Tag: counting day

  • ಪ್ರತಿಷ್ಠೆಯ ಫಲಿತಾಂಶಕ್ಕೆ ಶುರುವಾಯ್ತು ಕೌಂಟ್‍ಡೌನ್ – ಅಭ್ಯರ್ಥಿಗಳ ಎದೆಯಲ್ಲಿ ಢವ ಢವ

    ಪ್ರತಿಷ್ಠೆಯ ಫಲಿತಾಂಶಕ್ಕೆ ಶುರುವಾಯ್ತು ಕೌಂಟ್‍ಡೌನ್ – ಅಭ್ಯರ್ಥಿಗಳ ಎದೆಯಲ್ಲಿ ಢವ ಢವ

    – ಮೇಲುಗೈ ಸಾಧಿಸುತ್ತಾ ಜಾತಿ ಸಮೀಕರಣ – ಭಾರೀ ಲೆಕ್ಕಾಚಾರದಲ್ಲಿ ಬಿಎಸ್‍ವೈ, ಸಿದ್ದರಾಮಯ್ಯ

    ಮೈಸೂರು/ ಚಾಮರಾಜನಗರ: ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆ ಮತ ಎಣಿಕೆ ಆರಂಭವಾಗಿದೆ. ಜೆಎಸ್‍ಎಸ್ ಪದವಿ ಕಾಲೇಜಿನಲ್ಲಿ ನಂಜನಗೂಡು ಕ್ಷೇತ್ರದ ಮತ ಎಣಿಕೆ ನಡೆಯುತ್ತಿದ್ದು, ಸೆಂಟ್‍ಜಾನ್ ಶಾಲೆಯಲ್ಲಿ ಗುಂಡ್ಲುಪೇಟೆ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದೆ.

    ನಂಜನಗೂಡಿನಲ್ಲಿ 17 ಸುತ್ತು, ಗುಂಡ್ಲುಪೇಟೆಯಲ್ಲಿ 14 ಸುತ್ತುಗಳಲ್ಲಿ ಎಣಿಕೆ ನಡೆಯಲಿದೆ. ಗುಂಡ್ಲುಪೇಟೆಯಲ್ಲಿ 60 ಅಂಚೆ ಮತಗಳ ಎಣಿಕೆ ಮೊದಲಿಗೆ ನಡೆಯಲಿದೆ. ನಂಜನಗೂಡಿನಲ್ಲಿ ಚುನಾವಣೆಗೆ ಹೊರಗಿನ ಅಧಿಕಾರಿಗಳು, ಸಿಬ್ಬಂದಿ ಬಳಕೆ ಹಿನ್ನೆಲೆಯ್ಲಲಿ ಅಂಚೆ ಮತಗಳು ಇಲ್ಲ.

    ನಂಜನಗೂಡಿನಲ್ಲಿ ಚಲಾವಣೆಯಾಗಿರುವ ಒಟ್ಟು 1,56,315 ಮತಗಳ ಎಣಿಕೆ [ 77.56% ] ಹಾಗೂ ಗುಂಡ್ಲುಪೇಟೆಯಲ್ಲಿ ಚಲಾವಣೆಯಾಗಿರುವ ಒಟ್ಟು 1,74,953 ಮತಗಳ ಎಣಿಕೆ [ 87.10% ] ನಡೆಯಲಿದೆ.

    ಇಂದು ಬೆಳಗ್ಗೆ 10 ರಿಂದ 11 ಗಂಟೆಯಷ್ಟೊತ್ತಿಗೆ ಉಪ ಚುನಾವಣಾ ಫಲಿತಾಂಶದ ಸ್ಪಷ್ಟ ಮಾಹಿತಿ ಸಿಗಲಿದೆ. ಮತ ಎಣಿಕೆ ಅರಂಭವಾದ 15 ನಿಮಿಷಗಳಲ್ಲೇ ಮೊದಲ ಸುತ್ತಿನ ಫಲಿತಾಂಶ ಲಭ್ಯವಾಗಲಿದೆ. 9 ಗಂಟೆಯಷ್ಟೊತ್ತಿಗೆ ಎರಡು ಕ್ಷೇತ್ರಗಳಲ್ಲಿ ಯಾರ ಮೇಲುಗೈ ಎಂಬ ಮುನ್ಸೂಚನೆ ಸಿಗಲಿದೆ.

    ಸಚಿವ ಸ್ಥಾನ ಕಳೆದುಹೋದ ಕೋಪದಲ್ಲಿ ಕಾಂಗ್ರೆಸ್‍ಗೆ ಶ್ರೀನಿವಾಸ್ ಪ್ರಸಾದ್ ರಾಜೀನಾಮೆ ನೀಡಿದ್ದರಿಂದ ಅವಧಿಗೂ ಮೊದಲೇ ನಂಜನಗೂಡು ಉಪ ಚುನಾವಣೆ ಎದುರುಗೊಳ್ತು. ಹಾಗಾದ್ರೆ ಈ ಬಾರಿ ನಂಜನಗೂಡು ಕಣದಲ್ಲಿ ಪರಿಣಾಮ ಬೀರಬಹುದಾಗಿದ್ದ ಅಂಶಗಳು ಏನು ಅಂತಾ ನೋಡೋದಾದ್ರೆ:

    – ವೀರಶೈವರು, ಪರಿಶಿಷ್ಟ ಮತಗಳ ಪ್ರಾಬಲ್ಯ ಹೊಂದಿರುವ ಕ್ಷೇತ್ರ ನಂಜನಗೂಡು.
    – ಸತತ 2 ಬಾರಿ ಕಾಂಗ್ರೆಸ್‍ನಿಂದ ಗೆದ್ದಿದ್ದ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್.
    – 2 ಲಕ್ಷ ಮತದಾರರಲ್ಲಿ ಶೇಕಡಾ 30ರಷ್ಟು ಪರಿಶಿಷ್ಟ ಜಾತಿ ಮತಗಳು.
    – ಶ್ರೀನಿವಾಸ್ ಪ್ರಸಾದ್-ಯಡಿಯೂರಪ್ಪ ಕಾರಣದಿಂದ ಲಿಂಗಾಯಿತ-ಪರಿಶಿಷ್ಟ ಮತಗಳ ಸಮೀಕರಣ ಲೆಕ್ಕಾಚಾರ.
    – ಕ್ಯಾಬಿನೆಟ್‍ನಿಂದ ಕೈಬಿಟ್ಟು ದಲಿತ ಸಮುದಾಯಕ್ಕೆ ಅನ್ಯಾಯವೆಂಬ ಆರೋಪ.
    – ನಂಜನಗೂಡಲ್ಲಿ ಸ್ವಾಭಿಮಾನ ಸಮಾವೇಶ ನಡೆಸಿ ಕಾಂಗ್ರೆಸ್ ತ್ಯಜಿಸಿದ್ದರ ನಡೆಗೆ ಸಮರ್ಥನೆ.
    – 2013ರಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಸ್ಪರ್ಧಿಸಿದ್ದ ಕೆಜೆಪಿಗೆ 28 ಸಾವಿರ ಮತ ಸಿಕ್ಕಿತ್ತು.
    – ಸಿಎಂ ಸಿದ್ದರಾಮಯ್ಯ ನಾಯಕತ್ವದಲ್ಲಿ ಚುನಾವಣೆ ನಡೆದ ಹಿನ್ನೆಲೆಯಲ್ಲಿ ಮತಗಳ ಧ್ರುವೀಕರಣ.
    – ಪರಿಶಿಷ್ಟ, ಹಿಂದುಳಿದ ಮತ – ಶೇಕಡಾ 40-45ರಷ್ಟು ಮತಗಳ ಸಮೀಕರಣದ ಊಹೆಯಲ್ಲಿ ಕಾಂಗ್ರೆಸ್.
    – ಈ ಬಾರಿ ಜೆಡಿಎಸ್ ಸ್ಪರ್ಧಿಸದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಸ್ಪರ್ಧೆ.
    – ಕಳೆದ ಬಾರಿ ಸೋಲುಂಡಿದ್ದ ಜೆಡಿಎಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ.

    ಸಚಿವ ಮಹದೇವಪ್ರಸಾದ್‍ರ ಅಕಾಲಿಕ ನಿಧನದಿಂದ ತೆರವಾಗಿದ್ದ ಕ್ಷೇತ್ರ ಗುಂಡ್ಲುಪೇಟೆಯಲ್ಲಿ ಅನುಕಂಪವೇ ಅನಿವಾರ್ಯ ಮಾನದಂಡವಾದರೆ ಅಚ್ಚರಿಯಿಲ್ಲ. ಹಾಗಾದ್ರೆ ಈ ಬಾರಿ ಗುಂಡ್ಲುಪೇಟೆ ಕಣದಲ್ಲಿ ಪರಿಣಾಮ ಬೀರಬಹುದಾಗಿದ್ದ ಅಂಶಗಳು ಏನು ಅಂತಾ ನೋಡೋದಾದ್ರೆ:

    – ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಿಗೆ ಅನುಕಂಪದ ಅಲೆಯ ಮೇಲೆ ನಂಬಿಕೆ
    – ಮಹದೇವ ಪ್ರಸಾದ್ ಪತ್ನಿ ಗೀತಾ ಮಹದೇವಪ್ರಸಾದ್‍ಗೆ ಅನುಕಂಪದ ಅಲೆ?
    – ಸತತ 2 ಬಾರಿ ಮಹದೇವಪ್ರಸಾದ್ ವಿರುದ್ಧ ಸೋತಿದ್ದ ಬಿಜೆಪಿ ಅಭ್ಯರ್ಥಿ ನಿರಂಜನ್.
    – 2008, 2013ರಲ್ಲಿ ಸೋಲು ಅನುಭವಿಸಿದ್ದ ನಿರಂಜನ್.
    – ನಿರಂಜನ್ ತಂದೆ ಶಿವಮಲ್ಲಪ್ಪ ಕೂಡಾ ಮಹದೇವಪ್ರಸಾದ್ ವಿರುದ್ಧ ಸೋತಿದ್ದರು.
    – ಈ ಹಿನ್ನೆಲೆಯಲ್ಲಿ ಉಪ ಚುನಾವಣೆಯಲ್ಲಿ ಗೆಲ್ಲಿಸುವಂತೆ ನಿರಂಜನ್ ಅನುಕಂಪದ ವಾದ.
    – ಲಿಂಗಾಯಿತ ಪ್ರಾಬಲ್ಯ- ಶೇ.80ರಷ್ಟು ಗೌಡ ಲಿಂಗಾಯಿತ, ಶೇ.20ರಷ್ಟು ಶೆಟ್ಟಿ ಲಿಂಗಾಯಿತ.
    – ಗೌಡ ಲಿಂಗಾಯಿತಕ್ಕೆ ಸೇರಿದವರು ನಿರಂಜನ್, ಶೆಟ್ಟಿ ಲಿಂಗಾಯಿತ ಸಮುದಾಯಕ್ಕೆ ಸೇರಿದವರು ಗೀತಾ
    – ಜೆಡಿಎಸ್, ಬಿಎಸ್‍ಪಿ ಸ್ಪರ್ಧೆಯಿಲ್ಲ – ಎರಡೂ ಕಳೆದ ಬಾರಿ ಒಟ್ಟು 10 ಸಾವಿರ ಮತ ಗಳಿಸಿದ್ದವು.

  • ಫಲಿತಾಂಶಕ್ಕೂ ಮೊದಲೇ ಕುರ್ಚಿಗಾಗಿ ಸರ್ಕಸ್- ಯಾವ ರಾಜ್ಯದಿಂದ ಯಾರೆಲ್ಲಾ ಸಂಭವನೀಯ ಸಿಎಂ ಅಭ್ಯರ್ಥಿಗಳು?

    ಫಲಿತಾಂಶಕ್ಕೂ ಮೊದಲೇ ಕುರ್ಚಿಗಾಗಿ ಸರ್ಕಸ್- ಯಾವ ರಾಜ್ಯದಿಂದ ಯಾರೆಲ್ಲಾ ಸಂಭವನೀಯ ಸಿಎಂ ಅಭ್ಯರ್ಥಿಗಳು?

    ನವದೆಹಲಿ: ಫಲಿತಾಂಶಕ್ಕೂ ಮೊದಲೇ ಸಿಎಂ ಸ್ಥಾನಕ್ಕಾಗಿ ಉತ್ತರ ಪ್ರದೇಶದಲ್ಲಿ ಭಾರೀ ಪೈಪೋಟಿ ನಡೀತಿದೆ. ಜೊತೆಗೆ ಉಳಿದ ರಾಜ್ಯಗಳಲ್ಲಿ ಯಾರೆಲ್ಲಾ ಸಿಎಂ ಸಂಭವನೀಯ ಅಭ್ಯರ್ಥಿಗಳಿದ್ದಾರೆ ಅನ್ನೋದನ್ನ ನೋಡೋದಾದ್ರೆ;

    1. ಉತ್ತರಪ್ರದೇಶ
    * ಯೋಗಿ ಆದಿತ್ಯನಾಥ್: ಪೂರ್ವಾಂಚಲ ಭಾಗದ ಪ್ರಬಲ ಮುಖಂಡರಾಗಿರೋ ಇವರಿಗೆ ಆರ್‍ಎಸ್‍ಎಸ್ ಆರ್ಶೀವಾದವಿದೆ. ಸನ್ಯಾಸಿ ಹಾಗೂ ಹೈಕಮಾಂಡ್‍ಗೆ ತುಂಬಾ ಹತ್ತಿರ.

    * ಕೇಶವ ಮಯೂರ: ಹಿಂದುಳಿದ ವರ್ಗಗಳ ಮುಖಂಡ, ಕುರ್ಮಿ ಜನಾಂಗದ ನಾಯಕ. ವಿಹೆಚ್‍ಪಿ ಹಿನ್ನೆಲೆ ಇದ್ದು, ಕೇಂದ್ರ ಸಚಿವರಾಗಿದ್ದಾರೆ. ಪೂರ್ವಾಂಚಲ ಭಾಗದ ಮುಖಂಡರಾಗಿರೀ ಇವರು ಅನುಭವಿ ರಾಜಕಾರಣಿ.

    * ಡಾ.ಮಹೇಶ್ ಶರ್ಮಾ: ಆರ್‍ಎಸ್‍ಎಸ್‍ಗೆ ಹತ್ತಿರ. ಉತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿದ್ದಾರೆ. ಹಾಲಿ ಕೇಂದ್ರ ಸಚಿವರಾಗಿದ್ದಾರೆ.

    * ಕಲ್‍ರಾಜ್ ಮಿಶ್ರಾ: ಬ್ರಾಹ್ಮಣ ಮುಖಂಡ, ಉತ್ತಮ ರಾಜಕಾರಣಿ. ಇವರಿಗೆ ರಾಷ್ಟ್ರ ರಾಜಕಾರಣದ ಅನುಭವವಿದೆ.

    2. ಪಂಜಾಬ್
    ಕಾಂಗ್ರೆಸ್‍ನಿಂದ ಅಮರೀಂದರ್ ಸಿಂಗ್ ಸಿಎಂ ರೇಸ್‍ನಲ್ಲಿದ್ದರೆ, ನವಜೋತ್ ಸಿಂಗ್ ಸಿಧು ಸಂಭವನೀಯ ಡಿಸಿಎಂ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ, ಅಕಾಲಿದಳದಿಂದ ಪ್ರಕಾಶ್ ಸಿಂಗ್ ಬಾದಲ್ ಇದ್ದಾರೆ.

    3. ಗೋವಾ
    ಗೋವಾದಲ್ಲಿ ಸದ್ಯಕ್ಕೆ ಬಿಜೆಪಿ ಆಡಳಿತವಿದೆ. ಮತ್ತೊಂದು ಬಾರಿಗೆ ಅಧಿಕಾರಕ್ಕೆ ಬರುತ್ತೆ ಅಂತ ಚುನವಣೋತ್ತರ ಸಮೀಕ್ಷೆ ಹೇಳ್ತಿದೆ. ಹಾಗಾದ್ರೆ, ಗೋವಾಕ್ಕೆ ಯಾರು ಸಿಎಂ..? ನಾಯಕರ ಹಿನ್ನೆಲೆ ಏನು ಅಂತ ನೋಡೋದಾದ್ರೆ;
    * ಬಿಜೆಪಿಯಿಂದ ಮನೋಹರ್ ಪರಿಕ್ಕರ್ (ಅನುಭವಿ ರಾಜಕಾರಣಿ, ಕೇಂದ್ರ ಸಚಿವ)
    * ಬಿಜೆಪಿಯಿಂದ ಲಕ್ಷ್ಮಿಕಾಂತ್ ಪರ್ಸೇಕರ್ (ಹಾಲಿ ಸಿಎಂ, ಗೆಲುವಿನ ರೂವಾರಿ)
    * ಬಿಜೆಪಿಯಿಂದ ಫ್ರಾನ್ಸಿಸ್ ಡಿಸೋಜಾ (ಕ್ರಿಶ್ಚಿಯನ್ ಲೀಡರ್)
    * ಲೂಸಿನೋ ಫೆಲೈರೋ ( ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ )

    4. ಉತ್ತರಾಖಂಡ್
    ಉತ್ತರಾಖಂಡ್‍ನಲ್ಲಿ ಕಾಂಗ್ರೆಸ್‍ನ ಹರೀಶ್ ರಾವತ್ ವಿರೋಧಿ ಅಲೆ ಇದೆ. ಹೀಗಾಗಿ, ನಾವು ಪಟ್ಟಕ್ಕೇರ್ತೇವೆ ಅನ್ನೋದು ಬಿಜೆಪಿ ನಾಯಕರ ನಿರೀಕ್ಷೆ. ಹಾಗಾಗಿ, ಉತ್ತರಾಖಂಡ್‍ಗೆ ಯಾರು ಸಿಎಂ..? ನಾಯಕರ ಹಿನ್ನೆಲೆ ಏನು..?
    * ಬಿಜೆಪಿಗೆ ಸ್ಪಷ್ಟ ಬಹುಮತ ಸಾಧ್ಯತೆ
    * ಬಿಜೆಪಿಯಿಂದ ಬಿಸಿ ಖಂಡೂರಿ ರೇಸ್‍ನಲ್ಲಿದ್ದಾರೆ. 2007 ರಿಂದ 2009, 2011 ರಿಂದ 2012 ರವರೆಗೆ ಸಿಎಂ ಆಗಿದ್ದ ಅನುಭವ ಇವರಿಗಿದೆ.

    5. ಮಣಿಪುರ
    ಪುಟ್ಟರಾಜ್ಯ ಮಣಿಪುರದಲ್ಲಿ ಸತತವಾಗಿ ಹ್ಯಾಟ್ರಿಕ್ ಸಿಎಂ ಆಗಿದ್ದ ಕಾಂಗ್ರೆಸ್‍ನ ಒಕರಾಮ್ ಇಬೋಬಿ ಸಿಂಗ್‍ಗೆ ಬಿಜೆಪಿ ಪ್ರಬಲ ಪೈಪೋಟಿ ನೀಡಿದೆ. ಮಣಿಪುರದಲ್ಲಿ ಬಿಜೆಪಿ ಸಿಎಂ ಕ್ಯಾಂಡಿಡೇಟ್ ಯಾರು? ಅವರ ಹಿನ್ನೆಲೆ ಏನು ಅನ್ನೋದನ್ನ ನೋಡೋದಾದ್ರೆ;

    ಚವೋಬ ಸಿಂಗ್
    * ಚುನಾವಣಾ ನಿರ್ವಹಣಾ ಸಮಿತಿ ಮುಖ್ಯಸ್ಥ
    * ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ
    * ಪಕ್ಷ ಬೆಳವಣಿಗೆ ರೂವಾರಿ
    ಇವರ ಜೊತೆಗೆ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಬಾಬಾನಂದ ಸಿಂಗ್ ಹೆಸರು ಕೇಳಿ ಬಂದಿದೆ. ಇವರು ಪ್ರಧಾನಿ ಮೋದಿಯ ಕಟ್ಟಾ ಆರಾಧಕ.