ಬೆಂಗಳೂರು: ಹಲಗೆ-ವಡೇರಹಳ್ಳಿ ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಗೈರು ಹಾಜರಿಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ್ಯಾಯಾಧೀಶ ಶ್ರೀಧರ್ ಗೋಪಾಲಕೃಷ್ಣ ಗರಂ ಆಗಿದ್ದಾರೆ.
ಖುದ್ದು ಹಾಜರಿಗೆ ಸೂಚಿಸಿದರೂ, ಹೋಂ ಕ್ವಾರಂಟೈನ್ ಕಾರಣ ನೀಡಿ ಕುಮಾರಸ್ವಾಮಿ ಇಂದಿನ ವಿಚಾರಣೆಗೆ ಗೈರು ಹಾಜರಾಗಿದ್ರು. ಇದರಿಂದ ಸಿಟ್ಟಾದ ನ್ಯಾಯಾಧೀಶರು, ಮುಂದಿನ ವಿಚಾರಣೆ ನಡೆಯುವ ಏಪ್ರಿಲ್ 17ರವರೆಗೆ ಕುಮಾರಸ್ವಾಮಿ ಯಾವುದೇ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳಬಾರದು. ನಾನು ಮನೆಗೆ ಹೋಗಿ ಟಿವಿ ನೋಡುತ್ತೇನೆ, ಪತ್ರಿಕೆ ಓದುತ್ತೇನೆ. ಎಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುತ್ತೇನೆ. ಎಲ್ಲಾದ್ರೂ ಕುಮಾರಸ್ವಾಮಿ ಕಾಣಿಸಿಕೊಂಡ್ರೇ ಅರೆಸ್ಟ್ ವಾರೆಂಟ್ ಜಾರಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಖುದ್ದು ಹಾಜರಿಗೆ ಸಮನ್ಸ್ ನೀಡಿದ್ರೂ ಅವರು ಗೈರಾಗಿದ್ದಾರೆ. ಕೋರ್ಟ್ ಆದೇಶಕ್ಕೆ ಬೆಲೆ ಇಲ್ವಾ? ಗೌರವ ಕೊಡುವುದು ಬೇಡ್ವಾ ಎಂದು ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ರು. ಮಾಜಿ ಪ್ರಧಾನಿ ದೇವೇಗೌಡ ದಂಪತಿಗೆ ಕೊರೊನಾ ಹಿನ್ನೆಲೆ ಹೆಚ್‍ಡಿಕೆ ಹೋಂ ಕ್ವಾರಂಟೈನ್‍ನಲ್ಲಿದ್ದಾರೆ ಎಂದು ಕೋರ್ಟ್‍ಗೆ ವಕೀಲರು ಮಾಹಿತಿ ನೀಡಿದ್ರು. ಕೋರ್ಟ್‍ನ ಈ ಆದೇಶದಿಂದಾಗಿ ಉಪ ಚುನಾವಣೆಯ ಪ್ರಚಾರದಿಂದ ಹೆಚ್‍ಡಿಕೆ ದೂರ ಉಳಿಯಬೇಕಾಗುತ್ತದೆ.
ಹುಬ್ಬಳ್ಳಿ: ಜನರ ನಂಬಿಕೆಯನ್ನು ಬಂಡವಾಳ ಮಾಡಿಕೊಂಡು ನಕಲಿ ಔಷಧ ಮಾರಾಟ ಮಾಡುತ್ತಿದ್ದ ಔಷಧ ಮಳಿಗೆಯ ಇಬ್ಬರು ಮಾಲೀಕರು ಹಾಗೂ ಅವುಗಳನ್ನು ಪೂರೈಸುತ್ತಿದ್ದ ಬೆಂಗಳೂರಿನ ಫಾರ್ಮಾ ಕಂಪನಿ ಮಾಲೀಕರೊಬ್ಬರಿಗೆ ಒಂದನೇ ಸೆಷನ್ಸ್ ಕೋರ್ಟ್ ಮೂರು ವರ್ಷ ಜೈಲು ಶಿಕ್ಷೆ ತಲಾ 10 ಸಾವಿರ ದಂಡ ವಿಧಿಸಿದೆ.
ಹುಬ್ಬಳ್ಳಿ ಜೆಸಿ ನಗರದ ರಾಧಾ ಫಾರ್ಮಾ ಪ್ರೊಡಕ್ಸನ್ ಔಷಧ ಮಳಿಗೆ ಮಾಲೀಕರಾದ ಗೋವಿಂದ ತ್ರಿವೇದಿ, ಜಗದೀಶ ತ್ರಿವೇದಿ ಮತ್ತು ಬೆಂಗಳೂರಿನ ದೀಪಕ ಇಂಟರ್‍ನ್ಯಾಷನಲ್ ಫಾರ್ಮಾಸುಟಿಕಲ್ಸ್‍ನ ವಿಕ್ರಮ ಭೋಜಾನಿ ಶಿಕ್ಷೆಗೆ ಒಳಗಾದ ಅಪರಾಧಿಗಳು.
2005ರಲ್ಲಿ ಔಷಧ ಪರಿವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶರಣಬಸಪ್ಪ ಹನುಮನಾಳ ಅವರು, ತಪಾಸಣೆ ನಡೆಸಿದಾಗ ಐದು ಬಗೆಯ ನಕಲಿ ಔಷಧಿಗಳು ದೊರೆತಿದ್ದವು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸುಶಾಂತ್ ಚೌಗಲೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಆದರೆ, ಪಿಕಾಕ್ ಫಾರ್ಮಾ ಕಂಪನಿಯ ಸತೀಶ ಶರ್ಮಾ ತಲೆಮರೆಸಿಕೊಂಡಿದ್ದು, ಪ್ರಕರಣ ಪ್ರತ್ಯೇಕಿಸಲಾಗಿದೆ. ಪ್ರಕರಣದಲ್ಲಿ ಸಹಾಯಕ ಔಷಧ ನಿಯಂತ್ರಕ ಕೆ.ಎಸ್. ಮಲ್ಲಿಕಾರ್ಜುನ ಅನುಸರಣಾಧಿಕಾರಿ ಆಗಿದ್ದರು.
ಹುಬ್ಬಳ್ಳಿ: ಜಮೀನು ವಿಷಯಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಅಪರಾಧಿಗೆ ಐದನೇ ಜೆ.ಎಂ.ಎಫ್.ಸಿ ಹೆಚ್ಚುವರಿ ನ್ಯಾಯಾಲಯು ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ದಂಡವನ್ನು ವಿಧಿಸಲಾಯಿತು.
ಖಾದರಸಾಬ್ ಮನಿಯೂರ ಎಂಬವನೇ ಶಿಕ್ಷೆಗೆ ಗುರಿಯಾದ ವ್ಯಕ್ತಿ. 2017ರ ಸೆಪ್ಟೆಂಬರ್ 25 ರಂದು ಆರೋಪಿಯು ಜಮೀನಿನ ವಿಷಯಕ್ಕೆ ಸಂಬಂಧಿಸಿದಂತೆ ನೀಲವ್ವ ತಿಪ್ಪಣ್ಣವರ ಎಂಬವರನ್ನ ರಸ್ತೆಯಲ್ಲಿಯೇ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದನು. ಈ ಹಿನ್ನೆಲೆಯಲ್ಲಿ ಅಪರಾಧಿ ಖಾದರಸಾಬ್ ಮನಿಯೂರಗೆ ಐದನೇ ಜೆ.ಎಂ.ಎಫ್.ಸಿ ಹೆಚ್ಚುವರಿ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
ಕಲಂ 302 ಅಡಿಯಲ್ಲಿ ಅಪರಾಧ ಸಾಬೀತಾಗಿದ್ದು, ನ್ಯಾಯಾಧೀಶರಾದ ಕೆ.ಎನ್.ಗಂಗಾಧರ್ ಶಿಕ್ಷೆಯ ತೀರ್ಪು ನೀಡಿದ್ದಾರೆ. ಇನ್ನೂ ಸರ್ಕಾರಿ ಅಭಿಯೋಜಕರಾದ ಸುಮಿತ್ರಾ ಅಂಚಟಗೇರಿ ವಾದವನ್ನು ಮಂಡಿಸಿದ್ದಾರೆ.
ಬೆಂಗಳೂರು: ಮಾಜಿ ಸಚಿವರ ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸಿಡಿ ಸಂತ್ರಸ್ತೆ ಹೇಳಿಕೆಗಳ ಬೆನ್ನಲ್ಲೇ ಯುವತಿಯ ತಂದೆ ಕೂಡ ಕೋರ್ಟ್ ಮೊರೆ ಹೋಗಿದ್ದಾರೆ. ನನ್ನ ಮಗಳ ಹೇಳಿಕೆಯನ್ನು ಪರಿಗಣಿಸದಂತೆ 21 ಪುಟಗಳ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಸಂತ್ರಸ್ತೆಯ ತಂದೆ ಏನ್ ಮನವಿ ಮಾಡಿದ್ದಾರೆ.
ನನ್ನ ಮಗಳು ಒತ್ತಡ, ಬಲವಂತದಿಂದ ಹೇಳಿಕೆ ಕೊಡ್ತಿದ್ದಾಳೆ. ಸಿಆರ್‍ಪಿಸಿ 164 ಅಡಿ ದಾಖಲಾಗಿರುವ ಹೇಳಿಕೆ ರದ್ದು ಮಾಡಿ. ಮೆಡಿಕಲ್ ಟೆಸ್ಟ್ ಮಾಡಿಸದೇ ಸಿಆರ್‍ಪಿಸಿ 164 ಹೇಳಿಕೆ ಸರಿಯಲ್ಲ. ನನ್ನ ಮಗಳು ಸಾಕಷ್ಟು ದಿನದಿಂದ ಸಂಪರ್ಕಕ್ಕೆ ಸಿಕ್ಕಿಲ್ಲ. ನನ್ನ ಮಗಳು ಸ್ವ-ಇಚ್ಛೆಯಿಂದ ಹೇಳಿಕೆ ನೀಡಿಲ್ಲ ಎಂದು ತಿಳಿಸಿದ್ದಾರೆ.
ನನ್ನ ಮಗಳು ಪ್ರಭಾವ, ಒತ್ತಡದ ಬಲಿಪಶುವಾಗಿದ್ದಾಳೆ. ನಮ್ಮ ಸುಪರ್ದಿಗೆ ಅಥವಾ ನ್ಯಾಯಾಂಗದ ಸುಪರ್ದಿಯಲ್ಲಿರಿಸಿ. ವಕೀಲರ ಮೂಲಕ ನನ್ನ ಮಗಳು ಕೋರ್ಟ್‍ಗೆ ಹಾಜರಾಗಿದ್ದಾಳೆ. ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಏಕೆ ಉಪಸ್ಥಿತರಿದ್ದರು..?, ಮಗಳು ಒತ್ತಡಕ್ಕೆ ಒಳಗಾಗಿದ್ದರೆ ತನಿಖಾಧಿಕಾರಿ ಮುಂದೆ ಏಕೆ ಹಾಜರಾಗಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಯಾದಗಿರಿ: ರಾಯಚೂರು ಜಿಲ್ಲೆಯ ದೇವದುರ್ಗ ಐಬಿಯಲ್ಲಿ ನಡೆದಿದ್ದ ಆಪರೇಷನ್ ಕಮಲ ಆಡಿಯೋ ಪ್ರಕರಣಕ್ಕೆ ಇದೀಗ ರೋಚಕ ತಿರುವು ಸಿಕ್ಕಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮತ್ತೆ ಆಡಿಯೋ ಕೇಸ್ ಸಂಕಷ್ಟ ಎದುರಾಗಿದ್ದು, ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಿಎಂ ಅರ್ಜಿ ವಜಾ ಆಗಿದೆ.
ಜನಪ್ರತಿನಿಧಿಗಳ ವ್ಯಾಜ್ಯ ನ್ಯಾಯಾಲಯ ಜೆಡಿಎಸ್ ಯುವಕ ಘಟಕದ ರಾಜ್ಯ ಉಪಾಧ್ಯಕ್ಷ ಮತ್ತು ಗುರುಮಿಠಕಲ್ ಶಾಸಕ ನಾಗನಗೌಡ ಕಂದಕೂರ ಪುತ್ರ ಶರಣಗೌಡ ಕಂದಕೂರ ಅವರ ಅರ್ಜಿಯನ್ನು ಎತ್ತಿ ಹಿಡಿದಿದ್ದು, ಸಿಎಂ ಅರ್ಜಿ ವಜಾ ಆಗಿದೆ. ಆಪರೇಷನ್ ಕಮಲ ಆಡಿಯೋ ಪ್ರಕರಣದ ತನಿಖೆಗೆ ಕಲಬುರಗಿ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.
ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ಅವರು ಈ ಪ್ರಕರಣವನ್ನು ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವ್ಯಾಜ್ಯ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿದರು. ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಪ್ರಕರಣ ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನು ವಜಾ ಮಾಡಿ, ಮರು ತನಿಖೆ ನಡೆಸಲು ಆದೇಶ ನೀಡಿದೆ. ಇದರಿಂದಾಗಿ ಸಿಎಂ ಬಿಎಸೈಗೆ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ.
ಹಾವೇರಿ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ಹಾವೇರಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 10,250 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ಆಪಾದನೆಗಳನ್ನ ಗಮನಿಸಿದ ಹಾವೇರಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎಸ್.ಜ್ಯೋತಿಶ್ರೀ ಅವರು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 10,250 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಸಿದ್ಧಾರೂಢ.ಎಂ.ಗೆಜ್ಜಿಹಳ್ಳಿ ವಾದ ಮಂಡಿಸಿದ್ದಾರೆ.
ಶಿಗ್ಗಾಂವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿ ಟ್ಯೂಶನ್ ಮುಗಿಸಿಕೊಂಡು ಮನೆಗೆ ವಾಪಸ್ ಬರುತ್ತಿದ್ದ ವೇಳೆ ಆರೋಪಿ ಮೊಹಮ್ಮದ್ ಜಮೀರ್ ಮಿಯಾಬೇಗನವರ್ ಲೈಂಗಿಕ ದೌರ್ಜನ್ಯ ಎಸಗಿದ್ದ. ಶಿಗ್ಗಾಂವಿ ಪೊಲೀಸ್ ಠಾಣೆಯ ಡಿವೈಎಸ್‍ಪಿ ವಿಜಯಕುಮಾರ್.ಆರ್.ಬಿಸಹಳ್ಳಿ ತನಿಖೆ ನಡೆಸಿ ದೋಷಾರೋಪಣೆ ಪತ್ರವನ್ನ ನ್ಯಾಯಾಲಯಕ್ಕೆ ಸಲ್ಲಿಸಿದರು.
ಬೆಂಗಳೂರು: ಹೇಳಿಕೆ ನೀಡಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮಾಜಿ ಸಚಿವರ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಬೆಂಗಳೂರಿನ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರಾಗಿದ್ದಾರೆ. ವಸಂತ ನಗರದ ಗುರುನಾನಕ್ ಭವನದಲ್ಲಿ ವಿಚಾರಣೆ ನಡೆಯುತ್ತಿದ್ದು, ಯುವತಿಯ ಹೇಳಿಕೆಯನ್ನು ಪಡೆಯುತ್ತಿದ್ದಾರೆ.
ಇಂದು ಬೆಳಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಯುವತಿ ಪರ ವಕೀಲ ಜಗದೀಶ್, ಆರೋಪಿಯನ್ನು ಎಸ್‍ಐಟಿ ಅವರು ಬಂಧಿಸಿದರೆ ಈ ಪ್ರಕರಣದ ಕುರಿತಾಗಿ ಸರಿಯಾದ ತನಿಖೆ ನಡೆಯುತ್ತದೆ. ಕೋರ್ಟ್‍ನ ವಾತಾವರಣವನ್ನು ನೋಡಿಕೊಂಡು ಯುವತಿ ಕೋರ್ಟಿಗೆ ಬರುತ್ತಾರೆ. ಯುವತಿ ರಕ್ಷಣೆ ಹೇಗೆ ಮುಖ್ಯವೋ ಹಾಗೇ ಯುವತಿಯ ಹೇಳಿಕೆಯೂ ಅಷ್ಟೇ ಮುಖ್ಯವಾಗುತ್ತದೆ. ನಮ್ಮ ಕಡೆಯಿಂದ ಎಲ್ಲಾ ರೀತಿ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ನ್ಯಾಯಾಲಯ ಹೇಗೆ ಹೇಳುತ್ತದೆ ಮತ್ತು ಯಾವ ಸಮಯವನ್ನು ಸೂಚಿಸುತ್ತದೆ ಎಂದು ನೋಡಿ ಸಂತ್ರಸ್ತೆ ಯುವತಿ ಕೋರ್ಟ್ ಮುಂದೆ ಬರುತ್ತಾರೆ ಎಂದಿದ್ದರು.
ಪೋಷಕರು ಮಾಧ್ಯಮಗಳ ಜೊತೆ ಹೇಳಿಕೆ ನೀಡಿದ ಬೆನ್ನಲ್ಲೇ ಸಿಡಿ ಯುವತಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿ, ಪೋಷಕರ ಮೇಲೆ ಬಲವಂತವಾಗಿ ಒತ್ತಡ ಹಾಕಿ ಹೇಳಿಕೆಗಳನ್ನು ನೀಡಿಸಲಾಗುತ್ತಿದೆ. ಎಸ್‌ಐಟಿ ಪೊಲೀಸರ ತನಿಖೆಯ ಬಗ್ಗೆ ನನಗೆ ಅನುಮಾನವಿದೆ. ಹೀಗಾಗಿ ನಾನು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡುತ್ತೇನೆ ಎಂದು ಹೇಳಿ ವಿಡಿಯೋ ರಿಲೀಸ್ ಮಾಡಿದ್ದರು.
ಭಾನುವಾರವೇ ಮುಖ್ಯನ್ಯಾಯಾಧೀಶರಿಗೆ ಪತ್ರ ಬರೆದಿದ್ದ ಯುವತಿ, ರಮೇಶ್ ಜಾರಕಿಹೊಳಿ ಪ್ರಭಾವಿ ವ್ಯಕ್ತಿಯಾಗಿದ್ದು, ಸಾರ್ವಜನಿಕವಾಗಿ ಜೀವ ಬೆದರಿಕೆ ಹಾಕಿದ್ದಾರೆ. ಪ್ರಕರಣದಲ್ಲಿ ನನಗೆ ಮತ್ತು ನನ್ನ ಪೋಷಕರಿಗೆ ರಕ್ಷಣೆ ನೀಡಬೇಕು. ನಿಮ್ಮ ಮೇಲುಸ್ತುವಾರಿಯಲ್ಲಿ ಎಸ್‍ಐಟಿ ತನಿಖೆ ನಡೆಯಬೇಕು ಎಂದು ಮನವಿ ಮಾಡಿಕೊಂಡಿದ್ದರು. ಇತ್ತ ಆರೋಪಿ ರಮೇಶ್ ಜಾರಕಿಹೊಳಿ ಆಡುಗೋಡಿಯಲ್ಲಿ ಎಸ್‍ಐಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು.
ಬೆಂಗಳೂರು: ಸಿಡಿ ಲೇಡಿ ಕೋರ್ಟ್‍ಗೆ ಇವತ್ತೇ ಹಾಜರಾಗುತ್ತಾರೆ ಎನ್ನಲಾಗಿದ್ದು, ಯುವತಿಯ ಭದ್ರತೆಗಾಗಿ ಮಹಿಳಾ ಪೊಲೀಸರು ಸೇರಿ 8 ಜನರನ್ನೊಳಗೊಂಡ ಭದ್ರತಾ ತಂಡವನ್ನು ನೀಡಲು ಸಿದ್ಧತೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮ್ಯಾಜಿಸ್ಟ್ರೇಟ್ ಕೋರ್ಟ್‍ಗೆ ಇಂದು ಸಿಡಿ ಲೇಡಿ ಹಾಜರಾಗುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೋರ್ಟ್ ಅನುಮತಿ ನೀಡಿದಲ್ಲಿ ಅರ್ಧ ಗಂಟೆಯಲ್ಲಿ ಯುವತಿಯನ್ನು ಕರೆ ತರುತ್ತೇವೆ ಎಂದು ಯುವತಿ ಪರ ವಕೀಲ ಜಗದೀಶ್ ಹೇಳಿದ್ದಾರೆ. ಇದರ ಬೆನ್ನಲ್ಲೇ ಇದೀಗ 8 ಜನರ ತಂಡವನ್ನು ಸಹ ಭದ್ರತೆಗಾಗಿ ನಿಯೋಜಿಸಲಾಗಿದೆ.
ನ್ಯಾಯಾಲಯ ಹೇಗೆ ಹೇಳುತ್ತದೆ ಮತ್ತು ಯಾವ ಸಮಯವನ್ನು ಸೂಚಿಸುತ್ತದೆ ಎಂದು ನೋಡಿ ಸಂತ್ರಸ್ತೆ ಯುವತಿ ಕೋರ್ಟ್ ಮುಂದೆ ಬರುತ್ತಾರೆ. ಸುಪ್ರೀಂ ಕೋರ್ಟ್‍ನಲ್ಲಿ ಈ ಪ್ರಕರಣವನ್ನು ಬೇರೆ ರಾಜ್ಯದಲ್ಲಿ ಕೇಸ್ ನಡೆಸಲು ಸಾಧ್ಯವಾಗುತ್ತಾ ಎಂದು ನಮ್ಮ ತಂಡ ಯೋಚಿಸುತ್ತಿದೆ ಎಂದು ವಕೀಲ ಜಗದೀಶ್ ಹೇಳಿದ್ದರು.
ಭಾನುವಾರವೇ ಮುಖ್ಯನ್ಯಾಯಾಧೀಶರಿಗೆ ಪತ್ರ ಬರೆದಿದ್ದ ಯುವತಿ, ರಮೇಶ್ ಜಾರಕಿಹೊಳಿ ಪ್ರಭಾವಿ ವ್ಯಕ್ತಿಯಾಗಿದ್ದು, ಸಾರ್ವಜನಿಕವಾಗಿ ಜೀವ ಬೆದರಿಕೆ ಹಾಕಿದ್ದಾರೆ. ಪ್ರಕರಣದಲ್ಲಿ ನನಗೆ ಮತ್ತು ನನ್ನ ಪೋಷಕರಿಗೆ ರಕ್ಷಣೆ ನೀಡಬೇಕು. ನಿಮ್ಮ ಮೇಲುಸ್ತುವಾರಿಯಲ್ಲಿ ಎಸ್‍ಐಟಿ ತನಿಖೆ ನಡೆಯಬೇಕು ಎಂದು ಮನವಿ ಮಾಡಿಕೊಂಡಿದ್ದರು. ಇತ್ತ ಆರೋಪಿ ರಮೇಶ್ ಜಾರಕಿಹೊಳಿ ಆಡುಗೋಡಿಯಲ್ಲಿ ಎಸ್‍ಐಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಅತ್ಯಾಚಾರ ಪ್ರಕರಣ ದಾಖಲಾದರೂ ಇತ್ತ ವಿಶೇಷ ತನಿಖಾ ತಂಡ(ಎಸ್‌ಐಟಿ) ಯುವತಿಗೆ ನೋಟಿಸ್ ಮೇಲೆ ನೋಟಿಸ್ ಜಾರಿ ಮಾಡುತ್ತಿದ್ದು ಇಲ್ಲಿಯವರೆಗೆ ವಿಚಾರಣೆಗೆ ಹಾಜರಾಗಿಲ್ಲ.
ಹೌದು. ಆರಂಭದಲ್ಲಿ ದಿನೇಶ್ ಕಲ್ಲಹಳ್ಳಿ ನೀಡಿದ ದೂರಿನ ಆಧಾರದಲ್ಲಿ ಯುವತಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಆಕೆಯ ಮನೆಯ ಬಾಗಿಲಿಗೆ ಅಂಟಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಅಷ್ಟೇ ಅಲ್ಲದೇ ದಿನೇಶ್ ಕಲ್ಲಹಳ್ಳಿ ಮೂಲಕವೂ ನೋಟಿಸ್ ನೀಡಲಾಗಿತ್ತು. ಆದರೆ ವಿಚಾರಣೆಗೆ ಹಾಜರಾಗಿರಲಿಲ್ಲ.
ಇದಾದ ಬಳಿಕ ಆಕೆಯ ವಾಟ್ಸಪ್ ನಂಬರ್, ಇಮೇಲ್‌ಗೆ ನೋಟಿಸ್ ಜಾರಿ ಮಾಡಲಾಗಿತ್ತು. ಈ ಪ್ರಕ್ರಿಯೆ ನಡುವೆ ಯುವತಿ ವಿಡಿಯೋ ರಿಲೀಸ್ ಮಾಡಿ ನಾನು ಎಸ್‌ಐಟಿ ಮುಂದೆ ಕೆಲ ದಿನದ ಒಳಗಡೆ ಹಾಜರಾಗುತ್ತೇನೆ. ನನಗೆ ರಕ್ಷಣೆ ನೀಡಬೇಕು ಎಂದು ಕೇಳಿ ಮನವಿ ಮಾಡಿದ್ದಳು. ಈ ವಿಡಿಯೋದ ಬಳಿಕ ಮತ್ತೊಂದು ವಿಡಿಯೋ ಮಾಡಿ ನಾನು ಎಸ್‌ಐಟಿ ಮುಂದೆ ಹಾಜರಾಗುತ್ತೇನೆ. ನಾನು ಹೇಳಿಕೆ ನೀಡುವ ಸಂದರ್ಭದಲ್ಲಿ ನನ್ನ ತಂದೆ, ತಾಯಿ ಇರಬೇಕು. ಅನ್ಯಾಯ ಆಗಿರುವುದು ನನಗೆ. ಆದರೆ ಎಸ್‌ಐಟಿ ರಮೇಶ್ ಜಾರಕಿಹೊಳಿ ಪರವಾಗಿ ಕೆಲಸ ಮಾಡುವಂತೆ ಕಾಣುತ್ತಿದೆ ಎಂದು ಆರೋಪಿಸಿದ್ದಳು.
ಶುಕ್ರವಾರ ಸಿಡಿ ಲೇಡಿ ಮತ್ತು ಕುಟುಂಬಸ್ಥರ ಜೊತೆಗಿನ ಆಡಿಯೋ ಲೀಕ್ ಆಗಿತ್ತು. ಶನಿವಾರ ಸಿಡಿ ಯುವತಿಯ ಪೋಷಕರು ಸುದ್ದಿಗೋಷ್ಠಿ ನಡೆಸಿ, ನಮ್ಮ ಮಗಳನ್ನು ಮುಂದಿಟ್ಟುಕೊಂಡು ಡಿಕೆ ಶಿವಕುಮಾರ್ ಹೊಲಸು ರಾಜಕಾರಣ ಮಾಡುತ್ತಿದ್ದಾರೆ. ಮಗಳೇ ಎಲ್ಲಿದ್ದರೂ ಬಾ ಎಂದು ಮನವಿ ಮಾಡಿಕೊಂಡಿದ್ದರು.
ಪೋಷಕರು ಮಾಧ್ಯಮಗಳ ಜೊತೆ ಹೇಳಿಕೆ ನೀಡಿದ ಬೆನ್ನಲ್ಲೇ ಸಿಡಿ ಯುವತಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿ, ಪೋಷಕರ ಮೇಲೆ ಬಲವಂತವಾಗಿ ಒತ್ತಡ ಹಾಕಿ ಹೇಳಿಕೆಗಳನ್ನು ನೀಡಿಸಲಾಗುತ್ತಿದೆ. ಎಸ್‌ಐಟಿ ಪೊಲೀಸರ ತನಿಖೆಯ ಬಗ್ಗೆ ನನಗೆ ಅನುಮಾನವಿದೆ.ಹೀಗಾಗಿ ನಾನು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡುತ್ತೇನೆ ಎಂದು ಹೇಳಿ ವಿಡಿಯೋ ರಿಲೀಸ್ ಮಾಡಿದ್ದಳು.
ದೂರು ದಾಖಲಾದ ಬಳಿಕ ಯುವತಿ ವಿಚಾರಣೆಗೆ ಹಾಜರಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಯುವತಿ ವಿಡಿಯೋ ಮಾಡಿ ಹೇಳಿಕೆಗಳನ್ನು ನೀಡುತ್ತಿದ್ದಾಳೆ ವಿನಾ: ವಿಚಾರಣೆಗೆ ಹಾಜರಾಗುತ್ತಿಲ್ಲ. ಹೀಗಾಗಿ ಯುವತಿಯ ಮುಂದಿನ ನಡೆ ಏನು ಎಂಬುದರ ಬಗ್ಗೆ ಕುತೂಹಲ ಮೂಡಿದೆ.
ಯುವತಿಯ ಮುಂದಿದೆ 3 ಆಯ್ಕೆಗಳಿವೆ:
1. ನೇರವಾಗಿ ನ್ಯಾಯಾಧೀಶರ ಮುಂದೆ ಹಾಜರಾಗಿ ಹೇಳಿಕೆ ನೀಡಬಹುದು
2. ತಮ್ಮ ಪರ ವಕೀಲರ ಜೊತೆಗೆ ನ್ಯಾಯಾಧೀಶರ ಮುಂದೆ ಹಾಜರಾಗಬಹುದು.
3. ಎಸ್ ಐಟಿ ಪೊಲೀಸರ ಮುಂದೆ ಹಾಜರಾಗಿ, ನಿಮಗೆ ಹೇಳಿಕೆ ನೀಡಲ್ಲ ನ್ಯಾಯಾಧೀಶರ ಬಳಿ ಕರೆದುಕೊಂಡು ಹೋಗಿ ಎಂದು ಮನವಿ ಮಾಡಬಹುದು.
ಈಗ ಕೊನೆಯದಾಗಿ ವಕೀಲ ಜಗದೀಶ್ ಮೂಲಕ ಯುವತಿಗೆ ನೋಟಿಸ್ ನೀಡಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಯುವತಿ ಎಸ್‌ಐಟಿ ಪೊಲೀಸರ ಮುಂದೆ ಹಾಜರಾಗುವುದು ಅನುಮಾನ. ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಕೋರ್ಟ್ ಆದೇಶ ನೋಡಿಕೊಂಡು ಎಸ್‌ಐಟಿ ಪೊಲೀಸರ ಮುಂದೆ ಹಾಜರಾಗಬೇಕೋ? ಬೇಡವೋ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.
ಲಕ್ನೋ: ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದ್ದು, ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.
ಉತ್ತರ ಪ್ರದೇಶದ ಅಜಾಮ್‍ಗಡ ಜಿಲ್ಲೆಯ ಮುಬಾರಕ್‍ಪುರದಲ್ಲಿ ಘಟನೆ ನಡೆದಿದ್ದು, ಪ್ರಕರಣ ಬೇಧಿಸಿದ್ದಕ್ಕೆ ಉತ್ತರ ಪ್ರದೇಶ ಸರ್ಕಾರ ಪೊಲೀಸರಿಗೆ ಹಾಗೂ ವಾದ ಮಂಡಿಸಿದ ವಕೀಲರ ತಂಡಕ್ಕೆ 1 ಲಕ್ಷ ರೂ. ಬಹುಮಾನ ಘೋಷಿಸಿದೆ. ಈ ಕುರಿತು ಉತ್ತರ ಪ್ರದೇಶ ಸರ್ಕಾರದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಅವಿನಾಶ್ ಕುಮಾರ್ ಸ್ವಸ್ಥಿ ಮಾಹಿತಿ ನೀಡಿದ್ದು, ಪ್ರಕರಣವನ್ನು ತುಂಬಾ ಚೆನ್ನಾಗಿ ನಿರ್ವಹಿಸಿದ ಅಧಿಕಾರಿಗಳಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿದ್ದೇವೆ ಎಂದು ತಿಳಿಸಿದ್ದಾರೆ.
ಅಪರಾಧಿಯನ್ನು ನಜಿರುದ್ದಿನ್ ಅಲಿಯಾಸ್ ಪವ್ವಾ ಎಂದು ಗುರುತಿಸಲಾಗಿದ್ದು, 2019ರಲ್ಲಿ ಪ್ರಕರಣ ನಡೆದಿತ್ತು. ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಮಹಿಳೆ ಹಾಗೂ ಆಕೆಯ ಮಗಳ ಮೇಲೆ ರಾಕ್ಷಸ ರೀತಿಯಲ್ಲಿ ಅಪರಾಧಿ ಅತ್ಯಾಚಾರ ಎಸಗಿದ್ದ. ಅಲ್ಲದೆ ಮಹಿಳೆಯ ಪತಿ ಹಾಗೂ ಅವರ 4 ತಿಂಗಳ ಕೂಸನ್ನು ಸಹ ಕೊಲೆ ಮಾಡಿದ್ದ.
ಪ್ರಕರಣದ ವಿಚಾರಣೆ ನಡೆಸಿದ ಪೋಕ್ಸೋ ನ್ಯಾಯಾಲಯ ಬುಧವಾರ ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ. ಅಲ್ಲದೆ ನ್ಯಾಯಾಲಯವು 9 ಲಕ್ಷ ರೂ.ಗಳ ದಂಡವನ್ನು ಸಹ ವಿಧಿಸಿದೆ. ನ್ಯಾಯಾಲಯವು 66 ಪುಟಗಳ ತೀರ್ಪಿನಲ್ಲಿ ಘಟನೆಯನ್ನು ಭಯಾನಕ, ಅಮಾನವೀಯ ಹಾಗೂ ಅಪರೂಪದಲ್ಲಿ ಅಪರೂಪವಾದ ಕೃತ್ಯ ಎಂದು ಹೇಳಿದೆ.