Tag: Coronavirus

  • ಮತ್ತೊಂದು ಪಾಸಿಟಿವ್ – ದುಬೈನಿಂದ ಬಂದ ಬೆಂಗ್ಳೂರಿನ ಮಹಿಳೆಗೆ ಕೊರೊನಾ

    ಮತ್ತೊಂದು ಪಾಸಿಟಿವ್ – ದುಬೈನಿಂದ ಬಂದ ಬೆಂಗ್ಳೂರಿನ ಮಹಿಳೆಗೆ ಕೊರೊನಾ

    ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಕೊರೊನಾ ಕೇಸ್ ದೃಢಪಟ್ಟಿದೆ. 67 ವರ್ಷದ ಬೆಂಗಳೂರಿನ ಮಹಿಳೆಗೆ ಕೊರೊನಾ ಬಂದಿದೆ.

    ಇಂದು ಸಂಜೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಸುದ್ದಿಗೋಷ್ಠಿ ನಡೆಸಿ, ಓರ್ವ ಮಹಿಳೆಗೆ ಕೊರೊನಾ ಬಂದಿರುವುದು ದೃಢಪಟ್ಟಿದೆ. ಇಂದು 32 ಜನ ಶಂಕಿತರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮಾಹಿತಿ ನೀಡಿದರು.

    ಎಸಿ ಇರುವ ಕೊಠಡಿಗಳಲ್ಲಿ ವೈರಸ್ ಪೀಡಿತರು ಇದ್ದರೆ ಬಹಳ ವೇಗವಾಗಿ ಕೊರೊನಾ ಹರಡುತ್ತಿದೆ. ಹೀಗಾಗಿ ಎಲ್ಲ ರೆಸ್ಟೋರೆಂಟ್ ಗಳು ಎಸಿ ಆಫ್ ಮಾಡುವಂತೆ ಸೂಚನೆ ನೀಡಲಾಗಿದೆ. ಇದರ ಜೊತೆ ಕುರ್ಚಿಗಳ ನಡುವೆ 1 ಮೀಟರ್ ಅಂತರ ಇರಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.

    ಆಸ್ಪತ್ರೆಯಲ್ಲಿ ಜನಸಂದಣಿ ಆದಷ್ಟು ಕಡಿಮೆಯಾಗಬೇಕು. ದಂತ ಚಿಕಿತ್ಸಾಲಯಗಳನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಬೇಕು. ಇದು ತೀರ ತುರ್ತು ಚಿಕಿತ್ಸೆ ಅಲ್ಲ. ಹೀಗಾಗಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯ ದಂತ ಚಿಕಿತ್ಸಾಲಯವನ್ನು ಮಾರ್ಚ್ 30ರವರೆಗೆ ಸ್ಥಗಿತ ಮಾಡಬೇಕು ಎಂದು ಹೇಳಿದರು.

    ರಾಜ್ಯದಲ್ಲಿ ಮೊದಲ ಕೇಸ್ ಆಗಿ ದಾಖಲಾಗಿದ್ದ ಡೆಲ್ ಕಂಪನಿಯ ಟೆಕ್ಕಿಯ ಕುಟುಂಬದ ಬಗ್ಗೆ ಮಾತನಾಡಿ, ವ್ಯಕ್ತಿ ಅವರ ಹೆಂಡತಿ ಹಾಗೂ ಮಗು ಈಗ ಗುಣಮುಖರಾಗಿದ್ದಾರೆ. ಆದರೆ ಡಿಸ್ಚಾರ್ಜ್ ಆಗಲು ಕೆಲ ಶಿಷ್ಟಾಚಾರಗಳನ್ನು ಪಾಲನೆ ಮಾಡಬೇಕು. 24 ಗಂಟೆಯ ಒಳಗೆ ಎರಡು ಬಾರಿ ಪರೀಕ್ಷೆ ಮಾಡಿ ಆಗ ನೆಗೆಟಿವ್ ಬಂದರೆ ಮಾತ್ರ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ವಿವರಿಸಿದರು.

    ಕರ್ನಾಟಕದ 11ನೇ ಕೇಸ್ ಆಗಿರುವ 67 ವರ್ಷ ವಯಸ್ಸಿನ ಬೆಂಗಳೂರಿನ ಮಹಿಳಾ ರೋಗಿ ದುಬೈಯಿಂದ ಗೋವಾ ಮೂಲಕ ಮಾರ್ಚ್ 9 ರಂದು ಮರಳಿದ್ದರು. ಕಳೆದ 24 ಗಂಟೆಯಲ್ಲಿ ಕರ್ನಾಟಕದಲ್ಲಿ ಹೊಸದಾಗಿ 3 ಕೇಸ್ ದೃಢಪಟ್ಟಿದ್ದು ಕಲಬುರಗಿಯ ಮೃತ ವ್ಯಕ್ತಿ ಸೇರಿ ಕೊರೊನಾ ಪೀಡಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

    ಕೇಸ್ 8: ಕೊರೊನಾ ಪೀಡಿತ ಮೈಂಡ್ ಟ್ರೀ ಟೆಕ್ಕಿ ಜೊತೆ ಅಮೆರಿಕಕ್ಕೆ ತೆರಳಿದ್ದ 32 ವರ್ಷ ವಯಸ್ಸಿನ ಸಹೋದ್ಯೋಗಿ ಮಾರ್ಚ್ 8 ರಂದು ಲಂಡನ್ ಮೂಲಕ ಬೆಂಗಳೂರಿಗೆ ಬಂದಿದ್ದ. ಈತನ ಆರೋಗ್ಯ ಸ್ಥಿರವಾಗಿದೆ. ಈತನ ಜೊತೆ ಪ್ರಾಥಮಿಕ ಸಂಪರ್ಕಕ್ಕೆ ಬಂದ 50 ಮಂದಿಯನ್ನು ಪತ್ತೆ ಮಾಡಲಾಗಿದ್ದು ಅವರಲ್ಲಿ ಯಾವುದೇ ರೋಗ ಲಕ್ಷಣ ಕಂಡು ಬಂದಿಲ್ಲ. ಅವರೆಲ್ಲರನ್ನೂ ಕಡ್ಡಾಯವಾಗಿ ಅವರ ಮನೆಗಳಲ್ಲಿ ಪ್ರತ್ಯೇಕವಾಗಿರಿಸಲಾಗಿದೆ.

    ಕೇಸ್ 9: ಕೊರೊನಾದಿಂದ ಮೃತಪಟ್ಟ ಕಲಬುರಗಿಯ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ 63 ವರ್ಷದ ವೈದ್ಯರಿಗೆ ವೈರಸ್ ಬಂದಿದೆ. ಈ ವೈದ್ಯರ ಸಂಪರ್ಕಕ್ಕೆ 50 ಮಂದಿ ಮತ್ತು ಮನೆಯ 7 ಸದಸ್ಯರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಯಾವುದೇ ಲಕ್ಷಣ ಕಂಡು ಬಂದಿಲ್ಲ. ಎಲ್ಲರು ಮನೆಯಲ್ಲಿ ಕಡ್ಡಾಯವಾಗಿ ಪ್ರತ್ಯೇಕವಾಗಿದ್ದಾರೆ.

    ಕೇಸ್ 10: 20 ವರ್ಷ ವಿದ್ಯಾರ್ಥಿನಿ ಲಂಡನ್‍ನಿಂದ ಮಾರ್ಚ್ 14 ರಂದು ಬೆಂಗಳೂರಿಗೆ ಬಂದಿದ್ದಾಳೆ. ಈಕೆಯ ಸಂಪರ್ಕಕ್ಕೆ ಬಂದ 5 ಮಂದಿಯನ್ನು ಪತ್ತೆ ಮಾಡಿ ಪರೀಕ್ಷಿಸಲಾಗಿದೆ.

    ಇಂದು ಬೆಂಗಳೂರಿನಲ್ಲಿ 14 ಮಂದಿ, ದಕ್ಷಿಣ ಕನ್ನಡದಲ್ಲಿ 7, ಉತ್ತರ ಕನ್ನಡದಲ್ಲಿ 4, ಕೊಡಗಿನಲ್ಲಿ 2, ಬಳ್ಳಾರಿ, ಚಿಕ್ಕಮಗಳೂರು, ಕೊಡಗು, ಉಡುಪಿ, ಬೀದರ್, ಗದಗ್, ಉಡುಪಿಯಲ್ಲಿ ಒಬ್ಬರು ಒಳ ರೋಗಿಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಟ್ಟು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 58 ಮಂದಿ ಪ್ರತ್ಯೇಕ ನಿಗಾದಲ್ಲಿದ್ದಾರೆ.

  • ಕೊರೊನಾ ಎಫೆಕ್ಟ್ – ರೈಲ್ವೆ ಫ್ಲಾಟ್ ಫಾರಂ ಟಿಕೆಟ್ 50ಕ್ಕೆ ಏರಿಕೆ

    ಕೊರೊನಾ ಎಫೆಕ್ಟ್ – ರೈಲ್ವೆ ಫ್ಲಾಟ್ ಫಾರಂ ಟಿಕೆಟ್ 50ಕ್ಕೆ ಏರಿಕೆ

    ನವದೆಹಲಿ: ಭಾರತೀಯ ರೈಲ್ವೆ ಇಲಾಖೆ ಕೊರೊನಾ ವೈರಸ್ ಭೀತಿಗೆ ನಲುಗಿ ಹೋಗಿದೆ. ರೈಲು ನಿಲ್ದಾಣಗಳಲ್ಲಿ ಸೇರುವ ದೊಡ್ಡ ಜನ ಸಮೂಹವನ್ನು ನಿಯಂತ್ರಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.

    ಮುಂಬೈನ ಆರು ರೈಲ್ವೆ ವಿಭಾಗಗಳು ವಡೋದರ, ಅಹ್ಮದಾಬಾದ್, ರಾಟ್ಲಾಮ್, ರಾಜಕೋಟ್, ಭಾವನಗರ ರೈಲು ನಿಲ್ದಾಣ ಸೇರಿ ಅತಿ ಹೆಚ್ಚು ಜನ ಸಂದಣಿ ಸೇರುವ ದೇಶದ 250 ರೈಲು ನಿಲ್ದಾಣಗಳಲ್ಲಿ ಫ್ಲಾಟ್ ಫಾರಂ ಟಿಕೆಟ್ ಬೆಲೆ ಏರಿಕೆ ಮಾಡಿದೆ.

    10 ರೂಪಾಯಿ ಇದ್ದ ರೈಲು ಫ್ಲಾಟ್ ಫಾರಂ ಟಿಕೆಟ್ ಅನ್ನು 50 ರೂಪಾಯಿಗೆ ಏರಿಕೆ ಮಾಡಿ ಜನರಿಗೆ ಬಿಗ್ ಶಾಕ್ ನೀಡಿದೆ. ಫ್ಲಾಟ್ ಫಾರಂ ಟಿಕೆಟ್ ಬೆಲೆ ಹೆಚ್ಚಿಸುವ ಮೂಲಕ ಪ್ರಯಾಣಿರನ್ನು ಹೊರತುಪಡಿಸಿ ಅನಗತ್ಯ ಜನರು ರೈಲು ನಿಲ್ದಾಣಕ್ಕೆ ಬರುವುದನ್ನು ತಡೆಯುವ ಪ್ರಯತ್ನ ಮಾಡುತ್ತಿದೆ.

    ಹೆಚ್ಚು ಜನ ಸಮೂಹ ರೈಲು ನಿಲ್ದಾಣಗಳಲ್ಲಿ ಸೇರುವುದರಿಂದ ವೈರಸ್ ಹರಡುವ ಸಾಧ್ಯತೆ ಇದೆ. ಸ್ಕ್ರೀನಿಂಗ್ ವ್ಯವಸ್ಥೆ ಇದ್ದರೂ ಕೂಡ ಅನಗತ್ಯ ಜನರ ತಪಾಸಣೆಗೆ ಸಮಯ ವ್ಯರ್ಥವಾಗದಿರಲಿ ಎನ್ನುವ ಕಾರಣದಿಂದ ರೈಲ್ವೆ ಇಲಾಖೆ ಈ ನಿರ್ಧಾರ ತೆಗೆದುಕೊಂಡಿದೆ.

    ಸೊಂಕು ಹರಡುವ ಭೀತಿ ಹಿನ್ನೆಲೆ ಎರಡು ದಿನಗಳ ಹಿಂದೆ ಎಸಿ ಬೋಗಿಗಳಲ್ಲಿ ಬೆಡ್ ಶೀಟ್, ಕರ್ಟನ್ಸ್ ನೀಡುವುದನ್ನು ತಡೆಯಲಾಗಿತ್ತು. ಪ್ರತಿ ಪ್ರಯಾಣದ ವೇಳೆ ಬೆಡ್ ಶೀಟ್ ತೊಳೆಯದ ಕಾರಣ ವೈರಸ್ ಹರಡಬಹುದು. ಹೀಗಾಗಿ ಎಸಿ ಬೋಗಿಯಲ್ಲಿ ಸಂಚರಿಸುವ ಪ್ರಯಾಣಿಕರು ಸ್ವತಃ ಬೆಡ್ ಶೀಟ್ ತರುವಂತೆ ಇಲಾಖೆ ಮನವಿ ಮಾಡಿತ್ತು.

  • ‘ಪಿಎಸ್‍ಎಲ್ ಆಡಿದ ಇಂಗ್ಲೆಂಡ್ ಕ್ರಿಕೆಟರ್ ಅಲೆಕ್ಸ್ ಹೇಲ್ಸ್‌ಗೆ ಕೊರೊನಾ ಸೋಂಕು’

    ‘ಪಿಎಸ್‍ಎಲ್ ಆಡಿದ ಇಂಗ್ಲೆಂಡ್ ಕ್ರಿಕೆಟರ್ ಅಲೆಕ್ಸ್ ಹೇಲ್ಸ್‌ಗೆ ಕೊರೊನಾ ಸೋಂಕು’

    – ಶಂಕೆ ವ್ಯಕ್ತಪಡಿಸಿದ ಪಾಕ್ ಮಾಜಿ ಕ್ರಿಕೆಟರ್

    ಇಸ್ಲಾಮಾಬಾದ್: ಇಂಗ್ಲೆಂಡ್‍ನ ಕ್ರಿಕೆಟರ್ ಅಲೆಕ್ಸ್ ಹೇಲ್ಸ್ ಅವರಲ್ಲಿ ಕೊರೊನಾ ಸೋಂಕಿನ ಗುಣಲಕ್ಷಣಗಳು ಕಂಡುಬಂದಿವೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟರ್, ವೀಕ್ಷಕ ವಿವರಣೆಗಾರ ರಮೀಜ್ ರಾಜಾ ಹೇಳಿದ್ದಾರೆ.

    ಕೊರೊನಾ ವೈರಸ್ ಭೀತಿಯಿಂದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಪಿಎಸ್‍ಎಲ್‍ಅನ್ನು ಮುಂದೂಡಿದೆ. ಈ ಕುರಿತು ಟ್ವೀಟ್ ಮಾಡಿರುವ ಪಿಸಿಬಿ, ಹೊಸ ವೇಳಾಪಟ್ಟಿಯ ಪ್ರಕಾರ ಟೂರ್ನಿಯನ್ನು ಮುಂದುವರಿಸಲಾಗುವುದು ಎಂದು ಸ್ಪಷ್ಟಪಡಿಸಿದೆ. ಆದಾಗ್ಯೂ ಟೂರ್ನಿ ಮುರು ಆರಂಭದ ದಿನಾಂಕವನ್ನು ನಿಗದಿಪಡಿಸಿಲ್ಲ. ಇದನ್ನೂ ಓದಿ: ಕ್ರಿಕೆಟ್‍ನಲ್ಲೂ ಮೊಂಡುತನ ತೋರಿ ಸೋತ ಪಾಕ್

    ಇದೇ ವಿಚಾರವಾಗಿ ಕರಾಚಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ರಜೀಜ್ ರಾಜಾ, “ನನಗೆ ತಿಳಿದಿರುವಂತೆ ಹೇಲ್ಸ್ ಅವರಿಗೆ ಯಾವುದೇ ಪರೀಕ್ಷೆ ನಡೆಸಿಲ್ಲ. ಆದರೆ ಅವರಲ್ಲಿ ಕೊರೊನಾ ವೈರಸ್ ಲಕ್ಷಣಗಳು ಕಂಡು ಬಂದಿವೆ. ಆದರೆ ನಾವೆಲ್ಲರೂ ಈಗ ಬಹಳ ಜಾಗರೂಕರಾಗಿರಬೇಕು. ಈ ಸಮಸ್ಯೆಯನ್ನು ಎದುರಿಸಲು ಸಾಮಾನ್ಯ ಜ್ಞಾನ, ವಿಧಾನವನ್ನು ಅನುಸರಿಸಬೇಕು” ಎಂದು ಹೇಳಿದ್ದಾರೆ.

    ಪಿಎಸ್‍ಎಲ್ ಟೂರ್ನಿಯಲ್ಲಿ ಹೆಲ್ಸ್ ಅವರು ಕರಾಚಿ ಕಿಂಗ್ಸ್ ಪರ ಆಡಿದ್ದು, ಪಾಕಿಸ್ತಾನದಲ್ಲಿ ವೈರಸ್ ಹರಡಿದ ನಂತರ ಇತರ ಇಂಗ್ಲೆಂಡ್ ಆಟಗಾರರೊಂದಿಗೆ ತವರಿಗೆ ಮರಳಿದ್ದಾರೆ. ಪಿಎಸ್‍ಎಲ್ ಟೂರ್ನಿಯ ವಿವಿಧ ತಂಡಗಳಲ್ಲಿ ಇಂಗ್ಲೆಂಡ್‍ನ 6 ಆಟಗಾರರಿದ್ದಾರೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಸೂಚನೆಯಂತೆ ಜೇಸನ್ ರಾಯ್ ಸೋಮವಾರ ತಡರಾತ್ರಿಯೇ ಲಂಡನ್‍ಗೆ ಮರಳಿದ್ದಾರೆ. ಇದನ್ನೂ ಓದಿ:  ಕೊರೊನಾ ಸೋಂಕು ತಗುಲಿ ಸ್ಪೇನ್ ಫುಟ್ಬಾಲ್ ಕೋಚ್ ಸಾವು

    31 ವರ್ಷದ ಹೇಲ್ಸ್ ಬಲಗೈ ಓಪನರ್ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರು ಇಂಗ್ಲೆಂಡ್ ತಲುಪಿದ ನಂತರ ಪ್ರತ್ಯೇಕವಾಗಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.

    ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಸಿಇಒ ವಾಸೀಂ ಖಾನ್ ಕೂಡ ಪಿಎಸ್‍ಎಲ್ ಟೂರ್ನಿಯಲ್ಲಿ ಭಾಗವಹಿಸಿದ್ದ ವಿದೇಶಿ ಆಟಗಾರರೊಬ್ಬರಿಗೆ ಕೊರೊನಾ ಸೋಂಕು ಇದೆ ಎಂಬ ಶಂಕಿಸಲಾಗಿದೆ ಎಂದು ಹೇಳಿದ್ದರು. ಆದರೆ ಅವರು ಆಟಗಾರನ ಹೆಸರನ್ನು ಬಹಿರಂಗಪಡಿಸಿರಲಿಲ್ಲ.

    ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಪಿಎಸ್‍ಎಲ್ ಆಟಗಾರರು ಮತ್ತು ತಂಡದ ಜೊತೆಯಿದ್ದ ಸಿಬ್ಬಂದಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ವಾಸೀಂ ಖಾನ್ ತಿಳಿಸಿದ್ದಾರೆ.

  • ಕೊರೊನಾ ಸೋಂಕು ತಗುಲಿ ಸ್ಪೇನ್ ಫುಟ್ಬಾಲ್ ಕೋಚ್ ಸಾವು

    ಕೊರೊನಾ ಸೋಂಕು ತಗುಲಿ ಸ್ಪೇನ್ ಫುಟ್ಬಾಲ್ ಕೋಚ್ ಸಾವು

    ಮ್ಯಾಡ್ರಿಡ್: ಸ್ಪೇನ್ ದೇಶದ ಫುಟ್ಬಾಲ್ ತಂಡವೊಂದರ ತರಬೇತುದಾರ ಫ್ರಾನ್ಸಿಸ್ಕೊ ಗಾರ್ಸಿಯಾ ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ.

    21 ವರ್ಷದ ಫ್ರಾನ್ಸಿಸ್ಕೊ ಗಾರ್ಸಿಯಾ ಅಥ್ಲೆಟಿಕೊ ಪೋರ್ಟಾಡಾ ಕ್ಲಬ್‍ನ ಕೋಚ್ ಆಗಿದ್ದರು. ಗಾರ್ಸಿಯಾ ಅವರ ನಿಧನದ ಬಗ್ಗೆ ಅಥ್ಲೆಟಿಕೊ ಪೋರ್ಟಾಡಾ ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಮಾಹಿತಿ ನೀಡಿದೆ.

    https://twitter.com/FutbolBible/status/1239613119858606081

    ಗಾರ್ಸಿಯಾ ಅವರು ಅಥ್ಲೆಟಿಕೊದ ಯುವ ತಂಡದ ಮುಖ್ಯ ಕೋಚ್ ಆಗಿದ್ದರು. ಕೆಲವು ದಿನಗಳ ಹಿಂದೆ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದರೆ ಅವರು ಮೃತಪಟ್ಟಿದ್ದಾರೆ. ಅವರಿಲ್ಲದೆ ನಾವು ಏನನ್ನೂ ಸಾಧಿಸಲು ಆಗುವುದಿಲ್ಲ ಎಂದು ಪೋರ್ಟಾಡಾ ಕ್ಲಬ್ ದುಃಖ ವ್ಯಕ್ತಪಡಿಸಿದೆ.

    ತರಬೇತುದಾರ, ವ್ಯವಸ್ಥಾಪಕರ ಉಭಯ ಜವಾಬ್ದಾರಿ:
    ಗಾರ್ಸಿಯಾ ಅವರು ಸ್ಪೇನ್‍ನ ಪ್ರತಿಭಾವಂತ ಆಟಗಾರರಾರಗಿ ಗುರುತಿಸಿಕೊಂಡಿದ್ದರು. ಅಥ್ಲೆಟಿಕೊ ಪೋರ್ಡಾಟಾ ಕ್ಲಬ್‍ನಲ್ಲಿ ತರಬೇತಿಯ ಜೊತೆಗೆ ವ್ಯವಸ್ಥಾಪಕ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಕೇವಲ 21 ವರ್ಷ ವಯಸ್ಸಿನ ಗಾರ್ಸಿಯಾ ಎರಡೂ ಜವಾಬ್ದಾರಿಗಳಲ್ಲಿ ಬಳಸುತ್ತಿದ್ದ ತಂತ್ರಗಳು ಬಹಳ ಪರಿಣಾಮಕಾರಿ ಆಗಿರುತ್ತಿದ್ದವು.

    ಕ್ಲಬ್ ಏನು ಹೇಳಿದೆ?
    ಅಥ್ಲೆಟಿಕೊ ಪೋರ್ಡಾಟಾ ಇನ್‍ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಗಾರ್ಸಿಯಾ ನಿಧನವನ್ನು ಬಹಿರಂಗಪಡಿಸಲಾಗಿದೆ. ‘ಫ್ರಾನ್ಸಿಸ್ಕೊ ಗ್ರಾಸಿಯಾ ಅವರ ನಿಧನಕ್ಕೆ ನಾವು ಶೋಕಿಸುತ್ತೇವೆ. ಈ ಕಷ್ಟದ ಸಮಯದಲ್ಲಿ ಗಾರ್ಸಿಯಾ ಅವರ ಕುಟುಂಬ ಮತ್ತು ಸ್ನೇಹಿತರಿಗೆ ಕ್ಲಬ್ ಸಂತಾಪ ಸೂಚಿಸಿದೆ. ಗಾರ್ಸಿಯಾ ಇಲ್ಲದೆ ನಾವು ಏನೂ ಅಲ್ಲ. ಅವರಿಲ್ಲದೆ ನಾವು ಏನು ಮಾಡಬಹುದು? ನೀವು ಇಲ್ಲದೆ ನಮ್ಮ ಪ್ರಯಾಣವು ಕಷ್ಟಕರವಾಗಿರುತ್ತದೆ ಎಂದು ನಮಗೆ ತಿಳಿದಿದೆ. ಆದರೆ ನಿಮಗಾಗಿ ನಾವು ಶ್ರಮಿಸುತ್ತೇವೆ. ನೀವು ಯಾವಾಗಲೂ ನಮ್ಮ ಹೃದಯದಲ್ಲಿ ಜೀವಂತವಾಗಿರುತ್ತೀರಿ. ಬೈ ಎಂದು’ ಬರೆಯಲಾಗಿದೆ.

    ಆದರೆ ಕೆಲವು ಮಾಧ್ಯಮ ವರದಿಯ ಪ್ರಕಾರ, ಗಾರ್ಸಿಯಾ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಹೀಗಾಗಿ ಕ್ಯಾನ್ಸರ್ ನಿಂದಲೇ ಮೃತಪಟ್ಟಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಮಂಗಳವಾರ ಬೆಳಗ್ಗೆ ವೇಳೆಗೆ ಸ್ಪೇನ್‍ನಲ್ಲಿ ಒಟ್ಟು 9,942 ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ. ಈ ಅವಧಿಯಲ್ಲಿ 342 ಜನರು ಸಾವನ್ನಪ್ಪಿದ್ದಾರೆ. ಚಿಕಿತ್ಸೆಯ ನಂತರ 532 ಜನರು ಚೇತರಿಸಿಕೊಂಡಿದ್ದಾರೆ.

    https://www.instagram.com/p/B9xFHiBqYQx/

  • ಕ್ರಿಕೆಟ್‍ನಲ್ಲೂ ಮೊಂಡುತನ ತೋರಿ ಸೋತ ಪಾಕ್

    ಕ್ರಿಕೆಟ್‍ನಲ್ಲೂ ಮೊಂಡುತನ ತೋರಿ ಸೋತ ಪಾಕ್

    – ಕೊನೆಗೂ ಪಿಎಸ್‍ಎಲ್ ಮುಂದೂಡಿದ ಪಿಸಿಬಿ

    ಇಸ್ಲಾಮಾಬಾದ್: ಮಹಾಮಾರಿ ಕೊರೊನಾ ವೈರಸ್ ಈಗಾಗಲೇ ಕ್ರಿಕೆಟ್ ಮೇಲೂ ಪರಿಣಾಮ ಬೀರಿದೆ. ಆದರೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮೊಂಡುತನ ತೋರಿ, ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‍ಎಲ್) ನಡೆಸುತ್ತಿತ್ತು. ಕೊನೆಗೆ ಇಕ್ಕಟ್ಟಿಗೆ ಸಿಲುಕಿ ಈಗ ಟೂರ್ನಿಯನ್ನೇ ಮುಂದೂಡಿದೆ.

    ಈ ಕುರಿತು ಟ್ವೀಟ್ ಮಾಡಿರುವ ಪಿಸಿಬಿ, ಹೊಸ ವೇಳಾಪಟ್ಟಿಯ ಪ್ರಕಾರ ಪಿಎಸ್‍ಎಲ್ ಟೂರ್ನಿಯನ್ನು ಮುಂದುವರಿಸಲಾಗುವುದು ಎಂದು ಸ್ಪಷ್ಟಪಡಿಸಿದೆ. ಆದಾಗ್ಯೂ ಟೂರ್ನಿ ಮುರು ಆರಂಭದ ದಿನಾಂಕವನ್ನು ನಿಗದಿಪಡಿಸಿಲ್ಲ.

    ಪಿಎಸ್‍ಎಲ್ ಟೂರ್ನಿಯ ಎರಡು ಸೆಮಿಫೈನಲ್ ಪಂದ್ಯಗಳು ಇಂದು ನಡೆಯಬೇಕಿತ್ತು. ಜೊತೆಗೆ ಫೈನಲ್ ಪಂದ್ಯ ಬುಧವಾರ ನಿಗದಿಯಾಗಿತ್ತು. ಕಳೆದ ವಾರವಷ್ಟೇ ಕರಾಚಿಯಲ್ಲಿ ಪಿಎಸ್‍ಎಲ್‍ಅನ್ನು ಖಾಲಿ ಕ್ರೀಡಾಂಗಣದಲ್ಲಿ ನಡೆಸಲು ಪಿಸಿಬಿ ನಿರ್ಧರಿಸಿತ್ತು. ಅದೇ ಸಮಯದಲ್ಲಿ ಟೂರ್ನಿಯನ್ನು 4 ದಿನ ಕಡಿಮೆಗೊಳಿಸಲಾಗಿತ್ತು. ಆದರೆ ವಿದೇಶಿ ಆಟಗಾರರು ದೇಶವನ್ನು ತೊರೆದ ನಂತರ ಟೂರ್ನಿಯನ್ನು ಮುಂದೂಡಲು ಪಿಸಿಬಿ ನಿರ್ಧರಿಸಿತು.

    ಪಿಎಸ್‍ಎಲ್ ಟೂರ್ನಿಯ ವಿವಿಧ ತಂಡಗಳಲ್ಲಿ ಇಂಗ್ಲೆಂಡಿನ 6 ಆಟಗಾರರಿದ್ದಾರೆ. ಅವರೆಲ್ಲರೂ ಈಗ ದೇಶಕ್ಕೆ ಮರಳಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಸೂಚನೆಯಂತೆ ಜೇಸನ್ ರಾಯ್ ಸೋಮವಾರ ತಡರಾತ್ರಿಯೇ ಲಂಡನ್‍ಗೆ ಹಿಂದುರುಗಿದ್ದಾರೆ.

    ಪಾಕಿಸ್ತಾನದಲ್ಲಿ ಒಟ್ಟು 184 ಕೊರೊನಾ ಕೇಸ್‍ಗಳು ಪತ್ತೆಯಾಗಿದ್ದು ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.

  • ಸಾಗರದಲ್ಲಿ ಮಾರ್ಚ್ 31ರವರೆಗೆ ಕೋಳಿ ಮಾಂಸ ಮಾರಾಟ ಬಂದ್

    ಸಾಗರದಲ್ಲಿ ಮಾರ್ಚ್ 31ರವರೆಗೆ ಕೋಳಿ ಮಾಂಸ ಮಾರಾಟ ಬಂದ್

    – ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ ಮಾರಾಟಗಾರರು

    ಶಿವಮೊಗ್ಗ: ಕೊರೊನಾ ಹಾಗೂ ಹಕ್ಕಿಜ್ವರ ಹಿನ್ನೆಲೆ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಮಾರ್ಚ್ 31ರವರೆಗೆ ಕೋಳಿ ಮಾಂಸ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ.

    ಇಂದಿನಿಂದ ಮಾರ್ಚ್ 31ರವರೆಗೆ ಸ್ವಯಂ ಪ್ರೇರಿತರಾಗಿ ಕೋಳಿ ಮಾಂಸ ಮಾರಾಟ ಸ್ಥಗಿತಗೊಳಿಸುತ್ತೇವೆ ಎಂದು ಮಾರಾಟಗಾರರು ಹೇಳಿದ್ದಾರೆ. ಕೊರೊನಾ ವೈರಸ್ ಈಗಾಗಲೇ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದು, ಇದರ ಜೊತೆಗೆ ಮೈಸೂರು ಹಾಗೂ ಹರಿಹರದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಸಾಗರದ ಕೋಳಿ ಮಾಂಸ ಮಾರಾಟಗಾರರು ಮುನ್ನೆಚ್ಚರಿಕಾ ಕ್ರಮವಾಗಿ ಸ್ವಯಂ ಪ್ರೇರಿತರಾಗಿ ಕೋಳಿ ಮಾಂಸ ಮಾರಾಟ ಬಂದ್ ಮಾಡಿದ್ದಾರೆ.

    ಅಲ್ಲದೇ ಅಂಗಡಿ ಹಾಗೂ ಮಾಂಸದ ಮಾರುಕಟ್ಟೆಯನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಮಾರಾಟಗಾರರು ಸ್ವಯಂ ಪ್ರೇರಿತವಾಗಿ ಬಂದ್‍ಗೊಳಿಸಿದ್ದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮಾರಾಟಗಾರರು ಈ ನಿರ್ಧಾರ ತೆಗೆದುಕೊಂಡಿರೋದು ಒಳ್ಳೆಯ ಕೆಲಸ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಮೈಸೂರಿನಲ್ಲಿ ಹಕ್ಕಿ ಜ್ವರ ಖಾತ್ರಿಯಾಗಿದೆ. ಕುಂಬಾರಕೊಪ್ಪಲಿನಲ್ಲಿ ಸಾಕಿದ ಕೋಳಿ ಹಾಗೂ ಕೊಕ್ಕರೆ ಸ್ಯಾಂಪಲ್‍ನಲ್ಲಿ ಜ್ವರ ಇರುವುದು ಕಂಡು ಬಂದಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಹೇಳಿದ್ದರು.

    ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಕ್ಕಿ ಜ್ವರದ ಬಗ್ಗೆ ಇದೇ ತಿಂಗಳು 12 ರಂದು ಸ್ಯಾಂಪಲ್ ಕಳುಹಿಸಲಾಗಿತ್ತು. ಇದೀಗ ಇಂದು ಹಕ್ಕಿ ಜ್ವರ ಇರುವುದು ಖಚಿತವಾಗಿದೆ. ಹೀಗಾಗಿ ಸೋಂಕು ಬಂದಿರುವ ಸ್ಥಳದಲ್ಲಿ ಸಾಕಿರುವ ಹಕ್ಕಿಗಳನ್ನು ಸಾಯಿಸಬೇಕು. ಮನುಷ್ಯರಿಗೆ ಇದು ಹರಡುವುದಿಲ್ಲ. ಆದರೂ ಮುಂಜಾಗ್ರತವಾಗಿ ಹಕ್ಕಿಗಳನ್ನು ಸಾಯಿಸಬೇಕು ಎಂದು ತಿಳಿಸಿದ್ದರು.

    ಸೋಂಕು ಪತ್ತೆಯಾದ ಸ್ಥಳದ 10 ಕಿ.ಮೀ ವ್ಯಾಪ್ತಿಯಲ್ಲಿ ನಾಳೆಯಿಂದ ಕೋಳಿ ಹಾಗೂ ಯಾವುದೇ ಪಕ್ಷಿಗಳನ್ನ ಮಾರಾಟ ಮಾಡುವಂತಿಲ್ಲ. ಸೋಂಕು ಪತ್ತೆಯಾದ 1 ಕಿ.ಮೀ ವ್ಯಾಪ್ತಿಯಲ್ಲಿ ತಿನ್ನುವಂತ ಪಕ್ಷಿಗಳನ್ನು ಸೇವನೆ ಮಾಡಬಾರದು ಎಂದಿದ್ದರು.

    ಇತ್ತ ರಾಜ್ಯಕ್ಕೆ ಕಾಲಿಟ್ಟಿರುವ ಕೊರೊನಾ ವೈರಸ್ 11 ಮಂದಿಗೆ ತಗುಲಿದ್ದು, ಈಗಾಗಲೇ ಕಲಬುರಗಿಯಲ್ಲಿ ಓರ್ವ ವೃದ್ಧರನ್ನು ಬಲಿ ಪಡೆದಿದೆ. ಇತ್ತ ನೆರೆ ರಾಜ್ಯ ಮಹಾರಾಷ್ಟ್ರದಲ್ಲೂ ಕೊರೊನಾ ರಣಕೇಕೆ ಹಾಕುತ್ತಿದ್ದು, 39 ಮಂದಿಗೆ ಸೋಂಕು ತಟ್ಟಿರುವುದು ದೃಢಪಟ್ಟಿದೆ. ಈವರೆಗೆ ವಿಶ್ವದಾದ್ಯಂತ ಬರೋಬ್ಬರಿ 7,171 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಸುಮಾರು 1,82,605 ಮಂದಿಗೆ ಕೊರೊನಾ ತಗುಲಿದೆ ಎಂದು ವರದಿಯಾಗಿದೆ.

  • ಮಂದಿರ, ಮಸೀದಿಗಳಿಗೆ ದಯವಿಟ್ಟು ಹೋಗ್ಬೇಡಿ- ಸುಧಾಕರ್ ಮನವಿ

    ಮಂದಿರ, ಮಸೀದಿಗಳಿಗೆ ದಯವಿಟ್ಟು ಹೋಗ್ಬೇಡಿ- ಸುಧಾಕರ್ ಮನವಿ

    – ಏರ್‌ಪೋರ್ಟ್‌ ಸಮೀಪದ ಹೋಟೆಲ್‍ಗಳಲ್ಲಿ ಕ್ವಾರೆಂಟೈನ್ ಕೇಂದ್ರ
    – ಕರ್ನಾಟಕ ಬಂದ್ ವಿಸ್ತರಣೆ

    ಬೆಂಗಳೂರು: ವೈರಸ್‍ಗೆ ಜಾತಿ ಇಲ್ಲ. ಹಾಗಾಗಿ ಒಂದು ವಾರ ಮಂದಿರ, ಮಸೀದಿಗಳಿಗೆ ದಯವಿಟ್ಟು ಹೋಗಬೇಡಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ.

    ವಿಕ್ಟೋರಿಯಾ ಆಸ್ಪತ್ರೆಯ ಅಧೀಕ್ಷಕರ ಜೊತೆ ವೈದ್ಯಕೀಯ ಶಿಕ್ಷಣ ಸಚಿವರು ಇಂದು ಸಭೆ ನಡೆಸಿದರು. ಬಳಿಕ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ನಿನ್ನೆ ಸಿಕ್ಕಿರುವ ಮಾಹಿತಿ ಪ್ರಕಾರ ವಿದೇಶದಿಂದ ಬಂದಿರುವ ಓರ್ವ ವಿದ್ಯಾರ್ಥಿನಿ ಹಾಗೂ ಅವರನ್ನು ಕರೆದುಕೊಂಡ ಬಂದ ವೈದ್ಯರೊಬ್ಬರಿಗೆ ವೈರಸ್ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸಭೆ ನಡೆಸಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ವೈದ್ಯರಿಗೆ ಸೂಚನೆ ನೀಡಿದ್ದೇನೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕಲಬುರಗಿ ವೈದ್ಯರಿಗೆ ಕೊರೊನಾ- ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆ

    ಕರ್ನಾಟಕ ಬಂದ್ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ರಾಜ್ಯದಲ್ಲಿ ಕೊರೊನಾ ವೈಸರ್ ಪ್ರಕರಣಗಳು ಹೆಚ್ಚಾಗುತ್ತಿವೆ. ಅಷ್ಟೇ ಅಲ್ಲದೆ ಸೋಂಕಿತರಿಗೆ ನಿಖರ ಚಿಕಿತ್ಸೆ, ಔಷಧಿ ಇಲ್ಲದೆ ಇರುವುದರಿಂದ ಮುಂಜಾಗ್ರತ ಕ್ರಮವಾಗಿ ಬಂದ್ ವಿಸ್ತರಣೆ ಮಾಡವುದು ಅಗತ್ಯವಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕೊರೊನಾ ಎಫೆಕ್ಟ್- ಹಾಸ್ಟೆಲ್, ಪಿಜಿಗಳನ್ನು ಖಾಲಿ ಮಾಡಿ

    ರಾಜ್ಯದಲ್ಲಿಯೇ ಬೆಂಗಳೂರಿಗೆ ವಿದೇಶಗಳಿಂದ ಹೆಚ್ಚು ಜನರು ಬರುತ್ತಾರೆ. ಹೀಗಾಗಿ ವಿಮಾನ ನಿಲ್ದಾಣ ಸಮೀಪದ ಹೋಟೆಲ್‍ಗಳಲ್ಲಿ ಕ್ವಾರೆಂಟೈನ್ ಸೆಂಟರ್ ಸ್ಥಾಪಿಸಿ, ಅಲ್ಲಿ ಅವರನ್ನು ಇರಿಸಿ ನಿಗಾ ಇಡಲಾಗುತ್ತದೆ. ಈ ಬಗ್ಗೆ ಚರ್ಚೆ ನಡೆದಿದೆ. ಈಗಾಗಲೇ ಹಿರಿಯ ನಾಯಕರು ದೆಹಲಿಯಿಂದ ಫೋನ್ ಮಾಡಿ ಸಲಹೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸುತ್ತೇನೆ. ಅವರು ಒಪ್ಪಿದರೆ ಕ್ವಾರೆಂಟೈನ್ ಸೆಂಟರ್ ತೆರೆಯಲಾಗುತ್ತದೆ. ವಿಕ್ಟೋರಿಯಾ ಆಸ್ಪತ್ರೆಯಿಂದ ನೇರವಾಗಿ ವಿಮಾನ ನಿಲ್ದಾಣಕ್ಕೆ ಹೋಗಿ ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದರು.

    ಬೆಂಗಳೂರಿನಲ್ಲಿ ಒಂದು ಕೋಟಿಗೂ ಅಧಿಕ ಜನರು ವಾಸಿಸುತ್ತಾರೆ. ಹಾಗಾಗಿ ಸಹಜವಾಗಿಯೇ ಬೆಂಗಳೂರು ಮಹಾನಗರ ಪಾಲಿಕೆ ನಮಗೆ ದೊಡ್ಡ ಸಮಸ್ಯೆ ಹಾಗೂ ಸವಾಲಾಗಿ ಪರಿಣಮಿಸಿದೆ. ಕಲಬುರಗಿಯಲ್ಲಿ ಓರ್ವರಿಂದ ಅನೇಕರಿಗೆ ಕೊರೊನಾ ಸೋಂಕು ಹರಡುವ ಸಾಧ್ಯತೆ ಇದೆ. ಈಗಾಗಲೇ ಒಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದನ್ನು ನಿಗ್ರಹಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಗದಗದಲ್ಲಿ ಮೂರುವರೆ ವರ್ಷದ ಕಂದಮ್ಮನಿಗೆ ಕೊರೊನಾ ಸೋಂಕಿರುವ ಶಂಕೆ

  • ಉಡುಪಿಯಲ್ಲಿ ಗರ್ಭಿಣಿಗೆ ಕೊರೊನಾ ಶಂಕೆ

    ಉಡುಪಿಯಲ್ಲಿ ಗರ್ಭಿಣಿಗೆ ಕೊರೊನಾ ಶಂಕೆ

    – ಮಂಗ್ಳೂರಿನಲ್ಲಿ 10 ಜನರಿಗೆ ಕೊರೊನಾ ಶಂಕೆ

    ಉಡುಪಿ/ಮಂಗಳೂರು: ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಶಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೀಗ ಉಡುಪಿಯಲ್ಲಿ ಗರ್ಭಿಣಿಗೆ ಕೊರೊನಾ ಸೋಂಕಿನ ಲಕ್ಷಣ ಕಾಣಿಸಿಕೊಂಡಿದೆ.

    ಗರ್ಭಿಣಿಯನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಹಿಳೆ ಮೂರು ದಿನಗಳ ಹಿಂದೆ ದುಬೈನಿಂದ ಬಂದಿದ್ದರು. ಕೆಮ್ಮು, ನೆಗಡಿ ಮತ್ತು ಶೀತ ಇದ್ದ ಕಾರಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಶೇಷ ವಾರ್ಡ್ ನಲ್ಲಿ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಶಿವಮೊಗ್ಗ ಲ್ಯಾಬ್‍ಗೆ ಗರ್ಭಿಣಿಯ ಗಂಟಲಿನ ದ್ರವ ರವಾನೆ ಮಾಡಲಾಗಿದೆ. ಮಾರ್ಚ್ 13 ರಂದು ದುಬೈನಿಂದ ಮಹಿಳೆ ಬಂದಿದ್ದರು ಎಂದು ಉಡುಪಿ ಡಿ.ಎಚ್.ಒ ಡಾ. ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದ್ದಾರೆ.

    ಇತ್ತ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದೆ. ಸೋಮಾವರ ವಿದೇಶದಿಂದ ಬಂದವರಿಗೆ ಮಂಗಳೂರಿನ ಏರ್‌ಪೋರ್ಟ್‌ ನಲ್ಲಿ 838 ಜನರಿಗೆ ಸ್ಕ್ರೀನಿಂಗ್ ಮಾಡಲಾಗಿತ್ತು. ಅದರಲ್ಲಿ 10 ಜನರಿಗೆ ಕೊರೊನಾ ಶಂಕೆ ಕಾಣಿಸಿಕೊಂಡಿದೆ. ಭಾನುವಾರ ಕಳುಹಿಸಿದ್ದ 11 ಜನರ ಸ್ಯಾಂಪಲ್ ನೆಗೆಟಿವ್ ಬಂದಿದೆ. ಸೋಮವಾರ 5 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಇಂದು ಮಂಗಳೂರಿನಲ್ಲಿ ಮೈಸೂರು ವಿಭಾಗ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುತ್ತದೆ. ಆರೋಗ್ಯ ಸಚಿವ ಬಿ.ಶ್ರೀರಾಮುಲು ನೇತೃತ್ವದಲ್ಲಿ ಸಭೆ ನಡೆಸಲಾಗುತ್ತದೆ. ಹೀಗಾಗಿ ಬೆಳಗ್ಗೆ 10:15ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆರೋಗ್ಯ ಸಚಿವರು ಆಗಮಿಸಲಿದ್ದಾರೆ. 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಕೊರೊನಾ ವೈರಸ್ ಹರಡದಂತೆ ನಿಯಂತ್ರಣ ಕ್ರಮದ ಸಭೆಯಲ್ಲಿ ಚರ್ಚಿಸಲಾಗುತ್ತದೆ. ನಂತರ ಆರೋಗ್ಯ ಸಚಿವರು ಮಧ್ಯಾಹ್ನ 2 ಗಂಟೆಗೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ.

  • ಕಲಬುರಗಿಯಲ್ಲಿ ಕೊರೊನಾ ಸೋಂಕು ಹಿನ್ನೆಲೆ 1 ತಿಂಗಳು ಅಘೋಷಿತ ಬಂದ್: ಡಿಸಿ ಬಿ. ಶರತ್

    ಕಲಬುರಗಿಯಲ್ಲಿ ಕೊರೊನಾ ಸೋಂಕು ಹಿನ್ನೆಲೆ 1 ತಿಂಗಳು ಅಘೋಷಿತ ಬಂದ್: ಡಿಸಿ ಬಿ. ಶರತ್

    ಕಲಬುರಗಿ: ಕೊರೊನಾ ಸೋಂಕಿತ ಮೃತ ವ್ಯಕ್ತಿಯ ಸಂಪರ್ಕ ಹೊಂದಿದ್ದ ಇಬ್ಬರು ವ್ಯಕ್ತಿಗಳು ಹಾಗೂ ವಿದೇಶದಿಂದ ಬಂದ ಇಬ್ಬರು ವ್ಯಕ್ತಿಗಳು ಸೇರಿ ಹೊಸದಾಗಿ 4 ಮಂದಿಯನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದು, ಅವರ ಗಂಟಲು ದ್ರವ್ಯ ಪರೀಕ್ಷೆಗೆ ಬೆಂಗಳೂರಿಗೆ ಕಳುಹಿಸಲಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ 1 ತಿಂಗಳು ಅಘೋಷಿತ ಬಂದ್ ಇರಲಿದೆ ಎಂದು ಡಿಸಿ ಬಿ. ಶರತ್ ಅವರು ಹೇಳಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ಇಎಸ್‍ಐಸಿ ಮೆಡಿಕಲ್ ಕಾಲೇಜಿನಲ್ಲಿ ಈ ಹಿಂದಿನ ಕೊರೊನಾ ಶಂಕಿತ ಪ್ರಕರಣಗಳ 3 ನೆಗೆಟಿವ್, 1 ಪಾಸಿಟಿವ್ ರೋಗಿ ಹಾಗೂ ಹೊಸದಾಗಿ ರೋಗದ ಲಕ್ಷಣ ಕಾಣಿಸಿಕೊಂಡ 4 ರೋಗಿಗಳಿಗೆ ಪ್ರತ್ಯೇಕವಾಗಿ ಐಸೋಲೇಷನ್ಸ್ ವಾರ್ಡ್‍ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತ ಮೃತ ವ್ಯಕ್ತಿ ಸಂಪರ್ಕ ಹೊಂದಿದ್ದರು ಎಂದು ಗುರುತಿಸಿದ 71 ವ್ಯಕ್ತಿಗಳು, ಎರಡನೇ ಸಂಪರ್ಕ ಹೊಂದಿದ 238 ವ್ಯಕ್ತಿಗಳನ್ನು ಹಾಗೂ ವಿದೇಶದಿಂದ ಮರಳಿದ 61 ವ್ಯಕ್ತಿಗಳು ಸೇರಿದಂತೆ ಒಟ್ಟಾರೆ 370 ಜನರ ಮೇಲೆ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

    370 ಜನರಲ್ಲಿ 8 ಮಂದಿಗೆ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರನ್ನು ಹೋಂ ಕ್ವಾರಂಟೈನ್‍ನಲ್ಲಿಟ್ಟು ನಿಗಾ ವಹಿಸಲಾಗುತ್ತಿದೆ. ಕಲಬುರಗಿ ಜಿಲ್ಲೆಯ ಪ್ರತಿ ತಾಲೂಕಾ ಕೇಂದ್ರದಲ್ಲಿ 5 ಐಸೋಲೇಶನ್ ವಾರ್ಡ್ ಸ್ಥಾಪಿಸಲಾಗಿದೆ. ಜಿಮ್ಸ್ ನಲ್ಲಿ 12 ಮತ್ತು ಇಎಸ್‍ಐಸಿನಲ್ಲಿ 50 ಐಸೋಲೇಷನ್ ವಾರ್ಡ್‍ಗಳಿವೆ. ಇದರ ಜೊತೆಯಲ್ಲಿ 200 ಕ್ವಾರಂಟೈನ್ ವಾರ್ಡ್ ಸಹ ಇದ್ದು, ಇಲ್ಲಿ ತೀವ್ರ ನಿಗಾ ವಹಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

    ಕಲಬುರಗಿ ಜಿಲ್ಲೆಯಲ್ಲಿ ಈವರೆಗೆ 61 ಜನ ವಿದೇಶದಿಂದ ಬಂದಿರುವ ಮಾಹಿತಿ ಲಭ್ಯವಾಗಿದ್ದು, ಅವರೆಲ್ಲರ ಮೇಲೆ ನಿಗಾ ಇರಿಸಲಾಗಿದೆ. ವಿದೇಶದಿಂದ ಬಂದವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಬೇಕು. ಇದಕ್ಕಾಗಿ 24 ಗಂಟೆ ಸಹಾಯವಾಣಿ ಸ್ಥಾಪಿಸಲಾಗಿದೆ. ಸಹಾಯವಾಣಿ ಸಂಖ್ಯೆ 08472-278604/278677 ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ಡಿಸಿ ಮನವಿ ಮಾಡಿದರು.

    ಅಷ್ಟೇ ಅಲ್ಲದೇ ಸಾರ್ವಜನಿಕರು ಸಾಮಾಜಿಕ ಜಾಲತಾಣದ ಸುದ್ದಿ ಅಥವಾ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು. ಜಿಲ್ಲಾಡಳಿತ ನೀಡುವ ಅಧಿಕೃತ ಮಾಹಿತಿಯನ್ನು ಮಾತ್ರ ನಂಬಬೇಕು ಎಂದು ಬಿ. ಶರತ್ ಅವರು ಕೋರಿಕೊಂಡರು.

  • ಕೊರೊನಾ ಭೀತಿ – ಮಾದಪ್ಪನ ಯುಗಾದಿ ಜಾತ್ರೆ ಸಂಭ್ರಮ ಸರಳ

    ಕೊರೊನಾ ಭೀತಿ – ಮಾದಪ್ಪನ ಯುಗಾದಿ ಜಾತ್ರೆ ಸಂಭ್ರಮ ಸರಳ

    ಚಾಮರಾಜನಗರ: ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈಗ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಯುಗಾದಿ ಜಾತ್ರೆಗೂ ಅದರ ಬಿಸಿ ತಟ್ಟಿದೆ.

    ಕೊರೊನಾ ವೈರಸ್ ಭೀತಿಯಿಂದ ಮಾದಪ್ಪನ ಯುಗಾದಿ ಜಾತ್ರೆ ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಇದೇ ತಿಂಗಳ 21ರಿಂದ 25ರವರೆಗೆ ನಡೆಯುವ ಮಾದಪ್ಪನ ಯುಗಾದಿ ಜಾತ್ರೆಯು, ಈ ವರ್ಷ ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮವಾಗಿ ಸರಳವಾಗಿ ಆಚರಿಸಲು ಮಲೆಮಹದೇಶ್ವರ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರ ನಿಶ್ಚಯಿಸಿದೆ. ಈ ಬಗ್ಗೆ ಪ್ರಾಧಿಕಾರದ ಕಾರ್ಯದರ್ಶಿ ಜೈವಿಭವಸ್ವಾಮಿ ಅವರು ತಿಳಿಸಿದ್ದಾರೆ.

    ಕೊಠಡಿಗಳು, ವಸತಿಗೃಹಗಳನ್ನು ಬರುವ ಭಕ್ತಾದಿಗಳಿಗೆ ಕೊಡದಿರಲು ಪ್ರಾಧಿಕಾರ ತೀರ್ಮಾನಿಸಿದ್ದು, ರಂಗಮಂದಿರ ಸಮೀಪ ಸಾವಿರಾರು ಮಂದಿ ಟೆಂಟ್ ಹಾಕುವುದಕ್ಕೂ ಬ್ರೇಕ್ ಹಾಕಲಾಗಿದೆ. ರಸ್ತೆಬದಿಯಲ್ಲಿ, ಮಾದಪ್ಪನ ಬೆಟ್ಟದ ಸಮೀಪದ ಸ್ಥಳಗಳಲ್ಲಿ ಸಹಸ್ರಾರು ಮಂದಿ ತಂಗಲು-ವಾಸ್ತವ್ಯ ಹೂಡಲು ಪ್ರಾಧಿಕಾರ ನಿರ್ಬಂಧಿಸಿ ಆದೇಶ ಹೊರಡಿಸಿದೆ. ಲಕ್ಷಾಂತರ ಮಂದಿ ಸೇರುತ್ತಿದ್ದ ಯುಗಾದಿ ಜಾತ್ರೆಗೆ ಈ ಬಾರಿ ಕೊರೊನಾ ಕರಿಛಾಯೆ ಆವರಿಸಿದ್ದು, ಪ್ರಾಧಿಕಾರದ ಆದಾಯಕ್ಕೂ ಕತ್ತರಿ ಬೀಳಲಿದೆ.