Tag: corporation bank

  • ಬ್ಯಾಂಕ್ ಸಿಬ್ಬಂದಿ ಮೇಲೆ ಮಚ್ಚು ಬೀಸಿದ ಗ್ರಾಹಕ

    ಬ್ಯಾಂಕ್ ಸಿಬ್ಬಂದಿ ಮೇಲೆ ಮಚ್ಚು ಬೀಸಿದ ಗ್ರಾಹಕ

    ಚಿಕ್ಕಬಳ್ಳಾಪುರ: ಬ್ಯಾಂಕ್ ಸಿಬ್ಬಂದಿ ಮೇಲೆ ಗ್ರಾಹಕನೋರ್ವ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಕಾರ್ಪೋರೇಷನ್ ಬ್ಯಾಂಕಿನಲ್ಲಿ ಘಟನೆ ನಡೆದಿದೆ.

    ದುರ್ಗೆನಹಳ್ಳಿ ಗ್ರಾಮದ ಕುಮಾರ್ ಎಂಬವ ವ್ಯಕ್ತಿ ಕಾರ್ಪೋರೇಷನ್ ಬ್ಯಾಂಕ್ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ. ಕ್ಷಣಾರ್ಧದಲ್ಲಿ ಸಿಬ್ಬಂದಿ ಮಚ್ಚಿನ ಏಟಿನಿಂದ ಪಾರಾಗಿದ್ದಾರೆ. ತನ್ನ ಖಾತೆಯಲ್ಲಿರುವ 268 ರೂಪಾಯಿಗಳನ್ನು ನೀಡಲೇಬೇಕೆಂದು ಬ್ಯಾಂಕಿನ ಸಿಬ್ಬಂದಿಯನ್ನು ಕೇಳಿದ್ದಾನೆ. ಬ್ಯಾಂಕ್ ಸಿಬ್ಬಂದಿ ಹಣ ನೀಡಲ್ಲ ಎಂದಾಗ ಹಲ್ಲೆಗೆ ಮುಂದಾಗಿದ್ದಾನೆ.

    ಇದಕ್ಕೆ ಪ್ರತಿಕ್ರಿಯಿಸಿದ ಬ್ಯಾಂಕಿನ ಸಿಬ್ಬಂದಿ, ಕಳೆದೊಂದು ವರ್ಷದಿಂದ ಬ್ಯಾಂಕಿನಲ್ಲಿ ವ್ಯವಹಾರ ನಡೆಸದಿರುವ ಕಾರಣ ಅಕೌಂಟ್ ಲಾಕ್ ಆಗಿದೆಯೆಂದು ತಿಳಿಸಿದ್ದಾರೆ. ಇದರಿಂದ ಕುಪಿತಗೊಂಡ ಕುಮಾರ ಕೂಡಲೇ ಬ್ಯಾಂಕಿನ ಸಿಬ್ಬಂದಿ ಮಚ್ಚಿನಿಂದ ಹಲ್ಲೆ ಮಾಡಲು ಯತ್ನಿಸಿದ್ದನೆ. ಇದನ್ನು ಕಂಡ ಬ್ಯಾಂಕಿನಲ್ಲಿದ್ದ ಸ್ಥಳೀಯರು ಕುಮಾರನನ್ನು ಕೂಡಲೇ ಹಿಡಿದು, ಮಚ್ಚನ್ನು ಕಸಿದುಕೊಂಡು ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೆನರಾ ಜೊತೆ ಸಿಂಡಿಕೇಟ್ ಬ್ಯಾಂಕ್ ವಿಲೀನ

    ಕೆನರಾ ಜೊತೆ ಸಿಂಡಿಕೇಟ್ ಬ್ಯಾಂಕ್ ವಿಲೀನ

    ನವದೆಹಲಿ: ಕರ್ನಾಟಕದ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್‍ಗಳನ್ನು ವಿಲೀನ ಮಾಡಲು ಸರ್ಕಾರ ಮುಂದಾಗಿದೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, 2017 ರಲ್ಲಿ 17 ಸಾರ್ವಜನಿಕ ವಲಯದ ಬ್ಯಾಂಕ್‍ಗಳಿದ್ದವು. ಇದನ್ನು 13ಕ್ಕೆ ಇಳಿಸುವ ನಿಟ್ಟಿನಲ್ಲಿ ಈ ವಿಲೀನ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.

    ಪಂಜಾಬ್ ನ್ಯಾಷನಲ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಹಾಗೂ ಯುನೈಟೆಡ್ ಬ್ಯಾಂಕ್ ವಿಲೀನವಾದರೆ ಇಂಡಿಯನ್ ಬ್ಯಾಂಕ್ ಜೊತೆ ಅಲಹಾಬಾದ್ ಬ್ಯಾಂಕ್ ವಿಲೀನವಾಗಲಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಆಂಧ್ರ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್ ವಿಲೀನವಾಗಲಿದೆ.

    ವಸೂಲಾಗದ ಸಾಲ(ಎನ್‍ಪಿಎ) ಪ್ರಮಾಣ 8.65 ಲಕ್ಷ ಕೋಟಿಯಿಂದ 7.90 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ. ಆರ್ಥಿಕತೆಯನ್ನು 5 ಟ್ರಿಲಿಯನ್ ಗುರಿ ತಲುಪಲು ಕೇಂದ್ರ ಸರಕಾರ ಎಲ್ಲ ರೀತಿಯ ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ 10 ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

    1906ರಲ್ಲಿ ಮಂಗಳೂರಿನಲ್ಲಿ ಅಮ್ಮೆಂಬಳ ಸುಬ್ಬರಾವ್ ಪೈ ಕೆನರಾ ಬ್ಯಾಂಕ್ ಆರಂಭಿಸಿದ್ದರೆ, ಸಿಂಡಿಕೇಟ್ ಬ್ಯಾಂಕ್ ಅನ್ನು ಉಪೇಂದ್ರ ಅನಂತ್ ಪೈ, ಟಿಎಂಎ ಪೈ, ವಾಮನ ಕುಡುವ 1924 ರಲ್ಲಿ ಮಣಿಪಾಲದಲ್ಲಿ ಆರಂಭಿಸಿದ್ದರು. ಕಾರ್ಪೋರೇಷನ್ ಬ್ಯಾಂಕ್ ಅನ್ನು 1906 ರಲ್ಲಿ ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲಾ ಮಂಗಳೂರಿನಲ್ಲಿ ಸ್ಥಾಪಿಸಿದ್ದರು. ಈ ಹಿಂದೆ ಮಂಗಳೂರು ಮೂಲದ ವಿಜಯ್ ಬ್ಯಾಂಕ್ ಬ್ಯಾಂಕ್ ಆಫ್ ಬರೋಡಾದ ಜೊತೆ ವಿಲೀನಗೊಂಡಿತ್ತು.

  • ಬ್ಯಾಂಕ್ ಅಧಿಕಾರಿಗಳಿಂದ ಕಿರುಕುಳ- ಮನನೊಂದು ಬಾವಿಗೆ ಹಾರಿ ರೈತ ಆತ್ಮಹತ್ಯೆ

    ಬ್ಯಾಂಕ್ ಅಧಿಕಾರಿಗಳಿಂದ ಕಿರುಕುಳ- ಮನನೊಂದು ಬಾವಿಗೆ ಹಾರಿ ರೈತ ಆತ್ಮಹತ್ಯೆ

    ಬೀದರ್: ಬ್ಯಾಂಕ್ ಅಧಿಕಾರಿಗಳು ಮನೆಗೆ ಹೋಗಿ ಸಹಿ ಮಾಡುವಂತೆ ಕಿರುಕುಳ ನೀಡಿದ್ದಕ್ಕೆ ಮನನೊಂದ ರೈತರೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮೇರಗುಡಿ ಗ್ರಾಮದ ರೈತ ವೆಂಕಟ್ (50) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶನಿವಾರ ಕಾರ್ಪೋರೇಶನ್ ಬ್ಯಾಂಕ್ ನ ಅಧಿಕಾರಿಗಳು ರೈತನ ಮನೆಗೆ ಬಂದು ಪತ್ರದ ಮೇಲೆ ಸಹಿ ಮಾಡು ಎಂದು ಪೀಡಿಸಿದ್ದಾರೆ. ಇದರಿಂದ ಮನನೊಂದ ರೈತ ವೆಂಕಟ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ರೈತ ವೆಂಕಟ್ ಕಾರ್ಪೋರೇಶನ್ ಬ್ಯಾಂಕಿನಲ್ಲಿ 3 ಲಕ್ಷ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ 1 ಲಕ್ಷ 70 ಸಾವಿರ ರೂ. ಸಾಲ ಮಾಡಿಕೊಂಡಿದ್ದರು. ನಿನ್ನೆ ಇದ್ದಕ್ಕಿಂದ್ದಂತೆ ಬ್ಯಾಂಕ್ ಅಧಿಕಾರಿಗಳು ವೆಂಕಟ್ ರವರ ಮನೆಗೆ ಬಂದು ಪತ್ರವೊಂದಕ್ಕೆ ಸಹಿ ಹಾಕುವಂತೆ ಪೀಡಿಸಿದ್ದಾರೆ. ಇದರಿಂದ ಮನನೊಂದು ಊರ ಪಕ್ಕದಲ್ಲಿ ಇದ್ದ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತಂತೆ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ವೆಂಕಟ್ ಪುತ್ರ ನನ್ನ ತಂದೆ ಕಾರ್ಪೋರೇಶನ್ ಬ್ಯಾಂಕಿನಲ್ಲಿ ಸಾಲ ಮಾಡಿದ್ದರು. ಆದರೆ ಬ್ಯಾಂಕ್ ಅಧಿಕಾರಿಗಳು ಮನೆಗೆ ಬಂದು ಪತ್ರಕ್ಕೆ ಸಹಿ ಮಾಡುವಂತೆ ಕಿರುಕುಳ ನೀಡುತ್ತಿದ್ದರು. ಹಾಗಾಗಿ ನಮ್ಮ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಜುಲೈ 5 ರಂದು ಬಜೆಟ್ ನಲ್ಲಿ ಸಿಎಂ ಎಚ್.ಡಿ ಕುಮಾರಸ್ವಾಮಿ ರೈತರ ಹಿತದೃಷ್ಟಿಯಿಂದ 2 ಲಕ್ಷ ರೂವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಘೋಷಿಸಿದ್ದರು.

  • ಎಟಿಎಂ ಸೆಕ್ಯೂರಿಟಿ ಗಾರ್ಡ್ ಕೊಂದಿದ್ದ ದೋಷಿಗೆ ಜೀವಾವಧಿ ಶಿಕ್ಷೆ

    ಎಟಿಎಂ ಸೆಕ್ಯೂರಿಟಿ ಗಾರ್ಡ್ ಕೊಂದಿದ್ದ ದೋಷಿಗೆ ಜೀವಾವಧಿ ಶಿಕ್ಷೆ

    ಬೆಂಗಳೂರು: ಎಟಿಎಂ ಸೆಕ್ಯೂರಿಟಿ ಗಾರ್ಡ್ ಒಬ್ಬರನ್ನು ಕೊಲೆ ಮಾಡಿದ ಪ್ರಕರಣದ ದೋಷಿಗೆ ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿದೆ.

    2011ರಲ್ಲಿ ಕಾರ್ಪೋರೇಷನ್ ಬ್ಯಾಂಕ್ ನ ಎಟಿಎಂನನಲ್ಲಿ ಹಣ ದೋಚಲು ಸೈಮನ್ ಬಂದಿದ್ದ. ಈ ವೇಳೆ ಸೆಕ್ಯೂರಿಟಿ ಆಗಿದ್ದ ಚಂದ್ರಪ್ಪ ಅವರನ್ನು ಕೊಲೆ ಮಾಡಿದ್ದ. ಬಳಿಕ ಆರೋಪಿಯನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದರು.

    7 ವರ್ಷಗಳ ಕಾಲ ಪ್ರಕರಣದ ವಿಚಾರಣೆ ನಡೆದು ಸೆಷನ್ಸ್ ಕೋರ್ಟ್ ಸೋಮವಾರ ದೋಷಿ ಸೈಮನ್ ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಆದೇಶ ಪ್ರಕಟಿಸಿದೆ.

     ಇದನ್ನೂ ಓದಿ: ಎಟಿಎಂಗಳಲ್ಲಿ 200 ರೂ. ನೋಟ್‍ಗಳು ಸಿಗಲು ಇನ್ನೂ 3 ತಿಂಗಳಾಗ್ಬಹುದು

    ಇದನ್ನೂ ಓದಿ: ವಿಡಿಯೋ: ಎಟಿಎಂ ಯಂತ್ರವನ್ನೇ ಕದ್ದು ಟ್ರಕ್‍ನಲ್ಲಿ ಎಳೆದುಕೊಂಡು ಹೋದ್ರು!

    ಇದನ್ನೂ ಓದಿ: ಎಟಿಎಂ ತೆರೆಯದೇ, ಒಡೆಯದೇ 20 ಲಕ್ಷ ರೂ. ಕದ್ದ ಖದೀಮರು!