Tag: counterfeit notes

  • ಖೋಟಾ ನೋಟು ಚಲಾವಣೆ- ಇಬ್ಬರ ಬಂಧನ

    ಖೋಟಾ ನೋಟು ಚಲಾವಣೆ- ಇಬ್ಬರ ಬಂಧನ

    ವಿಜಯಪುರ: ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಇಬ್ಬರನ್ನು ಜಿಲ್ಲೆಯ ಮುದ್ದೇಬಿಹಾಳ ನಾಲತವಾಡ ಪಟ್ಟಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಬಸವನಬಾಗೇವಾಡಿ ಪಟ್ಟಣದ ಇಂದಿರಾ ನಗರ ನಿವಾಸಿಗಳಾದ ಸುಮನ ಬಂಗಾರಿ ಹಾಗೂ ಸೋಹೆಲ್ ಇನಾಮದಾರ ಬಂಧಿತ ಆರೋಪಿಗಳು. ಕೆಎ 28, ಇಎಸ್ 9164 ಬೈಕ್ ಮೇಲೆ ನಾಲತವಾಡ ಪಟ್ಟಣಕ್ಕೆ ಬಂದಿದ್ದಾಗ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

    ಖೋಟಾ ನೋಟು ಚಲಾವಣೆ ಜಾಲದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಆಧಾರದ ಮೇಲೆ ಭಾನುವಾರ ನಡೆಸಿದ ಕಾರ್ಯಾಚರಣೆಯಲ್ಲಿ ಪಾನ್ ಶಾಪ್‌ನಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಇಬ್ಬರು ಸಿಕ್ಕಿಬಿದ್ದಿದ್ದಾರೆ. ಇದರ ಹಿಂದೆ ದೊಡ್ಡ ಜಾಲವಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಮುದ್ದೇಬಿಹಾಳ ಪಿಎಸ್‍ಐ ಮಲ್ಲಪ್ಪ ಮಡ್ಡಿ, ಸಿಪಿಐ ರವಿಕುಮಾರ ಕಪ್ಪತ್ತನವರ ನೇತೃತ್ವದಲ್ಲಿ ತಂಡ ರಚಿಸಿ ತನಿಖೆ ಮುಂದುವರಿಸಲಾಗಿದೆ.

    ಈ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಬಂಧಿತರಿಂದ 100 ರೂ. ಮುಖಬೆಲೆಯ 4500 ರೂ. ಖೋಟಾ ನೋಟು, ಬೈಕ್ ಹಾಗೂ ಬ್ಯಾಗ್ ವಶಕ್ಕೆ ಪಡೆದಿದ್ದಾರೆ.

  • 15.3 ಲಕ್ಷ  ಕೋಟಿ ರೂ. ಮೌಲ್ಯದ 99.3% ನಿಷೇಧಗೊಂಡಿದ್ದ ನೋಟುಗಳು ವಾಪಸ್: ಆರ್‌ಬಿಐ

    15.3 ಲಕ್ಷ ಕೋಟಿ ರೂ. ಮೌಲ್ಯದ 99.3% ನಿಷೇಧಗೊಂಡಿದ್ದ ನೋಟುಗಳು ವಾಪಸ್: ಆರ್‌ಬಿಐ

    ಮುಂಬೈ: 2016ರಲ್ಲಿ ಕೇಂದ್ರ ಸರ್ಕಾರ ನಿಷೇಧ ಮಾಡಿದ್ದ 500 ರೂ. ಹಾಗೂ 1 ಸಾವಿರ ರೂ. ಮುಖಬೆಲೆಯ ನೋಟುಗಳಲ್ಲಿ 99.3% ನೋಟುಗಳು ಬ್ಯಾಂಕ್‍ಗೆ ವಾಪಸ್ ಆಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ತಿಳಿಸಿದೆ.

    2017-18 ವಾರ್ಷಿಕ ವರದಿಯಲ್ಲಿ ಈ ಅಂಶವನ್ನು ಆರ್‌ಬಿಐ ಬಹಿರಂಗಪಡಿಸಿದ್ದು, 2016ರ ನವೆಂಬರ್ 8 ನೋಟು ನಿಷೇಧಕ್ಕೂ ಮುನ್ನ ದೇಶದಲ್ಲಿ 500 ರೂ. ಹಾಗೂ 1 ಸಾವಿರ ಮುಖಬೆಲೆಯ 15.41 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು ಚಲಾವಣೆಯಲ್ಲಿ ಇದ್ದು, ಬಳಿಕ ನಡೆದ ಪ್ರಕ್ರಿಯೆಯಲ್ಲಿ 15.31 ಲಕ್ಷ ಕೋಟಿ  ರೂ. ಮೌಲ್ಯದ ನೋಟುಗಳು ವಾಪಸ್ ಆಗಿದೆ. ನೋಟುಗಳ ಪರಿಶೀಲನೆ ಪ್ರಕ್ರಿಯೆ ಯಶ್ವಸಿಯಾಗಿ ಮುಕ್ತಾಯವಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

    ನೋಟು ನಿಷೇಧದ ಬಳಿಕ 2016-17 ರ ಅವಧಿಯಲ್ಲಿ ಆರ್‌ಬಿಐ 7,965 ಕೋಟಿ ರೂ. ಗಳನ್ನು ಹೊಸ 500 ಹಾಗೂ 2 ಸಾವಿರ ರೂ. ಮುಖಬೆಲೆಯ ನೋಟು ಮುದ್ರಣಕ್ಕಾಗಿ ವೆಚ್ಚ ಮಾಡಿದೆ. ಈ ಅವಧಿಯಲ್ಲಿ ನೋಟು ಮುದ್ರಣದ ವೆಚ್ಚ ಕಳೆದ ವರ್ಷದಲ್ಲಿ ಮಾಡಿದ್ದ ವೆಚ್ಚಕ್ಕಿಂತಲೂ ಎರಡರಷ್ಟು ಹೆಚ್ಚಾಗಿದೆ. ಇನ್ನು 2017-18 (ಜುಲೈ 2017 ರಿಂದ ಜೂನ್ 2018) ಅವಧಿಯಲ್ಲಿ 4,912 ಕೋಟಿ ರೂ. ಗಳನ್ನು ನೋಟು ಮುದ್ರಣಕ್ಕಾಗಿ ಆರ್‌ಬಿಐ ವೆಚ್ಚಮಾಡಿದೆ.

    ನೋಟು ನಿಷೇಧ ವೇಳೆ ಈ ಕ್ರಮ ಕಪ್ಪು ಹಣದ ಪತ್ತೆ, ಭ್ರಷ್ಟಚಾರ ನಿಯಂತ್ರಣ ಮತ್ತು ಖೋಟಾ ನೋಟು ಪರಿಶೀಲನೆಗೆ ಸಹಾಯವಾಗುತ್ತದೆ ಎಂಬ ವಾದ ಕೇಳಿ ಬಂದಿತ್ತು. ಆದರೆ ಈ ವೇಳೆ 500 ರೂ. ಹಾಗೂ 1 ಸಾವಿರ ರೂ ಮುಖಬೆಲೆ ನಕಲಿ ನೋಟುಗಳ ಪತ್ತೆ ಪ್ರಮಾಣ ಕ್ರಮವಾಗಿ 59.7% ಮತ್ತು 59.6% ಕಡಿಮೆ ಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ 100 ರೂ. ಹಾಗೂ 50 ರೂ ಮುಖಬೆಲೆಯ ನಕಲಿ ನೋಟುಗಳ ಪತ್ತೆ ಪ್ರಮಾಣ ಕ್ರಮವಾಗಿ 35%, 154.3% ರಷ್ಟು ಪತ್ತೆಯಾಗಿದೆ. ನೋಟು ನಿಷೇಧ ಕ್ರಮದಿಂದಾಗಿ 2017-18 ಆರ್ಥಿಕ ವರ್ಷದ ಮೇಲೆ ಪ್ರಭಾವ ಬೀರಿತ್ತು ಎಂದು ಆರ್‌ಬಿಐ ಹೇಳಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv