Tag: Cough Syrup

  • ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳ ಸಾವು ಕೇಸ್ – ಸ್ರೇಸನ್ ಲೈಸೆನ್ಸ್ ರದ್ದು, ಕಂಪನಿ ಬಂದ್

    ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳ ಸಾವು ಕೇಸ್ – ಸ್ರೇಸನ್ ಲೈಸೆನ್ಸ್ ರದ್ದು, ಕಂಪನಿ ಬಂದ್

    ಚೆನ್ನೈ: ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರಿಫ್ ಕೆಮ್ಮಿನ ಸಿರಪ್ (Cough Syrup) ತಯಾರಕ ಕಂಪನಿ ಸ್ರೇಸನ್ ಫಾರ್ಮಾಸ್ಯುಟಿಕಲ್‌ನ (Sresan Pharmaceutical) ಉತ್ಪಾದನಾ ಪರವಾನಗಿಯನ್ನು ತಮಿಳುನಾಡು ಔಷಧ ನಿಯಂತ್ರಣ ಇಲಾಖೆ ಸೋಮವಾರ ರದ್ದುಗೊಳಿಸಿದೆ.

    ಅಲ್ಲದೇ ಕಂಪನಿಯನ್ನು ಮುಚ್ಚುವಂತೆ ಆದೇಶ ನೀಡಿದೆ. ಈ ಔಷಧದಲ್ಲಿ ವಿಷಕಾರಿ ದ್ರಾವಣವಾದ ಡೈಎಥಿಲೀನ್ ಗ್ಲೈಕೋಲ್ (DEG) 48.6% ಇರುವುದು ಪತ್ತೆಯಾಗಿದೆ. ಈ ಔಷಧವು ಮಧ್ಯಪ್ರದೇಶದಲ್ಲಿ ಮಕ್ಕಳ ಸಾವಿಗೆ ಕಾರಣವಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳ ಸಾವು ಕೇಸ್ – ಚೆನ್ನೈನ 7 ಸ್ಥಳಗಳ ಮೇಲೆ ಇಡಿ ದಾಳಿ

    ವಿಷಕಾರಿ ದ್ರಾವಣವಾದ ಡೈಎಥಿಲೀನ್ ಗ್ಲೈಕೋಲ್‌ವಿರುವ ಸ್ರೇಸನ್ ಕಂಪನಿಯನ್ನು ಅಧಿಕೃತವಾಗಿ ಮುಚ್ಚಲಾಗಿದೆ ಎಂದು ತಮಿಳುನಾಡು ಆರೋಗ್ಯ ಇಲಾಖೆ ತಿಳಿಸಿದೆ. ಅಲ್ಲದೇ ತಮಿಳುನಾಡಿನ ಎಲ್ಲಾ ಔಷಧ ಉತ್ಪಾದನಾ ಘಟಕಗಳಲ್ಲಿ ಸಮಗ್ರ ತಪಾಸಣೆಗೆ ಇಲಾಖೆ ಆದೇಶಿಸಿದೆ.

    ಏನಿದು ಪ್ರಕರಣ?
    ಮಧ್ಯಪ್ರದೇಶ, ರಾಜಸ್ಥಾನದಲ್ಲಿ ವಿಷಕಾರಿ ದ್ರಾವಣವಾದ ಡೈಎಥಿಲಿನ್ ಗ್ಲೈಕಾಲ್ ಮತ್ತು ಎಥಿಲಿನ್ ಗ್ಲೈಕಾಲ್ ಇರುವ ಸಿರಪ್ ಸೇವಿಸಿದ 20 ಮಕ್ಕಳು ಮೂತ್ರಪಿಂಡ ಸೋಂಕಿನಿಂದ ಮೃತಪಟ್ಟಿದ್ದರು. ಕೆಲ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿದ್ದರು.

    ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ತಯಾರಿಸುವ ಸ್ರೇಸನ್ ಫಾರ್ಮಾ ಮಾಲೀಕ ರಂಗನಾಥನ್‌ನನ್ನು ಮಧ್ಯಪ್ರದೇಶ ಪೊಲೀಸರು ಚೆನ್ನೈನಲ್ಲಿ ಬಂಧಿಸಿದ್ದರು. ಅಲ್ಲದೇ ಈ ಪ್ರಕರಣವನ್ನು ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

    ಅಲ್ಲದೇ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಚೆನ್ನೈನಲ್ಲಿ ಸ್ರೇಸನ್ ಫಾರ್ಮಾ ಮತ್ತು ತಮಿಳುನಾಡು ಔಷಧ ನಿಯಂತ್ರಣ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಂಬಂಧಿಸಿದ 7 ಸ್ಥಳಗಳ ಮೇಲೆ ದಾಳಿ ಮಾಡಿತ್ತು.

  • Explainer: 20ಕ್ಕೂ ಅಧಿಕ ಮಕ್ಕಳ ಪ್ರಾಣ ಕಸಿದುಕೊಂಡ ಕೋಲ್ಡ್ರಿಫ್ ಕಾಫ್‌ ಸಿರಪ್‌ – ಮುನ್ನೆಚ್ಚರಿಕೆ ಏನು?

    Explainer: 20ಕ್ಕೂ ಅಧಿಕ ಮಕ್ಕಳ ಪ್ರಾಣ ಕಸಿದುಕೊಂಡ ಕೋಲ್ಡ್ರಿಫ್ ಕಾಫ್‌ ಸಿರಪ್‌ – ಮುನ್ನೆಚ್ಚರಿಕೆ ಏನು?

    ಧ್ಯಪ್ರದೇಶದಲ್ಲಿ ಮಾರಕ ಕೆಮ್ಮಿನ ಸಿರಪ್ ಸೇವಿಸಿ ಮೂತ್ರಪಿಂಡ ವೈಫಲ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಮತ್ತೆ 6 ಮಕ್ಕಳು ಸಾವನ್ನಪ್ಪಿದ್ದು, ರಾಜ್ಯದಲ್ಲಿ ಸಾವನ್ನಪ್ಪಿದ ಮಕ್ಕಳ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಕೆಮ್ಮಿಗೆ ತೆಗದುಕೊಂಡ ಸಿರಪ್ ಮಕ್ಕಳ ಪ್ರಾಣವನ್ನೇ ಕಸಿದುಕೊಂಡಿದೆ. ಮಕ್ಕಳಿಗೆ ಸಿರಪ್‌ ನೀಡುವ ಮುನ್ನ ಪೋಷಕರು ನೂರು ಬಾರಿ ಯೋಚಿಸುವ ಪರಿಸ್ಥಿತಿ ಬಂದೊದಗಿದೆ. ಹಾಗಿದ್ರೆ ಮಕ್ಕಳು ಸಾವನ್ನಪ್ಪಲು ಸಿರಪ್‌ ಕಾರಣವಾಗಿದ್ದು ಹೇಗೆ? ಮಕ್ಕಳಲ್ಲಿ ಕಿಡ್ನಿ ವೈಪಲ್ಯಗೊಳ್ಳಲು ಕಾರಣವೇನು? ಮಕ್ಕಳಿಗೆ ಸಿರಪ್‌ ನೀಡುವ ಮುನ್ನ ಪೋಷಕರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಏನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

    ಮಧ್ಯಪ್ರದೇಶ ಸಿರಪ್‌ ದುರಂತ:
    ಚೆನ್ನೈ ಮೂಲದ ಸ್ರೆಸನ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ ಮಕ್ಕಳ ಕೆಮ್ಮಿನ ಸಿರಪ್ ಸೇವನೆಯಿಂದಾಗಿ 20ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿರುವ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದೆ. ಮಕ್ಕಳಿಗೆ ಕೆಮ್ಮು, ಶೀತ ಅಂತಾ ಸಿರಪ್‌ ಹಾಕಲು ಪೋಷಕರನ್ನು ನೂರು ಬಾರಿ ಯೋಚಿಸುವಂತೆ ಮಾಡಿದೆ. ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯಲ್ಲಿ, ಶೀತಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳು, ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಕುಡಿದ ನಂತರ ಕಿಡ್ನಿ ವೈಪಲ್ಯದಿಂದ ಸಾವನ್ನಪ್ಪಿದ್ದಾರೆ. ಸಿರಪ್ ಮಾದರಿಗಳಲ್ಲಿ ವಿಷಕಾರಿ ದ್ರಾವಕವಾದ ಡೈಥಿಲೀನ್ ಗ್ಲೈಕೋಲ್ ಹೆಚ್ಚಿರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸೆಪ್ಟೆಂಬರ್ ಮೊದಲಾರ್ಧದಲ್ಲಿ, ಚಿಂದ್ವಾರ ಜಿಲ್ಲೆಯಲ್ಲಿ, ಕಿಡ್ನಿ ವೈಫಲ್ಯದಿಂದ ಮಕ್ಕಳು ಸಾವನ್ನಪ್ಪುತ್ತಿರುವ ಘಟನೆ ವರದಿಯಾಗಲು ಆರಂಭವಾಗಿತ್ತು. ಮೃತ ಮಕ್ಕಳ ಪೋಷಕರು ಒಂದೇ ರೀತಿಯ ಲಕ್ಷಣಗಳ ಬಗ್ಗೆ ಹೇಳಿದರು. ಈ ಸಿಪರ್‌ ಸೇವಿಸಿದ ನಂತರ ಮಕ್ಕಳಲ್ಲಿ ಮೊದಲಿಗೆ ಶೀತ ಕಡಿಮೆಯಾಗಿದೆ, ನಂತರ ಉಸಿರಾಟದ ತೊಂದರೆ ಕಂಡುಬಂದಿದೆ. ಕೊನೆಯಲ್ಲಿ ಮೂತ್ರ ವಿಸರ್ಜನೆಯಲ್ಲಿ ಹಠಾತ್ ಕುಸಿತ ಮತ್ತು ಮೂತ್ರಪಿಂಡ ವೈಫಲ್ಯಗೊಂಡು ಮಕ್ಕಳು ಸಾವನ್ನಪ್ಪಿದ್ದಾರೆ.

    ಈ ಮೊದಲು ಮಧ್ಯಪ್ರದೇಶದ ಛಿಂದ್ವಾಡದ 14 ಮಕ್ಕಳು ವಿಷಕಾರಿ ಕೆಮ್ಮಿನ ಸಿರಪ್ ಸೇವಿಸಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ದೃಢಪಡಿಸಿತ್ತು. ಅದಾದ ಬಳಿಕ ಮತ್ತೆ ಮಂಗಳವಾರ (ಅ.7) ಛಿಂದ್ವಾಡದಲ್ಲಿ 4 ಹಾಗೂ ಬೇತುಲ್‌ನಲ್ಲಿ 2 ಮಕ್ಕಳು ಸಾವನ್ನಪ್ಪಿದ್ದಾರೆ. ಇನ್ನೂ 6 ಮಕ್ಕಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 5 ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

    ಸಿರಪ್ ಸೇವಿಸಿ ಅಸ್ವಸ್ಥರಾದ ಮಕ್ಕಳ ಚಿಕಿತ್ಸೆಯ ಖರ್ಚನ್ನು ತಾನೇ ಭರಿಸುವುದಾಗಿ ಮಧ್ಯಪ್ರದೇಶ ಸರ್ಕಾರ ಘೋಷಿಸಿದೆ. ಅತ್ತ ಕೋಲ್ಡ್ರಿಫ್‌ನಲ್ಲಿ ನರಸಂಬಂಧಿ ಕಾಯಿಲೆಗೆ ಕಾರಣವಾಗಬಹುದಾದ ಅಂಶ ಕಂಡುಬಂದದ್ದರಿಂದ, ಅದರ ಉತ್ಪಾದಕ ಸ್ರೆಸನ್ ಫಾರ್ಮಾಸುಟಿಕಲ್ಸ್‌ ಕಂಪನಿಯ ಮಾಲೀಕ ರಂಗನಾಥನ್‌ನನ್ನು ಪೊಲೀಸರು ಬಂಧಿಸಿದ್ದಾರೆ.

    ಮಧ್ಯಪ್ರದೇಶದಲ್ಲಿ ಸಿರಪ್‌ ದುರಂತದ ಬಳಿಕ ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರಿಫ್‌ ಸಿರಪ್‌ ಅನ್ನು ಹಲವು ರಾಜ್ಯಗಳಲ್ಲಿ ನಿಷೇಧಿಸಲಾಯಿತು. ಈ ಬೆನ್ನಲ್ಲೇ ಸ್ರೆಸನ್‌ ಫಾರ್ಮಾ ಕಂಪನಿಯ ಮಾಲೀಕ ರಂಗನಾಥನ್‌ ತಲೆಮರೆಸಿಕೊಂಡಿದ್ದ. ರಂಗನಾಥನ್‌ ಬಗ್ಗೆ ಮಾಹಿತಿ ನೀಡಿದವರಿಗೆ 20,000 ರೂ. ಬಹುಮಾನವನ್ನೂ ಘೋಷಿಸಲಾಗಿತ್ತು. ಅಂತಿಮವಾಗಿ ಚೆನ್ನೈನಲ್ಲಿ ರಂಗನಾಥನ್‌ನನ್ನು ಪೊಲೀಸರು ಸೆರೆಹಿಡಿದಿದ್ದಾರೆ.

    ಡೈಥಿಲೀನ್ ಗ್ಲೈಕೋಲ್ ಪತ್ತೆ:
    ಅಧಿಕಾರಿಗಳ ಪ್ರಕಾರ, ಚೆನ್ನೈನ ಔಷಧ ಪರೀಕ್ಷಾ ಪ್ರಯೋಗಾಲಯದಲ್ಲಿ ಸರ್ಕಾರಿ ಔಷಧ ವಿಶ್ಲೇಷಕರು ನಡೆಸಿದ ಪ್ರಯೋಗಾಲಯ ವಿಶ್ಲೇಷಣೆಯಲ್ಲಿ ಸಿರಪ್‌ನಲ್ಲಿ ಶೇ.48.6 ರಷ್ಟು ಡೈಥಿಲೀನ್ ಗ್ಲೈಕೋಲ್ ಇರುವುದು ಪತ್ತೆಯಾಗಿದೆ. ಎರಡೂ ರಾಸಾಯನಿಕಗಳು ಕೈಗಾರಿಕಾ ದ್ರಾವಕಗಳಾಗಿವೆ ಮತ್ತು ಔಷಧೀಯ ಬಳಕೆಗೆ ನಿಷೇಧಿಸಲಾಗಿದೆ. ಇದು ಸಣ್ಣ ಪ್ರಮಾಣದಲ್ಲಿ ಸಹ ಮಾರಕವಾಗಬಹುದು, ವಿಶೇಷವಾಗಿ ಮಕ್ಕಳಿಗೆ ಪ್ರಾಣಕ್ಕೆ ಕುತ್ತು ತರುವಂತಹ ಅಂಶ ಇದಾಗಿದೆ.

    ಪರವಾನಗಿ ರದ್ದು:
    ಘಟನೆಯ ನಂತರ, ಮಧ್ಯಪ್ರದೇಶ ಸರ್ಕಾರವು ಕೋಲ್ಡ್ರಿಫ್ ತಯಾರಿಸುವ ತಮಿಳುನಾಡು ಮೂಲದ ಕಾಂಚೀಪುರಂನಲ್ಲಿರುವ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಸ್ರೆಸನ್‌ ಉತ್ಪಾದನಾ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಮತ್ತು ಕಂಪನಿಯ ವಿರುದ್ಧ ಪ್ರಕರಣ ದಾಖಲಿಸಿದೆ. ಈ ಘಟನೆ ಬೆನ್ನಲ್ಲೇ, ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಮತ್ತು ಶೀತ ಸಿರಪ್‌ಗಳನ್ನು ಶಿಫಾರಸು ಮಾಡಬಾರದು ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದೆ.

    ಸಿರಪ್ ತಯಾರಿಸಿದ ಕಂಪನಿ ಮತ್ತು ಕೋಲ್ಡ್ರಿಫ್ ಸಿರಪ್‌ ತೆಗೆದುಕೊಳ್ಳುವಂತೆ ಪ್ರಿಸ್ಕ್ರಿಪ್ಷನ್‌ ನೀಡಿದ ವೈದ್ಯ ಡಾ. ಸೋನಿ ವಿರುದ್ಧ ಪರಾಸಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಪ್ರವೀಣ್ ಸೋನಿಯನ್ನು ಬಂಧಿಸಲಾಗಿದೆ. ಇಬ್ಬರ ಮೇಲೂ, ಭಾರತೀಯ ನ್ಯಾಯ ಸಂಹಿತಾ (ಕಲಬೆರಕೆ ಔಷಧಿಗಳ ಮಾರಾಟ) ಸೆಕ್ಷನ್ 276 ಮತ್ತು ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆ, 1940 ರ ಸೆಕ್ಷನ್ 27A ಅಡಿಯಲ್ಲಿ ಕೇಸ್‌ ದಾಖಲಾಗಿದೆ.

    ಡೈಥಿಲೀನ್ ಗ್ಲೈಕಾಲ್, ಎಥಿಲೀನ್ ಗ್ಲೈಕಾಲ್ ಏಕೆ ಡೇಂಜರ್?
    ಡೈಥಿಲೀನ್ ಗ್ಲೈಕಾಲ್ ಮತ್ತು ಎಥಿಲೀನ್ ಗ್ಲೈಕಾಲ್ ಸಿರಪ್ ದ್ರವಗಳಾಗಿವೆ. ಇವುಗಳನ್ನು ಉದ್ಯಮದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ, ಆದರೆ ಸೇವನೆಗೆ ಸೂಕ್ತವಲ್ಲ. ಅದರಲ್ಲೂ ಮಕ್ಕಳಿಗೆ ಅಪಾಯಕಾರಿ. ದೇಹದಲ್ಲಿ, ಇವು ಚಯಾಪಚಯ ಆಮ್ಲವ್ಯಾಧಿಯನ್ನು ಪ್ರಚೋದಿಸಬಹುದು ಮತ್ತು ತ್ವರಿತ ಮೂತ್ರಪಿಂಡ ಮತ್ತು ಯಕೃತ್ತಿನ ವೈಫಲ್ಯ, ನರವೈಜ್ಞಾನಿಕ ಹಾನಿ ಮತ್ತು ಸಾವಿಗೆ ಕಾರಣವಾಗಬಹುದು. ಈ ಔಷಧಿ ಮಕ್ಕಳಿಗೆ ವಿಶೇಷವಾಗಿ ದುರ್ಬಲವಾಗಿದ್ದು, ಸ್ವಲ್ಪ ಪ್ರಮಾಣದ ಸೇವನೆ ಕೂಡ ಅಂಗಾಂಗ ವೈಫಲ್ಯಕ್ಕೆ ಕಾರಣವಾಗಬಹುದು.

    ಛಿಂದ್ವಾರಾ ದುರಂತದ ಬಳಿಕ ಮಧ್ಯಪ್ರದೇಶವು ಕೋಲ್ಡ್ರಿಫ್ ಮತ್ತು ಸ್ರೆಸನ್ ಫಾರ್ಮಾಸ್ಯುಟಿಕಲ್ಸ್‌ನ ಎಲ್ಲಾ ಉತ್ಪನ್ನಗಳ ಮೇಲೆ ಸಂಪೂರ್ಣ ನಿಷೇಧ ಹೇರಿದೆ. ಮುಖ್ಯಮಂತ್ರಿ ಮೋಹನ್ ಯಾದವ್ ʼತಪ್ಪಿತಸ್ಥರನ್ನು ಬಿಡುವುದಿಲ್ಲʼ ಎಂದು ಘೋಷಿಸಿದ್ದಾರೆ. ಅಲ್ಲದೇ ಕೆಮ್ಮಿನ ಸಿರಪ್ ಸೇವನೆಯಿಂದ ಸಾವನ್ನಪ್ಪಿದ ಮಕ್ಕಳ ಕುಟುಂಬಗಳಿಗೆ ತಲಾ 4 ಲಕ್ಷ ರೂ.ಗಳ ಆರ್ಥಿಕ ಸಹಾಯವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.

    ತಮಿಳುನಾಡಿನಲ್ಲಿ, ಪ್ರಯೋಗಾಲಯ ಪರೀಕ್ಷೆಗಳಲ್ಲಿ ಶೇಕಡಾ 48.6 ರಷ್ಟು ಡೈಥಿಲೀನ್ ಗ್ಲೈಕೋಲ್ ಪತ್ತೆಯಾದ ನಂತರ ರಾಜ್ಯ ಸರ್ಕಾರ ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ಅದರ ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸಿದೆ. ಅಲ್ಲದೇ ತಯಾರಕರ ಪರವಾನಗಿಯನ್ನು ರದ್ದುಗೊಳಿಸಿದೆ, ಕ್ರಿಮಿನಲ್ ಮೊಕದ್ದಮೆ ಹೇರಿದೆ ಮತ್ತು ಔಷಧ ನಿಯಂತ್ರಣ ಇಲಾಖೆಯು ಸಿರಪ್ ಮಾರಾಟ ಅಥವಾ ಸೇವನೆಯ ವಿರುದ್ಧ ಸಾರ್ವಜನಿಕ ಸೂಚನೆಯನ್ನು ನೀಡಿದೆ. ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತವು ಮಾರಾಟವನ್ನು ಸ್ಥಗಿತಗೊಳಿಸಿದೆ ಮತ್ತು ಸಂಬಂಧಿತ ಬ್ಯಾಚ್‌ನ ದಾಸ್ತಾನನ್ನು ವಶಪಡಿಸಿಕೊಂಡಿದೆ, ಕೇರಳವು ಕೂಡ ವಿತರಣೆಯನ್ನು ಸ್ಥಗಿತಗೊಳಿಸಿದೆ.

    ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶಗಳಲ್ಲಿ ಕಾಫ್​ ಸಿರಪ್​ ಕುಡಿದ ಮಕ್ಕಳು ಸಾವನ್ನಪ್ಪಿದ ಹಿನ್ನೆಲೆ ಸಣ್ಣ ಮಕ್ಕಳಿಗೆ ಕಾಫ್​ ಸಿರಪ್​ ಕೊಡದಂತೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಇದರ ನಡುವೆ ಮಧ್ಯಪ್ರದೇಶ, ತಮಿಳುನಾಡು, ಕೇರಳ, ರಾಜಸ್ಥಾನ, ತೆಲಂಗಾಣದಲ್ಲಿ ಕೋಲ್ಡ್ರಿಫ್ ಸಿರಪ್ ಮಾರಾಟ ನಿಷೇಧ ಮಾಡಲಾಗಿದೆ. ಕೋಲ್ಡ್ರಿಫ್‌ ಕೆಮ್ಮಿನ ಸಿರಪ್‌ನಿಂದ ಸಾವುಗಳು ಸಂಭವಿಸುತ್ತಿರುವ ಪರಿಣಾಮ ಅದರ ಮಾರಾಟ, ವಿತರಣೆ ಮತ್ತು ಬಳಕೆಯನ್ನು ಪಂಜಾಬ್ ಸರ್ಕಾರ ನಿಷೇಧಿಸಿದೆ. ಅಲ್ಲದೇ ಮಕ್ಕಳ ಸರಣಿ ಸಾವಿನ ಬಳಿಕ ಕರ್ನಾಟಕದಲ್ಲಿಯೂ ಆರೋಗ್ಯ ಇಲಾಖೆ ಮಹತ್ವದ ಸಭೆ ನಡೆಸಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

    ಮಾರ್ಗಸೂಚಿಯಲ್ಲಿ ಏನಿದೆ?
    ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಮ್ಮು, ಶೀತದಂತಹ ಯಾವುದೇ ಸಿರಪ್ ನೀಡಬಾರದು 2 ರಿಂದ 5 ವರ್ಷದೊಳಗಿನ ಮಕ್ಕಳಿಗೆ ಸರಿಯಾದ ವೈದ್ಯಕೀಯ ಪರೀಕ್ಷೆ ನಂತರ ತಜ್ಞ ವೈದ್ಯರ ಸಲಹೆ ಮೇರೆಗೆ ಮಾತ್ರ ಔಷಧಿ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

    ಕಡಿಮೆ ಅವಧಿಗೆ ಕನಿಷ್ಠ ಡೋಸ್ ಬಳಸಿ:
    5 ವರ್ಷದ ಮಕ್ಕಳಿಗೂ ಕೆಮ್ಮಿನ ಸಿರಪ್ ಅನ್ನು ವೈದ್ಯರ ಸಲಹೆ ಮೇರೆಗೆ ಮಾತ್ರ ಬಳಸತಕ್ಕದ್ದು. ಸಾಧ್ಯವಾದಷ್ಟು ಕಡಿಮೆ ಅವಧಿಗೆ ಕನಿಷ್ಠ ಡೋಸ್ ಬಳಸಿ. ಬಹು ಔಷಧಿಗಳ ಸಂಯೋಜನೆ ಇರುವ ಸಿರಪ್ ಉಪಯೋಗಿಸಬಾರದು ಎಂದು ಗೈಡ್​​ಲೈನ್​​ನಲ್ಲಿ ತಿಳಿಸಲಾಗಿದೆ.

    ಮನೆ ಮದ್ದುಗಳ ಬಳಕೆ ಉತ್ತಮ:
    ಸುರಕ್ಷಿತ ಮನೆಮದ್ದುಗಳ ಬಳಕೆ ಉತ್ತಮವಾಗಿದೆ. ಹೆಚ್ಚಿನ ಸಂದರ್ಭದಲ್ಲಿ ಮಕ್ಕಳಲ್ಲಿ ಕೆಮ್ಮು , ಶೀತ ಸೌಮ್ಯವಾಗಿರುತ್ತದೆ. ಸುರಕ್ಷಿತ ಕ್ರಮಗಳಿಂದ ನಿಧಾನವಾಗಿ ಉತ್ತಮಗೊಳ್ಳುತ್ತದೆ. ಪೋಷಕರು ಮಕ್ಕಳಿಗೆ ಸಾಕಷ್ಟು ದ್ರವ ಪದಾರ್ಥಗಳನ್ನು ನೀಡುವುದು. ಸಾಕಷ್ಟು ವಿಶ್ರಾಂತಿ, ನಿದ್ದೆ ಮಾಡಲು ಅವಕಾಶ ನೀಡುವುದು, ಪೌಷ್ಟಿಕ ಆಹಾರ ನೀಡುವುದು ಉತ್ತಮ.

    ಹಳೆಯ ಸಿರಪ್ ಬಳಸಬೇಡಿ:
    ಸ್ವಯಂ ಔಷಧೋಪಚರ ಮಾಡಬೇಡಿ. ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೇ ಕೆಮ್ಮಿನ ಸಿರಪ್ ಖರೀದಿಸಬೇಡಿ, ಬಳಸಲೂಬೇಡಿ. ಈ ಹಿಂದೆ ಬಳಸಿ ಉಳಿದ ಔಷಧಿಗಳನ್ನು , ಇತರರು ಶಿಫಾರಸು ಮಾಡಿದ ಔಷಧಿಗಳನ್ನು ಬಳಸಬೇಡಿ. ಯಾವುದೇ ಅಸಹಜ ಪ್ರಕ್ರಿಯೆ, ನಿದ್ರಾವಸ್ಥೆ, ವಾಂತಿ, ಉಸಿರಾಟದ ತೊಂದರೆ ಇದ್ದರೆ ತಕ್ಷಣ ಹತ್ತಿರದ ವೈದ್ಯರನ್ನು ಸಂಪರ್ಕಿಸಿ. ಯಾವಾಗಲೂ ಔಷಧಗಳ ಎಕ್ಸ್‌ಪರಿ ಡೇಟ್ ಖಚಿತಪಡಿಸಿಕೊಳ್ಳಿ.

    ಮಕ್ಕಳಿಗೆ ಉಸಿರಾಟದ ತೊಂದರೆ, ನಿರಂತರ ಕೆಮ್ಮು, ಅತಿಯಾದ ಜ್ವರ, ಆಹಾರ ತಿರಸ್ಕಾರ, ನಿದ್ರಾವಸ್ಥೆ ಈ ಗುಣಲಕ್ಷಣಗಳು ಕಂಡು ಬಂದರೆ ಆರೋಗ್ಯ ಕೇಂದ್ರಗಳಿಗೆ ಭೇಟಿ‌ ನೀಡುವುದು ಉತ್ತಮ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

    ಕರ್ನಾಟಕದಲ್ಲಿ ಮಾರಾಟವಾಗುತ್ತಿರುವ ಎರಡು ಕೆಮ್ಮಿನ ಸಿರಪ್‌ಗಳು ಅಸುರಕ್ಷಿತ ಎಂಬುದು ಆರೋಗ್ಯ ಇಲಾಖೆಯ ಪ್ರಯೋಗಾಲಯ ವರದಿಯಿಂದ ದೃಢಪಟ್ಟಿದೆ. ರಾಜಸ್ಥಾನ, ಮಧ್ಯಪ್ರದೇಶದಲ್ಲಿ 14 ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರಿಫ್ ಸಿರಪ್‌ನ ಬ್ಯಾಚ್ SR-13ರಲ್ಲಿ ವಿಷಕಾರಿ ಅಂಶ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡುವ ಬಗ್ಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಮಾತ್ರವಲ್ಲದೇ ವೈದ್ಯರ ಸಲಹೆಯನ್ನು ಕಡ್ಡಾಯಗೊಳಿಸಿದೆ.

  • 6 ತಿಂಗಳ ಮಗುವಿಗೆ ಕೆಮ್ಮಿದ್ದರೆ ಎದೆಹಾಲುಣಿಸಿ, ಸಿರಪ್ ನೀಡಬೇಡಿ: ವೈದ್ಯಕೀಯ ಇಲಾಖೆ ಗೈಡ್‌ಲೈನ್ಸ್ ಏನು?

    6 ತಿಂಗಳ ಮಗುವಿಗೆ ಕೆಮ್ಮಿದ್ದರೆ ಎದೆಹಾಲುಣಿಸಿ, ಸಿರಪ್ ನೀಡಬೇಡಿ: ವೈದ್ಯಕೀಯ ಇಲಾಖೆ ಗೈಡ್‌ಲೈನ್ಸ್ ಏನು?

    – ಕಿಲ್ಲರ್ ಕೆಮ್ಮಿನ ಸಿರಪ್ ಕೇಸ್; ಪ್ರತಿಷ್ಟಿತ ಹೆರಿಗೆ ಆಸ್ಪತ್ರೆ, ಮಕ್ಕಳ ಆಸ್ಪತ್ರೆಗೆ ವಿಶೇಷ ಸೂಚನೆ

    ಬೆಂಗಳೂರು: ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್ (Cough Syrup) ಸೇವಿಸಿ 6 ಮಕ್ಕಳು ಸಾವನ್ನಪ್ಪಿದ ಬಳಿಕ, ಸಿರಪ್ ಬಳಕೆಗೆ ಆರೋಗ್ಯ ಇಲಾಖೆ ಗೈಡ್‌ಲೈನ್ಸ್ ಬಿಡುಗಡೆ ಮಾಡಿತ್ತು. ಈಗ ವೈದ್ಯಕೀಯ ಶಿಕ್ಷಣ ಇಲಾಖೆ (Medical Education Department) ಕೂಡ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಹೆರಿಗೆ ಆಸ್ಪತ್ರೆಗಳಲ್ಲಿ ವೈದ್ಯರು, ಗರ್ಭಿಣಿಯರು ಹಾಗೂ ಬಾಣಂತಿಯರ ಬಗ್ಗೆ ಎಚ್ಚರಿಕೆ ವಹಿಸುತ್ತಾ ಇದ್ದಾರೆ.

    ಹೊರ ರಾಜ್ಯಗಳಲ್ಲಿ ಸಿರಪ್‌ನಿಂದ ಮಕ್ಕಳು ಸಾವನ್ನಪ್ಪಿದ ಪ್ರಕರಣದ ಬಳಿಕ ಎಲ್ಲಾ ರಾಜ್ಯಗಳಲ್ಲೂ ಮಾರ್ಗಸೂಚಿ ಬಿಡುಗಡೆ ಆಗಿದೆ. ಕರ್ನಾಟಕದ ಆರೋಗ್ಯ ಇಲಾಖೆಯಿಂದ ಕೂಡ ಮಾರ್ಗಸೂಚಿ ಬಿಡುಗಡೆ ಆಗಿತ್ತು. ಈಗ ವೈದ್ಯಕೀಯ ಶಿಕ್ಷಣ ಇಲಾಖೆಯೂ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಮೆಡಿಕಲ್ ಕಾಲೇಜು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಸ್ಪತ್ರೆಗಳು ಮಾರ್ಗಸೂಚಿಯನ್ನು ಅನುಸರಿಸುವಂತೆ ಸೂಚಿಸಿದೆ.

    ಅದರಲ್ಲೂ ಹೆರಿಗೆ ಆಸ್ಪತ್ರೆಗಳು ಗರ್ಭಿಣಿಯರ ಮೇಲೆ ಹೆಚ್ಚು ನಿಗಾವಹಿಸಬೇಕು ಎಂದು ಸೂಚಿಸಿದ್ದು, ವಾಣಿ ವಿಲಾಸ ಆಸ್ಪತ್ರೆಗೆ ಬರುವ ಬಾಣಂತಿಯರು ಮತ್ತು ಪೋಷಕರಿಗೆ ಸಿರಪ್ ಬಳಕೆ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುತ್ತಿದ್ದಾರೆ.

    ಸಿರಪ್ ಬಳಕೆಗೆ ಮುಂಜಾಗ್ರತಾ ಕ್ರಮವೇನು?
    * ಆರು ತಿಂಗಳ ಮಗುವಿಗೆ ಕೆಮ್ಮಿದ್ದರೆ ಎದೆ ಹಾಲುಣಿಸಬೇಕು. ಸಿರಪ್ ನೀಡಬಾರದು.
    * ಮಗುವಿಗೆ ನ್ಯುಮೋನಿಯಾದಂತಹ ಲಕ್ಷಣ ಕಂಡುಬಂದಾಗ ಸಿರಪ್ ಬಳಕೆ ಮಾಡಬಾರದು. ವೈದ್ಯರ ಸಲಹೆ ಪಡೆಯಬೇಕು.
    * ಮಗು ಅನಾರೋಗ್ಯ ತಪ್ಪಿದಾಗ ವೈದ್ಯರನ್ನ ಭೇಟಿ ಮಾಡಬೇಕು.
    * ಮಗುವಿಗೆ ಕೆಮ್ಮು ಜಾಸ್ತಿ ಆದಾಗ ವೈದ್ಯರ ಸಲಹೆ ಮೇರೆಗೆ ಔಷಧಿ ಕೊಡಬೇಕು.
    * ಯಾವುದೇ ಸಿರಪನ್ನು ದೀರ್ಘಕಾಲದವರೆಗೂ ಬಳಸಬಾರದು.

    ಒಟ್ಟಾರೆ ಸಿರಪ್ ಬಗ್ಗೆ ಎಚ್ಚರಿಕೆಯ ಅಗತ್ಯವಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ವೈದ್ಯರು ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ನಿಯಮಗಳನ್ನ ಪಾಲಿಸಬೇಕಾಗಿದೆ.

  • ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್‌ ಸೇವಿಸಿ ಮಕ್ಕಳು ಸಾವು ಕೇಸ್‌ – CBI ತನಿಖೆಗೆ ನೀಡಲು ಸುಪ್ರೀಂ ನಕಾರ

    ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್‌ ಸೇವಿಸಿ ಮಕ್ಕಳು ಸಾವು ಕೇಸ್‌ – CBI ತನಿಖೆಗೆ ನೀಡಲು ಸುಪ್ರೀಂ ನಕಾರ

    ಭೋಪಾಲ್: ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್ (Cough Syrup) ಸೇವಿಸಿ ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (CBI) ತನಿಖೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ (Supreme Court) ವಜಾಗೊಳಿಸಿದೆ.

    ವಕೀಲ ವಿಶಾಲ್ ತಿವಾರಿ ಸಲ್ಲಿಸಿದ್ದ ಅರ್ಜಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠ ತಿರಸ್ಕರಿಸಿದೆ. ಇದನ್ನೂ ಓದಿ: ಕೆಮ್ಮಿನ ಸಿರಪ್ ಸೇವಿಸಿ 20ಕ್ಕೂ ಹೆಚ್ಚು ಮಕ್ಕಳ ಸಾವು – ಫಾರ್ಮಾ ಕಂಪನಿ ಮಾಲೀಕ ಅರೆಸ್ಟ್

    ವಿಷಕಾರಿ ದ್ರಾವಣವಾದ ಡೈಎಥಿಲಿನ್‌ ಗ್ಲೈಕಾಲ್‌ (ಡಿಇಜಿ) ಮತ್ತು ಎಥಿಲಿನ್‌ ಗ್ಲೈಕಾಲ್‌ (ಇಜಿ) ಇರುವ ಸಿರಪ್‌ ಸೇವಿಸಿದ 20 ಮಕ್ಕಳು ಮೂತ್ರಪಿಂಡ ಸೋಂಕಿನಿಂದ ಮೃತಪಟ್ಟಿದ್ದಾರೆ. ಕೆಲ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.

    ಘಟನೆ ಕುರಿತು ಮಧ್ಯಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್‌ರಿಫ್‌ ಕೆಮ್ಮಿನ ಸಿರಪ್‌ ತಯಾರಿಸುವ ಶ್ರೇಸನ್‌ ಫಾರ್ಮಾಸ್ಯುಟಿಕಲ್‌ ಕಾರ್ಖಾನೆ ಮಾಲೀಕನನ್ನು ಈಗಾಗಲೇ ಬಂಧಿಸಲಾಗಿದೆ. ಇದನ್ನೂ ಓದಿ: ಮಧ್ಯಪ್ರದೇಶ | ಕಿಲ್ಲರ್ ಕಾಫ್ ಸಿರಪ್ ಸೇವಿಸಿ ಚಿಕಿತ್ಸೆ ಪಡೆಯುತ್ತಿದ್ದ 6 ಮಕ್ಕಳು ಸಾವು

    ಮಧ್ಯಪ್ರದೇಶ ಘಟನೆ ಬಳಿಕ ಎಚ್ಚೆತ್ತ ತಮಿಳುನಾಡು ಸರ್ಕಾರ, ಶ್ರೇಯಸ್‌ ಫಾರ್ಮಾಸ್ಯುಟಿಕಲ್ಸ್‌ ಕಾರ್ಖಾನೆಗೆ ಬೀಗ ಜಡಿದಿದೆ. ಕಂಪನಿಯ ಇಬ್ಬರಿಗೆ ಶೋಕಾಸ್‌ ನೋಟಿಸ್‌ ನೀಡಿದೆ.

  • ಮಧ್ಯಪ್ರದೇಶ | ಕಿಲ್ಲರ್ ಕಾಫ್ ಸಿರಪ್ ಸೇವಿಸಿ ಚಿಕಿತ್ಸೆ ಪಡೆಯುತ್ತಿದ್ದ 6 ಮಕ್ಕಳು ಸಾವು

    ಮಧ್ಯಪ್ರದೇಶ | ಕಿಲ್ಲರ್ ಕಾಫ್ ಸಿರಪ್ ಸೇವಿಸಿ ಚಿಕಿತ್ಸೆ ಪಡೆಯುತ್ತಿದ್ದ 6 ಮಕ್ಕಳು ಸಾವು

    – ಸಾವಿನ ಸಂಖ್ಯೆ 20ಕ್ಕೆ ಏರಿಕೆ

    ಭೋಪಾಲ್: ಮಧ್ಯಪ್ರದೇಶದಲ್ಲಿ (Madhya Pradesh) ಮಾರಕ ಕೆಮ್ಮಿನ ಸಿರಪ್ (Cough Syrup) ಸೇವಿಸಿ ಮೂತ್ರಪಿಂಡ ವೈಫಲ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಮತ್ತೆ 6 ಮಕ್ಕಳು ಸಾವನ್ನಪ್ಪಿದ್ದು, ರಾಜ್ಯದಲ್ಲಿ ಸಾವನ್ನಪ್ಪಿದ ಮಕ್ಕಳ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

    ಈ ಮೊದಲು ಮಧ್ಯಪ್ರದೇಶದ ಛಿಂದ್ವಾಡದ (Chhindwara) 14 ಮಕ್ಕಳು ವಿಷಕಾರಿ ಕೆಮ್ಮಿನ ಸಿರಪ್ ಸೇವಿಸಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ದೃಢಪಡಿಸಿತ್ತು. ಅದಾದ ಬಳಿಕ ಮತ್ತೆ ಮಂಗಳವಾರ (ಅ.7) ಛಿಂದ್ವಾಡದಲ್ಲಿ 4 ಹಾಗೂ ಬೇತುಲ್‌ನಲ್ಲಿ 2 ಮಕ್ಕಳು ಸಾವನ್ನಪ್ಪಿವೆ. ಇನ್ನೂ 6 ಮಕ್ಕಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 5 ಮಕ್ಕಳ ಸ್ಥಿತಿ ಗಂಭೀರವಾಗಿದೆ.ಇದನ್ನೂ ಓದಿ: ಕೆಮ್ಮಿನ ಸಿರಪ್‌ ಸೇವಿಸಿ ಮಕ್ಕಳ ಸಾವು ಪ್ರಕರಣ – ಸುಪ್ರೀಂಕೋರ್ಟ್‌ಗೆ ಪಿಐಎಲ್

    ಸಿರಪ್ ಸೇವಿಸಿ ಅಸ್ವಸ್ಥರಾದ ಮಕ್ಕಳ ಚಿಕಿತ್ಸೆಯ ಖರ್ಚನ್ನು ತಾನೇ ಭರಿಸುವುದಾಗಿ ಮಧ್ಯಪ್ರದೇಶ ಸರ್ಕಾರ ಘೋಷಿಸಿದೆ. ಈಗಾಗಲೇ ಔಷಧಿ ಉತ್ಪಾದಕ ಕಂಪನಿಗೆ ತಮಿಳುನಾಡು ಸರ್ಕಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

    ಇನ್ನೂ ಪಂಜಾಬ್ ಸರ್ಕಾರ ಕೂಡ ಸಿರಪ್ ಅನ್ನು ನಿಷೇಧಿಸಿದೆ. ಇದರೊಂದಿಗೆ ಪಂಜಾಬ್ ಸಿರಪ್ ನಿಷೇಧಿಸಿದ 6ನೇ ರಾಜ್ಯವಾಗಿ ಹೊರಹೊಮ್ಮಿದೆ. ಸಿರಪ್ ಕುರಿತು ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟಿಗೂ ಅರ್ಜಿ ಸಲ್ಲಿಸಲಾಗಿದೆ.ಇದನ್ನೂ ಓದಿ: ಕರೂರಿನಲ್ಲಿ ಕಾಲ್ತುಳಿತ ಕೇಸ್; ಮೃತರ ಕುಟುಂಬಗಳಿಗೆ ನಟ ವಿಜಯ್ ವಿಡಿಯೋ ಕರೆ – ಸಹಾಯದ ಭರವಸೆ

  • ಕೆಮ್ಮಿನ ಸಿರಪ್‌ ಸೇವಿಸಿ ಮಕ್ಕಳ ಸಾವು ಪ್ರಕರಣ – ಸುಪ್ರೀಂಕೋರ್ಟ್‌ಗೆ ಪಿಐಎಲ್

    ಕೆಮ್ಮಿನ ಸಿರಪ್‌ ಸೇವಿಸಿ ಮಕ್ಕಳ ಸಾವು ಪ್ರಕರಣ – ಸುಪ್ರೀಂಕೋರ್ಟ್‌ಗೆ ಪಿಐಎಲ್

    ನವದೆಹಲಿ: ಮಧ್ಯಪ್ರದೇಶದಲ್ಲಿ (Madhya Pradesh) ಕೆಮ್ಮಿನ ಸಿರಪ್‌ ಸೇವಿಸಿ ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

    ಪಿಐಎಲ್‌ನಲ್ಲಿ, ಕಲುಷಿತ ಕೆಮ್ಮಿನ ಸಿರಪ್ (Cough Syrup) ತಯಾರಿಕೆ, ಪರೀಕ್ಷೆ ಮತ್ತು ವಿತರಣೆಯ ಬಗ್ಗೆ ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.ಇದನ್ನೂ ಓದಿ: 2 ವರ್ಷದೊಳಗಿನ ಮಕ್ಕಳಿಗೆ ಸಿರಪ್ ನೀಡುವಂತಿಲ್ಲ – ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

    ಈಗಾಗಲೇ ಕೆಮ್ಮಿನ ಸಿರಪ್ ಸೇವಿಸಿ 16 ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದಲ್ಲಿ ಡಾ. ಪ್ರವೀಣ್ ಸೋನಿ ಅವರನ್ನು ಬಂಧಿಸಿ ಅಮಾನತುಗೊಳಿಸಲಾಗಿದೆ. ಕೆಮ್ಮಿನ ಸಿರಪ್ ತಯಾರಿಸಿದ ಕಂಪನಿಯ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಕೂಡ ಈ ವಿಷಯದಲ್ಲಿ ಕಠಿಣ ಕ್ರಮ ಕೈಗೊಂಡಿದ್ದಾರೆ. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ ಮತ್ತು ಔಷಧ ನಿಯಂತ್ರಕರನ್ನು ವರ್ಗಾಯಿಸಿದ್ದಾರೆ. ತನಿಖೆಗಾಗಿ ಪೊಲೀಸರು 12 ಸದಸ್ಯರ ವಿಶೇಷ ತನಿಖಾ ತಂಡವನ್ನು ಸಹ ರಚಿಸಿದೆ.

    ಔಷಧ ನಿರೀಕ್ಷಕ ಚಿಂದ್ವಾರ ಗೌರವ್ ಶರ್ಮಾ, ಔಷಧ ನಿರೀಕ್ಷಕ ಜಬಲ್ಪುರ ಶರದ್ ಕುಮಾರ್ ಜೈನ್ ಮತ್ತು ರಾಜ್ಯದ ಆಹಾರ ಮತ್ತು ಔಷಧ ಆಡಳಿತದ ಉಪನಿರ್ದೇಶಕ ಶೋಭಿತ್ ಕೋಸ್ಟಾ ಅವರನ್ನು ಅಮಾನತುಗೊಳಿಸಲಾಗಿದೆ ಮತ್ತು ಐಎಎಸ್ ಅಧಿಕಾರಿ ಔಷಧ ನಿಯಂತ್ರಕ ದಿನೇಶ್ ಮೌರ್ಯ ಅವರನ್ನು ಬೇರೆಡೆಗೆ ವರ್ಗಾಯಿಸಲಾಗಿದೆ.ಇದನ್ನೂ ಓದಿ: ಪತ್ನಿಗೆ ಮೆಸೇಜ್‌ ಮಾಡಿದ್ದಕ್ಕೆ ಸ್ನೇಹಿತನ ಬರ್ಬರ ಹತ್ಯೆ – ಜಾರ್ಖಂಡ್‌ಗೆ ಹೊರಟಿದ್ದ ಆರೋಪಿ ಅರೆಸ್ಟ್‌

  • ಮಧ್ಯಪ್ರದೇಶ ಸಿರಪ್ ದುರಂತ; ನಮ್ಮ ರಾಜ್ಯದಲ್ಲಿ ಈ ಸಿರಪ್ ಸರಬರಾಜು ಆಗಿಲ್ಲ: ದಿನೇಶ್ ಗುಂಡೂರಾವ್

    ಮಧ್ಯಪ್ರದೇಶ ಸಿರಪ್ ದುರಂತ; ನಮ್ಮ ರಾಜ್ಯದಲ್ಲಿ ಈ ಸಿರಪ್ ಸರಬರಾಜು ಆಗಿಲ್ಲ: ದಿನೇಶ್ ಗುಂಡೂರಾವ್

    – ಮಕ್ಕಳಿಗೆ ಔಷಧ ಕೊಡುವಾಗ ಎಚ್ಚರಿಕೆ ವಹಿಸಬೇಕು

    ಹಾಸನ: ಮಧ್ಯಪ್ರದೇಶ ಸಿರಪ್ ದುರಂತ (Madhya Pradesh Cough Syrup Row) ಪ್ರಕರಣದ ಬಳಿಕ ನಮ್ಮ ರಾಜ್ಯದಲ್ಲಿ ಕೂಡ ಈ ಬಗ್ಗೆ ಕ್ರಮ ವಹಿಸಲಾಗಿದೆ. ಔಷಧ ಮಾದರಿ ಪರೀಕ್ಷೆಯಲ್ಲಿ ರಾಜ್ಯ ನಂಬರ್ ಒನ್ ಇದೆ. ಈ ಕಾಫ್ ಸಿರಪ್ ನಮ್ಮ ರಾಜ್ಯದಲ್ಲಿ ಸರಬರಾಜು ಆಗಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ.

    ವಿಧಾನಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಹುಟ್ಟುಹಬ್ಬ ಹಿನ್ನೆಲೆ ಆರೋಗ್ಯ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಧ್ಯಪ್ರದೇಶದ ಘಟನೆ ಅತ್ಯಂತ ಆಘಾತಕಾರಿ. ಮಕ್ಕಳಿಗೆ ಔಷಧ ಕೊಡುವಾಗ ಎಚ್ಚರಿಕೆ ವಹಿಸಬೇಕು. ಇಂದು ಈ ಬಗ್ಗೆ ಒಂದು ಮಾರ್ಗಸೂಚಿ ಕೂಡ ಬಿಡುಗಡೆ ಮಾಡುತ್ತೇವೆ. ಈ ಹಿಂದೆ ಆರೋಗ್ಯ ಸುರಕ್ಷತೆ ಬಗ್ಗೆ ಯಾರೂ ಗಮನ ಹರಿಸಿರಲಿಲ್ಲ. ನಮ್ಮ ಸರ್ಕಾರ ಬಂದ ಬಳಿಕ ಆಹಾರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜನರಿಗೆ ಆಹಾರ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ಕ್ರಮ ವಹಿಸಲಾಗಿದೆ. ಮಿನರಲ್ ವಾಟರ್ ತಯಾರಿಗೆ ಸಂಬಂಧ ಮತ್ತೊಂದು ಸುತ್ತಿನ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಇಂದು ಸಂಜೆ ಬಿಹಾರ ಚುನಾವಣೆಗೆ ದಿನಾಂಕ ಪ್ರಕಟ

    ಕರ್ನಾಟಕದಲ್ಲೂ ಎರಡು ಸಿರಪ್ ಪತ್ತೆ ಪ್ರಕರಣ ಕುರಿತು ಮಾತನಾಡಿ, ನಮ್ಮ ಇಲಾಖೆಯಿಂದ ಇಂದು ಮಾರ್ಗಸೂಚಿ ಬಿಡುಗಡೆ ಮಾಡುತ್ತಾರೆ. ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂದು ತಿಳಿಸುತ್ತಾರೆ. ಇದೇ ತರಹ ಬೇರೆ ಕಂಪನಿಗಳು ಕಾಫ್ ಸಿರಪ್ ತಯಾರಿಕೆ ಮಾಡಿದರೆ ಅದರ ಮಾದರಿ ಸಂಗ್ರಹಣೆ ಮಾಡಿ ತಪಾಸಣೆ ಮಾಡಬೇಕು ಎಂದು ಸೂಚನೆ ಕೊಟ್ಟಿದ್ದೇನೆ. ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ. ಒಂದೆರಡು ದಿನದಲ್ಲಿ ಅದರ ರಿಪೋರ್ಟ್ ಬರುತ್ತದೆ, ಎಚ್ಚರಿಕೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು. ಇದನ್ನೂ ಓದಿ: ಕ್ರಿಕೆಟ್‌ ನೋಡಿ ಮರಳುತ್ತಿದ್ದಾಗ ಬಿತ್ತು ಮರ – ಯುವತಿಯ ಮೃತದೇಹ ವಿಕ್ಟೋರಿಯಾಗೆ ರವಾನೆ

    ನಾವು ಬಂದ ಮೇಲೆ ನಮ್ಮ ಇಲಾಖೆಯನ್ನು ಚುರುಕುಗೊಳಿಸಿದ್ದೇವೆ. ಸಾಕಷ್ಟು ತಪಾಸಣೆ ಮಾಡಿಸುತ್ತಿದ್ದೇವೆ. ಕರ್ನಾಟಕ ಈಗ ಬಹಳ ಮುಂಚೂಣಿಯಲ್ಲಿದೆ. ಔಷಧ ವಿಚಾರದಲ್ಲಿ ಪಾರದರ್ಶಕತೆ ತರುವ ಅವಶ್ಯಕತೆ ಇದೆ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಈ ವಿಚಾರದಲ್ಲಿ ಬೇರೆ ಬೇರೆ ರಾಜ್ಯಗಳ ಜೊತೆ ಮಾಹಿತಿಗಳನ್ನು ಹಂಚಿಕೊಳ್ಳಬೇಕಾಗುತ್ತದೆ. ತಯಾರಿಕೆ ಮಾಡುವವರು ಒಂದು ಕಡೆ ಇರುತ್ತಾರೆ, ಸರಬರಾಜು ಮಾಡುವವರು ಮತ್ತೊಂದು ಕಡೆ ಇರುತ್ತಾರೆ. ಕರ್ನಾಟಕದಲ್ಲಿ ಮಾದರಿ ಸರಿ ಇಲ್ಲ ಎಂದು ಗೊತ್ತಾದಾಗ ಇಡೀ ದೇಶಕ್ಕೆ ಗೊತ್ತಾಗಬೇಕು. ಈ ಕಾಫ್ ಸಿರಪ್ ನಮ್ಮಲ್ಲಿ ಎಲ್ಲೂ ಸರಬರಾಜು ಆಗಿಲ್ಲ ಎಂದು ಹೇಳಿದರು. ಇದನ್ನೂ ಓದಿ: ದಸರೆಗೆ ಊರಿಗೆ ಹೋದವರು ವಾಪಸ್ – ಬೆಳಗ್ಗೆ ಅರ್ಧಗಂಟೆ ಬಂದ್ ಆಗಿತ್ತು ಯಶವಂತಪುರ ಮೆಟ್ರೋ ನಿಲ್ದಾಣ

    ತಮಿಳುನಾಡು, ಮಧ್ಯಪ್ರದೇಶ, ಪುದುಚೇರಿ, ರಾಜಸ್ಥಾನ, ಒರಿಸ್ಸಾದಲ್ಲಿ ಉಪಯೋಗ ಮಾಡಿದ್ದಾರೆ. ತಯಾರಿಕಾ ಘಟಕಗಳ ಬೇಜವಾಬ್ದಾರಿ ಇದೆ. ಡೈ ಎಥಿಲಿನ್, ಗ್ಲೈಕಾಲ್ ಅನ್ನು ಉಪಯೋಗಿಸಿದ್ದಾರೆ. ಮಕ್ಕಳಿಗೆ ಸಿರಪ್ ಕೊಡುವಾಗ ಎಚ್ಚರಿಕೆ ವಹಿಸಬೇಕು. ಐದು ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳಿಗೆ ಯಾವುದೇ ಕಾಫ್ ಸಿರಪ್ ಕೊಡುವಾಗ ಎಚ್ಚರ ಇರಬೇಕು ಎಂದರು. ಇದನ್ನೂ ಓದಿ: ಸಿದ್ದರಾಮಯ್ಯನವರೇ, ಮೊದಲು ಬೆಂಗಳೂರಿನ ಗುಂಡಿ ಮುಚ್ಚಿ, ಬಳಿಕ ನಮ್ಮ ಮೆಟ್ರೋ ಹೆಸರು ಬದಲಾಯಿಸಿ

    ಇನ್ನು ಹೊರ ರಾಜ್ಯದಲ್ಲಿ ಸಿರಪ್ ಸೇವನೆಯಿಂದ ಮಕ್ಕಳು ಸಾವನ್ನಪ್ಪಿದ ಬಳಿಕ ಕರ್ನಾಟಕ ರಾಜ್ಯದ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಮಕ್ಕಳ ಸಿರಪ್ ಬಳಕೆ ಬಗ್ಗೆ ಮಾರ್ಗಸೂಚಿ ಬಿಡುಗಡೆಗೆ ನಿರ್ಧರಿಸಿದೆ. ಇಂದು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಾಗುಪ್ತಾ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಪೋಷಕರು, ಖಾಸಗಿ ಆಸ್ಪತ್ರೆ ಮತ್ತು ವೈದ್ಯರು ಮಕ್ಕಳ ಸಿರಪ್ ಬಳಕೆಗೆ ಸಂಬಂಧಿಸಿದಂತೆ ಯಾವ ರೀತಿ ಮಾರ್ಗಸೂಚಿಯನ್ನ ಅನುಸರಿಸಬೇಕು ಎಂದು ನಿರ್ಧಾರ ಆಗಲಿದೆ. ಇದನ್ನೂ ಓದಿ: Darjeeling Flood | ರಣಭೀಕರ ಮಳೆಗೆ ಭೂಕುಸಿತ – ಸಾವಿನ ಸಂಖ್ಯೆ 23ಕ್ಕೆ ಏರಿಕೆ

  • ದೇಶಾದ್ಯಂತ ಆತಂಕ ಸೃಷ್ಟಿಸಿದ ಕಿಲ್ಲರ್ ಕಾಫ್ ಸಿರಪ್ – ರಾಜ್ಯದಲ್ಲಿ ಪ್ರತ್ಯೇಕ ಗೈಡ್‌ಲೈನ್ಸ್‌ ಬಿಡುಗಡೆಗೆ ನಿರ್ಧಾರ

    ದೇಶಾದ್ಯಂತ ಆತಂಕ ಸೃಷ್ಟಿಸಿದ ಕಿಲ್ಲರ್ ಕಾಫ್ ಸಿರಪ್ – ರಾಜ್ಯದಲ್ಲಿ ಪ್ರತ್ಯೇಕ ಗೈಡ್‌ಲೈನ್ಸ್‌ ಬಿಡುಗಡೆಗೆ ನಿರ್ಧಾರ

    – ಮಕ್ಕಳಿಗೆ ಸಿರಪ್‌ ಕೊಡುವ ಮುನ್ನ ಪೋಷಕರೇನು ಮಾಡಬೇಕು?
    – ಖಾಸಗಿ ಕ್ಲಿನಿಕ್‌ಗಳು ಸಿರಪ್ ಬರೆಯುವಂತಿಲ್ಲ

    ಬೆಂಗಳೂರು: ದೇಶದಲ್ಲಿ ಕಾಫ್ ಸಿರಪ್ (Cough Syrup) ಭೀತಿ ಹೆಚ್ಚಾಗಿದೆ. ಮಧ್ಯಪ್ರದೇಶದ ಛಿಂದ್ವಾರಾದಲ್ಲಿ ಮಕ್ಕಳಿಗೆ ಮಾರಕ ಕೋಲ್ಡ್ರಿಫ್ ಸಿರಪ್ ಶಿಫಾರಸು ಮಾಡಿದ ವೈದ್ಯ ಪ್ರವೀಣ್‌ನನ್ನು ಬಂಧಿಸಲಾಗಿದೆ. ಅಲ್ಲದೇ ಈ ಸಿರಪ್ ತಯಾರಿಸಿದ ತಮಿಳುನಾಡು ಮೂಲದ ಶ್ರೀಸನ್ ಫಾರ್ಮಾಸ್ಯುಟಿಕಲ್ಸ್, ಮಕ್ಕಳ ವೈದ್ಯ ಪ್ರವೀಣ್ ಸೋನಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ. ಈ ಎಲ್ಲಾ ಬೆಳವಣಿಗೆ ಮಧ್ಯೆ ಮಧ್ಯಪ್ರದೇಶ, ತಮಿಳುನಾಡು, ಕೇರಳ, ರಾಜಸ್ಥಾನ, ತೆಲಂಗಾಣದಲ್ಲಿ ಕೋಲ್ಡ್ರಿಫ್ ಸಿರಪ್ ಮಾರಾಟ ನಿಷೇಧ ಮಾಡಲಾಗಿದೆ.

    ಆರು ರಾಜ್ಯಗಳಲ್ಲಿ ಕೆಮ್ಮು ಸಿರಪ್ ಸೇರಿದಂತೆ 19 ಔಷಧಿ ಉತ್ಪನ್ನಗಳ ಉತ್ಪಾದನಾ ಘಟಕಗಳಲ್ಲಿ ಕೇಂದ್ರ ಔಷಧ ಗುಣಮಟ್ಟ ಸಂಸ್ಥೆ (ಸಿಡಿಎಸ್‌ಸಿಓ) ಸ್ಯಾಂಪಲ್ಸ್ ಸಂಗ್ರಹಿಸಿ ತಪಾಸಣೆ ನಡೆಸಿದೆ. ಈ ಮಧ್ಯೆ ಮಕ್ಕಳಿಗೆ ಅನವಶಕ್ಯಕವಾಗಿ ಕೋಲ್ಡ್ ಸಿರಪ್ ಕೊಡದಂತೆ ಮಕ್ಕಳ ತಜ್ಞರು ಸಲಹೆ ನೀಡಿದ್ದಾರೆ. ಇದರೊಂದಿಗೆ ಸೋಮವಾರ ರಾಜ್ಯ ಆರೋಗ್ಯ ಇಲಾಖೆಯಿಂದ (Karnataka Health Department) ಪ್ರತ್ಯೇಕ ಮಾರ್ಗಸೂಚಿ ರಿಲೀಸ್‌ ಮಾಡಲು ಎಂದು ಪ್ರಧಾನ ಕಾರ್ಯದರ್ಶಿ ಹರ್ಷಾಗುಪ್ತ ಅವರು ʻಪಬ್ಲಿಕ್‌ ಟಿವಿʼಗೆ (Public TV Digital) ತಿಳಿಸಿದ್ದಾರೆ. ನಾಳೆ ‌ಹರ್ಷಾಗುಪ್ತ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಬಳಿಕ ಮಕ್ಕಳಿಗೆ ಸಿರಾಪ್ ವಿತರಣೆಗೆ ಸಂಬಂಧಿಸಿದಂತೆ ಗೈಡ್‌ಲೈನ್ಸ್‌ ರಿಲೀಸ್‌ ಮಾಡಲಾಗುತ್ತದೆ. ಪೋಷಕರಿಗಷ್ಟೇ ಅಲ್ಲದೇ ಖಾಸಗಿ ಆಸ್ಪತ್ರೆ ಮತ್ತು ವೈದ್ಯರಿಗೂ ಕೂಡ ಮಾರ್ಗಸೂಚಿ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

    ಹೇಗಿರಲಿದೆ ಗೈಡ್‌ಲೈನ್ಸ್‌?
    ಮಕ್ಕಳ ಸಿರಪ್ ವಿತರಣೆಗೆ ಏನು ಗೈಡ್ ಲೈನ್ಸ್ ಏನು?
    1. ಕಫಾ ಸಪರೇಟ್ ಮಾಡುವ ಸಿರಪ್ ಕೊಡಬಾರದು
    2. ಕಫಾ ಹೊರಗಡೆ ತರುವುದಕ್ಕೆ ರೇರ್ ಕೇಸ್ ಇದ್ದರೆ ಜಾಗ್ರತೆಯಿಂದ ಸಿರಪ್ ಕೊಡಬಹುದು
    3. ಓರಲ್ ಮೆಡಿಸನ್ ಮಕ್ಕಳಿಗೆ ಕೊಡಬಾರದು, ಡಾಕ್ಟರ್ ಕೂಡ ಪ್ರಿಸ್ಕ್ಷನ್ (ಚೀಟಿ) ಬರೆಯಬಾರದು
    4. ಎರಡರಿಂದ ಎರೂವರೆ ವರ್ಷದ ಮಕ್ಕಳಿಗೆ ಸಿರಪ್ ಕೊಡಬಾರದು
    5. ವೀಸಿಂಗ್ ಆದರೆ ಓರಲ್ ಮೆಡಿಸನ್ ಕೊಡಬಾರದು
    6. ವೀಸಿಂಗ್‌ಗೆ ಮಾತ್ರೆ ಮತ್ತು ಇನ್ ಹೇಲರ್ ಕೊಡಬೇಕು, ಓರಲ್ ಕೊಡಬಾರದು. ವೀಸಿಂಗ್‌ ಅಂದ್ರೆ ಮೂಗು ಕಟ್ಟಿಕೊಂಡಂತಾದಾಗ ಉಸಿರಾಟದ ವೇಳೆ ಉಂಟಾಗುವ ಜೋರು ಶಬ್ಧ.

    ಖಾಸಗಿ ಆಸ್ಪತ್ರೆ, ಸಣ್ಣ ಖಾಸಗಿ ಕ್ಲಿನಿಕ್‌ಗಳಿಗೆ ಏನು ಮಾರ್ಗಸೂಚಿ?
    1. ಡೆತ್ ಮುಂಚಿತವಾಗಿ ಕಾಂಪ್ಲಿಕೇಷನ್ ಆಗಿರುತ್ತೆ ಅಂತಹ ಕೇಸ್ ರಿಪೋರ್ಟ್ ಆಗಬೇಕು
    2. ಖಾಸಗಿ ಕ್ಲಿನಿಕ್ ಗಳು ಸಿರಪ್ ಬರೆಯಬಾರದು
    3. ಖಾಸಗಿ ಆಸ್ಫತ್ರೆಯವರು ಗಂಭೀರ ಪ್ರಕರಣಗಳನ್ನ ವರದಿ ಮಾಡಬೇಕು.
    4. ಫಾರ್ಮಸಿ ಸಾಫ್ಟ್‌ವೇರ್ ಸೆಂಟ್ರಲ್ ಮಾಡಬೇಕು
    5.‌ ಮಾನಿಟರಿಂಗ್ ಸ್ಟ್ರಾಂಗ್ ಆಗಬೇಕು

    ಮಕ್ಕಳಿಗೆ ಸಿರಪ್‌ ಕೊಡುವ ಮುನ್ನ ಪೋಷಕರೇನು ಮಾಡಬೇಕು?
    1. ಸಿರಪ್ ಓಪನ್ ಮಾಡಿದ ತಕ್ಷಣ ಒಂದು ತಿಂಗಳ ಒಳಗಡೆ ಬಳಸಬೇಕು
    2. ಸಿರಪ್ ಅನ್ನು ಓಪನ್ ಮಾಡಿದ ನಂತ್ರ 6 ತಿಂಗಳು, 1 ವರ್ಷದವರೆಗೂ ಬಳಸಬಾರದು
    3. ಡಾಕ್ಟರ್ ಕೊಟ್ಟಿದ್ದಾರೆ ಅಂತಹ ಡಾಕ್ಟರ್ ಅನ್ನು ಕಾಂಟ್ಯಾಕ್ಟ್ ಮಾಡದೇ ಅದೇ ಸಿರಪ್ ಕೊಂಡುಕೊಂಡು ಬಳಸಬಾರದು
    4. ಕಳೆದ ಬಾರಿ ಡಾಕ್ಟರ್ ಸೂಚಿಸಿದ್ದ ಸಿರಪ್ ಅನ್ನು ಪದೇ ಪದೇ ಬಳಸಬಾರದು.

  • ಕೆಮ್ಮಿನ ಸಿರಪ್ ಸೇವನೆ – 15 ದಿನಗಳ ಅಂತರದಲ್ಲಿ ಕಿಡ್ನಿ ವೈಫಲ್ಯದಿಂದ 6 ಮಕ್ಕಳು ಸಾವು

    ಕೆಮ್ಮಿನ ಸಿರಪ್ ಸೇವನೆ – 15 ದಿನಗಳ ಅಂತರದಲ್ಲಿ ಕಿಡ್ನಿ ವೈಫಲ್ಯದಿಂದ 6 ಮಕ್ಕಳು ಸಾವು

    ಭೋಪಾಲ್: ಕೇವಲ 15 ದಿನಗಳ ಅಂತರದಲ್ಲಿ 6 ಮಕ್ಕಳು ಕಿಡ್ನಿ ವೈಫಲ್ಯವಾಗಿ ಸಾವನ್ನಪ್ಪಿರುವ ಧಾರುಣ ಘಟನೆ ಮಧ್ಯಪ್ರದೇಶದ (Madhya Pradesh) ಛಿಂದ್ವಾರದಲ್ಲಿ (Chhindwara) ನಡೆದಿದೆ.

    ಆರಂಭದಲ್ಲಿ ಋತುಮಾನದ ಜ್ವರದ ಸಾಮಾನ್ಯ ಸಮಸ್ಯೆಗಳಂತೆ ಕಂಡುಬಂದಿದ್ದ ಈ ಘಟನೆ ಈಗ ಭೀಕರ ತಿರುವು ಪಡೆದುಕೊಂಡಿದ್ದು, ಮಕ್ಕಳಿಗೆ ನೀಡಿದ ಕೆಮ್ಮಿನ ಸಿರಪ್‌ನ (Cough Syrup) ಅಡ್ಡಪರಿಣಾಮದಿಂದಾಗಿ ಮಕ್ಕಳು ಕಿಡ್ನಿ ವೈಫಲ್ಯವಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ರಾಮಚಂದ್ರ ಗುಹಾಗೆ ರಾಜ್ಯ ಸರ್ಕಾರದ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ

    ಸಾವನ್ನಪ್ಪಿದ ಮಕ್ಕಳನ್ನು ಐದು ವರ್ಷದೊಳಗಿನವರು ಎಂದು ಹೇಳಲಾಗಿದ್ದು, ಎಲ್ಲಾ ಮಕ್ಕಳು ಮೊದಲು ಶೀತ ಮತ್ತು ಸೌಮ್ಯ ಜ್ವರದ ವಿಚಾರವಾಗಿ ಸ್ಥಳೀಯ ಕ್ಲೀನಿಕ್‌ನಲ್ಲಿ ಚಿಕಿತ್ಸೆ ಪಡೆದಿದ್ದರು. ಸ್ಥಳೀಯ ವೈದ್ಯರು ಕೆಮ್ಮಿನ ಸಿರಪ್‌ಗಳು ಸೇರಿದಂತೆ ನಿಯಮಿತ ಔಷಧಿಗಳನ್ನು ಸೂಚಿಸಿದರು. ಅದನ್ನು ಸೇವಿಸಿದ ನಂತರ ಮಕ್ಕಳು ಚೇತರಿಸಿಕೊಳ್ಳುತ್ತಿರುವಂತೆ ತೋರುತ್ತಿತ್ತು. ಆದರೆ ಕೆಲವೇ ದಿನಗಳಲ್ಲಿ ಮತ್ತೆ ರೋಗ ಲಕ್ಷಣಗಳು ಮರಳಿದವು. ನಂತರ ಮೂತ್ರ ವಿಸರ್ಜನೆಯಲ್ಲಿ ಹಠಾತ್ ಮತ್ತು ಆತಂಕಕಾರಿ ಇಳಿಕೆ ಕಂಡುಬಂದಿತು. ಸ್ಥಿತಿಯು ಬೇಗನೆ ಹದಗೆಟ್ಟು ಮೂತ್ರಪಿಂಡದ ಸೋಂಕುಗಳಾಗಿ ಮಾರ್ಪಟ್ಟಿತು. ಬಳಿಕ ಉನ್ನತ ಚಿಕಿತ್ಸೆಗಾಗಿ ಮಹಾರಾಷ್ಟ್ರದ ನಾಗ್ಪುರಕ್ಕೆ ಮಕ್ಕಳನ್ನು ಕರೆದೊಯ್ಯಲಾಗಿದ್ದರೂ, ಮೂವರು ಮಕ್ಕಳು ಅಲ್ಲಿಯೇ ಸಾವನ್ನಪ್ಪಿದರು. ಇದನ್ನೂ ಓದಿ: ದಸರಾ ಜಂಬೂಸವಾರಿಗೆ ಕೌಂಟ್ ಡೌನ್ – ಭರದಿಂದ ಸಾಗಿದ ತಯಾರಿ

    ಮಕ್ಕಳ ಸಾವಿಗೆ ಕೆಮ್ಮಿನ ಸಿರಪ್ ಕಾರಣ ಎಂದು ಶಂಕಿಸಲಾಗುತ್ತಿದ್ದು, ವಿಷಕಾರಿ ಡೈಥಿಲೀನ್ ಗ್ಲೈಕೋಲ್ ಬೆರೆಸಿದ ಕಲುಷಿತ ಕೆಮ್ಮಿನ ಸಿರಪ್ ಸಾವುಗಳಿಗೆ ಕಾರಣ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಮಕ್ಕಳ ಮೂತ್ರಪಿಂಡದ ಬಯಾಪ್ಸಿ ಪರೀಕ್ಷೆಯಲ್ಲಿ ಔಷಧೀಯ ವಿಷಕ್ಕೆ ಸಂಬಂಧಿಸಿದ ವಿಷಕಾರಿ ರಾಸಾಯನಿಕವಾದ ಡೈಥಿಲೀನ್ ಗ್ಲೈಕಾಲ್ ಮಾಲಿನ್ಯ ಇರುವುದು ಬೆಳಕಿಗೆ ಬಂದಾಗ ಮಹತ್ವದ ತಿರುವು ಸಿಕ್ಕಿತು. ಹೆಚ್ಚಿನ ಮಕ್ಕಳಿಗೆ ಕೋಲ್ಡ್ರಿಫ್ ಮತ್ತು ನೆಕ್ಸ್ಟ್ರೋ-ಡಿಎಸ್ ಸಿರಪ್‌ಗಳನ್ನು ನೀಡಲಾಗಿತ್ತು. ಇದನ್ನೂ ಓದಿ: ಯುವತಿ ಮೇಲೆ ಗ್ಯಾಂಗ್ ರೇಪ್ – ಇಬ್ಬರು ಪೊಲೀಸ್ ಕಾನ್ಸ್ಟೇಬಲ್ ಅರೆಸ್ಟ್

    ಚಿಂದ್ವಾರ ಜಿಲ್ಲಾಧಿಕಾರಿ ಶೀಲೇಂದ್ರ ಸಿಂಗ್ ಅವರು ಜಿಲ್ಲೆಯಾದ್ಯಂತ ಎರಡು ಸಿರಪ್‌ಗಳ ಮಾರಾಟವನ್ನು ತಕ್ಷಣವೇ ನಿಷೇಧಿಸಿದರು ಮತ್ತು ಇದರ ಬಳಕೆ ಮಾಡದಂತೆ ವೈದ್ಯರು, ಔಷಧಾಲಯಗಳು ಮತ್ತು ಪೋಷಕರಿಗೆ ತುರ್ತು ಸಲಹೆಯನ್ನು ನೀಡಿದರು. ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಜಿಲ್ಲಾಡಳಿತವು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ತಂಡವನ್ನು ಪರೀಕ್ಷೆಗೆ ಕರೆದಿದ್ದು, ತನಿಖೆ ಪ್ರಗತಿಯಲ್ಲಿದೆ.  ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್‌ – ಡಿಎ 3% ಏರಿಕೆ

  • ಇರಾಕ್‌ನಲ್ಲಿ ಮಾರಾಟವಾದ ಭಾರತದ ಕೆಮ್ಮಿನ ಸಿರಪ್ ಅಸುರಕ್ಷಿತ – WHO ಎಚ್ಚರಿಕೆ

    ಇರಾಕ್‌ನಲ್ಲಿ ಮಾರಾಟವಾದ ಭಾರತದ ಕೆಮ್ಮಿನ ಸಿರಪ್ ಅಸುರಕ್ಷಿತ – WHO ಎಚ್ಚರಿಕೆ

    ಬಗ್ದಾದ್: ಇರಾಕ್‌ನಲ್ಲಿ (Iraq) ಮಾರಾಟವಾಗಿರುವ ಭಾರತದಲ್ಲಿ (India) ತಯಾರಿಸಲಾದ ಕಾಮನ್ ಕೋಲ್ಡ್ ಕೆಮ್ಮಿನ ಸಿರಪ್‌ನಲ್ಲಿ (Cough Syrup) ವಿಷಕಾರಿ ಅಂಶ ಪತ್ತೆಯಾಗಿದ್ದು, ಬಳಕೆಗೆ ಯೋಗ್ಯವಲ್ಲದ್ದಾಗಿರುವುದು ಕಂಡುಬಂದ ಬಳಿಕ ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿದೆ.

    ಕೋಲ್ಡ್ ಔಟ್ ಎಂಬ ಹೆಸರಿನ ಸಿರಪ್ ಅನ್ನು ಭಾರತದ ಫೋರ್ಟ್ಸ್ ಲ್ಯಾಬೋರೇಟರೀಸ್ ತಯಾರಿಸಿದೆ. ಗ್ಲೋಬಲ್ ಹೆಲ್ತ್ ಏಜೆನ್ಸಿಯು ಈ ಸಿರಪ್‌ನಲ್ಲಿ ವಿಷಕಾರಿ ಅಂಶವನ್ನು ಪತ್ತೆಹಚ್ಚಿದೆ. ಇದರಲ್ಲಿ ಡೈಥಿಲೀನ್ ಮತ್ತು ಎಥಿಲೀನ್ ಗ್ಲೈಕೋಲ್‌ಗಿಂತ ಹೆಚ್ಚಿನ ಪ್ರಮಾಣದಲ್ಲಿದೆ ಎಂಬುದನ್ನು ಕಂಡುಹಿಡಿದಿರುವುದಾಗಿ ವರದಿಯಾಗಿದೆ.

    ಕೆಮ್ಮಿನ ಸಿರಪ್ ತಯಾರಕರು ಹಾಗೂ ಮಾರಾಟಗಾರರು ಉತ್ಪನ್ನದ ಗುಣಮಟ್ಟ ಹಾಗೂ ಸುರಕ್ಷತೆಯ ಬಗ್ಗೆ ಏಜೆನ್ಸಿಗೆ ಯಾವುದೇ ಖಾತರಿಗಳನ್ನು ನೀಡಿಲ್ಲ. ಕಂಪನಿಗಳು ಈ ಆರೋಪಗಳಿಗೆ ಹಾಗೂ ಎಚ್ಚರಿಕೆಗಳಿಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಮಹಾರಾಷ್ಟ್ರದ ಮಂತ್ರಾಲಯಕ್ಕೆ ಬೆದರಿಕೆ ಕರೆ, ವ್ಯಕ್ತಿ ಅರೆಸ್ಟ್‌

    ಕಳೆದ ವರ್ಷ ಗ್ಯಾಂಬಿಯಾದಲ್ಲಿ 66 ಹಾಗೂ ಉಜ್ಬೇಕಿಸ್ತಾನದಲ್ಲಿ 18 ಮಕ್ಕಳ ಸಾವಿಗೆ ಭಾರತದಿಂದ ರಫ್ತಾಗಿದ್ದ ಕೆಮ್ಮಿನ ಸಿರಪ್‌ಗಳು ಕಾರಣವಾಗಿದೆ ಎಂದು ಆರೋಪಿಸಲಾಗಿತ್ತು. ಇದಾದ ಬಳಿಕ ಭಾರತದ 5 ಕಂಪನಿಗಳ ಸಿರಪ್‌ಗಳನ್ನು ಪರೀಕ್ಷೆಗೆ ಒಳಪಡಿಸಿ ಅದರಲ್ಲಿ ವಿಷಕಾರಿ ಅಂಶಗಳನ್ನು ಪತ್ತೆಹಚ್ಚಲಾಯಿತು. ಇದನ್ನೂ ಓದಿ: ಒಡಿಶಾ ರೈಲು ದುರಂತ- ಸಂತ್ರಸ್ತರಿಗಾಗಿ ಅಮೆರಿಕಾದಲ್ಲಿ 8 ಲಕ್ಷ ರೂ. ಸಂಗ್ರಹಿಸಿದ 16ರ ಹುಡುಗಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]