Tag: court

  • ಶುಕ್ರವಾರ ಬೆಂಗಳೂರಿನ ಕೋರ್ಟ್‍ನಲ್ಲಿ ರಾಹುಲ್ ಗಾಂಧಿ ವಿಚಾರಣೆ

    ಶುಕ್ರವಾರ ಬೆಂಗಳೂರಿನ ಕೋರ್ಟ್‍ನಲ್ಲಿ ರಾಹುಲ್ ಗಾಂಧಿ ವಿಚಾರಣೆ

    ಬೆಂಗಳೂರು: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು (Rahul Gandhi) ಮಾನನಷ್ಟ (Defamation Case) ಜಾಹಿರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಲು ಶುಕ್ರವಾರ (ಜೂ.7) ರಂದು ನಗರದ ಸಿಟಿ ಸಿವಿಲ್ ಕೋರ್ಟ್‍ಗೆ ಆಗಮಿಸಲಿದ್ದಾರೆ. ಬೆಳಗ್ಗೆ 10:30ಕ್ಕೆ ಅವರು ಬೆಂಗಳೂರಿಗೆ ಆಗಮಿಸಲಿದ್ದು, ಬಳಿಕ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.

    ಬಿಜೆಪಿ ಸಲ್ಲಿಸಿದ್ದ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂ.1ರಂದು ವಿಚಾರಣೆ ನಡೆಸಿದ್ದ 42ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಜಾಮೀನು ಮಂಜೂರು ಮಾಡಿತ್ತು. ಅಲ್ಲದೇ ಗೈರಾಗಿದ್ದ ರಾಹುಲ್ ಗಾಂಧಿಯವರಿಗೆ ಜೂನ್ 7 ರಂದು ಕಡ್ಡಾಯವಾಗಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕೆಂದು ಆದೇಶಿಸಿತ್ತು.

    ಈ ಹಿಂದೆ ಸಿದ್ದರಾಮಯ್ಯ, ಶಿವಕುಮಾರ್ ಮತ್ತು ರಾಹುಲ್ ಗಾಂಧಿ ಅವರಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು. ಈ ಕಾರಣಕ್ಕೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಕೋರ್ಟ್ ಹಾಜರಾಗಿದ್ದರು. ಆದರೆ ರಾಹುಲ್ ಗಾಂಧಿಯವರು ಗೈರಾಗಿದ್ದರು.

    ವಿಚಾರಣೆಯ ಸಂದರ್ಭದಲ್ಲಿ ಗಾಂಧಿ ಪರ ವಕೀಲರು ಐ.ಎನ್.ಡಿ.ಐ.ಎ ಮೈತ್ರಿಕೂಟದ ಸಭೆಯಲ್ಲಿ ಭಾಗಿಯಾಗಿರುವುದರಿಂದ ಅವರಿಗೆ ಹಾಜರಾತಿಯಿಂದ ವಿನಾಯಿತಿ ನೀಡುವಂತೆ ಕೋರಿದ್ದರು. ಆದರೆ ನ್ಯಾಯಾಲಯವು ಮನವಿಯನ್ನು ನಿರಾಕರಿಸಿತ್ತು. ಮಧ್ಯಾಹ್ನದ ವಿಚಾರಣೆಯನ್ನು ಮುಂದೂಡಿ ನಂತರ ಜೂನ್ 7 ರಂದು ಖುದ್ದು ಹಾಜರಾಗಬೇಕೆಂದು ಸೂಚಿಸಿ ವಿಚಾರಣೆಯನ್ನು ಮುಂದೂಡಿತ್ತು.

    2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಮುನ್ನಾದಿನದಂದು ಕಾಂಗ್ರೆಸ್ ಪಕ್ಷದ ಜಾಹೀರಾತುಗಳು ಮತ್ತು ಪ್ರಚಾರದ ಘೋಷಣೆಗಳನ್ನು ವಿರೋಧಿಸಿ ಸಿದ್ದರಾಮಯ್ಯ, ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕ ಕೇಶವ ಪ್ರಸಾದ್ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

    ಬಿಜೆಪಿಯು ಸಾರ್ವಜನಿಕ ಕಾಮಗಾರಿಗಳ ನಿರ್ವಹಣೆಗಾಗಿ ಗುತ್ತಿಗೆದಾರರು ಮತ್ತು ಇತರರಿಂದ 40% ಕಮಿಷನ್ ಮಾಡುತ್ತಿದೆ ಎಂದು ಜಾಹೀರಾತುಗಳಲ್ಲಿ ಕಾಂಗ್ರೆಸ್ ಆರೋಪಿಸಿತ್ತು. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ತನ್ನ ಪಕ್ಷದ ಸದಸ್ಯರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ನಾಯಕರು ಸುಳ್ಳು ಜಾಹೀರಾತನ್ನು ಪ್ರಕಟಿಸಿದೆ ಎಂದು ಬಿಜೆಪಿ ತನ್ನ ದೂರಿನಲ್ಲಿ ಆರೋಪಿಸಿತ್ತು.

    ರಾಹುಲ್ ಗಾಂಧಿಯವರು ವಿಚಾರಣೆ ಬಳಿಕ 11:30ಕ್ಕೆ ಭಾರತ್ ಜೋಡೋ ಭವನದಲ್ಲಿ ಲೋಕಸಭಾ ಚುನಾವಣೆಯಲ್ಲಿ ವಿಜೇತ, ಪರಾಜಿತ ಅಭ್ಯರ್ಥಿಗಳ ಜೊತೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಉಪಸ್ಥಿತರಿರಲಿದ್ದಾರೆ.

  • ಪ್ರಜ್ವಲ್ ರೇವಣ್ಣ ಮತ್ತೆ 4 ದಿನ ಪೊಲೀಸ್ ಕಸ್ಟಡಿಗೆ

    ಪ್ರಜ್ವಲ್ ರೇವಣ್ಣ ಮತ್ತೆ 4 ದಿನ ಪೊಲೀಸ್ ಕಸ್ಟಡಿಗೆ

    ಬೆಂಗಳೂರು: ಅತ್ಯಾಚಾರ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು ಮತ್ತೆ 4 ದಿನ ಪೊಲೀಸ್ ಕಸ್ಟಡಿಗೆ ನೀಡಿ ಎಸಿಎಂಎಂ 42ನೇ ನ್ಯಾಯಾಲಯ ಆದೇಶ ಕೊಟ್ಟಿದೆ.

    ಆರೋಪಿ ಪ್ರಜ್ವಲ್ ರೇವಣ್ಣ ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗಿದ್ದ ಹಿನ್ನೆಲೆಯಲ್ಲಿ ಇಂದು ಮತ್ತೆ ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ಜೂನ್ 10 ರವರೆಗೆ ಕಸ್ಟಡಿಗೆ ನೀಡಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ರೂ. ಹಗರಣಕ್ಕೆ ತಲೆದಂಡ – ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ

    ಎಸ್‍ಐಟಿ ಪರ ವಕೀಲರು ತನಿಖೆಗೆ ಸಮಯ ಸಾಕಾಗಿಲ್ಲ. ಮೊಬೈಲ್ ವಿಚಾರವಾಗಿ ಮಾಹಿತಿ ಇನ್ನೂ ಕೂಡ ಸಿಕ್ಕಿಲ್ಲ. ಮುಖ್ಯವಾಗಿ ಟೈಂ ಶಾರ್ಟೆಜ್ ಆಗಿದೆ. ವಿದೇಶದಲ್ಲಿ ಇದ್ದಾಗ ಹಣ ಹೇಗೆ ಸಂದಾಯ ಆಗಿದೆ ಗೊತ್ತಾಗಿಲ್ಲ. ಇವರು ತಲೆಮರೆಸಿಕೊಂಡಿದ್ದ ಆರೋಪಿಯಾಗಿದ್ದು, ಇವರಿಗೆ ಹಣ ನೀಡಿದವರು ಯಾರು ಗೊತ್ತಾಗಬೇಕು. ಕೆಲವು ಸಂತ್ರಸ್ತೆಯರು, ಸಾಕ್ಷಿಗಳನ್ನು ಮುಖಾಮುಖಿ ಮಾಡಬೇಕಾಗಿದೆ. ಏನು ಕೇಳಿದ್ರೂ ಸರಿಯಾದ ಉತ್ತರವನ್ನು ನೀಡಿಲ್ಲ. ನಾನು ಏನು ಮಾಡಿಲ್ಲ ಅಂತ ಪ್ರಜ್ವಲ್ ಹೇಳುತ್ತಾ ಇದ್ದಾರೆ. ಹೊಟ್ಟೆ ನೋವು ಅಂತ ಆಸ್ಪತ್ರೆಗೆ ಹೋಗಿದ್ದರು ಹೀಗಾಗಿ ಜೂನ್ 10 ರ ತನಕ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು.ಈ ಮನವಿಯನ್ನು ಪುರಸ್ಕರಿಸಿದ ಕೋರ್ಟ್ ಮತ್ತೆ 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

  • ಡ್ರಗ್ಸ್ ಪ್ರಕರಣ: ನಟಿ ಹೇಮಾರನ್ನು ಸಿಸಿಬಿ ವಶಕ್ಕೆ ನೀಡಿದ ಕೋರ್ಟ್

    ಡ್ರಗ್ಸ್ ಪ್ರಕರಣ: ನಟಿ ಹೇಮಾರನ್ನು ಸಿಸಿಬಿ ವಶಕ್ಕೆ ನೀಡಿದ ಕೋರ್ಟ್

    ರೇವ್ ಪಾರ್ಟಿಯಲ್ಲಿ (Rave Party) ಡ್ರಗ್ಸ್ (Drugs) ಸೇವಿಸಿದ್ದಾರೆ ಎಂದು ಆರೋಪಿಸಿ ಬಂಧನಕ್ಕೆ ಒಳಗಾಗಿರೋ ನಟಿ ಹೇಮಾರನ್ನು (Hema) ಇಂದು ಸಿಸಿಬಿ ಅಧಿಕಾರಿಗಳು ಆನೇಕಲ್ ಕೋರ್ಟ್‌ಗೆ (Court) ನಟಿ ಹಾಜರು ಪಡಿಸಿದ್ದರು. ಹೆಚ್ಚುವರಿ ವಿಚಾರಣೆಗಾಗಿ ಸಿಸಿಬಿ ವಶಕ್ಕೆ ನೀಡಬೇಕು ಎಂದು ಅಧಿಕಾರಿಗಳು ಕೋರ್ಟ್‍ಗೆ ಮನವಿ ಮಾಡಿದ್ದರು. ವಾದ ಆಲಿಸಿದ ನಾಲ್ಕನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು 24 ಗಂಟೆಗಳ ಕಾಲ ಸಿಸಿಬಿ ವಶಕ್ಕೆ ಹೇಮಾರನ್ನು ಕೊಟ್ಟಿದೆ.

    ಕೋರ್ಟಿಗೆ ಬರುತ್ತಿದ್ದಂತೆಯೇ ಮತ್ತೆ ಮಾಧ್ಯಮಗಳ ಮೇಲೆ ಹೇಮಾ ಗರಂ ಆದರು. ‘ನಾನು ಮರ್ಡರ್ ಮಾಡಿದ್ದೀನಾ. ಅರ್ಧ ರಾತ್ರಿಯಲ್ಲಿ ಕರ್ಕೊಂಡು ಹೋಗಿ ಕಾಡಿನಲ್ಲಿ ಸಹಿ ಮಾಡಿಕೊಂಡಿಸಿಕೊಂಡಿದ್ದಾರೆ. ನಾನು ಏನು ಮಾಡಿದ್ದೀನಿ. ನನ್ನನ್ನು ನಡುರಾತ್ರಿಯಲ್ಲಿ ಯಾಕೆ ಹಂಗೆ ಕರೆದುಕೊಂಡು ಹೋದ್ರು. ಇಲ್ಲಿಯ ವರೆಗೆ ನೀವು ಮಾಧ್ಯಮದವರು ಮಾತನಾಡಿಲ್ಲ. ಈಗಲಾದ್ರು ಮಾತನಾಡಿ’ ಎಂದು ಗರಂ ಆದರು.

    ಹೆಚ್ಚಿನ ವಿಚಾರಣೆಗಾಗಿ ಹೇಮಾರನ್ನು ಸಿಸಿಬಿ ವಶಕ್ಕೆ ನೀಡುವಂತೆ ಕೋರ್ಟಿಗೆ ಸಿಸಿಬಿ ಪರ ವಕೀಲರು ಮನವಿ ಮಾಡಿಕೊಂಡರು. ಪಬ್ಲಿಕ್‌ ಪ್ರಾಸಿಕ್ಯೂಟರ್‌ ವಾದಕ್ಕೆ ಹೇಮಾ ಪರ ವಕೀಲರ ಆಕ್ಷೇಪ ವ್ಯಕ್ತಪಡಿಸಿದರು. ಸಂತೋಷ ಎಂಬ ಖಾಸಗಿ ಆಸ್ಪತ್ರೆಯಲ್ಲಿ ಬ್ಲಡ್ ಟೆಸ್ಟ್ ಮಾಡಲಾಗಿದೆ. ನ್ಯಾಯಾಲಯ ಖಾಸಗಿ ಆಸ್ಪತ್ರೆ ವರದಿಗೆ ಮನ್ನಣೆ ನೀಡಬಾರದು. ಎಫ್ಎಸ್ಎಲ್ ವರದಿ ಇನ್ನೂ ಬಂದಿಲ್ಲ. ಹಾಗಾಗಿ ಸಿಸಿಬಿ ಕಸ್ಟಡಿಗೆ ನೀಡಬಾರದು ಎಂದು ನ್ಯಾಯಾಧೀಶರಿಗೆ ಮನವಿ ಮಾಡಿದರು ಹೇಮಾ ಪರ ವಕೀಲರು.  ವಾದ ಪ್ರತಿವಾದ ಅಲಿಸಿದ ನ್ಯಾಯಾಧೀಶರು ಮಧ್ಯಾಹ್ನ ಮೂರು ಗಂಟೆಗೆ ಆದೇಶ ಕಾಯ್ದಿರಿಸಿದ್ದರು.

    ಮೂರು ಗಂಟೆಯ ನಂತರ ಆನೇಕಲ್ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಎ.ಎಸ್ ಸಲ್ಮಾ ಅವರು 24 ಗಂಟೆಗಳ ಕಾಲ ಸಿಸಿಬಿ ವಶಕ್ಕೆ ನೀಡಿ ಆದೇಶ ಹೊರಡಿಸಿದರು. ಸಿಸಿಬಿ ವಶಕ್ಕೆ ಪಡೆದ ನಂತರ ಕೋರ್ಟ್‌ನಿಂದ ಹೊರಬಂದ ವೇಳೆ ನ್ಯಾಯ ಸಿಗುವ ಭರವಸೆ ವ್ಯಕ್ತಪಡಿಸಿದರು ಹೇಮಾ ಮತ್ತು ಆಕೆಯ ವಕೀಲ ಪಟಾಪಟ್ ಪ್ರಕಾಶ್. ಬಳಿಕ ವಿಶೇಷ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಹಾಕಲಾಗುವುದು ಎಂದರು.

     

    ಹೇಮಾರನ್ನು ನಾಳೆ ಸಂಜೆ 6 ಗಂಟೆ ವರೆಗೆ ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಕಸ್ಟಡಿಗೆ ನೀಡಲಾಗಿದೆ. ನಾಳೆ ಸಂಜೆ 6 ಗಂಟೆ ವೇಳೆಗೆ ಮತ್ತೆ ನ್ಯಾಯಾಲಯದ ಮುಂದೆ  ಹಾಜರುಪಡಿಸಲಿದ್ದಾರೆ ಸಿಸಿಬಿ ಪೊಲೀಸರು. ಹೇಮಾರನ್ನು ಕೋರ್ಟಿಗೆ ಹಾಜರು ಪಡಿಸಿದಾಗ  ಹೈದ್ರಾಬಾದ್‌ನಿಂದ ಹೇಮಾ ಪುತ್ರಿ ಮತ್ತು ಕುಟುಂಬ ಆಗಮಿಸಿತ್ತು.  ಕೋರ್ಟ್ ಹಾಲ್‌ನಲ್ಲಿ ನಿಂತು ಪುತ್ರಿ ಮತ್ತು ಕುಟುಂಬಸ್ಥರು ಕಾಯುತ್ತಿದ್ದರು.

  • ಅಕ್ರಮ ಹಣ ವರ್ಗಾವಣೆ ಪ್ರಕರಣ- ಶೋಭಾ ಕರಂದ್ಲಾಜೆಗೆ ಬಿಗ್ ರಿಲೀಫ್

    ಅಕ್ರಮ ಹಣ ವರ್ಗಾವಣೆ ಪ್ರಕರಣ- ಶೋಭಾ ಕರಂದ್ಲಾಜೆಗೆ ಬಿಗ್ ರಿಲೀಫ್

    ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ (Money laundering case) ಸಂಸದೆ ಶೋಭಾ ಕರಂದ್ಲಾಜೆ (Shobha Karandlaje) ಅವರಿಗೆ 82ನೇ ಜನಪ್ರತಿನಿಧಿಗಳ ನ್ಯಾಯಾಲಯ (Court) ಬಿಗ್ ರಿಲೀಫ್ ನೀಡಿದೆ.

    ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 24ನೇ ಆರೋಪಿಯಾಗಿದ್ದ ಅವರು, ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ಪ್ರಕರಣದಿಂದ ಬಿಡುಗಡೆಗೊಳಿಸಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ಪ್ರಕರಣದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ.

    ಏನಿದು ಪ್ರಕರಣ?: 2014ರ ಮಾರ್ಚ್‍ನಲ್ಲಿ, 24 ಜನರ ವಿರುದ್ಧ ಮನಿ ಲಾಂಡರಿಂಗ್ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಕೆಐಡಿಬಿಯ 360 ಎಕರೆಯ ಡಿನೋಟಿಫಿಕೇಷನ್ ಅಕ್ರಮಕ್ಕೆ ಸಂಬಂಧಿಸಿದಂತೆ ಇ.ಡಿ ಪ್ರಕರಣ ದಾಖಲಿಸಿತ್ತು. ಖಾಸಗಿ ಕಂಪೆನಿ ಮುಖಾಂತರ ಶೋಭಾ ಕರಂದ್ಲಾಜೆ ಅವರ ಖಾತೆಗೆ ಅಕ್ರಮವಾಗಿ ಹಣ ವರ್ಗಾವಣೆಯಾಗಿದೆ ಎಂಬ ಆರೋಪ ಕೇಳಿಬಂದಿತ್ತು.

    ಪ್ರಕರಣದಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸಹ ಸೇರಿದ್ದಾರೆ. ಶೋಭಾ ಕರಂದ್ಲಾಜೆಯವರ ವಿರುದ್ಧ 44 ಕೋಟಿ ರೂ.ಗಳ ಹಗರಣದ ಹಣವನ್ನು ಲಾಂಡರಿಂಗ್ ಮಾಡಿದ್ದಾರೆ ಎಂದು ಇಡಿ ಅವರ ವಿರುದ್ಧ ಪ್ರಕರಣ ದಾಖಲಿಸಿತ್ತು.

  • ಅತ್ಯಾಚಾರಿ ಆರೋಪಿ ಪ್ರಜ್ವಲ್‍ಗೆ ಮೆಡಿಕಲ್ ಟೆಸ್ಟ್

    ಅತ್ಯಾಚಾರಿ ಆರೋಪಿ ಪ್ರಜ್ವಲ್‍ಗೆ ಮೆಡಿಕಲ್ ಟೆಸ್ಟ್

    ಬೆಂಗಳೂರು: ಅತ್ಯಾಚಾರಿ ಆರೋಪಿ ಪ್ರಜ್ವಲ್ ರೇವಣ್ಣಗೆ (Prajwal Revanna) ಇಂದು ಮೆಡಿಕಲ್ ಟೆಸ್ಟ್ ನಡೆಸಲಾಯಿತು.

    ಎಸ್‍ಐಟಿ ಅಧಿಕಾರಿಗಳು ಅಂಬುಲೆನ್ಸ್ ನಲ್ಲಿ ಮೆಡಿಕಲ್ ಟೆಸ್ಟ್ ಗೆ (Medical Test) ಕರೆದೊಯ್ದರು. ಬಳಿಕ ಬೌರಿಂಗ್ ಆಸ್ಪತ್ರೆಯಲ್ಲಿ ಜನರಲ್ ಚೆಕಪ್ ಜೊತೆಗೆ ವಿಶೇಷ ಮೆಡಿಕಲ್ ಟೆಸ್ಟ್ ಗೆ ಪ್ರಜ್ವಲ್ ರೇವಣ್ಣ ಅವರನ್ನು ಒಳಪಡಿಸಲಾಯಿತು.

    ಕೋರ್ಟಿಗೆ ಸಬ್ಮಿಟ್ ಮಾಡಲು ಮೂರ್ನಾಲ್ಕು ರೀತಿಯ ಟೆಸ್ಟ್ ಗಳಿಗೆ ಪೊಲೀಸರು ರಿಕ್ವೆಸ್ಟ್ ಮಾಡಿದ್ದರು. ಪೊಲೀಸರು ರಿಕ್ವೆಸ್ಟ್ ಕೊಟ್ಟಿರುವ ಟೆಸ್ಟ್ ಗಳನ್ನು ವೈದ್ಯರು ಮಾಡಿದ್ದಾರೆ. ಮೆಡಿಕಲ್ ಕಾಲೇಜಿನ ಡೀನ್, ಸೂಪರಿಂಡೆಂಟ್ ಸಮ್ಮುಖದಲ್ಲಿ ಈ ಟೆಸ್ಟ್ ನಡೆಸಲಾಯಿತು.

    ಇದೇ ವೇಳೆ ಅತ್ಯಾಚಾರಕ್ಕೆ ಸಂಬಂಧಿಸಿದ ಟೆಸ್ಟ್ ಬಗ್ಗೆಯೂ ಪೊಲೀಸರು ಮನವಿ ಮಾಡಿಕೊಂಡರು. ಹೀಗಾಗಿ ಪೊಲೀಸರ ಮನವಿ ಮೇರೆಗೆ ವೈದ್ಯರು ಕೆಲವು ಸ್ಯಾಂಪಲ್‍ಗಳನ್ನು ಸಂಗ್ರಹಿಸಿದ್ದಾರೆ. ಈ ಮೂಲಕ ಸ್ಥಳ ಮಹಜರಿಗೂ ಮುನ್ನ ವಿವಿಧ ಟೆಸ್ಟ್ ಗಳನ್ನ ಮಾಡಿ ಸಾಕ್ಷ್ಯ ಸಂಗ್ರಹಿಸಲು ಎಸ್‍ಐಟಿ ಮುಂದಾಗಿದೆ.

    ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವೈದ್ಯರು, ಕೋರ್ಟ್‍ಗೆ ನೀಡಬೇಕಾಗಿರುವ ಮೂರ್ನಾಲ್ಕು ರೀತಿಯ ಟೆಸ್ಟ್‍ಗಳನ್ನು ಮಾಡಿದ್ದೇವೆ. ಈ ಟೆಸ್ಟ್ ನ ರಿಪೋರ್ಟ್‍ಗಳನ್ನು ಎಸ್‍ಐಟಿ ಅಧಿಕಾರಿಗಳಿಗೆ ಕೊಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

  • ‘ವಿಕೃತ ಕಾಮಿ, ಕೊನೆಯ ಉಸಿರಿರೋವರೆಗೂ ಶಿಕ್ಷೆ ನೀಡೋ ಕೇಸ್’- ಕೋರ್ಟ್‍ನಲ್ಲಿ ವಾದ, ಪ್ರತಿವಾದ ಹೇಗಿತ್ತು?

    ‘ವಿಕೃತ ಕಾಮಿ, ಕೊನೆಯ ಉಸಿರಿರೋವರೆಗೂ ಶಿಕ್ಷೆ ನೀಡೋ ಕೇಸ್’- ಕೋರ್ಟ್‍ನಲ್ಲಿ ವಾದ, ಪ್ರತಿವಾದ ಹೇಗಿತ್ತು?

    ಬೆಂಗಳೂರು: ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು 42ನೇ ಎಸಿಎಂಎಂ ಕೋರ್ಟ್ 6 ದಿನ ವಿಶೇಷ ತನಿಖಾ ತಂಡದ ಕಸ್ಟಡಿಗೆ ನೀಡಿದೆ.

    ವಿಚಾರಣೆ ವೇಳೆ ಎಸ್‍ಐಟಿ 15 ದಿನ ಕಸ್ಟಡಿಗೆ ನೀಡುವಂತೆ ಮನವಿ ಮಾಡಿತ್ತು. ಮಧ್ಯಾಹ್ನದ ನಂತರ ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್ 6 ದಿನ ಎಸ್‍ಐಟಿ ಕಸ್ಟಡಿಗೆ ನೀಡಿ ಆದೇಶ ಪ್ರಕಟಿಸಿತು. ಇದನ್ನೂ ಓದಿ: ಭವಾನಿ ರೇವಣ್ಣ ಜಾಮೀನು ಅರ್ಜಿ ವಜಾ – ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ

    ಪೆನ್ ಡ್ರೈವ್‌ ಪ್ರಕರಣ ಹೊರಬರುತ್ತಿದ್ದಂತೆಯೇ ಪ್ರಜ್ವಲ್ ರೇವಣ್ಣ ಅವರು ತಲೆಮರೆಸಿಕೊಂಡು ಬರೋಬ್ಬರಿ 34 ದಿನಗಳ ಬಳಿಕ ಗುರುವಾರ ಬೆಂಗಳೂರಿಗೆ ಆಗಮಿಸಿದ್ದರು. ಜರ್ಮನಿಯ (Germany) ಮ್ಯೂನಿಕ್‍ನಿಂದ ಲುಫ್ತಾನ್ಸಾ ಏರ್ ಲೈನ್ಸ್ ಮೂಲಕ ಶುಕ್ರವಾರ ಮಧ್ಯರಾತ್ರಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಎಸ್‍ಐಟಿ ಅಧಿಕಾರಿಗಳು ಬಂಧಿಸಿದರು. ಬಳಿಕ ಎಸ್‍ಐಟಿ ಕಚೇರಿಗೆ ಪ್ರಜ್ವಲ್ ರೇವಣ್ಣ ಅವರನ್ನು ಅಧಿಕಾರಿಗಳು ಕರೆದೊಯ್ದರು. ಇಂದು ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ನಂತರ 42ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.

    ಎಸ್‍ಐಟಿ ಪರ ವಕೀಲರ ವಾದವೇನು?:
    ಈ ಪ್ರಕರಣ ಸಾಕಷ್ಟು ಗಂಭೀರವಾಗಿದೆ. ಕೊನೆಯ ಉಸಿರಿರೋವರೆಗೂ ಶಿಕ್ಷೆ ಕೊಡಬೇಕಾದ ಪ್ರಕರಣ ಇದಾಗಿದ್ದು, ಪ್ರಜ್ವಲ್ ವಿಕೃತ ಕಾಮಿ ಎಂದರೂ ತಪ್ಪಾಗಲ್ಲ. ಮಹಿಳೆಯರ ಮುಖ ಕಾಣುವಂತೆ ವಿಡಿಯೋ ಮಾಡಿದ್ದಾನೆ. ಇಂತಹ ವ್ಯಕ್ತಿಗೆ ಯಾವ ಮುಲಾಜು ತೋರಿಸಬಾರದು. ಸಾಮಾನ್ಯ ಆರೋಪಿಗಳ ರೀತಿ ನಡೆಸಿಕೊಳ್ಳಬೇಕು. ವಿಸ್ತೃತ ವಿಚಾರಣೆಗಾಗಿ ಈತನನ್ನು 15 ದಿನ ಕಸ್ಟಡಿಗೆ ಕೊಡಿ. ಮೊಬೈಲ್ ಸೇರಿ ಕೆಲ ವಸ್ತುಗಳನ್ನು ವಶಕ್ಕೆ ಪಡೆಯಬೇಕು. ಪ್ರಜ್ವಲ್ ಮತ್ತು ಗೆಳೆಯ ಮಧುಗೆ ಮಾತ್ರ ಮೊಬೈಲ್ ನೋಡಲು ಅವಕಾಶವಿತ್ತು. ಇಬ್ಬರಲ್ಲಿ ಯಾರು ವೀಡಿಯೋ ವೈರಲ್ ಮಾಡಿದ್ದಾರೆ ಗೊತ್ತಾಗಬೇಕು. ಇಷ್ಟು ದಿನ ಯಾವ ದೇಶದಲ್ಲಿದ್ದ.. ಏನ್ ಮಾಡ್ತಿದ್ದ ಅನ್ನೋದು ಗೊತ್ತಾಗಬೇಕು ಎಂದು ಎಸ್‍ಐಟಿ ಪರ ವಕೀಲರು ವಾದಿಸಿದರು.

    ಪ್ರಜ್ವಲ್ ಪರ ವಕೀಲರ ವಾದ ಏನು?: 
    ನನ್ನ ಕಕ್ಷಿದಾರನಿಗೆ ಅವಮಾನ ಮಾಡಬಾರದು. ಇದೇ ಕೇಸ್‍ನಲ್ಲಿ ಎ1 ಆರೋಪಿಗೆ ಜಾಮೀನು ಸಿಕ್ಕಿದೆ. ಎಸ್‍ಐಟಿ ಮುಂದೆ ಪ್ರಜ್ವಲ್ ಬಂದು ಶರಣಾಗಿದ್ದಾರೆ. ಪ್ರಜ್ವಲ್ ಓಡಿ ಹೋಗಲ್ಲ. ಜವಾಬ್ದಾರಿ ಇರೋ ವ್ಯಕ್ತಿ. ಪೊಲೀಸರ ತನಿಖೆಗೆ ಪ್ರಜ್ವಲ್ ಸಹಕಾರ ಕೊಡುತ್ತಾರೆ. ಕೇವಲ ಒಂದು ದಿನ ಪೊಲೀಸ್ ಕಸ್ಟಡಿಗೆ ಕೊಡಿ. ಒಂದು ದಿನದಲ್ಲಿ ವೈದ್ಯಕೀಯ ಪರೀಕ್ಷೆ ಮಾಡಬಹುದು ಎಂದು ಪ್ರಜ್ವಲ್ ಪರ ವಕೀಲರ ಕೋರ್ಟ್‍ಗೆ ಮನವಿ ಮಾಡಿದರು.

  • ಪ್ರಜ್ವಲ್‌ ರೇವಣ್ಣ 6 ದಿನ ಎಸ್‌ಐಟಿ ಕಸ್ಟಡಿಗೆ

    ಪ್ರಜ್ವಲ್‌ ರೇವಣ್ಣ 6 ದಿನ ಎಸ್‌ಐಟಿ ಕಸ್ಟಡಿಗೆ

    ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna) ಅವರನ್ನು 42ನೇ ಎಸಿಎಂಎಂ ಕೋರ್ಟ್‌ 6  ದಿನ ವಿಶೇಷ ತನಿಖಾ ತಂಡದ (SIT) ಕಸ್ಟಡಿಗೆ ನೀಡಿದೆ.

    ಜರ್ಮನಿಯ ಮ್ಯೂನಿಕ್‌ನಿಂದ (Munich Airport) ತಡರಾತ್ರಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ (Bengaluru Airport) ಇಳಿದ ಪ್ರಜ್ವಲ್‌ ಅವರನ್ನು ಪೊಲೀಸರು ಬಂಧಿಸಿ ಸಿಐಡಿ, ಎಸ್‌ಐಟಿ ಕಚೇರಿಗೆ ಕರೆ ತಂದರು.

    ಎಸ್‌ಐಟಿ ಕಚೇರಿಯಲ್ಲೇ ರಾತ್ರಿ ಕಳೆದ ಪ್ರಜ್ವಲ್‌ ಅವರನ್ನು ಇಂದು ಬೆಳಗ್ಗೆ ವೈದ್ಯಕೀಯ ಪರೀಕ್ಷೆಗೆ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆ ತುರ್ತು ನಿಗಾ ಘಟಕದ ಕಟ್ಟಡದಲ್ಲಿ ಬಿಪಿ, ಶುಗರ್, ಪಲ್ಸ್, ಹಾರ್ಟ್ ರೇಟ್, ಯೂರಿನ್, ರಕ್ತ ಪರೀಕ್ಷೆ ನಡೆಸಲಾಯಿತು.

    ಈ ಪರೀಕ್ಷೆಯ ನಂತರ ಪೊಲೀಸರು 42ನೇ ಎಸಿಎಂಎಂ ಕೋರ್ಟ್‌ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ವಿಚಾರಣೆ ವೇಳೆ ಎಸ್‌ಐಟಿ 15 ದಿನ ಕಸ್ಟಡಿಗೆ ನೀಡುವಂತೆ ಮನವಿ ಮಾಡಿತ್ತು.  ಮಧ್ಯಾಹ್ನದ ನಂತರ ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್‌ 6  ದಿನ ಎಸ್‌ಐಟಿ ಕಸ್ಟಡಿಗೆ ನೀಡಿ ಆದೇಶ ಪ್ರಕಟಿಸಿತು.

  • ಎಎಪಿ ಸಚಿವೆ ಅತಿಶಿಗೆ ಕೋರ್ಟ್ ಸಮನ್ಸ್

    ಎಎಪಿ ಸಚಿವೆ ಅತಿಶಿಗೆ ಕೋರ್ಟ್ ಸಮನ್ಸ್

    ನವದೆಹಲಿ: ಬಿಜೆಪಿಯ ಮಾಧ್ಯಮ ಮುಖ್ಯಸ್ಥ ಪ್ರವೀಣ್ ಶಂಕರ್ ಕಪೂರ್ (Praveen Shankar Kapoor) ಅವರು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಸಚಿವೆ, ಎಎಪಿ ನಾಯಕಿ ಅತಿಶಿಗೆ ಸಮನ್ಸ್ ನೀಡಿದೆ. ಜೂನ್ 29 ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಿದೆ.

     ಆಪ್ ಶಾಸಕರಿಗೆ ಬಿಜೆಪಿ ಲಂಚ ನೀಡಿ ಸೆಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಅತಿಶಿ (AAP Minister Atishi) ಆರೋಪಿಸಿದ್ದರು. ಈ ಹೇಳಿಕೆ ವಿರುದ್ಧ ಪ್ರವೀಣ್ ಶಂಕರ್ ಕಪೂರ್ ಮಾನನಷ್ಟ ಮೊಕದಮ್ಮೆ ದಾಖಲಿಸಿದ್ದರು. ಅತಿಶಿ ಹೇಳಿಕೆಯಿಂದ ಬಿಜೆಪಿ ಪಕ್ಷದ ಪ್ರತಿಷ್ಠೆಗೆ ಹಾನಿಯಾಗಿದೆ ಎಂದು ಅವರು ದೂರಿದ್ದರು. ಈ ಆರೋಪಗಳನ್ನು ಪರಿಗಣಿಸಿದ ಕೋರ್ಟ್‌, ಅತಿಶಿಯನ್ನು ಆರೋಪಿ ಎಂದು ಗುರುತಿಸಿ ಜೂನ್ 29 ರಂದು ಹಾಜರಾಗುವಂತೆ ಆದೇಶಿಸಿದೆ.

    ಈ ಬಗ್ಗೆ ವಾದ ಮಂಡಿಸಿದ್ದ ಕಪೂರ್ ಪರ ವಕೀಲರು, ಬಿಜೆಪಿಯು 7 ಮಂದಿ ಎಎಪಿ ಶಾಸಕರನ್ನು ಸಂಪರ್ಕಿಸಿದೆ ಮತ್ತು ಪಕ್ಷವನ್ನು ಬದಲಾಯಿಸಲು ಅವರಿಗೆ 25 ಕೋಟಿ ರೂಪಾಯಿಗಳನ್ನು ನೀಡುತ್ತಿದೆ ಎಂದು ಎಎಪಿ ಮುಖ್ಯಸ್ಥ ಕೇಜ್ರಿವಾಲ್ ಆರೋಪಿಸಿದ್ದಾರೆ. ಎಎಪಿ ನಾಯಕರು ತಮ್ಮ ಆರೋಪಗಳನ್ನು ರುಜುವಾತುಪಡಿಸಲು ಮತ್ತು ಸಾಕ್ಷ್ಯಗಳನ್ನು ಒದಗಿಸಲು ವಿಫಲರಾಗಿದ್ದಾರೆ. ಇದನ್ನೂ ಓದಿ: ಆರೋಗ್ಯ ಸಮಸ್ಯೆ ಹಿನ್ನೆಲೆ ಜಾಮೀನು ವಿಸ್ತರಣೆ ಕೋರಿ ಕೇಜ್ರಿವಾಲ್ ಅರ್ಜಿ; ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂ

    ಪಕ್ಷದ ಸಹೋದ್ಯೋಗಿಗಳಾದ ಸೌರಭ್ ಭಾರದ್ವಾಜ್, ರಾಘವ್ ಚಡ್ಡಾ ಮತ್ತು ದುರ್ಗೇಶ್ ಪಾಠಕ್ ಅವರನ್ನು ಮುಂದಿನ ಎರಡು ತಿಂಗಳಲ್ಲಿ ಬಂಧಿಸಲಾಗುವುದು ಎಂದು ಎಎಪಿ ನಾಯಕಿ ಹೇಳಿದ್ದಾರೆ. ತನ್ನ ಅರ್ಜಿಯಲ್ಲಿ ಅತಿಶಿ ಮಾಡಿದ ಟೀಕೆಗಳನ್ನು ಹಿಂಪಡೆಯಬೇಕು ಮತ್ತು ಟಿವಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದರು.

  • ಸ್ವಾತಿ ಮಲಿವಾಲ್ ದೌರ್ಜನ್ಯ ಪ್ರಕರಣ – ಬಿಭವ್ ಕುಮಾರ್ ಜಾಮೀನು ಅರ್ಜಿ ವಜಾ

    ಸ್ವಾತಿ ಮಲಿವಾಲ್ ದೌರ್ಜನ್ಯ ಪ್ರಕರಣ – ಬಿಭವ್ ಕುಮಾರ್ ಜಾಮೀನು ಅರ್ಜಿ ವಜಾ

    ನವದೆಹಲಿ: ರಾಜ್ಯಸಭೆ ಸಂಸದೆ ಸ್ವಾತಿ ಮಲಿವಾಲ್ (Swati Maliwal) ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಪಟ್ಟಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್‌ಗೆ‌ (Bibhav Kumar) ಜಾಮೀನು ನೀಡಲು ತೀಸ್ ಹಜಾರಿ ಕೋರ್ಟ್ ನಿರಾಕರಿಸಿದೆ. ಎರಡೂ ಕಡೆಯ ವಾದ ಆಲಿಸಿದ ಬಳಿಕ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಗೌರವ್ ಗೋಯಲ್ ಅವರು ಬಿಭವ್ ಜಾಮೀನು (Bail) ಅರ್ಜಿಯನ್ನು ತಿರಸ್ಕರಿಸಿದರು.

    ಬಿಭವ್ ಕುಮಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಎನ್ ಹರಿಹರನ್, ಸಂಸದೆ ಸ್ವಾತಿ ಮಲಿವಾಲ್ ಸಮಯ ಪಡೆಯದೇ ಕೇಜ್ರಿವಾಲ್ ಅವರ ನಿವಾಸಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದಾರೆ. ಈ ವೇಳೆ ಬಿಭವ್ ಕುಮಾರ್ ಸಿಎಂ ಮನೆಯೊಳಗೆ ಇರಲಿಲ್ಲ. ಮುಖ್ಯಮಂತ್ರಿಗಳ ಅಧಿಕೃತ ನಿವಾಸವನ್ನು ಯಾರಾದಾರೂ ಹೀಗೆ ಪ್ರವೇಶಿಸಬಹುದೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಅದಾನಿ ಗ್ರೂಪ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡದಂತೆ ಮೋದಿ, ರಾಹುಲ್‌ಗೆ ನಿರ್ದೇಶಿಸಿ: ಕೋರ್ಟ್‌ಗೆ ಅರ್ಜಿ ಸಲ್ಲಿಕೆ

     

    ಭೇಟಿ ಸಮಯ ನಿಗಧಿಯಾಗದ ಹಿನ್ನೆಲೆ ಅವರನ್ನು ಭದ್ರತಾ ಸಿಬ್ಬಂದಿ ತಡೆದರು. ಕಾಯುವ ಕೊಠಡಿಯಲ್ಲಿ ಕೂರಿಸಲು ಮುಂದಾದರು. ಬಳಿಕ ಬಿಭವ್ ಕುಮಾರ್ ಅವರೊಂದಿಗೆ ಮಾತನಾಡಲು ಸೆಕ್ಯೂರಿಟಿಯನ್ನು ಹೇಳಿದರು ಎಂದು ರಕ್ಷಣಾ ವಕೀಲರು ಹೇಳಿದರು. ಅವರ ಮೇಲೆ ಹಲ್ಲೆಯಾಗಿದೆ ಎನ್ನಲಾಗುತ್ತಿದೆ. ಆದರೆ ಅವರಿಗೆ ಯಾವುದೇ ಗಂಭೀರ ಗಾಯವಾಗಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ಇದನ್ನೂ ಓದಿ: ಮುಂಬೈ ತಾಜ್‌ ಹೋಟೆಲ್‌, ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ – ಉತ್ತರ ಪ್ರದೇಶದಲ್ಲಿ ಲೊಕೇಶನ್‌ ಪತ್ತೆ!

    ಘಟನೆ ನಡೆದ ಸ್ಥಳವನ್ನು ಒಮ್ಮೆ ನೋಡಿ. ಇಂತಹ ಘಟನೆ ಅಲ್ಲಿ ಹೇಗೆ ನಡೆಯುತ್ತದೆ? ದೇಹದ ಪ್ರಮುಖ ಭಾಗದಲ್ಲಿ ಯಾವುದೇ ಘೋರವಾದ ಗಾಯವಿಲ್ಲ. ಗಾಯಗಳು ಸ್ವಯಂ ಪ್ರೇರಿತವಾಗಬಹುದು. ಮಲಿವಾಲ್ ಮಾಡಿದ ಎಲ್ಲಾ ಆರೋಪಗಳು ಪೂರ್ವ ಯೋಜಿತ ಮತ್ತು ಅವಳ ಕಥೆಗೆ ಸರಿಹೊಂದುವಂತೆ ಟೈಲರ್-ಮೇಡ್. ಈ ಸಂಪೂರ್ಣ ಎಫ್‌ಐಆರ್ ನಂತರದ ಚಿಂತನೆಯ ಫಲಿತಾಂಶವಾಗಿದೆ. ನಾನು ಜಾಮೀನು ಮಾತ್ರ ಬಯಸುತ್ತಿದ್ದೇನೆ, ಖುಲಾಸೆಗೊಳಿಸುವುದಲ್ಲ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ಇದನ್ನೂ ಓದಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಸಮಗ್ರ ಕಾರ್ಯಾಚರಣೆಗೆ ಟಾಸ್ಕ್‌ ಫೋರ್ಸ್‌ ರಚನೆ

    ಸ್ವಾತಿ ಮಲಿವಾಲ್ ಪರ ವಾದ ಮಂಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್, ಆರೋಪಿ ಪ್ರಭಾವಿಯಾಗಿದ್ದು, ಸಾಕ್ಷಿಗಳ ಮೇಲೆ ಮತ್ತು ಪ್ರಕರಣದ ಮೇಲೆ ಪರಿಣಾಮ ಬೀರಬಹುದು. ತನಿಖೆ ನಡೆಯುತ್ತಿರುವ ಹೊತ್ತಲ್ಲಿ ಪ್ರಭಾವಿ ಸ್ಥಾನದಲ್ಲಿರುವ ಆರೋಪಿ ತನಿಖೆಯ ದಿಕ್ಕು ತಪ್ಪಿಸಬಹುದು ಎಂದು ಹೇಳಿದರು. ವಾದ ಆಲಿಸಿದ ಬಳಿಕ ಕೋರ್ಟ್ ಜಾಮೀನು ಅರ್ಜಿ ವಜಾ ಮಾಡಿತು. ಈ ಹಿನ್ನೆಲೆ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಬಿಹಾರದಲ್ಲಿ ರಾಹುಲ್‌ ಪ್ರಚಾರದ ವೇಳೆ ಕುಸಿದ ವೇದಿಕೆ

  • ಮಗುವಿನ ಲಿಂಗ ತಿಳಿಯಲು ಹೆಂಡತಿಯ ಹೊಟ್ಟೆ ಕತ್ತರಿಸಿದವನಿಗೆ ಜೀವಾವಧಿ ಶಿಕ್ಷೆ

    ಮಗುವಿನ ಲಿಂಗ ತಿಳಿಯಲು ಹೆಂಡತಿಯ ಹೊಟ್ಟೆ ಕತ್ತರಿಸಿದವನಿಗೆ ಜೀವಾವಧಿ ಶಿಕ್ಷೆ

    ಲಕ್ನೋ: ಹೆಂಡತಿಯ ಗರ್ಭದಲ್ಲಿರುವ ಮಗು ಗಂಡೋ ಅಥವಾ ಹೆಣ್ಣೋ ಎಂದು ತಿಳಿಯಲು ಕುಡುಗೋಲಿನಿಂದ ಹೊಟ್ಟೆಯನ್ನು ಕತ್ತರಿಸಿದ್ದ ಉತ್ತರ ಪ್ರದೇಶದ (Uttar Pradesh) ಬದೌನ್‍ನ ವ್ಯಕ್ತಿಗೆ ಇಲ್ಲಿನ ನ್ಯಾಯಾಲಯ (Court) ಜೀವಾವಧಿ ಶಿಕ್ಷೆ ವಿಧಿಸಿದೆ.

    ಬದೌನ್‍ನ ಸಿವಿಲ್ ಲೈನ್ಸ್‍ನ ನಿವಾಸಿ ಪನ್ನಾ ಲಾಲ್ ಹಾಗೂ ಅನಿತಾ ದಂಪತಿಗೆ ಮದುವೆಯಾಗಿ 22 ವರ್ಷಗಳಾಗಿದ್ದು, ಐದು ಹೆಣ್ಣು ಮಕ್ಕಳಿದ್ದರು. ಆದರೆ, ಪನ್ನಾ ಲಾಲ್ ಗಂಡು ಮಗು ಬೇಕೆಂದು ಹೆಂಡತಿಯೊಂದಿಗೆ ಆಗಾಗ ಗಲಾಟೆ ಮಾಡುತ್ತಿದ್ದ. ಅಲ್ಲದೇ ವಿಚ್ಛೇದನ ನೀಡಿ ಬೇರೆ ಮದುವೆಯಾಗುವುದಾಗಿ ಹೆಂಡತಿಗೆ ಬೆದರಿಕೆ ಸಹ ಹಾಕಿದ್ದ. ಇದೇ ವಿಚಾರಕ್ಕೆ ಸೆಪ್ಟೆಂಬರ್ 2020 ರಲ್ಲಿ ತನ್ನ ಪತ್ನಿ ಅನಿತಾ ಮೇಲೆ ಹಲ್ಲೆ ನಡೆಸಿದ್ದ. ಈ ವೇಳೆ ಪನ್ನಲಾಲ್, ಅನಿತಾ ಗರ್ಭದಲ್ಲಿರುವ ಮಗುವಿನ ಲಿಂಗದ ಬಗ್ಗೆ ಮತ್ತೆ ಜಗಳವಾಡಿ, ಬಳಿಕ ಗರ್ಭದಲ್ಲಿರುವ ಮಗುವಿನ ಲಿಂಗ ತಿಳಿಯಲು ಆಕೆಯ ಹೊಟ್ಟೆಗೆ ಕುಡುಗೋಲಿನಿಂದ ಇರಿದಿದ್ದ. ಇದನ್ನೂ ಓದಿ: ಮತಗಟ್ಟೆವಾರು ದತ್ತಾಂಶ ನೀಡಿದ್ರೆ ದುರ್ಬಳಕೆ ಆಗಬಹುದು: ಚುನಾವಣಾ ಆಯೋಗ ಆತಂಕ

    ಈ ಘಟನೆ ನಡೆಯುವಾಗ ಆಕೆ ಎಂಟು ತಿಂಗಳ ಗರ್ಭಿಣಿಯಾಗಿದ್ದಳು. ಈ ವೇಳೆ ಆಕೆ ತಪ್ಪಿಸಿಕೊಂಡು ಹೊರಗೆ ಓಡಿದ್ದಳು. ಬಳಿಕ ಆಕೆಯ ಸಹೋದರನನ್ನು ಕಂಡು ಪನ್ನಲಾಲ್ ಪರಾರಿಯಾಗಿದ್ದ. ಬಳಿಕ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವೇಳೆ ವೈದ್ಯರು ತಾಯಿಯನ್ನು ಕಾಪಾಡಿದ್ದರು. ಗರ್ಭದಲ್ಲಿದ್ದ ಗಂಡು ಮಗುವನ್ನು ಉಳಿಸಲಾಗಿರಲಿಲ್ಲ. ಈ ವಿಚಾರವನ್ನು ವಿಚಾರಣೆ ವೇಳೆ ಅನಿತಾ ನ್ಯಾಯಾಲಯದ ಮುಂದೆ ಪ್ರಸ್ತಾಪಿಸಿದ್ದರು.

    ವಿಚಾರಣೆ ವೇಳೆ ಅನಿತಾ ತನ್ನ ಸಹೋದರರೊಂದಿಗೆ ಸೇರಿ ಆಸ್ತಿ ವಿವಾದದಕ್ಕೆ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲು ತನಗೆ ತಾನೇ ಗಾಯ ಮಾಡಿಕೊಂಡಿದ್ದಾಳೆ ಎಂದು ಪನ್ನಾ ಲಾಲ್ ನ್ಯಾಯಾಲಯದಲ್ಲಿ ವಾದಿಸಿದ್ದ. ಸಾಕ್ಷ್ಯಾಧಾರಗಳನ್ನು ಗಮನಿಸಿದ ನ್ಯಾಯಾಲಯ ಪನ್ನಾ ಲಾಲ್‍ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇದನ್ನೂ ಓದಿ: ಮತಗಟ್ಟೆ ದತ್ತಾಂಶ ಅಪ್ಲೋಡ್ ಮಾಡುವುದು ಕಷ್ಟ – ಸುಪ್ರೀಂ ಕೋರ್ಟ್‌