Tag: Coronavirus

  • ದೇಶದಲ್ಲಿ ಕೊರೊನಾ ರೋಗಿಗಳ ಸಂಖ್ಯೆ 109ಕ್ಕೆ ಏರಿಕೆ: ರಾಜ್ಯದಲ್ಲಿ ಮತ್ತೊಂದು ಕೇಸ್

    ದೇಶದಲ್ಲಿ ಕೊರೊನಾ ರೋಗಿಗಳ ಸಂಖ್ಯೆ 109ಕ್ಕೆ ಏರಿಕೆ: ರಾಜ್ಯದಲ್ಲಿ ಮತ್ತೊಂದು ಕೇಸ್

    – ಮಹಾರಾಷ್ಟ್ರದಲ್ಲಿ 31 ಕೇಸ್
    – ಕರ್ನಾಟಕದಲ್ಲಿ ಯಾವ ಜಿಲ್ಲೆಯಲ್ಲಿ ಎಷ್ಟು?
    – ವಿಶ್ವಾದ್ಯಂತ ಕೊರೊನಾಗೆ 5,900 ಮಂದಿ ಬಲಿ

    ಬೆಂಗಳೂರು: ದೇಶದಲ್ಲಿ ಭಾನುವಾರ ಕೊರೊನಾ ವೈರಸ್ ಸೋಂಕಿನ 10 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಕೇರಳದಲ್ಲಿ ಮೂರು, ಮಹಾರಾಷ್ಟ್ರದಲ್ಲಿ ಆರು, ಕರ್ನಾಟಕ ಹಾಗೂ ತೆಲಂಗಾಣದಲ್ಲಿ ತಲಾ ಒಂದು ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಕೊರೊನಾ ವೈರಸ್ ರೋಗಿಗಳ ಸಂಖ್ಯೆ 109ಕ್ಕೆ ಏರಿಕೆ ಕಂಡಿದೆ.

    ದೆಹಲಿಯಲ್ಲಿ ಸೋಂಕಿಗೆ ಒಳಗಾದ ಮೊದಲ ರೋಗಿಯು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಅವರನ್ನು ಶನಿವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಅಷ್ಟೇ ಅಲ್ಲದೆ ರಾಜ್ಯದಲ್ಲಿ ಕೊರೊನಾ ಶಂಕಿತ 5 ಜನ ಹಾಗೂ ದೆಹಲಿಯಲ್ಲಿ 105 ಜನರನ್ನು ಗುರುತಿಸಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಕಲಬುರಗಿಯಲ್ಲಿ ಮತ್ತೋರ್ವನಿಗೆ ಕೊರೊನಾ ವೈರಸ್- ದೃಢಪಡಿಸಿದ ಶ್ರೀರಾಮುಲು

    ಉಗುಳಿದ್ರೆ 500 ರೂ. ದಂಡ:
    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ಒಂದು ವಾರ ಕಾಲ ಬಂದ್ ಘೋಷಣೆ ಮಾಡಿದೆ. ಇತ್ತ ಗುಜರಾತ್ ಮುಖ್ಯ ಕಾರ್ಯದರ್ಶಿ ಅನಿಲ್ ಮುಕಿಮ್ ಅವರು, ರಾಜ್ಯದ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ 500 ರೂ. ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕೊರೊನಾ ಭೀತಿ- ಸ್ವತಃ ಆದೇಶ ಹೊರಡಿಸಿ ಅದ್ದೂರಿ ಮದ್ವೆಯಲ್ಲಿ ಸಿಎಂ ಭಾಗಿ

    ಕೊರೊನಾ ವೈರಸ್‍ನಿಂದಾಗಿ ದೇಶದ 20 ರಾಜ್ಯಗಳು ಹೈರಾಣಾಗಿವೆ. ವೈರಸ್ ಸೋಂಕಿತರ ಸಂಖ್ಯೆ 109ಕ್ಕೆ ಏರಿಕೆಯಾಗಿದೆ. ಈ ಪೈಕಿ ಮಹಾರಾಷ್ಟ್ರದಲ್ಲೇ 30ರ ಗಡಿದಾಟಿದೆ. ಪುಣೆಯಲ್ಲಿ ಒಟ್ಟು 16 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ, ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ಕೊರೊನಾ ಬಗ್ಗೆ ಮೊದಲೆರಡು ವಿಧದ ಪರೀಕ್ಷೆಯನ್ನು ಉಚಿತವಾಗಿ ಮಾಡಿಸಬೇಕು ಅಂತ ಕೇಂದ್ರ ಆರೋಗ್ಯ ಸಚಿವಾಲಯ ಆದೇಶಿಸಿದೆ. ಇದನ್ನೂ ಓದಿ: ಕೊರೊನಾ ಭೀತಿ ನಡುವೆಯೇ ಅದ್ದೂರಿ ಮದ್ವೆಯಲ್ಲಿ ಎಚ್‍ಡಿಡಿ ಭಾಗಿ 

    ಕರ್ನಾಟಕದಲ್ಲಿ ಕೊರೊನಾ:
    ಕಲಬುರಗಿಯಲ್ಲಿ ಸಾವನ್ನಪ್ಪಿದ ವೃದ್ಧನ ಕುಟುಂಬದಲ್ಲಿ ಒಬ್ಬರಿಗೆ ಕೊರೊನಾ ವೈರಸ್ ತಗುಲಿರುವುದು ವರದಿಯಲ್ಲಿ ದೃಢವಾಗಿದೆ. ಚಿಕ್ಕಬಳ್ಳಾಪುರದಲ್ಲಿ ಇಬ್ಬರಿಗೆ, ಧಾರವಾಡದಲ್ಲಿ ಓರ್ವರಿಗೆ, ಮಡಿಕೆರಿಯಲ್ಲಿ ಓರ್ವರಿಗೆ ಹಾಗೂ ನೆಲಮಂಗಲದಲ್ಲಿ ಓರ್ವ ಕೊರೊನಾ ಶಂಕಿರನ್ನು ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಿ, ಚಿಕಿತ್ಸೆ ಕೊಡಲಾಗುತ್ತಿದೆ.

    ವಾರಗಳ ಕಾಲ ಕೊರೊನಾ ಬಂದ್‍ನಿಂದಾಗಿ 2ನೇ ದಿನವೇ ರಾಜ್ಯದಲ್ಲಿ ಭರ್ತಿ 6.67 ಸಾವಿರ ಕೋಟಿ ನಷ್ಟವಾಗಿದೆ. ಸರ್ಕಾರದ ಆದೇಶವನ್ನು ಬೆಂಗಳೂರು ಜನ, ಉದ್ಯಮಿಗಳು ಪಾಲಿಸಿದ್ದಾರೆ. ಆದರೆ, ಬಾರ್ ಮಾಲೀಕರು ಸಡ್ಡು ಹೊಡೆದಿದ್ದಾರೆ. ಈ ಮಧ್ಯೆ, ರಾಜ್ಯದಲ್ಲಿ ಇಲ್ಲಿಯವರೆಗೆ ಹೊಸದಾಗಿ ಕೊರೋನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿಲ್ಲ. ಆದರೆ, 31 ಶಂಕಿತರಿಗೆ ಚೆಕಪ್ ಮಾಡಲಾಗಿದೆ ಅಂತ ಸರ್ಕಾರ ಹೇಳಿದೆ.

    ಚೀನಾದ ಹೆಮ್ಮಾರಿ ಕಾಟ ಹೇಳಲು ಆಗದಷ್ಟು ಶೀಘ್ರವಾಗಿ ವಿಶ್ವವನ್ನು ವ್ಯಾಪಿಸುತ್ತಿದೆ. ಈಗಾಗಲೇ ವಿಶ್ವದ 148 ದೇಶಗಳನ್ನು ಹೊಕ್ಕಿರುವ ಕೊರೊನಾ 1,60,000 ಮಂದಿಯನ್ನು ಆವರಿಸಿದ್ದು, 5,900 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಚೀನಾದಲ್ಲಿ 3,200 ಹಾಗೂ ಇಟಲಿಯಲ್ಲಿ 1,450 ಮಂದಿ ಮೃತಪಟ್ಟಿದ್ದಾರೆ. 76,000 ಜನ ಚೇತರಿಸಿಕೊಂಡಿದ್ದಾರೆ.

  • ಕೊರೊನಾ ಭೀತಿಯಲ್ಲಿ ರಾಜಕೀಯ ಹುಡುಕುವವರು ‘ಪ್ರಚಾರ ಪ್ರಿಯ’ರಷ್ಟೇ: ಎಚ್‍ಡಿಕೆ ಗರಂ

    ಕೊರೊನಾ ಭೀತಿಯಲ್ಲಿ ರಾಜಕೀಯ ಹುಡುಕುವವರು ‘ಪ್ರಚಾರ ಪ್ರಿಯ’ರಷ್ಟೇ: ಎಚ್‍ಡಿಕೆ ಗರಂ

    – ರಾಜಕೀಯಕ್ಕೆ ಬೇರೆ ಅವಕಾಶಗಳಿವೆ, ಅಲ್ಲಿ ಮಾಡೋಣ
    – ಸಚಿವರ ವಿರುದ್ಧ ಎಚ್‍ಡಿಕೆ ಗರಂ

    ಬೆಂಗಳೂರು: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಅವರ ನಡುವಿನ ಟ್ವೀಟ್ ಸಮರ ನಿಲ್ಲುವಂತೆ ಕಾಣುತ್ತಿಲ್ಲ. ಎಚ್.ಕುಮಾರಸ್ವಾಮಿ ಮತ್ತೆ ಸರಣಿ ಟ್ವೀಟ್ ಮಾಡಿ ರಾಜ್ಯ ಸರ್ಕಾರ ಹಾಗೂ ಸಚಿವರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

    ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿ, ವಿರೋಧ ಪಕ್ಷದ ನಾಯಕನಾದ ನಾನು ಸರ್ಕಾರಕ್ಕೆ ಸಲಹೆ ನೀಡುವುದು ನನ್ನ ಕರ್ತವ್ಯ, ನನ್ನ ಹಕ್ಕು. ಮತ್ತು, ಅದೇ ವೃತ್ತಿ ಧರ್ಮ. ರಾಜಕೀಯ ಮಾಡಲು ಬೇರೆ ಅವಕಾಶಗಳಿವೆ. ಅಲ್ಲಿ ಮಾಡೋಣ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಹೆಚ್ಚಿದ ಕೊರೊನಾ ಭೀತಿ- ರಾಜ್ಯ ರಾಜಕೀಯದಲ್ಲಿ ಶುರುವಾಯ್ತು ಕೆಸರೆರಚಾಟ

    ಈಗಲೂ ಹೇಳುತ್ತಿದ್ದೇನೆ ಇದು ನನ್ನ ಸಲಹೆ. ಇದರಲ್ಲಿಯೂ ರಾಜಕೀಯ ಹುಡುಕುವವರು ‘ಪ್ರಚಾರ ಪ್ರಿಯ’ರಷ್ಟೇ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕೊರೊನಾ ಭೀತಿ- ಸ್ವತಃ ಆದೇಶ ಹೊರಡಿಸಿ ಅದ್ದೂರಿ ಮದ್ವೆಯಲ್ಲಿ ಸಿಎಂ ಭಾಗಿ

    ಕೊರೊನಾ ವೈರಸ್ ಕುರಿತು ಸರ್ಕಾರಕ್ಕೆ ಕೆಲ ಸಲಹೆಗಳನ್ನು ನೀಡಿದ್ದೆ. ಇದರಲ್ಲಿ ರಾಜಕೀಯ ಹುಡುಕಿರುವ ಸಚಿವರೊಬ್ಬರು ಸರ್ಕಾರ ಎಲ್ಲ ರೀತಿಯಲ್ಲೂ ಮುಂಜಾಗ್ರತಾ ಕ್ರಮಗಳನ್ನು ವಹಿಸಿರುವುದಾಗಿ ಹೇಳಿದ್ದಾರೆ. ಸರಿ, ಸಿಎಂ ಬಿಎಸ್ವೈ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ತಪಾಸಣೆಗೆ ಒಳಗಾಗದೇ ನಿಯಮ ಉಲ್ಲಂಘಿಸಿದ್ದು ಯಾವ ಕ್ರಮ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕೊರೊನಾ ಭೀತಿ ನಡುವೆಯೇ ಅದ್ದೂರಿ ಮದ್ವೆಯಲ್ಲಿ ಎಚ್‍ಡಿಡಿ ಭಾಗಿ 

    ಕೊರೊನಾ ವೈರಸ್ ತಡೆಗೆ ಮುಂಜಾಗ್ರತೆಯೇ ಮದ್ದು. ಇದಕ್ಕಾಗಿಯೇ ಎಲ್ಲ ವಿಮಾನ ನಿಲ್ದಾಣಗಳಲ್ಲಿ, ಪ್ರತಿಯೊಬ್ಬರ ತಪಾಸಣೆ ನಡೆಯುತ್ತಿದೆ. ಈ ತಪಾಸಣೆಯನ್ನು ಮುಖ್ಯಮಂತ್ರಿಯೇ ನಿರ್ಲಕ್ಷಿಸುವುದು ಎಂಥ ಕಟ್ಟುನಿಟ್ಟಿನ ಕ್ರಮ? ಇದರಿಂದ ಜನರಿಗೆ ಹೋಗುವ ಸಂದೇಶವೇನು? ಈ ಬಗ್ಗೆ ‘ರಾಜಕೀಯ’ ಹುಡುಕಿದ ಸಚಿವರು ಏನು ಹೇಳುತ್ತಾರೆ ಎಂದು ಪ್ರಶ್ನಿಸಿ ತಿರುಗೇಟು ಕೊಟ್ಟಿದ್ದಾರೆ.

  • ಕಲಬುರಗಿಯಲ್ಲಿ ಮತ್ತೋರ್ವನಿಗೆ ಕೊರೊನಾ ವೈರಸ್- ದೃಢಪಡಿಸಿದ ಶ್ರೀರಾಮುಲು

    ಕಲಬುರಗಿಯಲ್ಲಿ ಮತ್ತೋರ್ವನಿಗೆ ಕೊರೊನಾ ವೈರಸ್- ದೃಢಪಡಿಸಿದ ಶ್ರೀರಾಮುಲು

    ಬೆಂಗಳೂರು: ಕಲಬುರಗಿಯಲ್ಲಿ ಸಾವನ್ನಪ್ಪಿದ ವೃದ್ಧನ ಕುಟುಂಬದಲ್ಲಿ ಒಬ್ಬರಿಗೆ ಕೊರೊನಾ ವೈರಸ್ ತಗುಲಿರೋದು ವರದಿಯಲ್ಲಿ ದೃಢವಾಗಿದೆ.

    ಈ ಕುರಿತು ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಶ್ರೀರಾಮುಲು ಅವರು, ಕಲಬುರಗಿಯ 4 ಕೊರೊನಾ ಶಂಕಿತರಲ್ಲಿ 3 ವ್ಯಕ್ತಿಗಳ ವರದಿ ಈ ಮೊದಲೇ ಬಂದಿದ್ದು, ಇದೀಗ ನಾಲ್ಕನೇ ವ್ಯಕ್ತಿಯ ಕೊರಾನಾ ಪರೀಕ್ಷೆಯ ವರದಿ ಪಾಸಿಟಿವ್ ಎಂದು ಬಂದಿದೆ. ಇವರನ್ನು ಈಗಾಗಲೇ ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ನಿಗಾವಹಿಸಿರುವುದರಿಂದ, ಸೋಂಕಿತರು ಆದಷ್ಟು ಬೇಗ ಗುಣಮುಖರಾಗುತ್ತಾರೆ ಎಂಬ ವಿಶ್ವಾಸವಿದೆ. ನಾಗರಿಕರು ಆತಂಕ ಪಡಬೇಕಾಗಿಲ್ಲ ಎಂದು ತಿಳಿಸಿದ್ದಾರೆ.

    ಮುಂಜಾಗ್ರತ ಕ್ರಮವಾಗಿ ಈಶಾನ್ಯ ಸಾರಿಗೆಯ 90 ಬಸ್‍ಗಳ ಸೇವೆಯನ್ನು ನಿನ್ನೆಯಿಂದಲ್ಲೆ ನಿಲ್ಲಿಸಲಾಗಿತ್ತು. ಇದಾದ ಬಳಿಕ ಇಂದು ಸಹ 100ಕ್ಕು ಹೆಚ್ಚು ಬಸ್‍ಗಳ ಸೌಲಭ್ಯವನ್ನು ಕಡಿತ ಮಾಡಲಾಗಿದೆ. ಹೀಗಾಗಿ, ಕಲಬುರಗಿಯ ಬಸ್ ನಿಲ್ದಾಣ ಬಹುತೇಕ ಸಬ್ಧವಾಗಿತ್ತು. ಪ್ರಯಾಣಿಕರಿಲ್ಲದೆ ಇಡೀ ಕಲಬುರಗಿಯ ರೈಲ್ವೇ ನಿಲ್ದಾಣವೇ ಖಾಲಿ ಖಾಲಿಯಾಗಿತ್ತು. ಬೇರೆ ಬೇರೆ ಜಿಲ್ಲೆ ಮತ್ತು ರಾಜ್ಯಗಳಿಗೇ ಹೋಗುವವರ ಮೇಲೆ ಆರೋಗ್ಯ ಇಲಾಖೆ ತೀವ್ರ ನಿಗಾ ಇಟ್ಟಿದೆ. ಪ್ರತಿ ಒಬ್ಬರ ಆರೋಗ್ಯ ತಪಾಸಣೆ ಮಾಡಿ, ಏನೂ ಸಮಸ್ಯೆ ಇಲ್ಲ ಅಂದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗ್ತಿದೆ. ಜೊತೆಗೆ ಇಡೀ ರೈಲು ನಿಲ್ದಾಣವನ್ನು ಫಿನಾಯಿಲ್ ನಿಂದ ಸ್ವಚ್ಛ ಮಾಡಲಾಗಿದೆ.

    ಕಲಬುರಗಿ ನಗರದಲ್ಲಿ ನಿನ್ನೆಯಿಂದ ವಾಸ್ತವ್ಯ ಹೂಡಿದ್ದ ಆರೋಗ್ಯ ಸಚಿವ ಶ್ರೀರಾಮುಲು ಅವರು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಸಭೆ ನಡೆಸಿದರು. ಮುಂಜಾಗೃತ ಕ್ರಮಗಳ ಬಗ್ಗೆ ಮಾಹಿತಿ ಪಡೆದು, ಜೀಮ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಐಸೋಲೆಟೆಡ್ ವಾರ್ಡ್‍ಗಳನ್ನು ಪರಿಶೀಲಿಸಿದರು. ತದನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಸರ್ಕಾರ ಎಲ್ಲ ಮುನ್ನೆಚ್ಚರಿಕ ಕ್ರಮಗಳನ್ನು ಕೈಗೊಂಡಿದ್ದು, ಜನರು ಭಯಪಡಬೇಕಾಗುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

  • ಹೆಚ್ಚಿದ ಕೊರೊನಾ ಭೀತಿ- ರಾಜ್ಯ ರಾಜಕೀಯದಲ್ಲಿ ಶುರುವಾಯ್ತು ಕೆಸರೆರಚಾಟ

    ಹೆಚ್ಚಿದ ಕೊರೊನಾ ಭೀತಿ- ರಾಜ್ಯ ರಾಜಕೀಯದಲ್ಲಿ ಶುರುವಾಯ್ತು ಕೆಸರೆರಚಾಟ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿದೆ. ಇದಕ್ಕೆ ಪರಿಹಾರ ಕೈಗೊಳ್ಳಬೇಕಾದ ರಾಜಕೀಯ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಕಾಲೆಳೆಯುವ, ಟಾಂಗ್ ಕೊಡುವಲ್ಲಿ ಫುಲ್ ಆ್ಯಕ್ಟಿವ್ ಆಗಿದ್ದಾರೆ.

    ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಸರಣಿ ಟ್ವೀಟ್ ಮಾಡಿ, ಕೊರೊನಾ ವಿರುದ್ಧ ಕೈಗೊಂಡ ಕ್ರಮಗಳ ಕುರಿತ ಸುದ್ದಿಯನ್ನು ಜನರಿಗೆ ತಿಳಿಸುವ ವಿಚಾರದಲ್ಲಿ ಸರ್ಕಾರದಲ್ಲಿ ಎರಡು ಧ್ರುವಗಳು ಸೃಷ್ಟಿಯಾದಂತಿವೆ. ಆರೋಗ್ಯ ಸಚಿವರು ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಒಮ್ಮತದಿಂದ ಕಾರ್ಯ ನಿರ್ವಹಿಸಲಿ. ಪರಸ್ಪರರ ನಡುವೆ ಸಹಕಾರವಿರಲಿ. ಇದು ಪ್ರಚಾರ ಪಡೆಯುವ ಪ್ರಹಸನವಾಗಬಾರದು. ಜನರಲ್ಲಿ ಗೊಂದಲ ಮೂಡದಿರಲಿ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು.

    ಕೊರೊನಾ ಸೋಂಕಿತರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡುವುದೇ ಮುಂಜಾಗ್ರತಾ ಕ್ರಮ. ಇದಕ್ಕಾಗಿ ಕೆಲ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಿಭಾಗ ತೆರೆದಿರುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ ಇತರ ರೋಗಿಗಳ ಜೊತೆ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಸರಿಯೇ? ಇದರ ಬದಲು ಖಾಲಿ ಉಳಿದಿರುವ ಸರ್ಕಾರಿ ಕಟ್ಟಡಗಳನ್ನು ಇದಕ್ಕಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದರು.

    ರಾಜ್ಯದಲ್ಲಿ ಹಲವು ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳು ಖಾಲಿ ಉಳಿದಿವೆ. ಅವುಗಳನ್ನು ಕೊರೊನಾ ವೈರಸ್ ಸೋಂಕಿತರಿಗೆ ಕ್ವಾರಂಟೈನ್ ಕೇಂದ್ರಗಳಾಗಿ ಪರಿವರ್ತಿಸಬೇಕು. ಜನನಿಬಿಡ ಪ್ರದೇಶಗಳಿಂದ ದೂರದಲ್ಲಿ ಕ್ವಾರಂಟೈನ್ ಕೇಂದ್ರ ತರೆಯಬೇಕು. ಸೋಂಕಿತರ ರಕ್ತ ಮಾದರಿ ಸಂಗ್ರಹಕ್ಕೆ ಅವರಿರುವಲ್ಲಿಯೇ ವ್ಯವಸ್ಥೆಯಾಗಬೇಕು ಎಂದಿದ್ದರು.

    ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು, ಕೊರೊನಾ ನಿರ್ವಹಣೆ ವಿಚಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಾಲಿಶ ಹೇಳಿಕೆ ನೀಡಿದ್ದನ್ನು ಗಮನಿಸಿದ್ದೇನೆ. ವಿಪತ್ತನ್ನು ಎದುರಿಸಲು ಸಿಎಂ ಯಡಿಯೂರಪ್ಪ ಅವರ ಆದೇಶದಂತೆ ರಾಜ್ಯಸರ್ಕಾರ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಿದ್ದು ಆರೋಗ್ಯ ಸಚಿವ ಶ್ರೀರಾಮುಲು ಮತ್ತು ನಾನು ಪರಸ್ಪರ ಸಮನ್ವಯದಿಂದ ಕರ್ತವ್ಯ ನಿರ್ವಹಿಸುತ್ತದ್ದೇವೆ ಎಂದು ತಿರುಗೇಟು ನೀಡಿದ್ದಾರೆ.

    ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವುದು, ಸೋಂಕಿತರ ಪತ್ತೆಗೆ ಸರ್ವ ಪ್ರಯತ್ನ, ಸೋಂಕಿತರ ಚಿಕಿತ್ಸೆಗೆ ಎಲ್ಲ ಸೌಕರ್ಯ, ಪ್ರತ್ಯೇಕ ನಿಗಾ ಘಟಕಗಳು, ತಜ್ಞ ವೈದ್ಯರ ಮತ್ತು ಇತರ ಸಿಬ್ಬಂದಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಎಲ್ಲ ಮುಂಜಾಗ್ರತಾ ಕ್ರಮಗಳನ್ನು ರಾಜ್ಯಸರ್ಕಾರ ತೆಗೆದುಕೊಂಡಿದೆ. ಇದನ್ನು ಜನರೂ ಮೆಚ್ಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    ಮಾಜಿ ಮುಖ್ಯಮಂತ್ರಿಗಳಲ್ಲಿ ನನ್ನ ವಿನಂತಿಯೆಂದರೆ, ಈ ಸೂಕ್ಷ್ಮ ಪರಿಸ್ಥಿತಿಗಳಲ್ಲಿ ರಾಜಕೀಯ ಬದಿಗಿಟ್ಟು, ಜಾಗೃತಿ ಮೂಡಿಸುವ ಕೆಲಸದಲ್ಲಿ ಆದಷ್ಟು ಸಹಕರಿಸಿ. ತಾವು ಕೂಡ ಎಚ್ಚರಿಕೆಯಿಂದ ಇದ್ದು ಸುರಕ್ಷಿತವಾಗಿರಿ. ಇಂತಹ ಸಂದರ್ಭಗಳಲ್ಲಿ ಜನರಲ್ಲಿ ಆತಂಕ ಹೆಚ್ಚಿಸುವ ಯಾವುದೇ ಪ್ರಯತ್ನ ಅಪೇಕ್ಷಣೀಯವಲ್ಲ ಎಂದು ಗುಡುಗಿದ್ದಾರೆ.

    ಅಷ್ಟೇ ಅಲ್ಲದೆ ಆರೋಗ್ಯ ಸಚಿವ ಶ್ರೀರಾಮುಲು ಅವರು ಕೂಡ ಪ್ರತಿಕ್ರಿಯೆ ನೀಡಿ, ಕುಮಾರಸ್ವಾಮಿಯವರೇ, ನಾನು ಹಾಗೂ ಸುಧಾಕರ್ ಅವರು ಜೊತೆಜೊತೆಗೆ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ. ತಮ್ಮ ಗೊಂದಲದಲ್ಲಿ ಯಾವುದೇ ಹುರುಳಿಲ್ಲ. ಇತ್ತೀಚೆಗೆ ಹೆಚ್ಚಾಗಿ ಗೊಂದಲದಲ್ಲಿರುವ ತಾವು, ಜನರನ್ನು ಗೊಂದಲಕ್ಕೆ ದೂಡುವ ಕೆಲಸಕ್ಕೆ ಕೈಹಾಕದಿರಿ ಎಂದು ವಿನಂತಿಸುತ್ತೇನೆ ಎಂದು ಕುಟುಕಿದ್ದಾರೆ.

  • ಕೊರೊನಾ ಭೀತಿ – ತಂದೆ ಅಂತ್ಯಕ್ರಿಯೆಯನ್ನು ವಿಡಿಯೋ ಕಾಲ್ ಮೂಲಕ ವೀಕ್ಷಣೆ

    ಕೊರೊನಾ ಭೀತಿ – ತಂದೆ ಅಂತ್ಯಕ್ರಿಯೆಯನ್ನು ವಿಡಿಯೋ ಕಾಲ್ ಮೂಲಕ ವೀಕ್ಷಣೆ

    – ಒಂದೇ ಆಸ್ಪತ್ರೆಯಲ್ಲಿ ತಂದೆ-ಮಗ ಅಡ್ಮಿಟ್
    – ತಂದೆ ಶವವನ್ನು ಕಿಟಿಕಿಯಿಂದ ನೋಡಿದ

    ತಿರುವನಂತಪುರಂ: ಕೊರೊನಾ ಶಂಕಿತ ವ್ಯಕ್ತಿಯೋರ್ವ ತನ್ನ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಾಗದೆ ಐಸೋಲೇಷನ್ ವಾರ್ಡಿನಲ್ಲಿ ಕುಳಿತು ವಿಡಿಯೋ ಕಾಲ್ ಮೂಲಕ ಅಂತ್ಯಕ್ರಿಯೆಯನ್ನು ವೀಕ್ಷಿಸಿರುವ ಮನಮಿಡಿಯುವ ಕಥೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ.

    ತಂದೆಗೆ ಆರೋಗ್ಯ ಸರಿಯಿಲ್ಲ ಎಂದು ಕೇರಳದ ವ್ಯಕ್ತಿಯೋರ್ವ ಕತಾರ್ ನಿಂದ ಇಂಡಿಯಾಗೆ ಬಂದಿದ್ದರು. ಆದರೆ ವಿಧಿಯ ಆಟವೇ ಬೇರೆಯಿತ್ತು. ಕತಾರ್ ದೇಶದಲ್ಲಿ ಕೊರೊನಾ ತಾಂಡವಾಡುತ್ತಿದೆ. ಈ ವ್ಯಕ್ತಿಗೂ ಭಾರತಕ್ಕೆ ಬರುವಷ್ಟರಲ್ಲಿ ಕೊರೊನಾ ಸೋಂಕು ಇದೆ ಎಂದು ಶಂಕಿಸಲಾಗಿತ್ತು. ವಿಮಾನ ನಿಲ್ದಾಣದಲ್ಲಿ ಎಲ್ಲ ರೀತಿಯ ಪರೀಕ್ಷೆ ಮುಗಿಸಿ ಬಂದಿದ್ದರು.

    ತಂದೆಯನ್ನು ನೋಡಲು ಆಸ್ಪತ್ರೆಗೆ ಬಂದ ಮಗನಿಗೆ ಸ್ವಲ್ಪ ಪ್ರಮಾಣದ ಕೆಮ್ಮು ಮತ್ತು ಗಂಟಲು ನೋವು ಕಾಣಿಸಿಕೊಂಡಿತ್ತು. ಆಗ ತಕ್ಷಣ ಎಚ್ಚೆತ್ತ ಅವರ ಮನೆಯವರಿಂದ ದೂರ ಉಳಿದು ಡಾಕ್ಟರ್ ಬಳಿ ಹೋಗಿದ್ದರು. ಅವರನ್ನು ಚಿಕಿತ್ಸೆ ಒಳಪಡಿಸಿದ ವೈದ್ಯರು ನಿಮಗೆ ಕೊರೊನಾ ವೈರಸ್ ಇದೆ ಎಂದು ಶಂಕಿಸಿದ್ದರು. ಜೊತೆಗೆ ನೀವು ಇನ್ನೂ ಮುಂದೆ ಐಸೋಲೇಷನ್ ವಾರ್ಡಿನಲ್ಲಿ ಇರಬೇಕು ಎಂದು ಹೇಳಿದ್ದರು.

    ತಾನು ಇರುವ ಪರಿಸ್ಥಿತಿಯಲ್ಲಿ ಹೊರ ಹೋಗುವುದು ಸರಿಯಲ್ಲಿ ಎಂದು ತಂದೆ ದಾಖಲಾಗಿದ್ದ ಕೊಟ್ಟಾಯಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲೇ ಮಗನೂ ಕೂಡ ಐಸೋಲೇಷನ್ ವಾರ್ಡ್ ಅಡ್ಮಿಟ್ ಆಗುತ್ತಾರೆ. ಆದರೆ ತಾನೊಂದು ಬಗೆದರೆ ದೈವವೇ ಒಂದು ಬಗೆಯುತ್ತದೆ ಎಂಬ ಮಾತಿನಂತೆ, ಆತ ಐಸೋಲೇಶನ್ ವಾರ್ಡ್ ದಾಖಲಾಗುತ್ತಿದ್ದಂತೆ. ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಅವರ ತಂದೆ ಮಾಚ್ 9ರಂದು ವಿಧಿವಶರಾಗುತ್ತಾರೆ.

    ಅಂತಿಮ ವಿಧಿವಿಧಾನ ಮಾಡಬೇಕಿದ್ದ ಮಗ ವಿಧಿವಶರಾದ ತಂದೆಯ ಶವವನ್ನು ಅಂಬುಲೆನ್ಸ್‍ನಲ್ಲಿ ತೆಗೆದುಕೊಂಡು ಹೋಗುವಾಗ ಕಿಟಕಿಯಿಂದ ನೋಡಬೇಕಾದ ಪರಿಸ್ಥಿತಿ ಬಂದಿರುತ್ತದೆ. ಕ್ರೂರಿ ಕೊರೊನಾ ವೈರಸ್ ಮಹಾಮಾರಿಯ ಭೀತಿಯಿಂದ ಮುಂದೆ ನಿಂತು ತಂದೆಯ ಅಂತ್ಯಸಂಸ್ಕಾರ ಮಾಡಬೇಕಿದ್ದ ಮಗ ಐಸೋಲೇಷನ್ ವಾರ್ಡಿನಲ್ಲಿ ಕುಳಿತು ವಿಡಿಯೋ ಕಾಲ್ ಮೂಲಕ ಪಿತೃವಿಯೋಗದ ಕಾರ್ಯಕ್ರಮವನ್ನು ವೀಕ್ಷಿಸಿರುತ್ತಾರೆ.

    ಈ ನೋವನ್ನು ತಮ್ಮ ಫೇಸ್‍ಬುಕ್ ಪೇಜ್ ಅಲ್ಲಿ ಹಂಚಿಕೊಂಡಿರುವ ಆತ, ನಾನು ಆಸ್ಪತ್ರೆಗೆ ದಾಖಲಾದ ಕಾರಣ ನನ್ನ ತಂದೆಯನ್ನು ನನಗೆ ಕೊನೆಯ ಬಾರಿ ನೋಡಲು ಆಗಲಿಲ್ಲ. ಆದರೆ ನಾನು ಈ ಸೋಂಕನ್ನು ಬೇರೆಯವರಿಗೆ ಹರಡುವಂತೆ ಮಾಡಲು ತಯಾರಿರಲಿಲ್ಲ. ನನ್ನ ಹಾಗೇ ಸೋಂಕು ಇರುವವರು ತಕ್ಷಣ ವೈದ್ಯರ ಬಳಿ ಹೋಗಿ. ಈಗ ನೀವು ಸ್ವಲ್ಪ ದಿನ ಆಸ್ಪತ್ರೆಯಲ್ಲಿ ಕಷ್ಟಪಟ್ಟರೆ, ಮುಂದಿನ ನಿಮ್ಮ ಜೀವನವನ್ನು ನಿಮ್ಮ ಕುಟುಂಬದ ಜೊತೆ ಖುಷಿಯಿಂದ ಕಳೆಯಬಹುದು ಎಂದು ಬರೆದುಕೊಂಡಿದ್ದಾರೆ.

    ನಾನು ನನ್ನ ತಂದೆ ತೀರಿಕೊಂಡ ಸಮಯದಲ್ಲಿ ಬಹಳ ಹತ್ತಿರದಲ್ಲೇ ಇದ್ದೆ. ಆದರೆ ಅವರನ್ನು ನೋಡಲು ಆಗಲಿಲ್ಲ. ನಾನು ಕೂಡ ಕೆಮ್ಮು ಜ್ವರ ಕಾಣಿಸಿಕೊಂಡಾಗ ವೈದ್ಯರ ಬಳಿ ಹೋಗದೇ ನಮ್ಮ ಅಪ್ಪನ ಜೊತೆ ಇರಬಹುದಿತ್ತು. ಆದರೆ ಅದರಿಂದ ಆಗುವ ಪರಿಣಾಮ ನಮ್ಮ ಮನೆಯವರನ್ನು ಕಷ್ಟಕ್ಕೆ ತಳ್ಳುತ್ತಿತ್ತು. ಹಾಗಾಗಿ ನೀವು ಕೂಡ ಸೋಂಕನ್ನು ಮುಚ್ಚಿಟ್ಟುಕೊಳ್ಳಬೇಡಿ ಎಂದು ತಮ್ಮ ಅನುಭವನ್ನು ಹೇಳಿಕೊಂಡಿದ್ದಾರೆ.

    ಶನಿವಾರ ಅವರ ರಕ್ತ ಪರೀಕ್ಷೆಯ ವರದಿ ಬಂದಿದ್ದು, ಅವರಿಗೆ ಕೊರೊನಾ ವೈರಸ್ ನೆಗೆಟಿವ್ ಬಂದಿದೆ. ಆದರೆ ತಂದೆಯನ್ನು ಕೊನೆ ಕ್ಷಣದಲ್ಲಿ ನೋಡಲು ಆಗಲಿಲ್ಲ ಎಂಬ ನೋವಿನಲ್ಲೇ ಅವರು ಇಡಕ್ಕಿ ಜಿಲ್ಲೆಯ ತೋಡುಪುಳ ಎಂಬ ಅವರ ಗ್ರಾಮಕ್ಕೆ ಹೋಗಿದ್ದಾರೆ.

  • ಸರ್ಕಾರದ ಆದೇಶಕ್ಕಿಲ್ಲ ಕಿಮ್ಮತ್ತು – ಮಡಿಕೇರಿ ಪಟ್ಟಣದಲ್ಲೇ ನಡೆಯುತ್ತಿವೆ ಎರಡೆರಡು ಅದ್ಧೂರಿ ಮದುವೆ

    ಸರ್ಕಾರದ ಆದೇಶಕ್ಕಿಲ್ಲ ಕಿಮ್ಮತ್ತು – ಮಡಿಕೇರಿ ಪಟ್ಟಣದಲ್ಲೇ ನಡೆಯುತ್ತಿವೆ ಎರಡೆರಡು ಅದ್ಧೂರಿ ಮದುವೆ

    ಮಡಿಕೇರಿ: ಕೊರೊನಾ ವೈರಸ್ ಭೀತಿ ಹಿನ್ನೆಲೆ ಸರ್ಕಾರ ಸಾಮೂಹಿಕ ಕಾರ್ಯಕ್ರಮಗಳನ್ನು ನಿಷೇಧಿಸಿದ್ದರೂ ಮಂಜಿನ ನಗರಿ ಮಡಿಕೇರಿ ಪಟ್ಟಣದ ಕಾವೇರಿ ಹಾಲ್ ಹಾಗೂ ಗೌಡ ಸಮಾಜದಲ್ಲಿ ಅದ್ಧೂರಿ ಮದುವೆಗಳು ನಡೆಯುತ್ತಿವೆ.

    ಮದುವೆ, ಸಭೆ-ಸಮಾರಂಭಗಳಿಗೆ ನಿರ್ಬಂಧವಿದ್ದರೂ ಮಡಿಕೇರಿ ನಗರದಲ್ಲೇ ಎರಡೆರಡು ಮದುವೆಗಳು ನಡೆಯುತ್ತಿವೆ. ಕಾವೇರಿ ಹಾಲ್‍ನಲ್ಲಿ ಸುಮಾರು 1,500 ಹಾಗೂ ಗೌಡ ಸಮಾಜದಲ್ಲಿ 300ಕ್ಕೂ ಹೆಚ್ಚು ಮಂದಿ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಜಿಲ್ಲೆಗೆ ಈಗಾಗಲೇ 65 ಜನರು ವಿದೇಶದಿಂದ ಮರಳಿದ್ದಾರೆ. ಶನಿವಾರದವರೆಗೂ ವಿದೇಶದಿಂದ ವಾಪಸ್ ಬಂದಿರುವವರು ಆರಾಮಾಗಿ ಓಡಾಡಿಕೊಂಡೇ ಇದ್ದರು.

    ಇಷ್ಟೆಲ್ಲಾ ಆದರೂ ಅದ್ಧೂರಿ ಮದುವೆಗಳಿಗೆ ಕಡಿವಾಣ ಇಲ್ಲದಂತೆ ಆಗಿದೆ. ಸರ್ಕಾರದ ನಿಯಮಕ್ಕೂ ಕಿಮ್ಮತ್ತು ತೋರದ ಅಧಿಕಾರಿಗಳು ನಗರದಲ್ಲೇ ಮದುವೆ ನಡೆಯುತ್ತಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಬಗ್ಗೆ ಮದುವೆ ಮನೆಯವರು ಮಾತನಾಡಿ ನಾವು ಈ ಕೊರೊನಾ ವೈರಸ್ ಬರುವ ಮೊದಲೇ ಮದುವೆ ಹಾಲ್‍ಗಳು ಬುಕ್ ಮಾಡಿದ್ದೆವು. ಈಗ ದಿಢೀರ್ ಆಗಿ ಕೊರೊನಾ ವೈರಸ್ ರಾಜುದಲ್ಲಿ ಹರಡುತ್ತಿರುವುದಕ್ಕೆ ಸಮಸ್ಯೆ ಆಗುತ್ತಿದೆ. ಆದರೂ ಕುಟುಂಬಸ್ಥರು ಮದುವೆಗೆ ಬಂದು ಹೋಗುತ್ತಿದ್ದಾರೆ ಎಂದು ಹೇಳಿದ್ದಾರೆ.

  • ಕೊರೊನಾ ನಿಯಂತ್ರಣಕ್ಕೆ ಸರ್ಕಾರಕ್ಕೆ ಸಲಹೆ ಕೊಟ್ಟ ಕುಮಾರಸ್ವಾಮಿ

    ಕೊರೊನಾ ನಿಯಂತ್ರಣಕ್ಕೆ ಸರ್ಕಾರಕ್ಕೆ ಸಲಹೆ ಕೊಟ್ಟ ಕುಮಾರಸ್ವಾಮಿ

    ಬೆಂಗಳೂರು: ದೇಶದೆಲ್ಲೆಡೆ ಕೊರೊನಾ ವೈರಸ್ ಭೀತಿ ಹರಡಿದೆ. ಇದೀಗ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದಾರೆ.

    ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡುವ ಮೂಲಕ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದಾರೆ. ಮೊದಲನೆಯದಾಗಿ “ಕೊರೊನಾ ಸೋಂಕಿತರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡುವುದೇ ಮುಂಜಾಗ್ರತಾ ಕ್ರಮ. ಇದಕ್ಕಾಗಿ ಕೆಲ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಿಭಾಗ ತೆರೆದಿರುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ ಇತರ ರೋಗಿಗಳ ಜೊತೆ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಸರಿಯೇ? ಇದರ ಬದಲು ಖಾಲಿ ಉಳಿದಿರುವ ಸರ್ಕಾರಿ ಕಟ್ಟಡಗಳನ್ನು ಇದಕ್ಕಾಗಿ ಬಳಸಿಕೊಳ್ಳಬೇಕು” ಎಂದು ಬರೆದುಕೊಂಡಿದ್ದಾರೆ. ಇದನ್ನೂ: ಅನಿವಾಸಿ ಭಾರತೀಯನ ಸಾವನ್ನು ಕೊರೊನಾ ಜೊತೆ ಲಿಂಕ್ ಮಾಡ್ಬೇಡಿ: ಉಡುಪಿ ಡಿಸಿ

    ರಾಜ್ಯದಲ್ಲಿ ಹಲವು ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳು ಖಾಲಿ ಉಳಿದಿವೆ. ಅವುಗಳನ್ನು ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವ Quarantine ಕೇಂದ್ರಗಳಾಗಿ ಪರಿವರ್ತಿಸಬೇಕು. ಜನನಿಬಿಡ ಪ್ರದೇಶಗಳಿಂದ ದೂರದಲ್ಲಿ Quarantine ಕೇಂದ್ರ ತರೆಯಬೇಕು. ಸೋಂಕಿತರ ರಕ್ತ ಮಾದರಿ ಸಂಗ್ರಹಕ್ಕೆ ಅವರಿರುವಲ್ಲಿಯೇ ವ್ಯವಸ್ಥೆಯಾಗಬೇಕು ಎಂದರು.

    ಕೊರೊನಾ ವೈರಸ್ ವಿರುದ್ಧ ಕೈಗೊಂಡ ಕ್ರಮಗಳ ಕುರಿತ ಸುದ್ದಿಯನ್ನು ಜನರಿಗೆ ತಿಳಿಸುವ ವಿಚಾರದಲ್ಲಿ ಸರ್ಕಾರದಲ್ಲಿ ಎರಡು ಧ್ರುವಗಳು ಸೃಷ್ಟಿಯಾದಂತಿವೆ. ಆರೋಗ್ಯ ಸಚಿವರು ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಒಮ್ಮತದಿಂದ ಕಾರ್ಯ ನಿರ್ವಹಿಸಲಿ. ಪರಸ್ಪರರ ನಡುವೆ ಸಹಕಾರವಿರಲಿ. ಇದು ಪ್ರಚಾರ ಪಡೆಯುವ ಪ್ರಹಸನವಾಗಬಾರದು ಎಂದು ಸರ್ಕಾರಕ್ಕೆ ಸಲಹೆ ಕೊಟ್ಟಿದ್ದಾರೆ.

    “ಜನರಲ್ಲಿ ಗೊಂದಲ ಮೂಡದಿರಲಿ. ಸುರಕ್ಷತಾ ಕ್ರಮಗಳನ್ನು ವಿವರಿಸುವ ವಿಚಾರ ಪ್ರಚಾರದ ಸರಕಾಗಬಾರದು. ಹಾಗೆ ಆಗಿದ್ದೇ ಆದರೆ ಜನರಲ್ಲಿ ಆತಂಕ ಸೃಷ್ಟಿಯಾಗುತ್ತದೆ. ಆತಂಕ ಸಮೂಹ ಸನ್ನಿಯಾಗಿ ಪರಿವರ್ತನೆಯಾಗಿ ಜನಜೀವನ ಮೇಲೆ ನೇತ್ಯಾತ್ಮಕ ಪರಿಣಾಮಗಳು ಉಂಟಾಗದಿರಲಿ” ಎಂದು ಕುಮಾರಸ್ವಾಮಿ ಬರೆದುಕೊಂಡಿದ್ದಾರೆ.

  • ಹಿಂದೂ ಸಮಾಜೋತ್ಸವ ಮುಂದೂಡಿಕೆ- ಸಾಧ್ವಿ ಪ್ರಜ್ಞಾಸಿಂಗ್ ವಾಪಸ್

    ಹಿಂದೂ ಸಮಾಜೋತ್ಸವ ಮುಂದೂಡಿಕೆ- ಸಾಧ್ವಿ ಪ್ರಜ್ಞಾಸಿಂಗ್ ವಾಪಸ್

    ಮಂಗಳೂರು: ವಿಶ್ವ ಹಿಂದೂ ಪರಿಷತ್, ಭಜರಂಗ ದಳದ ವತಿಯಿಂದ ನಡೆಯಬೇಕಿದ್ದ ವಿರಾಟ್ ಹಿಂದೂ ಸಮಾಜೋತ್ಸವ ಮುಂದೂಡಲಾಗಿದೆ. ಹೀಗಾಗಿ ಕಾರ್ಯಕ್ರಮಕ್ಕೆ ಬಂದಿದ್ದ ಮಧ್ಯಪ್ರದೇಶದ ಭೋಪಾಲ್ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ವಾಪಸ್ ಆಗಿದ್ದಾರೆ.

    ಕೊರೊನಾ ವೈರಸ್ ತೀವ್ರಗತಿಯಲ್ಲಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಇಂದಿನಿಂದ ಸಾರ್ವಜನಿಕವಾಗಿ ಯಾವುದೇ ಸಭೆ, ಸಮಾರಂಭಗಳನ್ನು ನಡೆಸದಂತೆ ಆದೇಶ ನೀಡಿತ್ತು. ಹೀಗಾಗಿ ಭಾನುವಾರ ದಕ್ಷಿಣ ಕನ್ನಡದ ವಿಟ್ಲದ ಪಂಚಲಿಂಗೇಶ್ವರ ದೇವರ ರಥದ ಗದ್ದೆಯಲ್ಲಿ ನಡೆಯಬೇಕಿದ್ದ ವಿರಾಟ್ ಹಿಂದೂ ಸಮಾಜೋತ್ಸವ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಇಟಲಿ, ಡೆನ್ಮಾರ್ಕ್ ಬಳಿಕ ಕುವೈತ್ ಸಂಪೂರ್ಣ ಬಂದ್

    ಈ ಮಧ್ಯೆ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಲು ಆಗಮಿಸಿದ್ದರು. ಆದರೆ ಕಾರ್ಯಕ್ರಮ ಮುಂದೂಡಿಕೆಯ ಹಿನ್ನೆಲೆಯಲ್ಲಿ ನೆಲಪ್ಪಾಲ್ ಆಂಜನೇಯ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಜೊತೆಗೆ ಹನುಮಗಿರಿ ಆಂಜನೇಯ ಕ್ಷೇತ್ರಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

  • ಮಿನಿ ಐಪಿಎಲ್ ನಡೆಸಲು ಸಜ್ಜಾದ ಬಿಸಿಸಿಐ

    ಮಿನಿ ಐಪಿಎಲ್ ನಡೆಸಲು ಸಜ್ಜಾದ ಬಿಸಿಸಿಐ

    – ಬಿಸಿಸಿಐ ಮುಂದಿವೆ ಮೂರು ಆಯ್ಕೆಗಳು

    ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗಾಗಿ ಬಿಸಿಸಿಐ ಮತ್ತು ಫ್ರಾಂಚೈಸಿಗಳು ಮುಂಬೈನಲ್ಲಿ ಶನಿವಾರ ಮಹತ್ವದ ಸಭೆ ನಡೆಸಿದರು. ಈ ವೇಳೆ ಐಪಿಎಲ್‍ಗೆ ಸಂಬಂಧಿಸಿದ ಹಲವು ಆಯ್ಕೆಗಳನ್ನು ಚರ್ಚಿಸಲಾಗಿದೆ.

    ಪಂದ್ಯಾವಳಿಯನ್ನು ವಿದೇಶದಲ್ಲಿ ನಡೆಸದಿರುವ ವಿಷಯದಲ್ಲಿ ಎಲ್ಲಾ ಫ್ರಾಂಚೈಸಿಗಳು ಸರ್ವಾನುಮತದಿಂದ ಇದ್ದವು. ಆದರೆ ಈ ವರ್ಷದ ಪಂದ್ಯಾವಳಿಯ ಭವಿಷ್ಯ ಹೇಗಿರುತ್ತದೆ ಎಂಬ ಬಗ್ಗೆ ನಿರ್ಧರಿಸಲಾಗಿಲಿಲ್ಲ. ಇತ್ತ ಫ್ರ್ಯಾಂಚೈಸಿಗಳು ಸಭೆಯ ಕುರಿತಾಗಿ ಮಾಧ್ಯಮಗಳಿಗೆ ಯಾವುದೇ ಮಾಹಿತಿ ನೀಡಲಿಲ್ಲ. ಆದರೆ ಬೋರ್ಡ್ ಮೂಲಕವು ಸಂಭಾಷಣೆಯಲ್ಲಿ ಹೊರಬಂದ ಆಯ್ಕೆಗಳನ್ನು ವಿವರಿಸಿದೆ. ಐಪಿಎಲ್ ಅವಧಿಯನ್ನು ಕಡಿಮೆಗೊಳಿಸುವ ಕುರಿತಾಗಿಯೇ ಹೆಚ್ಚು ಚರ್ಚಿಸಲಾಗಿದೆ ಎಂದು ವರದಿಯಾಗಿದೆ.

    ಮೊದಲ ಆಯ್ಕೆ: ಶನಿವಾರವೂ ಎರಡು ಪಂದ್ಯ
    ಹಳೆಯ ಐಪಿಎಲ್ ವೇಳಾಪಟ್ಟಿಯ ಪ್ರಕಾರ ಪ್ರಸಕ್ತ ಆವೃತ್ತಿಯಲ್ಲಿ ತಂಡವೊಂದು ತಲಾ 6 ಪಂದ್ಯಗಳನ್ನು ಆಡಬೇಕು. ಈಗ 60 ಪಂದ್ಯಗಳನ್ನು ಭಾನುವಾರದಂತೆ 2 ಪಂದ್ಯಗಳನ್ನು ಶನಿವಾರವೂ ನಡೆಸಬಹುದು. ಈ ಆಯ್ಕೆಯನ್ನು ಅನುಸರಿಸಿದರೆ ಮೇ ತಿಂಗಳಲ್ಲಿ ಟೂರ್ನಿಯನ್ನು ಮುಗಿಸಲು ಸಾಧ್ಯವಾಗುತ್ತದೆ. ಆದರೆ ಈ ಕುರಿತು ಐಪಿಎಲ್ ಪ್ರಸಾರಕರ ನಿಲುವನ್ನು ನೋಡಬೇಕಾಗಿದೆ. ಏಕೆಂದರೆ ಟಿಆರ್‍ಪಿ ವಿಷಯದಲ್ಲಿ ಸಂಜೆ 4 ಗಂಟೆಗೆ ಪಂದ್ಯವನ್ನು ನಡೆಸಲು ಸ್ಟಾರ್ ಟಿವಿ ಮಾಲೀಕರು ಒಪ್ಪುವುದಿಲ್ಲ. ಜೊತೆಗೆ ಆಟಗಾರರು ಸಹ ಈ ಸಮಯದಲ್ಲಿ ಪಂದ್ಯವನ್ನು ಆಡಲು ಬಯಸುವುದಿಲ್ಲ. ಏಕೆಂದರೆ ಈ ಸಮಯದಲ್ಲಿ ಭಾರತದ ಹೆಚ್ಚಿನ ನಗರಗಳಲ್ಲಿ ತಾಪಮಾನವು 40 ಡಿಗ್ರಿಗಳಿಗಿಂತ ಹೆಚ್ಚಿರುತ್ತದೆ.

    ಎರಡನೇ ಆಯ್ಕೆ: ಮಿನಿ ಐಪಿಎಲ್
    ಸಭೆಯಲ್ಲಿ 8 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸುವ ಬಗ್ಗೆಯೂ ಚರ್ಚಿಸಲಾಗಿದೆ. ಸದ್ಯದ ಸನ್ನಿವೇಶದಲ್ಲಿ ಐಪಿಎಲ್ ಟೂರ್ನಿ ನಡೆಯುವುದು ಅನುಮಾನ. ಹೀಗಾಗಿ 8 ತಂಡಗಳನ್ನು 2 ಗ್ರೂಪ್‍ಗಳಾಗಿ ವಿಭಜಿಸಿ, ನಾಲ್ಕು ಪ್ಲೇ ಆಫ್ ಆಡಿಸಲು ಬಿಸಿಸಿಐಯ ನಿರ್ಧರಿಸಿದೆ. ಆದರೆ ಯಾವಾಗಿನಿಂದ ಆರಂಭವಾಗಲಿದೆ ಈ ಮಿನಿ ಐಪಿಎಲ್ ಎನ್ನುವುದು ಮಾತ್ರ ಇನ್ನೂ ನಿರ್ಧಾರ ಆಗಿಲ್ಲ. ಎರಡ್ಮೂರು ವಾರಗಳ ಬಳಿಕ ದಿನಾಂಕ ನಿಗದಿ ಆಗುವ ಸಾಧ್ಯತೆ ಇದೆ.

    ಮೂರನೇ ಆಯ್ಕೆ: ಸೀಮಿತ ಕ್ರೀಡಾಂಗಣದಲ್ಲಿ ಪಂದ್ಯ
    ಪಂದ್ಯಗಳನ್ನು ಕೆಲವೇ ಕ್ರೀಡಾಂಗಣದಲ್ಲಿ ನಡೆಸಬೇಕು. ಅಂದರೆ ಪ್ರತಿ ಫ್ರ್ಯಾಂಚೈಸ್ ತನ್ನ ತಂಡದ ಆಟವನ್ನು ತವರು ಮೈದಾನದಲ್ಲಿ ನಡೆಸುವ ಬದಲು ಕೆಲವು ಕ್ರೀಡಾಂಗಣಗಳಲ್ಲಿ ಆಡಿಸಬೇಕು. ಆದ್ದರಿಂದ ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ಟಿವಿ ಸಿಬ್ಬಂದಿ ಪ್ರಯಾಣ ಕಡಿಮೆಯಾಗುತ್ತದೆ. ಜೊತೆಗೆ ಇದು ಕೊರೊನಾ ವೈರಸ್ ಹರಡುವ ಅಪಾಯವನ್ನು ಕಡಿಮೆ ಮಾಡುತ್ತದೆ.

    ಈಡನ್ ಗಾರ್ಡನ್ಸ್

    ಫ್ರ್ಯಾಂಚೈಸ್ ಏನು ಹೇಳಿದ್ರು?
    ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜೈ ಶಾ ಅವರನ್ನು ಭೇಟಿಯಾದ ನಂತರ ಮಾತನಾಡಿದ ಪಂಜಾಬ್‍ನ  ಫ್ರ್ಯಾಂಚೈಸ್  ನೆಸ್ ವಾಡಿಯಾ, ಐಪಿಎಲ್ ಯಾವಾಗ ಪ್ರಾರಂಭವಾಗುತ್ತದೆ ಎಂದು ಹೇಳುವ ಸ್ಥಿತಿಯಲ್ಲಿ ನಾವಿಲ್ಲ. ನಾವು ಆರ್ಥಿಕ ನಷ್ಟ ಅಥವಾ ಗಳಿಕೆಯ ಬಗ್ಗೆ ಯೋಚಿಸುತ್ತಿಲ್ಲ. ಎರಡು ಅಥವಾ ಮೂರು ವಾರಗಳ ನಂತರ ಪರಿಸ್ಥಿತಿಯನ್ನು ಸರಿಪಡಿಸುತ್ತೇವೆ. ಆ ಹೊತ್ತಿಗೆ ಕೊರೊನಾವೈರಸ್ ಪ್ರಕರಣಗಳು ಕಡಿಮೆಯಾಗುತ್ತವೆ. ಈ ಸಮಯದಲ್ಲಿ ಜನರ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

    ದೆಹಲಿ ತಂಡದ ಸಹ ಮಾಲೀಕ ಪಾರ್ತ್ ಜಿಂದಾಲ್ ಮಾತನಾಡಿ, ಸಭೆಯಲ್ಲಿ ಸರ್ಕಾರ, ಬಿಸಿಸಿಐ ಮತ್ತು ಇತರರು ಪರಿಸ್ಥಿತಿಯ ಮೇಲೆ ನಿಗಾ ಇಡುತ್ತಿದ್ದಾರೆ ಅಂತ ಮಂಡಳಿಯು ಎಲ್ಲಾ ಫ್ರಾಂಚೈಸಿಗಳಿಗೆ ತಿಳಿಸಿದೆ ಎಂದು ಹೇಳಿದರು. ನಿಗದಿತ ಸಮಯದಲ್ಲಿ ಪಂದ್ಯಾವಳಿಯ ಬಗ್ಗೆ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ. ಪ್ರತಿಯೊಬ್ಬರೂ ಐಪಿಎಲ್ ಬಯಸುತ್ತಾರೆ ಎಂದರು.

    ಸರ್ಕಾರದ ಪ್ರಯಾಣ ನಿರ್ಬಂಧ ಮತ್ತು 3 ರಾಜ್ಯಗಳಲ್ಲಿ ಪಂದ್ಯಗಳನ್ನು ಆಯೋಜಿಸಲು ನಿರಾಕರಿಸಿದ ನಂತರ ಬಿಸಿಸಿಐ ಏಪ್ರಿಲ್ 15ರಂದು ನಡೆಯಬೇಕಿದ್ದ ಐಪಿಎಲ್ ರದ್ದುಗೊಳಿಸಿದೆ. ಜೊತೆಗೆ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಸರಣಿಯ ಉಳಿದ 2 ಪಂದ್ಯಗಳನ್ನು ಮಂಡಳಿಯು ರದ್ದುಗೊಳಿಸಿತು.

  • ಮೈಸೂರಿನಲ್ಲಿ ಮಾಸ್ಕ್ ಧರಿಸಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್

    ಮೈಸೂರಿನಲ್ಲಿ ಮಾಸ್ಕ್ ಧರಿಸಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್

    ಮೈಸೂರು: ಮಹಾಮಾರಿ ಕೊರೊನಾ ವೈರಸ್‍ಗೆ ಈಡೀ ವಿಶ್ವವೇ ಬೆಚ್ಚಿಬಿದ್ದಿದೆ. ಅದರಲ್ಲೂ ಭಾರತದಲ್ಲಿ ಕೊರೊನಾ ಬಲಿ ಪಡೆದ ಪ್ರಕರಣ ಕರ್ನಾಟಕದ ಕಲಬುರಗಿಯಲ್ಲಿ ನಡೆದಿದ್ದರಿಂದ ರಾಜ್ಯದ ಜನರು ಆತಂಕಕ್ಕೆ ಸಿಲುಕಿದ್ದಾರೆ. ಈ ಮಧ್ಯೆ ಮೈಸೂರು ನಗರದಲ್ಲಿ ಜೋಡಿಯೊಂದು ಸರ್ಕಾರಕ್ಕೆ ಟಾಂಗ್ ಕೊಡುವ ರೀತಿ ಮಾಸ್ಕ್ ಧರಿಸಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಂಡಿದೆ.

    ಕೊರೊನಾ ವೈರಸ್‍ನಿಂದಾಗಿ ಜನರು ಮಾಸ್ಕ್ ಧರಿಸುತ್ತಿದ್ದಾರೆ. ಜೊತೆಗೆ ಸರ್ಕಾರವು ಕೊರೊನಾ ವೈರಸ್ ಬಗ್ಗೆ ಮುಂಜಾಗ್ರತಾ ಕ್ರಮದ ಬಗ್ಗೆ ತಿಳಿಸಿದ್ದು, ಕೈ ಕುಲುಕಬೇಡಿ, ಒಬ್ಬರಿಂದ ಒಬ್ಬರು ಆರು ಅಡಿ ದೂರವಿರಿ ಎಂದು ಆದೇಶಿಸಿದೆ. ಈ ಮಧ್ಯೆ ಮೈಸೂರಿನ ಜೋಡಿಯೊಂದು ಅಣಕಿಸುವ ರೀತಿಯಲ್ಲಿ ಮಾಸ್ಕ್ ಧರಿಸಿ, ಕೈ ಕೈ ಹಿಡಿದು ಅತಿ ಸಮೀಪದಲ್ಲಿಯೇ ನಿಂತು ಮೈಸೂರಿನ ಹಲವೆಡೆ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

    ಮೈಸೂರಿನ ಜೋಡಿ ಅರಮನೆ ಮುಂದೆ ನಿಂತು ಪ್ರಿ ವೆಡ್ಡಿಂಗ್ ಶೂಟ್ ಮಾಡಿಸಿಕೊಂಡ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಬಗ್ಗೆ ನೆಟ್ಟಿಗರು ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಜೋಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

    ಕೊರೊನಾ ವೈರಸ್ ಎಫೆಕ್ಟ್ ನೇರವಾಗಿ ಮೈಸೂರು ಪ್ರವಾಸೋದ್ಯಮದ ಮೇಲೆ ಬಿದ್ದಿದೆ. ಹೋಟೆಲ್, ಲಾಡ್ಜಿಂಗ್‍ನಲ್ಲಿ ಬರೋಬ್ಬರಿ 50 ಕೋಟಿ ರೂ. ನಷ್ಟು ವಹಿವಾಟು ಸ್ಥಗಿತವಾಗಿದೆ. ಪ್ರವಾಸಿಗರ ಸಂಖ್ಯೆಯಲ್ಲಿ ಶೇ.85 ರಷ್ಟು ಕುಸಿತ ಕಂಡಿದ್ದು, ಹೋಟೆಲ್ ಬುಕ್ಕಿಂಗ್‍ಗಳು ಕ್ಯಾನ್ಸಲ್ ಆಗಿವೆ. ಅದರಲ್ಲೂ ಕೇರಳದ ಪ್ರವಾಸಿಗರು ಶೇಕಡ ಒಂದರಷ್ಟು ಕೂಡ ಮೈಸೂರಿಗೆ ಬರುತ್ತಿಲ್ಲ. ಇದರಿಂದ ಮೈಸೂರಿನ ಹೋಟೆಲ್‍ಗಳು, ಲಾಡ್ಜ್ ಗಳು ಖಾಲಿ ಹೊಡೆಯುತ್ತಿವೆ.