Tag: court

  • ರೆಮ್‍ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟ- 11 ಆರೋಪಿಗಳ ಜಾಮೀನು ಅರ್ಜಿ ವಜಾ

    ರೆಮ್‍ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟ- 11 ಆರೋಪಿಗಳ ಜಾಮೀನು ಅರ್ಜಿ ವಜಾ

    ಬಾಗಲಕೋಟೆ: ರೆಮ್‍ಡಿಸಿವಿರ್ ಕಾಳಸಂತೆಕೋರರಿಗೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದ್ದು, ಜಾಮೀನು ಕೋರಿ ಸಲ್ಲಿಸಿದ್ದ 11 ಆರೋಪಿಗಳ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

    ಬಾಗಲಕೋಟೆ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಕಾಶ ವಿ. ಮಹತ್ವದ ನಿರ್ಧಾರ ಕೈಗೊಂಡಿದ್ದು, 11 ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ರೆಮ್‍ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟ ಮಾಡುವುದು ಗಂಭೀರ ಪ್ರಕರಣವಾಗಿದೆ. ಹೀಗಾಗಿ ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿರುವುದಾಗಿ ನ್ಯಾಯಾಲಯ ತಿಳಿಸಿದೆ.

    ಮೇ 3ರಂದು ನಗರದಲ್ಲಿ ಸಿಇಎನ್ ಪೊಲೀಸರು ದಾಳಿ ನಡೆಸಿ, ರೆಮ್‍ಡಿಸಿವಿರ್ ಕಾಳಸಂತೆಕೋರರನ್ನು ಬಲೆಗೆ ಕೆಡವಿದ್ದರು. 11 ಜನರನ್ನು ಬಂಧಿಸಿ, ಆರೋಪಿಗಳಿಂದ 14 ಇಂಜೆಕ್ಷನ್ ವಶಪಡಿಸಿಕೊಳ್ಳಲಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರು 11 ಜನರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

    ಇಂದು ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಸರ್ಕಾರದ ಪರವಾಗಿ ಎಪಿಪಿ ಮಹೇಶ್ ಪಾಟೀಲ್ ವಾದ ಮಂಡಿಸಿದ್ದರು.

  • 8 ವರ್ಷವಾದ್ರೂ ಚಾರ್ಜ್‍ಶೀಟ್ ಸಲ್ಲಿಕೆಯಾಗಿಲ್ಲ, ಇದು ಮಾನವ ಹಕ್ಕುಗಳ ಉಲ್ಲಂಘನೆ – ಭಟ್ಕಳದ ಸಿದ್ದಿಬಪ್ಪನಿಂದ ಜಾಮೀನಿಗೆ ಅರ್ಜಿ

    8 ವರ್ಷವಾದ್ರೂ ಚಾರ್ಜ್‍ಶೀಟ್ ಸಲ್ಲಿಕೆಯಾಗಿಲ್ಲ, ಇದು ಮಾನವ ಹಕ್ಕುಗಳ ಉಲ್ಲಂಘನೆ – ಭಟ್ಕಳದ ಸಿದ್ದಿಬಪ್ಪನಿಂದ ಜಾಮೀನಿಗೆ ಅರ್ಜಿ

    – ಉಗ್ರರ ಜೊತೆ ಸಂಪರ್ಕ ಆರೋಪ
    – ದುಬೈಯಲ್ಲಿ ಎನ್‍ಐಎಯಿಂದ ಬಂಧನ

    ಕಾರವಾರ: ತನ್ನ ವಿರುದ್ಧ ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಇನ್ನೂ ಆರೋಪಪಟ್ಟಿ ಸಲ್ಲಿಸದ ಹಿನ್ನೆಲೆಯಲ್ಲಿ ಭಟ್ಕಳದ ಅಬ್ದುಲ್ ವಾಹಿದ್ ಸಿದ್ದಿಬಪ್ಪ ಜಾಮೀನು ಮಂಜೂರು ಕೋರಿ ದೆಹಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾನೆ.

    ಉಗ್ರಗಾಮಿ ಚಟುವಟಿಕೆಯ ಆರೋಪದಡಿ 2012ರಲ್ಲಿ ದುಬೈನಲ್ಲಿ ವಾಹಿದ್ ಸಿದ್ದಿಬಪ್ಪನನ್ನು ಎನ್‍ಐಎ ಬಂಧಿಸಿದೆ. ಕಳೆದ ಎಂಟು ವರ್ಷಗಳಿಂದ 100ಕ್ಕೂ ಹೆಚ್ಚು ಬಾರಿ ಕೋರ್ಟ್ ವಿಚಾರಣೆ ನಡೆದಿದ್ದರೂ ಇನ್ನೂ ಚಾರ್ಜ್‍ಶೀಟ್ ಸಲ್ಲಿಕೆಯಾಗಿಲ್ಲ. ಹೀಗಾಗಿ ಜಾಮೀನು ಅರ್ಜಿ ಸಲ್ಲಿಸಿದ್ದು ಮೇ 6 ರಂದು ವಿಚಾರಣೆಗೆ ಬರಲಿದೆ.

    ಆರೋಪ ಏನು?
    2012ರ ಸೆಪ್ಟೆಂಬರ್ 10 ರಂದು ವಿದ್ವಂಸಕ ಕೃತ್ಯ, ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಚಟುವಟಿಕೆ, ಭಯೋತ್ಪಾದಕ ರಿಯಾಜ್ ಭಟ್ಕಳ್ ನೊಂದಿಗೆ ಸಂಪರ್ಕ, ಹವಾಲ ಹಣ ವಹಿವಾಟು, ಬೆಂಗಳೂರು, ಮುಂಬೈ ಬಾಂಬ್ ಸ್ಫೋಟ ಸೇರಿದಂತೆ ಹಲವು ಆರೋಪದಲ್ಲಿ ಈತನನ್ನು ಬಂಧಿಸಿ ಕೇಸ್ ದಾಖಲಿಸಿತ್ತು.

    ಮೊದಲ ಹಂತದಲ್ಲಿ ಐದು ಜನರ ವಿರುದ್ಧ ತನಿಖೆ ನಡೆಸಿದ ಎನ್‍ಐಎ 4 ಜನರ ಮೇಲೆ ಸಪ್ಲಿಮೆಂಟ್ ಚಾರ್ಜ್‍ಶೀಟ್ ಹಾಕಿತು. ನಂತರ 20 ಜನರ ಮೇಲೆ ಚಾರ್ಜ್ ಶೀಟ್ ಹಾಕಿತ್ತು. ನಂತರ ಮೂರನೇ ಸಪ್ಲಿಮೆಂಟರಿ ಚಾರ್ಜ್ ಶೀಟ್ ಅನ್ನು 2016ರ ನವೆಂಬರ್ 15 ರಂದು ವಾಹಿದ್ ಸಿದ್ದಿಬಪ್ಪ ವಿರುದ್ಧ ಸಲ್ಲಿಕೆ ಮಾಡಿ ಮೂರನೇ ಆರೋಪಿಯಾಗಿ ಸೇರಿಸಿತು.

    2013ರ ಡಿಸೆಂಬರ್ 28 ರಂದು ಮೊದಲು ಜಾರ್ಜ್ ಶೀಟ್ ಸಲ್ಲಿಸಿದ ಪ್ರಕರಣದ ವಿಚಾರಣೆ ನಡೆದಿತ್ತು. ಆದರೆ ಎನ್‍ಐಎ ತನಿಖಾ ತಂಡ ಈತನ ವಿರುದ್ಧ ಸಾಕ್ಷಿ ನೀಡಲು 100 ದಿನಾಂಕಗಳನ್ನು ತೆಗೆದುಕೊಂಡರೂ ಯಾವುದೇ ಆರೋಪ ಪಟ್ಟಿ ಸಲ್ಲಿಕೆ ಮಾಡಿರಲಿಲ್ಲ.

    ಈ ನಡುವೆ ಸಿದ್ದಿಬಪ್ಪ ಎರಡು ಬಾರಿ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಎರಡೂ ಬಾರಿಯೂ ಅರ್ಜಿ ತಿರಸ್ಕೃತಗೊಂಡಿತ್ತು. ಈಗ ಮತ್ತೊಮ್ಮೆ ಜಾಮೀನು ಅರ್ಜಿ ಸಲ್ಲಿಸಿದ್ದು, ಮೇ 6 ರಂದು ವಿಚಾರಣೆಗೆ ಬರಲಿದೆ.

    ದೆಹಲಿಯ ತಿಹಾರ್ ಜೈಲಿನಲ್ಲಿ ಎಂಟು ವರ್ಷಗಳಿಂದ ಇದ್ದೇನೆ. ವಿರುದ್ಧ ಯಾವುದೇ ಆರೋಪ ಪಟ್ಟಿ ಸಲ್ಲಿಕೆಯಾಗಿಲ್ಲ. ತನಿಖೆ ನಡೆಸುವಲ್ಲಿ ವಿಳಂಬ ಮಾಡಲಾಗುತ್ತಿದ್ದು, ಇದರಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಆದಷ್ಟು ಬೇಗ ತನಿಖೆ ನಡೆಸಿ ತೀರ್ಪು ನೀಡಿ ಇಲ್ಲವೇ ನನಗೆ ಮಧ್ಯಂತರ ಜಾಮೀನು ನೀಡುವಂತೆ ಅಬ್ದುಲ್ ವಾಹಿದ್ ಸಿದ್ದಿಬಪ್ಪ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾನೆ.

  • ಮಾಜಿ ಶಾಸಕ ವಸಂತ್ ಅಸ್ನೋಟಿಕರ್ ಹತ್ಯೆಗೈದವನಿಗೆ ಜೀವಾವಧಿ ಶಿಕ್ಷೆ

    ಮಾಜಿ ಶಾಸಕ ವಸಂತ್ ಅಸ್ನೋಟಿಕರ್ ಹತ್ಯೆಗೈದವನಿಗೆ ಜೀವಾವಧಿ ಶಿಕ್ಷೆ

    ಕಾರವಾರ: ಅಂದಿನ ಕಾರವಾರ-ಜೋಯಿಡಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ವಸಂತ್ ಅಸ್ನೋಟಿಕರ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದ ಮುಂಬೈ ಮೂಲದ ಶಾರ್ಪ್ ಶೂಟರ್ ಸಂಜಯ್ ಮೋಹಿತೆಗೆ ಜೀವಾವಧಿ ಶಿಕ್ಷೆ ಹಾಗೂ 68 ಸಾವಿರ ರೂ. ದಂಡ ವಿಧಿಸಿ ಶಿರಸಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

    ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶಾಂತವೀರ ಶಿವಪ್ಪ, ಅಪರಾಧಿಗೆ ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ಸುನಂದಾ ಮಡಿವಾಳರ ವಾದ ಮಂಡಿಸಿದ್ದು, ಹಲವು ವರ್ಷದ ವಾದ, ವಿವಾದದ ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದೆ.

    ಫೆ.19, 2000ರಂದು ಕಾರವಾರ ನಗರದ ದೈವಜ್ಞ ಭವನದ ಎದುರು ಮಗಳ ಮುದುವೆ ಸಂಭ್ರಮದಲ್ಲಿದ್ದ ಶಾಸಕ ವಸಂತ್ ಆಸ್ನೋಟಿಕರ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ದಿಲೀಪ್ ನಾಯ್ಕ 2004ರಲ್ಲಿ ಹತ್ಯೆ ಆಗಿದ್ದ. ಉಳಿದ ಆರೋಪಿಗಳಾದ ಬಾಬು, ಅಂತೋನಿಯನ್ನು ಮುಂಬೈ ಪೊಲೀಸರು ಎನ್ ಕೌಂಟರ್ ಮಾಡಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಅಪರಾಧ ತನಿಖಾ ದಳ (ಸಿಐಡಿ) ದೋಷಾರೋಪ ಪಟ್ಟಿ ಸಲ್ಲಿಸಿತ್ತು.

  • ಜಿರಳೆ ಕಾಟದಿಂದ ವಿಚ್ಚೇದನಕ್ಕೆ ಮುಂದಾದ ದಂಪತಿ

    ಜಿರಳೆ ಕಾಟದಿಂದ ವಿಚ್ಚೇದನಕ್ಕೆ ಮುಂದಾದ ದಂಪತಿ

    ಭೋಪಾಲ್: ತಮ್ಮ ನಡುವೆ ಸಾಮರಸ್ಯ ಇಲ್ಲದೆ, ತುಂಬಾ ಜಗಳಗಳು ಆದಾಗ ದಂಪತಿ ವಿಚ್ಛೇದನಕ್ಕೆ ಮುಂದಾಗುವುದನ್ನು ನೋಡಿದ್ದೇವೆ. ಆದರೆ ಮನೆಯಲ್ಲಿ ಜಿರಳೆ ಕಾಟ ಎಂಬ ಕಾರಣಕ್ಕೆ ಡಿವೋರ್ಸ್ ಕೇಳಿರುವ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.

    ಈ ದಂಪತಿ ಮದುವೆಯಾಗಿ ಮೂರು ವರ್ಷ ಕಳೆದಿತ್ತು. ಅಷ್ಟರಲ್ಲಾಗಲೇ 18 ಬಾರಿ ಮನೆಯನ್ನು ಬದಲಾಯಿಸಿದ್ದರು. ಯಾಕೆಂದ್ರೆ ಪತ್ನಿಗೆ ಜಿರಳೆ ಅಂದರೆ ಭಯ ಹೀಗಾಗಿ ದಂಪತಿ ಮನೆಯನ್ನು ಬದಲಾಯಿಸುತ್ತಲೇ ಇದ್ದರು.

    ಮದುವೆ ನಂತರ ಅಡುಗೆ ಮಾಡಲು ಕಿಚನ್‍ಗೆ ಹೋದಾಗ ಅಲ್ಲಿ ಇರುವ ಜಿರಳೆಗಳನ್ನು ಕಂಡು ಮಹಿಳೆ ಜೋರಾಗಿ ಕಿರುಚಿತ್ತಾ ಓಡಿ ಬಂದಿದ್ದಳು. ನಾನು ಜಿರಳೆ ಇದ್ದರೆ ಅಡುಗೆ ಮನೆಗೆ ಹೋಗುವುದಿಲ್ಲ ಎಂದು ಪತಿಯ ಬಳಿ ಹೇಳಿಕೊಂಡಿದ್ದಳು. ಹೀಗಾಗಿ ದಂಪತಿ ಒಂದಾದರ ಮೇಲೋಂದು ಮನೆಯನ್ನು ಬದಲಾಯಿಸುತ್ತಲೇ ಇದ್ದರು.

     

    ಈ ವಿಚಾರವಾಗಿ ಬೇಸರಗೊಂಡ ಪತಿ ತನ್ನ ಪತ್ನಿಗೆ ವಿಚ್ಛೇದನ ಕೊಡಲು ಮುಂದಾಗಿದ್ದಾನೆ. ವೈದ್ಯರ ಬಳಿ ಹೋಗಿ ಪತ್ನಿಗೆ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದ್ದಾನೆ. ಆದರೆ ಏನು ಪ್ರಯೋಜನವಾಗದೇ ಇದ್ದಾಗ ವಿಚ್ಛೇದನ ಕೊಡಲು ಮುಂದಾಗಿದ್ದಾನೆ ಎಂದು ತಿಳಿದು ಬಂದಿದೆ.

  • ರಸ್ತೆ ಅಪಘಾತದ ಪರಿಹಾರ ನೀಡುವಲ್ಲಿ ವಿಳಂಬ- KSRTC ಕಚೇರಿ ವಸ್ತುಗಳು ಜಪ್ತಿ

    ರಸ್ತೆ ಅಪಘಾತದ ಪರಿಹಾರ ನೀಡುವಲ್ಲಿ ವಿಳಂಬ- KSRTC ಕಚೇರಿ ವಸ್ತುಗಳು ಜಪ್ತಿ

    ಗದಗ: ಅಪಘಾತದಿಂದ ಮೃತಪಟ್ಟಿದ್ದ ಬಾಲಕನ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದಕ್ಕೆ ವಾಯುವ್ಯ ಸಾರಿಗೆ ವಿಭಾಗೀಯ ಕಚೇರಿಯ ವಸ್ತುಗಳನ್ನು ಜಪ್ತಿ ಮಾಡಿದ ಘಟನೆ ನಗರದಲ್ಲಿ ನಡೆದಿದೆ.

    ನಗರದ ಮುಳಗುಂದ ನಾಕಾ ಬಳಿ ಇರುವ ವಾಯುವ್ಯ ಸಾರಿಗೆ ವಿಭಾಗೀಯ ಕಚೇರಿಯಲ್ಲಿನ ಕಂಪ್ಯೂಟರ್, ಮಾನಿಟರ್, ಸಿಪಿಯು ಸೇರಿದಂತೆ ಹಲವಾರು ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜಶೇಖರ್ ಪಾಟೀಲ್ ಅವರ ಆದೇಶದ ಮೇರೆಗೆ ಜಪ್ತಿ ಮಾಡಲಾಗಿದೆ.

    ಏನಿದು ಪ್ರಕರಣ?
    2009ರಲ್ಲಿ ಗದಗನ ಹೊರವಲಯದ ದಂಡಿನ ದುರ್ಗಮ್ಮ ದೇವಸ್ಥಾನದ ಬಳಿ ರಸ್ತೆ ಅಪಘಾತ ನಡೆದಿತ್ತು. ಈ ಘಟನೆಯಲ್ಲಿ ಪಾದಾಚಾರಿ ಬೆಟಗೇರಿ ನಿವಾಸಿ ಬಾಲಕ ಸಂಕಪ್ಪ ಶಿವಾನಂದ ಆಲೂರ (15) ಸ್ಥಳದಲ್ಲಿಯೇ ಮೃತಪಟ್ಟಿದ್ದ. ಹುಬ್ಬಳ್ಳಿ-ಬಾಗಲಕೋಟೆ ಬಸ್ ಹರಿದು ಸ್ಥಳದಲ್ಲಿ ಸಂಕಪ್ಪನ ಸಾವು ಸಂಭವಿಸಿತ್ತು. ಪರಿಹಾರಕ್ಕೆ ಆಗ್ರಹಿಸಿ 2009 ರಲ್ಲಿ ಮೃತ ಬಾಲಕನ ಕುಟುಂಬಸ್ಥರು ನ್ಯಾಯಾಲಯದ ಮೊರೆಹೋಗಿದ್ದರು.

    ಪ್ರಕರಣದ ಕುರಿತು ಆದೇಶ ನೀಡಿದ್ದ ನ್ಯಾಯಾಲಯ ಗದಗ ಘಟಕದಿಂದ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಸಾರಿಗೆ ಇಲಾಖೆಯವರು 2014ರಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ 2019ರಲ್ಲಿ ಒಟ್ಟು 8 ಲಕ್ಷ ಪರಿಹಾರ ನೀಡುವಂತೆ ಆದೇಶ ನೀಡಿತ್ತು. ಆಗ 5 ಲಕ್ಷ ಪರಿಹಾರ ನೀಡಲಾಗಿತ್ತು. ಉಳಿದ 3.16 ಲಕ್ಷ ರೂ. ಪರಿಹಾರ ನೀಡಿರಲಿಲ್ಲ. ಕಾರಣ ಈಗ ಇಲಾಖೆಯ ವಸ್ತುಗಳ ಜಪ್ತಿಗೆ ಕೋರ್ಟ್ ಆದೇಶ ನೀಡಿದೆ. ಅರ್ಜಿದಾರರ ಪರ ವಕೀಲ ಅಶೋಕ್ ಹೊಸೂರ ನೇತೃತ್ವದಲ್ಲಿ ಜಪ್ತಿ ಕಾರ್ಯ ನಡೆಯಿತು.

  • 2 ಶರ್ಟ್ ಕದಿದ್ದಕ್ಕೆ 20 ವರ್ಷ ಜೈಲು – ಇತ್ತ ಮನೆ ಮಂದಿಯನ್ನೇ ಕಳೆದುಕೊಂಡ

    2 ಶರ್ಟ್ ಕದಿದ್ದಕ್ಕೆ 20 ವರ್ಷ ಜೈಲು – ಇತ್ತ ಮನೆ ಮಂದಿಯನ್ನೇ ಕಳೆದುಕೊಂಡ

    ನ್ಯೂಯಾರ್ಕ್: ಬಟ್ಟೆಯಂಗಡಿಯೊಂದರಲ್ಲಿ ಕೇವಲ 2 ಶರ್ಟ್ ಕದ್ದ ಅಪರಾಧಕ್ಕೆ ವ್ಯಕ್ತಿಯೊಬ್ಬರು ಬರೋಬ್ಬರಿ 20 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿರುವ ಕರುಣಾಜನಕ ಘಟನೆ ಅಮೆರಿಕದಲ್ಲಿ ನಡೆದಿದೆ.

    ಫ್ರಾಂಕ್ ಸಣ್ಣ ತಪ್ಪಿಗೆ ಸುದೀರ್ಘ ಕಾಲ ಜೈಲುವಾಸ ಅನುಭಿವಿಸಿ ಈಗ ಬಿಡುಗಡೆಯಾಗಿದ್ದಾರೆ. ಕೆಲ ಪ್ರಜ್ಞಾವಂತರು ಪ್ರಾಂಕ್‍ಗೆ ವಿಧಿಸಿದ್ದ ಅಮಾನವೀಯ ಶಿಕ್ಷೆಯನ್ನು ಪ್ರಶ್ನಿಸಿ ಕಾನೂನು ಹೋರಾಟ ನಡೆಸಿದ್ದರು. 23 ವರ್ಷ ಜೈಲು ಶಿಕ್ಷೆ ವಿಧಿಸಿದ್ದ ಕೋರ್ಟ್ ಕೊನೆಯ 3 ವರ್ಷಗಳ ಜೈಲುವಾಸವನ್ನು ರದ್ದುಗೊಳಿಸಿದೆ.
    ಕಡು ಬಡವನಾಗಿದ್ದ ಫ್ರಾಂಕ್‍ಗೆ ಪತ್ನಿ, ಒಬ್ಬ ಮಗನಿದ್ದ. ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ಕಳ್ಳತನಗಳನ್ನು ಮಾಡಿ ಜೀವನವನ್ನು ನಡೆಸುತ್ತಿದ್ದರು. ಯಾರನ್ನೂ ಹೆದರಿಸಿ ಲೂಟಿ ಮಾಡುತ್ತಿರಲಿಲ್ಲ. ಸೂಪರ್ ಮಾರ್ಕೆಟ್, ಬಟ್ಟೆ ಶಾಪ್‍ಗಳಲ್ಲಿ ಯಾರಿಗೂ ತಿಳಿಯದಂತೆ ಒಂದೆರೆಡು ವಸ್ತುಗಳನ್ನು ಕಳವು ಮಾಡುತ್ತಿದ್ದರು. ಇದೇ ರೀತಿ ಕಳವು ಮಾಡಿ ಸಿಕ್ಕಿಬಿದ್ದಿದ್ದರು. 2000ನಲ್ಲಿ ಫ್ರಾಂಕ್‍ನನ್ನು ಬಂಧಿಸಲಾಗಿತ್ತು. 47 ವರ್ಷದ ಫ್ರಾಂಕ್‍ಗೆ ಅಲ್ಲಿನ ಕೋರ್ಟ್ 23 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿತ್ತು.

    ಬಡ ಕುಟುಂಬ ಫ್ರಾಂಕ್‍ಗಾಗಿ ಉತ್ತಮ ಕಾನೂನು ಸೌಲಭ್ಯ ನೀಡಲು ಸಾಧ್ಯವಾಗಲಿಲ್ಲ. ಇದರಿಂದ ಫ್ರಾಂಕ್ ಜೈಲಿನಲ್ಲೇ ತಮ್ಮ ಜೀವನವನ್ನು ಸವೆಸುವಂತಾಯಿತು. ಫ್ರಾಂಕ್ ಪ್ರಕರಣವನ್ನು ಗಮನಿಸಿದ ಅಮೆರಿಕಾದ ಕೆಲ ಪ್ರಜ್ಞಾವಂತರು ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿದರು. ಸಣ್ಣ ಅಪರಾಧಕ್ಕಾಗಿ ಇಷ್ಟು ಕಠಿಣ ಶಿಕ್ಷೆ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು. ಅಮೆರಿಕದಲ್ಲಿ ಬಡ ಕಪ್ಪು ವರ್ಣಿಯರ ಮೇಲಾಗುತ್ತಿರುವ ಶೋಷಣೆಯಿದು ಎಂದು ಕೆಲವರು ಹೇಳಿದರು.

    ಕೋರ್ಟ್ ತನ್ನ ಶಿಕ್ಷೆಯನ್ನು ಕಡಿತಗೊಳಿಸಿ ಫ್ರಾಂಕ್‍ನ ಬಿಡುಗಡೆ ಮಾಡಿದೆ. 23 ವರ್ಷಗಳ ಶಿಕ್ಷೆಯನ್ನು ಕಡಿತಗೊಳಿಸುವಷ್ಟರಲ್ಲಿ ಫ್ರಾಂಕ್ 20 ವರ್ಷಗಳ ಕಾಲ ಜೈಲಿನಲ್ಲಿ ಕಳೆದಾಗಿತ್ತು. ಕೇವಲ 3 ವರ್ಷಗಳ ಶಿಕ್ಷೆಯಿಂದ ಮಾತ್ರ ಪಾರಾಗಿದ್ದ ಫ್ರಾಂಕ್ ಜೈಲಿನಿಂದ ಬಿಡುಗಡೆ ಆಗುವಷ್ಟರಲ್ಲಿ ಪತ್ನಿ, ಮಗ, ಇಬ್ಬರು ಸೋದರರು ಮೃತಪಟ್ಟಿದ್ದರು. ಫ್ರಾಂಕ್‍ನ ಕುಟುಂಬವೇ ಸಾವಿನ ಮನೆ ಸೇರಿಯಾಗಿತ್ತು. 67 ವರ್ಷದ ಫ್ರಾಂಕ್ ಜೈಲಿನಿಂದ ಬಿಡುಗಡೆಯಾದರೂ ಒಬ್ಬಂಟಿ. ಒಟ್ಟಿನ್ಲಲಿ ಕೇವಲ 2 ಶರ್ಟ್ ಕದ್ದ ಅಪರಾಧಕ್ಕೆ ಫ್ರಾಂಕ್ ತನ್ನದೆಲ್ಲವನ್ನೂ ಕಳೆದುಕೊಂಡಿದ್ದಾರೆ.

  • ಕಾಶಿ ವಿಶ್ವನಾಥ ದೇವಾಲಯ, ಮಸೀದಿ ಸಂಕೀರ್ಣದಲ್ಲಿ ಸಮೀಕ್ಷೆಗೆ ಆದೇಶ

    ಕಾಶಿ ವಿಶ್ವನಾಥ ದೇವಾಲಯ, ಮಸೀದಿ ಸಂಕೀರ್ಣದಲ್ಲಿ ಸಮೀಕ್ಷೆಗೆ ಆದೇಶ

    ಲಕ್ನೋ: ಕಾಶಿ ವಿಶ್ವನಾಥ ದೇವಸ್ಥಾನ – ಮಸೀದಿ ಸಂಕೀರ್ಣದಲ್ಲಿ ಸಮೀಕ್ಷೆ ನಡೆಸುವಂತೆ ವಾರಣಾಸಿ ಜಿಲ್ಲಾ ನ್ಯಾಯಾಲಯ ಪುರಾತತ್ವ ಇಲಾಖೆಗೆ ಮಹತ್ವದ ಆದೇಶ ನೀಡಿದೆ.

    1664 ರಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ್ 2 ಸಾವಿರ ವರ್ಷಗಳಷ್ಟು ಹಳೆಯದಾದ ಕಾಶಿ ವಿಶ್ವನಾಥ ದೇವಾಲಯದ ಒಂದು ಭಾಗವನ್ನು ಕೆಡವಿ ಅಲ್ಲಿ ಮಸೀದಿ ನಿರ್ಮಿಸಿದ್ದಾನೆ. ಹೀಗಾಗಿ ಈ ಜಾಗ ಹಿಂದೂಗಳಿಗೆ ಸೇರಬೇಕು. ಈ ಜಾಗದಲ್ಲಿ ಮೊದಲು ದೇವಾಲಯ ಇತ್ತೋ? ಮಸೀದಿ ನಿರ್ಮಾಣವಾಗಿತ್ತೋ ಎಂಬುದನ್ನು ತಿಳಿಯಲು ಸಮೀಕ್ಷೆ ನಡೆಸಲು ಅನುಮತಿ ನೀಡಬೇಕೆಂದು ವಕೀಲ ವಿಜಯ್ ಶಂಕರ್ ರಸ್ತೋಗಿ ಅರ್ಜಿ ಮೂಲಕ ಮನವಿ ಸಲ್ಲಿಸಿದ್ದರು.

    ಈ ಜಾಗದಲ್ಲಿ ಸಮೀಕ್ಷೆ ನಡೆಸುವುದಕ್ಕೆ ಮಸೀದಿಯ ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿ 2020ರಲ್ಲಿ ಅರ್ಜಿ ಸಲ್ಲಿಸಿತ್ತು. ಈಗ ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಸಮೀಕ್ಷೆ ನಡೆಸುವಂತೆ ಪುರಾತತ್ವ ಇಲಾಖೆಗೆ ಸೂಚಿಸಿದೆ. ಸಮೀಕ್ಷೆಗೆ ಸಂಬಂಧಿಸಿದ ಎಲ್ಲ ಖರ್ಚುಗಳನ್ನು ಉತ್ತರ ಪ್ರದೇಶ ಸರ್ಕಾರ ಭರಿಸಬೇಕೆಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.

    ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಇಲಾಖೆ ಶೀಘ್ರವೇ ಒಂದು ಸಮಿತಿಯನ್ನು ರಚಿಸಿ ಸಮೀಕ್ಷೆ ನಡೆಸುವ ಸಾಧ್ಯತೆಯಿದೆ.

  • ಎಪಿಎಂಸಿಗೆ ಭೂಮಿ ಕೊಟ್ಟ ರೈತನಿಗಿಲ್ಲ ಪರಿಹಾರ- ಕೋರ್ಟ್ ಆದೇಶ ಮೇರೆಗೆ ಎಪಿಎಂಸಿ ಕಚೇರಿ ಜಪ್ತಿ

    ಎಪಿಎಂಸಿಗೆ ಭೂಮಿ ಕೊಟ್ಟ ರೈತನಿಗಿಲ್ಲ ಪರಿಹಾರ- ಕೋರ್ಟ್ ಆದೇಶ ಮೇರೆಗೆ ಎಪಿಎಂಸಿ ಕಚೇರಿ ಜಪ್ತಿ

    ಗದಗ: ಅಡಿಕೆಗೆ ಹೋದ ಮಾನ ಆನೆ ಕೋಟ್ರು ಬಾರದು ಅಂತಾರೆ. ಅದರಂತಾಗಿದೆ ಗದಗ ಎಪಿಎಂಸಿ ಕಚೇರಿ ಕಥೆ. ಗದಗ ನಗರದ ಎಪಿಎಂಸಿ ಕಚೇರಿಯನ್ನ ಇಂದು ಜಪ್ತಿ ಮಾಡಲಾಗಿದೆ. ಕಾರಣ ಆರ್.ಆರ್.ಹೇಮಂತನವರ ಎಂಬವರು 4 ಎಕರೆ 35 ಗುಂಟೆ ಜಾಗೆಯನ್ನು 40 ವರ್ಷಗಳ ಹಿಂದೆ ಎಪಿಎಂಸಿಗಾಗಿ ಸ್ವಾದೀನಪಡಿಸಿಕೊಂಡಿತ್ತು. ಆಗ ಸುಮಾರು 76 ಲಕ್ಷ ರೂಪಾಯಿ ಪರಿಹಾರ ಹಣ ಬಿಡುಗಡೆ ಮಾಡಿದ ಎಪಿಎಂಸಿ, ಇನ್ನುಳಿದ 16.50 ಲಕ್ಷ ರೂಪಾಯಿ ಪಾವತಿಸಲು ವಿಳಂಬ ಮಾಡಿದೆ.

    ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ, ಅಧಿಕಾರಿಗಳು ಸ್ಪಂದಿಸಲಿಲ್ಲ. ಹಲವು ಬಾರಿ ಎಪಿಎಂಸಿ ಅಧಿಕಾರಿಗಳಿಗೆ ಕೋರ್ಟ್ ನೋಟಿಸ್ ಬಿಸಿ ಮುಟ್ಟಿಸಿದ್ರು. ಅದಕ್ಕೂ ಡೋಂಟ್‍ಕೇರ್ ಅನ್ನುವ ಅಧಿಕಾರಿಗಳ ಮೂಗುದಾರಕ್ಕೆ ಕೈ ಹಾಕಿದ್ದಾರೆ. ಈ ಹಿಂದೆ ಭೂ ಸ್ವಾಧೀನ ಅಧಿಕಾರಿ, ಎಪಿಎಂಸಿ ಉಪವಿಭಾಗಾಧಿಕಾರಿಯನ್ನು ಹೊಣೆಯಾಗಿಸಿ, ಅವರ ಕಚೇರಿಯನ್ನು ಜಪ್ತಿಗೆ ಮುಂದಾಯಿತು. ಗದಗ ಜಿಲ್ಲಾ ಪ್ರಧಾನಿ ದಿವಾನಿ ನ್ಯಾಯಾಲಯ ಆದೇಶ ಹೊರಡಿಸಿದೆ. ಹೀಗಾಗಿ ನ್ಯಾಯಾಲಯದ ಆದೇಶದ ಮೇರೆಗೆ ಜಪ್ತು ವಾರೆಂಟ್ ಆಧರಿಸಿ, ಕಚೇರಿಯ 1 ಸ್ಕಾರ್ಪಿಯೋ ಕಾರು ಮತ್ತು ನಾಲ್ಕು ಕಂಪ್ಯೂಟರ್, ಖುರ್ಚಿಗಳನ್ನು ವಶಕ್ಕೆ ಪಡೆದಿದೆ.

    ಈ ಪ್ರಕರಣ ಇಂದು ನಿನ್ನೆಯದಲ್ಲ. ಸುಮಾರು 40 ವರ್ಷಗಳ ಹಳೆಯ ಪ್ರಕರಣ. ಗದಗಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ರಚನೆಗಾಗಿ 1977ರಲ್ಲಿ ಭೂ ಸ್ವಾಧೀನ ಅಧಿಸೂಚನೆ ಹೊರಡಿಸಿತ್ತು. 1982ರಲ್ಲಿ ಆರ್.ಆರ್.ಹೇಮಂತನವರ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಎಪಿಎಂಸಿಯಿಂದ ಬರಬೇಕಿದ್ದ ಬಾಕಿ ಪರಿಹಾರ ಹಣಕ್ಕಾಗಿ ಸುಪ್ರೀಂ ಕೋರ್ಟ್‍ವರೆಗೆ ಹೋಗಿತ್ತು. ಪ್ರಕರಣ ಪುನಃ ಜಿಲ್ಲಾ ಪ್ರಧಾನ ಹಿರಿಯ ದಿವಾಣಿ ನ್ಯಾಯಾಲಯಕ್ಕೆ ಜ್ಞಾಪನಾ ಆದೇಶ ಆಗಿದ್ದರಿಂದ ಸದರಿ ಪ್ರಕರಣದಲ್ಲಿ ರೈತರಿಗೆ ಪ್ರತಿ ಚದರ ಅಡಿಗೆ 8.50 ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿತ್ತು.

    ಅಧಿಕಾರಿಗಳು ಅಂದಿನಿಂದ ಇಂದಿನವರೆಗೂ ವಿನಾಕಾರಣ ವಿಳಂಬ ಮಾಡುತ್ತಲೇ ಬಂದಿದ್ದರು. ಕೋರ್ಟ್ ಆದೇಶದಂತೆ ಕಚೇರಿ ಜಪ್ತಿ ಮಾಡಲಾಗಿದೆ. ಇತ್ತ ಜಪ್ತಿ ಕಾರ್ಯ ನಡೆಯುತ್ತಿದ್ದಂತೆ ಎಪಿಎಂಸಿ ಅಧಿಕಾರಿಗಳು ಪಲಾಯನಗೊಂಡರು.

  • ಮತ್ತೊಮ್ಮೆ ಸಂತ್ರಸ್ತೆಯ CrPC 164 ಹೇಳಿಕೆ ದಾಖಲಾಗುತ್ತಾ?

    ಮತ್ತೊಮ್ಮೆ ಸಂತ್ರಸ್ತೆಯ CrPC 164 ಹೇಳಿಕೆ ದಾಖಲಾಗುತ್ತಾ?

    ಬೆಂಗಳೂರು: ಮಾಜಿ ಸಚಿವರ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ನ್ಯಾಯಾಧೀಶರ ಮುಂದೆ ಮತ್ತೊಮ್ಮೆ ಸಿಆರ್ ಪಿಸಿ 164 ಹೇಳಿಕೆ ದಾಖಲಿಸುತ್ತಾರಾ ಅನ್ನೋ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ. ಇತ್ತ ಯುವತಿಯ ಪೋಷಕರು ಮತ್ತೊಮ್ಮೆ ಮಗಳ ಹೇಳಿಕೆಯನ್ನ ದಾಖಲಿಸಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

    ಯುವತಿ ಹೇಳಿಕೆ ದಾಖಲಿಸುವಾಗ ಕೆಪಿಸಿಸಿ ಕಾನೂನು ಘಟಕದ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಜೊತೆಯಲ್ಲಿದ್ರು ಎಂದು ಸಂತ್ರಸ್ತೆಯ ಪೋಷಕರು ಆರೋಪಿಸಿದ್ದಾರೆ. ಆರೋಪದ ಬೆನ್ನಲ್ಲೇ 164 ಸ್ಟೇಟ್ ಮೆಂಟ್ ಮಾಡುವಾಗ ನ್ಯಾಯಾಧೀಶರು, ಸಂತ್ರಸ್ತೆ ಮತ್ತು ತನಿಖಾಧಿಕಾರಿ ಮಾತ್ರ ಇರ್ತಾರೆ. ನ್ಯಾಯಾಧೀಶರು 164 ಅಡಿ ಹೇಳಿಕೆ ದಾಖಲಿಸುವಾಗ ಯಾರೂ ಒಳಗೆ ಹೋಗಲು ಸಾಧ್ಯವಿಲ್ಲ. ಪೋಷಕರು ಏನೇ ಆರೋಪ ಮಾಡಿದ್ರು, ನ್ಯಾಯಾಲಯವೇ ಅಂತಿಮ ಎಂದು ಸ್ಪಷ್ಟನೆ ನೀಡಿದ್ದರು.

    ಈ ಹಿನ್ನೆಲೆ ಪೋಷಕರು ಮತ್ತೊಮ್ಮೆ ಹೇಳಿಕೆ ದಾಖಲಿಸಿಕೊಳ್ಳಬೇಕೆಂದು ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆಗಳಿವೆ. ಇತ್ತ ಕೌನ್ಸಲಿಂಗ್ ನಲ್ಲಿ ಯುವತಿ ಸೂಕ್ತ ಉತ್ತರ ನೀಡಿಲ್ಲ ಎಂದು ಹೇಳಲಾಗುತ್ತಿದ್ದು, ಇಂದು ಬೌರಿಂಗ್ ಆಸ್ಪತ್ರೆಗೆ ಕರೆ ತರುವ ಸಾಧ್ಯತೆಗಳಿವೆ. ಕೌನ್ಸಲಿಂಗ್ ಬಳಿಕವೇ ಎಸ್‍ಐಟಿ ತಂಡ ಯುವತಿಯಿಂದ ಸಿಆರ್ ಪಿಸಿ 161 ಹೇಳಿಕೆ ಪಡೆದುಕೊಳ್ಳಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

  • ರಾಜಸ್ವ ಹಣ ದುರುಪಯೋಗ – ಮಂಡ್ಯದ ಏಳು ಮಂದಿಗೆ ಜೈಲು ಶಿಕ್ಷೆ

    ರಾಜಸ್ವ ಹಣ ದುರುಪಯೋಗ – ಮಂಡ್ಯದ ಏಳು ಮಂದಿಗೆ ಜೈಲು ಶಿಕ್ಷೆ

    ಮಂಡ್ಯ: ರಾಜಸ್ವ ಹಣ ದುರುಪಯೋಗ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ 7 ಜನ ಸಬ್ ರಿಜಿಸ್ಟ್ರಾರ್ ಕಚೇರಿ ಸಿಬ್ಬಂದಿಗೆ ಮಂಡ್ಯದ 1ನೇ ಹೆಚ್ಚುವರಿ ಸಿವಿಲ್ ಜೆಎಂಎಫ್‍ಸಿ ಕೋರ್ಟ್ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ.

    2006 ಕ್ಕೂ ಮೊದಲು ಮಂಡ್ಯದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಾಲ್ವರು ಉಪ ನೋಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ರಾಜಸ್ವ ಹಣವನ್ನು ತಮ್ಮ ಸ್ವಂತಕ್ಕೆ ಬಳಕೆ ಮಾಡಿಕೊಂಡು ಸರ್ಕಾರಕ್ಕೆ ಮೋಸ ಮಾಡಿರುವುದಾಗಿ ತಿಳಿದು ಬಂದಿದೆ. ಹೀಗಾಗಿ ತಲಾ 4 ವರ್ಷ ಜೈಲು ಹಾಗೂ ದಂಡವನ್ನು ನ್ಯಾಯಾಲಯ ವಿಧಿಸಿದೆ. ಈ ಪ್ರಕರಣದಲ್ಲಿ ಮೂವರು ಪತ್ರ ಬರಹಗಾರಗಾರರು ಭಾಗಿಯಾಗಿರುವ ಹಿನ್ನೆಲೆ ಅವರಿಗೆ ತಲಾ 5 ವರ್ಷ ಶಿಕ್ಷೆ ಹಾಗೂ 1 ಕೋಟಿ 29 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ನೀಡಲಾಗಿದೆ.

    ಎಸ್ಎನ್ ಪ್ರಭಾ, ಚೆಲುವರಾಜು, ಲೀಲಾವತಿ ಹಾಗೂ ಸುನಂದಾ ಶಿಕ್ಷೆಗೊಳಗಾದ ಉಪ ನೋಂದಣಾಧಿಕಾರಿಯಾಗಿದ್ದಾರೆ. ಬಿಕೆ ರಾಮರಾವ್, ನರಸಿಂಹಮೂರ್ತಿ ಹಾಗೂ ಚಂದ್ರಶೇಖರ್ ಪತ್ರಬರಹಗಾರರು. ಇವರುಗಳು ಒಟ್ಟು 154 ಪ್ರಕರಣಗಳಲ್ಲಿ ಹಣ ದುರುಪಯೋಗ ಮಾಡಿದ್ದಾರೆ ಎಂದು 2006 ರಲ್ಲಿ ಉಪ ನೋಂದಣಾಧಿಕಾರಿಯಾದ್ದ ನರಸಿಂಹಯ್ಯ ಎಂಬುವವರು ದೂರು ನೀಡಿದ್ದರು. ಈ ಸಂಬಂಧ ಮಂಡ್ಯದ ಪಶ್ಚಿಮ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು. ಸದ್ಯ ರಾಜ್ಯದ ವಿವಿಧ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ದೋಷಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.