Tag: councilor

  • ಚರಂಡಿಗಿಳಿದು ಕೊಳಚೆ ಶುಚಿಗೊಳಿಸಿದ ಆಪ್ ಕೌನ್ಸಿಲರ್‌ಗೆ ಹಾಲಿನ ಸ್ನಾನ..!

    ಚರಂಡಿಗಿಳಿದು ಕೊಳಚೆ ಶುಚಿಗೊಳಿಸಿದ ಆಪ್ ಕೌನ್ಸಿಲರ್‌ಗೆ ಹಾಲಿನ ಸ್ನಾನ..!

    ದೆಹಲಿ: ಇಲ್ಲಿನ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಕೌನ್ಸಿಲರ್ ಹಸೀಬ್-ಉಲ್-ಹಸನ್ ಅವರು ಶಾಸ್ತ್ರಿ ಉದ್ಯಾನದಲ್ಲಿ ಕೊಳಚೆ ತುಂಬಿದ್ದ ಚರಂಡಿಗಿಳಿದು ನೀರನ್ನು ಸ್ವಚ್ಛಗೊಳಿಸಿದ ಪ್ರಸಂಗ ನಡೆದಿದೆ. ಇದಕ್ಕೆ ಪ್ರತಿಯಾಗಿ ಗೌರವ ಸಲ್ಲಿಸಿದ ಸಾರ್ವಜನಿಕರು, ಕೌನ್ಸಿಲರ್ ಅವರನ್ನು ಹಾಲಿನಲ್ಲೇ ಸ್ನಾನ ಮಾಡಿಸಿದ್ದಾರೆ.

    ಪೂರ್ವ ದೆಹಲಿಯ ಕೌನ್ಸಿಲರ್ ಆಗಿರುವ ಹಸನ್ ಬಿಳಿ ಕುರ್ತಾ ಧರಿಸಿ ಎದೆ ಮಟ್ಟದವರೆಗೆ ತುಂಬಿಕೊಂಡಿದ್ದ ಚರಂಡಿಗೆ ಇಳಿದು ಅಲ್ಲಿನ ಕೊಳಚೆಯನ್ನು ಶುಚಿಗೊಳಿಸಿದರು. ಚರಂಡಿಯಲ್ಲಿ ತೇಲುತ್ತಿದ್ದ ತ್ಯಾಜ್ಯ ವಸ್ತುಗಳನ್ನು ಹಸನ್ ತೆಗೆದು ಹಾಕಿದ್ದಾರೆ. ಇದನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್ನಲ್ಲಿ ವೀಡಿಯೋ ಸೆರೆ ಹಿಡಿದಿದ್ದು, ಇದೀಗ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಮುಂಜಾನೆ 3.30ಕ್ಕೆ ಲಾಲೂ ಪ್ರಸಾದ್ ಯಾದವ್ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಅವರ ಸಹಾಯಕರು ಪಕ್ಕದಲ್ಲಿ ನಿಂತು ವಿವಿಧ ಉಪಕರಣಗಳನ್ನು ಕೊಡುತ್ತಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ. ಚರಂಡಿ ಸ್ವಚ್ಛ ಮಾಡಿದ ನಂತರ ಹಸನ್ ಅವರ ಬೆಂಬಲಿಗರು ಅವರಿಗೆ ಹಾಲಿನಲ್ಲಿ ಸ್ನಾನ ಮಾಡಿಸಿದ್ದಾರೆ. ಈ ವಿಷಯ ವಿಧಾನಸಭೆಯಲ್ಲೂ ಚರ್ಚೆಯಾಗಿದೆ. ಇದನ್ನೂ ಓದಿ: 2ನೇ ಅವಧಿಗೆ ಪುಷ್ಕರ್ ಸಿಂಗ್ ಧಾಮಿ ಪ್ರಮಾಣವಚನ ಸ್ವೀಕಾರ

    ಬಳಿಕ ಮಾತನಾಡಿರುವ ಹಸನ್, ಇಲ್ಲಿನ ಚರಂಡಿ ತುಂಬಿ ಹರಿಯುತ್ತಿದೆ. ಅಧಿಕಾರಿಗಳಿಗೆ ಈ ಬಗ್ಗೆ ಸಾಕಷ್ಟು ಬಾರಿ ದೂರು ನೀಡಿದರೂ, ಬಿಜೆಪಿ ಕೌನ್ಸಿಲರ್ ಮತ್ತು ಸ್ಥಳೀಯ ಶಾಸಕರು ಸಹಾಯ ಮಾಡಲಿಲ್ಲ. ಹೀಗಾಗಿ ನಾನೇ ಚರಂಡಿಗಿಳಿದು ಈ ಕೆಲಸ ಮಾಡಲು ಮುಂದಾದೆ ಎಂದು ಹೇಳಿದ್ದಾರೆ. ಬಾಲಿವುಡ್ ನಟ ಅನಿಲ್‌ಕಪೂರ್ ಅಭಿನಯದ ನಾಯಕ್ ಚಿತ್ರದಲ್ಲೂ ಇದೇ ತರಹದ ದೃಶ್ಯವೊಂದನ್ನು ಹೆಣೆಯಲಾಗಿದೆ.

  • ಹಸಿವಿನಿಂದ ಬಳಲುತಿದ್ದ ಮಂದಿಗೆ 4 ಟನ್ ಆಹಾರ ಸಾಮಗ್ರಿ ವಿತರಿಸಿದ ಕೌನ್ಸಿಲರ್

    ಹಸಿವಿನಿಂದ ಬಳಲುತಿದ್ದ ಮಂದಿಗೆ 4 ಟನ್ ಆಹಾರ ಸಾಮಗ್ರಿ ವಿತರಿಸಿದ ಕೌನ್ಸಿಲರ್

    ಬೆಂಗಳೂರು: ಕೊರೊನಾ ವೈರಸ್ ಭೀತಿಯಿಂದ ದೇಶವೇ ಲಾಕ್‍ಡೌನ್ ಆಗಿದ್ದು, ಸರ್ಕಾರದ ಆದೇಶಕ್ಕೆ ಸ್ಪಂದಿಸಿ ಜನರು ಮನೆಯಲ್ಲಿ ಇದ್ದಾರೆ. ಆದರೆ ಹಸಿವಿನಿಂದ ಪರಿತಪಿಸುತ್ತಿದ್ದ ಬಡಾವಣೆ ಮಂದಿಗೆ ಕೌನ್ಸಿಲರ್ ನರಸಿಂಹ ಮೂರ್ತಿ ಸ್ಪಂದಿಸಿ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲದ ರಾಯನ್ ನಗರ ನಿವಾಸಿಗಳಿಗೆ ದಿನ ಬಳಕೆಯ ದಿನಸಿ ಪದಾರ್ಥಗಳನ್ನು ಕೌನ್ಸಿಲರ್ ನರಸಿಂಹ ಮೂರ್ತಿ ಅವರು ವಿತರಣೆ ಮಾಡಿದ್ದಾರೆ. ವಾರ್ಡಿನ ಪ್ರತಿ ಜನರಿಗೆ ದಿನ ಬಳಕೆಯ ದಿನಸಿ ಪದಾರ್ಥಗಳನ್ನು ಮನೆ ಮನೆಗೆ ತೆರಳಿ ವಿತರಣೆ ಮಾಡಿ ಸಹಾಯ ಮಾಡಿದ್ದಾರೆ. ಪ್ರತಿ ಕುಟುಂಬಕ್ಕೆ ತಲಾ 25 ಕೆ.ಜಿ ಅಕ್ಕಿ, ಮೂರು ತರಹದ ಬೇಳೆ, ಸಕ್ಕರೆ, ಉಪ್ಪು, ಅಡುಗೆ ಎಣ್ಣೆ ಇನ್ನಿತರ ಪದಾರ್ಥಗಳನ್ನು ವಿತರಣೆ ಮಾಡಲಾಗಿದೆ.

    ಸುಮಾರು 4 ಟನ್ ಆಹಾರ ಸಾಮಗ್ರಿಗಳ ವಿತರಣೆ ಮಾಡಿದ ಸದಸ್ಯರಿಗೆ ವಾರ್ಡಿನ ಜನತೆ ಧನ್ಯವಾದ ತಿಳಿಸಿದ್ದಾರೆ. ಲಾಕ್‍ಡೌನ್‍ನಿಂದ ಹೊರಬರದೆ ಕಂಗಾಲಾಗಿದ್ದ ಜನರಿಗೆ ಸ್ಪಂದನೆ ದೊರೆತಿರುವುದು ಉತ್ತಮ ಎಂದು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಾಮಾಜಿಕ ಕಾರ್ಯಕ್ಕೆ ಮಹಿಳೆಯರು ಹೂವುಗಳನ್ನು ನರಸಿಂಹ ಮೂರ್ತಿ ಅವರ ಮೇಲೆ ಹಾಕಿ ದಿನಸಿ ಸ್ವೀಕರಿಸಿ ಧನ್ಯತೆ ಮೆರೆದಿದ್ದಾರೆ.

    ಈ ವೇಳೆ ಮಾತನಾಡಿದ ಕೌನ್ಸಿಲರ್, ನಮ್ಮ ಬಡಾವಣೆಯ ಜನರು ಲಾಕ್‍ಡೌನ್‍ಗೆ ಸ್ಪಂದಿಸಿದ್ದಾರೆ. ಈ ಕೊರೊನಾ ವೈರಸ್ ತಡೆಗಟ್ಟಲು ಮನೆಯಿಂದ ಹೊರಗೆ ಬರದೆ ನಮ್ಮ ಕಾನೂನಿಗೆ ಗೌರವವನ್ನು ನೀಡಿದ್ದಾರೆ. ಆದರೆ ಆಹಾರಕ್ಕಾಗಿ ಎಲ್ಲರು ಪರಿತಪಿಸುತ್ತಿದ್ದರು, ಇದರಿಂದ ನನಗೆ ನೋವಾಯಿತು. ಹೀಗಾಗಿ ಪ್ರತಿನಿತ್ಯ ಕೂಲಿ ಕೆಲಸ ಮಾಡಿ ಜೀವನ ನಡೆಸುತಿದ್ದ ಎಲ್ಲಾ ಕುಟುಂಬಕ್ಕೆ ಆಹಾರ ಧಾನ್ಯಗಳನ್ನ ನೀಡಿದ್ದು, ನನಗೆ ಸಂತಸ ತಂದಿದೆ. ಮುಂದಿನ ಆದೇಶವರೆಗೂ ನಾವು ನಮ್ಮ ಗ್ರಾಮ, ನಮ್ಮ ರಾಜ್ಯ, ನಮ್ಮ ದೇಶಕ್ಕಾಗಿ ಸೇವೆ ಸಲ್ಲಿಸುವುದಾಗಿ ಕೌನ್ಸಿಲರ್ ನರಸಿಂಹಮೂರ್ತಿ ತಿಳಿಸಿದ್ದಾರೆ.

  • ಎಸ್‍ಐಗೆ ಮನಬಂದಂತೆ ಥಳಿಸಿದ ಬಿಜೆಪಿ ಮುಖಂಡ- ವಿಡಿಯೋ ವೈರಲ್

    ಎಸ್‍ಐಗೆ ಮನಬಂದಂತೆ ಥಳಿಸಿದ ಬಿಜೆಪಿ ಮುಖಂಡ- ವಿಡಿಯೋ ವೈರಲ್

    ಲಕ್ನೋ: ಪೊಲೀಸ್ ಸಬ್-ಇನ್‍ಸ್ಪೆಕ್ಟರ್ ಒಬ್ಬರನ್ನು ಉತ್ತರ ಪ್ರದೇಶದ ಬಿಜೆಪಿ ಮುಖಂಡನೊಬ್ಬ ಮನಬಂದಂತೆ ಥಳಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮೀರತ್ ರೆಸ್ಟೋರೆಂಟ್‍ವೊಂದರಲ್ಲಿ ಎಸ್‍ಐ ಮತ್ತು ಬಿಜೆಪಿ ಕೌನ್ಸಿಲರ್ ಮನೀಶ್ ಕುಮಾರ್ ನಡುವೆ ಮಾತಿನ ಚಕಮಕಿ ನಡೆದು, ಮನೀಶ್ ಎಸ್‍ಐಗೆ ಮನ ಬಂದಂತೆ ಥಳಿಸಿದ್ದಾನೆ.

    ಏನಿದು ಘಟನೆ?
    ಶುಕ್ರವಾರ ರಾತ್ರಿ ಮೋಹಿಯುದ್ದಿನ್ ಪುರ್ ಠಾಣೆಯ ಉಸ್ತುವಾರಿಯಾದ ಎಸ್‍ಐ ಸುಖ್‍ಪಾಲ್ ಸಿಂಗ್ ಪವಾರ್, ಅದೇ ನಗರದ ವಕೀಲೆಯ ಜೊತೆಗೆ ರೆಸ್ಟೋರೆಂಟ್‍ಗೆ ಬಂದಿದ್ದಾರೆ. ಆರ್ಡರ್ ಮಾಡಿ ಹಲವು ಸಮಯ ಕಳೆದರೂ ಊಟವನ್ನ ತಂದುಕೊಡದ ಕಾರಣ ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆದಿದೆ.

    ಸಿಬ್ಬಂದಿ ಜೊತೆ ಜಗಳವಾಡುತ್ತಿದ್ದನ್ನು ಗಮನಿಸಿದ ರೆಸ್ಟೋರೆಂಟ್ ಮಾಲೀಕನಾದ ಮನೀಶ್ ಕುಮಾರ್, ಎಸ್‍ಐ ಸುಖ್‍ಪಾಲ್ ಜೊತೆ ಮಾತಿಗಿಳಿದಿದ್ದಾನೆ. ನೋಡ ನೋಡುತ್ತಿದ್ದಂತೆ ಎಸ್‍ಐಗೆ ಹಿಗ್ಗಾ-ಮುಗ್ಗಾ ಥಳಿಸಿದ ಮನೀಶ್, ಎಸ್‍ಐ ಅವರನ್ನ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ.

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಬಿಜೆಪಿ ಕೌನ್ಸಿಲರ್ ಮನೀಶ್ ವಿರುದ್ಧ ಪೊಲೀಸರು ಸೆಕ್ಷನ್ 395 (ಗೂಂಡಾಗಿರಿ) 354 (ಮಹಿಳೆಯ ಮೇಲೆ ಹಲ್ಲೆ) ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಮಾಲೀಕನನ್ನು ಬಂಧಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv