ಮಂಗಳೂರು: ಮಳಲಿ ಮಸೀದಿ ಸರ್ವೆಗೆ ಆದೇಶ ನೀಡಲು ಕೋರಿ ವಿಶ್ವ ಹಿಂದೂ ಪರಿಷತ್(ವಿಹೆಚ್‌ಪಿ) ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮಂಗಳೂರು ಕೋರ್ಟ್ ನಾಳೆಗೆ ಮುಂದೂಡಿದೆ.
ವಿಹೆಚ್‌ಪಿ ಪರ ವಾದ ಮಂಡಿಸಿದ ವಕೀಲ ಚಿದಾನಂದ್, ಮಸೀದಿ ನವೀಕರಣ ಸಮಯದಲ್ಲಿ ಅಲ್ಲಿ ದೇವಸ್ಥಾನದ ಮಾದರಿ ಸಿಕ್ಕಿದೆ. ಇದೊಂದು ಜ್ಞಾನವಾಪಿ ಮಾದರಿ ಪ್ರಕರಣ. ಸತ್ಯಾಸತ್ಯತೆ ತಿಳಿಯಲು ಸರ್ವೆ ಕಾರ್ಯ ನಡೆಸಬೇಕು. ಕೋರ್ಟ್ ಕಮಿಷನರ್ ನೇತೃತ್ವದ ಸಮಿತಿ ರಚಿಸಬೇಕು ಎಂದು ಕೋರಿದ್ದಾರೆ.

ಇದಕ್ಕೆ ಮಸೀದಿ ಪರ ವಕೀಲರು ಆಕ್ಷೇಪಿಸಿದ್ದು, ಮಸೀದಿಗೆ 700 ವರ್ಷಗಳ ಇತಿಹಾಸ ಇದೆ. ಇದು ಸರ್ಕಾರಿ ಜಾಗದಲ್ಲಿರುವ ಮಸೀದಿ. ಮಳಲಿಯಲ್ಲಿ ಯಾವ ದೇಗುಲ ಇತ್ತು ಎಂಬ ಬಗ್ಗೆ ಸಾಕ್ಷ್ಯ ಒದಗಿಸಲಿ. ಕೋರ್ಟ್ ವಿಹೆಚ್‌ಪಿ ಅರ್ಜಿಯನ್ನು ವಜಾ ಮಾಡಬೇಕು. ಮಸೀದಿ ನವೀಕರಣಕ್ಕೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಉಡುಪಿಯಲ್ಲಿ ದಲಿತ್ Vs ಎಸ್‌ಡಿಪಿಐ ಜಟಾಪಟಿ
ಇದೇ ವೇಳೆ ಮಳಲಿಯಲ್ಲಿ ಶಾಂತಿ ಸಭೆ ನಡೆಸಿದ ಶಾಸಕ ಭರತ್ ಶೆಟ್ಟಿ ವಿರುದ್ಧ ರಾಷ್ಟ್ರೀಯ ಕೇಸರಿ ಒಕ್ಕೂಟ ಗರಂ ಆಗಿದೆ. ಒಂದು ಹಿಡಿ ಮಣ್ಣು ಕೊಡಲ್ಲ ಎಂದು ಎಸ್‌ಡಿಪಿಐ ಹೇಳಿದೆ. ಇಷ್ಟೆಲ್ಲಾ ಆದರೂ ನೀವ್ಯಾಕೆ ಶಾಂತಿ ಸಭೆ ನಡೆಸಿದ್ದು? ಮುಸ್ಲಿಂ ವೋಟು ಕೈ ತಪ್ಪುವ ಭಯವೇ? ಎಂದು ರಾಷ್ಟ್ರೀಯ ಕೇಸರಿ ಒಕ್ಕೂಟ ಪ್ರಶ್ನಿಸಿದೆ.
ಬೆಳಗಾವಿ ಮಸೀದಿ ವಿಚಾರವಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು ವದಂತಿ ಹಬ್ಬಿಸಬಾರದು ಎಂದು ಶಾಸಕ ಅಭಯ್ ಪಾಟೀಲ್ ವಿರುದ್ಧ ಫಿರೋಜ್ ಶೇಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು 1991ರ ಪೂಜಾ ಸ್ಥಳಗಳ ಕಾಯ್ದೆ ಓದಬೇಕು ಎಂದಿದ್ದಾರೆ. ಈ ನಡುವೆ, ದೇಗುಲ ಕುರುಹು ಕಂಡ ಮಸೀದಿಗಳನ್ನು ಮುಸ್ಲಿಮರು ತಗಾದೆ ಮಾಡದೇ ಬಿಟ್ಟುಕೊಡಬೇಕು ಎಂದು ಸಚಿವ ಈಶ್ವರಪ್ಪ ಒತ್ತಾಯಿಸಿದ್ದಾರೆ.

ಉಡುಪಿಯ ಕಂಚಿನಡ್ಕದಲ್ಲಿರುವ ತುಳುನಾಡಿನ ಕಾರಣಿಕದ ಬಬ್ಬುಸ್ವಾಮಿ ದೇವಾಲಯಕ್ಕೆ ಮೇಲ್ಛಾವಣಿ ಅಳವಡಿಸಲು ಎಸ್‌ಡಿಪಿಐ ಅಡ್ಡಿಪಡಿಸಿರುವುದಕ್ಕೆ ದಲಿತರು ಆಕ್ರೋಶ ಹೊರಹಾಕಿದ್ದಾರೆ. ಒಂದು ವಾರದಲ್ಲಿ ಪಂಚಾಯತ್ ಈ ಪ್ರಕರಣವನ್ನು ಇತ್ಯರ್ಥಗೊಳಿಸದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಶಾಹಿ ಮಸೀದಿಯನ್ನು ಬ್ರಾಹ್ಮಣರು, ಮುಸ್ಲಿಮರು ಸೇರಿಯೇ ಕಟ್ಟಿದ್ದಾರೆ: ದಸ್ತಗೀರ್ ಅಗಾ
































