹಣ ನೀಡಿ ತಿಂಗಳುಗಳೇ ಕಳೆದರೂ ಮಹಿಳೆ ಮನೆಗೆ ಕುದುರೆ ಮಾತ್ರ ಬಂದಿಲ್ಲ. ಇದರಿಂದ ಮೋಸ ಹೋಗಿರುವ ವಿಚಾರ ಗೊತ್ತಾಗುತ್ತಿದ್ದಂತೆಯೇ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆದರೆ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

    ಈ ಹಿನ್ನೆಲೆಯಲ್ಲಿ ಮಹಿಳೆ ರಾಜಸ್ಥಾನ ಹೈಕೋರ್ಟ್ ಮೊರೆ ಹೋಗಿದ್ದಾರೆ. ಮಹಿಳೆ ಕೋರ್ಟಿಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಿನ್ನೆ ನಡೆದಿದ್ದು, ಖದೀಮರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಡಿಸಿಪಿಗೆ ಕೋರ್ಟ್ ಸೂಚನೆ ನೀಡಿದೆ.

  • ಪದ್ಮಜಾ ರಾವ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ

    ಪದ್ಮಜಾ ರಾವ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ

    ಮಂಗಳೂರು: ಚಂದನವನದ ಹಿರಿಯ ನಟಿ ಪದ್ಮಜಾ ರಾವ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿಯಾಗಿದೆ.

    ಮಂಗಳೂರಿನ ವೀರೂ ಟಾಕೀಸ್ ಪ್ರೊಡಕ್ಷನ್ ಸಂಸ್ಥೆಗೆ ನೀಡಿದ ನಲವತ್ತು ಲಕ್ಷ ರೂಪಾಯಿಗಳ ಚೆಕ್ ಬೌನ್ಸ್ ಪ್ರಕರಣದಲ್ಲಿ ಮಂಗಳೂರಿನ ಜೆ.ಎಂ.ಎಫ್.ಸಿ ಐದನೇ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ. ವಾರಂಟ್‍ನ್ನು ಈಗಾಗಲೇ ತಲಘಟ್ಟಪುರ ಪೊಲೀಸ್ ಠಾಣೆಗೆ ರವಾನಿಸಲಾಗಿದ್ದು, ಪದ್ಮಜಾ ರಾವ್ ರವರನ್ನು ಬಂಧಿಸಿ ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದೆ.

    ನಟ, ನಿರ್ದೇಶಕ ವಿರೇಂದ್ರ ಶೆಟ್ಟಿ ಒಡೆತನದ ವೀರೂ ಟಾಕೀಸ್ ಪ್ರೊಡಕ್ಷನ್ ಹೌಸ್‍ನಿಂದ ಪದ್ಮಜಾ ರಾವ್ ಹಂತ ಹಂತವಾಗಿ ಸುಮಾರು ನಲವತ್ತೊಂದು ಲಕ್ಷ ರೂಪಾಯಿಗಳನ್ನು ಬ್ಯಾಂಕ್ ಖಾತೆಯ ಮೂಲಕ ಸಾಲ ಪಡೆದುಕೊಂಡಿದ್ದು, ಈ ಸಾಲದ ಭದ್ರತೆಗಾಗಿ ನಲ್ವತ್ತು ಲಕ್ಷ ರೂಪಾಯಿಗಳ ಚೆಕ್ ಅನ್ನು ನೀಡಿದ್ದರು.

  • ಅಟ್ಟಹಾಸ ಮೆರೆದ ಗ್ಯಾಂಗ್ – ನಡು ಬೀದಿಯಲ್ಲಿ ಬರ್ಬರ ಕೊಲೆ

    ಅಟ್ಟಹಾಸ ಮೆರೆದ ಗ್ಯಾಂಗ್ – ನಡು ಬೀದಿಯಲ್ಲಿ ಬರ್ಬರ ಕೊಲೆ

    ಚೆನ್ನೈ: ಕೋರ್ಟಿಗೆ ಹಾಜರಾಗಿ ಮನೆಗೆ ಹಿಂದಿರುಗುತ್ತಿದ್ದ ಆರೋಪಿಗಳಿಬ್ಬರನ್ನು ಹಗಲು ಹೊತ್ತಿನಲ್ಲಿಯೇ ನಡು ರಸ್ತೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬುಧವಾರ ತಮಿಳುನಾಡಿನ ಈರೋಡ್‍ನಲ್ಲಿ ನಡೆದಿದೆ.

    ಈ ಕುರಿತಂತೆ ಮಾತನಾಡಿದ ಪೊಲೀಸರು, ಮೃತಪಟ್ಟವರು 30 ಮತ್ತು 38 ವರ್ಷದವರಾಗಿದ್ದು, ವೀರಪ್ಪನ್‍ಚತ್ರಂ ಪ್ರದೇಶದ ಬೀದಿವೊಂದರಲ್ಲಿ ಮಧ್ಯಾಹ್ನ 2 ಗಂಟೆ ಹೊತ್ತಿಗೆ ನಡೆದುಕೊಂಡು ಹೋಗುತ್ತಿದ್ದಾಗ ಸ್ಥಳಕ್ಕೆ ಬಂದ ಸುಮಾರು 7-8 ಜನರ ಗುಂಪು ಮಾರಕಾಸ್ತ್ರಗಳಿಂದ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಇಬ್ಬರು ಆರೋಪಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

    ಇಬ್ಬರು 2018ರಲ್ಲಿ ನಡೆದ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದು, ಸೆಷನ್ ನ್ಯಾಯಾಲಯ ವಿಚಾರಣೆಗೆಂದು ಹಾಜರಾಗಿ ನಂತರ ಮನೆಗೆ ಹಿಂದಿರುಗುತ್ತಿದ್ದ ವೇಳೆ ಗ್ಯಾಂಗ್‍ವೊಂದು ಇವರ ಮೇಲೆ ದಾಳಿ ನಡೆಸಿದೆ ಎಂದು ತಿಳಿಸಿದರು.

    ಹಿಂದಿನ ಘಟನೆಗೆ ಪ್ರತೀಕರ ತೀರಿಸಿಕೊಳ್ಳುವ ಸಲುವಾಗಿ ಗ್ಯಾಂಗ್ ಹಲ್ಲೆ ನಡೆಸಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ಈ ಕುರಿತಂತೆ ಆರೋಪಿಗಳನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

  • 2008ರಲ್ಲಿ ವಿದ್ಯುತ್ ಕಳವು, 70ರ ವೃದ್ಧನಿಗೆ 19 ಲಕ್ಷ ದಂಡ, ಜೈಲು ಶಿಕ್ಷೆ

    2008ರಲ್ಲಿ ವಿದ್ಯುತ್ ಕಳವು, 70ರ ವೃದ್ಧನಿಗೆ 19 ಲಕ್ಷ ದಂಡ, ಜೈಲು ಶಿಕ್ಷೆ

    ಮುಂಬೈ: 2008ರಲ್ಲಿ ವಿದ್ಯುತ್ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಥಾಣೆ ಜಿಲ್ಲಾ ನ್ಯಾಯಾಲಯ ಈಗ ತೀರ್ಪು ಪ್ರಕಟಿಸಿದ್ದು, 70 ವರ್ಷದ ವೃದ್ಧನಿಗೆ 2 ವರ್ಷ ಕಠಿಣ ಶಿಕ್ಷೆ ಹಾಗೂ ಬರೋಬ್ಬರಿ 19 ಲಕ್ಷ ರೂ.ಗಳ ದಂಡ ವಿಧಿಸಿದೆ.

    ಜಿಲ್ಲಾ ನ್ಯಾಯಾಧೀಶರಾದ ಪಿ.ಪಿ.ಯಾದವ್ ಅವರು ಈ ಆದೇಶ ಪ್ರಕಟಿಸಿದ್ದು, 2003ರ ವಿದ್ಯುತ್ ಕಾಯ್ದೆಯ ಸೆಕ್ಷನ್ 135ರ ಅಡಿಯಲ್ಲಿ ಶಿಕ್ಷಾರ್ಹ ಅಪಾರಾಧದ ಅಡಿ ಮೊನುದ್ದೀನ್ ಮೆಹಬೂಬ್ ಶೇಖ್ ನನ್ನು ತಪ್ಪಿತಸ್ಥನೆಂದು ಹೇಳಿದೆ. ವಿದ್ಯುತ್ ಕದಿಯುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಸೆಕ್ಷನ್ ರೂಪಿಸಲಾಗಿದೆ.

    ಫೆಬ್ರವರಿ 6ರಂದು ನ್ಯಾಯಾಲಯ ಈ ಆದೇಶ ಹೊರಡಿಸಿದ್ದು, ಫೆಬ್ರವರಿ 9ರಂದು ಸಾರ್ವಜನಿಕವಾಗಿ ಲಭ್ಯವಾಗಿದೆ. ಶೈಖ್ ಪವರ್‍ಲೂಮ್ ಫ್ಯಾಕ್ಟರಿ ನೌಕರನಾಗಿದ್ದು, ಪರಿಶೀಲನೆ ವೇಳೆ ವಿದ್ಯುತ್ ಕದ್ದಿರುವುದು ತಿಳಿದಿದೆ. ಅಲ್ಲದೆ ಅಪರಾಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ಮಂಡಿಸಿದ್ದರು.

    ಅಡಿಶನಲ್ ಪಬ್ಲಿಕ್ ಪ್ರಾಸಿಕ್ಯೂಟರ್ ವಿವೇಕ್ ಕಾದು ಅವರು ವಾದ ಮಂಡಿಸಿದ್ದು, 2008 ಮಾರ್ಚ್ 10ರಂದು ಫ್ಯಾಕ್ಟರಿ ಮೇಲೆ ವಿದ್ಯುತ್ ಪ್ರಸರಣ ಕಂಪನಿಯವರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ಈ ವೇಳೆ ಅಪರಾಧಿ ಸ್ಥಳದಲ್ಲೇ ಇದ್ದ. ಅಂಡರ್‍ಗ್ರೌಂಡ್ ಕೇಬಲ್‍ನಿಂದ ನೇರವಾಗಿ ಫ್ಯಾಕ್ಟರಿಗೆ ವಿದ್ಯುತ್ ಸಂಪರ್ಕ ಮಾಡಿರುವುದು ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ತಿಳಿದಿದೆ. ಔಟ್‍ಲೆಟ್‍ನ ಅಧಿಕೃತ ಮಾರ್ಗವನ್ನು ಬೈಪಾಸ್ ಮಾಡಿ ಕೇಬಲ್‍ನ್ನು ಮುಖ್ಯ ಸರಬರಾಜು ಮಾರ್ಗಕ್ಕೆ ಸೇರಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

    ಈ ಕುರಿತು ಲೆಕ್ಕ ಹಾಕಲಾಗಿದ್ದು, 2007, ಮೇ 16 ರಿಂದ 2008ರ ಮಾರ್ಚ್ 10ರ ವರೆಗೆ ಒಟ್ಟು 94,589 ಯುನಿಟ್ ವಿದ್ಯುತ್‍ನ್ನು ಕದಿಯಲಾಗಿದ್ದು, ಇದರ ಬೆಲೆ 6,32,454 ರೂ ಆಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ವಿವೇಕ್ ಕಾದು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಈ ಅಪರಾಧ ತುಂಬಾ ಗಂಭೀರವಾಗಿದ್ದು, ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಮನವಿ ಮಾಡಿದ್ದಾರೆ.

    ವಿದ್ಯುತ್ ಕದಿಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಕದ್ದ ವಿದ್ಯುತ್‍ನ ಮೂರು ಪಟ್ಟು ಹಣವನ್ನು ದಂಡ ನೀಡಬೇಕು. ಅಲ್ಲದೆ ಕನಿಷ್ಟ ಮೂರು ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ವಾದ ಆಲಿಸಿದ ನ್ಯಾಯಾಧೀಶರು ಅಪರಾಧಿಗೆ 2 ವರ್ಷಗಳ ಕಠಿಣ ಶಿಕ್ಷೆ ಹಾಗೂ 19 ಲಕ್ಷ ರೂ. ದಂಡ ವಿಧಿಸಿದ್ದಾರೆ.

  • ಫ್ರಿಡ್ಜ್ ರಿಪೇರಿ ಮಾಡಲು ಬಂದು ಮನೆಯೊಡತಿಯನ್ನು ತಬ್ಬಿ ಅಂಗಾಂಗ ಸ್ಪರ್ಶಿಸಿದ!

    ಫ್ರಿಡ್ಜ್ ರಿಪೇರಿ ಮಾಡಲು ಬಂದು ಮನೆಯೊಡತಿಯನ್ನು ತಬ್ಬಿ ಅಂಗಾಂಗ ಸ್ಪರ್ಶಿಸಿದ!

    – ಮಹಿಳೆಯ ಮಗಳ ಜೊತೆಯೂ ಅಸಭ್ಯ ವರ್ತನೆ
    – ಕಾಮುಕನಿಗೆ 1 ವರ್ಷ ಜೈಲು ಶಿಕ್ಷೆ

    ನವದೆಹಲಿ: ಫ್ರಿಡ್ಜ್ ರಿಪೇರಿ ಮಾಡಲು ಬಂದು ಮನೆಯೊಡತಿ ಹಾಗೂ ಆಕೆಯ ಮಗಳ ಮೇಲೆ ಅಸಭ್ಯವಾಗಿ ವರ್ತಿಸಿದ್ದ ಪ್ರಕರಣದ ತೀರ್ಪು ಇದೀಗ ಹೊರ ಬಿದ್ದಿದೆ.

    2017ರ ಜೂನ್ ತಿಂಗಳಲ್ಲಿ ದೆಹಲಿಯಲ್ಲಿ ನಡೆದಿದ್ದ ಪ್ರಕರಣ ಸಂಬಂಧ ಇದೀಗ ನ್ಯಾಯಾಲಯ ಆತನಿಗೆ 1 ವರ್ಷದ ಜೈಲು ಶಿಕ್ಷೆ ವಿಧಿಸಿದೆ. ಆದರೆ ಆಕೆಯ ಮಗಳ ಜೊತೆ ಅಸಭ್ಯವಾಗಿ ವರ್ತಿಸಿದ್ದ ಪ್ರಕರಣದಿಂದ ಕಾಮುಕ ಪಾರಾಗಿದ್ದಾನೆ.

    ಏನಿದು ಪ್ರಕರಣ..?:
    2017ರಲ್ಲಿ ಜೂನ್ ತಿಂಗಳಲ್ಲಿ ಮಹಿಳೆಯೊಬ್ಬರು ಮನೆಯ ಫ್ರಿಡ್ಜ್ ಕೆಟ್ಟು ಹೋಗಿದೆ ಎಂದು ರಿಪೇರಿ ಮಾಡುವಾತನಿಗೆ ಕರೆ ಮಾಡಿದ್ದಳು. ಅಂತೆಯೇ ಆತ ಮಧ್ಯಾಹ್ನ 2.30ರ ಸುಮಾರಿಗೆ ಮಹಿಳೆ ಮನೆಗೆ ಬಂದಿದ್ದನು. ಈ ಮಧ್ಯೆ ಆತ ಮಹಿಳೆಯ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ್ದನು.

    ಇತ್ತ ರಿಪೇರಿ ಬೇಕಾಗುವ ವಸ್ತುಗಳನ್ನು ತರಲೆಂದು ಹೊರಗಡೆ ಹೋಗಿ ಬಂದವನೇ ಮತ್ತೊಮ್ಮೆ ಮಹಿಳೆಯ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಸ್ಪಷ್ಟಪಡಿಸಿಕೊಂಡಿದ್ದನು. ನಂತರ ಮನೆಯೊಡತಿಯ 5 ವರ್ಷದ ಮಗಳ ಜೊತೆ ಅಸಭ್ಯವಾಗಿ ವರ್ತಿಸಿದ್ದನು. ಇದನ್ನು ಗಮನಿಸಿದ ಮಹಿಳೆ ಆತನಿಗೆ ಗದರಿಸಿದ್ದಳು. ಅಲ್ಲದೆ ಕೆಲಸದ ನಿಮಿತ್ತ ಅಡುಗೆ ಮನೆಗೆ ತೆರಳಿದ್ದಳು.

    ಅಡುಗೆ ಮನೆಯಲ್ಲಿದ್ದಾಗ ಅಲ್ಲಿಗೆ ತೆರಳಿದ ಕಾಮುಕ ಮಹಿಳೆಯನ್ನು ಹಿಂದಿನಿಂದ ತಬ್ಬಿಕೊಂದು ಆಕೆಯ ಅಂಗಾಂಗಗಳನ್ನು ಸ್ಪರ್ಶಿಸಿದ್ದನು. ಕಾಮುಕನ ಈ ವರ್ತನೆಯಿಂದ ಗಾಬರಿಗೊಂಡಿದ್ದ ಮಹಿಳೆ ಆತನಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಆಗ ಮಹಿಳೆ ಜೋರಾಗಿ ಕಿರುಚಿಕೊಂಡು ಸಹಾಯಕ್ಕಾಗಿ ಕೂಗಿದ್ದು, ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು, ಇದೀಗ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.